“ಚಿಂಗಾರಿ” ಕುರಿತು ಒಂದು ಪುಟ್ಟ ನೋಟ್ಸ್

Posted: ಫೆಬ್ರವರಿ 6, 2012 in ಸಿನೆಮಾ
ಟ್ಯಾಗ್ ಗಳು:, , , ,

~ ಬಹಳ ಕುತೂಹಲ, ನಿರೀಕ್ಷೆ ಇಟ್ಟುಕೊಂಡು ಬಿಡುಗಡೆಯಾದ ಮೊದಲ ದಿನವೇ ನೋಡಲು ಕೂತಿದ್ದಾಗ, ಎರಡು ಮೂರು ಸನ್ನಿವೇಶದಲ್ಲೇ ಇದು ಯಾವುದೋ ಹಾಲಿವುಡ್ ಚಿತ್ರದ ಭಟ್ಟಿಯೆಂಬ ಸುಳಿವು ಸಿಕ್ಕಿತ್ತು. ಮಧ್ಯಂತರ ಬರುವ ಹೊತ್ತಿಗೆ ’ಟೇಕನ್’ ಚಿತ್ರದ ಸೀನ್ ಟು ಸೀನ್, ಶಾಟ್ ಟು ಶಾಟ್ ಕಾಣಲು ಸಿಕ್ಕಾಗ ಉಂಟಾದದ್ದು ಭಾರೀ ನಿರಾಸೆ. ನಿರ್ದೇಶಕ ಹರ್ಷ ಚಿತ್ರ ಬಿಡುಗಡೆಯಾಗುವವರೆಗೂ ಎಲ್ಲಿಂದ ಕದ್ದಿದ್ದೆಂದು ಕುರುಹು ಕೂಡ ಕೊಡದೇ ಇದ್ದಿದ್ದು ಅವರ ಗೆಲುವು, ಮತ್ತು ಅಲ್ಲಿಯವರೆಗೂ ನನ್ನ ಸೋಲೇ ಆಗಿತ್ತು. 
ಅವರ ಮುಂದಿನ ಚಿತ್ರ ಬರುವಾಗ ನಾನು ತೆಗೆದುಕೊಳ್ಳುವ ಎಚ್ಚರ ಬೇರೆ ಇದೆ ಬಿಡಿ.
ಆದರೂ ’ನನ್ನ ಕನಸು ನಿಮ್ಮ ಮುಂದೆ ಇರಿಸಿದ್ದೇನೆ’ ಅನ್ನುವ ಹರ್ಷ, ಕನಸನ್ನೂ ಬೇರೆಯವರ ಬಳಿ ಕಡ ತೆಗೆದುಕೊಳ್ಳುವಂತಾದದ್ದು ಖೇದಕರ.

