ದೋಣಿ ದಡ ಮುಟ್ಟೀತಾ?

Posted: ಅಕ್ಟೋಬರ್ 14, 2008 in ಕವಿತೆ

 

 

 

ತನ್ನ ಕೆಳಗೇ ಮುಳುಗೇಳುತಲಿದೆ
ಸಾವು ಬದುಕಿನ ಅಲೆಗಳು..

ಒಡಲೊಳು ಸಾವಿರ ದುಗುಡ..
ಮಡಿಲೊಳು ಪ್ರಾರ್ಥಿಸುವ ಕಂಗಳು..
ಹೊತ್ತು ಸಾಗುತಿಹುದು ನಿರ್ಲಿಪ್ತ ದೋಣಿ..

ಸುರಿಯುತಿಹುದು ಮಳೆ
ಬರಲಿರುವ  ದುಃಖಕ್ಕೆ
ಮೊದಲೇ ಅಳುವಂತೆ..

ಎಲ್ಲೋ ನಾಡಿನಲಿ
ಟೀವಿಯ ವಾರ್ತೆಯಲಿ
ತೂಫಾನಿನ ಸುದ್ದಿ..
ಒಡನೆಯೇ ಹೊತ್ತಿಕೊಂಡಿವೆ
ದೇವರ ದೀಪಗಳು..

ಅತ್ತ ಅಲೆಗೂ ತೀರದ ಸಿಟ್ಟು
ಇತ್ತ ದೋಣಿ ತನ್ನ ನಂಬಿದವರಿಗೆ ಬದ್ಧ..
ಸಾಗರ ಸೋತೀತಾ?
ದೋಣಿ ದಡ ಮುಟ್ಟೀತಾ?

ಹರಿಗೋಲನು ಬಿಟ್ಟ ಕೈಗಳಾಗಲೇ
ಒಂದುಗೂಡಿವೆ..

ನೋಡಬೇಕಿದೆ
ಯಾರನ್ನೆಲ್ಲಾ ಅಂತ
ಸಂತೈಸುತ್ತಾನೆ ದೇವರಿಂದು?!

Advertisements
ಟಿಪ್ಪಣಿಗಳು
 1. vijayraj ಹೇಳುತ್ತಾರೆ:

  Devaru yaarannoo santaisolla……
  avaravarannu avaravarE santaisikollabEku…. santaisikoLLalEbEku

 2. ಪಲ್ಲವಿ ಎಸ್‌. ಹೇಳುತ್ತಾರೆ:

  ನನಗೆ ಹೊಟ್ಟೆಕಿಚ್ಚು ಹೆಚ್ಚಿಸುವುದನ್ನು ನಿಲ್ಲಿಸಿ ರಂಜಿತ್‌.

  ”ಎಲ್ಲೋ ನಾಡಿನಲಿ
  ಟೀವಿಯ ವಾರ್ತೆಯಲಿ
  ತೂಫಾನಿನ ಸುದ್ದಿ..
  ಒಡನೆಯೇ ಹೊತ್ತಿಕೊಂಡಿವೆ
  ದೇವರ ದೀಪಗಳು..”

  ಇಷ್ಟು ಚೆನ್ನಾಗಿ ಬರೆದು ನನ್ನ ಕವಿತೆಯ ಪುಟ್ಟ ಹರಿಗೋಲನ್ನೇಕೆ ಅಲ್ಲಾಡಿಸುತ್ತಿದ್ದೀರಿ?

  ಮತ್ತೆ, ”ಹರಿಗೋಲನು ಬಿಟ್ಟ ಕೈಗಳಾಗಲೇ
  ಒಂದುಗೂಡಿವೆ..

  ನೋಡಬೇಕಿದೆ
  ಯಾರನ್ನೆಲ್ಲಾ ಅಂತ
  ಸಂತೈಸುತ್ತಾನೆ ದೇವರಿಂದು?!”

  ಎಂದು ಬರೆದು ನನ್ನನ್ನು ಮೂಕಳನ್ನಾಗಿಸಿದ್ದೀರಿ.

