ಊರು ತೊರೆವ ಹೊತ್ತು…

Posted: ಜನವರಿ 20, 2010 in ಲಹರಿ, ಲೇಖನ

ಇಲ್ಲಿಂದ ಬೆಂಗಳೂರಿಗೆ ಹೊರಡುವ ಬಸ್ಸುಗಳು ಲೇಟಾಗಿ ಹೊರಡುವುದಿಲ್ಲ.

ಊರಿನ್ನೂ ತನ್ನ ಮುಸ್ಸಂಜೆಯ ಅಲಂಕಾರದಲ್ಲೇ, ತನ್ನ ನರನಾಡಿಗಳಲಿ ಜೀವಜಾಲದ ಚಲಿಸುವಿಕೆಯ ಸಡಗರದಲ್ಲೇ ಮೈಮರೆತಿರುತ್ತದೆ.  ಎನ್. ಹೆಚ್ ೧೭ ಊರಿನ ಗಲ್ಲವನ್ನಷ್ಟೇ ಮುಟ್ಟಿ ವೈಯಾರದಿಂದ ತೆವಳಿ ಹೋಗುತ್ತದೆ. ಕೋರ್ಟ್ ರೆಸ್ಟಾರೆಂಟ್ ಬಿಡಿ, "ಪಾರಿಜಾತ" ದ ಪರಿಮಳವೂ ಎನ್ನೆಚ್ ನ ವರೆಗೆ ಬರುವ ಸಂಭವವಿಲ್ಲ. ನೆಹರೂ ಮೈದಾನದಲ್ಲಿ ಟೆಂಟ್ ಹಾಕಿದ್ದು, ಯಕ್ಷಗಾನಕ್ಕೆ ಸಿದ್ಧತೆ ನಡೆದಿದೆ. ಗ್ರೀನ್ ರೂಮಿನಲ್ಲಿ ರೆಡ್ ಕಂಗಳೊಂದಿಗೆ ಪಾತ್ರಧಾರಿಗಳು ಪಾತ್ರದ ಕನಸಿನಲ್ಲಿದ್ದಾರೆ. ದಿನವಿಡೀ, "ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ.. ನೀವೂ ಬನ್ನಿ ನಿಮ್ಮ ಮನೆಯವರನ್ನೂ ಕರೆತನ್ನಿ " ಎಂಬೆಲ್ಲಾ ಘೋಷಣೆಗಳನ್ನು ಊರಿನ ಮೂಲೆಮೂಲೆಯಲ್ಲಿ ಇಂಚಿಂಚಾಗಿ ಪಸರಿಸಿದ ಮೈಕು ಹೊತ್ತ ಆಟೋ, ಸುಸ್ತಾದಂತೆ ಅಲ್ಲೇ ಪಕ್ಕ ನಿಂತಿದೆ. ಇತ್ತ ಗಾಂಧೀಮೈದಾನದಲ್ಲಿ ಕ್ರಿಕೆಟ್ಟು ಆಟಗಳು ಮುಗಿದು, ಅಂದಿನಾಟದ ರಸವತ್ತತೆ ಮತ್ತು ಬೇರೆ ಸುದ್ಧಿಮಾತುಗಳಲ್ಲಿ ಹುಡುಗರು ಮುಳುಗಿದ್ದಾರೆ. ಆ ಗುಂಪಿನಲ್ಲೇ ಒಬ್ಬ ಹುಡುಗ, ಈಗ ಅವನ ಹುಡುಗಿ ಪೇಟೆಗೆ ಬರುವ ಹೊತ್ತಾದ್ದರಿಂದ, ’ಅಮ್ಮನ್ ಫೋನ್ ಬಂದಿತ್, ಮನಿಗ್ ಹೋಯ್ಕ್ ’ ಎಂದು ಸುಳ್ಳು ಹೇಳುತ್ತಾ ಅವರೆಲ್ಲರಿಂದ ತಪ್ಪಿಸಿಕೊಂಡು ಹೊರಟಿದ್ದಾನೆ. ಶ್ರೀದೇವಿ ಕ್ರೀಮ್ ಪಾರ್ಲರ್ ನ ಕೆಲಸದ ಹುಡುಗರು ಸಂಜೆ ಹೊತ್ತಿನ ಅವರ ಪಾಲಿನ ಪ್ರೈಮ್ ಟೈಮ್ ಗಾಗಿ ತಯಾರಾಗುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಗಿರಾಕಿಗಳು ಹೆಚ್ಚಲಿದ್ದಾರೆಂದು ಅವರಿಗೆ ಗೊತ್ತಿದೆ. ಶೆರೋನ್ ಹೋಟೆಲ್ಲಿನ ಜಗಮಗಿಸುವ ಬೆಳಕಲ್ಲಿ ಉದರದ ಕನಸುಗಳು ದುಬಾರಿ. ಶಾಸ್ತ್ರೀ ಪಾರ್ಕಿನಲ್ಲೇ ಇರುವ ವೆಂಕಟೇಶ್ವರ ಸ್ವೀಟ್ ಸ್ಟಾಲ್ ಹಾಗಲ್ಲ. ಅಲ್ಲಿ ಉದರದ ಜತೆಗೆ ಕಣ್ಣಿಗೂ ತಂಪು. ಅಲ್ಲಿ ತಿನ್ನಲು ಬಂದವರು, ಪಾನಿಪುರಿ ಸ್ವಲ್ಪ ತಡವಾಗಿ ನೀಡಿದರೂ ಏನೂ ಅನ್ನರು. ತಡವಾದಷ್ಟೂ ಬಸ್ಸಿನಿಂದಿಳಿದು ಬರುವ ಹುಡುಗಿಯರನ್ನು ತುಸು ಹೆಚ್ಚೇ ಸಮಯ ನೋಡಬಹುದು. ಕೆಲಸಕ್ಕೆಂದು ಹೋಗಿದ್ದ ಅಪ್ಪಂದಿರು, ಮನೆಗೆ ಹಣ್ಣು ತರುವುದಕ್ಕಾಗಿ ಅಂಗಡಿ ಬದಿಯಲ್ಲಿ ನಿಂತಿರುತ್ತಾರೆ. ಚಾಕಲೇಟು ಇಂದೂ ತರದೇ ಹೋದರೆ ಪುಟ್ಟ ಅತ್ತು ಊಟ ಮಾಡೋಲ್ಲವೆಂದು ಅಳಬಹುದಾದ್ದರಿಂದ ಸ್ವೀಟಂಗಡಿಯನ್ನು ಬಳಸಿಯೇ ಮನೆಗೆ ಹೋಗಬೇಕಾಗಿರುತ್ತದೆ. ಸೀರಿಯಲ್ಲುಗಳ ಮಧ್ಯೆ ಕಷ್ಟಪಟ್ಟು ಸಮಯ ಹೊಂದಿಸಿಕೊಂಡು ಅವ್ವಂದಿರು, ಆಟವಾಡಿ ಬಂದು ಮನೆತುಂಬಾ ಮಣ್ಣು ಹರಡುತಿರುವ ಮಕ್ಕಳಿಗೆ "ಕೈಕಾಲ್ ತೊಳ್ಕಂಡ್ ಬರ್ದಿದ್ರೆ ಅಪ್ಪಂಗೆ ಹೇಳ್ತೆ ಕಾಣ್" ಅಂತ ಹೆದರಿಸುತ್ತಾ, ಹಾರ್ಲಿಕ್ಸು ಕೊಡಬೇಕಿದೆ.

