“ಗುಜರಿ ಅಂಗಡಿಯಲ್ಲಿ ಸಿಗುವ ಪ್ಲಾಸ್ಟಿಕ್ಕುಗಳಿಗಿಂತ ಹೆಚ್ಚು ನಮ್ಮ ಬಾಲಿವುಡ್ಡಿನಲ್ಲಿ ಸಿಗುತ್ತದೆ.. ಪ್ಲಾಸ್ಟಿಕ್ ನಗು, ಪ್ಲಾಸ್ಟಿಕ್ ಅಳು.. ಏನು ಬೇಕು, ಎಲ್ಲಾ ಪ್ಲಾಸ್ಟಿಕ್ ಮಯ!” ಅನ್ನುತ್ತಾ ವಿಷಣ್ಣನಾಗಿ ನಗುತ್ತಾರೆ ಬಾಲಿವುಡ್ಡಿನ ಪ್ರತಿಭಾನ್ವಿತ ನಟನಲ್ಲಿ ಓರ್ವನಾದ ವಿವೇಕ್ ಓಬರಾಯ್!
ಕೆಲ ವರುಷಗಳ ಹಿಂದೆ ತನಗೊಂದು ಚಾನ್ಸ್ ಕೊಡಿ ಅಂತ ವಿವೇಕ್, ರಾಮ್ ಗೋಪಾಲ್ ವರ್ಮಾನ ಬಳಿ ಬಂದಾಗ ಈತನ ವೇಷ ಭೂಷಣ ನೋಡಿ ವರ್ಮಾ ತನ್ನ ಕಥೆಯಲ್ಲಿನ ಪಾತ್ರಕ್ಕೆ ಈತ ಒಗ್ಗುವನಾ ಎಂದು ಸ್ವಲ್ಪ ಅನುಮಾನಿತನಾಗಿದ್ದ. ಸ್ಲಮ್ಮಿನ ಹುಡುಗನೊಬ್ಬ ಭೂಗತಲೋಕದ ಡಾನ್ ಆಗುವ ಪಾತ್ರಕ್ಕೆ ತನ್ನ ಗೆಟಪ್ಪು ಯಾವ ರೀತಿ ಇರಬೇಕೆಂದು ವಿವೇಕ್ ಆಗಲೇ ಮಾನಸಿಕವಾಗಿ ಸಿದ್ದನಾಗಿದ್ದು. ವರ್ಮಾ ಆಫೀಸಿಗೆ ಮರುದಿನವೇ ಆ ಹುಡುಗನ ರೀತಿಯಲ್ಲಿ ವಸ್ತ್ರ ಧರಿಸಿ ಬಂದದ್ದು ಕಂಡು ವಿವೇಕ್ ಗೆ ಚಾನ್ಸ್ ಕೊಡಲು ಬೇರಾವ ಕಾರಣವೂ ಬೇಕಾಗಿರಲಿಲ್ಲ. “ಕಂಪನಿ” ಚಿತ್ರದಿಂದ ತೆರೆಗೆ ಪದಾರ್ಪಣೆ ಮಾಡಿದ್ದ ವಿವೇಕ್ ಒಂದು ಕಾಲದಲ್ಲಿ ಅಂದಿನ ನಾಯಕರಿಗೆಲ್ಲಾ ಪೈಪೋಟಿಯಾಗಿ ಸಿದ್ಧವಾಗಿದ್ದ. ಕಣ್ಣಲ್ಲಿನ ಕೆಚ್ಚು, ಡೈಲಾಗ್ ಹೇಳುವ ಆಂಗ್ರಿ ಯಂಗ್ ಮ್ಯಾನ್ ಶೈಲಿ ಎಲ್ಲವೂ ಯುವಕರಿಗೆ ಅಚ್ಚುಮೆಚ್ಚಾಗಿತ್ತು. ಅದೇ ಚಿತ್ರದಲ್ಲಿ ಅಭಿನಯಿಸಿದ್ದ ಅಜಯ್ ದೇವಗನ್ ಅಭಿನಯವೂ ವಿವೇಕ್ ಅಭಿನಯದ ಹಿಂದೆ ಉಳಿದುಕೊಂಡಿತು.
