Archive for the ‘ಕಥಾ ವಿಚಾರ’ Category

ಗೋಳಿಬಜೆ!

Posted: ಮಾರ್ಚ್ 17, 2015 in ಕತೆ, ಕಥಾ ವಿಚಾರ

Golibaje(1)

ಆ ಒಂದು ಕರೆ ಬರುತ್ತಿದ್ದಂತೆ ಮನೆಯಲ್ಲಿ ಪುಟ್ಟ ಸಡಗರವೊಂದು ಮೈತಳೆದಿತ್ತು.

ಅಮ್ಮ ಆಗಲೇ ಮೈದಾ ಕಲಸುತ್ತಿದ್ದಳು. ಹೊರಗೆ ರಂಗೋಲಿಗೆ ನೀರು ಚಿಮುಕಿಸುವಂತೆ ಸಣ್ಣ ಮಳೆ. ಅಣ್ಣನಿಗೆ ಅಮ್ಮ ಅದೇನೋ ತರಲು ಹೇಳುತ್ತಿದ್ದಂತೆ ಅವ ಸೈಕಲ್ ಹತ್ತಿ ಮೊಗದಲ್ಲಿ ಸಂಭ್ರಮ ಹೊತ್ತು ಹೊರಟ. ಗುಲಾಬ್ ಜಾಮೂನ್ ಮಿಕ್ಸ್ ತರಲು ಹೇಳಿದ್ದಿರಬಹುದಾ? ಆದರೆ ನನಗೆ ಅದಕ್ಕಿಂತಲೂ ಮಹತ್ವವಾದ್ದು ಅಡುಗೆಮನೆಯಲ್ಲಿ ಸಿದ್ಧವಾಗ್ತಿತ್ತು. ಗೋಳಿಬಜೆ. ಅಮ್ಮ ಅದ್ಭುತವಾಗಿ ಮಾಡುತ್ತಿದ್ದಳು. ಬಾಯಿ ಚಪ್ಪರಿಸಿಕೊಂಡು ತುಂಬು ಖುಶಿಯಿಂದ ತಿನ್ನುತ್ತಿದ್ದೆವು. ಒಂದು – ಎರಡು – ಮೂರು….. ಉಹುಂ… ತಿಂದಷ್ಟೂ ಹೊಟ್ಟೆ ಖಾಲಿಯಾದಂತನ್ನಿಸುತ್ತಿತ್ತು. ಒಂಚೂರು ಇಂಗು, ಮತ್ತು ಅವಳಿಗಷ್ಟೇ ಗೊತ್ತಿದ್ದ ಗುಟ್ಟಿನಷ್ಟು ಉಪ್ಪು ಹಾಕಿದರೆ ಗೋಳಿಬಜೆ ಗೆ ಪ್ರಚಂಡವಾದ ರುಚಿ ಬರುತ್ತಿತ್ತು. ಮಧ್ಯೆ ಮಧ್ಯೆ ತೆಂಗಿನಕಾಯಿಯ ಚೂರು ಬಾಯಿಗೆ ಸಿಕ್ಕರಂತೂ ಕಣ್ಣು ಮುಚ್ಚಿ ತಿನ್ನಬೇಕೆಂಬ ತನ್ಮಯತೆ ರೂಢಿಯಾಗುತ್ತೆ. ಒಂದು ಗೋಳಿಬಜೆ ಎಣ್ಣೆಯೊಳಗೆ ಬಿಡುತ್ತಿದ್ದಂತೆ ಅಂಗಳದ ಯಾವ ಮೂಲೆಯಲ್ಲಿದ್ದರೂ ನನ್ನನ್ನು ಆ ಪರಿಮಳ ಮಂತ್ರಮುಗ್ಧನಂತೆ ಮಾಡಿ ಅಡುಗೆಮನೆಗೆ ಕರೆತರುತ್ತಿತ್ತು.

ಇವತ್ತೂ ಅಂಥದ್ದೇ ಒಂದು ಸಂಭ್ರಮ ತಯಾರಾಗುವಂತಿತ್ತು.

ಇಷ್ಟಕ್ಕೂ ಬರುತ್ತಿದ್ದುದು ರಾಘಣ್ಣ. ಅವ ಹಾಗೆಯೇ. ಯಾವಾಗಲೋ ಒಮ್ಮೆ ಮನಸ್ಸು ಮಾಡಿದರೆ ಕೂಡಲೇ ಕೊಲ್ಲೂರು ದೇವರ ದರುಶನವಾಗಬೇಕು. ಒಂದು ಒಳ್ಳೆಯ ಕೆಲಸ ಶುರುವಾಗಬೇಕೆಂದರೆ ಸಾಕು, ಒಂದು ದರುಶನ. ಅದೇ ಇಲ್ಲಿಯವರೆಗೂ ಅವನ ಬದುಕನ್ನು ನಡೆಸಿಕೊಂಡು ಬಂದಿದೆಯೇನೋ ಎಂಬ ನಂಬಿಕೆ. ಹಾಗೆ ಕೊಲ್ಲೂರಿಗೆ ಹೋಗುವಾಗಲೆಲ್ಲ ದರ್ಶನ ಮುಗಿಸಿ ವಪಸ್ಸು ಬರುವಾಗ ಅಮ್ಮನ ಅಡುಗೆ ಉಣ್ಣದೇ ಹೋಗುವುದು ಎಂದರೆ ದರ್ಶನವೇ ಅಪೂರ್ಣವಾದಂತೆ ಭಾವಿಸುತ್ತಿದ್ದ. ಶಿರ್ವದಲ್ಲಿನ ತನ್ನ ಮನೆಗೆ ಹೋಗುವಾಗ ಅತ್ತಿಗೆ ಅವನಿಗಾಗಿ ಅಡುಗೆ ಮಾಡಿರುವುದಿಲ್ಲ. ನಂಗೊತ್ತು ಕುಂದಾಪುರದ ದೊಡ್ಡನ ಮನೆಯಲ್ಲಿ ಉಂಡಿರುತ್ತಿ ಎಂಬುದು ಅವಳಿಗೆ ಮನವರಿಕೆಯಾಗಿರುವ ಸತ್ಯ.

ಇವತ್ತು ರಾಘಣ್ಣನ ಕರೆ ಬಂದಿತ್ತು. ಕೊಲ್ಲೂರು ದೇವಸ್ಥಾನಕ್ಕೆ ಹೋಗುವವನಿದ್ದ.

********

ಅಮ್ಮ ಯಾವತ್ತೂ ಹೇಳುತ್ತಿರುತ್ತಾಳೆ. ಊಟ, ನಿದ್ದೆ ಬ್ರಹ್ಮಾಂಡವಾಗಿರಬೇಕು ಆಗಲೇ ಚೆನ್ನಾಗಿ ಕೆಲಸ ಮಾಡಬಲ್ಲೆವು, ಆಗಲೇ ಬದುಕು ಸುಲಲಿತವಾಗಿರುತ್ತೆ ಅಂತ. ಉದಾಹರಣೆ ನನ್ನಜ್ಜನ ಕತೆ ಶುರುಮಾಡುತ್ತಿದ್ದಳು. ನನ್ನದು ತಿಂದು ಮುಗಿದಿದ್ದರೆ ಕೇಳದೇ ಓಡಿಹೋಗುತ್ತಿದ್ದೆ. ತಿಂದಾಗಿರದಿದ್ದರೆ ಸುಮ್ಮನೆ ಕೇಳುತ್ತಿದ್ದೆ.

ಊಟದ ಬಗ್ಗೆ ಅಂಥದ್ದೊಂದು ಭಾವನೆಯಿದ್ದುದರಿಂದಲೆಯೋ ಏನೋ ನೆಂಟರು ಬಂದರೆ ನಮ್ಮ ಮನೆ ಅಡುಗೆಮನೆಯಲ್ಲಿ ವಿಶೇಷ ಕಳೆ. ಮಧ್ಯಾಹ್ನವಾದರೆ ಕರಿಬೇವು ಒಗ್ಗರಣೆ ಘಮ್ಮೆನ್ನುವ ಸಾರು, ಹಪ್ಪಳ ಸಂಡಿಗೆ, ಗೋಳಿಬಜೆ, ಕ್ಯಾರೆಟ್ಟಿನದೊಂದು ಪಲ್ಯ ಇದು ಅನ್ನ ಮಾಡುವಷ್ಟೇ ಮಾಮೂಲು. ಇದನ್ನು ಹೊರತುಪಡಿಸಿ ಮಾವಿನ ಸೀಸನ್ನಾದರೆ ಮಾವಿನ ರಸಾಯನ ಇಲ್ಲವಾದರೆ ಸೀಕರಣೆ ಇಂತದ್ದೇನಾದರೂ ಒಂದು.

ಅಂತೂ ಊಟ ತುಂಬಾ ಗ್ರ್ಯಾಂಡು.

ನೆಂಟರು ಬಂದಾಗ ಇಂಥ ಲಾಭದ ಸದುಪಯೋಗ ನನಗಾಗುತ್ತಿತ್ತು. ಅದಕ್ಕೇನೆ ಯಾವುದಾದರೂ ಫಂಕ್ಷನ್ನಿಗೆ ಹೋದಾಗ ಸಿಕ್ಕವರನ್ನೆಲ್ಲಾ ನಮ್ಮನೆಗೆ ಬನ್ನಿ ಅಂತ ಪ್ರೀತಿಯಿಂದ ಕರೆಯುತ್ತಿದ್ದೆ. ಅರೇ ಇಷ್ಟು ಚಿಕ್ಕ ವಯಸ್ಸಲ್ಲಿ ಒಳ್ಳೆ ಬುದ್ಧಿ ಕಲಿತುಬಿಟ್ಟಿದಾನೆ ಅಂತ ಅವರಿಗೆಲ್ಲಾ ಅನ್ನಿಸುತ್ತಿತ್ತು. ಅಪ್ಪ ಅಮ್ಮನೂ ಒಳಗೊಳಗೇ ಹೆಮ್ಮೆ ಪಡುತ್ತಿದ್ದರೂ ನನ್ನ ಲಾಭದ ಚಿಂತನೆಯ ಕುರುಹು ಕೂಡ ಸಿಕ್ಕಿರಲಿಲ್ಲ.

ಇಂದು ಗೋಳಿಬಜೆ ಮಾಡುವ ಸೂಚನೆ ತೋರಿದ್ದರಿಂದ ಅಡುಗೆಮನೆಯ ಹತ್ತಿರ ಅಡ್ಡಾಡುತ್ತಿದ್ದೆ. ಸುಮ್ಮ ಸುಮ್ಮನೆ ಬರುತ್ತಿದ್ದನು ನೋಡಿ.. “ಹೋಗಿ ಆಡ್ಕೋಳಾ ಮಾಣಿ.. ಇವತ್ ಗೋಳಿಬಜೆ ಮಾಡುದಿಲ್ಲ” ಅಂದಳು ಅಮ್ಮ. ಬಿಸಿನೀರೊಲೆಗೆ ಚಂಬು ನೀರು ಸುರಿದಂತಾಯ್ತು. ನನ್ನ ನಿರಾಸೆ ಕಂಡ ಅವಳು “ಬಪ್ಪು ಸಂಕಷ್ಟಿ ಆದ್ಮೆಲೆ ಮಾಡ್ತೆ ಅಕಾ? ಇವತ್ ಬ್ಯಾಡ. ರಾಘಣ್ಣ ಬತ್ತ ಅಲ್ದಾ? ಅವ್ನಿಗೆ ಗೋಳಿಬಜೆ ತಿಂಬುಕಾಗ.”
ಅಚ್ಚರಿಯಾಯ್ತು. ರಾಘಣ್ಣನಿಗೆ ಗೋಳಿಬಜೆಯೆಂದರೆ ಪ್ರಾಣ. ಯಾವಾಗಲೂ ಹೇಳಿಯಾದರೂ ಮಾಡಿಸಿಕೊಂಡು ತಿಂದು ಹೋಗ್ತಾನೆ. “ಎಂತಕಮ್ಮ? ಅವ ಎಂತ ಕಾಶಿಗ್ ಹೋಯ್ನಾ? ಅಂತ ಕೇಳಿದೆ.

“ಇಲ್ದಾ.. ಕಾಶೀಲ್ ಬಿಟ್ ಬಂದದ್ದಲ್ಲ. ಅದೊಂದ್ ದೊಡ್ ಕತಿ..”

*******

ರಾಘಣ್ಣ ಸ್ಪುರದ್ರೂಪಿ. ದಪ್ಪ ಮೀಸೆ, ದೂರದಿಂದ ಕಂಡರೆ ಅನಿಲ್ ಕಪೂರನ ನೆನಪಾಗುವುದು. ಕಬಡ್ಡಿ ಆಟದಲ್ಲಿ ಪ್ರವೀಣ. ಅದಕ್ಕೇ ಏನೋ ದೈಹಿಕವಾಗಿಯೂ ಕಟ್ಟುಮಸ್ತು ಜೀವ. ಆಟದ ಖೋಟಾದಲ್ಲೇ ಬ್ಯಾಂಕೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದ ಅಂತ ಕೇಳಿದ್ದ ನೆನಪು. ಪುಟ್ಟ ವಯಸ್ಸಲ್ಲೇ ತಂದೆ ತೀರಿಹೋದ್ದರಿಂದ ಅಮ್ಮನ ಜತೆಗೆ ತುಂಬ ಮುದ್ದು ಮಾಡಿಸಿಕೊಂಡು ಬೆಳೆದವನು. ಅವನ ಅಮ್ಮ ಅಂದರೆ ನನ್ನ ದೊಡ್ಡಮ್ಮ ಹಪ್ಪಳ ಸಂಡಿಗೆ ಉಪ್ಪಿನಕಾಯಿ ಮಾಡಿ ಮಾರಿ ಬಂದ ಹಣದಿಂದ, ತೋಟದ ಹಣ್ಣುಗಳನ್ನು ಮಾರಿದ್ದರಿಂದ ಸ್ವಲ್ಪ ಪೆನ್ಶನ್ ನಿಂದ ಬಂದ ಹಣದಿಂದ ಹೀಗೆ ಕಷ್ಟಪಟ್ಟು ಓದಿಸಿದ್ದಳು. ತುಂಬಾ ಬುದ್ಧಿವಂತನಲ್ಲವಾದರೂ ಫಸ್ಟ್ ಕ್ಲಾಸ್ ನಲ್ಲೆ ಪಾಸಾಗಿ ಎಲ್ಲರಿಗೂ ಖುಷಿಕೊಡುತ್ತಿದ್ದ. ಸಣ್ಣ ವಯಸ್ಸಿನಲ್ಲೇ ಕಬಡ್ಡಿಯ ಬಗ್ಗೆ ಕುತೂಹಲವಿದ್ದುದರಿಂದ ಆಟದ ಮಾನಸಿಕ ವಿನ್ಯಾಸ ಕರಗತ ಮಾಡಿಕೊಂಡಿದ್ದ. ದೊಡ್ಡವನಾಗುವ ಹೊತ್ತಿಗೆ ಜಿಲ್ಲಾ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದ. ಬಿ ಕಾಮ್ ಮುಗಿಸಿ ಕೆಲಸಕ್ಕೆ ಹುಡುಕುತ್ತಿದ್ದಾಗ ಕಬಡ್ಡಿಯಿಂದಾಗಲೇ ಕೆಲಸ ಸುಲಭವಾಗಿ ಸಿಕ್ಕಿದ್ದು ಅಂತ ಸಂಬಂಧಿಕರಲ್ಲಿ ಗಾಳಿಮಾತಿತ್ತು.

ಒಂದು ದಿನ ರಾತ್ರಿ ದೊಡ್ಡಮ್ಮ ರಾಘಣ್ಣನನ್ನು ಊಟಕ್ಕೆ ಕರೆಯಲು ಅವನಿದ್ದ ಕೋಣೆಗೆ ಹೋದಾಗ ಅವನಲ್ಲಿರಲಿಲ್ಲ. ರಾಘೂ ರಾಘೂ ಅಂತ ಕೂಗುತ್ತ ಅಲ್ಲಿ ಇಲ್ಲಿ ಮನೆತುಂಬಾ ಅಲೆದಾಡಿ ಹುಡುಕಿದರೂ ಕಾಣ್ತಿಲ್ಲ. ಮುಂಬಾಗಿಲ ಬಳಿ ಸಣ್ಣ ದನಿಯಲ್ಲಿ ಗುಸು ಗುಸು ಕೇಳುತ್ತಿದ್ದರಿಂದ ಅಲ್ಲಿಗೆ ಹೋದಳು ದೊಡ್ಡಮ್ಮ. ಚೂರು ಸರಿದಿದ್ದ ಬಾಗಿಲನ್ನು ಪೂರ್ತಿ ತೆಗೆದು ನೋಡಿದರೆ ಅಲ್ಲಿ ರಾಘಣ್ಣ ತನ್ನ ಗೆಳೆಯರೊಂದಿಗೆ ಮಾತಾಡುತ್ತಿದ್ದ. ಬಾಗಿಲು ಸದ್ದಾಗಿದ್ದು ನೋಡಿ ತಿರುಗಿ, “ಅಶನೊಂಕು ಬರ್ಪೆಯಾ.. ಸಲ್ಪ ಸೈರ್ಲಾ..” ಅಂತ ತುಳುವಲ್ಲಿ ಸ್ವಲ್ಪ ಒರಟಾಗಿಯೇ ಅಂದಿದ್ದ.