  ನಿಜಕ್ಕೂ ಇವತ್ತು ಬೇಗ ಎದ್ದು ಕವಿತೆ ಬರೆಯಲು ಕೂತಿದ್ದೆ. ಅಭ್ಯಾಸಬಲ ನೋಡಿ, ಬ್ಲಾಗ್‌ಗಳನ್ನು ಹುಡುಕುತ್ತ ನಿಮ್ಮ ಈ ಕವಿತೆ ನೋಡಿದೆ. ಓದಿ ಮುಗಿಸುವ ಹೊತ್ತಿಗೆ ನನ್ನೊಳಗಿನ ಕವಿತೆ ರೂಪಸಿಯನ್ನು ನೋಡಿದ ಕುರೂಪಿ ಹುಡುಗಿಯಂತೆ ಎಲ್ಲೋ ಮಾಯವಾಗಿ ಹೋಗಿತ್ತು.

  ಆ ಪಾಪ ನಿಮಗೆ ತಟ್ಟದೇ ಇರಲಾರದು.

  ಸೂಪರ್‌. ದೇವರು, ಈ ಕಡಿಮೆ ಕವಿತ್ವದ ಹುಡುಗಿಯನ್ನೂ ಸಂತೈಸಲಿ.

  – ಪಲ್ಲವಿ ಎಸ್‌.

 3. neelihoovu ಹೇಳುತ್ತಾರೆ:

  ವಿಜಯ್ ರಾಜ್,

  “ನಮಗೆ ನಾವೇ” ದೇವರು ನೀಡಿದ ಅದ್ಭುತ ಉಡುಗೊರೆಯಾಗಿರುವಾಗ ಬೇರೆ ಯಾರೋ ಯಾಕೆ ಸಂತೈಸಬೇಕು ಅಲ್ಲವೆ?

  ಪಲ್ಲವಿ,

  ನಿಮ್ಮ ಅನಿಸಿಕೆ ನೋಡಿ ಎಂದಿನಂತೆ ಬಹಳ ಖುಷಿಯಾಯ್ತು. ಮತ್ತೆ ಇಲ್ಲಿ ಸಾರುತ್ತಿದ್ದೇನೆ… ನಾನು ನಿಮ್ಮ ದೊಡ್ಡ ಫ್ಯಾನು..:-)

  ಹಾಗೆ ನಿಮ್ಮೊಳಗಿನ ಕವಿತೆಗೆ ಯಾವುದಾದರೂ ಒಳ್ಳೆಯ ಕನ್ನಡಿ ತೋರಿಸಿ..:-)

  ರಾತ್ರಿ ಓದುವುದು ಬಹುಶಃ ಒಳ್ಳೆಯದೇನೊ ನೋಡಿ, ಓದುತ್ತಾ ಮಲಗುವಾಗ ಭಾವವೊಂದು ಮನಸ ಪದರದಲ್ಲಿ ಉಳಿದು, ಕನಸಲ್ಲಿ ಮೊಗ್ಗೊಡೆದು, ಬೆಳಿಗ್ಗೆ ಹೊತ್ತಿಗೆ ತಾಜಾ ಆದ ಕವಿತೆಯೊಂದು ಅರಳಬಹುದು!

  ಆದರೆ ಕಡಿಮೆ ಕವಿತ್ವವಿರುವ ಹುಡುಗಿ ಎಂಬ ಮಾತು ವಾಪಸ್ ತಗೊಳ್ಳಿ. ನಿಮ್ಮ ಬ್ಲಾಗು ನೋಡಿದರೆ ಯಾರಿಗಾದರೂ ತಿಳಿಯುತದೆ, ಅಲ್ಲಿ ಪ್ರತೀ ಗದ್ಯವೂ ಕವಿತ್ವದಿಂದ ಮೇಳೈಸುತ್ತಿದೆ, ದೇವರೂ ಸ್ವಲ್ಪ ಜಾಸ್ತಿಯಾಗಿಯೇ (ನಮ್ಮ ಗೆಳೆಯರ ವಲಯದವರಿಗೆಲ್ಲಾ ಹೊಟ್ಟೆ ಉರಿಯುವಷ್ಟು) ಸಂತೈಸಿದ್ದಾನೆ

  ಕೊನೆಗೆ ನಿಮ್ಮ ಹೆಸರೂ ಕೂಡ ಕವಿತೆಗೆ ಸಂಬಂಧಪಟ್ಟಿರುವಂತದ್ದೇ ಆಗಿದೆ..:-)

 4. ಅಹರ್ನಿಶಿ ಹೇಳುತ್ತಾರೆ:

  ನೋಡಬೇಕಿದೆ
  ಯಾರನ್ನೆಲ್ಲಾ ಅಂತ
  ಸಂತೈಸುತ್ತಾನೆ ದೇವರಿಂದು?!…………..

