ಇದೊಂದು ಸಲ ಅವಕಾಶ ಮಾಡಿಕೊಡೇ…ಪ್ಲೀಸ್..

Posted: ಸೆಪ್ಟೆಂಬರ್ 30, 2008 in ಲವ್ ಲೆಟರ್

 

ಪ್ರಪಂಚದಲ್ಲಿ ನನ್ನಂತವರು ಸಾವಿರ ಜನ ಇದ್ದಾರು. ಆದರೆ ನನಗೆ ಮಾತ್ರ ನಿನ್ನಂತಹ ಕಂಗಳಿರುವ, ಮುಗ್ಧ ಮನವಿರುವ, ಗಾಢ ಅನುಭೂತಿ ಹುಟ್ಟಿಸಬಲ್ಲಂತಹ ಸನಿಹ ನೀಡುವ ಹುಡುಗಿ  ಸಿಕ್ಕಿಲ್ಲ, ಮತ್ತು ಸಿಗೊಲ್ಲ ಕೂಡ. ಸಿಗೊಲ್ಲ ಅನ್ನುವುದಕ್ಕಿಂತ ಮುಂದಕ್ಕೆ ಹುಡುಕಲಾರೆ ಅನ್ನುವಂತಹ ಉಚ್ಚ್ರಾಯ ಸ್ಥಿತಿಗೆ ತಲುಪಿಬಿಟ್ಟಿದ್ದೇನೆ ಅಂದರೆ ಲೇಸು.

ನನ್ನ ಸುಖದ ಪರಿಕಲ್ಪನೆಯೇ ಬೇರೆ ಕಣೇ. ಒಂದು ಮಗುವಿಗೆ ತಾಯಿ ಏನೆಲ್ಲಾ ಮಾಡಿ ಅದರ ಭಾವಗಳನ್ನು, ಚಲನೆಯನ್ನು ಹೇಗೆ ಅನುಭವಿಸಬಲ್ಲಳೊ,ಮುದದಿಂದ ಆನಂದಿಸಬಲ್ಲಳೊ, ಅಂತಹ ಆನಂದದಲ್ಲಿ ತೇಲಬೇಕೆಂಬುದು ನನ್ನ ಬಯಕೆ. ಬೆಳಿಗ್ಗೆ ನೀನೇಳುವ ಮೊದಲೇ ಕುದಿಕುದಿವ ನೀರಿಗೆ ನಿನ್ನ ಕಣ್ಣಳತೆಯಷ್ಟು ಚಹಾ ಪುಡಿ ಸುರಿದು, ಪ್ರೀತಿಯ ದಿನಗಳಲ್ಲಿ ನಿನ್ನನ್ನು ಕಾಯುವಾಗ ನನ್ನೆದೆ ಹೇಗೆ ಕುದಿಯುತ್ತಿತ್ತೋ ಅದಕ್ಕೂ ಚೂರು ಮಿಗಿಲಾಗಿ ಕುದಿಸಿ, ನಿನ್ನ ದನಿಯಷ್ಟು ಸಿಹಿಯಾದ ಸಕ್ಕರೆ ಸುರಿದು, ಜತೆಗೆ ನೀ ಹತ್ತಿರ ಹತ್ತಿರ  ಬರುತ್ತಿದ್ದಾಗಲೆಲ್ಲಾ ಬಹುಶಃ ನಿನ್ನೊಳಗೆ ಹೂವೊಂದು ಅರಳುತ್ತಿದ್ದಿರಬಹುದು ಎಂಬಂತೆ ಘಮವೊಂದು ನನ್ನ ಸುತ್ತ ಜಾಲ ಹಾಕುತ್ತಿತ್ತಲ್ಲ ಅಂತಹ ಘಮದಂತಹ ಯಾಲಕ್ಕಿ ಯ ಚೂರೊಂದನ್ನು ಸೇರಿಸಿ, ತಯಾರಾದ ಟೀ ಯನ್ನು ನಿನ್ನೆದುರು ಹಿಡಿಯಬೇಕು.

