ನಿಮ್ಮ ಮನೆಯಲ್ಲಿ ಓದಬಲ್ಲಂಥ ಮಕ್ಕಳಿದ್ದರೆ ಅನುಪಮಾ ನಿರಂಜನ ಬರೆದ ’ದಿನಕ್ಕೊಂದು ಕಥೆಗಳು ಸೀರೀಸ್" ಓದಲು ನೀಡಿ.
ಒಟ್ಟೂ ಹನ್ನೆರಡು ಪುಸ್ತಕಗಳು. ಒಂದು ಪುಸ್ತಕ ಶುರು ಮಾಡಿದರೆ ಮಕ್ಕಳೇ ಪೀಡಿಸಿ ಕೇಳುವಂಥ ಕಥೆಗಳಿವೆ. ಮಜವಾದ ಕಥೆಗಳ ಜತೆಗೆ ನೀತಿಯುಕ್ತವಾಗಿಯೂ ಉಳ್ಳಂಥ ಪುಟ್ಟ ಪುಟ್ಟ ಕಥೆಗಳು. ಮಕ್ಕಳ ಊಹಿಸಬಲ್ಲಂಥ, ಓದಿ ಅರ್ಥಮಾಡಿಕೊಳ್ಳಬಲ್ಲಂಥ, ಗ್ರಹಿಸಿಕೊಳ್ಳುವಂಥ ಕಲೆ ವಿಪರೀತ ಅಭಿವೃದ್ಧಿಯಾಗುತ್ತದೆ. ಮಕ್ಕಳ ಮೆದುಳಿಗೆ ಕಲ್ಪನೆಯ ರೆಕ್ಕೆಗಳು ಮೂಡುವುದು ಇಂಥದ್ದನ್ನು ಓದಿಯೇ. ದೃಶ್ಯಮಾಧ್ಯಮಗಳು ಈ ರೀತಿಯ ಕಲ್ಪನೆಯ ಅಭಿವೃದ್ಧಿಗೆ ಅವಕಾಶ ನೀಡುವುದಿಲ್ಲ ಯಾಕೆಂದರೆ ಕಥೆ ನಡೆವಂಥ ಜಗತ್ತು ಕಾಣ್ತಾವೆ. ಆದರೆ ಕಥೆ ಪುಸ್ತಕ ಹಾಗಲ್ಲ, ಸಾಲುಗಳು ಆ ಕಥಾಜಗತ್ತಿಗೆ ದ್ವಾರವಿದ್ದಂತೆ, ಪದಗಳ ಮೂಲಕ ಹೆಜ್ಜೆಯಿಡುತ್ತ ಮಕ್ಕಳು ಆ ಲೋಕದೊಳಗೆ ಪ್ರವೇಶಿಸುತ್ತವೆ. ಅದೂ ಅಲ್ಲದೇ ನೀತಿ, ನಿಯತ್ತು, ಶ್ರದ್ಧಾ ಪಾಠ, ಸತ್ಯದ ಮಹಿಮೆ ಇವೆಲ್ಲವೂ ಟೀವಿ ಸೀರಿಯಲ್ಲುಗಳಲ್ಲಿ, ಹೊರಜಗತ್ತಿನಲ್ಲಿ ಸಿಗುವುದು ಕಡಿಮೆ. ನಾವು ಹೇಳಿಕೊಡುವುದು ಮಕ್ಕಳಿಗೆ ರಂಜನೀಯವೆನಿಸವು. ಕಥೆಗಳೇ ಒಳ್ಳೇ ಟೀಚರ್ ನಂತೆ ಇಂಥ ಸಮಯದಲ್ಲಿ ಸಹಾಯ ಮಾಡುತ್ತದೆ. ಮಕ್ಕಳನ್ನು ತನ್ನ ಲೋಕದೊಳಗೇ ಸೆಳೆದು ಅವಕ್ಕೆ ಕಾನ್ಶಿಯಸ್ ಆಗಿ ಅರಿವಾಗದಂತೆ ಪಾಠ ಹೇಳುತ್ವೆ.
