ಬದುಕು, ಪ್ರೀತಿ, ದೇವರು ಮತ್ತು ನಿನ್ನ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು!

Posted: ಜುಲೈ 10, 2009 in ಲವ್ ಲೆಟರ್

ಅವತ್ತು ನೀ ಹಾಗೆ ಬೆನ್ನು ತೋರಿ ಹೊರಡುವಾಗ ನಿನ್ನ ಕಣ್ಣು ನೋಡಬೇಕೆನ್ನಿಸಿತ್ತು ಕಣೇ. ಪ್ರೀತಿಯಿಂದ ತುಳುಕುತಿದ್ದ ಕಣ್ಣ ಭಾವವನ್ನಷ್ಟೇ ಸವಿದು ಅಭ್ಯಾಸವಾಗಿಬಿಟ್ಟಿತ್ತಲ್ಲ; ಮೋಸದ ಕಹಿಯೂ ಅರಿವಾಗಬೇಕಿತ್ತು. ಮೊದಲು ನನ್ನ ಕಂಡೊಡನೆ ತಾರೆಯಂತೆ ಜಗಮಗಿಸುತ್ತಿದ್ದ ಕಣ್ಣುಗಳಲ್ಲಿ ಈ ಬಗೆಯ ನಿರ್ಲಕ್ಷ್ಯ, ’ನಿನ್ನ ಬದುಕು ನಿನಗೆ; ಎಲ್ಲೋ ಹೇಗೋ ಬದುಕಿಕೊಂಡು ಸಾಯಿ’ ಅನ್ನುವಂಥ ದ್ವೇಷ ಹೇಗೆ ಧಗಧಗಿಸುತ್ತದೆ ಎಂದಾದರೂ ಕಾಣಬೇಕಿತ್ತು.

ಅದರಿಂದಲಾದರೂ ನಿನ್ನ ಮೇಲೊಂದಿಷ್ಟು ಸಿಟ್ಟು ಹುಟ್ಟಿ ನಿನ್ನ ಮರೆಯಲು ಸುಲಭವಾಗುತಿತ್ತಲ್ಲವೇ? ಈ ಪರಿ ರಾತ್ರಿಗಳನ್ನು, ನೆನಪುಗಳು ಸುಡುವ ಅವಕಾಶ ಇಲ್ಲವಾಗುತಿತ್ತಲ್ಲವೇನೆ ಗೆಳತೀ?

ಹಾಗೆ ಅಷ್ಟು ನಿರ್ದುಷ್ಟವಾಗಿ ಹೋಗುವಾಗ, ವಿಲವಿಲ ಒದ್ದಾಡುವ ಹೃದಯವನ್ನು ನೇವರಿಸುವಂತಹ ಪುಟ್ಟನೋಟವೊಂದನ್ನು ಇತ್ತು ಹೋಗಿದ್ದರೆ ಜನುಮದ ಕ್ಷಣಗಳನ್ನೆಲ್ಲಾ ಅದರ ತೆಕ್ಕೆಯಲ್ಲಿ ಹಾಕಿ ಖುಷಿಯಿಂದ ಕಳೆದುಬಿಡುತ್ತಿದ್ದೆ. ’ನಿನ್ನದೇನೂ ತಪ್ಪಿಲ್ಲ; ಏನೋ ಸಮಸ್ಯೆಯಿಂದಾಗಿ ಹೊರಟಿದ್ದೀ, ಬದುಕಿನ ಯಾವುದೋ ಒಂದು ಸುಂದರ ತಿರುವಿನಲ್ಲಿ ನನಗಾಗಿ ಕಾಯುತಿರುತ್ತೀ’ ಎಂಬ ಭ್ರಮೆಯನ್ನು ಸತ್ಯವೆಂದೇ ಮನಸ್ಸಿಗೆ ನಂಬಿಸುತ್ತಾ ಅಂತಿಮವಾಗಿ ಸಾವಿನ ತಿರುವು ಬರುವವರೆಗೂ ಕಾಲ ಕಳೆಯುತ್ತಿದ್ದೆ. ನಮ್ಮ ಯುಗಗಳು ದೇವರಿಗೆ ಕ್ಷಣಗಳಂತೆ. ಅಂತಹ ಸಾವಿರ ಕ್ಷಣಗಳನ್ನು ಯುಗಗಳಂತಾದರೂ ಗರ್ಭಗುಡಿಯೊಳಗಿನ ಮೂರ್ತಿಯಂತೆ ಬಾಳಿ ಕಳೆದುಬಿಡುತ್ತಿದ್ದೆ.

