ಅದೃಷ್ಟವಶಾತ್ ಚಿಗಿತು ಬಿಡುವ ಅಮೃತಬಳ್ಳಿ!

Posted: ಸೆಪ್ಟೆಂಬರ್ 21, 2008 in ಲವ್ ಲೆಟರ್

ನಿಂಗೆ ಯಾವತ್ತೋ ಒಮ್ಮೆ ಹೇಳಿದ್ದೆ ನೆನಪಿದೆಯಾ?

ಹೆಣ್ಣಿನ ಮನಸ್ಸನ್ನು ಒಂದೇ ಅಕ್ಷರದಲ್ಲಿ ಬಿಚ್ಚಿಡಬಹುದು ಎಂದು. ತುಂಬು ಕುತೂಹಲದಿಂದ ಎನು ಅಂತ ಅಂದು ಕೇಳಿದ್ದೆ ನೀನು. “?” ಅಂತ ನಾ ಉತ್ತರಿಸಿದಾಗ ಅದೆಷ್ಟು ನಕ್ಕಿದ್ದೆ  ಆ ದಿನ. ಇವತ್ತು ನನ್ನ ಪ್ರೀತಿಯನು ಧಿಕ್ಕರಿಸಿ ನಡೆದಾಗ ಅದೇ ಪ್ರಶ್ನೆ ಚಿನ್ಹೆ ಭೂತಾಕಾರವಾಗಿ ನನ್ನೆದುರು ನಿಂತಿದೆ.
ನಿಜವಾಗಿಯೂ ಹುಡುಗಿಯರ ಮನಸೊಳಗೆ ಏನಿರ್ತದೆ? ಯಾಕೆ ಹೊರಗಿನ ಪ್ರಪಂಚಕ್ಕವರು ಪ್ರಶ್ನಾಕಾರವಾಗೇ ಗೋಚರಿಸುತ್ತಾರೆ? ಅಂತಹಾ ಐನ್ ಸ್ಟೀನ್ ಮೆದುಳನ್ನು ಸಂಶೋಧನೆ ಮಾಡಿದ ವಿಜ್ನಾನಿಗಳು ಈ ವಿಷಯದ ಬಗ್ಗೆ ಯಾಕೆ ಗಮನ ಹರಿಸಿಲ್ಲವೋ..ಆದರೆ ಕವಿಗಳೂ, ಕತೆಗಾರರೂ ಈ ಪ್ರಶ್ನೆಯ ಉತ್ತರಕ್ಕಾಗಿ ಎಂದಿಗೂ ಮುಗಿಯದ ಹುಡುಕಾಟದಲ್ಲಿದ್ದಾರೆ.

ಪ್ಲೀಸ್.. ಇದೊಂದು ಪ್ರಶ್ನೆಗೆ ನೊಂದುಕೊಳ್ಳದೇ ಉತ್ತರಿಸು.. ನಿಜವಾಗಿಯೂ ನಿಮ್ಮಂತಹ ಹುಡುಗಿಯರಿಗೆ ಏನು ಬೇಕು? ಪ್ರೀತಿಯನ್ನು ನಿರಾಕರಿಸುವಾಗ ನಿಮ್ಮ ಮನದಲ್ಲಿ ಇರುವುದೇನು? ಒಬ್ಬ ಹುಡುಗ ಹುಚ್ಚನಂತೆ ನನ್ನ ಹಿಂದೆ ಬಿದ್ದಿದ್ದಾನೆ ಎಂಬ ಹೆಮ್ಮೆ ಮಾತ್ರನಾ?

ಪ್ರಪಂಚದಲ್ಲಿ ಏನು ಬೇಕಾದರೂ ಕಷ್ಟಪಟ್ಟು ಪಡೆಯಬಹುದು. ಹಣ, ಕಾರು, ಬಂಗ್ಲೆ.. ಎಲ್ಲವೂ. ಪ್ರೀತಿಯೊಂದನ್ನು ಬಿಟ್ಟು. ಅದು ಬಯಸಿ ಬೆಳೆವ ಮಾವಿನ ಮರವಲ್ಲ.

ಅದೃಷ್ಟವಶಾತ್ ಚಿಗಿತು ಬಿಡುವ ಅಮೃತಬಳ್ಳಿ!

