ಕೆಲವೊಮ್ಮೆ ಸಾವು ಕೂಡ ಒಂದು ಹಕ್ಕು!

Posted: ಡಿಸೆಂಬರ್ 25, 2009 in ಸಿನೆಮಾ

ಸಾವು ಅಂದರೇನು?

ಸಾವು ಅಂದರೆ ಶೂನ್ಯ.. ಹುಟ್ಟುವ ಮೊದಲಿರುತ್ತಲ್ಲ.. ಅಂಥ ಶೂನ್ಯ!

******

ಮೊದಲೇ ತುಂಬ ಸಲ ಬರೆದುಕೊಂಡಿರುವ ಹಾಗೆ ಪ್ರೀತಿ ಮತ್ತು ಸಾವು ನನ್ನನ್ನು ಸದಾ ಕಾಡುವ ೨ ವಿಚಾರಗಳು. ಇತ್ತೀಚೆಗೆ ಅಕಸ್ಮಾತ್ತಾಗಿ ಒಂದು ಡೀವಿಡಿ ಕಣ್ಣಿಗೆ ಬಿತ್ತು. ಸಾರಾಂಶ ನೋಡುತ್ತಿದ್ದರೆ ಅದು ದಯಾಮರಣದ ಕುರಿತಾಗಿತ್ತು. ಕೂಡಲೇ ತೀವ್ರ ಆಕರ್ಷಿತನಾಗಿ ನೋಡಲೇಬೇಕೆಂಬ ಮನಸ್ಸಿನ ಒತ್ತಾಯಕ್ಕೆ ಗಂಟು ಬಿದ್ದೆ.

ಅದೇ ಈ ಸಿನೆಮಾ “ಮಾರ್ ಅದೆಂತ್ರೊ”

*****

ಮಾರ್ ಅದೆಂತ್ರೊ (ದ ಸೀ ಇನ್ ಸೈಡ್) ಅನ್ನುವ ಚಿತ್ರ ೨೦೦೪ ರ ಕೊನೆಯಲ್ಲಿ ಬಿಡುಗಡೆಯಾಗಿ ಆಸ್ಕರ್ ಗೆದ್ದಂಥ ಸ್ಪೈನ್ ದೇಶದ ಸಿನೆಮಾ. ಘನತೆಯೊಂದಿಗೆ ಸಾವು ಬಯಸುವ ವ್ಯಕ್ತಿಯ ವೈಯುಕ್ತಿಕ ಮತ್ತು ಸಾಮಾಜಿಕ ತಳಮಳವೇ ಇದರ ಹಂದರ. ದಯಾಮರಣದ ಒಂದು ಮಜಲನ್ನು ಹೃದಯಸ್ಪರ್ಶಿಯಾಗಿ ಬಿಂಬಿಸುವ ನೈಜ ಕಥೆ ಹೊಂದಿದೆ.

