Archive for the ‘ಐ ಲವ್ ಯೂ!’ Category

ಪ್ರೀತಿ ಎಂದರೇನು ಅನ್ನುವುದು ತುಂಬಾ ಕ್ಲೀಷೆ ಪ್ರಶ್ನೆ.

ಹಲವಾರು ಬರಹಗಾರರು ತಮ್ಮ ತಮ್ಮ ಅನುಭವಕ್ಕನುಗುಣವಾಗಿ ಪ್ರೀತಿಯ ವ್ಯಾಖ್ಯೆಯನ್ನು ನೀಡಿದ್ದಾರೆ. ಎರಡು ಹೃದಯಗಳ ಮಿಲನ, ಎರಡು ಜೀವ ಒಂದೇ ಮನಸ್ಸು ಎಂಬುದೆಲ್ಲಾ ಪುಸ್ತಕದ ಬದನೆಕಾಯಾಯಿತು. ಸ್ಟೀಫನ್ ಕೋವೆಯಂಥ ಲೇಖಕ ಪ್ರೀತಿ ಅಂದರೆ ಕೊಡುವುದು ಅಂತ ಅಂದಿದ್ದಾನೆ. ಅವನ ಪ್ರಕಾರ ಪ್ರೀತಿ ಅನ್ನುವುದು ವರ್ಬ್. ಅಂದರೆ ಅದೊಂದು ಭಾವ ಅಲ್ಲ, ನಿರಪೇಕ್ಷೆಯಿಂದ ನೀಡುವುದು.

ತಾಯಿಯೊಬ್ಬಳು – ಪ್ರೀತಿಗೆ ಜೀವಂತ ಭಾಷ್ಯ ಬರೆಯುತ್ತಾಳೆ. ಅನ್ ಕಂಡೀಷನ್ಡ್ ಪ್ರೀತಿ ನೀಡಿ, ನಾನು ನಿನ್ನ ಪ್ರೀತಿಸುತ್ತೀನಿ ಅಂತ ಒಂದು ಮಾತೂ ಆಡದೇ ಪ್ರೀತಿಯನ್ನು ಬದುಕಿ ತೋರಿಸುತ್ತಾಳೆ. ಕೊನೆವರೆಗೂ ಕಾಳಜಿ ವಹಿಸುತ್ತಾಳೆ. ತನಗೆ ಕೂಡದ ವಯಸ್ಸಿನಲ್ಲೂ ಮಕ್ಕಳ ಕುರಿತ ಕಳಕಳಿ ಪ್ರತಿದಿನ ಇಟ್ಟುಕೊಂಡಿರುತ್ತಾಳೆ.

ಇಷ್ಟಕ್ಕೂ ನಿಜವಾಗಿ – ನಿಜವಾದ ಪ್ರೀತಿ ಅಂದರೇನು?

ನನ್ನ ಪ್ರಕಾರ – ಪ್ರೀತಿ ಅಂದರೆ ಒಂದು ಉತ್ಕಟವಾದ ಭಾವ. ಅದಕ್ಕೆ ಸಾಲಿನ, ಮಾತಿನ ಮಹಿಮೆ ಬೇಕಿಲ್ಲ. ಒಬ್ಬರನ್ನು ಪ್ರೀತಿಸುತ್ತೇನೆ ಅಂದರೆ ಅವರು ಸದಾ ಖುಷಿಯಾಗಿರಲಿ ಅಂತ ಬಯಸುತ್ತೇನೆ ಮತ್ತು ಆ ನಿಟ್ಟಿನಲ್ಲಿ ನನ್ನ ಸಾಮರ್ಥ್ಯ ಮೀರಿ ನಿಲ್ಲುತ್ತೇನೆ ಅಂತರ್ಥ. ಮತ್ತು ಅವರ ಖುಷಿಗೆ ತಾನು ಏನನ್ನಾದರೂ ಮಾಡಲು ಸಿದ್ಧ ಅನ್ನುವ ಭಾವ. ಕಷ್ಟ ಬಂದಾಗ ಹೆಗಲಾಗಿ ನಿಲ್ಲುವ ಆಶಯ. ಹಾಗಂಥ ಕಟ್ಟಿಹಾಕುವಂಥ ಬಂಧವೇನಲ್ಲ. ನೀನು ನಾನಿಲ್ಲದೆಯೂ ಖುಷಿಯಾಗಿರಬಲ್ಲೆ ಅಂತಾದರೆ- ಅದಾದರೂ ಸೈ.

ಒಟ್ಟಿನಲ್ಲಿ ನಿನ್ನ ಸಂತಸವೇ ನನ್ನ ಆಶಯ.

ನಾನು ನಿನ್ನ ಪ್ರೀತಿಸ್ತೀನಿ, ಹೇಳು ನೀ ನನಗಾಗಿ ಏನು ಮಾಡುವಿ? ನೀನೆಷ್ಟು ನನ್ನ ಪ್ರೀತಿಸ್ತೀ? ಅಂತ ಕೇಳುವುದು ಪ್ರೀತಿಯಾಗದು. ನಾನು ನಿನ್ನ ಪ್ರೀತಿಸ್ತೀನಾದ್ದರಿಂದ ನೀನೂ ನನ್ನ ಪ್ರೀತಿಸಬೇಕು ಅನ್ನುವುದು ವ್ಯವಹಾರವಾದೀತು. ಇನ್ನೊಬ್ಬ ವ್ಯಕ್ತಿಯ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರದ ಭಾವ. ಹಾಗಾಗಿ ಒಂದು ಸಂಬಂಧದಲ್ಲಿ ನೀನೆಷ್ಟು ನೀಡಿದೆ ಅನ್ನುವುದರ ಮೇಲೆ ನಿನ್ನ ಪ್ರೀತಿ ನಿರ್ಧಾರಿತವಾಗಿರಬೇಕೇ ವಿನಾ ಸಂಬಂಧದಲ್ಲಿ ನೀನೆಷ್ಟು ಪಡಕೊಂಡೆ, ಬಂದ ಲಾಭಕ್ಕನುಗುಣವಾದ ಲೆಕ್ಕ ಅಲ್ಲ ಅದು.

ಹೀಗೆ ವಾಪಸ್ಸು ಏನನ್ನೂ ಬಯಸದೇ, ನಿನ್ನ ದುಃಖದಲ್ಲಿ ಜತೆಯಾಗಿ, ನಿನ್ನ ಸುಖದಲ್ಲಿ ಹಿತವಾಗಿ ಮರೆಯಾಗಿ ಇರುವುದು ಉನ್ನತ ಪ್ರೇಮ.
ನೀನು ಖುಷಿಯಾಗಿರಬೇಕು ಅದಕ್ಕೆ ನಾನು ನಿನ್ನ ಜತೆಯಲ್ಲಿರಲೇಬೇಕು (ಒಟ್ಟಿನಲ್ಲಿ ನೀನೇ ಬೇಕು)- ಅನ್ನುವುದು ಮಧ್ಯಮ.

ಅಂದರೆ ನಿಜವಾದ ಪ್ರೀತಿಯಲ್ಲಿ ಜೆಲಸಿ ಬರಬಾರದು. ತಾನು ಪ್ರೀತಿಸುವ ವ್ಯಕ್ತಿ ಆನಂದದಿದ್ದರೆ ಸಾಕು ಅನ್ನುವಂಥ, ಬೇರೆಯವರ ಜೊತೆಯಾದರೂ- ಬೇರೆಲ್ಲೋ ದೂರದಲ್ಲಿ ಇದ್ದಾದರೂ- ಒಟ್ಟಿನಲ್ಲಿ ಸಂತಸವಾಗಿದ್ದರೆ ಸಾಕು ಅನ್ನುವಂಥ ಮನಸ್ಥಿತಿ ಇರಬೇಕು.

