ಕನ್ನಡಪ್ರೇಮದ ಕುರಿತು ಒಂಚೂರು…

Posted: ಜುಲೈ 10, 2011 in ದಿನದ ಎಸಳುಗಳು..., ಪರ್ಸನಲ್ಲು, ಬದುಕೇ, ಐ ಲವ್ ಯೂ!, ಲಹರಿ, ಲೇಖನ, ಸಿಂಗಪೂರ್ ಸಂಗತಿಗಳು

ನಾನು ಕನ್ನಡಿಗ ಅಂತ ಅನ್ನುವಾಗ ನನಗೆ ಚೂರೂ ಹೆಮ್ಮೆಯೇ ಆಗುತ್ತಿದ್ದಿರಲಿಲ್ಲ.

ಹೌದು. ಇಸ್ಕೂಲು, ಹೈಸ್ಕೂಲು ಓದುವಾಗಲೆಲ್ಲ ’ನಾನು ಕನ್ನಡಿಗ’ ಅನ್ನುವುದರಲ್ಲಿ ಅಂತಹ ವಿಶೇಷಗಳೇನೂ ಇರಲಿಲ್ಲ. ಸುತ್ತಮುತ್ತಲೂ ಮುತ್ತಿಕೊಂಡಿದ್ದ ಗೆಳೆಯರೆಲ್ಲರೂ ಕನ್ನಡಿಗರೇ ಆಗಿದ್ದರಿಂದ ಅದೊಂದು ಸ್ಪೆಷಲ್ ಅನ್ನುವ ಭಾವ ಮೂಡುತ್ತಿರಲಿಲ್ಲ. ಕಾಲೇಜುಪರ್ವದಲ್ಲಿ ಕನ್ನಡಿಗ ಆಗಿರುವುದು ಕೊಂಚ ಸಂಕಟಗಳಿಗೆ ಸಿಕ್ಕಿಸಿತ್ತಾದರೂ ಅದಕ್ಕೆ ಕಾರಣ ’ನಾ ಕನ್ನಡದವ’ ಆಗಿರುವುದಲ್ಲ, ’ಇಂಗ್ಲೀಷ್ ಅರಿವು ಕಡಿಮೆ ಇರುವುದು’ ಎಂಬ ಜ್ಞಾನೋದಯ ಆದಮೇಲೆ ಆ ಕುರಿತು ಆಲೋಚನೆಯೂ ಬರಲಿಲ್ಲ.

ಆದರೆ ಕರುನಾಡ ಕೋಟೆ ದಾಟಿದ ಮೇಲೆ ಕನ್ನಡ ಎಂಬ ಭಾಷೆ ಎಷ್ಟು ಸಿಹಿ ಅನ್ನುವುದು ಗೋಚರವಾಗುತ್ತಿತ್ತು. ಇದೊಂಥರ ಮನೆಯಲ್ಲಿದ್ದಾಗ ಹಠ, ಗೊಂದಲ ಮಾಡುತ್ತಿದ್ದು ನಂತರ ಅಮ್ಮನ ಮಹತ್ವ ಅರಿವಾಗುವ ಹಾಸ್ಟೆಲ್ ಹುಡುಗನ ರೀತಿ. ಸಿಂಗಾಪೂರ್ ಗೆ ಬಂದ ಮೇಲೆ ನನ್ನ ಜತೆ ಕೆಲಸ ಮಾಡುವವರಿಗೆ ನನ್ನ ರಾಜ್ಯದ ಕುರಿತು, ಭಾಷೆಯ ಕುರಿತು ವಿವರಿಸುವಾಗ ಅದೆಂತದೋ ಪದಗಳಲ್ಲಿ ಸಿಲುಕದ ಸಂತಸ. ಅವರಂತೂ ಅಮೇರಿಕದ ವೈಭವವನ್ನೂ ಈ ರೀತಿಯ ವಿವರಣೆಯ ಸಹಿತ ಕೇಳಿರಲಿಕ್ಕಿಲ್ಲ, ಹಾಗೆ ಇರುತ್ತಿತ್ತು. ಇಲ್ಲಿಯ ಹೆಚ್ಚಿನವರಿಗೆ ಭಾರತೀಯರೆಂದರೆ ತಮಿಳರು ಅನ್ನುವ ಭಾವ ಇರುವುದರಿಂದ, ನನ್ನ ಭಾರತೀಯತೆ ಅರಿವಾದ ಕೂಡಲೇ, ’ತಮಿಳಾ?’ ಎನ್ನುವ ಪ್ರಶ್ನೆ ಕೇಳುತ್ತಾರೆ. “ಅಲ್ಲ, ನಾನು ಕನ್ನಡಿಗ’ ಎಂಬ ಉತ್ತರಕ್ಕೆ ಪೂರ ಹೆಮ್ಮೆಯ ಲೇಪ. ಅಲ್ಲೇ ಹುಟ್ಟಿ, ಅಲ್ಲೇ ಬೆಳೆದಿದ್ದರೂ ಯಾವಾಗಲೂ ಈ ವಾಕ್ಯ ಆಡಿದ ಉದಾಹರಣೆ ನೆನಪಿಲ್ಲ.

ಜಯಂತ್ ಕಾಯ್ಕಿಣಿ ತಮ್ಮ ಭಾಷಣದಲ್ಲಿ ಯಾವಾಗಲೂ ಹೇಳುತ್ತಿರುತ್ತಾರೆ, ” ನಾವು ಅಮೇರಿಕದಲ್ಲೋ, ಸಿಂಗಾಪುರ್ ನಲ್ಲೋ ಅಥವ ಅಸ್ಸಾಂ, ಮುಂಬೈ ನಲ್ಲಿ ಇದ್ದುಕೊಂಡು, ಒಳ್ಳೆಯ ಕೆಲಸಗಾರರಾಗಿ, ಒಳ್ಳೆಯ ಪ್ರಜೆಯಾಗಿ, ಒಳ್ಳೆಯ ತಂದೆ, ಮಗ, ಅಣ್ಣ, ತಮ್ಮ, ಗೆಳೆಯನಾಗಿ ಇರುವುದು ಕನ್ನಡತನವಾ? ಅಥವ ಬೆಂಗಳೂರಲ್ಲೆ ಇದ್ದು, ವಿಧಾನಸೌಧದ ಮುಂದೇನೆ ಮನೆಮಾಡಿ, ಕೈತುಂಬ ಉಂಗುರಗಳು, ಕೊರಳ ತುಂಬಾ ಚೈನು ಹಾಕಿಕೊಂಡು, ಸಿಕ್ಕಾಪಟ್ಟೇ ಭ್ರಷ್ಟಾಚಾರ ಮಾಡಿ, ಹೀನವಾಗಿ ಬದುಕಿ ರಾಜ್ಯೋತ್ಸವದ ದಿವಸ ಧ್ವಜ ಹಾರಿಸುವುದು ಕನ್ನಡತನವಾ? ಅಂದರೆ ಕನ್ನಡತನ ಅನ್ನುವುದು ನೀವಾಡುವ ಭಾಷೆಯ ಮೇಲೆ ಮಾತ್ರ ನಿರ್ಭರವಾಗಿಲ್ಲ. ಕನ್ನಡತನ ಅಂದರೆ ನಾವು ಬದುಕುವ ರೀತಿ. ಮಮತೆ, ಪ್ರೀತಿಯೇ ಕನ್ನಡತನ. ನಾವೆಲ್ಲಿ ಇರುತ್ತೇವೆ ಅನ್ನುವುದಲ್ಲ, ಚೆನ್ನಾಗಿ ಕೆಲಸ ಮಾಡಿ, ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯುವುದಕ್ಕಿಂತ ದೊಡ್ಡ ಕನ್ನಡತನ ಬೇರೆಯಿಲ್ಲ.”

ನನ್ನಲ್ಲೂ ಅಂಥ ಒಂದು ಕನಸು. ಉಳಿದವರು ’ರೀ ಅವ್ರು ಕನ್ನಡವರು, ಮೋಸ ಮಾಡೋಲ್ಲ” ಅಂತಲೋ ಅಥವ ಅಂಗಡಿಯಲ್ಲಿ ಪರ್ಸು ಮರೆತ ಘಳಿಗೆಯಲಿ, “ನೀವ್ ಕನ್ನಡದವ್ರಾ? ಪರ್ವಾಗಿಲ್ಲ, ನಾಳೆ ಕೊಡಿ” ಈ ರೀತಿ ಕನ್ನಡ ಒಂದು ನಂಬಿಕೆಯಾಗಿ, ಒಳ್ಳೆಯತನವಾಗಿ ಹಬ್ಬಬೇಕು. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಅನ್ನುವುದಕ್ಕಿಂತ Value ಆಗಿ ಬೆಳೆಯಬೇಕು ಎಂಬುದೊಂದು ಆಶಯ.

ಎಂದಿಗೂ ನಾನು ಅಂಥ ಕನ್ನಡಿಗನಾಗಲು ಬಯಸುತ್ತೇನೆ.

