ಸೆಲೆಬ್ರಿಟಿಗಳ ಮನದ ನಗ್ನ ಅನಾವರಣ!

Posted: ಮಾರ್ಚ್ 1, 2009 in ಸಿನೆಮಾ
page-3
“ಕಿತನೇ ಅಜೀಬ್ ರಿಶ್ತೇ ಹೆ ಯಹಾನ್ ಪೇ…”
 
ಇದು ಮಧುರ್ ಭಂಡಾರ್ಕರ್ ರ “ಪೇಜ್ ೩” ಚಿತ್ರದ ಹಾಡೊಂದರ ಪಲ್ಲವಿ. ಪ್ರತೀ ಸಲವೂ ಒಂದು ವಿಶಿಷ್ಟವಾದ ಸಬ್ಜೆಕ್ಟ್ ನ್ನು ಆಯ್ದುಕೊಂಡು ನೋಡುಗರಿಗೆ ತೀವ್ರವಾದ ಶಾಕ್ ಗಳನ್ನು ಮೆಲುವಾಗಿ ನೀಡಿಕೊಂಡು ಹೋಗುವ ಚಿತ್ರಕತೆ ತಯಾರಿಸಿಕೊಂಡು ಬಡಿಸುವುದರಲ್ಲಿ ಮಧುರ್ ಸಿದ್ದಹಸ್ತರು. “ಪೇಜ್ ೩” ಬರುವ ಮೊದಲು ಚಾಂದಿನಿ ಬಾರ್ ದೊಡ್ಡ ಹಿಟ್ ಆಗಿತ್ತು. ಬಾರ್ ಹುಡುಗಿಯರ ಕುರಿತು ಇದ್ದ ಚಿತ್ರ ವಿಮರ್ಶಕರಿಂದಲೂ ಬಾಯಿ ತುಂಬಾ ಮೆಚ್ಚುಗೆ ಗಳಿಸಿತ್ತು..ಅದರ ನಂತರ ಬಂದ “ಸತ್ತಾ”, “ಆನ್” ಚಿತ್ರ ತಾರಾಗಣ ದೊಡ್ಡದಾಗಿದ್ದರೂ ಅಷ್ಟಾಗಿ ಬಾಕ್ಸ್ ಆಫೀಸ್ ಗಳಿಕೆ ಪಡೆಯಲಿಲ್ಲ. ತನ್ನ ಮ್ಯಾಜಿಕ್ ನ್ನು ಮರುಕಳಿಸಲು ಮಧುರ್ ಆಯ್ದುಕೊಂಡದ್ದು ಈ ಪೇಜ್ ೩ ಸೆಲೆಬ್ರಿಟಿಗಳ ಡಾಂಭಿಕತೆಗಳ ಬಗ್ಗೆ. ಲೇಖನದ ಮೊದಲು ನೀಡಿದ್ದ ಪಲ್ಲವಿಯ ಸಾಲು ಹೇಳುವಂತೆ ಅಲ್ಲಿನ ವಿಚಿತ್ರ ಸಂಬಂಧಗಳ ಕುರಿತು ಮನಕಲಕುವಂತೆ ವಿವರಿಸುತ್ತದೆ.
 
ಕಥೆಯ ನಾಯಕಿ ಮಾಧವಿ ಶರ್ಮಾ( ಕೊಂಕಣಾ ಸೇನ್ ಶರ್ಮಾ) ಮುಂಬೈಗೆ ಬಂದು ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿರುತ್ತಾಳೆ. ಗ್ಲಾಮರ್ ಲೋಕದ ಪಾರ್ಟಿಗಳು, ವ್ಯಕ್ತಿಗಳ ಬಗ್ಗೆ ವರದಿ ಕೊಡುವುದು ಆಕೆಯ ಕೆಲಸ. ಇದಕ್ಕೆ ಪತ್ರಿಕೆಯ ಸಂಪಾದಕರಾದ ದೀಪಕ್ ಸೂರಿ( ಬೋಮನ್ ಇರಾನಿ)ಯಿಂದ ಸಹಾಯ ದೊರೆಯುತ್ತಿರುತ್ತದೆ. ಮಾಧವಿ, ಪರ್ಲ್ ( ಸಂಧ್ಯಾ ಮೃದುಲ್) ಎಂಬ ಗಗನ ಸಖಿ ಜೊತೆ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿರುತ್ತಾಳೆ. ಹಳ್ಳಿಯಿಂದ ಬೆಳ್ಳಿತೆರೆಯ ನಾಯಕಿಯಾಗುವ ದೊಡ್ಡ ಕನಸುಗಳನ್ನು ಹೊತ್ತ ಗಾಯತ್ರಿ ಎಂಬ ಹುಡುಗಿಯೊಡನೆ ಪರಿಚಯ ಬೆಳೆದು ಆಕೆಗೆ ತನ್ನ ಮನೆಯಲ್ಲೇ ಉಳಿದುಕೊಳ್ಳುವಂತೆ ಸಹಾಯ ಮಾಡುತ್ತಾಳೆ.
 
