ಹಾರುವ ಹಕ್ಕಿಯ ಕಾಲ್ಕೆಳಗೆ ಇಡೀ ಜಗತ್ತು!

Posted: ಡಿಸೆಂಬರ್ 11, 2008 in ದಿನದ ಎಸಳುಗಳು...

 

emptyness21

 

ಕಿಟಕಿಯಾಚೆ ಜೋರಾಗಿ ಗಣಪತಿ ಬಪ್ಪಾ ಮೊರ್ಯಾ ಕೇಳುತ್ತಿದೆ. ಅಸಹನೆಯಿಂದ ಕಿಟಕಿ ಮುಚ್ಚಿ ಕೂತರೆ, ಈ ಸಲ ಗೆಳೆಯರ್ಯಾರೂ ಹಬ್ಬಕ್ಕೆ ಮನೆಗೆ ಕರೆಯದೇ ಹೋದರಾ ಎಂಬ ಆಲೋಚನೆ. ಇಂಟರ್ನೆಟ್ಟು ತೆಗೆದರೆ ಸಾಕು ಹ್ಯಾಪಿ ಗಣೇಶ ಚತುರ್ಥಿಯದೇ ರಗಳೆ. ಚುರುಗುಟ್ಟುವ ಹೊಟ್ಟೆ, ಆಗಷ್ಟೇ ಖಾಲಿಯಾದ ಅಡುಗೆ ಮನೆಯ ಡಬ್ಬಿಯನ್ನು ನೆನಪಿಸುತ್ತದೆ. ದರ್ಶಿನಿಯ ಹುಡುಗರೂ ತಮ್ಮ ಗುಂಪುಗಳಲ್ಲೇ ಹಬ್ಬ ಆಚರಿಸುತ್ತಿದ್ದಾರೆ. ಪಾತ್ರೆ ತೊಳೆಯುವ ಚಿಣ್ಣ ಇವತ್ತು ಕಾಲು ತುರಿಸಿಕೊಳ್ಳುವಂತಿಲ್ಲ. ಬಚ್ಚಲು ಮನೆಯ ಚೌಕಟ್ಟಿನಿಂದ ಹೊರಗೆ ಇಣುಕುತವೆ ಇಂದವನ ಕಣ್ಣುಗಳು.

ಗೋಡೆಗೆ ನೇತು ಹಾಕಿಕೊಂಡ ಕ್ಯಾಲೆಂಡರೂ ಭಾರಿಯಾದ ಗಣಪತಿ ಪೋಟೋವನ್ನು ಹೊತ್ತಿದೆ, ಅವನ ಪಕ್ಕದ ಇಲಿ ಲಾಡನ್ನು ಮೆಲ್ಲುತ್ತಾ ಮೆಲ್ಲಗೆ ನನ್ನನ್ನು ಉರಿಸುತ್ತಿದೆ.

 

ಹರಿದಿದ್ದರಿಂದ ಸೂಟ್ ಕೇಸಿನ ಜೈಲಿನೊಳಗೆ ಸೇರಿಸಲ್ಪಟ್ಟ ದುಬಾರಿ ಪ್ಯಾಂಟು ಯಾವಾಗ ಊರಿಗೆ ಹೋಗ್ತಿಯಪ್ಪಾ? ಅಂತ ದೈನ್ಯತೆಯಿಂದ ಬೇಡಿಕೊಳ್ಳುತ್ತಿದೆ, ಅದಕ್ಕೆ ಅಮ್ಮನ ಕೈಯಿಂದಲೇ ಆಪರೇಷನ್ ಆಗಬೇಕಿದೆ. ಹಬ್ಬದ ಸಡಗರವಿಲ್ಲದ ಜೀವ ಸುಮ್ಮನೆ ಅದರ ನೆನಪನ್ನು ಮೂಲೆಗೆ ತಳ್ಳಿ ಮುಂದಿನ ಸಲ ಊರಿಗೆ ಯಾವಾಗ ಹೋಗೋಣ? ಅಂತ ಖುಷಿಯಿಂದ ಚಿಂತಿಸುತ್ತ ಎಲ್ಲ ದುಃಖವನ್ನೂ ಮೀರುವ ಪ್ರಯತ್ನ ಮಾಡುತಿದೆ.

 

ಇವೆಲ್ಲ ತಮ್ಮ ಮನೆ ಬಿಟ್ಟು ತಮ್ಮನ್ನು ಬೇರೆ ಜಾಗದಲ್ಲಿ ಅನಿವಾರ್ಯತೆಯಿಂದಲೋ ಅಥವಾ ಬೇರೆ ಬೇರೆ ಕಾರಣಗಳಿಂದಲೋ ಉಳಿಯಬೇಕಾಗಿ ಬಂದವರ ಮನದ ಒಳಸುಳಿಯ ಕತೆಗಳು. ಅಲ್ಲಿ ಭೋರೆಂದು ಅಳುವ ದುಃಖವಿರುವುದಿಲ್ಲ. ದುಃಖ ಒಳಗೆಲ್ಲೋ ಮೆಲ್ಲಗೆ ತನ್ನಷ್ಟಕ್ಕೆ ಹರಿಯುತ್ತಿರುತ್ತದೆ. ಮುಖದ ಮೇಲೆ ಅದನ್ನೆಲ್ಲಾ ತಳ್ಳಿ ಹಾಕುವುದಕ್ಕೋಸ್ಕರವೇ ತೇಪೆ ಹಚ್ಚಿದಂತಿರುವ ನಗು ಪೇಲವವಾಗಿ ಕಾಣಿಸುತ್ತಿರುತ್ತದೆ.

 

ಹಿಂದಿನ ಕಾಲದ ಕೂಡು ಕುಟುಂಬ ವ್ಯವಸ್ಥೆಯಲ್ಲಿ ಮನೆಯಿಂದ ಹೊರಹೋಗುವ ಅವಕಾಶಗಳೇ ಕಡಿಮೆ. ಇಂತಹ ನೋವು ಮದುವೆಯಾಗಿ ಹೋಗುವ ಹುಡುಗಿಗೆ ಮಾತ್ರವಿತ್ತು. ಅದನ್ನು ಪಾತ್ರೆಯನ್ನು ತೀರ್ವ ಆಕ್ರೋಶದಿಂದ ಉಜ್ಜುತ್ತಲೋ ಅಥವಾ ದುಃಖವನ್ನೆಲ್ಲಾ ಈರುಳ್ಳಿ ಕತ್ತರಿಸುವ ನೆಪದಲ್ಲೋ ಹೊರಹಾಕುತ್ತಿದ್ದಿರಬೇಕು. ಈಗಿನ ನ್ಯೂಕ್ಲಿಯರ್ ಫ್ಯಾಮಿಲಿ ಅವತಾರದಲ್ಲಿ ಹಣಕ್ಕಾಗಿ, ಒಳ್ಳೆಯ ಭವಿಷ್ಯಕ್ಕಾಗಿ ಮನೆಬಿಟ್ಟು ತಮ್ಮನ್ನು ಬೇರೆ ಕಡೆಯಲ್ಲಿ ನೆಟ್ಟು ಹೋರಾಟ ಮಾಡಲೇ ಬೇಕಾದ ಪರಿಸ್ಥಿತಿ.

emptyness1

 

ಮುಖ್ಯವಾಗಿ ಓದಲೆಂದು ಕಡಿಮೆ ವಯಸ್ಸಿನಲ್ಲಿ ಮನೆಯಿಂದ ಹೊರತಳ್ಳಲ್ಪಟ್ಟ  ಹುಡುಗರ ವ್ಯಥೆಗೆ ಭಾರ ಹೆಚ್ಚು. ಅಮ್ಮನ ಸಹಾಯ ಅಪ್ಪನ ಪ್ರೀತಿ ಮತ್ತು ಪರ್ಸಿನ ಮೇಲೆಯೇ ಅವಲಂಬಿತರಾದ ಮಕ್ಕಳು ಅವರ ಹೊರತಾದ ಪ್ರೀತಿ ಸರಕು ಕಾಣದ ಸಂತೆಯ ಪ್ರಪಂಚದಲ್ಲಿ ಒಗ್ಗಿಕೊಳ್ಳಲು ಪಡುವ ಪರಿಪಾಡು ದೇವರಿಗೇ ಪ್ರೀತಿ. ಹೃದಯವ ಗಟ್ಟಿ ಮಾಡಿಕೊಂಡಿರುವ ಮೊಬೈಲು, ಅವರ ಮನೆಯ ನೆನಪುಗಳಿಗೆ, ದುಃಖಗಳಿಗೆ ಎಂದೂ ಅಳದು.