ಹಾಗಾಗಲಿಲ್ಲ.

ನೀ ತೊರೆದ ಘಳಿಗೆಯಲ್ಲಿ ನಿಶ್ಯಬ್ದವೂ ಸಂತೈಸಲಿಲ್ಲ; ತಂಗಾಳಿಯೂ ಸಾಂತ್ವನ ಹೇಳಲಿಲ್ಲ. ಮೌನವಾಗಿ ನಿಂತ ನನ್ನ ಹಿಂದೆ ಅದೇ ಯುಗಗಳಂತಹ ಕ್ಷಣಗಳ ಕ್ಯೂ. ನೆನಪಿನ ಜೋಳಿಗೆ ಹೊತ್ತ ಫಕೀರನೆದುರು ಹಸಿದು ನಿಂತ ಬಕಾಸುರನಂತೆ ಕ್ಷಣಗಳು.

ಹಾಗೆ ಹೊರಟುಹೋಗಲು ಕಾರಣವಾದರೂ ಏನಿತ್ತು? ಕೇಳೋಣ ಅಂದುಕೊಂಡಿದ್ದೆ.

ಕೇಳಿಯೇ ಬಿಟ್ಟಿದ್ದರೆ ಮತ್ತೊಂದು ಅನಾಹುತವಾಗುತಿತ್ತು. ಮೊದಲಿಂದಲೂ ಆಸೆಪಟ್ಟದ್ದನ್ನು ಪಡೆದೇ ಅಭ್ಯಾಸ. ಅಮ್ಮನ ಖಾಲಿ ಕೈಗೆ ವಾಚು ಉಡುಗೊರೆ ಮಾಡಬೇಕೆಂದು ಯಾವಾಗನ್ನಿಸಿತ್ತೋ ಅದೇ ದಿನ ಮನೆಮನೆಗೆ ಪೇಪರ್ ಹಾಕಿ ಹಾಲಿನ ಪ್ಯಾಕೆಟ್ಟೆಸೆದು ತಿಂಗಳು ಮುಗಿಯುವುದರೊಳಗೆ ಟೈಟನ್ ವಾಚು ತಂದುಕೊಟ್ಟಿರಲಿಲ್ಲವೇ?

ಕುಡುಮಿ ವಿಧ್ಯಾರ್ಥಿಯೊಬ್ಬನಿಗಿಂತ ಜಾಸ್ತಿ ಮಾರ್ಕ್ಸು ಪಡೆಯಲೇಬೇಕೆಂದು ಯಾವಾಗನ್ನಿಸಿತ್ತೋ ಆಗೆಲ್ಲಾ ನಿದಿರಿಸುವುದೇ ಕಾಲಹರಣ ಅನ್ನಿಸತೊಡಗಿತ್ತಲ್ಲವ? ಮುಂದಿನ ಪರೀಕ್ಷೆಯಲ್ಲಿಯೇ ಹೆಚ್ಚು ಅಂಕ ಗಳಿಸಿ ತೋರಿಸಿರಲಿಲ್ಲವೇ?

ಹಾಗೆಯೇ (ನೀನೆಲ್ಲಾದರೂ ನನ್ನ ದುಃಖ ಕಡಿಮೆಯಾಗುತ್ತದೆಂದು ಊಹಿಸಿ ಸುಳ್ಳಿಗಾದರೂ) ತೊರೆಯಲು ಏನೋ ಒಂದು ಕಾರಣ ಹೇಳಿದ್ದರೆ ಅದನ್ನು ಜಯಿಸಲು ನನಗೆಷ್ಟು ಸಮಯ ಬೇಕಾಗುತಿತ್ತು ಹೇಳು? ಅದಕ್ಕೇ ಕಾರಣ ಕೇಳುತ್ತಿದ್ದ ಮನದ ಕತ್ತನ್ನು ಹಿಸುಕಿ ಮೌನವಾಗಿಸಿದೆ.

