ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!

Posted: ಸೆಪ್ಟೆಂಬರ್ 2, 2008 in ಲವ್ ಲೆಟರ್

ಕಿಟಕಿಯಾಚೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬೆಳ್ದಿಂಗಳ ಮೇಲಾಣೆ!
ಮತ್ತೆ ಹೇಳ್ತಿದ್ದೀನಿ,ಐ ಲವ್ ಯು ಕಣೇ..
ಇವತ್ತು ಫೆಬ್ರವರಿ ೧೪.
ಪ್ರೀತಿ ತಿಳಿಸಲು ಈ ದಿನಕ್ಕಿಂತ ಒಳ್ಳೆ ಮಹೂರ್ತ ಸಿಗಲ್ಲ.ಎಂಥ ಗಟ್ಟಿ ಹೃದಯವಿರುವ ಭಗ್ನ ಪ್ರೇಮಿಯೂ ಇದೊಂದು ದಿನ ಸಡಿಲವಾಗುತ್ತಾನೆ.ಹಳೆಯ ಪ್ರೀತಿಯ ಅಣೆಕಟ್ಟಿನ ಬಾಗಿಲು ತೆರೆಯುತ್ತಾನೆ.ನೆನಪುಗಳು ಎಷ್ಟು ಚುಚ್ಚಿದರೂ ಪರವಾಗಿಲ್ಲ, ಒಂದೇ ಒಂದು ದಿನ ಈ ನೋವಿನ ಸುಖ ಅನುಭವಿಸುವೆ ಅನ್ನುತ್ತಾನೆ.
ಈಗ ನಾನು ಮಾಡುತ್ತಿರುವುದೂ ಅದೇ!
ನಿನಗೇನು ಬಿಡು,ದಿನವೂ ಹಳೆಯ ಕನಸ ರಂಗೋಲಿ ಒರೆಸಿ ಹೊಸದೊಂದು ಬರೆವ ಅಭ್ಯಾಸ.ಹೊಸ ಮೆಸ್ಸೇಜ್ ಇಷ್ಟ ಆಗ್ತಿದ್ದಂತೆ ಹಳೆಯದನ್ನೆಲ್ಲಾ ಡಿಲೀಟ್ ಮಾಡಿ ಏನೂ ಆಗೇ ಇಲ್ಲವೆಂಬಂತೆ ಇರಬಲ್ಲೆ. ಆದರೆ ಪ್ರೀತಿಸಿದ ಹೃದಯ ಹಾಗಲ್ಲ. ಅದಕ್ಕೆ ಗೊತ್ತಿರುವುದು ಒಂದೇ ಜಗತ್ತು. ಅದರ ಪ್ರೀತಿ ಶಿಲಾಬರಹ. ಅಳಿಸುವುದು ಅಷ್ಟು ಸುಲಭವಲ್ಲ. ಪೂರ್ತಿ ಶಿಲೆ ಚೂರು ಮಾಡುವುದೇ ಲೇಸು.

ಸ್ವತಹ ನಿರ್ನಾಮವಾಗುವುದೇ ಪರಿಹಾರ.

 