 

ಅಡಿಟಿಪ್ಪಣಿ: ಇಲ್ಲಿಯ ಹೋಟೇಲೊಂದರಲ್ಲಿ ಅಕಸ್ಮಾತ್ ಭೇಟಿಯಾದ ಬೆಳಗಾವಿಯ ಬಾಲರಾಜ್ ಮತ್ತವರ ಪುಟ್ಟಿಯ ಕನ್ನಡ ಹುಟ್ಟಿಸಿದ ರೋಮಾಂಚನದಿಂದಾಗಿ, ಮತ್ತೆ ಬರೆಯುತ್ತೇನೆ ಅಂತ ಮುಂದೂಡುತ್ತಲೇ ಬರುತ್ತಿದ್ದ ಈ ಲೇಖನ ಇವತ್ತೇ ಬರೆಯುವಂತಾಯಿತು. ಬೆಂಗಳೂರಲ್ಲೇ ಅಪರೂಪವಾಗುತ್ತಿರುವ ಕನ್ನಡವನ್ನು ಸಾವಿರಾರು ಮೈಲು ದೂರ ಅದೂ ಪುಟ್ಟ ಹುಡುಗಿಯ ಮಾತಾಗಿ ಕೇಳುವ ಅದ್ಭುತವೇ ಬೇರೆ.

Advertisements
ಟಿಪ್ಪಣಿಗಳು
  1. ವಿಕಾಸ್ ಹೇಳುತ್ತಾರೆ:

    “ಕೊರಳ ತುಂಬಾ ಚೈನು ಹಾಕಿಕೊಂಡು, ಸಿಕ್ಕಾಪಟ್ಟೇ ಭ್ರಷ್ಟಾಚಾರ ಮಾಡಿ, ಹೀನವಾಗಿ ಬದುಕಿ ರಾಜ್ಯೋತ್ಸವದ ದಿವಸ ಧ್ವಜ ಹಾರಿಸುವುದು ಕನ್ನಡತನವಾ? ”

    ಇದಕ್ಕೂ ಕನ್ನಡತನಕ್ಕೂ ಸಂಬಂಧವೇ ಇಲ್ಲ. ಎಲ್ಲ ಕನ್ನಡಿಗರೂ ಹೀಗೆ ಮಾಡುತ್ತಿಲ್ಲ. ಮಾಡುತ್ತಿರುವ ಜನರು ಕನ್ನಡಿಗರು ಮಾತ್ರ ಆಗಿಲ್ಲ. ಆದ್ದರಿಂದ ಈ ಹೋಲಿಕೆ, ಉದಾಹರಣೆಯೇ ಸರಿಯಲ್ಲ. 🙂

    “ಬೆಂಗಳೂರಲ್ಲೇ ಅಪರೂಪವಾಗುತ್ತಿರುವ ಕನ್ನಡವನ್ನು …”

    ಬೆಂಗಳೂರಲ್ಲಿ ಕನ್ನಡ ’ಅಪರೂಪ’ ಎನ್ನುವಷ್ಟು ಏನಾಗಿಲ್ಲ. ನಿಜ್ವಾಗ್ಲೂ!

    ನಿಜವಾದ ಕನ್ನಡತನ ಅಂದರೆ ನೀವು ನಿಮ್ಮ ಮನಸ್ಸಲ್ಲಿ ಹೆಮ್ಮೆ ಇಟ್ಟುಕೊಂಡು ಕನ್ನಡ ಬಳಸುತ್ತೀರಲ್ಲ ಅದು. ಜೊತೆಗೆ ನೀವು ಹೇಳಿದ ಆ value ಕೂಡ ನಿಜ. ಕನ್ನಡದವರು ಅಂದಾಕ್ಷಣ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡುವುದು ನಮ್ಮದೇ ಕರ್ತವ್ಯ. ನಿಮ್ಮ ಬರಹದ ಆಶಯಕ್ಕೆ ಒಪ್ಪಿಗೆಯಿದೆ.