~ ಭಟ್ಟಿ ಭಾಗಗಳನ್ನು ಹೊರತುಪಡಿಸಿದರೆ (ಸೀನ್ ಟು ಸೀನ್, ಡೈಲಾಗ್ ಟು ಡೈಲಾಗ್ ಆದ್ದರಿಂದ ಅದು ಚೆನ್ನಾಗಿದ್ದರೆ ಅದರ ಕ್ರೆಡಿಟ್ ’ಟೇಕನ್" ನ ನಿರ್ದೇಶಕ ಪಿಯರೀ ಮಾರೆಲ್ ಗೆ ಸಲ್ಲಬೇಕು) ಉಳಿದ ದೃಶ್ಯಗಳ ಸಂಯೋಜನೆಯಲ್ಲಿ, ಹಾಸ್ಯ ದಲ್ಲೂ ಮೆಚ್ಚುವಂಥ ಕೆಲಸವಿದೆ. ಅದರಲ್ಲೂ ತೇಜು ಇರುವ ಸನ್ನಿವೇಶಗಳು ಬಹಳ ಸೊಗಸಾಗಿ ಮೂಡಿಬಂದಿವೆ. ದರ್ಶನ್ ತುಂಬ ದಿನದ ನಂತರ ವಿಮರ್ಶಕರೂ, ಅಭಿಮಾನಿಗಳೂ ಇಬ್ಬರೂ ಮೆಚ್ಚುವಂಥ ಅಭಿನಯ ನೀಡಿದ್ದಾರೆ. ದೀಪಿಕಾ ಕಾಮಯ್ಯ ನಟನೆ ಇಲ್ಲಿ ಪರವಾಗಿಲ್ಲ, ಮುಂದಿನ ಚಿತ್ರಗಳಲ್ಲಿ ಪರೀಕ್ಷೆಗೊಳಲ್ಪಡಲಿದೆ. ಭಾವನಾ ಬೋಲ್ಡ್ ಆಗಿ ನಟಿಸಿದರೂ ಆಕೆಗಾಗಿ ಒಂದು ಹಾಡು ಚಿತ್ರಕ್ಕೆ ಯಾಕೋ ಅನಗತ್ಯ ಅನಿಸಿತು. ಚಿತ್ರದ ಮೊದಲ ಹಾಡು ಕೂಡ ಕಥೆಯ ಓಟಕ್ಕೆ ಅಡ್ಡಿ ಎಂಬಂತಿತ್ತು.

chingari-wall-02

~ ಹಾಡನ್ನು ಗಮನಿಸಿದರೆ – ಭಟ್ಟರ ಯಡವಟ್ಟು ಹಾಡನ್ನು ಎಂದಿನಂತೆ ಮತ್ತೆ ಹರಿಕೃಷ್ಣ ತಮ್ಮ ಟ್ಯೂನ್ ನಿಂದ ಕಾಪಾಡಿದ್ದಾರೆ. ಅವರು ’ಈ ಚಿತ್ರದಲ್ಲಿ ಬಾಯಿಗೆ ಬಂದ ಪದವನ್ನು ಸೇರಿಸಿ ಬರೆದ ಹಾಡು’ ಅಂತಲೆ ರೇಡಿಯೋ ಚಾನೆಲ್ ಒಂದಕ್ಕೆ ಹೇಳಿಕೊಂಡಿರುವುದರಿಂದ ಬೇರೆನೂ ಅನ್ನಲಾಗದು. ಅರ್ಥವೇನು ಭಟ್ಟರೇ ಅಂತ ಅಲ್ಲಿ ಕೇಳಿದರೆ ’ಯಾವನಿಗ್ಗೊತ್ತು’ ಅಂದರು, ಇಲ್ಲಿ ತಮ್ಮನ್ನು ತಾವೇ ಎಬುಡಾ ತಬುಡಾ ಅಂದಿರುವುದರಿಂದ ಕೇಳುಗರು ಮಿಕ್ಸೀಲಿ ಬ್ರೈನನ್ನು ಚಟ್ನಿ ಮಾಡಿಕೊಳ್ಳಬೇಕಾಗಿಲ್ಲ. ಕಾಯ್ಕಿಣಿ ’ಗಮನವ ಸೆಳೆಯುವ’ ಗೀತೆಯಲ್ಲಿ ಗಮನ ಸೆಳೆಯುತ್ತಾರೆ. ಕೌತುಕ, ಉಸಾಬರಿ ಎಂಬಂಥ ಪದಗಳನ್ನು ಚಿತ್ರಗೀತೆಗಳಿಗೆ ಹೊಸದಾಗಿ ನೀಡಿದ್ದಾರೆ. "ಅಚ್ಚರಿಯೇನಿದೆ ಅಕ್ಕರೆಯಾದರೆ?!" "ಕನಸಿನ ಪರಿವಿಡಿ ಪುಟವಿದೆ ಕಣ್ಣ ಮುಂದೆ" ಎಂಬಂಥ ಮುದಗೊಳಿಸುವ ಸಾಲುಗಳೂ ಇವೆ.