ಮರುಮಾತಾಡದೇ ದೊಡ್ಡಮ್ಮ ವರಾಂಡಾ ದಲ್ಲೆ ಕೂತಳು. ಸ್ವಲ್ಪ ಹೊತ್ತಿನಲ್ಲೇ ಗುಸುಗುಸು ಮಾತು ಜೋರಾಗತೊಡಗಿತು. ಕ್ಷಣಗಳುರುಳುತ್ತಾ ಹೋದಂತೆ ದನಿಯೂ ಏರತೊಡಗಿತ್ತು. ಯಾವುದೋ ಅನಿಷ್ಟದ ಮುನ್ಸೂಚನೆ ಸಿಕ್ಕಂತಾಗಿ ದೊಡ್ಡಮ್ಮ ಬಾಗಿಲಬಳಿ ಬಂದು ನೋಡಿದಾಗ ಬಂದವರಿಬ್ಬರ ಜತೆ ರಾಘಣ್ಣ ಜಗಳಾಡುತ್ತಿದ್ದ. ಮೂವರೂ ಒಬ್ಬರಮೇಲೊಬ್ಬರು ಕೈಮಿಲಾಯಿಸುತ್ತಿದ್ದರು. ದೊಡ್ಡಮ್ಮ ಹೋ ಅಂತ ಕೂಗಿ ರಾಘಣ್ಣನ ಬಳಿ ಹೋಗುತ್ತಿದ್ದಂತೆ ಅವನ ಗೆಳೆಯರು ಇನ್ನು ಜನರೆಲ್ಲಾ ಸೇರುವರು ಎಂಬ ಭಯದಿಂದ ಕತ್ತಲಿಲ್ಲಿ ಸರಿದು ಮರೆಯಾದರು.

ಆಗಲೇ ರಾಘಣ್ಣನ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ದೊಡ್ಡಮ್ಮ ಕೂಡಲೇ ಅವನನ್ನು ಒಳಕರೆತಂದು ಒದ್ದೆಬಟ್ಟೆಯಿಂದ ರಕ್ತ ಒರೆಸಿದಳು. ರಾಘಣ್ಣ ಇನ್ನೂ ಕುದಿಯುತ್ತಿದ್ದ. ಅವ ಶಾಂತವಾದ ಮೇಲೆ ವಿಷಯವೇನೆಂದು ಕೇಳಿದಾಗ ಕಬಡ್ಡಿ ಪಂದ್ಯದ ವಿಚಾರವಾಗಿತ್ತು. ರಾಘಣ್ಣನಿಗೆ ಹಾಯ್ ಬಾಯ್ ಪರಿಚಯವಿದ್ದ ಪುಡಿ ರೌಡಿಯೊಬ್ಬ ಅವನ ತಮ್ಮನನ್ನು ರಾಘಣ್ಣ ಕೆಲಸ ಮಾಡುವ ಬ್ಯಾಂಕಿನ ತಂಡಕ್ಕೆ ಸೇರಿಸಿಕೊಳ್ಳಬೇಕು ಅನ್ನುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳಕ್ಕೇರಿತ್ತು.

ಅಂದು ರಾತ್ರಿಯಿಡೀ ದೊಡ್ಡಮ್ಮ ಅತ್ತಿದ್ದೇ. ಒಬ್ಬನೇ ಮಗ. ನೀ ಕೆಲಸಕ್ಕೆ ಹೋಗದಿದ್ದರೂ ಪರವಾಗಿಲ್ಲ, ಈ ಜಗಳಗಳೆಲ್ಲ ಬೇಡ ಅಂತ ಕಣ್ಣೀರು ಸುರಿಸಿದಳು. ಮೊದಮೊದಲು ಹಠಮಾಡಿ ಒಪ್ಪದಿದ್ದರೂ ಕೊನೆಗೆ ಕರಗಿ, ಅದ್ಯಾವುದೋ ಒಂದು ಪರೀಕ್ಷೆ ಬರೀಬೇಕು ಅದಾದ ಮೇಲೆ ಆಡುವುದನ್ನು ಬಿಡುತ್ತೇನೆ ಅಂತ ರಾಘಣ್ಣ ಅಂದ ಮೇಲೆಯೇ ದೊಡ್ಡಮ್ಮನಿಗೆ ಸಮಾಧಾನ.

****

ಬದುಕು ಕಾಲಿಗೆ ಚಕ್ರಹಾಕಿಕೊಂಡು ಓಡುತ್ತಿತ್ತು. ರಾಘಣ್ಣ ಪರೀಕ್ಷೆ ಬರೆದ. ಪ್ರಮೋಶನ್ ಸಿಕ್ಕಿತು. ಮದುವೆಯೂ ಆಯಿತು. ದೊಡ್ಡಮ್ಮನಿಗೆ ಈಗಲೂ ಸಂಡಿಗೆ, ಉಪ್ಪಿನಕಾಯಿ ಮಾಡದೇ ಹೋದರೆ ಹುಚ್ಚು ಹಿಡಿದಂತಾಗುತ್ತಿತ್ತು. ಅಂಗಳಕ್ಕಿಳಿದು ಸಗಣಿ ಸಾರಿಸದಿದ್ದರೆ ಒಳಗೇ ಉಳಿದು ಹಿಂಸಿಸುವ ಕ್ಯಾನ್ಸರಿನಂತ ಅಸಮಾಧಾನ. ಮನೆಯ ದನ ಲಕ್ಷ್ಮೀಯನ್ನು ಮಾರಿಬಿಡೋಣ ನಿಂಗೆ ನೋಡಿಕೊಳ್ಳೊಕೆ ಕಷ್ಟ ಆಗ್ತದಲ್ವಾ ಅಂತ ರಾಘಣ್ಣ ಹೇಳಿದರೆ ಕೆಂಡದಂತ ಕೋಪಮಾಡುತ್ತಿದ್ದಳು. ಅದನ್ನು ನೋಡಿಕೊಳ್ಳೊಕೇನು ಕಷ್ಟ? ನಂಗೆ ನೀನೂ ಬೇರೆಯಲ್ಲ ಲಕ್ಷ್ಮೀ ಬೇರೆಯಲ್ಲ. ಇನ್ನು ಹೀಗಂದ್ರೆ ಸರಿಯಿರಲ್ಲ ಅಂತ ತುಳುವಿನಲ್ಲಿ ರೇಗುತ್ತಿದ್ದಳು.

ಸೊಸೆ ಸಹಾಯಕ್ಕೆ ಬಂದರೂ ತಡೆದು, ಬೇಕಿದ್ದರೆ ಅಡುಗೆ ಮನೆಯಲ್ಲಿ ಸಹಾಯ ಮಾಡು ಇಲ್ಲಿ ಬೇಡ ಅನ್ನುವಂತೆ ಸೌಮ್ಯವಾಗಿ ಹೇಳ್ತಾ ಇದ್ದಳು.

ಹೀಗೆ ಅಂದರೂ ಕೆಲವೊಮ್ಮೆ ಹಾಳುಕಾಲುನೋವು ಅವಳನ್ನು ಬಾಧಿಸುತ್ತಿತ್ತು. ಲಕ್ಷ್ಮೀಯೂ ಮೊದಲೆಲ್ಲ ದೊಡ್ಡಮ್ಮ ನನ್ನು ಆಟ ಆಡಿಸುತ್ತಿತ್ತು. ಅಂದರೆ ದೊಡ್ಡಮ್ಮ ಲಕ್ಷ್ಮೀಯನ್ನು ಗದ್ದೆಗೆ ಕರೆದೊಯ್ಯುವಾಗ ಬೇಕಂತಲೇ ಓಡಿ ದೊಡ್ಡಮ್ಮನನ್ನು ಸಿಟ್ಟಿಗೇರಿಸುತ್ತಿತ್ತು. ಒಮ್ಮೆ ದೊಡ್ಡಮ್ಮ ಎಷ್ಟು ಗಟ್ಟಿಯಾಗಿ ಹಿಡಿದಿದ್ದರೂ ಲಕ್ಷ್ಮೀ ಓಡುವಾಗ ಹಿಡಿತ ತಪ್ಪಿ ದೊಡ್ಡಮ್ಮ ಧೊಪ್ಪನೆ ಬಿದ್ದಳು. ಲಕ್ಷ್ಮೀ ಆತಂಕಕ್ಕೊಳಗಾಗಿ ಅಂಬಾ ಅಂಬಾ ಅಂತ ಕೂಗಿತ್ತು. ಪುಣ್ಯವಶಾತ್ ದೊಡ್ಡಮ್ಮನಿಗೇನೂ ಆಗಿರಲಿಲ್ಲ. ಮೊದಲಿನಿಂದಲೂ ಪ್ರೀತಿಯಿದ್ದಿದ್ದರೂ ಈ ಘಟನೆ ನಂತರ ದೊಡ್ಡಮ್ಮನಿಗೆ ಲಕ್ಷ್ಮೀ ಎಂದರೆ ವಿಶೇಷ ಮಮತೆ.

ಈಗೆಲ್ಲಾ ಕಾಲುನೋವಿನಿಂದ ಮೆಲ್ಲಗೆ ಚೂರು ಕುಂಟುಕೊಂಡು ನಡೆವ ದೊಡ್ಡಮ್ಮನನ್ನು ಅರಿತೋ ಏನೋ, ಲಕ್ಷ್ಮೀ ಹಾಗೆಲ್ಲ ತುಂಟತನ ಮಾಡೊಲ್ಲ. ಆದರೂ ಸೊಸೆಯೇನಾದರೂ ಹಾಲು ಕರೆಯಲು, ಗೋಮಯ ಸಾಫ್ ಮಾಡಲು ಬಂದರೆ ಲಕ್ಷ್ಮೀ ಎಂದಿಗೂ ಸಹಕರಿಸುವುದಿಲ್ಲ.

ಒಮ್ಮೆ ನನಗೆ ಸರಿಯಾಗಿ ನೆನಪು. ದೊಡ್ಡಮ್ಮನಿಗೆ ಅವತ್ತು ವಿಪರೀತ ಜ್ವರ. ಎದ್ದು ನಡೆದಾಡಲೂ ಆಗದಷ್ಟು ವೀಕ್ ನೆಸ್. ಅಂಥ ಸಮಯದಲ್ಲಿ ಲಕ್ಷ್ಮೀಯ ಆರೈಕೆ ಸಾಧ್ಯವೆ? ಹೀಗಾಗಿ ಸೊಸೆ ಕೊಟ್ಟಿಗೆ ಕ್ಲೀನ್ ಮಾಡಲು ಹಿಡಿಸುಡಿ ಹಿಡಿದು ತಯಾರಾದಾಗ ಲಕ್ಷ್ಮೀ ಕೊಟ್ಟಿಗೆಯಿಂದ ಹೊರಹೋಗಲು ಕೇಳಳು. ದೊಡ್ಡಮ್ಮನ ಜ್ವರದಷ್ಟೇ ವಿಪರೀತ ಲಕ್ಷ್ಮೀಯ ಹಠ. ಸೊಸೆಯ ಬೈಗುಳ, ಲಕ್ಷ್ಮೀಯ ಕೂಗು ಕೇಳಿ ದೊಡ್ಡಮ್ಮ ಹೇಗೋ ಕಷ್ಟಪಟ್ಟು ಕೊಟ್ಟಿಗೆ ಬಳಿ ಬಂದಿದ್ದಳು. ದೊಡ್ಡಮ್ಮ ಬಂದು ಲಕ್ಷ್ಮೀಯನ್ನು ಮಾತಾಡಿಸಿದಾಗಲೇ ಅದಕ್ಕೆ ಸಮಾಧಾನ.

ಮತ್ತೊಮ್ಮೆ ಮಗ ಸೊಸೆ ಇಲ್ಲದಾಗ ದೊಡ್ಡಮ್ಮ ಲಕ್ಷ್ಮೀಯ ಹತ್ತಿರ ತುಳುವಿನಲ್ಲಿ ಮಾತಾಡುತ್ತಿದ್ದಳು. ನೀ ಯಾಕೆ ಹೀಗೆ ಹಠ ಮಾಡ್ತೀ? ನನ್ನ ಸೊಸೆ ಹತ್ರ ನೀ ಹೀಗೆ ನಡ್ಕೊಂಡ್ರೆ ನಾನು ಸತ್ತುಹೋದ ಮೇಲೆ ನಿನ್ನನ್ನ ಯಾರ್ ನೋಡ್ಕೋತಾರೆ? ನನ್ ಮೇಲೆ ಎಷ್ಟ್ ಪ್ರೀತಿ ಇಟ್ಟಿದೀಯೋ ಅವಳಿಗೂ ತೋರ್ಸು.. ಎಷ್ಟಂದ್ರೂ ನನ್ ಸೊಸೆ ಅಲ್ವಾ?

ಲಕ್ಷ್ಮೀಗೆಷ್ಟು ಅರ್ಥವಾಯ್ತೊ?

****

ದೊಡ್ಡಮ್ಮನಿಗೆ ಕಾಲುನೋವು ಜಾಸ್ತಿಯಾಗ್ತಾ ಇದ್ದಂತೆ ರಾಘಣ್ಣ ಉಡುಪಿಯಲ್ಲಿರೋ ಡಾಕ್ಟರುಗಳ ಹತ್ತಿರವೆಲ್ಲಾ ಸುತ್ತಾಡಿದ. ಆಯುರ್ವೇದಿಕ್, ಅಲೋಪತಿ ಎಲ್ಲಾ ಮಾರ್ಗಗಳನ್ನೂ ಜಾಲಾಡಿದ್ದಯಿತು. ದೊಡ್ಡಮ್ಮನ ಕಾಲುನೋವು ವಾಸಿಯಾಗಲಿಲ್ಲ. ಕೆಲವೊಮ್ಮೆ ಡಾಕ್ಟರ್ ಬಳಿ ಹೋಗುವುದಕ್ಕೂ ಆಗದಂಥ ಪೀಡಿಸುತ್ತಿತ್ತು. ಕಾಲು ನೋವಿಂದ ದಿನೇ ದಿನೇ ದೊಡ್ಡಮ್ಮ ಹೈರಾಣಾಗುತ್ತಿದ್ದ ಸಮಯದಲ್ಲಿ ರಾಘಣ್ಣ ಒಂದು ಕಾರು ಕೊಂಡ. ಬಿಳೀ ಬಣ್ಣದ ಮಾರುತಿ ಒಮಿನಿ. ದೊಡ್ಡಮ್ಮ ಪಕ್ಕದ ಮನೆಯವರ ಬಳಿ ” ಎನ್ನ ಈ ಕಾರ್ ನಂಬೆರೆಗಾಪುರಿ.. ಐಕೆ ಮಗೆ ಎಂಕು ಆ ಕಾರ್ ಕೊಣತಿನಿ” (ನನ್ನ ಈ ಕಾಲು ನಂಬಲಾಗದು, ಅದಕ್ಕೆ ಮಗ ಆ ಕಾರ್ ತಂದಿದ್ದು) ಅಂತಾ ಇದ್ಲು.

ರಾಘಣ್ಣ ರಜೆ ಇದ್ದಾಗಲೆಲ್ಲ ದೊಡ್ಡಮ್ಮನನ್ನು ದೇವಸ್ಥಾನಗಳಿಗೆ ಸುತ್ತಾಡಿಸುತ್ತಿದ್ದ. ಕರಾವಳಿಯಲ್ಲಿ ತಿಂಗಳಿಡೀ ತಿರುಗಿದರೂ ಒಂದಿಷ್ಟು ದೇವಸ್ಥಾನಗಳು ನೋಡಲು ಬಾಕಿಯಿರುವಷ್ಟಿವೆ. ಭಾನುವಾರ ಬಂದರೆ ಸಾಕು, ಬೆಳಿಗ್ಗೆಯೇ ಕಾರು ಹತ್ತುತ್ತಿದ್ದರು. ದೊಡ್ಡಮ್ಮ ಕಾರಿನಲ್ಲಿ ರಾಘಣ್ಣನಿಗೆ ಹೇಳುತ್ತಿದ್ದರು.. ದೇವಸ್ಥಾನಗಳನ್ನೆಲ್ಲಾ ನಿಮ್ ವಯಸ್ಸಲ್ಲೇ ನೋಡಬೇಕಿತ್ತು, ಈಗ ನೋಡು ತುಂಬಾ ಕಷ್ಟ ಅದಕ್ಕೇ ಎಲ್ಲಾ ದೇವಸ್ಥಾನಗಳು ಬೆಟ್ಟದ ಮೇಲಿವೆ.. ಸುಲಭವಾಗಿ ನೋಡಬೇಕೆಂದರೆ ಚಿಕ್ಕ ವಯಸ್ಸಲ್ಲೇ ನೋಡಬೇಕು, ಇಲ್ಲಾಂದರೆ ನೋಡು ನನಗಾದಂಥ ಪಜೀತಿಗಳು.. ಅನ್ನುತ್ತಿದ್ದಳು. ದೇವಸ್ಥಾನಗಳಿಗೆ ಸ್ವಲ್ಪ ಮೆಟ್ಟಿಲುಗಳಿದ್ದರೂ ದೊಡ್ಡಮ್ಮನಿಗೆ ತ್ರಾಸವಾಗುತ್ತಿತ್ತು.