ಅಕ್ಬರ್ ಬೀರ್ ಬಲ್ ಕಥೆಗಳೂ, ಈಸೋಪನ ನೀತಿಕಥೆಗಳೂ, ತೆನಾಲಿ ರಾಮನ ಕಥೆಗಳೂ ಹಾಗೆನೆ ಇದ್ದರೂ ಅವೆಲ್ಲಾ ಟೀವಿಯಲ್ಲಿ ಬರುತ್ತವಾದ್ದರಿಂದ ಕಾರ್ಟೂನ್ ನೆಟ್ ವರ್ಕ್ ನಂತಹ ಚಾನೆಲ್ ಗಳಲ್ಲಿ ಮಕ್ಕಳು ನೋಡಿಯೇ ಇರ್ತಾವೆ.
ನಿಜಕ್ಕೂ ಮಕ್ಕಳ ಭವಿಷ್ಯಕ್ಕೆ ಕಥೆ ಓದುವುದಕ್ಕೆ ಮೀಸಲಿಟ್ಟ ಸಮಯವೂ, ವಿನಿಯೋಗಿಸಿದ ಹಣವೂ ಒಳ್ಳೆಯ ಇನ್ವೆಸ್ಟ್ ಮೆಂಟ್.
ಮುಂದಿನ ತಲೆಮಾರು ಇಂಥ ಒಳ್ಳೆ ಪುಸ್ತಕ ಮಿಸ್ ಮಾಡಿಕೊಳ್ಳುತ್ತೇನೋ ಎಂಬ ಭಯಮಿಶ್ರಿತ ಕಾಳಜಿಯಿಂದ ನನ್ನ ಈ ರೆಕಮೆಂಡೇಶನ್ ಪೋಸ್ಟ್ ಮಾಡ್ತಿದ್ದೇನೆ.
*******
ನಾನು ಹಾಸ್ಟೆಲ್ ನಲ್ಲಿ ಓದುತ್ತಿದ್ದ ಸಮಯ. ಜತೆಗಾರರೆಲ್ಲರೂ ಕೋಲಾರದಿಂದ ಬಂದವರು. ತೆಲುಗು ಭಾಷೆ ಅವರಿಗೆ ಕರತಲಾಮಲಕ. ಸಿನೆಮಾ ಬಗ್ಗೆ ಮಾತಾಡುವಾಗೆಲ್ಲಾ ರಾಜೇಂದ್ರ ಪ್ರಸಾದ್, ಬ್ರಹ್ಮಾನಂದಂ ರ ಹಾಸ್ಯ ದೃಶ್ಯಗಳನ್ನು ವಿವರಿಸುತ್ತಿದ್ದರೆ ಬಿದ್ದು ಬಿದ್ದು ನಗುವಂತಾಗುತ್ತಿತ್ತು. ಅವರ ಹಾಸ್ಯ ಸಿನೆಮಾಗಳನ್ನು ನೋಡಲಿಕ್ಕಾಗಿಯೇ ನಾನು ತೆಲುಗು ಭಾಷೆ ಕಲಿತಿದ್ದಾಯಿತು. ಸ್ವಲ್ಪ ವರ್ಷಗಳ ಬಳಿಕ ವಡಿವೇಲು, ವಿವೇಕ್ ರ ಹಾಸ್ಯ ದೃಶ್ಯಗಳಿಗಾಗಿ ತಮಿಳೂ ಕಲಿತಿದ್ದಾಯಿತು. ಈಗ ಮಲೆಯಾಳಮ್ ಚಿತ್ರಗಳ ಕತೆಗಳ ಸೊಗಸನ್ನು ಕೇಳಿ ಮಲೆಯಾಳಮ್ ಕೂಡ ಕಲಿಯಬೇಕನ್ನಿಸುತ್ತಿದೆ.
ಒಂದು ವೇಳೆ ಆ ಚಿತ್ರಗಳು ಕನ್ನಡಕ್ಕೆ ಡಬ್ ಆಗಿದ್ದಿದ್ದರೆ ನಾನು ತೆಲುಗು, ತಮಿಳು ಕಲಿವ ಅಗತ್ಯತೆ ಇತ್ತಾ? ಮಲೆಯಾಳಮ್ ಕಲಿವ ಆಸೆ ಹುಟ್ಟುತ್ತಿತ್ತಾ?
