ಪ್ರೇಮ ಎಂಬ ಮೌನಗೀತೆ!

Posted: ಜುಲೈ 2, 2011 in ಸಿನೆಮಾ

ಪ್ರೀತಿಯ ಹುಟ್ಟಿಗೆ, ನಿವೇದನೆಗೆ, ನಿರಾಕರಣೆಗೆ, ನಗುವಿಗೆ, ರೋಮಾನ್ಸ್ ಗೆ ಎಲ್ಲಕ್ಕೂಮಾತಿನ ಲೇಪ ಬೇಕು. ಸಂಭಾಷಣೆಯ ನೆರವಿಲ್ಲದೇ ಪ್ರೇಕ್ಷಕ ಏನೂ ಅರ್ಥಮಾಡಿಕೊಳ್ಳುವುದಿಲ್ಲ ಎಂಬ ಪೊಳ್ಳುವಿಶ್ವಾಸ ಅದೇಕೋ ನಿರ್ದೇಶಕರಿಗೆ. ಮಾತಿಲ್ಲದೇ ಒಂದಿಂಚೂ ಅಲುಗದ ಈ (ಸಿನೆಮಾ)ಪ್ರಪಂಚದಲ್ಲೇ ಮುಳುಗಿದ್ದ ನಾನು ಮೊನ್ನೆ ಒಂದು ಸಿನೆಮಾ ನೋಡುವುದು ನಡೆಯಿತು.

 

ಎರಡು ಪಾತ್ರಗಳ ನಡುವೆ ಪ್ರೀತಿ ಹುಟ್ಟುತ್ತದೆ, ಬೆಳೆಯುತ್ತದೆ, ತುಂಬಾ ವಿಪರೀತವಾದ ಸನ್ನಿವೇಶಗಳಲ್ಲಿ ಸಿಲುಕಿಹಾಕಿಕೊಂಡರೂ ಪಾತ್ರಗಳು ಮಾತೇ ಆಡುವುದಿಲ್ಲ. ಪ್ರೇಮಿಗಳ ನಡುವೆ ಮಾತಿರದ್ದರಿಂದ, ಸನ್ನಿವೇಶಗಳನ್ನು ಬಹಳ ಸೂಕ್ಷ್ಮವಾಗಿ ನೇಯುತ್ತಾನೆ. ಪಾತ್ರಗಳ ನಡುವೆ ಉದ್ಭವಿಸುವ ಸನ್ನಿವೇಶಗಳು, ನಡೆವಳಿಕೆ, ಎಲ್ಲವೂ ಅವರಿಬ್ಬರ ಪ್ರೀತಿಯನ್ನು ಸೂಚಿಸುತ್ತದೆ. ಎಲ್ಲಿಯಾದರೂ ಒಂದು ಸಂಭಾಷಣೆ ಇದ್ದುಬಿಟ್ಟಿದ್ದರೆ ಪ್ರೇಮಪಾಕ ಕೆಟ್ಟುಹೋಗುವ ಸಂಭವವಿತ್ತು ಅನ್ನುವಷ್ಟು ಸ್ಪಷ್ಟವಾಗಿ ಭಾವನೆಗಳನ್ನು ದೃಶ್ಯಗಳ ಮೂಲಕ ಹೆಣೆಯಲಾಗಿದೆ. ಚಿತ್ರದ ಕೊನೆಯಲ್ಲಿ ಅವರಿಬ್ಬರ ಸಂಭಾಷಣೆ ಬರುವವರೆಗೂ ಪ್ರೇಕ್ಷಕನಿಗೆ ಅದರ ಅರಿವೇ ಇರದಂತೆ ನಿರೂಪಿಸಿರುವುದರಲ್ಲಿ ನಿರ್ದೇಶಕ ಗೆಲ್ಲುತ್ತಾನೆ.

