ಅವತ್ತು ಹೊಸ ಚಿತ್ರ ತಂಡವೊಂದರ ಸಂದರ್ಶನವಿತ್ತು.
ನನಗೆ ಅಗತ್ಯವಿದ್ದ ಎಲ್ಲ ಪ್ರಶ್ನೆಗಳ ಸಿದ್ಧತೆ ನಡೆಸಿಕೊಂಡು ತಯಾರಾಗಿದ್ದೆ. ‘ನಿಮಗೆ ಹೇಗನ್ಸುತ್ತೆ?’ ಯಂಥ ಚಿಲ್ಲರೆ ಪ್ರಶ್ನೆಗಳನ್ನು ಮೀರಿದ್ದೇನನ್ನೊ, ಬೇರೆಲ್ಲೂ ಓದಿರದ ಸೂಕ್ಷ್ಮ ಒಳಪದರಗಳನ್ನು ಸ್ಪರ್ಶಿಸಬೇಕು, ಓದುಗರಿಗೆ ಹೊಸ ಸಿನಿಮಾದ ಅಂತರಂಗದ ಹೊಸ ಪಲುಕಗಳನ್ನು ತೋರಿಸಬೇಕೆಂಬುದು ನನ್ನ ಆಶಯವಾಗಿತ್ತು. ಹೊಸ ತಂಡ, ಸಹಜವಾಗಿಯೇ ತುಂಬ ಅಡೆತಡೆಗಳನ್ನು ಮೀರಿ ಸಿನಿಮಾ ಮುಗಿಸಿದ್ದವು. ಪಟ್ಟ ಪಾಡುಗಳನ್ನೆಲ್ಲವನ್ನೂ ವಿವರಿಸುವ ಹಪಾಹಪಿಯಲ್ಲಿರುತ್ತಾರೆ. ಎಲ್ಲವನ್ನೂ ಶಾಂತಿಯಿಂದ ಕೇಳಿಸಿಕೊಂಡು ನನಗೆ ಬೇಕಾದ ಕೆಲವಂಶಗಳನ್ನು ಹೆಕ್ಕಿ ಕೇಳುವುದು ಸಾಮಾನ್ಯವಾಗಿ ಇಂಥ ಸಂದರ್ಶನಗಳಲ್ಲಿ ನನ್ನ ಅಜೆಂಡಾ ಆಗಿರುತ್ತದೆ.
ಸಂದರ್ಶನ ಶುರುವಾಯಿತು. ಎಂದಿನಂತೆ ಒಂದೊಂದೇ ಪ್ರಶ್ನೆಗಳ ಮೆಟ್ಟಿಲು ಹತ್ತುತ್ತಾ ಹೊಸ ಸಿನಿಮಾದ ಬಗ್ಗೆ ವಿವರ ಕಲೆಹಾಕಿಕೊಳ್ಳುತ್ತಿದ್ದೆ. ಹೆಚ್ಚಾಗಿ ಯಾವ ಸಿನಿಮಾದವರೂ ಪೋಷಕವರ್ಗದ ನಟರ ಬಗ್ಗೆ ಎಲ್ಲೂ ಜಾಸ್ತಿ ಹೇಳಿಕೊಳ್ಳುವುದಿಲ್ಲ. ಆದರೆ ಹೊಸ ಚಿತ್ರತಂಡದವರು ಹೇಳಿಕೊಳ್ಳಲು ಬಯಸುತ್ತಾರೆ. ಬಹುಶಃ ಜನಪ್ರಿಯ ಹೆಸರುಗಳಿರುವುದು ಚಿತ್ರದ ಮಾರ್ಕೆಟಿಂಗ್ ಗೆ ಒಂದು ಅಡ್ವಾಂಟೇಜ್ ಆಗಿರುತ್ತದೆಂಬುದು ಅವರ ಉದ್ದೇಶ. ಈ ಚಿತ್ರದ ಪೋಷಕವರ್ಗದ ಬಗ್ಗೆ ಕೇಳಿದಾಗ ನಿರ್ಮಾಪಕ ನಿರ್ದೇಶಕರು ಬಹಳ ಉತ್ಸಾಹದಿಂದ ಕೆಲವು ಪೋಷಕನಟರ ಹೆಸರು ಹೇಳಿದರು. ಅದರಲ್ಲಿ ಕೊನೆಯದಾಗಿ ಮೆಲ್ಲ ಉಸುರಿದ ಪೋಷಕ ನಟನ ಹೆಸರು ಮಾತ್ರ ಹೇಳಲೋ ಬೇಡವೋ ಎಂಬಂತಿತ್ತು.