ಇದರ ಕಥೆ ಭಾವುಕತನದ ಎಳೆ ಮೇಲೆ ಸಾಗುತ್ತದೆ. ರಮೊನ್ ಎಂಬ ಹಡಗಿನ ಮೆಕ್ಯಾನಿಕ್ ತನ್ನ ಇಪ್ಪತ್ತೈದನೆ ವಯಸ್ಸಿನಲ್ಲಿ ಒಂದು ದುರ್ಘಟನೆಗೀಡಾಗಿ ಕ್ವಾಡ್ರಿಪ್ಲೆಜಿಯಾ ಎನ್ನುವ ರೋಗಕ್ಕೆ ತುತ್ತಾಗುತ್ತಾನೆ. ಅದರಿಂದ ಕೈ ಕಾಲಿನ ಸ್ಪರ್ಶಜ್ಞಾನ ಕಳಕೊಳ್ಳುತ್ತಾನೆ. ಅಡ್ಡ ಮಲಗಿಸಲು, ತನ್ನ ಕೈಯೆತ್ತಿ ಪಕ್ಕ ಇಡಲೂ ಇನ್ನೊಬ್ಬರ ಸಹಾಯ ಬೇಕೆನ್ನುವಂಥ ಭೀಕರ ಪರಿಸ್ಥಿತಿ. ದಿನವಿಡೀ ಹಾಸಿಗೆಯಲ್ಲೇ ಕಳೆಯುತ್ತಾ ಇದ್ದು ಕಿಟಕಿಯೊಂದು ಆತನ ಪ್ರಪಂಚ ಆಗಿಬಿಟ್ಟಿರುತ್ತದೆ. ಹೀಗೆಯೇ ೨೮ ವರ್ಷ ಕಳೆದಿರುತ್ತಾನೆ. ವೀಲ್ ಚೇರ್ ಬಳಸಬಹುದಾದರೂ ಅದೆಂದರೆ ಅವನಿಗೆ ಅಲರ್ಜಿ. ಅವನ ಅಣ್ಣನ ಮನೆಯಲ್ಲಿ ಉಳಿದುಕೊಂಡು ಅತ್ತಿಗೆಯಿಂದ ಆರೈಕೆ ಮಾಡಿಸಿಕೊಳ್ಳುತ್ತಿರುತ್ತಾನೆ. ಅವನ ಶಶ್ರೂಷೆ-ಪಾಲನೆಗಳು ತುಂಬಾ ಪ್ರೀತಿಯಿಂದ ನಡೆಯುತ್ತಿದ್ದರೂ ಅವನೊಳಗೆ ತೀವ್ರ ಪಾಪಪ್ರಜ್ಞೆ. ಅವನಿಗೆ ಸಾಯಬೇಕನ್ನಿಸುತ್ತಿರುತ್ತದೆ. ಆದರೆ ತಾನು ಆತ್ಮಹತ್ಯೆ ಮಾಡಿಕೊಳ್ಳಲೂ ಬೇರೆಯವರ ಸಹಾಯ ಬೇಕಾಗುವ ಹೀನಾಯ ಸ್ಥಿತಿಯಲ್ಲಿರುತ್ತಾನೆ. ಹೀಗಾಗಿ ಅವನು ದಯಾಮರಣಕ್ಕಾಗಿ ನ್ಯಾಯಾಲಯದಲ್ಲಿ ಕೇಳಿರುತ್ತಾನೆ.

ಅದಕ್ಕಾಗಿ ಒಬ್ಬ ಲಾಯರ್ (ಜೂಲಿಯಾ) ಅವನನ್ನು ನೋಡಲು ಬರುವುದರಿಂದ ಚಿತ್ರ ಪ್ರಾರಂಭವಾಗುತ್ತದೆ. ಅಲ್ಲಿಂದ ಭಾವನಾತ್ಮಕ ಪಯಣ ಶುರುವಾಗುತ್ತದೆ. ನೀನು ಸಾಯಲು ಯಾಕೆ ಬಯಸುತ್ತಿದ್ದೀ? ಎಂದು ಜೂಲಿಯಾ ಕೇಳಿದಾಗ ಅವನು ಒಂದು ಉದಾಹರಣೆ ನೀಡುತ್ತಾನೆ. ಪಕ್ಕದಲ್ಲೇ ಕುಳಿತಿದ್ದ ಅವಳ ಕೈಗಳಿಗೂ ಅವನ ಕೈಗಳಿಗೂ ಅಂತರ ಮೂರು ಅಡಿ. ಅವಳಿಗೆ ಆ ಮೂರು ಅಡಿಯೆಂದರೆ ಏನೇನೂ ಅಲ್ಲ. ಆದರೆ ಅವನ ಪಾಲಿಗೆ ಆ ಮೂರು ಅಡಿಯೆಂದರೆ ಅಸಾಧ್ಯದ ಪ್ರತೀಕ. ಅನಂತ ದೂರ.