ಏಳುತ್ತಿದ್ದಾಗಲೇ ಟೀ ಕಪ್ಪು ಹಿಡಿದ ನನ್ನನ್ನು ನೋಡುತ್ತಾ, ನಿನ್ನ ಕಣ್ಣಲ್ಲೊಂದು  ಅಚ್ಚರಿ ಮೂಡುತ್ತದಲ್ಲ ಅದನ್ನು ಸವಿಯಬೇಕು. ಟೀ ಕುಡಿಯುತ್ತಾ ರುಚಿಯ ತನ್ಮಯತೆಯಿಂದ ಕಣ್ಣು ಮುಚ್ಚುತ್ತೀಯಲ್ಲ ಅದರ  ಫೋಟೋವನ್ನು  ಶಾಶ್ವತವಾಗಿ ಎದೆಯಲ್ಲಿರಿಸಿಕೊಳ್ಳಬೇಕು. “ನನ್ನ ಕಂಡರೆ ಅದೆಷ್ಟು ಇಷ್ಟಾನೋ ನಿಂಗೆ…ನನ್ನ ಮುದ್ದು ಕೋತೀ…  ಐ ಲವ್ ಯೂ ಕಣೋ…” ಅನ್ನುತ್ತಾ ನನ್ನ ಕೆನ್ನೆ ಹಿಂಡುವಿಯಲ್ಲಾ, ಆ ಸ್ವರ, ಧಾಟಿ, ಕೆನ್ನೆಯ ರಂಗು,ಹಿತವಾದ ನೋವು ಎಲ್ಲವನೂ ಚಾಚೂ  ತಪ್ಪದಂತೆ ಮನದಲ್ಲಿ ಇರಿಸಿ ನೀನಿಲ್ಲದಾಗ, ಬೋರಾದಾಗ, ಒಬ್ಬಂಟಿತನ ಆವರಿಸಿದಾಗ,ಮತ್ತೆ ಮತ್ತೆ ರಿ-ಪ್ಲೇ ಮಾಡಿಕೊಂಡು ಉನ್ಮತ್ತನಾಗಬೇಕು.

ದಾರಿಯಲ್ಲಿ ಹೋಗುವಾಗ ಅಂಗಡಿಯಲ್ಲಿ ಗೊಂಬೆಗೆ ಅಂದದ ಡ್ರೆಸ್ ಹಾಕಿರುತ್ತಾರಲ್ಲ, ಅದನ್ನು ನೀ ಉಟ್ಟರೆ ಹೇಗಿರುತ್ತದೆ ಎಂದು ಕಲ್ಪಿಸಿಕೊಂಡು ನನ್ನಲ್ಲಿ ನಾನೇ ರೋಮಾಂಚಿತನಾಗಬೇಕು. ನೀ ಮಲಗಿದ್ದಾಗ ಸುಮ್ಮನೆ ನಿನ್ನ  ನೊಡುತಿರಬೇಕು. ಮೊಗದ ಮೇಲೆ ಆಸೆಯಿಂದ ಜಾರುವ ಮುಂಗುರುಳನು, ಅಸೂಯೆಯಿಂದ ಸರಿಸಬೇಕು. ತುಟಿಯಿಂದ ಮುತ್ತೊಂದನ್ನು ಮೆಲ್ಲಗೆ ಕದಿಯಬೇಕು. ಮಗ್ಗುಲು ಬದಲಿಸುವಾಗ  ಕನಸಲ್ಲೇ ಎನೋ ಪಡೆದ ಸಿಹಿ ಗುಂಗಿನಲ್ಲಿ ಕೋಲ್ಮಿಂಚಿನಂತಹ ಮುಗುಳ್ನಗೆಯೊಂದು  ಮೂಡಿ ಮರೆಯಾಗಿಸುತ್ತೀಯಲ್ಲ, ಅದನ್ನು ಕದ್ದು ನೋಡಿ ಸವಿಯಬೇಕು. ನಿನ್ನನು ಎರಡೂ ಕಾಲ್ಗಳ ಮಧ್ಯೆ ಕೂರಿಸಿಕೊಂಡು ಕೈಗೊಂದಿಷ್ಟು ಎಣ್ಣೆ ಸುರಿದುಕೊಂಡು ನಿನ್ನ ತಲೆಗೆ ಮಸ್ಸಾಜ್ ಮಾಡಬೇಕು. ಎದುರಿಗಿರುವ ಕನ್ನಡಿಯ ಋಣದಿಂದ ನಿನ್ನ ತನ್ಮಯತೆಯನ್ನು ನಿನಗೆ ಅರಿವಾಗದಂತೆ ಕಾಣಬೇಕು.

