ನಾಲ್ಕು ಫಿಲಮ್, ಕಮಿಂಗ್ ಫೂನ್!

Posted: ಜೂನ್ 29, 2009 in ಸಿನೆಮಾ

ರಿಸೆಶನ್ ಇದೆ ಅದಕ್ಕೆ ನಿಮಗೆ ಮನರಂಜನೆ ಇಲ್ಲ ಅಂದ್ರೆ ಜನ ಸುಮ್ಕೆ ಬಿಡ್ತಾರ್ಯೆ? ಕ್ರಿಯೇಟಿಬಿಟಿ ಉಳ್ಳವರು ಕೈ ಕಟ್ಕೊಂಡು ಸುಮ್ನೆ ಕುಂತ್ಕತಾರಾ? ಇದು ಬಾಲಿವುಡ್ಡು ಸ್ವಾಮಿ… ಯಾವ್ದಕ್ಕೂ ಬಗ್ಗೋರಲ್ಲ… ಎಂಥಾ ಟೈಮ್ ಬಂದ್ರೂ ಹಿಂಗಂತಾರೆ…’ಪಿಕ್ಚರ್ ಅಭೀ ಭೀ ಬಾಕಿ ಹೈ ಮೇರೆ ದೋಸ್ತ್!’

ಸಧ್ಯಕ್ಕೆ ಬಾಲಿವುಡ್ಡಿನಲ್ಲಿ ನಾಲ್ಕು ಸಿನೆಮಾಗಳು ಬಹಳ ಭರವಸೆ ಹುಟ್ಟಿಸಿದೆ. ಭಾರಿ ಖರ್ಚುವೆಚ್ಚದಲ್ಲಿ ತಯಾರಾಗಿ ಪ್ರೇಕ್ಷಕರಿಗೆ ತಾವು ಹಿಂದೆಂದೂ ಕಂಡಿರದ ಕೇಳಿರದ ಕಥೆಗಳನ್ನೊಳಗೊಂಡು ಥಿಯೇಟರ್ ಸ್ಕ್ರೀನ್ ಎಂಬ ಕುಂಡದಲ್ಲಿ ತಮ್ಮ ಅಗ್ನಿ ಪರೀಕ್ಷೆಗೆ ಎದೆಯೊಡ್ಡಲು ರೆಡಿಯಾಗಿದೆ.

ಮೊದಲನೆಯದ್ದು ’ಲವ್ ಆಜ್ ಕಲ್’. ಯುವಜನರ ನಾಡಿ ಮಿಡಿತ ಚೆನ್ನಾಗಿ ಅರಿತಿರುವ ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ಮೂಡಿ ಬರ್ತಿದೆ. ಈ ಇಮ್ತಿಯಾಜ್ ಅಲಿ ’ಜಬ್ ವಿ ಮೆಟ್’ ಅಂಥ ಭರ್ಜರಿ ಯಶಸ್ಸನ್ನ ಮುಂದುವರಿಸಲಿಕ್ಕಾಗಿ ತುದಿಗಾಲಲ್ಲಿದ್ದಾರೆ. ಪ್ರೀತಮ್ ಸಂಗೀತ ಈಗಾಗಲೇ ಸಿಕ್ಕಾಪಟ್ಟೆ ಹಿಟ್ ಆಗಿದೆ. ಚಿತ್ರದ ಟ್ರೈಲರ್ ಎರಡು ಜನರೇಶನ್ ನ ಪ್ರೇಮ ಕತೆ ತೋರಿಸುತ್ತಿದೆ. ಸೈಫ್ ಅಲಿ ಖಾನ್ ಚಿತ್ರಕ್ಕೆ ತಮ್ಮ ನಟನಾ ಕೌಶಲ್ಯವಲ್ಲದೇ ಅರ್ಧಕ್ಕರ್ಧ ದುಡ್ಡೂ ಸುರಿದಿದ್ದಾರೆ. ಅರ್ಥಾತ್ ಸೈಫ್ ಚಿತ್ರದ ಹೀರೋ ಮತ್ತು ನಿರ್ಮಾಪಕ ಕೂಡ. ಕರೀನಾ ಅಭಿನಯದ ಜಬ್ ವಿ ಮೆಟ್ ಗೆ ನಿರ್ದೇಶಕರಾಗಿದ್ದಿದ್ದು ಇಮ್ತಿಯಾಜ್, ನಿರ್ಮಾಪಕ ಸೈಫ್… ಆದರೂ ಇಲ್ಲಿನ “ಟ್ವಿಸ್ಟ್” ಏನಪ್ಪ ಅಂದ್ರೆ ನಾಯಕಿ ಕರೀನಾ ಅಲ್ಲ. ಜಬ್ ವಿ ಮೆಟ್ ನ ಗೀತ್ ಪಾತ್ರದ ಎಲ್ಲಾ ಲಕ್ಷಣಗಳೂ ಇರುವ ಪಾತ್ರಕ್ಕೆ ಕರೀನಾ ಹಾಕಿಕೊಂಡರೆ ರಿಪೀಟ್ ಅನ್ನಿಸುವ ಭಯ ಇರುವುದಿಂದಲೋ ಏನೋ ನಾಯಕಿಯಾಗಿ ದೀಪಿಕಾ ಪಡುಕೋಣೆಯನ್ನು ಕೂರಿಸಲಾಗಿದೆ. ದೀಪಿಕಾ, ಕರೀನಾಳಿಗೇ ಸಡ್ಡುಹೊಡೆಯುವಂತಿದ್ದಾಳೆ.

