ಗುಲಾಬ್ ಜಾಮೂನ್ !

Posted: ಅಕ್ಟೋಬರ್ 4, 2008 in ಅಡಿಗರ ಅಡುಗೆ ಮನೆ

 

ಚಿಕ್ಕಂದಿನಲ್ಲಿ ನಮ್ಮ ಗುಲಾಬ್ ಜಾಮೂನಿನ ಆಸೆ ಕೆಲವೊಮ್ಮೆ ಅಪ್ಪನ ಬಜೆಟ್ ನ ಮಿತಿಯನ್ನು ಮೆಲ್ಲನೆ ದಾಟುತಿತ್ತು.ಅಪ್ಪನಾದರೂ ನೇರವಾಗಿ ’ಇನ್ನು ಈ ತಿಂಗಳು ಜಾಮೂನು ಕೇಳಬೇಡಿ’ ಎಂದು ನುಡಿಯಬಲ್ಲ. ನಮ್ಮ ನಾಲಗೆಯ ಬಕಾಸುರತನವನು ಬಲ್ಲ ಅಮ್ಮನಿಗೆ ಹಾಗೆ ಹೇಳಲು ಆದೀತೆ?

ಅಮ್ಮ ಯಾವಾಗಲೂ ಹೊಸ ಹೊಸ ತರಹದ ಅಡುಗೆಗಳನ್ನು ಮಾಡುತಾಳೆ. ಅದೆಲ್ಲಾ ಅವಳಿಗೆ ಹ್ಯಾಗೆ ಗೊತ್ತಾಗುತ್ತದೆ? ಎಲ್ಲಿಂದ ಕಲಿಯುತಾಳೆ ಅಂತೆಲ್ಲಾ ಕೇಳುವ ಹಾಗಿಲ್ಲ. ಇರುವೆಗೆ ಸಕ್ಕರೆಡಬ್ಬಿಯ ಅಡ್ರೆಸ್ಸನ್ನು ಯಾರಾದರೂ ನೀಡುತ್ತಾರೆಯೆ? ಟೀವಿ, ನ್ಯೂಸ್ ಪೇಪರ್, ಪಕ್ಕದ ಮನೆ ಆಂಟಿ, ಮದುವೆಮನೆಯ ಪಟ್ಟಾಂಗ, ಹೀಗೆ ಒಂದು ಕೋರ್ಸು ಮಾಡದಿದ್ದರೂ,ಸಾವಿರಾರು ಸೋರ್ಸುಗಳು! ಹೇಗೆ ಗೂಗಲ್ ಅಂಕಲ್ ನ ಬಳಿ ಪದವೊಂದನ್ನು ಕುಟ್ಟಿದರೆ ಮಾಹಿತಿಗಳ ರಾಶಿ ಹರಡಬಲ್ಲನೋ, ಅಮ್ಮನಿಗೆ ಸುಮ್ಮನೆ ತರಕಾರಿಯೊಂದಿತ್ತರೆ ಅದರ ಮೇಲೆ ಮಾಡಬಹುದಾದ ಅಡುಗೆ ಯ ಪಟ್ಟಿಯೇ ಕೊಟ್ಟು ನಮ್ಮಲ್ಲಿ ಆಟದ ಸಾಮಾನಿನ ಅಂಗಡಿ ಮುಂದೆ ನಿಂತ ಮಗುವಿನ ಗೊಂದಲ ಮೂಡಿಸಬಲ್ಲಳು! ಒಮ್ಮೆ ಅಮ್ಮ ಮಾಡಿದ ’ಸೆವೆನ್ ಕಪ್’ ಎಂಬ ಸ್ವೀಟು ಎಷ್ಟು ಫೇಮಸ್ಸಾಯಿತೆಂದರೆ ಇಂಜಿನಿಯರಿಂಗ್ ನಲ್ಲಿ ಡಿಸ್ಟಿಂಕ್ಷನ್ ಬಂದಾಗ ಗೆಳೆಯರೆಲ್ಲಾ “ಏನಪ್ಪಾ.. ದೊರೆ ಎಲ್ಲಿ ಸ್ವೀಟು? ” ಅಂತ ಕೇಳುವುದನ್ನೇ ಮರೆತು.. ” ಎಲ್ಲಪ್ಪಾ ಸೆವೆನ್ ಕಪ್ಪು ಯಾವಾಗ ಹಂಚ್ತೀಯ?” ಅಂತಲೇ ಕೇಳುತ್ತಿದ್ದರು!

ಅದಿರಲಿ. ನಮ್ಮ ಜಾಮೂನಿನಾಸೆಗೆ ಅಮ್ಮನ ಮದ್ದು, ಒಂದು ಹೊಸ ಅಡುಗೆ. ಅದನ್ನಷ್ಟೇ ಇಲ್ಲಿ ಪ್ರಸ್ತಾಪಿಸುವೆ.

ಒಂದು ಪೌಂಡು ಬ್ರೆಡ್ಡು, ಒಂದು ಲೀಟರ್ ಹಾಲು, ಕರಿಯಲು ತುಪ್ಪ, ಪಾಕಕ್ಕಾಗಿ ಸಕ್ಕರೆ ಇವಿಷ್ಟೇ ಅದಕ್ಕೆ ಬೇಕಾಗುವ ಸಾಮಾಗ್ರಿಗಳು.