ಹೀಗನ್ನುತ್ತಾ ಕಾಡುವ ಅವನಿಗೆ ತೀವ್ರವಾದ ನೋವುಗಳನ್ನು ನಗುವಿನಿಂದ ಮುಚ್ಚುವ ಕಲೆ ಗೊತ್ತು. ಕೆಲವೊಮ್ಮೆ ಸಾವನ್ನು ಆಡಿಕೊಂಡು ನಗುವವನಂತೆಯೂ, ಕೆಲವೊಮ್ಮೆ ಅದಕ್ಕಾಗಿ ತೀವ್ರ ಹಪಾಹಪಿಯಿಂದ ಕಾಯುವ ಮೋಹಿತನಂತೆಯೂ ಕಾಡುತ್ತಾನೆ. ಒಮ್ಮೆ ಆತನನ್ನು ಕೇಳಲಾಗುತ್ತದೆ.. “ನೀನು ಯಾಕೆ ಯಾವಾಗಲೂ ನಗುತ್ತಾ ಇರುತ್ತೀ?” ಅದಕ್ಕೆ ಮುಗುಳ್ನಗುತ್ತಲೇ “ಅನಿವಾರ್ಯವಾಗಿ ಸದಾ ಇನ್ನೊಬ್ಬರ ಮೇಲೆ ಅವಲಂಬಿತರಾಗಿರುವವರಿಗೆ ನಗುತ್ತಲೇ ಅಳುವ ಕಲೆ ಅಭ್ಯಾಸವಾಗಿಬಿಟ್ಟಿರುತ್ತದೆ” ಅನ್ನುತ್ತಾನೆ. ಇದನ್ನು ನೋಡುತ್ತಿದ್ದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ (ರೇಡಿಯೋ ಜಾಕಿ ಕೂಡ) ರೋಸಾ ಅವನನ್ನು ನೋಡಲು ಬರುತ್ತಾಳೆ. ಮುಂದೆ ಆಕೆ ಅವನನ್ನು ಪ್ರೀತಿಸುತ್ತಾಳೆ. ಇತ್ತ ಜೂಲಿಯಾ ಕೂಡ ಖಾಹಿಲೆಯೊಂದಕ್ಕೆ ತುತ್ತಾದವಳೇ.

ಒಂದು ಕೋಣೆ, ಎಲ್ಲದ್ದಕ್ಕೂ ಅವಲಂಬಿತನಾಗಿರುವುದು, ಹಾಸಿಗೆಗೆ ಕಟ್ಟಿಹಾಕಿದಂತೆ ದಿನಕಳೆಯುವುದು “ಇದೊಂದು ಘನತೆಯಿಲ್ಲದ ಬದುಕು” ಅನ್ನಿಸಿಬಿಟ್ಟಿರುತ್ತದೆ ಅವನಿಗೆ. ತನ್ನ ಸಾವಿನ ಬಯಕೆಯನ್ನು ಕೂಡ ಕ್ಷಣಿಕ ನಿರ್ಧಾರದಂತಲ್ಲದೇ ಒಂದು ಗಾಢವಾದ ಮನೋನಿಶ್ಚಯದಲ್ಲಿರುವಂತೆ ಆದರೂ ನಗುತ್ತಾ ಹೇಳುತ್ತಿರುತ್ತಾನೆ. ತನ್ನ ಸಾವಿನ ಕೋರಿಕೆ ಸಾಮಾಜಿಕ ವಲಯದಲ್ಲಿ ಮನೆಯವರು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಭಾವ ಹುಟ್ಟಿಸಿ ಮನೆಯೊಳಗೆ ಅಸಮಾಧಾನ ಉಂಟಾಗುತ್ತದೆ. ಅಂತೆಯೇ ಸಮಾಜದ ವಲಯದಲ್ಲಿ ಬೇರೆ ಕ್ವಾಡ್ರಿಪ್ಲೆಜಿಯಾ ರೋಗಿಗಳು ಇದನ್ನು ವಿರೋಧಿಸಿದಾಗ ರಮೊನ್ ಹೇಳುವುದೊಂದೇ. “ಇದು ಎಲ್ಲಾ ವ್ಯಕ್ತಿಗಳಿಗೆ ಸಂಬಂಧಿಸಿದ್ದಲ್ಲ. ಕೇವಲ ರಮೊನ್ ಮಾತ್ರ ಬಯಸುವ ಕೋರಿಕೆ. ವೈಯುಕ್ತಿಕವಾದ ಘನತೆಯಿಂದ ಸಾಯುವ ಬಯಕೆ.”