~ ದರ್ಶನ್ ಆಕ್ಷನ್ ಪ್ರಾಸಬದ್ಧವೇನೋ ಸರಿ, ಕಥೆಗೆಷ್ಟು ಬೇಕೋ ಅಷ್ಟಿದ್ದರೆ ಸಾಕಿತ್ತು ಅನ್ನಿಸದಿರದು ಚಿತ್ರದ ಫೈಟುಗಳನ್ನು ನೋಡಿದರೆ. ಒಂದೆರಡು ಫೈಟ್ಸು ಕಮ್ಮಿಯಿದ್ದಿದ್ದರೆ ಅಥವ ಚಿಕ್ಕ ಫೈಟ್ಸು ಇದ್ದಿದ್ದರೂ ಚಿತ್ರ ಚುರುಕಾಗಿರುತ್ತಿತ್ತು ಅನಿಸಿತು.

~ ಹೆಚ್.ಸಿ.ವೇಣು ಛಾಯಾಗ್ರಹಣ ಚಿಂಗಾರಿಯ ಪ್ಲಸ್ ಪಾಯಿಂಟ್. ಸ್ವಿಜರ್ ಲ್ಯಾಂಡ್ ಇರಲಿ, ಕರ್ನಾಟಕವಿರಲಿ ಅವರ ಕೈಚಳಕದಿಂದ ಪ್ರತೀ ಫ್ರೇಮೂ ಸೊಗಸಾಗಿ ಮೂಡಿಬಂದಿದೆ. ಹೆಚ್ಚು ಹೆಚ್ಚು ಕ್ರೇನ್ ಶಾಟ್ ಗಳ ಬಳಕೆ ಸ್ವಿಸ್ ಸೊಬಗನ್ನು ಇನ್ನೂ ಚಂದಗಾಣಿಸಿದೆ. ಮುಖ್ಯವಾಗಿ ದರ್ಶನ್ ತನಗೆ ಸಿಕ್ಕ ಮೆಮರಿಕಾರ್ಡ್ ನ್ನು ಒಬ್ಬ ಪಾರ್ಕ್ ನಲ್ಲಿ ಕುಳಿತವನ ಬಳಿ ಲ್ಯಾಪ್ ಟಾಪ್ ಈಸಿಕೊಂಡು ನೋಡುತ್ತಿರುವಾಗಿನ ಶಾಟ್ ಅಥವ ಅಲ್ಲಿ ತನ್ನ ಕನ್ನಡ ಗೆಳೆಯನ ಬಳಿ ಮಾತಾಡುವಾಗದ ದೃಶ್ಯದ ಉದಾಹರಣೆ ಕೊಡಬಹುದು.’ಗಮನವ ಸೆಳೆಯುವ’ ಹಾಡಿನಲ್ಲಿ ದರ್ಶನ್ ಕುದುರೆಯ ಮೇಲೆ ಬರುವ ಸ್ಲೋ ಮೋಶನ್ ಶಾಟ್ ಪಲ್ಲವಿಯ ಮೊದಲ ಬೀಟ್ ಗೆ ತಕ್ಕುದಾಗಿದ್ದು ಅಭಿಮಾನಿಗಳಿಗೆ ರಸದೂಟದಂತಿದೆ.

~ ಚಿತ್ರನಿರೂಪಣೆಗೆ ಹರ್ಷ ಬಳಸಿರುವುದು, ಇಂಟರ್ಮೀಡಿಯೇಟ್ ಫ್ಲಾಶ್ ಬ್ಯಾಕ್ಸ್ ತಂತ್ರ. ಈ ಕಥೆಗೆ ಚೆನ್ನಾಗಿ ಹೊಂದಿಕೊಂಡಿದೆ. ಕುತೂಹಲ ಉಳಿಸಿಕೊಳ್ಳುತ್ತದೆ (ಕ್ಲೈಮಾಕ್ಸ್ ಭಾಗವನ್ನು ಹೊರತುಪಡಿಸಿ)

