ಎಕ್ಸ್ ಟ್ರಾ ಚಟ್ನಿ..!

Posted: ಜನವರಿ 7, 2010 in ಕವಿತೆ ತರಹ

ಊದುಬತ್ತಿಯ ಹಿಂದೆ
ನಿಶ್ಚಲ ಚಿತ್ರದಂತೆ ಕೂತಿರುವ
ಗುಡಾಣ ಹೊಟ್ಟೆಯ ಮನುಷ್ಯನ ಹಸಿವು
ಫುಡ್ಡಿನದಲ್ಲ
ದುಡ್ಡಿನದು. ಹಸಿವು ಬಿಡಿ,
ಆತ ಅಲುಗಬೇಕೆಂದರೆ ಒಂದೋ
ನೋಟಿನ ಗಂಧ ತಗುಲಿಸಬೇಕು ಇಲ್ಲವಾ
ಚಿಲ್ಲರೆ ಝಣ ಕೇಳಿಸಬೇಕು.

ಸ್ವಪ್ನದ ಗಲ್ಲಿಯೊಂದರಿಂದ
ಓಡಿ ಬಂದ ಪ್ರತೀ ಹೆಜ್ಜೆಯಲ್ಲೂ
ಹೆತ್ತವರ ಕನಸುಗಳಿವೆಯೆಂಬ ಪಶ್ಚಾತ್ತಾಪದ
ಬುಗ್ಗೆಯೆದ್ದಂತಿರುವ ಕಣ್ಣುಗಳಿರುವ
ಮಾಣಿಗೂ ಆಗಷ್ಟೇ
ತುಪ್ಪದ ಮೇಲೆ ಕುಣಿದ
ಮಸಾಲೆದೋಸೆಯೆಂದರೆ ಅಷ್ಟಕ್ಕಷ್ಟೇ.

ಮೂಲೆಯ ಟೇಬಲ್ಲಿನಲ್ಲಿ ಗೆಳತಿಯ

ಜತೆ ಬಂದಿರುವ ಯುವಕನ
ಹಸಿವು
ಛೇ! ಬಾಯಲ್ಲಿ ಹೇಳಲಾಗದಂತಾದ್ದು.

ಇನ್ನು ಯಾರ ಗಮನಕ್ಕೂ ಬಾರದಂತೆ
ಕೂತು ಎರೆಡಿಡ್ಲಿಗೆ ಮುಜುಗರವಿಲ್ಲದೇ
ಮೂರನೇ ಸಾರಿ
ಚಟ್ನಿ ಕೇಳುತ್ತಿರುವನಲ್ಲ, ಅವನಲ್ಲೇ ಇದೆ ನೋಡಿ
ಜೇಬು ತುಂಬಾ ಬಡತನ
ಮತ್ತು
ಹೊಟ್ಟೆ ತುಂಬಾ
ಹಸಿವು.

Advertisements
ಟಿಪ್ಪಣಿಗಳು
 1. ಅನಾಮಿಕ ಹೇಳುತ್ತಾರೆ:

  ಮನದಲ್ಲಿ ವಿಷಾದ ಮನೆ ಮಾಡಿತು. ತುಂಬಾ ಚೆನ್ನಾಗಿದೆ.

 2. ಸಂತೋಷ್ ಮೂಗೂರ್ ಹೇಳುತ್ತಾರೆ:

  ಚೆನ್ನಾಗಿದೆ ರಂಜಿತ್.

 3. Sushrutha ಹೇಳುತ್ತಾರೆ:

  ಜಯಂತ ಕಾಯ್ಕಿಣಿ ಇದೇ ಹೆಸರಿನಲ್ಲಿ ಒಂದು ಕವನ ಬರ್ದಿದಾರೆ..

 4. ನೂತನ ಹೇಳುತ್ತಾರೆ:

  ಮಂಜುಶ್ರೀ ನೆನಪಾಯಿತು 🙂

 5. sunaath ಹೇಳುತ್ತಾರೆ:

  ಉತ್ತಮ ಕವನ.