 

ಇದು ೨೦೦೪ ರಲ್ಲಿ ಬಂದ ಕೊರಿಯನ್ ಸಿನೆಮಾ. ಹೆಸರು ’೩ ಐರನ್’. ಕಥೆ ಶುರುವಾಗುವುದು ಟೇ ಸುಕ್ ಎಂಬ ಯುವಕನ ವಿಚಿತ್ರ ಪಾತ್ರಪೋಷಣೆಯೊಂದಿಗೆ. ಆತ ಮನೆಮನೆಗೆ ಹೋಗಿ ಬಾಗಿಲಿಗೆ ರೆಸ್ಟಾರೆಂಟ್ ಚೀಟಿಗಳನ್ನು ಅಂಟಿಸುತ್ತಾನೆ. ಮತ್ತು ಯಾವ ಮನೆಬಾಗಿಲಲ್ಲಿ ಚೀಟಿ ಹಾಗೇ ಉಳಿದಿರುತ್ತದೋ ಅಂತ ಮನೆ ಬೀಗ ಮುರಿದು ಒಳಹೊಕ್ಕುತ್ತಾನೆ. ಹಾಗಂತ ಅವನೇನೂ ಕಳ್ಳನಲ್ಲ. ಮನೆಯಲ್ಲಿನ ಚೆಲ್ಲಾಪಿಲ್ಲಿ ಬಟ್ಟೆಗಳನ್ನು ಒಗೆದು ಓರಣ ಮಾಡುತ್ತಾನೆ. ಏನಾದರೂ ಹಾಳಾಗಿದ್ದು ಕಂಡರೆ ರಿಪೇರಿ ಮಾಡುತ್ತಾನೆ. ಮನೆಯವರೂ ನೋಡದೇ ಉಳಿದುಬಿಟ್ಟಿರುವ ಹಳೆಯ ಅಲ್ಬಮ್ ನ್ನು ಪ್ರೀತಿಯಿಂದ ತಿರುವಿಹಾಕುತ್ತನೆ. ಇದ್ದ ಸ್ವಲ್ಪ ಹೊತ್ತಲ್ಲಿ ಮನೆಯ ಎಲ್ಲಾ ಪಾತ್ರಗಳ ಜತೆ ಒಂದು ಆಪ್ತ ಸಂಬಂಧವೇ ರೂಪಿತವಾಗಿಬಿಟ್ಟಿರುತ್ತದೆ. ಅದರ ಕುರುಹಿಗೋಸ್ಕರವೇ ಎಂಬಂತೆ ಮನೆಗೋಡೆಯ ಗ್ರೂಪ್ ಫೋಟೋ ದ ಮುಂದೆ ನಿಂತು ತಾನೂ ಫೋಟೋ ತೆಗೆಸಿಕೊಳ್ಳುತ್ತಾನೆ. ಹೀಗೆ ಮತ್ತೆ ಮುಂದಿನ ದಿನಕ್ಕೆ ಹಾಯುವ ದಿನಚರಿಯುಳ್ಳ ಮುಗ್ದ ಯುವಕನ ಚಿತ್ರಣ ನಮಗೆ ಸಿಗುತ್ತದೆ.

ಹಾಗೇ ಒಮ್ಮೆ ಗಂಡನಿಂದ ಶೋಷಿತಳಾದ ಸುನ್ ಹ್ವಾ ಎಂಬಾಕೆ ಮನೆಗೆ ಹೋಗುತ್ತಾನೆ. ಆಕೆಯ ಗಂಡ ಅವಳನ್ನು ಮನೆಯಲ್ಲೇ ಕೂಡಿಹಾಕಿ ಹೋಗಿರುತ್ತಾನೆ. ಆಕೆ ಇರುವುದು ಗೊತ್ತಾದ ಕೂಡಲೇ ಅವ ಹೊರಟರೂ ಮತ್ತೆ ಅದ್ಯಾವುದೋ ಸೆಳೆತಕ್ಕೆ ಸಿಕ್ಕು ವಾಪಸ್ಸು ಬಂದು ಆಕೆಯ ಕಾಳಜಿ ಮಾಡುತ್ತಾನೆ. ಗಂಡ ಬಂದು ಆಕೆಯನ್ನು ಬಲಾತ್ಕರಿಸುವಾಗ ಅವನಿಗೆ ಹೊಡೆದು ಆಕೆಯನ್ನು ತನ್ನ ಜತೆಗೆ ಕರೆದೊಯ್ಯುತ್ತಾನೆ. ನಂತರ ಅವಳು ಅವನ ದಿನಚರಿಯ ಭಾಗವಾಗುತ್ತಾಳೆ. ತಾನೂ ಚೀಟಿ ಅಂಟಿಸುವ, ಹೊಕ್ಕ ಮನೆ ಒಪ್ಪ ಮಾಡುವ ಕೆಲಸದಲ್ಲಿ ಭಾಗಿಯಾಗುತ್ತಾಳೆ. ಟೇ ಸುಕ್ ನ ಗ್ರೂಪ್ ಫೋಟೋ ಅಭಿಯಾನದಲ್ಲಿ ತನ್ನ ಬಿಂಬಕ್ಕೂ ಜಾಗ ಮಾಡಿಕೊಳ್ಳುತ್ತಾಳೆ.

