ರಮ್ಯ ಗಮ್ಯವ ಬೆಂಬತ್ತಿ…

Posted: ಡಿಸೆಂಬರ್ 23, 2010 in ಕತೆ, ಲಹರಿ, ಲೇಖನ

ಟ್ರೈನು ತನ್ನ ಮೊದಲ ಶಂಖ ಊದಿತು.

ಆಕೆಯಿನ್ನೂ ಕಿಟಕಿಗೆ ಅಂಟಿಕೊಂಡೇ ಇದ್ದಾಳೆ. ದೂರದೂರಿಗೆ ಹೊರಡುತಿರುವ ಮಗನಿಂದಾಗಿ ಕಳವಳ, ಬೇಸರಗೊಂಡಿರುವ ಮನದ ಭಾರವೆಲ್ಲಾ ಆ ಬೋಗಿಗೆ ಹೊರಿಸುವಂತೆ. "ಉಪ್ಪಿನಕಾಯಿ ಬಾಟಲು ಜೋಪಾನ, ಹೊಸ ಊರಿಗೆ ಹೋದಾಗ ನೀರಿನ ಬದಲಾವಣೆಯಿಂದಾಗಿ ಖಾಹಿಲೆ ಬರುತ್ತದಂತಲ್ಲಾ.. ಹಾಗೆ ಹೋದಲ್ಲೆಲ್ಲಾ ನೀರು ಕುಡಿಯಬೇಡಾ.. ಕೊಂಚ ಭಾರವೆನಿಸಿದರೂ ಅಡ್ಡಿಯಿಲ್ಲ, ಬಿಸಿನೀರಿನ ಬಾಟಲನ್ನು ಸದಾ ಇಟ್ಟುಕೊಂಡಿರು.. ಪುದೀನಾ ಚಟ್ನಿಗೆ ನೀರು ಹಾಕದೇ ಮಾಡಿದೀನಿ, ಹೆಚ್ಚು ದಿನಗಳ ಕಾಲ ಬರಬಹುದು, ಯಾವುದಕ್ಕೂ ಆದಷ್ಟೂ ಬೇಗ ಉಪಯೋಗಿಸಿ ಖಾಲಿ ಮಾಡು.." ಹೀಗೆ ಪುಂಖಾನುಪುಂಖವಾಗಿ ಆಕೆಯಿಂದ ಮಮತೆಯ ಮಾತುಗಳು ಬರುತ್ತಲೇ ಇದೆ. ಕಿಟಕಿಯ ಸರಳುಗಳಾಚೆ ಹುಡುಗ ಮೆಲ್ಲ ಮೆಲ್ಲ ನಾಚಿಕೊಳ್ಳುತ್ತಿದ್ದಾನೆ, ಇವೆಲ್ಲವೂ ತನಗೆ ತಿಳಿಯದೇ? ಅಕ್ಕ-ಪಕ್ಕದವರು ತನ್ನ ಕುರಿತು ಏನಂದುಕೊಳ್ಳಲ್ಲ ಎಂಬ ಕಳವಳ ಆತನದು. ಆದರೂ ಆ ಸೊಲ್ಲುಗಳಿಂದ ತನ್ನೊಳಗೆ ತಂಪೊಂದು ಹರಡುತಿರುವುದೂ ಸ್ಪಷ್ಟವಾಗಿಯೇ ಅರಿವಾಗುತ್ತಿದೆ ಅವನಿಗೆ. ಆಕೆ ಹಾಗೆ ಹೇಳುತ್ತಿದ್ದರೆ ಟ್ರೈನು ನಿಲ್ದಾಣದ ಎಲ್ಲ ಗಿಜಿಗಿಜಿಗಳ ಸಂತೆಯ ನಡುವೆಯೂ ಇಂಪಾದ ಹಾಡು ಕೇಳಿಸುವಂತಿದೆ.

