ಘಟನೆಯೊಂದು ಎಳೆತಂದ ಹಳೆಯದೊಂದು ನೆನಪು!

Posted: ಡಿಸೆಂಬರ್ 19, 2010 in ಪರ್ಸನಲ್ಲು, ಬದುಕೇ, ಐ ಲವ್ ಯೂ!, ಮಾಹಿತಿ, ಸಿಂಗಪೂರ್ ಸಂಗತಿಗಳು
ಟ್ಯಾಗ್ ಗಳು:, , , ,

 

ಕಾಲೇಜಿನ ದಿನಗಳಲ್ಲಿ ಅಮ್ಮನನ್ನು ಕರೆದು, ಬೆಂಗಳೂರು ತೋರಿಸುವ ಇರಾದೆ ತುಂಬಾ ಇರುತ್ತಿದ್ದರೂ ಆಟೋದಲ್ಲಿ ಸುತ್ತಿಸುವಷ್ಟು ಆರ್ಥಿಕ ಪರಿಸ್ಥಿತಿಯಲ್ಲಿರದೇ ಬಸ್ಸಿನಲ್ಲಿ ಕರೆದೊಯ್ಯಲು ಒಂದು ರೀತಿಯ ಭಯವಿರುತ್ತಿತ್ತು. ಭಯಕ್ಕೆ ಕಾರಣ ಬಸ್ಸಿನ ಚಾಲಕರು, ಕಂಡಕ್ಟರುಗಳು. ಬಸ್ಸಿನೊಳಗೆ ತಮ್ಮೆಲ್ಲಾ ಜೀವನದ ಜಂಜಡಗಳಿಂದಲೇ ಪ್ರೇರಿತವಾದ ವಿಚಿತ್ರ ಅಸಹನೆಯಿಂದ ಕೂರುವ, ವೇಗವಾಗಿ ಓಡಿಸಯ್ಯ ಅನ್ನುವ ಭಾವದಿಂದಲೇ ಬಸ್ಸು ಹತ್ತುವ ಪಯಣಿಗರ ಭಯವೋ, ಅಥವ ತಮ್ಮ ಸಿಂಗಲ್ ಗಳನ್ನು ಮುಗಿಸುವ ತರಾತುರಿಯೋ ಅಥವ ಅದೇನೋ ಅರ್ಥವಾಗದ ಅವಸರವೋ ಬಸ್ಸು ನಿಂತ ಕೂಡಲೇ ಇಳಿವವರನ್ನು ತಳ್ಳುವಷ್ಟು ಅರ್ಜೆಂಟು ಅವರಲ್ಲಿ ಮೂಡಿಬರುತ್ತದೆ ಅನಿಸುತ್ತದೆ.

ವಯಸ್ಸಿನ ಜತೆಗೇ ಬಂದುಬಿಡುವ ಮಂಡಿನೋವಿರುವ ಅಮ್ಮ ಅದೊಂದು ದಿನ ಬಸ್ಸಿನ ಕೊನೆಯ ಮೆಟ್ಟಿಲಿನಿಂದ ರೋಡಿಗೆ ಹೆಜ್ಜೆಯಿಡುವಷ್ಟರಲ್ಲಿ ಕಂಡಕ್ಟರನ ವಿಸಿಲ್ಲು ಕಹಳೆಯಂತೆ ಕೇಳಿಸಿ ಚಾಲಕ ಬಸ್ಸು ಹೊರಡಿಸಿಬಿಟ್ಟಿದ್ದ. ಅಮ್ಮ ಆಯತಪ್ಪಿ ಬಿದ್ದುಬಿಟ್ಟಿದ್ದಳು. ತನ್ನ ಕಣ್ಣೆದುರೇ ನಡೆದದ್ದುದರಿಂದ ಕೂಡಲೇ ಮತ್ತೆ ಬ್ರೇಕು ಹಾಕಿ ನಿಲ್ಲಿಸಿ ಅಮ್ಮನಿಗೇ "ಬೇಗ ಇಳಿಯೋಕಾಗಕಿಲ್ವ?" ಅಂತ ದಬಾಯಿಸಿದ್ದ. ಬಿದ್ದ ಅಮ್ಮನನ್ನು ಎತ್ತುವುದರಲ್ಲಿ, ಆಕೆಯ ಮುಜುಗರವನ್ನು ಸಮಾಧಾನಪಡಿಸುವಂತೆ ಏನೂ ಆಗಿಲ್ಲವೆಂಬಂತೆ ಮಾತಾಡುತ್ತ ಚಾಲಕನ ಮಾತಿಗೆ ಜಗಳವಾಡುವ ಮನಸ್ಸಿಲ್ಲದೇ ವಿಪರೀತ ಅಸಹಾಯಕತೆಯ ಮೌನ ಧರಿಸಿದ್ದೆ.