 

ಮಾತನ್ನು ಕಡಿಮೆ ಬಳಸುವ ನಿರ್ದೇಶಕ ಪ್ರತಿಮೆಗಳನ್ನು ಹೇರಳವಾಗಿ ಉಪಯೋಗಿಸುತ್ತಾನೆ. ಚಿತ್ರದ ಮೊದಲ ದೃಶ್ಯದಲ್ಲೇ ಮಾರ್ಬಲ್ ಅಪ್ಸರೆಯ ಮುಂದಿರುವ ನೆಟ್ ಗೆ ಗಾಲ್ಫ್ ಚೆಂಡು ಹೊಡೆವುದನ್ನು ತೋರಿಸುವುದು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸುನ್ ಹ್ವಾ ಳ ಉಡುಗೆಯನ್ನು ಒಪ್ಪವಾಗಿಡುವುದು, ನಂತರ ಸುನ್ ಹ್ವಾ ಳನ್ನು ಆಕೆಯ ಮನೆಯಿಂದ ಕರೆದೊಯ್ಯುವಾಗ ರಸ್ತೆಯ ಒಂದು ತಿರುವಿನಲ್ಲಿ ರೆಕ್ಕೆಯಿರುವ ಅಪ್ಸರೆಯ ಮೂರ್ತಿಯನ್ನು ತೋರಿಸಿವುದು ಹೀಗೆ. ಕೆಲವೊಮ್ಮೆ ಪ್ರತಿಮೆಯಾಗಿ ಹಿನ್ನೆಲೆ ಸಂಗೀತವನ್ನೂ ಆರಿಸಿಕೊಂಡಿರುವುದು ನಿರ್ದೇಶಕನ ಚಿತ್ರಕಥೆಯ ಮೇಲಿನ ಹಿಡಿತ ಸೂಚಿಸುತ್ತದೆ. ಟೇ ಸುಕ್ ನ ಇನ್ನೊಂದು ಅಭ್ಯಾಸದಂತೇ ಆಗಿಬಿಟ್ಟಿರುವ, ಗಾಲ್ಫ್ ಚೆಂಡನ್ನು ದಾರವೊಂದಕ್ಕೆ ಕಟ್ಟಿ ದಾರವನ್ನು ಕಂಬಕ್ಕೋ ಮರಕ್ಕೋ ಕಟ್ಟಿ ಗಾಲ್ಫ್ ಪ್ರಾಕ್ಟೀಸ್ ಮಾಡುವಂತೆ ಹೊಡೆಯುತ್ತಿರುತ್ತಾನೆ. ಆತ ಹಾಗೆ ಆಡಲು ಶುರುಮಾಡಿದಾಗಲೆಲ್ಲಾ ಸುನ್ ಹ್ವಾ, ಚಿತ್ರದ ಮೊದಲ ಶಾಟ್ ನಲ್ಲಿ ತೋರಿಸಿದ ಅಪ್ಸರೆಯಂತೆ ಆತನೆದುರು ನಿಲ್ಲುತ್ತಾಳೆ. ಟೇ ಸುಕ್ ಗೆ ಆಕೆಯನ್ನು ಗುರಿಯಾಗಿಸುವುದು ಇಷ್ಟವಿಲ್ಲ. ಪ್ರತೀ ಸಲವೂ ಆಕೆ ಎದುರಾದಾಗ ತನ್ನ ಕೋನವನ್ನು ಬದಲಿಸಿ ಬೇರೆ ಕಡೆ ತಿರುಗಿಸುತ್ತಾನೆ. ಆಕೆ ಮತ್ತೆ ಮತ್ತೆ ಅಡ್ಡನಿಲ್ಲುತ್ತಿರುತ್ತಾಳೆ. ಒಮ್ಮೆ ಸುನ್ ಹ್ವಾ ಅಡ್ಡನಿಲ್ಲುವುದು ಬಿಟ್ಟಾಗ, ಚೆಂಡು ದಾರದಿಂದೆರಗಿ ರಸ್ತೆಯಲ್ಲಿ ಒಬ್ಬಾಕೆಗೆ ತಗುಲಿ ದುರಂತ ಸಂಭವಿಸುತ್ತದೆ.

