ಜೀವದ ಪ್ರಶ್ನೆ…!

Posted: ಡಿಸೆಂಬರ್ 4, 2009 in ಕತೆ

ಮುಖಪುಟ ಲೇಖನ ಸಿದ್ಧವಾದರೂ ಅದಕ್ಕೆ ತಕ್ಕ ಚಿತ್ರ ಸಿಗದೇ ಒದ್ದಾಡುತ್ತಿದ್ದರು
ಸಂಪಾದಕರು. ಸಹಾಯಕರು ನೀಡಿದ ಒಂದೆರಡು ಫೋಟೋ ನೋಡಿ ಆ ಲೇಖನಕ್ಕೆ ತಕ್ಕ
ಚಿತ್ರವಲ್ಲವೆನ್ನಿಸಿ ಕೋಪಾವಿಷ್ಠರಾಗಿ ಅವರ ಅನುಭವವನ್ನು, ಕಾರ್ಯ ಕುಶಲತೆ ಯನ್ನು
ಅವಮಾನಿಸುವಂಥ ನಾಲ್ಕು ಬೈಗುಳ ಬೈದು ಸುಮ್ಮನಾದಾಗಲೇ ಆ ವ್ಯಕ್ತಿ ಬಂದಿದ್ದು. ನಡು
ವಯಸ್ಸಿನ, ಅರೆ ಬರೆ ಗಡ್ಡದ ಮೊಗವಾದರೂ ತೊಟ್ಟ ಜೀನ್ಸ್, ಟೀ-ಶರ್ಟ್ ಅವನ ವಯಸ್ಸನ್ನು
ಕಡಿಮೆ ಮಾಡುತ್ತಿದ್ದವು. ’ನಾಳೆ ಒಳಗೆ ಪತ್ರಿಕೆ ಪ್ರಿಂಟಿಗೆ ಹೋಗಬೇಕಿದೆ, ದಯವಿಟ್ಟು
ಒಂದೆರಡು ದಿನ ಬಿಟ್ಟು ಬನ್ನಿ’ ಅಂತ ವಿನಂತಿಯಿಂದ ಅಂದು, ಮತ್ತೆ ಎರಡನೇ ಬಾರಿ ಕೊಂಚ
ದನಿ ಎತ್ತಿ ಅಂದರೂ ಆತ ಹೊರಡಲಿಲ್ಲ. ’ಐದೇ ನಿಮಿಷ ಮಾತಾಡ್ತೀನಿ.. ದಯವಿಟ್ಟು ಒಪ್ಪಿಗೆ
ನೀಡಿ’ ಅಂತ ಮೆಲುದನಿಯಲ್ಲಿ ಆತ ಅಂದಾಗ ಸಂಪಾದಕರಿಗೆ ಒಪ್ಪಿಕೊಳ್ಳದೇ ವಿಧಿಯಿರಲಿಲ್ಲ.
ಆಫೀಸಿನ ಹೊರಗಿನ ನಿರ್ಜನ ಕ್ಯಾಂಟೀನಿನ ಮೂಲೆಯೊಂದರಲ್ಲಿ ಬೈಟೂ ಕಾಫಿ ಜತೆ ಮಾತು
ಆರಂಭವಾಯಿತು. ಆತ ಯಾರೆಂದು ಹೇಳಿಕೊಳ್ಳಲಿಲ್ಲ. ಒಬ್ಬ ಲೇಖಕನ ಗೆಳೆಯ ಅಂದುಕೊಳ್ಳಿ
ಸಧ್ಯಕ್ಕೆ ಅಂದು ಬಿಟ್ಟ. ಅವನ್ಯಾರಾದರೆ ತನಗೇನು, ವಿಷಯ ಮುಗಿಸಿ ಬೇಗ ತನ್ನ ಟೇಬಲ್ಲು
ಸೇರಿಕೊಳ್ಳುವ ತವಕದಲ್ಲಿದ್ದ ಸಂಪಾದಕರು ಅದಕ್ಕೆ ಅಷ್ಟು ಪ್ರಾಮುಖ್ಯತೆ ನೀಡಲಿಲ್ಲ.

ಸಂಪಾದಕರು ಮುಂದಿನ ಸಂಚಿಕೆಗೆ ಕಥೆ ಬೇಕಿದೆಯೆಂಬ ಪ್ರಕಟಣೆ ಕಳೆದ ಸಂಚಿಕೆಯಲ್ಲಿ
ನೀಡಿದ್ದರು. ಒಂದೇ ಮಗ್ಗುಲಲ್ಲಿ ಬರೆಯಿರಿ, ಅಡ್ರೆಸ್ಸನ್ನು ಅದೇ ಹಾಳೆಯ ಕೊನೆಯಲ್ಲಿ
ಬರೆಯಿರಿ ಅನ್ನುವ ಮಾಮೂಲಿ ಕಂಡೀಷನ್ ಗಳ ಜತೆಗೆ ಕಥೆ ೬೦೦ ಪದಗಳನ್ನು ಮೀರಿರಬಾರದು ಎಂಬ
ನಿಯಮವನ್ನೂ ಜತೆಗೆ ಆ ನಿಯಮ ಮೀರಿದ್ದನ್ನು ಪರಿಗಣಿಸಿವುದಿಲ್ಲ ಎಂದೂ ಪ್ರಕಟಣೆಯಲ್ಲಿ
ಸ್ಪಷ್ಟವಾಗಿ ನಮೂದಿಸಿದ್ದರು. ಅದರ ಕೊನೆಯ ದಿನಕ್ಕೆ ಇನ್ನೂ ಒಂದೆರಡು ದಿನವಷ್ಟೇ ಬಾಕಿ
ಇದ್ದವು.