"ಎಲ್ಲಾ ಸರಿಯಾಗಿ ಇಟ್ಟುಕೊಂಡಿದ್ದೀಯಲ್ಲವಾ?" ಅಂತ ಕೇಳುತ್ತಾಳೆ. ಅದನ್ನು ಆಕೆ ಹದಿನೈದನೇ ಬಾರಿ ಅನ್ನಿಸುತ್ತದೆ ಕೇಳುತ್ತಿರುವುದು. ಉತ್ತರಿಸದಿದ್ದರೆ ಮತ್ತೆ ತಳಮಳಗೊಂಡಾಳು ಅಂತ ಭಯವಿರುವುದರಿಂದಲೇ ಆತ ಆಕೆಯ ಎಲ್ಲಾ ಪ್ರಶ್ನೆಗಳಿಗೆ ಹೂಂ ಗುಟ್ಟುತ್ತಿದ್ದಾನೆ. "ಅಲ್ಲಿ ತಲುಪಿದ ನಂತರ ಫೋನ್ ಮಾಡು.. ಯಾಕೋ ಫೋನ್ ಬರದಿದ್ದರೆ ಒಂಥರಾ ಆಗುತ್ತದೆ" ಅನ್ನುತ್ತಾಳೆ. ಕೊನೆಯ ಸಲ ಹೊರಟು ಬಂದಿದ್ದಾಗ ಫೋನ್ ಮಾಡದಿದ್ದುದ್ದಕ್ಕೆ ಧೋ ಎಂದು ಅತ್ತಿದ್ದು ಮಗನಿಗೆ ಬೇರೆ ಯಾರಿಂದಲೋ ತಿಳಿದಿತ್ತು. ಆ ಕಣ್ಣೀರನ್ನೆಲ್ಲಾ ಈ "ಒಂಥರಾ" ಎಂಬ ಪದದಿಂದ ಮುಚ್ಚಿಹಾಕುತ್ತಿದ್ದಾಳೆ ಅನ್ನಿಸಿ ಮಗನ ಮುಖದಲ್ಲಿ ಮಂದಹಾಸ ಮೂಡಿತು.

kingedwardvibyrichardpicton

ಎಲ್ಲಾ ಪ್ರಶ್ನೆಗಳನ್ನು ಕೇಳಿಯಾದವಳಂತೆ ಕೊಂಚ ಹೊತ್ತು ಮೌನವಾಗುತ್ತಾಳೆ. ಅವಳ ಮೌನ ಅಲ್ಲಿನೆಲ್ಲಾ ಸದ್ದಿನ ನಡುವೆ ಇದ್ದರೂ ಅದು ಅವನ ಕಿವಿಗಡಚಿಕ್ಕುವಂತಿದೆ. ಕ್ಷಣಗಳ ಕಾಲ ಆ ಮೌನದಿಂದ ಅವನೂ ಅಸಹನೆಗೊಳ್ಳುತ್ತಾನೆ. ಮಲಗುತ್ತಿದ್ದಾಗ ಜೋಗುಳ ಹಾಡುತ್ತಾ ಮಂದಹಾಸದಿಂದಿದ್ದ ಅಮ್ಮ, ಈಗ ಪಕ್ಕ ಮಧ್ಯೆ ನಿದ್ದೆಯಲ್ಲೆದ್ದಾಗ ಅಮ್ಮನಿಲ್ಲದಿದ್ದಾಗ ಆತಂಕಗೊಂಡ ಮಗುವಂತಾಗುತ್ತಾನೆ. ಮೌನವನ್ನು ಭೇದಿಸಲೇಬೇಕೆಂದು ಪಣತೊಟ್ಟವನಂತೆ ಪದಗಳಿಗಾಗಿ ತಡಕಾಡುತ್ತಾನೆ. "ಅಲ್ಲಿ ಸಂಬಳ ಬಂದ ಕೂಡಲೇ ಹಣ ಕಳಿಸುತ್ತೇನೆ" ಎಂಬ ವಾಕ್ಯ ಆ ಸಂದರ್ಭಕ್ಕೆ ತೀರಾ ಹೊಂದಿಕೆಯಾಗುತ್ತಿಲ್ಲ. "ಆಗಾಗ ಕಾಕ ಮನೆಗೆ ಹೋಗಿ ಬರ್ತೇನೆ" ಅನ್ನುವುದನ್ನು ಈಗಲೇ ಹೇಳಬೇಕೆಂದಿಲ್ಲ. ಕೊನೆಗೆ ಪೆದ್ದು ಪೆದ್ದಾಗಿ,"ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೋ.." ಅನ್ನುತ್ತಾನೆ. ಅವನ ದನಿಯಲ್ಲಿ ತಾನು ನೋಡಿಕೊಳ್ಳಬೇಕಾಗಿದ್ದ ಜೀವದ ಜತೆಯಿರದೇ ಹಣದ ಹಂಗಿಗೆ, ಹಿಂದೆ ಬಿದ್ದು ಬೇರೆಲ್ಲೋ ದೂರವಿರಬೇಕಾದುದರ ಬಗ್ಗೆ ಪಾಪಪ್ರಜ್ಞೆ ಇದೆ.