Abstract_Painting

ಇನ್ನು ಮುಂದೇನೂ ಇಲ್ಲ. ಕನಸು, ವಾಸ್ತವಗಳು ಸುತ್ತಲಿಂದಲೂ ಅಟ್ಯಾಕ್ ಮಾಡಿದಾಗ ಆಯುಧ ಕಳಕೊಂಡ ಸೈನಿಕ. ಮನಸ್ಸು, ಸಾಗರದ ನಡುಮಧ್ಯೆ ದಿಕ್ಸೂಚಿ ಬೀಳಿಸಿಕೊಂಡ ನಾವಿಕ. ತೂರಾಡುವ ಹಡಗಿಲ್ಲದೇ ಅಲೆಗಳಿಗೂ ಮಜವಿಲ್ಲ. ತೂಗಾಡಿಸುವ ಗಾಳಿಯಿಲ್ಲದೇ ಹೂಗಳಿಗೂ ಖುಷಿಯಿಲ್ಲ. ಸತ್ತವನಂತಿರುವವನಿಗೆ ಬಡಿದು ಪ್ರಯೋಜನವೇನು ಎಂಬಂತೆ ಬೇರೆ ದುಃಖಗಳೆಲ್ಲ ಇನ್ಯಾರನ್ನೋ ಹುಡುಕಿಕೊಂಡು ಹೊರಟಿದೆ. ಜೀವ ಬಸಿದು ಪದಗಳಾಗುತಿರಲು ಬರೆಯಲೂ ಕೈ ನಡುಗುತಿದೆ ; ಬಹುಶಃ ನಿನ್ನ ಮೇಲೆ, ಬದುಕಿನ ಮೇಲೆ, ಪ್ರೀತಿಯ ಮೇಲೆ ಮತ್ತು ದೇವರ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು.

ಓದಿ, ಲೊಚಗುಟ್ಟಿಯೋ, ಕನಿಕರಿಸಿಯೋ, ಧಿಕ್ಕರಿಸಿಯೋ, ನೇವರಿಸಿಯೋ, ಹರಿದು ಹಾಕಿಯೋ, ಫ್ರೇಮ್ ಹಾಕಿಸಿಯೋ, ಮದುವೆ ಅಲ್ಬಮ್ಮಿನ ಫೋಟೋ ಹಿಂದುಗಡೆ ಯಾರಿಗೂ ಕಾಣದಂತಿರಿಸಿಯೋ, ಚಿಂದಿ ಮಾಡಿ ಕಸದ ಬುಟ್ಟಿಗೆಸೆದೋ….

ಸಾರ್ಥಕವಾಗಿಸು.

ಟಿಪ್ಪಣಿಗಳು
 1. ಶೆಟ್ಟರು (Shettaru) ಹೇಳುತ್ತಾರೆ:

  ಮಸ್ತ್,
  ಯಾರ್ದೋ ಹಾರ್ಟಿಗೆ ಗುರಿಯಿಟ್ಟಢೊಡಿದಂತಿದೆ?

  ಒಟ್ಟಿನಲ್ಲಿ ಸಾರ್ಥಕವಾಗಲಿ.

  -ಶೆಟ್ಟರು

 2. ಶೆಟ್ಟರು (Shettaru) ಹೇಳುತ್ತಾರೆ:

  ಮಸ್ತ್,
  ಯಾರ್ದೋ ಹಾರ್ಟಿಗೆ ಗುರಿಯಿಟ್ಟು ಹೊಡೆದಂತಿದೆ?

  ಒಟ್ಟಿನಲ್ಲಿ ಸಾರ್ಥಕವಾಗಲಿ.

  -ಶೆಟ್ಟರು

 3. Gnana Murthy T ಹೇಳುತ್ತಾರೆ:

  ರಂಜಿತ್ ಗುರುಗಳೇ
  ಚೆನ್ನಾಗಿದೆ ನಿಮ್ಮ ವಿರಹದ ಪತ್ರ…

  ಅದರಲ್ಲೂ ಈ ಸಾಲುಗಳು
  ನೀ ತೊರೆದ ಘಳಿಗೆಯಲ್ಲಿ ನಿಶ್ಯಬ್ದವೂ ಸಂತೈಸಲಿಲ್ಲ; ತಂಗಾಳಿಯೂ ಸಾಂತ್ವನ ಹೇಳಲಿಲ್ಲ. ಮೌನವಾಗಿ ನಿಂತ ನನ್ನ ಹಿಂದೆ ಅದೇ ಯುಗಗಳಂತಹ ಕ್ಷಣಗಳ ಕ್ಯೂ. ನೆನಪಿನ ಜೋಳಿಗೆ ಹೊತ್ತ ಫಕೀರನೆದುರು ಹಸಿದು ನಿಂತ ಬಕಾಸುರನಂತೆ ಕ್ಷಣಗಳು..
  ಸೂಪರ್…..

