ಮತ್ತೆ ಸಡಗರ ದ ಪುನರ್ಜನ್ಮ!!
ಕುಂಟುತ್ತಾ ಕುಂಟುತ್ತಾ ಸಾಗುತ್ತಿದ್ದ ಸಡಗರ ಸಡನ್ನಾಗಿ ನಿಂತಿದ್ದು ಎಲ್ಲರಿಗೂ ತಿಳಿದ ವಿಚಾರ. ಮೊದಲು ಸಡಗರ ಮುಚ್ಚಲಿದ್ದೇವೆಂದು ತಿಳಿಸಿದಾಗ ಸಂಪಾದಕರು ಏಪ್ರಿಲ್ ಫೂಲ್ ಮಾಡುತ್ತಿದ್ದಾರೇನೋ ಎಂಬ ಗುಮಾನಿ ಎಲ್ಲರಲೂ. ಪರಿಸ್ಥಿತಿಯ ಅರಿವಿದ್ದುದರಿಂದ ನಿಜ ಅನ್ನುವುದೂ ಮನ ಒಪ್ಪಲಾರದ ಸತ್ಯವಾಗಿತ್ತು. ಪತ್ರಿಕೆ ನಡೆಸಲು ಆಗುವ ಪ್ರಯಾಸಗಳಿಂದ ಹೇಗೋ ಸಾವರಿಸಿಕೊಂಡು ಮತ್ತೆ ಯಾವುದೋ ಒಂದು ದಿನ ’ ಅದು ಸುಮ್ಮನೆ ಏಪ್ರಿಲ್ ಫೂಲ್ ಮಾಡಿದ್ದು.. ಈ ಸಲದ ಪತ್ರಿಕೆ ಹೇಗೆ ಮಾಡೋಣ’ ಅನ್ನುತ್ತಾರೆಂಬ ಆಸೆಯಿತ್ತು. ಪ್ರತೀ ಸಲ ಪತ್ರಿಕೆ ಕೈಗೆ ಬಂದೊಡನೆ ಪರೀಕ್ಷೆಗಳು ನೀಡುವ ಒತ್ತಡಗಳು, ಪರ್ಸನಲ್ ಕೆಲಸಗಳು, ಪತ್ರಿಕೆಯ ಬರಹಗಳ ತಯಾರಿ ಬೇಡುವ ಬೇಜಾನ್ ಸಮಯ ಈ ಎಲ್ಲಾ ಕಷ್ಟಗಳೂ ಇಷ್ಟವಾಗಿಬಿಡುತ್ತಿದ್ದವು. ಸಡಗರ ಬಳಗದವರಿಗೆ ಹೆರಿಗೆ ನಂತರ ಮಗು ನೋಡಿದ ಅಮ್ಮನ ನಲಿವು. ಸಡಗರ ಪತ್ರಿಕೆಯ ಅಂದ, ಒಳಗಿನ ಮುದ್ದಾದ ಬರಹಗಳನ್ನು ಕಂಡು ’ಓ.. ಮನಸೇ ..’ ಪತ್ರಿಕೆ ನಿಂತಿದ್ದು ಯಾಕೇಂತ ಗೊತ್ತಾಯ್ತೀಗ ಅಂತ ಸುಮ್ಮಸುಮ್ಮನೆ ಹೆಮ್ಮೆ ಪಡುತ್ತಿದ್ದೆವು. ಆರ್ಥಿಕ ಬಲವಿದ್ದಿದ್ದಲ್ಲಿ ಅದು ಅಸಾಧ್ಯವೂ ಆಗಿರಲಿಲ್ಲ ಅನ್ನುವ ಆತ್ಮವಿಶ್ವಾಸ, ನಂಬಿಕೆ ಈಗಲೂ ಇದೆ.