  ಕಡಲೂ ನಿನ್ನದೇ ಹಡಗೂ ನಿನ್ನದೆ
  ಮುಳುಗದಿರಲಿ ಬದುಕು……………….ಕೆ.ಎಸ್.ನ ರ ಮೈಸೂರ ಮಲ್ಲಿಗೆ ನೆನಪಾಯ್ತು .

  ಬಹಳ ಮೆಚ್ಚಿಕೊ೦ಡ ವಿಷಯ ..ಕಡಲು-ಹಡಗು-ತೀರ-ದೋಣಿ-ಅಲೆ………….

 5. supreeth ಹೇಳುತ್ತಾರೆ:

  ಅಡಿಗರೇ, ನಿಮ್ಮ ಕವನಗಳನ್ನು ಓದಿ ಹೊಟ್ಟೆ ಕಿಚ್ಚು ಪಟ್ಟುಕೊಳ್ಳುವವರು ಹೆಚ್ಚಾಗುತ್ತಿದ್ದಾರೆ, ಹೊಟ್ಟೆ ಹುಣ್ಣಿನ ವೈದ್ಯರೊಂದಿಗೆ ಏನಾದರೂ ರಹಸ್ಯ ಒಪ್ಪಂದ ಮಾಡಿಕೊಂಡಿರುವಿರೋ ಪತ್ತೆ ಹಚ್ಚಬೇಕು!
  ನೀವು ತೀರಾ ಆತ್ಮೀಯರಾದ ಕಾರಣ ಕವನವನ್ನು ಅಷ್ಟು ನಿರ್ಲಿಪ್ತತೆಯಿಂದ, ವಸ್ತುನಿಷ್ಠತೆ(ಯಾಕೋ ಅಸಮಂಜಸ ಅನ್ನಿಸುತ್ತೆ) ಯಿಂದ ಓದಲು ಸಾಧ್ಯವಾಗುತ್ತಿಲ್ಲ. ಬಹುಶಃ ಕವನಗಳನ್ನು ಓದುವುದಕ್ಕೆ ಅನುಭವಿಸುವುದಕ್ಕೆ ಅಂತರ್ಜಾಲ ಸೂಕ್ತವಾದ ಮಾಧ್ಯಮ ಅಲ್ಲವೇನೋ ಅನ್ನಿಸುತ್ತದೆ! ಪ್ರಿಂಟ್ ಔಟ್ ತೆಗೆದು ಓದುವ ಅಭ್ಯಾಸ ರೂಢಿಸಿಕೊಳ್ಳುವ…

  ಸುಪ್

 6. neelihoovu ಹೇಳುತ್ತಾರೆ:

  ಅಹರ್ನಿಶಿ ಯವರೆ,

  ನೀವು ಬಂದಿದ್ದು ತುಂಬಾ ಖುಷಿಯಾಯ್ತು ಸರ್…

  ಕೆ.ಎಸ್.ನ ಅಂದ್ರೆ ನಂಗೆ ಬಹಳ ಅಭಿಮಾನ..ಅವರು ಬರೆದ ಹಾಗೆ ಒಂದು ಸಾಲಾದರೂ ಬರೆಯಲಿಕ್ಕೆ ಎಂದಿಗಾದರೂ ಸಾಧ್ಯ ಆಗ್ತದಾ ನಂಗೆ?