ಹಾಗಂತ ನಾನು ಡಬ್ಬಿಂಗ್ ಪರವಾ? ಅಥವ ವಿರೋಧಿಯಾ? ಈಗಲೂ ಡಬ್ಬಿಂಗ್ ಬಂದರೆ ಮಲೆಯಾಳಮ್ ಕಲಿವ ಆಸೆಯನ್ನು ಕೈಬಿಡುತ್ತೇನೆ
ಮತ್ತು ಡಬ್ಬಿಂಗ್ ಬರದಿದ್ದರೆ ಮಲೆಯಾಳಮ್ ಕಲಿಯುತ್ತೇನೆ.
ಮತ್ತು ನನಗೆ ಬರುವ ಹಿಂದಿ ಭಾಷೆಯ, ತಮಿಳಿನ, ತೆಲುಗಿನ, ಇಂಗ್ಲೀಷ್ ನ ಯಾವ ಡಬ್ಬಿಂಗ್ ಆದ ಸಿನೆಮಾವನ್ನೂ ನೋಡಲಾರೆ. ಕನ್ನಡ ಮಾತಾಡುವ ಆರ್ನಾಲ್ಡ್ ಶ್ವಾಜ್ನಗರ್ ಚಿತ್ರ, ಕನ್ನಡ ಮಾತಾಡುವ ವಿಲ್ ಸ್ಮಿತ್ ಚಿತ್ರಗಳು ನನಗೆ ಅಪಹಾಸ್ಯ ಅನ್ನಿಸುತ್ತದೆ. ಹಾಗೇನೆ ಮಮ್ಮುಟ್ಟಿ, ಮೋಹನ್ ಲಾಲ್ ಮಾತಾಡುವ ಕನ್ನಡ ನನಗೆ ವಿಚಿತ್ರ ಅನ್ನಿಸದು, ಕಾರಣ ಮಲೆಯಾಳಿ ಭಾಷೆ ಬರುವುದಿಲ್ಲ. ಮಲೆಯಾಳಮ್ ನ ಸ್ಲಾಂಗ್, ಅದರ ಭಾಷೆಯ ಏರಿಳಿತದ ಪರಿಚಯವಿಲ್ಲವಾದ್ದರಿಂದ.
ನಾನು ಡಬ್ಬಿಂಗ್ ಪರವಾ ವಿರೋಧಿಯಾ? ಗೊತ್ತಿಲ್ಲ.
ಒಂದಂತೂ ನಿಜ. ನಾನು ಚಿತ್ರ ಚೆನ್ನಾಗಿದ್ದರೆ ನೋಡ್ತೇವೆ, ಇಲ್ಲಾಂದರೆ ಇಲ್ಲ. ಡಬ್ಬಿಂಗೇ ಆಗಿರಬಹುದು ಅಥವಾ ಕನ್ನಡ ಚಿತ್ರವೇ ಆಗಿರಬಹುದು- ಹೀಗೆ ಅನ್ನುವವರ ಪರ.
****
ಒಬ್ಬ ಖ್ಯಾತ ಚಿತ್ರಸಾಹಿತಿ ಇದ್ದಾನೆ ಅಂದುಕೊಳ್ಳೋಣ. ಆತನ ಕೈಗೆ ಕಾಲಿಗೆ ಅಸಿಸ್ಟೆಂಟುಗಳು. ಆತ ಬರೆದರೆ ಮ್ಯೂಸಿಕ್ ಸೀಡಿ ಗೆ ಒಳ್ಳೆ ಸೇಲು. ಚಿತ್ರಕ್ಕೆ ಒಳ್ಳೆ ಜಾಹೀರಾತು. ಕೆಲವೊಮ್ಮೆ ಚಿತ್ರಕ್ಕಿಂತ ಆತನ ಗೀತೆಗಳೇ ಬಲು ಮಜ ಅನ್ನಿಸುತ್ತದೆ ಜನರಿಗೆ. ಹೀಗಿರುವಾಗ ಆತ ತನ್ನ ಸಂಭಾವನೆಯನ್ನು ಹಿಮಾಲಯದ ತುದಿಗೆ ಏರಿಸುತ್ತಾನೆ. ನಿರ್ಮಾಪಕರೂ ತಲೆ ಕೆರೆದುಕೊಳ್ಳದೇ ಕೈಬಿಚ್ಚಿ ಲಕ್ಷವೆಂದರೂ ನೀಡುತ್ತಾರೆ ಅಂದುಕೊಳ್ಳೋಣ. ಹೀಗೇ ನಡೆಯುತ್ತಿರುತ್ತದೆ.
