ಪೀಪ್ಲಿ ಲೈವ್ : ಈಗಿನ ಸಮಾಜದ ಅಣಕನೋಟ!

Posted: ಆಗಷ್ಟ್ 22, 2010 in ಸಿನೆಮಾ
ಟ್ಯಾಗ್ ಗಳು:, , , , , , , ,

ಬಾಲಿವುಡ್ ಎಂದರೆ ಅದ್ಧೂರಿ ತಾರಾಗಣ, ದೊಡ್ಡ ಬಜೆಟ್ ನ ಸೆಟ್ ಗಳು, ತೆರೆಯ ಮೇಲಿನ ತಾರೆ ತಾನಾಗಬೇಕು ಅಂತ ನೋಡುಗನಿಗೆ ಕನಸು ಹುಟ್ಟಬೇಕು ಅಂಥ ಕಥೆ, ಹೀಗೆಯೇ ಒಂದು ವಿನ್ಯಾಸ ರೂಪುಗೊಳ್ಳುತ್ತಿರುವ ಹೊತ್ತಲ್ಲಿ ಅದಕ್ಕೊಂದು ಔಷಧಿಯುಕ್ತ ಇಂಜೆಕ್ಷನ್ ನೀಡುವಂಥ ಚಿತ್ರವೊಂದು ಬಂದಿದೆ. ಹೇಳಿಕೊಳ್ಳುವಂಥ ಯಾವ ’ಸ್ಟಾರ್’ ಇಲ್ಲದೇ ನಿರ್ಮಾಪಕನ ಸ್ಥಾನದಲ್ಲಿ ಕುಳಿತ ಅಮೀರ್ ಖಾನ್ ನಿರ್ಮಾಣದ ಚಿತ್ರ ಅಂತಲೇ ಕೊಂಚ ಪಬ್ಲಿಸಿಟಿ ದೊರಕಿದಂತಹ ಈ ಚಿತ್ರದ ಹೆಸರು “ಪೀಪ್ಲಿ ಲೈವ್”. ಇದು ಬೇರೆ ಸಿನೆಮಾದ ತರಹ ಕ್ಲೈಮಾಕ್ಸ್ ನಲ್ಲಿ ’ಎಲ್ಲಾ ಒಳ್ಳೆಯದಾಯಿತು ಅಥವ ಒಳ್ಳೆಯದಾಗುತ್ತೆ’ ಅಂತ ಅನ್ನಿಸಿ ಮನೆಗೆ ಬಂದು ದೈನಂದಿನ ಜೀವನದಲ್ಲಿ ಕಳೆದುಹೋಗುವಂತೆ ಮಾಡುವ ಸಿನೆಮಾ ಅಲ್ಲ. ಹಾಗಂತ ಸಮಾಜದ ಸಮಸ್ಯೆಯೊಂದನ್ನು ಗಂಭೀರವಾಗಿ ತೋರಿಸುತ್ತ ಗೋಳು ಹೊಯ್ಕೊಳ್ಳುವಂತದ್ದೂ ಅಲ್ಲ.

peepli live music

ಗಹನವಾದ ಸಮಸ್ಯೆಯ ಎಳೆಯೊಂದನ್ನು ಚಿತ್ರದುದ್ದಕ್ಕೂ ನಗೆಯ ಲೇಪವಿಟ್ಟು ಬಡಿಸುತ್ತ ಹೋಗುತ್ತಾರೆ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಅನೂಷ ರಿಜ್ವಿ. ಬಡತನ ರೇಖೆಗಿಂತ ಕೆಳಗಿರುವವರ ಬದುಕನ್ನು ಮೂಲವಾಗಿಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರೆ. ಅಬ್ಬ! ಅದೆಷ್ಟು ದಿನವಾಯ್ತು ಬಾಲಿವುಡ್ಡು ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿ!

