ನನ್ನಮ್ಮನಿಗೆ ತಿಳಿಸದಿರಲಿ..!

Posted: ಜುಲೈ 7, 2009 in ಲೇಖನ

ಏಕೋ ವಿಜ್ಞಾನಿಗಳ ಮೇಲೆ ನಂಬಿಕೆಯೇ ಹೊರಟುಹೋಗಿದೆ. ಅವರೂ ಈ ಹವಾಮಾನ ವರದಿ ಹೇಳುವವರ ಥರ ಆಗಿ ಹೋಗಿದ್ದಾರೇನೋ ಅನ್ನಿಸುತ್ತಿದೆ. ಬಹುಶಃ ಈ ಅನಿಸಿಕೆ ಹುಟ್ಟಿದ್ದು, ಚಿಕ್ಕಂದಿನಲ್ಲಿ ಟೀಚರಿನ ಭಯದಿಂದ ಕಷ್ಟಪಟ್ಟು ಕಂಠಪಾಠ ಮಾಡಿದ್ದ ಒಂಭತ್ತು ಗ್ರಹಗಳಲ್ಲಿ ಪ್ಲೂಟೋ ವನ್ನು ಗ್ರಹವಲ್ಲ ಅಂತ ಖಗೋಳ ಶಾಸ್ತಜ್ಞರು ಘೋಷಿಸಿದ್ದಕ್ಕೇ ಇರಬೇಕು. ಆ ವಯಸ್ಸಿನಲ್ಲೇ ಇಂಥ ಘೋಷಣೆ ನಡೆದಿದ್ದಿದರೆ ನಮ್ಮ ಟೀಚರನ್ನೇ ಅಲ್ಲಗಳೆಯಲು ಅವರಿಗೆಷ್ಟು ಧಾರ್ಷ್ಟ್ಯ ಅಂದುಕೊಳ್ಳುತ್ತಿದ್ದೆವಲ್ಲವಾ?! ಈಗಲೂ ಯಾರಾದರೂ ಒಟ್ಟೂ ಎಷ್ಟು ಗ್ರಹವಿದೆ ಎಂಬ ಪ್ರಶ್ನೆ ಕೇಳಿದರೆ ಮೊದಲ ಉತ್ತರ ಒಂಭತ್ತು ಎಂದೇ ಆಗಿರುತ್ತದೆ. ಹಾಗೆ ಹೇಳಿದ ಮೇಲೆ ಕಳೆದ ವರ್ಷ ಖಗೋಳ ಶಾಸ್ತಜ್ಞರ ಹೇಳಿಕೆ ನೆನಪಾಗಿ ಮತ್ತೆ ಕರೆಕ್ಷನ್ ಮಾಡಿಕೊಳ್ಳಲು ಒಂದಿಷ್ಟು ಸಮಯ ಆಗಿಹೋಗಿರುತ್ತದೆ. ಇದಿಷ್ಟೂ ವರ್ಷ ಗ್ರಹವಾಗಿದ್ದ ಪ್ಲೂಟೋ ಜಾತಕದಲ್ಲಿ ರಾಹು-ಕೇತು ತಮ್ಮ ಮನೆ(ಗ್ರಹ) ಬದಲಿಸಿದ್ದೇ ಕಾರಣವಾಗಿ ಗ್ರಹ ಸ್ಥಾನದಿಂದ ಉದುರಿಹೋಯಿತೇನೋ? ನಿಜವಾಗಿಯೂ ಈ ಗ್ರಹಗಳ ಬಗ್ಗೆ, ಖಗೋಳಶಾಸ್ತ್ರದ ವಿಷಯಗಳು ನನಗೂ ಆಳವಾಗಿ ಗೊತ್ತಿದ್ದರೆ ಕಷ್ಟಪಟ್ಟಾದರೂ ಪ್ಲೂಟೋವನ್ನು ಒಂದು ಗ್ರಹವಾಗಿ ಉಳಿಸಿಕೊಳ್ಳುತ್ತಿದ್ದೆನಲ್ಲವೇ?

