ಸಿನಿ ಬಿಟ್ಸ್…!

Posted: ನವೆಂಬರ್ 20, 2012 in ಸಿನೆಮಾ

(ಈ ಲೇಖನ “ಪೃಥ್ವಿ” ಮ್ಯಾಗಜೀನ್ ಗಾಗಿ ಬರೆದದ್ದು)

ಭಟ್ಟರು, ಉಡಾಫೆ ಮತ್ತು ವಿನಯ!

ಜಯಂತ್ ಕಾಯ್ಕಿಣಿಯವರ ಹಾಡುಗಳು ಅಂದರೆ ಕಾಡಿನ ಮಧ್ಯೆ ಸಿಕ್ಕುವ ಅಪ್ಪಟ ಶುದ್ಧ ನೀರು, ನನ್ನದು ಬಿಡಿ, ಎಲ್ಲಂದರಲ್ಲಿ ಸಿಗಬಹುದಾದ ಬಿಸ್ಲೇರಿ” ಅಂತ ಹೇಳಿ ಒಮ್ಮೆ ತಮ್ಮ ವಿನಯ ಮೆರೆದಿದ್ದ ಯೋಗರಾಜ್ ಭಟ್ಟರು ಈಗ ಮತ್ತೊಮ್ಮೆ ಸಂಗೀತ ಬ್ರಹ್ಮ ಹಂಸಲೇಖಾ ಎದುರು ನಾವೆಲ್ಲಾ ಏನೂ ಅಲ್ಲ ಅಂತ ಹೇಳಿ ತಾವಿನ್ನೂ ಸಾಧಿಸುವುದು ತುಂಬಾ ಇದೆ ಅನ್ನುವುದನು ಸೂಚ್ಯವಾಗಿ ಹೇಳಿದ್ದಾರೆ. ಭಟ್ಟರು ಅಂದರೆ ತಮ್ಮ ಹಾಡುಗಳಲ್ಲಿನ, ಸಂಭಾಷಣೆಯಲ್ಲಿನ ಉಡಾಫೆಯ ಲೇಪಕ್ಕೆ ಹೆಸರುವಾಸಿ. ಆ ಉಡಾಫೆಯನ್ನು ತಮ್ಮ ನಿರ್ದೇಶನದಲ್ಲಿ ಕಥೆಗೂ ವಿಸ್ತರಿಸಿದಾಗ ಪ್ರೇಕ್ಷಕರು ಎಂಥಾ ಗೂಸಾ ಕೊಟ್ಟರೆಂದರೆ ಪುನೀತ್, ಐಂದ್ರಿತಾ, ಅದ್ಭುತ ಹಾಡುಗಳು, ಸುಂದರ ದೃಶ್ಯಾವಳಿ ಇದ್ದರೂ “ಪರಮಾತ್ಮ” ಚಿತ್ರ ನೆಲಕ್ಕಚ್ಚಿತ್ತು.
ಈಗ ಬಹುನಿರೀಕ್ಷೆಯ “ಡ್ರಾಮಾ” ಬರಲಿದೆ. ಎಂದಿನಂತೆ ಮಾತಲ್ಲದೇ, ಕತೆಯೂ ಇದೆ ಅನ್ನುತ್ತಾ ಮಾತುಕತೆಯಾಡುತ್ತಿದ್ದ ಭಟ್ಟರು, ಹಂಸ್ ಸಾವಿರಕ್ಕೂ ಹೆಚ್ಚು ಹಾಡು ಬರೆದವರು, ಜಾನಪದ ಅರೆದು ಕುಡಿದವರು ಅಂಥವರ ಮುಂದೆ ಐವತ್ತು ಅರವತ್ತು ಹಾಡುಗಳನ್ನು ಬರೆದ ತಾವೇನೂ ಅಲ್ಲ ಅಂದರು.

ಹಿರಿಯ ಲೇಖಕರೊಬ್ಬರು “ಬರೆಯುವಾಗ ಆತ್ಮವಿಶ್ವಾಸ ಅಹಂಕಾರದಷ್ಟು ಎತ್ತರವಿರಬೇಕು, ಬರೆದಿದ್ದನ್ನು ತೋರುವಾಗ ವಿನಯ, ವಾಮನ ಬಲಿಯನ್ನು ತುಳಿಯಲು ಹೇಗೆ ಬೆಳೆಯುತ್ತಾನೋ ಹಾಗಿರಬೇಕು” ಅಂದಿದ್ದರು.

ಭಟ್ಟರು ಅಂತದ್ದೇ ಹಾದಿಯಲ್ಲಿ ನಡೆಯುತ್ತಿದ್ದಾರಾ!