ಆದರೆ ಇದು ಕೇಳುವಷ್ಟು / ಹೇಳುವಷ್ಟು ಸುಲಭವಲ್ಲ.

ಅಂಥ ಪ್ರೀತಿ ನಿಮಗೂ ದೊರಕಿದೆಯಾದರೆ ನಿಮಗಿದೋ ಶುಭಾಶಯ. ಪ್ರಪಂಚದಲ್ಲಿ ಬಾಳುತ್ತಿರುವ ಕೋಟಿ ಕೋಟಿ ಮನುಷ್ಯರಲ್ಲಿ ನೀವೇ ಅದೃಷ್ಟವಂತರು.

ಮೈ ಡಿಯರ್ ಕುಳ್ಳೀ,

ಮೊನ್ನೆ ನೀನು ಕೈಯಲ್ಲಿ ಒಂದಿಷ್ಟು ಡ್ರಾಯಿಂಗ್ ಹಿಡಿದು ಮೆಟ್ಟಿಲು ಇಳಿದು ಬರುತ್ತಿದ್ದಾಗ ಬೇಬಿ ಡಾಲ್ ಥರ ಕಾಣಿಸಿದೆ. ಗಾಢ ನೀಲಿ ಟಾಪ್ ಮತ್ತು ಅಚ್ಚ ಬಿಳಿ ಪ್ಯಾಂಟ್ ಕಾಂಬಿನೇಷನ್ ಜತೆಗೊಂದು ಹಳದಿ ಬಣ್ಣದ ಸ್ಲಿಮ್ ಬೆಲ್ಟ್ ಹಾಕ್ಕೊಂಡು ನೀ ಮೆಟ್ಟಿಲನ್ನು ಒಂದೊಂದೇ ಹೆಜ್ಜೆ ಇಟ್ಟು ಇಳಿಯುತ್ತಿದ್ದರೆ ನನ್ನ ಬದುಕು ಪೂರ್ತಿ ಅದನ್ನೇ ನೋಡುತ್ತಾ ಕಳೆಯಬೇಕೆಂಬ ಭಾವ. ನಿನ್ನ ಚಿಟ್ಟೆ ಕ್ಲಿಪ್ಪು ಹಾರಿ ಬಂದು ನನ್ನೆದೆಯ ಮಕರಂದವನ್ನು ಹೀರಿದಂತ ಅನುಭವ. ನೀನು ನನ್ನ ಹಾದುಹೋದಾಗ ಬರುವ ಗಾಳಿಗೆ ನನ್ನ ಮನಸ್ಸಿಗೂ ತಂಪೆರೆವ ಶಕ್ತಿ. ಆ ತಂಗಾಳಿ ಒಂದಿಷ್ಟು ಹೊತ್ತು ನನ್ನನ್ನೇ ಆವರಿಸಿಕೊಂಡಂಥ ಅನುಭೂತಿ. ನಿನ್ನ ದೇಹ ಗಂಧ ನನ್ನ ಸವರಿಹೋದಾಗೆಲ್ಲಾ ಎದೆಯೊಳಗೆ ಕಪ್ಪೆಕಲ್ಲ ತರಂಗ. ನೀನು ನಡೆದ ಹಾದಿಯಲ್ಲಿ ಸುಮ್ಮನೆ ಒಮ್ಮೆ ನಾನು ನಡೆದರೂ ಒಂದೊಳ್ಳೆ ರೋಮಾಂಚನ.

love-560783_960_720

ಮರುಳಾದೆ ದಿವ್ಯ ಸಖಿ ನಿನಗೆ.. ಪ್ರಣಾಮ..
ಅಪರೂಪ ರೂಪಸಿಯೆ ನಿನಗೆ.. ಪ್ರಣಾಮ..

ನಿನ್ನನ್ನು ನೋಡಿದಾಗೆಲ್ಲಾ ನಿನ್ನನ್ನು ಒಂದು ಫ್ರೇಮ್ ಆಗಿಸಿ ಮನದಲ್ಲಿ ಸದಾ ಅಚ್ಚಾಗುವಂತೆ ಜನುಮ ಪೂರ್ತಿ ನೆನಪಿನಲ್ಲಿಡಬೇಕು ಅಂತೆಲ್ಲಾ ಅನ್ನಿಸುತ್ತೆ. ಆದರೆ ಅಷ್ಟು ಡೀಟೈಲ್ ಆಗಿ ನೋಡುವುದಕ್ಕೆ, ರೆಕಾರ್ಡ್ ಮಾಡಿಕೊಳ್ಳಲು ಒಂದು ದಿನ ಪೂರ್ತಿ ಬೇಕಾಗುತ್ತದೆ. ಕಿವಿಯ ಲೋಲಾಕ್ಕು ನೋಡುವುದರೊಳಗೆ ಮೊಗಕ್ಕೆ ನೀ ಹುಟ್ಟಿದಾಗಿನಿಂದಲೂ ಅಂಟಿಕೊಂಡಿರುವ ನಸುನಗು ಮಿಸ್ಸಾಗಬಹುದು, ಅದೇ ಕ್ಷಣದಲ್ಲಿ ನಿನ್ನ ಮುಂಗುರಳ ಲಾಲಿತ್ಯದ ದಾಖಲಾತಿ ತಪ್ಪಿಹೋದೀತು. ಜೀವದಾಳಕ್ಕೇ ಗಾಳ ಹಾಕಿ ಒಲವ ಮೀನಿಗೆ ಆಸೆ ಹುಟ್ಟಿಸುವ ನಿನ್ನ ಕುಡಿನೋಟ, ಕೆನ್ನೆಯಂಚಲ್ಲಿ ಮತ್ತಷ್ಟು ಅಂದ ಹೆಚ್ಚಿಸುತ್ತಿರುವ ಮೊಡವೆ, ಕಣ್ಣ ಬಾಣ ಬಿಡಲು ಸದಾ ಸಿದ್ಧ ಅಂತನ್ನಿತ್ತಿರುವ ಹುಬ್ಬು, ಐಸ್ ಕ್ರೀಮಿನ ತುತ್ತತುದಿಯಲ್ಲಿರುವ ಚೆರ್ರಿಯಂತೆ- ಇಂಥ ಅಂದಕ್ಕೆ ನಾನೇ ಮುಖ್ಯ ಕಾರಣ ಅಂತ ಬೀಗುತಿರುವ ಬಿಂದಿ, ಎಲ್ಲವೂ ಒಂದಕ್ಕಿಂತ ಇನ್ನೊಂದು ಅಂದ. ಇದನ್ನೆಲ್ಲಾ ಒಂದೇ ಕ್ಷಣದಲ್ಲಿ ಒಂದೇ ಫ್ರೇಮಿನಲ್ಲಿ ಹೇಗೆ ಪೇರಿಸಿಡಲು ಸಾಧ್ಯ?

ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ

ಇಬ್ಬರೂ ಲಿಫ್ಟ್ ನಲ್ಲಿ ಸಿಕ್ಕಾಗಲಂತೂ ವಿಪರೀತ ಭಯ. ಎಲ್ಲಿ ನನ್ನ ಎದೆಬಡಿತ ನಿನಗೆ ಕೇಳಿಬಿಡುತ್ತದೋ ಎಂದು. ಈ ಕ್ಷಣ, ಈ ಸ್ಥಳ ಹೀಗೇ ಜನ್ಮಪೂರ್ತಿ ಇರುವಂತೆ ಯಾರಾದರೂ ಸ್ಟಾಚ್ಯೂ ಹೇಳಿಬಿಡಬಾರದಾ ಎಂಬಂಥ ಮನಸ್ಥಿತಿ. ಲಿಫ್ಟ್ ನೊಳಕ್ಕೆ ಅದೆಷ್ಟು ಜನರಿದ್ದರೂ ನಿನ್ನ ಇರುವು ನನ್ನೊಳಗೆ ಮೂಡಿಸುವ ಸಂಚಲನವನ್ನು ಅದು ಹ್ಯಾಗೆ ಪದಗಳಲ್ಲಿ ನಾ ವಿವರಿಸಲಿ? ಮೊದಲೊಮ್ಮೆ ಊಟ ಆಯ್ತಾ ಅಂತ ಕೇಳಿದ್ದರೂ ನೀನು ಉತ್ತರಿಸದೇ ಹೋಗಿದ್ದೆ. ಹಾಗಾಗಿ ಮೊದಲ ಬಾರಿಗೆ ನಿನ್ನ ಇನಿದನಿಯನ್ನು ಕೇಳಿದ್ದು ನಾ ಇದೇ ಲಿಫ್ಟ್ ನಲ್ಲವೇ? ನಿನ್ನ ಗೆಳತಿಯ ಬಳಿ ಚಪಾತಿ ತಂದಿದ್ದೀಯಾ ಅಂತೇನೋ ಕೇಳಿದ್ದ ನೆನಪು. ಕೆಲವೊಮ್ಮೆ ಅನ್ನಿಸುತ್ತದೆ, ಬಹುಷಃ ನಾನು ಹೆಚ್ಚು ನಿರೀಕ್ಷಿಸುತ್ತಿದ್ದೇನೋ ಅಂತ. ಯಾಕೆಂದರೆ ಈ ಜಗತ್ತಿನಲ್ಲಿ ಅದೆಷ್ಟು ಜನರಿದ್ದರೂ ಪ್ರತಿದಿನ ನಿನ್ನನ್ನು ನೋಡುವ, ನಿನ್ನ ನಡಿಗೆಯ ಅಂದವನ್ನು ಸವಿಯುವ ಖುಷಿ, ನಿನ್ನ ನಗುವನ್ನು ಕೇಳುವ ಸುಖ ಇದೆಲ್ಲಾ ನನಗೆ ಸಿಗುತ್ತಿರುವುದು ನನ್ನ ಅದೃಷ್ಟವೇ ಅಲ್ಲವಾ? ಇವಿಷ್ಟರಿಂದಲೇ ನನ್ನ ನೆನಪಿನ ಜೋಳಿಗೆಯನ್ನು ತುಂಬಿಸಿ ಹೊತ್ತೊಯ್ಯಲು ಸಾಲುವುದಿಲ್ಲವಾ? ಹೀಗೆಲ್ಲಾ ಅನ್ನಿಸಿ ತೃಪ್ತಿಯಾದರೂನು ಮನಸ್ಸು ತುಂಬಾ ಬಲಹೀನ. ನಿನ್ನ ಜೊತೆ ಒಮ್ಮೆಯಾದರೂ ಊಟ ಮಾಡುವ, ಒಂದೇ ಒಂದು ಸಂಜೆ ಜತೆಯಾಗಿ ಕಾಫಿ ಕುಡಿಯುವ, ಕಾಲದ ಪರಿವೇ ಇಲ್ಲದೇ ತುಂಬಾ ಮಾತಾಡುವ ಆಸೆ, ಮುದ್ದಾದ ಇಂಥ ಹಂಬಲಗಳಿಂದಲೇ ಜೀವನ ಸವೆಯುತ್ತಿದೆ. ಯಾವತ್ತೋ ಒಂದು ದಿನ ಅದು ಸಾಧ್ಯವಾಗುತ್ತದೆ ಎಂಬ ಕನಸು ಹೊತ್ತೇ ಜೀವನ ಸಾಗುತ್ತಿದೆ.

d29a4a3cfe8f43f1a21cf2ea42657e1e

ಮನಸಲಿ ಚೂರು ಜಾಗ ಬೇಕಿದೆ..
ಕೇಳಲಿ ಹೇಗೆ ತಿಳಿಯದಾಗಿದೆ..

ನಿಜಾ ಹೇಳಲಾ? ನಂಗೂ ನಿಂಗೂ ಮಧ್ಯೆ ಏನೋ ಲಿಂಕಿದೆ. ಹಳೇ ಜನ್ಮದ ಫ್ಲಾಷ್ ಬ್ಯಾಕಿದೆ. ಬೇಕಿದ್ದರೆ ನೋಡು, ನಿನ್ನ ಹಣೆಯ ಕುಂಕುಮವಿಡುವ ಭಾಗದ ಪಕ್ಕದಲ್ಲೂ ಮಚ್ಚೆಯಿದೆ, ಅದೇ ಸ್ಥಳದಲ್ಲಿ ನನಗೂ ಮಚ್ಚೆಯಿದೆ. ನಮ್ಮಿಬ್ಬರ ಕಣ್ಣ ನೋಟ ಒಂದಾದ ದಿನದಿಂದ ಜೀವ ಅದೇಕೋ ಚಡಪಡಿಸುತ್ತಿದೆ. ಇಲ್ಲದೇ ಹೋದರೆ, ನೀನು ಒಂದು ದಿನ ನೋಡೋಕೆ ಸಿಗಲಿಲ್ಲವೆಂದರೆ ನನ್ನ ಮನಸ್ಸೇಕೆ ವಿಲ ವಿಲ ಒದ್ದಾಡುತ್ತದೆ? ನಿನಗಿಂತ ಅದೆಷ್ಟು ಅಂದವತಿ ತರುಣಿಯನ್ನು ನೋಡಿದ್ದರೂ ನಾನು ನಿನ್ನತ್ತ ಯಾಕೆ ಆಕರ್ಷಿತನಾದೆ? ನಿನ್ನನ್ನು ಕಂಡಾಕ್ಷಣ ಮನಸ್ಸೇಕೆ ಗೊಂಬೆಯನ್ನು ಕಂಡ ಮಗುವಿನಂತೆ ಹಟ ಹಿಡಿಯಿತು? ಹರಿತ ಚೂರಿಯಂಥ ನಿನ್ನ ನೋಟ ಅದೇಕೆ ನನ್ನ ಎದೆಯಾಳ ಕಲಕಿತು. ನಿನ್ನ ನಗುವಿನ ಅಲೆ ನನ್ನೆದೆಗೆ ಬಡಿದಾಗ ಆಗುವ ಸಂತಸಕ್ಕೆ ಕಾರಣವೇನು? ನನಗೆ ನೀನು ಉತ್ತರಿಸದಾಗ ಅದೇಕೆ ನಾನು ತತ್ತರನಾಗುತ್ತೇನೆ? ಯಾವುದೋ ಜನ್ಮದ ಮೈತ್ರಿಯಿರದೇ ನೀನು ನನಗೊಂದು ಗುಂಗಿನಂತೆ ಹೇಗೆ ಕಾಡಬಲ್ಲೆ? ನಿನಗಷ್ಟೇ ಕೇಳುವಂತೆ ಒಲವ ಗೀತೆಯೊಂದ ಹಾಡಬೇಕು ಅಂತ್ಯಾಕೆ ಮನಸ್ಸು ಕುಣಿಯುತ್ತದೆ? ಭಕ್ತಿಯ ಲೆವೆಲ್ಲಿಗೆ ಪ್ರೀತಿ ಮುಟ್ಟೋಕೆ ಸಾಧ್ಯ ಅಂತ ಯಾಕೆ ಅನ್ನಿಸುತ್ತಿದೆ?

