ನನ್ನ ಪ್ರೀತಿಯ ಹುಡುಗಿಯ ಮದುವೆಯಲಿ…!

Posted: ನವೆಂಬರ್ 15, 2008 in ಕವಿತೆ

ಬಾಗಿಲ ತೋರಣದ ಮಧ್ಯೆ
ನೇಣು ಹಾಕಿಕೊಂಡ ಎಲೆ
ಆಗಬೇಕಿದೆ ನಾನೀಗ..

ಮದುಮಗ ಉಂಗುರವ
ತೊಡಿಸಲಾಗದಂತೆ
ನಿನ್ನ ಕೈ ಬೆರಳ
ಗಾಯವಾಗಬೇಕಿದೆ

ಭಟ್ಟರ ನಾಲಗೆ ತೊಡರುವಂತೆ
ಮಾಡುವ ಕಠಿಣ ಸಂಸ್ಕೃತ
ಪದವಾಗಬೇಕಿದೆ

ಕೊನೆ ಪಕ್ಷ ,
ಬೀಗರ ತಟ್ಟೆಯಲ್ಲಿನ ಅವರೆಕಾಳು
ಉಪ್ಪಿಟ್ಟಿನಲ್ಲಿರುವ ಜಿರಳೆಯ
ಕಾಲಾದರೂ ಆಗಬೇಕಿದೆ
ಅರ್ಜೆಂಟಾಗಿ ನಾನೀಗ..!

( ಮೊದಲು ಬರೆದಿದ್ದ ಕವಿತೆಗೊಂದು ಹೊಸ ತೇಪೆ ಹಾಕಿ ಪ್ರಕಟಿಸುತ್ತಿದ್ದೇನೆ  )

Advertisements
ಟಿಪ್ಪಣಿಗಳು
 1. ಶಶಿಕಿರಣ್ ಹೇಳುತ್ತಾರೆ:

  ಅಂತು ನಿಮ್ ಹುಡುಗಿ ಮದುವೇಲಿ ಖಳನಾಯಕ ಆಗ್ಬೇಕು ಅಂತ Decide ಮಾಡಿದಿರಾ [:)]

 2. ಪಲ್ಲವಿ ಎಸ್‌ ಹೇಳುತ್ತಾರೆ:

  ನೀಲಿ ಹೂ ನೋವಿನಿಂದ ಕೆಂಪಾಗಿದೆ
  ಪ್ರೀತಿಯ ಉಸಿರು ತಾಕದೆ ನೀಲಿಗಟ್ಟಿದೆ
  ತೋರಣದೆಲೆಯ ನೇಣು ಏಕೆ ರಂಜಿತ್‌?
  ಅವಳ ಹೃದಯಕ್ಕೆ ನುಗ್ಗಿ, ಅದೇ ಸಕತ್‌

 3. shivuu.k ಹೇಳುತ್ತಾರೆ:

  ರಂಜಿತ್, ]
  ನಿಮಗ್ಯಾಕೆ ಬಂತು ಇಂಥ ಕೆಟ್ಟ ಬುದ್ಧಿ ! ನೆಮ್ಮದಿ ಬ್ಲಾಗಿನಲ್ಲಿ ಬರೆದುಕೊಂಡಿರುವುದು ಬಿಟ್ಟು ! ಹಳೆಯದನ್ನು ಮರೆತುಬಿಡಿ. ಹೊಸತನ್ನು ಹುಡುಕೋಣ ಬನ್ನಿ ಎಂದಷ್ಟೇ ಹೇಳಬಲ್ಲೆ.

 4. ಪ್ರದೀಪ್ ಹೇಳುತ್ತಾರೆ:

  ನಿನ್ನೆಯ ಕಡಲಲ್ಲಿ ಈಜದಿರು,
  ಇಂದಿನ ಪಥದಲ್ಲಿ ಸಾಗು..
  ನಾಳೆಯ ಗುರಿಯ ಸೇರು!
  🙂

 5. prakash hegde ಹೇಳುತ್ತಾರೆ:

  ಕವನ ಚೆನ್ನಾಗಿದೆ.. ಹತಾಶೆಯಲ್ಲಿ..ಆಸೆಯನ್ನು.. ಹುಡುಕುತ್ತಿದ್ದೀರಿ.. ಚೆನ್ನಾಗಿದೆ..!!

