Archive for the ‘ಕವಿತೆ’ Category

ಜಗತ್ತು ನನ್ನ ಕವಿಯೆಂದರೆ
ಭಯವಾಗುತ್ತದೆ..

ಇನ್ನೂ ಪದಗಳಿಗೆ ನಿನ್ನ ಬೆವರ ಘಮ ಅಂಟಿಕೊಂಡಿಲ್ಲ
ಭಾವಗಳಿಗೆ ಇನ್ನೂ ನಿನ್ನ ಕಂಗಳ ಅಮಲು ತಾಕಿಲ್ಲ
ಸಿಕ್ಕಿಲ್ಲ, ನಿನ್ನ ಮುಂಗುರುಳ ಪ್ರಾಸ
ಸಾಲುಗಳ ತುದಿಗಳಿಗೆ
ಕನಸುಗಳನ್ನು ಹುಟ್ಟಿಸುವ ನಿನ್ನ ನಡಿಗೆಯ ತಾಕತ್ತು ಬಂದಿಲ್ಲ ಇನ್ನೂ !

3004663277_d87ffedbb0.jpg

ಪ್ರೀತಿಗೆ ಕಳಂಕ ತಂದೀತೆಂಬ ಭಯವಿದ್ದರೆ
ನೀನು ಮುದ್ದು ಮಾಡುವುದು ಬೇಡ
ಅಪ್ಪಿಕೋ ಒಮ್ಮೆ ನಿನ್ನ ಕಂಗಳಲಿ
ನಿನ್ನ ಬೆವರ ನದಿ ಹರಿಯಲಿ ನನ್ನ ನರನಾಡಿಯಲಿ
ಕರಗೇ ಹೋಗಲಿ ಕನಸುಗಳು ನಿನ್ನ ತಬ್ಬುಗೆಯಲಿ

ಒಂದು ಕ್ಷಣ ಇಲ್ಲವಾಗೇ ಹೋಗುತ್ತೇನೆ ನಾನು ನಿನ್ನಲಿ..

ಬೇಕಿದ್ದರೆ ಆಗ ಒಪ್ಪಿಕೊಳ್ಳುತ್ತೇವೆ
ನನ್ನನು ಕವಿಯೆಂದರೆ!

 

ನಿಂತಿದ್ದೆ ಹಾಗೇ ನಾನು ಖಾಲಿಯಾಗಿ
ಅರ್ಥ ತೊರೆದ ಪದದಂತೆ
ನೆರಳು ತೊರೆದ ದೇಹದಂತೆ.
ಒಂದು ಕ್ಷಣದ ಹಿಂದೆ ಇರದಿದ್ದುದು
ರಪ್ಪಂಥ ಬಡಿದಿತ್ತು ವಿರಹ
ಬಿರುಗಾಳಿಯಂತೆ.

mussanje-maathu-10

ಒಮ್ಮೆ ನೀನು ತಿರುಗಿ ನನ್ನತ್ತ ನೋಡಿದ್ದರೆ ಕಾಣಸಿಗುತ್ತಿತ್ತು
ನನ್ನ ಒಡೆದ ಲೋಕ
ತುಂಬಿದ ಕಂಗಳು ಮತ್ತು ಅದರಲ್ಲಿ ಮುರಿದು ಬಿದ್ದ ಆಗಸ.
ಬದುಕು ತರಗಲೆಯೂ ಅಲುಗದ
ಸ್ತಬ್ಧ ಚಿತ್ರ.
ಮನಸ್ಸು ನಿಷ್ಫಲ ಮರ
ಕನಸಿನ ಹೂವರಳದ ಕೊಂಬೆ

ಯಾವುದೋ ಸಿಟ್ಟಿನ
ಋಷಿಯೊಬ್ಬ ಇವತ್ತಿನ ರಾತ್ರಿಗೆ ಎಂದೆಂದೂ
ಮುಗಿಯಬಾರದೆಂದು ನೀಡಿದ ಶಾಪವಿದೆ
ಬೆಳಕಿನ ತುದಿ ಸಿಗದ ಟನೆಲಿನ ಪಯಣವಿದು
ಕನಸು ಹುಟ್ಟದ ಬಂಜೆ ನಿದಿರೆ.

ವಿರಹವೆಂಬುದು ಸಾಯಿಸದ ವಿಷ
ಬದುಕಿಸದ ಅಮೃತ
ಕೊಲ್ಲದ ನೇಣು
ವಾಸಿ ಮಾಡದ ಮದ್ದು.

the-breakup_0

ಉಸಿರಾಡುವುದನ್ನು ಬದುಕುವುದು
ಅನ್ನಬಹುದಾದರೆ
ಬದುಕಿದ್ದೇನೆ ಇನ್ನೂ!

