ಮೈ ಡಿಯರ್ ಕುಳ್ಳೀ,
ಮೊನ್ನೆ ನೀನು ಕೈಯಲ್ಲಿ ಒಂದಿಷ್ಟು ಡ್ರಾಯಿಂಗ್ ಹಿಡಿದು ಮೆಟ್ಟಿಲು ಇಳಿದು ಬರುತ್ತಿದ್ದಾಗ ಬೇಬಿ ಡಾಲ್ ಥರ ಕಾಣಿಸಿದೆ. ಗಾಢ ನೀಲಿ ಟಾಪ್ ಮತ್ತು ಅಚ್ಚ ಬಿಳಿ ಪ್ಯಾಂಟ್ ಕಾಂಬಿನೇಷನ್ ಜತೆಗೊಂದು ಹಳದಿ ಬಣ್ಣದ ಸ್ಲಿಮ್ ಬೆಲ್ಟ್ ಹಾಕ್ಕೊಂಡು ನೀ ಮೆಟ್ಟಿಲನ್ನು ಒಂದೊಂದೇ ಹೆಜ್ಜೆ ಇಟ್ಟು ಇಳಿಯುತ್ತಿದ್ದರೆ ನನ್ನ ಬದುಕು ಪೂರ್ತಿ ಅದನ್ನೇ ನೋಡುತ್ತಾ ಕಳೆಯಬೇಕೆಂಬ ಭಾವ. ನಿನ್ನ ಚಿಟ್ಟೆ ಕ್ಲಿಪ್ಪು ಹಾರಿ ಬಂದು ನನ್ನೆದೆಯ ಮಕರಂದವನ್ನು ಹೀರಿದಂತ ಅನುಭವ. ನೀನು ನನ್ನ ಹಾದುಹೋದಾಗ ಬರುವ ಗಾಳಿಗೆ ನನ್ನ ಮನಸ್ಸಿಗೂ ತಂಪೆರೆವ ಶಕ್ತಿ. ಆ ತಂಗಾಳಿ ಒಂದಿಷ್ಟು ಹೊತ್ತು ನನ್ನನ್ನೇ ಆವರಿಸಿಕೊಂಡಂಥ ಅನುಭೂತಿ. ನಿನ್ನ ದೇಹ ಗಂಧ ನನ್ನ ಸವರಿಹೋದಾಗೆಲ್ಲಾ ಎದೆಯೊಳಗೆ ಕಪ್ಪೆಕಲ್ಲ ತರಂಗ. ನೀನು ನಡೆದ ಹಾದಿಯಲ್ಲಿ ಸುಮ್ಮನೆ ಒಮ್ಮೆ ನಾನು ನಡೆದರೂ ಒಂದೊಳ್ಳೆ ರೋಮಾಂಚನ.
ಮರುಳಾದೆ ದಿವ್ಯ ಸಖಿ ನಿನಗೆ.. ಪ್ರಣಾಮ..
ಅಪರೂಪ ರೂಪಸಿಯೆ ನಿನಗೆ.. ಪ್ರಣಾಮ..
