ಇದುವರೆಗೂ ಬ್ಯಾಚುಲರ್ ಅಂತ ಹಣೆಪಟ್ಟಿ ಹಾಕ್ಕೊಂಡು ಒಬ್ಬನೇ ಆರಾಮಾಗಿದ್ದೆ. ನಾನು ಬೆಂಗಳೂರಿಗೆ ಬರುವೆ, ಇಲ್ಲೇ ಇರುವೆ ಅಂತ ಸುದ್ಧಿ ಪಕ್ಕಾ ಆದ ಕೂಡಲೇ ಅಮ್ಮ ನಾನೂ ಬೆಂಗಳೂರಿಗೆ ಬರ್ತೇನೆ, ನಿನ್ನ ಜತೆ ಇರ್ತೇನೆ ಅಂದಾಗ ಖುಷಿ ಆಯ್ತು. ಅಲ್ಲಿಗೆ ನನ್ನ ರೂಮು ಜೀವನ, ಚೆಲ್ಲಾಪಿಲ್ಲಿ ಪೇಪರುಗಳ ಫ್ಲೋರಿಂಗ್, ಅಶಿಸ್ತಿನ ಅಭ್ಯಾಸಗಳಿಗೆ ತಿಲಾಂಜಲಿ ಇಡುವ ಅನಿವಾರ್ಯತೆ ಉಂಟಾಯಿತು. ಆದರೂ ಹೊತ್ತೊತ್ತಿಗೆ ಕರೆಕ್ಟಾಗಿ ಸಿಗುವ ಭಾರೀ ಭೋಜನ, ಮನೆಗೆ ಬೇಗ ಹೋಗೋಣ ಅಂತ ಅನ್ನಿಸುವಂತೆ ಮಾಡುವ ಒಂದು ಜೀವ ನಮ್ಮನ್ನು ಕಾಯುತ್ತ ಇರುತ್ತದೆಂಬ ಭಾವನೆಗಳು ಆಸೆ ಹುಟ್ಟಿಸಿದವು. ಒಡಹುಟ್ಟಿದವರೂ ನಿಷ್ಕಲ್ಮಶ, ನಿಷ್ಕಾರಣ ಪ್ರೀತಿ ತೋರದಿರುವ ಈ ಕಾಲದಲ್ಲಿ ಅದಕ್ಕೆ ನಂಬಬೇಕಾದ್ದು ಅಮ್ಮ ಒಬ್ಬರನ್ನೇ ಅಲ್ಲವೇ? ಹಾಗಾಗಿ ರೂಮು ಹುಡುಕುವುದು ಬಿಟ್ಟು ಮನೆ ಹುಡುಕುವುದಕ್ಕೆ ಶುರು ಮಾಡಿದ್ದಾಯಿತು.
ಬೆಂಗಳೂರು ಮಧ್ಯದಲ್ಲಿರುವ ಆಸೆ, ಬೆಂಗಳೂರು ಮ್ಯಾಪಿನ ಎಲ್ಲೋ ಮೂಲೆಯಲ್ಲಿರುವ ಕೆಲಸದ ಜಾಗ, ಈ ಎರಡೂ ತುಂಬ ಮಾನಸಿಕ ಸಂಘರ್ಷ ಉಂಟುಮಾಡಿದವು. ಕೊನೆಗೂ ಎಲ್ಲಾ ಆಸೆಗಳನ್ನು ಟ್ರಾಫಿಕ್ ಎಂಬ ಭೂತ ಹೆದರಿಸಿ ’ಎಲ್ಲಿ ಕೆಲಸವೋ ಅಲ್ಲೇ ವಾಸ’ ಎಂಬ ಗಾದೆ ಹುಟ್ಟಿಸಿ ಮ್ಯಾಪಿನ ಮೂಲೆಯಲ್ಲೇ ಮನೆ ಮಾಡುವಂತೆ ಪ್ರೇರೇಪಿಸಿದವು. ಮನೆ ಆಯ್ತು, ಅಮ್ಮ ಬರುವ ಮುಂಚೆ ಎಲ್ಲಾ ತಯಾರಿರಬೇಕು ಅಂತ ಅನ್ನಿಸಿ ಮನೆಗೆ ಬೇಕಾದ ಎಲ್ಲಾ ಸಾಮಾನುಗಳೂ, ಯಂತ್ರ (ವಾಷಿಂಗ್ ಮೆಶೀನು, ಗ್ಯಾಸು ಸಿಲಿಂಡರು ಇತ್ಯಾದಿ) ತಂದಿರಿಸಿದ್ದಾಯಿತು. ಅಮ್ಮನಿಗೆ ಮುಖ್ಯವಾಗಿ ಬೇಕಾಗಿದ್ದ ಟೀವಿ ಠೀವಿಯಿಂದ ಡ್ರಾಯಿಂಗ್ ರೂಮಿನಲ್ಲಿ ಕೂತಿತು.
