ಮಹಾನಗರವೆಂದರೆ ಸುಮ್ಮನೆ ಅಲ್ಲ. ಬಟ್ಟೆಯನ್ನು ಶಿಲೆಗಲ್ಲಿಗೆ ಕುಟ್ಟಿ, ಬ್ರಷ್ ನಲ್ಲಿ ಉಜ್ಜಿ, ನೀರಲ್ಲಿ ಮುಳುಗಿಸಿ, ಅಡಿಮೇಲೆ ಮಾಡಿ ಸುಡುಬಿಸಿಲಿಗೆ ನೇತು ಹಾಕುತ್ತೇವಲ್ಲ, ಹಾಗೆ ನಮ್ಮೊಳಗೆ ಹೊಳಪು ತರಲು ಅದು ಮಾಡದಿರುವ ಕಸರತ್ತೇ ಇಲ್ಲ.
ಅವನೋ ಹಳ್ಳಿಯಿಂದ ಬಂದವನು. ಮಹಾನಗರದಲ್ಲಿ ಹೆಜ್ಜೆಯಿಟ್ಟ ಮೊದಲ ದಿನವೇ ಕಂಡಕ್ಟರು ಚೇಂಜ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಬೈದ. ಕಾಲೇಜ್ ಹುಡುಗಿಯೊಬ್ಬಳು ಸಿಗ್ನಲ್ ಕ್ರಾಸ್ ಮಾಡಿ ಟ್ರಾಫಿಕ್ ಪೋಲಿಸ್ ಕೈಲಿ ಸಿಕ್ಕಿ ಹಾಕಿಕೊಂಡಾಗ ಸಾರ್, ಎಕ್ಸಾಮ್ ಗೆ ಹೊರ್ಟಿದೀನಿ ಈಗ್ಲೇ ತಡಾ ಆಯ್ತು ಅಂತ ಹಸೀ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದನ್ನು ನೋಡಿದ. ರಸ್ತೆಯಲ್ಲಿ ನಡೆವ ಚಿಕ್ಕ ಪುಟ್ಟ ಆಕ್ಸಿಡೆಂಟುಗಳಲ್ಲಿ ಬಾಯ್ಮಾತು ಚೆನ್ನಾಗಿದ್ದವನದೇನೂ ತಪ್ಪಿರಲ್ಲ ಎಂಬುದನ್ನು ಅರಿತ. ಥಿಯೇಟರ್ ನಲ್ಲಿ ಟಿಕೇಟ್ ಸಿಗದೇ ಒದ್ದಾಡುತ್ತಿದ್ದ ಸಮಯದಲ್ಲಿ ಪಕ್ಕದಲ್ಲಿ ನಿಂತಿದ್ದ ಮಿನಿಸ್ಟ್ರ ಮಗನಿಗೆ ಒಂದು ಫೋನ್ ಕಾಲ್ ಮೂಲಕ ಟಿಕೇಟ್ ಹೇಗೆ ಸಿಕ್ಕಿತು ಎಂದು ಅಚ್ಚರಿ ಪಟ್ಟ. ಟ್ರಾಫಿಕ್ಕಿನಿಂದಾಗಿ ಗಂಟೆಗಟ್ಟಲೆ ಬಸ್ಸೊಳಗೇ ಇರಬೇಕಿದ್ದರೂ ಇದು ಸಾಮಾನ್ಯವೇ ಅಂತ ಸುಮ್ಮನೆ ತಾಳ್ಮೆಯಿಂದ ಕುಳಿತ ಜನರನ್ನು ಕಂಡ. ಒಂದು ಕಾಫಿಗೂ ಹನ್ನೆರಡು ರೂಪಾಯಿ ಕೊಡಬೇಕಾದ, ರೂಮು ರೆಂಟಿಗೇ ಮೂರು ಸಾವಿರ ನೀಡಬೇಕಿರುವ ಈ ಊರಿಗೆ ದೂರದ ಬೀದರಿನಿಂದ ಆರು ಸಾವಿರ ಪಗಾರದ ಸಪ್ಲಾಯರ್ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯ ಜೊತೆ ಕುಶಲೋಪರಿ ಮಾತಾಡಿದ. ನಿನ್ನೆಯಷ್ಟೇ ಪರಿಚಯವಾದ ಒಬ್ಬ ನೇರವಾಗಿ ಲಜ್ಜೆಯಿಲ್ಲದೇ ಒಂದೈದು ಸಾವ್ರ ಸಾಲ ಇದ್ರೆ ಕೊಡ್ತೀಯಾ ಗುರೂ, ನಾಳೆ ವಾಪಸ್ ಮಾಡ್ಬಿಡ್ತೀನಿ ಅಂತ ಆತ್ಮವಿಶ್ವಾಸದಿಂದ ಹೇಳುವುದನ್ನು ಸಾಲ ಕೊಡಲಾಗದ ಗಿಲ್ಟಿನಿಂದ ಕೇಳಿದ. ಇಸ್ತ್ರಿ ಅಂಗಡಿಯಲ್ಲಿ ಎಂಟು ರೂಪಾಯಿ ಬಿಲ್ಲಾದಾಗ ನೀಡಿದ ಹತ್ತು ರೂಪಾಯಿಗೆ ಎರಡು ರೂಪಾಯಿ ವಾಪಸ್ಸು ಬರುವುದೇ ಇಲ್ಲ. ಚೇಂಜಿಲ್ಲ ಎಂಬ ಎರಳ್ಡು ರೂಪಾಯಿ ಬೆಲೆಬಾಳದ ಉತ್ತರ ಸಿಗುತ್ತದೆ. ಚೀಟಿಯಲ್ಲಿ ಕಂಡೆಕ್ಟರು ಬರೆದುಕೊಡುವ ಬಾಕಿ, ತಾನು ಇಳಿವ ಸ್ಟಾಪ್ ಬಂದಾಗ ಕಂಡಕ್ಟರು ಬಸ್ಸಿನ ಮುಂತುದಿಯಲ್ಲಿರುತ್ತಾನೆ. ಆ ರಶ್ಶಿನಲ್ಲಿ ಇಂಥ ಅನೇಕ ಘಟನೆಗಳೇ ಕಂಡಕ್ಟರನ ‘ಗಳಿಕೆ’ಗಳು.
ಇಲ್ಲಿ ಮಾಡಿದ ತಪ್ಪನ್ನೂ ಆತ್ಮವಿಶ್ವಾಸದಿಂದ ಹೇಳುವುದನ್ನು, ಸುಳ್ಳನ್ನು ಸತ್ಯದ ಮೇಲೆ ಪ್ರಮಾಣ ಮಾಡಿ ಹೇಳೋದನ್ನು ಕಲೀಬೇಕು ಬಾಸೂ… ಮೊದಲೆಲ್ಲ ಸಿಗ್ನಲ್ ಎಗರಿಸಿ ಗಾಡಿ ಓಡಿಸಿದರೆ ಟ್ರಾಫಿಕ್ ಪೋಲಿಸ್ ಗಮನಿಸದೇ ಇದ್ದರೂ ತಾನೇ ಹೋಗಿ ಫೈನ್ ಕಟ್ಟಿದ್ದೆ ಅನ್ನುವುದು ಹೀರೋಯಿಸ್ಮ್ ಆಗಿತ್ತು. ಈಗ ಅದನ್ನು ದಡ್ಡತನ ಅಂತಾರೆ. ಹಾಗೆ ಮಾಡಿದವನನ್ನು ಎಲ್ಲರೂ ಅನುಕಂಪದಿಂದ ನೋಡ್ತಾರೆ. ಈಗ ಸಿಗ್ನಲ್ ಜಂಪ್ ಮಾಡಿ ಅದನ್ನ ಯಾವ ರೀತಿ ಸುಳ್ಳು ಹೇಳಿ ಫೈನ್ ನಿಂದ ಬಚಾವಾದೆ ಅಂತ ಯಾರಿಗಾದ್ರೂ ವಿವರಿಸಿ ನೋಡು. ಜಗತ್ತಿನಲಿ ನೀನೇ ದೊಡ್ಡ ಬುದ್ಧಿವಂತ ಅನ್ನೋ ಧಾಟಿಯಲಿ ನೋಡ್ತಾರೆ. ಇದು ಈಗಿನ ಬದುಕು ಬಾಸೂ.. ಬೇಗ ಅಪ್ಡೇಟ್ ಆಗಬೇಕು.. ಅಂತ ರೂಂಮೇಟ್ ಅನ್ನುವುದನ್ನು ವಿಪರೀತ ಮುಗ್ದತನದಲ್ಲಿ ಕೊನೆಯ ಸಾಲಿಗೆ ಬರುವಷ್ಟರಲ್ಲಿ ಒಂದಿಷ್ಟು ಆತಂಕವನ್ನೂ ಬೆರೆಸಿ ನೋಡುತ್ತಾನೆ.