ನಿಜವಾಗಿಯೂ ಸಡಗರದ ಬಂಡವಾಳ, ಕೆಲ ಹುಡುಗ-ಹುಡುಗಿಯರ ಒಂದಿಷ್ಟು ಕನಸುಗಳು, ಬರೆಯುವ ಉಮೇದು, ಉತ್ಸಾಹಗಳು ಮತ್ತು ಓದುಗರ ಪ್ರೋತ್ಸಾಹ,ಬೆಂಬಲಗಳಷ್ಟೇ ಆಗಿದ್ದವು. ಪ್ರೊಫೆಶನಲ್ ಪತ್ರಕರ್ತರಿಗಿರುವಷ್ಟು ಸಮಯ, ಸೌಲಭ್ಯ, ಸವಲತ್ತುಗಳಿಲ್ಲದೇ, ತಿಂಗಳಿಗೊಂದು ಇಂಟರ್ನಲ್ಸು, ಅಂತಾದ್ದು ಮೂರು ಬರುವುದರೊಳಗೆ ಸೆಮಿಸ್ಟರ್ ಪರೀಕ್ಷೆಗಳು, ಹಾರಿ ಬಂದು ಸೋರಿ ಹೋಗುವ ರಜೆಗಳು ಇವೆಲ್ಲದರ ನಡುವೆಯೂ ಸಡಗರವೆಂಬ ಕನಸು ಸಾವಿರ ತಾವರೆಯಂತೆ ಅರಳಿ ನಿಂತಿತ್ತು. ಪತ್ರಿಕೆಯನ್ನು ಎಲ್ಲಾ ಊರಿನ ಪ್ರತೀ ಸ್ಟಾಲ್ ಗಳಲ್ಲಿ ಮಾರಾಟ ಮಾಡಲು ಜನಬಲ, ಧನಬಲವಿರಲಿಲ್ಲ. ಆದರೂ ಅಂತಿಮವಾಗಿ ಪತ್ರಿಕೆಮೂಡಿ ಓದುಗನೊಬ್ಬ ಹಿಡಿದಾಗ ಅವನ ಮೊಗದಲ್ಲಿ ಅಚ್ಚರಿ ಮೂಡಿಸದೇ ಇರಲಿಲ್ಲ. ಸಿನೆಮಾ ಮಂದಿಯ ಗಾಸಿಪ್ಪುಗಳ ಹಂಗಿಲ್ಲದೇ, ಗೃಹಿಣಿಯರಿಗೆ ಕಿವಿಮಾತುಗಳು, ಗಂಡನನ್ನು ಒಲಿಸಿಕೊಳ್ಳುವ ವಿಧಾನಗಳು, ಮೇಕಪ್ ಮಾಡಿಕೊಳ್ಳುವುದು ಹೇಗೆ? ಇಂತಹ ವಿಷಯಗಳೇನೂ ಇಲ್ಲದೇ, ಯಾವುದೇ ಕ್ರೈಮ್ ಕತೆಗಳ ಫುಲ್ ಡೀಟೈಲ್ಸ್, ಡೇಂಜರಸ್ ಡೀಟೈಲ್ಸ್ ಮುಖಪುಟದಲ್ಲಿ ರಾರಾಜಿಸದೇ ಒಂದು ಸಹೃದಯ ವಿಚಾರಗಳ, ಮಾನಸಿಕ ಪ್ರಬುದ್ಧತೆಗಳುಳ್ಳ ಬರಹಗಳು, ಓದಿದ ನಂತರ ಬದುಕಿನ ಬಗ್ಗೆ, ನಮ್ಮ ಕುರಿತು ನಾವು ಚಿಂತಿಸುವಂತಹ ಲೇಖನಗಳುಳ್ಳದ್ದಾಗಿತ್ತು.
ಹೀಗೆ ಕನಸುಗಳು ಒಂದರ ಮೇಲೊಂದು ಅರಳುತ್ತಿದ್ದಾಗ ಲೋಕಕ್ಕೆ ರಿಸೆಶನ್ ರೋಗ ಬಡಿದ ಪರ್ವಕಾಲದಲ್ಲೇ ಪತ್ರಿಕೆಗೂ ಅರ್ಥಿಕ ಹಿಂಜರಿತ ಕಾಡಿತು. ಕೆಲವರು ಬೆಂಬಲಿಸಿ ಮುಂದುವರೆಯಿರಿ ಎಂದರು, ಸಹಾಯ ಮಾಡಲು ಅಣಿಯಾದರು. ಆದರೆ ಇದು ಕೆಲದಿನಗಳ ಉಸಿರಾಟವಷ್ಟೇ ಎಂಬುದು ನಿರ್ಲಕ್ಷಿಸಲಾಗದ, ಅರಗಿಸಿಕೊಳ್ಳಲೇಬೇಕಾದ ಸತ್ಯವಾಗಿತ್ತು. ಸಡಗರ ನಿಂತ ಶಾಕ್ ಗೆ ಗರಬಡಿದವರಂತಿದ್ದ ಬಳಗಕ್ಕೆ ನಿಜವಾಗಿಯೂ ಪತ್ರಿಕೆಗೆ ಮುಖ್ಯ ತಡೆಯಾಗಿದ್ದು ಆರ್ಥಿಕ ವಿಷಯವೇ; ಬೇರೇನೂ ಅಲ್ಲದಿರುವಾಗ ಬ್ಲಾಗ್ ನ ಮೂಲಕ ಯಾಕೆ ಮುಂದುವರಿಸಬಾರದು ಎಂಬ ಆಲೋಚನೆ ಮೂಡುತ್ತಿದ್ದಂತೆ ಮತ್ತೆ ಕನಸುಗಳು ಮೊಳಕೆಯೊಡೆದಿವೆ. ಸಡಗರ ಪತ್ರಿಕೆಯ ಹೆಚ್ಚಿನ ಓದುಗರು ಬ್ಲಾಗಿನ ಓದುಗರೂ ಆದುದು ನಮ್ಮ ನಿರ್ಧಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಅರೆ! ನಿಜವಲ್ಲವೇ? ಎಲ್ಲೆಡೆ ಇಂಟರ್ನೆಟ್ಟು ಹಬ್ಬುತ್ತಿರುವ ವೇಗ ನೋಡುತ್ತಿದ್ದರೆ ಇದಕ್ಕಿಂತ ಒಳ್ಳೆಯ ಮಾಧ್ಯಮವುಂಟಾ ಕನಸುಗಳನ್ನು ಹಂಚಿಕೊಳ್ಳಲು ಅನ್ನಿಸಿದ್ದು ಸುಳ್ಳಲ್ಲ. ಮನಸ್ಸಿನ ಹಸುವಿಗೆ ಜ್ಞಾನದ ಹುಲ್ಲುಗಾವಲಿನಲ್ಲಿ ಆರ್ಥಿಕತೆಯ ಬೇಲಿಯಿಲ್ಲ! ಬ್ಲಾಗ್ ಎಂಬುದು ಜನರನ್ನು ಮುಟ್ಟುವ ಸುಲಭ ಮಾರ್ಗವಾಗುವತ್ತ ದಾಪುಗಾಲಿಡುತ್ತಿದೆ. ಇಂಟರ್ನೆಟ್ಟು ಯಾರು ಬಳಸ್ತಾರೆ? ಬ್ಲಾಗ್ ಯಾರು ಓದುತ್ತಾರೆ ಎನ್ನುವವರು ಕೇವಲ ಕನ್ನಡಭಾಷೆಯಲ್ಲಿಯೇ ಸಾವಿರಕ್ಕೂ ಮಿಗಿಲು ಬ್ಲಾಗ್ ಇರುವುದನ್ನು ನೋಡಿ ಮೂಗಿನ ಮೇಲಿಟ್ಟ ಬೆರಳು ಅಚ್ಚರಿಯಿಂದ ಕಣ್ಣಿನವರೆಗೆ ಏರಿದೆ! ಬ್ಲಾಗ್ ಎಂದರೆ ಮೂಗು ಮುರಿಯುವಂತಿದ್ದ ಪ್ರಿಂಟ್ ಮಾಧ್ಯಮಕ್ಕೂ ಇದರ ಮಹತ್ವ ಅರಿವಾಗಿದೆ. ಅದರಲ್ಲೂ ಬ್ಲಾಗ್ ಬರಹಗಳು ಮನ್ನಣೆ ಪಡೆಯುತ್ತಿದೆ. ಸಿನೆಮಾ ನಟರು ತಮ್ಮ ಮೇಲಿನ ಅಪವಾದಗಳನ್ನು, ರೂಮರ್ ಗಳಿಗೆ ಉತ್ತರವನ್ನು, ತಮ್ಮ ಭಾವನೆಗಳನ್ನು ಬ್ಲಾಗ್ ಮೂಲಕ ಹರಿಸಿ ತೀರಿಸಿಕೊಳ್ಳುತ್ತಿದ್ದಾರೆ. ಕೋಲಾರದ ಪೋಲಿಸ್ ವಿಭಾಗ ತಮ್ಮ ಕೆಲಸದ ಪಾರದರ್ಶಕತೆಯನ್ನು ಬ್ಲಾಗಿನಲ್ಲಿ ಈಗಲೂ ತೋರಿಸುತ್ತಿದ್ದಾರೆ. ಯಾವುದೇ ಪತ್ರಕರ್ತರೆನ್ನುವ ಟ್ಯಾಗ್ ಇಲ್ಲದ, ಬರಹಗಾರನೆಂಬ ಹಣೆಪಟ್ಟಿಯಿಲ್ಲದ ಸಾಮಾನ್ಯ ಜನರೂ ತಮ್ಮ ಮನದ ಭಾವನೆಗಳನ್ನು ನಿರ್ವಿಘ್ನವಾಗಿ ಬ್ಲಾಗ್ ಮೂಲಕ ತೋಡಿಕೊಳ್ಳಬಹುದಾಗಿದೆ. ಬಹುಶಃ ಮುಖ್ಯಮಂತ್ರಿಗಳು ಜನತಾದರ್ಶನವೆಂದು ತಮ್ಮ ಅಮೂಲ್ಯ ಸಮಯವನ್ನು ಕೆಲ ಜನರಿಗಷ್ಟೇ ಸೀಮಿತವಾಗಿಡುವ ಬದಲು ಬಿಡುವಾದಾಗ ಬ್ಲಾಗ್ ಮೂಲಕವೇ ಜನರ ಅಹವಾಲುಗಳನ್ನು ಸುಲಭವಾಗಿ ಪಡೆಯಬಹುದು. ಬ್ಲಾಗ್ ಪ್ರಕಾಶಿಸುತ್ತಿರುವ ಪರಿಸ್ಥಿತಿಯಲ್ಲಿ ಬರೀ ಆರ್ಥಿಕತೆಯ ಕಾರಣ ಹೇಳಿ ನಮ್ಮಯ ಸಡಗರವನ್ನು ಮುಚ್ಚುವುದು ಸರಿಯಾದುದಲ್ಲ.
