ಘಳಿಗೆಗಳ ಬೊಗಸೆಯೊಳಗೆ ನನ್ನಿಡೀ ಬದುಕಿಗಾಗುವಷ್ಟು ನಿನ್ನನ್ನು ಸುರಿದುಕೊಳ್ಳಬೇಕೆಂಬಾಸೆ..!

Posted: ಮಾರ್ಚ್ 14, 2011 in ಲವ್ ಲೆಟರ್
ಟ್ಯಾಗ್ ಗಳು:, , , , ,

ಗೆಳತೀ,

ಹೊತ್ತಲ್ಲದ ಹೊತ್ತಲ್ಲಿ ನಿನ್ನ ನೆನಪು ತೀವ್ರವಾಗಿ ಕಾಡುತ್ತಿದೆ. ಈ ಕ್ಷಣ ಬೇವು ತಿಂದ ಮೂಕನಂಥ ಮನ. ಎದೆಯೊಳಗಿನ ನೋವೊಂದನು ಕ್ಷಣವು ಗಿಲ್ಲಿ, ಮೆಲ್ಲ ಮೆಲ್ಲ ಆ ನೋವ ನಾದ ವಿಶ್ವವ್ಯಾಪ್ತಿಯಾದಂತೆ ಅನಿರ್ವಚನೀಯ ಚಡಪಡಿಕೆ. ಮನಸ್ಸು ಸೊರಗಿ, ಸೊಲ್ಲು ಕರಗಿ ಮೌನ ಮರುಗುವ ಸಮಯ. ಯಾವನೋ ಒಬ್ಬ ಸಿಟ್ಟಿನ ಋಷಿ ಈ ರಾತ್ರಿಗೆ ಎಂದೂ ಮುಗಿಯದ ಶಾಪ ಕೊಟ್ಟಿಹನು ಎಂಬಂಥ ಭಾವ. ನೀನಿಲ್ಲವೆಂಬ ತಲ್ಲಣ, ತರಂಗವೊಂದು ನಿಶ್ಕಲ್ಮಶ ಕೆರೆಯಲಿ ಬೆಳೆದಂತೆ ನನ್ನಿಡೀ ಜೀವನವನ್ನೇ ಆವರಿಸಿದ ಹಾಗೆ. ಪುಸ್ತಕ ಮುಗಿದರೂ ಕೊನೆಯಾಗದ ವಿವರಣೆಯಿರುವಂಥ ಭಾವನೆಗಳನ್ನು ಹೇಗೆ ತಾನೆ ತಿಳಿಸಬಲ್ಲೆ?

3004663277_d87ffedbb0

ನೀ ಜತೆಯಿದ್ದಾಗ ಅದೆಷ್ಟು ಚಂದವಿತ್ತು ಸಂಜೆಗಳು. ನಾವಿಬ್ಬರೂ ಸುಮ್ಮನೆ ಇದ್ದಾಗ್ಯೂ ನೆರಳುಗಳೇ ಒಲವಿನಾಟ ಆಡುತ್ತಿದ್ದವು. ನಾವೆದ್ದು ಹೋದರೂ ಆ ಜಾಗ ಬಿಟ್ಟು ಬರಲೊಲ್ಲೆ ಎಂಬಂಥ ನೆರಳುಗಳು. ಅಷ್ಟರಲ್ಲೇ ನಮ್ಮ ಮಧ್ಯೆಯಿದ್ದ ನಿಶ್ಯಬ್ದವನ್ನು ಕದ್ದು ಕೋಗಿಲೆಯೊಂದು ಅದೆಂಥ ಅದ್ಭುತ ರಾಗ ರಚಿಸಿಬಿಟ್ಟಿತು! ಮುಗಿಲ ಬಯಲಲಿ ಚಂದಿರನಿಳಿದಂತೆ ನನ್ನೊಳಗೆ ಆತಂಕ; ನಾನಿನ್ನು ಹೊರಡುವೆ ಅಂತೀಯೇನೊ ಎಂಬ ಭಯ. ಹಾಗನ್ನುವಷ್ಟರೊಳಗಿನ ಘಳಿಗೆಗಳ ಬೊಗಸೆಯೊಳಗೆ ನನ್ನಿಡೀ ಬದುಕಿಗಾಗುವಷ್ಟು ನಿನ್ನನ್ನು ಸುರಿದುಕೊಳ್ಳಬೇಕೆಂಬಾಸೆ. ಆಗೆಲ್ಲಾ ಎದೆ ಅಕ್ಷಯಪಾತ್ರೆ. ಮೆದುಳಲಿ ಮೆಮರಿ, ಸಾವಿರದೆಂಟು ಜೀಬಿ.  ನಾನು ಫೋನ್ ಮಾಡಿದಾಗ, ಏನೋ ಒಂದೆರಡು ನಿಮಿಷ ಮಾತಾಡಿರಬೇಕು ಅಷ್ಟರಲ್ಲೇ, ’ಅಮ್ಮ ಬಂದ್ರು ಕಣೋ, ಆಮೇಲ್ ಮಾಡ್ತೀನಿ’ ಅಂತ ಇಟ್ಟುಬಿಡ್ತೀಯಲ್ಲಾ,  ಜಿಟಿಜಿಟಿ ಮಳೆಯೊಂದು ಧಿಡೀರನೆ ನಿಂತಂತೆ ಅನ್ನಿಸುತ್ತಿತ್ತು. ಆ ಇಡೀ ರಾತ್ರಿ ಮನಸ್ಸಿಗೆ ನಿನ್ನ ಮಾತುಗಳದೇ ಮೆಲುಕು. ಮುಂಜಾನೆವರೆಗೂ ಮರದಡಿಯ ಮಳೆ.

