ಸಾಲು ಸಾಲು ಕತೆಗಳು! – ಮೂರನೇ ಭಾಗ

Posted: ಸೆಪ್ಟೆಂಬರ್ 21, 2008 in ಒಂದು ಸಾಲಿನ ಕತೆಗಳು..

* ಅವಳು ಬಾಯಿಮಾತಿಗೆ “ನಂಗೆಲ್ಲಾ ಗೊತ್ತಾಗುತ್ತೆ ಕಣೋ” ಅಂದಿದ್ದಕ್ಕೆ ಹೆದರಿ ತನ್ನ ಕಣ್ಣೊಳಗಿನ ಕನಸುಗಳನ್ನು ಬಚ್ಚಿಡಲು ಪ್ರಯತ್ನಿಸುತ್ತಿದ್ದ.

* ಐದು ವರ್ಷದ ಹಿಂದೆ ದೇಶದ ಸಿಸ್ಟಮ್ ನ್ನೇ ಬದಲಿಸಬೇಕೆಂದು ಅವನು ಬರೆದ ಕವನ, ಇವತ್ತು ನೆಲಗಡ್ಲೆ ತಿನ್ನುವಾಗ ಅದಕ್ಕೆ ಸುತ್ತಿದ್ದ ಪೇಪರ್ ನಲ್ಲಿ ಸಿಕ್ಕಿತ್ತು.

* “ಇಂಡಿಯನ್ ಐಡಲ್” ನಲ್ಲಿ ಇವತ್ತು ಆಯ್ಕೆಗಾರರಿಂದ ಬೈಯ್ಯಿಸಿಕೊಂಡು ಹೊರಹೋದವನ ಹೆಸರು “ಗಾಂಧಿ” ಅಂತೆ !

* “ನನ್ನನ್ನು ಮರೆತುಬಿಡು” ಎಂದುಬಿಟ್ಟು ಹೊರಟುಹೋದವಳನ್ನು ನೋಡುತ್ತಾ ಶಾಕ್ ಗೊಳಗಾದವನನ್ನು ಗೋಡೆಗೆ ನೇಣು ಹಾಕಿಕೊಂಡಿದ್ದ ಕ್ಯಾಲೆಂಡರ್ “ಏಪ್ರಿಲ್ ೧ ” ಅಂತ ತೋರಿಸುತ್ತಾ ಸಾಂತ್ವನ ಪಡಿಸುತಿತ್ತು…!

* ಮೊದಲ ಬಾರಿಗೆ ಕಿಕ್ಕಿರಿದ ಪತ್ರಿಕಾಗೋಷ್ಟಿಯಲ್ಲಿ ಅದುವರೆಗೂ ಮಾತಾಡಿಯೇ ಇರದ ನಟಿಯ ಜತೆಗಿನ ರೂಮರ್ಸ್ ಬಗ್ಗೆ ಮಾತಾಡಬೇಕಿದ್ದ ನಟ “ಅವಳ, ನನ್ನ ನಡುವೆ ಎನೂ ಸಂಬಂಧ ಇಲ್ಲ..”  ಅಂತಂದು ಗಲಿಬಿಲಿಯಲ್ಲಿ “..ಈಗ” ಅನ್ನುವುದನ್ನೂ ಸೇರಿಸಿದ. ಪತ್ರಕರ್ತರ ಪೆನ್ನು ಚಪ್ಪರಿಸಿ ಬರೆದುಕೊಂಡವು. ಮರುದಿನದ ಹೆಡ್ಡಿಂಗ್ ” ಅವಳ-ಅವನ ನಡುವೆ ಮುರಿದುಬಿದ್ದ ಸಂಬಂಧ”..!

* ಕೋತಿ ಕೈಯ್ಯಲ್ಲಿದ್ದ ತನ್ನ ವಸ್ತ್ರವನ್ನು ಎಸೆಯುವಂತೆ ಮಾಡಲು ನದಿ ಮಧ್ಯದಲ್ಲಿದ್ದ ಆತ, ತನ್ನ ಇದ್ದ ಒಂದು ಬನಿಯನ್ನನ್ನೂ ಅದರತ್ತ ಎಸೆದ.
   ಕಲಿಯುಗದ,ಬುದ್ದಿವಂತ ಕೋತಿ ನಕ್ಕು, ಅದನ್ನೂ ಎತ್ತಿಕೊಂಡಿತು!