ಮೊದಲು ಬ್ರೆಡ್ಡನ್ನು ಚೂರು ಚೂರಾಗಿ ಮಾಡಿಕೊಳ್ಳಬೇಕು. ಬ್ರೆಡ್ಡಿನ ನಾಲ್ಕು ಮೂಲೆಯಲ್ಲಿನ ಕಂದು ಬಣ್ಣದ ಪಟ್ಟಿ ತೆಗೆದೇ ಚೂರು ಮಾಡಿದರೆ ಅನುಕೂಲ. ಆ ಚೂರುಗಳಿಗೆ ಹಾಲು ಸೇರಿಸಿ (ಉಂಡೆ ಹದಕ್ಕೆ) ಉಂಡೆ ಕಟ್ಟಿಕೊಳ್ಳಬೇಕು. ಚಿಕ್ಕ ಸೈಜಿನಲ್ಲಿ ಉಂಡೆ ಮಾಡಿಕೊಂಡರೆ ಹೆಚ್ಚು ಜಾಮೂನು ಸಿಗುತ್ತದೆಂಬುದು ನನ್ನ ಚಿಕ್ಕಂದಿನ ತರ್ಕ! ಒಂದು ಒಲೆಯಲ್ಲಿ ಸಕ್ಕರೆ ಪಾಕ ತಯಾರು ಮಾಡಿಕೊಳ್ಳುತ್ತಾ, ಇನ್ನೊಂದರಲ್ಲಿ ತುಪ್ಪ ಬಿಸಿ ಮಾಡಬೇಕು. ಬಿಸಿ ತುಪ್ಪದಲ್ಲಿ, ಮಾಡಿಟ್ಟ ಬ್ರೆಡ್ಡಿನ ಉಂಡೆಗಳನ್ನು ಹಾಕಿ ಕೆಂಪಗೆ ಕರಿಯಬೇಕು.

ಕರಿದ ಬ್ರೆಡ್ಡಿನ ಉಂಡೆಗಳನ್ನು ಸಕ್ಕರೆಪಾಕಕ್ಕೆ ಹಾಕಿದ ನಂತರ ಮನದ ಸಂಯಮಕ್ಕೆ ಕೆಲಸ ಕೊಡಬೇಕು. ಹೆಚ್ಚು ಕಾದರೆ, ಹೆಚ್ಚು ಪಾಕ ಹೀರಿ ಮೃದುವಾಗಿ ತಿನ್ನಲು ರುಚಿಯಾಗುತ್ತದಂತೆ. ನಾನು ಯಾವತ್ತೂ ಅಷ್ಟು ಕಾಯುವ ಸಾಹಸ ಮಾಡಿಲ್ಲ!

ನಿನ್ನ ಪಾಲಿಷ್ಟು, ನನ್ನ ಪಾಲಿಷ್ಟು ಅಂತ ಲೆಕ್ಕವಿಟ್ಟು, ಕೆಲವೊಮ್ಮೆ ಲೆಕ್ಕದಲ್ಲಿ ಮೋಸ ಮಾಡಿ ನಾನೂ, ನನ್ನ ಅಣ್ಣ, ಅಕ್ಕ ಜಗಳಾಡಿ ತಿನ್ನುತಿದ್ದೆವು. ಕೊನೆಯ ಮಗನಾದ ನನಗೆ ಎಲ್ಲಾ ಖಾಲಿಯಾದ ಮೇಲೆ ಅಮ್ಮ, ತಾನು ತೆಗೆದಿಟ್ಟ ಕೆಲವು ಜಾಮೂನನ್ನು ಡಬ್ಬಿಯಿಂದ ತೆಗೆದು ನೀಡುತ್ತಿದ್ದಳು. ಬೇರೆಯವರಿಗೆ ಗೊತ್ತಾದರೆ ಎಲ್ಲಿ ಜಗಳಾಡುತ್ತಾರೋ ಎಂದು ’ಯಾರಿಗೂ ಹೇಳದೇ ತಿನ್ನು’ ಅನ್ನುತ್ತಿದ್ದಳು. ಆಗೆಲ್ಲಾ ಗುಲಾಬ್ ಜಾಮೂನ್ ಗಿಂತ ಅಮ್ಮನ ಪ್ರೀತಿಯೇ ಹೆಚ್ಚು ರುಚಿ ಅನ್ನಿಸುತಿತ್ತು!

ಆಗ ಅವಳೆಷ್ಟು ಜಾಮೂನು ನೀಡಿದ್ದಳೋ ನೆನಪಿಲ್ಲ. ಆದರೆ ಈಗ, ಅವಳ ಪ್ರೀತಿ ಮಾತ್ರ ಲೆಕ್ಕ ಮಾಡದಷ್ಟಾಗಿ, ಅವಳಲ್ಲಿ ಬಿಟ್ಟರೆ ಬೇರೆಲ್ಲೂ ಸಿಗದಷ್ಟಾಗಿ ಕಾಡುತಿದೆ !

ಟಿಪ್ಪಣಿಗಳು
 1. ವೈಶಾಲಿ ಹೇಳುತ್ತಾರೆ:

  very touching….

 2. shree ಹೇಳುತ್ತಾರೆ:

  Namasthe,

  Neeli hoovu odtha odtha nange banda anumana idu manikanth avra baraha (antha). Neeli avra magala hesaru, nanna oohe sari idre ee blog kooda avaradde, Kavanane irali kathene irali athava jamoonina baggene aagli thumba chennagi bardidare,

  ivattina sapthahikakke noorondu thanks, mattondu olleya blog bagge thilsi kottiddakke

  Shree

 3. neelihoovu ಹೇಳುತ್ತಾರೆ:

  ಥ್ಯಾಂಕ್ಸ್ ವೈಶಾಲಿ…

  ಗೆಳೆಯರೆಲ್ಲಾ ’ಏನ್ ಗುರೂ.. ನಿನ್ ಬ್ಲಾಗ್ ನಲ್ಲಿ ಮಾಹಿತಿಯೇ ಇಲ್ಲಾ’ ಅಂತ ಹೇಳಿದ್ದಕ್ಕೆ ನನ್ನ ಆಸಕ್ತಿಗಳಲ್ಲಿ ಒಂದಾದ ಅಡುಗೆ ವಿಚಾರ ಹೇಳಿದೆ.