ನನಗೆ ನಿನ್ನ ಜತೆ ಆತ್ಮೀಯವಾದ ಅನುಬಂಧವನ್ನು  ಸವಿಯಲಿಕ್ಕೆ ಅನುವು ಮಾಡಿಕೊಟ್ಟರೆ, ಅದರಿಂದ ನಾ ಪಡುವ ಹೆಮ್ಮೆಯ  ಋಣ ತೀರಿಸಲು, ನಾ ಮಾಡಬೇಕಾದ್ದು
ಒಂದೇ…

ನಿನ್ನ ನಿರಂತರ ಖುಷಿಯ ಪ್ರಾರ್ಥನೆ.
ನಿನ್ನ ನಿತ್ಯ ಹರಿದ್ವರ್ಣ ನಗುವಿನ ಕನಸು.

ಬಹುಶಃ ಅದೇ ನನ್ನೊಳಗಿನ ಅನಂತ ಚೈತನ್ಯ. ಯಾವಾಗ ನೀನು ಖುಷಿಯಾಗುವುದು ನಿಲ್ಲುತ್ತದೋ, ಆಗ ನನ್ನ ಉಸಿರು ಕೂಡ ನಿಲ್ಲುತ್ತದನ್ನಿಸುತ್ತದೆ.
ನಿನ್ನ ಜತೆ ಬಾಳ್ವೆಯ ರಮ್ಯ ಅನುಭೂತಿಗಾಗಿ  ಕಳೆದ ಆರು ಜನ್ಮದ ಪ್ರಾರ್ಥನೆ ನನಸಾಗೋ ಸಮಯ ಇದು.

ಕಟ್ಟ ಕಡೆಯ ಅವಕಾಶ.

ಈ ಜನ್ಮದಾಚೆ ಏನಿದೆಯೋ(ಇದ್ದರೆ) ಅದನ್ನು ಇದೊಂದೇ ಜನ್ಮದಲ್ಲಿ ನಿನ್ನೊಡನೆ ಕಳೆದ  ಕ್ಷಣಗಳ ಮೆಲುಕು ಹಾಕಿಕೊಂಡೇ ಜೀವಿಸಬಹುದು.
ನನ್ನ ಪ್ರೀತಿಯ ತೋರಿಸಲು, ನಿನ್ನೊಡನೆ ಚಂದದಿ ಬದುಕಿ, ದೇವರಿತ್ತ ಈ  ಬದುಕನ್ನು ಪಾವನವಾಗಿಸಲು ಇದೊಂದು ಸಲ ಅವಕಾಶ ಮಾಡಿಕೊಡೇ.. ಪ್ಲೀಸ್….

ಟಿಪ್ಪಣಿಗಳು
 1. ವೈಶಾಲಿ ಹೇಳುತ್ತಾರೆ:

  ಈ ಬರಹ ಎರಡು ಸಲ ಓದಿಸಿಕೊಂಡಿದೆ.
  ನಿಮ್ಮ ಬ್ಲಾಗ್ ಗೆ ಹಿಟ್ ಗಳು ಜಾಸ್ತಿಯಾದ್ರೆ ತಪ್ಪು ನನ್ನದಲ್ಲ! 🙂

  ಇನ್ನೊಂದು ಒಳ್ಳೆ ಕವನ ಪ್ಲೀಸ್……..

