ತರ್ಕವೆಂಬ ರ್ಯಾಪರ್ ಬಿಚ್ಚಿ…

Posted: ಮಾರ್ಚ್ 13, 2011 in ಕ್ರಿಕೆಟ್ಟು
ಟ್ಯಾಗ್ ಗಳು:, , , , , ,

ವಿದ್ಯೆ ಹೆಚ್ಚಾದಂತೆ ಮೂಢನಂಬಿಕೆಗಳು ತೊಲಗಬೇಕಾದರೂ ಭಾರತೀಯರ ಮನದ ಮೂಲೆಯಲ್ಲಿ ಅದು ಅವಿತುಕೊಂಡಿರುವುದು ಸುಳ್ಳಲ್ಲ. ಒಂದೆರಡು ಬಾರಿ ಏನಾದರೂ ಘಟನೆ ಸತತವಾಗಿ ನಡೆದರೆ ಸಾಕು, ಅದಕ್ಕೊಂದು ಪ್ಯಾಟರ್ನ್ ತಗುಲಿಸಿ ಆ ನಂಬಿಕೆಗೆ ಜೋತುಬೀಳುತ್ತೇವೆ. ಇದು ನನ್ನ ಲಕ್ಕಿ ಶರ್ಟ್ ಮಾರಾಯ, ಇದನ್ನು ಹಾಕಿದಾಗಲೆಲ್ಲ ನನಗೆ ಒಳ್ಳೆಯದಾಗುತ್ತೆ ಅಂತಲೋ ಇಲ್ಲವೇ ಉಂಗುರವನ್ನೇ ತಮ್ಮ ಜಯದ ಕಾರಣ ಅಂತಲೋ ತಮ್ಮ ಶ್ರಮದ ಎಲ್ಲಾ ಪಾಲನ್ನೂ ದಾಟಿಸಿಬಿಡುತ್ತೇವೆ.

ಕ್ರಿಕೆಟ್ಟೆಂಬುದು ಭಾರತ ಜನತೆಯ ಒಂದು ದೈನಂದಿನ ಕೆಲಸ. ಭಾರತ ಗೆದ್ದರೆ ಅವತ್ತು ನೆಮ್ಮದಿಯ ನಿದ್ದೆ, ಸೋತರೆ ಎದೆಯಲ್ಲೊಂದು ನಿರಾಸೆಯ ಕಾರ್ಮೋಡ ಕವಿದಿರುತ್ತದೆ. ಕ್ರಿಕೆಟ್ಟಿನಲ್ಲೂ ಇಂಥ ಅನೇಕ ನಂಬಿಕೆಗಳು ಏಳುವುದುಂಟು. ಗೆಳೆಯರೆಲ್ಲಾ ಟಿ.ವಿ.ಯಲ್ಲಿ ಕ್ರಿಕೆಟ್ ನೋಡುತ್ತಿದ್ದಾಗ ಲೇಟಾಗಿ ಒಬ್ಬ ಬಂದರೆ ಆಗ ಭಾರತದ ಆಟಗಾರನೊಬ್ಬನ ವಿಕೆಟ್ಟುರುಳಿದರೆ ಸಾಕು, ವಿಕೆಟ್ಟು ಬಿದ್ದಿದ್ದಕ್ಕೆ ಬಂದ ಗೆಳೆಯನನ್ನೇ ಕಾರಣವಾಗಿಸಿ ಎಷ್ಟೊಂದು ಬಾರಿ ಜಗಳವಾಗಿದ್ದಿದೆ. ಒಮ್ಮೆಯಂತೂ ಒಬ್ಬ ನೀರು ಕುಡಿಯಲು ಹೋದಾಗ ವಿಕೆಟ್ಟುರುಳಿ ಮತ್ತೆ ಭಾರತದ ಇನ್ನಿಂಗ್ಸ್ ಮುಗಿಯುವವರೆಗೆ ಆತನಿಗೆ ನೀರು ನೀಡದ ಘಟನೆಯನ್ನು ಕಣ್ಣಾರೆ ಕಂಡಿದ್ದೇನೆ. ಯಾರಾದರೂ ಒಂದು ಕಾಲಲ್ಲಿ ನಿಂತಾಗ ಭಾರತದ ಕ್ರಿಕೆಟಿಗನೊಬ್ಬ ಸಿಕ್ಸರ್ ಹೊಡೆದರೆ ನಿಂತವನ ಗತಿಯೇನು ಅಂತ ನಕ್ಕಿದ್ದೂ ಇದೆ.