24416737

ಇಂಥ ಅರ್ಧಂಬರ್ಧ ಬೆಂದ ಸಂಜೆ ಹೊತ್ತಲ್ಲೇ ಬೆಂಗಳೂರು ಬಸ್ಸುಗಳು ಹೊರಡುತ್ತದೆ. ಸಮಯದ ವಿಚಾರದಲ್ಲಿ ಕಂಡಕ್ಟರನಿಗೆ ಒಂಚೂರೂ ದಯೆಯಿಲ್ಲ. ತನ್ನನ್ನು ನೋಡಲು ತಮ್ಮ ಬಂಧುಗಳೋ, ಗೆಳೆಯರೋ ಬಂದಿಲ್ಲವೆಂದು ಪಯಣಿಗ ಹೇಳಿದರೆ ಆತ ಒಂದು ನಿಮಿಷವೂ ಹೆಚ್ಚಿಗೆ ನಿಲ್ಲಿಸಲ್ಲ. ಆ ಮಟ್ಟಿಗೆ ಕಂಡಕ್ಟರು ಪೂರ್ಣ ಸ್ಥಿತಪ್ರಜ್ಞ. ಆತನ ಪಾಲಿಗೆ ಪ್ರಯಾಣಿಕಲ್ಲರೂ ಬರೀ ನಂಬರುಗಳು. ಯಾರಾದರೂ ಬರದೇ ಹೋದಲ್ಲಿ " ಸೀಟ್ ನಂಬರ್ ೧೬, ಸೀಟ್ ನಂಬರ್ ೧೬" ಅಂತ ನಂಬರುಗಳಲ್ಲಷ್ಟೇ ಕೂಗುತ್ತಾನೆ.