ಅದು ವಿವೇಕ್ ನ ಪ್ರಥಮ ಹೆಜ್ಜೆ. ನಂತರದ್ದು ಈಗ ಇತಿಹಾಸ. “ಸಾಥಿಯಾ”, “ಧಮ್”, “ಶೂಟ್ ಔಟ್ ಅಟ್ ಲೋಖಂಡ್ ವಾಲಾ” ಎಲ್ಲಾ ಚಿತ್ರಗಳಲ್ಲಿ ವಿವೇಕ್ ತನ್ನ ಛಾಪು ಬಾಲಿವುಡ್ಡಿನಲ್ಲಿ ಮೂಡಿಸಿಯಾಗಿದೆ.
ಆದರೆ ಬದುಕು ಎಲ್ಲಾ ಸಿಹಿ ಬಡಿಸದು. ಖಾರ ಕಹಿ ಮಿಶ್ರಿತ ಅಡುಗೆ ಬದುಕಿನದ್ದು. ಒಂದು ಕಡೆಯಲ್ಲಿ ಬಾಲಿವುಡ್ಡಿನಲ್ಲಿ ತನ್ನತನವನ್ನು ಗಾಢವಾಗಿ ರೂಪಿಸಿಕೊಳ್ಳುವ ಹೊತ್ತಲ್ಲಿ ಬಿರುಗಾಳಿಯೊಂದು ಅವನ ಬದುಕನ್ನೇ ಅಲುಗಾಡಿಸಿತು. ಕನಸುಗಳನ್ನು ಕಡಿದು ಬೋಳು ಮಾಡಿತು.
ವಿವೇಕ್ ಬದುಕು ಮುಖ್ಯ ತಿರುವು ಕಂಡಿದ್ದು “ಕ್ಯೂಂ, ಹೋ ಗ ಯಾ ನಾ?” ಚಿತ್ರದ ಹೊತ್ತಿಗೆ. ಆಗ ಅದರಲ್ಲಿನ ನಾಯಕಿ ಐಶ್ವರ್ಯಾ ರೈ ಜತೆಗಿನ ವಿವೇಕ್ ಪ್ರೇಮ ಬರೀ ರೂಮರ್ ಆಗಿ ಉಳಿದಿರಲಿಲ್ಲ. ಮಡಿಕೇರಿಯಲ್ಲಿ ಶೂಟಿಂಗ್ ಆಗುವ ಸಮಯದಲ್ಲಿ ಅವರಿಬ್ಬರ ಪ್ರೇಮ ಬಾಲಿವುಡ್ಡಿನಲ್ಲು ಬಹಳ ಸುದ್ಧಿಯಾಗಿತ್ತು. ಆಗಷ್ಟೇ ಐಶ್ವರ್ಯಾ ರೈ, ಸಲ್ಮಾನ್ ನ ಪ್ರೇಮದ ಕಬಂಧ ಹಸ್ತದಿಂದ ಮುಕ್ತಿಯಾಗಿದ್ದಳು. ಸಲ್ಮಾನ್, ದೇವದಾಸನಂತೆ ಕುಡಿದು ಐಶ್ವರ್ಯಾ ಮನೆಯಲ್ಲಿ ರಂಪಾಟ ಮಾಡಿದ್ದೂ ಸುದ್ಧಿಯಾಗಿದ್ದಿತ್ತು. ಅಂತಹ ಹೊತ್ತಿನಲ್ಲೇ ತನ್ನ ಪ್ರೇಯಸಿ ವಿವೇಕ್ ಪಾಲಾಗುತ್ತಿರುವುದಕ್ಕೆ ಹೊತ್ತಿ ಉರಿದ ಸಲ್ಲೂ ಕುಡಿದ ಮತ್ತಿನಲ್ಲಿ ವಿವೇಕ್ ಗೆ ಮತ್ತೆ ಮತ್ತೆ ಕಾಲ್ ಮಾಡುತ್ತಾ ಬೆದರಿಕೆಯೊಡ್ಡಿದ. ಇಂತಹ
ಸಮಯದಲ್ಲಿ ಈ ಪ್ರಸಂಗವನ್ನು ಯಾವ ರೀತಿ ಡೀಲ್ ಮಾಡಬೇಕೆಂದು ಗೈಡ್ ಮಾಡಲು ವಿವೇಕ್ ನ ತಂದೆಯೂ ಜತೆಯಲ್ಲಿರಲಿಲ್ಲ. ವಿದೇಶದಲ್ಲಿದ್ದಿದ್ದರು. ಪ್ರೇಮದ ಮತ್ತಿನಲ್ಲಿದ್ದ ವಿವೇಕ್ ಗೆ ಆಗ ತೋಚಿದ್ದು ಇದನ್ನೆಲ್ಲಾ ಜನರಿಗೆ ತಿಳಿಸಬೇಕೆಂದಷ್ಟೇ. ಜನರಿಗೆ ಸಲ್ಮಾನ್ ಹೇಗೆ ಅನ್ನುವ ನಿಜ ಗೊತ್ತಾಗಲಿ ಎಂಬುದು ಆತನ ಉದ್ದೇಶವಾಗಿತ್ತು. ಹೀಗೆ ಮಾಡುವುದರಿಂದ ಐಶ್ವರ್ಯಾ ಮೆಚ್ಚಿಕೊಳ್ಳಬಹುದು, ಒಂದು ರೀತಿಯಲ್ಲಿ ಆಕೆಗೆ ಪರೋಕ್ಷ ಸಹಾಯ ಮಾಡಿದಂತೆ ಅಂತ ಭಾವಿಸಿದ ವಿವೇಕ್ ಪತ್ರಿಕೆಯವರನ್ನು ಕರೆದು ನಡೆದದ್ದನ್ನೆಲ್ಲಾ ವಿವರಿಸಿದ. ಬಾಯಿ ಚಪ್ಪರಿಸುತ್ತಾ ಪತ್ರಿಕೆಗಳು ಬರೆದುಕೊಂಡವು. ಹೆಡ್ ಲೈನ್ ಗೆ ವಿಷಯ ಸಿಕ್ಕಿದ ಖುಷಿಯಿಂದ ಮುಲುಗಿದವು. ದೃಶ್ಯ ಮಾಧ್ಯಮಕ್ಕೂ ಬ್ರೇಕಿಂಗ್ ನ್ಯೂಸ್ ಗೆ ಸ್ಕೂಪ್ ಸಿಕ್ಕಂತಾಯಿತು. ಆತ ಹೇಳಿದ್ದು ನಿಮಿಷಕ್ಕೆ ಅರವತ್ತು ಸೆಕಂಡುಗಳಂತೆ ಮತ್ತೆ ಮತ್ತೆ ತೋರಿಸಲ್ಪಟ್ಟಿತು.
ಇದೊಂದು ಘಟನೆ ವಿವೇಕ್ ಬದುಕಿನ ಪಥವನ್ನೇ ತಿರುಗಿಸಿತು. ತನ್ನ ಭವಿಷ್ಯತ್ತಿನ ಅಡಿಗಲ್ಲೇ ಬುಡಮೇಲಾದವು. ಮುಂದೆ ಹೀಗಾಗಬಹುದು ಅನ್ನುವ ಚಿಕ್ಕ ಸುಳಿವೂ ಸಿಗದಂತಿದ್ದ ವಿವೇಕ್ ಗೆ ಮುಂದಿನ ಕ್ಷಣಗಳು “ಬದುಕನ್ನು” ತೆರೆದಿಡುತ್ತಾ ಹೋದವು. ಸಂಗಡಿಗರ ನಿಲುವುಗಳಲ್ಲಿನ ಬದಲಾವಣೆ ಅವನಿಗೆ ಜೀವನ ಪಾಠ ಕಲಿಸಿತು.
ಮೊದಲು ಐಶ್ವರ್ಯಾಳಿಂದ ಆತನಿಗೆ “ನಿನ್ನ ವರ್ತನೆ ಬಾಲಿಶ, ಹಾಗೆ ಮಾಡಬಾರದಿತ್ತು, ತೀರಾ ಚೈಲ್ಡಿಶ್ ನೀನು!” ಅನ್ನುವ ಉತ್ತರ ಬಂದಿತು. ನಿಧಾನವಾಗಿ ಆಕೆ ಅವನಿಂದ ದೂರವಾದಳು. ಬಾಲಿವುಡ್ಡಿನಲ್ಲಿ ಸಲ್ಮಾನ್ ಪ್ರಭಾವ ಹೇಗಿತ್ತೆಂದರೆ ಈ ಎಲ್ಲಾ ಘಟನೆಗಳಿಂದ ತುಂಬಾ ನಷ್ಟವಾಗಿದ್ದು ತಪ್ಪೇನೂ ಮಾಡದ ವಿವೇಕ್ ಗೇನೆ ಆಯಿತು. ಖಾನ್ ದಾನ್ ಪ್ರಭಾವದಿಂದ ವಿವೇಕ್ ನ ಸಿನೆಮಾ ಜೀವನ ಅಸ್ತವ್ಯಸ್ತವಾಯಿತು. ತಮ್ಮ ಚಿತ್ರಕ್ಕಾಗಿ ಸಹಿ ಮಾಡಿಸಿದ್ದ ನಿರ್ಮಾಪಕರು ಏನೇನೋ ಕಾರಣ ಹೇಳಿ ಸಿನೆಮಾ ಮಾಡುವುದನ್ನು ತಪ್ಪಿಸಿಕೊಂಡರು. ಚಿತ್ರದ ಉದ್ಯಮದವರು ವಿವೇಕ್ ನನ್ನು ಗೆಳೆಯನೆಂದರೆ ತಮಗೆ ನಷ್ಟ ಎಂಬಂತೆ ನಡೆದುಕೊಂಡರು.
