ಮೋಡವೊಂದು ಹನಿಯಾಗಲು
ನಿರಾಕರಿಸಿದಂತೆ
ಒಂದು ದುಃಖ ಹಾಗೇ ನಿಂತಿತು
ಎದೆಯ ಹೊಸ್ತಿಲಲ್ಲ
ಕಂಬನಿಯಾಗದೇ

ಅವ್ವ ಆದರೆ ಈರುಳ್ಳಿ ಹಚ್ಚುತ್ತಾಳೆ
ಚಿಟ್ಟೆ ರೆಕ್ಕೆ ಬಡಿಯುತ್ತೆ ಹುಚ್ಚುಚ್ಚಾಗಿ
ಮೇಷ್ಟರಿಗೆ ಮೇಜು
ಕಲಹಪ್ರಿಯರಿಗೆ ಗಾಜು
ಒಡೆವುದೇ ಮೋಜು

NTPIADay Tears 3

ಇಂಥ ಸಮಯದಲ್ಲಿ ಮಾತು ಅಸಹ್ಯ
ಮೌನ ಅಸಹನೀಯ
ಧ್ಯಾನ ಅಂದರೆ ಕೊಂಚ ಕೊಂಚವಾಗಿ
ನಶಿಸುವುದು
ಕವಿತೆ ಬರೆವುದು ಆತ್ಮಹತ್ಯೆ.

ಕವಿ ಅಂದಂತೆ ಆಕಾಶ ಮಡಚಿ
ಜೇಬಿನಲ್ಲಿ ಇಟ್ಟುಕೊಳ್ತಾನಾದರೆ ನಾನೂ
ಹಸನ್ಮುಖಿಯಾಗುವೆ ನನ್ನ ಹುಡುಗಿ
ಹಸೆಯೇರುವಾಗ

ಇಷ್ಟಕ್ಕೆಲ್ಲಾ ಅಳ್ತಾರೇನೋ
ಗಂಡಸಾಗಿ
ಅಂದಾಗ ಮಾತ್ರ ಅವಳ
ಸಾಂತ್ವನಕ್ಕೆ ಬರೆ ಕೊಡುವಂತೆ
ಆವಿಗಣ್ಣಲ್ಲಿ
ಆಕೆಯನ್ನೇ ನೋಡುತ್ತೇನೆ..

 

ಫೊಟೋಕೃಪೆ: ಇಲ್ಲಿಂದ

ಮನುಷ್ಯನ ಮನಸ್ಸು ತುಂಬಾ ವಿಚಿತ್ರವಾದ್ದು ಮತ್ತು ಜಟಿಲವಾದ್ದು ಕೂಡ. ಒಬ್ಬ ವ್ಯಕ್ತಿ ಒಂದು ಸನ್ನಿವೇಶಕ್ಕೆ ಒಂದು ರೀತಿಯಾಗಿ ವರ್ತಿಸಿದರೆ, ಮುಂದೊಮ್ಮೆ ಅಂತದ್ದೇ ಪರಿಸ್ಥಿತಿಗೆ ಬೇರೆಯೇ ಆದ ರೀತಿ ಪ್ರತಿಕ್ರಿಯಿಸಬಹುದು. ಅದಕ್ಕೆ ಆತನ ಮಾನಸಿಕ ಲಹರಿ, ಆತನಿಗೆ ಅರಿವಿಲ್ಲದೆಯೇ ಮಾಡುತ್ತಿರಬಹುದಾದ ಮಾನಸಿಕ ನಡೆಗಳು (Moves), ಎದುರಿನ ವ್ಯಕ್ತಿಯ ನಡೆವಳಿಕೆ, ಆ ವ್ಯಕ್ತಿ ’ಎಷ್ಟು ತನ್ನವ’ (ತನಗೆ ಬೇಕಾದವ) ಅನ್ನುವ ಆಲೋಚನೆಗಳಲ್ಲದೆ, ಹೊರಗಿನ ವಾತಾವರಣ ತನ್ನಲ್ಲಿ ಮೂಡಿಸಬಹುದಾದ ಪರಿಣಾಮಗಳು, ಐದು ನಿಮಿಷ ಹಿಂದೆ ಆಗಿದ್ದ ಯಾವುದೋ ಘಟನೆ ತನ್ನಲ್ಲಿ ಉಂಟುಮಾಡಿದ ತಲ್ಲಣಗಳೂ ಆತನ ಪ್ರತಿಕ್ರಿಯೆಗೆ ಕಾರಣವಿರಬಹುದು.  ಅಥವಾ ತನ್ನ ಹೊಟ್ಟೆಯ ಹಸಿವೂ, ಆ ಸ್ಥಳದ ಪರಿಮಳಗಳೂ ಕೂಡ ಬೇರೆ ರೀತಿಯಾದ ಪ್ರತಿಕ್ರಿಯೆ ನೀಡಲು ಕಾರಣವಿದ್ದಿರಬಹುದು. ಇವೆಲ್ಲದ್ದಕ್ಕೆ ನಿಲುಕದ ಬೇರೆಯಾದ ಕಾರಣಗಳೂ ಇದ್ದೀತು.

400px-Millais_Boyhood_of_Raleigh

ಈ ಅಂಶಗಳು ಕತೆ ಹೇಳಲು ಎಷ್ಟು ತೊಡಕಾಗಬಹುದೋ ಅಷ್ಟೇ ಒಳಿತೂ ನೀಡುತ್ತದೆ. ತೊಡಕು ಹೇಗಾದೀತು ಅಂದರೆ, ಒಬ್ಬ ವ್ಯಕ್ತಿ ಹೀಗೇ ವರ್ತಿಸುತ್ತಾನೆ ಅನ್ನುವ ಸಿದ್ಧಾಂತವನ್ನೇ ಅಲ್ಲಗಳೆಯುವುದರಿಂದ. ಒಳಿತು ಹೇಗೆಂದರೆ ಕತೆಗೆ ತಿರುವುಗಳನ್ನು ಸುಲಭವಾಗಿ ನೀಡಬಹುದಾದ್ದರಿಂದ.