 7. neelihoovu ಹೇಳುತ್ತಾರೆ:

  ಪ್ರೀತಿಯ ಸುಪ್ರೀ,

  *ಅದೆಲ್ಲಾ ಪ್ರೀತಿಯಿಂದ ಹುಟ್ಟುವ ಹೊಟ್ಟೆಕಿಚ್ಚು. ನಾನು ಪ್ರೀತಿಯ ವಿಚಾರದಲ್ಲಿ ಎಷ್ಟು ಕೊಟ್ಟರೂ ತೃಪ್ತಿಯಾಗದ ಬಕಾಸುರ ಎಂಬುದು ನಿಮಗೆ ತಿಳಿಯದ ವಿಷಯವೆ?..:-)

  *ಅಂದ ಹಾಗೆ ಈ ಕವನ ನಿಮ್ಮ “ದೋಣಿ ನಿರ್ಲಿಪ್ತ” ಕವನದಿಂದ ಸ್ಪೂರ್ತಿ ಪಡೆದಿದೆ. ಆ ಕವನ ಮತ್ತು ನನ್ನ ದೈನಂದಿನ speed boat ಪಯಣ ದ ನಡುವೆ ಮೂಡಿದ ಕಲ್ಪನೆಯಿಂದ ಹುಟ್ಟಿದ್ದು ಇದು.

  *ನನ್ನನ್ನು ನಿಮ್ಮ ’ತೀರಾ ಆತ್ಮೀಯ’ ವಲಯದೊಳಗೆ ಸೇರಿಸಿಕೊಂಡು ಭಾವುಕನನ್ನಾಗಿಸಿದಿರಿ. ತುಂಬಾ ಖುಷಿಯಾಗ್ತಿದೆ ಕಣ್ರಿ..:-)

  *ನಿಮ್ಮ ಮಾತು ನೂರಕ್ಕೆ ನೂರು ನಿಜ. ಅದೇ ಕಾರಣಕ್ಕೇನೊ, ಬ್ಲಾಗ್ ನಲ್ಲಿ ನನ್ನ ಹೆಸರನ್ನು ಆದಷ್ಟೂ ಕಡಿಮೆ ಬಳಸುತಿದ್ದೇನೆ.
  ಆದರೆ ಅಂತಹ ಆತ್ಮೀಯತೆಯಿಂದ ಚೆನ್ನಾಗಿಲ್ಲದ್ದನ್ನು ನೇರವಾಗಿ (ನೋವಾಗದಂತೆ) ತೆಗಳುವ ಸ್ವಾತಂತ್ರ್ಯವೂ ಸಿಗುತ್ತದಲ್ವೆ? ಅದನ್ನು ದಯವಿಟ್ಟು ಬಳಸಿಕೊಳ್ಳಿ ಅಂತ ನಿಮಗೆ ಪದೇ ಪದೇ ಹೇಳುತ್ತಿರುತ್ತೇನೆ.

  ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್ ಸುಪ್ರೀ..:-)

 8. ಪಲ್ಲವಿ ಎಸ್‌. ಹೇಳುತ್ತಾರೆ:

  ಪ್ರೀತಿಯ ರಂಜಿತ್‌,

  ಚಳಿಗಾಲ ಬರುತ್ತಿದೆ, ಈ ’ಫ್ಯಾನ್‌’ ಬೇಕಾ? ಅದರಲ್ಲೂ ದೊಡ್ಡ ಫ್ಯಾನ್‌! ನೆನಪಿಸಿಕೊಂಡರೇ ನಡುಗುವಂತಾಗುತ್ತದೆ 🙂

  ಮನಸ್ಸಿಗಿಂತ ಸೊಗಸಾದ ಕನ್ನಡಿ ಬೇಕೆ? ಎಷ್ಟೋ ಸಾರಿ, ಅದು ನನ್ನ ಕವಿತೆಗಳನ್ನು ತಿರಸ್ಕರಿಸುತ್ತದೆ. ಒಮ್ಮೊಮ್ಮೆ ನಾನೇ ಅಹಂಗೆ ಪೆಟ್ಟು ಬಿದ್ದವಳಂತೆ, ಅದರ ಮಾತನ್ನು ತಿರಸ್ಕರಿಸಿ ಬ್ಲಾಗ್‌ಗೆ ಹಾಕಿದ್ದೇನೆ.

  ರಾತ್ರಿ ಓದುವುದು ನನಗೆ ತುಂಬ ಇಷ್ಟದ ಸಂಗತಿ. ನನ್ನ ಬಹುತೇಕ ಬರವಣಿಗೆಗಳನ್ನು, ಕನಸುಗಳನ್ನು ಹಾಗೂ ಭಾವನೆಗಳನ್ನು ಅದು ಪೋಷಿಸಿದೆ. ಸ್ಫೂರ್ತಿ ಕೊಟ್ಟಿದೆ.

