Archive for the ‘ಕವಿತೆ’ Category

ಮೋಡವೊಂದು ಹನಿಯಾಗಲು
ನಿರಾಕರಿಸಿದಂತೆ
ಒಂದು ದುಃಖ ಹಾಗೇ ನಿಂತಿತು
ಎದೆಯ ಹೊಸ್ತಿಲಲ್ಲ
ಕಂಬನಿಯಾಗದೇ

ಅವ್ವ ಆದರೆ ಈರುಳ್ಳಿ ಹಚ್ಚುತ್ತಾಳೆ
ಚಿಟ್ಟೆ ರೆಕ್ಕೆ ಬಡಿಯುತ್ತೆ ಹುಚ್ಚುಚ್ಚಾಗಿ
ಮೇಷ್ಟರಿಗೆ ಮೇಜು
ಕಲಹಪ್ರಿಯರಿಗೆ ಗಾಜು
ಒಡೆವುದೇ ಮೋಜು

NTPIADay Tears 3

ಇಂಥ ಸಮಯದಲ್ಲಿ ಮಾತು ಅಸಹ್ಯ
ಮೌನ ಅಸಹನೀಯ
ಧ್ಯಾನ ಅಂದರೆ ಕೊಂಚ ಕೊಂಚವಾಗಿ
ನಶಿಸುವುದು
ಕವಿತೆ ಬರೆವುದು ಆತ್ಮಹತ್ಯೆ.

ಕವಿ ಅಂದಂತೆ ಆಕಾಶ ಮಡಚಿ
ಜೇಬಿನಲ್ಲಿ ಇಟ್ಟುಕೊಳ್ತಾನಾದರೆ ನಾನೂ
ಹಸನ್ಮುಖಿಯಾಗುವೆ ನನ್ನ ಹುಡುಗಿ
ಹಸೆಯೇರುವಾಗ

ಇಷ್ಟಕ್ಕೆಲ್ಲಾ ಅಳ್ತಾರೇನೋ
ಗಂಡಸಾಗಿ
ಅಂದಾಗ ಮಾತ್ರ ಅವಳ
ಸಾಂತ್ವನಕ್ಕೆ ಬರೆ ಕೊಡುವಂತೆ
ಆವಿಗಣ್ಣಲ್ಲಿ
ಆಕೆಯನ್ನೇ ನೋಡುತ್ತೇನೆ..

 

ಫೊಟೋಕೃಪೆ: ಇಲ್ಲಿಂದ

ಟಣ್ ಟಣ್ ಸಾಸರಿನೊಳಗೆ
ಅಳತೆ ಮಾಡಿ ಹಾಕುವ ಚಾ
ಅಲ್ಲವೋ ಕವಿತೆಯೆಂದರೆ
ಗೂಡಂಗಡಿಯಲಿ ದಾರಿಹೋಕ
ಸುರಕ್ ಸುರಕ್
ಎಂದು ಸವಿವ ಟೀ.

ಬೇಕಾದ್ದನ್ನು ಹೆಕ್ಕಿ
ಬೇಡದ್ದನ್ನು ಬಿಸುಡುವ
ಬಫೆಯಲ್ಲವೋ ಕವಿತೆಯೆಂದರೆ
ಬಟ್ಟಲಿನೊಳಗೊಂದಗುಳೂ
ಉಳಿಯದಂತೆ ತಿಂದು
ತಪ್ತನಾಗಬಲ್ಲಂಥ ಹಸಿವು.

ಚೂರು ಸುರಿದು ಗಾಳಿಗೆ
ಹಾರಿಹೋಗುವ ಮೇಘವಲ್ಲವೋ
ಕವಿತೆಯೆಂದರೆ
ಸರ್ವಸ್ವವನೂ ಸುರಿದು
ಬರಿದಾಗುವ ಮಳೆ.

images

ಮಡಿಕೆಗಳಿಲ್ಲದ ರೇಷಿಮೆ
ಜರತಾರಿ ಸೀರೆಯಲ್ಲವೋ
ಕವಿತೆಯೆಂದರೆ
ಪುಟ್ಟನ ಮೂಗೊರೆಸಲ್ಪಟ್ಟ
ಅವ್ವನ ಸೀರೆ.