ಒಂದು ಕತೆ ಹೇಳುವಾಗ ಪಾತ್ರಪೋಷಣೆಯ ಸಲುವಾಗಿ ಆತ ಎಂತಹ ವ್ಯಕ್ತಿ ಅನ್ನುವುದು ವೀ(ಪ್ರೇ)ಕ್ಷಕನಿಗೆ ವಿವರಿಸಲೋಸುಗ ಒಂದಿಷ್ಟು ದೃಶ್ಯಗಳನ್ನು ಕಟ್ಟಿಕೊಡುವುದು ಮೊದಲಿಂದಲೂ ನಡೆದು ಬಂದ ವಿಧಾನ. ಕತೆ ಹೇಳುತ್ತಾ ಒಂದು ವೇಳೆ ಆತ ತನ್ನ ಪಾತ್ರಪೋಷಣೆಗೆ ಅತೀತವಾಗಿ ಬೇರೊಂದು ವಿಧಾನವಾಗಿ ವರ್ತಿಸಬೇಕಾಗಿ ಬಂದರೆ ಅದಕ್ಕೆ ಕಾರಣಗಳನ್ನು ಕೊಡುವುದು ನಡೆಯುತ್ತದೆ. ಕಾರಣಗಳನ್ನು ನೀಡದೇ ಹೋದಲ್ಲಿ ಪ್ರೇಕ್ಷಕ ಕತೆಯನ್ನು ಒಪ್ಪದೇ ಹೋಗಬಹುದಾದ ಸಾಧ್ಯತೆಯಿದೆ.

ಉದಾಹರಣೆಗೆ ಕನ್ನಡದ ’ಸ್ಪರ್ಶ’ ಚಿತ್ರ. ಕಥಾನಾಯಕಿಯದ್ದು ಒಂದು ಥಿಯರಿ. ತಪ್ಪು ಮಾಡಿದವರು ಅವರೇ ಆ ತಪ್ಪನ್ನು ಸರಿ ಮಾಡಬೇಕು ಅಂತ. ಬೇರೆ ಎಲ್ಲಾ ಸನ್ನಿವೇಶದಲ್ಲಿ ಸಾಮಾನ್ಯವಾಗಿ ನಾಯಕಿಯಂತೆಯೇ ಇರುವ ಹುಡುಗಿ ಈ ವಿಷಯಕ್ಕೆ ಬಂದರೆ ತುಂಬಾ ಕಟ್ಟುನಿಟ್ಟು. ತಾನೇ ತಪ್ಪು ಮಾಡಿದಾಗಲೂ ಬೇರೆ ಯಾರೂ ಸಹಾಯ ಮಾಡಬಾರದೆಂದು ತಾಕೀತು ಮಾಡಿ ತಾನೇ ಸರಿಮಾಡುವುದು ನಡೆಯುತ್ತದೆ. ಹೀಗಿರುವಾಗ ಕಥಾನಾಯಕ ಅಕಸ್ಮಾತ್ ಆಗಿ ಒಮ್ಮೆ ಅರಿವಿಲ್ಲದೇ ಮತ್ತೊಬ್ಬ ಹುಡುಗಿಯ ಆಕ್ಸಿಡೆಂಟಿಗೆ, ಅವಳ ಕಾಲು ಕಳೆದುಕೊಳ್ಳಲು ಕಾರಣವಾಗ್ತಾನೆ. ಕಥಾನಾಯಕಿ ಇದನ್ನು ಮನ್ನಿಸುವುದಿಲ್ಲ ಎಂದುಕೊಂಡು ತನ್ನ ಪ್ರೀತಿಯನು ಕಡೆಗಣಿಸಿ ಕಾಲು ಕಳೆದುಕೊಂಡ ಹುಡುಗಿಯನು ಮದುವೆಯಾಗಲು ತಯಾರಿ ನಡೆಸುತ್ತಾನೆ.

sparsha

ಇಲ್ಲಿ ನಿರ್ದೇಶಕ ಆಕೆಯ ಥಿಯರಿಯ ಕಟ್ಟುನಿಟ್ಟನ್ನು ಪ್ರೇಕ್ಷಕನಿಗೆ ಅರಿವು ಮಾಡಲು ಬಹಳಷ್ಟು ಸನ್ನಿವೇಶಗಳನ್ನು ಹೆಣೆದಿದ್ದಾರೆ. ಒಂದು ವೇಳೆ ಆ ಸನ್ನಿವೇಶಗಳು ಪರಿಣಾಮಕಾರಿ ಆಗದೇ ಹೋಗಿದ್ದರೆ ನಂತರ ಕಥಾನಾಯಕನ ತ್ಯಾಗದ ನಿರ್ಧಾರ ಪೇಲವವಾಗಬಹುದಾದ ಸಾಧ್ಯತೆ ಇತ್ತು.