ಚಿತ್ರವೊಂದಕ್ಕೆ ತನ್ನ ನಟನೆಗೆ ಪ್ರಶಸ್ತಿ ಕೊಡುವುದಾಗಿ ಪತ್ರ ಬರೆದಿದ್ದ ಪ್ರಸಿದ್ಧ ಸಂಘಟನೆ ನಂತರ ತಾನು ಆ ಸಮಾರಂಭಕ್ಕೆ ಬರಬಾರದೆಂಬಂತೆ ನಡೆದುಕೊಂಡಿತು.
ಇದೆಲ್ಲಾ ವಿವೇಕ್ ಗೆ ಆ ಘಟನೆಯಲ್ಲಿ ನಿಜವಾದ ತಪ್ಪಿತಸ್ಥ ಸಲ್ಲೂ ಅಲ್ಲ, ತಾನೇ ಎಂಬ ಭಾವನೆ ಮೂಡುತ್ತಿತ್ತು. ಅಲ್ಲದೇ ಹಾಗೆ ಪಬ್ಲಿಕ್ ಆಗಿ ಒಬ್ಬರ ಮಾನ ಹರಾಜು ಹಾಕುವುದು ತಪ್ಪು ಎಂಬ ಅರಿವೂ ಆಗಿ, ಇಡೀ ಚಿತ್ರೋದ್ಯಮದೆದುರು ಸ್ಟೇಜ್ ನ ಮೇಲೆ ಸಮಾರಂಭವೊಂದರಲ್ಲಿ ತಲೆಬಾಗಿ “ಸಾರಿ” ಕೇಳಿದ. ಸಲ್ಮಾನ್ ತಂದೆ ಅನಾರೋಗ್ಯವಾಗಿದ್ದಾಗ ಸೌಜನ್ಯಕ್ಕಾಗಿ ಅವರನ್ನು ಭೇಟಿ ಮಾಡಿ ಅವರ ಆರೋಗ್ಯಕ್ಕಾಗಿ ಬೇಡಿದ. ತನ್ನ ನಡೆವಳಿಕೆಯಿಂದ ಅವರಿಗೆಷ್ಟು ನೋವಾಗಿದ್ದಿರಬೇಕು ಅದಕ್ಕೆ ಕ್ಷಮೆ ಯಂತಹ ಭೇಟಿಯದು ಅಂತ ಹೇಳಿಕೊಂಡ.
ಇಷ್ಟಾಗಿಯೂ ವಿವೇಕ್ ಗೆ ಏನೂ ಸಿಗಲಿಲ್ಲ; ಕೊನೆಗೆ ಕ್ಷಮೆಯೂ!
ತನ್ನ ಗೆಳೆಯನಿಗಿಂತ ಹೆಚ್ಚಾಗಿದ್ದ ಸೊಹೈಲ್ ಖಾನ್ ( ಸಲ್ಲೂ ಸಹೋದರ) ಒಂದು ಪಾರ್ಟಿಯಲ್ಲಿ ವಿವೇಕ್ ಮಾತಾಡಿಸಲು ಬಂದೊಡೆ ಮುಖ ತಿರುವಿ ಹೊರಟುಹೋದ. ಒಂದಿಷ್ಟು ದಿನ ವಿವೇಕ್ ಗೆ ಯಾವ ಸಿನೆಮಾನೂ ಸಿಗಲಿಲ್ಲ. ಪ್ರಮುಖ ನಿರ್ದೇಶರೊಬ್ಬರು ಪಾರ್ಟಿಯೊಂದರಲ್ಲಿ ಭೇಟಿಯಾದಾಗ, “ವಿವೇಕ್, ನಿಮ್ಮ ಜತೆ ಸಿನೆಮಾ ಮಾಡಬೇಕೆಂದು ತುಂಬಾ ಅನ್ನಿಸಿತ್ತು, ಆದರೇನು ಮಾಡಲಿ ನಾನು ಮಾಡಲು ಸಾಧ್ಯವಿಲ್ಲ!” ಎಂದು ಸಲ್ಮಾನ್ ಗುಂಪಿನಿಂದ ತಿರಸ್ಕೃತರಾಗುವ ಭಯ ತೋಡಿಕೊಂಡಿದ್ದನ್ನು ನೋವಿನಿಂದಲೇ ಹೇಳಿಕೊಳ್ಳುತ್ತಾರೆ ವಿವೇಕ್.