ಇಷ್ಟಕ್ಕೂ ಪ್ರತಿ ಪ್ರೇಮಿಯ ಹೃದಯವೂ ಬಯಸಿದ್ದನ್ನು ಕೊಡುವ ಕಲ್ಪವೃಕ್ಷ. ಬಹುಶಃ ಪ್ರೀತಿಯೇ ಆ ಹೃದಯಕ್ಕೆ ಇಂಧನ. ಅದಕ್ಕೇ ಈ ಪರಿಯ ತಾಕತ್ತು. ಕೆಲವೊಮ್ಮೆ ನಿನ್ನದೇನೂ ತಪ್ಪಿಲ್ಲ ಅನ್ನಿಸುತ್ತದೆ. ನಿಮ್ಮ ಮನೆಯಲ್ಲಿ ಎಲ್ಲರೂ ನಿನ್ನನು ಪ್ರೀತಿಸುತ್ತಾರೆ. ಪ್ರೀತಿಯ ವಿಷಯದಲ್ಲಿ ನೀನು ತುಂಬಿದ ಕೊಡ.
ಪ್ರೀತಿ ಅಂದರೆ ನಿನ್ನ ಪಾಲಿಗೆ ಹೊಟ್ಟೆ ತುಂಬಿದವನ ಎದುರಿಗಿಟ್ಟ ಅನ್ನ. ಆದರೆ ನನ್ನ ಮುದ್ದು ದಡ್ಡೀ…ಈ ಪ್ರೀತಿಯೇ ಬೇರೆ. ಅದು ಸಕ್ಕರೆಯಾದರೆ ಇದು ಬೆಲ್ಲ.  ಈ ಪ್ರೀತಿಗೆ ಸಾಟಿ ಯಾವುದೂ ಇಲ್ಲ.ಬಹುಶಃ ನಿನಗಿದು ಎಂದಿಗೂ ಅರ್ಥವಾಗದು. ನಿಂಗೆ ಗೊತ್ತಾ?  ದೇವರಿಗೆ ಎಂಥಾ ಅದ್ಭುತ ಶಕ್ತಿ ಇದ್ದರೂ ಮಾನವರೆದುರು ಆತ ಕಾಣಿಸಿಕೊಳ್ಳಲಾರ. ಆತ ಸೃಷ್ಟಿಕರ್ತ. ಕೈ, ಕಾಲು, ಕಣ್ಣು, ಕಿವಿ ಎಲ್ಲಾ ಎರಡೆರಡು ನೀಡಿದ್ದರೂ ಹೃದಯ ಮಾತ್ರ ಒಂದೇ ಇಟ್ಟಿದ್ದಾನೆ. ಅದಕ್ಕೇ ಯಾವುದೋ  ಭಗ್ನಪ್ರೇಮಿಯ ಶಾಪ ತಗುಲಿರಬೇಕು.  ಕಾಣಿಸಿಕೊಳ್ಳಲಾಗದ ಶಿಕ್ಷೆ ಅನುಭವಿಸುತ್ತಿದ್ದಾನೆ.

ಅದೇನೆ ಇರಲಿ..

ನೀನು ನನ್ನನು ನಿರಾಕರಿಸಿದಿ. ಒಂಟಿ ದ್ವೀಪದಲಿ ಬಿಟ್ಟು ಹೊರಟುಹೋದಿ. ಪರವಾಗಿಲ್ಲ. ಆದರೆ ಯಾವುದೋ ಘಳಿಗೆಯಲ್ಲಿ ಜೀವನದ ಬಗ್ಗೆ, ಪ್ರಪಂಚದ ಬಗ್ಗೆ ಬೇಸರಾದರೆ, ಎದೆ ತುಂಬಾ ಖಿನ್ನತೆ ಆವರಿಸಿಕೊಂಡರೆ ನನ್ನ ಬಳಿಗೆ ಬಾ. ಅದು ಜೀವನದ ಸಂಧ್ಯೆಯೇ ಆಗಿರಲಿ. ನಾನು ಮಾತ್ರ ದಡದಲ್ಲಿರುವ ಬಂಡೆಯಂತೆ ಕಾಯುತ್ತಿರುತ್ತೇನೆ.

ನಿನ್ನ ಸುಮಧುರ ನಿರೀಕ್ಷೆಯಲಿ….

Advertisements
ಟಿಪ್ಪಣಿಗಳು
 1. ತವಿಶ್ರೀ ಹೇಳುತ್ತಾರೆ:

  ಹೆಣ್ಮಕ್ಕಳ ಮನಸ್ಸಿನಲ್ಲಿ ಏನಿರ್ತದೆ = ೦ – ಇದು ಶೂನ್ಯವಲ್ಲ – ಅದರ ಮುಂದೆ ಕಾಣಿಸಿಕೊಳ್ಳುವ ಸಂಖ್ಯೆಗೆ ತಾಕತ್ತು ಕೊಡುವ ಶಕ್ತಿ 🙂

  ಹೆಣ್ಮಕ್ಕಳ ಮನಸ್ಸು = ? – ಅರ್ಥೈಸಲು ವಿಧ ವಿಧ ಮಜಲಿನಲ್ಲಿ ಪರೀಕ್ಷೆಗೊಡ್ಡುವ ಅಗ್ನಿಪರೀಕ್ಷಾ ಪತ್ರಿಕೆ

  ಒಗಟೆಯಾಗಿ ಬರೆದಿರುವ ಉತ್ತಮ ಬರಹ ಎಂದರೆ ಅತಿಶಯೋಕ್ತಿಯಾಗಲಾರದು

  ಒಳ್ಳೆಯದಾಗಲಿ

  ಗುರುದೇವ ದಯಾ ಕರೊ ದೀನ ಜನೆ

 2. neelihoovu ಹೇಳುತ್ತಾರೆ:

  ತವಿಶ್ರೀ,

  “ಒಗಟೆಯಾಗಿ ಬರೆದಿರುವ ಉತ್ತಮ ಬರಹ ಎಂದರೆ ಅತಿಶಯೋಕ್ತಿಯಾಗಲಾರದು”

  ಇದು ಅರ್ಥವಾಗಲಿಲ್ಲ. ಒಗಟಂತೆ ಬರೆದೆನಾ?

