ಅಮ್ಮ ಸೀರಿಯಲ್ಸ್ ನೋಡ್ತಾಳೆ!

Posted: ಏಪ್ರಿಲ್ 5, 2011 in ಲಹರಿ, ಹಾಸ್ಯ
ಟ್ಯಾಗ್ ಗಳು:, , , ,

ಮನೆಯಲ್ಲಿದ್ದಾಗ ನನ್ನ ಕೆಲಸದಲ್ಲಿನ ಕಷ್ಟಗಳ ಕುರಿತು ಸಿಕ್ಕಾಪಟ್ಟೆ ವಿವರ ನೀಡುತ್ತಿರುವಾಗ ಮೌನವಾಗಿ ಹೌದಾ ಹಾಗೆಲ್ಲಾ ಇದೆಯಾ ಎಂಬಂತೆ ಕೇಳುತ್ತಿರುತ್ತಾಳೆ ನನ್ನಮ್ಮ.

vlcsnap-502294

ಒಂದಿಷ್ಟು ದಿನಗಳ ರಜೆಯ ಮೇಲೆ ಊರಿನಲ್ಲಿ ಒಂದೆರಡು ವಾರ ಉಳಿಯಬೇಕಾಗಿ ಬಂದಾಗ ಅಮ್ಮನ ದಿನಚರಿಗೆ ಅಡ್ಡಿಯಾಗಬಾರದೆಂದು ಮನೆಯ (ರಿಮೋಟ್) ಕಂಟ್ರೋಲ್ ಅವಳ ಕೈಗೇ ನೀಡಿದ್ದೆ. ಆದ್ದರಿಂದಲೇ ನಾನು ಕನ್ನಡ ಮೆಘಾ ಧಾರಾವಾಹಿಗಳೆಂಬ ಸುಳಿಯೊಳಗೆ ಸಿಲುಕಿಕೊಳ್ಳಬೇಕಾಯಿತು. ಅರ್ಧರ್ಧ ಘಂಟೆಗೊಮ್ಮೆ ಹೊಸ ಹೊಸ ಹೆಣ್ಮಕ್ಕಳ ಹೆಸರುಗಳಿರುವ ಶೀರ್ಷಿಕೆ ಗೀತೆಗಳಿಂದ ಮನೆ ತುಂಬತೊಡಗಿತು. ಕಥೆ-ಗಿಥೆ ಬರೀತಿಯಲ್ಲೋ ನನ್ನ ಮಗಳಿಗೆ ಒಂದು ಒಳ್ಳೇ ಹೆಸರು ಸೂಚಿಸು ನೋಡಾಣ ಅಂತ ಹೆದರಿಸುವ ಗೆಳೆಯರಿಗೆ ಉತ್ತರಿಸಲು ತಲೆಕೆರೆದುಕೊಂಡಿದ್ದು ನೆನಪಾಯ್ತು. ಅಂದಿನ ಅನುಭವದ ನಂತರ ನನಗಿನ್ನು ಆ ಕೆಲಸ ಸುಲಭ.  "ರಾಧಾ", "ಸುಕನ್ಯ", "ಕಾದಂಬರಿ" ಧಾರಾವಾಹಿಗಳ ಸುರಿಮಳೆ ಶುರುವಾಯಿತು. ಧಾರಾವಾಹಿಗಳೆಂದರೆ ಬೋರೆನಿಸುವುದರಿಂದ ಒಂದು ಪುಸ್ತಕ ಹಿಡಿದೇ ಅಮ್ಮನ ಪಕ್ಕ ಕುಂತೆ. ಯಾವುದೋ ಧಾರಾವಾಹಿಯಲ್ಲಿ ಒಬ್ಬ ಇಳಿವಯಸ್ಸಿನವ ತರಕಾರಿ ತರಲು ಹೊರಟಿದ್ದ. ಮತ್ತೆ ಪುಸ್ತಕದೊಳಗೆ ಮುಳುಗಿ ಐದಾರು ಪುಟವೇ ಮಗುಚಿರಬೇಕು, ಮತ್ತೆ ತಲೆಯೆತ್ತಿ ನೋಡಿದರೆ ಅದೇ ಇಳಿವಯಸ್ಸಿನ ಪಾತ್ರಧಾರಿ ಖಾಲಿ ಬುಟ್ಟಿ ಹಿಡಿದು ಇನ್ನೂ ತರಕಾರಿ ಅಂಗಡಿಯತ್ತ ಧಾವಿಸುತ್ತಾ ಇದ್ದಾನೆ. ಅಮ್ಮ ಯಂಡಮೂರಿ ಥ್ರಿಲ್ಲರ್ ಪುಸ್ತಕ ಓದುವವರಂತೆ ಮುಖ ಮಾಡಿದ್ದರು. ’ಅಮ್ಮಾ, ಇನ್ನಾ ಅವ್ನಿಗೆ ತರ್ಕಾರಿ ಅಂಗ್ಡಿ ಸಿಕ್ಕಿಲ್ವಾ?’ ಅಂತ ಕಾಲೆಳೆದಾಗ ಅಮ್ಮ ನಾನು ತತ್ತರವಾಗುವಂಥ ವಿಷಯ ಅಂದಳು. ಆ ಕಡೆಯಿಂದ ಅವನ ಮೊದಲ ಹೆಂಡತಿ ಅದೇ ಅಂಗಡಿಗೆ ಬರ್ತಿದಾಳಂತೆ. ಅವರಿಬ್ಬರೂ ಭೇಟಿಯಾದರೆ ದೊಡ್ಡ ಜಗಳವಾಗುತ್ತದೆ ಅನ್ನುತ್ತಿದ್ದಳು. "ಸರಿ ಹೋಯ್ತು" ಅನ್ನುವ ನನ್ನ ರಿಯಾಕ್ಷನ್ನಿಗೆ ಕೊಂಚವೂ ಬೆಲೆ ಸಿಗದೇ, ಸೀರಿಯಲ್ಲಿನ ತರಕಾರಿ ಅಂಗಡಿಯಲಿ ನಡೆಯಲಿರುವ ಜಗಳದ ಸಂಗತಿಯೇ ವಿಜಯಿಯಾಯಿತು. ವಿಲನ್ ಪಾತ್ರಧಾರಿಗಳ ಮೇಲೆ ಕ್ರುದ್ಧಳಾಗಿರುತ್ತಿದ್ದಳು. ಫೇಸ್ ಬುಕ್ಕಿನಲ್ಲಿ ಗೆಳೆಯರಾಗಿರುವ ಧಾರಾವಾಹಿಯಲ್ಲಿ ನಟಿಸುವ ಕೆಲವರನ್ನು ಸೌಜನ್ಯಕ್ಕೂ ಮನೆಗೆ ಕರೆವಂತಿಲ್ಲ. ಎದುರುಸಿಕ್ಕರೆ ಅಮ್ಮ ಅವರನ್ನು ಹರಿದುಮುಕ್ಕುವ ಸಂಭವನೀಯತೆ ಇದೆ.