****

ನೀವೇ ಹೇಳಿ ಸಾರ್!

ಒಂದಿಷ್ಟು ಸಮಯದ ಹಿಂದೆ, ಎಸ್. ನಾರಾಯಣ್ ಚಿತ್ರರಂಗ ಬಿಡುತ್ತೇನೆ ಎಂದು ಹೆದರಿಸಿದ್ದರು. ಅವರ ಸಮಯಬಧ್ಧತೆ, ಶಿಸ್ತುಪಾಲನೆ ಗಮನಿಸಿದ ಗಾಂಧಿನಗರಿಯ ಮಂದಿ, ಇನ್ನು ನಾರಾಯಣ್ ವಾಪಸ್ಸು ಬರುವುದಿಲ್ಲ, ಆ ವಿಷಯದಲ್ಲಿ ಅವರು ಕೊಟ್ಟ ಮಾತಿಗೆ ಕಟ್ಟುನಿಟ್ಟು ಅಂತಲೇ ಭಾವಿಸಿದ್ದರು. ಅದು ಸುಳ್ಳಾದದ್ದು ಹಳೆಯ ಸುದ್ಧಿಯಾತು. ಈಗ ಅವರು ರಮೇಶ್, ಮೋಹನ್ ಜೊತೆಯಲ್ಲಿ ಹಾಸ್ಯ ಚಿತ್ರವೊಂದನ್ನು ಮಾಡಲು ತಯಾರಾಗಿದ್ದಾರೆ. “ಕುರಿಗಳು ಸಾರ್ ಕುರಿಗಳು” ಚಿತ್ರದಲ್ಲಿ ಈ ಕಾಂಬಿನೇಶನ್ ಕೊನೆಯಬಾರಿ ಕಾಣಿಸಿಕೊಂಡಿತ್ತು. ಈ ಬಾರಿ ಜೊತೆಯಾಗಲಿರುವ ಚಿತ್ರಕ್ಕೆ ಏನು ಹೆಸರು ಸಾರ್ ಅಂತ ಕೇಳಿದರೆ, ಕುರಿಯಾಯ್ತು ಕೋತಿಯಾಯ್ತು, ಇನ್ನೂ ಬೇಜಾನ್ ಪ್ರಾಣಿಗಳಿವೆಯಲ್ಲಾ ತೊಂದರೆಲ್ಲ ಅನ್ನುವಂತೆ ನಕ್ಕರೂ, ನೀವೇ ಏನಾದ್ರೂ ಹೇಳಿ ಸಾರ್ ಅಂತ ಪ್ರೇಕ್ಷಕರನ್ನೇ ಕೇಳ್ತಿದಾರೆ!

***

ಬಿಸಿ ಬಿಸಿ ದೋಸೆ

ಲೂಸ್ ಮಾದ ಯೋಗಿ ಮತ್ತು ಬೆಡಗಿ ರಮ್ಯಾ ಜೋಡೀನಾ ಅಂತ ಮೂಗೆಳೆದಿದ್ದರು ಆಗ. ಅದು ವಿಜಯ ಪ್ರಸಾದ್ ನಿರ್ದೇಶನದ ಮೊದಲ ಚಿತ್ರ, ಸಿದ್ಲಿಂಗು. ಚಿತ್ರರಂಗದಲ್ಲಿ “ಮಾಮೂಲಿ ಕೋತಿಯ ತಾರುಣ್ಯ ಗೀತೆ”ಯಂತಿದ್ದ ಸಿನೆಮಾಗಳೇ ಬರುತಿದ್ದ ಸಮಯ. ಸಿದ್ಲಿಂಗು ತನ್ನ ವಿಭಿನ್ನ ನಿರೂಪಣೆ, ಡೈಲಾಗ್ ಬಾಜಿ, ಸ್ವಲ್ಪ ವಿಚಿತ್ರ ಅನ್ನಿಸುವ ಕತೆಂದ ಗೆದ್ದಿತ್ತು. ಈಗ ಅದೇ ವಿಜಯಪ್ರಸಾದ್ ಮತ್ತೆ ಎಲ್ಲರೂ ಹುಬ್ಬೇರಿಸುವಂಥ ಕಾಂಬಿನೇಷನ್ ತರುತ್ತಿದ್ದಾರೆ. ಚಿತ್ರಕ್ಕೂ “ನೀರ್ ದೋಸೆ” ಅಂತ ಹೆಸರಿಟ್ಟಿದ್ದಾರೆ. ನೀರ್ ದೋಸೆಯಲ್ಲಿ ನೀರೆಯಾಗಿ ರಮ್ಯಾ ಮತ್ತು ದೋಸೆ ಹುಯ್ಯುವ ನಾಯಕನಾಗಿ ಜಗ್ಗೇಶ್ ಇದ್ದಾರೆ. ಜೊತೆಗೆ ನಂಜಿಕೊಳ್ಳಲು ಮಸಾಲೆಭರಿತ ಚಟ್ನಿ, ಐಂದ್ರಿತಾ ರೇ.