 6. Pramod ಹೇಳುತ್ತಾರೆ:

  ಒ೦ದು ಎಕ್ಸ್ಟಾ ಚಟ್ನಿಯ ಹಿ೦ದಿನ ಹಲವಾರು ಮುಖಗಳನ್ನು ಚೆನ್ನಾಗಿ ಚಿತ್ರಿಸಿದ್ದೀರಾ..ನೈಸ್

 7. hema ಹೇಳುತ್ತಾರೆ:

  ಟೈಟಲ್ ಬೇರೆ ಇಡಬಹುದಿತ್ತೇನೋ… ಕವಿತೆ ಚೆನ್ನಾಗಿದೆ. liked it

 8. ನೀಲಾಂಜಲ ಹೇಳುತ್ತಾರೆ:

  ಸ್ಟಾರ್ಟಿಂಗ್ ಎಲ್ಲಾ ಚೆನ್ನಾಗಿದೆ, ಆದರೆ ಮುಗಿಸಿದ್ದು ಮಾತ್ರ ಮೋಸ. ಎಕ್ಸ್‌ಟ್ರಾ ಚಟ್ನಿಗೂ ದುಡ್ಡು ಕೊಡಬೇಕು ಗೊತ್ತೇನ್ರಿ? ನಾನು ಸುಮಾರು ಸಲ ಎರಡು ಇಡ್ಲಿಗೆ ಎಕ್ಸ್‌ಟ್ರಾ ಚಟ್ನಿ ತಗೊಂಡೀದ್ದಿನಿ, ಚಟ್ನಿ ಚೆನ್ನಾಗಿದೆ/ಕಡಿಮೆ ಆಯ್ತು ಅಂತ(ಹೋಟೆಲ್ ಅವರು ಕಂಜೊಸಿಗಳು,ಇಷ್ಟು ಚಿಕ್ಕ ತಟ್ಟೆಲಿ ಚಟ್ನಿ ಕೊಡ್ತಾರೆ). ನೀವು ನೋಡಿದ್ರೆ……… 😀

 9. ರಂಜಿತ್ ಹೇಳುತ್ತಾರೆ:

  ಅನಾನಿಮಸ್ಸು,

  ಥ್ಯಾಂಕ್ಸು.

  *****

  ಸಂತೋಷ್ ಸರ್,

  ತುಂಬಾ ದಿನದ ನಂತರ ನಿಮ್ಮಿಂದ ಹೊಗಳಿಕೆ ಸಿಕ್ಕಿದ್ದು, ಖುಷಿ ಖುಷಿ ನಾನು..:)

  ****

  ಸುಶ್ರುತ,

  ಹೌದು.

 10. ರಂಜಿತ್ ಹೇಳುತ್ತಾರೆ:

  ಸುನಾಥ್ ಸರ್,

  ಧನ್ಯವಾದಗಳು.

  ****

  ಪ್ರಮೋದ್,

  ಹೋಟೆಲ್ ಒಳಗೆ ಹಸಿವೆ ಹೇಗೇಗೆ ಇರುತ್ತೆ ಅನ್ನುವುದರ ಬಗ್ಗೆ ಬರೆದಿದ್ದು, ಎಕ್ಸ್ ಟ್ರಾ ಚಟ್ನಿ ಒಳ್ಳೇ ರೂಪಕ ಅನ್ನಿಸಿತು. ನಿಮ್ಮ ಅನಿಸಿಕೆಗೆ ಧನ್ಯವಾದಗಳು.

 11. ರಂಜಿತ್ ಹೇಳುತ್ತಾರೆ:

  ಹೇಮಾ,

  ಬೇರೇನು ಇಡಬಹುದಿತ್ತು ಮೇಡಮ್? ಹಿಂದಿನ ಅನಿಸಿಕೆಯಲ್ಲಿ ಅಂದಂತೆ, ಅಲ್ಲಿನ ಹಸಿವೆಗೆ ಎಕ್ಸ್ ಟ್ರಾ ಚಟ್ನಿ ಒಳ್ಳೇ ರೂಪಕ ಅನ್ನಿಸಿತಷ್ಟೇ. ನಿಮ್ಗಿಷ್ಟವಾದ್ದಕ್ಕೆ ಖುಷಿಯಾತು.