ಈ ಚಿತ್ರದಲ್ಲೊಂದು ಮಾತು ಬರುತ್ತದೆ :  ಜಿಂದಗಿ ಬನ್ ಗಯೀ ಹೈ ಬೆಲ್ ಬಾಟಮ್; ಔರ್ ಖುದ್ ಖುಷೀ ಬನ್ ಗಯೀ ಹೈ ಜೀನ್ಸ್ ಪ್ಯಾಂಟ್ ಅನ್ನುವ ಈ ಒಂದು ಸಂಭಾಷಣೆಯ ಅನುರಣನ ನೋಡುಗನ ಮನಸ್ಸಲ್ಲಿ ಇಡೀ ಚಿತ್ರ ನೋಡುವಾಗಲೂ ಸುಳಿಯುತ್ತಿರುತ್ತದೆ. ಮಾಡಿರುವ ಸಾಲದಿಂದ ಜಮೀನು ಉಳಿಸಿಕೊಳ್ಳಲು ಅಲೆದಾಡುವ ಪೀಪ್ಲಿ ಎಂಬ ಹಳ್ಳಿಯ ನತ್ತಾ ಮತ್ತು ಬುಧಿಯಾಗೆ ಆತ್ಮಹತ್ಯೆ ಮಾಡಿಕೊಂಡರೆ ಸರಕಾರದಿಂದ ದೊರಕಬಹುದಾದ ಪರಿಹಾರದ ಬಗ್ಗೆ ತಿಳಿದುಬರುತ್ತದೆ. ಬುಧಿಯಾ ಜಾಣ್ಮೆಯಿಂದ ನತ್ತಾ ನನ್ನು ಆತ್ಮಹತ್ಯೆಗೆ ಒಪ್ಪಿಸುತ್ತಾನೆ. ಅಲ್ಲಿಂದ ಕಥೆಯ ವಿಡಂಬನಾ ಪ್ರಯಾಣ ಶುರು. ನತ್ತಾ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂಬ ಸುದ್ಧಿಯ ವಾಸನೆ ಸಿಕ್ಕಿ ಮೀಡಿಯಾದ ಟೀಆರ್ಪಿ ಹಸಿವು, ರಾಜಕಾರಣಿಗಳ ವೋಟಿನ ರುಚಿ ಜಾಗೃತಗೊಳ್ಳುತ್ತದೆ. ಮೀಡಿಯಾಗೆ ಅಂದಿನ ಬ್ರೇಕಿಂಗ್ ನ್ಯೂಸ್ ನತ್ತಾ ಆತ್ಮಹತ್ಯೆ ಮಾಡಿಕೊಳ್ಳುತ್ತಾನಾ ಇಲ್ಲವಾ ಎಂದು. ಮೀಡಿಯಾದವರೆಲ್ಲಾ ಬಂದು ಪೀಪ್ಲಿ ಎಂಬ ಹಳ್ಳಿಯಲ್ಲಿ ಠಿಕಾಣಿ ಹೂಡುತ್ತಾರೆ. ಸುದ್ಧಿಗಾಗಿ ಯಾವ ಹಂತಕ್ಕೆ ಇಳಿಯಲು ಸಾಧ್ಯ ಎಂಬುದನ್ನೂ ತುಂಬ ಅಣಕವಾಗಿ ತೋರಿಸುತ್ತಾರೆ. ನತ್ತಾ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯವನ್ನು ಲೋಕಲ್ ಪತ್ರಕರ್ತನಿಂದ ಹಿಡಿದು, ಕೇಂದ್ರ ಕೃಷಿ ಮಂತ್ರಿಯವರೆಗೂ ಎಲ್ಲರೂ ತಮ್ಮ ಅಭ್ಯುದಯಕ್ಕೆ ಬಳಸಿಕೊಳ್ಳಲು ನೋಡುತ್ತಾರೆ.

peepli2

ದೃಶ್ಯವೊಂದರಲ್ಲಿ ಹಳ್ಳಿಯ ಪತ್ರಕರ್ತನೊಬ್ಬನಿಗೆ ಟೀವಿ ಮೀಡಿಯಾದವಳು ಈಗೆಲ್ಲಾ ಮಾಧ್ಯಮವೆಂಬುದು – ಸಮಸ್ಯೆ ಮತ್ತದರ ಪರಿಹಾರದ ಕುರಿತು ಆಸಕ್ತಿ ತೋರಿಸುವುದಲ್ಲದೇ, ಕಥೆ ಬೆಂಬೀಳುವುದಷ್ಟೇ ಅನ್ನುವ ಪಾಠ ಹೇಳುವುದು, ಅನೂಷ ರಿಜ್ವಿಯ ಮೀಡಿಯಾ ಬಗೆಗಿನ ಒಳಮಿಡಿತ ತೋರಿಸುತ್ತದೆ. ಬಹುಶಃ ರಿಜ್ವಿ ಈ ಹಿಂದೆ ಎನ್ ಡಿ ಟೀ ವಿಯಲ್ಲಿ ಪತ್ರಕರ್ತೆಯಾಗಿದ್ದುದು ಈ ಚಿತ್ರಕಥೆಗೆ ಬಹಳಷ್ಟು ಸಹಾಯ ಮಾಡಿರುವುದಂತೂ ಸುಳ್ಳಲ್ಲ.