ಚಿತ್ರದ ಟಿಕೆಟ್ಟು, ಬಿಸಿ ಬಿಸಿ ದೋಸೆ ಹಾಗೆ ಖರ್ಚಾಗುತ್ತದಾ ಅಂತ ಕಾಲವೇ ಹೇಳಬೇಕು!

***

ನಟನೆ ನನ್ನ ಡ್ಯೂಟಿ

ರಾಧಿಕಾ ಚಿತ್ರರಂಗಕ್ಕೆ ಬರದೇ ೬ ವರ್ಷವಾಗಿತ್ತು. ಲಕ್ಕಿ ಚಿತ್ರದ ನಿರ್ಮಾಣದಲ್ಲಿ ಓಡಾಡುತ್ತಿದ್ದಾಗ ನೋಡಿದವರೆಲ್ಲರೂ ಆಕೆ ತನ್ನ ಸೌಂದರ್ಯ ಕಾಪಾಡಿಕೊಂಡು ಬಂದಿದ್ದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರು. ನೀವ್ಯಾವಾಗ ನಟಿಸ್ತೀರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದರು. ಮರೆಗೆ ಸರಿದದ್ದು ಸುಮ್ಮನೆ, ಬೆಳ್ಳಿತೆರೆಯೇ ನಮ್ಮನೆ ಅಂತ ಈಗ ವಾಪಸ್ಸಾಗಿದ್ದಾರೆ. “ಸ್ವೀಟಿ” ಅನ್ನುವ ಚಿತ್ರದಲ್ಲಿನ ಬ್ಯೂಟಿಯಾಗಿ ತಮ್ಮ ಡ್ಯೂಟಿ ಒಪ್ಪಿಕೊಂಡಿದ್ದಾರೆ.

ಮರೆಯಾಗಿ ರಾಧಿಕಾ ಮಾಡಿದ ಅಲ್ಲೋಲಕಲ್ಲೋಲ ಎಲ್ಲರಿಗೂ ಗೊತ್ತಿರುವ ವಿಷಯ. ಪ್ರೇಕ್ಷಕ ಎಲ್ಲವ ಮರೆತು ಬರೀ ನಟನೆ, ಚಿತ್ರ ಮಾತ್ರ ಗಮನಿಸುತ್ತಾನಾ ಅಂತ ಕಾದು ನೋಡಬೇಕು

***

ಹಂಸಲೇಖಾ, ನೀವೂನಾ!