ಹೀಗೆ ತಿಂಗಳುಗಳುರುಳಿದವು. ಅದೊಮ್ಮೆ ದೊಡ್ಡಮ್ಮ ಇನ್ನು ಎಲ್ಲಿಗೂ ಬರಲಾಗುವುದಿಲ್ಲ ಎಂಬಂತೆ ಕೂತುಬಿಟ್ಟಳು. ರಾಘಣ್ಣನಿಗೂ ಆತಂಕವಾಯ್ತು. ಸಂಜೆ ಕೆಲಸದಿಂದ ಬರುತ್ತಲೇ ಕಾರ್ ನವರೆಗಾದರೂ ಬಾ ಡಾಕ್ಟರ್ ಬಳಿ ಕರ್ಕೊಂಡು ಹೋಗ್ತೀನಿ ಅಂತ ಒತ್ತಾಯಿಸಿದ. ಒಂದು ಬಗಲನ್ನು ಸೊಸೆ ಕೈಗಿತ್ತು ಇನ್ನೊಂದನ್ನು ಮಗನ ಕೈಗಿತ್ತು ಹೇಗೋ ಕಾರ್ ಹತ್ತಿ ಕೂತಳು.

***

ಆಸ್ಪತ್ರೆಯಲ್ಲಿ ಎರಡು ದಿನ ಇದ್ದ ನಂತರ ದೊಡ್ಡಮ್ಮ ಸ್ವಲ್ಪ ಗೆಲುವಾದಳು. ರಾಘಣ್ಣನಿಗೂ ನಿರಾಳವಾಯ್ತು. ತುಂಬಾ ಕಟ್ಟುನಿಟ್ಟಾಗಿ ಮನೆಗೆ ಹೋಗಿ ರೆಸ್ಟ್ ತಗೋಬೇಕು ಕೆಲ್ಸ ಮಾಡಿದರೆ ನೋಡು ಅಂತ ಪ್ರೀತಿಯಿಂದ ಬೈದ. ಆಸ್ಪತ್ರೆಯಿಂದ ಬರುತ್ತಾ ಇರುವಾಗ ಸೊಸೆ ತರಕಾರಿ ತಗೆದುಕೊಳ್ಳಬೇಕಿತ್ತು ಅನ್ನುವುದನ್ನು ನೆನಪಿಸಿಕೊಂಡಳು. ದೊಡ್ಡಮ್ಮನನ್ನು ಕಾರಿನಲ್ಲೇ ಇರಿಸಿ ರಾಘಣ್ಣ ಮತ್ತವನ ಹೆಂಡತಿ ತರಕಾರಿ ಕೊಂಡುಕೊಳ್ಳಲು ಹೋದರು. ಅದು ರಥಬೀದಿ. ಕಾರನ್ನು ರಥಬೀದಿಯ ಆವರಣದ ಹೊರಗೇ ನಿಲ್ಲಿಸಬೇಕಿತ್ತು.

MANGALORE BAJJI

ದೊಡ್ಡಮ್ಮ ಕಾರಿಂದ ಹೊರ ನೋಡುತ್ತಿದ್ದರೆ ಬಾಲ್ಯದ, ಯೌವ್ವನದ ದಿನಗಳೆಲ್ಲ ನೆನಪಾದವು. ತುಂಬಾ ಹಳೇಯ ರಥಬೀದಿ, ಅಂಥ ಬದಲಾವಣೆಗಳೇನೂ ಆಗಿದ್ದಿಲ್ಲ. ಅಲ್ಲಿ ಇಲ್ಲಿ ಎಟಿಎಮ್ಮುಗಳಾದವು ಅನ್ನೋದು ಬಿಟ್ಟರೆ ಮತ್ತೆಲ್ಲಾ ಹಾಗೆ ಇದೆ. ಮನಸ್ಸು ಹೊರ ಹೋಗಬೇಕು ರಥಬೀದಿಯ ಆ ತಿರುವಲ್ಲೇನಿದೆ ಅಂತ ನೋಡಬೇಕು ಅಂತೆಲ್ಲಾ ಅನ್ನಿಸಿದರೂ ದೇಹ ಸಹಾಯಮಾಡದು. ಕೊಂಚ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಅಲ್ಲೊಂದು ಹೋಟೆಲು.. ಹಾಂ.. ಹೋಟೆಲ್ ಜನತಾ… ಆ ಹೋಟೆಲ್ಲಿನ ಗೋಳಿಬಜೆ ನೆನಪಾಯಿತು. ಆ ಹೋಟೆಲ್ಲು ಈಗಲೂ ಇದ್ದಿರಬಹುದಾ? ಗೋಳಿಬಜೆ ಈಗಲೂ ಅಲ್ಲಿ ಫೇಮಸ್ಸಾ? ಮೆಲ್ಲ ಹನಿವ ಮಳೆಯಲ್ಲಿ ಹೋಟೆಲು ಹೊಕ್ಕು ಚಿನ್ನದ ಬಣ್ಣದ ಬಿಸಿ ಬಿಸಿ ಗೋಳಿಬಜೆಯನ್ನು ಚಟ್ನಿಯಲ್ಲಿ ಮೆಲ್ಲಿದರೆ… ಒಂದೊಂದೇ ತುಂಡು ಬಾಯಲ್ಲಿರಿಸಿಕೊಂಡು ಕಣ್ಮುಚ್ಚಿದರೆ.. ಗೋಳಿಬಜೆಯ ಹದ ಬಿಸಿ, ಅದು ಚಟ್ನಿಯ ಜೊತೆ ಸೇರಿ ನಾಲಿಗೆಗೆ ತಾಕಿದೊಡನೆ ಆಗುವ ಉನ್ಮಾದ.. ಅಗಿಯುವಾಗ ಮಧ್ಯೆ ಕಾಯಿಯ ತುಂಡು ಬಾಯಿಗೆ ಸಿಕ್ಕಾಗ ಆಗುವ ಪರಮಾನಂದ… ಜತೆಗೆ ಚೂರು ಬಿಸೀ ಫಿಲ್ಟರ್ ಕಾಫಿಯಿದ್ದಿದ್ದರೆ…

ದೊಡ್ಡಮ್ಮನ ಬಾಯಲ್ಲಿ ನೀರೂರಿತು.

*****

ರಾಘಣ್ಣ ಹೆಂಡತಿ ಬರುವ ಹೊತ್ತಿಗೆ ದೊಡ್ಡಮ್ಮ ನಿದ್ದೆ ಹೋಗಿದ್ದರು. ಬಾಯಲ್ಲಿ ಜೊಲ್ಲು ಸುರಿದಿತ್ತು. ರಾಘಣ್ಣ ತನ್ನ ಅಮ್ಮನ ಮುಖದಲ್ಲಿನ ಭಾವ ನೋಡಿದೊಡನೆಯೆ ಒಂಥರಾ ಆಯಿತು. ಎದೆಯ ಮೂಲೆಯಲ್ಲೆಲ್ಲೋ ಮುಳ್ಳೊಂದು ಚುಚ್ಚಿದ ಭಾವ. ದೊಡ್ಡಮ್ಮನ ಹತ್ತಿರ ಬಂದು ಜೊಲ್ಲು ಒರೆಸಿದ.

ದೊಡ್ದಮ್ಮನಿಗೆ ಎಚ್ಚರವಾಗದಂತೆ ಕಾರು ಮೆಲ್ಲಗೇ ಓಡಿಸಿದರೂ ರಸ್ತೆಯಲ್ಲಿ ವಿಪರೀತ ಜನಸಂದಣಿಯಿದ್ದಿದ್ದರಿಂದ ಮಧ್ಯೆ ಅವಳಿಗೆ ಎಚ್ಚರವಾಯಿತು. ಅದೇ ಸಮಯದಲ್ಲಿ ತನ್ನ ಕಾರಿಗೆ ಸ್ಕೂಟರೊಂದು ತಾಕಿದ್ದರಿಂದ ಡೆಂಟ್ ಆಗಿತ್ತು. ರಾಘಣ್ಣ ಕಾರಿಳಿದು ಸ್ಕೂಟರಿನವನೊಂದಿಗೆ ಜಗಳಾಡಿದ. ಸ್ಕೂಟರಿನವನು ರಾಘಣ್ಣನಿಗೇ ಬೈದು, ತಪ್ಪೆಲ್ಲಾ ರಾಘಣ್ಣನದೇ ಎಂದು ವಾದಿಸಿದ. ಜನ ಸೇರಿದರು. ಟ್ರಾಫಿಕ್ಕು ಜಾಮ್ ಆಯಿತು. ಟ್ರಾಫಿಕ್ ಪೋಲಿಸ್ ಬಂದು ಎರಡೂ ವಾಹನದ ನಂಬರ್ ಬರೆದುಕೊಂಡ. ಜನರಲ್ಲೇ ಒಬ್ಬ ಯಾಕೆ ಸುಮ್ಮನೆ ಜಗಳ ಸಾರ್ ಬಿಟ್ಬಿಡಿ ಎಂದ. ಟ್ರಾಫಿಕ್ ಪೋಲಿಸ್ ಕೂಡ ಹತ್ತಿರ ಇದ್ದುದರಿಂದ ಇಬ್ಬರೂ ಸುಮ್ಮನೆ ವಿವಾದ ಯಾಕೆ ಅಂತ ಬರೀ ಫೋನ್ ನಂಬರ್ ಇಸ್ಕೊಂಡು ನಂತರ ಮಾತಾಡೋಣ ಅಂತ ಜಗಳ ಬಿಟ್ಟರು.

ದೊಡ್ಡಮ್ಮನಿಗೆ ಎಚ್ಚರಾದ ಕೂಡಲೇ ರಾಘಣ್ಣ ಕಾರಿಳಿದು ಸ್ಕೂಟರಿನವನ ಹತ್ತಿರ ಜಗಳಕ್ಕಿಳಿದಿದ್ದ. ಸುತ್ತಲೂ ಅಯೋಮಯವಾಗಿ ನೋಡಿದ ದೊಡ್ಡಮ್ಮ ಅಂದಿದ್ದು ’ರಥಬೀದಿ ಬುಡ್ತಾನಾ” (ರಥಬೀದಿ ಬಿಟ್ಟಾಯ್ತಾ?).

ಜಗಳ ಮುಗಿಸಿ ಮತ್ತೆ ಡ್ರೈವ್ ಮಾಡಲು ಕುಳಿತ ರಾಘಣ್ಣ ನ ಸಿಟ್ಟಿನ್ನೂ ಇಳಿದಿರಲಿಲ್ಲ. ತನ್ನ ಹೆಂಡತಿ ಬಳಿ ನೋಡು ಹೇಗಿದ್ದಾನೆ, ತಪ್ಪೆಲ್ಲಾ ನನ್ ಮೇಲೆ ಹಾಕುವಷ್ಟು ಕೊಬ್ಬು.. ಅನ್ನುತ್ತಿರಬೇಕಾದರೆ ತಾಲ್ಲೂಕಾಫೀಸು ತಿರುವು ಬಂದಿತ್ತು. ದೊಡ್ಡಮ್ಮ, “ರಾಘೂ, ಜನತೊಂಕ್ ಪೋವೊಳಿ ಇತ್ತ್ಂಡ್.. ಗೋಳಿಬಜೆ ತಿನರೆಗ್ ಮನಸಾನ್…” (ರಾಘೂ, ಜನತಾಕ್ಕೆ ಹೋಗ್ಬಹುದಿತ್ತು, ಗೋಳಿಬಜೆ ತಿನ್ನೋಕೆ ಮನಸ್ಸಾಗ್ತಿದೆ)

ರಾಘಣ್ಣ ಸಿಟ್ಟಿಂದ ಇಲ್ಲಿಗ್ ಬಂದಾದ್ಮೇಲೆ ಹೇಳ್ಬೇಕಾ? ಈ ಟ್ರಾಫಿಕ್ಕ್ ನಲ್ಲಿ ಮತ್ತೆ ನನ್ಗೆ ವಾಪಸ್ ಹೋಗೋಕ್ಕಾಗಲ್ಲ ಅಂತ ಬೈದ.

ದೊಡ್ಡಮ್ಮ ಮರುಮಾತಾಡಲಿಲ್ಲ.

*****

ಮತ್ತೆ ಆ ದಿನ ರಾತ್ರಿ ದೊಡ್ಡಮ್ಮನಿಗೆ ಜ್ವರ ಜಾಸ್ತಿಯಾಯ್ತು. ಕಾಲುನೋವಿನ ಜತೆಗೆ ಬೆನ್ನೂ ನೋಯುತ್ತಿದೆ ಅಂತ ತ್ರಾಸಪಡುತ್ತಾ ಹೇಳುತ್ತಿದ್ದಳು. ಸೊಸೆಗೆ ಏನು ಮಾಡಲೂ ತೋಚದಂಥ ಭಯ. ಡಾಕ್ಟರನ್ನು ಕರ್ಕೊಂಡು ಬರ್ತೀನಿ ಅಂತ ಹೋದ ರಾಘಣ್ಣ ವಾಪಸ್ಸ್ ಬರುವುದರೊಳಗೆ ದೊಡ್ಡಮ್ಮ ಪ್ರಾಣ ಬಿಟ್ಟಳು.

****

ರಾಘಣ್ಣ ಗೋಳಿಬಜೆ ಕೊಡಿಸಲಾಗದ ಗಿಲ್ಟ್ ನಿಂದ ನಲುಗಿಹೋದ. ಹೆಂಡತಿ ಹತ್ತಿರ ಸುಮ್ಮ ಸುಮ್ಮನೆ, ಅಮ್ಮನನ್ನು ಮತ್ತೊಂದು ದಿನ ಕರ್ಕೊಂಡು ಹೋಗ್ತೇನೆ ಅಂದುಕೊಂಡಿದ್ದೆ ಅನ್ನೋದನ್ನ ನೀನಾದ್ರೂ ನಂಬ್ತೀಯಲ್ವಾ ಅಂತ ಕೇಳ್ತಿದ್ದ. ಮತ್ತೆ ಈ ಜನ್ಮದಲ್ಲಿ ಗೋಳಿಬಜೆ ತಿನ್ನಲ್ಲ ಅಂತ ಶಪಥ ಮಾಡಿದ.

****

ಹೊರಗೆ ಕೀಂ ಕೀಂ ಕಾರು ಹಾರ್ನ್ ಕೇಳಿಸಿತು. ರಾಘಣ್ಣ. ಬಿಳೀ ಮಾರುತಿ ಒಮಿನಿ. ಹೇಗಿದ್ದೀಯೋ ಅಂತ ತಲೆ ನೇವರಿಸಿ ಕೇಳಿದ. ನನ್ನಮ್ಮನಿಗೆ ಕಾಲುನೋವು ಹೇಗಿದೆ ಅಂತ ವಿಚಾರಿಸಿದ. ಎಲ್ಲೋ ಮಲೆನಾಡಿನಿಂದ ತಂದ ನೋವಿನೆಣ್ಣೆ ಹಾಕಿಕೊ ಅಂತ ಕೊಟ್ಟ. ಖುಷಿಯಿಂದ ಊಟ ಮಾಡಿದ. ಅಡುಗೆ ಸೂಪರ್ರಾಗಿದೆ ಅಂದ.

ಎಲ್ಲಿಗಾದರೂ ಹೋಗಬೇಕಿದೆ, ಯಾವುದಾದರೂ ಸ್ಥಳ ನೋಡಬೇಕಾಗಿದೆ ಅನ್ನಿಸಿದರೆ ಹೇಳು ಕರ್ಕೊಂಡು ಹೋಗ್ತೀನಿ ಅಂದ.

ರಾಘಣ್ಣ ಹೊರಟು ನಿಂತಾಗ ನನ್ನಮ್ಮನನ್ನು ನೋಡಿದ. ಅದು ಥೇಟ್ ರಾಘಣ್ಣ ದೊಡ್ಡಮ್ಮನನ್ನು ನೋಡಿದ ಹಾಗೆಯೇ ಅನ್ನಿಸಿತು. “ಅಮ್ಮ, ರಾಘಣ್ಣನನ್ನು ಇಲ್ಲೇ ಇಪ್ಪುಕೆ ಹೇಳಮ್ಮ” ಅಂದೆ. ಅಮ್ಮ ನಸುನಕ್ಕು, “ಈಗ ಅವ ಹೋಯಾಯ್ತಲ್ಲ.. ಇನ್ನೊಂದ್ಸಲ ಬರ್ಲಿ.. ಹೋಪುಕ್ ಬಿಡೂದೇ ಬ್ಯಾಡ’ ಅಂದಳು.