ನಿನ್ನಲ್ಲೆ ಜೀವವನ್ನು… ಅಡವಿಟ್ಟುಬಂದೆ ನಾನು..
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು… ಹರಿಯುವ ಮುನ್ನವೇ..

summer_love_wallpaper_rjtz3

ತುಂಬಾ ದಿನದಿಂದ, ಕವಿತೆ ಪೂರ್ತಿ ಮಾಡಲು ಸಿಗದ ಕೊನೆಯ ಪದದಂತೆ ನಿನ್ನದೇ ಗುಂಗು ನನ್ನ ಜೀವನವನ್ನು ವ್ಯಾಪಿಸಿದೆ. ಪ್ರತಿ ಕ್ಷಣವೂ ಈಗ ನೀನೇನು ಮಾಡುತ್ತಿದ್ದಿರಬಹುದು ಎಂಬ ಊಹೆಯ ಸವಿಯಲ್ಲೇ ಕಳೆಯುತ್ತಿದೆ. ಮರೆಯಲು ನಾ ಮಾಡಿದ ಪ್ರಯತ್ನದಲ್ಲೆಲ್ಲಾ ನನ್ನದು ಘನಘೋರ ಸೋಲಾಗಿದೆ. ಆದರೂ ಮನಸ್ಸಿಗೆ ಒಂದು ಭರವಸೆ ಉಕ್ಕಿಸಿ ಸಮಾಧಾನ ಮಾಡುತ್ತಿರುತ್ತೇನೆ. ತಿಪಟೂರಿನ ಜಾತ್ರೆಯ ಜನಜಂಗುಳಿಯಲ್ಲಿ ನಿನಗೆ ಅರಿವಿರದಂತೆ ನಿನ್ನ ಕಿರುಬೆರಳನ್ನು ಮುಟ್ಟುತ್ತೇನೆ. ಅರಳುವ ಹೂವೊಂದನ್ನು ನೋಡಿ ಖುಷಿಪಟ್ಟ ದಿನ, ಅಲ್ಲೆಲ್ಲೊ ಮರದ ಹಿಂದೆ ನಿನಗೇ ಅರಿವಿರದಂತೆ ನಿಂತು ನಾನೂ ಆನಂದ ಪಡುತ್ತೇನೆ. ನಿನ್ನ ಪಲ್ಲುವಿನ ಎಳೆಯೊಂದನ್ನು ಕದ್ದು ನನ್ನ ಪರ್ಸಿನಲ್ಲಿ ಖಾಯಂ ಆಗಿಟ್ಟುಕೊಳ್ಳುತ್ತೇನೆ. ಯಾವಾಗಲೋ ಒಮ್ಮೆ ನೀನು ನೋಡಿ ಕುತೂಹಲದಿಂದ ಕರೆ ಮಾಡುವೆ ಎಂಬ ಭರವಸೆಯಿಂದ ನಿನ್ನ ಡೈರಿಯ ಕೊನೆಯ ಪುಟಗಳಲ್ಲಿ ನನ್ನ ನಂಬರನ್ನು ಬರೆದಿಡುತ್ತೇನೆ. ತುರುವೆಕೆರೆ ತಿರುವುಗಳಲ್ಲಿ ಕೇವಲ ನಿನಗಷ್ಟೇ ಕೇಳುವಂತೆ ನಿನ್ನ ಹೆಸರನ್ನು ಕೂಗುತ್ತೇನೆ. ಮೂಲೆ ಶಂಕರೇಶ್ವರ ದೇವಸ್ಥಾನದಲ್ಲಿ ನಿನ್ನ ಹುಟ್ಟುಹಬ್ಬದ ದಿನ ನಿನ್ನ ಹೆಸರಲ್ಲಿ ಅರ್ಚನೆ ಮಾಡಿಸುತ್ತೇನೆ. ದಾಸರಿಘಟ್ಟ ಚೌಡೇಶ್ವರಿ, ಹೊನ್ನಮ್ಮನ ಬಳಿ ನಿನಗೆ ಸದಾ ಒಳ್ಳೆಯದಾಗಲಿ, ಬದುಕು ಪೂರ್ತಿ ಖುಷಿ ಇರಲಿ ಅಂತ ಹರಕೆ ಹೊತ್ತುಕೊಳ್ಳುತ್ತೇನೆ. ಇಂಥ ಸಮಾಧಾನದಿಂದಲಷ್ಟೇ ಮನಸ್ಸು, ನೀನು ನನ್ನೆಡೆ ನಗದಿದ್ದರೂ, ನನಗೆ ಉತ್ತರಿಸದಿದ್ದರೂ, ನನ್ನನ್ನು ನೆಗ್ಲೆಕ್ಟ್ ಮಾಡಿದರೂ ಸುಮ್ಮನಿದೆ. ಇಲ್ಲದೇ ಹೋಗಿದ್ದರೆ ರಚ್ಚೆ ಹಿಡಿವ ಮನಸ್ಸೆಂಬ ಮಗುವನ್ನು ಸಂತೈಸಲು ಜಗತ್ತಿನ ಎಲ್ಲಾ ಅಮ್ಮಂದಿರ ಪ್ರೀತಿಯನ್ನು ಒಟ್ಟುಹಾಕಿ ಸಂಭಾಳಿಸಬೇಕಾದೀತು!

– ನಿನ್ನ ಚಿಟ್ಟೆ ಕ್ಲಿಪ್ಪಿನ ಫ್ಯಾನ್!

ಡಿಯರ್ ಗುಂಗರಮಳೆಯ ಗೊಂಬೆ

ಈಗಲೂ ಅನ್ಸೋದು; ನಿನ್ನನ್ನು ಸರಿಯಾಗಿ ನಾನಿನ್ನೂ ನೋಡೇ ಇಲ್ಲ. ಹೌದು; ತುಂಬಾ ಸಲ ಕದ್ದು ನೋಡೋಕೆ ಪ್ರಯತ್ನ ಪಟ್ಟಿದೀನಿ. ಆದರೆ, ಆ ಆಯಸ್ಕಾಂತ ಕಣ್ಣುಗಳ ಸೆಳೆತದಿಂದ ಹೊರಬಂದು ನಿನ್ನನ್ನು ಕಣ್ತುಂಬಾ ನೋಡಬೇಕು ಎಂಬ ಆಸೆ ಮರೀಚಿಕೆಯಾಗೇ ಉಳಿದಿದೆ. ನಿಜ್ಜಾ ಹೇಳ್ತೀನಿ; ನಿನ್ನ ಕಿವಿಯ ಲೋಲಾಕನ್ನು ಫೇಸ್ ಬುಕ್ ನ ಪ್ರೊಫೈಲ್ ಫೊಟೋದಲ್ಲಿ ನೋಡಿದ್ದೇನೆಯೇ ವಿನಾ ನಿಜವಾಗಿ ಅದರ ಅಂದವನ್ನು ಇನ್ನೂ ನಾ ಸವಿದೇ ಇಲ್ಲ! ನಿನ್ನ ಕಂಗಳಿಗೆ ಅದೆಂಥಾ ಶಕ್ತಿಯಿದೆಯೇ ಮಾರಾಯ್ತೀ. ದೇವರನ್ನೇ ನಂಬಬೇಕು ಅನ್ನುವಷ್ಟು! ನಿಂಗೇ ಗೊತ್ತಿರೋ ಹಾಗೆ ನಾನು ಅದೆಷ್ಟು ಸಲ ಆ ಸೆಳೆತವನ್ನು ಭರಿಸಲಾಗದೇ ಮುಖ ತಗ್ಗಿಸಿದ್ದಿದೆ. ಆ ಹೋರು ಬೆಳಕಿಗೆ ಕಣ್ಣೊಡ್ಡಲಾಗದೇ ಸೋತಿದ್ದೇನೆ. ನೀನು ನನ್ನತ್ತ ನೋಡಿದ ಒಂದು ಸೆಕೆಂಡನ್ನು ತುಂಬಿಕೊಳ್ಳಲು ಈ ಮನಸ್ಸಿಗೆ ಏದುಸಿರು. ಆ ಬೆಳಕು ಮೈಯೆಲ್ಲಾ ವ್ಯಾಪಿಸಿ, ಆತ್ಮ ಒಮ್ಮೆ ಕಂಪಿಸಿ, ಬೆಳಕಿನ ಸ್ನಾನವಾದಷ್ಟೇ ಮನಸ್ಸು ಶುದ್ಧ ಶುದ್ಧ!