ನೀನೆಂದರೆ ನನಗೆ ಏನು ಎಂಬುದನ್ನು ಪದಗಳೊಳಗೆ ತಿಳಿಸುವುದು ಹೇಗೆ? ನಿನ್ನನ್ನು ವ್ಯಾಖ್ಯೆಗೆ ಸಿಲುಕಿಸಲಾಗದ ಕವಿಯ ಸೋಲೇ ಎಂದುಬಿಡಲಾ? ನೀನೆಂದರೆ ಕನ್ಯಾಕುಮಾರಿಯಲ್ಲಿ ಒಂದು ಬೊಗಸೆ ಸಾಗರದ ನೀರು ಹಿಡಿದು ಸೇರಿದ ಮೂರರಲ್ಲಿ ಯಾವ ಕಡಲ ನೀರು ಅಂತ ಗೊತ್ತಾಗದ ಗೊಂದಲವಾ?

ಗೆಳತೀ, ನನ್ನ ಪಾಲಿಗೆ ನೀನು ಪರಿಶುದ್ಧ ಪ್ರಣತಿ; ಘನಘೋರ ಸೋಲುಗಳ ಕತ್ತಲಲಿ ಬೆಳಕು ಕೊಡುವಂಥ ಅನುಭೂತಿ. ಬದುಕಿತ್ತ ಎಲ್ಲಾ ದುಃಖಗಳ ತುಲಾಭಾರಕ್ಕೆ ಸರಿದೂಗುವ ಸಂತಸ. ಉರಿವ ಸೂರ್ಯನೆಡೆಗೇ ಮುಖಮಾಡಿ ಮುಗ್ಧ ನಗು ಸೂಸುವ ಸೇವಂತಿ. ನಿದಿರೆಯ ಬ್ಯಾಂಕಿನ ಸ್ವಪ್ನ ತಿಜೋರಿಯ ಕೀಲಿಕೈ. ಸಾವಿನ ಹೊಸ್ತಿಲಲಿದ್ದಾಗಲೂ ತೃಪ್ತಿಕೊಡುವ ಗಂಗೆಯ ಹನಿಯ ತಂಪು.

ನೆನಪುಗಳ ತುದಿ ತುಂಬಾ ಚೂಪು ಮಾರಾಯ್ತಿ, ಅದು ನೀಡುವ ನೋವು ಶತ್ರುವಿಗೂ ಬೇಡ. ಹೇಗೂ ಚಳಿ ತನ್ನ ದಾಳಿ ಶುರುಮಾಡಿದೆ. ಕಂಬಳಿಯ ಸೈನ್ಯವೇ ಇದ್ದರೂ ಒಬ್ಬ ಉತ್ತರಾಧಿಕಾರಿಣಿಯ ಅಗತ್ಯ ತೀವ್ರವಾಗಿದೆ.

ತಂತಿ ಮೀಟಿದ ಕೂಡಲೆ ಹೊಮ್ಮುವ ರಾಗದಂತೆ, ಪತ್ರ ನಿನ್ನ ಮುಟ್ಟಿದೊಡನೆಯೇ ಬಸ್ಸನೇರುವಂತವಳಾಗು.