ಹಾಗೆಯೇ ಯಾವುದೋ ಸುದ್ಧಿಯನ್ನು ತಾರ್ಕಿಕವಾಗಿ ಕೊಡುವ ಚಾನೆಲ್ ಗಳಿಗಿಂತಲೂ ನಮಗೆ ಇಂಥ ಇಲ್ಲದ ಕನೆಕ್ಷನ್ ಗಳನ್ನು ತೋರಿಸಿದರೆ ರುಚಿಕಟ್ಟೆನಿಸುತ್ತದೆ. ಅರೇ, ಹೌದಲ್ಲವಾ ಅಂತ ನಂಬಲು ಬಯಸುತ್ತೇವೆ. ಲಾಜಿಕ್ಕೆಂಬ ರ್ಯಾಪರ್ ಬಿಚ್ಚಿ ಮೂಢನಂಬುಗೆಯ ಚಾಕಲೇಟ್ ಮೆಲ್ಲುತ್ತೇವೆ. ಸ್ವಲ್ಪ ಸಮಯದ ಹಿಂದೆ ಅಜರುದ್ದೀನ್ ಮೀಸೆ ಬಿಟ್ಟರೆ ಭಾರತ ಪಂದ್ಯ ಸೋಲುತ್ತದೆ ಎಂಬ ಮಾತು ಹರಡಿತ್ತು. ಕುಂಬ್ಳೆ ಮೀಸೆಯ ವಿಚಾರವಾಗಿಯೂ ಇಂಥದ್ದೊಂದು ನಂಬುಗೆ ಪ್ರಚಲಿತದಲ್ಲಿದ್ದ ನೆನಪು. ನಿಜವಾಗಿಯಾದರೂ ಮೀಸೆಗೂ, ಪಂದ್ಯ ಗೆಲ್ಲುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ!

ಮೊನ್ನೆ ವಿಶ್ವಕಪ್ ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಚಿನ್ ಶತಕ ಹೊಡೆದರೂ ಭಾರತ ಕೊನೆಕ್ಷಣದಲ್ಲಿ ಪಂದ್ಯವನ್ನು ಕೈಚೆಲ್ಲಿತು. ಭಾರತ ಸೋತಿದ್ದಕ್ಕೆ ಅಲ್ಲಿ ಅನೇಕ ಕಾರಣವಿದ್ದಿತ್ತು. ಕಳಪೆ ಫೀಲ್ಡಿಂಗ್, ಸೈಕಲ್ ಸ್ಟಾಂಡ್ ಉರುಳಿದಂತೆ ಸಚಿನ್ ಔಟಾದಾಗ ಉಳಿದ ಆಟಗಾರರ ಒಬ್ಬರಾದ ಮೇಲೊಬ್ಬರಂತೆ ಪೆವಿಲಿಯನ್ ಪರೇಡ್, ಕ್ಲಿಕ್ಕಾಗದ ಧೋನಿಯ ಒಂದಿಷ್ಟು ನಿರ್ಧಾರಗಳು ಹೀಗೆ ಅನೇಕ ಕಾರಣಗಳಿದ್ದರೂ ಎಲ್ಲರ ಕಣ್ಣುಕುಕ್ಕಿದ್ದು ಸಚಿನ್ ಶತಕ ಹೊಡೆದಾಗ ಭಾರತ ಸೋಲುತ್ತದೆ ಎಂಬ ನಂಬಿಕೆ!

ಅರೆ! ನಿಜವಾಗಿಯೂ ಹೌದಾ ಅಂತ ಹುಡುಕಲು ಹೋದ ನನಗೆ ಸಚಿನ್ ನ ಮತ್ತಷ್ಟು ಅವಿತಿದ್ದ ಅಂಕಿ ಅಂಶಗಳು ದೊರಕಿ ಕುಬ್ಜನನ್ನಾಗಿಸಿದವು. ಆಡಿದ ನಾಲ್ಕುನೂರ ನಲ್ವತ್ತೊಂಬತ್ತು ಪಂದ್ಯಗಳಲ್ಲಿ ಅರವತ್ತೊಂದು ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದದ್ದು ಒಂದು ವಿಶ್ವದಾಖಲೆ. ಸಮಕಾಲೀನರಲ್ಲಿ ಜಯಸೂರ್ಯ ಒಬ್ಬರನ್ನು ಬಿಟ್ಟರೆ ಉಳಿದವರ್ಯಾರೂ ಮೂವತ್ತೈದರ ಸನಿಹವೂ ಬಂದಿಲ್ಲ. ಅಂದರೆ ಸರಾಸರಿ ೮ ಪಂದ್ಯಕ್ಕೊಮ್ಮೆ ಪಂದ್ಯಪುರುಷ ಪ್ರಶಸ್ತಿ ದಕ್ಕಿವೆ. ಬರೀ ಶತಕದ ಕುರಿತೇ ಮಾತನಾಡಬೇಕೆಂದರೆ ಹೊಡೆದ ನಲ್ವತ್ತೆಂಟು ಶತಕಗಳಲ್ಲಿ ಮೂವತ್ತಮೂರು ಶತಕ ಹೊಡೆದಾಗ ಭಾರತ ವಿಜಯಿಯಾಗಿದೆ. ಈ ಮೂವತ್ಮೂರು ಪಂದ್ಯಗಳಿಗೆ ಏನನ್ನಬೇಕು?!