ಓದುಗರ ಪ್ರೀತಿ, ತೊಡಗಿಸಿಕೊಳ್ಳುವಿಕೆಯನ್ನು ಇಟ್ಟುಕೊಂಡು ಪತ್ರಿಕೆಯನ್ನು ಬ್ಲಾಗಿನ ಮೂಲಕವೇ ನಡೆಸೋಣ ಎಂದು ನಿರ್ಧರಿಸಿದ್ದೇವೆ. ಇನ್ನು ಪತ್ರಿಕೆಗೆ ಯಾವ ಆರ್ಥಿಕ ಹರ್ಡಲ್ಸ್ ಅಡಚಣೆಯಾಗದು. ಸಮಯಕ್ಕೆ ಸರಿಯಾಗಿ ಪತ್ರಿಕೆ ಕೊಡಲಿಲ್ಲ ಎಂದು (ಪ್ರೀತಿಯಿಂದ) ಬೈಸಿಕೊಳ್ಳುವಂತಿಲ್ಲ. ಬರಹಗಳನ್ನು ಚಂದಗಾಣಿಸಿ ನೀಡಬೇಕೇ ವಿನಃ ಚಂದಾ ಕೇಳಬೇಕಿಲ್ಲ. ಯಾವಾಗ ಇನ್ನೊಂದು ಸಂಚಿಕೆ ಎಂದು ಕಾಯುವ ಅಗತ್ಯವಿಲ್ಲ. ಸಡಗರ ಇನ್ನು ನಿಮ್ಮ ಬೆರಳಿನ ಕ್ಲಿಕ್ಕಿನಷ್ಟು ದೂರ! ಇನ್ನು ಮತ್ತೆ ಮನದ ಗೂಡಿನಲಿ ಕಲರವ-ಸಡಗರ ಇಂಚರಿಸಲಿವೆ. ಸಡಗರ ಬಳಗದ ಮನದಾಗಸದಲ್ಲಿ ವಿಚಾರಗಳ ಮೋಡ ದಟ್ಟೈಸಿವೆ.
ಸಡಗರ ಬ್ಲಾಗ್ ಪತ್ರಿಕೆ ಮಳೆಗಾಲದ ಆರಂಭದ ದಿನದಿಂದ ಹನಿಸಲು ಶುರುವಾಗಿದೆ!

ರಂಜಿತ್ ಸರ್,
all the best…
Shubhavaarthe….
Shubhaaramba….
Shubhavaagali….
ಶಿವು ಸರ್,
ನಿಮ್ಮ ವಿಶಸ್ ಗೆ ಧನ್ಯವಾದಗಳು.
*********
ರೂಪ,
ನೀವೂ ಬಲಗಾಲಿಟ್ಟು ಆಗಾಗ ಸಡಗರ ಕ್ಕೂ ಬರುತ್ತಿರಿ..
ಹಾಗೇ ಓದುಗರು ಒಂದು ಅಂಶ ಗಮನಿಸಬೇಕಿದೆ.
ಶೀರ್ಷಿಕೆಯಲ್ಲಿ ಮತ್ತೆ ಸಡಗರದ ಪುನರ್ಜನ್ಮ ಅಂತ ಇದೆ. ನಿಜವಾಗಿ ಈ ಪ್ರಯೋಗ ತಪ್ಪು. ಆದರೆ ಸಡಗರ ಪತ್ರಿಕೆ ಸಾಕಷ್ಟು ಸಲ ಪುನರ್ಜನ್ಮ ಪಡೆದಿದೆಯಾದ್ದರಿಂದ ಶೀರ್ಷಿಕೆ ಹೊಂದುತ್ತದೆ ಅನ್ನಿಸಿತು.
ಪ್ರೀತಿಯಿರಲಿ.