  “ಗುರುದೇವ ದಯಾ ಕರೊ ದೀನ ಜನೆ”
  ನಿಮ್ಮ ಈ ಟ್ಯಾಗ್ ಇಷ್ಟ ಆಯ್ತು..:)

  ಧನ್ಯವಾದಗಳು ಸರ್…

 3. ವೈಶಾಲಿ ಹೇಳುತ್ತಾರೆ:

  ಒಬ್ಬ ಹುಡುಗಿ ಸ್ನೇಹಿತೆಯಾಗಿ ತುಂಬ ಚೆನ್ನಾಗಿ ಹುಡುಗನಿಗೆ ಅರ್ಥವಾಗುತ್ತಾಳೆ. ಅದೇ ಹುಡುಗಿ ಪ್ರೇಯಸಿಯಾದರೆ ಒಗಟಾಗಿಬಿಡುತ್ತಾಳೆ !!
  ಎಲ್ಲ ಹುಡುಗರದೂ ಇದೇ ಗೋಳಾಯ್ತಪ್ಪ… ಯಾಕೆ ಹಿಂಗೆ ಅಂತ ನನಗಂತೂ ಅರ್ಥ ಆಗಿಲ್ಲ.
  ಅಕ್ಕ ಅರ್ಥ ಆಗ್ತಾಳೆ, ಅಮ್ಮ, ತಂಗಿ, ಗೆಳತಿ.. ಎಲ್ಲರೂ ಅರ್ಥ ಆಗ್ತಾರೆ. ಪ್ರೇಯಸಿ ಅಥವಾ ಹೆಂಡತಿಗೆ ಮಾತ್ರ ಯಾಕೆ ಈ ಪಟ್ಟ ಅ೦ತಾ??
  ಈ ಒಗಟಿಗೆ ಗಂಡಸರೇ ಉತ್ತರ ಕೊಡ್ಬೇಕು……

 4. neelihoovu ಹೇಳುತ್ತಾರೆ:

  ವೈಶಾಲಿ,

  ಗಂಡಸಿಗೆ ಯಾವಾಗಲೂ ಪೂರ್ಣವಾಗಿ ಅರ್ಥವಾದ ಮೇಲೆ ಎಂಥ ವಿಷಯವಾದರೂ ಅದರ ಮೇಲೆ ನಿರಾಸಕ್ತಿ ಮೂಡುತ್ತದೆ….(ನಾನಲ್ಲ ಹೇಳಿದ್ದು.. ಭೈರಪ್ಪನವರ ಕಾದಂಬರಿಯೊಂದರಲ್ಲಿ ಬಂದ ಮಾತು!)

  ಅದಕ್ಕೇ ಬಹುಶಃ ಒಗಟಂತಾಗುವುದು ದೇವರು ಹೆಣ್ಣಿಗೆ ನೀಡಿದ ವರವಿರಬೇಕು…:)

 5. ವೈಶಾಲಿ ಹೇಳುತ್ತಾರೆ:

  ಇದು ಒಳ್ಳೆ ಸಮರ್ಥನೆ…. 🙂
  ಆದ್ರೆ ಅದಕ್ಕೂ ನನ್ನದೊಂದು ಸಣ್ಣ ತಕರಾರಿದೆ.
  ಆ ವಾದವನ್ನೇ ಒಪ್ಪೊದಾದ್ರೆ ನೀವುಗಳಿಗೆ ಅಮ್ಮ, ತಂಗಿ, ಗೆಳತಿ, ಅಕ್ಕಂದಿರ ಮೇಲೂ ಪ್ರೀತಿ, ಆಸಕ್ತಿ ಕಡಿಮೆಯಾಗಬೇಕಿತ್ತಲ್ಲ?? ಹಾಗೇಕಿಲ್ಲ? ಎತ್ತಿ ಆಡಿಸಿದ ಮಗಳು ಅಪ್ಪನ ಭಾಗವೇ ಆದರೂ ಅಪ್ಪನ ಪ್ರೀತಿ ಕಮ್ಮಿ ಆದದ್ದು ಕಂಡಿಲ್ಲ ನಾನು….. ( ಅ೦ದಹಾಗೆ ನ೦ಗೆ ಭೈರಪ್ಪ ಇಷ್ಟ ಆಗಲ್ಲ )

 6. neelihoovu ಹೇಳುತ್ತಾರೆ:

  ಪ್ರಿಯ ವೈಶಾಲಿ ಮೇಡಂ,

  ಮನುಷ್ಯನ ಭಾವಗಳು ಪರಿಸ್ಥಿತಿ ಗೆ ತಕ್ಕಂತೆ ಬದಲಾಗುತ್ತದೆ. ಚಿಕ್ಕ ಚಾಕಲೇಟಿಗೆ ಅಳುವ ತಮ್ಮನನ್ನು ಕಂಡು “ಅಯ್ಯೋ ಇಷ್ಟು ಚಿಕ್ಕ ವಿಷಯಕ್ಕೆಲ್ಲಾ ಅಳ್ತಾರಾ?” ಅಂತ ಕೇಳುವ ಅಕ್ಕ, ಗಂಡನ ಮನೆಗೆ ಹೋಗುವಾಗ ಕಣ್ಣೀರಾಗುತ್ತಾಳೆ. “ಎಲ್ಲಾ ಸರಿ ಹೋಗುತ್ತೆ .. ಇದಕ್ಕೆಲ್ಲಾ ಅಳ್ತಾರೆನೇ?” ಅಂತ ಕೇಳುವ ಅಪ್ಪ, ಕೆಲ್ಸ ಹೋಗುತ್ತೇನೊ ಎಂಬ ಭಯದಿಂದ ಕಣ್ತುಂಬಿಕೊಳ್ಳುತಾನೆ.
  “ಎಲ್ಲ ಹುಡುಗರದೂ ಇದೇ ಗೋಳಾಯ್ತಪ್ಪ” ಅಂತ ನೀವಂದಿದ್ದಕ್ಕೆ ಇದನ್ನೆಲ್ಲಾ ಹೇಳಬೇಕಾಗಿ ಬಂತು.

