Archive for the ‘ದಿನದ ಎಸಳುಗಳು…’ Category

ಮೊಬೈಲು ಬಂದ ನಂತರ ಜನಕ್ಕೊಂದು ಹೊಸ ಐಲು. ಯಾವುದಾದರೂ ಪ್ರವಾಸಕ್ಕೆ ಹೋದಾಗ ಅಲ್ಲಿನ ಪರಿಸರ ಆಸ್ವಾದನೆಗೆ ಕೊಡುವ ಸಮಯಕ್ಕಿಂತ ಅದನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವ ಆಸೆಯೇ ಹೆಚ್ಚಾಗಿರುತ್ತದೆ.  ಓಹ್ ಅಲ್ಲಿಯಾ ಹೋಗಿದ್ದೇನೆ, ಬೇಕಿದ್ರೆ ನೋಡು ಅಂತ ಚಂದ ಸ್ಮಾರಕ ದ ಮುಂದೆ ಹಲ್ಲುಗಿಂಜುತ್ತಾ ನಿಂತ ಫೋಟೋವನ್ನು ಸಾಕ್ಷಿಯಂತೆ ತೋರಿಸುತ್ತೇವೆ. ಹೆಸರನ್ನು ಕೆತ್ತಿ ಅಲ್ಲಿನ ಪರಿಸರದ ಚೆಲುವಿಗೆ ಧಕ್ಕೆ ತರುತ್ತೇವೆ. ಬೇರಾರಿಗೋ, ಮುಂದೆಂದೋ ತೋರಿಸಿಕೊಳ್ಳುವ ತವಕದಲ್ಲಿ, ಈ ಕ್ಷಣದ ಅನುಭೂತಿಯೊಂದನ್ನು ತ್ಯಾಗ ಮಾಡುತ್ತೇವೆ. ಅನುಭೂತಿಯೊಂದು ಇಂದೂ ಇಲ್ಲದ ಅಂದೂ ಇಲ್ಲದ ಅಯೋಮಯ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತದೆ. ಯಾರೋ ಒಬ್ಬ ’ಅಲ್ಲಿ ನಿಂತಾಗ ನಿನ್ನೊಳಗೆ ಬಂದ ಅನಿಸಿಕೆಯೇನು?’ ಅಂತ ಕೇಳಿದರೆ ಮೌನವಹಿಸುತ್ತೇವೆ.. ಅಲ್ಲೊಂದು ರೀತಿ ಪರಿಮಳ ಮೈ ಜುಂ ಅನ್ನಿಸುವಂತೆ ಮಾಡಿತ್ತಲ್ಲವಾ? ಅಂತ ಕೇಳಿದರೆ ಪೆದ್ದು ಪೆದ್ದಾಗಿ ಹೌದು ಹೌದು ಅನ್ನುತ್ತೇವೆ.

ಕೆಲವೊಮ್ಮೆ ಮಾನವೀಯತೆಯನ್ನು ಪಕ್ಕಕ್ಕಿರಿಸಿ ಮೋಜು ಅನುಭವಿಸುವಂತೆಯೂ ಮಾಡುತ್ತದೆ, ಈ ಚಿತ್ರದಲ್ಲಿ ತೋರಿಸಿದಂತೆ.  ಸುಮ್ಮನೆ – ಕಡಿಮೆ ಸಮಯವಿತ್ತು, ತಪ್ಪಿಸುವುದು  ಅಸಾಧ್ಯವಿತ್ತು ಅನ್ನುವ ಕಾರಣ ಕೊಟ್ಟರೂ, ಪ್ರಯತ್ನ ಕೂಡ ಮಾಡದ ಗಿಲ್ಟ್ ಮನಸ್ಸಾಕ್ಷಿಯನ್ನು ಬರೆ ಬೀಳುವಂತೆ ಹೊಡೆಯುವುದು ಬಾಧಿಸದೇ ಇರದು.

image

ಈ ಮಾನವೀಯತೆಯ ಕುರಿತು ಹತ್ತು ವರ್ಷದ ಹಿಂದಿನ ನಮ್ಮ ವಿಚಾರಧಾಟಿ ಮತ್ತು ಈಗಿನ ವಿಚಾರಧಾಟಿಯ ವ್ಯತ್ಯಾಸವೇನು?  ಈ ಅವರೋಹಣಕ್ಕೆ ಕಾರಣಗಳಾವುವು? ಈ ಕ್ಷಣದ ಅಗತ್ಯ ಮುಖ್ಯವೋ ಅಥವ ಮುಂದೆಂದೋ ನೋಡಿಕೊಂಡು ಆಸ್ವಾದಿಸುವ ವೀಡಿಯೋ, ಫೋಟೋ ಮುಖ್ಯವೋ?

ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಇಲ್ಲಿನ ಉದ್ದೇಶವಲ್ಲ. ಇಂತಹ ಪ್ರಶ್ನೆ ಮೂಡ್ತಾವಾ ಇಲ್ವಾ ಅನ್ನೋದೇ ಮುಖ್ಯ.

ಉತ್ತರಗಳು ಪ್ರಶ್ನೆಯಲ್ಲಿಯೇ ಇದೆ, ಹುಡುಕಿಕೋ ಅನ್ನುವ ರೂಮಿಯ ಮಾತುಗಳು ನಮ್ಮ ಮಾನವೀಯತೆಯನ್ನು ಆಗಾಗ ಎಚ್ಚರಿಸುತ್ತಲೆ ಇರುತ್ತದೆ, 
ಎಚ್ಚರಿಸುತ್ತಲೇ ಇರಬೇಕು ಕೂಡ.