ನನಗೆ ಗೊತ್ತು ನಿನ್ನ ಕನಸಿನ ಸಿನೆಮಾಗೆ ಹೊಸ ಹೀರೊ ಬಂದಿದ್ದಾನೆ. ಆ ಸಿನೆಮಾದಲ್ಲಿ ನನ್ನದು ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ.
ನಾಯಕಿಗೆ ನೆನಪಾಗಿ ಬರಬಲ್ಲೆನೇ ಹೊರತು ನಿಜವಾಗಿ ಎದುರು ಬರಲಾರದವ. ಆ ಫೋಟೋದಲ್ಲಿದ್ದವನ ಕಣ್ಣಲ್ಲಿ ಒಂದೇ ಒಂದು ಆಸೆಯ ಛಳಕು.
ನಾಯಕಿ ಯಾವಾಗಲೂ ಖುಷಿಯಾಗಿರಲಿ ಎಂಬ ಆಸೆಯ ದೀಪ. ಜತೆಗೊಂದು ಪೊಳ್ಳು ಹಿಂಜರಿಕೆ,ಅವಳಿಗೆ ನೆನಪಾಗಿ ಕಾಡಿ ಒಂದು ಬೇಸರದ ದಿನ ಅವಳದಾದರೆ ಎಂದು.
ನಿನ್ನ ಕನಸಿನ ಗಾಡಿಗೀಗ ನಾಲ್ಕನೇ ಗೇರು.ಜವಾಬ್ದಾರಿ ಹೊತ್ತ ತಂದೆಗೆ ಅದನ್ನು ಕಳೆದುಕೊಂಡ ನಿಟ್ಟುಸಿರು. ಯಾರೋ ಕಾಸುಳ್ಳವನಿಗೆ ನಿನ್ನ ಬದುಕು ಅರ್ಪಿತ.  ಎಲ್ಲೋ ದೂರದಲ್ಲಿ ಒಂದು ಹೃದಯ ವಿಲಪಿಸಿದರೂ, ಆ ಹೃದಯಕ್ಕೆ ನೀನು ಮುಂದೆ ಸುಖವಾಗಿರುತ್ತಿಯೇನೋ ಎಂಬ ಖುಷಿ.  ಬರುವವನು ನಿನ್ನ ಬಾಳ ಬಾನಲ್ಲಿ ಧೃವ ನಕ್ಷತ್ರವಾಗ್ತಾನೇನೋ ಎಂಬ ಹಂಬಲ.
ಅನುಮಾನವೇ ಬೇಡ. ನನ್ನದೇ ಹೃದಯ ಅದು.
ಪ್ರೀತಿಸುವವರು ಕೊಡುವ ದುಃಖ ಮತ್ತು ವೈರಿಗಳು ಕೊಡುವ ಹರ್ಷ ಇವೆರಡನ್ನೂ ಬದುಕಿಡೀ ಕಾಪಿಟ್ಟುಕೊಳ್ಳಬೇಕಂತೆ.ವೈರಿಗಳು ನೀಡುವ ದುಃಖ ನಮಗೇನೂ ಅನ್ನಿಸದು. ಪ್ರೀತಿಸುವವರು ಕೊಟ್ಟರೆ ಮಾತ್ರ ದುಃಖ ಪ್ರಭಾವಶಾಲಿ.ಅದೇ ನಿಜವಾದ ದುಃಖ.ಅದಕ್ಕೆ ಮಾತ್ರವೇ ಕಣ್ಣೀರು ಉಕ್ಕಿಸುವ ಶಕ್ತಿ. ನೀನು ನೀಡಿದ ಸಂತೋಷವನ್ನು ಯಾವ ಭಕ್ತಿಭಾವದಿಂದ ಸ್ವೀಕರಿಸಿದ್ದೆನೋ ಅಷ್ಟೇ ಒಲವಿನಿಂದ ನೀನಿತ್ತ ದುಃಖವನ್ನೂ ಜನ್ಮ ಪೂರ್ತಿ ಇಟ್ಟುಕೊಳ್ಳುವೆ.

ನಮ್ಮಿಬ್ಬರ ಬದುಕಿನಲ್ಲೂ ತುಂಬಾ ವರ್ಷಗಳಿವೆ. ಕೊನೆಯ ಪಕ್ಷ ಒಂದು ವಾಲೆಂಟೈನ್ ದಿನವಾದರೂ ಒಬ್ಬ ಹುಡುಗ ನಿಷ್ಕಲ್ಮಶವಾಗಿ, ಅನ್ ಕಂಡೀಷನಲ್ ಆಗಿ ನಿನ್ನನ್ನು ಪ್ರೀತಿಸುತಿದ್ದ ಅಂತ ನೆನಪಾದರೆ ಅಷ್ಟಕ್ಕೆ ಸಾರ್ಥಕ ನನ್ನ ಪ್ರೀತಿ.  ಅಷ್ಟರವರೆಗೂ ಬಿದ್ದ ಬೆಳದಿಂಗಳ ಕಣ ಕಣ ವನ್ನೂ ಹೆಕ್ಕಿ ಅದರಲ್ಲಿ ನಿನ್ನ ನಗುವನ್ನು ಕಾಣುವ ನನ್ನ ಕಾಯಕ ಅನವರತ.  ಎಂದಾದರೂ ಒಮ್ಮೆ ನೀನು ನನ್ನವಳಾದಾಗ ನಿನ್ನ ಮೇಲೆ ಥೇಟ್ ಈ ಬೆಳ್ದಿಂಗಳಂತೆ ಸುರಿಯಬೇಕೆಂಬಾಸೆ.   ಈ ತರದ ಸುಂದರ ಸುಳ್ಳೊಂದು,ಭ್ರಮೆಯಂತಹಾ ನಂಬಿಕೆಯೊಂದು ನನ್ನ ಬದುಕಿಗೆ, ನಾನು ಬದುಕಲಿಕ್ಕೆ ಸ್ಪೂರ್ತಿ.
ಬಹುಶಃ ಅದೊಂದರಿಂದಲೇ ನನ್ನ ಹೃದಯ ಇನ್ನೂ ಗಟ್ಟಿ..!

Advertisements
ಟಿಪ್ಪಣಿಗಳು
 1. vijayraj ಹೇಳುತ್ತಾರೆ:

  ನಿನಗೇನು ಬಿಡು,ದಿನವೂ ಹಳೆಯ ಕನಸ ರಂಗೋಲಿ ಒರೆಸಿ ಹೊಸದೊಂದು ಬರೆವ ಅಭ್ಯಾಸ.ಹೊಸ ಮೆಸ್ಸೇಜ್ ಇಷ್ಟ ಆಗ್ತಿದ್ದಂತೆ ಹಳೆಯದನ್ನೆಲ್ಲಾ ಡಿಲೀಟ್ ಮಾಡಿ ಏನೂ ಆಗೇ ಇಲ್ಲವೆಂಬಂತೆ ಇರಬಲ್ಲೆ ….

  chennaagive ee saalugaLu.
  gud.. bere bere taraha baryoke try maadtha iddira…

  hinge ruchi ruchi yaagi variety adge maadthaa iri…

 2. suma ಹೇಳುತ್ತಾರೆ:

  Letter tumbane chennagide, e letter odi nimma hudugi nimmahathra bandbidli antha devaralli prarthisthini.