ಇದೆಲ್ಲದರ ಹೊರತಾಗಿ, ಆತನ ಎಷ್ಟೇ ಸಿನೆಮಾ ಗೆಲ್ಲಲಿ, ಸೋಲಲಿ, ಇಡೀ ಬಾಲಿವುಡ್ಡು ಆತನಿಗೆ ಅಂಟುರೋಗ ಬಂದವನಂತಾಡಲಿ, ನಮಗೆ ಮಾತ್ರ ತಮಿಳುನಾಡಿನಲ್ಲಿ ಸುನಾಮಿಯಿಂದಾಗಿ ಸಾವು ನೋವು ಸಂಭವಿಸಿ ಅಲ್ಲಿನ ಜಾಗವೆಲ್ಲಾ ಸ್ಮಶಾನದಂತಾಗಿದ್ದಾಗ ತನ್ನ ಬಾಲಿವುಡ್ಡುಗಿರಿ ಎಲ್ಲ ಪಕ್ಕಕ್ಕಿಟ್ಟು ಗ್ರಾಮವೊಂದರ ಪುನರ್ನಿರ್ಮಾಣಕ್ಕಾಗಿ ತೊಡಗಿಕೊಂಡವನಾಗಿ, ಇಡೀ ಬಾಲಿವುಡ್ಡು ತನ್ನ ಅದೇ ಪ್ಲಾಸ್ಟಿಕ್ ಮುಖ, ಪ್ಲಾಸ್ಟಿಕ್ ಹೃದಯ, ಪ್ಲಾಸ್ಟಿಕ್ ನಗುವಿನಿಂದ ತಮ್ಮ ವ್ಯಥೆಯನ್ನು ಬಾಯ್ಮಾತಲ್ಲಿ ತೋಡಿಕೊಂಡಾಗ, ಅದನ್ನೆಲ್ಲಾ ಏನೂ ಮಾಡದೇ ಮೌನವಾಗಿ ತನ್ನ ಮಾನವೀಯತೆಗಾಗಿಯಷ್ಟೇ ಕೆಲಸ ಮಾಡುವಂತೆ ತನ್ನ ಸಮಯ, ಹಣವನ್ನು ಮುಡುಪಾಗಿಟ್ಟ ಹೃದಯವಂತನಾಗಿ ಸದಾ ನಮ್ಮೆದೆಯಲ್ಲಿರುವ ವ್ಯಕ್ತಿಯಾಗಿ
ವಿವೇಕ್ ಗೆಲ್ಲುತ್ತಲೇ ಇರುತ್ತಾನೆ. ಪ್ಲಾಸ್ಟಿಕ್ ಹೂಗಳ ಮಧ್ಯೆ ಅರಳಿದ ಮೊಗ್ಗಿನಂತೆ ಕಂಪು ಸೂಸುತ್ತಾನೆ, ಅಭಿಮಾನಿಗಳೆದೆಯಲಿ ಜೀವಂತವಾಗಿರುತ್ತಾನೆ.
ಈಗ ಅದು ಹೇಗೋ “ಖುರ್ಬಾನ್” ನಲ್ಲಿ ವಿವೇಕ್ ಗೆ ಬಾಲಿವುಡ್ಡಿನಲ್ಲಿ ಎಲ್ಲಾ ಬಿರುಗಾಳಿಯ ನಡುವೆಯೂ ತನ್ನ ಅಸ್ತಿತ್ವ ತೋರಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಯಾಕೋ ಆತ ಗೆಲ್ಲಲಿ, ಅವಮಾನದ ಮಂಜೆಲ್ಲಾ ಕರಗಲಿ, ಎಲ್ಲಾ ಖಾನ್ ದಾನ್ ಗಳ ಸುಳಿಯಲ್ಲೂ ತನ್ನ ಗಾಡ್ ಫಾದರ್ ಗಳಿಲ್ಲದ ಸಿನೆಮಾ ಬದುಕು ಕಂಗೊಳಿಸಲಿ ಅಂತ ಹಾರೈಸಬೇಕನ್ನಿಸುತ್ತಿದೆ.