ಕೆಲವು ನಟರ ನಟನೆ ಪೇಲವವಾಗಿರುತ್ತಿತ್ತು. ಮುಖದಲ್ಲಿ ಯಾವ ಭಾವನೆಯೂ ಇಲ್ಲವಾದರೂ ಸಂದರ್ಭಕ್ಕೆ ಒದಗಿಸಿದ ಹಿನ್ನೆಲೆ ಸಂಗೀತದಿಂದಾಗಿಯೇ ಪಾತ್ರದ ಭಾವ ಊಹಿಸಬೇಕಿತ್ತು. ಒಂದೆರಡು ಎಪಿಸೋಡಿನ ನಂತರ ಇದು ಸೀರಿಯಲ್ಲುಗಳ ವ್ಯಾಕರಣ ಎಂದು ಅರ್ಥವಾಯಿತು. ಒಂದೇ ರಿಯಾಕ್ಷನ್ನನ್ನು ಮೂರ್ನಾಲ್ಕು ಬಾರಿ ಹೆದರಿಸುವ ಹಿನ್ನೆಲೆ ಸಂಗೀತದೊಂದಿಗೆ ನೀಡಿದರೆ ಪಾತ್ರಕ್ಕೆ ಶಾಕ್ ಆಗಿದೆ ಅಂತ ಅರ್ಥೈಸಿಕೊಳ್ಳಬೇಕು.