“ನೀನು ನಿನ್ನ ಗತವನ್ನು ನೆನೆಯಲು ಇಷ್ಟಪಡೋಲ್ಲ.. ಅಲ್ವಾ” ಕೇಳುತ್ತಾಳೆ ಲಾಯರ್ ಜೂಲಿಯಾ. “ಹಾಗಲ್ಲ, ನನ್ನ ಭವಿಷ್ಯತ್ತನ್ನು ನೋಡಲು ಇಷ್ಟ” ಅನ್ನುತ್ತಾನೆ ರಮೊನ್. “ಭವಿಷ್ಯತ್ತಲ್ಲಿ ಏನು ಕಾಣುತ್ತಿ?” ಎಂದರೆ, “ಸಾವು” ಅನ್ನುತ್ತಾನೆ. ಲಾಯರ್ ಳ ಮೌನವನ್ನು ಅರ್ಥೈಸಿಕೊಂಡು, ಮುಂದುವರೆಸುತ್ತಾನೆ..”ಇದು ನಿಮ್ಮೆಲ್ಲರಂತೆಯೇ.. ಯಾಕೆ?.. ನೀವು ನಿಮ್ಮ ಭವಿಷ್ಯತ್ತಿನಲ್ಲಿ ಸಾವು ನೋಡೊಲ್ಲವಾ? ನಾನೊಬ್ಬನೇನಾ?”   ಹೀಗೆ ಸಂಭಾಷಣೆಗಳ ಮೂಲಕ ಅವನು ಕೇವಲ ಇನ್ನೊಬ್ಬ ಪಾತ್ರಗಳಿಗೆ ಪ್ರಶ್ನೆ ಮೂಡಿಸುವುದಿಲ್ಲ. ನೋಡುಗನಲ್ಲೂ ಉಂಟುಮಾಡಿಸುತ್ತಾನೆ. ಚಿಂತನೆಗೆ ಹಚ್ಚುತ್ತಾನೆ.

ಬಾಯಲ್ಲಿ ಬ್ರಶ್ ಮಾದರಿಯ ಪೆನ್ ಹಿಡಿದು ಬರೆಯಬೇಕಾಗುವಾಗಲೂ “ಲೆಟರ್ಸ್ ಫ್ರಮ್ ಹೆಲ್” ಎಂಬ ಪುಸ್ತಕ ರಚಿಸುತ್ತಾನೆ. ಪುಸ್ತಕ ಬರೆಯಲೂ, ಪ್ರಕಟಿಸಲು ಬೇರೆಯವರ ಸಹಾಯಹಸ್ತ ಕೂಡ ಪಡೆಯುತ್ತಾನೆ.

ಪಾತ್ರಗಳ ಮಧ್ಯೆ ಘರ್ಷಣೆ ಸಂಭಾಷಣೆಯಲ್ಲಿ ನೀಡುತ್ತಲೇ ಸನ್ನಿವೇಷಗಳು ಮುಂದುವರೆಯುತ್ತದೆ. ಉದಾ:
ರೋಸಾಳನ್ನು ಗಂಡ ತೊರೆದಿರುತ್ತಾನೆ. ಮತ್ತೊಂದು ಮದುವೆಯಾಗಿ ಅವನು ಕೂಡ ಬಿಟ್ಟುಹೋಗಿರುತ್ತಾನೆ. ಒಂದು ಸಲ ರಮೊನ್ ನನ್ನು ಟೀವಿಯಲ್ಲಿ ನೋಡಿದಾಗ ಅವನನ್ನು ನಿಜವಾಗಿ ನೋಡಲು ಅವನ ಮನೆಗೆ ಬರುತ್ತಾಳೆ. ರಮೊನ್ ಅವಳನ್ನು ಬಂದ ಕಾರಣ ಕೇಳಿದಾಗ ’ನಿನಗೆ ಬದುಕು ಅಂದರೆ ಎಂಥ ಹಿತ ಅನ್ನುವುದನ್ನು ತಿಳಿಹೇಳಲು ಬಂದಿದ್ದೇನೆ ಅಂದಾಗ ರಮೊನ್ ಗೆ ಅಸಹನೆ ಆಗುತ್ತದೆ. ನೀನು ಬಂದಿರುವುದು ನನ್ನನು ನೋಡಲಿಕ್ಕಾಗಿಯಾ ಅಥವ ನನ್ನನ್ನು ಕನ್ವಿನ್ಸ್ ಮಾಡಲಾ ಅಂತ ಕೇಳಿದಾಗ ಅವಳು “ನಿನ್ನ ಗೆಳತಿಯಾಗಲು” ಅನ್ನುತ್ತಾಳೆ. ಹಾಗಿದ್ದರೆ ನನ್ನ ಆಶಯಕ್ಕೆ ಗೌರವ ಕೊಡುವುದನ್ನು ಕಲಿ, ನನ್ನ ಕುರಿತು ಒಂದು ತೀರ್ಮಾನಕ್ಕೆ ಬರಬೇಡ. ನಾನೇ ನಿನ್ನ ಕುರಿತು ಹಾಗೆ ಒಂದು ಜಡ್ಜ್ ಮೆಂಟ್ ಗೆ ಬರಲು ಹೋದರೆ, ನೀನು ಇಲ್ಲಿಗೆ ಬಂದಿದ್ದನ್ನ ವಿಶ್ಲೇಷಿಸಿದರೆ ನಿನ್ನನ್ನು ಒಬ್ಬ ಫ್ರಸ್ಟೇಟೆಡ್ ಹೆಣ್ಣು.. ಇಂದು ಬೆಳಿಗ್ಗೆ ಎದ್ದು ಒಂದು ಆಶಾವಾದಕ್ಕಾಗಿ ಪ್ರಯತ್ನಪಡಲು..” ಹೀಗೆ ಹೇಳುತ್ತಿದ್ದಂತೆ ಬೇಸರಾಗಿ ಕಂಬನಿಯಿಟ್ಟು ಇನ್ನೂ ಅವನ ಮಾತನ್ನು ಕೇಳಲಾರೆ ಎಂಬಂತೆ ಆಕೆ ಆ ಕೊಠಡಿಯಿಂದ ಓಡುತ್ತಾಳೆ. ಆಗ ರಮೊನ್ “ಇದೇ ಸರಿ… ಓಡು.. ನಿನಗಾದರೆ ಅದು ಸಾಧ್ಯ..” ಅನ್ನುತ್ತಾನೆ!