 2. vijayraj ಹೇಳುತ್ತಾರೆ:

  ಬೆಳಿಗ್ಗೆ ನೀನೇಳುವ ಮೊದಲೇ ಕುದಿಕುದಿವ ನೀರಿಗೆ ನಿನ್ನ ಕಣ್ಣಳತೆಯಷ್ಟು ಚಹಾ ಪುಡಿ ಸುರಿದು, ಪ್ರೀತಿಯ ದಿನಗಳಲ್ಲಿ ನಿನ್ನನ್ನು ಕಾಯುವಾಗ ನನ್ನೆದೆ ಹೇಗೆ ಕುದಿಯುತ್ತಿತ್ತೋ ಅದಕ್ಕೂ ಚೂರು ಮಿಗಿಲಾಗಿ ಕುದಿಸಿ, ನಿನ್ನ ದನಿಯಷ್ಟು ಸಿಹಿಯಾದ ಸಕ್ಕರೆ ಸುರಿದು, ಜತೆಗೆ ನೀ ಹತ್ತಿರ ಹತ್ತಿರ ಬರುತ್ತಿದ್ದಾಗಲೆಲ್ಲಾ ಬಹುಶಃ ನಿನ್ನೊಳಗೆ ಹೂವೊಂದು ಅರಳುತ್ತಿದ್ದಿರಬಹುದು ಎಂಬಂತೆ ಘಮವೊಂದು ನನ್ನ ಸುತ್ತ ಜಾಲ ಹಾಕುತ್ತಿತ್ತಲ್ಲ ಅಂತಹ ಘಮದಂತಹ ಯಾಲಕ್ಕಿ ಯ ಚೂರೊಂದನ್ನು ಸೇರಿಸಿ, ತಯಾರಾದ ಟೀ ಯನ್ನು ನಿನ್ನೆದುರು ಹಿಡಿಯಬೇಕು

  ee saalugaLannu neevu yaara bagge barediddeero nangottilla. aadre avrige idannu torisidre… fidaa aaghogOdu khaNdita………
  I enjoyed this writing a lota and lot and lot….
  hats -off and thank you very much for such a nice write-up

 3. neelihoovu ಹೇಳುತ್ತಾರೆ:

  ವೈಶಾಲಿ ಮೇಡಂ,

  ಬ್ಲಾಗ್ ನ ಹಿಟ್ಟುಗಳು ಅದರ ಕ್ವಾಲಿಟಿಯನ್ನು ನಿರ್ಧರಿಸಲಾರದು ಅಂತ ಬಲವಾಗಿ ನಂಬಿದ್ದೇನೆ. ಹಾಗಾಗಿ ಅದು ಹೆಚ್ಚಾಗಿ ಬಾಧಿಸದು.
  ಬರೇ ಎರಡು ಸಲ ಓದಿಸಿಕೊಂಡಿತೇ? 🙂
  ಇನ್ನೊಂದೆರಡು ದಿನ ಕಾಯಿರಿ, ಆಗಲೇ ನನ್ನೊಳಗಿನ ಕವಿ ಬರೆದು ಮುಗಿಸಿ, ಒಳಗೇ ಇರುವ ವಿಮರ್ಶಕ ನ ಇಲಾಖೆಗೆ ರವಾನಿಸಿದ್ದಾನೆ. ಆತ ಒಪ್ಪುತ್ತಲೇ “ಒಂದು ಹನಿ ದುಃಖ…” ಉದುರೀತು.
  ಯಾವುದಕ್ಕೂ ಕರ್ಚೀಫು ತಯಾರಿಟ್ಟುಕೊಳ್ಳಿ!

  ಥ್ಯಾಂಕ್ಸ್ ನಿಮ್ಮ ಮೆಚ್ಚುಗೆಗೆ…

 4. neelihoovu ಹೇಳುತ್ತಾರೆ:

  ವಿಜಯರಾಜ್ ಸರ್,

  ನಿಮ್ಮ ಹೊಗಳಿಕೆಗೆ ಮೂಕನಾಗಿರುವೆ.
  ಧನ್ಯವಾದವೆಂಬ ಒಂದು ಪದ ಬಿಟ್ಟು ಸದ್ಯಕ್ಕೆ ಏನೂ ಹೊಳೆಯುತಿಲ್ಲ.

  ಪ್ರೀತಿ ಹೀಗೆ ಇರಲಿ ಸರ್…
  ಥ್ಯಾಂಕ್ಸ್!