ಈ ಚಿತ್ರದ ಹುಟ್ಟಿನಲ್ಲೂ ಮಜವಾದ ಕಥೆಯೊಂದಿದೆ. ಆಗ ಆಮಿರ್ ಖಾನ್, ಮಂಗಲ್ ಪಾಂಡೆ , ದ ರೈಸಿಂಗ್ ಅನ್ನುವ ಚಿತ್ರದಲ್ಲಿ ನಟಿಸುತ್ತಿದ್ದರು. ಆ ಸಮಯದಲ್ಲೇ ಅನೂಷ ಆಮೀರ್ ಗೆ ಈ ಚಿತ್ರದ ಸ್ಕ್ರಿಪ್ಟ್ ನ್ನು ಈಮೈಲ್ ಮಾಡಿದ್ದರು. ಮತ್ತು ಆ ಸ್ಕ್ರಿಪ್ಟ್ ನ ಹೆಸರು ’ದ ಫಾಲ್ಲಿಂಗ್” ಅಂತಿತ್ತು. ಹೆಸರು ನೋಡಿ ಯಾರೋ ಅಣಕವಾಡಲು ಕಳುಹಿಸಿದ್ದಿರಬೇಕು ಅಂತ ಆಮೀರ್ ಓದಿರಲೇ ಇಲ್ಲ. ಮತ್ತೆ ಮತ್ತೆ ಅನೂಷರ ಈ ಮೈಲ್ ಬಂದಾಗ ಓದುವುದು ಮತ್ತೆ  ಕಥೆ ಇಷ್ಟಪಟ್ಟಿದ್ದು ನಡೆಯಿತು. ಹಾಗಾಗಿ ಅನೂಷ ಅಣಕದಲ್ಲಿ ಮೀಡಿಯಾ, ರಾಜಕಾರಣಿಗಳು ಬಿಡಿ, ಆಮೀರ್ ರನ್ನೂ ಬಿಟ್ಟಿಲ್ಲ ನೋಡಿ!

ಪೀಪ್ಲಿ ಲೈವ್ ನ ಚಿತ್ರಕಥೆಗೆ, ಕಥೆ ನಡೆವ ಸ್ಥಳಕ್ಕೆ ಸರಿಹೊಂದುವಂತೆ ಸಂಗೀತವಿದೆ. ಮೊದಲಬಾರಿಗೆ ಆಕರ್ಷಣೆ ಅನ್ನಿಸದಿದ್ದರೂ ಮತ್ತೆ ಮತ್ತೆ ಕೇಳಿದಾಗ ಹಾಡುಗಳು ಮನಸೂರೆಗೊಳ್ಳುತ್ತದೆ. ಮುಖ್ಯವಾಗಿ ಚಿತ್ರ ನೋಡುವಾಗ ಸಂಗೀತ ಕಥೆಗೆ ಭಿನ್ನ ಅನ್ನಿಸದೇ ಕಥೆ ಒಳಗಿಂದಲೇ ಹುಟ್ಟಿದಂತದ್ದು ಅನಿಸುವುದು, ಸಂಗೀತ ನಿರ್ದೇಶಕನ ಹೆಗ್ಗಳಿಕೆ. ಮತ್ತೆ ಸ್ಕ್ರೀನ್ ಪ್ಲೇ ಗಿಂತಲೂ ಚಿತ್ರದಲ್ಲಿ ಯಶಸ್ವಿಯಾಗಿರುವುದು ಚಿತ್ರದ ನಟರ ಆಯ್ಕೆ. ಇಡೀ ಚಿತ್ರದಲ್ಲಿ ಯಾವೊಂದು ಪಾತ್ರವೂ ಹೊಂದಿಕೆಯಾಗುವುದಿಲ್ಲ ಅನ್ನಿಸುವುದೇ ಇಲ್ಲ. ಅದರಲ್ಲು ನತ್ತಾ ಪಾತ್ರದಲ್ಲಿ ನಟಿಸಿದ ಓಂಕಾರ್ ದಾಸ್ ಮಾಣಿಕ್ಪುರಿಯ ನಟನೆ ಚಿತ್ರದ ಹೈಲೈಟ್. ಆತನ ಮುಗ್ಧತೆ ತುಂಬ ನೈಜ. ಅದು ಮೊದಲ ಬಾರಿಗೆ ಪತ್ರಕರ್ತೆಯೊಬ್ಬಳು ಆತನೆದುರು ಮೈಕ್ ಹಿಡಿದಾಗ, ಮತ್ತು ಮಲಗಿದ್ದಾಗ ತೊಂದರೆ ಕೊಡುವ ಕುರಿಯನ್ನು ಓಡಿಸುವಾಗ, ಮತ್ತೆ  ಸಮಸ್ಯೆಗಳು ತನ್ನನ್ನು ಸುತ್ತುವರೆದಾಗ ಕುರಿಯನ್ನು ಆಪ್ತತೆಯಿಂದ ತಬ್ಬಿಕೊಳ್ಳುವುದರಲ್ಲಿ, ಮಗ ಬಂದು “ಅಪ್ಪಾ ಅಪ್ಪಾ.. ಯಾವಾಗ ಸಾಯ್ತಿ?” ಅಂತ ಕೇಳಿದಾಗ ಮೂಡಿದ ರೇಗುವಿಕೆಯಲ್ಲಿ, ಎಲ್ಲ ದೃಶ್ಯದಲ್ಲೂ ತನ್ನ ಪ್ರತಿಭೆ ಮೆರೆಯುತ್ತಾರೆ.