ಈಗ ಬಂದ ವ್ಯಕ್ತಿ ಅದರ ಕುರಿತೇ ಮಾತಾಡಲು ಬಂದಿದ್ದು. ದಯವಿಟ್ಟು ಆ ಕಂಡೀಷನ್ನನ್ನು
ವಾಪಸ್ಸು ತೆಗೆದುಕೊಳ್ಳಿ, ಈ ಸಂಚಿಕೆಯಲ್ಲಿಯೇ ೬೦೦ ಪದ ಮೀರಿದ್ದರೂ ಪರವಾಗಿಲ್ಲ ಎಂಬ
ಪ್ರಕಟಣೆಯಲ್ಲಿಯೇ ನಿಯಮದ ಬದಲಾವಣೆ ತಿಳಿಸಿ ಅಂತ ವಿನಂತಿಸಿಕೊಂಡ. ಸಂಪಾದಕರಿಗೆ
ಸಿಟ್ಟು ನೆತ್ತಿಗೇರಿತು, “ಇಷ್ಟನ್ನು ಹೇಳೋದಕ್ಕೆ ನನ್ನ ಈ ಟೈಮ್ ಬೇಕಾಯ್ತೇನಪ್ಪಾ
ನಿಂಗೆ? ನನಗೆ ಬೇಕಿರೋದು ಸಣ್ಣ ಕಥೆ. ಅದಕ್ಕೇ ಆ ರೀತಿ ಕಂಡೀಷನ್ ಕೊಟ್ಟಿದ್ದು.
ಅದನ್ನು ಸಡಿಲಿಸೋದು ಸಾಧ್ಯಾನೇ ಇಲ್ಲ!” ಎಂದು ಸಾರಾಸಗಟಾಗಿ ತಳ್ಳಿಹಾಕಿಬಿಟ್ಟರು. ಆತ
ಕೂಡಲೇ ಅಂತರ್ಮುಖಿಯಾದ. ಬಾನಲ್ಲಿ ಒಡನೆಯೇ ಮೋಡ ಮುಸುಕಿಕೊಳ್ಳುವಂತೆ ದುಃಖ ಅವನ
ಮೊಗದಲ್ಲಿ ಮೂಡಿತು. “ಇದು ನನ್ನ ಜೀವದ ಪ್ರಶ್ನೆ ಸರ್. . ನೀವು ಒಪ್ಪಿಕೊಳ್ಳದೇ ಹೋದರೆ
ನನ್ನ ಕೊಲೆಯಾಗುವುದರಲ್ಲಿ ಸಂದೇಹವೇ ಇಲ್ಲ!” ಎಂದು ನಿಧಾನವಾಗಿ ಅಂದಾಗ ಸಂಪಾದಕರು
ನಿಂತಲ್ಲೇ ಥರಗುಟ್ಟಿದರು. ಇದೆಂಥ ಮಾತು? ಯಾವುದೋ ಕಥೆಯಲ್ಲಿನ ೬೦೦ ಪದಕ್ಕೂ ಈತನ
ಕೊಲೆಗೂ ಏನು ನಂಟಿದೆ? ಈ ವ್ಯಕ್ತಿ ಆತನ ಕೊಲೆಯಾದರೆ ಅದಕ್ಕೆ ತಾನು ಹೊಣೆಯೆಂಬಂತೆ
ಮಾತನಾಡುತ್ತಿದ್ದಾನಲ್ಲ ಅನ್ನಿಸಿಬಿಟ್ಟಿತವರಿಗೆ. ಯಾರೋ ಸುಮ್ಮನೆ ತಲೆಹಿಡುಕ
ಅಂದುಕೊಳ್ಳುವಂತೆಯೂ ಇಲ್ಲ, ಆ ವ್ಯಕ್ತಿ ಸಂಪಾದಕರಿಗೆ ಆ ರೀತಿ ಅನ್ನಿಸುತ್ತಿಲ್ಲ.

“ನೀವು ನನಗಿತ್ತ ಐದು ನಿಮಿಷ ಮೀರುತ್ತಿದೆ ಸರ್. ನಾನು ಇನ್ನೇನೂ ಅನ್ನುವ
ಸ್ಥಿತಿಯಲ್ಲಿಲ್ಲ. ದಯವಿಟ್ಟು ನನ್ನ ಜೀವ ಉಳಿಸಿ. ನನ್ನ ಪ್ರಾಣ ನಿಮ್ಮ ಕೈಲೇ ಇದೆ.
ನಾನಿನ್ನು ಹೊರಡ್ತೇನೆ. ಒಬ್ಬರನ್ನು ಭೇಟಿಯಾಗುವುದಿದೆ. ” ಎಂದು ಆ ವ್ಯಕ್ತಿ
ಹೊರಡಲನುವಾದ.

ಗೊಂದಲದಲ್ಲೇ ಮುಳುಗಿದ್ದ ಸಂಪಾದಕರು, “ನಿಮ್ಮ ಹೆಸರು ಹೇಳೋಲ್ಲವೆಂದಿರಿ, ನಿಮ್ಮ
ಸ್ನೇಹಿತ ಅದೇ ಆ ಲೇಖಕನ ಹೆಸರೇನೆಂದಿರಿ?”

ಆತ ಹೊರಡುತ್ತಲೇ, ಒಂದು ರೀತಿಯಾಗಿ ನೋಡಿ, ” ನನ್ನ ಹೆಸರೇ ತಿಳಿಸಿರ್ತೀನಿ, ಗೌತಮ್
ಅಂತ..” ಎಂದು ಹೊರಟುಹೋದ.

*****

ಆ ಕ್ಷಣ ಸ್ವಲ್ಪ ಶಾಕ್ ನಂತಿದ್ದರೂ ಸಂಪಾದಕರ ಕಾರ್ಯಬಾಹುಳ್ಯತೆ ಮಧ್ಯೆ ಅದು
ಮರೆತೇಹೋಗಿತ್ತು. ಅಲ್ಲದೇ ಕಥೆಯ ಪದದ ಲಿಮಿಟ್ಟಿಗೂ ಒಂದು ಜೀವಕ್ಕಿರಬಹುದಾದ ಲಿಂಕಿನ
ಅಸಂಬದ್ಧತೆ ಯಿಂದಾಗಿ ಸಂಪಾದಕರಿಗೆ ಅದು ಪ್ರಾಮುಖ್ಯತೆಯೂ ಪಡೆಯಲಿಲ್ಲ. ಕಥೆ ೬೦೦ ಪದ
ಮೀರಬಾರದು ಎಂಬ ಕಂಡೀಷನ್ ಹಾಗೇ ಇತ್ತು. ಕರ್ನಾಟಕದುದ್ದಗಲದಿಂದಲೂ ಹೊಸಬರು, ಹಳೆಯ,
ಹೆಸರುಳ್ಳ ಕಥೆಗಾರರಿಂದ ಕಥೆಯ ಮಹಾಪೂರವೇ ಹರಿದುಬಂದಿತ್ತು. ಪ್ರಸಿದ್ಧ
ಕತೆಗಾರರೊಬ್ಬರು ಬಂದ ಕಥೆಯಲ್ಲಿ ಒಂದನ್ನು ಆಯ್ದು ಅದೇ ಬಹುಮಾನ ಪಡೆವ ಕಥೆಯೆಂದು
ಘೋಷಿಸಿದರು. ಬೇರೆ ಕೆಲಸದಲ್ಲೇ ಬ್ಯೂಸಿಯಾಗಿದ್ದ ಮತ್ತು ಹೆಸರಾಂತ ಕಥೆಗಾರರು
ಆಯ್ಕೆಗಾರರಾಗಿದ್ದಿದ್ದರಿಂದ ಸಂಪಾದಕರು ಕಥೆಗಳನ್ನು ಓದಿರಲಿಲ್ಲ.