82165

ತಾನು ಶತಕ ಹೊಡೆದೂ ಸೋತ ಪಂದ್ಯಗಳಲ್ಲಿ ಸಚಿನ್ ರನ್ನುಗಳನ್ನು ಗಣನೆಗೆ ತೆಗೆದುಕೊಳ್ಳದೇ ಸ್ಕೋರ್ ಬೋರ್ಡನ್ನು ಕಂಡರೆ ಭಯಬೀಳಬೇಕು, ಸಚಿನ್ ನಿವೃತ್ತನಾದ ಮೇಲೆ ಭಾರತ ತಂಡ ಹೇಗಿರಬಹುದು ಎಂಬ ಊಹೆಗೆ ದಿಗಿಲಾಗಬೇಕು, ಹಾಗಿರುತ್ತದೆ. ಬ್ಯಾಟಿಂಗ್ ಪಿಚ್ಚುಗಳಲ್ಲಿ ಎಲ್ಲ ಬ್ಯಾಟ್ಸ ಮ್ಯಾನ್ ಗಳು ಚೆನ್ನಾಗಿ ರನ್ ಮಾಡುತ್ತಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ನ ಮಹಾನ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್  "ರನ್ ಗಳಿಸುವುದು ಅದೆಷ್ಟು ಸರಾಗ ಅನ್ನುವಂತೆ ಮಾಡುತ್ತಾರೆ ಸಚಿನ್!" ಅಂತ ಉದ್ಗರಿಸಿದ್ದರು. ಅದು ಬೌಲಿಂಗ್ ಪಿಚ್, ಬ್ಯಾಟ್ಸ್ ಮ್ಯಾನ್ ಗಳಿಗ ಕಷ್ಟಕರವಾದ್ದು ಅಂತ ನೋಡುಗರಿಗೆ ಅರಿವಾಗುವುದು ಸಚಿನ್ ಔಟಾದ ಬಳಿಕವೇ, ಅಲ್ಲಿಯವರೆಗೂ ರನ್ ಸರಾಗವಾಗಿ ಹರಿವುದನ್ನು ಗಮನಿಸಿ ರನ್ ಗಳಿಕೆಗೆ ಅನುಕೂಲಕರ ಪಿಚ್ ಅಂತ ಅನ್ನಿಸುವಂತೆ ಮಾಡಿದ್ದ ಉದಾಹರಣೆ ಅನೇಕವಿದೆ.

ಇಷ್ಟು ವರುಷಗಳ ಕಾಲ ಭಾರತ ಕ್ರಿಕೆಟ್ ಗೆ ಮಹೋನ್ನತ ಕೊಡುಗೆ ನೀಡಿರುವ, ನೀಡುತ್ತಲೇ ಇರುವ ಸಚಿನ್ ನ ಶ್ರದ್ಧೆಯನ್ನು ಮೂಢನಂಬಿಕೆಯೊಂದು ಕಸಿದುಕೊಳ್ಳಲು ಹವಣಿಸುವಾಗ ಬೇಸರವಾಗುತ್ತದೆ. ಆದರೂ ನಿಜವಾದ ಕ್ರಿಕೆಟ್ ಪ್ರೇಮಿಗಳಿಗೆ ಇಂಥ ಸುದ್ಧಿಗಳೆಷ್ಟು ಬಂದು ತಲುಪಿದರೂ, ಓದಿ ಹೌದಾ ಅನ್ನಿಸಿದರೂ ಎದೆಯ ಒಳಗೆ ಸಚಿನ್ ಮೇಲಿನ ಪ್ರೀತಿ, ಆತನ ಕ್ರಿಕೆಟ್ ಕಡೆಗಿರುವ ಮೋಹದ ಮೇಲೆ ಪ್ರಶ್ನೆ ಉದ್ಭವಿಸದು. ಭಾರತ ಕ್ರಿಕೆಟ್ಟಿಗೆ (ಜತೆಗೆ ಕ್ರಿಕೆಟ್ ಪ್ರೇಮಿಗಳಿಗೂ) ಸಚಿನ್ ನ ಅವಶ್ಯಕತೆ ಎಷ್ಟು ಎಂಬುದರ ಅರಿವು ಖಂಡಿತ ಇರುತ್ತದೆ. ಅಲ್ಲದೇ ಸಚಿನ್ ಇನ್ನೊಂದು ವಿಶ್ವಕಪ್ ಗೂ ಭಾರತಕ್ಕೆ ಆಡುತ್ತಾರೆ ಎಂಬ ಆಸೆಯೂ!

sachin-tendulkar12jpg-300x225

ಭಾರತೀಯರಿಗೆ ಬಾಲಿವುಡ್ಡಿನ ಎಸ್ಸಾರ್ಕೆಗೆ ಆಗುವ ಗಾಯಕ್ಕಿಂತ ಕ್ರಿಕೆಟ್ಟಿನ ಎಸ್ಸಾರ್ಟಿಗಾಗುವ ಗಾಯವೇ ಹೆಚ್ಚು ನೋವುದಾಯಕವಾದ್ದು ಎಂಬುದು ಉತ್ಪ್ರೇಕ್ಷೆಯ ಮಾತಲ್ಲ!