images1_thumb.jpg

ನೀ ಬಂದು.. ಬಳಿ ನೀ ಬಂದು..
ಈ ಸ್ವಪ್ನದ ಗಾಯ ನೋಡು…

ನೀನು ಎ.ಆರ್.ರೆಹಮಾನ್ ಸಂಗೀತದ ಹಾಗೆ; ಗುಟುಕು ಬಿಯರಿನ ಹಾಗೆ. ಮೊದಲಿಗೆ ಇಷ್ಟ ಅನ್ನಿಸಲ್ಲ. ಆದರೆ ಒಮ್ಮೆ ಗುಂಗು ಹತ್ತಿಬಿಟ್ಟರೆ ಮತ್ತೆ ಮತ್ತೆ ನೋಡುವ ಆಸೆ. ನೀನು ಜೀವನ ಪೂರ್ತಿ ಗುನುಗುವ ಗಾನ, ಸದಾ ಎದೆಯೊಳಗೇ ಉಳಿಯುವ ರಾಗ. ನೀನು ನನ್ನ ಹೃದಯದಲ್ಲಿರುವ ಮಚ್ಚೆ. ತಿರುಮಲೇಶರ ಅಕ್ಷಯ ಕಾವ್ಯದಂತೆ – ಯಾವ ಪುಟದಿಂದಾದರೂ ಶುರು ಮಾಡಿ- ಯಾವ ಪುಟದಲ್ಲಾದರೂ ನಿಲ್ಲಿಸಿ – ಎದೆ ತುಂಬಿಕೊಳ್ಳಬಹುದಾದಂತ ಅನನ್ಯ ಕಾವ್ಯ. ಚಂದದ ಸಾಲೊಂದನ್ನು ಬರೆಯುವಾಗ ಕಾಯ್ಕಿಣಿಯ ಭಾವವಿನ್ಯಾಸದಲ್ಲಿ ಮೂಡಿದ ಪಲುಕು. ನಿನ್ನಲ್ಲೇ ಕೆ.ಎಸ್.ನ. ಕವಿತೆಯ ಎಲ್ಲಾ ನಯ ನಾಜೂಕು ಮನೆ ಮಾಡಿದೆ. ನಿನ್ನ ಕಂಗಳು ಮಣಿಕಾಂತ್ ಪುಸ್ತಕದ ಶೀರ್ಷಿಕೆಯಂತಿರುತ್ತದೆ, ಒಮ್ಮೆ ಒಳ ಹೊಕ್ಕು ನೋಡಬೇಕೆಂಬ ಆಸೆ ಹುಟ್ಟಿಸುತ್ತದೆ. ಹೊಕ್ಕರೆ ನೆನಪುಗಳ ಜೋಳಿಗೆಯಿಂದ ಮನಸ್ಸು ಭಾರ. ನಿನ್ನ ಕೂದಲಿನ ಕಪ್ಪು ಜಲಪಾತದಲ್ಲಿ ಕುವೆಂಪು ಕವಿತೆಗಳ ಗಾಢತೆ, ನವಿರುತನ ಇದೆ. ಒಂದು ಅದ್ಭುತ ಕಥೆ ಬರೆದ ಬಳಿಕ ರವಿ ಬೆಳೆಗೆರೆ ಇಡುವ ಕೊನೆಯ ಫುಲ್ ಸ್ಟಾಪ್ ನಿನ್ನ ಬಿಂದಿ ಅನ್ನಿಸುತ್ತದೆ. ನಿನ್ನ ಕೊರಳಿನ ಪದಕ ನನ್ನ ಹೃದಯ – ಎಂಬಂಥ ಸಾಲು ಬರೆದಾಗ ಎಚ್ಚೆಸ್ವಿಯಲ್ಲಿ ಮೂಡಿದ ಭಾವನೆ ನಿನ್ನ ಕಂಗಳಲ್ಲಿ ಜಿನುಗುತ್ತಿರುತ್ತದೆ. ನಂಗನ್ಸುತ್ತೆ, ನೀನ್ಯಾರನ್ನೆಲ್ಲಾ ನೋಡಿ ನಗುತ್ತೀಯೋ ಅವರೆಲ್ಲಾ ಜೋಗಿಯಂತೆ ಇಪ್ಪತ್ತೈದು ದಿನಕ್ಕೊಂದು ಕಾದಂಬರಿ ಬರೆಯಬಲ್ಲರು. ನಿನ್ನ ಕಿರುಬೆರಳ ಕರೆಗೆ ವಿಶ್ವೇಶ್ವರ ಭಟ್ಟರ ಪುಸ್ತಕದಲ್ಲಿದ್ದಂತೆ ಪ್ರಪಂಚವನ್ನೇ ಗೆಲ್ಲಬಲ್ಲಂಥ ಹುಮ್ಮಸ್ಸನ್ನು ಕೊಡಬಲ್ಲಂಥ ಶಕ್ತಿಯಿದೆ. ಒಂದೊಳ್ಳೆ ಕಥೆ ಬರೆದ ನಂತರ ಚಿತ್ತಾಲರ ಮೈ ಮುರಿಯುವಿಕೆಯ ಸುಖ ನಿನ್ನ ಆಕಳಿಕೆಯಲ್ಲಿದೆ. ನಿನ್ನ ನಗೆಯನ್ನು ಪೋಸ್ಟ್ ಮಾರ್ಟಮ್ ಮಾಡಿ ವಿಶ್ಲೇಷಿಸಿದರೆ ಅದರಲ್ಲಿ ಪೂಚಂತೇ ಬರಹದ ಸವಿಯಿದೆ. ಗಾಳಿಯೊಡನೆ ಆಟವಾಡುವ ನಿನ್ನ ಮುಂಗುರಳಲ್ಲಿ ಬೇಂದ್ರೆ ಕವಿತೆಯ ಅರ್ಥಬದ್ಧ ಪ್ರಾಸ ಇದೆ. ನಿನ್ನ ನಡೆ ನುಡಿಯಲ್ಲಿ ಭೈರಪ್ಪನವರ ಡೀಟೈಲಿಂಗ್ ಇದೆ. ನಿನ್ನ ಮನಸ್ಸು ಮಾತ್ರ – ಅಡಿಗರ ಕವಿತೆಯಂತೆ. ತಿಳಿದುಕೊಂಡಷ್ಟು ಹೊಸ ಅರ್ಥಗಳು, ಒಳಹೊಕ್ಕಷ್ಟೂ ಮತ್ತಷ್ಟು ವಿವರಗಳು.
ಒಟ್ಟಾರೆ ಹೇಳಬೇಕೆಂದರೆ- ನೀನೊಂದು ನಡೆಯುವ ಕವಿತೆ.

images

ನೀನೆಂದರೆ ನನ್ನೊಳಗೆ… ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ… ನೀನೇ ಒಂದು ಸಂಕಲನ