 4. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಏನ್ರಿ ರಂಜಿತ್ ತುಂಬಾ ಭಾವುಕರಾಗಿ ಬರ್ದಿದಿರಾ ? ತುಂಬಾ ಚನ್ನಾಗಿದೆ ಪತ್ರ.. ಓದಬೇಕಾದವರು ಓದಿದರೆ ನಿರ್ಧಾರಗಳು ಬದಲಾವಣೆ ಆಗುವ ಎಲ್ಲ ಸಾಧ್ಯತೆಗಳಿವೆ. ಮನಮುಟ್ಟಿತು ನಿಮ್ಮ ಪತ್ರ. ಇನ್ನು ಬರೆಯಬೇಕೆಂಬ ಹಂಬಲ ಇದೆ ಈ ಪತ್ರದ ಬಗ್ಗೆ.. ಆದರೆ ಪದಗಳ ಹುಡುಕಾಟದಲ್ಲಿದ್ದೇನೆ…

  ಶರಶ್ಚಂದ್ರ ಕಲ್ಮನೆ

 5. svatimuttu ಹೇಳುತ್ತಾರೆ:

  ಅಣ್ಣ,
  ಯಾರಿಗೆ ಬರೆದ ಲೇಖನ ಇದು?? ಓದಿ ತುಂಬಾ ದುಃಖ ಆಯಿತು…… ನೋವಿನ ತೀವ್ರತೆ ಎದ್ದು ಕಾಣುತ್ತಿದೆ ನಿಮ್ಮ ಈ ಬರಹದಲ್ಲಿ….

  ಇಂಚರ

 6. Rajesh Manjunath ಹೇಳುತ್ತಾರೆ:

  ರಂಜಿತ್,
  ಹೇಗಾದರು ಬರೆದಿದ್ದು ಸಾರ್ಥಕವೆಂದೆನಿಸಿ ಬಿಡಲಿ ಎಂಬ ಸಣ್ಣ ಸ್ವಾರ್ಥ ಕಾಡುತ್ತದೆ ಅಲ್ವ…
  ಈ ಪತ್ರ ತಲುಪ ಬೇಕಾದವರಿಗೆ ತಲುಪಿ, ಓದ ಬೇಕಾದವರು ಓದಿದರೆ ಖಂಡಿತ ನಿಮ್ಮ ಪ್ರಯತ್ನ ಸಾರ್ಥಕ. ಬರಹದ ಕುರಿತು ಹೇಳುವುದಾದರೆ ಸೊಗಸಾಗಿದೆ, ಮನವನ್ನು ಕಲಕಿ ಬಿಡುತ್ತದೆ ಪ್ರತಿ ಸಾಲು, ವಿರಹದ ದಳ್ಳುರಿ ಹೊತ್ತಿ ಉರಿಯುತ್ತಿರುವಂತಿದೆ.

 7. Roopa ಹೇಳುತ್ತಾರೆ:

  Hi Ranjith,
  Tumbaa chennaagide – patra. Koneyalli Odidamele – Arya (Telugu) movieyallina ondu haadu nenapaaytu. “Feel My Love – In what ever the means …. but by some means” annuva haage.
  Like it ri.
  Heege bareyutiri.

 8. ರಂಜಿತ್ ಹೇಳುತ್ತಾರೆ:

  ಶೆಟ್ಟರೇ,

  ಯಾವ ಹಾರ್ಟಿಗೂ ಗುರಿಯಿಟ್ಟು ಹೊಡೆದಿದ್ದಲ್ಲ. ಹೊರಟುಹೋದವರು ಬತ್ತಳಿಕೆಯನ್ನೂ ಹೊತ್ತುಕೊಂಡು ಹೋಗಿರಬೇಕೆನಿಸುತ್ತದೆ..:)

  “ತೂರಾಡುವ ಹಡಗಿಲ್ಲದೇ ಅಲೆಗಳಿಗೂ ಮಜವಿಲ್ಲ; ತೂಗಾಡುವ ಹೂವಿಲ್ಲದೇ ಗಾಳಿಗೂ ಖುಷಿಯಿಲ್ಲ” ಇಂತಹ ವಾಕ್ಯಗಳನ್ನು ಬರೆಯುವಾಗ ಸಿಗುವ ಖುಷಿಗೆ ಬೇರೆ substitute ಇಲ್ಲ. ಅಂತಹ ಸಂತೋಷಕ್ಕಾಗಿ ಮಾತ್ರ ಬರೆಯುತ್ತಿದ್ದೇನೆ.