ಸೋಲಿನ ಶೂಲ(ಶೋಲೆ)ದಲ್ಲಿದ್ದ, ’ರಣ’ವಿವಾದದಲ್ಲಿ ಮುಳುಗಿದ್ದ ರಾಮ್ ಗೋಪಾಲ್ ವರ್ಮಾ ಮತ್ತೆ ಚಿಗುರಿದ್ದಾರೆ. ’ಫ್ಯಾಕ್ಟರಿ’ ಬಾಗಿಲು ಮತ್ತೆ ತೆಗೆದಿದೆ. ಈ ಸಲ ಮತ್ತೆ ಒಂದು ಥ್ರಿಲ್ಲರ್ ಮೊರೆಹೊಕ್ಕಿದ್ದಾರೆ. ಚಿತ್ರ “ಅಗ್ಯಾತ್” . ಶ್ರೀಲಂಕಾದ ಕಾಡುಗಳಲ್ಲಿ ಶೂಟಿಂಗ್ ಸದ್ದಿಲ್ಲದೇ ನಡೆದಿದೆ. ಎಂದಿನಂತೆ ನಮ್ಮನ್ನು ಖುರ್ಚಿಯ ತುದಿಯಲ್ಲಿ ಕೂರಿಸುವಂತೆ ಮಾಡುವ ದೃಶ್ಯಗಳೂ ಕ್ಯಾಮರಾ ಕೋನಗಳೂ ಹೇರಳವಾಗಿದೆ. ತೆಲುಗಿನ ಮುದ್ದುಮೊಗದ ನಿತಿನ್ ಗೆ ಬಾಲಿವುಡ್ಡಿಗೆ ಭಡ್ತಿ ಕೊಟ್ಟಿದಾರೆ ವರ್ಮಾ. ವರ್ಮಾ ಕ್ಯಾಂಪಿನ ಖಾಯಮ್ ನಾಯಕಿ ’ಪೋಲಿ’ ಹುಡುಗಿ (ಅಲ್ಲಲ್ಲ.. ’ರಾಜ್’ ಚಿತ್ರದ ಹುಡುಗಿ) ನಿಶಿತಾ ಕೊಠಾರಿ ಈ ಚಿತ್ರಕ್ಕೂ ಮೊಗ(ಅಷ್ಟೇ!) ತೋರಿಸಿದ್ದಾರೆ. ’ಕಾಡೊಂದರಲ್ಲಿ ಶೂಟಿಂಗ್ ನಲ್ಲಿ ತೊಡಗಿಕೊಳ್ಳುವ ಸಿನೆಮಾ ತಂಡದಲ್ಲಿ ಒಬ್ಬೊಬ್ಬರೇ ಹತ್ಯೆಗೀಡಾಗುವ’ ಎಳೆ ಹಿಡಿದು ಜಗ್ಗಾಡಿರುವ ಚಿತ್ರಕತೆ ಹೊಂದಿದೆ.

