ಮನುಷ್ಯನ ಮನಸ್ಸು ತುಂಬಾ ವಿಚಿತ್ರವಾದ್ದು ಮತ್ತು ಜಟಿಲವಾದ್ದು ಕೂಡ. ಒಬ್ಬ ವ್ಯಕ್ತಿ ಒಂದು ಸನ್ನಿವೇಶಕ್ಕೆ ಒಂದು ರೀತಿಯಾಗಿ ವರ್ತಿಸಿದರೆ, ಮುಂದೊಮ್ಮೆ ಅಂತದ್ದೇ ಪರಿಸ್ಥಿತಿಗೆ ಬೇರೆಯೇ ಆದ ರೀತಿ ಪ್ರತಿಕ್ರಿಯಿಸಬಹುದು. ಅದಕ್ಕೆ ಆತನ ಮಾನಸಿಕ ಲಹರಿ, ಆತನಿಗೆ ಅರಿವಿಲ್ಲದೆಯೇ ಮಾಡುತ್ತಿರಬಹುದಾದ ಮಾನಸಿಕ ನಡೆಗಳು (Moves), ಎದುರಿನ ವ್ಯಕ್ತಿಯ ನಡೆವಳಿಕೆ, ಆ ವ್ಯಕ್ತಿ ’ಎಷ್ಟು ತನ್ನವ’ (ತನಗೆ ಬೇಕಾದವ) ಅನ್ನುವ ಆಲೋಚನೆಗಳಲ್ಲದೆ, ಹೊರಗಿನ ವಾತಾವರಣ ತನ್ನಲ್ಲಿ ಮೂಡಿಸಬಹುದಾದ ಪರಿಣಾಮಗಳು, ಐದು ನಿಮಿಷ ಹಿಂದೆ ಆಗಿದ್ದ ಯಾವುದೋ ಘಟನೆ ತನ್ನಲ್ಲಿ ಉಂಟುಮಾಡಿದ ತಲ್ಲಣಗಳೂ ಆತನ ಪ್ರತಿಕ್ರಿಯೆಗೆ ಕಾರಣವಿರಬಹುದು. ಅಥವಾ ತನ್ನ ಹೊಟ್ಟೆಯ ಹಸಿವೂ, ಆ ಸ್ಥಳದ ಪರಿಮಳಗಳೂ ಕೂಡ ಬೇರೆ ರೀತಿಯಾದ ಪ್ರತಿಕ್ರಿಯೆ ನೀಡಲು ಕಾರಣವಿದ್ದಿರಬಹುದು. ಇವೆಲ್ಲದ್ದಕ್ಕೆ ನಿಲುಕದ ಬೇರೆಯಾದ ಕಾರಣಗಳೂ ಇದ್ದೀತು.
ಈ ಅಂಶಗಳು ಕತೆ ಹೇಳಲು ಎಷ್ಟು ತೊಡಕಾಗಬಹುದೋ ಅಷ್ಟೇ ಒಳಿತೂ ನೀಡುತ್ತದೆ. ತೊಡಕು ಹೇಗಾದೀತು ಅಂದರೆ, ಒಬ್ಬ ವ್ಯಕ್ತಿ ಹೀಗೇ ವರ್ತಿಸುತ್ತಾನೆ ಅನ್ನುವ ಸಿದ್ಧಾಂತವನ್ನೇ ಅಲ್ಲಗಳೆಯುವುದರಿಂದ. ಒಳಿತು ಹೇಗೆಂದರೆ ಕತೆಗೆ ತಿರುವುಗಳನ್ನು ಸುಲಭವಾಗಿ ನೀಡಬಹುದಾದ್ದರಿಂದ.
ಒಂದು ಕತೆ ಹೇಳುವಾಗ ಪಾತ್ರಪೋಷಣೆಯ ಸಲುವಾಗಿ ಆತ ಎಂತಹ ವ್ಯಕ್ತಿ ಅನ್ನುವುದು ವೀ(ಪ್ರೇ)ಕ್ಷಕನಿಗೆ ವಿವರಿಸಲೋಸುಗ ಒಂದಿಷ್ಟು ದೃಶ್ಯಗಳನ್ನು ಕಟ್ಟಿಕೊಡುವುದು ಮೊದಲಿಂದಲೂ ನಡೆದು ಬಂದ ವಿಧಾನ. ಕತೆ ಹೇಳುತ್ತಾ ಒಂದು ವೇಳೆ ಆತ ತನ್ನ ಪಾತ್ರಪೋಷಣೆಗೆ ಅತೀತವಾಗಿ ಬೇರೊಂದು ವಿಧಾನವಾಗಿ ವರ್ತಿಸಬೇಕಾಗಿ ಬಂದರೆ ಅದಕ್ಕೆ ಕಾರಣಗಳನ್ನು ಕೊಡುವುದು ನಡೆಯುತ್ತದೆ. ಕಾರಣಗಳನ್ನು ನೀಡದೇ ಹೋದಲ್ಲಿ ಪ್ರೇಕ್ಷಕ ಕತೆಯನ್ನು ಒಪ್ಪದೇ ಹೋಗಬಹುದಾದ ಸಾಧ್ಯತೆಯಿದೆ.
