೧
ನೀನು ನಡೆದಾಡೋ ಬೆಳದಿಂಗಳು…
ಪದಗಳೇ ಸಾಲದು ನಿನ್ನ ಕೊಂಡಾಡಲು..
ಜೈಲಿಗೆ ಹಾಕಬೇಕು ನನ್ನನೂ ಚಂದ್ರನನ್ನೂ
ಅವನನ್ನು – ನಿನ್ನ ಕಂಗಳ ಬೆಳಕ ಕದ್ದ ತಪ್ಪಿಗೆ
ನನ್ನನು – ನಿನ್ನ ಲಜ್ಜೆಯಿಂದ ಈ ಕವಿತೆಯ ಬಸಿದ ತಪ್ಪಿಗೆ!
೨
ನಿಂಗೆ ಬೇಸರ ಆದಾಗ..
ಬದುಕು ನಿಸ್ಸಾರ ಅನಿಸಿದಾಗ..
ಸಹಿಸಲಾಗದ ದುಃಖ ಆವರಿಸಿದಾಗ…
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು..
ಅಲ್ಲಿ ನಿಂಗೊಬ್ಬಳು ರಾಜಕುಮಾರಿ ಕಾಣಿಸುತ್ತಾಳೆ!
೩
ನನ್ನ ದಿಂಬಿಗೆ ನಿನ್ನದೇ ಹೆಸರಿಟ್ಟಿರುವೆ..
ಚಳಿಯನು ಕಿಟಕಿಯಾಚೆ ಅಟ್ಟಿರುವೆ..
ಸ್ವಪ್ನದಲಿ ದಾರಿಯೊಂದ ಮಾಡಿರುವೆ…
ನೀ ಅಲ್ಲಿ ಹಾದುಹೋಗುವಾಗ
ಕದ್ದು ನೋಡಲೆಂದೇ ಕಾದಿರುವೆ…
೪
ಬದುಕು ಕಾಲಿನ ರೀತಿ.
ಕನಸು ಕಣ್ಣಿನ ತರಹ.
ಕಣ್ಣು ಕ್ಷಣಕಾಲದಲ್ಲಿ ಮೈಲಿ ದೂರ ಸಾಗುತ್ತದೆ.
ಕಾಲಿಗೆ ಕ್ಷಣದಲ್ಲಿ ಒಂದು ಹೆಜ್ಜೆ ಇಡುವ ಅವಕಾಶ ಮಾತ್ರ.
೫
ಅಂಗಾಲಿಟ್ಟು ಎದೆಯ ಮೆಲೆ ನೀ ಕೊಟ್ಟು
ಹೋದ ಬಹುಮಾನ ಈ ವಿದಾಯ /
ಈಗಂತೂ ಎದೆಯ ಒಳಗೆ ಸದಾ ಹಸಿ
ಹಸಿರು ಗಾಯ//
ಕನಸ ಗೋಪುರದ ತುತ್ತ ತುದಿಯೇ
ನೋವಿನ ಕಳಶ /
ಇಂಥ ಅಪೂರ್ಣ ಕವಿತೆಯ ಕೊನೆಯ
ಸಾಲುಗಳೇ ನೀನು ಬಹುಶಃ//
೬
ಹೃದಯವ ಒದ್ದೇ ಹೊರಹೋಗಿದ್ದಳು
ಕೊಟ್ಟ ಕಾರಣಗಳ ಹೊರೆ ತಾಳಲಾಗದೇ
ಒದ್ದಾಡಿದ್ದು ಖರೆಯೇ.
ಆ ದುಃಖದ ಪ್ರಮಾಣವನ್ನು ದಿಂಬಿನ ಬಳಿ ಕೇಳಬಹುದು
ಭಾವನೆಗಳನ್ನಿಟ್ಟು ಆಡಿದ್ದು ಹೌದಾದರೂ
ನನ್ನ ಪುಣ್ಯ, ನೆನಪುಗಳ ಚೀಲ ಕದ್ದು
ಓಡಲಿಲ್ಲ ಆಕೆ
ಈಗ ನೆನಪುಗಳ ಜೋಳಿಗೆಯಿಂದ
ಸ್ವಾನುಕಂಪದ ಅಮೃತ ಬಸಿದು ಕುಡಿದು
ಜೀವಂತವಿದ್ದೇನೆ.
೭
ನಿನ್ನುಸಿರಿನ ಪಿಸುಮಾತು
ನನ್ನೊಳಗೆ ಪ್ರತಿಧ್ವನಿ
ನಿನ್ನ ತುಸುಸ್ಪರ್ಶ
ಮೈತುಂಬ ಇಬ್ಬನಿ
ನಿನ್ನ ಅಂಗಾಲಿನ ಹೆಜ್ಜೆ ಗುರುತು
ಅಕ್ಷಯವಾಗಿ
ಅಕ್ಷರವಾಗಿ
ಎದೆಯೊಳಗೆ ಕವಿತೆಯಾಗಿದೆ
೮
ದಯವಿಟ್ಟು ನನ್ನನ್ನು
ಅದ್ಭುತ ಕಾದಂಬರಿಯಾಗಿ ಕಾಡು..
ಒಳ್ಳೆಯ ಸಿನೆಮಾ ಆಗಿ ಆವರಿಸು..
ಚಂದದ ಕಥೆಯೊಳಗಿನ ಗುಂಗಾಗಿ ಆವಹಿಸು..
ಇದು ಕಚಗುಳಿ…ಒಂದು ಹನಿಗವಿತೆಯಾಗಿ..
ಲಾಲಿತ್ಯದ ಪ್ರಬಂಧ ಆಗಿ ನೇವರಿಸು..
ಕೊನೆ ಪಕ್ಷ ಗಾಢ
ಕವಿತೆಯಾಗಿ ಆದರೂ ಸಂತೈಸು..