ಸಂಜಯ್ ದತ್ ಹಿಂದೆ ಮುಸಾಫಿರ್ ಅನ್ನುವ ಸಿನೆಮಾದಲ್ಲಿ ಒಂದು ಗೆಟ್ ಅಪ್ ನಲ್ಲಿದ್ದರು ನೆನಪಿದೆಯಾ? ಅದೇ ಫ್ರೆಂಚ್ ಗಡ್ಡ, ಡಾನ್ ಗೆಟಪ್ಪು. ಅನಿಲ್ ಕಪೂರ್ ಆ ಚಿತ್ರದ ನಾಯಕನಾಗಿದ್ದ. ಅನಿಲ್ ರ ಪಾತ್ರದ ಹೆಸರು ಲಕ್ಕಿ. ಇದನ್ನೆಲ್ಲಾ ಯಾಕಪ್ಪಾ ತಿಳಿಸ್ತಿದೀನಿ ಅಂದ್ರೆ “ಲಕ್” ಅನ್ನುವ ಹೊಸ ಚಿತ್ರ ಬರ್ತಿದೆ. ಸಂಜೂ ಬಾಬ ಪುನಃ ಆಲ್ಮೋಸ್ಟ್ ಅದೇ ಗೆಟಪ್ ನಲ್ಲಿ ವಾಪಸ್ಸಾಗಿದ್ದಾರೆ. ರಿಯಾಲಿಟಿ ಶೋಗಳು ಮತ್ತು ಬೆಟಿಂಗ್ ಜಗತ್ತಿನ ಕುತೂಹಲಭರಿತ ಎಳೆ ಹೊಂದಿರುವ ಚಿತ್ರದ ಟ್ರೈಲರ್ ಗಳು ರೋಮಾಂಚಕವಾಗಿದೆ. ಆಕ್ಷನ್ ಗಳು ಮೈನವಿರೇಳಿಸುವಂತಿದೆ. ಶ್ರೀಅಷ್ಟಸಿದ್ಧಿವಿನಾಯಕ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಆಮೀರ್ ಖಾನ್ ಸಂಬಂಧಿ ಇಮ್ರಾನ್ ಖಾನ್ ಕೂಡ ಮಹತ್ವದ ಪಾತ್ರದಲ್ಲಿದ್ದಾರೆ. ಶ್ರೀಅಷ್ಟಸಿದ್ಧಿವಿನಾಯಕ… ಸಂಜೂಬಾಬ… ಇಮ್ರಾನ್ ಖಾನ್… ಈ ಮೂರು ಕಾಂಬಿನೇಷನ್ ಎಲ್ಲೋ ಕೇಳಿದಂತಿದೆಯಲ್ಲಾ ಎಂದು ಮೂಗು ಮುರಿಯದಿರಿ ಸ್ವಾಮಿ… ಎಲ್ಲಾ ಚಿತ್ರಗಳೂ ’ಕಿಡ್ನಾಪ್’ ತರ ಆಯ್ತದಾ?

kaminey2

ನಾಲ್ಕನೆಯದ್ದು ಮಾತ್ರ ನಿಮ್ಮೆಲ್ಲರ ಕುತೂಹಲ ಮೀರಿ ಬರುವ ನಿರೀಕ್ಷೆಯಿದೆ. “ಮಕ್ಬೂಲ್” “ಓಂಕಾರ” ಮತ್ತು ” ಬ್ಲೂ ಅಂಬ್ರೆಲ್ಲಾ’ ಅಂತಹ ಅದ್ಭುತ ತ್ರಿವಳಿ ಸಿನೆಮಾ ಕೊಟ್ಟ ಭಾರತದ ಪ್ರತಿಭಾವಂತ ನಿರ್ದೇಶಕರುಗಳ ಲಿಸ್ಟಿನಲ್ಲಿ ಮೇಲ್ಪಂಕ್ತಿಯಲ್ಲಿ ಕಾಣಸಿಗುವ ವಿಶಾಲ್ ಭಾರದ್ವಾಜ್ ರ ನಾಲ್ಕನೇ ಚಿತ್ರ “ಕಮೀನೇ”. ಕರೀನಾ ಜತೆಗೆ ಕಿಸ್ಮತ್ ದೂ ಕನೆಕ್ಷನ್ ಕಳೆದುಕೊಂಡಿರುವ ಶಾಹಿದ್ ಕಪೂರ್ ಇದರಲ್ಲಿ ಡಬಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದಾರೆ. ಎರಡೂ ವಿಭಿನ್ನ ಪಾತ್ರಗಳು. ಶಾ(ಫಾ)ಹಿದ್”ಮೈ ಫ ಕೋ ಫ ಬೋಲ್ತಾ ಹೂಂ….” ಎನ್ನುವ ಕಾಮಿಡಿ ದೃಶ್ಯ ನೋಡಿದರೆ ವಿಶಾಲ್ ಹಾಸ್ಯಚಿತ್ರ ನಿರ್ದೇಶನ ಮಾಡುವುದರೊಂದಿಗೆ ಎಲ್ಲಾದ್ರಲ್ಲೂ ಸೈ ಅನ್ನಿಸಿಕೊಳ್ಳೊದಕ್ಕೆ ಪ್ರಯತ್ನಿಸುತ್ತಿದಾರೇನೊ ಅನ್ನುವ ಅನುಮಾನ. ಶಾಹಿದ್ ರಿಂದ ಅದ್ಭುತ ಟೈಮಿಂಗ್ ಉಳ್ಳ ನಟನೆ ಬಂದಿದೆ ಅನ್ನುವುದು ಚಿತ್ರತಂಡದವರ ಅಂಬೋಣ. ಫ್ಯಾಶನ್, ದೋಸ್ತಾನಾ ಗಳು ಹಿಟ್ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಹ್ಯಾಟ್ರಿಕ್ ಪಡೆಯಲು ಪರಿಪೂರ್ಣ ಯತ್ನ ನಡೆಸಿದ್ದಾರೆ.