 3. neelihoovu ಹೇಳುತ್ತಾರೆ:

  ವಿಜಯಕಾಂತ್ ಸರ್,

  ಪ್ರೀತಿಯಿಂದ ಉಣ್ಣುವವರಿದ್ದರೆ ಅಡುಗೆಯವರಿಗೇ(ಅಡಿಗರಿಗೇ)ನು ಕಡಿಮೆ?
  ಥ್ಯಾಂಕ್ಸ್ ಸರ್.

  ಸುಮಾ ಮೇಡಮ್,
  ಏನು ಮೇಡಮ್ , ನಂಗೆ ಹೀಗೆ ಹೆದರಿಸ್ತಾ ಇದ್ದೀರಿ..? 🙂
  ಧನ್ಯವಾದಗಳು ನಿಮಗೂ..:)

 4. hema ಹೇಳುತ್ತಾರೆ:

  ಅಷ್ಟರವರೆಗೂ ಬಿದ್ದ ಬೆಳದಿಂಗಳ ಕಣ ಕಣ ವನ್ನೂ ಹೆಕ್ಕಿ ಅದರಲ್ಲಿ ನಿನ್ನ ನಗುವನ್ನು ಕಾಣುವ ನನ್ನ ಕಾಯಕ ಅನವರತ. ಎಂದಾದರೂ ಒಮ್ಮೆ ನೀನು ನನ್ನವಳಾದಾಗ ನಿನ್ನ ಮೇಲೆ ಥೇಟ್ ಈ ಬೆಳ್ದಿಂಗಳಂತೆ ಸುರಿಯಬೇಕೆಂಬಾಸೆ. ಈ ತರದ ಸುಂದರ ಸುಳ್ಳೊಂದು,ಭ್ರಮೆಯಂತಹಾ ನಂಬಿಕೆಯೊಂದು ನನ್ನ ಬದುಕಿಗೆ, ನಾನು ಬದುಕಲಿಕ್ಕೆ ಸ್ಪೂರ್ತಿ.

  kaviyante barediddeeri, really beautiful.

 5. ಪಲ್ಲವಿ ಎಸ್‌. ಹೇಳುತ್ತಾರೆ:

  ಫೋಟೊದಾಚೆಗೆ ಹೋಗಿ ಬದುಕಿ ರಂಜಿತ್‌. ನಿನ್ನೆಗಳಲ್ಲಿ ಇಲ್ಲವಾಗಬೇಡಿ. ನಿಮ್ಮ ನಿನ್ನೆಗಳು ಬದುಕಿನ ಬೇರುಗಳು. ಅವು ಒಳಗೇ ಇರಲಿ. ಅವು ಹೀರಿಕೊಡುವ ಸ್ಫೂರ್ತಿಯಿಂದ ಇಂದಿನ ರೆಂಬೆಗಳಲ್ಲಿ ಹೊಸ ಹೂಗಳು ಅರಳಲಿ.

  ಆ ಹೂಗಳ ಬಣ್ಣ ಮಾತ್ರ ನೀಲಿಯಾಗದಿರಲಿ.

  – ಪಲ್ಲವಿ ಎಸ್‌.

 6. neelihoovu ಹೇಳುತ್ತಾರೆ:

  ತುಂಬಾ ಚೆನ್ನಾಗಿ ಹೇಳಿದಿರಿ ಪಲ್ಲವಿ….ನೀವು ಅಭಿಪ್ರಾಯ ವ್ಯಕ್ತಪಡಿಸುವುದರಲ್ಲೂ ಕಾವ್ಯಾತ್ಮಕವಾಗಿ ಅದ್ಭುತವಾಗಿ ಬರೀತೀರಿ.
  “ಅವು ಹೀರಿಕೊಡುವ ಸ್ಫೂರ್ತಿಯಿಂದ ಇಂದಿನ ರೆಂಬೆಗಳಲ್ಲಿ ಹೊಸ ಹೂಗಳು ಅರಳಲಿ.
  ಆ ಹೂಗಳ ಬಣ್ಣ ಮಾತ್ರ ನೀಲಿಯಾಗದಿರಲಿ. ”
  ಖಂಡಿತಾ ಆ ದಿಕ್ಕಿನಲ್ಲಿ ಪಯಣಿಸುವ ಪ್ರಯತ್ನ ಸಾಗಿಸುವೆ…:)
  ಇಲ್ಲಿ ಬಂದುದ್ದಕ್ಕೆ ಧನ್ಯವಾದಗಳು..:)

 7. neelihoovu ಹೇಳುತ್ತಾರೆ:

  ಪ್ರೀತಿ ಮಾಡುವ ಪ್ರತಿ ಹೃದಯ ಕವಿಯಾಗಿ ಬಿಡುವುದೇ ಪವಾಡ ಅಲ್ಲವೆ ಹೇಮಾ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s