  ಇನ್ನು ನಿಮ್ಮ ತಕರಾರಿಗೆ,

  “ಅದಕ್ಕೇ ಬಹುಶಃ ಒಗಟಂತಾಗುವುದು ದೇವರು ಹೆಣ್ಣಿಗೆ ನೀಡಿದ ವರವಿರಬೇಕು…:)”
  ಅನ್ನುವ ನನ್ನ ಹೇಳಿಕೆಯನ್ನು ಹೀಗೆ ಓದಿಕೊಳ್ಳಿ..

  “ಅದಕ್ಕೇ ಬಹುಶಃ “ಬಯಸಿದಾಗಲೆಲ್ಲಾ” ಒಗಟಂತಾಗುವುದು ದೇವರು ಹೆಣ್ಣಿಗೆ ನೀಡಿದ ವರವಿರಬೇಕು…:)”

  * ತಮಾಷೆ ಪಕ್ಕಕ್ಕಿಟ್ಟು ಯೋಚಿಸಿದರೆ ಅಕ್ಕ, ಅಮ್ಮ, ಅಪ್ಪ, ಗೆಳತಿ ಸಂಬಂಧಗಳ ಸ್ವರೂಪವೇ ಬೇರೆ.
  ಹಾಗೆಯೇ ಗರ್ಲ್ ಫ್ರೆಂಡ್, ಹುಡುಗ-ಹುಡುಗಿಯರ ಹದಿಹರೆಯದ ಸಂಬಂಧದ ಸ್ವರೂಪವೇ ಇನ್ನೊಂದು ರೀತಿ.
  ರಕ್ತಸಂಬಂಧಗಳಲ್ಲಿ ಆಯ್ಕೆಯ ಪ್ರಶ್ನೆ ಇಲ್ಲ. ಒಬ್ಬರಿಗೊಬ್ಬರನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಅವರ ಜತೆಗಿನ ಬಾಂಡಿಂಗ್ ಬೆಳೆಸುತ್ತೆ.

  ಆದರೆ ಪ್ರೀತಿ ವಿಷಯ ಹಾಗಲ್ಲ. ಅದು ಫ್ಲೆಕ್ಸಿಬಲ್. ಎಷ್ಟು ಬೇಗ ಆಸಕ್ತಿ ಹುಟ್ಟುತ್ತೋ ಅಷ್ಟು ಬೇಗನೇ ಕಡಿಮೆಯಾಗುತ್ತೆ.

  ನನ್ನ ಲವ್ ಲೆಟರ್ ನಲ್ಲಿ ತಾರುಣ್ಯದ, ಹುಡುಗಾಟದ,ಕನಸಿನ ಲೋಕದ ಪ್ರೀತಿ ಬಗ್ಗೆ ಮಾತಾಡ್ತಿರೋದ್ರಿಂದ ಈ ಮಾತುಗಳನ್ನು ಇಷ್ಟಕ್ಕೆ ಅನ್ವಯಿಸಿದರೆ ಒಳ್ಳೆಯದು ಅಂತ ನನ್ನಭಿಪ್ರಾಯ.

  ನೀವು ದೊಡ್ದವರು.. ನಿಮ್ಮ ತಮ್ಮನಂತವನು ನಾನು. ನನ್ನ ವಾದದಲ್ಲಿ ಲೋಪವಿದ್ದರೆ ತಿದ್ದಿ ಬೆಳೆಸಬೇಕು..
  (ಅಂದ ಹಾಗೆ ಬಹುಶಃ ಭೈರಪ್ಪನವರಿಗೂ ನೀವು ಇಷ್ಟವಿದ್ದಂತಿಲ್ಲ..:))

 7. ವೈಶಾಲಿ ಹೇಳುತ್ತಾರೆ:

  ಪ್ರಿಯ ನೀಲಿ ಹೂವಿಗೆ-

  ಪ್ರತಿಕ್ರಿಯಿಸಿದ್ದಕ್ಕೆ ಖುಷಿಯಾಯ್ತು. 🙂
  ನೀವು ಹೇಳೋದು ಒಂದು ದೃಷ್ಟಿಯಿಂದ ಸರಿ. ಆದರೆ ನನಗನ್ನಿಸೋದು,
  ಪ್ರೀತಿ ಅನ್ನೋದು ಮೇಲ್ನೋಟಕ್ಕೆ ಬೇರೆ ಬೇರೆ ಭಾವಗಳನ್ನು ಕೊಡೋದು ನಿಜ. ಆದರೆ ಆಳಕ್ಕೆ ಹೋದರೆ ಎಲ್ಲವೂ ಒಂದೇ. ಅಲ್ಲಿರೋದು ಕಾಳಜಿ, ಒಲವು..ನಂಬಿಕೆ… (ಎಲ್ಲವನ್ನೂ ಶಬ್ದದಲ್ಲಿ ಹಿಡಿದಿಡೋದು ಕಷ್ಟ)