ನಿಂಗೆ ಎಲ್ಲಾ ಅರ್ಥ ಆಗೋದು ಲೇಟು. ಮೆಸ್ಸೇಜಿಗೆ ಉತ್ತರ ಕೊಡುವುದೂ ಅದೆಷ್ಟು ತಡ. ತುಂಬಾ ಸಲ ನಿನ್ನ ಮೆಸ್ಸೇಜಿನ ಬಾಕ್ಸ್ ನ್ನು ತೆರೆದೇ ಇಟ್ಟು ಹಸಿದ ಮನ ವೀಣಾ ಸ್ಟೋರ್ಸ್ ಮುಂದೆ ಇಡ್ಲಿಗಾಗಿ ಕಾಯುತ್ತಿರುವಂತೆ ನಿನ್ನ ಮೆಸ್ಸೇಜಿಗಾಗಿ ಕಾಯುತ್ತಿರುತ್ತೇನೆ. ಇದೀಗ ಟಣ್ ಅನ್ನುವ ಸದ್ದಿನೊಂದಿಗೆ ನಿನ್ನ ಉತ್ತರ ಬರುತ್ತದೆ ಭರವಸೆಯ ಆಶ್ವಾಸನೆಯೊಂದಿಗೆ ಅದೆಷ್ಟು ಕ್ಷಣಗಳಿಗೆ ನಾನು ಮೋಸ ಮಾಡಿಲ್ಲ? ನನ್ನ ಕಂಗಳ ಬೇಡಿಕೆ ನಿಂಗರ್ಥ ಆಗಿದ್ದಿದ್ದರೆ ಇಷ್ಟೊತ್ತಿಗೆ ಒಂದು ಸುಂದರ ಸ್ನೇಹವೊಂದು ರೂಪುಗೊಂಡಿರುತ್ತಿತ್ತು. ನಿನ್ನ ಉತ್ತರ ಮತ್ತು ನನ್ನ ಮರು ಉತ್ತರದ ನಡುವಿನ ಸಮಯದ ಲಯವೇ ಹೇಳುತ್ತದೆ; ಬಹುಷಃ ಬೆಳಗಾಗುತ್ತಲೇ ನಾನು ಗುಡ್ ಮಾರ್ನಿಂಗ್ ಹೇಳುವುದು ನಿನ್ನ ಉತ್ತರದ ನಿರೀಕ್ಷೆಗೇ. ಪ್ರತೀ ಕ್ಷಣದ ರುಚಿ ನೋಡಿ ನಿನಗಾಗಿ ಕಾಯ್ದಿರಿಸುವ ಶಬರಿ ನಾನು, ಅಂತಲೇ ನನ್ನ ಬಗ್ಗೆ ನನಗಿರುವ ಗುಮಾನಿ. ಇಷ್ಟಕ್ಕೂ ನನಗೆ ಬೇಕಿರುವುದು ಒಂದು ಸುಂದರ ಸ್ನೇಹ. ನಿನ್ನನ್ನು ಅರಿಯುವ ಸುಖ. ಬದುಕು ಪೂರ್ತಿ ಖುಷಿಯಿಂದ ಕಳೆಯಲು- ನಿನ್ನ ಜೊತೆ ಕಳೆದ ಸಮಯಗಳ ಒಂದು ಜೋಳಿಗೆಯಷ್ಟು ನೆನಪುಗಳು. ಮತ್ತು ಕೊಂಚೇ ಕೊಂಚ ಪ್ರೀತಿ.
ಜೊತೆಗೆ ನೀನು ಸದಾ ಖುಷಿಯಾಗಿರುವುದು.
ಇಷ್ಟು ಪುಟ್ಟ ಬೇಡಿಕೆಯಿಟ್ಟುಕೊಂಡು ನಿನ್ನ ಉತ್ತರಕ್ಕಾಗಿ ಪ್ರತಿದಿನ ಕಾಯುತ್ತಿರುತ್ತೇನೆ; ಎಂದಿನಂತೆ.
ಇದೇ ನನ್ನ ನಾಳೆಗಳನ್ನು ರುಚಿಕಟ್ಟಾಗಿರಿಸುತ್ತಿದೆ. ಇದೇ ಭರವಸೆಯ ನೊಗ ಹೊತ್ತು ದಿನದ ಹೊಲವನ್ನು ಉಳುತ್ತಿರುತ್ತೇನೆ.

–  ನಿನ್ನ ಕಣ್ಣುಗಳ ಫ್ಯಾನ್

ಇತ್ತೀಚೆಗೆ ಓದಿದ ಪುಸ್ತಕಗಳಲ್ಲಿ ನನ್ನನ್ನು ತುಂಬಾ ಬದಲಾಯಿಸಿದ ಪುಸ್ತಕದ ಕುರಿತು ಹೇಳಬೇಕನ್ನಿಸುತ್ತಿದೆ. ರುಜುತಾ ದಿವೇಕರ್ ಬರೆದಿರುವ ಡೋಂಟ್ ಲೂಸ್ ಯುವರ್ ಮೈಂಡ್, ಲೂಸ್ ಯುವರ್ ವೆಯ್ಟ್ – ಅನ್ನುವುದು ಆ ಪುಸ್ತಕದ ಹೆಸರು. ಕಮರ್ಷಿಯಲ್ ದೃಷ್ಟಿಯಿಂದ ಪುಸ್ತಕದ ಶೀರ್ಷಿಕೆ ತೂಕ ಇಳಿಸುವ ಬಗ್ಗೆ ಇದ್ದರೂ, ಪುಸ್ತಕದ ಒಳಗೆ ಆರೋಗ್ಯಕರವಾದ ಬದುಕನ್ನು ಕಟ್ಟಿಕೊಳ್ಳುವ ವಿಚಾರವನ್ನು ಬಹಳ ಸರಳವಾಗಿ, ತರ್ಕಬದ್ಧವಾಗಿ ಮಂಡಿಸುತ್ತಾರೆ ರುಜುತಾ. ಕರೀನಾ ಕಪೂರ್ ಗೆ ಡಯಟಿಷಿಯನ್ ಆಗಿ, ಆಕೆಯ ಜೀರೋ ಸೈಜ್ ಗೆ ಕಾರಣೀಭೂತರಾಗಿದ್ದುದರಿಂದ ಒಮ್ಮಿಂದೊಮ್ಮಲೆ ಪ್ರಸಿದ್ಧಿ ದೊರಕಿದರೂ, ಆಕೆಯ ಥಿಯರಿಗಳು ತುಂಬಾ ಸುಲಭ ಸಾಧ್ಯವಾದುದು. ಎಲ್ಲ ವರ್ಗದ ಜನರೂ ಆರಾಮಾಗಿ ಪಾಲಿಸಬಲ್ಲಂಥದ್ದು.

ಪುಸ್ತಕ ಓದಿ ಅಂತ ಹೇಳುತ್ತಲೇ ಆಕೆಯ ಕೆಲ ಮುಖ್ಯ ಥಿಯರಿಯನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ಇನ್ನಷ್ಟು ವಿವರಗಳಿಗೆ ಕಾಪಿ ರೈಟ್ ಸಮಸ್ಯೆಯ ಕಾರಣ ನೀವು ಪುಸ್ತಕದ ಮೊರೆ ಹೋಗಬೇಕಾಗುತ್ತದೆ.