ಇನ್ನೊಂದು ದೃಶ್ಯದಲ್ಲಿ ರೋಸಾ ಆರ್ದ್ರಳಾಗಿ ” ನಿನಗೆ ಸಹಾಯ ಮಾಡಬೇಕು ಅನ್ನಿಸುತ್ತಿದೆ” ಅಂದಾಗ ರಮೊನ್ ಕಣ್ಣಲ್ಲಿ ಖುಷಿ ಕಾಣುತ್ತದೆ. ಹಾಗಾದರೆ ನನ್ನ ಸಾಯಿಸಲು ನೀನು ತಯಾರಿದ್ದೀಯಾ ಕೇಳುತ್ತಾನೆ. ಅವಳು ಭಯದಿಂದ ಹಿಂದೆ ಸರಿದು ಇಲ್ಲ, ಸಾಯಲು ಅಲ್ಲ. ಬದುಕಲು ಅನ್ನುತ್ತಾಳೆ. ಅವನಿಗೆ ನಿರಾಸೆಯಾಗುತ್ತದೆ. “ನನ್ನನ್ನು ಪ್ರೀತಿಸುವುದು ಅಂದರೆ ನನ್ನ ಸಾಯಿಸುವುದು ಎಂದರ್ಥ. ಸಾಯಿಸಿದರೆ ಮಾತ್ರ ನಿಜವಾದ ಪ್ರೀತಿ!” ಅಂದಾಗ ಅವನ ಮಾತಿನೊಳಗಿನ ಘರ್ಷಣೆ ನೋಡುಗನಲ್ಲೂ ತಟ್ಟುತ್ತದೆ.