  ಗುಲಾಬ್ ಜಾಮೂನ್ ರುಚಿ ಬಗ್ಗೆ ನೀವು ತಿಳಿಸಲಿಲ್ಲ…:-(

  ************

  ಶ್ರೀ ಯವರೆ,

  * ಓಹ್ ! ಈ “ನೀಲಿ” ಹೆಸರೇ ಎಷ್ಟು ಅಪ್ಯಾಯಮಾನ ಮತ್ತು ಚೆಂದವಿದೆ ಅಲ್ವಾ?
  ಈಗ ನಾನಿರುವ ಜಾಗದಲ್ಲಿ ತಲೆಯೆತ್ತಿದರೂ, ತಗ್ಗಿಸಿದರೂ ಎಲ್ಲೆಲ್ಲೂ ನೀಲಿಯೇ. ಮುದ್ದು ಮೊಗದ ಮಗುವೊಂದನ್ನು ಆ ಹೆಸರಲ್ಲಿ ಕಲ್ಪಿಸಿಕೊಂಡರೆ, ಪ್ರಕೃತಿಯ ಸೌಂದರ್ಯವೇ ಕ್ಷಣಕಾಲ ಮಬ್ಬಾಗುವುದು.
  ಎಂಥ ಆಸೆ ಹುಟ್ಟಿಸಿಬಿಟ್ಟಿರಿ ನೀವು. ನೋಡಿ ಈಗ, ಬೇಡಿಯಾದರೂ ಆ ಮಗುವಿನ ಫೋಟೋ ನೋಡಬೇಕನ್ನಿಸುತಿದೆ ಅರ್ಜೆಂಟಾಗಿ !…:)

  * ನಿಮ್ಮ ಮತ್ತೊಂದು ಪ್ರಶ್ನೆ ನನ್ನ ಅಸ್ತಿತ್ವವನ್ನೇ ಅಲ್ಲಾಡಿಸಿಬಿಟ್ಟಿತಲ್ಲಾ..
  ನನ್ನನ್ನು ’ನಾನೇ’ ಅಂತ ಪ್ರೂವ್ ಮಾಡೋದು ಹ್ಯಾಗೆ? 🙂

  ನಿಮ್ಮ ಊಹೆ ತಪ್ಪೆಂದಷ್ಟೇ ಹೇಳಬಲ್ಲೆ.

  * ನನ್ನೊಳಗಿನ ಲೇಖಕನನ್ನು, ನಾನು ಗುರುತಿಸುವುದಕ್ಕೆ ಶುರುಮಾಡಿದ್ದೇ ಕನ್ನಡಪ್ರಭ ದ ’ಕಾಲೇಜುರಂಗ’ದಿಂದ.
  ನಿಮ್ಮಂಥಹ ಮತ್ತಷ್ಟು ಓದುಗವೃಂದವನ್ನು ನೀಡಿ, ನನ್ನೊಳಗಿನ ನಾಜೂಕಯ್ಯನನ್ನೂ, ಬರಹಗಾರನನ್ನೂ sharp ಮಾಡುತ್ತಿದೆ ಅನಿಸ್ತಿದೆ, ಥ್ಯಾಂಕ್ಸ್ ಹೇಳಬೇಕಾದ್ದು ನಾನಲ್ಲವೆ?

 4. ವೈಶಾಲಿ ಹೇಳುತ್ತಾರೆ:

  ಓಹ್….. 😦
  ಇದನ್ನ ಓದಿ ಅಮ್ಮನ ನೆನಪಾಗಿದ್ದು, ನನ್ನ ಬಾಲ್ಯ, ಅಂದಿನ ಖುಷಿ… ಈಗ ಊರಲ್ಲಿದ್ದಿದ್ರೆ ಅಪ್ಪ, ಅಮ್ಮನ ಜೊತೆ ಎಷ್ಟು ಖುಷಿಯಿಂದ ಹಬ್ಬ ಮಾಡ್ತಿದ್ದೆ, ಇಲ್ಲಿ ಆ ನೆನಪಷ್ಟೇ ಅಂತ ಕಣ್ಣಲ್ಲಿ ನೀರು ತುಂಬಿಕೊಂಡಿದ್ದು, ನೆನಪುಗಳನ್ನ ಮತ್ತೆ ಮಗುಚಿ ಹಾಕಿದ್ದು …… ಜಾಮೂನ್ ಬಗ್ಗೆ ಹೇಳ್ಬೇಕು ಅಂದ್ರೆ ಇದನ್ನೆಲ್ಲಾ ತೆರೆದಿಡಬೇಕಿತ್ತು. ಯಾಕೆ ಸುಮ್ಮನೆ ಅಂತ ಬಿಟ್ಟೆ ಅಷ್ಟೆ.
  ಓದಿದ್ರೆ, ಚಿತ್ರ ನೋಡಿದ್ರೆ ಜಾಮೂನ್ ಸೂಪರ್! ಮಾಡೋ ಸಾಹಸಕ್ಕೆ ಕೈ ಹಾಕಿಲ್ಲ ಅಷ್ಟೆ. 🙂
  ಅಂದಂಗೆ, ಅಮ್ಮ ತುಂಬ ನೆನಪಾಗ್ತಿದಾರ?
  ಮರೆತೇ ಬಿಟ್ಟೆ, ಕನ್ನಡ ಪ್ರಭ ದೊಳಗೆ ನೀಲಿ ಹೂವು ಅರಳಿದೆ?? congrats!!