  and… ನ೦ಗನ್ನಿಸಿದ್ದು ಪ್ರೀತಿಸುವವರು ಅರ್ಥವಾದಷ್ಟೂ ಪ್ರೀತಿ ಹೆಚ್ಚಾಗುತ್ತ ಹೋಗುತ್ತೆ ಅ೦ತ. ( ಅನುಭವ ಅಂದ್ಕೋಬಹುದು ಬೇಕಾದರೆ 😉 )
  ನನ್ನ ತಕರಾರೇನಿದ್ದರೂ ಯೋಚನೆಗಳ ಬಗ್ಗೆಯೇ ಹೊರತೂ ನಿಮ್ಮ ಲವ್ ಲೆಟರ್ ಬರಹದ ಬಗ್ಗೆ ಎರಡು ಮಾತಿಲ್ಲ 🙂
  ಇನ್ನು ಭೈರಪ್ಪನವರ ಬಗ್ಗೆ ಮಾತನಾಡೋ ಕೆಪಾಸಿಟಿ ನನಗಿಲ್ಲ. ಆದ್ರೆ ಅವರ ಬರಹಗಳು ನಂಗಿಷ್ಟ ಆಗಲ್ಲ ಅಂತ ಹೇಳೋ ಸ್ವಾತಂತ್ಯ್ರ ವಂತೂ ಇದೆ!
  ದೊಡ್ಡವರು ಅಂತೆಲ್ಲ ಮೇಲೆ ಕೂರಿಸ್ಬೇಡಿ ಮಾರಾಯ್ರೇ… ಫ್ರೆಂಡ್ ಆಗಿ ಏನಾದರೂ ಕಮೆ೦ಟಿಸಬಲ್ಲೆ ಅಷ್ಟೆ 🙂
  ಇನ್ನು ನೋ ಕಾಮೆಂಟ್ಸ್ 🙂

 8. neelihoovu ಹೇಳುತ್ತಾರೆ:

  ತಮಾಷೆಯಾಗಿ ಹರಟಿದೆ ಅಷ್ಟೆ.
  ನಿಮ್ಮ “ಕೆನೆ ಕಾಫಿ” ಚೆನ್ನಾಗಿದೆ. ಬಾಲ್ಕನಿಯ ನೋಟ ಎಲ್ಲರಿಗೂ ಇಷ್ಟವಾಗೋದರಲ್ಲಿ ಅನುಮಾನವಿಲ್ಲ.
  ಹಾಗೆ ಆಗಾಗ್ಗೆ ತೋಟದೆಡೆಗೂ ಬರುತ್ತಿರಿ.
  ನೀವು ಬಂದಿದ್ದು ಖುಷಿಯೆನಿಸಿತು. ಚೆನ್ನಾಗಿದ್ದರೆ ಬೆನ್ನು ತಟ್ಟುತ್ತಲೂ, ಇಲ್ಲದಿದ್ದರೆ ತಿಳಿ ಹೇಳುತ್ತಲೂ ಇರಿ…:)
  ಪ್ರೀತಿಯಿರಲಿ.

 9. ವೈಶಾಲಿ ಹೇಳುತ್ತಾರೆ:

  ನನಗೂ ಖುಷಿಯಾಯ್ತು 🙂
  ಥ್ಯಾಂಕ್ಸ್… ಖಂಡಿತ ಬರ್ತೀನಿ. ಈಗಾಗಲೇ ನನ್ನ ಬಾಲ್ಕನಿ ಯಿಂದ ನಿಮ್ಮ ತೋಟ ಕಾಣ್ತಿದೆ!
  ನೋಡಿ. ನೀವು ಆಗಾಗ ಬರ್ತಾ ಇರಿ. ನಂಗೆ, ಬಾಲ್ಕನಿಗೆ, ಕಾಫಿಗೆ ಕಂಪನಿ ಸಿಕ್ದಂಗೆ ಆಗುತ್ತೆ 🙂

 10. uniquesupri ಹೇಳುತ್ತಾರೆ:

  ದೇವರು ಒಂದೇ ಹೃದಯ ಕೊಟ್ಟು ಭಗ್ನ ಪ್ರೇಮಿಯ ಶಾಪದಿಂದ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದೀರಿ ಸಕತ್ ಆಗಿದೆ. ಹಾಗೆಯೇ ಇದಕ್ಕೆ ನನ್ನದೊಂದಿಷ್ಟು ಕೊಸರು, ದೇವರು ಹೃದಯದಂತೆ ಮೂಗನ್ನೂ ಸಹ ಒಂದೇ ಇಟ್ಟಿದ್ದಾನೆ. ಇರುವ ಒಂದು ಮೂಗಿನ ಆರೈಕೆಯಲ್ಲೇ ಜೀವನ ಸವೆಸಿ ಹಾಕುವ ನನ್ನಂಥವರ ಹಾರೈಕೆಯಿಂದಾಗಿ ಆತ ಆಗಾಗ ಸತ್ಯ ಸಾಯಿ ಬಾಬಾ ಆಗಿ, ಕಲ್ಕಿ ಭಗವಾನ್ ಆಗಿ ಅವತಾರವೆತ್ತುತ್ತಿರುತ್ತಾನೆ!
  ಹುಡುಗೀರು ಅರ್ಥವಾಗಲ್ಲ ಅಂತೀರಲ್ಲ, ನಮ್ಮ ಕೆಲವು ಇಂಜಿನಿಯರಿಂಗ್ ಸಬ್ಜೆಕ್ಟುಗಳನ್ನು ಓದಿ ನೋಡಿ, ಇವುಗಳ ಮುಂದೆ ಜಗತ್ತಿನ ಯಾವ ಹುಡುಗೀನಾದ್ರೂ ಅರಳೆ ಮೂಟೆ ಅನ್ನಿಸಿಬಿಡುತ್ತೇ!
  ಅಂದಹಾಗೆ ಈ ಅಮೃತ ಬಳ್ಳಿ ಅಂದರೇನು? ವಿವರ ಎಲ್ಲಾದರೂ ಸಿಕ್ಕುತ್ತದೆಯೇ?