ಹಾಗೆಯೇ ಅಪಘಾತ ಆದ ಹುಡುಗಿಯ ಪಾತ್ರದಲ್ಲಿ ಸುಧಾರಾಣಿ ಅಭಿನಯಿಸಿದ್ದರು. ಆ ಪಾತ್ರ ಇಂತದ್ದೇ ವ್ಯಕ್ತಿತ್ವ, ಈ ರೀತಿಯಾಗಿಯೇ ನಡೆದುಕೊಳ್ಳುತ್ತದೆ ಅನ್ನುವುದಕ್ಕೆ ಪ್ರಾಶಸ್ತ್ಯ ನೀಡಿರಲಿಲ್ಲ. ನಿಜ ವಿಷಯ ತಿಳಿದಾಗ ಆಕೆಯ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದು ತಿಳಿಯದ ಪ್ರೇಕ್ಷಕ ಅದನ್ನು ಕುತೂಹಲದಿಂದ ಕಾಯ್ತಾನೆ.

ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಕಥನದ ಎರಡೂ ಮಜಲುಗಳನ್ನು ಚೆನ್ನಾಗಿ ಬಳಸಿಕೊಂಡಿದ್ದರು.

*****

ಹೀಗೆ ನಿಜದ ಬದುಕಲ್ಲಿ ಮನುಷ್ಯ ವಿಧವಿಧವಾದ ವಿಧಾನದಲ್ಲಿ ವರ್ತಿಸುತ್ತಾ ಹೋಗುತ್ತಾನೆ. ಕೆಲವೊಂದು ಕಾರಣಸಹಿತ. ಇನ್ನೂ ಕೆಲವು ಕಾರಣರಹಿತ. ಆದರೆ ಕಥೆಯಲ್ಲಿ ಇಡೀ ಬದುಕನ್ನು ತೋರಿಸಲಿಕ್ಕಾಗದಲ್ಲ. ಅದಕ್ಕೆ ಕತೆಗೆ ಅಗತ್ಯವಾದ ಅಂಶವನ್ನಷ್ಟೇ ತೋರಿಸಿ ಕತೆ ಹೇಳುವುದು ಸೂಕ್ತ.

ಟಣ್ ಟಣ್ ಸಾಸರಿನೊಳಗೆ
ಅಳತೆ ಮಾಡಿ ಹಾಕುವ ಚಾ
ಅಲ್ಲವೋ ಕವಿತೆಯೆಂದರೆ
ಗೂಡಂಗಡಿಯಲಿ ದಾರಿಹೋಕ
ಸುರಕ್ ಸುರಕ್
ಎಂದು ಸವಿವ ಟೀ.

ಬೇಕಾದ್ದನ್ನು ಹೆಕ್ಕಿ
ಬೇಡದ್ದನ್ನು ಬಿಸುಡುವ
ಬಫೆಯಲ್ಲವೋ ಕವಿತೆಯೆಂದರೆ
ಬಟ್ಟಲಿನೊಳಗೊಂದಗುಳೂ
ಉಳಿಯದಂತೆ ತಿಂದು
ತಪ್ತನಾಗಬಲ್ಲಂಥ ಹಸಿವು.

ಚೂರು ಸುರಿದು ಗಾಳಿಗೆ
ಹಾರಿಹೋಗುವ ಮೇಘವಲ್ಲವೋ
ಕವಿತೆಯೆಂದರೆ
ಸರ್ವಸ್ವವನೂ ಸುರಿದು
ಬರಿದಾಗುವ ಮಳೆ.

images

ಮಡಿಕೆಗಳಿಲ್ಲದ ರೇಷಿಮೆ
ಜರತಾರಿ ಸೀರೆಯಲ್ಲವೋ
ಕವಿತೆಯೆಂದರೆ
ಪುಟ್ಟನ ಮೂಗೊರೆಸಲ್ಪಟ್ಟ
ಅವ್ವನ ಸೀರೆ.

****

 

(ಫೋಟೋಕೃಪೆ : www.gulfnews.com)

ಇಲ್ಲೊಂದು ಊದ್ದನೆಯ ಸ್ತಬ್ಧ ರಸ್ತೆ
ನಡೆಯುತ್ತ ಕತ್ತಲಲ್ಲಿ ಕಲ್ಲೊಂದು ತಾಕಿ ಎಡವಿದೆ
ಮತ್ತೆದ್ದು, ಕುರುಡನಂತೆ ನಡೆದೆ
ಕಪ್ಪು ಕಲ್ಲ ಮೌನ ಒಡೆವಂತೆ
ಉದುರಿದೆಲೆಯ ಪುಡಿಯಾಗಿಸುವಂತೆ

ಯಾರೋ ಒಬ್ಬ ನನ್ನ ಹಿಂದೆಯೇ ಎಡವಿದಂತೆ
ಅನ್ನಿಸಿದೆ. ಮತ್ತೆ ಕಪ್ಪು ಕಲ್ಲು, ಉದುರಿದೆಲೆ.

at-the-dark-end-of-the-street-anisha-bordoloi

ನಾ ನಿಧಾನಿಸಿದರೆ ಅವನೂ
ನಾ ಓಡಿದರೆ ಅವನೂ

ತಿರುಗಿ ನೋಡಿದರೆ ಮಾತ್ರ
ಯಾರಿಲ್ಲ.
ಹೆಜ್ಜೆಗೆ ಮಾತ್ರ ನನ್ನ ಪರಿಚಯವಿರುವಂತೆ
ಎಲ್ಲಾ ಕತ್ತಲು, ಬಾಗಿಲುಗಳೇ ಇಲ್ಲದ ಬೀದಿಯಲಿ

ಸಿಕ್ಕ ತಿರುವೊಳಗೆ ತಿರುವು
ತಿರುತಿರುಗಿ ಅಂತಿಮವಾಗಿ
ಮತ್ತೆ ತಿರುಗಿಬರಲಾರದಂತೆ ತಲುಪಿದ್ದು
ನನಗಾಗಿ ಯಾರೂ ಕಾಯದ
ನನ್ನನ್ನು ಯಾರೂ ಹಿಂಬಾಲಿಸದ ಬೀದಿಗೆ

ಅಲ್ಲೊಬ್ಬ ಎಡವುತ್ತಿದ್ದ ಮತ್ತೆ ಎದ್ದು
ಹಿಂತಿರುಗಿ ನನ್ನ ನೋಡಿ ಹೀಗೆ ಅಂದುಕೊಳ್ಳುವ:
ಯಾರೂ ಇಲ್ಲ.