ಆ ವಾಕ್ಯ ಕೇಳುತ್ತಲೇ ಅಮ್ಮ ತುಂಬಾ ಮೆದುವಾಗಿ ಬಿಡುತ್ತಾಳೆ. ಅದನ್ನೇ ಕೇಳಲು ಇಡೀ ಜೀವನ ಕಾದಿದ್ದವಳಂತೆ ಅನ್ನಿಸತೊಡಗುತ್ತದೆ. ಮಗ ಒಂಚೂರು ಆ ಕಡೆ ನೋಡಿದರೂ ಸಾಕು ಆಕೆ ಆ ಪುಟ್ಟ ಕ್ಷಣವೊಂದರಲ್ಲಿ ಉಕ್ಕುತ್ತಿರುವ ಕಂಬನಿಯೊಂದನ್ನು ತನ್ನ ಸೆರಗಿನಿಂದ ಒರೆಸಿಕೊಳ್ಳಬಲ್ಲಳು. ಅವಳ "ಆಯಿತು" ಅನ್ನುವ ಪದ ಗಂಟಲು ದಾಟಿಬರಲಾರದಷ್ಟು ಗದ್ಗದಳಾಗಿದ್ದಾಳೆ. ಸುಮ್ಮನೆ ತಲೆಯಾಡಿಸುತ್ತಾಳೆ.

ಅಷ್ಟರಲ್ಲಿ ಟ್ರೈನು ಮತ್ತೊಂದು ಸಲ ಶಂಖ ಊದುತ್ತದೆ. ಮಗ ಆಗಲೇ ಯುದ್ಧಕ್ಕೆ ಹೊರಡಲು ಅಣಿಯಾಗಿದ್ದಾನೆ. ಟ್ರೈನು ಕೊಂಚ ಕೊಂಚ ವಾಗಿ ಹೊರಡಲು ಸಿದ್ಧವಾಗುವಾಗುತ್ತದೆ. ಕಿಟಕಿಯ ಸರಳುಗಳನ್ನು ಹಿಡಿದು ಮತ್ತೆ ತನ್ನ ಮಾತುಗಳನ್ನು ಶುರುಮಾಡುತ್ತಾಳೆ. ಇನ್ನು ಹೆಚ್ಚು ಸಮಯವಿಲ್ಲ. "ಮುಂದಿನ ತಿಂಗಳ ಹಬ್ಬಕ್ಕೆ ಖಂಡಿತಾ ಬಾ.. ಹಲಸು ಬೇರೆ ಸೀಸನ್ ನಲ್ಲಿ ಸಿಗೋಲ್ಲ ಮತ್ತೆ.. ಸುಮ್ಮನೆ ಕಾರಣಗಳನ್ನು ಹೇಳಬೇಡ.. ರವೆಲಾಡು ಜಾಸ್ತಿ ಕಟ್ಟಿಟ್ಟಿದೀನಿ.. ನಿನ್ನ ರೂಂಮೇಟ್ ಗಳಿಗೂ ಕೊಟ್ಟು ತಿನ್ನು.." ಹೀಗೆ ಟ್ರೈನ್ ಗಿಂತ ವೇಗವಾಗಿ ಆಕೆಯ ಮಾತು ಸಾಗುತ್ತಿದೆ. "ಆಯ್ತಮ್ಮ.. ಸರಿ.. " ಅನ್ನುತ್ತ ಆಕೆ ನಿಂತರೆ ಸಾಕು ಅನ್ನುವ ಧಾಟಿಯಲ್ಲಿ ಮಾತಾಡುತ್ತಿದ್ದಾನವನು. ಅವಳ ಏದುಸಿರು ಅವನಿಗೆ ಭಯ ಹುಟ್ಟಿಸಿದೆ. ಟ್ರೈನಿನ ವೇಗ ಆಕೆಯ ಹಣೆಯಲ್ಲಿ ಗೆರೆ ತಂದಿದೆ. ಉಸಿರಿನ ವೇಗ ಹೆಚ್ಚಾಗಿ ಮಾತು ಗಂಟಲಾಳದಲ್ಲೆಲ್ಲೋ ಕತ್ತು ಹಿಸುಕಿದಂತಾಗುತ್ತಿದೆ..