  supree

 11. neelihoovu ಹೇಳುತ್ತಾರೆ:

  ನನ್ನ ಬ್ಲಾಗಿಗೆ ಲೇಟಾಗಿಯಾದರೂ, ಲೇಟೆಸ್ಟ್ ಆಗಿ ಬಂದಿರಿ..:) ಅದಕ್ಕೆ ಮೊದಲು ನನ್ನ ದನ್ಯವಾದಗಳನ್ನು ತಗೊಳ್ಳಿ..:)

  ಇಂಜಿನೀರಿಂಗ್ ನ್ನು ಓದಿ (ನಿಮ್ಮ ಸಬ್ಜೆಕ್ಟ್ ಅಲ್ಲ..:()ಮುಗಿಸಿದ ಬಳಿಕವೇ ನಾನು ಇದನ್ನು ಬರೆದಿದ್ದು ಆದ್ದರಿಂದ ’ಹುಡುಗಿಯರ ಮನಸ್ಸು ಅರ್ಥವಾಗುವುದು ಸುಲಭ” ಅನ್ನುವ ವಾದಕ್ಕೆ ಅರಳೇ ಮೂಟೆ ಯಷ್ಟೂ ಬೆಲೆ ಇಲ್ಲದೇ ಹೋಗುತಿದೆ ..:)

  ಅಮೃತಬಳ್ಳಿ ಬಗ್ಗೆ ಯಾವುದೋ ಪುಸ್ತಕದಲ್ಲಿ ಓದಿದ ನೆನಪು. ಹೀಗೆ ಹೇಳಿ ನನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದೆ, ನಿಮಗೆ ನಿಮ್ಮ ಅನುಮಾನವ ತೀರಿಸುವ ಪ್ರಯತ್ನ ಮಾಡುವೆ. ಅಲ್ಲದೇ ನನ್ನ ಪ್ರಿಯ ಲೇಖಕ ಜಯಂತ್ ರ “ಅಮೃತಬಳ್ಳಿ ಕಷಾಯ” ಓದಿರಬಹುದು ಅನ್ನಿಸುತ್ತದೆ.
  ನಿಮಗೇ ತಿಳಿದಿಲ್ಲ ಎಂಬುದು ನನ್ನನು ಪರೀಕ್ಷಿಸುವ ಪರಿಯಾ ಅಂತ ಅನುಮಾನ ಮೂಡುತಿದೆ..:)

  ಹಾಗೆಯೇ ನಾನು ಈ ಸಲ ಬೆಂಗಳೂರಿಗೆ ಬಂದಾಗ ನೆನಪಿಸಿ, “ಅಮೃತಬಳ್ಳಿ ಕಷಾಯ” ಕು(ಕೊ)ಡಿಸುವೆ!..:)

 12. uniquesupri ಹೇಳುತ್ತಾರೆ:

  ಅಡಿಗರೇ,
  ನೀವು , ನಿಮ್ಮ ಅಂತ ಹೇಳಿ ನನ್ನನ್ನು ‘ದಿವಂಗತ’ನನ್ನಾಸಬೇಡಿ. ನಾನು ನಿಮಗಿಂತ ಚಿಕ್ಕವನು ಆ ಆಪ್ತತೆ ಇರಲಿ…

  ನಂಗೇನೋ ನಮ್ಮ ಸಬ್ಜೆಕ್ಟುಗಳ ಮುಂದೆ ಹುಡುಗಿಯರ ಮನಸ್ಸು ಅರಳೆಯ ಮೂಟೆ ಎಂತಲೇ ಅನ್ನಿಸುತ್ತದೆ! (ಬಿಡಿ ಇದು ವೈಯಕ್ತಿಕವಾದದ್ದು, ತೀರಾ ವೈಯಕ್ತಿಕವಾದದ್ದು, ಟ್ಯೂಶನ್‌ಗೂ ಹೋಗೋಕಾಗಲ್ಲ, ಕಾಪಿನೂ ಹೊಡಿಯೋಕಾಗಲ್ಲ 🙂 )

