Archive for the ‘ದಿನದ ಎಸಳುಗಳು…’ Category

ಡಿಯರ್ ಗುಂಗರಮಳೆಯ ಗೊಂಬೆ

ಈಗಲೂ ಅನ್ಸೋದು; ನಿನ್ನನ್ನು ಸರಿಯಾಗಿ ನಾನಿನ್ನೂ ನೋಡೇ ಇಲ್ಲ. ಹೌದು; ತುಂಬಾ ಸಲ ಕದ್ದು ನೋಡೋಕೆ ಪ್ರಯತ್ನ ಪಟ್ಟಿದೀನಿ. ಆದರೆ, ಆ ಆಯಸ್ಕಾಂತ ಕಣ್ಣುಗಳ ಸೆಳೆತದಿಂದ ಹೊರಬಂದು ನಿನ್ನನ್ನು ಕಣ್ತುಂಬಾ ನೋಡಬೇಕು ಎಂಬ ಆಸೆ ಮರೀಚಿಕೆಯಾಗೇ ಉಳಿದಿದೆ. ನಿಜ್ಜಾ ಹೇಳ್ತೀನಿ; ನಿನ್ನ ಕಿವಿಯ ಲೋಲಾಕನ್ನು ಫೇಸ್ ಬುಕ್ ನ ಪ್ರೊಫೈಲ್ ಫೊಟೋದಲ್ಲಿ ನೋಡಿದ್ದೇನೆಯೇ ವಿನಾ ನಿಜವಾಗಿ ಅದರ ಅಂದವನ್ನು ಇನ್ನೂ ನಾ ಸವಿದೇ ಇಲ್ಲ! ನಿನ್ನ ಕಂಗಳಿಗೆ ಅದೆಂಥಾ ಶಕ್ತಿಯಿದೆಯೇ ಮಾರಾಯ್ತೀ. ದೇವರನ್ನೇ ನಂಬಬೇಕು ಅನ್ನುವಷ್ಟು! ನಿಂಗೇ ಗೊತ್ತಿರೋ ಹಾಗೆ ನಾನು ಅದೆಷ್ಟು ಸಲ ಆ ಸೆಳೆತವನ್ನು ಭರಿಸಲಾಗದೇ ಮುಖ ತಗ್ಗಿಸಿದ್ದಿದೆ. ಆ ಹೋರು ಬೆಳಕಿಗೆ ಕಣ್ಣೊಡ್ಡಲಾಗದೇ ಸೋತಿದ್ದೇನೆ. ನೀನು ನನ್ನತ್ತ ನೋಡಿದ ಒಂದು ಸೆಕೆಂಡನ್ನು ತುಂಬಿಕೊಳ್ಳಲು ಈ ಮನಸ್ಸಿಗೆ ಏದುಸಿರು. ಆ ಬೆಳಕು ಮೈಯೆಲ್ಲಾ ವ್ಯಾಪಿಸಿ, ಆತ್ಮ ಒಮ್ಮೆ ಕಂಪಿಸಿ, ಬೆಳಕಿನ ಸ್ನಾನವಾದಷ್ಟೇ ಮನಸ್ಸು ಶುದ್ಧ ಶುದ್ಧ!

images1_thumb.jpg

ನೀ ಬಂದು.. ಬಳಿ ನೀ ಬಂದು..
ಈ ಸ್ವಪ್ನದ ಗಾಯ ನೋಡು…

ನೀನು ಎ.ಆರ್.ರೆಹಮಾನ್ ಸಂಗೀತದ ಹಾಗೆ; ಗುಟುಕು ಬಿಯರಿನ ಹಾಗೆ. ಮೊದಲಿಗೆ ಇಷ್ಟ ಅನ್ನಿಸಲ್ಲ. ಆದರೆ ಒಮ್ಮೆ ಗುಂಗು ಹತ್ತಿಬಿಟ್ಟರೆ ಮತ್ತೆ ಮತ್ತೆ ನೋಡುವ ಆಸೆ. ನೀನು ಜೀವನ ಪೂರ್ತಿ ಗುನುಗುವ ಗಾನ, ಸದಾ ಎದೆಯೊಳಗೇ ಉಳಿಯುವ ರಾಗ. ನೀನು ನನ್ನ ಹೃದಯದಲ್ಲಿರುವ ಮಚ್ಚೆ. ತಿರುಮಲೇಶರ ಅಕ್ಷಯ ಕಾವ್ಯದಂತೆ – ಯಾವ ಪುಟದಿಂದಾದರೂ ಶುರು ಮಾಡಿ- ಯಾವ ಪುಟದಲ್ಲಾದರೂ ನಿಲ್ಲಿಸಿ – ಎದೆ ತುಂಬಿಕೊಳ್ಳಬಹುದಾದಂತ ಅನನ್ಯ ಕಾವ್ಯ. ಚಂದದ ಸಾಲೊಂದನ್ನು ಬರೆಯುವಾಗ ಕಾಯ್ಕಿಣಿಯ ಭಾವವಿನ್ಯಾಸದಲ್ಲಿ ಮೂಡಿದ ಪಲುಕು. ನಿನ್ನಲ್ಲೇ ಕೆ.ಎಸ್.ನ. ಕವಿತೆಯ ಎಲ್ಲಾ ನಯ ನಾಜೂಕು ಮನೆ ಮಾಡಿದೆ. ನಿನ್ನ ಕಂಗಳು ಮಣಿಕಾಂತ್ ಪುಸ್ತಕದ ಶೀರ್ಷಿಕೆಯಂತಿರುತ್ತದೆ, ಒಮ್ಮೆ ಒಳ ಹೊಕ್ಕು ನೋಡಬೇಕೆಂಬ ಆಸೆ ಹುಟ್ಟಿಸುತ್ತದೆ. ಹೊಕ್ಕರೆ ನೆನಪುಗಳ ಜೋಳಿಗೆಯಿಂದ ಮನಸ್ಸು ಭಾರ. ನಿನ್ನ ಕೂದಲಿನ ಕಪ್ಪು ಜಲಪಾತದಲ್ಲಿ ಕುವೆಂಪು ಕವಿತೆಗಳ ಗಾಢತೆ, ನವಿರುತನ ಇದೆ. ಒಂದು ಅದ್ಭುತ ಕಥೆ ಬರೆದ ಬಳಿಕ ರವಿ ಬೆಳೆಗೆರೆ ಇಡುವ ಕೊನೆಯ ಫುಲ್ ಸ್ಟಾಪ್ ನಿನ್ನ ಬಿಂದಿ ಅನ್ನಿಸುತ್ತದೆ. ನಿನ್ನ ಕೊರಳಿನ ಪದಕ ನನ್ನ ಹೃದಯ – ಎಂಬಂಥ ಸಾಲು ಬರೆದಾಗ ಎಚ್ಚೆಸ್ವಿಯಲ್ಲಿ ಮೂಡಿದ ಭಾವನೆ ನಿನ್ನ ಕಂಗಳಲ್ಲಿ ಜಿನುಗುತ್ತಿರುತ್ತದೆ. ನಂಗನ್ಸುತ್ತೆ, ನೀನ್ಯಾರನ್ನೆಲ್ಲಾ ನೋಡಿ ನಗುತ್ತೀಯೋ ಅವರೆಲ್ಲಾ ಜೋಗಿಯಂತೆ ಇಪ್ಪತ್ತೈದು ದಿನಕ್ಕೊಂದು ಕಾದಂಬರಿ ಬರೆಯಬಲ್ಲರು. ನಿನ್ನ ಕಿರುಬೆರಳ ಕರೆಗೆ ವಿಶ್ವೇಶ್ವರ ಭಟ್ಟರ ಪುಸ್ತಕದಲ್ಲಿದ್ದಂತೆ ಪ್ರಪಂಚವನ್ನೇ ಗೆಲ್ಲಬಲ್ಲಂಥ ಹುಮ್ಮಸ್ಸನ್ನು ಕೊಡಬಲ್ಲಂಥ ಶಕ್ತಿಯಿದೆ. ಒಂದೊಳ್ಳೆ ಕಥೆ ಬರೆದ ನಂತರ ಚಿತ್ತಾಲರ ಮೈ ಮುರಿಯುವಿಕೆಯ ಸುಖ ನಿನ್ನ ಆಕಳಿಕೆಯಲ್ಲಿದೆ. ನಿನ್ನ ನಗೆಯನ್ನು ಪೋಸ್ಟ್ ಮಾರ್ಟಮ್ ಮಾಡಿ ವಿಶ್ಲೇಷಿಸಿದರೆ ಅದರಲ್ಲಿ ಪೂಚಂತೇ ಬರಹದ ಸವಿಯಿದೆ. ಗಾಳಿಯೊಡನೆ ಆಟವಾಡುವ ನಿನ್ನ ಮುಂಗುರಳಲ್ಲಿ ಬೇಂದ್ರೆ ಕವಿತೆಯ ಅರ್ಥಬದ್ಧ ಪ್ರಾಸ ಇದೆ. ನಿನ್ನ ನಡೆ ನುಡಿಯಲ್ಲಿ ಭೈರಪ್ಪನವರ ಡೀಟೈಲಿಂಗ್ ಇದೆ. ನಿನ್ನ ಮನಸ್ಸು ಮಾತ್ರ – ಅಡಿಗರ ಕವಿತೆಯಂತೆ. ತಿಳಿದುಕೊಂಡಷ್ಟು ಹೊಸ ಅರ್ಥಗಳು, ಒಳಹೊಕ್ಕಷ್ಟೂ ಮತ್ತಷ್ಟು ವಿವರಗಳು.
ಒಟ್ಟಾರೆ ಹೇಳಬೇಕೆಂದರೆ- ನೀನೊಂದು ನಡೆಯುವ ಕವಿತೆ.

images

ನೀನೆಂದರೆ ನನ್ನೊಳಗೆ… ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ… ನೀನೇ ಒಂದು ಸಂಕಲನ

ನಿಂಗೆ ಎಲ್ಲಾ ಅರ್ಥ ಆಗೋದು ಲೇಟು. ಮೆಸ್ಸೇಜಿಗೆ ಉತ್ತರ ಕೊಡುವುದೂ ಅದೆಷ್ಟು ತಡ. ತುಂಬಾ ಸಲ ನಿನ್ನ ಮೆಸ್ಸೇಜಿನ ಬಾಕ್ಸ್ ನ್ನು ತೆರೆದೇ ಇಟ್ಟು ಹಸಿದ ಮನ ವೀಣಾ ಸ್ಟೋರ್ಸ್ ಮುಂದೆ ಇಡ್ಲಿಗಾಗಿ ಕಾಯುತ್ತಿರುವಂತೆ ನಿನ್ನ ಮೆಸ್ಸೇಜಿಗಾಗಿ ಕಾಯುತ್ತಿರುತ್ತೇನೆ. ಇದೀಗ ಟಣ್ ಅನ್ನುವ ಸದ್ದಿನೊಂದಿಗೆ ನಿನ್ನ ಉತ್ತರ ಬರುತ್ತದೆ ಭರವಸೆಯ ಆಶ್ವಾಸನೆಯೊಂದಿಗೆ ಅದೆಷ್ಟು ಕ್ಷಣಗಳಿಗೆ ನಾನು ಮೋಸ ಮಾಡಿಲ್ಲ? ನನ್ನ ಕಂಗಳ ಬೇಡಿಕೆ ನಿಂಗರ್ಥ ಆಗಿದ್ದಿದ್ದರೆ ಇಷ್ಟೊತ್ತಿಗೆ ಒಂದು ಸುಂದರ ಸ್ನೇಹವೊಂದು ರೂಪುಗೊಂಡಿರುತ್ತಿತ್ತು. ನಿನ್ನ ಉತ್ತರ ಮತ್ತು ನನ್ನ ಮರು ಉತ್ತರದ ನಡುವಿನ ಸಮಯದ ಲಯವೇ ಹೇಳುತ್ತದೆ; ಬಹುಷಃ ಬೆಳಗಾಗುತ್ತಲೇ ನಾನು ಗುಡ್ ಮಾರ್ನಿಂಗ್ ಹೇಳುವುದು ನಿನ್ನ ಉತ್ತರದ ನಿರೀಕ್ಷೆಗೇ. ಪ್ರತೀ ಕ್ಷಣದ ರುಚಿ ನೋಡಿ ನಿನಗಾಗಿ ಕಾಯ್ದಿರಿಸುವ ಶಬರಿ ನಾನು, ಅಂತಲೇ ನನ್ನ ಬಗ್ಗೆ ನನಗಿರುವ ಗುಮಾನಿ. ಇಷ್ಟಕ್ಕೂ ನನಗೆ ಬೇಕಿರುವುದು ಒಂದು ಸುಂದರ ಸ್ನೇಹ. ನಿನ್ನನ್ನು ಅರಿಯುವ ಸುಖ. ಬದುಕು ಪೂರ್ತಿ ಖುಷಿಯಿಂದ ಕಳೆಯಲು- ನಿನ್ನ ಜೊತೆ ಕಳೆದ ಸಮಯಗಳ ಒಂದು ಜೋಳಿಗೆಯಷ್ಟು ನೆನಪುಗಳು. ಮತ್ತು ಕೊಂಚೇ ಕೊಂಚ ಪ್ರೀತಿ.
ಜೊತೆಗೆ ನೀನು ಸದಾ ಖುಷಿಯಾಗಿರುವುದು.
ಇಷ್ಟು ಪುಟ್ಟ ಬೇಡಿಕೆಯಿಟ್ಟುಕೊಂಡು ನಿನ್ನ ಉತ್ತರಕ್ಕಾಗಿ ಪ್ರತಿದಿನ ಕಾಯುತ್ತಿರುತ್ತೇನೆ; ಎಂದಿನಂತೆ.
ಇದೇ ನನ್ನ ನಾಳೆಗಳನ್ನು ರುಚಿಕಟ್ಟಾಗಿರಿಸುತ್ತಿದೆ. ಇದೇ ಭರವಸೆಯ ನೊಗ ಹೊತ್ತು ದಿನದ ಹೊಲವನ್ನು ಉಳುತ್ತಿರುತ್ತೇನೆ.

–  ನಿನ್ನ ಕಣ್ಣುಗಳ ಫ್ಯಾನ್

ವರ್ಷವೊಂದು ಬಲುಬೇಗ ಉರುಳಿಹೋಯಿತು. ಕಳೆದ ವರ್ಷದಲ್ಲಿ ಮನಸ್ಸು ಮುಟ್ಟಿದ ಪುಸ್ತಕ ಯಾವುದು ಅಂತ ಪಟ್ಟಿ ಮಾಡಹೊರಟರೆ ಮನಸ್ಸಿಗೆ ತುಂಬ ಖುಷಿ. ಈ ಪಟ್ಟಿ ಕೆಲವರಿಗಾದರೂ ಮತ್ತಷ್ಟು ಓದುವ ಚಟ, ಹಟ ಹುಟ್ಟುಹಾಕುತ್ತೇನೋ ಅನ್ನುವ ಹಂಬಲದಿಂದ ಈ ಪೋಸ್ಟ್.
ಗಮನಿಸಬೇಕಾದ್ದು ಕೆಲವು ಪಾಯಿಂಟ್ಸ್. ಈ ಪಟ್ಟಿಯಲ್ಲಿರುವುದು ನಾನು ಕಳೆದ ವರ್ಷ ಓದಿದ್ದ ಪುಸ್ತಕಗಳಲ್ಲಿ ನನಗೆ ಉತ್ತಮ ಅನ್ನಿಸಿದ್ದು, ಕನ್ನಡದ ಜೊತೆ ಕೆಲ ಇಂಗ್ಲೀಷ್ ಪುಸ್ತಕವೂ ಈ ಪಟ್ಟಿಯಲ್ಲಿದೆ. ಮತ್ತು ಈ ಪಟ್ಟಿ ನನ್ನ ಇಷ್ಟದ ಕ್ರಮಪ್ರಕಾರವಾಗಿ ಇಲ್ಲ.