 6. ರಂಜಿತ್ ಹೇಳುತ್ತಾರೆ:

  ಶಶಿ,

  “ಖಳನಾಯಕ” ಪದ ಹೊಂದುತ್ತಿಲ್ಲ….”ನಿಸ್ಸಹಾಯಕ” ಪದ ಸರಿಹೋಗಬಹುದೇನೋ ನೋಡಿ…:)

 7. ರಂಜಿತ್ ಹೇಳುತ್ತಾರೆ:

  ಪ್ರಿಯ ಪಲ್ಲವೀ,

  ಇದು ಭಾರಿ ಮೋಸ ಅಲ್ಲವೇ ಪಲ್ಲವೀ,

  ಕೈಕೊಟ್ಟೋಳು ಅಂತ ತಿಳಿದೂ ನೀ ಆಕೆ ಪರ ವಹಿಸುವಿ,

  ಹೃದಯಕ್ಕೇ ಲಗ್ಗೆ ಹಾಕಬೇಕಿತ್ತು ರಂಜಿತ್ ಅನ್ನುವಿ,

  ಆದ್ರೆ ನಿಜ ಏನಂದ್ರೆ ನನಗೆ(!) ಲಾಯಕ್ಕಿಲ್ಲ ಆ ಚೆಲುವಿ..!

 8. ರಂಜಿತ್ ಹೇಳುತ್ತಾರೆ:

  ಪ್ರೀತಿಯ ಶಿವು,

  ಒಂದು ಸಲ ಕವಿತೆ ಬರೆದಾದ ಮೇಲೆ ಅದು ಪಡೆದುಕೊಳ್ಳುವ ಅರ್ಥ, ಗಿಟ್ಟಿಸಿಕೊಳ್ಳುವ ಮೌಲ್ಯ, ಓದುಗನ ಮನದಲ್ಲಿ ಮೂಡಿಸಬಹುದಾದ ಪುಳಕ, “ಕೆಟ್ಟ ಕವನವಪ್ಪಾ” ಎಂದು ಮುಚ್ಚಿಬಿಡುವ ಎದೆಯ ಚಿಲಕ….ಇವ್ಯಾವುದೂ ಲೇಖಕನ ಹಿಡಿತಕ್ಕೆ ಸಿಕ್ಕದ್ದು.

  ಈ ಕವನಕ್ಕೆ ಇವಿಷ್ಟೆ ಅರ್ಥ ಎಂದು ಯಾವ ಲೇಖಕನೂ ಚೌಕಟ್ಟು ಹಾಕಿಕೊಂಡು ಕೂರಲಾರ.

  ಕವಿತೆಯೊಂದನು ಹೆತ್ತಾದ ಮೇಲೆ ಒಬ್ಬೊಬ್ಬ ಓದುಗ ಒಂದೊಂದು ಅಭಿಪ್ರಾಯ ನೀಡುತ್ತಾ ಹೋದಾಗ ಲೇಖಕನಾದವನು, ಪುಂಡಾಟ ಆಡುವ ಮಗುವನ್ನು ಅಮ್ಮ ಮರೆಯಲ್ಲಿ ನಿಂತು ನೋಡುವಂತೆ ಮುದ ಅನುಭವಿಸಬೇಕಷ್ಟೇ..:)

  ಕವಿತೆ ಬೆಳೆಯುತ್ತದೆ,ನಲಿಯುತ್ತದೆ, ಬೀಳುತ್ತದೆ, ನಿರ್ಲಕ್ಷ್ಯಕ್ಕೊಳಗಾಗುತ್ತದೆ..ಇದೆಲ್ಲವನ್ನು ಬರೆದವನು ಕೂತು ನೋಡುತಿರಬೇಕಷ್ಟೇ.

  ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಹುಡುಗಿಯ ಮದುವೆ ಇನ್ನೊಬ್ಬನ ಜತೆ ಎಂದು ತಿಳಿಯುವಾಗ ಉಂಟಾಗುವ ನಿಸ್ಸಹಾಯಕತೆ, ತಳಮಳ, ಅಳಲು ಇದನ್ನಷ್ಟೇ ಪದಗಳಿಗೆ ಇಳಿಸಿರುವೆ..

  ಆ ಕ್ಷಣದ ಭಾವವಷ್ಟೇ ದಾಖಲಿಸುತ್ತಿದೆ ಕವಿತೆ.

  ನಿಮ್ಮ ಅನಿಸಿಕೆ ಕವಿತೆಯ ಭಾವ ತೀವ್ರತೆ ಗೆ ಸಂದ ಕಾಂಪ್ಲಿಮೆಂಟ್ ಅಂದುಕೊಳ್ಳುತ್ತಿದ್ದೇನೆ.

  ಥ್ಯಾಂಕ್ಸ್ ಸರ್..

  ಪ್ರೀತಿಯಿರಲಿ..

