ಲಕ್ಷ ಲಕ್ಷ ಚುಚ್ಚುವಿಕೆಯ ನಿಶಾನಿಯಿರುವ ರಾತ್ರಿಯಾಗಸದ ಕತೆ…!

Posted: ಡಿಸೆಂಬರ್ 11, 2009 in ಲವ್ ಲೆಟರ್

“ನೇವರಿಸಿ ಸಾಗಿದೆ ತಂಗಾಳಿಯೊಂದು ಸೋಕಿ

ನೆನಪಿನಲ್ಲಿ ಸುಳಿದಂತೆ ನನ್ನ ದೇವಕಿ!”

ಹೀಗೆ ಒಬ್ಬನೇ ಹಾಡಿಕೊಳ್ಳುತಿರುತ್ತಿದ್ದೆ. ನನ್ನ ಒಂಟಿತನದಲಿ ಬಹುಮುಖ್ಯ ಸಾಥಿ ನಿನ್ನ ನೆನಪುಗಳು. ಅವು ಬರೆಸಿದ ಒಂದಿಷ್ಟು ಕವಿತೆಗಳು. ಇತ್ತ ವಿರಹ ಕ್ಷಣ ಕ್ಷಣವೂ ವಿಷವುಣಿಸುತ್ತಿದ್ದರೆ ಕವಿತೆಗಳು ನನ್ನಲ್ಲಿ ಉಸಿರುಮೂಡಿಸುತ್ತಿದ್ದವು.  ಅವುಗಳಿಂದಲೇ ಕಾಲಕಳೆಯುತಿತ್ತು. ಆದ್ದರಿಂದಲೇ ಬಹುಶಃ ನಾನೂ ಉಳಿದದ್ದು.

ಒಳಗಿನ ಭಾವನೆಗಳನ್ನು ಈ ಬ್ಲಾಗಲ್ಲದೇ ನಿನಗೆ ತಿಳಿಸುವುದಾದರೂ ಹೇಗಿತ್ತು? ಎಷ್ಟೊಂದು ಭಾವಗಳು ಎದೆಯಲ್ಲಿ ಕುದಿಯುತ್ತಿದ್ದವು? ನಿನ್ನ ಒಂದು ಮುಖದರ್ಶನಕ್ಕಾಗಿ ಜನುಮವಿಡೀ ಕಾಯುವ ಶಿಕ್ಷೆ ವಿಧಿಸಿದರೂ ಪರವಾಗಿಲ್ಲ ಅನ್ನುವಷ್ಟು ಎಲ್ಲ ಕಳಕೊಂಡ ಫಕೀರನಾಗಿದ್ದೇನೆ. ಆಗಷ್ಟೇ ಖಾರ ತಿಂದವ ನೀರು ಬಯಸುವಷ್ಟು ತೀವ್ರವಾಗಿ ನಿನ್ನ ನೋಡಬೇಕು, ಒಮ್ಮೆ ನಿನ್ನ ಮಡಿಲು ಸೇರಬೇಕು, ನನ್ನೆಲ್ಲಾ ವಿರಹ, ನೋವುಗಳು ನಿನ್ನ ಮಡಿಲಿನಲ್ಲಿ ಕೊನೆಯುಸಿರೆಳೆವುದನ್ನು ಕಾಣಬೇಕು ಅನ್ನುವ ಭಾವ. ಆದರೆ ಒದ್ದಾಡುವಂತೆ ಮಾಡುವ ಈ ಸಾವಿರ ಸಾವಿರ ಮೈಲುಗಳ ದೂರ. ಶತ್ರುವಾಗಿರುವ ಏಳು ಸಾಗರಗಳು ನಮ್ಮೀರ್ವರ ನಡುಮಧ್ಯೆ.

ನಾನೀಗ ಡಾಲರುಗಳ ಊರಲ್ಲಿ ಕನಸುಗಳನ್ನು ಕಳಕೊಂಡ, ಮುಂದಿನ ಯಾವುದೋ ಅಮೃತಘಳಿಗೆಗಾಗಿ ನನ್ನ ಈಗಿನ ಕ್ಷಣಗಳನ್ನು ಒತ್ತೆಯಿಟ್ಟ, ಎಂದೋ ಒಮ್ಮೆ ದೊರಕಬಹುದಾದ, (ದೊರಕದೆಯೂ ಇರಬಹುದಾದ) ಪ್ರೀತಿಗಾಗಿ ಬದುಕಿನ ಮುಖ್ಯಭಾಗದ ಕಪ್ಪ ಒಪ್ಪಿಸಿದ ಹುಡುಗ.