೧. ರಂಗವಲ್ಲಿ ಮನೆ ಎಲ್ಲಿ? (ಕಥಾ ಸಂಕಲನ) – ಗೋಪಿನಾಥ್ ರಾವ್

ಹನ್ನೊಂದು ಕಥೆಯಿರುವ ಈ ಕಥಾ ಸಂಕಲನ, ಕಳೆದ ವರ್ಷದ ಓದಿನಲ್ಲಿ ತುಂಬಾ ಖುಷಿಕೊಟ್ಟಿತು. ಕಥೆ ವಿವರಣೆ ಮತ್ತು ಮುಖ್ಯವಾಗಿ ಕಥಾ ತಂತ್ರದಿಂದ ಬಹಳ ಚಂದ ಅನ್ನಿಸುವ ಕಥೆಗಳಿವೆ ಇದರಲ್ಲಿ. ಅಕಸ್ಮಾತ್ ಆಗಿ ಓದಬೇಕಾಗಿ ಬಂದು ಸರ್ ಪ್ರೈಸ್ ಆಗಿ ನನ್ನ ಮನಸ್ಸಿನಲ್ಲಿ ನೆಲೆಸಿರುವ ಈ ಪುಸ್ತಕ ಈಗ ನನ್ನ ಲೈಬ್ರೆರಿಯಲ್ಲೂ ಸ್ಥಾನ ಪಡೆದಿದೆ. ಜೊತೆಗೆ ಈ ಲೇಖಕರ ಇನ್ನಷ್ಟು ಪುಸ್ತಕಗಳನ್ನೂ ಹುಡುಕುವಂತೆ ಮಾಡಿದೆ. ಕಳೆದ ತಿಂಗಳಷ್ಟೇ ಸಿಕ್ಕಿರುವ ಆ ಬೇರೆ ಪುಸ್ತಕಗಳನ್ನು ಇನ್ನೂ ಓದಬೇಕಿದೆಯಷ್ಟೇ.

img_20170212_135937

೨. ಲೈಫ್ ಈಸ್ ಬ್ಯೂಟಿಫುಲ್ (ಸೆಲ್ಫ್ ಹೆಲ್ಪ್ – ಲೇಖನ ಮಾಲೆ) – ಜೋಗಿ

ವ್ಯಕ್ತಿತ್ವ ವಿಕಸನ ಪುಸ್ತಕಗಳ ಸಮಾನ್ಯ ಧಾಟಿಯಿಂದ ಹೊರತಾಗಿ ಬಂದಿರುವ ವಿಶಿಷ್ಟ ಪುಟ್ಟ ಪುಸ್ತಕ ಇದು. ಜೋಗಿ ಶೈಲಿಯಲ್ಲಿ ಕಥೆಗಳ ಮೂಲಕ ನಮ್ಮ ಬದುಕನ್ನು ನೇವರಿಸುತ್ತ ಹೋಗುವ ಈ ಪುಸ್ತಕ, ಯಶ್ ರಾಧಿಕಾ ಪಂಡಿತ್ ಮದುವೆಯ ಕರೆಯೋಲೆಯ ಜೊತೆಯಲ್ಲೂ ಸ್ಥಾನ ಪಡೆದಿದ್ದು ಇನ್ನೊಂದು ವಿಶೇಷ. ಒಟ್ಟಾರೆ ನಮ್ಮನ್ನು ಒಂದಿಷ್ಟು ಚಿಂತನೆಗೆ ನೂಕುವ ಅನೇಕ ವಿಚಾರಗಳು ಈ ಪುಸ್ತಕದಲ್ಲಿದೆ.

 

img_20170212_135933

೩. ೧೦೦ ಲಿರಿಕ್ಸ್ – ಗುಲ್ಜಾರ್ (ಇಂಗ್ಲೀಷ್ ಪುಸ್ತಕ) – ಸಂಜೋಯ್ ಶೇಖರ್

ಬಾಲಿವುಡ್ಡಿನಲ್ಲಿ ಎವರ್ ಗ್ರೀನ್ ಹಿರೋ ಅಂತ ದೇವಾನಂದ್ ರನ್ನು ಕರೆಯುತ್ತಾರೆ. ಎವರ್ ಗ್ರೀನ್ ಬರಹಗಾರ ಅಂತ ಯಾರನ್ನಾದರೂ ಕರೆಯಬಹುದೆಂದರೆ ಅದು ಗುಲ್ಜಾರ್ ರನ್ನು ಮಾತ್ರ. ಈಗಿನ ಹದಿ ಹರೆಯದವರ ಎದೆಯಲ್ಲೂ ಕಿಚ್ಚೆಬ್ಬಿಸಬಲ್ಲಂಥ ರೂಪಕಗಳನ್ನು ಕೊಡುವುದರಲ್ಲಿ ಗುಲ್ಜಾರ್ ಎತ್ತಿದ ಕೈ. ಆವರ ಹೊಸ-ಹಳೆಯ ೧೦೦ ಹಾಡುಗಳ ಸಾಹಿತ್ಯ ಮತ್ತು ಅದರ ಇಂಗ್ಲೀಷ್ ಅನುವಾದ ಈ ಪುಸ್ತಿಕೆಯಲ್ಲಿದೆ. ಮಳೆ ಬರುವಾಗ, ಮೋಡವಿದ್ದಾಗ, ಎಲ್ಲೋ ಪಯಣಕ್ಕೆ ಹೊರಟಿದ್ದಾಗ, ಬೇಸರದ ಸಂಜೆಯಲ್ಲಿ- ಹೀಗೆ ಯಾವಾಗಲಾದರೂ ಯಾವ ಪುಟವಾದರೂ ತೆರೆದು ಗುಲ್ಜಾರ್ ಲೋಕದೊಳಕ್ಕೆ ನುಗ್ಗಿ ಹೋಗಲು ಈ ಪುಸ್ತಕ ಸಹಾಯ ಮಾಡುತ್ತದೆ. ಹೊಸದೊಂದು ಭಾವ ಲೋಕಕ್ಕೆ ನಿಮ್ಮನ್ನು ಹೊತ್ತೊಯ್ಯುತ್ತದೆ.

೪. Selfie ವಿಥ್ ಲೈಫ್ (ವ್ಯಕ್ತಿತ್ವ ವಿಕಸನ ಲೇಖನಮಾಲೆ) – ವಿಶ್ವೇಶ್ವರ ಭಟ್

ಎಲ್ಲೂ ಬೋರಾಗದಂತೆ ಲೇಖನ ಬರೆಯುವುದರಲ್ಲಿ ವಿಶ್ವೇಶ್ವರ ಭಟ್ ಬತ್ತದ ತೆನೆ. ಈ ಲೇಖನಮಾಲೆಯಲ್ಲೂ ಬದುಕು ತಿದ್ದಿಕೊಳ್ಳಬೇಕನ್ನಿಸುವ ಬಹಳಷ್ಟು ವಿಚಾರಧಾರೆಯಿದೆ. ಮಧ್ಯೆ ಮಧ್ಯೆ ಜೋಕುಗಳು, ನೋಟ್ ಮಾಡಿಕೊಳ್ಳಬೇಕು ಅನ್ನಿಸುವಂಥ ಕೆಲ ಪಾಯಿಂಟ್ಸ್ ಗಳು ಹೀಗೆ ಓದಿಸಿಕೊಳ್ಳುತ್ತಾ ಹೋಗುವುದರ ಜೊತೆಗೆ ನಮ್ಮ ಬದುಕನ್ನು ನಾವು ನೋಡಿಕೊಳ್ಳಬೇಕು ಅನ್ನಿಸುವ ಸೆಲ್ಫ್ ಹೆಲ್ಪ್ ಪುಸ್ತಕ (ಅಥವಾ ಸೆಲ್ಫೀ ಪುಸ್ತಕ?) ಇದು.

೫. ಜಯಂತ ಕಾಯ್ಕಿಣಿಯವರ ಕಥನಾವರಣ – ಡಾ ಮಮತಾ ರಾವ್

ಕಾಯ್ಕಿಣಿ ಕಥಾಜಗತ್ತು ಎಲ್ಲರಿಗೂ ಗೊತ್ತಿರುವಂತೆ ಅನನ್ಯ ಮತ್ತು ವಿಶಿಷ್ಟ. ಸಂಬಂಧದೊಳಗಿನ ಸಂಕೀರ್ಣತೆಯನ್ನು ಅವರದ್ದೇ ಆದ ಆಪ್ತ ಶೈಲಿಯಲ್ಲಿ, ಅಪರೂಪದ ರೂಪಕಗಳ ಮೂಲಕ ನಮಗೆ ದಾಟಿಸುವ ಅವರ ಕಥಾನಕ ಅದ್ಭುತವಾದ್ದು. ಅವರ ಕಥನಾ ಲೋಕವನ್ನು ಪರಿಚಯಿಸುವ ಆಸಕ್ತಿಕರ ವಿಷಯವನ್ನು ಈ ಪುಸ್ತಕ ಪ್ರತಿನಿಧಿಸುತ್ತದೆ. ಮುಂಬೈಯ ಕಥೆಗಳು, ಗೋಕರ್ಣದ ಹಿನ್ನೆಲೆಯಿರುವ ಕಥೆಗಳು ಮತ್ತು ಕಾಯ್ಕಿಣಿಯವರೊಡಗಿನ ಸಂವಾದ -ಇಂಥ ವಿಷಯ ಇರುವ ಈ ಪುಸ್ತಕ ತುಂಬಾ ಇಷ್ಟವಾಯಿತು.

೬. ಸರಸ (ಲಲಿತ ಪ್ರಬಂಧಗಳ ಸಂಕಲನ)- ಈಶ್ವರಯ್ಯ

ತರಂಗದಲ್ಲಿ ಲೇಖನಮಾಲೆಯಾಗಿ ಬರುತ್ತಿದ್ದ ಸಮಯದಲ್ಲೇ ನನ್ನ ತಂದೆಯವರಿಗೆ ತುಂಬಾ ಇಷ್ಟವಾಗಿದ್ದ ಬರಹಗುಚ್ಚವಿದು. ಅಪ್ಪ ಇದರ ಕುರಿತು ಮಾತನಾಡುತ್ತಿದ್ದು ಈಗಲೂ ನೆನಪಿನ ಪದರದಲ್ಲಿ ಅಚ್ಚಳಿಯದೇ ಉಳಿದಿದೆ. ತುಂಬಾ ಲೈಟ್ ಆಗಿ ಓದಬೇಕಾದ ಖುಷಿಕೊಡುವ ಪುಟ್ಟ ಪುಟ್ಟ ಲೇಖನಗಳಿಂದ ಈ ಪುಸ್ತಕ ಕೂಡಿದೆ.

೭. ರಸವಾದಿ (ಅಲ್ಕೆಮಿಸ್ಟ್ ಪುಸ್ತಕದ ಅನುವಾದ) – ಅಬ್ದುಲ್ ರಹೀಮ್ ಟೀಕೆ

ಆಲ್ಕೆಮಿಸ್ಟ್ ಮೂಲ ಪುಸ್ತಕವನ್ನು ಓದದೇ ಸೀದಾ ಕನ್ನಡ ಅನುವಾದವಾದ ರಸವಾದಿ ಓದಿದೆ. ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಜನಪ್ರಿಯವಾದ, ತುಂಬಾ ಜನರ ಬದುಕಿನ ಪ್ರೀತಿಯನ್ನು ನಾವೀನ್ಯಗೊಳಿಸಿದ ಇತಿಹಾಸವಿರುವ ಈ ಪುಸ್ತಕದ ಬಗ್ಗೆ ಇನ್ನೇನು ಹೇಳಲಾದೀತು.

೮. ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ (ಕಾದಂಬರಿ) – ನಾ. ಡಿಸೋಜಾ

೨೦೦೮ ಕ್ಕೆ ನನ್ನ ಮೊದಲ ವಿದೇಶ ಪಯಣಕ್ಕೆ ಗೆಳೆಯನೊಬ್ಬ ನೀಡಿದ್ದ ಉಡುಗೊರೆಯಾಗಿದ್ದ ಈ ಪುಸ್ತಕ ನನ್ನ ಲೈಬ್ರೆರಿಯಲ್ಲಿ ಒಂದು ಸುಂದರ ಓದಿಗಾಗಿ ಕಾಯುತ್ತಾ ಕುಳಿತಿತ್ತು. ಬರೋಬ್ಬರಿ ೮ ವರ್ಷದ ನಂತರ ಕೈಗೆತ್ತಿಕೊಂಡು ಓದಿ ಮುಗಿಸಿದಾಗ, ಛೇ, ಮೊದಲೇ ಓದಬೇಕಾಗಿತ್ತಲ್ಲ ಅನ್ನಿಸಿಬಿಟ್ಟಿತ್ತು.

img_20170212_135900

೯. ನನ್ನಿಷ್ಟ – ರಾಮ್ ಗೋಪಾಲ್ ವರ್ಮಾ (ಕನ್ನಡಕ್ಕೆ : ಸೃಜನ್)

ರಾಮ್ ಗೋಪಾಲ್ ವರ್ಮಾ ಬ್ಲಾಗ್ ಓದುತ್ತಾ ಅವರ ಬರಹದ್ದೂ, ಚಿಂತನಾ ವಿಧಾನದ್ದೂ ಅಭಿಮಾನಿಯಾಗಿದ್ದ ನನಗೆ ಈ ಪುಸ್ತಕ ಕನ್ನಡಕ್ಕೆ ಬಂದಿದ್ದು ತುಂಬಾ ಸಂತಸ ಕೊಟ್ಟಿತ್ತು. ಒಂದೇ ಸಿಟ್ಟಿಂಗ್ ನಲ್ಲಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದ್ದೂ ಆಗಿತ್ತು. ಇನ್ನೊಂದು ಸಲ ಓದಬೇಕೆಂದರೂ ಬೇಸರ ಮೂಡಿಸದು.

img_20170212_135841

೧೦. Eat that Frog – Brian Tracy

ಸಮಯ ಬೆರಳ ನಡುವಿನ ಮರಳಿನಂತೆ ಜಾರಿಹೋಗಬಾರದೆಂದರೆ, ನಾವು ಅಂದುಕೊಂಡ ಕೆಲಸವನ್ನು ಅಂದುಕೊಂಡ ಸಮಯಕ್ಕೆ ಮುಗಿಸಬೇಕೆಂದರೆ ಏನು ಮಾಡಬೇಕು ಅನ್ನುವ ಸರಳ ತಂತ್ರಗಳನ್ನು ಈ ಪುಸ್ತಕ ಕಲಿಸಿಕೊಟ್ಟಿತು. ತುಂಬ ಹಳೆಯ ಪುಸ್ತಕವಾದರೂ ನನ್ನ ಮರು ಓದಿಗೆ ದಕ್ಕಿದ್ದು, ವಿಚಾರ ಒಳಗಿಳಿದದ್ದು ಕಳೆದ ವರ್ಷವೇ.

ಇತ್ತೀಚೆಗೆ ಓದಿದ ಪುಸ್ತಕಗಳಲ್ಲಿ ನನ್ನನ್ನು ತುಂಬಾ ಬದಲಾಯಿಸಿದ ಪುಸ್ತಕದ ಕುರಿತು ಹೇಳಬೇಕನ್ನಿಸುತ್ತಿದೆ. ರುಜುತಾ ದಿವೇಕರ್ ಬರೆದಿರುವ ಡೋಂಟ್ ಲೂಸ್ ಯುವರ್ ಮೈಂಡ್, ಲೂಸ್ ಯುವರ್ ವೆಯ್ಟ್ – ಅನ್ನುವುದು ಆ ಪುಸ್ತಕದ ಹೆಸರು. ಕಮರ್ಷಿಯಲ್ ದೃಷ್ಟಿಯಿಂದ ಪುಸ್ತಕದ ಶೀರ್ಷಿಕೆ ತೂಕ ಇಳಿಸುವ ಬಗ್ಗೆ ಇದ್ದರೂ, ಪುಸ್ತಕದ ಒಳಗೆ ಆರೋಗ್ಯಕರವಾದ ಬದುಕನ್ನು ಕಟ್ಟಿಕೊಳ್ಳುವ ವಿಚಾರವನ್ನು ಬಹಳ ಸರಳವಾಗಿ, ತರ್ಕಬದ್ಧವಾಗಿ ಮಂಡಿಸುತ್ತಾರೆ ರುಜುತಾ. ಕರೀನಾ ಕಪೂರ್ ಗೆ ಡಯಟಿಷಿಯನ್ ಆಗಿ, ಆಕೆಯ ಜೀರೋ ಸೈಜ್ ಗೆ ಕಾರಣೀಭೂತರಾಗಿದ್ದುದರಿಂದ ಒಮ್ಮಿಂದೊಮ್ಮಲೆ ಪ್ರಸಿದ್ಧಿ ದೊರಕಿದರೂ, ಆಕೆಯ ಥಿಯರಿಗಳು ತುಂಬಾ ಸುಲಭ ಸಾಧ್ಯವಾದುದು. ಎಲ್ಲ ವರ್ಗದ ಜನರೂ ಆರಾಮಾಗಿ ಪಾಲಿಸಬಲ್ಲಂಥದ್ದು.