chingari-wall-07

~ ಚಿತ್ರಕಥೆ ಎಂಬ ಆಯುಧದಿಂದ ಕಥೆಯ, ನಿರೂಪಣೆಯ ಎಂಥ ಲೋಪವನ್ನು ಕೂಡ ನಿವಾರಿಸಿಕೊಳ್ಳಬಹುದು. ಚಿತ್ರದ ಮೊದಲ ಸನ್ನಿವೇಶವೊಂದರಲ್ಲಿ ಶತ್ರುವೊಬ್ಬ ಬಿಸಿನೆಸ್ ಮ್ಯಾನ್ ಒಬ್ಬನ ಕುತ್ತಿಗೆಗೆ ಕತ್ತಿಯಿರಿಸಿ ಕೈಯಲ್ಲಿ ಪಿಸ್ತೂಲ್ ಇರುವ ದರ್ಶನ್ ನನ್ನು ಹೆದರಿಸಿದಾಗ, ದರ್ಶನ್ ಕಣ್ಣು ಹೊಡೆದು ಆ ಶತ್ರುವಿನ ಹಣೆಗೆ ಸರಿಯಾಗಿ ಗುರಿಯಿಟ್ಟು ಆತನಿಗೆ ಒಂದು ಸೆಕೆಂಡೂ ನೀಡದಂತೆ ಸಾಯಿಸಿರುತ್ತಾನೆ. ಕ್ಲೈಮಾಕ್ಸ್ ನಲ್ಲಿ ಹೀರೋಯಿನ್ನ್ ಕುತ್ತಿಗೆಗೆ ವಿಲನ್ ಕತ್ತಿಯಿರಿಸಿದಾಗ ಕೈಯ್ಯಲ್ಲಿ ಪಿಸ್ತೂಲ್ ಇದ್ದರೂ ಶೂಟ್ ಮಾಡುವುದಿಲ್ಲ. ಅದಕ್ಕೆ ಒಂದೆರಡು ಸನ್ನಿವೇಶಕ್ಕೂ ಮೊದಲೇ ದರ್ಶನ್ ನ ಕನಸಲ್ಲಿ ಅಂತದ್ದೇ ದೃಶ್ಯ ಮೂಡಿ, ಶೂಟ್ ಮಾಡಿದಾಗ ವಿಲನ್ ಕತ್ತಿಯಿಂದ ಹೀರೋಯಿನ್ನಳ ಕತ್ತನ್ನು ಇರಿದಿರುತ್ತಾನೆ.
ಅದು ನೆನಪಿಗೆ ಬಂದದ್ದಿರಿಂದ ಮತ್ತು ತಲೆಗೆ ಪೆಟ್ಟು ಬಿದ್ದಿದ್ದರಿಂದ ಶೂಟ್ ಮಾಡುವುದಿಲ್ಲ ಅಂತ ಲಾಜಿಕ್ ಜೋಡಿಸಲಾಗಿದೆ.

~ ಪಕ್ಕಾ ಹಾಲಿವುಡ್ ಚಿತ್ರವೊಂದನ್ನು ಕನ್ನಡಕ್ಕೆ ಹೇಗೆ ಇಳಿಸಬಹುದು ಅನ್ನುವುದಕ್ಕೆ ಒಳ್ಳೆಯ ಉದಾಹರಣೆ "ಚಿಂಗಾರಿ". ಟೇಕನ್ ಚಿತ್ರ ನೋಡಿರದ ಟೈಮ್ಸ್ ಆಫ್ ಇಂಡಿಯಾ ವಿಮರ್ಶಕ, ಇದನ್ನು ಒಳ್ಳೇ ಹಾಲಿವುಡ್ ಚಿತ್ರದಂತಿದೆ ಅಂದಿದ್ದು ಅದಕ್ಕೆ ಸಾಕ್ಷಿ. ನೇಟಿವಿಟಿಗೆ ತಕ್ಕಂತೆ ಬದಲಾಯಿಸಿದ್ದೇವೆ ಅಂತ ಬೋಗಿಗಟ್ಟಲೆ ಬಿಡುವ ಹಲ ನಿರ್ದೇಶಕರಿಗೆ ಕಡ್ಡಾಯವಾಗಿ ಚಿಂಗಾರಿ ತೋರಿಸಬೇಕು.