~END~

(“ಸಖಿ” ವಾರಪತ್ರಿಕೆಯಲ್ಲಿ ಪ್ರಕಟಿತ)

ಹದಿನೆಂಟನೇ ಶತಮಾನದಲ್ಲಿ ಹೊರದೇಶದಲ್ಲಿ ರಾಜಕೀಯ ನಾಯಕನೊಬ್ಬ ಎಲ್ಲಾ ಊರುಗಳಿಗೆ ಹೋಗಿ ಭಾಷಣ ನೀಡಬೇಕಾಗಿತ್ತು. ಅದೊಂದು ದಿನ ಯಾವುದೋ ಹಳ್ಳಿಯಲ್ಲಿ ಭಾಷಣವಿತ್ತು. ಆ ದಿನವಿಡೀ ಭಾಷಣದಿಂದ ಆ ನಾಯಕ ತುಂಬಾ ಸುಸ್ತಾಗಿದ್ದ. ಅದನ್ನು ಗಮನಿಸಿದ ಕಾರ್ ಡ್ರೈವರ್, ಸರ್ ನೀವು ತುಂಬಾ ಸುಸ್ತಾಗಿದ್ದೀರಿ, ಈ ಹಳ್ಳಿಯಲ್ಲಿ ನಿಮ್ಮನ್ನು ನೋಡಿದವರ್ಯಾರೂ ಇಲ್ಲ, ಹಾಗಾಗಿ ನೀವು ಕಾರಲ್ಲಿ ರೆಸ್ಟ್ ತಗೊಳ್ಳಿ, ನಾನು ಭಾಷಣ ಮಾಡ್ತೀನಿ ಅಂದ. ನಾಯಕ ಒಪ್ಪಿದ.

ಎಲ್ಲಾ ಊರಿನಲೂ ಭಾಷಣ ಕೇಳಿ ಅಭ್ಯಾಸವಾಗಿದ್ದ ಕಾರ್ ಡ್ರೈವರ್ ರಾಜಕೀಯ ನಾಯಕನ ಉದ್ದೇಶಕ್ಕೆ ಭಂಗವಾಗದಂತೆ ಭಾಷಣ ಮಾಡಿದ. ಕೊನೆಯಲ್ಲಿ ಪ್ರಶ್ನೋತ್ತರವಿದ್ದರೂ ಚೆನ್ನಾಗಿ ನಿಭಾಯಿಸುತ್ತಿದ್ದ. ಆಗ ಸಭಿಕರಲ್ಲೊಬ್ಬ ನಾಯಕನ ಪರ್ಸನಲ್ ವಿಷಯದ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ. ಆ ಕುರಿತು ಕಾರ್ ಡ್ರೈವರ್ ಗೆ ಗೊತ್ತಿರಲಿಲ್ಲ. ಆ ಪ್ರಶ್ನೆಯಂತೂ ಗೊತ್ತಿಲ್ಲ ಅನ್ನುವಂತಿಲ್ಲದ ಪ್ರಶ್ನೆ.

ಆಗ ಕಾರ್ ಡ್ರೈವರ್ ನಕ್ಕು, ‘ಈ ಪ್ರಶ್ನೆ ತುಂಬಾ ಸಿಂಪಲ್, ಇದಕ್ಕೆ ನನ್ನ ಕಾರ್ ಡ್ರೈವರ್ ಕೂಡ ಉತ್ತರ ನೀಡಬಲ್ಲ’ ಎಂದು ಆ ರಾಜಕೀಯ ನಾಯಕನನ್ನು ಕರೆದ.

 

***********

 

ಒಬ್ಬ ಹುಡುಗ ಅಂಗಡಿಗೆ ಬಂದು ಅಲ್ಲಿದ್ದ ಕಾಯಿನ್ ಬಾಕ್ಸ್ ಫೋನ್ ನಲ್ಲಿ ಮಾತಾಡಲು ಬಯಸಿದ. ಅವನ ಎತ್ತರಕ್ಕೆ ಅದು ಎಟುಕದ ಕಾರಣ ಅಂಗಡಿಯವ ಅವನಿಗೆ ನಿಲ್ಲಲು ಸ್ಟೂಲ್ ಕೊಟ್ಟ.

ಕಾಯಿನ್ ಹಾಕಿ ಹುಡುಗ ಮಾತಾಡಲು ಆರಂಭಿಸಿದ. ‘ಹಲೋ, ಮೇಡಮ್ ನಿಮ್ಮಲ್ಲಿ ಏನಾದರೂ ಕೆಲಸವಿದೆಯಾ?’ ಆ ಕಡೆಯಿಂದ ಇಲ್ಲವೆಂಬ ಉತ್ತರ ಬಂದಿರಬೇಕು. ‘ಯಾವುದಾದರೂ ಕೆಲಸವಾದೀತು, ನೀವು ಸಂಬಳ ಕೊಡದಿದ್ದರೂ ಪರವಾಗಿಲ್ಲ, ಊಟ ಕೊಟ್ಟರೆ ಸಾಕು’ ಮತ್ತೆ ಆ ಕಡೆಯಿಂದ ನಕಾರ ಬಂದಿತೆಂಬಂತೆ ಸರಿ ಎಂದು ಫೋನಿಟ್ಟ.

ಇದನ್ನೆಲ್ಲಾ ಕಾಣುತ್ತಿದ್ದ ಅಂಗಡಿಯವನಿಗೆ ಕನಿಕರವೆನ್ನಿಸಿ ಆ ಹುಡುಗನಿಗೆ, ನನ್ನ ಅಂಗಡಿಯಲ್ಲೇ ಕೆಲಸ ಮಾಡ್ತೀಯಾ? ಅಂತ ಕೇಳಿದ.

ಅದಕ್ಕೆ ಆ ಹುಡುಗ, ‘ನಾನೀಗ ಫೋನ್ ಮಾಡಿದ್ದು ನಾನು ಕೆಲಸ ಮಾಡುವ ಸ್ಥಳಕ್ಕೇನೆ’

 

***********

 

ಒಂದು ಪ್ರಾಜೆಕ್ಟ್ ತಂಡಕ್ಕೆ ಅವತ್ತು ಜೀನಿ ಸಿಕ್ಕಿಬಿಟ್ಟ. ಹತ್ತು ರೂಪಾಯಿ ಸುಡೋಕ್ಸು ಕಾರ್ಡನ್ನೇ ಬಿಡದ ಅವರುಗಳು ಜೀನಿಯನ್ನು ಬಿಟ್ಟಾರೆಯೇ. ಅವನು ಬರುವವರೆಗೂ ಮಾಯಾದೀವಿಗೆಯನ್ನು ಉಜ್ಜತೊಡಗಿದರು. ಕ್ರೆಡಿಟ್ಟು, ಡೆಬಿಟ್ಟು ಕಾರ್ಡುಗಳನ್ನು ಉಜ್ಜಿ ಅನುಭವವುಳ್ಳ ಅವರಿಗೆ ಸೋತು ತಡಮಾಡದೇ ಜೀನಿ ಪ್ರತ್ಯಕ್ಷ ಆದ.

ಮೊದಲನೆಯವ ‘ನಾನು ಈ ಕ್ಷಣವೇ ರಿಯೋ ಡಿ ಜೆನೆರೋ ದಲ್ಲಿನ ರೆಸಾರ್ಟ್ ಒಂದರಲ್ಲಿ ಐಷಾರಾಮದ ಕೋಣೆಯಲ್ಲಿ ಇರಬೇಕೆಂದು ಬಯಸಿದ.

ಎರಡನೆಯವ ರೋಮಿನಲ್ಲಿ ತನ್ನ ಗೆಳತಿಯೊಂದಿಗೆ ದೋಣಿವಿಹಾರ ಮಾಡಬೇಕೆಂದು ಬಯಸಿದ.

ಅದೆಲ್ಲಾ ಕ್ಷಣದಲ್ಲಿಯೇ ಆಗಿಹೋಯಿತು ಕೂಡ.

ಮೂರನೆಯವನು ಆ ತಂಡದ ಪ್ರಾಜೆಕ್ಟ್ ಲೀಡರ್. ಒಂದು ನಿಮಿಷವೂ ತಡಮಾಡದೇ ತನ್ನ ಕೋರಿಕೆ ಮುಂದಿಟ್ಟ. ‘ಇವರಿಬ್ಬರೂ ಲಂಚ್ ಅವರ್ ಮುಗಿಯೋದ್ರೊಳಗೆ ಆಫೀಸಿನಲ್ಲಿರ್ಬೇಕು’

 

***********

 

ಆಕೆಗೆ ಬಹಳಷ್ಟು ವಯಸ್ಸಾಗಿದೆ. ಅವಳಿಗೆ ಇಬ್ಬರು ಮಕ್ಕಳು. ಕಿರಿಯವ ಆಕೆಯನ್ನು ಬಹಳಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೆ. ತನ್ನ ಮನೆಯಲ್ಲೇ ಆಕೆಯನ್ನು ಇರಿಸಿಕೊಂಡು ಆಕೆಯ ಬೇಕು ಬೇಡಗಳನ್ನೆಲ್ಲಾ ನೋಡಿಕೊಳ್ಳುತ್ತಿದ್ದ. ದೊಡ್ಡವನು ಈ ವಿಷಯದಲ್ಲಿ ಜಾಣಮೌನವನ್ನು ತೋರುತ್ತಾನೆ. ‘ತಾನು ಬ್ಯುಸಿ’ ಎಂಬ ಮುಸುಕಿನಿಂದ ಆಕೆಯನ್ನು ನೆಗ್ಲೆಕ್ಟ್ ಮಾಡುತಾನೆ. ಹೀಗಿರಬೇಕಾದರೆ ದೊಡ್ಡವನ ಮನೆಯ ಗೃಹಪ್ರವೇಶವಿರುತ್ತದೆ. ದೊಡ್ಡವ ಆಕೆಗೊಂದು ಕರ್ಚೀಫ್ ನ್ನು ಉಡುಗೊರೆಯಾಗಿ ನೀಡುತ್ತಾನೆ. ಆಕೆ ತುಂಬಾ ಖುಷಿಯಾಗುತ್ತಾಳೆ.

ಗೃಹಪ್ರವೇಶದ ದಿನ ಆಕೆ ಬಂದ ಸಂಬಂಧಿಕರಿಗೆಲ್ಲಾ ಆ ಕರ್ಚೀಫ್ ತೋರಿಸುತ್ತಾಳೆ. ತನ್ನ ದೊಡ್ಡ ಮಗ ಕೊಡಿಸಿದ್ದೆಂದು ಖುಷಿಯಿಂದ ಹೇಳಿಕೊಳ್ಳುತ್ತಾಳೆ.

ಇದನ್ನು ನೋಡಿ ಚಿಕ್ಕವನಿಗೆ ತುಂಬಾ ಬೇಸರವಾಗುತ್ತದೆ. ತಾನು ಆಕೆಗೆ ಎಷ್ಟು ಮಾಡಿದ್ದರೂ ಆಕೆ ಅದನು ಹೇಳದೇ ಕರ್ಚೀಫ್ ಕೊಡಿಸಿದ್ದನ್ನೇ ಎಲ್ಲರಿಗೂ ಹೇಳ್ತಾಳಲ್ಲ ಅಂತ ಖೇದ ಪಡ್ತಾನೆ. ಚಿಕ್ಕವನ ಗೆಳೆಯನೊಬ್ಬ ಅವನಿಗೆ, ಬೇಜಾರ್ ಮಾಡ್ಕೋಬೇಡ, ನಿಜವಾಗಿಯೂ ನಿನ್ನಮ್ಮ ನಿನ್ನನ್ನು ಹೊಗಳ್ತಾ ಇದಾಳೆ. ಒಂಚೂರು ಆಲೋಚಿಸಿ ನೋಡು’ ಅಂತಾನೆ.

ಚಿಕ್ಕವನಿಗೆ ಅರಿವಾಗುತ್ತದೆ, ಮುಗುಳ್ನಗುತ್ತಾನೆ!

***

(ಇದು ನೀಲಿಹೂವಿನ ೨೦೦ ನೇ ಪೋಸ್ಟ್)

ಮಹಾನಗರವೆಂದರೆ ಸುಮ್ಮನೆ ಅಲ್ಲ. ಬಟ್ಟೆಯನ್ನು ಶಿಲೆಗಲ್ಲಿಗೆ ಕುಟ್ಟಿ, ಬ್ರಷ್ ನಲ್ಲಿ ಉಜ್ಜಿ, ನೀರಲ್ಲಿ ಮುಳುಗಿಸಿ, ಅಡಿಮೇಲೆ ಮಾಡಿ ಸುಡುಬಿಸಿಲಿಗೆ ನೇತು ಹಾಕುತ್ತೇವಲ್ಲ, ಹಾಗೆ ನಮ್ಮೊಳಗೆ ಹೊಳಪು ತರಲು ಅದು ಮಾಡದಿರುವ ಕಸರತ್ತೇ ಇಲ್ಲ.

ಅವನೋ ಹಳ್ಳಿಯಿಂದ ಬಂದವನು. ಮಹಾನಗರದಲ್ಲಿ ಹೆಜ್ಜೆಯಿಟ್ಟ ಮೊದಲ ದಿನವೇ ಕಂಡಕ್ಟರು ಚೇಂಜ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಬೈದ. ಕಾಲೇಜ್ ಹುಡುಗಿಯೊಬ್ಬಳು ಸಿಗ್ನಲ್ ಕ್ರಾಸ್ ಮಾಡಿ ಟ್ರಾಫಿಕ್ ಪೋಲಿಸ್ ಕೈಲಿ ಸಿಕ್ಕಿ ಹಾಕಿಕೊಂಡಾಗ ಸಾರ್, ಎಕ್ಸಾಮ್ ಗೆ ಹೊರ್ಟಿದೀನಿ ಈಗ್ಲೇ ತಡಾ ಆಯ್ತು ಅಂತ ಹಸೀ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದನ್ನು ನೋಡಿದ. ರಸ್ತೆಯಲ್ಲಿ ನಡೆವ ಚಿಕ್ಕ ಪುಟ್ಟ ಆಕ್ಸಿಡೆಂಟುಗಳಲ್ಲಿ ಬಾಯ್ಮಾತು ಚೆನ್ನಾಗಿದ್ದವನದೇನೂ ತಪ್ಪಿರಲ್ಲ ಎಂಬುದನ್ನು ಅರಿತ. ಥಿಯೇಟರ್ ನಲ್ಲಿ ಟಿಕೇಟ್ ಸಿಗದೇ ಒದ್ದಾಡುತ್ತಿದ್ದ ಸಮಯದಲ್ಲಿ ಪಕ್ಕದಲ್ಲಿ ನಿಂತಿದ್ದ ಮಿನಿಸ್ಟ್ರ ಮಗನಿಗೆ ಒಂದು ಫೋನ್ ಕಾಲ್ ಮೂಲಕ ಟಿಕೇಟ್ ಹೇಗೆ ಸಿಕ್ಕಿತು ಎಂದು ಅಚ್ಚರಿ ಪಟ್ಟ. ಟ್ರಾಫಿಕ್ಕಿನಿಂದಾಗಿ ಗಂಟೆಗಟ್ಟಲೆ ಬಸ್ಸೊಳಗೇ ಇರಬೇಕಿದ್ದರೂ ಇದು ಸಾಮಾನ್ಯವೇ ಅಂತ ಸುಮ್ಮನೆ ತಾಳ್ಮೆಯಿಂದ ಕುಳಿತ ಜನರನ್ನು ಕಂಡ. ಒಂದು ಕಾಫಿಗೂ ಹನ್ನೆರಡು ರೂಪಾಯಿ ಕೊಡಬೇಕಾದ, ರೂಮು ರೆಂಟಿಗೇ ಮೂರು ಸಾವಿರ ನೀಡಬೇಕಿರುವ ಈ ಊರಿಗೆ ದೂರದ ಬೀದರಿನಿಂದ ಆರು ಸಾವಿರ ಪಗಾರದ ಸಪ್ಲಾಯರ್ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯ ಜೊತೆ ಕುಶಲೋಪರಿ ಮಾತಾಡಿದ. ನಿನ್ನೆಯಷ್ಟೇ ಪರಿಚಯವಾದ ಒಬ್ಬ ನೇರವಾಗಿ ಲಜ್ಜೆಯಿಲ್ಲದೇ ಒಂದೈದು ಸಾವ್ರ ಸಾಲ ಇದ್ರೆ ಕೊಡ್ತೀಯಾ ಗುರೂ, ನಾಳೆ ವಾಪಸ್ ಮಾಡ್ಬಿಡ್ತೀನಿ ಅಂತ ಆತ್ಮವಿಶ್ವಾಸದಿಂದ ಹೇಳುವುದನ್ನು ಸಾಲ ಕೊಡಲಾಗದ ಗಿಲ್ಟಿನಿಂದ ಕೇಳಿದ. ಇಸ್ತ್ರಿ ಅಂಗಡಿಯಲ್ಲಿ ಎಂಟು ರೂಪಾಯಿ ಬಿಲ್ಲಾದಾಗ ನೀಡಿದ ಹತ್ತು ರೂಪಾಯಿಗೆ ಎರಡು ರೂಪಾಯಿ ವಾಪಸ್ಸು ಬರುವುದೇ ಇಲ್ಲ. ಚೇಂಜಿಲ್ಲ ಎಂಬ ಎರಳ್ಡು ರೂಪಾಯಿ ಬೆಲೆಬಾಳದ ಉತ್ತರ ಸಿಗುತ್ತದೆ. ಚೀಟಿಯಲ್ಲಿ ಕಂಡೆಕ್ಟರು ಬರೆದುಕೊಡುವ ಬಾಕಿ, ತಾನು ಇಳಿವ ಸ್ಟಾಪ್ ಬಂದಾಗ ಕಂಡಕ್ಟರು ಬಸ್ಸಿನ ಮುಂತುದಿಯಲ್ಲಿರುತ್ತಾನೆ. ಆ ರಶ್ಶಿನಲ್ಲಿ ಇಂಥ ಅನೇಕ ಘಟನೆಗಳೇ ಕಂಡಕ್ಟರನ ‘ಗಳಿಕೆ’ಗಳು.