tumblr_lfwe28NXBp1qf30uco1_500_thumb

ಯಾಕೆಂದರೆ ಇದು ಮೆಲುಕು ಮುಗಿಯುತ್ತಿರುವ ಸಮಯ. ಬದುಕ ಮುಂದಿರುವ ಕ್ಷಣಗಳ ಬಯಲಿಗೆ ಕಾಲುದಾರಿಯೊಂದರ ಅವಶ್ಯಕತೆಯಿದೆ. ಕನಸುಗಳ ಚಿತ್ರಗಳಿಗೆ ಬಣ್ಣ ತುಂಬಬೇಕಿದೆ. ಎದೆಯೊಳಗಿನ ಜಡ್ಡುಹಿಡಿದ ತಂತುಗಳಿಗೆ ಹೊಸರಾಗವೊಂದು ನೆನಪಾಗಿದ್ದು ನಿನ್ನ ಕಿರುಬೆರಳು ಮೀಟಲಿದೆಯೆಂದೇ ಸಂತಸದಿಂದ ಕಾಯುತ್ತಿದೆ,

ಅಂದ ಹಾಗೆ ಯಾವಾಗ ಬರುತ್ತಿದ್ದೀ?

ಟಿಪ್ಪಣಿಗಳು
 1. shivu.k ಹೇಳುತ್ತಾರೆ:

  ರಂಜಿತ್ ಸರ್,
  ಲವ್ ಲೆಟರಿನಲ್ಲಿ ನಿಮ್ಮ ತುಮುಲಾಟ ಚೆನ್ನಾಗಿ ವ್ಯಕ್ತವಾಗಿದೆ..
  ನಿನ್ನನ್ನು ವ್ಯಾಖ್ಯೆಗೆ ಸಿಲುಕಿಸಲಾಗದ ಕವಿಯ ಸೋಲೇ ಎಂದುಬಿಡಲಾ? .
  ಘನಘೋರ ಸೋಲುಗಳ ಕತ್ತಲಲಿ ಬೆಳಕು ಕೊಡುವಂಥ ಅನುಭೂತಿ…
  ಇಂಥ ಸಾಲುಗಳು ಖುಷಿಕೊಡುತ್ತವೆ..

 2. ಅನಾಮಿಕ ಹೇಳುತ್ತಾರೆ:

  ನೆನಪುಗಳ ತುದಿ ತುಂಬಾ ಚೂಪು ಮಾರಾಯ್ತಿ, ಅದು ನೀಡುವ ನೋವು ಶತ್ರುವಿಗೂ ಬೇಡ. ಹೇಗೂ ಚಳಿ ತನ್ನ ದಾಳಿ ಶುರುಮಾಡಿದೆ. ಕಂಬಳಿಯ ಸೈನ್ಯವೇ ಇದ್ದರೂ ಒಬ್ಬ ಉತ್ತರಾಧಿಕಾರಿಣಿಯ ಅಗತ್ಯ ತೀವ್ರವಾಗಿದೆ. hhhhhhhhhhh :)tumbha changide

 3. ಅನಾಮಿಕ ಹೇಳುತ್ತಾರೆ:

  ನೆನಪುಗಳ ತುದಿ ತುಂಬಾ ಚೂಪು ಮಾರಾಯ್ತಿ, ಅದು ನೀಡುವ ನೋವು ಶತ್ರುವಿಗೂ ಬೇಡ. ಹೇಗೂ ಚಳಿ ತನ್ನ ದಾಳಿ ಶುರುಮಾಡಿದೆ. ಕಂಬಳಿಯ ಸೈನ್ಯವೇ ಇದ್ದರೂ ಒಬ್ಬ ಉತ್ತರಾಧಿಕಾರಿಣಿಯ ಅಗತ್ಯ ತೀವ್ರವಾಗಿದೆ.:) sakkattagide adre ega chaligala hogi shakegala bantu marre

 4. ಅನಾಮಿಕ ಹೇಳುತ್ತಾರೆ:

  ossom ossom ossom no words

 5. shamala ಹೇಳುತ್ತಾರೆ:

  ತಂತಿ ಮೀಟಿದ ಕೂಡಲೆ ಹೊಮ್ಮುವ ರಾಗದಂತೆ,…. ಬಸ್ಸನ್ನೇರಿದಳೆ? 🙂 :-)… ಕೊನೆಯ ಸಾಲು… “ಎದೆಯೊಳಗಿನ ಜಡ್ಡುಹಿಡಿದ ತಂತುಗಳಿಗೆ ಹೊಸರಾಗವೊಂದು ನೆನಪಾಗಿದ್ದು ನಿನ್ನ ಕಿರುಬೆರಳು ಮೀಟಲಿದೆಯೆಂದೇ ಸಂತಸದಿಂದ ಕಾಯುತ್ತಿದೆ,”… ಯಾಕೋ ತುಂಬಾ ಇಷ್ಟವಾಯಿತು.

  ಶ್ಯಾಮಲ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s