 

 

ಮಕರಂದವ ಬಿಟ್ಟು ಅಂದವನ್ನೇ ಸವಿಯುತ್ತಾ ನಿಂತುಬಿಟ್ಟಿವೆ ದುಂಬಿಯಿಂದು
ನೀನು
ದಾರಿಹೋಕನಿಗೆ ಹಳೆಯ ನೆನಪೊಂದನ್ನು ಮೀಟಿಸಿದ ಹೂವು

ಮಧುರ ನಿದಿರೆಯೊಂದನು ದಾಟಿ ಬಂದ ಕನಸು
ನೀನು,
ದಯವಿಟ್ಟು ಚಿವುಟದಿರಿ ಪ್ಲೀಸ್, ಮುಂದುವರಿಯಲಿ ಈ ಕನಸು ಬದುಕಿನುದ್ದಕ್ಕೂ

Image result for invicible strings between 2 ppl

ನನ್ನನ್ನು ನಿನ್ನತ್ತ ಸೆಳೆಯುತ್ತಿರುವ ಯಾವುದೋ ಒಂದು ಮಾಯೆಯಿದೆ
ನಂಬಲಾರರೇನೋ ಯಾರೂ
ಜೊತೆಗೆ ನೀನೂ,
ನಿನ್ನ ನೋಟಕ್ಕೆ ನನ್ನಾತ್ಮದ
ಜಂಘಾಬಲವನ್ನೇ ಅಲ್ಲಾಡಿಸುವ
ಶಕ್ತಿಯಿದೆಯೆಂದರೆ.

ಪ್ರೀತಿ ಸ್ನೇಹವೆಂದೆಲ್ಲಾ ಹೆಸರುಗಳ ಎಂಜಲು ಬೇಡ ಈ ಸಂಬಂಧಕ್ಕೆ,
ನಿನ್ನೊಂದಿಗಿರುವ ಕೆಲ ಕ್ಷಣಗಳ ಕಡ ಸಾಕು
ಮನದ ಜೋಳಿಗೆ ತುಂಬೀತು, ಸಾಕಷ್ಟು ಉಳಿದ ಬದುಕಿಗೆ.