(ಅಚ್ಚರಿಯನು ಹೆಚ್ಚಿಸಲಿಕ್ಕೆ ಸಚಿನ್ ದಾಖಲೆ ಪಟ್ಟಿಯ ಒಂದು ಲಿಂಕು)

ಟಿಪ್ಪಣಿಗಳು
 1. Abhilash Hebbar ಹೇಳುತ್ತಾರೆ:

  Very True. Good article.

 2. supreeth ಹೇಳುತ್ತಾರೆ:

  ಮನುಷ್ಯ ಪ್ರಯತ್ನದಲ್ಲಿನ ನಂಬುಗೆಗಿಂತ ಸಂಕೇತ, ಸೂಚನೆಗಳು, ಮೂಢನಂಬಿಕೆಗಳಲ್ಲಿ ನಂಬಿಕೆ ಕ್ರೀಡಾಪ್ರೇಮಿಗಳಿಗೆ ಮಾತ್ರವಲ್ಲ ಕ್ರೀಡಾಪಟುಗಳಲ್ಲು ಹೆಚ್ಚು ಇರುತ್ತದೆ, ಸಚಿನ್ ಸೆಂಚ್ಯುರಿ ಹೊಡೆದರೆ ತಂಡ ಸೋಲುತ್ತದೆ ಎನ್ನುವ ಪರಮ ಮೂರ್ಖ ಅನಲಿಸಿಸ್ ಮಾಡುವವರ ಪಾಡು ಹಾಗಿರಲಿ ಸ್ವತಃ ಸಚಿನ್ ಅದೆಷ್ಟು ಮೂಢನಂಬಿಕೆಗಳನ್ನು ಹೊಂದಿದ್ದಾರೆ. ಸತ್ಯಸಾಯಿ ಬಾಬಾ ಬಳಿ ಒಮ್ಮೆ ತಮ್ಮ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಹೇಳಿಕೊಂಡಿದ್ದರಂತೆ ಆಗ ಬಾಬಾ “ಬೌಲರ್ ನನ್ನು ನೋಡಬೇಡ, ಬಾಲ್ ನೋಡು” ಎಂದು ಸಲಹೆ ನೀಡಿದ್ದರಂತೆ!

 3. ವಿಜಯರಾಜ್ ಕನ್ನಂತ ಹೇಳುತ್ತಾರೆ:

  ನೂರಕ್ಕೆ ಇನ್ನೂರು ಪ್ರತಿಶತ ನಿಜ…ಇದು ಜನರ ತಪ್ಪು ಕಲ್ಪನೆ.. ಸ-ಚಿನ್ನ ಅಪ್ಪಟ ಬಂಗಾರ… (ಬೇಕಿದ್ರೆ ಬೆಳ್ಳಿ ಅಂದ್ರೂ ಅನ್ಬಹುದು(೬೫,೦೦೦ ಕೆಜಿಗೆ!!!)
  ಮೊನ್ನೆ ಮುಂಬೈ ಸೋತಿದ್ದಕ್ಕೂ ಸಚಿನ್ ಸೆಂಚುರಿ ಕಾರಣ ಅನ್ನೋ ಮೂರ್ಖರು ಇದ್ದಾರೆ… ಆದ್ರೆ ಆವತ್ತು ಮಾತ್ರ ಸಚಿನ್ ರಾಯ್ದುಗೆ ಹೆಚ್ಚು ಸ್ಟ್ರೈಕ್ ಕೊಟ್ಟಿದ್ರೆ ಇನ್ನೂ ಜಾಸ್ತಿ ರನ್ ಬರ್ತಾ ಇತ್ತು ಅನ್ಸುತ್ತೆ

 4. vijayraj ಹೇಳುತ್ತಾರೆ:

  ಟೈಟಲ್ನಲ್ಲಿ ಇರೋ ರ್ಯಾಪರ್ ಅನ್ನು ವ್ರ್ಯಾಪರ್ ಅಂತ ಬರಿಯೋದು ಹೆಚ್ಚು ಸರಿ ಅನ್ಸುತ್ತೆ
  I guess you meant Wrapper right?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s