ದಿನಮುಳುಗುತ್ತಿದ್ದರೂ ಧಾರಾವಾಹಿಗಳು ಮುಗಿಯುತ್ತಿರಲಿಲ್ಲ. ಅಮ್ಮಾ ಕಾಫಿ ಕೊಡು ಅಂದರೆ ಈಗಷ್ಟೇ ರಾಧಾ (ಅಂದರೆ ಅಮ್ಮನ ಕೋಡ್ ನ ಪ್ರಕಾರ ಊಟದ ಸಮಯ) ಮುಗೀತಲ್ಲಾ, ಸುಕನ್ಯ (ಅಂದರೆ ಕಾಫಿ ಸಮಯ) ಮುಗಿದಾಕ್ಷಣ ಕೊಡ್ತೆ ಮಾರಾಯ" ಅನ್ನುತ್ತಿದ್ದಳು.

Jogula

ಧಾರಾವಾಹಿಗಳೆಂಬ ಮನೆಮಹಾಭಾರತಗಳು ಮುಗಿದು ಊಟ ಮಾಡಿ ನೆಮ್ಮದಿಯಾಗಿ ಮಲಗಿಕೊಂಡು ಆಲೋಚಿಸಿದಾಗ ಅಮ್ಮ ಉಪಯೋಗಿಸುವಷ್ಟು ಮೆದುಳು ಯಾವ ವಿಜ್ಞಾನಿಯೂ ಬಳಸಲಾರ ಅನ್ನಿಸಿತು. ದಿನಕ್ಕೆ ಕಡಿಮೆ ಅಂದರೂ ಹತ್ತು ಧಾರಾವಾಹಿಗಳು, ಅಂದರೆ ಹತ್ತು ಕಥೆ, ಅದರೊಳಗೆ ಏನಿಲ್ಲವೆಂದರೂ ಎಲ್ಲಾ ಸೇರಿ ಕನಿಷ್ಟ ೫೦-೬೦ ಉಪಕಥೆಗಳು, ಇನ್ನೂರು-ಮುನ್ನೂರು ಪಾತ್ರಗಳನ್ನು ನೆನಪಿಟ್ಟುಕೊಳ್ಳಬೇಕು. ಜತೆಗೆ ಒಬ್ಬ ಪಾತ್ರಧಾರಿ ಎರಡು ಸೀರಿಯಲ್ಲಿನ ಕೆಲಸ ಮಾಡಿದರೆ ಆ ಪಾತ್ರಕ್ಕೂ ಈ ಪಾತ್ರಕ್ಕೂ ಇರುವ ವಿಭಿನ್ನತೆಯನು ಮನದ ಮೂಲೆಯಲಿ ರೆಕಾರ್ಡ್ ಮಾಡಿಕೊಂಡಿಟ್ಟಿರಬೇಕು. ಅದರಲ್ಲೂ ಮೆಘಾ ಧಾರಾವಾಹಿಗಳಲಿ ಸಂಭಾವನೆ ಕಡಿಮೆ ಆಯ್ತೆಂದೋ, ಇಲ್ಲವೇ ಸಿನೆಮಾದಲ್ಲಿ ಚಾನ್ಸ್ ಸಿಕ್ಕಿತೆಂದೋ ಪಾತ್ರಧಾರಿ ಪರಾರಿಯಾದರೆ ಆ ಪಾತ್ರದ ಜಾಗಕ್ಕೆ ಇನ್ನೊಬ್ಬರನ್ನು ತಂದು ಕೂರಿಸುವುದುಂಟು. ಕೆಲವು ಬಾರಿ ಪಾತ್ರವೊಂದು ಸತ್ತು, ಮತ್ತೆ ಯಾವಾಗಲೋ ನೂರು ಎಪಿಸೋಡು ಮುಗಿದ ಮೇಲೆ ವಾಪಸ್ಸು ಬರುವ ಸಂಭವನೀಯತೆಯೂ ಇಲ್ಲದಿಲ್ಲ. ಸಂಭಾವನೆ ಜಾಸ್ತಿ ಕೇಳಿದರೆಂದು ಮುಂದಿನ ಎಪಿಸೋಡಿನಲ್ಲಿ ಆ ಪಾತ್ರಕ್ಕೆ ಆಕ್ಸಿಡೆಂಟ್ ಮಾಡಿಸಿ ಫೋಟೋಗೆ ಮಾಲೆ ಹಾಕಿಸಿದ ಉದಾಹರಣೆಯೂ ಬಹಳಷ್ಟಿದೆ. ಅಲ್ಲದೇ ಮಧ್ಯೆ ಪವರ್ ಕಟ್ ಆದರೆ ಸೀರಿಯಲ್ಲಿನಲಿ ಕಟ್ ಆದ ಭಾಗದ ಕಥೆ ಊಹಿಸಬೇಕು (ಅಷ್ಟು ಧಾರಾವಾಹಿ ನೋಡಿ ಅನುಭವವಿರುವ ಅಮ್ಮನಿಗೆ ಇದು ಅಂಥ ಕಷ್ಟದ ವಿಚಾರವೇನಲ್ಲ)