 

ಚಿತ್ರಕೃಪೆ : ಹರೀಶ್ ಗಂಗಭೈರಯ್ಯ.

ಇದುವರೆಗೂ ಬ್ಯಾಚುಲರ್ ಅಂತ ಹಣೆಪಟ್ಟಿ ಹಾಕ್ಕೊಂಡು ಒಬ್ಬನೇ ಆರಾಮಾಗಿದ್ದೆ. ನಾನು ಬೆಂಗಳೂರಿಗೆ ಬರುವೆ, ಇಲ್ಲೇ ಇರುವೆ ಅಂತ ಸುದ್ಧಿ ಪಕ್ಕಾ ಆದ ಕೂಡಲೇ ಅಮ್ಮ ನಾನೂ ಬೆಂಗಳೂರಿಗೆ ಬರ್ತೇನೆ, ನಿನ್ನ ಜತೆ ಇರ್ತೇನೆ ಅಂದಾಗ ಖುಷಿ ಆಯ್ತು. ಅಲ್ಲಿಗೆ ನನ್ನ ರೂಮು ಜೀವನ, ಚೆಲ್ಲಾಪಿಲ್ಲಿ ಪೇಪರುಗಳ ಫ್ಲೋರಿಂಗ್, ಅಶಿಸ್ತಿನ ಅಭ್ಯಾಸಗಳಿಗೆ ತಿಲಾಂಜಲಿ ಇಡುವ ಅನಿವಾರ್ಯತೆ ಉಂಟಾಯಿತು. ಆದರೂ ಹೊತ್ತೊತ್ತಿಗೆ ಕರೆಕ್ಟಾಗಿ ಸಿಗುವ ಭಾರೀ ಭೋಜನ, ಮನೆಗೆ ಬೇಗ ಹೋಗೋಣ ಅಂತ ಅನ್ನಿಸುವಂತೆ ಮಾಡುವ ಒಂದು ಜೀವ ನಮ್ಮನ್ನು ಕಾಯುತ್ತ ಇರುತ್ತದೆಂಬ ಭಾವನೆಗಳು ಆಸೆ ಹುಟ್ಟಿಸಿದವು. ಒಡಹುಟ್ಟಿದವರೂ ನಿಷ್ಕಲ್ಮಶ, ನಿಷ್ಕಾರಣ ಪ್ರೀತಿ ತೋರದಿರುವ ಈ ಕಾಲದಲ್ಲಿ ಅದಕ್ಕೆ ನಂಬಬೇಕಾದ್ದು ಅಮ್ಮ ಒಬ್ಬರನ್ನೇ ಅಲ್ಲವೇ? ಹಾಗಾಗಿ ರೂಮು ಹುಡುಕುವುದು ಬಿಟ್ಟು ಮನೆ ಹುಡುಕುವುದಕ್ಕೆ ಶುರು ಮಾಡಿದ್ದಾಯಿತು.

ಬೆಂಗಳೂರು ಮಧ್ಯದಲ್ಲಿರುವ ಆಸೆ, ಬೆಂಗಳೂರು ಮ್ಯಾಪಿನ ಎಲ್ಲೋ ಮೂಲೆಯಲ್ಲಿರುವ ಕೆಲಸದ ಜಾಗ, ಈ ಎರಡೂ ತುಂಬ ಮಾನಸಿಕ ಸಂಘರ್ಷ ಉಂಟುಮಾಡಿದವು. ಕೊನೆಗೂ ಎಲ್ಲಾ ಆಸೆಗಳನ್ನು ಟ್ರಾಫಿಕ್ ಎಂಬ ಭೂತ ಹೆದರಿಸಿ ’ಎಲ್ಲಿ ಕೆಲಸವೋ ಅಲ್ಲೇ ವಾಸ’ ಎಂಬ ಗಾದೆ ಹುಟ್ಟಿಸಿ ಮ್ಯಾಪಿನ ಮೂಲೆಯಲ್ಲೇ ಮನೆ ಮಾಡುವಂತೆ ಪ್ರೇರೇಪಿಸಿದವು. ಮನೆ ಆಯ್ತು, ಅಮ್ಮ ಬರುವ ಮುಂಚೆ ಎಲ್ಲಾ ತಯಾರಿರಬೇಕು ಅಂತ ಅನ್ನಿಸಿ ಮನೆಗೆ ಬೇಕಾದ ಎಲ್ಲಾ ಸಾಮಾನುಗಳೂ, ಯಂತ್ರ (ವಾಷಿಂಗ್ ಮೆಶೀನು, ಗ್ಯಾಸು ಸಿಲಿಂಡರು ಇತ್ಯಾದಿ) ತಂದಿರಿಸಿದ್ದಾಯಿತು. ಅಮ್ಮನಿಗೆ ಮುಖ್ಯವಾಗಿ ಬೇಕಾಗಿದ್ದ ಟೀವಿ ಠೀವಿಯಿಂದ ಡ್ರಾಯಿಂಗ್ ರೂಮಿನಲ್ಲಿ ಕೂತಿತು.

The Chef

ಪ್ರಾಯೋಗಿಕವಾಗಿ ನನ್ನ ಅಡುಗೆಗಳೂ ಭರದಿಂದ ಶುರುವಾದವು. ಆಡುವ ಮುಂಚೆ ಪಿಚ್ ಪರೀಕ್ಷಿಸುವ ರೀತಿಯಲ್ಲಿ ಅಡುಗೆ ಮನೆಯೂ ಸಜ್ಜುಗೊಳಿಸಿದ್ದಾಯಿತು.