ಉದಾಹರಣೆಗೆ ಕನ್ನಡದ ’ಸ್ಪರ್ಶ’ ಚಿತ್ರ. ಕಥಾನಾಯಕಿಯದ್ದು ಒಂದು ಥಿಯರಿ. ತಪ್ಪು ಮಾಡಿದವರು ಅವರೇ ಆ ತಪ್ಪನ್ನು ಸರಿ ಮಾಡಬೇಕು ಅಂತ. ಬೇರೆ ಎಲ್ಲಾ ಸನ್ನಿವೇಶದಲ್ಲಿ ಸಾಮಾನ್ಯವಾಗಿ ನಾಯಕಿಯಂತೆಯೇ ಇರುವ ಹುಡುಗಿ ಈ ವಿಷಯಕ್ಕೆ ಬಂದರೆ ತುಂಬಾ ಕಟ್ಟುನಿಟ್ಟು. ತಾನೇ ತಪ್ಪು ಮಾಡಿದಾಗಲೂ ಬೇರೆ ಯಾರೂ ಸಹಾಯ ಮಾಡಬಾರದೆಂದು ತಾಕೀತು ಮಾಡಿ ತಾನೇ ಸರಿಮಾಡುವುದು ನಡೆಯುತ್ತದೆ. ಹೀಗಿರುವಾಗ ಕಥಾನಾಯಕ ಅಕಸ್ಮಾತ್ ಆಗಿ ಒಮ್ಮೆ ಅರಿವಿಲ್ಲದೇ ಮತ್ತೊಬ್ಬ ಹುಡುಗಿಯ ಆಕ್ಸಿಡೆಂಟಿಗೆ, ಅವಳ ಕಾಲು ಕಳೆದುಕೊಳ್ಳಲು ಕಾರಣವಾಗ್ತಾನೆ. ಕಥಾನಾಯಕಿ ಇದನ್ನು ಮನ್ನಿಸುವುದಿಲ್ಲ ಎಂದುಕೊಂಡು ತನ್ನ ಪ್ರೀತಿಯನು ಕಡೆಗಣಿಸಿ ಕಾಲು ಕಳೆದುಕೊಂಡ ಹುಡುಗಿಯನು ಮದುವೆಯಾಗಲು ತಯಾರಿ ನಡೆಸುತ್ತಾನೆ.
ಇಲ್ಲಿ ನಿರ್ದೇಶಕ ಆಕೆಯ ಥಿಯರಿಯ ಕಟ್ಟುನಿಟ್ಟನ್ನು ಪ್ರೇಕ್ಷಕನಿಗೆ ಅರಿವು ಮಾಡಲು ಬಹಳಷ್ಟು ಸನ್ನಿವೇಶಗಳನ್ನು ಹೆಣೆದಿದ್ದಾರೆ. ಒಂದು ವೇಳೆ ಆ ಸನ್ನಿವೇಶಗಳು ಪರಿಣಾಮಕಾರಿ ಆಗದೇ ಹೋಗಿದ್ದರೆ ನಂತರ ಕಥಾನಾಯಕನ ತ್ಯಾಗದ ನಿರ್ಧಾರ ಪೇಲವವಾಗಬಹುದಾದ ಸಾಧ್ಯತೆ ಇತ್ತು.
ಹಾಗೆಯೇ ಅಪಘಾತ ಆದ ಹುಡುಗಿಯ ಪಾತ್ರದಲ್ಲಿ ಸುಧಾರಾಣಿ ಅಭಿನಯಿಸಿದ್ದರು. ಆ ಪಾತ್ರ ಇಂತದ್ದೇ ವ್ಯಕ್ತಿತ್ವ, ಈ ರೀತಿಯಾಗಿಯೇ ನಡೆದುಕೊಳ್ಳುತ್ತದೆ ಅನ್ನುವುದಕ್ಕೆ ಪ್ರಾಶಸ್ತ್ಯ ನೀಡಿರಲಿಲ್ಲ. ನಿಜ ವಿಷಯ ತಿಳಿದಾಗ ಆಕೆಯ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದು ತಿಳಿಯದ ಪ್ರೇಕ್ಷಕ ಅದನ್ನು ಕುತೂಹಲದಿಂದ ಕಾಯ್ತಾನೆ.
ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಕಥನದ ಎರಡೂ ಮಜಲುಗಳನ್ನು ಚೆನ್ನಾಗಿ ಬಳಸಿಕೊಂಡಿದ್ದರು.
*****
ಹೀಗೆ ನಿಜದ ಬದುಕಲ್ಲಿ ಮನುಷ್ಯ ವಿಧವಿಧವಾದ ವಿಧಾನದಲ್ಲಿ ವರ್ತಿಸುತ್ತಾ ಹೋಗುತ್ತಾನೆ. ಕೆಲವೊಂದು ಕಾರಣಸಹಿತ. ಇನ್ನೂ ಕೆಲವು ಕಾರಣರಹಿತ. ಆದರೆ ಕಥೆಯಲ್ಲಿ ಇಡೀ ಬದುಕನ್ನು ತೋರಿಸಲಿಕ್ಕಾಗದಲ್ಲ. ಅದಕ್ಕೆ ಕತೆಗೆ ಅಗತ್ಯವಾದ ಅಂಶವನ್ನಷ್ಟೇ ತೋರಿಸಿ ಕತೆ ಹೇಳುವುದು ಸೂಕ್ತ.