ಇಲ್ಲಿ ಮಾಡಿದ ತಪ್ಪನ್ನೂ ಆತ್ಮವಿಶ್ವಾಸದಿಂದ ಹೇಳುವುದನ್ನು, ಸುಳ್ಳನ್ನು ಸತ್ಯದ ಮೇಲೆ ಪ್ರಮಾಣ ಮಾಡಿ ಹೇಳೋದನ್ನು ಕಲೀಬೇಕು ಬಾಸೂ… ಮೊದಲೆಲ್ಲ ಸಿಗ್ನಲ್ ಎಗರಿಸಿ ಗಾಡಿ ಓಡಿಸಿದರೆ ಟ್ರಾಫಿಕ್ ಪೋಲಿಸ್ ಗಮನಿಸದೇ ಇದ್ದರೂ ತಾನೇ ಹೋಗಿ ಫೈನ್ ಕಟ್ಟಿದ್ದೆ ಅನ್ನುವುದು ಹೀರೋಯಿಸ್ಮ್ ಆಗಿತ್ತು. ಈಗ ಅದನ್ನು ದಡ್ಡತನ ಅಂತಾರೆ. ಹಾಗೆ ಮಾಡಿದವನನ್ನು ಎಲ್ಲರೂ ಅನುಕಂಪದಿಂದ ನೋಡ್ತಾರೆ. ಈಗ ಸಿಗ್ನಲ್ ಜಂಪ್ ಮಾಡಿ ಅದನ್ನ ಯಾವ ರೀತಿ ಸುಳ್ಳು ಹೇಳಿ ಫೈನ್ ನಿಂದ ಬಚಾವಾದೆ ಅಂತ ಯಾರಿಗಾದ್ರೂ ವಿವರಿಸಿ ನೋಡು. ಜಗತ್ತಿನಲಿ ನೀನೇ ದೊಡ್ಡ ಬುದ್ಧಿವಂತ ಅನ್ನೋ ಧಾಟಿಯಲಿ ನೋಡ್ತಾರೆ. ಇದು ಈಗಿನ ಬದುಕು ಬಾಸೂ.. ಬೇಗ ಅಪ್ಡೇಟ್ ಆಗಬೇಕು.. ಅಂತ ರೂಂಮೇಟ್ ಅನ್ನುವುದನ್ನು ವಿಪರೀತ ಮುಗ್ದತನದಲ್ಲಿ ಕೊನೆಯ ಸಾಲಿಗೆ ಬರುವಷ್ಟರಲ್ಲಿ ಒಂದಿಷ್ಟು ಆತಂಕವನ್ನೂ ಬೆರೆಸಿ ನೋಡುತ್ತಾನೆ.

ಅಪ್ಪಾ, ನೀ ಆರಾಮಿದ್ದಿ ಅಲ್ಲ. ಬೀಪಿ ಟ್ಯಾಬ್ಲೆಟ್ಟು ತಗೊಳ್ಳೊದನ್ನ ಮರೀಬೇಡ. ನಾ ಚೆನ್ನಾಗಿದ್ದ ಹಾಗೆ ಇದ್ದೇನೆ. ಈ ಊರಲ್ಲಿ ಯಾರೂ ನನ್ನವರು ಅನ್ನಿಸುವುದಿಲ್ಲ. ಈ ಊರ ಜನರ ಮುಂದೆ ನಾನು ಹದಿನೈದು ವರ್ಷ ಹಿಂದಿನವನಂತೆ ಅನ್ನಿಸುತ್ತಿದ್ದೇವೆ. ನನ್ನ ನಡಿಗೆ ಈ ಊರಿನ ಓಟದ ಮುಂದೆ ಏನೂ ಅಲ್ಲ ಅನಿಸ್ತಿದೆ. ಇಲ್ಲಿ ಬದುಕಲಿಕ್ಕೆ ಸುಳ್ಳು ಹೇಳೋದು ಮಾತ್ರ ಅಲ್ಲ, ಸುಳ್ಳು ಹೇಳುವವರನ್ನು ಗುರುತಿಸುವ ಕಲೇನೂ ತಿಳಿದಿರ್ಬೇಕು. ಮುಖದ ಯಾವ ನೆರಿಗೆಯಲ್ಲೂ ಗಿಲ್ಟಿನ ಲವಲೇಷವೂ ಸುಳಿಯದಂತೆ ಸುಳ್ಳು ಹೇಳೋದಕ್ಕೆ ಬರಬೇಕು.

ಬೆಳಿಗ್ಗೆ ಆಗ್ತಾ ಇದ್ದ ಹಾಗೆ ಎದುರಾಗೋ ಮಂದಿಯಲ್ಲಿ ನನ್ನ ನಾನು ರಕ್ಷಿಸಿಕೊಳ್ತಾ ಬದುಕಬೇಕು. ಒಂಚೂರು ಮೈಮರೆತರೂ ಮೋಸಹೋಗ್ತೀನಿ. ತುಂಬಾ ಕಷ್ಟವಾಗುತ್ತಿದೆ ಅಪ್ಪಾ, ನಾನು ಊರಿಗೆ ಬಂದುಬಿಡುತ್ತೇನೆ. ನೀನು ನನ್ನ ಮೇಲೆ ಜೋಡಿಸಿಟ್ಟ ಅಪಾರ ಕನಸುಗಳ ತೀರಿಸಲಾದದೇ ಹೋದುದಕ್ಕೆ ಇದೊಂದು ಸಲ ಕ್ಷಮಿಸಿಬಿಡು. ನನ್ನನ್ನೂ ನಿನ್ನ ಜೊತೆಯಲೇ ಇರಲು ಬಿಡು.

ಹೀಗೆ ಬರೆದ ಪತ್ರವೊಂದನ್ನು ಅಂಚೆಪೆಟ್ಟಿಗೆ ಹಾಕಲು ಹೋದಾಗ ತಂದೆಯ ಸೋತ ಮುಖ ಎದುರಿಗೆ ಬಂದಂತಾಗಿ ಭಯದಿಂದ ಹರಿದು ಹಾಕುತ್ತಾನೆ.

ಪಾರ್ಕಿನ ಮೂಲೆಯೊಂದರಲ್ಲಿ ಕೂತು ಈ ಊರಲ್ಲಿ ಪಳಗಬೇಕೆಂದರೆ ಒಂದೋ, ಒಬ್ಬೊಬ್ಬರಿಂದಲೂ ಇಂಥ ಅನೇಕ ಕಲೆಗಳನ್ನು ಕಲಿತು ಅವರಲ್ಲೊಬ್ಬರಾಗಬೇಕು. ಇಲ್ಲವೇ, ವ್ಯವಸ್ಥೆಯನ್ನು ದೂರಿಕೊಂಡು ಮೋಸಹೋಗುತ್ತಾ ಬದುಕಬೇಕು. ಈ ಎರಡು ರಸ್ತೆ ಸೇರುವ ಕಾರ್ನರಿನಲ್ಲಿ ಅರ್ಧ ಟೀ ಕುಡಿಯುತ್ತಾ ಆಲೋಚಿಸುತ್ತಿದ್ದ ಅವನು.

ಮಹಾನಗರ, ಬಟ್ಟೆಯನ್ನು ತಿರುವಿಹಾಕಿ ಸುಡುಬಿಸಿಲಲಿ ಒಣಗಿಸಲನುವಾಯ್ತು.

ಅಪ್ಪನ ಬೈಗುಳ ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕಾರಣ ಚಿಕ್ಕದು, ಅಕ್ಕನಿಂದ ಪತ್ರ ಬಂದಿತ್ತು ಅಕ್ಕನೆಂದರೆ ನನ್ನ ಪಾಲಿಗಂತೂ ದೊಡ್ಡ ಧೈರ್ಯಸ್ಥೆ! ಅಷ್ಟುವರ್ಷ ಪ್ರೀತಿಯಿಂದ ಸಾಕಿದ ಅಪ್ಪನನ್ನು ಧಿಕ್ಕರಿಸಿ ಯಾವುದೋ ಹುಡುಗನ ಪ್ರೀತಿಯ ಮಾಯಾಮೃಗಕ್ಕೆ ಆಸೆಪಟ್ಟು, ಕಟ್ಟು ಪಾಡಿನ ಲಕ್ಷಣ ರೇಖೆಯನ್ನು ದಾಟಿದವಳು. ಸದಾ ಮುಗುದೆಯಂತೆ ಮಾಡುತ್ತಿದ್ದ ಅಕ್ಕನಿಗೆ ಅಂತಹ ಮಾನಸಿಕ ಶಕ್ತಿಯನ್ನು ನೀಡಿದ ಮಹಾನ್ ಶಕ್ತಿ ಪ್ರೇಮವೆಂದು ಅಚ್ಚರಿಪಟ್ಟಿದ್ದೆ!

ಅಪ್ಪನ ಕೋಪಕ್ಕೆ ತಲೆಕೆಡಿಸಿಕೊಳ್ಳದೆ ’ಆದದ್ದು ಆಗಿ ಹೋಯಿತು, ಇನ್ನಾದರು ಒಟ್ಟಿಗೆ ಇರೋಣ….’ ಎಂಬ ಸಂಧಾನ ಪತ್ರ ಆಗಾಗ್ಗೆ ಕಳುಹಿಸುತ್ತಲೇ ಇರುತ್ತಾಳೆ. ಈ ಪತ್ರಗಳ ಬಿಸಿಗೆ ಅಪ್ಪನ ಕೋಪದ ಮಂಜುಗಡ್ಡೆ ಇನ್ನು ಕರಗಲೇ ಇಲ್ಲ. ಮತ್ತೆ ಇನ್ನೊಂದು ಪತ್ರ ಹಾಕಿದ್ದಳು.

ಅವಳಿಗಾಗಲೇ ಈ ಬೈಗುಳ. ನನಗೆ ಯಾಕೋ ಕಸಿವಿಸಿ, ಅವರು ಬೈದ ಮಾತುಗಳು ನನಗೂ ತಾಗುತ್ತಿದ್ದವು. ಪ್ರೇಮವೆಂದೊಡನೆ ಎಲ್ಲರ ಮನೆಗಳಲ್ಲಿಯೂ ತಂದೆ ತಾಯಿಗಳ ಮಾಮೂಲಿ ಮಾತುಗಳಿರಬಹುದು ಆದರೆ ನಿಜವಾದ ಪ್ರೀತಿಯಲ್ಲಿ ತೋಯ್ದಿರುವ ನನ್ನಂತವಳಿಗೆ ಇದು ಚುಚ್ಚುವ ಈಟಿಯಂತದ್ದು. ಅಸಲು ದೊಡ್ಡವರಿಗೆ ಪ್ರೀತಿಯ ಮೇಲಿಷ್ಟು ದ್ವೇಷ ಯಾಕೆ ಅಂತ ಅರ್ಥವಾಗುವುದಿಲ್ಲ. ಹರೆಯದ ವಯಸ್ಸಿನಲ್ಲಿ ಅವರೂ ಪ್ರೇಮಿಸಿರಲಿಲ್ಲವೇ? ಪ್ರೇಮದ ಗಾಢತೆ, ಅದರ ಸವಿಸ್ಪರ್ಶ ಅವರೂ ಅನುಭವಿಸಿರಲಿಲ್ಲವೇ? ಆದರೂ ಇದನ್ನೆಲ್ಲ ಧೈರ್ಯವಾಗಿ ನಿರ್ಭಯತೆಯಿಂದ ತಂದೆಯೆದುರು ಹೇಳುವಂತಹ ಅಕ್ಕನ ಧೈರ್ಯ ಧಿಮಾಕು ನನ್ನ ಬಳಿ ಇಲ್ಲ. ಆ ಭಯ ನಿಜಕ್ಕೂ ಧೈರ್ಯವಿಲ್ಲದೆಯಷ್ಟೇ ಅಲ್ಲ, ಇಷ್ಟು ದಿನ ತಂದೆ ತೋರಿದ ಪ್ರೀತಿಯೆ ಅಂತಹ ಮಾತಾಡದಂತೆ ಕಟ್ಟಿಹಾಕಿರುವುದು.

ಹೌದು…. ತಂದೆಗೆ ನನ್ನ ಮೇಲೆ ಅಗಾಧ ಪ್ರೀತಿ. ಅಕ್ಕ ಹೋದ ಮೇಲಂತೂ ಅವರಿಗೆ ನನ್ನ ಮೇಲೆ ಪ್ರೀತಿ ಇಮ್ಮಡಿಯಾಗಿದೆ. ಯಾವ ವಿಷಯಕ್ಕೂ ನನ್ನ ನಿರ್ಧಾರಕ್ಕೆ ಅಡ್ಡಿ ಬರುವವರಲ್ಲ ಅಲ್ಲದೇ ಜಬ್ದಾರಿಯಿಂದ ಬೆಳೆಸಿದ್ದರು. ಆದರೆ ಮದುವೆ ವಿಷಯಕ್ಕೆ ಬಂದರೆ
ಮಾತ್ರ ನನಗೆ ನಿರ್ಣಯದ ಸ್ವಾತಂತ್ರ್ಯ ನೀಡುವುದು ಅನುಮಾನವೇ! ಅದಕ್ಕೆ ಕಾರಣವನ್ನೂ ಆಗಾಗ್ಗೆ ಹೇಳುತ್ತಿರುತ್ತಾರೆ. ‘ಹರೆಯಕ್ಕೆ ಬಂದವರ ಕಣ್ಣು ಕುರುಡಂತೆ’. ಆದರೆ ನನಗೆ ಈ ಅಭಿಪ್ರಾಯದ ಬಗ್ಗೆ ಕೊಂಚವೂ ನಂಬಿಕೆ, ಒಪ್ಪಿಗೆಯಿಲ್ಲ.

ಪಕ್ಕದಲ್ಲೇ ಬಿದ್ದಿದ್ದ ಎಕನಾಮಿಕ್ಸ್ ಪುಸ್ತಕದ ಮಧ್ಯಭಾಗದಲ್ಲಿ ಬಚ್ಚಿಟ್ಟಿದ್ದ ಅವನ ಫೋಟೊ ಕೈಗೆತ್ತಿಕೊಂಡೆ. ಅವನ ತುಟಿಯಂಚಿನ ಮುಗ್ಧ ನಗು ಸೂಜಿಗಲ್ಲಂತೆ ಸೆಳೆಯುತ್ತಿತ್ತು. ಕಣ್ಣ ಹೊಳಪು, ಆಕರ್ಷಣೆಗೆ ಮನ ತಲೆಬಾಗಿತ್ತು. ನಿಜವಾಗಿಯೂ ಹೇಳೆಬೇಕೆಂದರೆ ಆತನ ಸೌಂದರ್ಯವನ್ನು ಇಷ್ಟಪಟ್ಟು ಪ್ರೇಮಿಸಿದ್ದಲ್ಲ. ಸೌಂದರ್ಯಕ್ಕೆ ಮೀರಿದ ರಹಸ್ಯವೇನೋ ಆತನಲ್ಲಿದೆ. ಅದು ಆತನ ನಡೆ, ಮಾತು, ನಗು, ದಿರಿಸು ಏನೂ ಆಗಿರಬಹುದು. ಒಟ್ಟಿನಲ್ಲಿ ಆತನೆಂದರೆ ನಂಗಿಷ್ಟ.