ಬೇಕಿಲ್ಲ ನಿನ್ನ ಹರುಷದ ಸಮಯ,
ದುಃಖವಾದೊಡೆ ನನ್ನ ನೆನಪಾದರೆ ಸಾಕು, ಅದುವೆ ನನಗೆ ಹೆಮ್ಮೆ

~ ೧ ~
ಊಹೆಗಳನ್ನು ಅನುಭವವನ್ನಾಗಿ
ಮಾಡಿಕೊಳ್ಳಬಹುದಾಗಿದ್ದಿದ್ದರೆ
ಕಳೆಯಲಾಗದ ರಾತ್ರಿಗಳಿಗೋಸ್ಕರವೇ
ಒಂದಿಷ್ಟು ನೆನಪುಗಳನ್ನು
ಸೃಷ್ಟಿಸಿಕೊಳ್ಳಬಹುದಿತ್ತು.
ಇಂಚಿಂಚಾಗಿ ಸಾಯುವುದನು
ತಪ್ಪಿಸಿಕೊಳ್ಳಬಹುದಿತ್ತು.
~೨~
ಕವಿಯೇನಲ್ಲ ನಾನು, ಬರೆಸುವುದು
ನನ್ನ ಬೆರಳು
ಹಿಡಿದು ಹೃದಯ
ಭಗ್ನಗೊಳಿಸಿದವಳ ನೆರಳು
~೩~
ಗುಡುಗಿನ ಮೂಲಕ ಪಲ್ಲವಿ
ಚರಣಕೆ ಮಿಂಚೇ ಕಾರಣ
ಒಟ್ಟಾರೆ, ನೆಲಕೆ ಚಿಗುರುವ ಕನಸಿನ ಹಾಡ
ಕಲಿಸಿದ್ದು ಆಗಷ್ಟೇ ಹುಟ್ಟಿದ ಮೋಡ
~೪~
ಎತ್ತಲಿಂದೆತ್ತ ಹಾರೋ
ಚಿಟ್ಟೆ ಚಿತ್ತ ಚಂಚಲ
ಅನಿಸಿದರೂ ಒಳಗೊಳಗೆ
ಅದಕೆ ಸದಾ ಪರಿಮಳದ್ದೇ ಧ್ಯಾನ
~೫~
ರಾತ್ರಿಯ ಜೋಪಡಿಯಲಿ
ನಿದಿರೆಯ ಬೆಳಕಿನಲಿ
ಒಂದಿಷ್ಟು ಕನಸುಗಳನ್ನು ಹುಡು-
ಕಾಡುವ ನನ್ನ ಪ್ರಯತ್ನ
ಇನ್ನೂ ಜಾರಿಯಲ್ಲಿದೆ
368785-bigthumbnail
~೬~
ಹೂ ಕಿತ್ತ ಹುಡುಗಿಯ
ಕೈ ಬೆರಳಿನ ಘಮವನ್ನೂ
ಹೂವೆಂದೇ ಭ್ರಮಿಸಿ
ಚಿಟ್ಟೆ ರಮಿಸುತಿದೆ
~೭~
ಒಂದಿಷ್ಟು ನೆನಪುಗಳನು
ಎದೆಗೂಡಿನಲಿ
ಜೋಪಾನವಾಗಿರಿಸಿಕೊಂಡಿರುವೆ
ಎಂದಿಗಾದರೂ ಒಮ್ಮೆ ಅವು
ನನ್ನ ಕತ್ತಲಿನ ರಾತ್ರಿಗಳಿಗೆ
ಕನಸಾಗಿ ಬಂದು
ಬೆಳಕಾಗಿಸಬಹುದೆಂಬ ಆಸೆಯಿಂದ.
~೮~
ಇಂದು ತನ್ನ ಸೊಗಸಾದ ಕನಸೊಂದನ್ನು
ವಿವರಿಸಬೇಕೆಂಬ ಆಸೆಯಲ್ಲಿದ್ದ ಹೂವಿಗೆ
ಮಕರಂದ ಹೀರುವ ಧ್ಯಾನದಲ್ಲೇ ಇದ್ದ
ಭ್ರಮರವ ಕಂಡು
ಭ್ರಮನಿರಸನವಾದಂತಿದೆ
~೯~
ಸದಾ ನೀ ಹೊರಟು ಹೋಗುವ
ಮುನ್ನ ನೀಡುವ ಮುತ್ತು
ಮತ್ತೆ ನೀ ಸಿಗುವವರೆಗೆ
ನನ್ನೊಳಗನ್ನು ಸದಾ
ಜೀವಂತವಾಗಿರಿಸುವ ದೀಪ
images
~೧೦~
ರಸ್ತೆಯಂಚಲಿ ದಿನಾ ಸಿಗುವಳು
ಬುಟ್ಟಿಯ ತುಂಬಾ ನಕ್ಷತ್ರ ಮಾರುವ ಹುಡುಗಿ
ಈ ಬಾರಿ ಅವಳ ಬಳಿ
ನಕ್ಷತ್ರಗಳದೇ ಮಾಲೆ ಕೊಂಡುಕೊಳ್ಳಬೇಕು
ಊರ ಸೂರ್ಯ ಚಂದ್ರರಿಗೆಲ್ಲಾ ಇನ್ನೇನು
ಗ್ರಹಣ ಬಡಿವ ಸಮಯ
~೧೧~
ನಿನ್ನ ಈ ಮೌನ ಮೊನಚು
ಹೇಳಬೇಕಾದ್ದನ್ನು ಹೇಳುವುದರ ಜೊತೆಗೆ
ಹೇಳಲಾಗದ್ದನ್ನೂ ಸ್ಪಷ್ಟವಾಗಿ ಅರುಹುತ್ತದೆ
~೧೨~
ಕವಿತೆ ಓದಲು ಪುಟ ತೆರೆದೊಡೆ
ಪದ ಹಾರುವ ಹಕ್ಕಿ
ಮನದ ಬನದ ತುಂಬಾ
ಹಕ್ಕಿ ಬಡಿದ ರೆಕ್ಕೆ ಹೆಜ್ಜೆ.
~೧೩~
ತೇಲುತಿರುವ ತೆಪ್ಪಕ್ಕೆ
ದಡದ ಗುರಿ ತೋರುತಿಹುದು
ಚಂದ್ರನ ಲಾಂದ್ರ.

ಮಳೆ..!