ಹಾಗೆಯೇ ಆಮೀರ್ ರ ಲಗಾನ್ ನಲ್ಲೂ ಪಾತ್ರ ನಿರ್ವಹಿಸಿದ್ದ ರಘುಬೀರ್ ಯಾದವ್ ರದ್ದೂ ನತ್ತಾ ನ ಅಣ್ಣನಾಗಿ ಗಮನಾರ್ಹ ಅಭಿನಯ. ಟೀವಿ ಚಾನೆಲ್ ನ ಪತ್ರಕರ್ತೆಯಾಗಿ ಮಲೈಕಾ ಶೆಣೈ, ಎಂಥ ಜಾಗೆಯಲ್ಲೂ ಸುದ್ಧಿ ಹುಟ್ಟಿಸಬಲ್ಲ ಕುಯುಕ್ತಿ ಹೊಂದಿದ ಪಾತ್ರದಲ್ಲಿ ವಿಶಾಲ್ ಶರ್ಮಾ, ದೊಡ್ಡ ಪತ್ರಕರ್ತನಾಗುವ ಆಸೆ ಹೊಂದಿದ ಲೋಕಲ್ ಪತ್ರಕರ್ತನಾಗಿ ನವಾಜುದ್ದೀನ್ ಸಿದ್ಧಿಕಿ, ಗಯ್ಯಾಳಿ ಹೆಂಡತಿಯಾಗಿ ಶಾಲಿನಿ ವತ್ಸ ಮತ್ತು ವೃದ್ಧಾಪ್ಯದಲ್ಲೂ ಜಗಳವಾಡುವ, ಸಿಕ್ಕಿದರೆ ಬೀಡಿ ಸೇದುವ ಮುದುಕಿ ಪಾತ್ರದಲ್ಲಿ ಫಾರೂಕ್ ಜಾಫರ್ (ಈಕೆ ಲಗಾನ್ ನಲ್ಲೂ ಚಿಕ್ಕ ಪಾತ್ರ ಮಾಡಿದ್ದಳಂತೆ, ಆಮೀರ್ ಈ ಪಾತ್ರಕ್ಕೆ ಈಕೆಯೇ ಸರಿಹೊಂದುತ್ತಾಳೆ ಅನ್ನಿಸಿ ಆಯ್ಕೆ ಮಾಡಿದ್ದಂತೆ) ಎಲ್ಲರೂ ತಮ್ಮ ಪಾತ್ರದಲ್ಲಿ ಶ್ರದ್ಧೆಯಿಂದ ನಟಿಸಿದ್ದಾರೆ.