 

ಸಮಾಜದ ಪಾಲಿಗೆ ತಾನು ಇಲ್ಲವೆಂಬಂತೇ ಬದುಕುತ್ತಿರುವ ಟೇ ಸುಕ್, ಒಮ್ಮೆ ಸಮಾಜ ಮುಖಾಮುಖಿಯಾಗುತ್ತದೆ. ಮನೆಯೊಂದರಲ್ಲಿ ಒಬ್ಬನೇ ವಾಸಿಸುತ್ತಿದ್ದ ಮುದುಕನೊಬ್ಬ ಸತ್ತಿರುತ್ತಾನೆ. ಟೇ ಸುಕ್ ಕೂಡಲೆ ವಾಪಸ್ಸು ಹೊರಟುಹೋಗಲು ಯೋಚಿಸಿದರೂ, ಸುನ್ ಹ್ವಾ ಒಪ್ಪುವುದಿಲ್ಲ. ಇಬ್ಬರೂ ಸೇರಿ ಹೆಣವನ್ನು ಗೌರವಯುತವಾಗಿ ಮಣ್ಣುಮಾಡುತ್ತಾರೆ. ನಂತರ ಬಂದ ಆ ಮುದುಕನ ಮಕ್ಕಳು ಇವರನ್ನು ಕಂಡು ಇವರೇ ಕೊಲೆ ಮಾಡಿದ್ದಾರೆಂದು ಭಾವಿಸಿ ಪೋಲಿಸಿಗೆ ದೂರುಕೊಡುತ್ತಾನೆ. ಪೋಲಿಸ್ ನಿಂದಾಗಿ ಸುನ್ ಹ್ವಾ ಮತ್ತೆ ತನ್ನ ಮನೆಗೆ, ಗಂಡನ ಬಳಿಗೆ ಹೋಗಬೇಕಾಗುತ್ತದೆ. ಟೇ ಸುಕ್ ಕೊಲೆ ಮಾಡಿದ್ದಲ್ಲ, ಮುದುಕ ಸತ್ತಿದ್ದು ಶ್ವಾಸಕೋಶದ ಕ್ಯಾನ್ಸರ್ ನಿಂದ ಎಂಬುದು ಅರಿವಾದ ಬಳಿಕವೂ, ಭ್ರಷ್ಟ ಪೋಲಿಸ್ ನಿಂದಾಗಿ ಟೇ ಸುಕ್ ಜೈಲಿಗೆ ಹೋಗಬೇಕಾಗುತ್ತದೆ.