ಪುಸ್ತಕ ಓದಿ ಅಂತ ಹೇಳುತ್ತಲೇ ಆಕೆಯ ಕೆಲ ಮುಖ್ಯ ಥಿಯರಿಯನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ಇನ್ನಷ್ಟು ವಿವರಗಳಿಗೆ ಕಾಪಿ ರೈಟ್ ಸಮಸ್ಯೆಯ ಕಾರಣ ನೀವು ಪುಸ್ತಕದ ಮೊರೆ ಹೋಗಬೇಕಾಗುತ್ತದೆ.

don-t-lose-your-mind-lose-your-weight-400x400-imadaryhavfhdnfv

೧. ಬೆಳಿಗ್ಗೆ ಎದ್ದ ಹತ್ತು ಹದಿನೈದು ನಿಮಿಷದಲ್ಲಿ ಹಣ್ಣು, ಡ್ರೈ ಫ್ರೂಟ್ಸ್ ಇಂತದ್ದೇನಾದರೂ ತಿನ್ನಬೇಕು. ಎದ್ದ ಕೂಡಲೇ ಕಾಫಿ ಮತ್ತು ಟೀ ಮಾತ್ರ ಯಾವ ಕಾರಣಕ್ಕೂ ಸಲ್ಲದು. ಕಾಫಿ ಇಲ್ಲದೇ ಬಾಳಲಾಗದವರು, ಎರಡನೇ ಉಪಹಾರದ ನಂತರ ಕಾಫಿ ಸೇವಿಸಬಹುದು.
೨. ದಿನವಿಡೀ ೨ ಅಥವಾ ಮೂರು ಘಂಟೆಗೊಮ್ಮೆ ಸ್ವಲ್ಪ ಆಹಾರ ಸೇವಿಸಬೇಕು. ಅಂದರೆ ಬೆಳಿಗ್ಗೆ ಉಪಹಾರಕ್ಕೆ ಏನು ತಿನ್ನುತ್ತೀರೋ ಅದರ ಅರ್ಧದಷ್ಟನ್ನು ಎರಡು ಬಾರಿ ಎರಡು ಗಂಟೆ ಗ್ಯಾಪ್ ನಲ್ಲಿ ತಿನ್ನುವುದು. ದಿನವಿಡೀ ಕಡಿಮೆ ಆಹಾರವನ್ನು, ಸಮಯದ ಗ್ಯಾಪ್ ಇಟ್ಟು, ಹೆಚ್ಚು ಬಾರಿ ಸೇವಿಸಬೇಕು.
೩. ದಿನದಲ್ಲಿ ನೀವು ಹೆಚ್ಚು ಆಕ್ಟಿವ್ ಆಗಿರುವಂಥ ಸಮಯದಲ್ಲಿ ಹೆಚ್ಚು ತಿನ್ನುವುದು, ಕಡಿಮೆ ಆಕ್ಟಿವಿಟಿ ಇರುವಾಗ ಕಮ್ಮಿ ತಿನ್ನುವುದು.
೪. ರಾತ್ರಿ ಮಲಗುವ ಎರಡು ಅಥವಾ ಮೂರು ಗಂಟೆ ಮುಂಚಿತವಾಗಿ ರಾತ್ರಿಯೂಟವನ್ನು ಮಾಡುವುದು.

ಇಷ್ಟೇ ಸಿಂಪಲ್ ಆದ ಪಾಯಿಂಟ್ಸ್ ಗಳು ಈ ಪುಸ್ತಕದ ಜೀವಾಳ. ಇದನ್ನು ಯಾಕೆ ಮಾಡಬೇಕು, ಮಾಡುವುದರಿಂದ ಪ್ರಯೋಜನವೇನು ಎಂಬುದನ್ನು ರುಜುತಾ ವಿವರಿಸಿದ್ದಾರೆ. ಜೊತೆಗೆ ಎಂಥೆಂಥ ಆಹಾರವನ್ನು ಸೇವಿಸಬಹುದು, ಸೇವಿಸಬಾರದು ಎಂಬದರ ಬಗ್ಗೆ ಕೂಲಂಕಷ ವಿವರಣೆ ಸಿಗುತ್ತದೆ. ಆಹಾರದ ಜೊತೆಗೆ ವಾರಕ್ಕೆ ಕಡಿಮೆ ಅಂದರೆ ಮೂರು ಗಂಟೆಗಳ ಕಾಲ ವ್ಯಾಯಾಮ ಅಗತ್ಯ. ಇದಕ್ಕೆ ಮಾತ್ರ ಯಾವ ಶಾರ್ಟ್ ಕಟ್ ಇಲ್ಲ ಅಂತ ಖಡಾಖಂಡಿತವಾಗಿ ಹೇಳುವ ರುಜುತಾರ ಮತ್ತೊಂದು ಪುಸ್ತಕ ವ್ಯಾಯಾಮದ ಬಗ್ಗೆಯೇ ಇದೆ.

*****

ಮೊನ್ನೆ ಸುಚಿತ್ರಾ ಫಿಲಂ ಸೊಸೈಟಿ ಅಂಗಳದಲ್ಲಿ ಯೋಗರಾಜ್ ಭಟ್ ರ ಜೊತೆ ಸಂವಾದವಿತ್ತು. ಈ ಸಂವಾದಕ್ಕೂ ಮೊದಲು ಅವರ ಉಢಾಫೆ ಪ್ರವೃತ್ತಿಯಿಂದಾಗಿ ಅವರ ಬಗ್ಗೆಯೇ ನನ್ನೊಳಗೆ ಒಂದು ಉಢಾಫೆ ಮನೆಮಾಡಿತ್ತು. ಅವರ ಆ ಎರಡು ಗಂಟೆಯ ಸಂವಾದದ ಬಳಿಕ ಅವರ ಬಗ್ಗೆ ಇದ್ದ ಪೂರ್ವಗ್ರಹ ಹೊರಟು ಹೋಯಿತು. ಯೋಗರಾಜ್ ಭಟ್ ಯಾವುದೇ ಪ್ಲಾನ್ ಇಟ್ಟುಕೊಂಡು ಮಾತಾಡುವುದಿಲ್ಲ. ಆ ಕ್ಷಣ ಅನ್ನಿಸಿದ್ದನ್ನು, ಒಂಚೂರು ತನ್ನ ಮೇಲೆ ತಾನೇ ವ್ಯಂಗ್ಯವಿಟ್ಟುಕೊಂಡು, ತೆಳು ಹಾಸ್ಯದ ಲೇಪದ ಮೂಲಕ ನಿಶ್ಕಲ್ಮಷವಾಗಿ ಹೇಳಿಬಿಡುತ್ತಾರೆ. ಇನ್ನೊಂದು ಅರಿವಾದ ವಿಚಾರವೆಂದರೆ ಅವರ ಓದಿನ ಹರವು ವಿಸ್ತಾರವಾಗಿದೆ. ಬಹುಶಃ ಇದುವರೆಗೂ ಚಿತ್ರರಂಗದಲ್ಲಿ ಗಟ್ಟಿಯಾಗಿ ತಮ್ಮ ಛಾಪನ್ನು ಉಳಿಸಿಕೊಳ್ಳಲು ಅವರ ಸಾಹಿತ್ಯಾಭಿರುಚಿಯೇ ಕಾರಣವಿರಬೇಕು. ಚಿತ್ರಗೀತೆ ಬರೆಯುವಾಗ ಎಂಥ ಎಬುಡ ತಬುಡ ಪ್ರಯೋಗಗಳ ಮಾಡಲು, ಕಾರಣ ಕನ್ನಡ ವ್ಯಾಕರಣದ ಜ್ಞಾನ, ಬೇರೆ ಬೇರೆ ಧಾಟಿಯ ಕನ್ನಡದ ಮೇಲಿನ ಹಿಡಿತ, ಸಾಹಿತ್ಯ ಬಲ್ಲ ಆತ್ಮವಿಶ್ವಾಸವೇ ಅನ್ನುವುದು ಅರಿವಾಗ್ತದೆ.

ಅವರು ಆ ದಿನ, ಈ ಮುಖ್ಯವಾದ ವಿಚಾರಗಳ ಕುರಿತು ಮಾತಾಡಿದರು (ಅವರು ಹೇಳೋ ಶೈಲಿ ಬೇರೆ, ಅದರ ಸಾರ ಮಾತ್ರ ಇಲ್ಲಿದೆ) :-
~ ಸಿನಿಮಾ ಅಂದರೆ ನನಗೆ ಯಾವಾಗಲೂ ಎರಡು ಘಟನೆಗಳು ಕಾಡುತ್ತದೆ. ಒಮ್ಮೆ ಒಂದು ಸಾಹಿತ್ಯ ಸಭೆಯಲ್ಲಿ ಲೇಖಕರೊಬ್ಬರು ಸಾಹಿತ್ಯದ ಕುರಿತು ಭೀಷಣವಾಗಿ ಭಾಷಣ ಮಾಡುತ್ತಿದ್ದರು. ಬಹುಶಃ ಭಾಷಣದ ಓಘದಲ್ಲಿ ಮೈಮರೆತು ಸಾಹಿತ್ಯವನ್ನು ಓದಿಕೊಳ್ಳದವನು ಮನುಷ್ಯನೇ ಅಲ್ಲ ಎಂದು ಬಿಟ್ಟರು. ಅಲ್ಲಿ ಕೂತಿದ್ದ ಮುದುಕನಿಗೆ ಅದು ನೋವುಂಟು ಮಾಡಿರಬೇಕು, ಸರ…ಒಂದ್ನಿಮಿಷರೀ..ಅಂದ. ಸಭೆ ಅವರತ್ತ ತಿರುಗಿತು. ಅವರು ಎದ್ದು ನಿಂತು ಅಲ್ಲಾ.. ಈ ಸಾಹಿತ್ಯ ಪಾಹಿತ್ಯ, ಕಥೀ ಪಥೀ ಓದ್ಲಿಲ್ಲಾ ಅಂದ್ರೆ ಮನುಷ್ಯಾನೇ ಅಲ್ಲ ಅಂತೀರಲ್ರೀ.. ನಾನಾಗ್ಲೀ, ನಮ್ಮಪ್ಪನಾಗ್ಲೀ, ನಮ್ಮ ದೊಡ್ಡಪ್ಪ, ನಾವು ಏಳು ಜನ ಅಣ್ಣತಮ್ಮಂದಿರಿದೀವು.. ಯಾರೂ ಇದುವರೆಗೂ ಒಂದ್ ಪೇಜೂ ಓದಿಲ್ಲ.. ನಾವ್ ಮನುಷ್ಯರು ಹೌದೋ ಅಲ್ಲೋ..? ಅಂತ ಕೇಳಿಯೇ ಬಿಟ್ಟರು.

index-yograj
ಇನ್ನೊಂದು ನಾಗತಿಹಳ್ಳಿಯವರ ಸಿನಿಮಾ ಕ್ಲಾಸ್ ನಲ್ಲಿ ನಡೆದದ್ದು -ಅದರ ಸಾರಾಂಶ ಎಂದರೆ, ಸಿನಿಮಾ ಎಂದರೇನು ಅನ್ನೊ ಪ್ರಶ್ನೆ ಬಂದಾಗ, ಭಟ್ಟರು ಹೇಳಿದ್ದು ಸಿನಿಮಾ ಅನ್ನುವುದು ಕೆಲಸವಿಲ್ಲದವರು ಮಾಡುವ ಕೆಲಸ ಅಂತ. ಕೊನೆಗೆ ಅದನ್ನು ವಿವರಿಸಲೇಬೇಕಾಗಿ ಬಂದಾಗ, “ನೀವು ಸಿನಿಮಾ ನೋಡಲು ಹೋಗಬೇಕಾಗಿ ಬಂದಾಗ, ಎಕ್ಸಾಮ್ ಇದ್ರೆ ಹೋಗಲ್ಲ, ಆಫೀಸಿನಲ್ಲಿ ಏನಾದ್ರೂ ಇಂಪಾರ್ಟೆಂಟ್ ಕೆಲ್ಸ ಇದ್ರೆ ಹೋಗಲ್ಲ, ಹತ್ತಿರದವರ್ಯಾದರೂ ತೀರ್ಕೊಂಡಿದ್ದಾಗ ಹೋಗಲ್ಲ, ಹೀಗೆ ಐದಾರು ಘಂಟೆ ಫ್ರೀ ಇದ್ದಾಗ ಮಾತ್ರ ಸಿನಿಮಾ ನೋಡೋದು ಅನ್ನೋದು ನಡೆಯುತ್ತೆ. ಹೀಗಿದ್ದಾಗ ಸಿನಿಮಾ ಅನ್ನೋದು ಕೆಲಸವಿಲ್ಲದವರು ನೋಡುವ, ಮತ್ತಷ್ಟು ಕೆಲಸ ಇಲ್ಲದವನೇ ಮಾಡೋ ಕೆಲಸ ಅನ್ನುವುದನ್ನು ಹಾಸ್ಯವಾಗಿ, ವಿಡಂಬನೆಯಿಂದ ತನ್ನನ್ನು ತಾನೇ ಗೇಲಿ ಮಾಡಿಕೋತಾ ವಿವರಿಸಿದ್ರು.
~ ಯಾವ ಯಾವ ಭಾಷೆಯಲ್ಲಿ ಸಾಹಿತ್ಯ ಸಮೃದ್ಧವಾಗಿದೆಯೋ ಅಲ್ಲಿ ಚಿತ್ರರಂಗ ತುಂಬಾ ದುರ್ಬಲವಾಗಿರುತ್ತದೆ (ಕಮರ್ಷಿಯಲ್ಲೀ). ಇದಕ್ಕೆ ಕನ್ನಡ, ಬೆಂಗಾಳೀ, ರಾಜಸ್ಥಾನೀ ಭಾಷೆಗಳು ಉದಾಹರಣೆ.
~ ಕನ್ನಡ ಚಿತ್ರಗಳನ್ನು ನೋಡುವವರು ಬಹುತೇಕ ಹದಿನಾರರಿಂದ ಇಪ್ಪತ್ತೈದು ವಯಸ್ಸಿನವರು. ಅವರು ಮೊದಲು ನೋಡಿ, ಅವರಿಗಿಷ್ಟ ಆದರೆ ಮಾತ್ರ ಅವರ ಅಪ್ಪ ಅಮ್ಮ, ಅಂಕಲ್ ಆಂಟಿ, ಅಕ್ಕ ಭಾವ ನೋಡೋಕೆ ಬರ್ತಾರೆ. ಹಾಗಾಗಿ ನನ್ನ ಸಿನಿಮಾ ಅವರನ್ನು ಓಲೈಸುವ ಹಾಗಿರುತ್ತದೆ. ಅದು ಈಗಿನ ಮಾರುಕಟ್ಟೆಯ ಅವಶ್ಯಕತೆ ಕೂಡ.
~ ಎಲ್ಲರೂ ಒಳ್ಳೆ ಸಿನಿಮಾ ಮಾಡಿ, ಒಳ್ಳೇ ಕಥೆ ಬರೀರಿ ಅಂತಾರೆ. ಮಾಡಿದರೆ ನೋಡಲ್ಲ. ಬರೆದರೆ ಓದಲ್ಲ.

~ ನಾನು ಕಥೆಯನ್ನು ಪಾತ್ರಗಳ ಮೂಲಕ ಹೇಳಲು ಬಯಸ್ತೇನೆ. ನಂಗೆ ಸಿನಿಮಾ ಮಾಡಲು ಒಂದೊಳ್ಳೆ ಪಾತ್ರ ಸಿಕ್ಕರೆ ಸಾಕು. ಇದು ತಪ್ಪು ಅಂತ ಗೊತ್ತು. ಇಲ್ಲಿ ಸಿನಿಮಾ ಮಾಡಬಯಸುವ ನಿರ್ದೇಶಕರಿಗೆ ಹೇಳೋದು ಒಳ್ಳೆ ಕಥೆ ಇಟ್ಕೊಂಡು ಸಿನಿಮಾ ಮಾಡಿ.