ಚಿತ್ರ, ಕ್ಲೈಮಾಕ್ಸ್ ನಲ್ಲಿ ಯಾವುದೊಂದು ನಿರ್ಣಯ ನೀಡದೇ ಕಥೆ ಹೀಗೆ ನಡೆಯಿತು ಅಂತಷ್ಟೇ ಹೇಳಿ ಸುಮ್ಮನಾಗುತ್ತದೆ. ನಾವು ನಾವೇ ಉತ್ತರಿಸಿಕೊಳ್ಳಬೇಕಾದ, ನಮ್ಮ ಜವಾಬ್ದಾರಿಯನ್ನು ಪ್ರಶ್ನಿಸುವ, ಮತ್ತು ಈ ಮಾಡರ್ನೈಸೇಶನ್ ನಮ್ಮನ್ನು ಎತ್ತ ಒಯ್ಯುತ್ತಿದೆ ಅನ್ನುವ ಮತ್ತು ಇನ್ನೂ ಹಲವು ಪ್ರಶ್ನೆಗಳ ಸಮೇತ ಥಿಯೇಟರ್ ನಿಂದ ಹೊರಬರುತ್ತೀರಿ.

******

ಪಿ. ಎಸ್ :  ಈ ಚಿತ್ರ ಯಾಕೆ ನೋಡಬೇಕು? :
ಕನಸಿನ ಲೋಕದಲ್ಲಿ ನಮ್ಮನ್ನು ಕೊಂಚ ಹೊತ್ತು ಮರೆಸುವ ಚಿತ್ರಗಳನ್ನನೇಕ ನೋಡುತ್ತೇವೆ; ಆದರೆ ಕೆಲ ಬಾರಿ ಕನ್ನಡಿಯನ್ನೂ ನೋಡಿಕೊಳ್ಳಬೇಕಲ್ಲವೇ?

Advertisements
ಟಿಪ್ಪಣಿಗಳು
 1. ಚಾಮರಾಜ ಸವಡಿ ಹೇಳುತ್ತಾರೆ:

  ಮರೆತ (ಕೊನೆಯ) ಸಾಲುಗಳು ನಿಜಕ್ಕೂ ಸತ್ಯ. ವಾಸ್ತವಕ್ಕಿಂತ ವೈಯಕ್ತಿಕ ಭ್ರಮೆಗಳೇ ಸುದ್ದಿಯ ಮೂಲಗಳಾಗುತ್ತಿರುವುದರಿಂದ, ಪತ್ರಕರ್ತರೂ ಆಗಾಗ ಕನ್ನಡಿ ನೋಡಿಕೊಳ್ಳಬೇಕು ಎನ್ನುವ ವಾತಾವರಣ ನಿರ್ಮಾಣವಾಗಿದೆ.

  ಸೊಗಸಾದ ವಿಮರ್ಶೆ ರಂಜಿತ್‌.

 2. ಆನಂದ ಹೇಳುತ್ತಾರೆ:

  “ಹಾಗಂತ ಸಮಾಜದ ಸಮಸ್ಯೆಯೊಂದನ್ನು ಗಂಭೀರವಾಗಿ ತೋರಿಸುತ್ತ ಗೋಳು ಹೊಯ್ಕೊಳ್ಳುವಂತದ್ದೂ ಅಲ್ಲ.”

  ಸಮಾಜದ ಸಮಸ್ಯೆಯೊಂದನ್ನು ಗಂಭೀರವಾಗಿ ತೋರಿಸುವುದು ನಿಮಗೆ ಗೋಳು ಹೊಯ್ಕಂಡಂಗೆ ಅನ್ನಿಸುತ್ತಾ? ಸರಿ ಹೋಯ್ತು ಬಿಡಿ. ಆ ನಿಜವಾದ ಗೋಳು ಅನುಭವಿಸುವವರ ಸ್ಥಾನದಲ್ಲೊಮ್ಮೆ ನಿಮ್ಮನ್ನು ಕಲ್ಪಿಸಿಕೊಂಡು ಆಮೇಲೆ ಅದರಲ್ಲೂ ಮನರಂಜನೆ ತೆಗೆದುಕೊಳ್ಳ ಬಹುದಾ ಅಂತ ಯೋಚಿಸಿ.