  ಅಮೃತ ಬಳ್ಳಿಯ ಕಷಾಯವನ್ನು ಕಾಯ್ಕಿಣಿ ಕೃಪೆಯಿಂದ ನಾನೂ ಕುಡಿದಿರುವೆ ಆದರೆ ಜೀರ್ಣ ಶಕ್ತಿ ಸಾಲದಕ್ಕೆ ಕೊಂಚ ಅಜೀರ್ಣವಾಗಿದೆ. ಸರಳವಾಗಿ ಆ ಗಿಡದ ಬಗ್ಗೆ ಹೇಳಿದ್ದರೆ ಚೆಂದ, ಯಾಕೆಂದರೆ ಅದು ಸಡಾನ್ನಾಗಿ ಚಿಗುರುವ ಬಳ್ಳಿ ಎಂದಿದ್ದೀರಿ.. ಅದರ ಅನಾಟಮಿ, ಫಿಸಿಯಾಲಜಿಯ ಬಗ್ಗೆ ಕುತೂಹಲವಷ್ಟೇ…

 13. neelihoovu ಹೇಳುತ್ತಾರೆ:

  ಸುಪ್ರೀ,

  ನಿಮ್ಮನ್ನು ಹಾಗೆ ಕರೆದು, ನನ್ನ ವಯಸ್ಸನ್ನು ನಿಮಗಿಂತ ಕಡಿಮೆ ಅಂದುಕೊಂಡು ಖುಷಿಪಡುವ ಅವಕಾಶ ಯಾಕೆ ತಪ್ಪಿಸುತ್ತಿದ್ದೀರಿ?:) ಇಷ್ಟಕ್ಕೂ ನಮ್ಮ ನಿಮ್ಮ ವಯಸ್ಸಿಗೆ ಅಂಥ ಭಾರಿ ವ್ಯತ್ಯಾಸವಿಲ್ಲ..
  ವಯಸ್ಸನ್ನು ಪಕ್ಕಕ್ಕಿಟ್ಟು ಅನುಭವ, ಮಾಹಿತಿ, ನಾಲೆಡ್ಜ್ ವಿಷಯದಲ್ಲಿ ತಾವೆಲ್ಲಿ!, ನಾವೆಲ್ಲಿ?… ಅದಕ್ಕೆ ಅಂಥ ಕರೆಯುವಿಕೆಗಳನ್ನು ಹಾಗೆ ಇರಲು ಬಿಡಿ..ಆಪ್ತತೆ ಎಂದಿಗೂ ಇರುವಂತದ್ದು.

  ಅಮೃತಬಳ್ಳಿಯನ್ನು ಸಡನ್ನಾಗಿ ಚಿಗುರುವ ಬಳ್ಳಿ ಎಂದಿಲ್ಲ, ಅದೃಷ್ಟವಶಾತ್ ಎಂಬ ಪದ ಉಪಯೋಗಿಸಿದ್ದೇನಲ್ಲವೆ?
  ಎರಡರ ವ್ಯತ್ಯಾಸ ಕೊಂಚ ಗಮನಿಸಿ.
  ಪ್ರೀತಿಯಿರಲಿ…

 14. ವೈಶಾಲಿ ಹೇಳುತ್ತಾರೆ:

  ಇದು ಸುಪ್ರೀತ್ ಅವರಿಗೆ.
  ಅಮೃತಬಳ್ಳಿ ಮಲೆನಾಡಿನ ಕಾಡು, ತೋಟಗಳಲ್ಲಿ ಸಿಗುವ ಔಷಧಿ ಗಿಡ.
  ತುಂಬ ಉಪಯುಕ್ತ ಹಾಗು ಆರೋಗ್ಯ ನೀಡುವ ಬಳ್ಳಿ. ಹೃದಯದಾಕಾರದ ಎಲೆಗಳಿರುತ್ತವೆ.
  ಅಮೃತಬಳ್ಳಿ ಕಷಾಯ ಮಲೆನಾಡಿನ ಮನೆಗಳಲ್ಲಿನ ಜನಪ್ರಿಯ ಔಷಧಿ.
  ಮನೆಯಲ್ಲಿಅಮ್ಮ, ಅಜ್ಜಿಯರನ್ನು ಕೇಳಿದರೆ ಹೆಚ್ಚಿನ ಮಾಹಿತಿ ಕೊಟ್ಟಾರು!

 15. ಸುಪ್ರೀತ್ ಹೇಳುತ್ತಾರೆ:

  ನಮ್ಮದು ಬಯಲು ಸೀಮೆ ಮೇಡಂ! ಆದರೂ ಕೇಳಿ ನೋಡುವೆ…
  ಸಾಹಿತ್ಯದಲ್ಲಿ ಹೆಚ್ಚಿಗೆ ಬಳಸಿದ್ದಾರೆ ಈ ಬಳ್ಳಿಯನ್ನು ಅದಕ್ಕೇ ಕೇಳಿದೆ…ರೋಗಿಷ್ಟರು ಇಲ್ಲೇ ಹೆಚ್ಚಿರುವುದು ಅಲ್ಲವೇ? 🙂

  ಅಡಿಗರೇ,
  ಅನಗತ್ಯವಾದ ಎತ್ತರ ತಗ್ಗು ನಿರ್ಮಿಸಿ ನನ್ನನ್ನು ವಿಪರೀತ ಗೊಂದಲದಲ್ಲಿಟ್ಟಿದ್ದೀರಿ…

 16. neelihoovu ಹೇಳುತ್ತಾರೆ:

  ವೈಶಾಲಿ ಮೇಡಂ,

  ಬೀಸುವ ದೊಣ್ಣೆಯಿಂದ ತಪ್ಪಿಸಿದಿರಿ ನನ್ನನ್ನು. ಥ್ಯಾಂಕ್ಸ್!