ಇನ್ನಷ್ಟು ಒಳ್ಳೆಯ ಸಂವಾದ ಅಲ್ಲಿ ನಡೆಯಿತು. ಮೆದುಳಿಗೆ ಒಳ್ಳೆ ಮೇವು ದೊರಕಿಂದಂತೆ ಸಂತೃಪ್ತಿಯಿಂದ ಹೊರಬಂದೆ.

ಲೈಬ್ರೆರಿಯ ಕಪಾಟಿನಲ್ಲಿ ಜೋಡಿಸಲ್ಪಟ್ಟಿರುವ ಪುಸ್ತಕಕ್ಕೆ ತನ್ನದೇ ಅಪ್ಯಾಯವಾದ ವಲಯವೊಂದಿದೆ. ಅದು ತನ್ನದೇ ಆದ ವಿಶಿಷ್ಟ ಪ್ರಪಂಚ ಹೊಂದಿದೆ. ಯಾರಾದರೂ ಒಮ್ಮೆ ಅದರೆಡೆಗೆ ಹೋಗಿ ಇಸ್ಪೀಟೆಲೆಯೊಂದನ್ನು ಎತ್ತುವಂತೆ ಪುಸ್ತಕವೊಂದನ್ನು ತೆರೆದರೆ ಸಾಕು, ಆತನನ್ನು ತನ್ನ ಪ್ರಪಂಚಕ್ಕೆ ಕೈ ಹಿಡಿದು ಎಳೆದೊಯ್ಯುತ್ತದೆ. ಪುಸ್ತಕದ ಮುಖಪುಟದಲ್ಲಿರುವ ಹೆಸರಿನ ಜೊತೆಗೆ, ಅದರ ಅಕ್ಷರದ ವಿನ್ಯಾಸ ಕೂಡ ಆ ಪ್ರಪಂಚದ ಬಾಗಿಲಿನ ಕೀಲಿಕೈ. ಒಳಪುಟಗಳ ಕಲೆ, ಚಿತ್ರಗಳು ಆ ಪ್ರಪಂಚದ ಕಿಟಕಿಯಾದೀತು. ಮತ್ತು ಅಲ್ಲಿಂದ ಒಳಬರುವ ಬೆಳಕಲ್ಲಿ ಓದುಗನ ಪ್ರಪಂಚ ಇನ್ನಷ್ಟು ಸ್ಪಷ್ಟ, ಇಷ್ಟವಾದೀತು.

ಪುಟ ತೆರೆದಾಗ ಅಲ್ಲಿ ಅರಳುವ ಗಂಧ ಬೇರೆಲ್ಲಿಯೂ ಸಿಗದು, ಆ ಪರಿಮಳಕ್ಕಾಗಿ ನೀವು ಲೈಬ್ರೆರಿಯ ತೋಟಕ್ಕೇ ಹೋಗಬೇಕಾಗುತ್ತದೆ. ಈ ವಿಶಿಷ್ಟ ಪರಿಮಳದ ಜೊತೆಗೆ ಯಾವುದಾದರೂ ಪುಸ್ತಕ ಓದಿ ಅದರ ಭಾವಗಳನ್ನು ಮನಸ್ಸಿಗೆ ಉದ್ದೀಪ್ತಗೊಳಿಸಿದರೋ ಅದೊಂದು ಮುದ್ರೆಯಂತೆ ಮನಸ್ಸಿನಲ್ಲೇ ಉಳಿದುಬಿಡುತ್ತದೆ. ಮೆದುಳ ಪದರದೊಳಗೆ ಪರಿಮಳದ ಜೊತೆಗೆ ಓದಿದ ಭಾವವೂ ಲಾಕ್ ಆಗಿರುತ್ತದೆ. ಎಷ್ಟೋ ವರ್ಷಗಳ ನಂತರ ನೀವು ಆ ಪುಸ್ತಕ ಓದಬೇಕಿಲ್ಲ, ಸುಮ್ಮನೆ ಆ ಪರಿಮಳವನ್ನು ಮತ್ತೆ ಹಾಯ್ದರೂ ಸಾಕು, ಫಕ್ಕನೆ ಮಾಯಾದೀವಿಗೆಯಿಂದ ಹೊರಬಂದ ಜೀನಿಯಂತೆ ಯಾವತ್ತೋ ಓದಿದ ಭಾವ ಎದುರು ಬಂದು ನಿಲ್ಲುತ್ತದೆ. ಭಾವನೆಗೂ ಸುಗಂಧಕ್ಕೂ ಸಂಬಂಧವಿರುವುದು ಅರಿವಾಗುವುದು ನವಿರು ಪುಟವನ್ನು ಬೆರಳು ಪ್ರೀತಿಯಿಂದ ಸವರಿದಾಗಲೇ.

ಲೈಬ್ರೆರಿಯ ಮೌನದಲ್ಲಿ ಜ್ಞಾನದ ಅಲೆಗಳು ಓಡಾಡುತ್ತಿರುತ್ತದೆ. ಅಲ್ಲಿನ ಮೌನಕ್ಕೆ ದೇವಸ್ಥಾನದ ಭಕ್ತಿಯ ಲೇಪವಿದೆ. ಅದಕ್ಕೆ ಅದರದ್ದೇ ಆದ ಆಲಾಪವಿದೆ. ಕಿಟಕಿಯಾಚೆ ಹೆಸರಿಲ್ಲದ ಹಕ್ಕಿಯೊಂದು ಎಸೆದು ಹೋದ ಶಬ್ದಕೆ ಲೈಬ್ರೆರಿಯ ಮೌನ ವಿಚಲಿತವಾಗುವುದಿಲ್ಲ. ಒಂದು ವೇಳೆ ಈ ಲೋಕದ ಮೌನದ ಫ್ಲವರ್ ವಾಸ್ ಫಳ್ಳಂತ ಒಡೆಯುವುದು ನೋಡಲೇಬೇಕಾದರೆ ನಿರ್ವಾಹಕನನ್ನು ಗಮನಿಸಬೇಕಾಗುತ್ತದೆ. ಮೆತ್ತನೆ ಹತ್ತಿಯಂಥ ಧ್ವನಿಯಲ್ಲಿ ಮಾತಾಡಿಸಿದರೂ ಆತ ಮಾತ್ರ ತನ್ನ ಉತ್ತರವನ್ನು ಎತ್ತರದ ದನಿಯ ಗತ್ತಿನಲ್ಲೇ ನೀಡುತ್ತಾನೆ. ಸದ್ದಿಲ್ಲದ ಲೋಕದಲ್ಲಿ ಮುಳುಗಿದ ಓದುಗರು ಒಮ್ಮೆ ತಲೆಯೆತ್ತಿ ತನ್ನ ನೋಡುವರು ಅನ್ನುವ ಹೆಮ್ಮೆಯೊಂದು ಆತನ ಓರೆನೋಟದ ಎಡೆಯಲ್ಲಿರುತ್ತದೆ. ಇನ್ನು ರಸ್ತೆಯ ವಾಹನಗಳ ಹಾರ್ನಿನ ಸದ್ದು, ಕಾಲೇಜು ಯುವಕನ ಗಾಡಿಯ ಹೈ ವೀಲಿಂಗ್ ನ ಸದ್ದು, ಪಕ್ಕದಲ್ಲಿರುವ ಮೈದಾನದ ಕ್ರಿಕೆಟ್ಟಿನಲ್ಲಿ ವಿಕೆಟ್ಟು ಬಿದ್ದುದಕ್ಕೆ ಮೂಡುವ ಉದ್ಘೋಷದ ಸದ್ದುಗಳೆಲ್ಲವು ಲೈಬ್ರೆಯ ಸರಹದ್ದಿನಲ್ಲಿರುವ ಲಕ್ಷ್ಮಣ ರೇಖೆ ದಾಟಿಬಂದರೂ ಅದು ಮಹತ್ವವಿಲ್ಲದೇ ಹೋಗುವ ಮಾಯಾಲೋಕ ಇಲ್ಲಿ ಸೃಷ್ಟಿಯಾಗಿರುತ್ತದೆ. ಇನ್ನು, ಎಲ್ಲೋ ಲೇಖಕನ ಪೆನ್ ಡ್ರಾಪ್ ಸೈಲೆನ್ಸ್ ನಿಂದ ಮೂಡಿದ ಅರ್ಥದ ಸದ್ದು, ಇಲ್ಲಿನ ಪಿನ್ ಡ್ರಾಪ್ ಸಿಲೆನ್ಸಿನಲ್ಲಿ ಸ್ಪಷ್ಟವಾಗಿ ಕೇಳಬಹುದು. ಲೈಬ್ರೆರಿಯ ನಿರ್ವಾಹಕ, ಸೈಲೆನ್ಸ್ ಪ್ಲೀಸ್ ಎಂದು ಬರೆದು ಹಾಕಿದ ಬೋರ್ಡು ಗಾಳಿಗೆ ಅಲುಗಿ ಮಾಡುವ ಸದ್ದು ಸಹಿಸಿದರೂ, ಪುಟ್ಟ ಪಿಸುಗುಟ್ಟುವಿಕೆಗೆ ಭುಸುಗುಟ್ಟಬಲ್ಲ.

ಬಹುತೇಕ ಎಲ್ಲಾ ಲೈಬ್ರೆರಿಯ ಓದುಗರಲ್ಲೂ ಒಬ್ಬ ಒಂದು ಸಾಲಿನ ವಿಮರ್ಶಕ ಇದ್ದೇ ಇರುತ್ತಾನೆ. ಅವನು ಯಾವುದೋ ಗಲ್ಲಿಯ, ಯಾವುದೋ ಮನೆಯ, ಯಾವುದೋ ಕೋಣೆಯಲ್ಲಿ ಕುಳಿತೇ ಇಲ್ಲಿ ಲೈಬ್ರೆರಿಯ ಪುಸ್ತಕಗಳ ಕಪಾಟಿನ ಸಾಲುಗಳ ಮಧ್ಯೆ ಕಳೆದುಹೋದ, ಕನ್ ಫ್ಯೂಸ್ ಆದ ವ್ಯಕ್ತಿಗೆ ದಾರಿ ತೋರಬಲ್ಲ. ಇಷ್ಟಕ್ಕೂ ಅವನು ಮಾಡುವುದಿಷ್ಟೇ; ಓದಿದ ಪುಸ್ತಕಗಳಲ್ಲಿ this is a very good book ಅಂತ ಕುತ್ತಿಗೆ ಒತ್ತಿ ಬರೆಸಿರುವಂತಿರುವ ಕೈಬರಹದಲ್ಲಿ ಬರೆಯುತ್ತಾನೆ. ಹೀಗೆ ಯಾವ ಪುಸ್ತಕ ಆರಿಸಲಿ ಅಂತ ಲೈಬ್ರೆರಿಯ ಕಪಾಟಿನ ಸಾಲುಗಳ ಮಧ್ಯೆ ಕಳೆದುಹೋದ ಅಭಿಮನ್ಯುವಿಗೆ ದಾರಿ ತೋರಿಸಬಲ್ಲ.

ಇನ್ನೂ ಪುಸ್ತಕದ ಒಳದಾರಿಗಳಲ್ಲಿ ಹೋಗಿ ಇಂಥ ಒನ್ ಲೈನ್ ವಿಮರ್ಶೆಯನ್ನು ಓದುವ ವ್ಯವಧಾನವಿಲ್ಲದವರು ಮತ್ತೊಂದು ಮಾರ್ಗೋಪಾಯ ಕಂಡು ಹಿಡಿದಿದ್ದಾರೆ. ಅದು ಪುಸ್ತಕದ ಹಿಂಭಾಗದಲ್ಲಿ ಅಂಟಿಸಿರುವ ಚೀಟಿಯನ್ನು ಗಮನಿಸುವುದು. ಕೊನೆಯ ದಿನಾಂಕಗಳಿಂದಲೇ ಅರಳಿರುವ ಕೊನೆಯ ಪುಟವದು. ಒಂದು ಪುಸ್ತಕ ಊರಿನ ಒಂದು ಮೂಲೆಯ ಮನೆಯಲ್ಲಿನ ಕೋಣೆಯಿಂದ ಮುಕ್ತಿ ಪಡೆವ, ಮತ್ತೊಂದ್ಯಾವುದೋ ಕೋಣೆಯೊಳಗೆ ಹೋಗಲು ಅವಕಾಶಕ್ಕೆ ಅನುಮತಿ ಸಿಗುವ ದಿನಾಂಕಗಳವು. ಅವೇ ಪುಸ್ತಕದ ಪಾಲಿನ ಸ್ವಾತಂತ್ರ್ಯದಿನಗಳು. ಆ ಪುಟ ಪೂರ್ತಿ ದಿನಾಂಕಗಳೇ ತುಂಬಿದ್ದರೆ ಅಂಥ ಪುಸ್ತಕವನ್ನು ಹೆಚ್ಚು ಓದುಗರು ಕೊಂಡೊಯ್ದಿದ್ದಾರೆ ಹಾಗಿದ್ದಾಗ ಇದು ಬಹುಶಃ ಚೆನ್ನಾಗಿರುವ ಪುಸ್ತಕ ಅಂತಲೇ ಆತ ಭಾವಿಸುತ್ತಾನೆ. ಕೋಟ್ಯಾಧಿಪತಿಯಲ್ಲಿನ ಆಡಿಯೆನ್ಸ್ ವೋಟಿಂಗ್ ಮಾದರಿಯಲ್ಲಿ ಆ ಪುಸ್ತಕವನ್ನೇ ಆರಿಸಿ ಒಯ್ಯುತ್ತಾನೆ.ಇಂಥದ್ದೊಂದು ಉಪಾಯವನ್ನು ಕಂಡುಹಿಡಿದ ಅಂಥ ಓದುಗರನ್ನು ಲೈಬ್ರೆರಿಯೆಂಬ ಭೋಧನ ವೃಕ್ಷದ ಕೆಳಗೆ ಜ್ಞಾನೋದಯಗೊಂಡ ಬುದ್ಧರೆನ್ನಬಹುದು.

ಯಾವುದೋ ಒಂದು ಬೆಡ್ರೂಮಿನಲ್ಲಿ ಓದುತ್ತಾ ಓದುತ್ತಾ ಓದುಗ ಇನ್ನೇನು ಪುಸ್ತಕದ ಮೇಲೆಯೇ ಬಿದ್ದು ಬಿಡುತ್ತಾನೆ ಅನ್ನುವಾಗ ಪುಸ್ತಕಗಳಲ್ಲಿನ ಅಂಡರ್ ಲೈನ್ ಆಗಿರುವ ಸಾಲುಗಳು ಎಚ್ಚರಿಸುತ್ತದೆ. ಓದುತ್ತಿದ್ದೇನೆಂಬ ಭಾವದಲ್ಲಿದ್ದುಕೊಂಡು ಓದುವ ಭರದಲ್ಲಿ ಅರ್ಥದ ಹಳಿತಪ್ಪಿ ಸಾಗುವ ಓದುಗನನ್ನೂ ಇಂಥ ಅಡಿಗೆರೆಗಳು ಎಬ್ಬಿಸುತ್ತಿರುತ್ತದೆ. ಮತ್ತೆ ರಸದ ಹಳಿ ಮೇಲೆ ಯಾರದೋ ಅನುಭವವು ನಮ್ಮ ಅನುಭೂತಿಯಾಗಬಲ್ಲಂಥ ಗಮ್ಯದೆಡೆಗೆ ಸಾಗುವ ಉಮೇದು ಕೊಡುತ್ತದೆ.