 9. ರಂಜಿತ್ ಹೇಳುತ್ತಾರೆ:

  ಪ್ರದೀಪ್,

  ಗೆಳೆಯರ, ಹಿರಿಯರ ಪ್ರೀತಿಯ ಆಶೀರ್ವಾದದಿಂದ ಇಂದಿನ ಪಥದಲ್ಲಿ ರಥದಲ್ಲೇ ಸಾಗುತ್ತಿದ್ದೇನೆ..:)

  ಅದರಲ್ಲಿ ನಿಮ್ಮದೂ ಸೇರಿಕೊಂಡಿದೆ ಅಂದುಕೊಳ್ಳುತ್ತಿದ್ದೇನೆ..

  ಥ್ಯಾಂಕ್ಸ್ ಸರ್.

 10. ರಂಜಿತ್ ಹೇಳುತ್ತಾರೆ:

  ಪ್ರಕಾಶ್ ಹೆಗಡೆ,

  ಧನ್ಯವಾದಗಳು… ಆ ಹುಡುಗನ ನಿಸ್ಸಹಾಯ’ಕತೆ’ಯನ್ನು ಚೆನ್ನಾಗಿ ಮೊದಲ ಓದಿನಲ್ಲಿಯೇ ಗ್ರಹಿಸಿದ್ದೀರಿ…:)

  ಬ್ಲಾಗಿಗೆ ಭೇಟಿ ನೀಡುತ್ತಿರಿ..

 11. Sushrutha ಹೇಳುತ್ತಾರೆ:

  ದೃಷ್ಟಿ ಅರಗಿಸಿಕೊಳ್ಳಲಿಕ್ಕೆ ಕಷ್ಟ ಆದ್ರೂ, ಕಲ್ಪನೆಗಳು ಮಸ್ತಾಗಿವೆ. 😉

 12. Tejaswini ಹೇಳುತ್ತಾರೆ:

  ರಂಜಿತ್,

  ನೋವು, ವ್ಯಂಗ್ಯ ಹಾಗೂ ಹಾಸ್ಯ ಮಿಳಿತ ವಿನೂತನ ಶೈಲಿಯ ಕವನ ತುಂಬಾ ಇಷ್ಟವಾಯಿತು.

  ಒಂದು ಚಿಕ್ಕ ಸಲಹೆ… ಅಂತಿಮವಾಗಿ ಆ ಹುಡುಗಿಯ ತಲೆಗೆ ಬೀಳುವ ಅಕ್ಷತೆಕಾಳಾದರೂ ಆಗಬೇಕಿತ್ತು ಎಂದು ಹಾರೈಸಿ.. ಆ ಹುಡುಗನ ಅಸಹಾಯಕತೆ, ನೋವು, ಹತಾಶೆ ಎಲ್ಲಾ ಅರ್ಧದಷ್ಟಾದರೂ ಕಡಿಮೆ ಆಗದಿದ್ದರೆ ಹೇಳಿ. ಕ್ಷಮೆ, ಕ್ಷಮಿಸುವವನಿಗೆ ಹಾಗೂ ಕ್ಷಮೆಗೊಳಲ್ಪಡುವವನಿಗೆ(ಆತನಿಗೆ ನಿಜವಾಗಿಯೂ ಪಶ್ಚಾತ್ತಾಪವಾಗಿದ್ದರೆ) ಇಬ್ಬರಿಗೂ ಒಂದು ತರಹದ ನೆಮ್ಮದೆ ತರುತ್ತದೆ…:) (ಇದು ನನ್ನ ವೈಯಕ್ತಿಕ ಅನಿಸಿಕೆ)

 13. sundaranadu ಹೇಳುತ್ತಾರೆ:

  hello neeli hoove,

  neevu avalanna preetisiddiri. andare avalu chennagirabeku taane. ade taane preeti. avalu avaligistavada preetiya hudugananna arisikondare, avalu chennagirabahudallave. avala geluvige, santhoshakke haraisi. elladakku devaniddane. preetiye devarallave?

  Preetiyondige nimma abhimani,
  Rajanna

 14. ರಂಜಿತ್ ಹೇಳುತ್ತಾರೆ:

  ತೇಜಕ್ಕ,

  ನೀವು ಹೇಳುವುದು ರೂಪಾಯಿಗೆ ಹದಿನಾರಾಣೆ ನಿಜ. ಆಕೆ ಎಲ್ಲಾದರೂ ಖುಷಿಯಾಗಿಲ್ಲದೇ ಈತನ ನೆಮ್ಮದಿ ಹೇಗೆ ಸಾಧ್ಯ? ಇಂಥ ಅಲೋಚನೆ ಬಂದೂ ಪಶ್ಚಾತ್ತಾಪ ಪಡದಿದ್ದರೆ ಅದೆಂಥ ಪ್ರೀತಿ? ಕೊನೆಯ ಪಕ್ಷ ಅಂತರಾತ್ಮನ ಬಳಿಯಾದರೂ ಕ್ಷಮೆ ಬೇಡದೇ ಹೋದರೆ, ಅದೆಂಥ ಜೀವ?