 5. ವೈಶಾಲಿ ಹೇಳುತ್ತಾರೆ:

  ನಿಮ್ಮ ಬ್ಲಾಗ್ ನ extra ಹಿಟ್ಟುಗಳು ನನ್ನ ಹೆಜ್ಜೆ ಗುರುತುಗಳು ಅಂತ ಭಾವಿಸಬೇಕಾಗಿ ವಿನಂತಿ 🙂

 6. neelihoovu ಹೇಳುತ್ತಾರೆ:

  ಮೇಡಂ,
  ದಯವಿಟ್ಟು ಹಿಟ್ಟುಗಳ ಬಗ್ಗೆ ಚಿಂತಿಸದೆ, ನಿಮಗಿಷ್ಟ ಬರುವಷ್ಟು ಸಲ ಬಂದು ಹೋಗಿ…
  ಬರಹ ಚೆನ್ನಾಗಿದ್ದರೆ ಬೆನ್ನು ತಟ್ಟಿ, ಹಾಗೆಯೇ ಚೆನ್ನಾಗಿರದೇ ಹೋದರೆ, ತಿಳಿ ಹೇಳಿ.

  ಥ್ಯಾಂಕ್ಸ್!

 7. Gururaj ಹೇಳುತ್ತಾರೆ:

  ತುಂಬಾ ತುಂಬಾ ಚನ್ನಾಗಿ ಬರ್ದಿದಿರಾ, ಇ ಕವನವನ್ನು ವರ್ಣಿಸಲು ನನಗೆ ಶಬ್ಧಗಳು ಸಿಗುತ್ತಿಲ್ಲ.

 8. ಸುಪ್ರೀತ್ ಹೇಳುತ್ತಾರೆ:

  ಅಡಿಗರೇ,
  ಇಂಥವು ಬರೆಯೋಕೆ ನೀವೇ ಸರಿ ಬಿಡಿ… ಭಾವವಿಲ್ಲದೆ ಬರಹ ಹೇಗಾದೀತು? ನಾನೂ ಬರೆಯೋಕೆ ಅಂತ ಪ್ರಯತ್ನಿಸಿದ್ದೀನಿ, ಆದರೆ ಅದರಲ್ಲಿ ಏನೇನೋ ವೇದಾಂತ, ಭಾಷಣ, ಭೀಷಣ ತತ್ವ ಸೇರಿಕೊಂಡು ಕುಲಗೆಟ್ಟು ಹೋಗಿಬಿಡುತ್ತವೆ, ‘ಇಂತಿ ನಿನ್ನ ಪ್ರೀತಿಯ..’ ಪತ್ರಗಳನ್ನ ನೋಡಿದ್ದೀರಲ್ಲಾ, ಅಲ್ಲೆಲ್ಲಾ ನನಗೆ ಸಫಲವಾಗದ, ಕೈ ಗೂಡದ ಪ್ರೀತಿಯ ಬಗ್ಗೆ ಬರೆಯುವುದಕ್ಕೇ ಆಸಕ್ತಿ. 🙂

 9. neelihoovu ಹೇಳುತ್ತಾರೆ:

  ಗುರುರಾಜ್ ಸರ್,

  ಎನೋ ಲವ್ ಲೆಟರ್ ಬರೆದುಬಿಡೋಣ ಅಂತ ಕೂತು ಬರೆದಿದ್ದು ಇದು, ಕವನವಾಗಿ ಬಿಟ್ಟಿತಾ?:)

  ಧನ್ಯವಾದಗಳು ಸರ್.ನಿಮ್ಮ ಪ್ರೀತಿ ಹೀಗೇ ಇರಲಿ.

 10. neelihoovu ಹೇಳುತ್ತಾರೆ:

  ಬಿಡಿ ಸುಪ್ರೀ,ನಾನು ಭಾಷಣ, ಭೀಷಣ ತತ್ವಗಳನ್ನು ಬರೆಯಲು ಕೂತರೆ ಲವ್ ಲೆಟರ್ ಆಗಿಬಿಡುತ್ತದೆ… ಅದಕ್ಕೇನಂತೀರಿ?:)