 

ಸಮಾಜದ ಪಾಲಿಗೆ ಅಜ್ಞಾತನಂತೆಯೇ ವಾಸಿಸುತ್ತಿದ್ದ ಟೇ ಸುಕ್, ಜೈಲಿನಲ್ಲಿ ಜೈಲರ್ ನ ಕಣ್ಣು ತಪ್ಪಿಸಲು ಯತ್ನಿಸುತ್ತಿರುತ್ತಾನೆ. ಯತ್ನದಲ್ಲಿ ಸೋತು ಪೆಟ್ಟು ತಿಂದು ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ. ಮನುಷ್ಯ ಒಮ್ಮೆ ೧೮೦ ಡಿಗ್ರೀವರೆಗೆ ಮಾತ್ರ ನೋಡಬಲ್ಲ. ಟೇ ಸುಕ್ ಉಳಿದ ೧೮೦ ಡಿಗ್ರೀಯಲ್ಲಿ ಇರುವ ವಿದ್ಯೆ ಕಲಿಯಲು ತೊಡಗುತ್ತಾನೆ. ವ್ಯಕ್ತಿಯ ಬೆನ್ನಹಿಂದೆಯೇ ಇದ್ದರೂ ಅವನಿಗೆ ಗೊತ್ತಾಗದಂತೆ ಇರುವ ವಿದ್ಯೆಯನ್ನು ಕರಗತ ಮಾಡಿಕೊಳ್ಳುತ್ತಾನೆ. ಆ ವಿದ್ಯೆ ಜೈಲಿನ ನಾಲ್ಕುಗೋಡೆಯ ಮಧ್ಯೆಯಿದ್ದೂ ಸ್ವತಂತ್ರನಂತಾಗುವ ಸಾಧ್ಯತೆಯನ್ನು ಅವನಿಗೊದಗಿಸುತ್ತದೆ.

ಇತ್ತ ಸುನ್ ಹ್ವಾ ಗೆ ಅವನ ನೆನಪು ಕಾಡುತ್ತಿರುತ್ತದೆ. ಹಿಂದೊಮ್ಮೆ ಟೇ ಸುಕ್ ರಿಪೇರಿ ಮಾಡಿದ್ದ ತೂಕ ತೋರುವ ಯಂತ್ರವನ್ನು ಸುಮ್ಮನೆ ಬಿಚ್ಚತೊಡಗುತ್ತಾಳೆ.ವಾಷಿಂಗ್ ಮೆಶೀನ್ ಇದ್ದೂ ಟೇ ಸುಕ್ ನಂತೆ ಕೈಯಲ್ಲೇ ಬಟ್ಟೆ ಒಗೆಯುತ್ತಾಳೆ. ಒಮ್ಮೆ ತಂಗಿದ್ದ ಮನೆಯೊಂದಕ್ಕೆ ಹೋಗಿ ನೆಮ್ಮದಿಯಾಗಿ ಮಲಗಿ ಬರುತ್ತಾಳೆ.  ಈಗ ಆಕೆಯ ಗಂಡನ ಗಾಲ್ಫ್ ನೆಟ್ ನ ಹಿಂದೆ ಮೂರು ವ್ಯಕ್ತಿಗಳಿರುವ ಮಾರ್ಬಲ್ ಮೂರ್ತಿಯಿರುತ್ತದೆ, (ಇಲ್ಲೂ ನಿರ್ದೇಶಕ ಏನನ್ನೋ ಹೇಳಬಯಸುತ್ತಿದ್ದಾನಾ?!)

 