Posted: ಆಗಷ್ಟ್ 8, 2012 in ಕವಿತೆ, ಕವಿತೆ ತರಹ

ಮುಗಿಲೊಡೆವ ಸದ್ದು
ಕೆರೆಯಲ್ಲಿಂದು ಹನಿಯ
ರಂಗಪ್ರವೇಶ
ಭರತನಾಟ್ಯಾಭ್ಯಾಸ
ಕೆಸುವಿನೆಯಲ್ಲಿ ಒಂಚೂರು
ಜಾರುಬಂಡಿಯಾಟ
ಹೆಸರಿಲ್ಲದ್ಯಾವುದೋ
ಹೂವಿಗೆ ಹೊಳೆವ
ಮೂಗುತಿಯಾಗುವ
ಸಂಭವ.

rain drops 03

ಭುವಿಯಲಿ ಜಾತ್ರೆ
ಮುಗಿದನಂತರ
ಸಾಗರದೆಡೆಗಿನ
ರಮ್ಯಯಾತ್ರೆಗೆ
ಅವಸರವಾದರೂ
ಮುದ್ದು ಕೈಯ ಕಾಗದದ ದೋಣಿಗೆ
ವೈಯ್ಯಾರ ಒದಗಿಸುವ ಸಡಗರ

ಕೂತು ನೋಡುವ ಜೀವದ
ಕಣ್ಣ ಮೂಲಕ
ಹೃದಯದೊಳಗೆ
ಕವಿತೆಯ ಬೀಜ ಮೊಳಕೆ.

ಪುಳಕ
ನೆನಪು ಇರುವ ತನಕ
ಮನದೊಳಗಿನ ಕನಕ.

ಇಂದಿಗೂ ದೊಡ್ಡ ಶಹರುಗಳಲ್ಲಿ

ಬದುಕಿನ ಸಂಜೆಹೊತ್ತಲ್ಲಿರುವವರ

ನಿಟ್ಟುಸಿರ ಭಾರದಲ್ಲಿರುವುದು

ಮಂತ್ರಾಲಯ

ಗುರುರಾಯರ ಕರೆ

ಮತ್ತು

ಗುರುವಾಯನಕೆರೆ

*****

Mute Swan at Sunset

ಗುರುವಾಯನಕೆರೆಯಲಿ

ಮಳೆಹೊತ್ತು ಮೂಡುವ

ಅಸಂಖ್ಯ ಅಲೆಗಳಲ್ಲಿ

ದಡ ಸೇರುವ

ಮುಖ್ಯ ಹೆಸರು

ಆಧ್ಯಾತ್ಮ

*****

ಗುರುವಾಯನಕೆರೆಯಲಿ

ಮಿಂದೆದ್ದು ಬಂದಾಗ

ಎದೆಯೊಳಗೇ ಉಳಿದ

ಹನಿಯೊಂದರ ನೆನೆದು

ಗೀಚಿದ ಬರಹವನ್ನು ಕವಿತೆಯೆಂದು

ಸಾರಿದರು, ಖರೆ

ಕ್ರೆಡಿಟ್ಟು ಕೆರೆಗೇ ಸೇರಬೇಕು

ಯಾವುದಕ್ಕೂ ಖುದ್ದು

ಇನ್ನೊಮ್ಮೆ ಹೋದಾಗ

ಬೊಗಸೆ ನೀರು ಕದ್ದು ಬರಬೇಕು.

*****

Ziedi ūdenī (Flowers in the water, Latvia)

ಮರೆತೇ ಅಂದುಕೊಂಡು

ಖುಷಿಯಿಂದಿದ್ದ ನನ್ನನ್ನು

ಕೆರೆಯಲ್ಲಿ ಬಿದ್ದ ಹನಿಮೂಡಿಸಿದ

ಅಲೆಯಂತೆ ಅಲುಗಾಡಿಸಿದ್ದು

ಗುರುವಾಯನಕೆರೆ

ಕವಿತೆಗಳು

ಇನ್ನಂತೂ ಖಚಿತ

ಕೆರೆಯಲ್ಲೆ ಮುದ್ದಾಗಿ

ಕೂತಿದ್ದ ಚಂದಿರ

ನಂತಹ ಬದುಕು

ಪ್ರೀತಿಯ ಅಲೆಗೆ ಅಪ್ಪಳಿಸಿ

ಚೂರಾಗಲಿವೆ

*****

ಪಟ್ಟಣಗಳ ಎಡೆಯಲ್ಲಿ

ಬದುಕನ್ನು

ತಲ್ಲಣಗಳ

ಅಲ್ಲೋಲಕಲ್ಲೋಲ

ಸಾಗರವಾಗಿಸುವ

ಬದಲು

ಗುರುವಾಯನಕೆರೆಯ

ಬುದ್ಧ ಶಾಂತ

ಹನಿಯಾಗುವುದೇ ಲೇಸು

****

 

ಸೂಚನೆ: ಇದು ಜೋಗಿ ಸರ್ ಹಾಕಿಕೊಟ್ಟ ಹಾದಿಯಲ್ಲಿ ನಾನೂ ಒಂದು ಧೂಳಕಣವಾಗುವ ಪ್ರಯತ್ನ.