ಪತ್ರಿಕಾ ಕಛೇರಿಯಲ್ಲಿಯೇ ಒಂದು ಪುಟ್ಟ ಸಮಾರಂಭ ಏರ್ಪಡಿಸಿ ಬಹುಮಾನ ಕೊಡುವುದಾಗಿ
ನಿಗದಿಯಾಗಿತ್ತು. ಆ ದಿನವೇ ಆಯ್ಕೆಗಾರರೂ ಗೆದ್ದವರೂ ಸಂಪಾದಕರೂ ಭೇಟಿಯಾಗಿದ್ದು.
ಆ ಭೇಟಿಯಲ್ಲಿ ಮುಂದಿನ ಸಂಚಿಕೆಗೆ ಸರಕುಗಳನ್ನು ಮನದಲ್ಲೇ ಆಲೋಚಿಸುವುದರಲ್ಲಿ
ಸಂಪಾದಕರಿದ್ದಿದ್ದರೂ ಒಂದು ಕಿವಿ ಇವರಿಬ್ಬರ ಸಂಭಾಷಣೆಯಲ್ಲೂ ನೆಟ್ಟಿದ್ದರು.
’ಇಂಥದ್ದೊಂದು ಕಥೆ ಅದು ಹ್ಯಾಗೆ ನಿಮಗೆ ಹೊಳೀತು?’ ಅಂತ ಆಯ್ಕೆಗಾರರು ಕೇಳಿದಾಗ, ಆ
ಲೇಖಕರು, ’ಬರೆವಾಗ ಪಾತ್ರಗಳನ್ನು ಬಹಳ ಪ್ರೀತಿಸ್ತೇನೆ, ಈ ಪಾತ್ರವೂ ಹಾಗೆ.
ಬರೆಯುತ್ತಿದ್ದರೆ ಅದು ಒಂದು ಕಾದಂಬರಿಯಾಗಬೇಕಿತ್ತು. ಹೀರೋ..”

“ಹೀರೋ ಅನ್ನಬೇಡಿ, ಪಾತ್ರದ ಹೆಸರೇ ಬಳಸಿ..” ಎಂದು ಆ ಆಯ್ಕೆಗಾರರು ತಿದ್ದಿದರು.

“ಓಹ್! ಹೌದು, ಅದೇ.. ಗೌತಮ್ ಇನ್ನೂ ಬಾಳಬೇಕಿತ್ತು, ಅವನು ಕಾದಂಬರಿಯಲ್ಲಿ ಮಹತ್ತರ
ಪಾತ್ರವಾಗಿ ಬೆಳೆಯುವವನಿದ್ದ. ಆದರೆ ಸಂಪಾದಕರು ೬೦೦ ಪದ ಮೀರವಾರದು ಎಂದಾಗ ಕಥೆಯನ್ನೂ,
ಪಾತ್ರದ ಆಯಸ್ಸನ್ನೂ ಮೊಟಕುಗೊಳಿಸಬೇಕಾಯ್ತು. ಅದಕ್ಕೆ ಕಡಿಮೆ ಪದದಲ್ಲಿ ತುಂಬ
ಎಫೆಕ್ಟಿವ್ ಆಗಿ ಮೂಡಿ ಬಂತು ಅನ್ನಿಸುತ್ತೆ…”

ಸಂಪಾದಕರು ಶಾಕ್ ಆಗಿ, “ಏನು? ಏನಂದಿರಿ? ಪಾತ್ರದ ಹೆಸರು ಗೌತಮ್ಮಾ?” ಕೇಳಿದಾಗ
ಲೇಖಕರಿಗೆ ಅಚ್ಚರಿಯಾಯಿತು.

“ಹೌದು, ಯಾಕೆ.. ಏನಾಯ್ತು?” ಎಂದು ಆ ಲೇಖಕರು ಕೇಳುತ್ತಲೇ ಇದ್ದರು…

******

(ಈ ವಾರ “ತರಂಗ”ದಲ್ಲಿ ಪ್ರಕಟವಾದ ಸಣ್ಣ ಕತೆ)

ಟಿಪ್ಪಣಿಗಳು
 1. nuthan.hb ಹೇಳುತ್ತಾರೆ:

  ಕತೆಯ ಹಿಂದೇನಿದೆ ಎಂದು ತಿಳಿಯಬೇಕಿದೆ……..ಡೈರಿಯ ಮೇಲೆ ಭಾನಾಮತಿ ಪ್ರಯೋಗವಾಗುವ ಮುಂಚೆ ಹೇಳಿಬಿಡು 🙂

 2. santhosh mugoor ಹೇಳುತ್ತಾರೆ:

  chennagide..ranjith. uttama prayatna.
  padyadaste atavaa adakku heccu gadyada mElina nimma hatOTi ittichina lEkhanagaLalli kaMDu baruttidde.

 3. ಶಿವಾನಂದ ಹೇಳುತ್ತಾರೆ:

  ಸರ್, address, limit, effective, condition ಮುಂತಾದ ಇಂಗ್ಲೀಷ್ ಪದಗಳಿಗೆ ಒಳ್ಳೆಯ ಕನ್ನಡ ಪದಗಳನ್ನೇ ಬಳಸಬಹುದಿತ್ತಲ್ವಾ? ಕತೆಯ ಓಘಕ್ಕೇನೂ ಧಕ್ಕೆಯಾಗುತ್ತಿರಲಿಲ್ಲ.

  ಕತೆ ಬಗ್ಗೆ ಎರಡು ಮಾತಿಲ್ಲ. ಮೆಚ್ಚುಗೆಯಾಯ್ತು. ಆದರೆ ಒಂದು ಸಂಶಯ ಇದೆ. ಅಲ್ಲಿ ಗೌತಮ್ ಮೊದಲಿಗೆ ಸಂಪಾದಕರನು ಭೇಟಿಯಾಗಲು ಬಂದಾಗ ತನ್ನ ’ಸ್ನೇಹಿತ’ ಅಥವಾ ’ಲೇಖಕ’ನ ಬಗ್ಗೆ ಏನೂ ಹೇಳೇ ಇರಲಿಲ್ಲ. ಆದರೂ ಕೂಡ ಸಂಪಾದಕರು ಅದು ಹೇಗೆ ಮೊದಲಿಗೆ “ನಿಮ್ಮ ಸ್ನೇಹಿತ ಅದೇ ಆ ಲೇಖಕನ ಹೆಸರೇನೆಂದಿರಿ?” ಎಂದು ಕೇಳಿದರು?!!

 4. Shamala ಹೇಳುತ್ತಾರೆ:

  ರಂಜಿತ್ ಅವರೇ…
  ಕಥೆ ತರಂಗದಲ್ಲೇ ಓದಿದ್ದೆ. ಆದರೆ ನಿಮ್ಮದೆಂದು ಗೊತ್ತಾಗಿರಲಿಲ್ಲ…….. ಏಕೋ ಸ್ವಲ್ಪ ನಿಗೂಢ ಅನ್ನಿಸ್ತು….

 5. balu ಹೇಳುತ್ತಾರೆ:

  chennagide kathe. ishta aithu.

 6. Anantha ಹೇಳುತ್ತಾರೆ:

  ರಂಜಿತ್,

  ಕಥೆ ಚೆನ್ನಾಗಿದೆ. ತುಂಬಾ ಇಷ್ಟ ಆಯ್ತು..