ತನ್ನ ವೃತ್ತಿಯಲ್ಲಿ ಸೆಲೆಬ್ರಿಟಿಗಳ ಪೊಳ್ಳುತನ, ಮಾನಸಿಕ ದ್ವಂದ್ವತೆ, ಹೇಗಾದರೂ ಫೇಮಸ್ ಆಗಬೇಕೆಂಬ ಬಯಕೆ, ಹಿಪಾಕ್ರಸಿಗಳು ಇವೆಲ್ಲಾ ಅವಳಲ್ಲಿ ವಾಕರಿಕೆ ಹುಟ್ಟಿಸುತ್ತಿರುತ್ತದೆ. ಹೀಗಾಗಿ ಅವಳು ಸೀರಿಯಸ್ ಆದ, ಸಾಮಾಜಿಕ ವಿಷಯಗಳ ಬಗ್ಗೆ ವರದಿ ಕೊಡುವ ಸೆಕ್ಷನ್ ಗೆ ಬರುತ್ತಾಳೆ. ಅಲ್ಲಿ ವಿನಾಯಕ್ ಮಾನೆ(ಅತುಲ್ ಕುಲಕರ್ಣಿ) ಜತೆ ಕೆಲಸ ಮಾಡತೊಡಗುತ್ತಾಳೆ.
 
ಅಷ್ಟರಲ್ಲಿ ಪರ್ಲ್ ಉದ್ಯಮಿಯೊಬ್ಬನನ್ನು ಪ್ರೇಮಿಸಿ ಅಮೇರಿಕಾಕ್ಕೆ ಹೋಗುತ್ತಾಳೆ. ಗಾಯತ್ರಿ ನಾಯಕನೊಬ್ಬನಿಂದ ಮೋಸಹೋಗುತ್ತಾಳೆ. ಮಾಧವಿಗೆ ತನ್ನ ಪ್ರಿಯಕರ ಸಲಿಂಗಕಾಮಿ ಅನ್ನುವುದು ತಿಳಿದು ಆಘಾತಕ್ಕೊಳಗಾಗುತ್ತಾಳೆ.
 
ಸಮಾಜದ ಗಣ್ಯ ವ್ಯಕ್ತಿಯೊಬ್ಬ ಸಲಿಂಗಕಾಮದ ತೃಶೆಗಾಗಿ ಚಿಕ್ಕ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ವಿಷಯದ ಜಾಡು ಹಿಡಿದು ಅದರ ಹಿಂದಿನ ಜಾಲವನ್ನು ಬಯಲುಗೊಳಿಸುವ ಸ್ಕೂಪ ವರದಿಯೊಂದನ್ನು ತಯಾರಿಸಿದರೆ ಸಂಪಾದಕ ಅದನ್ನು ಹಾಕಲು ನಿರಾಕರಿಸುತ್ತಾನೆ. ಆ ಗಣ್ಯವ್ಯಕ್ತಿ ಪತ್ರಿಕೆಗೆ ದೊಡ್ಡಮೊತ್ತದ ಜಾಹೀರಾತು ನೀಡುವವನಾಗಿರುವುದೇ ಕಾರಣ ಆಗಿರುತ್ತದೆ. ಇದಕ್ಕಾಗಿ ಆಕೆ ಕೆಲಸ ಕಳಕೊಳ್ಳುತ್ತಾಳೆ.
 
ಚಿತ್ರದ ಕೊನೆಯಲ್ಲಿ ಪಾರ್ಟಿಯೊಂದರಲ್ಲಿ ಗಾಯತ್ರಿಯ ಭೇಟಿಯಾಗುತ್ತದೆ. ಆಕೆ ನಾಯಕಿಯಾಗುವುದಕ್ಕಾಗಿ ನಿರ್ದೇಶಕನೊಡನೆ “ರಾಜಿ”ಯಾಗಿರುತ್ತಾಳೆ.
 