ಚಿತ್ರಗಳು : ಮೈಕ್ರೋಸಾಫ್ಟ್ ಡೆಸ್ಕ್ ಟಾಪ್ ಹಿನ್ನೆಲೆಚಿತ್ರಗಳ ಕೃಪೆ

ಪರವಾನಗಿ!

Posted: ಜುಲೈ 5, 2012 in ಕವಿತೆ

ನಮ್ಮ ಬೆಚ್ಚಗಿನ ಸ್ನಾನಕ್ಕೆಂದು

ಒಲೆ ಎದುರು ಹೊಳೆವ ಕಂಗಳಿಂದ

ಅಗರಬತ್ತಿ ಪ್ಯಾಕೆಟ್ಟು ಹಿಡಿದು ಊದುತ್ತಿರುವ ಅವ್ವನ

ಪರವಾನಗಿ ಇನ್ನೂ ಅವನಿಗೆ ಸಿಕ್ಕಿಲ್ಲ,

 

ಸಿಗಬಹುದು ಅವನಿಗೆ ನೀರು ಬೆಚ್ಚಗಾದ ಮೇಲೆ

ಒಮ್ಮೆ ಕಣ್ಣುಜ್ಜಿಕೊಳ್ಳುತ್ತಾ ಕಿಟಕಿಯಾಚೆ ಇಣುಕಿದರೆ ಆಕೆ

 

ಅದೇ ಅದೃಷ್ಟವೆಂಬಂತೆ

ಪ್ರಪಾತದಂಚಿನಿಂದ ಎದ್ದು

ಪ್ರಪಂಚದ ಕಪ್ಪು ಕ್ಯಾನ್ವಾಸಿನಲ್ಲಿ

ಕರಗಿರುವ ಚರಾಚರಗಳಿಗೆ ಬೆಳಕ ಕುಂಚದಿಂದ

ಬಣ್ಣ ಬಳಿಯುತ್ತಾ ಬರುವನು ನೇಸರ.

ನೀನು ನನ್ನ ಜತೆ ಈ ಬರಲಿರುವ ಮಳೆಯಲಿ

ಒಂದರ್ಧ ಟೀ ಹಂಚಿಕೊಂಡರೆ

ಒಂದು ಕವಿತೆಯ ಹುಟ್ಟಿಗೆ ಕಾರಣಳಾಗಬಹುದು

ನಿನ್ನ ಕೆನ್ನೆ ಮೇಲೆ ಬೀಳುವ ಆ ಮೊದಲ ಹನಿ

ನನ್ನ ಮುತ್ತಿಗೆ ಸಾಕ್ಷಿಯಾಗಬಹುದು

ಮುತ್ತಿನ ಸದ್ದು ಗುಡುಗಿಗೆ ಸಾಯದಿರುವಂತೆ

ಕಾಪಾಡುವ ಜವಾಬ್ದಾರಿ ನನ್ನದಾಗಬಹುದು

ಎದೆಬಡಿತದ ಜಲತರಂಗ

ನಾದ ಪಾದವನೂ ತಲುಪಬಹುದು

ಮತ್ತು ನಾನು ಜೀವನವಿಡೀ ನಿನಗೆ

ಋಣಿಯಾಗಿರಬಹುದೋ ಏನೋ.

ಒಮ್ಮೆ ಯೋಚಿಸು

ಯಾವುದಕ್ಕೂ

ನೀ ಮನಸು ಮಾಡಬೇಕು

ನಿನ್ನ ಸಮಯ

ಮೋಡ ಮಳೆಯಾಗುವುದರೊಳಗೆ

ಸಂಜೆಯ ಕಲರು ಕದಡುವುದರೊಳಗೆ

ಚಾ ಪಾತ್ರೆ ಕುದಿವವರೆಗೆ

ಮತ್ತೆ ಹರಸಲು ದೇವತೆಗಳಿಗೂ

ಪುರುಸೊತ್ತಿರಲಿಕ್ಕಿಲ್ಲ.