*******

(ಓಕ್ಟಾವಿಯೋ ಪಾಜ್ ನ ಕವಿತೆಯೊಂದರ ಕನ್ನಡ ಅನುವಾದ)

(ಪೈಂಟಿಂಗ್ ಕೃಪೆ : ಇಲ್ಲಿಂದ )

ಇದುವರೆಗೂ ಬ್ಯಾಚುಲರ್ ಅಂತ ಹಣೆಪಟ್ಟಿ ಹಾಕ್ಕೊಂಡು ಒಬ್ಬನೇ ಆರಾಮಾಗಿದ್ದೆ. ನಾನು ಬೆಂಗಳೂರಿಗೆ ಬರುವೆ, ಇಲ್ಲೇ ಇರುವೆ ಅಂತ ಸುದ್ಧಿ ಪಕ್ಕಾ ಆದ ಕೂಡಲೇ ಅಮ್ಮ ನಾನೂ ಬೆಂಗಳೂರಿಗೆ ಬರ್ತೇನೆ, ನಿನ್ನ ಜತೆ ಇರ್ತೇನೆ ಅಂದಾಗ ಖುಷಿ ಆಯ್ತು. ಅಲ್ಲಿಗೆ ನನ್ನ ರೂಮು ಜೀವನ, ಚೆಲ್ಲಾಪಿಲ್ಲಿ ಪೇಪರುಗಳ ಫ್ಲೋರಿಂಗ್, ಅಶಿಸ್ತಿನ ಅಭ್ಯಾಸಗಳಿಗೆ ತಿಲಾಂಜಲಿ ಇಡುವ ಅನಿವಾರ್ಯತೆ ಉಂಟಾಯಿತು. ಆದರೂ ಹೊತ್ತೊತ್ತಿಗೆ ಕರೆಕ್ಟಾಗಿ ಸಿಗುವ ಭಾರೀ ಭೋಜನ, ಮನೆಗೆ ಬೇಗ ಹೋಗೋಣ ಅಂತ ಅನ್ನಿಸುವಂತೆ ಮಾಡುವ ಒಂದು ಜೀವ ನಮ್ಮನ್ನು ಕಾಯುತ್ತ ಇರುತ್ತದೆಂಬ ಭಾವನೆಗಳು ಆಸೆ ಹುಟ್ಟಿಸಿದವು. ಒಡಹುಟ್ಟಿದವರೂ ನಿಷ್ಕಲ್ಮಶ, ನಿಷ್ಕಾರಣ ಪ್ರೀತಿ ತೋರದಿರುವ ಈ ಕಾಲದಲ್ಲಿ ಅದಕ್ಕೆ ನಂಬಬೇಕಾದ್ದು ಅಮ್ಮ ಒಬ್ಬರನ್ನೇ ಅಲ್ಲವೇ? ಹಾಗಾಗಿ ರೂಮು ಹುಡುಕುವುದು ಬಿಟ್ಟು ಮನೆ ಹುಡುಕುವುದಕ್ಕೆ ಶುರು ಮಾಡಿದ್ದಾಯಿತು.

ಬೆಂಗಳೂರು ಮಧ್ಯದಲ್ಲಿರುವ ಆಸೆ, ಬೆಂಗಳೂರು ಮ್ಯಾಪಿನ ಎಲ್ಲೋ ಮೂಲೆಯಲ್ಲಿರುವ ಕೆಲಸದ ಜಾಗ, ಈ ಎರಡೂ ತುಂಬ ಮಾನಸಿಕ ಸಂಘರ್ಷ ಉಂಟುಮಾಡಿದವು. ಕೊನೆಗೂ ಎಲ್ಲಾ ಆಸೆಗಳನ್ನು ಟ್ರಾಫಿಕ್ ಎಂಬ ಭೂತ ಹೆದರಿಸಿ ’ಎಲ್ಲಿ ಕೆಲಸವೋ ಅಲ್ಲೇ ವಾಸ’ ಎಂಬ ಗಾದೆ ಹುಟ್ಟಿಸಿ ಮ್ಯಾಪಿನ ಮೂಲೆಯಲ್ಲೇ ಮನೆ ಮಾಡುವಂತೆ ಪ್ರೇರೇಪಿಸಿದವು. ಮನೆ ಆಯ್ತು, ಅಮ್ಮ ಬರುವ ಮುಂಚೆ ಎಲ್ಲಾ ತಯಾರಿರಬೇಕು ಅಂತ ಅನ್ನಿಸಿ ಮನೆಗೆ ಬೇಕಾದ ಎಲ್ಲಾ ಸಾಮಾನುಗಳೂ, ಯಂತ್ರ (ವಾಷಿಂಗ್ ಮೆಶೀನು, ಗ್ಯಾಸು ಸಿಲಿಂಡರು ಇತ್ಯಾದಿ) ತಂದಿರಿಸಿದ್ದಾಯಿತು. ಅಮ್ಮನಿಗೆ ಮುಖ್ಯವಾಗಿ ಬೇಕಾಗಿದ್ದ ಟೀವಿ ಠೀವಿಯಿಂದ ಡ್ರಾಯಿಂಗ್ ರೂಮಿನಲ್ಲಿ ಕೂತಿತು.

