Home > ಲೇಖನ > ಹೂದೋಟವಾಗುವುದು ದೇವರು ಕೊಟ್ಟ ಬಯಲು!

ಹೂದೋಟವಾಗುವುದು ದೇವರು ಕೊಟ್ಟ ಬಯಲು!

ಬದುಕಿನಲ್ಲಿ ಸದಾ ನೆಗೆಟಿವ್ ಆಗಿ ಯೋಚಿಸುವವರನ್ನು, ಪದೇ ಪದೇ ಸೋಲುವವರನ್ನು ಜಗತ್ತು ಹೀನಾಯವಾಗಿ ನೋಡುತ್ತದೆ. ಅವರು ದೂರ ಬರುವುದು ಕಾಣುತ್ತಲೇ ಜನರಿಗೆ ‘ಅರ್ಜೆಂಟು ಕೆಲಸ’ಗಳು ನೆನಪಾಗುತ್ತವೆ. ಬೇಗ ಎರಡೂ ಕಾಲಿಗೆ ಚೆನ್ನಾಗಿ ಬುದ್ಧಿ ಹೇಳಲು ಕಾರಣಗಳು ಸಿಕ್ಕುತ್ತವೆ.

ಆದರೆ ಸದಾ ನಗೆ ಬೀರುವ, ಗೆಲ್ಲುತಲಿರುವ ವ್ಯಕ್ತಿಗೆ ಅಂಥ ಟ್ರೀಟ್ ಮೆಂಟ್ ಸಿಗುವುದಿಲ್ಲ. ಅಂಥವರನ್ನು ನೋಡಲು ಕಾಯುತ್ತಿರುತ್ತಾರೆ. ಅವರ ಜೊತೆಗೆ ಮತ್ತಷ್ಟು ಹೊತ್ತು ನಿಲ್ಲಲು ತವಕಿಸುತ್ತಿರುತ್ತಾರೆ. ಅರ್ಜೆಂಟು ಕೆಲಸಗಳೆಲ್ಲ ಪಕ್ಕಕ್ಕೆ ನಿಂತು ಯಶಸ್ವಿ ವ್ಯಕ್ತಿಗೆ ದಾರಿ ಬಿಡುತ್ತದೆ.

ಆದರೆ ಅಂಥ ಸ್ಥಿತಿ ತಲುಪುವ ದಾರಿ ಸುಗುಮವಾದುದಲ್ಲ.ಮೇಲಕ್ಕೆ ಸರಾಗವಾಗಿ ಕಂಡರೂ ಸಾಕಷ್ಟು ಪರಿಶ್ರಮವಿರುತ್ತದೆ. ಬಾತುಕೋಳಿಯಂತೆ ಮೇಲೆ ಸಲಿಲವಾಗಿ ಈಜುತ್ತಿದ್ದರೂ, ಪಟ ಪಟ ಬಡಿಯುವ ಕಾಲಿನ ಶ್ರಮ ಕಾಣುವುದಿಲ್ಲ. ಗೆಲುವಿಗೆ ಅವರು ಕಂಡ ಕನಸಿನ ಬೀಜ, ಕನಸನ್ನು ಪೋಷಿಸಲು ವಿನಿಯೋಗಿಸಿದ ಶ್ರಮ, ನಿದ್ದೆಗೆಟ್ಟ ರಾತ್ರಿಗಳು, ಪಟ್ಟ ಅವಮಾನಗಳು, ‘ಈ ಗುರಿ ಅಸಾಧ್ಯ’ ಎಂಬ ಲೆವೆಲ್ಲಿನಿಂದ ಮತ್ತೆ ಉತ್ಸಾಹದ ಬುಗ್ಗೆಯೊಡೆದು ಸಾಧಿಸುವ ಶ್ರದ್ಧೆ ಇವ್ಯಾವುದೂ ತೋರದು.

ಸಾಮಾನ್ಯ ಮನುಷ್ಯರಿಗೆ ಕನಸು ಕಾಣುವ ಪ್ರವೃತ್ತಿಯಿರುವುದು ಸಹಜ. ಕೆಲವರು ಅದನ್ನು ಕನಸಿನ ಮಟ್ಟಕ್ಕೇ ಉಳಿಸಿ ಮತ್ತೆ ಜೀವನವನ್ನು ಮಾಮೂಲಾಗಿ ಕಳೆದುಬಿಡುತ್ತಾರೆ. ಉಳಿದವರು ಅದರಿಂದಲೇ ಪ್ರೇರಣೆ ಪಡೆದು ಒಂದಿಷ್ಟು ಪ್ರಯತ್ನ ಮಾಡಿದರೂ ಚಿಕ್ಕ ಸೋಲು ಎದುರಾದೊಡನೆ ಸುಸ್ತಾಗುತ್ತಾರೆ. ಗಾಜು ಮುಚ್ಚಿದ ಕಾರಿನೊಳಗಡೆ ಹಾರುವ ನೊಣ ಒಂದೆರಡು ಬಾರಿ ಪ್ರಯತ್ನಿಸಿ ಸಾಧ್ಯವಾದಾಗ ಒಳಗಿನ ಪರಿಸರಕ್ಕೇ ಅಡ್ಜಸ್ಟ್ ಆಗುವಂತೆ ಮತ್ತೆ ರೊಟೀನ್ ಜೀವನಕ್ಕೆ ಶರಣಾಗುತ್ತಾರೆ. 