ಅವತ್ತು ಮನದ ಮುಗಿಲಿಗೆ ಒಂದು ಅಸಹನೆಯ ಮೋಡ. ಆರ್ಥಿಕ ಪರಿಸ್ಥಿತಿಯನ್ನು ಬಯ್ದುಕೊಳ್ಳಬೇಕೋ, ವ್ಯವಸ್ಥೆಯನ್ನು ಬಯ್ದುಕೊಳ್ಳಬೇಕೋ ಅಥವಾ ಹ್ಯಾಗೆ ಸುಧಾರಿಸಬೇಕು ಅನ್ನುವ, "ಆಂಗ್ರಿ ಯಂಗ್ ಮ್ಯಾನ್" ಆಗಿಬಿಡಬೇಕು, ಶಂಕರ್ ಸಿನೆಮಾಗಳ ಹೀರೋನಂತೆ ಯಾರಾದರೂ, ಕೊನೆಗೆ ನಾನಾದರೂ ಆಗಿಬಿಡಬೇಕೆಂಬ ತಳಮಳವುಳ್ಳ ವಿಚಿತ್ರ ಹುಮ್ಮಸ್ಸು.

ಕಾಲೇಜು ಮುಗಿಯಿತು, ಕೆಲಸ ಸಿಕ್ಕಿ ಜೀವನದ ಎಲ್ಲಾ ಪರ್ವಗಳು ಮೆಲ್ಲ ಮೆಲ್ಲ ಪುಟತಿರುವತೊಡಗಿದವು. ಅಮ್ಮನಿಗೆ ಬೆಂಗಳೂರು ತೋರಿಸುವುದಕ್ಕೆ ನಾನೇ ಬೆಂಗಳೂರಲ್ಲಿರದೇ ಫೋನಿನಲ್ಲೇ ಅದು ನೋಡಿದೆಯಾ ಇದು ನೋಡಿದೆಯಾ ಅನ್ನುವ ಹಾಗೆ ಬದುಕು ಮಾಡಿಸಿತು. ಬಸ್ಸಿನಲ್ಲಿ ತಿರುಗಬೇಡ ಎಲ್ಲಿಗೆ ಹೋಗುವುದಾದರೂ ಅದೆಷ್ಟೇ ದೂರವಿದ್ದರೂ ಆಟೋದಲ್ಲಿ ತಿರುಗು ಅನ್ನುವಷ್ಟು ಆರ್ಥಿಕವಾಗಿ ಸುಧಾರಿಸಿದ ಮೇಲೆ, ನಾನೇ ಸ್ವತಃ ಕರೆದೊಯ್ದು ತೋರಿಸುವಷ್ಟು ತೃಪ್ತಿಯಲ್ಲದಿದ್ದರೂ ಮೊದಲಿಗಿಂತ ಒಂದು ಮಟ್ಟದ ಮೇಲಿನ ಸಂತಸ ದೊರಕುತ್ತಿತ್ತು.