 7. ಶಿವಾನಂದ ಹೇಳುತ್ತಾರೆ:

  ಓದುಗರು ಪ್ರಶ್ನೆ ಕೇಳಿದರೆ ಉತ್ತರ ಕೊಡುವ ಸೌಜನ್ಯ ಇಲ್ಲವೆ?

 8. ರಂಜಿತ್ ಹೇಳುತ್ತಾರೆ:

  ನೂತನ್ ಡಿಯರ್,

  ಕತೆಯ ಹಿಂದೂ ಮುಂದೂ ಏನೂ ಇಲ್ಲ. ಭಾನಾಮತಿ ಪ್ರಯೋಜನವಿಲ್ಲದೇಹೋದೀತು, ಕಳ್ಳಕಾಕರ ದೃಷ್ಟಿ ಬಿದ್ದಿರುವುದರಿಂದ ಡೈರಿ ಈಗ ಬರೆಯುತ್ತಿಲ್ಲ!

 9. ರಂಜಿತ್ ಹೇಳುತ್ತಾರೆ:

  ಸುನಾಥ್ ಜೀ, ಬಾಲು, ಅನಂತ

  ಥ್ಯಾಂಕ್ಸ್!

 10. ರಂಜಿತ್ ಹೇಳುತ್ತಾರೆ:

  ಸಂತೋಷ್ ಸರ್,

  ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಮುಂದೆಯೂ ಇದನ್ನು ಮುಂದುವರೆಸಿಕೊಂಡುಹೋಗಲು, ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸ್ತಾ ಇರ್ತೇನೆ.

 11. ರಂಜಿತ್ ಹೇಳುತ್ತಾರೆ:

  ಆನಂದ್,

  ನನ್ನ ಬ್ಲಾಗಿಗೆ ಸ್ವಾಗತ. ಮತ್ತು ಮೆಚ್ಚುಗೆಗೆ ನನ್ನಿ.

  ಶಾಮಲ,

  ನಿಗೂಢ, ಥ್ರಿಲ್ಲರ್ ನಂತದ್ದೇನಾದರೂ ಬರೆಯೋಣ ಅಂತ ಅಂದುಕೊಂಡು ಬರೆದಿದ್ದು.ನಿಮ್ಮ ಅನಿಸಿಕೆ ನೋಡಿ ಖುಷಿಯಾತು..:)

 12. ರಂಜಿತ್ ಹೇಳುತ್ತಾರೆ:

  ಶಿವಾನಂದ ಅವರೇ,

  ನಿಮ್ಮಿಂದಾಗಿ ಈಗಷ್ಟೇ “ಸೌಜನ್ಯ”ದ ಡೆಫಿನೇಶನ್ ದೊರಕಿತು. ತಿಳಿದು ಧನ್ಯನಾದೆ. ಹಾಗೆಯೇ ನಿಮ್ಮ “ತಾಳ್ಮೆ”ಗೆ ನನ್ನ ಧನ್ಯವಾದಗಳು!

  ಓಕೆ. ಮೊದಲು ಕಥೆಯ ಬಗ್ಗೆ ಮೆಚ್ಚಿದ್ದಕ್ಕೆ ಧನ್ಯವಾದಗಳು.

  >>ಅಲ್ಲಿ ಗೌತಮ್ ಮೊದಲಿಗೆ ಸಂಪಾದಕರನು ಭೇಟಿಯಾಗಲು ಬಂದಾಗ ತನ್ನ ’ಸ್ನೇಹಿತ’ ಅಥವಾ ’ಲೇಖಕ’ನ ಬಗ್ಗೆ ಏನೂ ಹೇಳೇ ಇರಲಿಲ್ಲ. ಆದರೂ ಕೂಡ ಸಂಪಾದಕರು ಅದು ಹೇಗೆ ಮೊದಲಿಗೆ “ನಿಮ್ಮ ಸ್ನೇಹಿತ ಅದೇ ಆ ಲೇಖಕನ ಹೆಸರೇನೆಂದಿರಿ?” ಎಂದು ಕೇಳಿದರು?!!<<

  ಇದಕ್ಕೆ ಉತ್ತರವಾಗಿ ಕಥೆಯ ಮೊದಲ ಭಾಗವನ್ನು ಇಲ್ಲಿ ಹಾಕುತ್ತೇನೆ. ದಯವಿಟ್ಟು ಇಟಾಲಿಕ್ಸ್ (ಕನ್ನಡ ಪದ ಗೊತ್ತಿಲ್ಲ) ನಲ್ಲಿರುವ ಸಾಲನ್ನು "ತಾಳ್ಮೆ"ಯಿಂದ ಎರೆಡೆರೆಡು ಸಲ ಓದಿರಿ.

  ’ನಾಳೆ ಒಳಗೆ ಪತ್ರಿಕೆ ಪ್ರಿಂಟಿಗೆ ಹೋಗಬೇಕಿದೆ, ದಯವಿಟ್ಟು
  ಒಂದೆರಡು ದಿನ ಬಿಟ್ಟು ಬನ್ನಿ’ ಅಂತ ವಿನಂತಿಯಿಂದ ಅಂದು, ಮತ್ತೆ ಎರಡನೇ ಬಾರಿ ಕೊಂಚ
  ದನಿ ಎತ್ತಿ ಅಂದರೂ ಆತ ಹೊರಡಲಿಲ್ಲ. ’ಐದೇ ನಿಮಿಷ ಮಾತಾಡ್ತೀನಿ.. ದಯವಿಟ್ಟು ಒಪ್ಪಿಗೆ
  ನೀಡಿ’ ಅಂತ ಮೆಲುದನಿಯಲ್ಲಿ ಆತ ಅಂದಾಗ ಸಂಪಾದಕರಿಗೆ ಒಪ್ಪಿಕೊಳ್ಳದೇ ವಿಧಿಯಿರಲಿಲ್ಲ.
  ಆಫೀಸಿನ ಹೊರಗಿನ ನಿರ್ಜನ ಕ್ಯಾಂಟೀನಿನ ಮೂಲೆಯೊಂದರಲ್ಲಿ ಬೈಟೂ ಕಾಫಿ ಜತೆ ಮಾತು
  ಆರಂಭವಾಯಿತು. ಆತ ಯಾರೆಂದು ಹೇಳಿಕೊಳ್ಳಲಿಲ್ಲ. ಒಬ್ಬ ಲೇಖಕನ ಗೆಳೆಯ ಅಂದುಕೊಳ್ಳಿ
  ಸಧ್ಯಕ್ಕೆ ಅಂದು ಬಿಟ್ಟ.
  ಅವನ್ಯಾರಾದರೆ ತನಗೇನು, ವಿಷಯ ಮುಗಿಸಿ ಬೇಗ ತನ್ನ ಟೇಬಲ್ಲು
  ಸೇರಿಕೊಳ್ಳುವ ತವಕದಲ್ಲಿದ್ದ ಸಂಪಾದಕರು ಅದಕ್ಕೆ ಅಷ್ಟು ಪ್ರಾಮುಖ್ಯತೆ ನೀಡಲಿಲ್ಲ.