ಅಮ್ಮನಿಗೆ ಒಂದು ಆರಾಮಿನ ದಿನ ಫೋನ್ ಹಚ್ಚಿ, ’ಯಾವಾಗ ಬರುವಂತಾಗುತ್ತೀಯಾ?’ ಅಂತ ಕೇಳಿದರೆ ಉತ್ತರಿಸದೇ ನಕ್ಕು ಸುಮ್ಮನಾದಳು. ಇನ್ನೂ ಸ್ವಲ್ಪ ದಿನ ಹೋಗಲಿ ಅಂತ ನಾನೂ ಮೌನವಾಗಿ ಒಬ್ಬನೇ ಅಡುಗೆ ಮಾಡಿಕೊಂಡೆ. ಬೆಳಿಗ್ಗೆ ಎದ್ದು ಕಸ ಗುಡಿಸಿದೆ, ಹಾಲು ತಂದು ಕಾಫಿ ಮಾಡಿ, ಮನೆಯಲ್ಲೇ ಫಾಸ್ಟಾಗಿ ಫಾಸ್ಟ್ ಫುಡ್ ಮಾಡಿಕೊಂಡು ಪಾತ್ರೆ ತೊಳೆದು ಓಡೋಡಿ ಕೆಲಸಕ್ಕೆ ಹಾಜರಾದೆ. ಮತ್ತೆ ಸಂಜೆ ಬಂದು ಅಡುಗೆ, ಪಾತ್ರೆ ತೊಳೆದು ಮಧ್ಯೆ ಆಗಗ್ಗೊಮ್ಮೆ ವಾಶಿಂಗ್ ಮೆಶೀನ್ ನ ಕೈಲಿ ಬಟ್ಟೆ ಒಗೆಸುವುದೂ ಮಾಡಿ ಬದುಕುತ್ತಿದ್ದೇನೆ. ದಿನಗಳು ಚೌಕದಿಂದ ಚೌಕಕ್ಕೆ ಜಿಗಿದು, ಫ್ಯಾನುಗಾಳಿಗೆ ಹಾಳೆ ಹಾರಿದಂತೆ ತಿಂಗಳುಗಳೂ ಮುಗಿದವು.

0511-1005-1216-1751_Man_Daydreaming_About_Being_a_Chef_clipart_image

ಯಾವಾಗ ಬರ್ತಿದೀಯಮ್ಮೋ ಅಂತ ಕೇಳಿದಾಗಲೆಲ್ಲ ಮುಗುಳ್ನಗುವೆ ಆಕೆಯ ಉತ್ತರ. ಯಾಕೆ ಹೀಗೆ, ಏನು ಆ ನಗುವಿನ ಮರ್ಮ ಅಂತ ಅರ್ಥವೆ ಆಗ್ತಿದ್ದಿರಲಿಲ್ಲ.

ಮೊನ್ನೆ ಗೆಳೆಯನಿಗೆ ನನ್ನ ಈ ದಿನಚರಿ ವಿವರಿಸುತ್ತಿದ್ದಾಗ ’ ಹಾಗಿದ್ರೆ ಮದುವೆಗೆ ಭರ್ಜರಿಯಾಗೆ ತಯಾರಾಗ್ತಿದೀಯಾ, ಬಿಡು!’ ಅಂತ ಛೇಡಿಸಿದ. ಯಾಕೋ ಅವ ಹಂಗಂದ ಕೂಡಲೇ ಅಮ್ಮನ ನಗು ನೆನಪಾಯ್ತು.

ಹ್ಮ್! ಅಮ್ಮಂದಿರೂ ನಮ್ಮಂಥ (ದೊಡ್ಡ)ಮಕ್ಕಳಿಗಿಂತ ಬುದ್ದಿವಂತರಾಗುತ್ತಿದ್ದಾರೆ!

ನಾನು ಕನ್ನಡಿಗ ಅಂತ ಅನ್ನುವಾಗ ನನಗೆ ಚೂರೂ ಹೆಮ್ಮೆಯೇ ಆಗುತ್ತಿದ್ದಿರಲಿಲ್ಲ.

ಹೌದು. ಇಸ್ಕೂಲು, ಹೈಸ್ಕೂಲು ಓದುವಾಗಲೆಲ್ಲ ’ನಾನು ಕನ್ನಡಿಗ’ ಅನ್ನುವುದರಲ್ಲಿ ಅಂತಹ ವಿಶೇಷಗಳೇನೂ ಇರಲಿಲ್ಲ. ಸುತ್ತಮುತ್ತಲೂ ಮುತ್ತಿಕೊಂಡಿದ್ದ ಗೆಳೆಯರೆಲ್ಲರೂ ಕನ್ನಡಿಗರೇ ಆಗಿದ್ದರಿಂದ ಅದೊಂದು ಸ್ಪೆಷಲ್ ಅನ್ನುವ ಭಾವ ಮೂಡುತ್ತಿರಲಿಲ್ಲ. ಕಾಲೇಜುಪರ್ವದಲ್ಲಿ ಕನ್ನಡಿಗ ಆಗಿರುವುದು ಕೊಂಚ ಸಂಕಟಗಳಿಗೆ ಸಿಕ್ಕಿಸಿತ್ತಾದರೂ ಅದಕ್ಕೆ ಕಾರಣ ’ನಾ ಕನ್ನಡದವ’ ಆಗಿರುವುದಲ್ಲ, ’ಇಂಗ್ಲೀಷ್ ಅರಿವು ಕಡಿಮೆ ಇರುವುದು’ ಎಂಬ ಜ್ಞಾನೋದಯ ಆದಮೇಲೆ ಆ ಕುರಿತು ಆಲೋಚನೆಯೂ ಬರಲಿಲ್ಲ.