ನಿನ್ನನ್ನು ನೋಡಿದಾಗೆಲ್ಲಾ ನಿನ್ನನ್ನು ಒಂದು ಫ್ರೇಮ್ ಆಗಿಸಿ ಮನದಲ್ಲಿ ಸದಾ ಅಚ್ಚಾಗುವಂತೆ ಜನುಮ ಪೂರ್ತಿ ನೆನಪಿನಲ್ಲಿಡಬೇಕು ಅಂತೆಲ್ಲಾ ಅನ್ನಿಸುತ್ತೆ. ಆದರೆ ಅಷ್ಟು ಡೀಟೈಲ್ ಆಗಿ ನೋಡುವುದಕ್ಕೆ, ರೆಕಾರ್ಡ್ ಮಾಡಿಕೊಳ್ಳಲು ಒಂದು ದಿನ ಪೂರ್ತಿ ಬೇಕಾಗುತ್ತದೆ. ಕಿವಿಯ ಲೋಲಾಕ್ಕು ನೋಡುವುದರೊಳಗೆ ಮೊಗಕ್ಕೆ ನೀ ಹುಟ್ಟಿದಾಗಿನಿಂದಲೂ ಅಂಟಿಕೊಂಡಿರುವ ನಸುನಗು ಮಿಸ್ಸಾಗಬಹುದು, ಅದೇ ಕ್ಷಣದಲ್ಲಿ ನಿನ್ನ ಮುಂಗುರಳ ಲಾಲಿತ್ಯದ ದಾಖಲಾತಿ ತಪ್ಪಿಹೋದೀತು. ಜೀವದಾಳಕ್ಕೇ ಗಾಳ ಹಾಕಿ ಒಲವ ಮೀನಿಗೆ ಆಸೆ ಹುಟ್ಟಿಸುವ ನಿನ್ನ ಕುಡಿನೋಟ, ಕೆನ್ನೆಯಂಚಲ್ಲಿ ಮತ್ತಷ್ಟು ಅಂದ ಹೆಚ್ಚಿಸುತ್ತಿರುವ ಮೊಡವೆ, ಕಣ್ಣ ಬಾಣ ಬಿಡಲು ಸದಾ ಸಿದ್ಧ ಅಂತನ್ನಿತ್ತಿರುವ ಹುಬ್ಬು, ಐಸ್ ಕ್ರೀಮಿನ ತುತ್ತತುದಿಯಲ್ಲಿರುವ ಚೆರ್ರಿಯಂತೆ- ಇಂಥ ಅಂದಕ್ಕೆ ನಾನೇ ಮುಖ್ಯ ಕಾರಣ ಅಂತ ಬೀಗುತಿರುವ ಬಿಂದಿ, ಎಲ್ಲವೂ ಒಂದಕ್ಕಿಂತ ಇನ್ನೊಂದು ಅಂದ. ಇದನ್ನೆಲ್ಲಾ ಒಂದೇ ಕ್ಷಣದಲ್ಲಿ ಒಂದೇ ಫ್ರೇಮಿನಲ್ಲಿ ಹೇಗೆ ಪೇರಿಸಿಡಲು ಸಾಧ್ಯ?
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ಇಬ್ಬರೂ ಲಿಫ್ಟ್ ನಲ್ಲಿ ಸಿಕ್ಕಾಗಲಂತೂ ವಿಪರೀತ ಭಯ. ಎಲ್ಲಿ ನನ್ನ ಎದೆಬಡಿತ ನಿನಗೆ ಕೇಳಿಬಿಡುತ್ತದೋ ಎಂದು. ಈ ಕ್ಷಣ, ಈ ಸ್ಥಳ ಹೀಗೇ ಜನ್ಮಪೂರ್ತಿ ಇರುವಂತೆ ಯಾರಾದರೂ ಸ್ಟಾಚ್ಯೂ ಹೇಳಿಬಿಡಬಾರದಾ ಎಂಬಂಥ ಮನಸ್ಥಿತಿ. ಲಿಫ್ಟ್ ನೊಳಕ್ಕೆ ಅದೆಷ್ಟು ಜನರಿದ್ದರೂ ನಿನ್ನ ಇರುವು ನನ್ನೊಳಗೆ ಮೂಡಿಸುವ ಸಂಚಲನವನ್ನು ಅದು ಹ್ಯಾಗೆ ಪದಗಳಲ್ಲಿ ನಾ ವಿವರಿಸಲಿ? ಮೊದಲೊಮ್ಮೆ ಊಟ ಆಯ್ತಾ ಅಂತ ಕೇಳಿದ್ದರೂ ನೀನು ಉತ್ತರಿಸದೇ ಹೋಗಿದ್ದೆ. ಹಾಗಾಗಿ ಮೊದಲ ಬಾರಿಗೆ ನಿನ್ನ ಇನಿದನಿಯನ್ನು ಕೇಳಿದ್ದು ನಾ ಇದೇ ಲಿಫ್ಟ್ ನಲ್ಲವೇ? ನಿನ್ನ ಗೆಳತಿಯ ಬಳಿ ಚಪಾತಿ ತಂದಿದ್ದೀಯಾ ಅಂತೇನೋ ಕೇಳಿದ್ದ ನೆನಪು. ಕೆಲವೊಮ್ಮೆ ಅನ್ನಿಸುತ್ತದೆ, ಬಹುಷಃ ನಾನು ಹೆಚ್ಚು ನಿರೀಕ್ಷಿಸುತ್ತಿದ್ದೇನೋ ಅಂತ. ಯಾಕೆಂದರೆ ಈ ಜಗತ್ತಿನಲ್ಲಿ ಅದೆಷ್ಟು ಜನರಿದ್ದರೂ ಪ್ರತಿದಿನ ನಿನ್ನನ್ನು ನೋಡುವ, ನಿನ್ನ ನಡಿಗೆಯ ಅಂದವನ್ನು ಸವಿಯುವ ಖುಷಿ, ನಿನ್ನ ನಗುವನ್ನು ಕೇಳುವ ಸುಖ ಇದೆಲ್ಲಾ ನನಗೆ ಸಿಗುತ್ತಿರುವುದು ನನ್ನ ಅದೃಷ್ಟವೇ ಅಲ್ಲವಾ? ಇವಿಷ್ಟರಿಂದಲೇ ನನ್ನ ನೆನಪಿನ ಜೋಳಿಗೆಯನ್ನು ತುಂಬಿಸಿ ಹೊತ್ತೊಯ್ಯಲು ಸಾಲುವುದಿಲ್ಲವಾ? ಹೀಗೆಲ್ಲಾ ಅನ್ನಿಸಿ ತೃಪ್ತಿಯಾದರೂನು ಮನಸ್ಸು ತುಂಬಾ ಬಲಹೀನ. ನಿನ್ನ ಜೊತೆ ಒಮ್ಮೆಯಾದರೂ ಊಟ ಮಾಡುವ, ಒಂದೇ ಒಂದು ಸಂಜೆ ಜತೆಯಾಗಿ ಕಾಫಿ ಕುಡಿಯುವ, ಕಾಲದ ಪರಿವೇ ಇಲ್ಲದೇ ತುಂಬಾ ಮಾತಾಡುವ ಆಸೆ, ಮುದ್ದಾದ ಇಂಥ ಹಂಬಲಗಳಿಂದಲೇ ಜೀವನ ಸವೆಯುತ್ತಿದೆ. ಯಾವತ್ತೋ ಒಂದು ದಿನ ಅದು ಸಾಧ್ಯವಾಗುತ್ತದೆ ಎಂಬ ಕನಸು ಹೊತ್ತೇ ಜೀವನ ಸಾಗುತ್ತಿದೆ.
ಮನಸಲಿ ಚೂರು ಜಾಗ ಬೇಕಿದೆ..
ಕೇಳಲಿ ಹೇಗೆ ತಿಳಿಯದಾಗಿದೆ..