* ಆಡಲು ಮೈದಾನದ ಮಧ್ಯೆ ನಡೆದು ಬರುತ್ತಿರುವಾಗ ನೆನಪಾಯಿತು,ತಾನು ಸೆಂಟರ್ ಪ್ಯಾಡ್ ಧರಿಸದೇ ಇದ್ದುದು. ಅಕ್ತರ್ ಗೆ ಆಗಲೇ ಹೊಸ ಚೆಂಡು ನೀಡಿದ್ದರು!

* ” ಹೆದರ್ಬೇಡ..ಅವನಿನ್ನು ಬರೋಲ್ಲ ಬಿಡು..ನಾನೇ ಖುದ್ದಾಗಿ ಮುಗಿಸಿದ್ದೀನಿ ಅವ್ನನ್ನ..!”  ಅಂತ ಹೇಳುತ್ತಿರುವಾಗಲೇ ಬಾಗಿಲು ಬಡಿದ ಸದ್ದಾಯಿತು..!

*  ಅರೆಗಳಿಗೆ ರೆಪ್ಪೆ ಮುಚ್ಚಿದೆನಷ್ಟೆ… ಛೇ..! ಎಂಥಾ ಅದ್ಭುತ ದೃಶ್ಯ ಮಿಸ್ ಆಯಿತು…!

* ಕೆಂಗೇರಿಯ ಅಣ್ಣನ ಮನೆಗೆ ಹೋಗಲು ಬಸ್ಸು ಕಾಯುತ್ತಿದ್ದರೆ ಸಾಲುಸಾಲಾಗಿ ವಿಜಯನಗರದ ಬಸ್ಸು ಬರುತ್ತಿದ್ದವು.ಬೇಜಾರಾಗಿ ಪ್ರೋಗ್ರಾಮ್ ಬದಲಿಸಿಕೊಂಡು ವಿಜಯನಗರದ ಅಕ್ಕನ ಮನೆಗೆ ಫೋನ್ ಮಾಡಿ ಇವತ್ತು ನಿಮ್ಮ ಮನೆಗೆ ಬರ್ತೇನೆ ಅಂತ ಹೇಳಿ ಇಟ್ಟನಷ್ಟೇ,
ಕೆಂಗೇರಿ ಬಸ್ಸು ಹಾರ್ನ್ ಬಾರಿಸುತ್ತಾ ವಯ್ಯಾರದಿಂದ ಬಂತು!

* ಅಪ್ಪನಿಗೆ ಆ ಅಪರಿಚಿತ ಮಗುವಿಗೆ ನೀಡಿದ ಚಾಕಲೇಟಿನಲ್ಲಿ ವಿಷ ಕಾಣುತಿತ್ತು. ಅಪರಿಚಿತನ ಮನಸ್ಸಲ್ಲಿ ಪ್ರೀತಿಯಿತ್ತಾ?
ಅದ್ಯಾವುದರ ಪರಿವೇ ಇಲ್ಲದೇ, ಚಪ್ಪರಿಸಿ ತಿನ್ನುತ್ತಿದ್ದ ಮಗುವಿನ ನೀಲಿಕಣ್ಣು ರಿಸಲ್ಟ್ ಹೇಳಬೇಕಿತ್ತು!

ಟಿಪ್ಪಣಿಗಳು
  1. vijayraj ಹೇಳುತ್ತಾರೆ:

    ಕೆಂಗೇರಿಯ ಅಣ್ಣನ ಮನೆಗೆ ಹೋಗಲು ಬಸ್ಸು ಕಾಯುತ್ತಿದ್ದರೆ ಸಾಲುಸಾಲಾಗಿ ವಿಜಯನಗರದ ಬಸ್ಸು ಬರುತ್ತಿದ್ದವು.ಬೇಜಾರಾಗಿ ಪ್ರೋಗ್ರಾಮ್ ಬದಲಿಸಿಕೊಂಡು ವಿಜಯನಗರದ ಅಕ್ಕನ ಮನೆಗೆ ಫೋನ್ ಮಾಡಿ ಇವತ್ತು ನಿಮ್ಮ ಮನೆಗೆ ಬರ್ತೇನೆ ಅಂತ ಹೇಳಿ ಇಟ್ಟನಷ್ಟೇ,ಕೆಂಗೇರಿ ಬಸ್ಸು ಹಾರ್ನ್ ಬಾರಿಸುತ್ತಾ ವಯ್ಯಾರದಿಂದ ಬಂತು!