  ***
  ಇದಕ್ಕೂ ಮೀರಿ ವಿವರಣೆ ಬೇಕು ಅನ್ನುವಿರಾದರೆ ಇದು “ನನ್ನದೇ ಘೋರ ತಪ್ಪು” ಅಂದುಕೊಂಡು ನಕ್ಕುಬಿಡಿ!

  ****

  ಇನ್ನು ನಿಮ್ಮ ಎರಡನೆಯ ಅನುಮಾನ >>address, limit, effective, condition ಮುಂತಾದ ಇಂಗ್ಲೀಷ್ ಪದಗಳಿಗೆ ಒಳ್ಳೆಯ ಕನ್ನಡ ಪದಗಳನ್ನೇ ಬಳಸಬಹುದಿತ್ತಲ್ವಾ? ಕತೆಯ ಓಘಕ್ಕೇನೂ ಧಕ್ಕೆಯಾಗುತ್ತಿರಲಿಲ್ಲ.<<

  ಹೌದು, ಬಳಸಬಹುದಿತ್ತು..:)

 13. ಶಿವಾನಂದ ಹೇಳುತ್ತಾರೆ:

  ನಿಮ್ಮ ಉತ್ತರಕ್ಕೆ ಧನ್ಯವಾದಗಳು.

  ನನ್ನ ಮೊದಲನೆಯ ಅನುಮಾನ ಪರಿಹಾರ ಮಾಡಿದ್ದಕ್ಕೆ thanks. ನಾನು ಸರಿಯಾಗಿ ಓದಿರಲಿಲ್ಲ ಅನ್ನಿಸುತ್ತದೆ. ಒಪ್ಪಿಕೊಳ್ಳುತ್ತೇನೆ. sorry.

  ಎರಡನೆಯದಾಗಿ , ’ಬಳಸಬಹುದಿತ್ತು’ ಎಂದು ಸುಮ್ಮನಾಗಿದ್ದೀರಿ. ಯಾಕೆ ಬಳಸಲಿಲ್ಲ ಅಂತ ನಾನು ಕೇಳಿಲ್ಲ ಅಂತ ನೀವೂ ಉತ್ತರ ಕೊಟ್ಟಿಲ್ಲ ಅಂದುಕೊಳ್ಳುತ್ತೇನೆ. ಇನ್ಮುಂದೆ ಕನ್ನಡ ಲೇಖನ ಬರೆಯುವಾಗ ಸಹಜವೆನಿಸುವ ಒಳ್ಳೆಯ ಕನ್ನಡ ಪದಗಳು ಇದ್ದರೂ ಕೂಡ ಇಂಗ್ಲೀಷ್ ಪದ ಸುಮ್ ಸುಮ್ನೇ ತುರುಕಬೇಡಿ ಅಂತ ಕನ್ನಡ ಓದುಗನಾಗಿ ಆಗ್ರಹಿಸಿದರೆ ನೀವು ಇಲ್ಲ ಎನ್ನುವುದಿಲ್ಲ ಅಂದುಕೊಳ್ಳುತ್ತೇನೆ.

  ಕುಹಕ ಬಿಟ್ಟು ಸರಿಯಾಗಿ ನೇರವಾಗಿ ಮಾತಾಡಿದರೆ ನಿಮಗೂ ಘನತೆ.

  ಹಾಗಿದ್ರೆ ’ಘನತೆ’ಯ ಡೆಫಿನಿಷನ್ ಈಗ ನಿಮಗೆ ಗೊತ್ತಾಯಿತು ಅನ್ನುತ್ತೀರಾ? bye

 14. ರಂಜಿತ್ ಹೇಳುತ್ತಾರೆ:

  ಶಿವಾನಂದ ಅವರೇ,

  ಕುಹಕಕ್ಕೆ ಕ್ಷಮೆಯಿರಲಿ. ಅನಾನಿಮಸ್ ಕಾಮೆಂಟುಗಳ ಮಹಾಪೂರದಲ್ಲಿ ಇದೂ ಒಂದು ಅನ್ನಿಸಿದ್ದರಿಂದ ಆ ರೀತಿ ಉತ್ತರಿಸಬೇಕಾಯ್ತು. ( ಅನಾನಿಮಸ್ ಕಾಮೆಂಟ್ ಅಂದರೆ ಹೆಸರಿಲ್ಲದೇ ಅನ್ನುವುದು ಮಾತ್ರ ಅಲ್ಲ, ಹೆಸರು ಬೇರೆ ಹಾಕಿ ಕೂಡ ಮಾಡಬಹುದಾದಂತಾದ್ದು, ಇಂತಹ ಕಹಿ ಅನುಭವ ನನಗೆ ಸಾಕಷ್ಟಾಗಿದೆ. ಇಂಗ್ಲೀಷ್ ಪದಗಳ ಮಳೆಯೇ ಇರುವ ಕನ್ನಡ ಬ್ಲಾಗುಗಳಲ್ಲಿ (ಅಷ್ಟೇಕೆ ಬೇರೆ ಬ್ಲಾಗುಗಳಲ್ಲೆಲ್ಲೂ) ನಿಮ್ಮ ಹೆಸರು ಗೋಚರಿಸಿಲ್ಲವಾದ್ದರಿಂದ ಇದೊಂದು ವೈಯುಕ್ತಿಕ ಮಟ್ಟದ ಕಾಮೆಂಟು ಅಂತ ಅಂದುಕೊಳ್ಳಬೇಕಾಯ್ತು) ನಿಮ್ಮ ಕನ್ನಡ ಪ್ರೇಮ ಖುಷಿ ಆದರೂ ಕನ್ನಡ ಪ್ರೇಮ ನಿಮ್ಮೊಬ್ಬರಿಗೇ ಅಲ್ಲ, ನಿಮ್ಮಷ್ಟೇ ನನಗೂ ಪಾಲಿದೆ ಅಂತ ನೆನಪಿಸಲು ಇಷ್ಟ ಪಡುತ್ತೇನೆ. ಅದರ ಕುರಿತು ನನ್ನ ಗೆಳೆಯರೂ, ಹತ್ತಿರದಿಂದ ಬಲ್ಲವರೂ ಇದನ್ನು ಅಲ್ಲಗೆಳೆಯಲಾರರು ಎಂದೂ ನಂಬುತ್ತೇನೆ.