ನಿಜಾ ಹೇಳಲಾ? ನಂಗೂ ನಿಂಗೂ ಮಧ್ಯೆ ಏನೋ ಲಿಂಕಿದೆ. ಹಳೇ ಜನ್ಮದ ಫ್ಲಾಷ್ ಬ್ಯಾಕಿದೆ. ಬೇಕಿದ್ದರೆ ನೋಡು, ನಿನ್ನ ಹಣೆಯ ಕುಂಕುಮವಿಡುವ ಭಾಗದ ಪಕ್ಕದಲ್ಲೂ ಮಚ್ಚೆಯಿದೆ, ಅದೇ ಸ್ಥಳದಲ್ಲಿ ನನಗೂ ಮಚ್ಚೆಯಿದೆ. ನಮ್ಮಿಬ್ಬರ ಕಣ್ಣ ನೋಟ ಒಂದಾದ ದಿನದಿಂದ ಜೀವ ಅದೇಕೋ ಚಡಪಡಿಸುತ್ತಿದೆ. ಇಲ್ಲದೇ ಹೋದರೆ, ನೀನು ಒಂದು ದಿನ ನೋಡೋಕೆ ಸಿಗಲಿಲ್ಲವೆಂದರೆ ನನ್ನ ಮನಸ್ಸೇಕೆ ವಿಲ ವಿಲ ಒದ್ದಾಡುತ್ತದೆ? ನಿನಗಿಂತ ಅದೆಷ್ಟು ಅಂದವತಿ ತರುಣಿಯನ್ನು ನೋಡಿದ್ದರೂ ನಾನು ನಿನ್ನತ್ತ ಯಾಕೆ ಆಕರ್ಷಿತನಾದೆ? ನಿನ್ನನ್ನು ಕಂಡಾಕ್ಷಣ ಮನಸ್ಸೇಕೆ ಗೊಂಬೆಯನ್ನು ಕಂಡ ಮಗುವಿನಂತೆ ಹಟ ಹಿಡಿಯಿತು? ಹರಿತ ಚೂರಿಯಂಥ ನಿನ್ನ ನೋಟ ಅದೇಕೆ ನನ್ನ ಎದೆಯಾಳ ಕಲಕಿತು. ನಿನ್ನ ನಗುವಿನ ಅಲೆ ನನ್ನೆದೆಗೆ ಬಡಿದಾಗ ಆಗುವ ಸಂತಸಕ್ಕೆ ಕಾರಣವೇನು? ನನಗೆ ನೀನು ಉತ್ತರಿಸದಾಗ ಅದೇಕೆ ನಾನು ತತ್ತರನಾಗುತ್ತೇನೆ? ಯಾವುದೋ ಜನ್ಮದ ಮೈತ್ರಿಯಿರದೇ ನೀನು ನನಗೊಂದು ಗುಂಗಿನಂತೆ ಹೇಗೆ ಕಾಡಬಲ್ಲೆ? ನಿನಗಷ್ಟೇ ಕೇಳುವಂತೆ ಒಲವ ಗೀತೆಯೊಂದ ಹಾಡಬೇಕು ಅಂತ್ಯಾಕೆ ಮನಸ್ಸು ಕುಣಿಯುತ್ತದೆ? ಭಕ್ತಿಯ ಲೆವೆಲ್ಲಿಗೆ ಪ್ರೀತಿ ಮುಟ್ಟೋಕೆ ಸಾಧ್ಯ ಅಂತ ಯಾಕೆ ಅನ್ನಿಸುತ್ತಿದೆ?
ನಿನ್ನಲ್ಲೆ ಜೀವವನ್ನು… ಅಡವಿಟ್ಟುಬಂದೆ ನಾನು..
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು… ಹರಿಯುವ ಮುನ್ನವೇ..