ವಿವೇಕ ಗೆಲ್ಲಲಿ!
********
(ಇದು “ಪೃಥ್ವಿ” ಪತ್ರಿಕೆಯಲ್ಲಿ ಪ್ರಕಟಿತ ಬರಹ.)
ಇದು ಸ್ಟಾರ್ ಪ್ಲಸ್ ನ “ತೇರೇ ಮೇರೆ ಬೀಚ್ ಮೇ ” ಅನ್ನೋ ಕಾರ್ಯಕ್ರಮದಲ್ಲಿ ವಿವೇಕ್ ಒಬೆರೋಯ್ ನ ಮಾತಿನ ಸಾರಾಂಶ. 🙂 🙂
ಆಹಾ!!:) ಇಂಥಾದ್ರಲ್ಲಿ ಎಷ್ಟ್ ಫಾಸ್ಟು!
ಓಕೆ. ಮೊದಲನೆಯದಾಗಿ ನಾನು ಬರ್ದಿದ್ದು ಸುಳ್ಳಲ್ಲ ಅಂತ ಕನ್ಫರ್ಮು ಮಾಡಿದ್ದಕ್ಕೆ ಥ್ಯಾಂಕ್ಸ್. ಒಂದು ಕಡೆ ಐಶ್ವರ್ಯಾ ರೈ ಅಭಿಮಾನಿಗಳು, ಇನ್ನೊಂದು ಕಡೆ ಸಲ್ಮಾನ್ ಅಭಿಮಾನಿಗಳು ನನ್ನ ಧೂಳೀಪಟ ಮಾಡುವ ಚಾನ್ಸ್ ಇರುತ್ತಿತ್ತು. ನೀವು ಸಾಕ್ಷಿ ಒಪ್ಪಿಸಿ ನನ್ನ ಬಚಾವು ಮಾಡಿದಿರಿ:)
ಎರಡನೆಯದಾಗಿ ವಿವೇಕ್ ಓಬರಾಯ್ ನನ್ ಹತ್ರ ಬಂದು ಇಂಥ ಕತೆ ಹೇಳುವಂತದ್ದು – ನನ್ನ ಜಾತಕದಲ್ಲಿ ಶುಕ್ರ, ಚಂದ್ರ ಯಾವ್ದೇ ಫ್ಲೈಟ್ ಹತ್ತಿ, ಜೆಟ್ ಏರಿ, ಯಾವ್ದೇ ಮನೆಗ್ ಕಾಲಿಟ್ರೂ – ಇಲ್ಲ.
ಲೇಖನದಲ್ಲಿನ ಮಾಹಿತಿ, ವಿವರಗಳು ಅಲ್ಲಿ ವಿವೇಕ್ ಅಂದಿರುವುದು ನಿಜ. ಅದು ಅಷ್ಟೇ ನಿಜ. ಆತ ಹೇಳಿದ ಮಾತುಗಳಿಂದ ನನಗನ್ನಿಸಿದ್ದನ್ನು ಲೇಖನವಾಗಿ ಬರೆದಿದ್ದೇನೆ.
ಅಷ್ಟಕ್ಕೂ ವಿವೇಕ್ ಅಂತ ಮಾತನ್ನು ಆಡಿದ್ದಾನೆ ಅನ್ನುತ್ತಲೇ ಲೇಖನ ಶುರುವಾಗಿದೆ. ಎಲ್ಲಿ ಆಡಿದ್ದು ಅಂತ ಹೇಳಿಲ್ಲ, (ಲೇಖನದ ಭಾವಕ್ಕೆ ಸೂಕ್ತ ಅನ್ನಿಸಲಿಲ್ಲ ಅದಕ್ಕೆ) ಅದನ್ನು ನೀವು ಅಂದಿರಿ ಅಷ್ಟೇ. ಆ ಸಂದರ್ಶನದಲ್ಲಿ ನನಗೆ ಕಾಡಿದ್ದು ವಿವೇಕ್ ನ ಪ್ರಾಮಾಣಿಕತೆ, ಮಾಡದ ತಪ್ಪಿಗೆ ಪಶ್ಚಾತ್ತಾಪ, ಮತ್ತು ಕ್ಷಮೆ ಬೇಡಿದರೂ ಬೆನ್ನತ್ತಿ ಬಂದ ಪರಿಣಾಮಗಳು. ಇವಿಷ್ಟನ್ನು ಮಾತ್ರವೇ ಬಳಸಿಕೊಂಡಿದ್ದೇನಲ್ಲವೇ?