ಪ್ರಾಯೋಗಿಕವಾಗಿ ನನ್ನ ಅಡುಗೆಗಳೂ ಭರದಿಂದ ಶುರುವಾದವು. ಆಡುವ ಮುಂಚೆ ಪಿಚ್ ಪರೀಕ್ಷಿಸುವ ರೀತಿಯಲ್ಲಿ ಅಡುಗೆ ಮನೆಯೂ ಸಜ್ಜುಗೊಳಿಸಿದ್ದಾಯಿತು.
ಅಮ್ಮನಿಗೆ ಒಂದು ಆರಾಮಿನ ದಿನ ಫೋನ್ ಹಚ್ಚಿ, ’ಯಾವಾಗ ಬರುವಂತಾಗುತ್ತೀಯಾ?’ ಅಂತ ಕೇಳಿದರೆ ಉತ್ತರಿಸದೇ ನಕ್ಕು ಸುಮ್ಮನಾದಳು. ಇನ್ನೂ ಸ್ವಲ್ಪ ದಿನ ಹೋಗಲಿ ಅಂತ ನಾನೂ ಮೌನವಾಗಿ ಒಬ್ಬನೇ ಅಡುಗೆ ಮಾಡಿಕೊಂಡೆ. ಬೆಳಿಗ್ಗೆ ಎದ್ದು ಕಸ ಗುಡಿಸಿದೆ, ಹಾಲು ತಂದು ಕಾಫಿ ಮಾಡಿ, ಮನೆಯಲ್ಲೇ ಫಾಸ್ಟಾಗಿ ಫಾಸ್ಟ್ ಫುಡ್ ಮಾಡಿಕೊಂಡು ಪಾತ್ರೆ ತೊಳೆದು ಓಡೋಡಿ ಕೆಲಸಕ್ಕೆ ಹಾಜರಾದೆ. ಮತ್ತೆ ಸಂಜೆ ಬಂದು ಅಡುಗೆ, ಪಾತ್ರೆ ತೊಳೆದು ಮಧ್ಯೆ ಆಗಗ್ಗೊಮ್ಮೆ ವಾಶಿಂಗ್ ಮೆಶೀನ್ ನ ಕೈಲಿ ಬಟ್ಟೆ ಒಗೆಸುವುದೂ ಮಾಡಿ ಬದುಕುತ್ತಿದ್ದೇನೆ. ದಿನಗಳು ಚೌಕದಿಂದ ಚೌಕಕ್ಕೆ ಜಿಗಿದು, ಫ್ಯಾನುಗಾಳಿಗೆ ಹಾಳೆ ಹಾರಿದಂತೆ ತಿಂಗಳುಗಳೂ ಮುಗಿದವು.
ಯಾವಾಗ ಬರ್ತಿದೀಯಮ್ಮೋ ಅಂತ ಕೇಳಿದಾಗಲೆಲ್ಲ ಮುಗುಳ್ನಗುವೆ ಆಕೆಯ ಉತ್ತರ. ಯಾಕೆ ಹೀಗೆ, ಏನು ಆ ನಗುವಿನ ಮರ್ಮ ಅಂತ ಅರ್ಥವೆ ಆಗ್ತಿದ್ದಿರಲಿಲ್ಲ.