 

ಮೊದಲು ಕಂಡ ಕನಸು ನನಸಾಗಿಸುವ ಸಾಮರ್ಥ್ಯ ಇದೆಯಾ? ಅದಕ್ಕೆ ಬೇಕಾಗುವ ಸಮಯ, ಪಡಬೇಕಾದ ಕಷ್ಟದ ಅಂದಾಜು ಮಾಡಿ ಸಾಧಿಸಬಲ್ಲೆವಾ ಎಂದು ನಿಯತ್ತಾಗಿ ಪ್ರಶ್ನಿಸಿಕೊಳ್ಳಬೇಕು. ಒಮ್ಮೆ ಹಠ, ಶ್ರದ್ಧೆ ಮೂಡಿದರೆ ಅದರಲ್ಲೆದುರಾಗುವ ಸೋಲುಗಳನ್ನು ತಾತ್ಮಾಲಿಕ ಎಂದೇ ಪರಿಗಣಿಸಿ ಮುನ್ನುಗ್ಗಬೇಕು. ಮಹಾನ್ ಆಟಗಾರರಲ್ಲಿ ಚಿರವಾಗಿ ಉಳಿಯುವ ಹೆಸರಾದ ಸಚಿನ್ ತೆಂಡುಲ್ಕರ್ ಸಹ ಶೂನ್ಯದಿಂದಲೇ ಟೆಸ್ಟ್ ಕ್ರಿಕೆಟ್ ಶುರು ಮಾಡಿದ್ದು ಎಂಬುದು ನೆನಪಿರಲಿ. ಅಮಿತಾಭ್ ಬಚ್ಚನ್ ದನಿಯನ್ನು ಆಕಾಶವಾಣಿಯಲ್ಲಿ ‘ಚೆನ್ನಾಗಿಲ್ಲ’ ಎಂದು ತಿರಸ್ಕರಿಸಲಾಗಿತ್ತು. ಈಗ ಅಂದಾಜಿಗೆ ಸಾವಿರದೈನೂರು ಕೋಟಿಗೆ ಒಡೆಯನಾಗಿರುವ ಶಾರುಕ್ ಚಿಕ್ಕ ಧಾರಾವಾಹಿಗಳಲ್ಲಿ ನಟಿಸುತ್ತಲೇ ಪದಾರ್ಪಣೆ ಮಾಡಿದ್ದು. ಅವರೆಲ್ಲ ತಮ್ಮ ರಂಗದಲ್ಲೆದುರಾದ ಸೋಲಿಗೆ ಹೆದರಿ ‘ಅಯ್ಯೋ! ನನ್ನಿಂದಾಗುವುದಿಲ್ಲ’ ಎಂದು ನಿರ್ಧರಿಸಿದ್ದರೆ ಏನಾಗುತ್ತಿತ್ತು ಊಹಿಸಬಲ್ಲಿರಾ?

ದೇವರು ಬದುಕೆಂಬ ಖಾಲಿ ಹಾಳೆ ಕೊಟ್ಟು ಏನಾದರೂ ಬರೀರಿ ಎಂದರೆ ಚಿಕ್ಕಪುಟ್ಟದನ್ನು ಯಾಕೆ ಬರೆಯುವಿರಿ? ದೊಡ್ಡ ಕನಸುಗಳನ್ನೇ ಕಾಣಿರಿ ಎಂದವರು ಶಂಕರ್‌ನಾಗ್. ಬೆಳಿಗೆ ಏಳುತ್ತಿದ್ದಂತೆ ಉತ್ಸಾಹ ಮೂಡಬೇಕು. ಉಳಿದ ಪ್ರಾಣಿಗಳಂತೆ ಬರೀ ಹಸಿವು, ಕಾಮ ಮಾತ್ರ ನಮ್ಮ ಉದ್ದೇಶಗಳಲ್ಲ. ನಾಳಿನ ಸೊಗಸಾದ ಜೀವನದ ಕನಸು ಕಾಣಲು ರಾತ್ರಿಗಳಿವೆ. ಅದನ್ನು ಸಾಧಿಸಲು ಚಂದದ ಹಗಲುಗಳಿವೆ. ಸರಿಯಾಗಿ ನೋಡಿದಲ್ಲಿ ಆಕಾಶದಷ್ಟು ಅವಕಾಶವಿದೆ. ಸಾಧಿಸಬೇಕಾದ್ದನ್ನು ಪೂರ್ಣಗೊಳಿಸಲು ಬೇಕಾದ ಶ್ರದ್ಧೆ, ಅಂಕಿತಭಾವ, ಏಕಾಗ್ರತೆ ಎಲ್ಲವೂ ಬೇರೆಲ್ಲೋ ಇಲ್ಲದೇ ನಮ್ಮ ಮೆದುಳಲ್ಲೇ ಇವೆ.