The Chef

ಪ್ರಾಯೋಗಿಕವಾಗಿ ನನ್ನ ಅಡುಗೆಗಳೂ ಭರದಿಂದ ಶುರುವಾದವು. ಆಡುವ ಮುಂಚೆ ಪಿಚ್ ಪರೀಕ್ಷಿಸುವ ರೀತಿಯಲ್ಲಿ ಅಡುಗೆ ಮನೆಯೂ ಸಜ್ಜುಗೊಳಿಸಿದ್ದಾಯಿತು.

ಅಮ್ಮನಿಗೆ ಒಂದು ಆರಾಮಿನ ದಿನ ಫೋನ್ ಹಚ್ಚಿ, ’ಯಾವಾಗ ಬರುವಂತಾಗುತ್ತೀಯಾ?’ ಅಂತ ಕೇಳಿದರೆ ಉತ್ತರಿಸದೇ ನಕ್ಕು ಸುಮ್ಮನಾದಳು. ಇನ್ನೂ ಸ್ವಲ್ಪ ದಿನ ಹೋಗಲಿ ಅಂತ ನಾನೂ ಮೌನವಾಗಿ ಒಬ್ಬನೇ ಅಡುಗೆ ಮಾಡಿಕೊಂಡೆ. ಬೆಳಿಗ್ಗೆ ಎದ್ದು ಕಸ ಗುಡಿಸಿದೆ, ಹಾಲು ತಂದು ಕಾಫಿ ಮಾಡಿ, ಮನೆಯಲ್ಲೇ ಫಾಸ್ಟಾಗಿ ಫಾಸ್ಟ್ ಫುಡ್ ಮಾಡಿಕೊಂಡು ಪಾತ್ರೆ ತೊಳೆದು ಓಡೋಡಿ ಕೆಲಸಕ್ಕೆ ಹಾಜರಾದೆ. ಮತ್ತೆ ಸಂಜೆ ಬಂದು ಅಡುಗೆ, ಪಾತ್ರೆ ತೊಳೆದು ಮಧ್ಯೆ ಆಗಗ್ಗೊಮ್ಮೆ ವಾಶಿಂಗ್ ಮೆಶೀನ್ ನ ಕೈಲಿ ಬಟ್ಟೆ ಒಗೆಸುವುದೂ ಮಾಡಿ ಬದುಕುತ್ತಿದ್ದೇನೆ. ದಿನಗಳು ಚೌಕದಿಂದ ಚೌಕಕ್ಕೆ ಜಿಗಿದು, ಫ್ಯಾನುಗಾಳಿಗೆ ಹಾಳೆ ಹಾರಿದಂತೆ ತಿಂಗಳುಗಳೂ ಮುಗಿದವು.

0511-1005-1216-1751_Man_Daydreaming_About_Being_a_Chef_clipart_image

ಯಾವಾಗ ಬರ್ತಿದೀಯಮ್ಮೋ ಅಂತ ಕೇಳಿದಾಗಲೆಲ್ಲ ಮುಗುಳ್ನಗುವೆ ಆಕೆಯ ಉತ್ತರ. ಯಾಕೆ ಹೀಗೆ, ಏನು ಆ ನಗುವಿನ ಮರ್ಮ ಅಂತ ಅರ್ಥವೆ ಆಗ್ತಿದ್ದಿರಲಿಲ್ಲ.

ಮೊನ್ನೆ ಗೆಳೆಯನಿಗೆ ನನ್ನ ಈ ದಿನಚರಿ ವಿವರಿಸುತ್ತಿದ್ದಾಗ ’ ಹಾಗಿದ್ರೆ ಮದುವೆಗೆ ಭರ್ಜರಿಯಾಗೆ ತಯಾರಾಗ್ತಿದೀಯಾ, ಬಿಡು!’ ಅಂತ ಛೇಡಿಸಿದ. ಯಾಕೋ ಅವ ಹಂಗಂದ ಕೂಡಲೇ ಅಮ್ಮನ ನಗು ನೆನಪಾಯ್ತು.

ಹ್ಮ್! ಅಮ್ಮಂದಿರೂ ನಮ್ಮಂಥ (ದೊಡ್ಡ)ಮಕ್ಕಳಿಗಿಂತ ಬುದ್ದಿವಂತರಾಗುತ್ತಿದ್ದಾರೆ!

ಸಿಕ್ಕಿದ್ದಕ್ಕೆಲ್ಲಾ ಕಾರಣವಿತ್ತು
ಒಮ್ಮೆ ಸಿಗು ಗೆಳೆಯಾ
ಹಾಗೆ ಸುಮ್ಮನೆ

*****

ಹೂವು ಸತ್ತು
ತುಂಬಾ ಹೊತ್ತಾಯ್ತು
ಪರಿಮಳವಿನ್ನೂ ಅರಳುತ್ತಿದೆ..

******

ಅವಳೂ ಅಂದಳು
ನಾನೂ ಅನ್ನುತ್ತಿದ್ದೆ
ಮೌನ ಇನ್ನಷ್ಟು ಆಳವಾಗುತ್ತಿತ್ತು..

*****

ಗೋಡೆ, ಮಾಡಿನಿಂದ
ಆಗದಿದ್ದ ಮನೆ, ಕಿಟಕಿ-ಬಾಗಿಲು
ಗಳಿಂದ ಆಯಿತು.

******

ಮೀಟರುಗಟ್ಟಲೆ ಚಿಗುರಿಸಿದ
ಮಳೆಯನ್ನು
ಸೆಂಟಿಮೀಟರುಗಳಿಂದ ಅಳೆದರು.