ಹಾಗೇನೆ ಕೊನೆ ಪುಟದಲ್ಲಿನ ಸಸ್ಪೆನ್ಸ್ ಒಂದನ್ನು ಮೊದಲನೇ ಪುಟದಲ್ಲೇ ಬರೆವ ಚಾಳಿಗೂ ಓದುಗ ಸಿಲುಕಬೇಕಾಗುತ್ತದೆ. ಸಸ್ಪೆನ್ಸ್ ಸಿಕ್ಕಿದ ಸಿಟ್ಟಿನಲ್ಲೂ (ಏನಾದರೂ ಸಿಕ್ಕಿದರೂ ಸಿಟ್ಟಾಗುವ ಸಂಗತಿ ಬಹುಶಃ ಇದು ಒಂದರಲ್ಲೇ ಇರಬೇಕು!) ಓದುಗನಿಗೆ ಒಳಸುಳಿಯಲ್ಲಿ ಗಮ್ಯಕ್ಕಿಂತ ಗಮ್ಯದೆಡೆಗೆ ಸಾಗುವ ದಾರಿ ಕೂಡ ಮಹತ್ವದ್ದು ಎಂಬ ಪಾಠವೂ ಸಿಗುತ್ತದೆ. ಚೋಮನ ದುಡಿ, ಮಲೆಗಳಲ್ಲಿ ಮದುಮಗಳು ಪುಸ್ತಕದಲ್ಲಿ ಎಂಥ ಸಸ್ಪೆನ್ಸ್ ಇರುತ್ತದೆ, ಆದರೂ ಮತ್ತೆ ಮತ್ತೆ ಓದಿಸಿಕೊಳ್ಳಲು ಕಾರಣ ಅದು ಸೃಷ್ಟಿಸಿದ ಮಾಯಾಲೋಕ ಮತ್ತು ಅದು ವಿವರಿಸುವ ಜೀವನಕ್ರಮ, ನಿರೂಪಣೆಯ ವಿನ್ಯಾಸದಲ್ಲೇ ಇದೆ.

ಪುಸ್ತಕ ಸೃಷ್ಟಿಸಿದ ಮಾಯಾಲೋಕದೊಳಗೆ ಸಿಕ್ಕಿ ದಾರಿತಪ್ಪಿದವರ ಮತ್ತೆ ಕೆಲವುಸಲ ಓದಿನ ಹಾದಿಯಲ್ಲಿ ಸುಸ್ತಾದವರ ತಂಪಿನ ನೆಳಲಿನ ನೆನಪಿಗೆಂದೆ ಕೆಲವು ಪುಸ್ತಕಗಳಲ್ಲಿ ಕಿವಿಹಿಂಡಿದ ಪುಟಗಳಿರುತ್ತದೆ. ಆ ಪುಟಗಳು ಓದುಗರ ಪಾಲಿನ ಇಂಟರ್ ವಲ್. ಕೆಲವರು ಹತ್ತಿರದಲ್ಲಿ ಪೆನ್ಸಿಲ್ ಇಟ್ಟುಕೊಂಡಿರದ ತಮ್ಮ ತಪ್ಪಿಗೆ ಚಂದದ ಕೊಟೇಶನ್ ಇರುವ ಪುಟದದ ಕಿವಿ ಹಿಂಡಿ ಬಿಟ್ಟಿರುತ್ತಾರೆ.

ಹೊಸಾ ಲೇಖಕನೊಬ್ಬ ವಿಶಾಲ ಲೈಬ್ರೆರಿಯ ಕಪಾಟಿನ ಮಧ್ಯೆಯಲ್ಲಿ ತನ್ನ ಪುಸ್ತಕವೊಂದನ್ನು ತುಂಬು ಸಂಕೋಚದಿಂದ ಹಿಡಿದು, ಎಸ್ಸೆಲ್ಸಿ ಹುಡುಗನೊಬ್ಬ ರಿಸಲ್ಟ್ ನೋಡುವಾಗಿನಂಥಹ ಹಿಂಜರಿಕೆಯಿಂದ ಕೊನೆಭಾಗದಲ್ಲಿರುವ ಕೊನೆದಿನಾಂಕಗಳ ಪಟ್ಟಿ ಮೇಲೆ ಕಣ್ಣಾಡಿಸುವಾಗ ಆತನ ಕಣ್ಣುಗಳು ಖುಷಿಯಿಂದ ಪ್ರದೀಪ್ತವಾಗಲಿ. ಮನದ ನಾಲಿಗೆಗೆ ಓದಿನ (ಅಭಿ)ರುಚಿ ಹತ್ತಿಸಿದ ಅಡುಗೆಭಟ್ಟನ ಖುಷಿ ಅವನದಾಗಲಿ. ಸಾಲು ಕಪಾಟಿನಲ್ಲಿರುವ ಯಾವುದೇ ಲೇಖಕನ ಯಾವುದೇ ಪುಸ್ತಕಗಳಿಗೆ ಓದಿಲ್ಲದ ಗುರುತಿನಂತಹ ಧೂಳು ಅಂಟದಿರಲಿ.

ಯಾಕೆಂದರೆ,

ಮುಂಬೈನ ಬಾಂದ್ರಾದಲ್ಲೋ, ಮಂಗಳೂರಿನ ಬಂದರಲ್ಲೋ, ಮನೆಮೂಲೆಯ ಟೇಬಲಿನಲ್ಲೋ ಕುಳಿತು ಬರೆವ ಲೇಖಕನ ಹೊಳಹು, ಭಾವವಿನ್ಯಾಸ, ಜೀವನದ್ರವ್ಯವೊಂದು ಇನ್ಯಾವುದೋ ಹಳ್ಳಿಯಲ್ಲಿ, ವಿಶಾಲ ಹಜಾರದಲ್ಲಿ, ಟೀವಿಯ ಸೆಳೆತವನ್ನೂ ಹತ್ತಿಕ್ಕಿ, ಪಕ್ಕಕ್ಕಿರಿಸಿ, ತನ್ನೊಳಗಿನ ಮೌನದಲ್ಲಿ ಕುಳಿತು ಓದುವ ಓದುಗನ ಮನದಲ್ಲಿ ಮೂಡಿಸುವ ಬೆಳಕಿದೆಯಲ್ಲ, ಅದು ವಿಶಿಷ್ಟ ಮತ್ತು ವಿಶೇಷವಾದ್ದು.

 

(‘ಸಖಿ’ ಪಾಕ್ಷಿಕದಲ್ಲಿ ಪ್ರಕಟವಾಗಿದೆ.)

ಮಹಾನಗರವೆಂದರೆ ಸುಮ್ಮನೆ ಅಲ್ಲ. ಬಟ್ಟೆಯನ್ನು ಶಿಲೆಗಲ್ಲಿಗೆ ಕುಟ್ಟಿ, ಬ್ರಷ್ ನಲ್ಲಿ ಉಜ್ಜಿ, ನೀರಲ್ಲಿ ಮುಳುಗಿಸಿ, ಅಡಿಮೇಲೆ ಮಾಡಿ ಸುಡುಬಿಸಿಲಿಗೆ ನೇತು ಹಾಕುತ್ತೇವಲ್ಲ, ಹಾಗೆ ನಮ್ಮೊಳಗೆ ಹೊಳಪು ತರಲು ಅದು ಮಾಡದಿರುವ ಕಸರತ್ತೇ ಇಲ್ಲ.

ಅವನೋ ಹಳ್ಳಿಯಿಂದ ಬಂದವನು. ಮಹಾನಗರದಲ್ಲಿ ಹೆಜ್ಜೆಯಿಟ್ಟ ಮೊದಲ ದಿನವೇ ಕಂಡಕ್ಟರು ಚೇಂಜ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಬೈದ. ಕಾಲೇಜ್ ಹುಡುಗಿಯೊಬ್ಬಳು ಸಿಗ್ನಲ್ ಕ್ರಾಸ್ ಮಾಡಿ ಟ್ರಾಫಿಕ್ ಪೋಲಿಸ್ ಕೈಲಿ ಸಿಕ್ಕಿ ಹಾಕಿಕೊಂಡಾಗ ಸಾರ್, ಎಕ್ಸಾಮ್ ಗೆ ಹೊರ್ಟಿದೀನಿ ಈಗ್ಲೇ ತಡಾ ಆಯ್ತು ಅಂತ ಹಸೀ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದನ್ನು ನೋಡಿದ. ರಸ್ತೆಯಲ್ಲಿ ನಡೆವ ಚಿಕ್ಕ ಪುಟ್ಟ ಆಕ್ಸಿಡೆಂಟುಗಳಲ್ಲಿ ಬಾಯ್ಮಾತು ಚೆನ್ನಾಗಿದ್ದವನದೇನೂ ತಪ್ಪಿರಲ್ಲ ಎಂಬುದನ್ನು ಅರಿತ. ಥಿಯೇಟರ್ ನಲ್ಲಿ ಟಿಕೇಟ್ ಸಿಗದೇ ಒದ್ದಾಡುತ್ತಿದ್ದ ಸಮಯದಲ್ಲಿ ಪಕ್ಕದಲ್ಲಿ ನಿಂತಿದ್ದ ಮಿನಿಸ್ಟ್ರ ಮಗನಿಗೆ ಒಂದು ಫೋನ್ ಕಾಲ್ ಮೂಲಕ ಟಿಕೇಟ್ ಹೇಗೆ ಸಿಕ್ಕಿತು ಎಂದು ಅಚ್ಚರಿ ಪಟ್ಟ. ಟ್ರಾಫಿಕ್ಕಿನಿಂದಾಗಿ ಗಂಟೆಗಟ್ಟಲೆ ಬಸ್ಸೊಳಗೇ ಇರಬೇಕಿದ್ದರೂ ಇದು ಸಾಮಾನ್ಯವೇ ಅಂತ ಸುಮ್ಮನೆ ತಾಳ್ಮೆಯಿಂದ ಕುಳಿತ ಜನರನ್ನು ಕಂಡ. ಒಂದು ಕಾಫಿಗೂ ಹನ್ನೆರಡು ರೂಪಾಯಿ ಕೊಡಬೇಕಾದ, ರೂಮು ರೆಂಟಿಗೇ ಮೂರು ಸಾವಿರ ನೀಡಬೇಕಿರುವ ಈ ಊರಿಗೆ ದೂರದ ಬೀದರಿನಿಂದ ಆರು ಸಾವಿರ ಪಗಾರದ ಸಪ್ಲಾಯರ್ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯ ಜೊತೆ ಕುಶಲೋಪರಿ ಮಾತಾಡಿದ. ನಿನ್ನೆಯಷ್ಟೇ ಪರಿಚಯವಾದ ಒಬ್ಬ ನೇರವಾಗಿ ಲಜ್ಜೆಯಿಲ್ಲದೇ ಒಂದೈದು ಸಾವ್ರ ಸಾಲ ಇದ್ರೆ ಕೊಡ್ತೀಯಾ ಗುರೂ, ನಾಳೆ ವಾಪಸ್ ಮಾಡ್ಬಿಡ್ತೀನಿ ಅಂತ ಆತ್ಮವಿಶ್ವಾಸದಿಂದ ಹೇಳುವುದನ್ನು ಸಾಲ ಕೊಡಲಾಗದ ಗಿಲ್ಟಿನಿಂದ ಕೇಳಿದ. ಇಸ್ತ್ರಿ ಅಂಗಡಿಯಲ್ಲಿ ಎಂಟು ರೂಪಾಯಿ ಬಿಲ್ಲಾದಾಗ ನೀಡಿದ ಹತ್ತು ರೂಪಾಯಿಗೆ ಎರಡು ರೂಪಾಯಿ ವಾಪಸ್ಸು ಬರುವುದೇ ಇಲ್ಲ. ಚೇಂಜಿಲ್ಲ ಎಂಬ ಎರಳ್ಡು ರೂಪಾಯಿ ಬೆಲೆಬಾಳದ ಉತ್ತರ ಸಿಗುತ್ತದೆ. ಚೀಟಿಯಲ್ಲಿ ಕಂಡೆಕ್ಟರು ಬರೆದುಕೊಡುವ ಬಾಕಿ, ತಾನು ಇಳಿವ ಸ್ಟಾಪ್ ಬಂದಾಗ ಕಂಡಕ್ಟರು ಬಸ್ಸಿನ ಮುಂತುದಿಯಲ್ಲಿರುತ್ತಾನೆ. ಆ ರಶ್ಶಿನಲ್ಲಿ ಇಂಥ ಅನೇಕ ಘಟನೆಗಳೇ ಕಂಡಕ್ಟರನ ‘ಗಳಿಕೆ’ಗಳು.

ಇಲ್ಲಿ ಮಾಡಿದ ತಪ್ಪನ್ನೂ ಆತ್ಮವಿಶ್ವಾಸದಿಂದ ಹೇಳುವುದನ್ನು, ಸುಳ್ಳನ್ನು ಸತ್ಯದ ಮೇಲೆ ಪ್ರಮಾಣ ಮಾಡಿ ಹೇಳೋದನ್ನು ಕಲೀಬೇಕು ಬಾಸೂ… ಮೊದಲೆಲ್ಲ ಸಿಗ್ನಲ್ ಎಗರಿಸಿ ಗಾಡಿ ಓಡಿಸಿದರೆ ಟ್ರಾಫಿಕ್ ಪೋಲಿಸ್ ಗಮನಿಸದೇ ಇದ್ದರೂ ತಾನೇ ಹೋಗಿ ಫೈನ್ ಕಟ್ಟಿದ್ದೆ ಅನ್ನುವುದು ಹೀರೋಯಿಸ್ಮ್ ಆಗಿತ್ತು. ಈಗ ಅದನ್ನು ದಡ್ಡತನ ಅಂತಾರೆ. ಹಾಗೆ ಮಾಡಿದವನನ್ನು ಎಲ್ಲರೂ ಅನುಕಂಪದಿಂದ ನೋಡ್ತಾರೆ. ಈಗ ಸಿಗ್ನಲ್ ಜಂಪ್ ಮಾಡಿ ಅದನ್ನ ಯಾವ ರೀತಿ ಸುಳ್ಳು ಹೇಳಿ ಫೈನ್ ನಿಂದ ಬಚಾವಾದೆ ಅಂತ ಯಾರಿಗಾದ್ರೂ ವಿವರಿಸಿ ನೋಡು. ಜಗತ್ತಿನಲಿ ನೀನೇ ದೊಡ್ಡ ಬುದ್ಧಿವಂತ ಅನ್ನೋ ಧಾಟಿಯಲಿ ನೋಡ್ತಾರೆ. ಇದು ಈಗಿನ ಬದುಕು ಬಾಸೂ.. ಬೇಗ ಅಪ್ಡೇಟ್ ಆಗಬೇಕು.. ಅಂತ ರೂಂಮೇಟ್ ಅನ್ನುವುದನ್ನು ವಿಪರೀತ ಮುಗ್ದತನದಲ್ಲಿ ಕೊನೆಯ ಸಾಲಿಗೆ ಬರುವಷ್ಟರಲ್ಲಿ ಒಂದಿಷ್ಟು ಆತಂಕವನ್ನೂ ಬೆರೆಸಿ ನೋಡುತ್ತಾನೆ.

ಅಪ್ಪಾ, ನೀ ಆರಾಮಿದ್ದಿ ಅಲ್ಲ. ಬೀಪಿ ಟ್ಯಾಬ್ಲೆಟ್ಟು ತಗೊಳ್ಳೊದನ್ನ ಮರೀಬೇಡ. ನಾ ಚೆನ್ನಾಗಿದ್ದ ಹಾಗೆ ಇದ್ದೇನೆ. ಈ ಊರಲ್ಲಿ ಯಾರೂ ನನ್ನವರು ಅನ್ನಿಸುವುದಿಲ್ಲ. ಈ ಊರ ಜನರ ಮುಂದೆ ನಾನು ಹದಿನೈದು ವರ್ಷ ಹಿಂದಿನವನಂತೆ ಅನ್ನಿಸುತ್ತಿದ್ದೇವೆ. ನನ್ನ ನಡಿಗೆ ಈ ಊರಿನ ಓಟದ ಮುಂದೆ ಏನೂ ಅಲ್ಲ ಅನಿಸ್ತಿದೆ. ಇಲ್ಲಿ ಬದುಕಲಿಕ್ಕೆ ಸುಳ್ಳು ಹೇಳೋದು ಮಾತ್ರ ಅಲ್ಲ, ಸುಳ್ಳು ಹೇಳುವವರನ್ನು ಗುರುತಿಸುವ ಕಲೇನೂ ತಿಳಿದಿರ್ಬೇಕು. ಮುಖದ ಯಾವ ನೆರಿಗೆಯಲ್ಲೂ ಗಿಲ್ಟಿನ ಲವಲೇಷವೂ ಸುಳಿಯದಂತೆ ಸುಳ್ಳು ಹೇಳೋದಕ್ಕೆ ಬರಬೇಕು.