  ಕನ್ನಡ ಪದವನ್ನು ಇಲ್ಲಿ “ಸುಮ್ ಸುಮ್ನೇ” ತುರುಕಿಲ್ಲ. ಅದಕ್ಕೆ ೨ ಕಾರಣ ಇದೆ. ಒಂದು ಪಾತ್ರಗಳ ಮಾತು. ಪಾತ್ರಗಳು ಒಬ್ಬರಿಗೊಬ್ಬರು ಮಾತಾಡುವಾಗ ಅದು ಕನ್ನಡ ಪದವೇ ಆಗಿರಬೇಕೆಂಬ ನಿಯಮ ಹಾಕುವುದು ಸರಿಯಲ್ಲ. ಪಾತ್ರಗಳು ಪಕ್ಕಕ್ಕಿರಲಿ ದೈನಂದಿನ ಮಾತುಗಳಲ್ಲೇ ಎಷ್ಟೊಂದು ಇಂಗ್ಲೀಷ್ ಪದಗಳು ನುಸುಳುವಾಗ ಪಾತ್ರಗಳು ಮಾತಾಡಬಾರದಿತ್ತು ಅನ್ನುವುದು ಸಮಂಜಸ ಅಲ್ಲ. ಮತ್ತು ೨ ನೆಯದ್ದು ಥ್ರಿಲ್ಲರ್ ಕತೆಗಳಿಗೆ ಕೆಲ ಇಂಗ್ಲೀಷ್ ಪದಗಳನ್ನು ಬಳಸುವುದರಲ್ಲಿ ಕತೆಗೆ ಓಟ ಸಿಗುವುದು ಮತ್ತು ಓದುಗನನ್ನು ಕೊಂಚಕಾಲ ಹಿಡಿದಿಟ್ಟುಕೊಳ್ಳಬಹುದು ಅಂತ ವೈಯುಕ್ತಿಕವಾಗಿ ಅನ್ನಿಸಿದ್ದರಿಂದ {ನೆನಪಿರಲಿ, ಇದು ವೈಯುಕ್ತಿಕ ಅಭಿಪ್ರಾಯ. ಇದಕ್ಕೆ ವಿರುದ್ಧವಾದ ಉದಾಹರಣೆಗಳೂ ಇಲ್ಲದಿಲ್ಲ. ಅದೇ ರೀತಿ ನನ್ನ ಬೇರೆ ಕತೆಗಳನ್ನು (ಭಾವುಕ ಕತೆಗಳಾದ್ದರಿಂದಲೇ ಅಂದುಕೊಳ್ಳುತ್ತೇನೆ) ನೋಡಿದರೆ ಇಂಗ್ಲೀಷ್ ಪದಗಳು ಇಲ್ಲವೇ ಇಲ್ಲ ಅನ್ನುವ ಹಾಗಿದೆ.} ಆದಷ್ಟೂ ತಪ್ಪಿಸಿದ್ದರೂ ಇಂಗ್ಲೀಷ್ ಪದಗಳು ನುಗ್ಗಿವೆ. ನಿಮ್ಮ ಮಾತನ್ನು ಗಮನದಲ್ಲಿರಿಸಿಕೊಂಡು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವೆ. ಧನ್ಯವಾದಗಳು.

  ಅದೇ ರೀತಿ ನೇರವಾಗಿ ಅನ್ನುವುದಾದರೆ ನೀವು ಕಾಮೆಂಟು ಹಾಕಿದ ಮರುದಿನವೇ ಉತ್ತರವನ್ನು ಬಯಸದಿರಿ, ಕಾಮೆಂಟಿಸಿದ ಎಲ್ಲರಿಗೂ ಉತ್ತರಿಸಿ ನಿಮಗೆ ಉತ್ತರ ನೀಡಿಲ್ಲವಾದರೆ ಅದೊಂದು ರೀತಿ (ಇಂತಹ ಅನುಭವ ಬ್ಲಾಗುಲೋಕದಲ್ಲೇ ಬಹಳಷ್ಟು ಬಾರಿ ನನಗಾಗಿದೆ) ಅದಲ್ಲವಾದರೆ ಉತ್ತರ ನೀಡಲು ನಮಗೂ ಕೊಂಚ ಸಮಯ ನೀಡಿ. (ಕುಹಕಕ್ಕೆ ಕ್ಷಮೆ ಬೇಡಿದ್ದರೂ, ಅದರೊಳಗಿನ ನೇರ ವಿಚಾರಕ್ಕೆ ಬದ್ಧನಾಗಿದ್ದೇನೆ)

  ಇನ್ನೊಂದು ವಿಚಾರ. ಓದುಗನಾಗಿ ಕನ್ನಡ ಪದ ಬಳಸಿರಿ ಅಂತ ಆಗ್ರಹ ಮಾಡುವ ಕಾಮೆಂಟಿನಲ್ಲಿಯೇ ನೀವು ಬೈ, ಥ್ಯಾಂಕ್ಸ್, ಸಾರಿ ಅಂತಹ (ಧನ್ಯವಾದಗಳು, ಕ್ಷಮೆಯಿರಲಿ, ಬರುತ್ತೇನೆ ಅಂತಹ ಸಿಹಿ ಕನ್ನಡ ಪದಗಳಿರುವಾಗ) ಇಂಗ್ಲೀಷ್ ಪದ ಉಪಯೋಗಿಸಿದ್ದು ಓದುವಾಗ ಕಹಿ ಅನ್ನಿಸಿತು.

 15. ಶಿವಾನಂದ ಹೇಳುತ್ತಾರೆ:

  ರಂಜಿತರಿಗೆ ನಮಸ್ಕಾರ,

  ತಮಗೆ ಪರಿಚಯವಿರದಿರುವವರನ್ನು, ತಮ್ಮನ್ನು ಹೊಗಳದವರನ್ನು, ತಮ್ಮ ತಪ್ಪು ತೋರಿಸುವವರನ್ನು ’ಅನಾಮಿಕರು’ ಅಂದುಕೊಳ್ಳುವುದು ನಮ್ಮ ಬ್ಲಾಗಿಗರ ಜಾಯಮಾನ ಎಂದು ತಿಳಿದಿದೆ. ಅದಕ್ಕೇನು ನಾನೇನು ಮಾಡಲಾರೆ. ಹೌದು ನಾನು ಸುಮಾರು ಬ್ಲಾಗ್ ಗಳನ್ನು ಓದುತ್ತೇನೆ. ಜಾಸ್ತಿ ಕಡೆ ಕಮೆಂಟುಗಳನ್ನು ಬರೆದಿಲ್ಲ. ಇದುವರೆಗೂ ಒಂದೈದಾರು ಕಡೆ ಬರೆದಿರಬಹುದು. ನಿಮ್ಮ ಬ್ಲಾಗ್ ಗೆ ಕಮೆಂಟ್ ಬರೆಯಬೇಕು ಎಂದರೆ ಬೇರೆ ಕಡೆಗಳಲ್ಲೆಲ್ಲಾ ಬರೆದು ಪ್ರಸಿದ್ಧಿಯಾಗಿ ನಂತರ ಇಲ್ಲಿ ಬರೆಯಬೇಕು ಅಂತ ನನಗೆ ಗೊತ್ತಿರಲಿಲ್ಲ. ಅಲ್ಲೆಲ್ಲೋ ಇಂಗ್ಲೀಷ್ ಪದಗಳ ಮಳೆ ಇದೆ ಎಂದು ಅಂತಹ ಬ್ಲಾಗ್ ಗಳನ್ನೆಲ್ಲಾ ಹುಡುಕಿ ಅಲ್ಲಿ ಬರೆದು ನಂತರ ನಿಮ್ಮ ಇಂಗ್ಲೀಷ್ ತೋರಿಸಿದರೆ ಮಾತ್ರ ನ್ಯಾಯ ಅಂತಲೂ ಗೊತ್ತಿರಲಿಲ್ಲ. ಕ್ಷಮಿಸಿ.