  ಆದರೆ ಅದೆಲ್ಲಾ ನಂತರದ್ದಾಯಿತು.

  ಅಂಥ ವಿಷಯ ತಿಳಿದ ಮನಸ್ಸು ಹೇಗಿರುತ್ತೆ ಅಂತಷ್ಟೇ ನನಗೆ ಹೇಳುವುದಿತ್ತು. ಪೆಟ್ಟು ತಿಂದ ಮನದ ವಿಲವಿಲವನ್ನು ಪದಗಳಲ್ಲಿ ಹೇಳಬೇಕಿತ್ತು.

  ನಾನು ಬರೆದಿದ್ದರಲ್ಲಿ, ಬರೆದ ನಂತರ ತೀವ್ರ ಖುಷಿಕೊಟ್ಟ ಕವಿತೆಗಳ ಪಟ್ಟಿಯಲ್ಲಿ ಈ ಕವಿತೆ ಮತ್ತು “ಅಮ್ಮ” ಇದೆ, ಅದೆರಡೂ ನಿಮಗಿಷ್ಟ ಆಗಿದ್ದು ಸಂತೋಷವಾಯಿತು ತೇಜಕ್ಕ.

  ಪ್ರೀತಿಯಿರಲಿ..

 15. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ಸುಶ್ರುತ…

  ಕವಿಯೇ ಹಾಗಲ್ಲವೇ…ಅರಗಿಸಿಕೊಳ್ಳಲಾಗದ, ಅಡಗಿಸಿಕೊಳ್ಳಲಾಗದ ನೋವುಗಳನ್ನು, ಚಂದದ ಕಲ್ಪನೆಯ ಪ್ಯಾಕೆಟ್ಟಿನೊಳಗಿಟ್ಟು ಮಾರುವವ..:)

 16. rohini ಹೇಳುತ್ತಾರೆ:

  ನೇಣು ಹಾಕಿಕೊಂಡ ಎಲೆ, ಗಾಯ, ಸಂಸ್ಕೃತಪದ, ಜಿರಳೆಯ ಕಾಲಾದರೂ ಆಗಬೇಕಿದೆ.

  higella agiyadaru ii maduvena nillisabeku annodu nimma asena? nimma nissahayakathe chennagi bicchittidira.

 17. ರಂಜಿತ್ ಹೇಳುತ್ತಾರೆ:

  ರಾಜಣ್ಣ,

  ಅಯ್ಯೋ!:-) ಜಗತ್ತಿನ ಅತ್ಯಂತ ರೋಮಾಂಟಿಕ್ ದೇಶದಲ್ಲಿ, ಒಂಟಿಯಾಗಿದ್ದುಕೊಂಡು, ಪಾಲಿಗೆ ಬಂದ ಕೆಲಸ ನಿರ್ವಹಿಸುತ್ತಾ, ನೆಮ್ಮದಿಯಾಗಿ ಬ್ಲಾಗಿನಲ್ಲಿ ಬರೆದುಕೊಂಡಿರುವ ಬಡಪಾಯಿ ನಾನು.

  ನನ್ನನ್ಯಾಕೆ ಇಲ್ಲಿ ಮಧ್ಯೆ ಕರೆತಂದಿರಿ?;-)

  ಕವಿತೆಯ ’ನಾನು’ ನಾನಲ್ಲ..

  ಇದನ್ನು ಹೊರತುಪಡಿಸಿ ನೀವು ಪ್ರೀತಿಯ ಬಗ್ಗೆ ಬರೆದ ಮಾತು ಸಂಪೂರ್ಣ ಸತ್ಯ.

  ತೇಜಕ್ಕನಿಗೆ ಬರೆದ ಕಾಮೆಂಟ್ ನಿಮಗೂ ಸೂಕ್ತವಾಗಬಹುದು.

  ಅಷ್ಟು ನಿಸ್ಸಹಾಯಕತೆಯಿಂದ ಭಾವ ವ್ಯಕ್ತಪಡಿಸುವ ಹುಡುಗ ಅದೆಷ್ಟು ಆಕೆಯನ್ನು ಪ್ರೀತಿಸುತ್ತಿರಬೇಕು! ಹೀಗೆ ಹೇಳಿದ್ದಕ್ಕೆ ನಂತರ ಅದೆಷ್ಟು ನೊಂದುಕೊಂಡಿರಬೇಕು?!