ಎಲ್ಲಾ ಪಾತ್ರಗಳು ರಮೊನ್ ಬಗ್ಗೆ, ಅವನ ದಯಾಮರಣದ ನಿರ್ಧಾರದ ಬಗ್ಗೆ ನಿರ್ದಿಷ್ಟ ಅಭಿಪ್ರಾಯ ಹೊಂದಿರುತ್ತದೆ. ಗೊಂದಲ ಕೂಡ ಒಂದು ಬಗೆಯ ಅಭಿಪ್ರಾಯವೆಂದುಕೊಂಡರೆ ಅವನ ಅಣ್ಣನ ಮಗ ಆ ವಿಧವನ್ನು ಪೂರೈಸುತ್ತಾನೆ. ರಮೊನ್ ನ ಅಣ್ಣ ಅವನ ಸಾಯುವ ನಿರ್ಧಾರಕ್ಕೆ ವಿರುದ್ಧವಾದರೆ, ಅತ್ತಿಗೆಗೆ ಮನದಲ್ಲಿ ಹಾಗಾಗಬಾರದು ಅಂತಿದ್ದರೂ (ಇದು ನೋಡುಗನಿಗೆ ತಿಳಿವುದು ಚಿತ್ರದ ಕೊನೆಯಲ್ಲಿ) ’ತನ್ನ ಅಭಿಪ್ರಾಯ ಇದಕ್ಕೆ ಸಲ್ಲದು ಯಾಕೆಂದರೆ ಸಾಯಬೇಕೆನ್ನುವುದು ಅವನ ಇಚ್ಚೆ ಅಷ್ಟ” ಅನ್ನುವ ಅನಿಸಿಕೆ. ಪ್ರಮುಖವಾಗಿ ತಟ್ಟುವುದು ಅದೂ ಸಂಭಾಷಣೆಯ ಒಳಹರಿವಿನಲ್ಲಿ ಅಂದರೆ ರಮೊನ್ ನ ತಂದೆ. ಇಡೀ ಚಿತ್ರದಲ್ಲಿ ಅವರ ಮಾತು ಇಲ್ಲವೇ ಇಲ್ಲ ಅನ್ನುವಷ್ಟು. ಆದರೆ ಒಮ್ಮೆ ರಮೊನ್ ನ ಸುತ್ತಲೂ ಬಂಧುಗಳು, ಜೂಲಿಯಾ ಎಲ್ಲ ಇದ್ದು ನ್ಯಾಯಾಲಯದ ಕುರಿತು ಚರ್ಚಿಸುತ್ತಾ ಇರುವಾಗ ಯಾರೊಬ್ಬರನ್ನೂ ಉದ್ದೇಶಿಸದೇ ಮೆಲ್ಲಗೆ ಆಡುವ ಮಾತು ಆ ಪಾತ್ರ ಧೋರಣೆ, ಮಾನಸಿಕ ತಲ್ಲಣವನ್ನು ಚಿತ್ರದಲ್ಲಿ ಎತ್ತಿ ಹಿಡಿಯುತ್ತದೆ. ಅವರಾಡುವ ಮಾತಿಷ್ಟೇ,” ನನ್ನ ಮಗ ಸಾಯುತ್ತಾನೆ ಅನ್ನುವ ವಿಚಾರಕ್ಕಿಂತ ಭೀಕರವಾದ್ದು ಏನು ಗೊತ್ತಾ? ಅವನೇ ಸಾಯಲು ಬಯಸುವುದು!”

ಹೀಗೆ ಚಿತ್ರದುದ್ದಕ್ಕೂ ಮನ ಕಲಕುವ ಸಂಭಾಷಣೆಯುಳ್ಳ, ಸಂಬಂಧದ ಪದರುಗಳ ತಳಸ್ಪರ್ಶಿಸುವ ದೃಶ್ಯಗಳಿವೆ. ನೋಡುತ್ತಾ ನೋಡುತ್ತಾ ನಮ್ಮೊಳಗೂ ಸಾವಿರ ಪ್ರಶ್ನೆಗಳು. ಯಾವುದು ಸರಿ ಯಾವುದು ತಪ್ಪು ಎಂದು ಅರಿಯಬೇಕಾದರೆ ನಾವು ನಿಂತಿರುವ ಸ್ಥಳದ ತಳ ತಿಳಿದಿರಬೇಕು ಅನ್ನುವ ನಿಜವನ್ನು ಅರ್ಥೈಸಿಕೊಳ್ಳುವಂತೆ ಮಾಡುತ್ತದೆ ಸಿನೆಮಾ.