ವಿಜ್ಞಾನದಲ್ಲಿ ಇದೇ ನಿಜ ಎಂದು ಯಾರೂ ಎದೆ ತಟ್ಟಿ ಹೇಳಲಾರರು. ಇರುವ ಸತ್ಯಗಳೆಲ್ಲ ಈ ಕ್ಷಣದ ಮಟ್ಟಿಗಷ್ಟೇ. ಇವತ್ತಿರುವ ಎಲ್ಲ ನಿಜಗಳನ್ನು ಮುಂದೆ ಯಾವುದೋ ಒಂದು ಫೈನ್ ಡೇ ಮತ್ತೊಬ್ಬ ವಿಜ್ಞಾನಿ ಹೊಸದೊಂದು ವಾದ ಮಂಡಿಸಿ ನೀವು ಓದಿದ್ದೆಲ್ಲಾ ತಪ್ಪು, ತಿಳಿದುಕೊಂಡಿರುವುದೆಲ್ಲಾ ಅಸತ್ಯ ಎಂದು ತಲೆಕೆಳಗಾಗಿಸಬಲ್ಲ. (ಇದು ನನಗೆ ಮೊದಲೇ ಗೊತ್ತಿದ್ದಿದ್ದರೆ ವಿಜ್ಞಾನದಲ್ಲಿ ಕಡಿಮೆ ಅಂಕ ಬಂದಾಗ ಅದಕ್ಕೆ ಇದೇ ವಾದವನ್ನು ನನ್ನ ಕಾರಣವಾಗಿ ಮಂಡಿಸಬಹುದಿತ್ತು!) ಜಗತ್ತು ಮತ್ತೆ ತನ್ನ ಪಠ್ಯಪುಸ್ತಕಗಳನ್ನು ಬದಲಿಸುತ್ತದೆ. ಆ ವಿಜ್ಞಾನಿಯನ್ನು ಪಕ್ಕಕ್ಕೆ ಕೂರಿಸಿ ಹೊಸ ವಾದ ಮಂಡಿಸಿದವನಿಗೆ ಪಟ್ಟ ಒಪ್ಪಿಸಲಾಗುತ್ತದೆ. ಈ ಹೊಸ ವಿಜ್ಞಾನಿ ಅದೇ ಪಟ್ಟದಲ್ಲಿ ವಿರಾಜಮಾನನಾಗುತ್ತಾನೆ ; ಮುಂದೊಂದು ದಿನ ಹೊಸ ವಾದ ಸೃಷ್ಟಿಯಾಗುವವರೆಗೂ! ಈ ತಲೆಕೆಳಗಾಗಿಸುವಿಕೆ ವಿಜ್ಞಾನಕ್ಕೆ ಹೊಸತೇನಲ್ಲ. ಬಹಳ ಹಿಂದಿನಿಂದಲೂ ನಡೆದುಕೊಂಡುಬಂದಿರುವಂತದ್ದೇ!

ಅಪನಂಬಿಕೆಗಳಿಗೆ ಇದೊಂದೇ ಕಾರಣವಲ್ಲ. ಕಳೆದ ವರ್ಷದ ದಿನಪತ್ರಿಕೆಗಳನ್ನು ಹಿಡಿದು ನೋಟ್ ಮಾಡುತ್ತ ಕುಳಿತರೆ ಕೆಲ ವಿಜ್ಞಾನಿಗಳ ಸಾಕಷ್ಟು ವೈರುದ್ಧ್ಯ ಹೇಳಿಕೆಗಳು ಕಾಣಸಿಗುತ್ತದೆ. ಇದೇ ವಿಷಯವಾಗಿ ಜೋಗಿ ಒಂದು ಲೇಖನದಲ್ಲಿ ಈ ರೀತಿ ಬರೆಯುತ್ತಾರೆ, ” ಆಗಾಗ ಈ ವಿಜ್ಞಾನಿಗಳ ಸಾಧನೆ ವರದಿಯಾಗುತ್ತಲೇ ಇರುತ್ತದೆ. ಹಾಲೆಂಡಿನ ವಿಜ್ಞಾನಿಗಳು ಚಹಾ ಕುಡಿದರೆ ಹೃದಯರೋಗ ಅನ್ನುತ್ತಾರೆ. ನೆದರ್ಲ್ಯಾಂಡಿನ ಮಂದಿ ಚಹಾ ಕುಡಿದರೆ ಹೃದಯರೋಗ ವಾಸಿ ಅನ್ನುತ್ತಾರೆ. ಪ್ರತಿಯೊಬ್ಬರೂ ಇಪ್ಪತ್ತೋ ಮೂವತ್ತೋ ಮಂದಿಯನ್ನು ಕಲೆಹಾಕಿ ಅವರ ಮೇಲೆ ನಿರಂತರ ಪ್ರಯೋಗಗಳನ್ನು ಮಾಡುತ್ತ ತಮ್ಮ ಸಂಬಳಗಳನ್ನೂ ಸ್ಥಾನಗಳನ್ನು ಉಳಿಸಿಕೊಳ್ಳುತ್ತಾ ಮಹಾರಾಜನ ಆಸ್ಥಾನದಲ್ಲಿನ ರಾಜ ಪುರೋಹಿತರ ಹಾಗೆ ಮಾನವ ಜನಾಂಗಕ್ಕೆ ವಕ್ಕರಿಸಿಕೊಂಡಿರುತ್ತಾರೆ.” ಜೋಗಿ ಮಾತು ಅಕ್ಷರಶಃ ನಿಜವೆನ್ನಿಸುತ್ತದೆ,