ಯಾಕೋ ನಿಮ್ಮ ಕಾಮೆಂಟು “ನಾನು ಕಾಪಿ ಹೊಡೆದೆ” ಅನ್ನುವಷ್ಟು ತಾಕಿತು, ಅದಕ್ಕಾಗಿ ಇಷ್ಟೆಲ್ಲಾ ಅನ್ನಬೇಕಾಗಿ ಬಂತು
ಹೌದು ಮತ್ತೆ! ಇರಬೇಕಾದ್ದೇ 🙂
ನೀವು ಬರೆದದ್ದು ತಪ್ಪಿದೆ ಅಂತ ಅಲ್ಲ. ಎಲ್ಲ ನಿಜವೇ. ಆದ್ರೆ ಹೀಗೆ ಬರೆಯೋವಾಗ ಮೂಲವನ್ನು ಉಲ್ಲೇಖಿಸುವುದು ಎಲ್ಲ ದೃಷ್ಟಿಯಿಂದಲೂ ಸಮಂಜಸ. ಸೇಫ್ ಕೂಡ. 🙂
ಇಲ್ಲದಿದ್ದಲ್ಲಿ ಲೇಖನ ಸುಮ್ಮನೆ ಒಂದು ಗಾಸಿಪ್ ತರಹ ಓದಿಸಿಕೊಂಡು ಬಿಡುವ ಸಾಧ್ಯತೆಗಳು ಹೆಚ್ಚಿರುತ್ತೆ. ಈ ಕಾರ್ಯಕ್ರಮ ವೀಕ್ಷಿಸಿದ ಯಾರಿಗಾದರೂ ನಿಮ್ಮ ಲೇಖನ ಓದಿದಾಗ ಇದೆ ಭಾವನೆ ಬರಲಿಕ್ಕೆ ಸಾಕು. ಇದು ಬೇರೊಂದು ಸಂದರ್ಶನದಲ್ಲಿ ಆಡಿದ ಮಾತುಗಳಾದ್ದರಿಂದಲೇ ಅದರ ಮೂಲವನ್ನು ಹೇಳಿದ್ದರೆ ಲೇಖನಕ್ಕೆ ಇನ್ನಷ್ಟು ತೂಕ ಬರುತ್ತಿತ್ತು. ಅದು ನನ್ನ ಅನಿಸಿಕೆ.
ವೈಶಾಲಿ
ಪ್ರೀತಿಯ ರಂಜಿತ್,
ಆಪ್ತ ಬರಹ. ಇನ್ನೊಂದಿಷ್ಟು ಆಪ್ತವಾಗಬಹುದಿತ್ತು ಎಂಬ ಅನಿಸಿಕೆ ಮೂಡಿಸುತ್ತಲೇ ಓದಿಸಿಕೊಂಡುಹೋಗುತ್ತದೆ. ವಿವೇಕ್ ಒಬೆರಾಯ್ ಹೇಳಿದ್ದು ಸತ್ಯ. ಜನ ಬಾಯ್ತೆರೆದುಕೊಂಡು ನೋಡುವ ಚಿತ್ರಜಗತ್ತಿನ ಥಳಕಿಗೂ ಪ್ಲಾಸ್ಟಿಕ್ಗೂ ಅಂಥ ವ್ಯತ್ಯಾಸವೇನಿಲ್ಲ. ಹಿಂದೊಮ್ಮೆ ಲಂಕೇಶ್ ಸೊಗಸಾದ ಮುದ್ರಣದ ಪತ್ರಿಕೆಗಳ ಕುರಿತು ಬರೆದ ಮಾತು ನೆನಪಾಗುತ್ತಿದೆ: ‘ಈಗ ಬರುತ್ತಿರುವ ಬಹುತೇಕ ಇಂಗ್ಲಿಷ್ ಹಾಗೂ ಹಿಂದಿ ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳನ್ನು ನೋಡಿದಾಗ ನನ್ನಲ್ಲೊಂದು ಅನಿಸಿಕೆ ಮೂಡುತ್ತದೆ. ಅದ್ಭುತವಾದ ಮುದ್ರಣ, ಬಣ್ಣಬಣ್ಣದ ಸೊಗಸಾದ ಹಾಳೆಗಳು, ಒಳ್ಳೊಳ್ಳೆ ಫಾಂಟ್ಗಳು ಎಲ್ಲ ಇದ್ದರೂ ಅದೇಕೋ ಪತ್ರಿಕೆಗಳಲ್ಲಿ ಜೀವವಿಲ್ಲ ಅನಿಸುತ್ತದೆ. ಮುದ್ರಣ ಮಾಧ್ಯಮದಲ್ಲಿ ನೋಟವಲ್ಲ, ಏನು ಮುದ್ರಣವಾಗಿದೆ ಎಂಬುದು ಮುಖ್ಯವಾಗುತ್ತದೆ. ಎಷ್ಟೇ ಥಳಕುಥಳಕಾಗಿದ್ದರೂ, ಅದು ಓದಿಸಿಕೊಂಡು ಹೋಗದಿದ್ದರೆ ಏನುಪಯೋಗ? ಅಷ್ಟೆಲ್ಲ ಚೆಂದದ ಪತ್ರಿಕೆಗಳನ್ನು ತಿರುವಿ ಹಾಕಿದರೆ ಓದಿಸಿಕೊಂಡು ಹೋಗುವಂಥದು ಏನೂ ಇರುವುದಿಲ್ಲ. ಒಂದು ವೇಳೆ ಓದಿದರೂ ಪತ್ರಿಕೆ ಮುಚ್ಚಿಟ್ಟನಂತರ ನೆನಪಿರುವುದಿಲ್ಲ’.
ನಿಮ್ಮ ಬರಹದಲ್ಲಿ ವ್ಯಕ್ತವಾದ ವಿವೇಕ್ ಅಭಿಪ್ರಾಯ ಓದಿದ ನಂತರ ಲಂಕೇಶ್ ಮಾತುಗಳು ಮತ್ತೆ ಮತ್ತೆ ಕಾಡುತ್ತಿವೆ. ಸೊಗಸಿಗೂ, ಜೀವಂತಿಕೆಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಸೊಗಸೇ ಜೀವಂತಿಕೆ ಅಲ್ಲ. ಆದರೆ, ಜೀವಂತಿಕೆಯಲ್ಲಿ ಸೊಗಸಿರುತ್ತದೆ.
ಚೆಂದದ ಬರಹ.
Hi friend, today I can comment only in English and next time it will be in Kannada. Your posts are very entertaining. Thanks for following me n twitter. All the best
ವೈಶಾಲಿ ಮೇಡಮ್,
ಒಪ್ಪಿದೆ. ಮುಂದಿನ ಸಲ ಮೂಲದ ಕುರಿತೂ ಉಲ್ಲೇಖಿಸಿರುತ್ತೇನೆ. ಥ್ಯಾಂಕ್ಸು.
ಚಾಮರಾಜ್ ಸವಡಿ,
>>ಸೊಗಸಿಗೂ, ಜೀವಂತಿಕೆಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಸೊಗಸೇ ಜೀವಂತಿಕೆ ಅಲ್ಲ. ಆದರೆ, ಜೀವಂತಿಕೆಯಲ್ಲಿ ಸೊಗಸಿರುತ್ತದೆ.<<
ನಿಮ್ಮ ಈ ಮಾತು ಬಹಳ ಹಿಡಿಸಿತು. ನೈಜ ನುಡಿ.
ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು
ಪಿಡಿ ಕಾಮತ್,
ನಿಮ್ಮ ಕನ್ನಡದಲ್ಲಿನ ಅನಿಸಿಕೆಗೆ ಕಾಯುತ್ತೇನೆ. Entertaining ಅನ್ನುವುದು ಬಹುಶಃ ನನ್ನ ಹೆಸರಲ್ಲೇ ಅಡಕವಾಗಿದೆ! ಆದರೆ ನನ್ನ ಬರಹದ ಉದ್ದೇಶ ಕೇವಲ ಅದು ಮಾತ್ರ ಅಲ್ಲ!
ಅದರ ಹೊರತೂ ಬೇರೆ ಏನಾದರೂ ಬರೆಯುವ ಪ್ರಯತ್ನ ಮಾಡುತ್ತೇನೆ.