ಇದನ್ನು ನೆನಪಿಸಿಕೊಳ್ಳುವುದಕ್ಕೆ ಕಾರಣ ಇತ್ತೀಚೆಗೆ ಸಿಂಗಾಪೂರಿನ ಬಸ್ಸಿನಲ್ಲಿ ನೋಡಿದ ಒಂದು ಘಟನೆ. ಇಲ್ಲಿ ಹಣ ನೀಡಲು ಕಾರ್ಡಿನ ವ್ಯವಸ್ಥೆ, ನಿಲ್ದಾಣಗಳಲ್ಲಿ ಮುಂದಿನ ಬಸ್ಸು ಎಷ್ಟು ಹೊತ್ತಿಗೆ ಬಸ್ ಸ್ಟಾಪ್ ತಲುಪುತ್ತೆ ಎಂದು ತೋರಿಸುವ ಬೋರ್ಡು, ಮತ್ತು ಎಲ್ಲಾ ನಿಲ್ದಾಣಗಳಲ್ಲಿ ಬರುವ ಬಸ್ಸು ಹೋಗುವ ರೂಟುಗಳ ಚಿತ್ರ ಹಾಕಿರ್ತಾರೆ ಎಂಬ ಟೆಕ್ನಿಕಲ್ ವಿಷಯಗಳಲ್ಲದೇ ಬೇರೆ ಕೆಲವು ಉತ್ತಮ ವಿಚಾರಗಳಿವೆ. ಸಚೇತನರಿಗೆ ಬಸ್ಸಿನಲ್ಲಿ ಹತ್ತಲು ಅನುಕೂಲವಾಗುವಂತೆ ವ್ಯವಸ್ಥೆಯಿದೆ. ಬಸ್ಸಿನೊಳಗೆ ಅವರಿಗೇ ಪ್ರತ್ಯೇಕವಾಗಿ ಕೈಚಾಲಿತ ವಾಹನವನ್ನು ನಿಲ್ಲಿಸಿಕೊಳ್ಳಲು ಜಾಗ ಮಾಡಿರುತ್ತಾರೆ. ಬಸ್ಸಿನ ತುಂಬೆಲ್ಲಾ ಹಿರಿಯರಿಗೆ ಸೀಟುಬಿಟ್ಟುಕೊಡುವುದು ಕಾನೂನು ಅಂತಲ್ಲದೇ, ಅದೇ ನಿಜವಾದ ನಡತೆ ಅನ್ನುವುದನು ಬಿಂಬಿಸುವ ಜಾಹೀರಾತುಗಳಿರುತ್ತದೆ. ಮತ್ತು ಬಸ್ಸು ಹತ್ತಿದ ಯಾವ ಮಗುವೂ ಅದನ್ನು ನೋಡದೇ ಇಳಿಯಲಾಗದಷ್ಟುಕಣ್ಣಿಗೆ ರಾಚುವ ಜಾಗೆಯಲ್ಲಿ ಹಾಕಿರುತ್ತಾರೆ.

singapore-bus

ಒಮ್ಮೆ ಹೀಗೆ ಆಫೀಸಿಗೆ ಬಸ್ಸಲ್ಲಿ ಹೋಗುತ್ತಾ ಇದ್ದಾಗ ಸ್ಟಾಪಿನಲ್ಲಿ ಒಬ್ಬ ವಯಸ್ಸಾದ ಮಹಿಳೆ ಹತ್ತಿದರು. ಊರುಗೋಲಿಲ್ಲದಿದ್ದರು ಹೆಜ್ಜೆ ಹೆಜ್ಜೆಯನ್ನೂ ಮೆಲ್ಲ ಇಡುವಷ್ಟು ವಯಸ್ಸು. ಆ ಸ್ಟಾಪಿನಲ್ಲಿ ಆಕೆಯನು ಬಿಟ್ಟು ಮತ್ಯಾರೂ ಹತ್ತಿರಲಿಲ್ಲ. ಆಕೆ ಮೆಲ್ಲ ಬಸ್ಸು ಹತ್ತಿದಳು. ಬಸ್ಸಿನೊಳಗಿನ ಕಂಬಗಳನು ಒಂದೊಂದಾಗಿ ಹಿಡಿಯುತ್ತಾ ಸೀಟಿನಲ್ಲಿ ಕೂರಲು ಕಡಿಮೆ ಎಂದರೂ ಎರಡರಿಂದ ಮೂರು ನಿಮಿಷವಾದರೂ ಆಗಿದ್ದಿರಬೇಕು. ಚಾಲಕ ಆಕೆ ಸೀಟಿನಲ್ಲಿ ಕೂರುವವರೆಗೂ ಬಸ್ಸನ್ನು ಕದಲಿಸಲಿಲ್ಲ. ಒಮ್ಮೆ ಆಕೆ ಕೂತು ತೃಪ್ತಿಯಿಂದ ಧನ್ಯವಾದಗಳು ಎಂಬರ್ಥದಲ್ಲಿ ನಸುನಕ್ಕ ನಂತರ ಬಸ್ಸು ಹೊರಟಿತು.