  ಒಮ್ಮೆ ಯಾವುದಾದರೂ ಹುಡುಗಿಯಿಂದ ಕೈಕೊಡಿಸಿಕೊಂಡ ಅನುಭವ ಪಡೆದರೆ, ಅದೇ ಮೂಡಿಬರುತ್ತದೆ ಬಿಡಿ:) (ಕೆಲವು ad ನಲ್ಲಿ ಹೇಳ್ತಾರಲ್ಲ, dont try this at home..ಅಂತ ಎಚ್ಚರಿಕೆ ನೀಡಬೇಕು ನಾನು. ಅಂಥ ಪ್ರಯತ್ನ ಮಾಡಲು ಹೊರಟೀರಿ ಮತ್ತೆ..:))

 11. uniquesupri ಹೇಳುತ್ತಾರೆ:

  ಇಲ್ಲ ಬಿಡಿ ಹತ್ತಿರದಲ್ಲಿ ಅಂಥಾ ಅವಕಾಶಗಳ್ಯಾವೂ ಇಲ್ಲ. ತೊಂದರೆ ಇಲ್ಲಮ್ ನೀವು ನಿಮ್ ಸರ್ಕಸ್ಸು, ಸಾಹಸ ಮುಂದುವರೆಸಿ ನಾನೇನು ಅದನ್ನು ಅನುಕರಿಸುವ ಪ್ರಯತ್ನ ಮಾಡುವುದಿಲ್ಲ 🙂

 12. Gururaj ಹೇಳುತ್ತಾರೆ:

  ನಿಜ ಇದು ಕವನ ಅಲ್ಲ ವೊಂದು ವೊಳ್ಳೆ ಬರಹ… ನನಗೆ ಕನ್ನಡ ದಲ್ಲಿ ವರ್ನಿಸೋ ಶಬ್ದಗಳು ಬರಲ್ಲ 😦

  ನೀವು ಎಲ್ಲರನ್ನು Sir/Madam ಅಂತ ಕರಿಯೋದು ಯಾಕೋ ನನಗೆ ಚನ್ನಗಂಸಲ್ಲ. ಎಲ್ಲರು ನಿಮ್ಮ ಹತ್ತಿರ ಬರಬೇಕು ಅಂತ ಪ್ರಯತ್ನಿಸೋಥರ ನೀವು ಅವರನ್ನು ದೂರ ಮಡ್ತಿರೋಥರ ಅನ್ನಿಸುತ್ತದೆ… ಕ್ಷಮ್ಸಿ ನಾನು ಏನಾದ್ರು ನಾನು ಹೇಳುತಿದ್ದರೆ

 13. neelihoovu ಹೇಳುತ್ತಾರೆ:

  ನೀವು ಬಂದು, ಓದಿ, ಖುಷಿಪಟ್ಟು, ಕಾಮೆಂಟ್ ಮಾಡಿದ್ದೇ ಬಹಳ ಸಂತೋಷ ನನಗೆ.

  ಇಲ್ಲ ಸರ್.. ನೀವೇನು ತಪ್ಪು ಹೇಳ್ತಾ ಇಲ್ಲ. ನಾನು ನಾಲೆಡ್ಜ್ ವಿಷಯದಲ್ಲೂ, ವಯಸ್ಸಿನಲ್ಲೂ ತುಂಬಾ ಚಿಕ್ಕವನು. ನನ್ನ ಮುಖ ನೋಡುವ ತಪ್ಪು ನೀವೆಲ್ಲಾದರೂ ಮಾಡಿದ್ದರೆ, ಸರ್ /ಮೇಡಂ ಅಂತ ಹೇಳದೇ ಹೋಗಿದ್ದರೇನೇ ಬಯ್ಯುತ್ತೀರಿ ಅನ್ನಿಸುತ್ತದೆ:)!

  ಅಯ್ಯೋ…ನಾನು ಯಾರನ್ನೂ ದೂರ ಮಾಡುತಿಲ್ಲ, ಹಾಗೆಲ್ಲಾದರೂ ಅನ್ನಿಸಿದ್ದರೆ ದಯವಿಟ್ಟು ಕ್ಷಮಿಸಿ. ನೀವೆಲ್ಲಾ ನನಗೆ ಇಷ್ಟು ಪ್ರೀತಿ ತೋರಿಸುತ್ತಿದ್ದರೆ ಅದಕ್ಕಿಂತ ಖುಷಿ, ಸಾರ್ಥಕತೆ ನನಗೆ ಬೇರೇನೂ ಇಲ್ಲ..