ವಿಶಾಲ್ ಎಂದಿನಂತೆ ತಮ್ಮ ವಿಚಿತ್ರ ಪಾತ್ರಗಳ ಹೆಸರಿನೊಂದಿಗೆ ಹಾಜರಾಗಿದ್ದಾರೆ. ಹಾಗಾಗಿ ಚಿತ್ರದಲ್ಲಿ “ಗುಡ್ಡು” “ಸ್ವೀಟಿ” ಮುಂತಾದ ಹೆಸರುಗಳು ಹೇರಳವಾಗಿ ಕಾಣಸಿಗುತ್ತದೆ. 
ವಿಶಾಲ್ ಭಾರದ್ವಾಜ್ ತಮ್ಮ ಸಂಗೀತ ನಿರ್ದೇಶನದಿಂದ ಈಗಲೇ  ಕಮೀನೇ ಹೆಸರನ್ನು ಮನೆಮಾತಾಗಿಸಿದ್ದಾರೆ. ಚಿತ್ರದ ಪೋಸ್ಟರ್ ಡಿಸೈನ್ ಗಳೂ ಚಂದ ಇವೆ. ಚಿತ್ರದ ಡಿಸೈನ್ ನಲ್ಲಿ ’ಸ’ ಗೆ ’ಫ’ ಅನ್ನುವ ನಾಯಕ ಪಾತ್ರಧಾರಿಯಂತೆ ’ಸಧ್ಯದಲ್ಲೇ ಬರಲಿದೆ’ ಎಂಬುದಕ್ಕೆ ಕಮಿಂಗ್ ಸೂನ್ ಬದಲು “ಕಮಿಂಗ್ ಫೂನ್” ಅಂತ ಇದೆ. ಏನೇ ಇದ್ದರೂ ಚಿತ್ರದ ಯೂಎಸ್ಪಿ ಶಾಹಿದ್ – ಪ್ರಿಯಾಂಕಾ ರ ವಿಭಿನ್ನ ಗೆಟಪ್, ಮತ್ತು ವಿಶಾಲ್ ಭಾರದ್ವಾಜ್ ಅನ್ನುವ ಮ್ಯಾಜಿಕ್ ಮಾತ್ರ ಅನ್ನಬಹುದು.

“ಬ್ಲೂ”, “ಜಶ್ನ್”, “೩ ಈಡಿಯಟ್ಸ್”, “ಮೈ ನೇಮ್ ಇಸ್ ಖಾನ್” ಇನ್ನೂ ಮತ್ತಷ್ಟು ಚಿತ್ರಗಳು ಹಾಲಿವುಡ್ಡಿಗೆ ಸಡ್ಡು ಹೊಡೆವ ರೀತಿಯಲ್ಲಿ ತಯಾರಾಗುತ್ತಿದ್ದರೂ ಬರಲು ಸಾಕಷ್ಟು ಸಮಯವಿದೆ. ಸಧ್ಯಕ್ಕೆ  ಮಲ್ಟಿಪ್ಲೆಕ್ಸ್- ನಿರ್ಮಾಪಕರ ಜಗಳ ಪರಿಹಾರವಾಗಿದೆ, ಐಪಿಎಲ್ಲೂ – ಐಸೀಸಿ ಕಿರಿಕೆಟ್ಟೂ ಮುಗಿದಿವೆ.