ಮೊನ್ನೆ ಗೆಳೆಯನಿಗೆ ನನ್ನ ಈ ದಿನಚರಿ ವಿವರಿಸುತ್ತಿದ್ದಾಗ ’ ಹಾಗಿದ್ರೆ ಮದುವೆಗೆ ಭರ್ಜರಿಯಾಗೆ ತಯಾರಾಗ್ತಿದೀಯಾ, ಬಿಡು!’ ಅಂತ ಛೇಡಿಸಿದ. ಯಾಕೋ ಅವ ಹಂಗಂದ ಕೂಡಲೇ ಅಮ್ಮನ ನಗು ನೆನಪಾಯ್ತು.
ಹ್ಮ್! ಅಮ್ಮಂದಿರೂ ನಮ್ಮಂಥ (ದೊಡ್ಡ)ಮಕ್ಕಳಿಗಿಂತ ಬುದ್ದಿವಂತರಾಗುತ್ತಿದ್ದಾರೆ!
ನಿಮ್ಮ ಫ್ರೆಂಡು ಹೇಳಿದ್ದು ನಿಜ ರೀ ! ಹೀಗೆ ತಯಾರಾಗ್ತಿರಿ , ಮುಂದೊಂದು ದಿನ ನಿಮ್ಮ ಹೆಂಡತಿ stirke ಮಾಡಿದಾಗ ಉಪಯೋಗಕ್ಕೆ ಬರುತ್ತೆ ! 😉 :):)
ಅಡುಗೆ..ಅದೂ ತಾವೇ ಮಾಡಿಕೊಳ್ಳೋದು?? ಅದ್ರಲ್ಲೂ ಗಂಡಸರು??? ಮೂರು ಪ್ರಶ್ನೆಗಳಿಗಿಂತಾ ಮೂರು ಆಶ್ಚರ್ಯ ಸೂಚಕಗಳಾಗುತ್ತವೆ …ಆದರೆ ಕೆಲವರು ಹೆಂಗಸರಿಗಿಂತಾ ಚನ್ನಾಗಿ ಅಡುಗೆ ಮಾಡ್ತಾರಂತೆ….ನಿಮ್ಮ ಅಭಿರುಚಿ ನೊಡಿದ್ರೆ…ನಿಮ್ಮದೂ ಇದೇ ಗುಂಪು ಅನ್ಸಿಸುತ್ತೆ…ರಂಜಿತ್….ಶುಭವಾಗಲಿ…ನಿಮ್ಮ ಅಭಿಯಾನಕ್ಕೆ.
ha.ha oLLe plan maadiddare amma 🙂
:-)… ಅಮ್ಮನಿಗೆ ಚೆನ್ನಾಗಿ ಗೊತ್ತು ಮಗನ ಹಿತ..! ಅಮ್ಮನ ಆ ಸ್ನಿಗ್ಧ ಮುಗುಳ್ನಗುವೆ ನಿಮ್ಮ ಮುಂದಿನ ಬದುಕಿಗೆ ಭದ್ರ ಬುನಾದಿಯಾಗಲಿದೆ ರಂಜಿತ್… ಬೇಗ ಶುಭ ಸುದ್ದಿ ತಿಳಿಸಿ…
Good one 🙂
ತುಂಬಾ ಚೆನ್ನಾಗಿದೆ…
congrats 🙂 sadhyadalle bachelors’ party ide anni 🙂
ನೀವೇ ಇಷ್ಟು ಬುಧ್ಧಿವ೦ತರಿರುವಾಗ ನಿಮ್ಮನ್ನು ಹೆತ್ತ ಆ ತಾಯಿ ಬುಧ್ಧಿವ೦ತರಾಗಿರದೇ ಇರಲು ಸಾಧ್ಯವೇ ಅಡಿಗರೇ? ಅಮ್ಮನ ಮುಗುಳುನಗುವಿನಲ್ಲಿಯೇ ಎಲ್ಲಾ ಅಡಗಿದೆ..
ಖುಷಿಯಾಯಿತು..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.