  ಪ್ರೀತಿ ಹೀಗೆಯೇ ಇರಲಿ..:)

 14. ranjitha ಹೇಳುತ್ತಾರೆ:

  hi Ranjith…..
  chennagide ri nim love chitti
  nivu, hema, somu obariginta obru chennagi love letters baritira
  ii nadve office nali swalpa kelsa madtidini jaaasti nimgala blog odtidini 😉
  i’m waiting for your next article ……….

 15. Priya ಹೇಳುತ್ತಾರೆ:

  ಪ್ರೇಮ ಪತ್ರ ತುಂಬಾ ಚನ್ನಾಗಿದೆ ಮನ್ನಸಿಗೆ ಇಡಿಸಿತು. ರಂಜಿತ್ ಅವ್ರೆ ನಾನು ಒಂದೇ ಒಂದು ಪ್ರಶ್ನೆ ಕೇಳ್ತೀನಿ ಸಾದ್ಯವಾದರೆ ಉತ್ತರ ಕೊಡಿ “ಪ್ರೀತಿ ಅಂದ್ರೆ ಏನು?”

 16. ರಂಜಿತ್ ಹೇಳುತ್ತಾರೆ:

  ಪ್ರಿಯಾ ಮೇಡಮ್,

  ಪ್ರೇಮವನ್ನು ವ್ಯಾಖ್ಯೆಗೆ ನಿಲುಕಿಸುವುದು ಅಸಾಧ್ಯ. ವ್ಯಾಖ್ಯೆ ಕೊಟ್ಟರೂ ಎಲ್ಲರೂ ಒಪ್ಪುವಂತಾದ್ದಲ್ಲ. ಒಬ್ಬರ ಪಾಲಿಗೆ ಪ್ರೇಮ ಅನ್ನುವುದು ಒಂದು ಭಾವನೆ. ಮತ್ತೆ ಕೆಲವರಿಗೆ ಅದು ಕ್ರಿಯಾಪದ. ಇನ್ನೂ ಕೆಲವರು ನಂಬದ, ಒಪ್ಪದ ವಿಚಾರ. ತೀರಾ ಲಾಜಿಕ್ ಆಗಿ ಯೋಚಿಸಿದರೆ ಅಂತಾದ್ದೇನೂ ಇರದ ಗೋಜಲು ಗೋಜಲು ಭಾವ.

  ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ಒಲಿಯುವ ಪ್ರಕ್ರಿಯೆ ಅನ್ನಬಹುದೇನೋ. ನನ್ನ ಪಾಲಿಗೆ ನನ್ನನ್ನು ಜೀವಂತವಾಗಿರಿಸುವ, ಕ್ಷಣ ಕ್ಷಣಗಳಲ್ಲೂ ಬದುಕಿನ ಭಾವ ಉದ್ಭವಿಸುವಂತೆ ಮಾಡುವ ಒಂದು ಪುಳಕ. ಒಂದು ಜೀವನ ವಿಧಾನ. ಈ ದೃಷ್ಟಿಕೋನ ನನಗೆ ತೃಪ್ತಿ ನೀಡಿದೆ ಅನ್ನಬಲ್ಲೆ. ಅಷ್ಟೇ.

  ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಈ ಪ್ರೇಮ ಪತ್ರಕ್ಕಿಂತಲೂ ಉತ್ತಮವಾದದ್ದನ್ನು (ನನ್ನ ಪ್ರಕಾರ) ಈ ಬ್ಲಾಗಿನಲ್ಲೇ ಬರೆದಿದ್ದೇನೆ, ಸಾಧ್ಯವಾದಾಗ ಅದನ್ನೂ ಓದಿ, ಹೇಗಿದೆ ತಿಳಿಸಿ.

 17. BiLimugilu ಹೇಳುತ್ತಾರೆ:

  ranjith,
  e-pathra tumbaa ishtavaayitu… innashtu patragaLannu oduva hambala… !!

 18. jayakumar ಹೇಳುತ್ತಾರೆ:

  God bless you..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s