3190635797_38ce697ef8

ಕೊನೆಯ ಘೋಷಣೆ ಅವ ಕೂಗಿದೊಡನೆ ಅಲ್ಲಿ-ಇಲ್ಲಿ ತಮ್ಮನ್ನು ಬೀಳ್ಕೊಡಲು ಬಂದವರೊಡನೆ ಕೊನೆಕ್ಷಣಗಳ ಮಾತಾಡುತ್ತಿರುವ ಪಯಣಿಗರೆಲ್ಲರೂ ವಿದಾಯ ಹೇಳಿ ಬಸ್ಸು ಹತ್ತುವರು. ’ಅಲ್ ಹೋದ್ ಕೂಡ್ಲೆ ಫೋನ್ ಮಾಡ್’ ಎಂಬ ವಾಕ್ಯಗಳು ’ಲೆಟರ್ ಹಾಕ್’ ಎಂಬ ಮಾತನ್ನು ಕಸಿದುಕೊಂಡಿರುವುದಕ್ಕೆ ಕಂಡಕ್ಟರು ಈಗೆಲ್ಲಾ ಬೇಸರಿಸುವುದಿಲ್ಲ.  ಬಸ್ಸಿನ ಕಿಟಕಿಯೆಡೆಯಿಂದ ಬರುವ ಬೈ ಬೈ ಗಳು ತಲುಪಬೇಕಾದವರ ಎದೆ ಸೇರಿ ಮರೆಯಾಗುತ್ತದೆ. ಬಸ್ಸು ಸ್ಟಾಂಡ್ ಬಿಡುವವರೆಗೂ ಬೀಳ್ಕೊಡುವವರು ಕದಲದೇ ಇರುವುದರಿಂದ ಅಲ್ಲಿ ಹಾಗೆ ಅಸಹಾಯಕರಂತೆ ನಿಂತ ಅವರ ಚಿತ್ರ ಖಾಯಂ ಆಗಿ ಇವರ ಕಣ್ಣಲ್ಲೇ ಮುದ್ರಿತವಾಗುತ್ತದೆ. ಬಸ್ಸು ಮೆಲ್ಲಗೆ ತೆವಳುತ್ತಾ ಹೊರಡುತ್ತಿದ್ದಂತೆ ಬೀಳ್ಕೊಡಲು ಬಂದವರ ಬಿಂಬ ಪಯಣಿಗನ ಕಣ್ಣಲ್ಲಿ ಮಾಸುತ್ತಾ ಬರುತ್ತದೆ. 

 

ಇಂಥ ವಿದಾಯಗಳು ಕಹಿ ಔಷಧಿಯಂತೆ ಈಗ ವೇದನೆಯಿತ್ತರೂ ಸಂಬಂಧಗಳು ಅವುಗಳಿಂದಲೇ ಮತ್ತಷ್ಟು ಅರಳುತ್ತದೆ ಎಂಬುದು ಅವರಿಗೆ ಅರಿವಿದ್ದರೂ ’ಈ ಕ್ಷಣ’ ಮನಸ್ಸಿಗೆ ಒಪ್ಪಿಕೊಳ್ಳುವುದು ಕಷ್ಟ. ಸತ್ಯ ಅಪ್ರಿಯ. ಕ್ಷಣಗಳು ಕಷಾಯ. 

16391714 bus1

ಬಸ್ಸು ನಿಧಾನವಾಗಿ ರಸ್ತೆಯಲ್ಲಿ ಚಲಿಸುತ್ತಿದ್ದಂತೆ, ಮನದ ಫ್ರೇಮಿನಲ್ಲಿ ನೆನಪುಗಳು ಚಲಿಸುವ ರೀತಿಯಲ್ಲಿ ಕಿಟಕಿಯಲ್ಲಿ ಊರಿಗೆ ಊರೇ ಎದ್ದು ಬಿದ್ದು ಓಡುತ್ತದೆ. ಇನ್ನೂ ತಮ್ಮದಾಗಿಲ್ಲದ ಜಗವೊಂದಕ್ಕೆ ಹೊರಟಿರುವ ಜೀವಗಳಿಗೆ ಸಂತೈಸುವಂತೆ, ಅದುವರೆಗೂ ಸೆಕೆಯಿಂದ ತುಂಬಿದ್ದ ಬಸ್ಸಿನ ಒಳಗಿನಲ್ಲಿ ತಂಗಾಳಿ ಪಸರಿಸುತ್ತದೆ.