****

ಕಡಲಿಗೆ ಬಿದ್ದ ಆಗಸ
ನೀಲಿ ನೀಲಿಯಾಗಿಬಿಡ್ತು
ಪುಟ್ಟಿಯ ಕಣ್ಣಲ್ಲಿ

****

water2

ಭೇಟಿಯಾಗದಿರು ನನ್ನ
ಕನಸಲ್ಲಿ ಸಾಲ
ಇಸ್ಕೊಂಡವನ ಥರ…

****
ಸಿಮೆಂಟು, ಇಟ್ಟಿಗೆ
ಗೋಡೆ ಮಾಡು ಎಲ್ಲ ಗಟ್ಟಿ
ಒಳಗಿನ ಮೌನವೊಂದೇ ದ್ರವ
****

ನದೀ ತಟದಲ್ಲಿ
ಕುರಿ ಹುಲ್ಲು ಮೇಯುತ್ತಿತ್ತು
ನೀ
ರಲ್ಲಿ
ಮೀನ ಮೇಷ
ಎಣಿಸುತಿತ್ತು.

******

ಗಾಳ ಹಾಕಿ
ಕಾಯುತ್ತಾ ಕುಳಿ
ತಿದ್ದೆ.
ಕೊನೆಗೂ ಒಂದು
ಮೀನಿಗೆ ಸಿಕ್ಕಿಹಾಕಿಕೊಂಡೆ.

*******

ಕಣ್ಣು ಮೀನಿದ್ದು
ಆಗಿರಬಹುದು
ಆದರೆ ಕಣ್ಣೀರು
ಮೊಸಳೆದ್ದು ಆಗಿರಬಾರ್ದು ಕಣ್ರೀ!

ಹಿಂದಿನ ದಿನ ಅಲ್ಲೆಲ್ಲೋ
ಬಾಂಬು ಬಿದ್ದ ಸುದ್ಧಿಯು
ಟಪ್ಪನೆ ಬಾಗಿಲಿಗೆ ಬಡಿದದ್ದೇ
ಬೆಚ್ಚಗೆ ಹೊದ್ದು ಮಲಗಿದ್ದ ನಾನು
ತಣ್ಣಗೆ ಎದ್ದು ಓದಿ ಎಲ್ಲರಂತೆ
ಎಚ್ಚರವಿದ್ದೇ ಮಲಗುವ
ಮತ್ತೊಂದು ಸೋ
ಮಾರಿ ದಿನ..

ಹೋಳು ಹಾಳು ಹೃದಯವನು
ಯಾವೊಂದು ಸ್ಕೂಟಿ ಚೂಟಿ
ನಗುವೂ ರಿಪೇರಿ ಮಾಡಲಾಗದೆಂಬ
ಬ್ರಹ್ಮಜ್ಞಾನದ ಡಿಗ್ರಿ ಪಡೆದಿದ್ದರೂನು
ಯಾವುದೋ ಹಳೇ ಜೋಕೊಂದು ನೆನಪಾಗಿ
ನಗದೆಯೂ ನಕ್ಕಂತಿದ್ದ ಆಕೆಯ ಪುಟ್ಟನಗುವಿಗೆ
ಸಾಯಲಿಕ್ಕಾಗೇ ಕನಸು ಚಿಗಿತುಬಿಟ್ಟ
ಮತ್ತೊಂದು ಮಾಯಾವಾಸ್ತವಿಕ ದಿನ..

ಕಂಪೆನಿಯೊಂದು ಹಾ! ಲಕ್ಷ್ಮಣಾ!
ಅಂತ ಕೂಗಿದ್ದೇ ಬದುಕು ಇತ್ತ
ಖುಷಿಯ ಅಂಗಳವನು ಮೀರಿ
ಸಂಸಾರಸೀತೆಯ ಬೇಡಿಕೆ ಪೂರೈಸಲಿಕ್ಕಾಗೇ
ಕಳೆದುಕೊಳ್ಳಹೊರಟ
ಮತ್ತೊಂದು ಅಬ್ಬೇಪಾರಿ ದಿನ..

ಅದೊಮ್ಮೆ ಅಗಾಧ
ಸಾಗರ ಸವಾರಿ ಮಾಡುವ ಹುಕಿ ಬಂತು
ಪುಂಡ ಪೋಕರಿ ಹುಡುಗನೊಬ್ಬ ಕಟ್ಟಿದ
ಬಳ್ಳಿ ಬಿಚ್ಚಿ ಓಡಿಹೋದದ್ದೇ ತಡ
ಸ್ವಾತಂತ್ರ್ಯ ದಿವಸ.
ಹವೆಯ ಜತೆಗಿನ ಸ್ನೇಹ
ಸಹಾಯಕ್ಕೆ ಬಂತು.
ಅಲೆಯ ಮೇಲೆ ವಯ್ಯಾರದ ನಡಿಗೆ
ಗಮ್ಯವಿಲ್ಲದ ರಮ್ಯ ಹೆಜ್ಜೆಯಿರದ ಹಾದಿ
ಪುಳಕದ ಮೀನಿಗೆ ಅಚ್ಚರಿ
ಅರೆ! ಬಲೆಯಿಲ್ಲದ ದೋಣಿ

ಆದರೂ ಒಡೆಯನಿಲ್ಲದ ಒಬ್ಬಂಟಿತನ
ಗಮ್ಯವಿರದ ಗಾಢಾಂಧಕಾರ
ಅಗಾಧ ಬಯಲಿನಲ್ಲಿ ಒಂಟಿಗರಿಕೆಯ ಭಾವ
ತಿರುಗಿ ವಾಪಸ್ಸು ಹೋಗಲು ಅದೇ ಹಳೆಯ ಸ್ನೇಹ
ಸಹಾಯಕ್ಕೆ ಬರಲಿಲ್ಲ.
ಹಳೆಯ ಸ್ಥಿತಿಯ ಧ್ಯಾನ
ತೀವ್ರ ಚಡಪಡಿಕೆ
ಕಾಲವನ್ನು ಹಿಂದೆಳೆಯುವ ಹಂಬಲ.