ಇಂತಹ ಒಂದು ಕಮಿಂಗ್ ಸೂನ್ ಜಾಹೀರಾತು ನೋಡಿದೊಡನೆ ಯುವಜನತೆ ತಮ್ಮ ಪಾಕೆಟ್ ಮನಿಯನ್ನು ಕೂಡಿಟ್ಟು ಕಾಯುತ್ತದೆ, ಮಧ್ಯಮ ವರ್ಗದ ಕುಟುಂಬಗಳು ತಮ್ಮ ಕಮಾಯಿಯ ೧೦-೨೦ ಪರ್ಸೆಂಟು ಮತ್ತು ಒಂದು ಸುಂದರ ಭಾನುವಾರವನ್ನು ಥಿಯೇಟರ್ ಗಾಗಿ ಮುಡಿಪಿಡಲು ತಯಾರಾಗುತ್ತದೆ.

ಹಾಗೆಯೇ ಇನ್ನೊಂದು ಕೋನದಲ್ಲಿ ಒಂದು ಸೃಜನಶೀಲ ಪಂಗಡ ತಮ್ಮ ಪ್ರತಿಭೆಯನ್ನೆಲ್ಲಾ ಪಣವಾಗಿಟ್ಟು ಕನಸನ್ನು ಬೆಳ್ಳಿತೆರೆಗೆ ಇಡುತ್ತಿದ್ದಾರೆ.

ಕನಸುಗಳು ಅರಳುತ್ತದಾ? ಮುದುಡುತ್ತದಾ?

ಯಾವುದೋ ಒಂದು ಶುಕ್ರವಾರ ಪ್ರೇಕ್ಷಕಪ್ರಭುಗಳಿಂದ ನಿರ್ಧರಿಸಲ್ಪಡುತ್ತದೆ!

Advertisements
ಟಿಪ್ಪಣಿಗಳು
 1. ಪ್ರಸಾದ್.ಜಿ ಹೇಳುತ್ತಾರೆ:

  ಚೆನ್ನಾಗಿದೆ. ರಿಲೀಸ್ ಆದ ಮೇಲೆ ವಿಮರ್ಶೆಯನ್ನು ಬರೆದು ಬಿಡಿ

 2. roopa satish ಹೇಳುತ್ತಾರೆ:

  Hi Ranjith,
  Absolutely, am waiting to watch alllllll these movies!!!
  Tippani chennaagide!!

 3. Prakash ಹೇಳುತ್ತಾರೆ:

  Kannada movies baggenoo bariri…pls, KABBADDI cinema chennagide antha keLapaTTe… Chmakaysi chindi uDaayisi hegide..??

 4. ರಂಜಿತ್ ಹೇಳುತ್ತಾರೆ:

  ಪ್ರಸಾದ್,

  ವಿಶಾಲ್ ಭಾರದ್ವಾಜ್ ಸಿನೆಮಾಗಳು ಅಂದರೆ ಅದೇನೋ ಕುತೂಹಲ. ನೋಡಿಯಾದ ಮೇಲೆ ಬರೆಯಬೇಕು ಅನ್ನಿಸಿದರೆ ಖಂಡಿತ ಬರೆಯುವೆ. ಧನ್ಯವಾದಗಳು ಸರ್.

 5. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ರೂಪ ಮೇಡಮ್,

  *******

  ಪ್ರಕಾಶ್,

  ಸಧ್ಯಕ್ಕೆ ನಾನು ಮಾಲ್ಡೀವ್ಸ್ ನಲ್ಲಿರೋದ್ರಿಂದ ಕನ್ನಡ ಸಿನೆಮಾ ನೋಡುವ ಭಾಗ್ಯವಿಲ್ಲ. ಊರಿಗೆ ಬಂದಾಗ ಯಾವುದಾದರೂ ನೋಡಿ ಚೆನ್ನಾಗಿದೆ ಅನ್ನಿಸಿದರೆ ಬರೀತೀನಿ.

  ಧನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s