 ಕಾಲೇಜಿನಿಂದ ಮನೆಗೆ ನಡೆದು ಬರುವಾಗ ಸಿಗುವ ಅನಾಥಾಶ್ರಮ ನೋಡಿ, ಊರು ಬಿಟ್ಟು ಬಂದ ತಾನೂ ಒಂದು ರೀತಿ ಇದೇ ಅಲ್ಲವೇ? ಅಂದುಕೊಳ್ಳುತ್ತಾ, ಹಾಸ್ಟೆಲುಗಳಿಗೆ ಟೆಂಪರರಿ ಅನಾಥರ ಆಶ್ರಮ ಅಂದ್ಯಾಕೆ ಕರೆಯಬಾರದು ಎಂದು ತನಗೆ ತಾನೇ ಜೋಕು ಮಾಡಿಕೊಳ್ಳುತ್ತದೆ ಮನಸು.

 

ನೋಡಿಕೊಳ್ಳಲು ಅಮ್ಮನಿಲ್ಲ ಪಾಪ! ಅಂದುಕೊಳ್ಳೂತ್ತ ಅವರೆಡೆಗೆ ಬರದೇ ಕರುಣೆ ತೋರುತ್ತವೆ ಖಾಯಿಲೆಗಳು. ಒಂದು ವೇಳೆ ಬಂದರೆ ಗಂಚಿ ಯಾರು ಕುಡಿಸುವವರು? ಬೈದು ಮಾತ್ರೆಯನ್ನು ಜೇನುತುಪ್ಪದಲ್ಲಿ ಕೊಡುವವರಾರು? ಇಂಜಕ್ಷನ್ನಿಗೆ ಹೆದರಿದರೆ, (ಬಲವಂತದಿಂದ) ಡಾಕ್ಟರ್ ಹತ್ತಿರ ಕರೆದೊಯ್ಯುವವರಾರು? ಎನ್ನುತ್ತಾ ಸುಮ್ಮಸುಮ್ಮನೆ ಆತಂಕಕ್ಕೊಳಗಾಗುವ ಹುಡುಗಿ ನಿಷ್ಕರುಣಿ ದಿಂಬಿಗೆ ಎಲ್ಲ ದುಃಖವನ್ನು ಕಣ್ಣೀರ ಮೂಲಕ ಹೇಳಿಕೊಳ್ತಾಳೆ.

 

ಆದರೆ ಬಹಳ ದಿನವಿರದು ಇಂಥ ತೊಳಲಾಟ. ಮನಸ್ಸು ಎಲ್ಲದಕ್ಕೂ ಅಡ್ಜಸ್ಟ್ ಆಗುತ್ತದೆ. ತನ್ನದೇ ಪ್ರೀತಿಯ ವಲಯವೊಂದು ಕಟ್ಟಿಕೊಳ್ಳುತ್ತದೆ. ಪ್ರತಿಭೆಯೊಂದರ ಮೂಲಕ ಎಲ್ಲರ ಮೆಚ್ಚುಗೆಗಳಿಸುತ್ತದೆ. ಹೇಗಾದರೂ ಕಷ್ಟಪಟ್ಟು ತನ್ನ ಬದುಕನ್ನು ಸಹನೀಯವಾಗಿಸುತ್ತವೆ.

 

ಹಾಗೆಯೇ ಈ ದೂರಗಳು ಒಂದು ನೀತಿಪಾಠವನ್ನು ಮೌನವಾಗಿ ಕಲಿಸುತ್ತದೆ. ಮನೆಯಲ್ಲಿದ್ದಾಗ ರುಚಿಯಿಲ್ಲ ಅಂತ ಎಸೆದ ತಿಂಡಿ ಹಾಸ್ಟೆಲಿನ ಅನಿವಾರ್ಯ ಆಹಾರಗಳನ್ನು ಕಷ್ಟಪಟ್ಟು ಬಾಯೊಳಗೆ ಸೇರಿಸಿಕೊಳ್ಳುವಾಗ ಅಮ್ಮ ನೆನಪಾಗ್ತಾಳೆ. ಮತ್ತೆಂದೂ ಅಮ್ಮನ ಪ್ರೀತಿಯ ತಿಂಡಿ ರುಚಿ ತಪ್ಪುವುದಿಲ್ಲ.