ಜೈಲಿಂದ ಬಿಡುಗಡೆಯಾದಾಗಲಷ್ಟೇ ಕಾಣುವ ಟೇ ಸುಕ್ ನನ್ನು ನಿರ್ದೇಶಕರು ತೋರಿಸುವುದಿಲ್ಲ. ತಾನು ಕಲಿತ ಆ ವಿದ್ಯೆಯ ಮೂಲಕವೇ ತನ್ನನ್ನು ಹೊಡೆದ ಪೋಲಿಸ್ ಗೆ ಪಾಠ ಕಲಿಸುತ್ತಾನೆ. ಮತ್ತೆ ಮೊದಲು ತಂಗಿದ್ದ ಮನೆಗೆ ಭೇಟಿ ಕೊಡುತ್ತಾನೆ. ಸುನ್ ಹ್ವಾ ಮನೆಗೂ ಬಂದು ಆಕೆಯ ಗಂಡನ ನೆರಳಿನಂತೆ ವಾಸಿಸುತ್ತಾನೆ. ’ನಾವು ಜೀವನ ನಡೆಸುತ್ತಿರುವುದು ನಿಜವಾಗಿಯೂ ಅಥವ ಕನಸಿನಲ್ಲಾ ಎನ್ನುವುದನು ಹೇಳುವುದು ಕಷ್ಟ.’ ಎಂಬ ಟ್ಯಾಗ್ ಲೈನಿನ ಮೂಲಕ ಚಿತ್ರ ಮುಗಿಯುತ್ತದೆ. (’ಇನ್ಸೆಪ್ಶನ್’ ಚಿತ್ರ ಕಥೆಯ ಎಳೆ ಇಲ್ಲಿಂದಲೇ ಶುರುವಾಗಿದ್ದಿರಬಹುದಾ?) ಕಥೆಯಲ್ಲಿ ಮ್ಯಾಜಿಕ್ ರಿಯಲಿಸ್ಮ್ ಅಂಶವನ್ನೂ ಸೇರಿಸಿ ಪ್ರೀತಿಯನ್ನು ಮತ್ತೊಂದು ಘಟ್ಟಕ್ಕೆ ಏರಿಸುವ ಪ್ರಯತ್ನ ನಿರ್ದೇಶಕ ಮಾಡುತ್ತಾನೆ.

ಮಾತು ಕಡಿಮೆಯಿರುವ ಬರೀ ಪ್ರತಿಮೆಯಿಂದಲೇ ತುಳುಕಿರುವ ಈ ಚಿತ್ರದ ಕಥೆಯಷ್ಟೇ ಇಲ್ಲಿ ಹೇಳಿದ್ದೇನೆ. ಅದರ ಧ್ವನಿ, ಫ್ಲೇವರ್, ಪಾತ್ರಪೋಷಣೆಗೆ ನಿರ್ದೇಶಕ ಬಳಸುವ ತಂತ್ರಗಳು, ಹಿನ್ನೆಲೆ ಸಂಗೀತ ಇವೆಲ್ಲವನೂ ಚಿತ್ರ ನೋಡಿಯೇ ಸವಿಯಬೇಕು. ಇದರ ವಿಭಿನ್ನ ಪ್ರೀತಿಯ ಎಳೆ, ಮ್ಯಾಜಿಕ್ ರಿಯಲಿಸ್ಮ್ ನ್ನು ಸರಳವಾಗಿ ಹೇಳಲು ಪ್ರಯತ್ನಿಸಿದ ರೀತಿ, ಮೌನವನ್ನೂ ಪಾತ್ರವಾಗಿ ದುಡಿಸಿಕೊಂಡ ಜಾಣ್ಮೆಗಳಿಗಾಗಿ ಇದು ನೀವು ಮಿಸ್ ಮಾಡಬಾರದ ಚಿತ್ರಗಳ ಪಟ್ಟಿಯಲ್ಲಿ ಖಂಡಿತ ಇರಬೇಕಾದ ಚಿತ್ರ.

 

ಈ ಚಿತ್ರದ ನಿರ್ದೇಶಕ ಕಿಮ್ ಕಿ ಡುಕ್ ನ ’ಸ್ಪ್ರಿಂಗ್ ಸಮ್ಮರ್,ಫಾಲ್,ವಿಂಟರ್.. ಆಂಡ್ ಸ್ಪ್ರಿಂಗ್’ ಚಿತ್ರ ಕೂಡ ವಿಖ್ಯಾತವಾಗಿದೆ.

 

Advertisements
ಟಿಪ್ಪಣಿಗಳು
 1. sukhesh ಹೇಳುತ್ತಾರೆ:

  ಖಂಡಿತಾ ನೋಡ್ತೀನಿ.
  ಪುಷ್ಪಕ ವಿಮಾನ ನೆನಪಾಯ್ತು.

 2. Susankritha ಹೇಳುತ್ತಾರೆ:

  nin blog nODidmEle ee movie nODbEku ansi huDki nODbiTTe…adButavAgide….
  “Spring Summer Fall….” eegaagle nODidde… idu ishta aaytu…

  thanks for the reco

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s