ಅಚ್ಚರಿಯೆಂದರೆ ಇಂಥ ಗಾಢ ಚಿತ್ರ, ಅದೂ ಸಾವಿನಂಥ ವಿಷಯದ ಬಗ್ಗೆ ನಿರ್ದೇಶಿಸಿದಾಗ ಅಲೆಜಾಂಡ್ರೋ ಅಮೆನಾಬಾರ್ ಗೆ ೩೨ ವರ್ಷ. ಈ ಚಿತ್ರಕ್ಕೆ ಬರೀ ನಿರ್ದೇಶನ ಅಲ್ಲದೇ, ಸಂಗೀತ, ರಚನೆಯಲ್ಲಿ ಸಹಾಯ, ನಿರ್ಮಾಪಕ ಕೂಡ ಹೌದು. ಈ ಚಿತ್ರಕ್ಕೆ ಬೆಸ್ಟ್ ಫಾರಿನ್ ಫಿಲ್ಮ್ ಅಲ್ಲದೇ ಚಿತ್ರದ ಮೇಕಪ್ ಗೂ ಆಸ್ಕರ್ ದೊರೆತಿದೆ. ರಮೊನ್ ಆಗಿ ನಟಿಸಿದ ಜೇವಿಯರ್ ಅದ್ಭುತ ನಟನೆ ಮೆರೆಯುತ್ತಾನೆ. ಗಲಿಸಿಯಾ ಜನಗಳ ಪದಗಳ ಉಚ್ಚಾರ ಆಗಲೀ, ಕ್ವಾಡ್ರಿಪೆಲ್ಜಿಕ್ ಆಗಿ ತನ್ನ ಬಾಡಿ ಲಾಂಗ್ವೇಜ್ ಆಗಲಿ, ಕೊನೆಗೆ ನಗುವುದರಲ್ಲೂ ನಿಜವಾದ ರಮೊನ್ ನನ್ನು ಬಿಂಬಿಸುತ್ತಾನೆ.
ಬರೀ ಒಂದು ಕೋಣೆಯೊಳಗೆ ಚಿತ್ರದ ಬಹುತೇಕ ಭಾಗ ಸಾಗುತ್ತದೆ. ಅದರಲ್ಲಿನ ಭಿನ್ನ ಭಾವಲಹರಿಗೆ ತಕ್ಕ ಬೆಳಕು ಸಂಯೋಜನೆಯಲ್ಲಿ ಯಶಸ್ವಿಯಾಗಿರುವ ಛಾಯಾಗ್ರಾಹಕನಿಗೆ ಮೆಚ್ಚುಗೆ ಸಲ್ಲಿಸಲೇಬೇಕು.

ಡೀವಿಡಿ ಲೈಬ್ರರಿಯಲ್ಲಿ ಕಷ್ಟಪಟ್ಟಾದರೂ ಹುಡುಕಿ ನೋಡಲು ಚಿತ್ರ ಅರ್ಹವಾಗಿದೆ. ಎರಡು ಘಂಟೆ ಐದು ನಿಮಿಷ ಪಟ್ಟುಬಿಡದೇ ಕೂರಿಸಿ ಸಿನೆಮಾ ನೋಡಿಸಿಕೊಳ್ಳುತ್ತದೆ.

ಟಿಪ್ಪಣಿಗಳು
 1. minchulli ಹೇಳುತ್ತಾರೆ:

  beautiful…

  liked it. for sure shall search & see

 2. hosachiguru ಹೇಳುತ್ತಾರೆ:

  Nija

 3. Shashi Joiss ಹೇಳುತ್ತಾರೆ:

  chennadittu hawy.

 4. ವಿಜಯರಾಜ್ ಕನ್ನಂತ ಹೇಳುತ್ತಾರೆ:

  kaank e film hangaare

 5. ವಿಜಯಶ್ರೀ ಹೇಳುತ್ತಾರೆ:

  ಸ೦ತ್ರುಪ್ತ ನಿರೂಪಣೆ..
  ಮನ ಭಾರವಾದ ಭಾವನೆ..

 6. ರಂಜಿತ್ ಹೇಳುತ್ತಾರೆ:

  ಮಿಂಚುಳ್ಳಿ, ವಿಜಯಶ್ರೀ,

  ಖಂಡಿತಾ ನೋಡಿ. ಕ್ಷಣಕಾಲವಾದರೂ ನಿಮ್ಮನ್ನು ಚಿಂತನೆಗೆ ನೂಕುತ್ತದೆ. ವಿಜಯಶ್ರೀ , ಥ್ಯಾಂಕ್ಸ್ ಫಾರ್ ದಿ ಕಾಂಪ್ಲಿಮೆಂಟ್.

 7. ರಂಜಿತ್ ಹೇಳುತ್ತಾರೆ:

  ವಿಜಯ್ರಾಜ್, ಶಶಿ ಜೋಯಿಸ್,

  ನಿಮ್ಗೆ ನೋಡೂಕೆ ಗಮ್ಮತ್ತಿರುತ್ತ್ ಅಂತಿಲ್ಲ, ನಿಮ್ ಮನ್ಸಿಗ್ ಮುಟ್ಟುತ್ತ್, ಲಾಯ್ಕಿತ್ತ್ ಅನ್ಸುತ್ತ್ ಅನ್ನೂದ್ ಮಾತ್ರ ನಿಜ.

 8. ರಂಜಿತ್ ಹೇಳುತ್ತಾರೆ:

  ಹೊಸಚಿಗುರು,

  ಹೌದು, ನಿಜ..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s