ಎಚ್ಚೆತ್ತೆ
ಅಂಬಿಗ ಪ್ರೀತಿಯಿಂದ ಮೈತಡವುತ್ತಿದ್ದ.
ಅದೋ ಅಲ್ಲಿ, ಮರದ ಮರೆಯಲ್ಲಿ ಇಣುಕುವ
ಪುಂಡಪೋಕರಿ ಪೋರ
ಮತ್ತು ಸುತ್ತ ಮುತ್ತ ಒಂದು ಹಳೆಯ ಸ್ನೇಹ.

ಬದುಕು ಕನಸು-ನನಸ ಉಯ್ಯಾಲೆ
ಸಾಹಸದಾಸೆ ಪರ್ವತ ಮತ್ತು
ರೊಟೀನು ಸುಖದ ತಪ್ಪಲು.

ನಾನು ಕನ್ನಡಿಗ ಅಂತ ಅನ್ನುವಾಗ ನನಗೆ ಚೂರೂ ಹೆಮ್ಮೆಯೇ ಆಗುತ್ತಿದ್ದಿರಲಿಲ್ಲ.

ಹೌದು. ಇಸ್ಕೂಲು, ಹೈಸ್ಕೂಲು ಓದುವಾಗಲೆಲ್ಲ ’ನಾನು ಕನ್ನಡಿಗ’ ಅನ್ನುವುದರಲ್ಲಿ ಅಂತಹ ವಿಶೇಷಗಳೇನೂ ಇರಲಿಲ್ಲ. ಸುತ್ತಮುತ್ತಲೂ ಮುತ್ತಿಕೊಂಡಿದ್ದ ಗೆಳೆಯರೆಲ್ಲರೂ ಕನ್ನಡಿಗರೇ ಆಗಿದ್ದರಿಂದ ಅದೊಂದು ಸ್ಪೆಷಲ್ ಅನ್ನುವ ಭಾವ ಮೂಡುತ್ತಿರಲಿಲ್ಲ. ಕಾಲೇಜುಪರ್ವದಲ್ಲಿ ಕನ್ನಡಿಗ ಆಗಿರುವುದು ಕೊಂಚ ಸಂಕಟಗಳಿಗೆ ಸಿಕ್ಕಿಸಿತ್ತಾದರೂ ಅದಕ್ಕೆ ಕಾರಣ ’ನಾ ಕನ್ನಡದವ’ ಆಗಿರುವುದಲ್ಲ, ’ಇಂಗ್ಲೀಷ್ ಅರಿವು ಕಡಿಮೆ ಇರುವುದು’ ಎಂಬ ಜ್ಞಾನೋದಯ ಆದಮೇಲೆ ಆ ಕುರಿತು ಆಲೋಚನೆಯೂ ಬರಲಿಲ್ಲ.

ಆದರೆ ಕರುನಾಡ ಕೋಟೆ ದಾಟಿದ ಮೇಲೆ ಕನ್ನಡ ಎಂಬ ಭಾಷೆ ಎಷ್ಟು ಸಿಹಿ ಅನ್ನುವುದು ಗೋಚರವಾಗುತ್ತಿತ್ತು. ಇದೊಂಥರ ಮನೆಯಲ್ಲಿದ್ದಾಗ ಹಠ, ಗೊಂದಲ ಮಾಡುತ್ತಿದ್ದು ನಂತರ ಅಮ್ಮನ ಮಹತ್ವ ಅರಿವಾಗುವ ಹಾಸ್ಟೆಲ್ ಹುಡುಗನ ರೀತಿ. ಸಿಂಗಾಪೂರ್ ಗೆ ಬಂದ ಮೇಲೆ ನನ್ನ ಜತೆ ಕೆಲಸ ಮಾಡುವವರಿಗೆ ನನ್ನ ರಾಜ್ಯದ ಕುರಿತು, ಭಾಷೆಯ ಕುರಿತು ವಿವರಿಸುವಾಗ ಅದೆಂತದೋ ಪದಗಳಲ್ಲಿ ಸಿಲುಕದ ಸಂತಸ. ಅವರಂತೂ ಅಮೇರಿಕದ ವೈಭವವನ್ನೂ ಈ ರೀತಿಯ ವಿವರಣೆಯ ಸಹಿತ ಕೇಳಿರಲಿಕ್ಕಿಲ್ಲ, ಹಾಗೆ ಇರುತ್ತಿತ್ತು. ಇಲ್ಲಿಯ ಹೆಚ್ಚಿನವರಿಗೆ ಭಾರತೀಯರೆಂದರೆ ತಮಿಳರು ಅನ್ನುವ ಭಾವ ಇರುವುದರಿಂದ, ನನ್ನ ಭಾರತೀಯತೆ ಅರಿವಾದ ಕೂಡಲೇ, ’ತಮಿಳಾ?’ ಎನ್ನುವ ಪ್ರಶ್ನೆ ಕೇಳುತ್ತಾರೆ. “ಅಲ್ಲ, ನಾನು ಕನ್ನಡಿಗ’ ಎಂಬ ಉತ್ತರಕ್ಕೆ ಪೂರ ಹೆಮ್ಮೆಯ ಲೇಪ. ಅಲ್ಲೇ ಹುಟ್ಟಿ, ಅಲ್ಲೇ ಬೆಳೆದಿದ್ದರೂ ಯಾವಾಗಲೂ ಈ ವಾಕ್ಯ ಆಡಿದ ಉದಾಹರಣೆ ನೆನಪಿಲ್ಲ.