****

 

(ಫೋಟೋಕೃಪೆ : www.gulfnews.com)

ಇಲ್ಲೊಂದು ಊದ್ದನೆಯ ಸ್ತಬ್ಧ ರಸ್ತೆ
ನಡೆಯುತ್ತ ಕತ್ತಲಲ್ಲಿ ಕಲ್ಲೊಂದು ತಾಕಿ ಎಡವಿದೆ
ಮತ್ತೆದ್ದು, ಕುರುಡನಂತೆ ನಡೆದೆ
ಕಪ್ಪು ಕಲ್ಲ ಮೌನ ಒಡೆವಂತೆ
ಉದುರಿದೆಲೆಯ ಪುಡಿಯಾಗಿಸುವಂತೆ

ಯಾರೋ ಒಬ್ಬ ನನ್ನ ಹಿಂದೆಯೇ ಎಡವಿದಂತೆ
ಅನ್ನಿಸಿದೆ. ಮತ್ತೆ ಕಪ್ಪು ಕಲ್ಲು, ಉದುರಿದೆಲೆ.

at-the-dark-end-of-the-street-anisha-bordoloi

ನಾ ನಿಧಾನಿಸಿದರೆ ಅವನೂ
ನಾ ಓಡಿದರೆ ಅವನೂ

ತಿರುಗಿ ನೋಡಿದರೆ ಮಾತ್ರ
ಯಾರಿಲ್ಲ.
ಹೆಜ್ಜೆಗೆ ಮಾತ್ರ ನನ್ನ ಪರಿಚಯವಿರುವಂತೆ
ಎಲ್ಲಾ ಕತ್ತಲು, ಬಾಗಿಲುಗಳೇ ಇಲ್ಲದ ಬೀದಿಯಲಿ

ಸಿಕ್ಕ ತಿರುವೊಳಗೆ ತಿರುವು
ತಿರುತಿರುಗಿ ಅಂತಿಮವಾಗಿ
ಮತ್ತೆ ತಿರುಗಿಬರಲಾರದಂತೆ ತಲುಪಿದ್ದು
ನನಗಾಗಿ ಯಾರೂ ಕಾಯದ
ನನ್ನನ್ನು ಯಾರೂ ಹಿಂಬಾಲಿಸದ ಬೀದಿಗೆ

ಅಲ್ಲೊಬ್ಬ ಎಡವುತ್ತಿದ್ದ ಮತ್ತೆ ಎದ್ದು
ಹಿಂತಿರುಗಿ ನನ್ನ ನೋಡಿ ಹೀಗೆ ಅಂದುಕೊಳ್ಳುವ:
ಯಾರೂ ಇಲ್ಲ.

*******

(ಓಕ್ಟಾವಿಯೋ ಪಾಜ್ ನ ಕವಿತೆಯೊಂದರ ಕನ್ನಡ ಅನುವಾದ)

(ಪೈಂಟಿಂಗ್ ಕೃಪೆ : ಇಲ್ಲಿಂದ )

ಸಿಕ್ಕಿದ್ದಕ್ಕೆಲ್ಲಾ ಕಾರಣವಿತ್ತು
ಒಮ್ಮೆ ಸಿಗು ಗೆಳೆಯಾ
ಹಾಗೆ ಸುಮ್ಮನೆ

*****

ಹೂವು ಸತ್ತು
ತುಂಬಾ ಹೊತ್ತಾಯ್ತು
ಪರಿಮಳವಿನ್ನೂ ಅರಳುತ್ತಿದೆ..

******

ಅವಳೂ ಅಂದಳು
ನಾನೂ ಅನ್ನುತ್ತಿದ್ದೆ
ಮೌನ ಇನ್ನಷ್ಟು ಆಳವಾಗುತ್ತಿತ್ತು..

*****

ಗೋಡೆ, ಮಾಡಿನಿಂದ
ಆಗದಿದ್ದ ಮನೆ, ಕಿಟಕಿ-ಬಾಗಿಲು
ಗಳಿಂದ ಆಯಿತು.

******

ಮೀಟರುಗಟ್ಟಲೆ ಚಿಗುರಿಸಿದ
ಮಳೆಯನ್ನು
ಸೆಂಟಿಮೀಟರುಗಳಿಂದ ಅಳೆದರು.