  ಆದರೆ, ಕವಿತೆ ಎಂಬುದು ಭಾವನೆಗಳೆಂಬ ಹಾಲಿನಿಂದ ಹುಟ್ಟುವ ಕೆನೆಯಂಥದು. ಗಟ್ಟಿ, ದಟ್ಟ ಭಾವನೆಗಳಿಲ್ಲದೇ ಕವಿತೆ ಹುಟ್ಟುವುದು ಕಷ್ಟ. ಹೆಸರಿನಲ್ಲಿ ಪಲ್ಲವಿ ಇದ್ದ ಮಾತ್ರಕ್ಕೆ ಕವಿತೆ ಒಲಿದುಬಿಡುತ್ತದಾ?

  ಹೀಗಾಗಿ, ಗದ್ಯದಲ್ಲೇ ಪದ್ಯದ ಸೊಗಡಿನ ಪೌಡರ್‌ ಲೇಪಿಸಿ ಬ್ಲಾಗ್‌ನಲ್ಲಿ ಹರಿಬಿಡುವ ಕೆಟ್ಟಚಾಳಿ ರೂಢಿಸಿಕೊಂಡಿದ್ದೇನೆ. ಪೌಡರ್‌ ಮಾತ್ರ ಪದ್ಯ, ಹಿಂದಿನದೆಲ್ಲ ಅಷ್ಟೇನೂ ಚೆನ್ನಾಗಿಲ್ಲದ ಗದ್ಯ.

  ಆದರೂ, ಪದ್ಯದ ಪ್ರಯತ್ನ ಮಾತ್ರ ಬಿಟ್ಟಿಲ್ಲ. ಸದ್ಯಕ್ಕೆ ಆ ಹುಚ್ಚು ಬಿಡುವ ಲಕ್ಷಣಗಳೂ ಕಾಣುತ್ತಿಲ್ಲ.

 9. neelihoovu ಹೇಳುತ್ತಾರೆ:

  ಪಲ್ಲವೀ,

  ಚಳಿಗಾಲ ಬರುತ್ತದೆ, ಹೋಗುತ್ತದೆ…..ಈಗ ಚಳಿಗಾಲವೆಂದು ನಿರಾಕರಿಸಿದರೆ ಮುಂದೆ ಕಾದಿರುವ ಬೇಸಗೆಯಲಿ ಫ್ಯಾನ್ ಇಲ್ಲದೇ ಹೋದಾವು…
  ಈ ಫ್ಯಾನ್ ಎಂಬುದು ನೀವು ಬೇಡವೆಂದರೂ ಹೋಗಲಾರದ್ದು…ಯಾವಾಗಲೂ ಜತೆಗಿರುವಂತದ್ದು…:-)

  ನಿಮ್ಮ ಗದ್ಯ ಮುದ್ದು ಮಗುವ ಮುಖಕೆ ಪೌಡರ್ ಹಾಕಿ, ಮಿದು ಕೆನ್ನೆಗೊಂದು ಬೊಟ್ಟಿಟ್ಟಂತಿದೆ.
  ದಯವಿಟ್ಟು ಕೆಟ್ಟ ಚಾಳಿ ಅಂತೆಲ್ಲಾ ಹೇಳಬೇಡಿ.

  ಪದ್ಯದ ಪ್ರಯತ್ನ ಮಾಡುತಿರಿ. ಜತೆಗೆ ನಾವಿದ್ದೇ ಇರುತ್ತೇವಲ್ಲ.

 10. ಶಿವು.ಕೆ ಹೇಳುತ್ತಾರೆ:

  ಒಡನೆ ಹತ್ತಿಕೊಂಡಿವೆ ದೀಪಗಳು, ಯಾರನ್ನು ಸಂತೈಸುತ್ತಾನೆ ದೇವರಿಂದು ? ಸಾಲುಗಳು ತುಂಬಾ ಚೆನ್ನಾಗಿವೆ. ಮರಿ ಹಡಗಿನಲ್ಲಿ ಕುಳಿತು ಅನುಭವಿಸಿದಂತೆ ಭಾಸವಾಗುತ್ತದೆ! good!
  ಶಿವು.ಕೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s