 12. ರಂಜಿತ್ ಹೇಳುತ್ತಾರೆ:

  ಸೌಪರ್ಣಿಕಾ ಮೇಡಮ್,

  ಎಕ್ಸ್ ಟ್ರಾ ಚಟ್ನಿಗೆ ಎಕ್ಸ್ ಟ್ರಾ ದುಡ್ಡು ಕೇಳುವ ಪರಿಪಾಠ ಇತ್ತೀಚೆಗೆ ಶುರುವಾಗಿದ್ದು, ನಮ್ಮ ಬಾಲ್ಯದಲ್ಲಿ ಇರಲಿಲ್ಲ. ಒಮ್ಮೆ ಒಂದು ಹೋಟೆಲ್ ನಲ್ಲಿ ಮತ್ತೆ ಚಟ್ನಿ ಕೇಳಿದಾಗ ಸ್ಪೆಷಲ್ ಚಟ್ನಿ (ನಿನ್ನೆಯದು, ಫ್ರಿಜ್ಜಿನ ಮಾಲು) ಕೊಟ್ಟಿದ್ದರು, ಅವರಿಗೆ ತಿಳಿದಿತ್ತು ಇದನ್ನು ತಿಂದ ಮೇಲೆ ನಾನು ಇನ್ನು ಎಕ್ಸ್ ಟ್ರಾ ಚಟ್ನಿ ಕೇಳಲ್ಲ ಎಂದು…:)

  ಈಗಲೂ ಬಹಳ ಹೋಟೆಲ್ ಗಳಲ್ಲಿ ಎಕ್ಸ್ ಟ್ರಾ ಚಟ್ನಿ ಕೇಳಿದರೆ ಎಕ್ಸ್ ಟ್ರಾ ಬಿಲ್ ಕೊಡೊಲ್ಲ..( ಒಂದು ಗಂಭೀರ ಲುಕ್ಕು ಕೊಡ್ತಾರೆ ಅನ್ನೋದು ಬೇರೆ ಮಾತು..:))

 13. ಅನಾಮಿಕ ಹೇಳುತ್ತಾರೆ:

  ಇಷ್ಟವಾಯ್ತು..

 14. ನೀಲಾಂಜಲ ಹೇಳುತ್ತಾರೆ:

  ಏನೊಪಾ, ವಾದಕ್ಕೆ ಅಂತ ಹೇಳ್ತಾ ಇಲ್ಲ. ನಂಗೆ ಇವತ್ತಿನವರೆಗೆ ಹೋಟೆಲ್ ನಲ್ಲೂ ಎಕ್ಸ್‌ಟ್ರಾ ಚಟ್ನಿ ಕೇಳಿದ್ದಕ್ಕೆ ಗುರುಗುಟ್ಟಿಕೊಂಡು ನೋಡೆ ಇಲ್ಲ, ಅದೂ ನಾನೊಬ್ಬಳೇ ಹೋದಾಗ ಸಹ. ನಾನು ಇಡ್ಲಿ-ವಡೆ ತಗೊಳೊದು ಜಾಸ್ತಿ. ಹಂಗೇ ಎಕ್ಸ್‌ಟ್ರಾ ಮೊಸರು, ಪಾಪಡ್…… ನಮ್ಮೂರಲ್ಲಿ ನಾನು ಸಣ್ಣವಳಿರಬೇಕಾದ್ರೆಯಿಂದ ದುಡ್ಡು ತಗೋತಾರೆ.ಚಿಕ್ಕ-ಚಿಕ್ಕ ಹೋಟೆಲ್ ಸೇರಿಸಿ. ಎಕ್ಸ್‌ಟ್ರಾ ೨ರೂ/೩ರೂ ಅಂತ ಇದ್ದದ್ದು ನೆನಪು.
  ನಂಗೆ ನಿಮ್ಮ ಕವಿತೆ ಬಗ್ಗೆ ಕಂಪ್ಲೇಂಟ್ ಇಲ್ಲ. ಆದರೆ ಈ “ಎಕ್ಸ್‌ಟ್ರಾ ಚಟ್ನಿ” ಪ್ರತಿಮೆ/ರೂಪಕದ ಬಗ್ಗೆ ಮಾತ್ರ.