ಇತ್ತೀಚೆಗೆ ಒಂದು ಇ-ಮೈಲ್ ಎಲ್ಲರಲ್ಲಿ ಸುತ್ತಾಡುತ್ತಿದೆ. ಜುಲೈ ತಿಂಗಳಲ್ಲಿ ಸೂರ್ಯಗ್ರಹಣವಿರುವುದರಿಂದ ಒಂದು ದೊಡ್ಡ ಅಪಾಯ ಕಾದಿದೆ ಅನ್ನುವರ್ಥದಲ್ಲಿ ಸುಳಿದಾಡುತಿದೆ. ಜಪಾನಿನ ಪಕ್ಕದ ಸಮುದ್ರದಲ್ಲಿ ಧೂಮಕೇತು ಬಿದ್ದು ಆಗುವ ಸುನಾಮಿಗೆ ಜಗತ್ತಿನ ಕಡಿಮೆ ಸಮುದ್ರಮಟ್ಟದಲ್ಲಿರುವ ಜಾಗವೆಲ್ಲಾ ಅಪಾಯಕ್ಕೆ ಸಿಲುಕುತ್ತದಂತೆ. ಇದು ನಾಸಾ ವಿಜ್ಞಾನಿಗಳ ಹೇಳಿಕೆ ಅಂತಲೂ ನಂಬಿಸುತ್ತಿದೆ. ಸಧ್ಯಕ್ಕೆ ನಾನು ಕೆಲಸ ಮಾಡುತಿರುವ ಮಾಲ್ಡೀವ್ಸ್ ದೇಶ ಸಮುದ್ರ ಮಟ್ಟಕ್ಕಿಂತ ಕೇವಲ ೮ ಫೀಟ್ ಮೇಲಿದೆ. ಅಲ್ಲಿ ತಿಳಿಸಿರುವ ಅಪಾಯಪಟ್ಟಿಯಲ್ಲಿರುವ ದೇಶಗಳಲ್ಲಿ ಮಾಲ್ಡೀವ್ಸ್ ಕೂಡ ಇದೆ. ಆ ಇ-ಮೈಲಿನ ಪ್ರಕಾರ ಇನ್ನು ಹೆಚ್ಚು ದಿನಗಳಿಲ್ಲ. ಜುಲೈ ೨೨ ಕ್ಕೆ ಇದೆಲ್ಲ ಆಗಲಿದೆ ಅನ್ನುತ್ತಿದೆ. ಈ ಸುದ್ಧಿ ನಿಜವಾದದ್ದಾ? ಗೊತ್ತಿಲ್ಲ.

ಒಂದು ವೇಳೆ ನಿಜವೇ ಆದರೆ ಘಟ್ಟದ ಮೇಲಿರುವ ನೀವೆಲ್ಲರೂ ವಿಜ್ಞಾನಿಗಳಿಗೆ ( ಅಥವ ಆ ಇ-ಮೈಲ್ ಸೃಷ್ಟಿಕರ್ತನಿಗೆ) ಅಭಿನಂದನೆಗಳನ್ನು ತಿಳಿಸಿಬಿಡಿ. ನಿಜವಲ್ಲವಾದರೆ ಉಳಿದಿದ್ದಕ್ಕೆ ಹೇಗಿದ್ದರೂ ನನಗೆ ನೀಡುವಿರಲ್ಲ?!