ಬೆಳಿಗ್ಗೆ ಆಗ್ತಾ ಇದ್ದ ಹಾಗೆ ಎದುರಾಗೋ ಮಂದಿಯಲ್ಲಿ ನನ್ನ ನಾನು ರಕ್ಷಿಸಿಕೊಳ್ತಾ ಬದುಕಬೇಕು. ಒಂಚೂರು ಮೈಮರೆತರೂ ಮೋಸಹೋಗ್ತೀನಿ. ತುಂಬಾ ಕಷ್ಟವಾಗುತ್ತಿದೆ ಅಪ್ಪಾ, ನಾನು ಊರಿಗೆ ಬಂದುಬಿಡುತ್ತೇನೆ. ನೀನು ನನ್ನ ಮೇಲೆ ಜೋಡಿಸಿಟ್ಟ ಅಪಾರ ಕನಸುಗಳ ತೀರಿಸಲಾದದೇ ಹೋದುದಕ್ಕೆ ಇದೊಂದು ಸಲ ಕ್ಷಮಿಸಿಬಿಡು. ನನ್ನನ್ನೂ ನಿನ್ನ ಜೊತೆಯಲೇ ಇರಲು ಬಿಡು.

ಹೀಗೆ ಬರೆದ ಪತ್ರವೊಂದನ್ನು ಅಂಚೆಪೆಟ್ಟಿಗೆ ಹಾಕಲು ಹೋದಾಗ ತಂದೆಯ ಸೋತ ಮುಖ ಎದುರಿಗೆ ಬಂದಂತಾಗಿ ಭಯದಿಂದ ಹರಿದು ಹಾಕುತ್ತಾನೆ.

ಪಾರ್ಕಿನ ಮೂಲೆಯೊಂದರಲ್ಲಿ ಕೂತು ಈ ಊರಲ್ಲಿ ಪಳಗಬೇಕೆಂದರೆ ಒಂದೋ, ಒಬ್ಬೊಬ್ಬರಿಂದಲೂ ಇಂಥ ಅನೇಕ ಕಲೆಗಳನ್ನು ಕಲಿತು ಅವರಲ್ಲೊಬ್ಬರಾಗಬೇಕು. ಇಲ್ಲವೇ, ವ್ಯವಸ್ಥೆಯನ್ನು ದೂರಿಕೊಂಡು ಮೋಸಹೋಗುತ್ತಾ ಬದುಕಬೇಕು. ಈ ಎರಡು ರಸ್ತೆ ಸೇರುವ ಕಾರ್ನರಿನಲ್ಲಿ ಅರ್ಧ ಟೀ ಕುಡಿಯುತ್ತಾ ಆಲೋಚಿಸುತ್ತಿದ್ದ ಅವನು.

ಮಹಾನಗರ, ಬಟ್ಟೆಯನ್ನು ತಿರುವಿಹಾಕಿ ಸುಡುಬಿಸಿಲಲಿ ಒಣಗಿಸಲನುವಾಯ್ತು.

ಅವಧಿ, ಓದುಗರ ಬಳಿ ಕಳೆದ ವರ್ಷ ಓದಿದ ಬೆಸ್ಟ್ ಪುಸ್ತಕಗಳ ಟಾಪ್ ಟೆನ್ ಪಟ್ಟಿ ಕೇಳ್ತಿದೆ. ಅದನ್ನು ನೋಡಿದಾಗ ನನಗೂ ಪಟ್ಟಿ ಮಾಡಬೇಕನ್ನಿಸಿತು. ಕಳೆದ ವರ್ಷ ಓದಿದ ತುಂಬಾ ಕಾಡಿದ ಪುಸ್ತಕಗಳ ಪಟ್ಟಿ ಇದು:-

೧. ಚಾರ್ಮಿನಾರ್ – ಜಯಂತ್ ಕಾಯ್ಕಿಣಿ

೨. The Professional – Subrato Bagchi

೩. ಹಲಗೆ ಬಳಪ – ಜೋಗಿ

tAzaELrA

೪. ಟೆಂಟ್ ಸಿನಿಮಾ – ಬೀಚಿ

೫. ಆಕಾಶಕ್ಕೊಂದು ಕಂದೀಲು! – ವ್ಯಾಸರಾಯ ಬಲ್ಲಾಳ

೬. ಅನುದಿನದ ಅಂತರಗಂಗೆ – ಪ್ರತಿಭಾ ನಂದಕುಮಾರ್

cDuUwUF6

೭. ಬಾಳ್ವೆಯೇ ಬೆಳಕು – ಡಾ. ಶಿವರಾಮ ಕಾರಂತ

೭. ಕಲ್ಲು ಕರಗುವ ಸಮಯ – ಪಿ.ಲಂಕೇಶ್

೮. The Winning Way – Harsha Bhogle

೯. What Young India Wants – Chethan Bhagat

ChetanBhagatWhatYoungIndiaWantsEDIT

೧೦. ಎದೆಗಾರಿಕೆ – ಅಗ್ನಿ ಶ್ರೀಧರ್

ಹೊರ್ಗೆ ಬೇಜಾನ್ ಮಳೆ ಸುರೀತಾ ಇದೆ. ದೇವ್ರು ಇವತ್ತು ಆಕಾಶದ ಅಣೆಕಟ್ಟಿನ್ ಗೇಟ್ ಓಪನ್ ಮಾಡಿದ ಹಾಗಿದೆ.

ಕುಡೀದೇ ಕಿಕ್ ಕೊಡೋದು ಇಡೀ ಪ್ರಪಂಚದಲ್ಲಿ ಎರಡೇ ಎರಡು ಕಣೇ, ಒಂದು ಜಡಿಮಳೆ ಮತ್ತೊಂದು ನಿನ್ನ ನೆನಪು. ಆಗಾಗ ಅನಿಸುತ್ತೆ, ನಿನ್ನಂಥ ನಿನ್ನನ್ನ ಇಷ್ಟಪಡಬೇಕು ಅಂದ್ರೆ ನಾನು ಯಾವ ಲೆವೆಲ್ಲಿಗೆ ತಯಾರಾಗಬೇಕು? ಅದೆಷ್ಟು ಸಕ್ಸಸ್ಸು ಕಾಣಬೇಕು? ಬದುಕನ್ನು ಅದ್ಯಾವ ರೀತಿ ಪಳಗಿಸಬೇಕು? ಹಣವನ್ನು ಹ್ಯಾಗೆ ನನ್ ಕಂಟ್ರೋಲಲ್ಲಿಟ್ಕೋಬೇಕು? ನಿನ್ನನ್ನ ಇಷ್ಟ ಪಡೋ ನಿನ್ನ ಗಲ್ಲಿಯಲ್ಲಿ ಗುರಾಯ್ಸೋ ಗಯ್ಸ್, ಕಾಡುವ ಕೇಬಲ್ ಬಾಯ್ಸ್, ಕ್ಲಾಸ್ ಫ್ಲಾಪ್ ಹೀರೋಸ್, ಕಾಲೇಜ್ ರೋಮಿಯೋಸ್ ಗಳನ್ನೆಲ್ಲಾ ಮೀರಿದ್ದೇನಾದರೂ ಸಾಧಿಸ್ಬೇಕಲ್ವಾ ಅಂತೆಲ್ಲಾ ಅನಿಸುತ್ತೆ.

Image

ಆದ್ರೆ ಏನ್ ಮಾಡೋದು? ನನ್ನದು ಆಲಸ್ಯ ಗೋತ್ರ, ಸೋಂಬೇರಿ ನಕ್ಷತ್ರ. ಭಾನುವಾರ ನನ್ನ ವಾರದ ದಿನ. ಅವತ್ತು ನಾನು ಹಾಸಿಗೆಯಿಂದ ಏಳೋದು ಅನ್ನೋದಕ್ಕಿಂತ ಕಷ್ಟದ ಕೆಲ್ಸ ಅಂತ ಯಾವ್ದೂ ಅನ್ಸಿಲ್ಲ. ಅಂಥ ಸೋಮಾರಿ ಮಂಜುನಾಥನನ್ನು ಬಡಿದೆಬ್ಬಿಸಿದವಳು ನೀನು. ನಿನ್ನ ಕಂಡ ಮರುದಿನದಿಂದಲೇ ರಾತ್ರಿಯಿಡೀ ನಿನ್ನ ಊಹೆ. ರಾತ್ರಿ ಹತ್ತಕ್ಕೇ ಶುರು, ನಿದಿರೆ ಜತೆ ಫೈಟಿಂಗು, ಮುಂಜಾವಿನ ಆರು ಘಂಟೆಗೆ ವೈಟಿಂಗು. ಹಗಲು ಬಿದ್ದ ಕನಸು ನಿಜವಾಗುತ್ತಂತೆ. ಅದಕ್ಕೇ ನನ್ನ ಬಿದ್ದ ಕನಸುಗಳಲ್ಲಿ ನಿನ್ನ ಪಾತ್ರವೊಂದನ್ನು ತೂರಿಸಲು ವಿಫಲ ಯತ್ನ ನಡೆಸುವ ಫ್ಲಾಪು ನಿರ್ದೇಶಕ. ಆದ್ರೆ ದುರಂತ ನೋಡು, ನೀನು ಸೇಟು ಅಂಗಡಿಗೆ ಬರೋದೆ ಸುಲಭ, ಸೀಮೆಯೆಣ್ಣೆ ಕ್ಯೂ ನಲ್ಲಿ ಕಾಣಸಿಗೋದೇ ಈಸಿ, ವಾರಕ್ ನಾಕ್ ಸಲ ಪಾಲಕ್ ಸೊಪ್ಪಿಗೆ ಚೌಕಾಸಿ ಮಾಡೋದು ನೋಡೋಕೆ ಸಿಗುತ್ತೆ, ಆದ್ರೆ ಕನಸಿಗೆ ಅಪ್ಪಿ ತಪ್ಪಿ ದಾರಿತಪ್ಪಿ ಒಂದ್ಸಲವೂ ಬರದವಳು ನೀನು. ಒಂಥರಾ ಸರಾಗ ಹಣೇಬರಹದ ಇರುವೆ ಸಾಲಿಗೆ ಬಿದ್ದ ಅಡ್ಡಗೆರೆ ನೀನು. ಆಗೆಲ್ಲಾ ಬಾಳಿನ ಸ್ಕ್ರಿಪ್ಟ್ ಬರೆವ ದೇವರು, ನಿರ್ಮಾಪಕರಿಗೆ ನೀರ ತೋರಿಸಿ ಸೋಡಾ ಕುಡಿಸೋ ಗಾಂಧಿನಗರಿಯ ನಿರ್ದೇಶಕ ಅನ್ನಿಸೋದು.

ಏನೇ ಇರಲಿ, ವಿಸ್ಕಿ ಕುಡಿದವ ಬದುಕ್ಕಂಡ, ತೀರ್ಥ ಕುಡಿದವ ತೀರ್ಕಂಡ ಅನ್ನೋ ಮಾತಿನ ಹಾಗೆ ಬದುಕು ಕೆಲ ಸಲ ಇಸ್ತ್ರೀ ಮಾಡ್ಕಂಡಿರೋರನ್ನ ಕೋಟ್ಯಾಧಿಪತಿ ಯನ್ನಾಗಿಸುತ್ತೆ. ಅಟ್ಟರ್ ಫ್ಲಾಪ್ ಅಂದುಕೊಂಡ ಪಿಕ್ಚರ್ ನೂರ್ದಿನ ಓಡುತ್ತೆ. ಅದಕ್ಕೆ ಪ್ಯಾರಾಬೋಲ ಹೊಟ್ಟೆಯ, ಹೊಳೆವ ತಲೆಯ ಅಂಕಲ್ ಗಳಿಗೆ ಅಂದಗಾತಿ ಆಂಟಿಯರು ಸಂಗಾತಿಯಾಗಿರುವುದೇ ಸಾಕ್ಷಿ.

ಹೀಗೆಲ್ಲಾ ಆಗಬಹುದೆಂದರೆ ಹಾಗೆಲ್ಲಾ ಆಗಬಾರದು ಯಾಕೆ?

ಒಂದ್ಸಲ ಯೋಚ್ಸು. ನಿನ್ನ ಒಂದು ಒಪ್ಪಿಗೆಯ ಮುಂದೆ ಜಗತ್ತಿನ ಸಕಲ ರೂಲ್ಸುಗಳು ಮುಂಡಾಮೋಚ್ತಾವೆ.

ಅಲ್ವೇನೆ?

 

 

ಇತ್ತೀಚೆಗೆ ಒಂದು ಕನ್ನಡ ಸಿನೆಮಾ ಗೆ ಹೋಗಿದ್ದೆ.

ಆ ಸಿನೆಮಾ ಸ್ವಲ್ಪ ಹಳೆಯದು. ಬಿಡುಗಡೆಯಾಗಿ ಹತ್ತಿರ ಹತ್ತಿರ ೫೦ ದಿನ ಆಗಿತ್ತು. ಒಂದಿಬ್ಬರು ಸಿನೆಮಾ ಗೆಳೆಯರು ಚೆನ್ನಾಗಿದೆ ಮಾರಾಯ ಮಿಸ್ ಮಾಡ್ಬೇಡ ಅಂದಿದ್ದರಿಂದ ಟೀವಿಯಲ್ಲಿ ಜಾಹೀರಾತಿನ ಮಧ್ಯೆ ನೋಡಬೇಕಾದ ದೌರ್ಭಾಗ್ಯ ಬೇಡ ಅಂದುಕೊಂಡು ಥಿಯೇಟರ್ ಗೆ ಹೊರಟಿದ್ದೆ.

ಅವತ್ತು ಶನಿವಾರ. ದಿನದ ಕೊನೆಯ ಶೋ. ಟಿಕೆಟ್ ಸಿಗದಿದ್ದರೆ ತೊಂದರೆ ಅಂದುಕೊಳ್ಳುತ್ತಾ ಬೇಗ ಹೆಜ್ಜೆ ಹಾಕಿದ್ದೆ. ಅಲ್ಲಿ ಥಿಯೇಟರ್ ಕಾಯುತ್ತಿದ್ದ ತಾತಪ್ಪ, ಇನ್ನೂ ಶೋ ಬಿಟ್ಟಿಲ್ಲ ಕಾಯಿರಿ ಅಂದ. ಪಕ್ಕದಲ್ಲೇ ಇದ್ದ ಅಡಿಗಾಸ್ ಗೆ ಹೋಗಿ ಟೀ ಏರಿಸಿಕೊಂಡು ಬರುವ ಹೊತ್ತಿಗೆ ಶೋ ಬಿಟ್ಟಿತ್ತು. ಟಿಕೆಟ್ ಕೌಂಟರ್ ಗೆ ಹೋಗಿ ಒಂದು ಬಾಲ್ಕನಿ ಕೊಡಿ ಅಂದೆ. ಕಿಂಡಿಯ ಒಳಗಿಂದ ಎರಡು ಕಣ್ಣು ಇಣುಕಿ, ’ಸರ್, ಬಾಲ್ಕನಿಯಲ್ಲಿ ನೀವೊಬ್ಬರೇ ಕೂರಬೇಕಾದೀತು ಪರವಾಗಿಲ್ಲವಾ" ಅಂತ ಕೇಳಿದ. ಯಾಕೆ ಸರ್ ಇವತ್ತು ಶನಿವಾರ ಅಲ್ಲವ್ರಾ? ಜನ ಬರಬಹುದು ಅಂದೆ. ಅವನಿಗೆ ಅವನ ಮೇಲೆ ಬೇಜಾನ್ ಆತ್ಮವಿಶ್ವಾಸ ಇತ್ತು. ಇಲ್ಲ ಸರ್, ಜನ ಬರ್ತಾ ಇಲ್ಲ, ನೋಡೋಣ ಈಗ ಫಸ್ಟ್ ಕ್ಲಾಸ್ ಟಿಕೆಟ್ ತಗೊಳ್ಳಿ ನಂತರ ಯಾರಾದರೂ ಬಂದರೆ ಬದಲಾಯಿಸಿ ಕೊಡ್ತೇನೆ ಅಂದ.