ಅತ್ತೆ ಮಾವನಿಂದ ಉಗಿಸಿಕೊಂಡು ಸೊಸೆ ಬಾಗಿಲು ಹಾಕಿಕೊಂಡು ಒಂಟಿಯಾಗಿ ರೂಮಿನಲ್ಲಿದ್ದಾಗ ಅಪ್ಪ-ಅಮ್ಮನೇ ಕಾಣಿಸುತ್ತಾರೆ. ಅವರ ಕಣ್ಣೊಳಗಿನ ಪ್ರೀತಿಯು ಈ ಹಿಂದೆಂದೂ ಕಾಣದಷ್ಟು ಇಷ್ಟವಾಗಿ ದಟ್ಟವಾಗಿ ಹೊಳೆಯುತ್ತಿರುತ್ತದೆ.

 

ಇಂತಹ ಹೋಮ್ ಸಿಕ್ ನೆಸ್ ಅಂತ ಕರೆಸಿಕೊಳ್ಳುವ ಖಾಯಿಲೆಗೆ ಮದ್ದೆಂದರೆ, ತಮ್ಮದೇ ಹೊಸ ಪ್ರಪಂಚ ಸೃಷ್ಠಿಸಿಕೊಳ್ಳುವುದು.  ಮಾನಸಿಕ ಪರಾವಲಂಬಿತನ ಹೊಡೆದೋಡಿಸಿಕೊಳ್ಳೂತ್ತಾ ನಿರ್ಣಯಗಳಿಗೆಲ್ಲ ತಮ್ಮನ್ನು ತಾವೇ ಒಡ್ಡಿಕೊಂಡು ಅದರ ಫಲಿತಾಂಶದ ಹೊಣೆಯನ್ನು ತಮ್ಮ ಹೆಗಲಿಗೇ ಹಾಕಿಕೊಳ್ಳುವುದು. ತಮ್ಮ ಪ್ರತಿಭೆ ಪ್ರಪಂಚಕ್ಕೆ ಅರಿವಾಗುತ್ತಿದ್ದಂತೆ ಮೆಚ್ಚಿಕೊಳ್ಳುವ ಜನ ಹತ್ತಿರಾಗುತ್ತಾರೆ. ಹೊಸ ಪ್ರಪಂಚದ ಗೆಳೆಯರಾಗುತ್ತಾರೆ. ಹೊಸತನ್ನು ಜೀರ್ಣಿಸಿಕೊಳ್ಳುವಂತಹ ಶಕ್ತಿ ಒಳಗಿನಿಂದಲೇ ಚಿಮ್ಮುತ್ತದೆ.

 

ಗೂಡಿನ ಹೊರಗೂ ಹಾರುವ ಹಕ್ಕಿ ಇಡಿ ವಿಶ್ವವೇ ತನ್ನ ಕಾಲ್ಗೆಳಗಿರುವುದನ್ನು ಕಂಡು ತನ್ನಷ್ಟಕ್ಕೆ ತಾನೇ ಹೆಮ್ಮೆಯಿಂದ ನಗುತ್ತದೆ!

 

(ಸುಪ್ರೀತ್ ರ “ಸಡಗರ” ಪತ್ರಿಕೆಗಾಗಿ ಬರೆದದ್ದು.)