ಯಾವುದೂ ಕೂಡಿಬರದೇಹೋದರೆ

ಈ ಮಳೆ ಬೀಳಬಹುದಾದ ಸಂಜೆ

ಗಾಂಧಿಬಜಾರಿನ ಗಲ್ಲಿಯೊಂದರಲ್ಲಿ

ಕವಿತೆಯೊಂದು ಹತ್ತಿರ ಸುಳಿದೂ

ನನ್ನ ಮುಟ್ಟದೆಯೇ ಮರೆಯಾಗುವ ದುಃಖವನು

ಮೂಕನಾಗಿ ಅನುಭವಿಸಬೇಕಾಗಬಹುದು.

(ಚಿತ್ರಕೃಪೆ : website )

ಬಿರುಬಿಸಿಲಲ್ಲಿ ಹನಿಗಾಗಿ

ಧ್ಯಾನ ಮಾಡುವುದು

ಮುಸಲಧಾರೆಯೊಳಗೂ

ಹೊಂಬಿಸಿಲ ಕನಸು ಕಾಣುವುದು

ನಿನ್ನನಿಷ್ಟಪಡುವಷ್ಟು

ವಿಚಿತ್ರವೇನಲ್ಲ.

****

zen

ತನ್ನ ಕಣ್ಣೊಳಗೇ ಇರುವ ಕವಿತೆಯ ಬಿಟ್ಟು

ಸೀರೆಯ ನೆರಿಗೆಯ

ಲಯದಲ್ಲಿ ಕಾವ್ಯ ಹುಡುಕುವ

ತರುಣರ ಕಂಡರೆ

ಅವಳಿಗೆ

ರೇಜಿಗೆ.

*****

ಮನಬೀದಿಯೊಳಗೆ

ಕಾಮಣ್ಣರು ನಿನ್ನ

ಛೇಡಿಸುತಿರುವಾಗೆಲ್ಲ

ನಾನು ನಿನ್ನ

ಪ್ರೀತಿಸಲು

ಅಯೋಗ್ಯ ಅಂತ ಆಗಾಗ್ಗೆ

ಅನಿಸುತಿರುತ್ತೆ.

 

****

 

ಚಿತ್ರ: ಇಂಟರ್ನೆಟ್ ಕೃಪೆ

ಹಂಬಲವಾಗೇ ಉಳಿಯಲಿ
ನೀ ಸಿಗುವ ಬಯಕೆ
ಕಿಟಕಿಯಾಚೆಗೇ
ಉಳಿಯಲಿ ಚಂದಿರ

ಹಾಗೇ ಉಳಿಯಲಿ ಎದೆಯೊಳಗೆ
ಬರೆದದ್ದು ಕವಿತೆಯಾಗದ ಅಸಹನೆ
ಆಚೆಯ ವರ್ಷಧಾರೆಗೆ ನಿರ್ದಾಕ್ಷಿಣ್ಯವಾಗಿ
ಪುಟಕ್ಕೆಂದು
ಮನದೊಳಗೆ ಭುಗಿಲೆದ್ದ
ಒಲವ ಹಳೆಯ ನೆನಪು.

DSC08654Small

ಅಲೆಯೊಳಗಿಳಿದು ಮುಳುಗಲಿ
ಸುಳಿಯಲಿ ಸಿಲುಕಲಿ
ಅಳಿಯಲಿ ಯಾ ಕೊಳೆಯಲಿ
ತೀರದಲಿ ಗೀಚಿದ್ದ ನಿನ್ನ ಹೆಸರು
ಅದರೊಳಗಿರಿಸಿದ್ದ ನೂರೊಂದು ಕನಸು.

ಊಹೆಯಲಿ ನೀನಿತ್ತ
ಮುತ್ತಿಗೆ ತನ್ನ ಹೆಸರೇ ಇದ್ದುದಕ್ಕೆ
ನಾಚಿ ಕರಗಿತ್ತಲ್ಲ ಸ್ವಾತಿ ಮುತ್ತು
ಅಂಥ ಪ್ರೀತಿಗೂ ಬಿತ್ತಲ್ಲ ಬೆಂಕಿ

ಕೊನೆಗೂ ಹಂಬಲವಾಗೇ ಉಳಿಯಲಿ
ನೀ ಸಿಗುವ ಬಯಕೆ ಮತ್ತು
ಕಿಟಕಿಯಾಚೆಗೇ
ಉರಿಯಲಿ ಚಂದಿರ.