  ಈ ನೋವಿನ ಘಳಿಗೆ ಕುರಿತು ಬರೆವಾಗ ಅದರ ಹಿಂದಿನ, ಮುಂದಿನ ಭಾವಗಳನ್ನು ತುರುಕಿಸುವ ಅಗತ್ಯವಿದೆಯಾ?

  ಇದು ನನ್ನ ಅನಿಸಿಕೆ.

  ನೀವು ಹಿರಿಯರು ಅನ್ನಿಸುತ್ತದೆ. ಚಿಕ್ಕ ವಯಸ್ಸಿನವನನ್ನು ಅಭಿಮಾನಿ ಅನ್ನುತ್ತಿದ್ದೀರಿ.

  ನಿಮ್ಮ ಪ್ರೀತಿಗೆ ಋಣಿ.

 18. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ಥ್ಯಾಂಕ್ಸ್ ನಿಮ್ಮ ಅನಿಸಿಕೆಗೆ…

  ಭೇಟಿ ನೀಡುತ್ತಿರಿ.

 19. ವಿಜಯರಾಜ್ ಕನ್ನಂತ ಹೇಳುತ್ತಾರೆ:

  abba….
  kaviteya cheluvige mecchuge hELalaa illa nimma viShaadakke bEsara paDalaa gottaagtaa illa…

 20. ರಂಜಿತ್ ಹೇಳುತ್ತಾರೆ:

  ವಿಜಯ್ ರಾಜ್ ಸರ್‍,

  ಕವಿತೆ ಚೆಲುವಾಗಿದ್ದರೆ ಬಿಂದಾಸ್ ಆಗಿ ಖುಷಿಪಡಿ. ನನಗೆ ಯಾವ ವಿಷಾದವೂ ಇಲ್ಲ.

  ಈ ಹಿಂದೆ “ನನ್ನ ಪ್ರೀತಿಯ ರೀತಿ” ಅಂತ ಒಂದು ಕವನ ಬರೆದಿರುವೆ, ಅದರಲ್ಲಿ ದೀಪಾವಳಿ, ಮಸ್ಸಾಜು, ನಿದಿರೆಯಲಿ ಕದಿವ ಮುತ್ತು ಅಂತೆಲ್ಲಾ ಇದೆ. ಒಂದು ವೇಳೆ ನಾ ಬರೆದುದೆಲ್ಲಾ “ನಾನೇ” ಆಗಿದ್ದರೆ, ಅದನ್ನು ಓದಿ ನನ್ನ ಅಮ್ಮ ಬೆತ್ತ ತಗೊಂಡು ಬಾರಿಸುವುದಿಲ್ಲವೇ?;-) 🙂

  ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್…

 21. shivuu.k ಹೇಳುತ್ತಾರೆ:

  ರಂಜಿತ್,
  ನಾನು ನಿಮ್ಮ ಕವನದ ವಸ್ತು ನನಗರ್ಥವಾಗಿತ್ತು. ಆದರೆ ನಾನು ತಮಾಷೆಗೆ ನಿಮ್ಮನ್ನು ಕಾಲೆಳೆಯುವ ಪ್ರಯತ್ನವಾಗಿ ಸ್ವಲ್ಪ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದೆ. ನಿಜಕ್ಕೂ ಕವನ ನನಗೆ ಖುಷಿ ಕೊಟ್ಟಿತು. ನೀವು ನಿಮ್ಮ ಪದ್ಯದಲ್ಲಿ ಜಿರಲೆಕಾಲುಗಳನ್ನೆಲ್ಲಾ ಬಳಸಿರುವುದು ಚೆನ್ನಾಗಿದೆ.

 22. ರಂಜಿತ್ ಹೇಳುತ್ತಾರೆ:

  ಶಿವು ,

  ನನ್ನ ಮನಸ್ಸೂ, ಕಾಲೂ ತುಂಬಾ ದುರ್ಬಲ ಅನ್ನಿಸುತ್ತೆ ಸರ್‍…:)

  ನೋಡಿ ಜಾರಿಬಿಟ್ಟೆ.;-)

  ೬೦ ವರ್ಷದ ಕುರ್ತಾ ಧರಿಸಿದ ಗಡ್ಡಧಾರಿ ಸಾಹಿತಿಯಂತೆ, ಬುದ್ದಿಜೀವಿಯಂತೆ ಬರೆದುಬಿಟ್ಟೆ..:)

  ಪ್ರೀತಿಯಿರಲಿ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s