ಆದರೆ ಕರುನಾಡ ಕೋಟೆ ದಾಟಿದ ಮೇಲೆ ಕನ್ನಡ ಎಂಬ ಭಾಷೆ ಎಷ್ಟು ಸಿಹಿ ಅನ್ನುವುದು ಗೋಚರವಾಗುತ್ತಿತ್ತು. ಇದೊಂಥರ ಮನೆಯಲ್ಲಿದ್ದಾಗ ಹಠ, ಗೊಂದಲ ಮಾಡುತ್ತಿದ್ದು ನಂತರ ಅಮ್ಮನ ಮಹತ್ವ ಅರಿವಾಗುವ ಹಾಸ್ಟೆಲ್ ಹುಡುಗನ ರೀತಿ. ಸಿಂಗಾಪೂರ್ ಗೆ ಬಂದ ಮೇಲೆ ನನ್ನ ಜತೆ ಕೆಲಸ ಮಾಡುವವರಿಗೆ ನನ್ನ ರಾಜ್ಯದ ಕುರಿತು, ಭಾಷೆಯ ಕುರಿತು ವಿವರಿಸುವಾಗ ಅದೆಂತದೋ ಪದಗಳಲ್ಲಿ ಸಿಲುಕದ ಸಂತಸ. ಅವರಂತೂ ಅಮೇರಿಕದ ವೈಭವವನ್ನೂ ಈ ರೀತಿಯ ವಿವರಣೆಯ ಸಹಿತ ಕೇಳಿರಲಿಕ್ಕಿಲ್ಲ, ಹಾಗೆ ಇರುತ್ತಿತ್ತು. ಇಲ್ಲಿಯ ಹೆಚ್ಚಿನವರಿಗೆ ಭಾರತೀಯರೆಂದರೆ ತಮಿಳರು ಅನ್ನುವ ಭಾವ ಇರುವುದರಿಂದ, ನನ್ನ ಭಾರತೀಯತೆ ಅರಿವಾದ ಕೂಡಲೇ, ’ತಮಿಳಾ?’ ಎನ್ನುವ ಪ್ರಶ್ನೆ ಕೇಳುತ್ತಾರೆ. “ಅಲ್ಲ, ನಾನು ಕನ್ನಡಿಗ’ ಎಂಬ ಉತ್ತರಕ್ಕೆ ಪೂರ ಹೆಮ್ಮೆಯ ಲೇಪ. ಅಲ್ಲೇ ಹುಟ್ಟಿ, ಅಲ್ಲೇ ಬೆಳೆದಿದ್ದರೂ ಯಾವಾಗಲೂ ಈ ವಾಕ್ಯ ಆಡಿದ ಉದಾಹರಣೆ ನೆನಪಿಲ್ಲ.

ಜಯಂತ್ ಕಾಯ್ಕಿಣಿ ತಮ್ಮ ಭಾಷಣದಲ್ಲಿ ಯಾವಾಗಲೂ ಹೇಳುತ್ತಿರುತ್ತಾರೆ, ” ನಾವು ಅಮೇರಿಕದಲ್ಲೋ, ಸಿಂಗಾಪುರ್ ನಲ್ಲೋ ಅಥವ ಅಸ್ಸಾಂ, ಮುಂಬೈ ನಲ್ಲಿ ಇದ್ದುಕೊಂಡು, ಒಳ್ಳೆಯ ಕೆಲಸಗಾರರಾಗಿ, ಒಳ್ಳೆಯ ಪ್ರಜೆಯಾಗಿ, ಒಳ್ಳೆಯ ತಂದೆ, ಮಗ, ಅಣ್ಣ, ತಮ್ಮ, ಗೆಳೆಯನಾಗಿ ಇರುವುದು ಕನ್ನಡತನವಾ? ಅಥವ ಬೆಂಗಳೂರಲ್ಲೆ ಇದ್ದು, ವಿಧಾನಸೌಧದ ಮುಂದೇನೆ ಮನೆಮಾಡಿ, ಕೈತುಂಬ ಉಂಗುರಗಳು, ಕೊರಳ ತುಂಬಾ ಚೈನು ಹಾಕಿಕೊಂಡು, ಸಿಕ್ಕಾಪಟ್ಟೇ ಭ್ರಷ್ಟಾಚಾರ ಮಾಡಿ, ಹೀನವಾಗಿ ಬದುಕಿ ರಾಜ್ಯೋತ್ಸವದ ದಿವಸ ಧ್ವಜ ಹಾರಿಸುವುದು ಕನ್ನಡತನವಾ? ಅಂದರೆ ಕನ್ನಡತನ ಅನ್ನುವುದು ನೀವಾಡುವ ಭಾಷೆಯ ಮೇಲೆ ಮಾತ್ರ ನಿರ್ಭರವಾಗಿಲ್ಲ. ಕನ್ನಡತನ ಅಂದರೆ ನಾವು ಬದುಕುವ ರೀತಿ. ಮಮತೆ, ಪ್ರೀತಿಯೇ ಕನ್ನಡತನ. ನಾವೆಲ್ಲಿ ಇರುತ್ತೇವೆ ಅನ್ನುವುದಲ್ಲ, ಚೆನ್ನಾಗಿ ಕೆಲಸ ಮಾಡಿ, ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯುವುದಕ್ಕಿಂತ ದೊಡ್ಡ ಕನ್ನಡತನ ಬೇರೆಯಿಲ್ಲ.”