ಬಸ್ಸಿನೊಳಗೆಲ್ಲಾ ಒಂದು ಬಗೆಯ ಗೆಲುವು ಹರಡಿತ್ತು. ಹೆಮ್ಮೆಯ ಹೊಳೆ ಹರಿದಿತ್ತು. ಮತ್ತು ಅದಕ್ಕೆ ಚಾಲಕನೇ ನಾವಿಕನಾಗಿದ್ದ.

 

***

ಚಿತ್ರಕೃಪೆ: ಈ ವೆಬ್ ಸೈಟು

Advertisements
ಟಿಪ್ಪಣಿಗಳು
 1. ಮಹೇಶ ಹೇಳುತ್ತಾರೆ:

  ಆರ್ಥಿಕ ಪ್ರಬಲತೆಯ ಜೊತೆಗೆ ಅದು ಅವರ ಸಂಸ್ಕಾರ, ನಡವಳಿಕೆಗಳಿಗೆ ಕೊಡುವ ಮಹತ್ವವನ್ನು ತೋರಿಸುತ್ತದೆ.

 2. Dr. Azad ಹೇಳುತ್ತಾರೆ:

  ಚನ್ನಾಗಿದೆ ಕಥನ…ಸಿಂಗಪೂರ್ ಶಿಸ್ತು ದಂತ ಕಥೆ ಅಲ್ಲದೇ ಸಂತ ಕಥೆಯೂ ಹೌದು…

 3. Tejaswini Hegde ಹೇಳುತ್ತಾರೆ:

  ರಂಜಿತ್,

  ನಮ್ಮ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ ನಮ್ಮೊಳಗಿರುವ ಅಶಿಸ್ತು, ಸ್ಪಂದನೆ ಇರದಿರುವುದು ಹಾಗೂ ಅಸಹನೆ. ತಾಳ್ಮೆ ಎನ್ನುವುದು ನಮ್ಮಿಂದ ಬಹು ಬೇಗ ಮಾಯವಾಗುತ್ತದೆ. ತಾಳ್ಮೆ ಕಳೆದುಕೊಳ್ಳುವುದರಿಂದ ನಾವು ಗಳಿಸುವ ೨ ನಿಮಿಷ ಹೆಚ್ಚಳ, ತಾಳ್ಮೆ ಗಳಿಸಿಕೊಳ್ಳುವುದರಿಂದ ಅದನ್ನೇ ೫ ನಿಮಿಷಕ್ಕೇರಿಸಿಕೊಳ್ಳಬಹುದೆಂಬ ಗ್ರಹಿಕೆಯೇ ಇಲ್ಲ.

  ವಿಕಲ ಚೇತನ ಎಂಬ ಅಸಂಬದ್ಧ ಪದಬಳಸದೇ ಸಚೇತನ ಎನ್ನುವ ಪದ ಬಳಿಸಿದ್ದೀರಿ. ಧನ್ಯವಾದಗಳು.