  ಧನ್ಯವಾದಗಳು.

 9. ರಂಜಿತ್ ಹೇಳುತ್ತಾರೆ:

  ಜ್ಞಾನಮೂರ್ತಿಗಳೇ,

  ನಿಮ್ಮನಿಸಿಕೆಗೆ ಧನ್ಯವಾದಗಳು.ನಿಮ್ಮಂತೆಯೇ ನನಗೂ ಕಾಡಿದ ಸಾಲುಗಳವು.

 10. ರಂಜಿತ್ ಹೇಳುತ್ತಾರೆ:

  ಶರಶ್ಚಂದ್ರ ಕಲ್ಮನೆ,

  ವಿರಹಕ್ಕೂ ಹುಡುಗರಿಗೂ ಬಿಡದ ನಂಟು. ಅಮ್ಮನ ಲಾಲಿಗೆ ಓಲಾಡುವ ಮಗುವಿನಂತೆ ಹುಡುಗರು ವಿರಹದ ಸಾಲುಗಳನು ಮತ್ತೆ ಮತ್ತೆ ಓದಿ ಎದೆಗಾದ ಗಾಯಗಳನ್ನು ನೀವಿಕೊಳ್ಳುತ್ತಾರೆ.

  ನಿಮಗನ್ನಿಸಿದ್ದನ್ನು ಬರೆಯದಿರಬೇಡಿ.

  ನನ್ನ ಖುಷಿಗಾಗಿ ಬರೆದ ಪತ್ರ. ಅಂದ ಹಾಗೆ ಓದಬೇಕಾದವರು ಓದದೆಯೇ ಸಾರ್ಥಕಗೊಳಿಸುತ್ತಿದ್ದಾರೆ..:)

 11. ರಂಜಿತ್ ಹೇಳುತ್ತಾರೆ:

  ಇಂಚರ,

  ಲೇಖನ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.
  ರವಿ ಬೆಳಗೆರೆ ಅನ್ನುವ ಹಾಗೆ ಲವ್ ಲೆಟರ್ ನಮ್ಮ ಬರಹವನ್ನು, ನಮ್ಮ ಮನಸ್ಸನ್ನು ಫ್ರೆಶ್ ಆಗಿಸುತ್ತದೆ.ಆದಕಾರಣ ಕೊನೆಯ ಪಕ್ಷ ತಿಂಗಳಿಗೊಂದಾದರೂ ಪ್ರೇಮಪತ್ರ ಬರೆಯೋಣ ಎಂಬಾಸೆ ಇಟ್ಟುಕೊಂಡಿದ್ದೇನೆ. ಆ ಪ್ರಯುಕ್ತ ಬರೆದಿದ್ದು.

  ಯಾರನ್ನೂ ಉದ್ದೇಶಿತವಾಗಿ ಅಲ್ಲ.

  ಧನ್ಯವಾದಗಳು.

 12. ರಂಜಿತ್ ಹೇಳುತ್ತಾರೆ:

  ರಾಜೇಶ್,

  ಥ್ಯಾಂಕ್ಸ್. ಆದರೂ ವಿರಹದ ಕುರಿತು ಬರೆಯುವುದರಲ್ಲಿ ನನಗಿಂತ ನೀವೇ ಬೆಸ್ಟು ಅನ್ನುವುದರಲ್ಲಿ ಎರಡು ಮಾತಿಲ್ಲ.

  ಈ ಹಿಂದಿನ ಎಲ್ಲಾ ಕಾಮೆಂಟುಗಳಲ್ಲಿ ತಿಳಿಸಿದಂತೆ ಇದು ಯಾರ ಮೇಲೋ ವೈಯುಕ್ತಿಕವಾಗಿ ಬರೆದುದಲ್ಲ.

  ಸ್ವಂತ ಖುಷಿಯ ಸ್ವಾರ್ಥಕ್ಕಾಗಿ ಬರೆದದ್ದು..:)

 13. ರಂಜಿತ್ ಹೇಳುತ್ತಾರೆ:

  ರೂಪ,

  ನಾನೂ ಆ ಆರ್ಯ ಥಿಯರಿ ಅಭಿಮಾನಿ. ಆದರೆ ಕೊನೆಯ ಒಂದು ವಾಕ್ಯದಲ್ಲಿ ಅದರ ಅಂಶ ಮೂಡಿಬಂದಿದ್ದರೆ ಅದು ಕಾಕತಾಳೀಯ. ನೀವು ರೆಫರ್ ಮಾಡುವವರೆಗೆ ಅದರ ಹೋಲಿಕೆ ಅರಿವಾಗಿರಲಿಲ್ಲ.