ಯೂಟ್ಯೂಬಿನಲ್ಲಿ ಮದರ್ ರಷ್ಯಾ, ಐರನ್ ಮೈಡನ್ ಅಂತ ಟೈಪ್ ಮಾಡಿ ಸರ್ಚ್ ಕೊಟ್ಟರೆ ಒಂದು ಹಾಡು ಸಿಗುತ್ತದೆ. ಅದು ಒಂದು ರಷ್ಯಾ ದೇಶದ ಗೀತೆ. ಸುಮ್ಮನೆ ಕೇಳಿ ನೋಡಿದಾಗ, ಈ ಹಾಡು ಎಲ್ಲೋ ಕೇಳಿದ್ದೇನಲ್ಲಾ ಅಂತನ್ನಿಸುತ್ತದೆ. ನಮ್ಮ ಮೆದುಳಪದರವನ್ನು ಇನ್ನೂ ಒಂಚೂರು ಕೆದಕಿದಾಗ “ಪುಟ್ನಂಜ” ಸಿನೆಮಾದ ಹಾಡು ನೆನಪಾಗುತ್ತದೆ. ಅದರಲ್ಲಿ, ರವಿಚಂದ್ರನ್ ನಾಯಕಿ ಮೀನಾಗೆ “ದಸರಾ ಬೊಂಬೆ ನಿನ್ನನು ನೋಡಲು ನಮ್ಮೂರಿಂದ ಬಂದೆ ಕಣೇ” ಅಂತ ರೇಗಿಸುವ ಹಾಡೊಂದಿದೆ. ಆಗ ಒಂದು ಮಟ್ಟಕ್ಕೆ ಜನರಿಗೆ ಇಷ್ಟವಾಗಿದ್ದ ಹಾಡದು.
ಕನ್ನಡದ ಬಹುತೇಕ ಸಂಗೀತ ನಿರ್ದೇಶಕರು ಕಾಪಿ ಮಾಡುತ್ತಾರೆ, ಅದು ಗೊತ್ತಿರುವಂಥ ವಿಷಯವೇ. ಸಾಧು ಕೋಕಿಲ ರಂಥವರು ಯಾರಿಗೂ ಗೊತ್ತಾಗದ ಹಾಗೆ ಹೇಗೆ ಕದಿಯಲಿ ಅಂತಲೇ ರಿಸರ್ಚ್ ಮಾಡುತ್ತಾರೆ. ಗುರುಕಿರಣ್ ರಂಥವರು ಹೊಸ ಹಿಂದಿ ಗೀತೆಗಳಿಂದ ರಾಜಾರೋಷವಾಗಿ ಎತ್ತಿಕೊಳ್ಳುತ್ತಾರೆ. ಹರಿಕೃಷ್ಣ, ಇಂಗ್ಲೀಷಿನಿಂದ ಹೇಗಿದೆ ಹಾಗೆಯೇ “ಸ್ಪೂರ್ತಿ”ಗೊಳ್ಳುತ್ತಾರೆ.
ಆದರೆ ಹಂಸಲೇಖ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಬಹಳ ಗೌರವವಿದೆ. ರವಿಚಂದ್ರನ್ ರ ಎಲ್ಲಾ ರೀಮೇಕ್ ಚಿತ್ರಗಳಿಗೆ ಸಂಗೀತ ಕೊಡುತ್ತಾ, ಬೇರೆ ಭಾಷೆಯ ಹಾಡಿನ ರಾಗವನ್ನೇ ಬಳಸಿ ಅಂತ ನಿರ್ಮಾಪಕರುಗಳೇ ತಾಕೀತು ಮಾಡದರೂ ಒಪ್ಪದೇ, ಚಿತ್ರ ರೀಮೇಕ್ ಆದರೂ ಹಾಡು ಇಲ್ಲಿಯವೇ ಆಗಿರಬೇಕು ಅಂತ ಒರಿಜಿನಲ್ಲುಗಳನ್ನು ಕೊಟ್ಟವರು. ದೇಸೀಯತೆ, ಜಾನಪದ ಎಲ್ಲವನ್ನೂ ಮನದಲ್ಲಿ ಕರಗತ ಮಾಡಿಕೊಂಡವರು. ಅವರೂ ಹಾಡುಕೊಡಲು “ರಿಸರ್ಚ್” ಮಾಡಿರುವುದು ನಂಬಲಾಗದ್ದು!

ಆಗ ಈ ಯೂಟ್ಯೂಬ್ ಗಳು, ಗೂಗಲ್ ಗಳೂ ಇದ್ದಿರಲಿಲ್ಲ. ಈಗ ಹಿಂದೆ ಕದ್ದಿದ್ದೂ ತಿಳಿಯದೇ ಹೋಗುವುದಿಲ್ಲ.

ತಮ್ಮ ಹಾಡುಗಳಿಂದ ನಮ್ಮ ಬಾಲ್ಯವನ್ನು ಬೆಳಗಿದ್ದ ಹಂಸಲೇಖಾ ರವರೂ ಹೀಗೆ ಮಾಡುತ್ತಾರೆಂದರೆ, ಚಿತ್ರಗೀತೆ ರಸಿಕರಿಗೆ ನಂಬಲಾಗದ ಸುದ್ಧಿ, ನುಂಗಲಾರದ ತುತ್ತು.

***

ಬರದ ನಾಯಕ

“ಈಗ” ಸುದ್ಧಿಯಾಗಿದ್ದೇ ತಡ, ಅಭಿಮಾನಿಗಳೆಲ್ಲರೂ ಮುಂದಿನದು ಯಾವಾಗ ಅಂತ ಪ್ರಶ್ನಿಸತೊಡಗಿದ್ದಾರೆ ಸುದೀಪ್ ರನ್ನು. “ಬಚ್ಚನ್” ಚಿತ್ರ ಒಂದು ಹಂತಕ್ಕೆ ಮುಗಿದಿದೆ. ಶಶಾಂಕ್ ನಿರ್ದೇಶಕರಾಗಿರುವ ಆ ಚಿತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆದೆ. ತಮ್ಮ ತಮ್ಮನಂತಹ ಶಿಷ್ಯ, ಚಿರಂಜೀವಿ ಸರ್ಜಾ ರನ್ನು ಚಿತ್ರರಂಗದಲ್ಲಿ ನೆಲೆಯೂರಲು ಸಹಾಯ ಮಾಡಲು ಒಪ್ಪಿಕೊಂಡಿರುವ ವರದ ನಾಯಕ, ಹೊರಬರಲು ಮಾಡುತ್ತಿರುವ ಸಾಹಸ ದೇವರಿಗೇ ಪ್ರೀತಿ. ತೆಲುಗಿನ “ಲಕ್ಷ್ಯಂ” ಚಿತ್ರದ ನಕಲಾಗಿರುವ ಈ ಚಿತ್ರದ ಬಗ್ಗೆ ಸುದೀಪ್ ಇದ್ದಾರೆ ಅನ್ನುವುದನು ಬಿಟ್ಟರೆ ಅಂಥ ನಿರೀಕ್ಷೆಗಳಿಲ್ಲ.