ಆದರೆ ಇವತ್ತಿಗೂ ಚಿಕ್ಕ ಅನುಮಾನದ ಮೊಳಕೆ ಎದೆಯ ಭೂಮಿಯಲ್ಲಿ ಇದ್ದೇ ಇದೆ. ಅದೇನೆಂದರೆ, ಆತನೊಳಗೆ ನನ್ನ ಬಗ್ಗೆ ಪ್ರೇಮದ ಭಾವನೆ ಇದೆಯಾ ಎಂದು. ಯಾಕೆಂದರೆ ಯಾವತ್ತೂ ಅದನ್ನು ಅವನ ಬಳಿ ಕೇಳಿಲ್ಲ. ನನ್ನ ಇಂಟ್ರಾವರ್ಟ್ ಮನಸತ್ವಕ್ಕೆ ಅದು ಸಾಧ್ಯವಾಗುತ್ತದಾ ಇಲ್ಲವಾ ಎಂಬ ಭಯ ನನ್ನಲ್ಲಿದೆ. ಅವನು ಮೊದಲು ಭೇಟಿಯಾದಾಗಿನಿಂದ ಇಲ್ಲಿಯವರೆಗೂ ಒಮ್ಮೆ ಅದೂ ಕಾಲೇಜ್ ಡೇ ದಿನದ ಫೋಟೊ ಆಲ್ಬಮ್‌ನಿಂದ ಆತನ ಫೋಟೊ ಕದ್ದಿದ್ದನ್ನು ಬಿಟ್ಟರೆ, ಪ್ರೇಮ ನಿವೇದನೆಯ ಪ್ರಯತ್ನವಾಗಲೀ, ಲೆಟರ್ ಮೂಲಕ ಹೇಳುವ ಧೈರ್ಯವಂತ ನಿರ್ಧಾರವಾಗಲೀ ಮಾಡಿದ ನೆನಪಿಲ್ಲ. ಆದರೆ ಆತ ನನ್ನೆಡೆಗೆ ನೋಡುವ ನೋಟದಲ್ಲಿನ ಚಿಲುಮೆ, ನೀಡುವ ಗೌರವ, ಯಾವತ್ತೂ ನನ್ನ ಹೃದಯದಲ್ಲಿ ‘ಅವನೂ ಪ್ರೀತಿಸುತ್ತಿದ್ದಾನೆ’ ಎಂಬ ಮಾತು ಮಾರ್ದವಗೊಳ್ಳುವಂತೆ ಮಾಡುತ್ತಿರುತ್ತದೆ.

ಕ್ಲಾಸಿನಲ್ಲಿ ಕೆಲವೊಮ್ಮೆ ಆತನನ್ನು ಗಮನಿಸುತ್ತಿರುತ್ತೇನೆ. ಯಾರ ಬಳಿಯೂ ಹೆಚ್ಚು ಮಾತಿಲ್ಲ. ಅವನಾಯಿತು. ಓದಾಯಿತು ಎಂಬಂತಿರುತ್ತಾನೆ. ನನ್ನಂತೆಯೇ ಶುದ್ಧ ಇಂಟ್ರಾವರ್ಟ್ ಇರಬೇಕು. ಅವನೊಳಗಿರುವ ನನ್ನ ಬಗೆಗಿನ ಪ್ರೇಮವನ್ನು ತೋಡಿಕೊಳ್ಳಲು ಅದೇ ಅಡ್ಡಿ ಬರುತ್ತದೆ ಅಂದುಕೊಂಡು ವಿಲಪಿಸುವ ಹೃದಯಕ್ಕೆ ಸಮಾಧಾನ ಹೇಳುತ್ತಿರುತ್ತದೆ.

ಅವನನ್ನು ಭೇಟಿ ಮಾಡಿದ ಕ್ಷಣಗಳೆಲ್ಲ ಅವಿಸ್ಮರಣೀಯ. ನನ್ನೆಡೆಗೆ ಆತ ನೋಡಿದ ಚಿಕ್ಕ ನೋಟವನ್ನೂ ಕೂಡ ಮನಸ್ಸು ರೆಕಾರ್ಡ್ ಮಾಡಿಟ್ಟುಕೊಂಡಿರುತ್ತದೆ. ಅದನ್ನು ಮನಸ್ಸು ಮೆಲುಕು ಹಾಕಿದಾಗಲೆಲ್ಲ ಹೃದಯ ನವಿಲುಗರಿಬಿಚ್ಚಿ ಕುಣಿದಾಡುತ್ತದೆ. ಅಬ್ಬ! ಪ್ರೇಮವೇ, ನಿನ್ನ ಒಂದು ಚಿಕ್ಕಲಹರಿ ಇಷ್ಟು ಗಾಢವಾಗಿ ಮನ ತಟ್ಟುತ್ತಾ ಎಂದು ಚಿಕ್ಕ ಮಗುವಿನಂತೆ ಅಚ್ಚರಿ ಪಡುತ್ತೇನೆ! ಅಂತಹ ಅನುಭವ ಪಡೆಯದ ಜೀವಗಳನ್ನು ನೋಡಿ ಗೆಲುವಿನ ನಗೆ ಮೂಡುತ್ತದೆ ನನ್ನೊಳಗೆ.

ಸದ್ಯಕ್ಕೆ ಅವನ ಸ್ನಿಗ್ಧ ನಗುವಿನ ಚಿಕ್ಕ ಫೋಟೋನೇ ನನ್ನ ಆಸ್ತಿ. ಅವನ ನಗುವಿನೊಳಗೆ ಮುಳುಗಿ ಒದ್ದೆ ತಂಪಿನ ಸುಲ್ಹ ಅನುಭವಿಸುತ್ತೇನೆ. ಖುಷಿಯಾದಾಗ ದುಃಖವಾದಾಗ ಏನೂ ಭಾವನೆ ಮೂಡದಿರುವಾಗ – ಯಾವಾಗಲೂ ಅವನೊಳಗೇ ಇರುವಾಸೆ ಮನಸ ಬಸಿರಿಗೆ. ಈ ಆಸೆಯ ಬಸಿರಿಗೆ ಹೆರಿಗೆ ಯಾವಾಗ?

ಸ್ವಲ್ಪ ದಿನ ಕಳೆಯಿತು. ಒಮ್ಮೆ ತಂದೆ ಮನೆಗೆ ಬರುವಾಗ ಎಂದಿನಂತಲ್ಲದೆ ಬಹಳ ಉತ್ಸಾಹದಿಂದ ಬಂದರು. ಅವರು ತಂದ ಸುದ್ದಿಗೆ ನನ್ನ ಮನಕ್ಕೆ ಬುದ್ಧಿ ಭ್ರಮಣೆಯಾದಂತಾಯಿತು. ನನ್ನ ಮದುವೆಗೆ ಯಾವುದೋ ಹುಡುಗನನ್ನು ಹುಡುಕಿದ್ದು ನನ್ನ ನೋಡಲು ಒಂದೆರಡು ದಿನಗಳಲ್ಲಿ ಬರುತ್ತಾನಂತೆ. ಒಂದೇ ಉಸಿರಿಗೆ ರೂಮಿಗೆ ಓಡಿದೆ. ಅವರು ನಾಚಿಕೆ ಅಂದುಕೊಂಡರು. ಬಾಗಿಲು ಹಾಕಿಕೊಂಡು ಹಾಸಿಗೆಯಲ್ಲಿ ಬಿದ್ದು ಮನಸಾರೆ ಅತ್ತೆ. ಮನದ ರೋದನ ಮುಸಲ ಧಾರೆಯಾಗಿ ದಿಂಬನ್ನೆಲ್ಲ ಒದ್ದೆಯಾಗಿಸಿತು. ಮೌನ ಎಷ್ಟು ಅಸಹನೀಯ! ಪ್ರೀತಿ ಅವನಲ್ಲೂ ಇದೆ. ಆದರೆ ಅವರ ಮಧ್ಯೆ ಹಾಳು ಭಯವಿದೆಯಲ್ಲ! ಭಯದ ಮಗುವಾದ ಮೌನದ ಹೊರೆಯಿದೆಯಲ್ಲ ಅದನ್ನು ಸರಿಸುವವರು ಯಾರು? ಅವನಾ..? ನಾನಾ..?

ಗಂಡಸರಿಗೇನಾಗಬೇಕು? ಮರೆತೂ ಸುಖವಾಗಿರಬಲ್ಲರು. ಆದರೆ ಹೆಂಗಸಿನ ಪ್ರಥಮ ಪ್ರೇಮವಿದೆಯಲ್ಲ, ಅಂಟಿಕೊಂಡರೆ ಬಿಡದು. ಬದುಕಿನುದ್ದಕ್ಕೂ ಹೃದಯದ ಹೊಟ್ಟೆಯಲ್ಲಿಟ್ಟುಕೊಂಡೇ ಬಾಳಬೇಕು. ಆ ಹಾಳು ಹಾದರ ಯಾರಿಗೆ ಬೇಕು?

ಇಷ್ಟಕ್ಕೂ ಒಂದು ವಿಷಯ ಮಾತ್ರ ಖಂಡಿತ. ಹೃದಯಕ್ಕೆ ಬೇರಾರೂ ಬೇಡ. ಅವನಿಗೇ ಮೀಸಲಾಗಿದೆ ಈ ಬದುಕು. ಬೇರೆ ಯಾರನ್ನೂ ಪ್ರೀತಿಸಲಾರೆ. ಬೇರಾರಿಗೂ ಒಲವಧಾರೆ ಎರೆಯಲಾರೆ.

ಆದರೆ ಇದನ್ನೆಲ್ಲ ತಂದೆಗೆ ಹೇಗೆ ಹೇಳಲಿ? ಹತ್ತೊಂಭತ್ತು ವರ್ಷ ಪೋಷಿಸಿದವರವರು. ತಿದ್ದಿ ತೀಡಿದವರು… ಹೇಗೆ ಎದುರಾಡಲಿ ಅಕ್ಕನಂತೆ.

ಸ್ವಲ್ಪ ಹೊತ್ತು ಕುಳಿತು ಆಲೋಚಿಸಿದೆ. ಇಬ್ಬರ ಪ್ರೀತಿ ನಡುವೆ ಮೌನ ಭಾರ, ಅಸಹನೀಯ. ಅವನ ಬಳಿಯೇ ಹೋಗಬೇಕು. ಭಯ, ಸಂಕೋಚ ಎಲ್ಲದಕ್ಕೂ ತಿಲಾಂಜಲಿ ಕೊಟ್ಟು ಬಿಡಬೇಕು. ನನ್ನೊಳಗಿನೊಲವು ತಿಳಿಸಿಬಿಡಬೇಕು. ನಾಳೆ ಹೇಳುವೆನೆಂದರೆ ಬಾಳೆ ಕೂಪದಲ್ಲಿ ಬಿದ್ದೀತು. ಇವತ್ತೇ ಏನಾದರಾಗಲೀ ಹೇಳಿ ಬಿಡಬೇಕೆಂದು ನಿರ್ಧರಿಸಿದೆ.

ಒಂದುವೇಳೆ ಆತ ಒಲ್ಲೆ ಎಂದರೆ? ದಡ ಕಾಣದ ಹಡಗಿನಂತಾದೀತು ಮನಸು. ಅಂತಹ ಪರಿಸ್ಥಿತಿ ಊಹಿಸಲೂ ನಿರಾಕರಿಸಿತು ಮನ.
……………….

ಪ್ರಿಯ ಸಖನಿಗೆ,
ಭರಿಸಲಾಗದಷ್ಟು ಹೊರೆಯಾಗಿದೆ ಈ ಪ್ರೀತಿ. ಹಂಚಿಕೊಳ್ಳದೇ ವಿಧಿಯಿಲ್ಲ ಎಂಬಂತಾಗಿದೆ. ಕಣ್ಣ ಕುಡಿಯಂಚಿನ ಪ್ರೇಮದಾಟ ಸಾಕು. ಹೃದಯದ ‘ನೀನೇ ಬೇಕೆಂಬ’ ಹಠ ಹೆಚ್ಚಾಗಿದೆ. ನಿನ್ನೊಳಗೂ ನನ್ನ ಬಗ್ಗೆ ಪ್ರೇಮವಿದೆಯಾ? ಇದೆಯಾದರೆ ಹಂಚಿಕೋ. ಇಲ್ಲವಾದರೆ ಈ ಪತ್ರ ಹರಿದು ಚೂರು ಮಾಡು.
ನಿನ್ನ
ಶರ್ಮಿಳ

ಹೀಗೆ ಬರೆದು ಮಡಚಿ ಪುಸ್ತಕದೊಳಗಿಟ್ಟುಕೊಂಡಳು. ಕಾಲೇಜು ಬಿಡುವ ಸಮಯಕ್ಕಾಗಿ ಕಾಯತೊಡಗಿದೆ. ಕ್ಲಾಸಿನಲ್ಲಿ ಅನ್ಯಮನಸ್ಕತೆ ಬದುಕು ಏನಾದೀತೋ ಎಂಬ ಭೀತಿ. ಆತನ ಉತ್ತರವೇನೋ ಎಂಬ ಆತಂಕ. ಏನಾದರಾಗಲಿ ಇಂದೇ ನಿರ್ಧಾರವಾಗಿ ಹೋಗುವುದೆಂಬ ನಿರುಮ್ಮಳತೆ ಮತ್ತೊಂದು ಕಡೆ.

ಸಂಜೆ ಕಾಲೇಜು ಬೀಡುವ ಸಮಯದಲ್ಲಿ ಆಗಸದ ತುಂಬ ಮೋಡ. ಸಣ್ಣ ಮಬ್ಬುಗತ್ತಲೆ. ಉಸಿರು ಬಿಗಿ ಹಿಡಿದು ಕಾಲೇಜು ಗೇಟ ಬಳಿ ನಿಂತೆ. ತುಂಬು ಜನಸಂದಣಿ ಮಧ್ಯೆ ಜಾಗ ಮಾಡಿಕೊಂಡು ಆತ ಬರುತ್ತಿದ್ದ. ಹತ್ತಿರ. ಇನ್ನೂ ಹತ್ತಿರ ಬಂದ. ಹತ್ತಿರ ಬಂದಷ್ಟೂ ಹೆಚ್ಚುವ ಭಯ, ನಡುಕ.

“ಒಂದ್ನಿಮಿಷ ನನ್ನ ಜೊತೆ ಬರ್ತೀರಾ?” ಕೇಳಿದೆ. ಆಶ್ಚರ್ಯಕರ ಮುಖಭಾವದೊಂದಿಗೆ ‘ಸರಿ’ ಎಂದನಾತ.

ಮೈದಾನದೆಡೆಗೆ ಏಕಾಂತವನ್ನರಸಿ ಹೋಗುತ್ತಿದ್ದರೆ ನನ್ನ ಹಿಂದೆಯೇ ಬರುತ್ತಿದ್ದ, ಚಿಕ್ಕದಾಗಿ ಊಟದೆಲೆಗೆ ನೀರು ಚಿಮುಕಿಸಿದಂತೆ ಹೊಯ್ಯುತ್ತಿತ್ತು ಮಳೆ.

ಮೈದಾನದ ಮೂಲೆಗೆ ಕರೆದೊಯ್ದು ನೀಡಿದ ಪತ್ರ, ಆತನ ಕೈಗಿಟ್ಟು ಆತನನ್ನು ಎದುರಿಸಲಾಗದೆ ಈ ಕಡೆ ಬಂದು ಬಿಟ್ಟೆ. ಮರದ ಕೆಳಗೆ ಮರೆಯಲ್ಲಿ ನಿಂತು ಆತನನ್ನು ಗಮನಿಸುತ್ತಿದ್ದೆ.

ಮಳೆ ಸಣ್ಣಗೆ ಬರುತ್ತಿದ್ದುದು ಹೆಚ್ಚುತ್ತಾ ಹೋಯಿತು. ಅಂತೆಯೇ ನನ್ನ ಆತಂಕವೂ! ಆತ ಓದುವುದ ಮುಗಿಸಿ ಕಣ್ಣು ಮುಚ್ಚಿ ನಿಂತಿದ್ದ. ಮೊಗದ ತುಂಬ ಮಳೆನೀರು. ಅಳುತ್ತಿರುವನಾ? ಗೊತ್ತಾಗಲಿಲ್ಲ.

ಸ್ವಲ್ಪಹೊತ್ತು ಕಾದೆ. ಬರಲಿಲ್ಲ. ತಿರುಗಿ ನೋಡಲೂ ಇಲ್ಲ. ಭಯವಾಯಿತು. ಆತನ ಬಳಿ ಓಡಿದೆ. ಆತನಿನ್ನೂ ತೊಯ್ಯುತ್ತಲೇ ಇದ್ದ; ಬಯಲ ಮಧ್ಯದ ಮರದಂತೆ. ಅವನ ಶರಟು ಹಿಡಿದೆ. “ಏನಾಯ್ತು” ಕೇಳಿದೆ. ನಿರ್ಭಾವುಕ ನೋಟ ನನ್ನತ್ತ ಎಸೆದ. “ಸಾರಿ ಶರ್ಮಿಳ ಶರ್ಮಿಳ ಇಷ್ಟು ದಿನ ನಿನ್ನನ್ನು ಕಾಡಿದ್ದಕ್ಕೆ ಪ್ರೀತಿ ನನ್ನಲ್ಲೂ ಇದೆ” ಅಂದ. ನನ್ನ ಮೇಲೆ ಬೀಳುತ್ತಿರುವುದು ನೀರಹನಿಯಲ್ಲ ಪನ್ನೀರ ಸುರಿಮಳೆ ಅನ್ನಿಸಿತು. ಆನಂದದಿಂದ ತಬ್ಬಿಕೊಂಡೆ ಮತ್ತೆ ಹೇಳಿದೆ, “ನಾನೇ ನಿನ್ನ ಬಳಿ ಬಂದು ಕೇಳಬೇಕಿತ್ತು. ಕ್ಷಮಿಸು ಇಷ್ಟು ದಿನ ಹೇಳದಿದುದಕ್ಕೆ ಕಾರಣ ನನಗಿದ್ದ ಭಯವೇ. ನಿನ್ನ ನಿರಾಕರಣೆಯ ಭಯ. ನೀನೇ ಒಪ್ಪಿಕೊಂಡ ಮೇಲೆ ಇನ್ನು ಯಾವ ಭಯವೂ ಇಲ್ಲ.”