don-t-lose-your-mind-lose-your-weight-400x400-imadaryhavfhdnfv

೧. ಬೆಳಿಗ್ಗೆ ಎದ್ದ ಹತ್ತು ಹದಿನೈದು ನಿಮಿಷದಲ್ಲಿ ಹಣ್ಣು, ಡ್ರೈ ಫ್ರೂಟ್ಸ್ ಇಂತದ್ದೇನಾದರೂ ತಿನ್ನಬೇಕು. ಎದ್ದ ಕೂಡಲೇ ಕಾಫಿ ಮತ್ತು ಟೀ ಮಾತ್ರ ಯಾವ ಕಾರಣಕ್ಕೂ ಸಲ್ಲದು. ಕಾಫಿ ಇಲ್ಲದೇ ಬಾಳಲಾಗದವರು, ಎರಡನೇ ಉಪಹಾರದ ನಂತರ ಕಾಫಿ ಸೇವಿಸಬಹುದು.
೨. ದಿನವಿಡೀ ೨ ಅಥವಾ ಮೂರು ಘಂಟೆಗೊಮ್ಮೆ ಸ್ವಲ್ಪ ಆಹಾರ ಸೇವಿಸಬೇಕು. ಅಂದರೆ ಬೆಳಿಗ್ಗೆ ಉಪಹಾರಕ್ಕೆ ಏನು ತಿನ್ನುತ್ತೀರೋ ಅದರ ಅರ್ಧದಷ್ಟನ್ನು ಎರಡು ಬಾರಿ ಎರಡು ಗಂಟೆ ಗ್ಯಾಪ್ ನಲ್ಲಿ ತಿನ್ನುವುದು. ದಿನವಿಡೀ ಕಡಿಮೆ ಆಹಾರವನ್ನು, ಸಮಯದ ಗ್ಯಾಪ್ ಇಟ್ಟು, ಹೆಚ್ಚು ಬಾರಿ ಸೇವಿಸಬೇಕು.
೩. ದಿನದಲ್ಲಿ ನೀವು ಹೆಚ್ಚು ಆಕ್ಟಿವ್ ಆಗಿರುವಂಥ ಸಮಯದಲ್ಲಿ ಹೆಚ್ಚು ತಿನ್ನುವುದು, ಕಡಿಮೆ ಆಕ್ಟಿವಿಟಿ ಇರುವಾಗ ಕಮ್ಮಿ ತಿನ್ನುವುದು.
೪. ರಾತ್ರಿ ಮಲಗುವ ಎರಡು ಅಥವಾ ಮೂರು ಗಂಟೆ ಮುಂಚಿತವಾಗಿ ರಾತ್ರಿಯೂಟವನ್ನು ಮಾಡುವುದು.

ಇಷ್ಟೇ ಸಿಂಪಲ್ ಆದ ಪಾಯಿಂಟ್ಸ್ ಗಳು ಈ ಪುಸ್ತಕದ ಜೀವಾಳ. ಇದನ್ನು ಯಾಕೆ ಮಾಡಬೇಕು, ಮಾಡುವುದರಿಂದ ಪ್ರಯೋಜನವೇನು ಎಂಬುದನ್ನು ರುಜುತಾ ವಿವರಿಸಿದ್ದಾರೆ. ಜೊತೆಗೆ ಎಂಥೆಂಥ ಆಹಾರವನ್ನು ಸೇವಿಸಬಹುದು, ಸೇವಿಸಬಾರದು ಎಂಬದರ ಬಗ್ಗೆ ಕೂಲಂಕಷ ವಿವರಣೆ ಸಿಗುತ್ತದೆ. ಆಹಾರದ ಜೊತೆಗೆ ವಾರಕ್ಕೆ ಕಡಿಮೆ ಅಂದರೆ ಮೂರು ಗಂಟೆಗಳ ಕಾಲ ವ್ಯಾಯಾಮ ಅಗತ್ಯ. ಇದಕ್ಕೆ ಮಾತ್ರ ಯಾವ ಶಾರ್ಟ್ ಕಟ್ ಇಲ್ಲ ಅಂತ ಖಡಾಖಂಡಿತವಾಗಿ ಹೇಳುವ ರುಜುತಾರ ಮತ್ತೊಂದು ಪುಸ್ತಕ ವ್ಯಾಯಾಮದ ಬಗ್ಗೆಯೇ ಇದೆ.

*****

ಮೊನ್ನೆ ಸುಚಿತ್ರಾ ಫಿಲಂ ಸೊಸೈಟಿ ಅಂಗಳದಲ್ಲಿ ಯೋಗರಾಜ್ ಭಟ್ ರ ಜೊತೆ ಸಂವಾದವಿತ್ತು. ಈ ಸಂವಾದಕ್ಕೂ ಮೊದಲು ಅವರ ಉಢಾಫೆ ಪ್ರವೃತ್ತಿಯಿಂದಾಗಿ ಅವರ ಬಗ್ಗೆಯೇ ನನ್ನೊಳಗೆ ಒಂದು ಉಢಾಫೆ ಮನೆಮಾಡಿತ್ತು. ಅವರ ಆ ಎರಡು ಗಂಟೆಯ ಸಂವಾದದ ಬಳಿಕ ಅವರ ಬಗ್ಗೆ ಇದ್ದ ಪೂರ್ವಗ್ರಹ ಹೊರಟು ಹೋಯಿತು. ಯೋಗರಾಜ್ ಭಟ್ ಯಾವುದೇ ಪ್ಲಾನ್ ಇಟ್ಟುಕೊಂಡು ಮಾತಾಡುವುದಿಲ್ಲ. ಆ ಕ್ಷಣ ಅನ್ನಿಸಿದ್ದನ್ನು, ಒಂಚೂರು ತನ್ನ ಮೇಲೆ ತಾನೇ ವ್ಯಂಗ್ಯವಿಟ್ಟುಕೊಂಡು, ತೆಳು ಹಾಸ್ಯದ ಲೇಪದ ಮೂಲಕ ನಿಶ್ಕಲ್ಮಷವಾಗಿ ಹೇಳಿಬಿಡುತ್ತಾರೆ. ಇನ್ನೊಂದು ಅರಿವಾದ ವಿಚಾರವೆಂದರೆ ಅವರ ಓದಿನ ಹರವು ವಿಸ್ತಾರವಾಗಿದೆ. ಬಹುಶಃ ಇದುವರೆಗೂ ಚಿತ್ರರಂಗದಲ್ಲಿ ಗಟ್ಟಿಯಾಗಿ ತಮ್ಮ ಛಾಪನ್ನು ಉಳಿಸಿಕೊಳ್ಳಲು ಅವರ ಸಾಹಿತ್ಯಾಭಿರುಚಿಯೇ ಕಾರಣವಿರಬೇಕು. ಚಿತ್ರಗೀತೆ ಬರೆಯುವಾಗ ಎಂಥ ಎಬುಡ ತಬುಡ ಪ್ರಯೋಗಗಳ ಮಾಡಲು, ಕಾರಣ ಕನ್ನಡ ವ್ಯಾಕರಣದ ಜ್ಞಾನ, ಬೇರೆ ಬೇರೆ ಧಾಟಿಯ ಕನ್ನಡದ ಮೇಲಿನ ಹಿಡಿತ, ಸಾಹಿತ್ಯ ಬಲ್ಲ ಆತ್ಮವಿಶ್ವಾಸವೇ ಅನ್ನುವುದು ಅರಿವಾಗ್ತದೆ.