  ಸುಪ್ರೀ,

  ಗೊಂದಲವೇನೂ ಬೇಡ. ನಾನು ನಿಮ್ಮಿಂದ ಕಲಿತ ವಿಷಯಗಳ ಋಣಕ್ಕೆ ’ಗುರುಗಳೇ’ ಅಂತ ಕರೀತಿರ್ತೀನಿ. ನೀವು ಗೊಂದಲ ಅನುಮಾನವಿಲ್ಲದೇ ಕರೆಯಿಸಿಕೊಳ್ಳಿ.
  ಹಾಗೆಯೇ ಬರಹ ಮೂಡುತಿರಲಿ, ಬದುಕು ಸಾಗುತಿರಲಿ.

 17. ನವಿಲುಗರಿ ಹೇಳುತ್ತಾರೆ:

  ನಾನು ಹೆಚ್ಚ್ಚು ಮಾತಾಡೋಕೆ ಹೋಗೊಲ್ಲಪ್ಪ..ಇಲ್ಲಿ ಎಲ್ಲಾರು ನನಗೆ ಅರ್ತವಾಗದೇ ಇದ್ದಿದ್ದನ್ನ ಬರಿತಿದ್ದೀರಿ..ಸುಮ್ಮನೆ ಕಣ್ಣು ಕಣ್ಣು ಬಿಡೋದೇ ಅಗೋಯ್ತು..ನನಗೆ ಲೆಟೆರ್ ಇಷ್ಟ ಅಯ್ತು ಮತ್ತೆ ಅರ್ಥ ಅಯ್ತು…ನಿಮ್ಮ ವಾದವಿವಾದಗಳು ಅರ್ತವಗಲಿಲ್ಲ…

  ಪ್ಲೀಸ್ ನೆಕ್ಸ್ಟ್ ಟೈಮ್ ಕನ್ನಡದಲ್ಲಿ ವಾದವಿವಾದಗಳಿರಲಿ…ಹಹಹಹಹಹಹ

 18. ವೈಶಾಲಿ ಹೇಳುತ್ತಾರೆ:

  ಸುಪ್ರೀತ್,
  🙂 ಹಾಗೇಕಂತೀರಿ? ಈಗ ನಾವು ಕೂಡ ಅನಿಸಿದ್ದೆಲ್ಲ ಬರೆದು ಎಲ್ರ ಪ್ರಾಣ ತಿಂತೀವಲ್ಲ, ಇದು ಒಂದು ರೋಗಾನೇ! 🙂
  ಹೌದು, ಸಾಹಿತ್ಯ ದಲ್ಲಿ ಅಮೃತಬಳ್ಳಿ ಹೆಸರು ತುಂಬ ಕೇಳಿಬರುತ್ತೆ. ಬಹುಶ: ಇದರ ಬಹುಪಯೋಗಿ ಗುಣ, ಅದಕ್ಕಿಂತ ಹೆಚ್ಚಾಗಿ ಚಂದದ ಹೆಸರು ಸಾಹಿತಿಗಳಿಗೆ ಪ್ರೀತಿ ಹುಟ್ಟಿಸಿರಬಹುದೇನೋ 🙂
  ರಂಜಿತ್,
  ವೆಲ್ಕಮ್ಮು… 🙂

 19. neelihoovu ಹೇಳುತ್ತಾರೆ:

  ಸೋಮಾ,

  ಅರ್ಥವಾಗ್ತಿಲ್ವಾ?

  ನಿಂಗೇ ಈ ಅಮೃತಬಳ್ಳಿಯ ಕಷಾಯ ಅಗತ್ಯ ತುಂಬಾ ಇದೆ ಅನ್ಸುತ್ತೆ.
  ಈ ಸಲ ಬೆಂಗ್ಳೂರಿಗೆ ಬಂದಾಗ ನೆನಪಿಸು.. ಕಷಾಯ ಕುಡಿಸ್ತೇನೆ..;-)

  ವೈಶಾಲಿ,

  ಹೀಗೇ ನನ್ನನ್ನು ಉಳಿಸುತ್ತಾ ಇರಿ…:-)

 20. reena ಹೇಳುತ್ತಾರೆ:

  nanaganthu enu artha aglilla

 21. ಅನಾಮಿಕ ಹೇಳುತ್ತಾರೆ:

  You have an incredible imagination. Im a fan of your thoughts!! I enjoyed reading the discussion/debate (not sure abt the choice of words!!) that u had with Vaishali as much as this write-up.
  I’ve been following your blog since quite sometime. However I’ve been a silent spectator as am not very gud with words. Today I’ve piled up all the courage to drop-in a few lines of appreciation and reverence. Kudos to you. Looking forward to more interesting articles from you.

  -Deepthi

 22. Deepthi Swamy ಹೇಳುತ್ತಾರೆ:

  You have an incredible imagination. Im a fan of your thoughts!! I enjoyed reading the discussion/debate (not sure abt the choice of words!!) that u had with Vaishali as much as this write-up.
  I’ve been following your blog since quite sometime. However I’ve been a silent spectator as am not very gud with words. Today I’ve piled up all the courage to drop-in a few lines of appreciation and reverence. Kudos to you. Looking forward to more interesting articles from you.

  -Deepthi

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s