ತುಂಬಾ ದಿನದಿಂದ, ಕವಿತೆ ಪೂರ್ತಿ ಮಾಡಲು ಸಿಗದ ಕೊನೆಯ ಪದದಂತೆ ನಿನ್ನದೇ ಗುಂಗು ನನ್ನ ಜೀವನವನ್ನು ವ್ಯಾಪಿಸಿದೆ. ಪ್ರತಿ ಕ್ಷಣವೂ ಈಗ ನೀನೇನು ಮಾಡುತ್ತಿದ್ದಿರಬಹುದು ಎಂಬ ಊಹೆಯ ಸವಿಯಲ್ಲೇ ಕಳೆಯುತ್ತಿದೆ. ಮರೆಯಲು ನಾ ಮಾಡಿದ ಪ್ರಯತ್ನದಲ್ಲೆಲ್ಲಾ ನನ್ನದು ಘನಘೋರ ಸೋಲಾಗಿದೆ. ಆದರೂ ಮನಸ್ಸಿಗೆ ಒಂದು ಭರವಸೆ ಉಕ್ಕಿಸಿ ಸಮಾಧಾನ ಮಾಡುತ್ತಿರುತ್ತೇನೆ. ತಿಪಟೂರಿನ ಜಾತ್ರೆಯ ಜನಜಂಗುಳಿಯಲ್ಲಿ ನಿನಗೆ ಅರಿವಿರದಂತೆ ನಿನ್ನ ಕಿರುಬೆರಳನ್ನು ಮುಟ್ಟುತ್ತೇನೆ. ಅರಳುವ ಹೂವೊಂದನ್ನು ನೋಡಿ ಖುಷಿಪಟ್ಟ ದಿನ, ಅಲ್ಲೆಲ್ಲೊ ಮರದ ಹಿಂದೆ ನಿನಗೇ ಅರಿವಿರದಂತೆ ನಿಂತು ನಾನೂ ಆನಂದ ಪಡುತ್ತೇನೆ. ನಿನ್ನ ಪಲ್ಲುವಿನ ಎಳೆಯೊಂದನ್ನು ಕದ್ದು ನನ್ನ ಪರ್ಸಿನಲ್ಲಿ ಖಾಯಂ ಆಗಿಟ್ಟುಕೊಳ್ಳುತ್ತೇನೆ. ಯಾವಾಗಲೋ ಒಮ್ಮೆ ನೀನು ನೋಡಿ ಕುತೂಹಲದಿಂದ ಕರೆ ಮಾಡುವೆ ಎಂಬ ಭರವಸೆಯಿಂದ ನಿನ್ನ ಡೈರಿಯ ಕೊನೆಯ ಪುಟಗಳಲ್ಲಿ ನನ್ನ ನಂಬರನ್ನು ಬರೆದಿಡುತ್ತೇನೆ. ತುರುವೆಕೆರೆ ತಿರುವುಗಳಲ್ಲಿ ಕೇವಲ ನಿನಗಷ್ಟೇ ಕೇಳುವಂತೆ ನಿನ್ನ ಹೆಸರನ್ನು ಕೂಗುತ್ತೇನೆ. ಮೂಲೆ ಶಂಕರೇಶ್ವರ ದೇವಸ್ಥಾನದಲ್ಲಿ ನಿನ್ನ ಹುಟ್ಟುಹಬ್ಬದ ದಿನ ನಿನ್ನ ಹೆಸರಲ್ಲಿ ಅರ್ಚನೆ ಮಾಡಿಸುತ್ತೇನೆ. ದಾಸರಿಘಟ್ಟ ಚೌಡೇಶ್ವರಿ, ಹೊನ್ನಮ್ಮನ ಬಳಿ ನಿನಗೆ ಸದಾ ಒಳ್ಳೆಯದಾಗಲಿ, ಬದುಕು ಪೂರ್ತಿ ಖುಷಿ ಇರಲಿ ಅಂತ ಹರಕೆ ಹೊತ್ತುಕೊಳ್ಳುತ್ತೇನೆ. ಇಂಥ ಸಮಾಧಾನದಿಂದಲಷ್ಟೇ ಮನಸ್ಸು, ನೀನು ನನ್ನೆಡೆ ನಗದಿದ್ದರೂ, ನನಗೆ ಉತ್ತರಿಸದಿದ್ದರೂ, ನನ್ನನ್ನು ನೆಗ್ಲೆಕ್ಟ್ ಮಾಡಿದರೂ ಸುಮ್ಮನಿದೆ. ಇಲ್ಲದೇ ಹೋಗಿದ್ದರೆ ರಚ್ಚೆ ಹಿಡಿವ ಮನಸ್ಸೆಂಬ ಮಗುವನ್ನು ಸಂತೈಸಲು ಜಗತ್ತಿನ ಎಲ್ಲಾ ಅಮ್ಮಂದಿರ ಪ್ರೀತಿಯನ್ನು ಒಟ್ಟುಹಾಕಿ ಸಂಭಾಳಿಸಬೇಕಾದೀತು!
– ನಿನ್ನ ಚಿಟ್ಟೆ ಕ್ಲಿಪ್ಪಿನ ಫ್ಯಾನ್!