 5. ವೈಶಾಲಿ ಹೇಳುತ್ತಾರೆ:

  ಅಡಿಗೆ ನಿಮ್ಮ ಆಸಕ್ತಿಯ ವಿಷಯ ಅಂದಿದ್ದು ಕೇಳಿ ಕಂಡಾಪಟ್ಟೆ ಖುಷಿ ಆಯ್ತು ಮಾರಾಯ್ರೇ!
  ನಿಮ್ಮ ಮಲ್ಲಿಗೆ ತೂಕದ ಹುಡುಗಿಗೆ ಇದು ಗೊತ್ತಾದ್ರೆ ಇನ್ನೊಂದು ಸುತ್ತು ತೂಕ ಕಡಿಮೆಯಾಗಿ ಬಿಟ್ಟೀತು! ಖುಷಿಯಿಂದ ಹಾರಿ ಹೋದಾಳು ಹುಷಾರು 😉

 6. vijayraj ಹೇಳುತ್ತಾರೆ:

  Nimma neeli hoovu ninne kannadaprabhada blog buttili sikkittu gotta?
  noDidira?

  nodade idre illi nOdi

  http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20081004035911&nDate=

  vijayraj

 7. Sushrutha ಹೇಳುತ್ತಾರೆ:

  ಹೆಚ್ಚೆಸ್ವಿಯವರ ಹೊಸ ಕವನ ಸಂಕಲನ ‘ಉತ್ತರಾಯಣ ಮತ್ತು..’ದಲ್ಲಿನ ಎರಡು ಸಾಲು:

  ಸಕ್ಕರೆಪಾಕದಲ್ಲಿ ಮುಳುಗಿರುವ ಜಾಮೂನು;
  ನಿದ್ದೆ ಮಾಡುತ್ತಿರುವ ಮುದ್ದು ಮಗಳು..

  ಎಷ್ಟ್ ಚನಾಗಿಲ್ವಾ?

 8. neelihoovu ಹೇಳುತ್ತಾರೆ:

  * ಅಲ್ಲಿನ ಚಿತ್ರಕ್ಕೂ, ಬ್ರೆಡ್ಡು ಜಾಮೂನಿಗೆ ಕೊಂಚವೂ ಸಂಬಂಧವಿಲ್ಲ. ಅಡುಗೆ ಅಮ್ಮನಿಂದಲೂ, ಚಿತ್ರ ಗೂಗಲ್ ಅಂಕಲ್ ಬಳಿಯಿಂದ ಕದ್ದದ್ದು…:-)

  * ಮನೆ ಬಿಟ್ಟು ೮ ವರ್ಷ ಆಗಿದ್ರೂ ಹಾಳಾದ್ದು ಹೋಮ್ ಸಿಕ್ ನೆಸ್ ಕಾಡುತ್ತೆ ! ಅಮ್ಮ ನೆನಪಾದ್ರೆ ಫೋನ್ ಮಾಡಬಹುದು. ಅಪ್ಪನ ನೆನಪಾದ್ರೆ ಏನೂ ಮಾಡೋಕಾಗದೆ ಕಣ್ತುಂಬಿ ಬರುತ್ತೆ.

  ವೃದ್ದಾಪ್ಯದಲ್ಲಿ ನಮ್ಮ ಅವಶ್ಯಕತೆ ಅವರಿಗಿರುತ್ತದೆ. ಜೀವನದ ರೇಸಿನಲ್ಲಿ ಗೆಲ್ಲುವುದಕ್ಕಾಗಿ, ಕೇವಲ ಹಣಕ್ಕಾಗಿ ಅವರ ಸಾಮೀಪ್ಯ ತೊರೆದೆವಾ ಅಂತ ಗಿಲ್ಟ್ ಮೂಡುತ್ತ ಇರ್ತದೆ.

  ಈಗೆಲ್ಲಾ ನೋವುಗಳು ಅಡ್ಜಸ್ಟ್ ಆಗಿಬಿಟ್ಟಿವೆ. ” ಬಡ್ಡಿ ಮಗಂದು ಎಮ್ಮೆ ಚರ್ಮ ಕಣೋ..” ಅಂತ ನೋವುಗಳು ಮಾತಾಡ್ಕೊತಾ ಇರ್ತವೆ!

  * ಅಡುಗೆ ಎಷ್ಟು ಕ್ರಿಯೇಟಿವ್ ಹವ್ಯಾಸ ಅಲ್ವಾ? ಹಾಗೆಯೇ ಪ್ರಿಯವಾದವರಿಗೆ ಪ್ರೀತಿಯಿಂದ ಕೈಯಾರೆ ಮಾಡಿದ ಅಡುಗೆ ಬಡಿಸುವುದು ಎಷ್ಟೊಂದು ಆನಂದ ಕೊಡುತ್ತದೆ..:-)…ಯಾವಾಗಲಾದರೂ ಅದರ ಬಗ್ಗೆ ಬರೀತೇನೆ.

  * ಆ ಹುಡುಗಿಯ ವಿಚಾರ ಬಿಡಿ… ಅದು ಎಷ್ಟು ಅಭ್ಯಾಸ ಮತ್ತು ಹಳೆಯದಾಗಿದೆ ಅಂದರೆ ಕಳೆದ ಜನ್ಮದಲ್ಲಿ ನಡೆದದ್ದೇನೋ ಅನ್ನಿಸುತ್ತದೆ..:-)

 9. neelihoovu ಹೇಳುತ್ತಾರೆ:

  ವಿಜಯರಾಜ್,

  ಮೊನ್ನೆಯೇ ನೋಡಿದೆ ಸರ್, ಥ್ಯಾಂಕ್ಸ್.