 

ಚಿತ್ರಕೃಪೆ : ಗೂಗಲ್ ನಿಂದ

ಟಿಪ್ಪಣಿಗಳು
 1. Gurumurthy ಹೇಳುತ್ತಾರೆ:

  ಊರಿಗೆ ಹೊರಡುವ ಹೊತ್ತನ್ನು ಸರಳವಾಗಿ ತಿಳಿಸಿದ್ದಿರಿ
  ನವಿರಾಗಿ ಸುಂದರ ಶಬ್ದಗಳಿಂದ ಇನ್ನೂ ಕಳೆಗಟ್ಟುತ್ತದೆ ಲೇಖನ
  ಮನೆಯ ನೆನಪಾಯಿತು ನನಗೂ

 2. ಅನಾಮಿಕ ಹೇಳುತ್ತಾರೆ:

  ರಂಜಿತ್ ,
  ಏನು ಶಬ್ದಗಳು, ಎಂಥ ಫೋಟೊಗಳು, ಎಂಥಾ ಲೇಖನ ಅಬ್ಭಾ!!!!
  ನಾಳೆ ಆಫೀಸ್ ಇಲ್ಲದೇ ಹೋಗಿದ್ದರೆ ಈವಾಗ್ಲೇ ಮತ್ಸ್ಯಗಂಧಾ ರೈಲಿನಲ್ಲಿ ಕುಂದಾಪುರಕ್ಕೆ ಹೋಗುತ್ತಿದ್ದೆ .
  ನೆನಪುಗಳು ಹಸಿರಾದವು. ನನ್ನ ಅನುಭವಗಳು ನೆನಪಿಗೆ ಬಂದು ನಗು/ಸಿಟ್ಟು/ಕಣ್ಣೀರು/ ಎಲ್ಲಾ ಏಕಕಾಲದಲ್ಲಿ ಬಂದವು.

  ಇನ್ ಶಾರ್ಟ್…….ಸೂಪರ್!!!!!!!!!!!

  ವಂದನೆಗಳೊಂದಿಗೆ
  ಸುಮಂತ

 3. Sumantha Shanubag ಹೇಳುತ್ತಾರೆ:

  ರಂಜಿತ್ ,
  ಏನು ಶಬ್ದಗಳು, ಎಂಥ ಫೋಟೊಗಳು, ಎಂಥಾ ಲೇಖನ ಅಬ್ಭಾ!!!!
  ನಾಳೆ ಆಫೀಸ್ ಇಲ್ಲದೇ ಹೋಗಿದ್ದರೆ ಈವಾಗ್ಲೇ ಮತ್ಸ್ಯಗಂಧಾ ರೈಲಿನಲ್ಲಿ ಕುಂದಾಪುರಕ್ಕೆ ಹೋಗುತ್ತಿದ್ದೆ .
  ನೆನಪುಗಳು ಹಸಿರಾದವು. ನನ್ನ ಅನುಭವಗಳು ನೆನಪಿಗೆ ಬಂದು ನಗು/ಸಿಟ್ಟು/ಕಣ್ಣೀರು/ ಎಲ್ಲಾ ಏಕಕಾಲದಲ್ಲಿ ಬಂದವು.

  ಇನ್ ಶಾರ್ಟ್…….ಸೂಪರ್!!!!!!!!!!!

  ವಂದನೆಗಳೊಂದಿಗೆ
  ಸುಮಂತ

 4. NANDANA ಹೇಳುತ್ತಾರೆ:

  Sir,

  Sakat agide, ista aytu nange 🙂

 5. ಅನಾಮಿಕ ಹೇಳುತ್ತಾರೆ:

  ರಂಜಿತ್ ಅವರೆ…

  ತುಂಬಾ ಚೆನ್ನಾಗಿದೆ…….. 🙂

  ಶ್ಯಾಮಲ

 6. ಚಾಮರಾಜ ಸವಡಿ ಹೇಳುತ್ತಾರೆ:

  ಮತ್ತೊಂದು ಸೊಗಸಾದ ಬರಹ ರಂಜಿತ್‌. ಎಷ್ಟು ಸಾರಿ ಬರೆದರೂ, ಊರಿನ ನೆನಪುಗಳು, ಬಾಲ್ಯದ ನೆನಪುಗಳು, ಪ್ರೀತಿಯ ಕ್ಷಣಗಳು ಮಾಸುವುದೇ ಇಲ್ಲ. ಬರೆದಷ್ಟೂ ಹೊಸ ಹೊಸ ಹೊಳಪಿನಿಂದ ಕಂಗೊಳಿಸುತ್ತವೆ ನೆನಪುಗಳು. ಅವತ್ತಿನ ವೇದನೆಗಳೂ ಇವತ್ತಿನ ಮಧುರ ಕ್ಷಣಗಳು. ಷೆಲ್ಲಿ ಹೇಳಿದ್ದು ಸರಿ.