ಅಪ್ಪಾ, ನೀ ಆರಾಮಿದ್ದಿ ಅಲ್ಲ. ಬೀಪಿ ಟ್ಯಾಬ್ಲೆಟ್ಟು ತಗೊಳ್ಳೊದನ್ನ ಮರೀಬೇಡ. ನಾ ಚೆನ್ನಾಗಿದ್ದ ಹಾಗೆ ಇದ್ದೇನೆ. ಈ ಊರಲ್ಲಿ ಯಾರೂ ನನ್ನವರು ಅನ್ನಿಸುವುದಿಲ್ಲ. ಈ ಊರ ಜನರ ಮುಂದೆ ನಾನು ಹದಿನೈದು ವರ್ಷ ಹಿಂದಿನವನಂತೆ ಅನ್ನಿಸುತ್ತಿದ್ದೇವೆ. ನನ್ನ ನಡಿಗೆ ಈ ಊರಿನ ಓಟದ ಮುಂದೆ ಏನೂ ಅಲ್ಲ ಅನಿಸ್ತಿದೆ. ಇಲ್ಲಿ ಬದುಕಲಿಕ್ಕೆ ಸುಳ್ಳು ಹೇಳೋದು ಮಾತ್ರ ಅಲ್ಲ, ಸುಳ್ಳು ಹೇಳುವವರನ್ನು ಗುರುತಿಸುವ ಕಲೇನೂ ತಿಳಿದಿರ್ಬೇಕು. ಮುಖದ ಯಾವ ನೆರಿಗೆಯಲ್ಲೂ ಗಿಲ್ಟಿನ ಲವಲೇಷವೂ ಸುಳಿಯದಂತೆ ಸುಳ್ಳು ಹೇಳೋದಕ್ಕೆ ಬರಬೇಕು.
ಬೆಳಿಗ್ಗೆ ಆಗ್ತಾ ಇದ್ದ ಹಾಗೆ ಎದುರಾಗೋ ಮಂದಿಯಲ್ಲಿ ನನ್ನ ನಾನು ರಕ್ಷಿಸಿಕೊಳ್ತಾ ಬದುಕಬೇಕು. ಒಂಚೂರು ಮೈಮರೆತರೂ ಮೋಸಹೋಗ್ತೀನಿ. ತುಂಬಾ ಕಷ್ಟವಾಗುತ್ತಿದೆ ಅಪ್ಪಾ, ನಾನು ಊರಿಗೆ ಬಂದುಬಿಡುತ್ತೇನೆ. ನೀನು ನನ್ನ ಮೇಲೆ ಜೋಡಿಸಿಟ್ಟ ಅಪಾರ ಕನಸುಗಳ ತೀರಿಸಲಾದದೇ ಹೋದುದಕ್ಕೆ ಇದೊಂದು ಸಲ ಕ್ಷಮಿಸಿಬಿಡು. ನನ್ನನ್ನೂ ನಿನ್ನ ಜೊತೆಯಲೇ ಇರಲು ಬಿಡು.
ಹೀಗೆ ಬರೆದ ಪತ್ರವೊಂದನ್ನು ಅಂಚೆಪೆಟ್ಟಿಗೆ ಹಾಕಲು ಹೋದಾಗ ತಂದೆಯ ಸೋತ ಮುಖ ಎದುರಿಗೆ ಬಂದಂತಾಗಿ ಭಯದಿಂದ ಹರಿದು ಹಾಕುತ್ತಾನೆ.
ಪಾರ್ಕಿನ ಮೂಲೆಯೊಂದರಲ್ಲಿ ಕೂತು ಈ ಊರಲ್ಲಿ ಪಳಗಬೇಕೆಂದರೆ ಒಂದೋ, ಒಬ್ಬೊಬ್ಬರಿಂದಲೂ ಇಂಥ ಅನೇಕ ಕಲೆಗಳನ್ನು ಕಲಿತು ಅವರಲ್ಲೊಬ್ಬರಾಗಬೇಕು. ಇಲ್ಲವೇ, ವ್ಯವಸ್ಥೆಯನ್ನು ದೂರಿಕೊಂಡು ಮೋಸಹೋಗುತ್ತಾ ಬದುಕಬೇಕು. ಈ ಎರಡು ರಸ್ತೆ ಸೇರುವ ಕಾರ್ನರಿನಲ್ಲಿ ಅರ್ಧ ಟೀ ಕುಡಿಯುತ್ತಾ ಆಲೋಚಿಸುತ್ತಿದ್ದ ಅವನು.
ಮಹಾನಗರ, ಬಟ್ಟೆಯನ್ನು ತಿರುವಿಹಾಕಿ ಸುಡುಬಿಸಿಲಲಿ ಒಣಗಿಸಲನುವಾಯ್ತು.
hmm….