ಟ್ರೈನು ತನ್ನ ವೇಗ ಹಿಡಿದುಕೊಂಡಂತೆ ಕಿಟಕಿಯಿಂದ ಇಣುಕುತ್ತಿರುವ ಮಗನಿಗೆ ದೂರದಲ್ಲಿ ಅಮ್ಮ ಸೊಂಟ ಹಿಡಿದು ಇತ್ತ ಕಡೆಯೇ ನೋಡುತ್ತಾ ನಿಂತುಕೊಂಡಂತೆ ಕಾಣುತ್ತದೆ. ಮತ್ತೆ ಆಕೆಯ ಕಣ್ಣುಗಳಲ್ಲಿ ಇಣುಕುತ್ತಿದ್ದಂತೆ ಇವನೊಳಗೆ ಒಂದು ಮಿಸುಕಾಟ ಶುರುವಾಗಿದೆ. ಆಕೆಗೆ ಇನ್ನೂ ಏನಾದರೂ ಮುಖ್ಯವಾದ್ದು ತಿಳಿಸುವುದಿತ್ತೇ ಅನ್ನಿಸುತ್ತಿದೆ. ಆಕೆ ತನಗಾಗಿ ಯಾವುದೊ ಒಂದು ಮಾತು ಹೊತ್ತು ನಿಂತಂತೆ ಭಾಸವಾಗುತ್ತಿದೆ. ಈತ ಏನೋ ಕಳೆದುಕೊಂಡವನಂತೆ ಪದೇ ಪದೇ ಕಿಟಕಿಯಿಂದ ಇಣುಕುತ್ತಿದ್ದಾನೆ.

ತೀವ್ರ ಚಡಪಡಿಕೆ ಉಂಟಾಗುತ್ತಿದೆ. ಚೈನೆಳೆದು ಮತ್ತೆ ಹಿಂದಕ್ಕೆ ಹೋಗಿ ಆಕೆಯ ಒಂದೇ ಒಂದು ಮಾತು ಕೇಳಿಬರೋಣ ಅನ್ನಿಸುತ್ತಿದೆ. ಸುಮ್ಮನೆ ಆಕೆಯನ್ನು ಅಲ್ಲೇ ಸಿಮೆಂಟ್ ಸೀಟಿನಲ್ಲಿ ಕುಳ್ಳಿರಿಸಿ ನೇವರಿಸಬೇಕು ಅನ್ನಿಸುವ ಹಪಹಪಿ. ಮತ್ತೆ ಮತ್ತೆ ಅದೇ ದಿಕ್ಕಿನತ್ತ ನೋಡುತ್ತಿದ್ದಾನೆ. ಸೊಂಟ ಹಿಡಿದುಕೊಂಡ ಆಮ್ಮನ ಚಿತ್ರ ಟ್ರೈನು ಮೈಲು ಮೈಲು ದೂರ ಹೋಗಿದ್ದಾಗಲೂ ಕಾಣಿಸುತ್ತಿದೆ ಅವನಿಗೆ.

007 Horse and Train

ಅವನಿಗೆ ಗೊತ್ತಾಗಿಬಿಟ್ಟಿದೆ, ಇನ್ನು ಜೀವನದುದ್ದಕ್ಕೂ, ದಿನದಿನದ ಕನಸಲ್ಲೂ, ಅದೇ – ಆ ಚಿತ್ರದಲ್ಲಿ ಆಕೆಯ ಏನೋ ಒಂದು ವಿಷಯವನ್ನು ಹೇಳಲೇಬೇಕೆಂದು ಅಂದುಕೊಳ್ಳುತ್ತಿರುವಂಥ ಕಣ್ಣು ದಟ್ಟವಾಗಿ ಕಾಡಲಿದೆ… ಮತ್ತು ಅವಳು ಹೇಳದೇ ಉಳಿದಂತಿದ್ದ ಒಂದು ಮಾತು ಕ್ಷಣಕ್ಷಣವೂ ಅನುರಣನಗೊಳ್ಳಲಿದೆ…

ಈಗ ಆತ ಮೌನವಾಗಿ ಕಣ್ಮುಚ್ಚಿದಾನೆ, ರೈಲಿನ ಜೀಕಿನಲ್ಲಿ ಆತ ಮುಂದಿನ ಗಮ್ಯದ ಬದುಕಿನ ಮತ್ತು ಹಿಂದಿನ ರಮ್ಯ ಬದುಕಿನ ನಡುವೆ ಮನಸ್ಸಲ್ಲೇ ಉಯ್ಯಾಲೆಯಾಡುತ್ತಾ..

********

 

ಚಿತ್ರಕೃಪೆ : ಈ ವೆಬ್ ಸೈಟ್ ಮತ್ತು ಇಲ್ಲಿಂದ

ಟಿಪ್ಪಣಿಗಳು
  1. veekay ಹೇಳುತ್ತಾರೆ:

    NIMMA BARAHAGALU MANA MUTTUVANTHIRUTTHAVE..
    DHANYAVAADAGALU..

  2. ರಂಜಿತ್ ಹೇಳುತ್ತಾರೆ:

    ವೀಕೆ, ಮೆಚ್ಚಿದ್ದಕ್ಕೆ ಥ್ಯಾಂಕ್ಸ್!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s