ಇಲ್ಲಿನ ಚಳಿಯಲ್ಲಿ ನಿನ್ನ ನೆನಪು ಕಾಡೋದಂದರೆ ಅದನ್ನು ಬರೀ ಪದಗಳಲ್ಲಿ ವಿವರಿಸೋದು ಹ್ಯಾಗೆ ಸಾಧ್ಯ? ಅದು ಉಪಮಾನಗಳೇ ನೀಡಲಾಗದ ನೋವಿನನುಭವದ ಕಂತೆ. ಲಕ್ಷ ಲಕ್ಷ ಚುಚ್ಚುವಿಕೆಯ ನಿಶಾನಿಯಿರುವ ರಾತ್ರಿಯಾಗಸದ ಕತೆ. ಅದರ ಕೆಲಸ, ಕೇವಲ ನೀನು ನನ್ನ ಬಳಿಯಿಲ್ಲ ಎಂಬ ಸೂಜಿಯನ್ನೇ ಮತ್ತೆ ಮತ್ತೆ ನಾಟುವುದು. ನೆನಪುಗಳ ಈ ಬಗೆಯ ಕಾಡುವಿಕೆಯಿಂದ ತಪ್ಪಿಸಿಕೊಳ್ಳಬೇಕಾದರೆ ಮಾಡಬೇಕಾದ್ದೇನು? ನಾನು ಮತ್ತೆ ಸಂತಸದಲ್ಲಿರಲು, ಬದುಕಬೇಕೆಂಬ ಸ್ಪೂರ್ತಿ ಬರಲು, ಪ್ರೀತಿಯ ಮೇಲೆ ನಂಬಿಕೆ ಹುಟ್ಟಲು, ಸಧ್ಯಕ್ಕೆ ಮಾಡಿಯೇ ತೀರಬೇಕಾದ್ದು ಏನು?

ಹೀಗನ್ನಿಸಿದ್ದರಿಂದ ಡಾಲರುಗಳ ಕನಸುಗಳು ತೂಕ ಕಳಕೊಂಡಿವೆ. ಶತ್ರುವಿನಂಥ ಏಳು ಸಾಗರಗಳು ದೃಷ್ಟಿಯುದ್ಧದಲ್ಲೇ ಸೋತ ಸೈನಿಕನಂತಾಗಿವೆ. ನನಗೆ ಎಲ್ಲಕ್ಕಿಂತ ಮುಖ್ಯವಾಗಿರುವ ನಿನ್ನ ಬಿಟ್ಟು ಇದ್ಯಾಕೆ, ಇದೇನು, ಇದ್ಯಾವುದರ ಹಿಂದೆ ಬಿದ್ದಿದ್ದೇನೆ ಅನ್ನಿಸತೊಡಗಿದೆ. ನಿನ್ನ ನೋಟದ ಇಂಧನವಿಲ್ಲದೇ ಖಾಲಿಯಾದ ವಿಮಾನದಂತಾಗಿದೆ ನನ್ನೀ ಮನಸ್ಸು.

ಇಲ್ಲಿ ಸಮಯ ಕಳೆಯಲಾಗುತ್ತಿಲ್ಲ. ಬದುಕಲಾಗುತ್ತಿಲ್ಲ. ನಾನು ಕೃಶವಾಗಿಹೋಗುತ್ತಿದ್ದೇನೆ ಅನ್ನಿಸುತ್ತಿದೆ. ಒಮ್ಮೆ ನಿನ್ನ ನೋಡಬೇಕು, ಎಲ್ಲೋ ಮೂಲೆಯಲ್ಲಿ ನಿಂತು ಕದ್ದಾದರೂ ಸರಿ. ಮತ್ತೆ ಒಂಚೂರು ಬಾಳುವ ಆಸೆ ಬದುಕೀತು ಅನ್ನಿಸಿದೆ. ಅದಕ್ಕೆ ಎಲ್ಲಾ ತೊರೆದು ಬರುತ್ತಿದ್ದೇನೆ ದೇವಕಿ. ಈಗೀಗ

“ನೇವರಿಸಿ ಸಾಗಿದೆ ತಂಗಾಳಿಯೊಂದು ಸೋಕಿ

ಕಣ್ಣೆದುರೇ ಸುಳಿದಂತೆ ನನ್ನ ದೇವಕಿ..”