ಒಳಗೆ ಬಿಡದ್ದರಿಂದ ಮತ್ತು ತುಂತುರು ಮಳೆ ಶುರುವಾಗಿದ್ದರಿಂದ ಬಾಗಿಲಬಳಿ ಕೂತಿದ್ದೆ. ಏಳೂವರೆಯಾದರೂ ಬೇರೆ ಯಾರೂ ಪತ್ತೆ ಇಲ್ಲ. ಚಿತ್ರ ನೋಡುವುದರ ಬಗ್ಗೆ ಎಷ್ಟು ಆಸೆ ಇಟ್ಟುಕೊಂಡಿದ್ದೆ ಛೇ ಯಾರೂ ಬರದೇ ಹೋದರೆ ಶೋ ಕ್ಯಾನ್ಸಲ್ ಮಾಡಿಸುತ್ತಾರಾ? ಆಗ ನಾನು ಯಾವ ರೀತಿ ಗಲಾಟೆ ಮಾಡಬೇಕು ಅಂತೆಲ್ಲಾ ಯೋಚಿಸುತ್ತಾ ಕೂತೆ.

ಇನ್ನೊಬ್ಬ ಬಂದ. ನನ್ನ ಮುಖ ಅರಳಿತು. ಆತ ಟಿಕೆಟ್ ಕೊಳ್ಳದೇ ಥಿಯೇಟರ್ ಸಿಬ್ಬಂದಿ ಜತೆ ಮಾತಾಡ್ತಾ ಇದ್ದಿದ್ದರಿಂದ ಅವನೂ ಸಿಬ್ಬಂದಿವರ್ಗದವನೇ ಆಗಿದ್ದುದು ಮನವರಿಕೆಯಾಯಿತು. ಆತನೂ ನನ್ನ ಬಳಿಯೇ ಬಂದು ಕೂತ. ಸಮಯ ಆಗಲೇ ಏಳೂ ಮೂವತ್ತೈದು. ಸುಮ್ಮನೆ ಅವನನ್ನು ಕೇಳಿದೆ, ಏನ್ರೀ ಯಾರೂ ಇಲ್ಲ ಈ ಸಿನೆಮಾಕ್ಕೆ ಅಂತ. ಅದಕ್ಕವ, ನೀವೂ ಹೋಗ್ಬಿಡಿ ಸರ್, ಎದುರ್ಗಡೆ ಇರೋ ಥಿಯೇಟರ್ ನಲ್ಲಿ ಮಸ್ತ್ ಪಿಕ್ಚರ್ ಇದೆ.. ಅಂದ. ಕುತೂಹಲದಿಂದ ಯಾವುದು ಕೇಳಿದಾಗ "ತೆಲುಗು, ಗಬ್ಬರ್ ಸಿಂಗ್" ಅಂದ. ಮತ್ತೇನೂ ಮಾತಾಡದೇ ಸುಮ್ಮನಾದೆ.

ಇನ್ನು ಒಂದೆರಡು ನಿಮಿಷ ಆದ ಕೂಡಲೇ ಇನ್ನೊಬ್ಬ ವ್ಯಕ್ತಿ ಬಂದ. ಸಿನೆಮಾ ಶುರುಮಾಡಿದರು. ಇಬ್ಬರೇ ಎರಡು ಮೂಲೆಯನ್ನಲಂಕರಿಸಿ ಕೂತೆವು.

ಚಲನಚಿತ್ರ ಶುರುವಾಯಿತು.

ಮಧ್ಯೆ ಇಂಟರ್ ವಲ್ ಬಿಟ್ಟಾಗ ನನಗೆ ಬಂದಿದ್ದ ಒಂದೆರಡು ಮಿಸ್ಡ್ ಕಾಲ್ ಗಳಿಗೆ ಕಾಲ್ ಮಾಡಿ ಉತ್ತರಿಸುತ್ತಾ ನಿಂತಿದ್ದಾಗ, ನನ್ನ ಕನ್ನಡ ಸಿನೆಮಾ ಪ್ರೀತಿಗೆ ಬರೆ ನೀಡುವಂತೆ ಅಲ್ಲಿನ ವ್ಯವಸ್ಥಾಪಕ ಬಂದು, ’ಸರ್, ಫಿಲ್ಮ್ ಪೂರ್ತಿ ನೋಡ್ತೀರಾ?" ಅಂತ ಕೇಳಿದ.

******

ಇನ್ನೊಂದು ಶನಿವಾರ. ಹಿಂದಿನ ದಿನವೇ ಒಂದು ಡೈಮಂಡ್ ಸ್ಟಾರ್ ಫಿಲಂ ಬಿಡುಗಡೆ ಆಗಿತ್ತು. ನಾನಿರುವ ಸ್ಥಳದಲ್ಲಿ ಯಾವುದು ಹತ್ತಿರದ ಮಲ್ಟಿಪ್ಲೆಕ್ಸ್ ಅಂತ ಹುಡುಕಿ ಅಲ್ಲಿ ಬಿಡುಗಡೆಯಾಗಿದ್ದು ನೋಡಿ ಬಹಳ ಖುಷಿಯಾಯಿತು. ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಬಗ್ಗೆ ತಿಳಿದಿರುವವರಿಗೆ ಅನುಭವವಿರುತ್ತದೆ ಅಲ್ಲಿ ಸಾಮಾನ್ಯವಾಗಿ ಕನ್ನಡ ಸಿನೆಮಾ ಹಾಕೋಲ್ಲ, ಅದರಲ್ಲೂ ಬಿಡುಗಡೆ ಭಾಗ್ಯ ಸಿಗುವುದು ಕೆಲವೇ ಕೆಲ ಸಿನೆಮಾಗೆ ಮಾತ್ರ!

ಖುಷಿಯಿಂದ ಇಂಟರ್ನೆಟ್ ನಿಂದನೇ ಟಿಕೆಟ್ ಕಾದಿರಿಸೋಣ ಅಂತ ನೋಡಿದರೆ ಕೊನೆಯ ಸಾಲು ಹೊರತುಪಡಿಸಿ ಮಿಕ್ಕೆದ್ದೆಲ್ಲಾ ಖಾಲಿ ಇದ್ದವು. ಈ ಏರಿಯಾದ ಜನ ಜಾಸ್ತಿ ಕನ್ನಡ ಫಿಲಮ್ಸ್ ನೋಡುವುದಿಲ್ಲ, ಟಿಕೆಟ್ ಸಿಗುತ್ತದೆ, ಅಲ್ಲಿಯೇ ಹೋಗಿ ಕೊಂಡರಾಯ್ತು ಅಂತ ಹೊರಟೆ.

ಹೊರಟಾದ ನಂತರ ಒಂಥರಾ ಆಗತೊಡಗಿತು, ಒಂದು ವೇಳೆ ಟಿಕೆಟ್ ಸಿಗದೇ ಹೋದರೆ ಅಂತ. ಮೊಬೈಲಿನ ರೇಡಿಯೋ ಕೇಳುತ್ತಾ ಆ ಭಾವವನ್ನು ನೆಗ್ಲೆಕ್ಟ್ ಮಾಡಿದೆ.
ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಒಂದರ್ಧ ಘಂಟೆ ಮುಂಚಿತವಾಗಿಯೇ ತಲುಪಿದೆ.
 
ಟಿಕೆಟ್ ಕೌಂಟರ್ ನಲ್ಲಿ ಆ ಕನ್ನಡ ಸಿನೆಮಾ ದ ಹೆಸರು ಹೇಳಿದೆ. ಆತ " ಇಲ್ಲ ಸರ್, ಆ ಶೋ ಕ್ಯಾನ್ಸಲ್ ಆಗಿದೆ"

ಒಂಥರಾ ಶಾಕ್ ನಿಂದ ಆ ಸಾಲು ಸರಿಯಾಗಿ ಕೇಳಿಸಲಿಲ್ಲ. ಅದು ಆತನಿಗೆ ತಿಳಿಯಿತೆಂಬಂತೆ,

"ಹೌದು ಸರ್.. ಶೋ ಕ್ಯಾನ್ಸಲ್ ಆಗಿದೆ" ಅಂದ!

****

ಮನೆಗೆ ಬಂದು ಪೇಪರ್ ಓದುತ್ತಿದ್ದಾಗ ಎರಡು ಕನ್ನಡ ಚಿತ್ರಗಳು ಥಿಯೇಟರ್ ಸಮಸ್ಯೆಯಿಂದಾಗಿ ಜಗಳ ಆಡುತ್ತಿದ್ದ ಬಗ್ಗೆ ಪ್ರಸ್ತಾಪವಿತ್ತು.

ಬೆಂಗಳೂರಿನಲ್ಲಿ ಆಟೋದಲ್ಲಿ ತಿರುಗಲು ಶುರುಮಾಡಿದ ಮೇಲೆ ಈ ಕೆಳಗೆ ಪಟ್ಟಿಮಾಡಿರುವುದನ್ನೆಲ್ಲಾ ಪರಿಸ್ಥಿತಿ ಕಲಿಸುತ್ತದೆ.

೧. ಸ್ಟಾಂಡ್ ನಲ್ಲಿರೋ ಆಟೋಗಿಂತ ರಸ್ತೆಯಲ್ಲಿ ಖಾಲಿ ಹೋಗುತ್ತಿರುವ ಆಟೋ ದಿಂದ ಮೋಸ ಹೋಗುವ ಅಪಾಯ ಕಡಿಮೆ

೨. ಒಮ್ಮೆ ಅಡ್ರೆಸ್ ಸರಿಯಾಗಿ ಹೇಳಿದ ಮೇಲೆಯೂ ’ಎಲ್ಲಿ ಆ ಶಾಪ್ ನ ಹತ್ತಿರವಾ? ಅಂತ ಆಟೋದವ ಪ್ರಶ್ನೆ ಮಾಡುತ್ತಿದ್ದರೆ, ಜಾಸ್ತಿ ಎಷ್ಟು ಕೇಳಲಿ ಅಂತ ಅಲೋಚಿಸಲು ಆತ ಸಮಯ ತೆಗೆದುಕೊಳ್ತಾ ಇದಾನೆ ಅಂತ ಅರ್ಥ.

೩. ಯಾವಾಗಲೂ ಮೀಟರ್ ದರದ ಮೂಲಕವೇ ಮಾತಾಡಿ. ಸುಮ್ಮನೆ ಇಲ್ಲಿಗೆ ಇಂತಿಷ್ಟು ಅಂತ ನಿಜವಾಗಿಯೂ ನೀವು ವಾದ ಮಾಡೋದಿದ್ದರೆ ನಿಮಗೆ ನೀವಿರುವ ಸ್ಥಳದಿಂದ ಹೋಗಬೇಕಾದ ಸ್ಥಳಕ್ಕಿರುವ ದೂರ ಕರೆಕ್ಟಾಗಿ ತಿಳಿದಿರಬೇಕಾಗುತ್ತದೆ.

೪. ಆಟೋ ಹತ್ತಿರ ಡ್ರೈವರ್ ಗೆಳೆಯರೂ ಇದ್ದರೆ ನೀವು ಮೋಸಹೋಗಬಹುದಾದ ಪ್ರಮಾಣ ಡಬಲ್ ಆಗಿರುತ್ತದೆ.

೫. ಮೀಟರ್ ದರಕ್ಕಿಂತ ಚೂರೂ ಜಾಸ್ತಿ ನೀಡೋಲ್ಲ ಅಂತ ಅನ್ನಿ. ನಿಜ, ನಿಮಗೆ ಅರ್ಜೆಂಟಿದೆ, ನೀವು ಕೊಡಬಲ್ಲಿರಿ.. ಆದರೆ ಆ ಆಟೋದವನು ಅದನ್ನೇ ತನ್ನ ಅಡ್ವಾಂಟೇಜ್ ರೀತಿ ತೆಗೆದುಕೊಳ್ತಾನೆ. ಕೊಡಲಾಗದವರ ಹತ್ತಿರವೂ ಅದೇ ಪಾಲಸಿ ಉಪಯೋಗಿಸುತ್ತಾನೆ.

 

ಆಟೋದವರಿಂದ ಮೋಸ ಹೋಗದಂತಿರಲು ಈ ಕೆಳಗಿನ ಪಾಲಸಿಯನ್ನು ಪಾಲಿಸಿ:-

ಆಟೋದವರು ಈ ರೀತಿಯಾಗೆಲ್ಲಾ ಮಾಡಬಲ್ಲರು :- ಒಂದು ಸ್ಥಳಕ್ಕೆ ಬರುವುದನು ನಿರಾಕರಿಸುವುದು, ಮೀಟರ್ ಗಿಂತ ಜಾಸ್ತಿ ಹಣ ಕೇಳುವುದು, ಮೀಟರ್ ಹಾಳಾಗಿರುವುದು, ಹೋಗಬೇಕಾಗಿರುವ ಸ್ಥಳ ತಲುಪಿಸದಿರುವುದು, ವೇಗವಾಗಿ ಓಡಿಸುವುದು, ಆಟೋ ನಂಬರ್ ನ್ನು ಒಳಗೆ ಪ್ರಯಾಣಿಕ ಕೂತಾಗ ಕಾಣುವ ಜಾಗದಲ್ಲಿ ಹಾಕದಿರುವುದು.

ಮೊದಲೆರಡು ಅಂದರೆ ಪ್ರಯಾಣಿಕರು ಇಂಥ ಸ್ಥಳಕ್ಕೆ ಹೋಗಬೇಕಾಗಿದೆ ಅಂದಾಗ ಅಲ್ಲಿಗೆ ಬರಲ್ಲ ಎನ್ನುವುದು, ಮತ್ತು ಮೀಟರ್ ಗಿಂತ ಜಾಸ್ತಿ ಹಣ ಕೇಳುವುದು ಇವೆರಡನ್ನೂ ಕೇವಲ ಒಂದು ಎಸ್ ಎಮ್ ಎಸ್ ಮೂಲಕ ಕಂಪ್ಲೈಂಟ್ ಮಾಡಬಹುದು.

ಇಂಥ ಸ್ಥಳಕ್ಕೆ ಬರುವುದಿಲ್ಲ ಅಂದಾಗ ಕೂಡಲೇ, “Auto ref ಆಟೋನಂಬರ್ ಎಲ್ಲಿಂದಎಲ್ಲಿಗೆ ಸಮಯ” ಅನ್ನುವುದನು ಟೈಪಿಸಿ ೫೨೨೨೫ನ್ ಕ್ಕೆ ಎಸ್ ಎಂ ಎಸ್ ಕಳಿಸಿದರೆ ಸಾಕು. ಉದಾಹರಣೆಗೆ Auto ref KA02YY0123 KR Puram to Indiranagar 6PM ಅಂತ ಟೈಪಿಸಿ ೫೨೨೨೫ ಗೆ ಕಳುಹಿಸಿ.

ಒಂದು ವೇಳೆ ಜಾಸ್ತಿ ಹಣ ಕೇಳುತ್ತಾರಾದರೆ, “Auto ovr ಆಟೋನಂಬರ್ ಎಲ್ಲಿಂದಎಲ್ಲಿಗೆ ಸಮಯ” ಅಂತ ಟೈಪಿಸಿ ೫೨೨೨೫ ಗೆ ಎಸ್ ಎಮ್ ಎಸ್ ಕಳುಹಿಸಿ. ಉದಾಹರಣೆಗೆ Auto ref KA02YY0123 KR Puram to Indiranagar 6PM ಅಂತ ಟೈಪಿಸಿ ೫೨೨೨೫ ಗೆ ಎಸ್ ಎಂ ಎಸ್ ಕಳುಹಿಸಿ.

ನೆನಪಿಡಿ ನೀವು ಹೇಗೆ ಮಾಡುವುದರಿಂದ ನೀವು ಮೋಸಹೋಗುವುದಷ್ಟೇ ತಡೆಗಟ್ಟುವುದಷ್ಟೇ ಅಲ್ಲದೇ ಸ್ವಸ್ಥ ಸಮಾಜ ರೂಪುಗೊಳ್ಳುವುದಕ್ಕೆ ಸಹಾಯವೂ ಆಗುತ್ತದೆ. ಅಲ್ಲದೇ ಹೆಚ್ಚು ಲಂಚ ಕೇಳುವುದರಲ್ಲಿ ಜನಸಾಮಾನ್ಯ ಹೆಚ್ಚು ತೊಂದರೆ ಗೀಡು ಮಾಡುವುದರಲ್ಲಿ ಮೂರನೇ ಸ್ಥಾನದಲ್ಲಿರುವ ಆಟೋ ಮೋಸವನ್ನು ನಿಯಂತ್ರಣದಲ್ಲಿಡಬಲ್ಲುದು.