  ಕನ್ನಡ ಪ್ರೇಮ ನನಗೊಬ್ಬನಿಗೇ ಇದೆ ಅಂತ ನಾನೆಲ್ಲೂ ಬರೆದಿದ್ದು ನೆನಪಿಲ್ಲ. ನಿಮಗೇನಾದರೂ ಕಾಣಿಸಿದರೆ ತೋರಿಸಿ. ನೀವು ಕನ್ನಡ ಪ್ರೇಮಿಯಾಗಿದ್ದರೆ ಭಾರೀ ಸಂತೋಷ. ನಾನು ಹೇಳುತ್ತಿರುವುದು ಅದೇ. ಗೆಳೆಯರ ಎದುರು, ಬೀದಿಯಲ್ಲಿ ನಿಂತು ಕನ್ನಡ ಪ್ರೇಮವನ್ನು ತೋರಿಸುವುದು ಬೇಡ. ನಮ್ಮ ಪಾಡಿಗೆ ನಾವು ಬಳಸುವಾಗ ತೋರಿಸೋಣ ಎಂದು. ನಾನು ಮಾತಿನಲ್ಲಿ ಬರುವ ಅತಿಸಾಮಾನ್ಯವಾಗಿ ಬಳಸುವ ಇಂಗ್ಲೀಷ್ ಪದಗಳನ್ನು(time, thanks, shock etc) ಬೇಡ ಎನ್ನಲಿಲ್ಲ. ನಿಮ್ಮ adress, condition, limit ಮುಂತಾದ ಪದಗಳು ಯಾವ ಪಾತ್ರದ ಮಾತಿನಲ್ಲೂ ಬಳಕೆಯಾಗಿಲ್ಲ ಎಂಬುದನ್ನು ಗಮನಿಸಿ. ನೀವು ಬಳಸಿದ ಪದಗಳು ಬರಹದಲ್ಲಿ ಸಾಮಾನ್ಯವಾದುದಲ್ಲ. ಅದಕ್ಕೇ ಹೇಳಿದೆ. ನಾವಂತೂ ಎಷ್ಟೋ ಕನ್ನಡ ಪದಗಳನ್ನು ನಾವು ಓದಿರುವ ಪುಸ್ತಕಗಳಿಂದಲೇ ತಿಳಿದುಕೊಂಡದ್ದು. ಮಾತಾಡುವಾಗ ಹಾಗೇ ಮಾತಾಡುತ್ತೇವೆ ಎಂದು ಈಗ ಇಪ್ಪತ್ತು ವರ್ಷಗಳ ಹಿಂದಿನಿಂದಲೂ ನಿಮ್ಮ ಹಾಗೆ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಕಂಡೀಷನ್, ಅಡ್ರೆಸ್ , ಲಿಮಿಟ್ ಅಂತ ಬರೆಯುತ್ತಾ ಬಂದಿದ್ದರೆ ನಮಗೆ ಇವತ್ತು ಅದಕ್ಕೆ ಕನ್ನಡ ಪದ ಏನು ಅಂತಲೇ ಗೊತ್ತಿರುತ್ತಿರಲಿಲ್ಲವೇನೋ!. ಮುಂದೆ ಹಾಗಾಗದಿರಲಿ ಎಂದು ನಾವು ಕೂಡ ಆದಷ್ಟು ಬರೆಯುವಾಗಲಾದರೂ ಕನ್ನಡ ಪದ ಬಳಸೋಣ ಎಂದು ಹೇಳಿದೆ ಅಷ್ಟೆ. ಅದೇನು ನಿಯಮವಲ್ಲ. ಇಲ್ಲಿ ಕನ್ನಡ ಪದ ಹಾಕುವುದರಿಂದ ಕಥೆಯ thrillಗೆ ಅಡ್ಡಿಯಾಗುವುದಿಲ್ಲ ಎಂದು ನನ್ನ ಅನಿಸಿಕೆ. ನಿಮಗೆ ಅದು ಸರಿ ಎನಿಸದಿದ್ದರೆ ಅದನ್ನೂ ಕ್ಷಮಿಸಿಬಿಡಿ. ನಾನೂ ನಿಮ್ಮ ಬುದ್ದಿವಾದ ಒಪ್ಪಿಕೊಂಡು ತಿದ್ದಿಕೊಳ್ಳುತ್ತೇನೆ.

  ಕಮೆಂಟು ಹಾಕಿದ ಮಾರನೇ ದಿನಕ್ಕೇ ಉತ್ತರದ ಅವಸರ ಮಾಡಿದ್ದು ನನ್ನ ತಪ್ಪು ಹೌದು. ಕನ್ನಡಪ್ರಭದ ತಪ್ಪು ತೋರಿಸಿ ಬರೆದ ನಿಮ್ಮ ಬ್ಲಾಗ್ ನಲ್ಲಿ ನೋಡಿ. ಬ್ಲಾಗಿಗರು ಕಮೆಂಟ್ ಗಳಿಗೆ ಉತ್ತರಿಸುವ ’ಸೌಜನ್ಯ’ ತೋರಿಸುವುದಿಲ್ಲ ಎಂದು ನೀವೇ ಬರೆದುಕೊಂಡಿದ್ದೀರಿ. ಸೌಜನ್ಯದ definition ನಿಮಗೇ ಮೊದಲೇ ಗೊತ್ತಿತ್ತು ಅಲ್ಲವೇ?

  ಅದೆಲ್ಲಾ ಇರಲಿ. ನೀವು ಚೆನ್ನಾಗಿ ಬರೆಯುತ್ತೀರಿ. ಹೀಗೆ ಮುಂದುವರೆಸಿ. ಶುಭವಾಗಲಿ. ಬರುತ್ತೇನೆ 🙂

 16. ರಂಜಿತ್ ಹೇಳುತ್ತಾರೆ:

  ನಿಮ್ಮ ಈ ಕಾಮೆಂಟ್ ಓದಿದ ಮೇಲೆ ಮೊದಲಿಗೆ ಕುಹಕ, ಘನತೆ ಅಂತೆಲ್ಲಾ ಅಂದವರು ನೀವೇನಾ ಅನ್ನುವುದು ನನ್ನದೊಂದು ಅನುಮಾನ..:)