 

ಬಹಳಷ್ಟು ಜನ ಹೀಗೆ ಆಲೋಚಿಸುತ್ತಾರೆ, ತಮ್ಮನ್ನು ಸರಿಯಾದ ಮಾರ್ಗದಲ್ಲಿ ಗೈಡ್ ಮಾಡುವ, ಸೋಲುಗಳಲ್ಲಿ ಧೈರ್ಯ ಹೇಳುವ, ತಮ್ಮ ಅನುಮಾನಗಳನ್ನು ಪರಿಹರಿಸುವ, ಜಗತ್ತಿಗೆ ಜಗತ್ತೇ ತಮ್ಮೆದುರಿಗೆ ತಿರುಗಿ ಬಿದ್ದರೂ ನಮ್ಮ ಜತೆಯಲ್ಲೇ ಇದ್ದು ಹುಮ್ಮಸ್ಸು ನೀಡುವ ಗೆಳೆಯ ಒಬ್ಬನಿದ್ದರೆ ಎಷ್ಟು ಚೆನ್ನ ಅಲ್ಲವಾ ಎಂದು.

ನಿಜ ಅಂಥ ಸ್ನೇಹಿತನಿರಬೇಕು.

ಆದರೆ ಬೇರೊಬ್ಬ ವ್ಯಕ್ತಿಯಲ್ಲಲ್ಲ. ಅವನಲ್ಲೇ ಇರಬೇಕು!

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅಂತ ಸ್ನೇಹಿತ ಸಿಕ್ಕರೆ ಅದೃಷ್ಟವೇ. ನಮ್ಮಲ್ಲೇ ಇದ್ದರೆ ಸೋತಾಗ ಹೆಗಲಿಗಾಗಿ ಹುಡುಕುವುದಿಲ್ಲ. ನಮ್ಮೊಳಗಿನ ಶಕ್ತಿಗೆ ಬೇರೆಯವರ ಮೇಲೆ ಆಧಾರ ಪಡಬೇಕಿಲ್ಲ.

ಅಂಥ ಸ್ನೇಹಿತ ನಮ್ಮಲ್ಲಿರಬೇಕಾದರೆ ‘ಅವನು’ ಎಲ್ಲ ತಿಳಿದವನಾಗಿರಬೇಕು. ಧೈರ್ಯದ ಮಾತುಗಳು, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ, ಮುನ್ನುಗ್ಗಿಸುವ ಛಾತಿ ಉಳ್ಳವನಾಗಿರಬೇಕಲ್ಲವೆ?

ಅಂತಹ ಸ್ನೇಹಿತನನ್ನು ಬೆಳೆಸಿಕೊಳ್ಳುಲೋಸುಗ ನಾವು ಓದುತ್ತಿರಬೇಕು. ತೆಗೆದುಕೊಳ್ಳುವ ಉಸಿರಿನಂತೆ ಜ್ಞಾನ ದಿನೇ ದಿನೇ ಮೆದುಳ ಜಗದೊಳಗೆ ಸೇರುತ್ತಿರಬೇಕು. ಎದುರಾಗುವ ಸೋಲುಗಳೆಲ್ಲ ಒಳಗಿಳಿಯುವಾಗ ‘ಅನುಭವ’ವಾಗಿ ಮಾರ್ಪಾಡಾಗಬೇಕು.

ಆಗ ಮನ ಮನದ ಒಳಗೂ ಮೂಡುವುದು ಬೆಳಕು. ಹೂದೋಟವಾಗುವುದು ದೇವರು ಕೊಟ್ಟ ಬಯಲು.

ಬೇರೆಯವರಿಗೂ ಸಹಾಯ ಮಾಡುವಷ್ಟು ಬೆಳಕು ನೀಡುವಷ್ಟು ಪ್ರಜ್ವಲಿಸುವುದು ಬದುಕು!

-(ಸಡಗರ ಇ-ಮ್ಯಾಗಜೀನ್ ಗಾಗಿ ಬರೆದಿದ್ದು)

 

Categories: ಲೇಖನ
  1. June 15, 2009 at 10:32 am | #1

    ನೀವು ಹೇಳುವದು ನಿಜ. ಇಂತಹ ಆಶಾವಾದಿ-ಪ್ರಯತ್ನವಾದಿ ವ್ಯಕ್ತಿಗಳೇ ಆಕರ್ಷಕರಾಗಿರುತ್ತಾರೆ.

  2. June 15, 2009 at 1:12 pm | #2

    *ನಾಳಿನ ಸೊಗಸಾದ ಜೀವನದ ಕನಸು ಕಾಣಲು ರಾತ್ರಿಗಳಿವೆ. ಅದನ್ನು ಸಾಧಿಸಲು ಚಂದದ ಹಗಲುಗಳಿವೆ.
    *ಆದರೆ ಬೇರೊಬ್ಬ ವ್ಯಕ್ತಿಯಲ್ಲಲ್ಲ. ಅವನಲ್ಲೇ ಇರಬೇಕು!
    *ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅಂತ ಸ್ನೇಹಿತ ಸಿಕ್ಕರೆ ಅದೃಷ್ಟವೇ. ನಮ್ಮಲ್ಲೇ ಇದ್ದರೆ ಸೋತಾಗ ಹೆಗಲಿಗಾಗಿ ಹುಡುಕುವುದಿಲ್ಲ. ನಮ್ಮೊಳಗಿನ ಶಕ್ತಿಗೆ ಬೇರೆಯವರ ಮೇಲೆ ಆಧಾರ ಪಡಬೇಕಿಲ್ಲ.
    superb thoughts anna…

    ಸೋಲುವವನಿಗೆ ಗೆಲ್ಲಲು ನಿಮ್ಮ ಲೇಖನ ಆಸರೆಯಾಗುವುದಂತೂ ನೂರಕ್ಕೆ ನೂರು ಭಾಗ ನಿಜ ಅಣ್ಣ… ತುಂಬಾ ಒಳ್ಳೆಯ ಮಾತುಗಳಿವೆ.. ಈವಾಗ ಇನ್ನೊಮ್ಮೆ ಓದುತ್ತೇನೆ…..

  3. June 18, 2009 at 5:06 pm | #3

    Hey , this is quite inspiring article.. tumba ishTa aitu :-)

  4. June 19, 2009 at 10:40 am | #4

    ಸುನಾಥ್ ಸರ್,

    ನಮ್ಮ ನಿಮ್ಮ ನಡುವೆ ಅಂತ ಬಹಳ ಜನ ಓಡಾಡಿಕೊಂಡಿರುತ್ತಾರೆ.ಗಮನಿಸುವ, ಕಲಿತುಕೊಳ್ಳುವ ಕಣ್ಣಿರಬೇಕಷ್ಟೇ ನಮ್ಮಲ್ಲಿ.

    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

  5. June 19, 2009 at 10:43 am | #5

    ಇಂಚರ,

    ನಿಮ್ಮ ಈ ಅನಿಸಿಕೆ ಕಂಡು ಖುಷಿಯಾಯಿತು. ಸಡಗರ ಪತ್ರಿಕೆಗಾಗಿ ಬಹಳ ಇಷ್ಟಪಟ್ಟು ಬರೆದದ್ದು. ನಿಮಗೂ ಇಷ್ಟವಾಗಿದ್ದಕ್ಕೆ ಸಂತೋಷವಾಯಿತು.

  6. June 19, 2009 at 10:45 am | #6

    ಭಕ್ತ,

    ಮೊದಲ ಬಾರಿ ನೀಲಿಹೂವಿಗೆ ಕಾಲಿಟ್ಟಿದ್ದೀರಿ ಅನ್ನಿಸುತ್ತದೆ. ಸ್ವಾಗತ ಮಾಲಿಯ ಕಡೆಯಿಂದ.

    ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

  7. June 23, 2009 at 2:11 pm | #7

    kashta padeyade enu padeyalu sadhyavilla adare.. kashtapattu meleri koncha emaaridaru matte kelagina mettilu.. idu igina prapancha… ella hottinallu dairya koduva gelaeyannanu padeyuvudu kudaa punyavae yakendare geddaga ella iruttare.. sothaga yaaru illa .. nice writing

  1. No trackbacks yet.