 4. M G Harish ಹೇಳುತ್ತಾರೆ:

  ರಂಜಿತ್, ದೇಶ ಮುಂದುವರೆಯುವುದು ಜನರ ಮನಸ್ಥಿತಿಯ ಮೇಲೆ ಅವಲಂಬಿಸಿರುತ್ತೆ ಅಲ್ವಾ? ನಮ್ಮ ಜನ ನಾಗರಿಕರಾಗೋವರೆಗೆ ನಮ್ಮ ದೇಶ ಉದ್ಧಾರ ಆಗಲ್ಲ 😦

 5. Vikas Hegde ಹೇಳುತ್ತಾರೆ:

  ಹರೀಶ್ ಹೇಳಿರುವುದು ಸರಿ ಇದೆ. ನಮ್ಮಲ್ಲಿ ಜನಸಂಖ್ಯೆ ಮಾತ್ರ ಬೆಳೆದಿದೆ. ನಾಗರಿಕ ಪ್ರಜ್ಞೆ ಇನ್ನೂ ಬೆಳೆದಿಲ್ಲ. ಇದೇ ನಮ್ಮೆಲ್ಲಾ ಸಮಸ್ಯೆಗಳಿಗೆ ಕಾರಣ.

 6. vijayashree ಹೇಳುತ್ತಾರೆ:

  ಇಷ್ಟ ಆಯ್ತು .. ಈ ಲೇಖನ .

 7. Lakshmi Narasimha Murthy M R ಹೇಳುತ್ತಾರೆ:

  My Dear Ranjith,

 8. shree R M. ಹೇಳುತ್ತಾರೆ:

  article tumba ishta aytu ri. hosatagide. we must change.

 9. shamala ಹೇಳುತ್ತಾರೆ:

  ರಂಜಿತ್..
  ವಿಜಯ ಕರ್ನಾಟಕದಲ್ಲಿ ’ನೀಲಿಹೂವು’ ನೋಡಿ ತುಂಬಾ ಖುಷಿಯಾಯಿತು….. ಎಲ್ಲಕ್ಕೂ ನಮ್ಮ ಅಶಿಸ್ತು ಕಾರಣ ಅಂತ ನಾನೂ ಹೇಳುತ್ತೇನೆ. ಚಿಕ್ಕ ವಯಸ್ಸಿನಿಂದಲೇ.. ನಾವು ಮಕ್ಕಳಿಗೆ ಹೇಳಿಕೊಡಲೇ ಬೇಕಾದ ಕೆಲವು ಅಭ್ಯಾಸಗಳು, ಸಂಸ್ಕಾರಗಳು ಇವೆ. ನಾವು ಅವುಗಳನ್ನು ಮೊದಲು ಮನೆಯಲ್ಲಿ ಅಭ್ಯಾಸ ಮಾಡಬೇಕು, ಮಾದರಿಯಾಗಬೇಕು. ಆಗ ಮಕ್ಕಳೂ ನಮ್ಮನ್ನು ನೋಡಿ ಕಲಿಯುತ್ತಾರೆ. ಕೆಲವು ಅಭ್ಯಾಸಗಳನ್ನು, ಬಲವಂತವಾಗಿಯಾದರೂ ನಾವು ಚಿಕ್ಕಂದಿನಲ್ಲೇ ಮಾಡಿಸಿದರೆ, ಮುಂದಿನ ಪೀಳಿಗೆಯವರು ತಪ್ಪು ಮಾಡುವುದು ಕಮ್ಮಿಯಾಗುತ್ತೆ. ಅವಿಭಕ್ತ ಕುಟುಂಬಳೇ ಇಲ್ಲವಾಗಿರುವ ಈ ಕಾಲದಲ್ಲಿ, ವಯಸ್ಸಾದವರ ಜೊತೆಗೆ ಹೇಗೆ ವ್ಯವಹರಿಸಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದ ಶೋಚನೀಯ ಪರಿಸ್ಥಿತಿಯಾಗಿದೆ…..