  ಕನ್ನಡಪ್ರಭದವರಿಗೆ ಮೊದಲಿಂದಲೂ ನಾನೆಂದರೆ ಪ್ರೀತಿ…:-)

 10. uniquesupri ಹೇಳುತ್ತಾರೆ:

  🙂
  ಮನೆಗೆ ಹೋದಾಗ ಜಾಮೂನು ಮಾಡಿಸಿಕೊಂಡು ತಿನ್ನಬೇಕು 🙂
  ಅಡುಗೆ ಮಾಡಿ ಇನ್ನೊಬ್ಬರಿಗೆ ಬಡಿಸಿ ಆನಂದ ಪಡುವುದು ಉಲ್ಲಾಸದಾಯಕ ಅಭ್ಯಾಸ ಎಂದಿದ್ದೀರಿ ಆದರೆ ಅಡಿಸಿದ್ದನ್ನು ಧೈರ್ಯವಾಗಿ ತಿನ್ನುವವರಿಗೆ ಇದು ರೋಮಾಂಚನಕಾರಿ ಸಾಹಸ! (ನಿಮ್ಮ ಕೈ ಅಡುಗೆ ರುಚಿ ತಿಳಿಯದೆ ಹೇಳಿರುವೆ… ಯಾವುದಕ್ಕೂ ಸೇಫ್ ಆಗಿರೋಣ ಅಂತ)
  ಹೋಂ ಸಿಕ್ ನೆಸ್ ಬಗ್ಗೆ ಯಾಕೋ ತುಂಬಾ ತಲೆ ಕೆಟ್ಟಿದೆ. ನಿನ್ನೆ ತಾನೆ ಪಿ ಎನ್ ಶ್ರೀನಿವಾಸ್‌ರ ‘ಸೆರೆ’ ಕಾದಂಬರಿಯನ್ನು ಓದಿದೆ. ಅದರಲ್ಲಿ ಒಂದು ಸೆರೆಯಿಂದ ತಪ್ಪಿಸಿಕೊಳ್ಳುವ ಭ್ರಮೆಯಲ್ಲಿ ನಾಯಕ ದೊಡ್ಡ ದೊಡ್ಡ ಸೆರೆಗೆ ಸಿಕ್ಕಿಬೀಳುತ್ತಾನೆ ನಮ್ಮದೂ ಹಾಗೇ ಇದೆ ಅನ್ನಿಸಿತು!

 11. vijayraj ಹೇಳುತ್ತಾರೆ:

  Yes… Shree avaru hEliddu sari….
  manikaanth neeli hesaralli thumbaa article bardiddare..
  avra magaLa hesaru neeli ne

  aadre niv nim blog ge neelihoovu antha iTTa hesaru nODi shree
  avru tappaagi nimmanne maNikaanth antha confuse maadkoMdu
  biTTiddare….
  neevu buddivantha dalli upendra helida style nalli naan avanalla…naan avanalla… aMta hELo haage aaythu nODi…

  off the topic –
  aMda haage ee upendranige naanu annOdu thumbaa tale tinnutte ansutte…

  upendra chitradalli avana hesaru ‘Naanu’…. 🙂
  avna innondu chitrada hesaru…naanu naane !! 🙂
  eega buddivantadalli …. naanu avnalla…. naanu avanalla antha koogO paatra 🙂

 12. neelihoovu ಹೇಳುತ್ತಾರೆ:

  🙂
  ಅಮ್ಮನಿಗೆ ಯಾಕೆ ತೊಂದರೆ ಕೊಡ್ತೀರಿ ಸುಪ್ರೀ…ನೀವು ನಳಪಾಕ ಮಾಡ್ಕೊಂಡು ತಿನ್ನಿ ಅಂತ ’ಎಮ್ ಟಿ ಆರ” ನವರನ್ನೆಲ್ಲಾ ಎದುರು ಹಾಕ್ಕೊಂಡು ಅವರ ಮಿಕ್ಸ್ ನೆಲ್ಲಾ ಉಪಯೋಗಿಸದೇ ಗುಲಾಬ್ ಜಾಮೂನ್ ಹೇಗೆ ಮಾಡೋದು ಅಂತ ಹೇಳಿಕೊಟ್ಟಿದ್ದೀನಿ..:-)

  ಕೊಟ್ಟಷ್ಟೂ ನಮ್ಮೊಳಗೆ ಹೆಚ್ಚಾಗುವುದು ಪ್ರೀತಿ…ಇಟ್ಟುಕೊಂಡಷ್ಟು ನಮ್ಮನ್ನು ಹಾಳು ಮಾಡುವುದು ದ್ವೇಷ…
  ಪ್ರೀತಿಯಿಂದ ಏನು ನೀಡಿದರೂ ಚಂದ ಅಲ್ವಾ?

  ಹೆದರದಿರಿ..ನನ್ನ ಅಡುಗೆ ಉಂಡವರೆಲ್ಲಾ ’ ಉಘೇ.. ಉಘೇ’ ಅಂದಿರುವರು…

  ಹೋಂ ಸಿಕ್ ನೆಸ್ ಬಗ್ಗೆ ಯಾಕೆ ತಲೆ ಕೆಡಿಸ್ಕೊತೀರಿ? ನಿಮ್ಗೆ ಅದಿಲ್ಲ ಅಂತ ಕೇಳಿ ನಂಗೆ ಖುಷಿ ಆಗಿತ್ತು. ಬಂದರೆ ತುಂಬಾ ಕಷ್ಟ ಗುರುಗಳೇ…ನಿಧಾನವಿಷ ಅದು..!