    🙂

    ಮೊದಲ ಬಾರಿಗೆ ಕಿಕ್ಕಿರಿದ ಪತ್ರಿಕಾಗೋಷ್ಟಿಯಲ್ಲಿ ಅದುವರೆಗೂ ಮಾತಾಡಿಯೇ ಇರದ ನಟಿಯ ಜತೆಗಿನ ರೂಮರ್ಸ್ ಬಗ್ಗೆ ಮಾತಾಡಬೇಕಿದ್ದ ನಟ “ಅವಳ, ನನ್ನ ನಡುವೆ ಎನೂ ಸಂಬಂಧ ಇಲ್ಲ..” ಅಂತಂದು ಗಲಿಬಿಲಿಯಲ್ಲಿ “..ಈಗ” ಅನ್ನುವುದನ್ನೂ ಸೇರಿಸಿದ. ಪತ್ರಕರ್ತರ ಪೆನ್ನು ಚಪ್ಪರಿಸಿ ಬರೆದುಕೊಂಡವು. ಮರುದಿನದ ಹೆಡ್ಡಿಂಗ್ ” ಅವಳ-ಅವನ ನಡುವೆ ಮುರಿದುಬಿದ್ದ ಸಂಬಂಧ”..!
    :):)

    ಅವಳು ಬಾಯಿಮಾತಿಗೆ “ನಂಗೆಲ್ಲಾ ಗೊತ್ತಾಗುತ್ತೆ ಕಣೋ” ಅಂದಿದ್ದಕ್ಕೆ ಹೆದರಿ ತನ್ನ ಕಣ್ಣೊಳಗಿನ ಕನಸುಗಳನ್ನು ಬಚ್ಚಿಡಲು ಪ್ರಯತ್ನಿಸುತ್ತಿದ್ದ.
    – idu kathenoo haudu… hanikavanaanu haudu…super

    * ಐದು ವರ್ಷದ ಹಿಂದೆ ದೇಶದ ಸಿಸ್ಟಮ್ ನ್ನೇ ಬದಲಿಸಬೇಕೆಂದು ಅವನು ಬರೆದ ಕವನ, ಇವತ್ತು ನೆಲಗಡ್ಲೆ ತಿನ್ನುವಾಗ ಅದಕ್ಕೆ ಸುತ್ತಿದ್ದ ಪೇಪರ್ ನಲ್ಲಿ ಸಿಕ್ಕಿತ್ತು

    idu paristhitiya vyangyakke kaigannadi…..

    ishToLLe saalugaLu nimge adu hyaage hoLeyutte…swalpa nangoo kalisikoDi

  2. neelihoovu ಹೇಳುತ್ತಾರೆ:

    idu kathenoo haudu… hanikavanaanu haudu…

    ಆ ಸಾಲನ್ನು ಬರೆಯುವಾಗ ಹನಿಗವನದ ಬಾಗಿಲನ್ನು ಮುಚ್ಚಿದ್ದರೂ ನೋಡಿ ಹೇಗೆ ಒಡೆದು ನುಗ್ಗಿ ಬಂದಿದೆ..:)

  3. ಶಿವು.ಕೆ ಹೇಳುತ್ತಾರೆ:

    ರಂಜಿತ್ ಸಾರ್,
    ಇದನ್ನು ಓದುವಾಗ ಹೊರಗೆ ಮಳೆ ಜೋರಾಗಿ ಬರುತ್ತಿತ್ತು. ಓದಿ ಮುಗಿಸಿದಾಗ ಮಳೆಯಲ್ಲಿ ಮಿಂಚು ಹೊಳೆಯಲಿಲ್ಲವಲ್ಲ ಅನ್ನುವ ಕೊರಗು ಕರಗಿಹೋಯಿತು. ಇನ್ನುಳಿದ ಬಾಗಗಳನ್ನು ಮತ್ತೊಮ್ಮೆ ಓದುತ್ತೇನೆ. ಇಂಥವು ಇನ್ನಷ್ಟು ಬರುತ್ತಿರಲಿ ನನಗಾಗಿ!
    ಶಿವು.ಕೆ

ನಿಮ್ಮ ಟಿಪ್ಪಣಿ ಬರೆಯಿರಿ