 3. madhusoodan ಹೇಳುತ್ತಾರೆ:

  ರಂಜಿತ್,
  ಸೊಗಸಾದ ಚಿತ್ರವೊಂದನ್ನು ನಿರ್ಮಿಸಿದ್ದಕ್ಕಾಗಿ ಅಮೀರ್ ಖಾನ್ ರಿಗೆ ಅಭಿನಂದನೆ ಹೇಳಲೇಬೇಕು.
  ಚಿತ್ರ ನೋಡಿ ಹೊರಬಂದರೆ ಏನೋ ವಿಷಾದ ಭಾವ ಮನಸ್ಸೆಲ್ಲ ಆವರಿಸಿತ್ತು. ಈಗಿನ ವಸ್ತುಸ್ತಿತಿಯ ಕಟುಸತ್ಯವೊಂದನ್ನು ಚೆನ್ನಾಗಿ ತೆರೆಯ ಮೇಲೆ ನಿರೂಪಿಸಿದ್ದಾರೆ.
  ತಮ್ಮ ಲೇಖನಕ್ಕೆ ವಂದನೆಗಳು
  ಮಧು

 4. Dr.Gurumurthy Hegde ಹೇಳುತ್ತಾರೆ:

  ನಾನಿನ್ನೂ ನೋಡಿಲ್ಲ ಇದನ್ನ

  ಚಿತ್ರದ ಬಗೆಗಿನ ಪರಿಚಯಕ್ಕೆ ಧನ್ಯವಾದಗಳು

 5. supreeth ಹೇಳುತ್ತಾರೆ:

  ಈ ಸಿನೆಮಾ ನೋಡಲೇ ಬೇಕು ಹಾಗಿದ್ದರೆ…

 6. ರಂಜಿತ್ ಹೇಳುತ್ತಾರೆ:

  ಚಾಮರಾಜ ಸವಡಿ,

  ಧನ್ಯವಾದಗಳು.

  ಮಧುಸೂದನ್, ಹ್ಮ್ ಹೌದು. ಅದರಲ್ಲೂ ಕಥೆಯನ್ನು ಹೇಳಿರುವ ರೀತಿ ಸೊಗಸಾಗಿದೆ. ಯಾವ ನಿರ್ಣಯವನ್ನೂ ನಮ್ಮ ಮೇಲೆ ಹೇರದೇ, ಬರೀ ಕಥೆ ಹೀಗಿದೆ ಅನ್ನೊದನ್ನಷ್ಟೇ ತಿಳ್ಸಿದಾರೆ. ಚಿತ್ರ ನೋಡುವಾಗ ಮೇಲೆ ನಗುತ್ತಿದ್ದರೂ ಅಲ್ಲಿನ ಪರಿಸ್ಥಿತಿಗಳು ಮತ್ತು ನಮ್ಮ ಜವಾಬ್ದಾರಿತನ ಚುಚ್ಚುತ್ತಿರುತ್ತದೆ. ಚಿತ್ರದಿಂದ ಹೊರಬಂದಾಗ ಮೂಡುವ ವಿಷಣ್ಣ ಭಾವ ನಾನು ಚಿತ್ರ ನೋಡಿ ಹೊರಬರುವಾಗ ಅನೇಕರಲ್ಲೂ ಗಮನಿಸಿದ್ದೇನೆ.

 7. ರಂಜಿತ್ ಹೇಳುತ್ತಾರೆ:

  ಸುಪ್ರೀತ್, ಗುರುಮೂರ್ತಿ ಸರ್,

  ನೋಡಿ, ಇಂಥ ಚಿತ್ರಗಳು ಅದೂ ಬಾಲಿವುಡ್ಡಿನಲ್ಲಿ ಬಹಳ ಅಪರೂಪ.

 8. ರಂಜಿತ್ ಹೇಳುತ್ತಾರೆ:

  ಆನಂದ,

  🙂 ಸರಿ. ನಿಮ್ಮ ಸಲಹೆ ತೆಗೆದುಕೊಂಡಿದ್ದೇನೆ. ಧನ್ಯವಾದಗಳು.

 9. Shamala ಹೇಳುತ್ತಾರೆ:

  ರಂಜಿತ್…
  ತುಂಬಾ ಚೆನ್ನಾಗಿದೆ ನಿಮ್ಮ ವಿಮರ್ಶೆ. ಚಿತ್ರ ನೋಡಲೇ ಬೇಕೆನ್ನುವ ಆಸೆ ಹುಟ್ಟುವಂತೆ ಬರೆದಿದ್ದೀರಿ…. ಧನ್ಯವಾದಗಳು

  ಶ್ಯಾಮಲ

 10. ದಿವ್ಯಾ ಹೇಳುತ್ತಾರೆ:

  ಉತ್ತಮ ಚಿತ್ರದ ಬಗ್ಗೆ ಉತ್ತಮ ವಿಮರ್ಶೆ 🙂

 11. vanitha ಹೇಳುತ್ತಾರೆ:

  yep, Great movie:))

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s