ಜಯಂತ್ ಕಾಯ್ಕಿಣಿ ತಮ್ಮ ಭಾಷಣದಲ್ಲಿ ಯಾವಾಗಲೂ ಹೇಳುತ್ತಿರುತ್ತಾರೆ, ” ನಾವು ಅಮೇರಿಕದಲ್ಲೋ, ಸಿಂಗಾಪುರ್ ನಲ್ಲೋ ಅಥವ ಅಸ್ಸಾಂ, ಮುಂಬೈ ನಲ್ಲಿ ಇದ್ದುಕೊಂಡು, ಒಳ್ಳೆಯ ಕೆಲಸಗಾರರಾಗಿ, ಒಳ್ಳೆಯ ಪ್ರಜೆಯಾಗಿ, ಒಳ್ಳೆಯ ತಂದೆ, ಮಗ, ಅಣ್ಣ, ತಮ್ಮ, ಗೆಳೆಯನಾಗಿ ಇರುವುದು ಕನ್ನಡತನವಾ? ಅಥವ ಬೆಂಗಳೂರಲ್ಲೆ ಇದ್ದು, ವಿಧಾನಸೌಧದ ಮುಂದೇನೆ ಮನೆಮಾಡಿ, ಕೈತುಂಬ ಉಂಗುರಗಳು, ಕೊರಳ ತುಂಬಾ ಚೈನು ಹಾಕಿಕೊಂಡು, ಸಿಕ್ಕಾಪಟ್ಟೇ ಭ್ರಷ್ಟಾಚಾರ ಮಾಡಿ, ಹೀನವಾಗಿ ಬದುಕಿ ರಾಜ್ಯೋತ್ಸವದ ದಿವಸ ಧ್ವಜ ಹಾರಿಸುವುದು ಕನ್ನಡತನವಾ? ಅಂದರೆ ಕನ್ನಡತನ ಅನ್ನುವುದು ನೀವಾಡುವ ಭಾಷೆಯ ಮೇಲೆ ಮಾತ್ರ ನಿರ್ಭರವಾಗಿಲ್ಲ. ಕನ್ನಡತನ ಅಂದರೆ ನಾವು ಬದುಕುವ ರೀತಿ. ಮಮತೆ, ಪ್ರೀತಿಯೇ ಕನ್ನಡತನ. ನಾವೆಲ್ಲಿ ಇರುತ್ತೇವೆ ಅನ್ನುವುದಲ್ಲ, ಚೆನ್ನಾಗಿ ಕೆಲಸ ಮಾಡಿ, ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯುವುದಕ್ಕಿಂತ ದೊಡ್ಡ ಕನ್ನಡತನ ಬೇರೆಯಿಲ್ಲ.”

ನನ್ನಲ್ಲೂ ಅಂಥ ಒಂದು ಕನಸು. ಉಳಿದವರು ’ರೀ ಅವ್ರು ಕನ್ನಡವರು, ಮೋಸ ಮಾಡೋಲ್ಲ” ಅಂತಲೋ ಅಥವ ಅಂಗಡಿಯಲ್ಲಿ ಪರ್ಸು ಮರೆತ ಘಳಿಗೆಯಲಿ, “ನೀವ್ ಕನ್ನಡದವ್ರಾ? ಪರ್ವಾಗಿಲ್ಲ, ನಾಳೆ ಕೊಡಿ” ಈ ರೀತಿ ಕನ್ನಡ ಒಂದು ನಂಬಿಕೆಯಾಗಿ, ಒಳ್ಳೆಯತನವಾಗಿ ಹಬ್ಬಬೇಕು. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಅನ್ನುವುದಕ್ಕಿಂತ Value ಆಗಿ ಬೆಳೆಯಬೇಕು ಎಂಬುದೊಂದು ಆಶಯ.

ಎಂದಿಗೂ ನಾನು ಅಂಥ ಕನ್ನಡಿಗನಾಗಲು ಬಯಸುತ್ತೇನೆ.

 

ಅಡಿಟಿಪ್ಪಣಿ: ಇಲ್ಲಿಯ ಹೋಟೇಲೊಂದರಲ್ಲಿ ಅಕಸ್ಮಾತ್ ಭೇಟಿಯಾದ ಬೆಳಗಾವಿಯ ಬಾಲರಾಜ್ ಮತ್ತವರ ಪುಟ್ಟಿಯ ಕನ್ನಡ ಹುಟ್ಟಿಸಿದ ರೋಮಾಂಚನದಿಂದಾಗಿ, ಮತ್ತೆ ಬರೆಯುತ್ತೇನೆ ಅಂತ ಮುಂದೂಡುತ್ತಲೇ ಬರುತ್ತಿದ್ದ ಈ ಲೇಖನ ಇವತ್ತೇ ಬರೆಯುವಂತಾಯಿತು. ಬೆಂಗಳೂರಲ್ಲೇ ಅಪರೂಪವಾಗುತ್ತಿರುವ ಕನ್ನಡವನ್ನು ಸಾವಿರಾರು ಮೈಲು ದೂರ ಅದೂ ಪುಟ್ಟ ಹುಡುಗಿಯ ಮಾತಾಗಿ ಕೇಳುವ ಅದ್ಭುತವೇ ಬೇರೆ.