  ಊರು ಎಂಬ ಶಬ್ದವೇ ಸಾವಿರ ಸಾವಿರ ನೆನಪುಗಳನ್ನು ಉಕ್ಕಿಸುವ ಕಡಲು. ಅಲೆಗಳಂತೆ ಸಾವಿಲ್ಲದವು. ಮತ್ತೆ ಮತ್ತೆ ಎದೆಯೊಳೆದ್ದು, ಹೊರಳಿ, ಮರೆಯಾಧರೂ ಮತ್ತೆ ಉಕ್ಕುವಂಥವು.

  ಇಂಥ ನೆನಪುಗಳನ್ನು ಮತ್ತೆ ನೆನಪಿಸಿದಿರಿ. ಹೃದಯ ಬೆಚ್ಚಗಾಗಿಸಿದಿರಿ. ಧನ್ಯವಾದಗಳು.

 7. ರಂಜಿತ್ ಹೇಳುತ್ತಾರೆ:

  ಗುರುಮೂರ್ತಿ ಸರ್,

  ಅದು ಊರಿಗೆ ಹೊರಡೋ ಹೊತ್ತಲ್ಲ, ಊರಿಂದ ಹೊರಡೋ ಹೊತ್ತು. ಅಕ್ಷರದಲ್ಲಿ ಒಂದೇ ವ್ಯತ್ಯಾಸ ಆದರೂ ಮನಸ್ಸಲ್ಲಿನ ಖುಷಿಯ ಮಾಪನದಲ್ಲಿ ಕ್ಷಣ-ಯುಗದಂತರವಿದೆ.. ಥ್ಯಾಂಕ್ಸ್ ನಿಮ್ಮ ಅಭಿಪ್ರಾಯಕ್ಕೆ.

 8. ರಂಜಿತ್ ಹೇಳುತ್ತಾರೆ:

  ಸುಮಂತ್,

  ಕುಂದಾಪುರದ ಬಗ್ಗೆ ಬರೆದಿದ್ದಕ್ಕೆ ಕಾಮೆಂಟ್ ಹಾಕುವ ನಿರ್ಧಾರ ತಗೊಂಡಿರಾ?:) ನಿಮಗೆ ಬಹುಶಃ ತುಂಬಾ ಚೆನ್ನಾಗಿ ಅರಿವಿರುತ್ತದೆ ಈ ಪರಿಸ್ಥಿತಿಯ ಬಗ್ಗೆ. ಮತ್ತು ಇಲ್ಲಿನ ವಾತಾವರಣದ ಕುರಿತು ಕೂಡ.

 9. ರಂಜಿತ್ ಹೇಳುತ್ತಾರೆ:

  ನಂದನ, ಶ್ಯಾಮಲ,

  ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

 10. ರಂಜಿತ್ ಹೇಳುತ್ತಾರೆ:

  ಸವಡಿ ಸರ್,

  ನಿಜ. ಬರಹಗಾರನ ಪರ್ಸು ಕದ್ದರೂ ಆತ ಬದುಕಬಲ್ಲ, ನೆನಪು ಕದ್ದರಲ್ಲ! ಬಹುಶಃ ಪೆನ್ನು ಪೇಪರು ಹಾರೆ ಪಿಕಾಸಿಯಿದ್ದಂತೆ, ಮನದ ಗಣಿ ಅಗೆಯುತ್ತಿದ್ದಂತೆ ನೆನಪುಗಳು ಮುತ್ತಾಗಿ ದೊರಕತೊಡಗುತ್ತದೆ.

 11. ಅವಿನಾಶ್ ತೀರ್ಥಹಳ್ಳಿ ಹೇಳುತ್ತಾರೆ:

  ಎ೦ತದೆ ಹೇಳಿ ಕು೦ದಾಪುರ ಭಯ೦ಕರ ನೆನಪಾತ್ತು ಮರ್ರೆ……..

 12. ರಾಘವೇಂದ್ರ ಹೆಗಡೆ ಹೇಳುತ್ತಾರೆ:

  ಹೊಯ್ ನಮಸ್ಕಾರ.
  ‘ಊರು ತೊರೆವ ಹೊತ್ತು’ ಬಾಳ್ ಲಾಯ್ಕ ಬಂದಿತ್ತ್ ಮಾರಾಯ್ರೆ ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s