ನಿಮ್ಮ ಮನೆಯಲ್ಲಿ ಓದಬಲ್ಲಂಥ ಮಕ್ಕಳಿದ್ದರೆ ಅನುಪಮಾ ನಿರಂಜನ ಬರೆದ ’ದಿನಕ್ಕೊಂದು ಕಥೆಗಳು ಸೀರೀಸ್" ಓದಲು ನೀಡಿ.

ಒಟ್ಟೂ ಹನ್ನೆರಡು ಪುಸ್ತಕಗಳು. ಒಂದು ಪುಸ್ತಕ ಶುರು ಮಾಡಿದರೆ ಮಕ್ಕಳೇ ಪೀಡಿಸಿ ಕೇಳುವಂಥ ಕಥೆಗಳಿವೆ. ಮಜವಾದ ಕಥೆಗಳ ಜತೆಗೆ ನೀತಿಯುಕ್ತವಾಗಿಯೂ ಉಳ್ಳಂಥ ಪುಟ್ಟ ಪುಟ್ಟ ಕಥೆಗಳು. ಮಕ್ಕಳ ಊಹಿಸಬಲ್ಲಂಥ, ಓದಿ ಅರ್ಥಮಾಡಿಕೊಳ್ಳಬಲ್ಲಂಥ, ಗ್ರಹಿಸಿಕೊಳ್ಳುವಂಥ ಕಲೆ ವಿಪರೀತ ಅಭಿವೃದ್ಧಿಯಾಗುತ್ತದೆ. ಮಕ್ಕಳ ಮೆದುಳಿಗೆ ಕಲ್ಪನೆಯ ರೆಕ್ಕೆಗಳು ಮೂಡುವುದು ಇಂಥದ್ದನ್ನು ಓದಿಯೇ. ದೃಶ್ಯಮಾಧ್ಯಮಗಳು ಈ ರೀತಿಯ ಕಲ್ಪನೆಯ ಅಭಿವೃದ್ಧಿಗೆ ಅವಕಾಶ ನೀಡುವುದಿಲ್ಲ ಯಾಕೆಂದರೆ ಕಥೆ ನಡೆವಂಥ ಜಗತ್ತು ಕಾಣ್ತಾವೆ. ಆದರೆ ಕಥೆ ಪುಸ್ತಕ ಹಾಗಲ್ಲ, ಸಾಲುಗಳು ಆ ಕಥಾಜಗತ್ತಿಗೆ ದ್ವಾರವಿದ್ದಂತೆ, ಪದಗಳ ಮೂಲಕ ಹೆಜ್ಜೆಯಿಡುತ್ತ ಮಕ್ಕಳು ಆ ಲೋಕದೊಳಗೆ ಪ್ರವೇಶಿಸುತ್ತವೆ. ಅದೂ ಅಲ್ಲದೇ ನೀತಿ, ನಿಯತ್ತು, ಶ್ರದ್ಧಾ ಪಾಠ, ಸತ್ಯದ ಮಹಿಮೆ ಇವೆಲ್ಲವೂ ಟೀವಿ ಸೀರಿಯಲ್ಲುಗಳಲ್ಲಿ, ಹೊರಜಗತ್ತಿನಲ್ಲಿ ಸಿಗುವುದು ಕಡಿಮೆ. ನಾವು ಹೇಳಿಕೊಡುವುದು ಮಕ್ಕಳಿಗೆ ರಂಜನೀಯವೆನಿಸವು. ಕಥೆಗಳೇ  ಒಳ್ಳೇ ಟೀಚರ್ ನಂತೆ ಇಂಥ ಸಮಯದಲ್ಲಿ ಸಹಾಯ ಮಾಡುತ್ತದೆ. ಮಕ್ಕಳನ್ನು ತನ್ನ ಲೋಕದೊಳಗೇ ಸೆಳೆದು ಅವಕ್ಕೆ  ಕಾನ್ಶಿಯಸ್ ಆಗಿ ಅರಿವಾಗದಂತೆ ಪಾಠ ಹೇಳುತ್ವೆ.

ಅಕ್ಬರ್ ಬೀರ್ ಬಲ್ ಕಥೆಗಳೂ, ಈಸೋಪನ ನೀತಿಕಥೆಗಳೂ, ತೆನಾಲಿ ರಾಮನ ಕಥೆಗಳೂ ಹಾಗೆನೆ ಇದ್ದರೂ ಅವೆಲ್ಲಾ ಟೀವಿಯಲ್ಲಿ ಬರುತ್ತವಾದ್ದರಿಂದ ಕಾರ್ಟೂನ್ ನೆಟ್ ವರ್ಕ್ ನಂತಹ ಚಾನೆಲ್ ಗಳಲ್ಲಿ ಮಕ್ಕಳು ನೋಡಿಯೇ ಇರ್ತಾವೆ.

ನಿಜಕ್ಕೂ ಮಕ್ಕಳ ಭವಿಷ್ಯಕ್ಕೆ ಕಥೆ ಓದುವುದಕ್ಕೆ ಮೀಸಲಿಟ್ಟ ಸಮಯವೂ, ವಿನಿಯೋಗಿಸಿದ ಹಣವೂ ಒಳ್ಳೆಯ ಇನ್ವೆಸ್ಟ್ ಮೆಂಟ್.

ಮುಂದಿನ ತಲೆಮಾರು ಇಂಥ ಒಳ್ಳೆ ಪುಸ್ತಕ ಮಿಸ್ ಮಾಡಿಕೊಳ್ಳುತ್ತೇನೋ ಎಂಬ ಭಯಮಿಶ್ರಿತ ಕಾಳಜಿಯಿಂದ ನನ್ನ ಈ ರೆಕಮೆಂಡೇಶನ್ ಪೋಸ್ಟ್ ಮಾಡ್ತಿದ್ದೇನೆ.

 

*******

 

ನಾನು ಹಾಸ್ಟೆಲ್ ನಲ್ಲಿ ಓದುತ್ತಿದ್ದ ಸಮಯ. ಜತೆಗಾರರೆಲ್ಲರೂ ಕೋಲಾರದಿಂದ ಬಂದವರು. ತೆಲುಗು ಭಾಷೆ ಅವರಿಗೆ ಕರತಲಾಮಲಕ. ಸಿನೆಮಾ ಬಗ್ಗೆ ಮಾತಾಡುವಾಗೆಲ್ಲಾ ರಾಜೇಂದ್ರ ಪ್ರಸಾದ್, ಬ್ರಹ್ಮಾನಂದಂ ರ ಹಾಸ್ಯ ದೃಶ್ಯಗಳನ್ನು ವಿವರಿಸುತ್ತಿದ್ದರೆ ಬಿದ್ದು ಬಿದ್ದು ನಗುವಂತಾಗುತ್ತಿತ್ತು. ಅವರ ಹಾಸ್ಯ ಸಿನೆಮಾಗಳನ್ನು ನೋಡಲಿಕ್ಕಾಗಿಯೇ ನಾನು ತೆಲುಗು ಭಾಷೆ ಕಲಿತಿದ್ದಾಯಿತು. ಸ್ವಲ್ಪ ವರ್ಷಗಳ ಬಳಿಕ ವಡಿವೇಲು, ವಿವೇಕ್ ರ ಹಾಸ್ಯ ದೃಶ್ಯಗಳಿಗಾಗಿ ತಮಿಳೂ ಕಲಿತಿದ್ದಾಯಿತು. ಈಗ ಮಲೆಯಾಳಮ್ ಚಿತ್ರಗಳ ಕತೆಗಳ ಸೊಗಸನ್ನು ಕೇಳಿ ಮಲೆಯಾಳಮ್ ಕೂಡ ಕಲಿಯಬೇಕನ್ನಿಸುತ್ತಿದೆ.

ಒಂದು ವೇಳೆ ಆ ಚಿತ್ರಗಳು ಕನ್ನಡಕ್ಕೆ ಡಬ್ ಆಗಿದ್ದಿದ್ದರೆ ನಾನು ತೆಲುಗು, ತಮಿಳು ಕಲಿವ ಅಗತ್ಯತೆ ಇತ್ತಾ? ಮಲೆಯಾಳಮ್ ಕಲಿವ ಆಸೆ ಹುಟ್ಟುತ್ತಿತ್ತಾ?

ಹಾಗಂತ ನಾನು ಡಬ್ಬಿಂಗ್ ಪರವಾ? ಅಥವ ವಿರೋಧಿಯಾ? ಈಗಲೂ ಡಬ್ಬಿಂಗ್ ಬಂದರೆ ಮಲೆಯಾಳಮ್ ಕಲಿವ ಆಸೆಯನ್ನು ಕೈಬಿಡುತ್ತೇನೆ
ಮತ್ತು ಡಬ್ಬಿಂಗ್ ಬರದಿದ್ದರೆ ಮಲೆಯಾಳಮ್ ಕಲಿಯುತ್ತೇನೆ.

ಮತ್ತು ನನಗೆ ಬರುವ ಹಿಂದಿ ಭಾಷೆಯ, ತಮಿಳಿನ, ತೆಲುಗಿನ, ಇಂಗ್ಲೀಷ್ ನ ಯಾವ ಡಬ್ಬಿಂಗ್ ಆದ ಸಿನೆಮಾವನ್ನೂ ನೋಡಲಾರೆ. ಕನ್ನಡ ಮಾತಾಡುವ ಆರ್ನಾಲ್ಡ್ ಶ್ವಾಜ್ನಗರ್ ಚಿತ್ರ, ಕನ್ನಡ ಮಾತಾಡುವ ವಿಲ್ ಸ್ಮಿತ್ ಚಿತ್ರಗಳು ನನಗೆ ಅಪಹಾಸ್ಯ ಅನ್ನಿಸುತ್ತದೆ. ಹಾಗೇನೆ ಮಮ್ಮುಟ್ಟಿ, ಮೋಹನ್ ಲಾಲ್ ಮಾತಾಡುವ ಕನ್ನಡ ನನಗೆ ವಿಚಿತ್ರ ಅನ್ನಿಸದು, ಕಾರಣ ಮಲೆಯಾಳಿ ಭಾಷೆ ಬರುವುದಿಲ್ಲ. ಮಲೆಯಾಳಮ್ ನ ಸ್ಲಾಂಗ್, ಅದರ ಭಾಷೆಯ ಏರಿಳಿತದ ಪರಿಚಯವಿಲ್ಲವಾದ್ದರಿಂದ.

ನಾನು ಡಬ್ಬಿಂಗ್ ಪರವಾ ವಿರೋಧಿಯಾ? ಗೊತ್ತಿಲ್ಲ.

ಒಂದಂತೂ ನಿಜ. ನಾನು ಚಿತ್ರ ಚೆನ್ನಾಗಿದ್ದರೆ ನೋಡ್ತೇವೆ, ಇಲ್ಲಾಂದರೆ ಇಲ್ಲ. ಡಬ್ಬಿಂಗೇ ಆಗಿರಬಹುದು ಅಥವಾ ಕನ್ನಡ ಚಿತ್ರವೇ ಆಗಿರಬಹುದು- ಹೀಗೆ ಅನ್ನುವವರ ಪರ.

 

****

 

ಒಬ್ಬ ಖ್ಯಾತ ಚಿತ್ರಸಾಹಿತಿ ಇದ್ದಾನೆ ಅಂದುಕೊಳ್ಳೋಣ. ಆತನ ಕೈಗೆ ಕಾಲಿಗೆ ಅಸಿಸ್ಟೆಂಟುಗಳು. ಆತ ಬರೆದರೆ ಮ್ಯೂಸಿಕ್ ಸೀಡಿ ಗೆ ಒಳ್ಳೆ ಸೇಲು. ಚಿತ್ರಕ್ಕೆ ಒಳ್ಳೆ ಜಾಹೀರಾತು. ಕೆಲವೊಮ್ಮೆ ಚಿತ್ರಕ್ಕಿಂತ ಆತನ ಗೀತೆಗಳೇ ಬಲು ಮಜ ಅನ್ನಿಸುತ್ತದೆ ಜನರಿಗೆ. ಹೀಗಿರುವಾಗ ಆತ ತನ್ನ ಸಂಭಾವನೆಯನ್ನು ಹಿಮಾಲಯದ ತುದಿಗೆ ಏರಿಸುತ್ತಾನೆ.  ನಿರ್ಮಾಪಕರೂ ತಲೆ ಕೆರೆದುಕೊಳ್ಳದೇ ಕೈಬಿಚ್ಚಿ ಲಕ್ಷವೆಂದರೂ ನೀಡುತ್ತಾರೆ ಅಂದುಕೊಳ್ಳೋಣ. ಹೀಗೇ ನಡೆಯುತ್ತಿರುತ್ತದೆ.
ಆದರೆ ಈ ಬರವಣಿಗೆ ಕೆಲವೊಮ್ಮೆ ಒಲಿಯುವುದಿಲ್ಲ, ತಲೆಯನ್ನು ಪರಾಪರಾ ಕೆರೆದುಕೊಂಡರೂ ಹೊಳೆಯುವುದಿಲ್ಲ. ಖಾಲಿ ಹಾಳೆಗಿಂತ ಒಳ್ಳೆಯ ಕವನ ಇಲ್ಲ ಅಂತ ಬರೆಯಬಹುದಾದರೂ ಅದಕ್ಕೆ ಸಂಭಾವನೆ ಸಿಗುವುದಿಲ್ಲ.

ಹೀಗಿರುವಾಗ ಆ ಗುರುವಿಗೊಬ್ಬ ಅಸಿಸ್ಟೆಂಟು. ಗುರುವುಗಿಂತ ಅದ್ಭುತವಾಗಿ ಬರೆಯಬಲ್ಲ. ಅದು ಗುರುವಿಗೂ ಗೊತ್ತು. ಆದರೆ ಆತ ಒಂದು ಹಾಡು ಬರೆದರೆ ಆತನಿಗೆ ಸಿಗುವುದು ಗರಿಷ್ಟವೆಂದರೆ ೫ ರಿಂದ ಹತ್ತು ಸಾವಿರ. ಕಾರಣ ಆತನಿನ್ನೂ ಹೊಸಬ. ಹೆಸರಿಲ್ಲ. ಹೀಗಿರುವಾಗ ಗುರುವಿಗೊಮ್ಮೆ ಐಡಿಯಾ ಹೊಳೆಯುತ್ತದೆ. ’ಶಿಷ್ಯಾ, ನೀನು ಬರಿ, ನಿರ್ಮಾಪಕರ ಬಳಿ ನಾನು ಬರೆದಿದ್ದು ಅಂತೇನೆ. ನಿರ್ಮಾಪಕ ಕೊಟ್ಟ ಲಕ್ಷವನ್ನು ನಿನಗೆ ಕೊಡ್ತೇನೆ, ಸರಿಯಾ?’ ಅಷ್ಟು ದೊಡ್ಡ ಅಮೌಂಟು ಕನಸಿನಲ್ಲೂ ಎಣಿಸಿರದ ಶಿಷ್ಯನು ಹಿಂದೆ ಮುಂದೆ ಬರೆದು ಬರೆದು ಕೊಡುತ್ತಾನೆ. ಲಕ್ಷ ಲಕ್ಷ ಎಣಿಸುತ್ತಾನೆ.

ಗುರು ಖುಷ್, ಶಿಷ್ಯ ಖುಷ್, ನಿರ್ಮಾಪಕ ಖುಷ್, ಜನರೂ ಖುಷ್!

ಸರ್ವೇ ಜನಾಃ ಸುಖಿನೋ ಭವಂತಿ!

ಇದು ಕಥೆ.

ಒಂದು ವೇಳೆ ಇದು ಯಾವ ವ್ಯಕ್ತಿ, ಘಟನೆ, ಸ್ಥಳಕ್ಕೆ ಹೋಲಿಕೆಯುಳ್ಳದ್ದಾದರೆ ಅದು ಕೇವಲ ಕಾಕತಾಳೀಯ!

******