****

ಕಡಲಿಗೆ ಬಿದ್ದ ಆಗಸ
ನೀಲಿ ನೀಲಿಯಾಗಿಬಿಡ್ತು
ಪುಟ್ಟಿಯ ಕಣ್ಣಲ್ಲಿ

****

water2

ಭೇಟಿಯಾಗದಿರು ನನ್ನ
ಕನಸಲ್ಲಿ ಸಾಲ
ಇಸ್ಕೊಂಡವನ ಥರ…

****
ಸಿಮೆಂಟು, ಇಟ್ಟಿಗೆ
ಗೋಡೆ ಮಾಡು ಎಲ್ಲ ಗಟ್ಟಿ
ಒಳಗಿನ ಮೌನವೊಂದೇ ದ್ರವ
****

ನದೀ ತಟದಲ್ಲಿ
ಕುರಿ ಹುಲ್ಲು ಮೇಯುತ್ತಿತ್ತು
ನೀ
ರಲ್ಲಿ
ಮೀನ ಮೇಷ
ಎಣಿಸುತಿತ್ತು.

******

ಗಾಳ ಹಾಕಿ
ಕಾಯುತ್ತಾ ಕುಳಿ
ತಿದ್ದೆ.
ಕೊನೆಗೂ ಒಂದು
ಮೀನಿಗೆ ಸಿಕ್ಕಿಹಾಕಿಕೊಂಡೆ.

*******

ಕಣ್ಣು ಮೀನಿದ್ದು
ಆಗಿರಬಹುದು
ಆದರೆ ಕಣ್ಣೀರು
ಮೊಸಳೆದ್ದು ಆಗಿರಬಾರ್ದು ಕಣ್ರೀ!

ಹಿಂದಿನ ದಿನ ಅಲ್ಲೆಲ್ಲೋ
ಬಾಂಬು ಬಿದ್ದ ಸುದ್ಧಿಯು
ಟಪ್ಪನೆ ಬಾಗಿಲಿಗೆ ಬಡಿದದ್ದೇ
ಬೆಚ್ಚಗೆ ಹೊದ್ದು ಮಲಗಿದ್ದ ನಾನು
ತಣ್ಣಗೆ ಎದ್ದು ಓದಿ ಎಲ್ಲರಂತೆ
ಎಚ್ಚರವಿದ್ದೇ ಮಲಗುವ
ಮತ್ತೊಂದು ಸೋ
ಮಾರಿ ದಿನ..

ಹೋಳು ಹಾಳು ಹೃದಯವನು
ಯಾವೊಂದು ಸ್ಕೂಟಿ ಚೂಟಿ
ನಗುವೂ ರಿಪೇರಿ ಮಾಡಲಾಗದೆಂಬ
ಬ್ರಹ್ಮಜ್ಞಾನದ ಡಿಗ್ರಿ ಪಡೆದಿದ್ದರೂನು
ಯಾವುದೋ ಹಳೇ ಜೋಕೊಂದು ನೆನಪಾಗಿ
ನಗದೆಯೂ ನಕ್ಕಂತಿದ್ದ ಆಕೆಯ ಪುಟ್ಟನಗುವಿಗೆ
ಸಾಯಲಿಕ್ಕಾಗೇ ಕನಸು ಚಿಗಿತುಬಿಟ್ಟ
ಮತ್ತೊಂದು ಮಾಯಾವಾಸ್ತವಿಕ ದಿನ..

ಕಂಪೆನಿಯೊಂದು ಹಾ! ಲಕ್ಷ್ಮಣಾ!
ಅಂತ ಕೂಗಿದ್ದೇ ಬದುಕು ಇತ್ತ
ಖುಷಿಯ ಅಂಗಳವನು ಮೀರಿ
ಸಂಸಾರಸೀತೆಯ ಬೇಡಿಕೆ ಪೂರೈಸಲಿಕ್ಕಾಗೇ
ಕಳೆದುಕೊಳ್ಳಹೊರಟ
ಮತ್ತೊಂದು ಅಬ್ಬೇಪಾರಿ ದಿನ..