“ಆದರೆ ನನ್ನ ತಂದೆ ನನಗೆ ಬೇರೆ ಹುಡುಗನನ್ನು ನೋಡುತ್ತಿದ್ದಾರೆ…” ಅಂದೆ.

“ಇವತ್ತೇ ಹೋಗಿ ಮಾತಾಡುತ್ತೇನೆ. ಪ್ರೀತಿ ಮಾಡಿದರೆ ಭಯ ಪಡಬಾರದು. ಇದೇ ನಾನು ಕಲಿತ ಪಾಠ.”

“ನನ್ನ ತಂದೆ ಒಪ್ಪದಿದ್ದರೆ…?”

“ಒಪ್ಪಿಸುವೆ ಎಂಬ ನಂಬಿಕೆ ನನಗಿದೆ.” ಅಂದ.

ಜಡಿ ಮಳೆಯಲ್ಲಿ ಇಬ್ಬರೂ ಒಟ್ಟಾಗಿ ಒದ್ದೆಯಾದೆವು. ಇನ್ನು ಯಾವ ಬೆದರು ಮಳೇಗೂ ಬಗ್ಗುವವಳಲ್ಲ ನಾನು, ಸಂಗಾತಿಯಾಗಿ ಅವನಿರುವ ತನಕ…

-೧-

ಒಂದು ಬ್ಯಾಂಕಿನ ಬ್ಯೂಸಿ ದಿನ. ಜನ ಗಿಜಿಗುಟ್ಟುತ್ತಿದ್ದರು.

ಅಲ್ಲಿ ಮುಲ್ಲಾ ನಸೀರುದ್ದೀನ್ ಕೂಡ ಇದ್ದಿದ್ದರು. ಕೊಂಚ ಹೊತ್ತಿನ ಬಳಿಕ ಮುಲ್ಲಾ ಒಂದು ಅನೌನ್ಸ್ ಮೆಂಟ್ ನೀಡಿದರು.

ಇಲ್ಲಿ ಯಾರದ್ದಾದರೂ ಲಕ್ಷ ರೂಪಾಯಿಯ ಕಟ್ಟು ಬಿದ್ದು ಹೋಗಿದೆಯಾ?

ಎಲ್ಲರೂ ನನ್ನದು ನನ್ನದು ಅಂತ ಮುಗಿಬೀಳಲು ಅನುವಾದರು.

ಮುಲ್ಲಾ ಶಾಂತವಾಗಿ, "ಅದಕ್ಕೆ ಕಟ್ಟಿದ್ದ ರಬ್ಬರ್ ಬ್ಯಾಂಡ್ ನನಗೆ ಸಿಕ್ಕಿದೆ, ತಗೆದುಕೊಂಡುಹೋಗಬಹುದು" ಅಂದರು!

-೨-

ಒಬ್ಬ ಮನಶ್ಯಾಸ್ತ್ರಜ್ಞ ರಸ್ತೆಯಲ್ಲಿ ಹಾದುಹೋಗುತ್ತಿದ್ದಾಗ ನಾಲ್ವರು ಹುಡುಗರು ಜಗಳ ಆಡುತ್ತಿರುವುದು ಕಾಣಿಸುತ್ತದೆ. ಅದರಲ್ಲಿ ಒಬ್ಬ ಹುಡುಗನ ಕೈಯ್ಯಲ್ಲಿ ಮುದ್ದಾದ ಪುಟಾಣಿ ನಾಯಿಮರಿ ಇದೆ. ’ಯಾಕೆ ಜಗಳ ಆಡ್ತಾ ಇದೀರಿ’ ಅಂತ ಮನಶ್ಯಾಸ್ತ್ರಜ್ಞ ಕೇಳಿದ.

ಈ ನಾಯಿಮರಿ ದಾರೀಲಿ ಸಿಕ್ತು, ಯಾರ್ ತಗೊಡ್ ಹೋಗ್ಬೇಕೋ ಗೊತ್ತಾಗ್ತಿಲ್ಲ. ಎಲ್ರೂ ತಂಗೇ ಬೇಕು ಅಂತ ಹಠ ಹಿಡಿದಿದ್ದಾರೆ. ನಂಗೂನು ಬೇಕು ಅನ್ನಿಸ್ತಿದೆ ಅಂತ ಒಬ್ಬ ಹುಡುಗ ಹೇಳಿದ.

ಮತ್ತೊಬ್ಬ ’ ಅದ್ಕೇ, ನಮ್ಮಲ್ಲಿ ಯಾರ್ ದೊಡ್ಡ ಸುಳ್ಳು ಹೇಳ್ತಾರೋ ಅವ್ರಿಗೇ ಕೊಡೋದು ಅಂತ ನಿರ್ಧರಿಸಿ, ಒಬ್ಬೊಬ್ಬರಾಗಿ ಸುಳ್ಳು ಹೇಳ್ತಾ ಇದೀವಿ ಅಂದ.

ಮನಶ್ಯಾಸ್ತ್ರಜ್ಞನಿಗೆ ಬೇಸರವಾಯಿತು. ಇನ್ನೂ ಶಾಲೆಗೆ ಹೋಗುತ್ತಿರೋ ಹುಡುಗರು, ಅರಳುವ ಮೊಗ್ಗುಗಳು. ಈಗಲೇ ಸುಳ್ಳಿನತ್ತ ವ್ಯಾಮೋಹ, ಸುಳ್ಳು ಹೇಳುವ ಕಲೆ ಕರಗತವಾಗಿಬಿಟ್ಟರೆ ಮುಂದೆ ಏನೆಲ್ಲಾ ಆಗಿ ಇವರು ತಯಾರಾಗುವರೋ ಎಂಬ ಆತಂಕ ಹುಟ್ಟಿತು. ದೊಡ್ಡ ದೊಡ್ಡ ಹೆಸರಿನ ಮಾನಸಿಕ ಖಾಯಿಲೆಗಳ ಹೆಸರೆಲ್ಲಾ ಕಣ್ಮುಂದೆ ಬಂತು.

"ಸುಳ್ಳು ಹೇಳೋದು ತಪ್ಪು ಮಕ್ಕಳೇ, ನೀವೆಲ್ಲಾ ಭವಿಷ್ಯದ ಕುಡಿಗಳು. ಅಬ್ದುಲ್ ಕಲಾಂ ಆಗುವ ಕನಸು ಹುಟ್ಟಿಸಿಕೊಳ್ಳಬೇಕು, ನೋಡಿ ನನ್ನನ್ನು. ನಿಮ್ಮ ವಯಸ್ಸಿನಲ್ಲಿ ಸುಳ್ಳು ಹೇಳಿದ್ದರೆ ಈಗ ನಾನು ಈ ಊರಿನ ದೊಡ್ಡ ಮನಶ್ಯಾಸ್ತ್ರಜ್ಞ ಆಗ್ತಿದ್ದೆನಾ? ಗಾಂಧಿ ಆತ್ಮಕಥೆ ನಾನು ಓದಿದ್ದು ನಿಮ್ಮ ವಯಸ್ಸಿನಲ್ಲೇ, ಆಗಲೇ ನಾನು ಸುಳ್ಳು ಹೇಳಲ್ಲ ಅಂತ ನಿರ್ಧರಿಸಿದ್ದೆ. ಈಗ ನೀವೆಲ್ಲಾ ಈ ಸುಳ್ಳು ಹೇಳೋ ಆಟದ ಬದಲು, ಯಾರು ಬುದ್ಧಿವಂತರೋ ಅವರಿಗೆ ನಾಯಿಮರಿ ಅಂತ ನಿರ್ಧರಿಸಿ" ಅಂದ.

ಅಲ್ಲಿ ಪೂರ್ತಿ ನಿಶ್ಯಬ್ಧ ಆವರಿಸಿತು. ಮಕ್ಕಳು ಒಬ್ಬರನ್ನೊಬ್ಬರು ನೋಡಿಕೊಂಡರು.

ಒಬ್ಬ ಹುಡುಗ "ಲೋ..ಇವ್ರೇ ಹೇಳಿದ್ರಿಂದ.. ನಾಯಿಮರೀನ ಈವಯ್ಯಂಗೇ ಕೊಟ್ ಬಿಡಾಣ ಕಣ್ರೋ!’ ಅಂದ!

-೩-

ಎಂಟು ಜನ ಎಂ ಬಿ ಎ ವಿದ್ಯಾರ್ಥಿಗಳು ಮಾರನೇ ದಿನ ’ಟೀಂ ವರ್ಕ್’ ವಿಷಯದಲ್ಲಿ ಪರೀಕ್ಷೆ ಬರೆಯಬೇಕು. ಆದರೆ ಅವತ್ತು ಫ್ರೆಂಡ್ ಶಿಪ್ ಡೇ ಇದ್ದಿದ್ದರಿಂದ ಪರೀಕ್ಷೆಗೆ ತಯಾರಾಗಲು ಸಾಧ್ಯವಾಗಲಿಲ್ಲ. ಅದಕ್ಕೆ ಅವರೆಲ್ಲಾ ಸೇರಿ ಒಂದುಪಾಯ ಮಾಡಿದರು. ಮರುದಿನ ಒಟ್ಟಾಗಿ ಪ್ರೊಫೆಸರ್ ಬಳಿಗೆ ಹೋಗಿ ರಾತ್ರಿ ಪರೀಕ್ಷೆಗಾಗಿ ಬರುವಾಗ ವಾಹನದ ಟೈರ್ ಪಂಕ್ಚರ್ ಆಯ್ತು, ಸ್ಪೇರ್ ಟೈರ್ ಇಲ್ಲವಾದ್ದರಿಂದ ಬಹಳ ದೂರ ನಡೆದುಕೊಂಡು ಹೋಗಿ ಸರಿ ಮಾಡಿಸಿಕೊಂಡು ಬರಬೇಕಾಯ್ತು, ನಿದ್ದೆಯಿಲ್ಲವಾದ್ದರಿಂದ ಪರೀಕ್ಷೆ ಬರೆಯಲಾಗದು, ದಯವಿಟ್ಟು ಪರೀಕ್ಷೆಯನ್ನ ಐದು ದಿನ ನಂತರ ಇಡಬೇಕು ಅಂತ ಕೋರಿಕೆಯಿಟ್ಟರು.

ಪ್ರೊಫೆಸರ್ ಮರು ಮಾತಾಡದೇ ಒಪ್ಪಿಗೆಯಿತ್ತರು.

ಐದು ದಿನದ ನಂತರ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ತೆಗೆದುನೋಡಿದರೆ ಪ್ರಶ್ನೆಗಳು ಈ ರೀತಿಯಾಗಿವೆ:

೧. ಐದು ದಿನದ ಹಿಂದೆ ನೀವು ಹೋದ ಕಾರಿನ ಯಾವ ಚಕ್ರ ಪಂಕ್ಚರ್ ಆಯಿತು? ಮುಂದಿನದಾ? ಹಿಂದಿನದಾ? ಬಲಗಡೇದ್ದಾ? ಎಡಗಡೇದ್ದಾ? (೯೫ ಅಂಕಗಳು)
೨. ಟೀಂ ವರ್ಕ್ ಗೆ ಬೇಕಾದ ಮುಖ್ಯ ಲಕ್ಷಣಗಳೇನು? (೫ ಅಂಕಗಳು)

ಎಲ್ಲರಿಗೂ ಐದು ಅಂಕಗಳೇ ಬಂದವು. ತಮ್ಮ ತಪ್ಪು ತಿಳಿದುಕೊಂಡ ಎಲ್ಲರೂ ಸರಿಸುಮಾರು ಒಂದೇ ಉತ್ತರ ಬರೆದರು.

"..ಯಾವ ಕೆಲಸ ಮಾಡಿದರೂ, ಯಾವ ಸುಳ್ಳು ಹೇಳಿದರೂ, ಇಡೀ ಟೀಂ ಎಲ್ಲಾ ಕೂಡಿ ಚರ್ಚಿಸಿ, ಪೂರ್ತಿ ಅವಗಾಹನೆಯಿಂದ ಮಾಡಬೇಕು."

***

ಟಿಪ್ಪಣಿ: ಕೊನೆಯೆರಡು ಕಥೆ ಯಂಡಮೂರಿ ಪುಸ್ತಕದಿಂದ ಆರಿಸಿದ್ದು. ಬಹುಶಃ ಅದು ಇಂಟರ್ನೆಟ್ ಮೂಲದ್ದಿರಬಹುದು.

ಮನುಷ್ಯನ ಮನಸ್ಸು ತುಂಬಾ ವಿಚಿತ್ರವಾದ್ದು ಮತ್ತು ಜಟಿಲವಾದ್ದು ಕೂಡ. ಒಬ್ಬ ವ್ಯಕ್ತಿ ಒಂದು ಸನ್ನಿವೇಶಕ್ಕೆ ಒಂದು ರೀತಿಯಾಗಿ ವರ್ತಿಸಿದರೆ, ಮುಂದೊಮ್ಮೆ ಅಂತದ್ದೇ ಪರಿಸ್ಥಿತಿಗೆ ಬೇರೆಯೇ ಆದ ರೀತಿ ಪ್ರತಿಕ್ರಿಯಿಸಬಹುದು. ಅದಕ್ಕೆ ಆತನ ಮಾನಸಿಕ ಲಹರಿ, ಆತನಿಗೆ ಅರಿವಿಲ್ಲದೆಯೇ ಮಾಡುತ್ತಿರಬಹುದಾದ ಮಾನಸಿಕ ನಡೆಗಳು (Moves), ಎದುರಿನ ವ್ಯಕ್ತಿಯ ನಡೆವಳಿಕೆ, ಆ ವ್ಯಕ್ತಿ ’ಎಷ್ಟು ತನ್ನವ’ (ತನಗೆ ಬೇಕಾದವ) ಅನ್ನುವ ಆಲೋಚನೆಗಳಲ್ಲದೆ, ಹೊರಗಿನ ವಾತಾವರಣ ತನ್ನಲ್ಲಿ ಮೂಡಿಸಬಹುದಾದ ಪರಿಣಾಮಗಳು, ಐದು ನಿಮಿಷ ಹಿಂದೆ ಆಗಿದ್ದ ಯಾವುದೋ ಘಟನೆ ತನ್ನಲ್ಲಿ ಉಂಟುಮಾಡಿದ ತಲ್ಲಣಗಳೂ ಆತನ ಪ್ರತಿಕ್ರಿಯೆಗೆ ಕಾರಣವಿರಬಹುದು.  ಅಥವಾ ತನ್ನ ಹೊಟ್ಟೆಯ ಹಸಿವೂ, ಆ ಸ್ಥಳದ ಪರಿಮಳಗಳೂ ಕೂಡ ಬೇರೆ ರೀತಿಯಾದ ಪ್ರತಿಕ್ರಿಯೆ ನೀಡಲು ಕಾರಣವಿದ್ದಿರಬಹುದು. ಇವೆಲ್ಲದ್ದಕ್ಕೆ ನಿಲುಕದ ಬೇರೆಯಾದ ಕಾರಣಗಳೂ ಇದ್ದೀತು.

400px-Millais_Boyhood_of_Raleigh

ಈ ಅಂಶಗಳು ಕತೆ ಹೇಳಲು ಎಷ್ಟು ತೊಡಕಾಗಬಹುದೋ ಅಷ್ಟೇ ಒಳಿತೂ ನೀಡುತ್ತದೆ. ತೊಡಕು ಹೇಗಾದೀತು ಅಂದರೆ, ಒಬ್ಬ ವ್ಯಕ್ತಿ ಹೀಗೇ ವರ್ತಿಸುತ್ತಾನೆ ಅನ್ನುವ ಸಿದ್ಧಾಂತವನ್ನೇ ಅಲ್ಲಗಳೆಯುವುದರಿಂದ. ಒಳಿತು ಹೇಗೆಂದರೆ ಕತೆಗೆ ತಿರುವುಗಳನ್ನು ಸುಲಭವಾಗಿ ನೀಡಬಹುದಾದ್ದರಿಂದ.