 

ಪತ್ರಿಕೆ ಕೊಂಡಿ : http://kalaravapatrike.wordpress.com/

 

ಚಂದಾ ವಿವರಗಳು: http://kalaravapatrike.wordpress.com/about/

 

 

 

 

 

ಟಿಪ್ಪಣಿಗಳು
 1. shivu. ಹೇಳುತ್ತಾರೆ:

  ರಂಜಿತ್,

  ತುಂಬಾ ದಿನದ ನಂತರ ದೊಡ್ಡ ಬರಹ ಬರೆದಿದ್ದೀರಿ. ಒಂದು ರೀತಿಯ ವಿಷಾಧ ಲೇಖನದುದ್ದಕ್ಕೂ ಕಾಣದಂತೆ ಹರಿಯುತ್ತದೆ. ಓದುತ್ತಿದ್ದಂತೆ ಜಯಂತ ಕಾಯ್ಕಿಣಿಯವರ ಕೆಲವು ಕತೆಗಳು ನೆನಪಿಗೆ ಬಂತು. ಒಂದು ರೀತಿಯ ಸಾಂಕೇತಿಕ ಚಿತ್ರಗಳು ನಿಮ್ಮ ಲೇಖನದಲ್ಲಿ ಕಂಡು ಬರುತ್ತ್ದೆ. very good.. ಮುಂದುವರಿಸಿ……

 2. ವೈಶಾಲಿ ಹೇಳುತ್ತಾರೆ:

  ಹೌದು. ನಂಗೂ ಇಲ್ಲಿ ಜಯಂತ ಕಾಯ್ಕಿಣಿ ಅವರ ಶೈಲಿ ಇಣುಕಿದಂತೆ ತುಂಬಾ ಅನ್ನಿಸಿತು.
  ಇರಲಿ, ಒಳ್ಳೆಯ ಬರಹ. ಇಷ್ಟ ಆಯ್ತು. ಹೀಗೆ ಬರೆಯುತ್ತಿರಿ ರಂಜಿತ್,… ಗುಡ್ ಲಕ್.

 3. Rajesh Manjunath ಹೇಳುತ್ತಾರೆ:

  ರಂಜಿತ್
  ಲೇಖನ ಇಷ್ಟ ಆಯಿತು, ಚೆನ್ನಾಗಿ ಮೂಡಿ ಬಂದಿದೆ. ಹೀಗೆ ಮುಂದುವರಿಯಲಿ…
  -ರಾಜೇಶ್ ಮಂಜುನಾಥ್

 4. rohini ಹೇಳುತ್ತಾರೆ:

  chennagi barediddira ishtavayitu frendu
  mane bittu dura iruvavvara novu. aa novanna avare samadhana madikollo riti yella chennagi berediddira innu chennagi bareyiri.

  yochane annodondu pralaya
  chinte mada bedi geleya
  adashtu bega serikolli nimma valaya

 5. Roopa Satish ಹೇಳುತ್ತಾರೆ:

  Hey Ranjith,
  Tumba chennagide.
  Ontitanada anubhava, adarinda horabaralu maaduva prayathnagaLu…
  I think problems and solutions… eradu ide… its got a message!!!

 6. Pramod ಹೇಳುತ್ತಾರೆ:

  ಜೀವನಾನುಭವ.. ಚೆನ್ನಾಗಿ ಬದುಕಬೇಕೆ೦ಬ ವಾ೦ಛೆಯಿ೦ದ,ಮನೆ ಬಿಟ್ಟು ದೂರ ಹೋಗಿ, ಸ್ವ೦ತ ಕಾಲ ಮೇಲೆ ನಿಲ್ಲುವರೆಗಿನ ಕಷ್ಟ, ದೊಡ್ಡ ಹೋರಾಟವೇ ಸರಿ.
  ಚೆನ್ನಾಗಿದೆ, ಕಳೆದ ವರ್ಷಗಳು ಕಣ್ಣ ಮು೦ದೆ ಬ೦ದ ಹಾಗೆ ಆಯಿತು.

 7. ರಂಜಿತ್ ಹೇಳುತ್ತಾರೆ:

  ಶಿವು, ವೈಶಾಲಿ,

  ಜಯಂತ್ ಸರ್‍ ಬರಹಗಳೆಂದರೆ ಬಹಳ ಇಷ್ಟ.ಅವರ “ಬೊಗಸೆಯಲ್ಲಿ ಮಳೆ” ಎಷ್ಟು ಸಲ ಓದಿದ್ದೆನೋ ಲೆಕ್ಕವಿಟ್ಟಿಲ್ಲ.