  ಶ್ಯಾಮಲ

 10. ರಂಜಿತ್ ಹೇಳುತ್ತಾರೆ:

  ಮಹೇಶ,

  ಸಂಸ್ಕಾರವುಳ್ಳ ನಡತೆಗೆ ಪ್ರೋತ್ಸಾಹ ನೀಡುವುದಕ್ಕೆ ಇಲ್ಲಿನ ಸರ್ಕಾರವೇ ಬಹಳಷ್ಟು ಕಾರ್ಯಕ್ರಮಗಳನ್ನು ಕೈಗೊಂಡಿರುವುದನ್ನು ಮೆಚ್ಚಿಕೊಳ್ಳಲೇಬೇಕು.

  ಡಾ ಆಜಾದ್,

  ಧನ್ಯವಾದಗಳು.

  ತೇಜಸ್ವಿನಿ, ಹರೀಶ್, ವಿಕಾಸ್,

  ನಿಜ. ಆದರೆ ನಾಗರೀಕತೆಗೆ ನಾವೆಷ್ಟು ಪ್ರೋತ್ಸಾಹ ಕೊಡುತ್ತೇವೆ ಅನ್ನುವುದೂ ಗಮನಿಸಬೇಕಾದ ಅಂಶ. ಉದಾಹರಣೆ ನೀಡುವುದಾದರೆ ನಮ್ಮ ಗೆಳೆಯನೋ, ಮಗನೋ, ಬೇಕಾದವರೋ, ಟ್ರಾಫಿಕ್ ನಿಯಮ ಮುರಿದು ಪೋಲೀಸ್ ಗೆ ಸಿಕ್ಕಿಹಾಕಿಕೊಂಡಾಗ ಆತ ವಿಧ ವಿಧ ಸುಳ್ಳುಹೇಳಿ ದಂಡದಿಂದ ತಪ್ಪಿಸಿಕೊಂಡರೆ “ಭೇಷ್ ಕಣಯ್ಯ, ಬಹಳ ಬುದ್ಧಿವಂತ ನೀನು” ಅಂತ ಹುರಿದುಂಬಿಸುತ್ತೇವೆ. ಸುಮ್ಮನೆ ತಪ್ಪೊಪ್ಪಿಕೊಂಡು ದಂಡ ತೆತ್ತರೆ, ಬುದ್ದಿ ಇದೆಯೇನಯ್ಯಾ? ಏನಾದ್ರೂ ಅಂದು ತಪ್ಪಿಸಿಕೊಳ್ಳೋದಲ್ವಾ? ಅಂತೀವಿ..
  ಇದನ್ನು ಚಿಕ್ಕ ಮಗು ಗಮನಿಸಿದರೆ ಆ ಮಗು ಇದನ್ನ ಯಾವ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದೋ ಯೋಚಿಸಿ.

  ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

  ಶ್ರೀ, ವನಿತಾ, ಲಕ್ಷ್ಮೀನರಸಿಂಹಮೂರ್ತಿ, ವಿಜ್ಜಿ.

  ಧನ್ಯವಾದಗಳು.

  ಶಾಮಲಾ,

  ನಿಮ್ಮಂಥವರ ಹಾರೈಕೆಯಿಂದಲಷ್ಟೇ ನೀಲಿಹೂವಿನ ತೋಟ ಬೆಳೆಯಲು ಕಾರಣ ಅಂತ ಗಟ್ಟಿಯಾಗಿ ನಂಬಿದ್ದೇನೆ. ನಿಮ್ಮ ಅನಿಸಿಕೆಗೆ ನನ್ನ ಸಹಮತ. ಹಿಂದಿನ ಕಾಮೆಂಟೊಂದರಲ್ಲಿ ಇದನ್ನೇ ಬೇರೆ ರೀತಿಯಾಗಿ ಉಲ್ಲೇಖಿಸಿದ್ದೇನೆ ನೋಡಿ..
  ಥ್ಯಾಂಕ್ಸ್!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s