  ನಿಮ್ಮ ಅನಿಸಿಕೆಗೆ ಮೆಚ್ಚುಗೆಗೆ ಧನ್ಯವಾದಗಳು.

 14. Anantha ಹೇಳುತ್ತಾರೆ:

  ಹೀಗೆಯೇ ಮನ ಮುಟ್ಟುವ ವಿರಹ ಪತ್ರಗಳನ್ನು ಬರೆಯುತ್ತಲೇ ಇರಿ ಅಂತ ಹೇಳಿದರೆ ನನ್ನನ್ನ ನೀನು sadist ಅಂತ ಕರೆಯೋಲ್ಲ ತಾನೇ? 😉

 15. Anantha ಹೇಳುತ್ತಾರೆ:

  ಹೀಗೆಯೇ ಮನ ಮುಟ್ಟುವ ವಿರಹ ಪತ್ರಗಳನ್ನು ಬರೆಯುತ್ತಲೇ ಇರಿ ಅಂತ ಹೇಳಿದರೆ ನನ್ನನ್ನ ನೀವು sadist ಅಂತ ಕರೆಯೋಲ್ಲ ತಾನೇ? 😉

 16. Gireesh ಹೇಳುತ್ತಾರೆ:

  ನಮಸ್ಕಾರ ರಂಜಿತ್…

  ವಾವ್…! ಅದೆಂತಹ ಭಾವ ನಿಮ್ಮ ಎದೆಯಾಳದ ಮಾತುಗಳಿಗೆ… “ನಮ್ಮ ಯುಗಗಳು ದೇವರಿಗೆ ಕ್ಷಣಗಳಂತೆ. ಅಂತಹ ಸಾವಿರ ಕ್ಷಣಗಳನ್ನು ಯುಗಗಳಂತಾದರೂ ಗರ್ಭಗುಡಿಯೊಳಗಿನ ಮೂರ್ತಿಯಂತೆ ಬಾಳಿ ಕಳೆದುಬಿಡುತ್ತಿದ್ದೆ.”
  ಕಚಗುಳಿ ಕೊಟ್ಟ ನಿಮ್ಮ ಸಾಲುಗಳು ಮುಂದುವರಿದಂತೆ, ಚಳಿಗಾಲದ ಬೆಳಿಗ್ಗೆ-ಗಳಲ್ಲಿ ಬಸ್-ಸ್ಟಾಂಡ್ ನಲ್ಲಿ ಮಲಗಿದ ಮುದುಕನಿಗೆ ಹೊದೆಯಲು ಬೆಡ್-ಶೀಟ್ ಇಲ್ಲದೆ ಮುರುಟಿದಂತೆ… ತೀವ್ರವಾದ ಚಳಿ ಚುಚ್ಚುವಂತಿತ್ತು…

  ಅಬ್ಬಾ.. “ಕನಸು, ವಾಸ್ತವಗಳು ಸುತ್ತಲಿಂದಲೂ ಅಟ್ಯಾಕ್ ಮಾಡಿದಾಗ ಆಯುಧ ಕಳಕೊಂಡ ಸೈನಿಕ. ಮನಸ್ಸು, ಸಾಗರದ ನಡುಮಧ್ಯೆ ದಿಕ್ಸೂಚಿ ಬೀಳಿಸಿಕೊಂಡ ನಾವಿಕ. ತೂರಾಡುವ ಹಡಗಿಲ್ಲದೇ ಅಲೆಗಳಿಗೂ ಮಜವಿಲ್ಲ. ತೂಗಾಡಿಸುವ ಗಾಳಿಯಿಲ್ಲದೇ ಹೂಗಳಿಗೂ ಖುಷಿಯಿಲ್ಲ.” ಈ ಸಾಲಂತೂ ಮತ್ತೂ-ಮತ್ತೂ ಓದಬೇಕೆನಿಸಿತ್ತು…

  ಧನ್ಯವಾದಗಳೊಂದಿಗೆ,
  -ಗಿರಿ

 17. Prakash ಹೇಳುತ್ತಾರೆ:

  Ranjith avre..thumba mana kalakuvanthide..:(.. heege munduvareyali nimma viraha vedane 🙂 (Only on paper)

 18. ವಿಜಯರಾಜ್ ಕನ್ನಂತ ಹೇಳುತ್ತಾರೆ:

  ranjith…. virahaduriyali uriduride bhasmavaaguva bhaavuka lokada anaavarana e lekhana.. erderadu sala odide..