ಮಿಲ್ಕೀವೇ ನಲ್ಲಿ, ಈ ಜಗತ್ತಿನ, ಏಷ್ಯಾ ಖಂಡದಲ್ಲಿನ, ಭಾರತವೆಂಬೋ ರಾಷ್ಟ್ರದ, ಕರ್ನಾಟಕ ರಾಜ್ಯದ, ಉಡುಪಿ ಜಿಲ್ಲೆಯಲ್ಲಿನ ಕುಂದಾಪುರವೆಂಬ ಪುಟ್ಟ ಊರಿನ ವ್ಯಾಸರಾಜ ಮಠದ ಪಕ್ಕದ ಪುಟ್ಟ ಬಾಡಿಗೆ ಮನೆಯಲ್ಲಿ ನನ್ನಮ್ಮ ವಾಸಿಸಿದ್ದಾರೆ. ದಯವಿಟ್ಟು ಯಾರೂ ಅವಳ ಕಿವಿಗೆ ಈ ಇ-ಮೈಲ್ ನ ಸುದ್ಧಿ, ಮತ್ತು ಮಾಲ್ಡೀವ್ಸ್ ಕೇವಲ ಎಂಟೇ ಅಡಿ ಸಮುದ್ರ ಮಟ್ಟಕ್ಕಿಂತ ಮೇಲಿರುವುದನು ತಿಳಿಸದಿರಲಿ!

Advertisements
ಟಿಪ್ಪಣಿಗಳು
 1. ನೀರ ತೆರೆ ಹೇಳುತ್ತಾರೆ:

  ಚೆನ್ನಾಗಿದೆ ರಂಜಿತ್‍ರವರೆ

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  🙂 nice one ranjith…

 3. shivu.k ಹೇಳುತ್ತಾರೆ:

  ರಂಜಿತ್ ಸರ್,

  ಬರಹ ತುಂಬಾ ಚೆನ್ನಾಗಿದೆ…

 4. Roopa ಹೇಳುತ್ತಾರೆ:

  Chennaagide Ranjith,
  ammanige tiLisabedi annode – tumbaa chennagirodu.. 🙂

 5. sharanu hullur ಹೇಳುತ್ತಾರೆ:

  ranjith ann, savigu savandare bhaya. chintisadiru. jeeva erovaregu yallarigu baduku

 6. minchulli ಹೇಳುತ್ತಾರೆ:

  ranjith,

  nimmammanige khanditha tilisalla… mommakkaLu neevu barediddannu thilisi naguvaaga avara mukhada nemmadi nimmalloo mudali…

 7. ರಂಜಿತ್ ಹೇಳುತ್ತಾರೆ:

  ನೀರ ತೆರೆ, ವಿಜಯ್ರಾಜ್ ಕನ್ನಂತ್, ಶಿವು, ಶೆಟ್ಟರು, ರೂಪ,

  ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

  ********

 8. ರಂಜಿತ್ ಹೇಳುತ್ತಾರೆ:

  ಶರಣು,

  ಈ ಲೇಖನದ ವಿಷಯ ನನ್ನ ಸಾವಿನ ಭಯ ಅಲ್ಲ. ನನ್ನ ಬಗ್ಗೆ ಕಾಳಜಿ ಮಾಡುವವರ ಆತಂಕಗಳ ಬಗ್ಗೆ ನನ್ನ ಭಯ!

  ಧನ್ಯವಾದಗಳು ಸರ್.

 9. ರಂಜಿತ್ ಹೇಳುತ್ತಾರೆ:

  ಮಿಂಚುಳ್ಳಿ ಶಮಾ,

  ನಿಮ್ಮ ಕಾಳಜಿಭರಿತ ಮಾತುಗಳಿಗೆ ನನ್ನ ಧನ್ಯವಾದಗಳು.

  ಹೀಗೆಯೇ ಸಮಯವಾದಾಗೆಲ್ಲ ನೀಲಿಹೂವಿಗೆ ಬರುತ್ತಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s