  ನಿಮ್ಮ ” ನನ್ನ ಓದು” ಜೀವಂತ ಇದ್ದಿದ್ದರೆ ’ಸೆರೆ’ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದಿತ್ತು. ಈಗಲೂ ನಾನೆಲ್ಲಿ ಬಿಡ್ತೀನಿ..ಕುಯ್ಯಿಸಿಕೊಳ್ಳಲು ತಯಾರಾಗಿರಿ.. ದೀಪಾವಳಿಗೆ ಊರಿಗೆ ಬರುವ ಸನ್ನಾಹವಿದೆ.

 13. neelihoovu ಹೇಳುತ್ತಾರೆ:

  ವಿಜಯರಾಜ್,

  ನಂಗೆ ಜಯಂತ್ ಕಾಯ್ಕಿಣಿ ಅಂದ್ರೆ ತುಂಬಾ ಇಷ್ಟ. ಬೆಂಕಿಗೆ ಅವರು ನೀಲಿ ಹೂವು ಅನ್ನುವ ಪದ ಆಗಾಗ್ಗೆ ಉಪಯೋಗಿಸ್ತಾರೆ. ಅದರ ಇತರ ಅರ್ಥಗಳನ್ನೆಲ್ಲಾ ಗಮನಕ್ಕೆ ತಗೆದುಕೊಂಡು ಬ್ಲಾಗಿಗೆ ಆ ಹೆಸರು ಇಡಲಾಯಿತು. “ಏನು ಈ ನೀಲಿ ಹೂವೆಂದರೆ?” ಅಂತ ಒಂದು ಪೋಸ್ಟ್ ಇದೆ ಗಮನಿಸಿ.

  ಉಪೇಂದ್ರ ಅಂದ್ರೆ ನಂಗೂ ಇಷ್ಟ. ( ನಂಗ್ಯಾರು ಇಷ್ಟ ಇಲ್ಲ?:-)) ಚಿಕ್ಕ ವಯಸ್ಸಿನಲ್ಲಿ ಪಟ್ಟ ಕಷ್ಟ, ಬೆಳೆದುನಿಂತು ಚಿತ್ರರಂಗವನ್ನಾಳಿದ ಪರಿ, ಇದೆಲ್ಲಾ ಬಡವರಿಗೆ ತಾನು ಎನಾದರೂ ಸಾಧಿಸಬಹುದು ಎಂಬ ಸ್ಪೂರ್ತಿ ಕೊಡುತ್ತದಲ್ಲ, ಅದಕ್ಕಾಗಿ.

  ಮದುವೆ ಆದ ಮೇಲೆ ಯಾಕೋ ಅವರ ಪ್ರತಿಭೆ ಮಬ್ಬಾದಂತಿದೆ..:-)

 14. neelihoovu ಹೇಳುತ್ತಾರೆ:

  ಸುಶ್ರುತ,

  ನೀವು ಮೌನವಾಗಿ ಗಾಳ ಹಾಕ್ತ ಇಲ್ಲಿಗೂ ಬಂದಿದ್ದಕ್ಕೆ ಥ್ಯಾಂಕ್ಸು.
  ಎಚ್ಚೆಸ್ವಿ ಕವನ ಬಿಡುಗಡೆಯಾಯಿತೆ ?
  ಅಲ್ಲಿಗೆ ಬಂದೊಡೆ ಪುಸ್ತಕದಂಗಡಿ ಗೆ ನುಗ್ಗಿ ಮೊದಲು ತಗೊಳ್ಳಬೇಕು.

  ಎಂಥ ಒಳ್ಳೆ ಸಾಲು ಇಲ್ಲಿ ಉದಾಹರಿಸಿದಿರಿ… ಹೃದಯಸ್ಪರ್ಶಿಯಾಗಿದೆ…

 15. ವೈಶಾಲಿ ಹೇಳುತ್ತಾರೆ:

  ನಂಗೆ ಏನು ಹೇಳೋಕು ತೋಚ್ತಾ ಇಲ್ಲಾ…………………..

 16. ಪಲ್ಲವಿ ಎಸ್‌. ಹೇಳುತ್ತಾರೆ:

  ಪ್ರೀತಿಯ ರಂಜಿತ್‌,

  ನಿಮ್ಮ ಬರಹದ ಕೊನೆಯ ಸಾಲುಗಳು ಜಾಮೂನು ತಿನ್ನದಂತೆ ಮಾಡಿವೆ. ದಯವಿಟ್ಟು ಆ ಸಾಲುಗಳನ್ನು ವಿವರಿಸುತ್ತೀರಾ?

  ಏಕೋ ಅಳುಕು ಕಾಡುತ್ತಿದೆ.

  – ಪಲ್ಲವಿ ಎಸ್‌.

 17. neelihoovu ಹೇಳುತ್ತಾರೆ:

  ವೈಶಾಲಿ,

  ನನ್ನ ಪ್ರೀತಿಯ ಲೇಖಕ ಕಾಯ್ಕಿಣಿ ಹೇಳ್ತಾರೆ ” ಸುಮ್ಮನಿದ್ದರೆ ಮಾತ್ರ ಅಲೌಕಿಕ ಸಂಗೀತ ಕೇಳುತ್ತದೆ” ಅಂತ…:-)

  ಪಲ್ಲವಿ,

  ನಿಮ್ಮ ಬರವಣಿಗೆ ಕುರಿತು ತೀವ್ರ ಹೊಟ್ಟೆಕಿಚ್ಚಿದೆ ನನಗೆ. ಈಗ ನಿಮ್ಮ ಓದುವಿಕೆ ಬಗ್ಗೆಯೂ ಶುರುವಾಗಿದೆ. ಎಂತಹ ಸೂಕ್ಷ್ಮ ಲೋಪವೊಂದನ್ನು ಪತ್ತೆಹಚ್ಚಿಬಿಟ್ಟಿರಿ..!