ನನ್ನಲ್ಲೂ ಅಂಥ ಒಂದು ಕನಸು. ಉಳಿದವರು ’ರೀ ಅವ್ರು ಕನ್ನಡವರು, ಮೋಸ ಮಾಡೋಲ್ಲ” ಅಂತಲೋ ಅಥವ ಅಂಗಡಿಯಲ್ಲಿ ಪರ್ಸು ಮರೆತ ಘಳಿಗೆಯಲಿ, “ನೀವ್ ಕನ್ನಡದವ್ರಾ? ಪರ್ವಾಗಿಲ್ಲ, ನಾಳೆ ಕೊಡಿ” ಈ ರೀತಿ ಕನ್ನಡ ಒಂದು ನಂಬಿಕೆಯಾಗಿ, ಒಳ್ಳೆಯತನವಾಗಿ ಹಬ್ಬಬೇಕು. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಅನ್ನುವುದಕ್ಕಿಂತ Value ಆಗಿ ಬೆಳೆಯಬೇಕು ಎಂಬುದೊಂದು ಆಶಯ.

ಎಂದಿಗೂ ನಾನು ಅಂಥ ಕನ್ನಡಿಗನಾಗಲು ಬಯಸುತ್ತೇನೆ.

 

ಅಡಿಟಿಪ್ಪಣಿ: ಇಲ್ಲಿಯ ಹೋಟೇಲೊಂದರಲ್ಲಿ ಅಕಸ್ಮಾತ್ ಭೇಟಿಯಾದ ಬೆಳಗಾವಿಯ ಬಾಲರಾಜ್ ಮತ್ತವರ ಪುಟ್ಟಿಯ ಕನ್ನಡ ಹುಟ್ಟಿಸಿದ ರೋಮಾಂಚನದಿಂದಾಗಿ, ಮತ್ತೆ ಬರೆಯುತ್ತೇನೆ ಅಂತ ಮುಂದೂಡುತ್ತಲೇ ಬರುತ್ತಿದ್ದ ಈ ಲೇಖನ ಇವತ್ತೇ ಬರೆಯುವಂತಾಯಿತು. ಬೆಂಗಳೂರಲ್ಲೇ ಅಪರೂಪವಾಗುತ್ತಿರುವ ಕನ್ನಡವನ್ನು ಸಾವಿರಾರು ಮೈಲು ದೂರ ಅದೂ ಪುಟ್ಟ ಹುಡುಗಿಯ ಮಾತಾಗಿ ಕೇಳುವ ಅದ್ಭುತವೇ ಬೇರೆ.

ಕಥೆ ಹೇಳುವವರ ಮುಖ್ಯಲಕ್ಷಣವೆಂದರೆ ಒಂದು ಸನ್ನಿವೇಶವನ್ನು ಕಥೆಯ ಓಘಕ್ಕೆ ತಕ್ಕಂತೆ ಮತ್ತು ಪಾತ್ರಧಾರಿಗಳ ನಡೆವಳಿಕೆಗಳು ಓದುಗನ(ಕೇಳುಗನ) ತರ್ಕಕ್ಕೆ ಸರಿಯಾಗಿ ಸಿಲುಕಿಕೊಳ್ಳುವಂತೆ ವಿವರಿಸುವುದೇ ಆಗಿದೆ. ಪಾತ್ರಧಾರಿಯ ವರ್ತನೆಗಳಿಗೆ, ಒಂದು ವಿಧವಾದ ಮಾತುಗಾರಿಕೆಗೆ ಅಥವ ಸನ್ನಿವೇಷಕ್ಕೆ ಪಾತ್ರಧಾರಿ ನೀಡುವ ಪ್ರತಿಕ್ರಿಯೆಗಳಿಗೆ, ಓದುಗನಿಗೆ ಮೂಡಿದ ಪ್ರಶ್ನೆಗಳನ್ನು ಸಮಯಕ್ಕೆ ತಕ್ಕಂತೆ(ಕೂಡಲೇ ಅಥವ ಕತೆಯ ಕೊನೆಯ ಒಳಗೆ) ನಿವಾರಿಸುವುದು ಕೂಡ ಅವನ ಕರ್ತವ್ಯಗಳಲ್ಲಿ ಒಂದು. ಅದೆಷ್ಟೇ ಗೊಂದಲಗಳು ಸಿಕ್ಕುಗಳು ಕತೆಯಲ್ಲಿದ್ದಾಗ್ಯೂ ಒಬ್ಬ ಬರಹಗಾರನ ಕಥೆಗಾರಿಕೆ ಉನ್ನತಮಟ್ಟದಲ್ಲಿದ್ದಾಗ ಓದುಗನಲ್ಲಿ ಪ್ರಶ್ನೆ ಮೂಡಿಸದೇ ಇರುವ ಹಾಗೆ ವಿವರಿಸುವುದು ಸಾಧ್ಯ. ಅಂಥ ವಿವರಣೆಯೂ ಒಂದು ಕಲೆ. ಮೇಲ್ನೋಟಕ್ಕೆ ಓದುಗನಿಗೆ ಓದುವ ಓಘದಲ್ಲಿ ಪ್ರಶ್ನೆ ಮೂಡದೇ ಇದ್ದರೆ ಅದು ಕಥೆಗಾರನ ವಿಜಯವೇ. ಇನ್ಯಾರೋ ಇನ್ಯಾವಾಗಲೋ ಅದ್ಯಾಕೆ ಹೀಗಾಗಬೇಕಿತ್ತು ಹೀಗಿದ್ದಿದ್ದರೆ ಆಗುತ್ತಿತ್ತಲ್ಲವಾ ಅಂತ ಕೇಳಿದಾಗ ಅರೆ! ಹೌದಲ್ಲವೇ ನಾನ್ಯಾಕೆ ಆಲೋಚಿಸಿರಲಿಲ್ಲ ಅಂದುಕೊಳ್ಳುವಾಗ, ಓದುಗನಿಗೆ ತರ್ಕಕ್ಕೆ ನೀಡದ ಕತೆಗಾರನ ಮೇಲೆ ಎಳ್ಳಷ್ಟೂ ಮುನಿಸು ಬರದೇ, ನನಗೇ ಬರದಿದ್ದ ಆಲೋಚನೆ ಆ ಪಾತ್ರಧಾರಿಗೆ ಹೇಗೆ ಬಂದೀತು ಓದುಗನಿಗನ್ನಿಸಿ ಕತೆಗಾರ ಬಚಾವ್ ಆಗುವನು.