 19. ರಂಜಿತ್ ಹೇಳುತ್ತಾರೆ:

  ಅನಂತ,

  ನಿಮ್ಮನಿಸಿಕೆಗೆ ಧನ್ಯವಾದಗಳು.

  ಈ ಪ್ರೇಮಪತ್ರಗಳಲ್ಲಿ ಬಹಳಷ್ಟು ವಿಧಗಳಿವೆ. ಬರೀ ವಿರಹ ಬರೆದರೆ ಬ್ಲಾಗು ಕಹಿ ಕಹಿಯಾಗುವ ಅಪಾಯವಿದೆ. ತುಂಟತನವಿರುವ ಪತ್ರ ಬರೆಯುವಾಗ ಮೂಡುವ ತೃಪ್ತಿಯೂ ಚೆನ್ನಾಗಿರುತ್ತದೆ. ವಿರಹ ಪತ್ರ ಆಗಾಗ್ಗೆ ದೇಹದಾರೋಗ್ಯಕ್ಕೆ ಕುಡಿವ ಕಷಾಯದಂತಿರಲಿ, ಅಲ್ಲವೇ?

  ವಿರಹ ಪತ್ರ ಓದುವುದರಲ್ಲಿ ಯಾರದೋ ನೋವನ್ನು ತಮ್ಮದಾಗಿಸಿ ಅನುಭವಿಸುವ ಮುದವಿರುತ್ತದೆ. ನಮ್ಮದೇ ಹಳೆಯ ಗಾಯವನ್ನು ಗೀರಿ ಮೋದಗೊಳ್ಳುತ್ತಿರುತ್ತೇವೆ. ಎಂಥ ಗಟ್ಟಿಗನ ಕೈಯ್ಯಲ್ಲಿ ಒಂದು ವಿರಹ ಪತ್ರವಿಟ್ಟರೆ ಕ್ಷಣಕಾಲ ಕರಗದಿರಲಾರ.

  ನನ್ನನ್ನೂ ಕಾಡುವ ಇಂತಹ ಅಪೇಕ್ಷೆಗೆ ನಾನ್ಯಾಕೆ sadist ಅಂದುಕೊಳ್ಳಲಿ?

 20. ರಂಜಿತ್ ಹೇಳುತ್ತಾರೆ:

  ನಮಸ್ತೆ ಗಿರೀಶ್,

  ಸ್ವಾಗತ ನೀಲಿಹೂವಿಗೆ. ಧನ್ಯವಾದ ನಿಮ್ಮ ಕಾಮೆಂಟಿಗೆ.

  ಬರೆಯುವಾಗ ನಾನು ಪಟ್ಟ ಖುಷಿಗಳನ್ನು ಓದುವಾಗ ಪಡೆದುಕೊಂಡುಬಿಟ್ಟಿದೀರಿ ! ತೂರಾಡುವ ಹಡಗಿಲ್ಲದೇ ಅಲೆಗಳಿಗೂ ಮಜವಿಲ್ಲ; ತೂಗಾಡುವ ಹೂವಿಲ್ಲದೇ ತಂಗಾಳಿಗೂ ಖುಷಿಯಿಲ್ಲ ಸಾಲುಗಳು ನನಗೂ ತುಂಬ ಇಷ್ಟವಾದದ್ದು.

  ನೋವು ಕೂಡ ಹಾಗೆಯೇ ಅಲ್ಲವೇ? ನಾವು ನರಳದೇ ಇದ್ದರೆ ನೋವು ಬೋರಾಗಿ ಹೊರಟುಹೋಗುತ್ತದನಿಸುತ್ತದೆ. ನರಳಿದಷ್ಟೂ ನೋವಿನ ಪರಿಣಾಮ ಹೆಚ್ಚು.

 21. ರಂಜಿತ್ ಹೇಳುತ್ತಾರೆ:

  ಪ್ರಕಾಶ್,

  ನನ್ನೊಳಗಿನ ಕಲ್ಪನೆಗಾರನಿಗೆ ನಿಮ್ಮ ಚಪ್ಪಾಳೆಯ ಕನಸು ಬಿದ್ದರೆ, ಖಂಡಿತ ವಿರಹವೇನು? ಎಲ್ಲಾ ಭಾವಗಳ ನೆರೆ ಉಕ್ಕೀತು.