ಅಮ್ಮನಿಗೆ ಈ ಎಲ್ಲಾ ಪಾತ್ರಧಾರಿಗಳ ಮಾತು, ಕಥೆ, ನೆನಪಿಡಲು ಆಗಬಹುದಾದ ಪರ್ಮ್ಯೂಟೇಶನ್-ಕಾಂಬಿನೇಶನ್ ಗಳನ್ನು ಊಹಿಸಿ ತಲೆಸುತ್ತಿ ಬವಳಿ ಬಂತು. ನನ್ನ ಕೆಲಸ, ಅದರ ಒತ್ತಡಗಳು ಕುಬ್ಜವಾಗಿ ಕಂಡವು.

ಈಗಲೂ ದೂರದ ಊರಿಂದ ಫೋನ್ ಮಾಡುವಾಗ ಬೇರೆ ಮಾತೆಲ್ಲಾ ಮುಗಿದ ಮೇಲೆ, ’ಸುಕನ್ಯ ಚೆನ್ನಾಗಿದ್ದಾಳಾ?’ ’ಭಾರ್ಗವಿ ಮದುವೆ ಸಸೂತ್ರವಾಗಿ ನಡೆಯಿತಾ?’ ಅಂತಲೇ ಕೇಳುತ್ತಿರುತ್ತೇನೆ! ಮತ್ತೆ ಅದಕ್ಕೆ ಉತ್ತರವು "ನೀನು ಹೇಗಿದ್ದೀ?" ಅನ್ನುವ ಪ್ರಶ್ನೆಗೆ ಬರುವ ಉತ್ತರಕ್ಕಿಂತ ಉತ್ಸಾಹಭರಿತವಾಗಿರುವುದನ್ನು ಗಮನಿಸಿದ್ದೇನೆ.

Advertisements
ಟಿಪ್ಪಣಿಗಳು
 1. shamala ಹೇಳುತ್ತಾರೆ:

  :-)…. ನನಗೂ ಸೀರಿಯಲ್ ನೋಡುವವರನ್ನು ಕಂಡರೆ ಇದೇ ಪ್ರಶ್ನೆ ಕೇಳಬೇಕು ಅನ್ಸತ್ತೆ..? ಕಥೆ ಮುಂದೆ ಹೋಗೋದೇ ಇಲ್ಲ ಜೊತೆಗೇ ಪಾತ್ರಗಳ ವೈವಿಧ್ಯ… ಬೇರೆ ಬೇರೆ ಕಥೆಗಳಲ್ಲಿ… ನನ್ನಿಂದ ಅಂತೂ ನೆನಪಿಟ್ಟು ಕೊಳ್ಳುವುದು ಅಸಾಧ್ಯ ! ಆದರೆ ನೋಡುವವರಿಗೂ… ಆ ಪಾತ್ರಗಳಿಗೂ ಅದೇನೋ ಒಂತರಾ ಅವಿನಾಭಾವ ಸಂಬಂಧ ಬೆಳೆದು ಬಿಟ್ಟಿರುತ್ತೆ… ಹಾಗಾಗಿ ಅವರಿಗೆಲ್ಲಾ ನೆನಪಿರುತ್ತದೆ. ಅಮ್ಮನ ಹೆಸರು ಹೇಳಿ… ಸೀರಿಯಲ್ ನೋಡುವ ಅಭ್ಯಾಸ ಇರುವವರ ಬುದ್ಧಿ ಸಾಮರ್ಥ್ಯವನ್ನು ಪ್ರಶಂಸಿಸಿದ್ದೀರಿ..:-)… ಆದರೆ ಅದನ್ನು ನೀವು ನಿಮ್ಮ ಕೆಲಸದ ಒತ್ತಡಕ್ಕೆ ಹೋಲಿಸಿರುವ ರೀತಿ ಮಾತ್ರ ನಿಜಕ್ಕೂ ಪ್ರಶಂಸನೀಯ…. 🙂