ಅವರು ಆ ದಿನ, ಈ ಮುಖ್ಯವಾದ ವಿಚಾರಗಳ ಕುರಿತು ಮಾತಾಡಿದರು (ಅವರು ಹೇಳೋ ಶೈಲಿ ಬೇರೆ, ಅದರ ಸಾರ ಮಾತ್ರ ಇಲ್ಲಿದೆ) :-
~ ಸಿನಿಮಾ ಅಂದರೆ ನನಗೆ ಯಾವಾಗಲೂ ಎರಡು ಘಟನೆಗಳು ಕಾಡುತ್ತದೆ. ಒಮ್ಮೆ ಒಂದು ಸಾಹಿತ್ಯ ಸಭೆಯಲ್ಲಿ ಲೇಖಕರೊಬ್ಬರು ಸಾಹಿತ್ಯದ ಕುರಿತು ಭೀಷಣವಾಗಿ ಭಾಷಣ ಮಾಡುತ್ತಿದ್ದರು. ಬಹುಶಃ ಭಾಷಣದ ಓಘದಲ್ಲಿ ಮೈಮರೆತು ಸಾಹಿತ್ಯವನ್ನು ಓದಿಕೊಳ್ಳದವನು ಮನುಷ್ಯನೇ ಅಲ್ಲ ಎಂದು ಬಿಟ್ಟರು. ಅಲ್ಲಿ ಕೂತಿದ್ದ ಮುದುಕನಿಗೆ ಅದು ನೋವುಂಟು ಮಾಡಿರಬೇಕು, ಸರ…ಒಂದ್ನಿಮಿಷರೀ..ಅಂದ. ಸಭೆ ಅವರತ್ತ ತಿರುಗಿತು. ಅವರು ಎದ್ದು ನಿಂತು ಅಲ್ಲಾ.. ಈ ಸಾಹಿತ್ಯ ಪಾಹಿತ್ಯ, ಕಥೀ ಪಥೀ ಓದ್ಲಿಲ್ಲಾ ಅಂದ್ರೆ ಮನುಷ್ಯಾನೇ ಅಲ್ಲ ಅಂತೀರಲ್ರೀ.. ನಾನಾಗ್ಲೀ, ನಮ್ಮಪ್ಪನಾಗ್ಲೀ, ನಮ್ಮ ದೊಡ್ಡಪ್ಪ, ನಾವು ಏಳು ಜನ ಅಣ್ಣತಮ್ಮಂದಿರಿದೀವು.. ಯಾರೂ ಇದುವರೆಗೂ ಒಂದ್ ಪೇಜೂ ಓದಿಲ್ಲ.. ನಾವ್ ಮನುಷ್ಯರು ಹೌದೋ ಅಲ್ಲೋ..? ಅಂತ ಕೇಳಿಯೇ ಬಿಟ್ಟರು.

index-yograj
ಇನ್ನೊಂದು ನಾಗತಿಹಳ್ಳಿಯವರ ಸಿನಿಮಾ ಕ್ಲಾಸ್ ನಲ್ಲಿ ನಡೆದದ್ದು -ಅದರ ಸಾರಾಂಶ ಎಂದರೆ, ಸಿನಿಮಾ ಎಂದರೇನು ಅನ್ನೊ ಪ್ರಶ್ನೆ ಬಂದಾಗ, ಭಟ್ಟರು ಹೇಳಿದ್ದು ಸಿನಿಮಾ ಅನ್ನುವುದು ಕೆಲಸವಿಲ್ಲದವರು ಮಾಡುವ ಕೆಲಸ ಅಂತ. ಕೊನೆಗೆ ಅದನ್ನು ವಿವರಿಸಲೇಬೇಕಾಗಿ ಬಂದಾಗ, “ನೀವು ಸಿನಿಮಾ ನೋಡಲು ಹೋಗಬೇಕಾಗಿ ಬಂದಾಗ, ಎಕ್ಸಾಮ್ ಇದ್ರೆ ಹೋಗಲ್ಲ, ಆಫೀಸಿನಲ್ಲಿ ಏನಾದ್ರೂ ಇಂಪಾರ್ಟೆಂಟ್ ಕೆಲ್ಸ ಇದ್ರೆ ಹೋಗಲ್ಲ, ಹತ್ತಿರದವರ್ಯಾದರೂ ತೀರ್ಕೊಂಡಿದ್ದಾಗ ಹೋಗಲ್ಲ, ಹೀಗೆ ಐದಾರು ಘಂಟೆ ಫ್ರೀ ಇದ್ದಾಗ ಮಾತ್ರ ಸಿನಿಮಾ ನೋಡೋದು ಅನ್ನೋದು ನಡೆಯುತ್ತೆ. ಹೀಗಿದ್ದಾಗ ಸಿನಿಮಾ ಅನ್ನೋದು ಕೆಲಸವಿಲ್ಲದವರು ನೋಡುವ, ಮತ್ತಷ್ಟು ಕೆಲಸ ಇಲ್ಲದವನೇ ಮಾಡೋ ಕೆಲಸ ಅನ್ನುವುದನ್ನು ಹಾಸ್ಯವಾಗಿ, ವಿಡಂಬನೆಯಿಂದ ತನ್ನನ್ನು ತಾನೇ ಗೇಲಿ ಮಾಡಿಕೋತಾ ವಿವರಿಸಿದ್ರು.
~ ಯಾವ ಯಾವ ಭಾಷೆಯಲ್ಲಿ ಸಾಹಿತ್ಯ ಸಮೃದ್ಧವಾಗಿದೆಯೋ ಅಲ್ಲಿ ಚಿತ್ರರಂಗ ತುಂಬಾ ದುರ್ಬಲವಾಗಿರುತ್ತದೆ (ಕಮರ್ಷಿಯಲ್ಲೀ). ಇದಕ್ಕೆ ಕನ್ನಡ, ಬೆಂಗಾಳೀ, ರಾಜಸ್ಥಾನೀ ಭಾಷೆಗಳು ಉದಾಹರಣೆ.
~ ಕನ್ನಡ ಚಿತ್ರಗಳನ್ನು ನೋಡುವವರು ಬಹುತೇಕ ಹದಿನಾರರಿಂದ ಇಪ್ಪತ್ತೈದು ವಯಸ್ಸಿನವರು. ಅವರು ಮೊದಲು ನೋಡಿ, ಅವರಿಗಿಷ್ಟ ಆದರೆ ಮಾತ್ರ ಅವರ ಅಪ್ಪ ಅಮ್ಮ, ಅಂಕಲ್ ಆಂಟಿ, ಅಕ್ಕ ಭಾವ ನೋಡೋಕೆ ಬರ್ತಾರೆ. ಹಾಗಾಗಿ ನನ್ನ ಸಿನಿಮಾ ಅವರನ್ನು ಓಲೈಸುವ ಹಾಗಿರುತ್ತದೆ. ಅದು ಈಗಿನ ಮಾರುಕಟ್ಟೆಯ ಅವಶ್ಯಕತೆ ಕೂಡ.
~ ಎಲ್ಲರೂ ಒಳ್ಳೆ ಸಿನಿಮಾ ಮಾಡಿ, ಒಳ್ಳೇ ಕಥೆ ಬರೀರಿ ಅಂತಾರೆ. ಮಾಡಿದರೆ ನೋಡಲ್ಲ. ಬರೆದರೆ ಓದಲ್ಲ.

~ ನಾನು ಕಥೆಯನ್ನು ಪಾತ್ರಗಳ ಮೂಲಕ ಹೇಳಲು ಬಯಸ್ತೇನೆ. ನಂಗೆ ಸಿನಿಮಾ ಮಾಡಲು ಒಂದೊಳ್ಳೆ ಪಾತ್ರ ಸಿಕ್ಕರೆ ಸಾಕು. ಇದು ತಪ್ಪು ಅಂತ ಗೊತ್ತು. ಇಲ್ಲಿ ಸಿನಿಮಾ ಮಾಡಬಯಸುವ ನಿರ್ದೇಶಕರಿಗೆ ಹೇಳೋದು ಒಳ್ಳೆ ಕಥೆ ಇಟ್ಕೊಂಡು ಸಿನಿಮಾ ಮಾಡಿ.

ಇನ್ನಷ್ಟು ಒಳ್ಳೆಯ ಸಂವಾದ ಅಲ್ಲಿ ನಡೆಯಿತು. ಮೆದುಳಿಗೆ ಒಳ್ಳೆ ಮೇವು ದೊರಕಿಂದಂತೆ ಸಂತೃಪ್ತಿಯಿಂದ ಹೊರಬಂದೆ.