~ ಇನ್ನು ಚಿತ್ರದ ಶೀರ್ಷಿಕೆ. ಇದು "ಬಂಗಾರಿ" ಯಾಗಿದ್ದರೂ "ಸಿಂಗಾರಿ" ಆಗಿದ್ದರೂ ಅಂಥ ಬದಲಾವಣೆ ಇಲ್ಲ. ಬರೀ ಶೀರ್ಷಿಕೆಯಲ್ಲಿ ಧಮ್ ಇರಬೇಕು ಎಂಬ ಸೂತ್ರಕ್ಕೆ ಅಂಟಿಕೊಂಡವರಂತೆ ಈ ಶೀರ್ಷಿಕೆ ನೀಡಲಾಗಿದೆ. ಬಹುಶಃ ಕನ್ನಡ ಚಿತ್ರರಂಗದ ಸಧ್ಯದ ಟ್ರೆಂಡ್ ಇದು. ಪ್ರೇಕ್ಷಕ ಮಹಾಶಯ ಸಹಿಸಿಕೊಳ್ಳದೇ ವಿಧಿಯಿಲ್ಲ.

~ ಬರೋಬ್ಬರಿ ಎಂಟು ಕೋಟಿ ಖರ್ಚು ಮಾಡಿ ತಯಾರಾದ ಪ್ರಾಡಕ್ಟ್ ಚಿಂಗಾರಿ. ಆದರೂ ಚಿತ್ರದ ಶೀರ್ಷಿಕೆ ಬರುವಾಗ ಟೆಕ್ನೀಷಿಯನ್ ಗಳ ಹೆಸರುಗಳನ್ನು ತಪ್ಪು ತಪ್ಪು ಕನ್ನಡದಲ್ಲಿ ಓದಬೇಕಾದಾಗ ಬೇಸರವಾಗದಿರದು. ಶ್ರದ್ಧೆಯ ಕೊರತೆಯಿದೆಯಾ ಅಂತ ಪ್ರೇಕ್ಷಕನಿಗೆ ಅನ್ನಿಸದಿರದು.

~ "ಟೇಕನ್" ಬಗ್ಗೆ ಟೈಟಲ್ ನಲ್ಲಾದರೂ ಉದಾಹರಿಸಬೇಕಾದ್ದು ಪ್ರೋಫೆಶನಲಿಸ್ಮ್ ಅಲ್ಲವೇ?

~  ನೂರ ಎಂಭತ್ತು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿರುವ ಚಿಂಗಾರಿ ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಹಿಟ್ ಗ್ಯಾರೆಂಟಿ. ನೀವು ದರ್ಶನ್ ಅಭಿಮಾನಿಯಲ್ಲದಿದ್ದರೆ ಒಮ್ಮೆ ನೋಡಬಹುದಾದ (ನೋಡಲೇ ಬೇಕಾದದ್ದೇನಲ್ಲ) ಒಳ್ಳೆಯ ಚಿತ್ರ. (ಬಾಲಿವುಡ್ಡಿನವರೇ ಬೇಜಾನ್ ಕಾಪಿ ಮಾಡೋಲ್ವೇನ್ರಿ ಅನ್ನೋ ರಿಯಾಯಿತಿ ಮೇರೆಗೆ)

ಟಿಪ್ಪಣಿಗಳು
  1. ಅನಾಮಿಕ ಹೇಳುತ್ತಾರೆ:

    Ranjith…
    oLLe vimarshe….

  2. Roopa ಹೇಳುತ್ತಾರೆ:

    Hi Ranjith,
    OLLe Vimarshe….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s