storytelling (1)

ಇದನ್ನು ಒಂದು ಉದಾಹರಣೆ ಮೂಲಕ ವಿಶದೀಕರಿಸುತ್ತೇನೆ. ದಿ ಕೈಟ್ ರನ್ನರ್ ಅನ್ನುವ ಆಂಗ್ಲ ಚಿತ್ರದ ಸನ್ನಿವೇಷ ಇದು. ಇಬ್ಬರು ಹುಡುಗರು ಮಾತಾಡಿಕೊಳ್ಳುತ್ತಿರುತ್ತಾರೆ. ಒಬ್ಬ ಅದರಲ್ಲಿ ಬರಹಗಾರ. ಅವನ ಒಂದು ಕತೆಗೆ ಆಗಲೇ ಬಹುಮಾನ ಬಂದಿರುತ್ತದೆ. ಇನ್ನೊಬ್ಬ ಹುಡುಗ ಕೇಳುತ್ತಾನೆ, “ನಿನಗೆ ಬಹುಮಾನ ಬಂದ ಕತೆಯನ್ನು ನನಗೆ ಹೇಳುತ್ತೀಯಾ” ಎಂದು. ಆ ಕತೆಗಾರ ಹೇಳುವ ಕತೆ ಹೀಗಿದೆ.

ಒಬ್ಬನಿಗೆ ಒಂದು ವರ ಸಿಕ್ಕಿರುತ್ತದೆ. ಅದರ ಪ್ರಕಾರ ಅವನಿಗೆ ಎಷ್ಟು ಕಣ್ಣೀರು ಉಕ್ಕುತ್ತದೋ ಅಷ್ಟು ಚಿನ್ನದ ವರಹ ಸಿಗುತ್ತದೆ. ಸುಮ್ಮ ಸುಮ್ಮನೆ ದುಃಖ ಆವಾಹಿಸಿಕೊಂಡು ವರಹಗಳನ್ನು ಗಿಟ್ಟಿಸಿಕೊಳ್ಳುತ್ತಿರುತ್ತಾನೆ. ಯಾರದೋ ದುಃಖವನ್ನು ತನ್ನದಾಗಿಸಿಕೊಳುವ ಯತ್ನ ಮಾಡುತ್ತಾನೆ. ಮೊದಮೊದಲು ಚೆನ್ನಾಗೇ ಅನಿಸಿದರೂ ಸ್ವಲ್ಪ ದಿನ ಕಳೆದರೆ ಏನು ಮಾಡಿದರೂ ಅವನಿಗೆ ಅಳುವೇ ಬರುವುದಿಲ್ಲ. ಎಷ್ಟು ದುಃಖ ಹುಟ್ಟಿಸಿಕೊಂಡರೂ ಕಣ್ಣು ಬತ್ತಿದ ಕೆರೆ. ವರಹಕ್ಕಾಗಿ ಎಷ್ಟು ಅತ್ತಿರುತ್ತಾನೆಂದರೆ ಎಂಥ ದುಃಖಕ್ಕೂ ಅಳುವೇ ಬರದೆಂಬಂತಹ ಸ್ಥಿತಿ.

ಕತೆಯ ಕೊನೆಯಲ್ಲಿ ಅವನು ತನ್ನ ಪ್ರೀತಿಯ ಹೆಂಡತಿಯನ್ನೇ ವರಹಗಳ ಆಸೆಗೆ ಕೊಲ್ಲುತ್ತಾನೆ!

3075462-md

ಚೆನ್ನಾಗಿದೆ ಅನ್ನಿಸುತ್ತದಲ್ಲವ ಕತೆ. ಹಾಗೆ ಅನ್ನಿಸಿದರೆ ಅದುವೇ ಕತೆಗಾರನ ಜಯ. ಲೇಖನದ ಕೊನೆಯಲ್ಲಿ ಈ ಉದಾಹರಣೆ ಪೂರ್ಣಗೊಳಿಸುತ್ತೇನೆ.