  >>ತಮಗೆ ಪರಿಚಯವಿರದಿರುವವರನ್ನು, ತಮ್ಮನ್ನು ಹೊಗಳದವರನ್ನು, ತಮ್ಮ ತಪ್ಪು ತೋರಿಸುವವರನ್ನು ’ಅನಾಮಿಕರು’ ಅಂದುಕೊಳ್ಳುವುದು ನಮ್ಮ ಬ್ಲಾಗಿಗರ ಜಾಯಮಾನ ಎಂದು ತಿಳಿದಿದೆ. ಅದಕ್ಕೇನು ನಾನೇನು ಮಾಡಲಾರೆ.<>ನಿಮ್ಮ ಬ್ಲಾಗ್ ಗೆ ಕಮೆಂಟ್ ಬರೆಯಬೇಕು ಎಂದರೆ ಬೇರೆ ಕಡೆಗಳಲ್ಲೆಲ್ಲಾ ಬರೆದು ಪ್ರಸಿದ್ಧಿಯಾಗಿ ನಂತರ ಇಲ್ಲಿ ಬರೆಯಬೇಕು ಅಂತ ನನಗೆ ಗೊತ್ತಿರಲಿಲ್ಲ. ಅಲ್ಲೆಲ್ಲೋ ಇಂಗ್ಲೀಷ್ ಪದಗಳ ಮಳೆ ಇದೆ ಎಂದು ಅಂತಹ ಬ್ಲಾಗ್ ಗಳನ್ನೆಲ್ಲಾ ಹುಡುಕಿ ಅಲ್ಲಿ ಬರೆದು ನಂತರ ನಿಮ್ಮ ಇಂಗ್ಲೀಷ್ ತೋರಿಸಿದರೆ ಮಾತ್ರ ನ್ಯಾಯ ಅಂತಲೂ ಗೊತ್ತಿರಲಿಲ್ಲ<>ನಾನು ಮಾತಿನಲ್ಲಿ ಬರುವ ಅತಿಸಾಮಾನ್ಯವಾಗಿ ಬಳಸುವ ಇಂಗ್ಲೀಷ್ ಪದಗಳನ್ನು(time, thanks, shock etc) ಬೇಡ ಎನ್ನಲಿಲ್ಲ. ನಿಮ್ಮ adress, condition, limit ಮುಂತಾದ ಪದಗಳು ಯಾವ ಪಾತ್ರದ ಮಾತಿನಲ್ಲೂ ಬಳಕೆಯಾಗಿಲ್ಲ ಎಂಬುದನ್ನು ಗಮನಿಸಿ. <>address, limit, effective, condition ಮುಂತಾದ ಇಂಗ್ಲೀಷ್ ಪದಗಳಿಗೆ ಒಳ್ಳೆಯ ಕನ್ನಡ ಪದಗಳನ್ನೇ ಬಳಸಬಹುದಿತ್ತಲ್ವಾ? ಕತೆಯ ಓಘಕ್ಕೇನೂ ಧಕ್ಕೆಯಾಗುತ್ತಿರಲಿಲ್ಲ.<<
  ಹೌದು, ಬಳಸಬಹುದಿತ್ತು..:) (ಮೊದಲ ಕಾಮೆಂಟು)

  “”ಆದಷ್ಟೂ ತಪ್ಪಿಸಿದ್ದರೂ ಇಂಗ್ಲೀಷ್ ಪದಗಳು ನುಗ್ಗಿವೆ. ನಿಮ್ಮ ಮಾತನ್ನು ಗಮನದಲ್ಲಿರಿಸಿಕೊಂಡು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವೆ. ಧನ್ಯವಾದಗಳು.”” (೨ ನೆಯದ್ದು)

  ಹಾಗೆಯೇ ನಿಮ್ಮ ಆಗ್ರಹವನ್ನು ಒಪ್ಪಿಕೊಂಡೇ ಕಥೆಯ ಪಾತ್ರದ್ದೊಂದು ಸಂಭಾಷಣೆ : (ಇಟಾಲಿಕ್ಸ್ ನಲ್ಲಿರುವುದನ್ನು ಗಮನಿಸಬೇಕು)

  ೧.””ಇಷ್ಟನ್ನು ಹೇಳೋದಕ್ಕೆ ನನ್ನ ಈ ಟೈಮ್ ಬೇಕಾಯ್ತೇನಪ್ಪಾ
  ನಿಂಗೆ? ನನಗೆ ಬೇಕಿರೋದು ಸಣ್ಣ ಕಥೆ. ಅದಕ್ಕೇ ಆ ರೀತಿ ಕಂಡೀಷನ್ ಕೊಟ್ಟಿದ್ದು.
  ಅದನ್ನು ಸಡಿಲಿಸೋದು ಸಾಧ್ಯಾನೇ ಇಲ್ಲ!””

  ೨. “”ಅದಕ್ಕೆ ಕಡಿಮೆ ಪದದಲ್ಲಿ ತುಂಬ
  ಎಫೆಕ್ಟಿವ್ ಆಗಿ ಮೂಡಿ ಬಂತು ಅನ್ನಿಸುತ್ತೆ…”””

  ***************

  >>ಕನ್ನಡಪ್ರಭದ ತಪ್ಪು ತೋರಿಸಿ ಬರೆದ ನಿಮ್ಮ ಬ್ಲಾಗ್ ನಲ್ಲಿ ನೋಡಿ. ಬ್ಲಾಗಿಗರು ಕಮೆಂಟ್ ಗಳಿಗೆ ಉತ್ತರಿಸುವ ’ಸೌಜನ್ಯ’ ತೋರಿಸುವುದಿಲ್ಲ ಎಂದು ನೀವೇ ಬರೆದುಕೊಂಡಿದ್ದೀರಿ.<<

  ನಿಮ್ಮ ಎರಡನೆಯ ಅನಿಸಿಕೆ ಕಂಡೇ ಊಹಿಸಿದ್ದೆ, ನೀವು ಯಾವ ಲೇಖನ ಓದಿ, ಮತ್ತೆ ಯಾಕೆ ಅನಿಸಿಕೆ ನೀಡಲು ಬಂದಿದ್ದು ಎಂದು:)

  ******
  ಹಾಗೆಯೇ ಇಲ್ಲಿಗೆ ಕಾಮೆಂಟುಗಳನ್ನು ನಿಲ್ಲಿಸುತ್ತೇನೆ. ನಿಮ್ಮ ಅನಿಸಿಕೆಯ ಒಳವಿಷಯ ಅರಿವಾಗಿದ್ದು, ಸರಿಪಡಿಸಿಕೊಳ್ಳುವೆ ಅಂತ ಮೊದಲೆರಡು ಕಾಮೆಂಟಿನಲ್ಲಿ ಹೇಳಿದ್ದನ್ನೇ ಪುನರುಚ್ಚರಿಸುತ್ತೇನೆ. ಇಂಥ ವಿಚಾರಕ್ಕೆ ನನ್ನನ್ನು ಎಚ್ಚರಿಸಿದ್ದಕ್ಕೆ ಕೃತಜ್ಞನಾಗಿದ್ದೇನೆ. ಮುಂದೆಯೂ ಇಂಥ ಅನಿಸಿಕೆಗಳನ್ನೂ (ನನ್ನ ತಪ್ಪುಗಳನ್ನು ವಿವರಿಸಿದ್ದನ್ನೂ ಸೇರಿಸಿ ) ಸ್ವಾಗತಿಸುತ್ತೇನೆ. ಧನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s