  “ಆಗ ಅವಳೆಷ್ಟು ಜಾಮೂನು ನೀಡಿದ್ದಳೋ ನೆನಪಿಲ್ಲ. ಆದರೆ ಈಗ, ಅವಳ ಪ್ರೀತಿ ಮಾತ್ರ ಲೆಕ್ಕ ಮಾಡದಷ್ಟಾಗಿ, ಎಲ್ಲೂ ಸಿಗದಷ್ಟಾಗಿ ಕಾಡುತಿದೆ !”

  ಈಗ ನಾನು ಊರಿನಲ್ಲಿಲ್ಲ. ಅಮ್ಮನಿಂದ ಸಾವಿರಾರು ಮೈಲಿಗಳಷ್ಟು ದೂರ, ಬದುಕಿನಲ್ಲಿ ಬೇಗ ಸೆಟಲ್ (?) ಆಗುವ ರೇಸ್ ನಲ್ಲಿದ್ದೇನೆ. ತುಂಬಾ ಗೆಳೆಯ-ಗೆಳತಿಯರ ಪ್ರೀತಿ ಇದ್ದರೂ, ಅದೆಲ್ಲ ಅಮ್ಮನಂತಿಲ್ಲ. ಅಂಥದ್ದು ಅಮ್ಮನಲ್ಲಿ ಬಿಟ್ಟರೆ ಬೇರೆಲ್ಲೂ ಸಿಗುತಿಲ್ಲ ಅಂತಷ್ಟೇ ಹೇಳಬೇಕಿತ್ತು ನಾನು.

  ಆ ಸಲ ದೀಪಾವಳಿಗೆ ಸಾಧ್ಯವಾದರೆ ಮನೆಗೆ ಹೋಗಿ, ನನ್ನೊಳಗಿನ ಪ್ರೀತಿಯನ್ನು ಇತರರಿಗೆ ಹಂಚಲು ಆಗುವಂತೆ ಅಮ್ಮನಿಂದ ರೀಫಿಲ್ ಮಾಡಿಕೊಂಡು ಬರಬೇಕು !:-)

  ನಿಮ್ಮ ಅಳುಕಿನಲ್ಲಿ ಉಕ್ಕುತ್ತಿರುವ ಪ್ರೀತಿಗೆ ಋಣಿ ನಾನು. ದಯವಿಟ್ಟು ಖುಷಿಯಿಂದ ಜಾಮೂನು ತಿನ್ನುವಂತವರಾಗಿ !

 18. ವೈಶಾಲಿ ಹೇಳುತ್ತಾರೆ:

  ಹೌದು, ಕಾಯ್ಕಿಣಿ ನನ್ನ ಪ್ರೀತಿಯ ಲೇಖಕರೂ ಕೂಡ. ನಾನೂ ಸುಮ್ಮನಿರೋಕೆ ಪ್ರಯತ್ನ ಏನೋ ಮಾಡ್ತಿದ್ದೀನಿ…ಆದ್ರೆ ಸಂಗೀತ….ಉಉಂಹೂ… 🙂
  ಪಲ್ಲವಿ ಅವರು ಹೇಳಿದ್ದು ಸರಿ. ಮೊದಲೂ ನನಗೂ ಕೂಡ ಹಾಗೇ ಅನ್ನಿಸಿತು. ಆದರೆ ನಂತರ ಅಮ್ಮನಿಂದ ದೂರ ಇರೋದರ ಬಗ್ಗೆ ಹಾಗೆ ಹೇಳಿದ್ದಿರಬೇಕು ಅಂತ ಸಮಾಧಾನಪಟ್ಟುಕೊಂಡೆ.

 19. shree ಹೇಳುತ್ತಾರೆ:

  Namasthe,

  nanna oohe thappagidre nimma parichaya madikodi please

  nijavaglu nimma barahagalu thumbane chennagide, kannadaprabhada khayam odugalu naanu,

 20. neelihoovu ಹೇಳುತ್ತಾರೆ:

  ವೈಶಾಲಿ,

  ಅಂಥ ಇಬ್ಬಂದಿತನ ಉಂಟುಮಾಡಿಸಿದ್ದಕ್ಕೆ ಕ್ಷಮೆಯಾಚಿಸುವೆ..

  ಶ್ರೀ,

  ಹೆಸರು ರಂಜಿತ್ ಅಡಿಗ.ಊರು ಕುಂದಾಪುರ. ವಯಸ್ಸು ೨೬ ರ ಆಸುಪಾಸು. ಈಗೊಂದು ನಾಲ್ಕು ವರ್ಷದಿಂದ ಕೆಲಸ ಮಾಡುತಿರುವೆ. ವೃತ್ತಿ ಸಿವಿಲ್ ಇಂಜಿನಿಯರ್. ಬೆಂಗಳೂರಿನಲ್ಲಿದ್ದಾಗ ಪತ್ರಿಕೆಗಳಿಗೆ ಚೂರು ಪಾರು ಬರೀತಾ ನನ್ನೊಳಗನ್ನು ತೃಪ್ತಿಪಡಿಸಿಕೊಳ್ತಾ ಇದ್ದೆ.

  ಈಗಿಲ್ಲಿ ಮಾಲ್ಡೀವ್ಸ್ ಗೆ ಬಂದ ಮೇಲೆ ಅಂಥ ಬರೆಯುವ ಸುಖವಿಲ್ಲದೇ ಒದ್ದಾಡುತ್ತಿದ್ದಾಗ, ಈ ಬ್ಲಾಗು ಲೋಕದ ಪರಿಚಯವಾಯಿತು. ಹೀಗೆ ಅನ್ನಿಸಿದ್ದನ್ನು ನೀಲಿಹೂವಿನ ಹೆಸರಿಟ್ಟು ಗೀಚುತ್ತಿದ್ದೇನೆ.