  ಹಾಗಾಗಿ ಅರಿತೋ ಅರಿಯದೆಯೋ ಅವರ ಬರಹದ ಪ್ರಭಾವ,ಶೈಲಿ ಇದ್ದರೆ ಆಶ್ಚರ್ಯವಿಲ್ಲ.

  ಅತಿಭಾವುಕತೆಯನ್ನು ಬರಹದಿಂದ ಹೊರದೂಡುವ ಪ್ರಯತ್ನದಲ್ಲಿರುವಾಗ ಆಸರೆಯಾಗಿ ಜಯಂತ್ ಸರ್‍ ಸಿಕ್ಕಿದ್ದು ಖುಷಿಯ ವಿಷಯವೇ!:)

  ಬಹಳ ಬೇಗ ನನ್ನ ಶೈಲಿ ರೂಪಿಸಿಕೊಳ್ಳುವೆ.

  ಥ್ಯಾಂಕ್ಸ್ ..:)

 8. ರಂಜಿತ್ ಹೇಳುತ್ತಾರೆ:

  ರಾಜೇಶ್,

  ಥ್ಯಾಂಕ್ಸ್.ಹಿಂದೆಲ್ಲೋ ಹೇಳಿದಂತೆ,ನಿಮ್ಮ ಪ್ರೋತ್ಸಾಹವೇ ಪೆಟ್ರೋಲು ಬರಹಕ್ಕೆ..:)

  ಬೆನ್ತಟ್ಟುತ್ತಿರಿ.

  ರೋಹಿಣಿ,

  ಗೂಡು ಬಿಟ್ಟವರ ಪಾಡಿನ ಹಾಡು(!) ನನ್ನದೂ ಆದ್ದರಿಂದ ಲೇಖನ ಸ್ವಲ್ಪ ಚೆನ್ನಾಗಿ ಬಂತೇನೋ..:)

  ನಿಮ್ಮ ಆಜ್ಞೆಯಂತೆ ಮುಂದೆ ಇನ್ನೂ ಚೆನ್ನಾಗಿ ಬರೆವೆ,ಫ್ರೆಂಡೂ..:)

 9. ರಂಜಿತ್ ಹೇಳುತ್ತಾರೆ:

  ರೂಪ,ಪ್ರಮೋದ್,

  ಈ ಹೋಮ್ ಸಿಕ್ ನೆಸ್ ಅನ್ನೋದು ಹಾನಿಕಾರಕ ಸಮಸ್ಯೆಯಾ ? ಒಳ್ಳೆಯ ಸಮಸ್ಯೆಯಾ? ಅನ್ನುವ ಅನುಮಾನ ಇನ್ನೂ ಇದೆ ನಂಗೆ.

  ನನ್ನ ಓದಿಗೆ ಅದು ಬಹಳ ಅಡ್ಡಿ ಮಾಡಿದೆ,ಹಾಗೆಯೇ ಮನೆಯವರ ಮೇಲೆ ಪ್ರೀತಿ ಹೆಚ್ಚಲು ಅವರ ನಿಜ ಬೆಲೆ ತಿಳಿಯಲು ಅದರ ಸಹಾಯ ಹೇಳತೀರದ್ದು.

  ನಿಮ್ಮ ಅನಿಸಿಕೆಗೆ ಧನ್ಯವಾದಗಳು..

 10. kannika ಹೇಳುತ್ತಾರೆ:

  ನೋವುಗಳ ನಲಿವಾಗಿಸ ಹೊರಟಿರುವ ನೀಲಿ ಹೂವೆ,

  ನಿಮ್ಮ ಈ ಎಸಳು ನನ್ನ ನೋವಿಗೆ ದನಿಯಾದಂತಿದೆ
  ನನ್ನ ನೋವ ನಲಿವಾಗಿಸುವ ಪರಿಯ ತಿಳಿಸಿದ್ದಕ್ಕೆ,
  ತಂಗಾಳಿಯೊಂದಿಗೆ ಪರಿಮಳವ ಕಳುಹಿಸುತಿದ್ದೇನೆ
  ಇನ್ನೂ ಹಲವರ ನೋವ ತಿಳಿಯಾಗಿಸಲೆಂಬ ಹಾರೈಕೆಯೊಂದಿಗೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s