ಇನ್ನೊಂದು ಉದಾಹರಣೆ ಕನ್ನಡದ ಓಂ ಚಿತ್ರ. ಈ ಸಿನೆಮಾವನ್ನು ಈಗ ಯಾವ ಚಿತ್ರಮಂದಿರದಲ್ಲಿ ಹಾಕಿದರೂ ಎಲ್ಲಾ ಹೊಸ ಚಿತ್ರಗಳಿಗೆ ಪಪೋಟಿ ನೀಡಿ ಭರ್ಜರಿಯಾಗಿ ಓಡುತ್ತದೆ. ಒಮ್ಮೆ ನೋಡಿದವರೂ ಮತ್ತೊಮ್ಮೆ ನೋಡಲು ಹಿಂಜರಿಯುವುದಿಲ್ಲ. ಅಂತಹ ಚಿತ್ರ ಓಂ. ಅದರಲ್ಲಿ ನಾಯಕನ ಚೇಲಾಗಳು, ನಾಯಕನಿಗೆ ಅಣ್ಣಾ ಅಂದರೆ ನಾಯಕಿಗೆ ಅತ್ತಿಗೆ ಅನ್ನಬೇಕಲ್ವೇ? ಹಾಗಾಗದು, ಚೇಲಾಗಳು ನಾಯಕಿಯನ್ನು ಅಕ್ಕಾ ಅನ್ನುತ್ತಾರೆ. ನಾಯಕ -ನಾಯಕಿಯನ್ನು ಸಹೋದರ ಸಹೋದರಿಯಾಗಿಸುತ್ತಾರೆ!

ಈಗ ಆ ದಿ ಕೈಟ್ ರನ್ನರ್ ಚಿತ್ರದ ಸನ್ನಿವೇಶದ ಉದಾಹರಣೆ ಮುಂದುವರಿಸುವೆ. ಆ ಬಹುಮಾನ ಪಡೆದಂಥ ಕತೆ ಕೇಳುತ್ತಿದ್ದ ಮತ್ತೊಬ್ಬ ಹುಡುಗ ಆ ಕತೆಗಾರನನ್ನು ಕೇಳುತ್ತಾನೆ, “ಅವನು ಹೆಂಡತಿಯನ್ನೇ ಯಾಕೆ ಕೊಲ್ಲಬೇಕಿತ್ತು, ಅಡುಗೆಮನೆಯಲಿ ಈರುಳ್ಳಿ ಕತ್ತರಿಸಿದ್ದರೆ ಆಗುತ್ತಿರಲಿಲ್ಲವಾ?”

*****

(ಚಿತ್ರಕೃಪೆ : ಕಥೆ ಹೇಳುತ್ತಿರುವ ಮುದುಕಿ ಮತ್ತು ಒಂದು ಕಥಾಕ್ಲಾಸು)

 

ಹೊಸತರಲ್ಲಿ ಎಲ್ಲ ವಿಷಯದಲ್ಲಿ ಗೊಂದಲಗಳಿರ್ತವೆ. ಬಲ್ಲವರರಿಂದ ಮೊದಲೇ ಕೇಳಿಕೊಂಡು ಅದರ ಪರಿಹಾರ ಎಲ್ಲಾ ವಿಷಯಗಳಲ್ಲಿ ಸಾಧ್ಯವಿಲ್ಲ. ಉದಾಹರಣೆಗೆ ಮೊದಲ ರಾತ್ರಿ. ಗೆಳೆಯನಿಂದ ಕೆಲ ಅನುಮಾನಗಳನ್ನು ಕ್ಲಿಯರ್ ಮಾಡಿಕೊಳ್ಳಬಹುದೇ ವಿನ: ಎಲ್ಲವನ್ನೂ ಕೇಳಿದರೆ ನಗೆಪಾಟಲು. ಅವ ಹೇಳಿದ್ದಕ್ಕೂ ಮತ್ತೆ ಅಲ್ಲಿ ಒಳಗೆ ರಣರಂಗಕ್ಕೂ ಸಾಮ್ಯತೆ ಇಲ್ಲದೇ ಹೋದರೆ ಮತ್ತಷ್ಟು ಪೇಚು! ಊಹಿಸದ ಕಡೆಯಿಂದ ಅಪಾಯ (ಇಂಥ ದೊಡ್ಡ ಪದ ಬ್ಯಾಡವಿತ್ತು, ಹೆದರಬೇಡಿ) ಬರಬಹುದು. ಅದಕ್ಕೆ ಕೆಲವೊಂದು ಅನುಭವಿಸಿಯೇ ಅನುಭವ ಪಡೆದುಕೊಳ್ಳಬೇಕು.