  2. shamala ಹೇಳುತ್ತಾರೆ:

    ಕನ್ನಡಿಗರು ನಂಬಲರ್ಹರು, ಸಹೃದಯರು, ಸ್ನೇಹ ಜೀವಿಗಳು ಎಂದೆನಿಕೊಂಡಾಗ ಆಗುವ ರೋಮಾಂಚನ ನಿಜಕ್ಕೂ ಉನ್ನತವಾದದ್ದು ರಣಜಿತ್. ನಮ್ಮದಲ್ಲದ ನೆಲದಲ್ಲಿ, ನಮ್ಮ ಭಾಷೆ ಕೇಳಿದಾಗ ಆಗುವ ಸಂತೋಷ ನಿಜಕ್ಕೂ ವರ್ಣಿಸಲಾಗದ್ದು. ನಿಮ್ಮ ಆಶಯಕ್ಕೆ ನನ್ನ ಬೆಂಬಲ…. 🙂

  3. P.Ramachandra, Ras Laffan, Qatar ಹೇಳುತ್ತಾರೆ:

    ಶ್ರೀ. ರಂಜಿತ್ ಅಡಿಗರ “ಕನ್ನಡ ಪ್ರೇಮದ ಕುರಿತು ಒಂಚೂರು” ನೋಡಿ ನನಗೆ ತುಂಬಾ ಕುಶಿ ಆಯಿತು.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

  4. ಬೇಳೂರು ಸುದರ್ಶನ ಹೇಳುತ್ತಾರೆ:

    ಪ್ರಿಯ ಬ್ಲಾಗಿಗರೆ,
    ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
    ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

    ತಮ್ಮ ವಿಶ್ವಾಸಿ
    ಬೇಳೂರು ಸುದರ್ಶನ
    ಸಲಹಾ ಸಮನ್ವಯಕಾರ, ಕಣಜ ಯೋಜನೆ
    (ಕರ್ನಾಟಕ ಜ್ಞಾನ ಆಯೋಗದ ಯೋಜನೆ)
    ಈ ಮೈಲ್: projectmanager@kanaja.net
    http://www.kanaja.in
    ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
    ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
    ಬೆಂಗಳೂರು – 560100
    ದೂರವಾಣಿ: ೯೭೪೧೯೭೬೭೮೯

  5. ಅನಾಮಿಕ ಹೇಳುತ್ತಾರೆ:

    dhanyanadhe rajnu…..kannadave satya kannadave nitya…

    Regards
    Dharmaprasad

  6. ರಂಜಿತ್ ಹೇಳುತ್ತಾರೆ:

    ವಿಕಾಸ್,

    context ಅನ್ನುವ ಇಂಗ್ಲೀಷ್ ಪದವಿದೆ. ಇಲ್ಲಿನ ಕಾಂಟೆಕ್ಸ್ಟ್ ಗೆ ಆ ಉದಾಹರಣೆ ಸೂಕ್ತವಾದ್ದರಿಂದ ಜಯಂತ್ ಹಾಗೆ ಹೇಳಿದ್ದರು.

    ಇತ್ತೀಚೆಗೆ ಒಂದು ಹಾಡಿನ ಸಾಹಿತ್ಯ ಹೀಗಿದೆ, : “ಸಿಕ್ಸರ್ರು ಹೊಡಿಬಹುದು ಬ್ಯಾಟಿಲ್ಲದೆ.. ಪ್ರೀತ್ಸೋಕೆ ಆಗಲ್ಲ ಡೌಟಿಲ್ಲದೇ..” ಅಂತ. ಬ್ಯಾಟ್ ಇಲ್ದೇ ಹೇಗೆ ಸಿಕ್ಸರ್ ಹೊಡೆವುದು ಅಂತ ಭಟ್ಟರ ಜುಟ್ಟು ಹಿಡಿದರೆ ಅವರೇನು ಅಂದಾರು.. ಅಲ್ಲಿನ ಕಾಂಟೆಕ್ಸ್ಟ್ ಗೆ ಆ ಸಾಲು ಸರಿಯಾಗಿಯೇ ಇದೆ..

    ಹಾಗೇನೇ ಬೆಂಗಳೂರಿನ ಹೊರವಲಯದಲ್ಲಿ ಒಂದೆರಡು ದಿನ ವಾಸ ಮಾಡಿ, ಅದಕ್ಕಿಂತ ಒಳ್ಳೆಯ ಭಾಷಾ ಕಲಿಕೆಯ ಪ್ರಯತ್ನ ಬೇರೊಂದಿರ್ಲಿಕ್ಕಿಲ್ಲ..

  7. ರಂಜಿತ್ ಹೇಳುತ್ತಾರೆ:

    ಶ್ಯಾಮಲ, ರಾಮಚಂದ್ರ, ಧರ್ಮಪ್ರಸಾದ್

    ಥ್ಯಾಂಕ್ಸ್. ಎಲ್ಲರಲ್ಲೂ ಈ ರೀತಿ ಕನ್ನಡಪ್ರೀತಿ ಬೆಳೆದರೆ ಅದಕ್ಕಿಂತ ದೊಡ್ಡ ಭಾಷಾಭಿಮಾನ ಬೇರೊಂದಿಲ್ಲ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s