  ಶ್ಯಾಮಲ

 2. kruthi ಹೇಳುತ್ತಾರೆ:

  ಅಯ್ಯೋ ನಮ್ಮ ಅಮ್ಮನದೂ ಇದೇ ಕತೆ ರೀ …………… ನಾನೂ ಮೂರು ತಿಂಗಳಿಗೊಂದು ಸಲ ಮನೆಗೆ ಹೋದಾಗ ಧಾರವಾಹಿ ನೋಡ್ತಿನಿ ……………ಕತೆ ಎಲ್ಲಿರುತ್ತೋ ಅಲ್ಲೇ ಇರುತ್ತೆ ………… ಅದೂ ಸಾಲದೂ ಅಂತ ಎಲ್ಲ serial ನಲ್ಲೂ ಅದೇ ನಟ ನಟಿಯರು ………….ಅದರೂ ಇಂಥ serial ಗಳನ್ನೂ ನೋಡುವ ನಮ್ಮ ನಿಮ್ಮ ಅಮ್ಮಂದಿರ ಸಹನೆ ಅಪಾರ !:)

 3. mahabalagiri ಹೇಳುತ್ತಾರೆ:

  ಅಡಿಗರೇ ದಾರಾವಾಹಿಯ ಮಹಿಮೆಯನ್ನ ಮತ್ತು ನಮ್ಮ ತಾಯಂದಿರು ದಾರಾವಹಿಯನ್ನ ಪ್ರೀತಿಸುವ ರೀತಿಯನ್ನ ಬಹಳ ಚಂದವಾದ ಉಪಮೆ ಮತ್ತು ಅಂದದ ಸಾಲುಗಳಿಂದ ಹಿಡಿದಿಟ್ಟಿದ್ದೀರಿ .

  ಶುಭಾಶಯಗಳು

 4. vanitha ಹೇಳುತ್ತಾರೆ:

  Hii Ranjith..as usual nice write-up..I too had same experiences in past few months as I was at M’lore!..You know Radha n Sukanya serials are of my daughters age (7yrs..n still continuing..) Hats off to the Director and all the ladies who watch the serials!!..liked the last punch!!

 5. vikas ಹೇಳುತ್ತಾರೆ:

  he he .. same here…ನಮ್ಮನೆಲ್ಲಿ ಒಂದೆರಡು ಧಾರಾವಾಹಿಗಳನ್ನ ಮಾತ್ರ ನೋಡ್ತಾರೆ. ಆದ್ರೆ ನಾನು ಎರಡು ತಿಂಗಳಿಗೊಮ್ಮೆ ಮನೆಗೆ ಹೋದ್ರೂ ಕತೆ ಟ್ರ್ಯಾಕ್ ಸಿಕ್ಕುಬಿಡತ್ತೆ 🙂

 6. Ranganath S ಹೇಳುತ್ತಾರೆ:

  ಹಳೆ ಮಧ್ಯ ಹೊಸ ಬಾಟಲಿನಲ್ಲಿ ಅನ್ನುತ್ತಾರಲ್ಲ ಹಾಗಿರುತ್ತೆ ಮುಗಿಯದ ಧಾರಾವಾಹಿಗಳು..
  ತಿಂಗಳಿಗೊಮ್ಮೆ ನೋಡಿದರೂ ಕಥೆ ಅಲ್ಲಿಯೇ ಇರುತ್ತದಲ್ಲ.. ಧಾರಾವಾಹಿ ಬರೆಯುವ ಸಾಹಿತಿಗೆ ಬಹುಮಾನ ಕೊಡಬೇಕು..
  ನಿಮ್ಮ ಬರಹ ತುಂಬಾ ಚೆನ್ನಾಗಿದೆ..

 7. Badarinath Palavalli ಹೇಳುತ್ತಾರೆ:

  ಈ ಧಾರವಾಹಿಗಳ ಗುಂಗೆ ಹಾಗೇ.
  ನನ್ನ ಬ್ಲಾಗಿಗೂ ಬನ್ನಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s