ಒಂದು ಘಂಟೆ ಮೂವತ್ತೊಂಬತ್ತು ನಿಮಿಷದ ಚಿತ್ರದಲ್ಲಿ ಮಧುರ್ ಬಹಳ ವಿಷಯಗಳನ್ನು ಸ್ಪರ್ಶಿಸುವುದಕ್ಕೆ ಹಾತೊರೆದಿದ್ದು ಕಂಡುಬರುತ್ತದೆ. ಸೆಲೆಬ್ರಿಟಿಗಳ ದ್ವಂದ್ವ, ಮೇಲ್ವರ್ಗದವರ ಮುಖವಾಡ, ಸಲಿಂಗ ಕಾಮ, ಪತ್ರಿಕೆಯ ಮೇಲೆ ಗಣ್ಯರ ಹಿಡಿತ, ಪತ್ರಿಕೋದ್ಯಮದ ನಿಸ್ಸಹಾಯಕತೆ, child abusing,  ಚಿತ್ರೋದ್ಯಮಕ್ಕೆ ಕಾಲಿಡಲು ಮಾಡಿಕೊಳ್ಳಬೇಕಾದ ರಾಜಿಗಳು, ರಾಜಕೀಯ ಹೀಗೆ ಬಹಳಷ್ಟು ವಿಷಯಗಳನ್ನು ನಗ್ನವಾಗಿ ಅನಾವರಣ ಮಾಡುತ್ತಾ ಸಾಗುತ್ತದೆ.
 
ಕೊಂಕಣಾಸೇನ್ ರಿಂದ ಅದ್ಭುತವಾಗಿ, ನ್ಯಾಚುರಲ್ ಆಗಿ ನಟನೆ ತೆಗೆಸಿದ್ದಾರೆ ಮಧುರ್. ವಿಕ್ರಮ್ ಸಲುಜಾ, ಬೋಮನ್ ಇರಾನಿ, ತಾರಾಸೇನ್, ಸಂಧ್ಯಾ ಮೃದುಲ್ ಎಲ್ಲರೂ ಪಕ್ವವಾಗಿ ನಟಿಸಿದ್ದಾರೆ. ಅತುಲ್ ಕುಲಕರ್ಣಿಯ ಪ್ರತಿಭೆಗೆ ತಕ್ಕ ಪಾತ್ರ ದೊರೆಯದೇ ಹೋಗಿದೆ ಈ ಚಿತ್ರದಲ್ಲಿ.
 
ಸುರೇಶ್ ಪೈ ರ ಸಂಕಲನ ಅಚ್ಚುಕಟ್ಟಾಗಿದೆ. ಶಾಮಿರ್ ಟಂಡನ್ ಮತ್ತು ರಾಜು ಸಿಂಗ್ ರ ಸಂಗೀತ ಕಿವಿಗಿಂಪು. ಮಧು ರಾವ್ ರ ಛಾಯಾಗ್ರಹಣ ಕಣ್ತಂಪು.
 
ಕೆಲವು ನಿರ್ದೇಶಕರು ತಮ್ಮ ಪ್ರತಿಭೆಯ ಉತ್ತುಂಗ ಸಮಯದಲ್ಲಿ ಅದ್ಭುತವಾದ ಚಿತ್ರ ನೀಡುತ್ತಾರೆ. ಮಧುರ್ ರೆಸ್ಯೂಮ್ ನಲ್ಲಿ “ಪೇಜ್ ೩” ಮೇಲಿನ ಸಾಲಿನಲ್ಲಿ ನಿಲ್ಲುತ್ತದೆ.
 
ಜನರ ಪ್ರಶಂಸೆ, ವಿಮರ್ಶಕರ ಹೊಗಳಿಕೆ ಅಲ್ಲದೇ ೨೦೦೫ ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪಡೆದಿದೆ “ಪೇಜ್ ೩”.
 
**********
ಇದು ಸಾಂಗತ್ಯ ಕ್ಕಾಗಿ ಬರೆದದ್ದು.
ಟಿಪ್ಪಣಿಗಳು
 1. shivu.k ಹೇಳುತ್ತಾರೆ:

  ರಂಜಿತ್ ಸರ್,

  ಫೇಜ್ ೩ ಒಂದು ಅತ್ಯುತ್ತಮ ಚಿತ್ರ….ಅನೇಕ ಸಾಮಾಜಿಕ ರಾಜಕೀಯ ಒಳನೋಟಗಳನ್ನು ತೆರೆದಿಡುತ್ತಾ ಹೋಗುತ್ತದೆ…..ಅದರ ಬಗ್ಗೆ ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ….

  ಆಹಾಂ! ನನ್ನ ಬ್ಲಾಗಿನ ಹೊಸ ಲೇಖನ…. ಹಳೇ ನೆನಪು ಮತ್ತು ಹೊಸ ಕನಸು ಲೇಖನವನ್ನು ಓದಲು ಬನ್ನಿ…

 2. ಸುನಾಥ ಹೇಳುತ್ತಾರೆ:

  Page 3 ಚಿತ್ರದ ಉತ್ತಮ review ನೀಡಿರುವಿರಿ.
  ಅಭಿನಂದನೆಗಳು.

 3. ರಂಜಿತ್ ಹೇಳುತ್ತಾರೆ:

  ಶಿವು ಮತ್ತು ಸುನಾಥ್,

  ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಮೆಚ್ಚುಗೆ ನನ್ನ ಬರಹಗಳಿಗೆ ಪ್ರೋತ್ಸಾಹ ನೀಡುತ್ತದೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s