ಒಂದು ಕತೆ ಹೇಳುವಾಗ ಪಾತ್ರಪೋಷಣೆಯ ಸಲುವಾಗಿ ಆತ ಎಂತಹ ವ್ಯಕ್ತಿ ಅನ್ನುವುದು ವೀ(ಪ್ರೇ)ಕ್ಷಕನಿಗೆ ವಿವರಿಸಲೋಸುಗ ಒಂದಿಷ್ಟು ದೃಶ್ಯಗಳನ್ನು ಕಟ್ಟಿಕೊಡುವುದು ಮೊದಲಿಂದಲೂ ನಡೆದು ಬಂದ ವಿಧಾನ. ಕತೆ ಹೇಳುತ್ತಾ ಒಂದು ವೇಳೆ ಆತ ತನ್ನ ಪಾತ್ರಪೋಷಣೆಗೆ ಅತೀತವಾಗಿ ಬೇರೊಂದು ವಿಧಾನವಾಗಿ ವರ್ತಿಸಬೇಕಾಗಿ ಬಂದರೆ ಅದಕ್ಕೆ ಕಾರಣಗಳನ್ನು ಕೊಡುವುದು ನಡೆಯುತ್ತದೆ. ಕಾರಣಗಳನ್ನು ನೀಡದೇ ಹೋದಲ್ಲಿ ಪ್ರೇಕ್ಷಕ ಕತೆಯನ್ನು ಒಪ್ಪದೇ ಹೋಗಬಹುದಾದ ಸಾಧ್ಯತೆಯಿದೆ.

ಉದಾಹರಣೆಗೆ ಕನ್ನಡದ ’ಸ್ಪರ್ಶ’ ಚಿತ್ರ. ಕಥಾನಾಯಕಿಯದ್ದು ಒಂದು ಥಿಯರಿ. ತಪ್ಪು ಮಾಡಿದವರು ಅವರೇ ಆ ತಪ್ಪನ್ನು ಸರಿ ಮಾಡಬೇಕು ಅಂತ. ಬೇರೆ ಎಲ್ಲಾ ಸನ್ನಿವೇಶದಲ್ಲಿ ಸಾಮಾನ್ಯವಾಗಿ ನಾಯಕಿಯಂತೆಯೇ ಇರುವ ಹುಡುಗಿ ಈ ವಿಷಯಕ್ಕೆ ಬಂದರೆ ತುಂಬಾ ಕಟ್ಟುನಿಟ್ಟು. ತಾನೇ ತಪ್ಪು ಮಾಡಿದಾಗಲೂ ಬೇರೆ ಯಾರೂ ಸಹಾಯ ಮಾಡಬಾರದೆಂದು ತಾಕೀತು ಮಾಡಿ ತಾನೇ ಸರಿಮಾಡುವುದು ನಡೆಯುತ್ತದೆ. ಹೀಗಿರುವಾಗ ಕಥಾನಾಯಕ ಅಕಸ್ಮಾತ್ ಆಗಿ ಒಮ್ಮೆ ಅರಿವಿಲ್ಲದೇ ಮತ್ತೊಬ್ಬ ಹುಡುಗಿಯ ಆಕ್ಸಿಡೆಂಟಿಗೆ, ಅವಳ ಕಾಲು ಕಳೆದುಕೊಳ್ಳಲು ಕಾರಣವಾಗ್ತಾನೆ. ಕಥಾನಾಯಕಿ ಇದನ್ನು ಮನ್ನಿಸುವುದಿಲ್ಲ ಎಂದುಕೊಂಡು ತನ್ನ ಪ್ರೀತಿಯನು ಕಡೆಗಣಿಸಿ ಕಾಲು ಕಳೆದುಕೊಂಡ ಹುಡುಗಿಯನು ಮದುವೆಯಾಗಲು ತಯಾರಿ ನಡೆಸುತ್ತಾನೆ.

sparsha

ಇಲ್ಲಿ ನಿರ್ದೇಶಕ ಆಕೆಯ ಥಿಯರಿಯ ಕಟ್ಟುನಿಟ್ಟನ್ನು ಪ್ರೇಕ್ಷಕನಿಗೆ ಅರಿವು ಮಾಡಲು ಬಹಳಷ್ಟು ಸನ್ನಿವೇಶಗಳನ್ನು ಹೆಣೆದಿದ್ದಾರೆ. ಒಂದು ವೇಳೆ ಆ ಸನ್ನಿವೇಶಗಳು ಪರಿಣಾಮಕಾರಿ ಆಗದೇ ಹೋಗಿದ್ದರೆ ನಂತರ ಕಥಾನಾಯಕನ ತ್ಯಾಗದ ನಿರ್ಧಾರ ಪೇಲವವಾಗಬಹುದಾದ ಸಾಧ್ಯತೆ ಇತ್ತು.

ಹಾಗೆಯೇ ಅಪಘಾತ ಆದ ಹುಡುಗಿಯ ಪಾತ್ರದಲ್ಲಿ ಸುಧಾರಾಣಿ ಅಭಿನಯಿಸಿದ್ದರು. ಆ ಪಾತ್ರ ಇಂತದ್ದೇ ವ್ಯಕ್ತಿತ್ವ, ಈ ರೀತಿಯಾಗಿಯೇ ನಡೆದುಕೊಳ್ಳುತ್ತದೆ ಅನ್ನುವುದಕ್ಕೆ ಪ್ರಾಶಸ್ತ್ಯ ನೀಡಿರಲಿಲ್ಲ. ನಿಜ ವಿಷಯ ತಿಳಿದಾಗ ಆಕೆಯ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದು ತಿಳಿಯದ ಪ್ರೇಕ್ಷಕ ಅದನ್ನು ಕುತೂಹಲದಿಂದ ಕಾಯ್ತಾನೆ.

ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಕಥನದ ಎರಡೂ ಮಜಲುಗಳನ್ನು ಚೆನ್ನಾಗಿ ಬಳಸಿಕೊಂಡಿದ್ದರು.

*****

ಹೀಗೆ ನಿಜದ ಬದುಕಲ್ಲಿ ಮನುಷ್ಯ ವಿಧವಿಧವಾದ ವಿಧಾನದಲ್ಲಿ ವರ್ತಿಸುತ್ತಾ ಹೋಗುತ್ತಾನೆ. ಕೆಲವೊಂದು ಕಾರಣಸಹಿತ. ಇನ್ನೂ ಕೆಲವು ಕಾರಣರಹಿತ. ಆದರೆ ಕಥೆಯಲ್ಲಿ ಇಡೀ ಬದುಕನ್ನು ತೋರಿಸಲಿಕ್ಕಾಗದಲ್ಲ. ಅದಕ್ಕೆ ಕತೆಗೆ ಅಗತ್ಯವಾದ ಅಂಶವನ್ನಷ್ಟೇ ತೋರಿಸಿ ಕತೆ ಹೇಳುವುದು ಸೂಕ್ತ.

ಕಥೆ ಹೇಳುವವರ ಮುಖ್ಯಲಕ್ಷಣವೆಂದರೆ ಒಂದು ಸನ್ನಿವೇಶವನ್ನು ಕಥೆಯ ಓಘಕ್ಕೆ ತಕ್ಕಂತೆ ಮತ್ತು ಪಾತ್ರಧಾರಿಗಳ ನಡೆವಳಿಕೆಗಳು ಓದುಗನ(ಕೇಳುಗನ) ತರ್ಕಕ್ಕೆ ಸರಿಯಾಗಿ ಸಿಲುಕಿಕೊಳ್ಳುವಂತೆ ವಿವರಿಸುವುದೇ ಆಗಿದೆ. ಪಾತ್ರಧಾರಿಯ ವರ್ತನೆಗಳಿಗೆ, ಒಂದು ವಿಧವಾದ ಮಾತುಗಾರಿಕೆಗೆ ಅಥವ ಸನ್ನಿವೇಷಕ್ಕೆ ಪಾತ್ರಧಾರಿ ನೀಡುವ ಪ್ರತಿಕ್ರಿಯೆಗಳಿಗೆ, ಓದುಗನಿಗೆ ಮೂಡಿದ ಪ್ರಶ್ನೆಗಳನ್ನು ಸಮಯಕ್ಕೆ ತಕ್ಕಂತೆ(ಕೂಡಲೇ ಅಥವ ಕತೆಯ ಕೊನೆಯ ಒಳಗೆ) ನಿವಾರಿಸುವುದು ಕೂಡ ಅವನ ಕರ್ತವ್ಯಗಳಲ್ಲಿ ಒಂದು. ಅದೆಷ್ಟೇ ಗೊಂದಲಗಳು ಸಿಕ್ಕುಗಳು ಕತೆಯಲ್ಲಿದ್ದಾಗ್ಯೂ ಒಬ್ಬ ಬರಹಗಾರನ ಕಥೆಗಾರಿಕೆ ಉನ್ನತಮಟ್ಟದಲ್ಲಿದ್ದಾಗ ಓದುಗನಲ್ಲಿ ಪ್ರಶ್ನೆ ಮೂಡಿಸದೇ ಇರುವ ಹಾಗೆ ವಿವರಿಸುವುದು ಸಾಧ್ಯ. ಅಂಥ ವಿವರಣೆಯೂ ಒಂದು ಕಲೆ. ಮೇಲ್ನೋಟಕ್ಕೆ ಓದುಗನಿಗೆ ಓದುವ ಓಘದಲ್ಲಿ ಪ್ರಶ್ನೆ ಮೂಡದೇ ಇದ್ದರೆ ಅದು ಕಥೆಗಾರನ ವಿಜಯವೇ. ಇನ್ಯಾರೋ ಇನ್ಯಾವಾಗಲೋ ಅದ್ಯಾಕೆ ಹೀಗಾಗಬೇಕಿತ್ತು ಹೀಗಿದ್ದಿದ್ದರೆ ಆಗುತ್ತಿತ್ತಲ್ಲವಾ ಅಂತ ಕೇಳಿದಾಗ ಅರೆ! ಹೌದಲ್ಲವೇ ನಾನ್ಯಾಕೆ ಆಲೋಚಿಸಿರಲಿಲ್ಲ ಅಂದುಕೊಳ್ಳುವಾಗ, ಓದುಗನಿಗೆ ತರ್ಕಕ್ಕೆ ನೀಡದ ಕತೆಗಾರನ ಮೇಲೆ ಎಳ್ಳಷ್ಟೂ ಮುನಿಸು ಬರದೇ, ನನಗೇ ಬರದಿದ್ದ ಆಲೋಚನೆ ಆ ಪಾತ್ರಧಾರಿಗೆ ಹೇಗೆ ಬಂದೀತು ಓದುಗನಿಗನ್ನಿಸಿ ಕತೆಗಾರ ಬಚಾವ್ ಆಗುವನು.

storytelling (1)

ಇದನ್ನು ಒಂದು ಉದಾಹರಣೆ ಮೂಲಕ ವಿಶದೀಕರಿಸುತ್ತೇನೆ. ದಿ ಕೈಟ್ ರನ್ನರ್ ಅನ್ನುವ ಆಂಗ್ಲ ಚಿತ್ರದ ಸನ್ನಿವೇಷ ಇದು. ಇಬ್ಬರು ಹುಡುಗರು ಮಾತಾಡಿಕೊಳ್ಳುತ್ತಿರುತ್ತಾರೆ. ಒಬ್ಬ ಅದರಲ್ಲಿ ಬರಹಗಾರ. ಅವನ ಒಂದು ಕತೆಗೆ ಆಗಲೇ ಬಹುಮಾನ ಬಂದಿರುತ್ತದೆ. ಇನ್ನೊಬ್ಬ ಹುಡುಗ ಕೇಳುತ್ತಾನೆ, “ನಿನಗೆ ಬಹುಮಾನ ಬಂದ ಕತೆಯನ್ನು ನನಗೆ ಹೇಳುತ್ತೀಯಾ” ಎಂದು. ಆ ಕತೆಗಾರ ಹೇಳುವ ಕತೆ ಹೀಗಿದೆ.

ಒಬ್ಬನಿಗೆ ಒಂದು ವರ ಸಿಕ್ಕಿರುತ್ತದೆ. ಅದರ ಪ್ರಕಾರ ಅವನಿಗೆ ಎಷ್ಟು ಕಣ್ಣೀರು ಉಕ್ಕುತ್ತದೋ ಅಷ್ಟು ಚಿನ್ನದ ವರಹ ಸಿಗುತ್ತದೆ. ಸುಮ್ಮ ಸುಮ್ಮನೆ ದುಃಖ ಆವಾಹಿಸಿಕೊಂಡು ವರಹಗಳನ್ನು ಗಿಟ್ಟಿಸಿಕೊಳ್ಳುತ್ತಿರುತ್ತಾನೆ. ಯಾರದೋ ದುಃಖವನ್ನು ತನ್ನದಾಗಿಸಿಕೊಳುವ ಯತ್ನ ಮಾಡುತ್ತಾನೆ. ಮೊದಮೊದಲು ಚೆನ್ನಾಗೇ ಅನಿಸಿದರೂ ಸ್ವಲ್ಪ ದಿನ ಕಳೆದರೆ ಏನು ಮಾಡಿದರೂ ಅವನಿಗೆ ಅಳುವೇ ಬರುವುದಿಲ್ಲ. ಎಷ್ಟು ದುಃಖ ಹುಟ್ಟಿಸಿಕೊಂಡರೂ ಕಣ್ಣು ಬತ್ತಿದ ಕೆರೆ. ವರಹಕ್ಕಾಗಿ ಎಷ್ಟು ಅತ್ತಿರುತ್ತಾನೆಂದರೆ ಎಂಥ ದುಃಖಕ್ಕೂ ಅಳುವೇ ಬರದೆಂಬಂತಹ ಸ್ಥಿತಿ.

ಕತೆಯ ಕೊನೆಯಲ್ಲಿ ಅವನು ತನ್ನ ಪ್ರೀತಿಯ ಹೆಂಡತಿಯನ್ನೇ ವರಹಗಳ ಆಸೆಗೆ ಕೊಲ್ಲುತ್ತಾನೆ!

3075462-md

ಚೆನ್ನಾಗಿದೆ ಅನ್ನಿಸುತ್ತದಲ್ಲವ ಕತೆ. ಹಾಗೆ ಅನ್ನಿಸಿದರೆ ಅದುವೇ ಕತೆಗಾರನ ಜಯ. ಲೇಖನದ ಕೊನೆಯಲ್ಲಿ ಈ ಉದಾಹರಣೆ ಪೂರ್ಣಗೊಳಿಸುತ್ತೇನೆ.

ಇನ್ನೊಂದು ಉದಾಹರಣೆ ಕನ್ನಡದ ಓಂ ಚಿತ್ರ. ಈ ಸಿನೆಮಾವನ್ನು ಈಗ ಯಾವ ಚಿತ್ರಮಂದಿರದಲ್ಲಿ ಹಾಕಿದರೂ ಎಲ್ಲಾ ಹೊಸ ಚಿತ್ರಗಳಿಗೆ ಪಪೋಟಿ ನೀಡಿ ಭರ್ಜರಿಯಾಗಿ ಓಡುತ್ತದೆ. ಒಮ್ಮೆ ನೋಡಿದವರೂ ಮತ್ತೊಮ್ಮೆ ನೋಡಲು ಹಿಂಜರಿಯುವುದಿಲ್ಲ. ಅಂತಹ ಚಿತ್ರ ಓಂ. ಅದರಲ್ಲಿ ನಾಯಕನ ಚೇಲಾಗಳು, ನಾಯಕನಿಗೆ ಅಣ್ಣಾ ಅಂದರೆ ನಾಯಕಿಗೆ ಅತ್ತಿಗೆ ಅನ್ನಬೇಕಲ್ವೇ? ಹಾಗಾಗದು, ಚೇಲಾಗಳು ನಾಯಕಿಯನ್ನು ಅಕ್ಕಾ ಅನ್ನುತ್ತಾರೆ. ನಾಯಕ -ನಾಯಕಿಯನ್ನು ಸಹೋದರ ಸಹೋದರಿಯಾಗಿಸುತ್ತಾರೆ!

ಈಗ ಆ ದಿ ಕೈಟ್ ರನ್ನರ್ ಚಿತ್ರದ ಸನ್ನಿವೇಶದ ಉದಾಹರಣೆ ಮುಂದುವರಿಸುವೆ. ಆ ಬಹುಮಾನ ಪಡೆದಂಥ ಕತೆ ಕೇಳುತ್ತಿದ್ದ ಮತ್ತೊಬ್ಬ ಹುಡುಗ ಆ ಕತೆಗಾರನನ್ನು ಕೇಳುತ್ತಾನೆ, “ಅವನು ಹೆಂಡತಿಯನ್ನೇ ಯಾಕೆ ಕೊಲ್ಲಬೇಕಿತ್ತು, ಅಡುಗೆಮನೆಯಲಿ ಈರುಳ್ಳಿ ಕತ್ತರಿಸಿದ್ದರೆ ಆಗುತ್ತಿರಲಿಲ್ಲವಾ?”

*****

(ಚಿತ್ರಕೃಪೆ : ಕಥೆ ಹೇಳುತ್ತಿರುವ ಮುದುಕಿ ಮತ್ತು ಒಂದು ಕಥಾಕ್ಲಾಸು)