ಅಂತ ಹಾಡಿಕೊಳ್ಳುತ್ತಿದೆ ಮನಸ್ಸು!

–(“ನನ್ನ ದೇವಕಿ” ಬ್ಲಾಗಿಗಾಗಿ “ವಾಸು” ಆಗಿ ಬರೆದಿದ್ದು..:))

ಟಿಪ್ಪಣಿಗಳು
 1. ದಿವ್ಯಾ ಹೇಳುತ್ತಾರೆ:

  Superb Ranjith ! ಪ್ರತಿ ಸಾಲುಗಳೂ ಒಂದನ್ನು ಮತ್ತೊಂದು ಮೀರಿಸುವಂತಿವೆ.. Keep it up.

 2. lakshmi ಹೇಳುತ್ತಾರೆ:

  hi ranjith… simply superb….every line is a poem….

 3. svatimuttu ಹೇಳುತ್ತಾರೆ:

  ಅಣ್ಣ ಈ ಲೇಖನ different ಆಗಿದೆ.. ಹಾಗೂ ತುಂಬಾ ಚೆನ್ನಾಗಿದೆ…:)…
  -ಇಂಚರ

 4. mallige ಹೇಳುತ್ತಾರೆ:

  tumba channagi barediruve ranjita avre….
  hige bareyuva kanasugalu namage ellavalla annuva nouv ede.
  all the best…

  sharanu hullur

 5. ರಂಜಿತ್ ಹೇಳುತ್ತಾರೆ:

  ದಿವ್ಯಾ,

  ಥ್ಯಾಂಕ್ಯೂ. ತುಂಬ ಹಿಂದೆ ಬರೆದಿದ್ದು. ಅದರ ನಂತರ ಬರೆದಿದ್ದೆಲ್ಲವೂ ಇದಕ್ಕಿಂತ ಉತ್ತಮ ಮಟ್ಟ ಕಾಯ್ದುಕೊಂಡಿದ್ದೇನೆ (ಅಂತ ಅಂದುಕೊಂಡಿದ್ದೇನೆ..;))

 6. ರಂಜಿತ್ ಹೇಳುತ್ತಾರೆ:

  ಲಕ್ಷ್ಮೀ,

  ಬ್ಲಾಗಿಗೆ ಸ್ವಾಗತ. ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಇಂತಹ ಅನಿಸಿಕೆಗಳು ಖಂಡಿತಾ ನನ್ನ ಮುಂದಿನ ಬರಹಗಳಿಗೆ ಪ್ರೇರಣೆ.

  ಸ್ವಾತಿ ಮುತ್ತು,

  ಥ್ಯಾಂಕ್ಯೂ ಕಣಮ್ಮಾ. ಇದು ಜೋಗುಳ ಧಾರಾವಾಹಿ ಯ ಬ್ಲಾಗಿಗಾಗಿ ಬರೆದದ್ದು.

 7. ರಂಜಿತ್ ಹೇಳುತ್ತಾರೆ:

  ಶರಣು ಸರ್,

  ನಿಮ್ಮ ಅನಿಸಿಕೆ ನೋಡಲು ಖುಷಿ ಮತ್ತು ಹೆಮ್ಮೆ. (ಆದರೂ ನಿಮ್ಮ ಅನಿಸಿಕೆಯು ಕನ್ನಡದಲ್ಲಿದ್ದಿದ್ದರೆ ಕಣ್ಣಿಗಿನ್ನೂ ಹಿತವಿತ್ತು).

  ನನಗಿಂತ ಅದ್ಭುತವಾಗಿ ಬರೆಯುವವರು ನೀವು, ಹೀಗಂದು ನನ್ನನ್ನು ಕುಬ್ಜನನ್ನಾಗಿಸುತ್ತಿದ್ದೀರಿ.

  ಹಾಗಿದ್ದರೂ ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಋಣಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s