ಅದೊಮ್ಮೆ ಅಗಾಧ
ಸಾಗರ ಸವಾರಿ ಮಾಡುವ ಹುಕಿ ಬಂತು
ಪುಂಡ ಪೋಕರಿ ಹುಡುಗನೊಬ್ಬ ಕಟ್ಟಿದ
ಬಳ್ಳಿ ಬಿಚ್ಚಿ ಓಡಿಹೋದದ್ದೇ ತಡ
ಸ್ವಾತಂತ್ರ್ಯ ದಿವಸ.
ಹವೆಯ ಜತೆಗಿನ ಸ್ನೇಹ
ಸಹಾಯಕ್ಕೆ ಬಂತು.
ಅಲೆಯ ಮೇಲೆ ವಯ್ಯಾರದ ನಡಿಗೆ
ಗಮ್ಯವಿಲ್ಲದ ರಮ್ಯ ಹೆಜ್ಜೆಯಿರದ ಹಾದಿ
ಪುಳಕದ ಮೀನಿಗೆ ಅಚ್ಚರಿ
ಅರೆ! ಬಲೆಯಿಲ್ಲದ ದೋಣಿ


ಆದರೂ ಒಡೆಯನಿಲ್ಲದ ಒಬ್ಬಂಟಿತನ
ಗಮ್ಯವಿರದ ಗಾಢಾಂಧಕಾರ
ಅಗಾಧ ಬಯಲಿನಲ್ಲಿ ಒಂಟಿಗರಿಕೆಯ ಭಾವ
ತಿರುಗಿ ವಾಪಸ್ಸು ಹೋಗಲು ಅದೇ ಹಳೆಯ ಸ್ನೇಹ
ಸಹಾಯಕ್ಕೆ ಬರಲಿಲ್ಲ.
ಹಳೆಯ ಸ್ಥಿತಿಯ ಧ್ಯಾನ
ತೀವ್ರ ಚಡಪಡಿಕೆ 
ಕಾಲವನ್ನು ಹಿಂದೆಳೆಯುವ ಹಂಬಲ.ಎಚ್ಚೆತ್ತೆ
ಅಂಬಿಗ ಪ್ರೀತಿಯಿಂದ ಮೈತಡವುತ್ತಿದ್ದ.
ಅದೋ ಅಲ್ಲಿ, ಮರದ ಮರೆಯಲ್ಲಿ ಇಣುಕುವ
ಪುಂಡಪೋಕರಿ ಪೋರ
ಮತ್ತು ಸುತ್ತ ಮುತ್ತ ಒಂದು ಹಳೆಯ ಸ್ನೇಹ.

ಬದುಕು ಕನಸು-ನನಸ ಉಯ್ಯಾಲೆ
ಸಾಹಸದಾಸೆ ಪರ್ವತ ಮತ್ತು
ರೊಟೀನು ಸುಖದ ತಪ್ಪಲು.

ತೀರದ ಗುಂಟ

ಜೋಡಿಹೆಜ್ಜೆಯ ತೇರು

ಪುಟ್ಟೀ ಕತ್ತಲಾಗುವುದರೊಳಗೆ ಬೇಗ

ಮನೆ ಸೇರು.

 

ಅಗಾಧ ಸಾಗರದೆದುರು ಕಪ್ಪುಕಲ್ಲಿನ

ಮೌನ ಮಂಥನ

ಅಲ್ಲೇ ಪಕ್ಕ ಹೆಜ್ಜೆಗಾಯದ ಮರಳ ನೋವಿಗೆ

ನೊರೆಯ ಪುಟ್ಟ ಸಾಂತ್ವನ

 

ಅಗೋ ನೋಡು

ತೆರೆದು ಕಣ್ಣ

ಉರಿವ ಸೂರ್ಯನಿಗೂ ಇರುವುದು

ಹೃದಯದ್ದೇ ಬಣ್ಣ.

ಪೋರನ ಮರಳಗೂಡಲಿ

ಏಡಿ ಇಣುಕಿ ನೋಡಿದೆ..

ಹಾದುಹೋದ ತಂಗಾಳಿ ಪುಟ್ಟಪಾದದ

ತಂಪು ಕದ್ದು ಪದ್ಯ ಹಾಡಿದೆ..

 

ಆಗಸದ ವಿಸ್ತಾರವ ಕಂಡು

ಕಾಮನಬಿಲ್ಲೇ ಬಾಗಿದೆ

ನಿನ್ನೊಳಗೇ ಇರುವ ಅದ್ಭುತ

ನಿನಗೇ ಯಾಕೆ ಕಾಣದಾಗಿದೆ..