  ಈ ಲೇಖನ ಪರ್ಸನಲ್ ಅನುಭವವಲ್ಲ. so, ಪೇಪರಿನಲ್ಲಿಯೇ ಎಲ್ಲಾ ಭಾವಗಳು flow ಆಗಲಿವೆ.

  ನಿಮ್ಮ ಅನಿಸಿಕೆಗೆ ಧನ್ಯವಾದಗಳು.

 22. ರಂಜಿತ್ ಹೇಳುತ್ತಾರೆ:

  ವಿಜಯ ರಾಜ್ ಕನ್ನಂತ,

  ಥ್ಯಾಂಕ್ಯೂ ಸರ್, ನಿಮ್ಮ ಮೆಚ್ಚುಗೆ ಮಾತಿಗೆ.

  ಎಲ್ಲಾ ಭಾವಗಳೂ ಹರಿಯುವಾಗ ವಿರಹವೇಕೆ ಸುಮ್ಮನಿರಲು ಸಾಧ್ಯ ಸರ್?

  ಅದಕ್ಕೇ ಈ ಲೇಖನ.

 23. shivu.k ಹೇಳುತ್ತಾರೆ:

  ರಂಜಿತ್ ಸರ್,

  ಇದು ಅನುಭವವೋ ಅಥವ ಕಲ್ಪನೆಯೋ ಒಟ್ಟಾರೆ ಮನಸ್ಸಿಗೆ, ಭಾವನೆಗಳಿಗೆ ತೀವ್ರವಾದ ನೋವುಂಟಾದಾಗ ಹೊರಹೊಮ್ಮುವ ಪದಗಳಿವು ಅಂತ ನನ್ನ ಭಾವನೆ.

  ಪ್ರತಿಸಾಲುಗಳು ಕವನಗಳಂತಿವೆ. ಉಪಮೆಗಳು, ರೂಪಕಗಳೆಂದರೆ ಹೀಗೆ ಇಷ್ಟು ಗಾಢವಾಗಿ ಮನಸ್ಸಿಗೆ ತಾಕುವಂತಿರಬೇಕು ಅನ್ನುವುದಕ್ಕೆ ನಿಮ್ಮ ಈ ಪೂರ್ತಿ ಲೇಖನ ಉದಾಹರಣೆ.

  “ಸತ್ತವನಂತಿರುವವನಿಗೆ ಬಡಿದು ಪ್ರಯೋಜನವೇನು ಎಂಬಂತೆ ಬೇರೆ ದುಃಖಗಳೆಲ್ಲ ಇನ್ಯಾರನ್ನೋ ಹುಡುಕಿಕೊಂಡು ಹೊರಟಿದೆ”

  ಈ ಸಾಲಿನ ಪದಪ್ರಯೋಗಗಳು, ಭಾವ ಅದೆಷ್ಟು ಆಳವಾಗಿದೆಯೆಂದರೇ..ದುಃಖಗಳಿಗೂ ಕರುಣೆಯುಂಟಾಗುವುದೇ ಅನ್ನಿಸದೇ ಇರದು.ಇಂಥವು ನಿಮಗೇ ಮಾತ್ರ ಸಾಧ್ಯವೆ ಬರೆಯಲು…
  ಶಿವು.ಕೆ.

 24. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಯೂ ಶಿವು ಸರ್,

  ಕೆಲವೇ ಕೆಲವು ನನಗಿಷ್ಟವಾದ ನನ್ನ ಬರಹಗಳಲ್ಲಿ ಇದೂ ಒಂದು.

  ಮೆಚ್ಚುಗೆಗೆ ಥ್ಯಾಂಕ್ಸ್.

 25. ಅನಾಮಿಕ ಹೇಳುತ್ತಾರೆ:

  ನೀಲಿ ಹೂವಿಗೆ ನಮನಗಳು,
  ಮನಸ್ಸು ಅನುಭವಿಸುವ ಯಾತನೆಯನ್ನ ಮಾತಲ್ಲಿ ಹೇಳೋದೇ ಕಷ್ಟ. ನೀವು ಅದೆಷ್ಟು ಸುಲಭವಾಗಿ ಪದಗಳಲ್ಲಿ ಹಿಡಿದುಬಿಡ್ತೀರ.
  ನಿಮ್ಮ ಸಾಮರ್ಥ್ಯಕ್ಕೆ ಕೋಟಿ ಅಭಿನಂದನೆಗಳು.

  ನಿಮ್ಮ ಅಭಿಮಾನಿ,
  ರಾಜಣ್ಣ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s