  ಇಷ್ಟು ಸಾಕಲ್ಲವೆ?

 21. Shree ಹೇಳುತ್ತಾರೆ:

  Namasthe Ranjith,

  dhanyavadagalu nimma parichaya madikottiddakke, kannadaprabhakke chiraruni, neevenu bhavisadiddare nimage thondare aagadiddare nanagondu mail madthira? (Shreedolly@gmail.com).

  Ododu andre bahalane ishtaree nange, pusthakagalu idre ella marithini, eega blognalli neevu bareyodanna odokke thumbane ishta

  Shree

 22. ಪಲ್ಲವಿ ಎಸ್‌. ಹೇಳುತ್ತಾರೆ:

  ನಿಮ್ಮ ಪ್ರತಿಕ್ರಿಯೆ ಓದಿ ಸಮಾಧಾನವಾಯಿತು ರಂಜಿತ್‌. ಇನ್ನು ನೆಮ್ಮದಿಯಿಂದ ಜಾಮೂನು ತಿನ್ನಬಹುದು.

  ನಿಮ್ಮ ಪಾಕಪ್ರಾವಿಣ್ಯತೆ ಬಗ್ಗೆಯೂ ಅಫಿಡವಿಟ್‌ ಕೊಟ್ಟಿದ್ದೀರಿ. ತಿಂದವರೆಲ್ಲ ಉಘೇ ಉಘೇ ಅಂದಿರುವರು ಅಂತ ಶಿಫಾರಸು ಪತ್ರ ಬೇರೆ ಹಾಕಿದ್ದೀರಿ. ತಿಂದವರು ಹರ ಹರಾ ಅಂದ ಉದಾಹರಣೆಗಳಿದ್ದರೆ, ದಯವಿಟ್ಟು ಅದನ್ನೂ disclaimer ಆಗಿ ಬಳಸಬಹುದು. 🙂

  ಇಷ್ಟು ಸಾಕು, ನಾನು ಜಾಮೂನು ರುಚಿ ನೋಡಬೇಕಿದೆ 🙂

 23. neelihoovu ಹೇಳುತ್ತಾರೆ:

  ಶ್ರೀ,

  ನಿಮ್ಮ ಪ್ರೀತಿಗೆ ಋಣಿಯಾಗಿರುವೆ. ಲೇಖಕ ತನ್ನ ಬಗ್ಗೆ ಜಾಸ್ತಿ ಹೇಳಿಕೊಳ್ಳದೇ, ಬರಹವನ್ನು ತನ್ನನ್ನು ತಾನು ಕಂಡುಕೊಳ್ಳುವ ಮಾರ್ಗವಾಗಿಸುತ್ತಾ ಬದುಕಬೇಕೆಂದು ಎಲ್ಲೋ ಓದಿದ್ದೆ . ಆ ಅಜ್ಞಾತವಾಗಿರುವ ಅಜ್ಞಾತ ಸುಖ ಅನುಭವಿಸುತ್ತ ಇದ್ದೆ ಇಷ್ಟು ದಿನ.
  ಅದಕ್ಕೇ ನನ್ನ ಪರಿಚಯ ಕೇಳಿದಾಗ ಸ್ವಲ್ಪ ಮುಜುಗರ ಆಗಿದ್ದು ನಿಜ.

  ನಿಮ್ಮ ಪ್ರೀತಿ ನೋಡಿ ಅದೆಲ್ಲಾ ಯಾಕೋ ಸುಳ್ಳು, ಪೊಳ್ಳು ಅನ್ನಿಸುತ್ತಿದೆ.

  ಥ್ಯಾಂಕ್ಸ್, ಖಂಡಿತಾ ನಿಮಗೆ ಮೈಲ್ ಕಳಿಸುವೆ.

 24. neelihoovu ಹೇಳುತ್ತಾರೆ:

  ಪಲ್ಲವೀ,

  ಸುಮ್ಮನೆ ನಮ್ಮ ಸುಪ್ರೀ ಗೆ ಅಡುಗೆ ಮಾಡಲು ಉಮೇದು ಮೂಡಲಿ ಅಂತ, ತಿಂದವರು ಉಗುಳಿದ್ದನ್ನು ಬಚ್ಚಿಟ್ಟು ಉಘೇ ಉಘೇ ಅಂದಿದ್ದು ಮಾತ್ರ ಹೇಳಿದೆ 🙂

  ಹರ ಹರಾ ಅಂದಿದ್ದನ್ನೆಲ್ಲಾ ನೀವ್ಯಾಕೆ ಹೀಗೆ ರಟ್ಟು ಮಾಡಿಬಿಟ್ಟಿರಿ?:-)

  ಈ ಜಾಮೂನು ರುಚಿಯಾಗಿರುತ್ತೆ ಅಂತ ಗ್ಯಾರೆಂಟಿ ನೀಡಲಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ತಿನ್ನಬಹುದೆಂಬುದನ್ನಷ್ಟೇ ಹೇಳಬಲ್ಲೆ. ನೀವು ಮಾಡುವುದಕ್ಕಿಂತ ಅಮ್ಮನ ಹತ್ರ ಮಾಡಿಸಿ, extra ರುಚಿ ಬರುವ ವಿಸ್ಮಯ ನೋಡಿ..:-)

 25. Sunil ಹೇಳುತ್ತಾರೆ:

  Superb superb Ranjith 🙂
  Sunil.

 26. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಯೂ ಥ್ಯಾಂಕ್ಯೂ ಸುನಿಲ್..;)

 27. prasad ಹೇಳುತ್ತಾರೆ:

  how I comment in kannada font pl. send e-mail to my address

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s