ಆದರೆ ಈ ಬರವಣಿಗೆ ಕೆಲವೊಮ್ಮೆ ಒಲಿಯುವುದಿಲ್ಲ, ತಲೆಯನ್ನು ಪರಾಪರಾ ಕೆರೆದುಕೊಂಡರೂ ಹೊಳೆಯುವುದಿಲ್ಲ. ಖಾಲಿ ಹಾಳೆಗಿಂತ ಒಳ್ಳೆಯ ಕವನ ಇಲ್ಲ ಅಂತ ಬರೆಯಬಹುದಾದರೂ ಅದಕ್ಕೆ ಸಂಭಾವನೆ ಸಿಗುವುದಿಲ್ಲ.
ಹೀಗಿರುವಾಗ ಆ ಗುರುವಿಗೊಬ್ಬ ಅಸಿಸ್ಟೆಂಟು. ಗುರುವುಗಿಂತ ಅದ್ಭುತವಾಗಿ ಬರೆಯಬಲ್ಲ. ಅದು ಗುರುವಿಗೂ ಗೊತ್ತು. ಆದರೆ ಆತ ಒಂದು ಹಾಡು ಬರೆದರೆ ಆತನಿಗೆ ಸಿಗುವುದು ಗರಿಷ್ಟವೆಂದರೆ ೫ ರಿಂದ ಹತ್ತು ಸಾವಿರ. ಕಾರಣ ಆತನಿನ್ನೂ ಹೊಸಬ. ಹೆಸರಿಲ್ಲ. ಹೀಗಿರುವಾಗ ಗುರುವಿಗೊಮ್ಮೆ ಐಡಿಯಾ ಹೊಳೆಯುತ್ತದೆ. ’ಶಿಷ್ಯಾ, ನೀನು ಬರಿ, ನಿರ್ಮಾಪಕರ ಬಳಿ ನಾನು ಬರೆದಿದ್ದು ಅಂತೇನೆ. ನಿರ್ಮಾಪಕ ಕೊಟ್ಟ ಲಕ್ಷವನ್ನು ನಿನಗೆ ಕೊಡ್ತೇನೆ, ಸರಿಯಾ?’ ಅಷ್ಟು ದೊಡ್ಡ ಅಮೌಂಟು ಕನಸಿನಲ್ಲೂ ಎಣಿಸಿರದ ಶಿಷ್ಯನು ಹಿಂದೆ ಮುಂದೆ ಬರೆದು ಬರೆದು ಕೊಡುತ್ತಾನೆ. ಲಕ್ಷ ಲಕ್ಷ ಎಣಿಸುತ್ತಾನೆ.
ಗುರು ಖುಷ್, ಶಿಷ್ಯ ಖುಷ್, ನಿರ್ಮಾಪಕ ಖುಷ್, ಜನರೂ ಖುಷ್!
ಸರ್ವೇ ಜನಾಃ ಸುಖಿನೋ ಭವಂತಿ!
ಇದು ಕಥೆ.
ಒಂದು ವೇಳೆ ಇದು ಯಾವ ವ್ಯಕ್ತಿ, ಘಟನೆ, ಸ್ಥಳಕ್ಕೆ ಹೋಲಿಕೆಯುಳ್ಳದ್ದಾದರೆ ಅದು ಕೇವಲ ಕಾಕತಾಳೀಯ!
******
[…] ನೀಲಿ ಹೂವು […]