 15. ನೀಲಾಂಜಲ ಹೇಳುತ್ತಾರೆ:

  ಮತ್ತೊಂದದರೆ, ಇಷ್ಟು ದಿನ ನಾನು ’ಒಂದು ಎಕ್ಸ್‌ಟ್ರಾ ಚಟ್ನಿ ಪ್ಲೀಸ” ಅಂತ ಆರಾಮಾಗಿ ಕೇಳ್ತಾ ಇದ್ದೆ. ಇನ್ನು ಮುಂದೆ ಸ್ವಲ್ಪ ಕೇಳಬೇಕಾದರೆ ಒಂಚೂರು ಹಿಂದೆ-ಮುಂದೆ ನೋಡಿ ಯೋಚಿಸಬೇಕಾಗಬಹುದು. ಜನ ಹೀಂಗೂ ಅಂದು ಕೋಳ್ತಾರೆ ಅಂತ ನಂಗೆ ಗೊತ್ತಿರಲಿಲ್ಲ ನೋಡಿ 😀

 16. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಜಯಂತ್ ಕಾಯ್ಕಿಣಿ ಅವರನ್ನ ನೆನಪಿಸಿದ್ರಿ ರಂಜಿತ್… ಕವನದ ಹೆಸರಿನಿಂದಲ್ಲ, ಅದರೊಳಗಿನ ಭಾವದಿಂದ….

 17. ರಂಜಿತ್ ಹೇಳುತ್ತಾರೆ:

  ನೂತನ್,

  ಮಂಜುಶ್ರೀಯಲ್ಲಿ ಗುಡಾಣ ಹೊಟ್ಟೆಯವರ್ಯಾರಪ್ಪ?:)

  ******

  ಅನಾನಿಮಸ್ಸು,

  ಥ್ಯಾಂಕ್ಸು.

 18. ರಂಜಿತ್ ಹೇಳುತ್ತಾರೆ:

  ನೀಲಾಂಜಲ,

  ನಮ್ಮ ನಡುವೆ ನಡೆದ ಸುದೀರ್ಘ ಚರ್ಚೆಯ ಬಳಿಕವೂ, ನಾನು ತಪ್ಪು ಮಾಡಿದ್ದೀನಾ ಇಲ್ಲವಾ ಅನ್ನುವ ಗೊಂದಲ ಹಾಗೇ ಇದೆ. ಎರಡೂ ಕಡೆಯ ವಾದಗಳು ಮನಸ್ಸನ್ನು ಚಟ್ನಿ ಮಾಡಿದೆ..:)

  ಶರಶ್,

  ಅಗಾಧ ವ್ಯತ್ಯಾಸವಿದೆ ಶರಶ್, ನನ್ನದು ಇನ್ ಸ್ಟಂಟ್ ನೂಡಲ್… ಅವರದ್ದು ಹೊಟ್ಟೆ ತಂಪಾಗಿಡುವ ರಾಗಿ ಮುದ್ದೆ. ಆದರೂ ಧನ್ಯವಾದಗಳು ನಿಮ್ಮ ಅನಿಸಿಕೆಗೆ. ಕೊಂಚವಾದರೂ ಆ ಮಟ್ಟ ಮುಟ್ಟಿದೆ ಅಂತ ನಿಮ್ಗನ್ಸಿದ್ರೆ ಬರ್ದಿದ್ದಕ್ಕೂ ಸಾರ್ಥಕ.

  ಗೌತಮ್ ಹೆಗ್ಡೆ,

  ಧನ್ಯವಾದಗಳು.

 19. ಬಾಲ ಹೇಳುತ್ತಾರೆ:

  ರಂಜಿತ್,
  ಮುಜುಗರವಿಲ್ಲದ ಕೇಳುವಾತ ಬಡವನಲ್ಲ, ಬಡವನ ದ್ವನಿಯಲ್ಲಿ ದೈನ್ಯತೆಯಿದ್ದಿರಬೇಕು ಎಂಬುದು ನನ್ನ ಅನಿಸಿಕೆ.
  ನಾನು ಈಗಲೂ ದರ್ಶಿನಿಗೆ ಹೋದರೆ (ಶಂಕರಪುರದ ಬ್ರಾಹ್ಮಣರ ಫಲಹಾರ ಮಂದಿರ), ಎರಡಿಡ್ಲೆ ಕೇಳಿ, ಆತ ಕೊಟ್ಟ ತಟ್ಟೆಯಲ್ಲಿ ಚಟ್ನಿ ಕಮ್ಮಿಯಿದ್ದರೆ, ಅಲ್ಲೇ ಇನ್ನು ಕೊಂಚ ಹಾಕಿಸಿಕೊಂಡು, ಅದೂ ಸಾಲದೆ ಮತ್ತೆ ಒಂದೊ ಎರಡೊ ಬಾರಿ ಚಟ್ನಿ ಹಾಕಿಸಿಕೊಂಡು ತಿನ್ನುವುದು ರೂಢಿ. ಇಲ್ಲಿ ರುಚಿ, ಹಾಗು ಇಡ್ಲಿಯನ್ನು ಚಟ್ನಿಯ ಸಾಗರದಲ್ಲಿ ಮುಳುಗಿಸಿ ತಿನ್ನಬೇಕು, ಆಗಲೇ ಇಡ್ಲಿ ತಿಂದ ಪೂರ್ಣ ಅನುಭವ ಎಂಬ ನಂಬಿಕೆ ಕಾರಣವಿರಬಹುದು.

 20. ರಂಜಿತ್ ಹೇಳುತ್ತಾರೆ:

  ಬಾಲಗೋಪಾಲ್,

  ನಿಮ್ಮ ಅನಿಸಿಕೆಗೆ ಧನ್ಯವಾದಗಳು.

  ಹಾಕಿದ್ದು ಕಡಿಮೆಯೆನಿಸಿ ಕೇಳುವುದು ಬೇರೆ, ಮತ್ತೆ ಇಡ್ಲಿ ಹಾಕಿಸಿಕೊಳ್ಳಲಾಗದೇ ಚಟ್ನಿ ಅಥವ ಸಾಂಬಾರ್ ಜಾಸ್ತಿ ಹಾಕಿಸಿಕೊಳ್ಳುವುದು ಬೇರೆ. ಈ ಎರಡರ ವ್ಯತ್ಯಾಸ ಬಹುಶಃ ನನ್ನ ಕೊನೆಯ ಪ್ಯಾರಾಗ್ರಾಫ್ ನಲ್ಲಿ ಹೆಚ್ಚು ವಿವರವಾಗಿ ಮೂಡುವಂತೆ ಮಾಡಬೇಕಿತ್ತು ಅನ್ನಿಸಿತು.

  ಇದು ಅತೀಬಡವನ ಕುರಿತಿದ್ದಲ್ಲ, ಮಧ್ಯಮ ವರ್ಗದವನ ಪಾಡು. ಈ ಎರಡರ ನಡುವಿನ ವ್ಯತ್ಯಾಸ ತಪ್ಪಾಗಿ ಅರ್ಥೈಸಿಕೊಳ್ಳುವಲ್ಲಿ “ಜೇಬು ತುಂಬಾ ಬಡತನ” ಎಂಬ ಪದ ಕಾರಣವಾಯಿತಿರಬಹುದು.

  ದೈನ್ಯತೆ ದನಿ ಹೆಚ್ಚಾಗಿ ಬೇಡುವಾಗ ಬರುವುದು. ಆದರೆ ಅಲ್ಲಿ ಆತ ಬೇಡುತ್ತಿಲ್ಲ. ಹಸಿವಿಯಿಂದಾಗಿ ಚಟ್ನಿ ಹೆಚ್ಚಿಗೆ ಹಾಕಿಸಿಕೊಳ್ಳುತ್ತಿದ್ದರೂ, “ಕಡಿಮೆ ಆಗಿದ್ದರಿಂದ ಕೇಳುತ್ತಿದ್ದೇನೆ” ಅನ್ನುವ ಧಾಟಿ ಬರುವಂತೆ ತನ್ನನ್ನು ತಾನು ಕವರ್ ಮಾಡಿಕೊಳ್ಳುತ್ತಿದ್ದಾನೆ. ಆದಕಾರಣ ಅಲ್ಲಿ ಮುಜುಗರವಿಲ್ಲದೇ ಎಂಬ ಪದ ಬಳಸಬೇಕಾಯ್ತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s