ಆವರು ಒಂದೆರಡು ವರ್ಷದ ಹಿಂದೆ ವಿಧಿವಶರಾಗಿದ್ದ ಬಹಳ ಹಿರಿಯ ಕಲಾವಿದರು. ಬಹುಶಃ ಈ ಹೊಸ ತಂಡದ ಚಿತ್ರವೇ ಕೊನೆಯ ಚಿತ್ರವಾಗಿದ್ದಿರಬೇಕು. ಹಾಗಾಗಿ ನಾನು ಬಹಳ ಕುತೂಹಲಗೊಂಡೆ. ಅದೇ ವಿಷಯವನ್ನೇ ವಿಚಾರಿಸಿದೆ. ಆದರೆ ಆ ನಿರ್ದೇಶಕ, ನಿರ್ಮಾಪಕರಿಬ್ಬರೂ ಕೊಂಚ ಗಲಿಬಿಲಿಗೊಂಡರು. ಆ ಕಲಾವಿದ ನಿರ್ವಹಿಸಿದ ಪಾತ್ರದ ಕುರಿತು, ಅವರ ಕುರಿತು ಮಾತಾಡಿದರೂ ಕೊನೆಗೆ ಸ್ವಲ್ಪ ಸಂಕೋಚದಿಂದ ‘ಅವರು ಈ ಚಿತ್ರದಲ್ಲಿ ಅಭಿನಯಿಸಿದುದರ ಕುರಿತು ಜಾಸ್ತಿ ಬರೆಯಬೇಡಿ ಸರ್’ ಅಂದರು.
ಅಚ್ಚರಿಯಿಂದ, ‘ಯಾಕ್ರೀ? ಅಂಥ ಒಳ್ಳೇ ಕಲಾವಿದ ನಿಮ್ಮ ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ನೀವು ಹೆಮ್ಮೆ ಪಡಬೇಕಲ್ವಾ’ ಅಂತ ಕೇಳಿದಾಗ ಅವರು ಇತ್ತ ಉತ್ತರ ಕೇಳಿ ಒಳಜೀವ ತತ್ತರಿಸಿತು.
ಆ ನಿರ್ದೇಶಕ, ‘ಸರ್, ಅವರು ತೀರಿಹೋಗಿ ಒಂದೆರಡು ವರ್ಷವೇ ಆಯಿತು. ಅವರು ಅಭಿನಯಿಸಿದ್ದನ್ನು ಹೈಲೈಟ್ ಮಾಡಿದರೆ, ಈ ಚಿತ್ರ ಒಂದು ಹಳೆಯ ಪ್ರಾಡಕ್ಟ್ ಅಂತ ಇಡೀ ಚಿತ್ರರಂಗ ಒಂಥರಾ ನಿಷ್ಕಾಳಜಿ ತೋರುತ್ತೆ ಅಲ್ವಾ, ಹಾಗೇನೇ ಪ್ರೇಕ್ಷಕನಿಗೂ ಇದರ ಮೇಲೆ ಇಂಟ್ರಸ್ಟ್ ಕಡಿಮೆ ಆಗುವ ಸಾಧ್ಯತೆ ಇದೆ. ಆ ಅಂಶ ಬಿಟ್ಟು ಉಳಿದ ಕಲಾವಿದರ ಬಗ್ಗೆ ಬರೀರಿ ಸರ್’ ಅಂದರು!
kaalaya tasmai namaha..!!