ಗಾಂಧಿನಗರಿಯ ಗಲ್ಲಿಗಳಲ್ಲಿ, ವರದ ನಾಯಕನನ್ನು “ಬರದ ನಾಯಕ” ಅಂತ ಗೇಲಿ ಮಾಡುತಿರುವುದು ಸುಳ್ಳಿರಲಿಕ್ಕಿಲ್ಲ!

***

ಪ್ರೇಮ್ ಎಲ್ಲಾ ಅವಮಾನಗಳ ಮೆಟ್ಟಿ ನಿಲ್ಲಲಿ

ನಿರ್ದೇಶಕ ಪ್ರೇಮ್ ರ ಅಡ್ಡ ಇನ್ನೇನು ತೆರೆಗೆ ಬರಲಿದೆ. ಎಂದಿನಂತೆ ಅವರ ಸಿನೆಮಾ ವಿವಾದಗಳಿಂದ ಮುಕ್ತವಾಗಿಲ್ಲ. “ಜೋಗಯ್ಯ” ಪ್ರೇಮ್ ಪಾಲಿಗೆ ಕಹಿನೆನಪು. ಸ್ವತಃ ಶಿವರಾಜ್ ಕುಮಾರ್ ಅಭಿಮಾನಿಗಳಿಂದಲೇ ನಿರಾಕರಿಸಲ್ಪಟ್ಟ ಸಿನೆಮಾ. ತ್ರೀಡಿ ವಿಚಾರ ಎಲ್ಲರಿಂದ ಗೇಲಿಗೊಳಗಾತು. “ಮಠ” ಗುರುಪ್ರಸಾದ್ ರಂಥವರು ವಾಹಿನಿಯ ಸಂದರ್ಶನವೊಂದರಲ್ಲೇ ಪ್ರೇಮ್ ರನ್ನು ಹೀಗಳೆದರು. ಗುರುಪ್ರಸಾದ್ ರ “ಡೈರೆಕ್ಟರ್ಸ್ ಸ್ಪೆಷಲ್” ಚಿತ್ರದ ಜಾಹೀರಾತನ್ನೂ ಪ್ರೇಮ್ ಅವಹೇಳನಕ್ಕೆ ಬಳಸಿಕೊಂಡರು.

ಇಂತಿಪ್ಪ ಪ್ರೇಮ್, ಮತ್ತೆ ಕೊಡವಿ ನಿಂತಿದ್ದಾರೆ. ತಮಿಳಿನ ಅದ್ಭುತ ಚಿತ್ರ “ಸುಬ್ರಹ್ಮಣ್ಯಪುರಂ” ದ ರಿಮೇಕ್ ಆದ “ಪ್ರೇಮ್ ಅಡ್ಡ” ಮೂಲಕ ಮರಳಿ ಬಂದಿದಾರೆ. ಕಣ್ಣಲ್ಲಿ ಅದೇ ಗೆಲುವಿಗಾಗಿ ತೀವ್ರ ಹಸಿವು. ಸಿನೆಮಾ ಬಿಟ್ಟರೆ ಮತ್ತೇನೂ ಗೊತ್ತಿಲ್ಲವೆಂಬ ಪ್ಯಾಷನ್.

ಪ್ರೇಮ್ ಅಡ್ಡ ಗೆಲ್ಲಲಿ. ಸೋತ ಪಾಠ ಹೆಚ್ಚಾಯ್ತು. ಗೆಲುವಿನ ಟಚ್ ಸಿಗಲಿ.

ಟಿಪ್ಪಣಿಗಳು
  1. Venkatraman Bhat ಹೇಳುತ್ತಾರೆ:

    laayk baritrala maarayre..

  2. ರಂಜಿತ್ ಹೇಳುತ್ತಾರೆ:

    ಥ್ಯಾಂಕ್ಸ್ ಸರ್!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s