 

********

 

ಚಿತ್ರಕೃಪೆ : ಇಲ್ಲಿಂದ

ಹಾರೆಯಿಂದ ಭುವಿಯ
ಎದೆ ಬಗೆದದ್ದು ನಿಜ
ಅದಕ್ಕೆ ಈ ಹಸಿರು.

******

ವಸಂತ, ಚಿಗುರು
ಹಾಗೇನೆ ನಾನು
ನನ್ನ ಮಗು

*****

ಅವಳ ನೋಟ
ನನ್ನ ಅಸ್ತಿತ್ವವನೇ
ಅಲುಗಾಡಿಸಿತು

****ಮಾತು ಎಂದ ಕ್ಷಣ ಮಾತು 
ಉಂಟು ಮೌನ ಎಂದಾಕ್ಷಣ ಮೌನ
ಇಲ್ಲ

*****

ಟೀಚರ್ ಕೋಲಿಂದ ಪೆಟ್ಟು ಕೊಟ್ಟರು
ಕಲಿಯಲಿಲ್ಲ
ಬದುಕು ಕೋಲನ್ನು ಊರುಗೋಲಾಗಿಸಿತು
ಕಲಿತೆ

******

ಹುಲ್ಲ ಮೇಲೆ ಹರಿಹಾಯ್ವ ಗಾಳಿ
ಕಟ್ಟಡವೊಂದಕ್ಕೆ ಡೀ ಕೊಟ್ಟು
ಅಸುನೀಗಿತು

*****

ಮರಳ ರಾಶಿ
ಅಲೆಬಂದು ಅಳಿಸುವವರೆಗಷ್ಟೇ
ಏಡಿಯ ಹೆಜ್ಜೆಗುರುತು, ಮನೆ.

*****

ಅವಳು ಬಿಟ್ಟುಹೋದ ಕ್ಷಣ
ಮೌನ ಅವನ
ಕತ್ತುಹಿಸುಕಿತು.

*****

ಭರಪೂರ ಹಸಿವು
ಕವಿತೆಯ ಪುಟ
ತಣ್ಣಗಾಗಿಸಲಿಲ್ಲ

******

ಒಳಗಿನದೇ ಪರಿಣಾಮ
ಕೊಡೆ ಬೇಡ ಅನ್ನಿಸುವಂಥ
ಮಳೆ ಹೊರಗೆ.

ಸನಿಹ ಸುಳಿದಾಗ ಎದೆ ಹಿಗ್ಗಿ
ಢವ ಢವವೇ ಮರೆವ ಮರೆಗುಳಿ.
ಯಾವ ಸ್ಪರ್ಶಕ್ಕೂ ಸಿಗದಿದ್ದರೂ
ಹೊಕ್ಕುಳ ಹುಳ ಮೆಲ್ಲ ತೆವಳಿ
ಮನಕೆ ಕಚಗುಳಿ.

ಪ್ರಪಾತದಂಚಿಂದ
ಕೆಳಕ್ಕುರುಳುವಾಗಲೂ
ನನ್ನ ಪಾಲಿಗೆ ಉಳಿದ
ಕ್ಷಣದ ಹೋಳುಗಳ ಅಣುವಿನ
ಆಮ್ಲಜನಕ ನಿನ್ನ ನೆನಪು.

ದೇವರೂ ಬರೆದು ಮುಗಿಸಿದ
ನಂತರ
ಹಾಯಾಗಿ ಕೂತು
ಆಹ್ಲಾದ-ಆಲಸ್ಯ- ಆನಂದದಿಂದ
ಮೈಮುರಿಯುವನು, ಅಂತಾದ್ದು
ನಾನು ನೀನು ಜತೆ
ಯಾಗುವ ಕತೆ

You_are_painting_your_feelings_on_the_sand

ಸಂಬಂಧಗಳಲಿ
ಎಲ್ಲಾ ಲೆಕ್ಕಾಚಾರಗಳಾಚೆ
ನೀ ತುಟಿ ನೀಡಿದ್ದಷ್ಟೇ
ಬದುಕು
ನಾನು ಹೀರಿದ್ದಷ್ಟೇ
ಖುಷಿ.

ಸತ್ಯಸ್ಯ ಸತ್ಯ,
ಎಲ್ಲ ತಲ್ಲಣಗಳಾಚೆಗಿನ ತಂಗಾಳಿ
ನಿನ್ನ ಸಖ್ಯ.