ಇಷ್ಟಕ್ಕು ಇದೆಲ್ಲಾ ನಾ ಅಂತಿರೋದು ಮೇಲೆ ಹೇಳಿದಂಥ ಘನಗಂಭೀರ ವಿಷಯವಲ್ಲ. ಸಂದರ್ಭವೇನೆಂದರೆ ಮೊದಲ ಬಾರಿಗೆ ಹೊಸ ಊರಿನ ಹೊಸ (ನನಗೆ ಮಾತ್ರ) ಹೋಟೆಲ್ ಗೆ ಹೊಕ್ಕಿದ್ದೇನೆ. ಅಲ್ಲಿನ ಕ್ಯಾಶಿಯರ್ ಮೊಗದಲ್ಲಿ ಕೃತಕವಾಗಿ ನಗು ಬಿಂಬಿಸಿದ್ದಾನೆ. ಅದರಲ್ಲಿ ಯಾಕೋ ಹೊಸ ಮಿಕ ಬಂತು ಅನ್ನುವ ಹಿಗ್ಗೇ ಹೆಚ್ಚು ಅನ್ನಿಸುತ್ತಿದೆ. ಅವನ ಆ ಅಸ್ತ್ರಕ್ಕೆ ನಾನು ಸೌಜನ್ಯಕ್ಕಾಗಿ ನಕ್ಕು, ಮತ್ತೆ ಮುಖ ಗಂಭೀರ ಮಾಡಿಕೊಳ್ಳುತ್ತಾ ’ಹೊಸಬನಿರಬಹುದು, ಆದರೆ ನಿಮ್ಮ ಹತ್ರ ಟೋಪಿ ಹಾಕ್ಸಿಕೊಳ್ಳಲ್ಲ, ಯಾವುದಕ್ಕೂ ನೀವು ಮತ್ತಷ್ಟು ಹುಶಾರಾಗಿರಿ’ ಎಂಬ ಸಂದೇಶ ರವಾನಿಸಿದೆ. ಸಪ್ಲಾಯರ್ ನನ್ನು ಕೂಗುತ್ತಾ ತಮಿಳಿನಲ್ಲಿ "ಸರ್ ಗೆ ಏನ್ ಬೇಕು ಕೇಳು ?" ಅನ್ನುತ್ತಿದ್ದರೂ ಅದರೊಳಗೆ "ನಿನ್ನಂತವನನ್ನ ಎಷ್ಟು ನೋಡಿಲ್ಲ, ಕೂತ್ಕೋ.. ಏ ಸಪ್ಲಾಯರ್.. ಬೇಗ ಬಲೆ ಬೀಸು!" ಅನ್ನುತ್ತಿದ್ದಂತಿತ್ತು.

 

07072010891

ತಿಂಡಿ ನಂತರ ಕಾಫಿ ಕುಡಿದು ನೋಡಾಣ ಅನ್ನಿಸಿ, ಒರು ಕಾಫಿ, ಬ್ರೂ ಕಾಫಿ ಇರುಕ್ಕಾ ಅಂತ ಹರುಕ್ಕು ಮುರುಕ್ಕು ತಮಿಳಿನಲ್ಲಿ ಕೇಳಿದೆ. ಕಾಪಿಯಾ ಇರುಕ್ಕು ಇರುಕ್ಕು ಅಂತಾ ಹೋದವ ತಂದಿಟ್ಟಿದ್ದು ಒಂದು ದೊಡ್ದ ಗ್ಲಾಸಿನಲ್ಲಿ ಕಾಫಿ. ಅದೆಷ್ಟು ದೊಡ್ಡದಿತ್ತೆಂದರೆ ನೋಡಿದಾಕ್ಷಣ ನನಗೆ ಬಾಲ್ಯದಲ್ಲಿ ಕಾಫಿ ಮೇಲೆ ಉಂಟಾಗಿದ್ದ ಮೊದಲ ಪ್ರೇಮವೆಲ್ಲಾ ಒಂದೇ ಕ್ಷಣದಲ್ಲಿ ಒಂದು ವರ್ಷದ ನಂತರ ಸಂಸಾರದಲ್ಲಿ ಗಂಡ-ಹೆಂಡತಿ ನಡುವಿನ ವಿರಸದಷ್ಟು ಇಳಿದುಹೋಯಿತು. ಗೆಳೆಯರು ಬಿಯರ್ರನ್ನು ಕೂಡ ಹೀಗೆ ಕುಡಿಯುವುದನ್ನು ಕಂಡಿರದ ನನಗೆ ಇದು ಕುಡಿತಕ್ಕಿಂತ ಹೆಚ್ಚು ಭಯ ಹುಟ್ಟಿಸಿತು.

ಎಷ್ಟು ಜಾಸ್ತಿ ದುಡ್ಡು ಕೊಟ್ಟರೂ ಕಾಫಿ ಲೋಟ ಸೈಜು ಕಡಿಮೆಯಾಗುತ್ತಿದೆ ಅಂತ ಪೇಚಾಡುವ ನಾಗರಿಕರನ್ನೆಲ್ಲಾ ಹತ್ತು ದಿನ ಇಂಥ ಕಾಫಿ ಕುಡಿಸಬೇಕು. ಅಲ್ಲದೇ ನನಗೆ ಹಿಂಸೆಯಿತ್ತ ಸಕಲ ವೈರಿಗಳಿಗೆ ಇಂಥ ಶಿಕ್ಷೆಯಿತ್ತರೆ ಹೇಗೆ ಅಂತಲೂ ಆಲೋಚನೆ ಉಕ್ಕಿತು. ಹೊಸ ಗರುಡಪುರಾಣ ಬರೆವ ಅವಕಾಶ ನನಗೆ ಸಿಕ್ಕರೆ ನೀರಿಗೆ ಹಾಲು ಬೆರೆಸುವ ಹಾಲು ಮಾರಾಟಗಾರರು, ಒಂದು ಕಾಫಿ ಕುಡಿಯಲು ಒಂದು ಘಂಟೆ ತೆಗೆದುಕೊಂಡು ಹೋಟೆಲ್ಲಿನ ಫ್ಯಾನಿಗಾದ ಖರ್ಚಿಗಿಂತಲೂ ಕಡಿಮೆ ಹಣ ಕೊಟ್ಟುಬರುವವರು, ತಮ್ಮ ಹೋಟೆಲ್ಲಿನಲ್ಲಿ ಕಾಫಿ ಕುಡಿಯುವವರನ್ನು ಕಂಡು ತಮ್ಮ ಮೀಸೆ ತುದಿಯಲ್ಲಿ ನಕ್ಕು , ಪಕ್ಕದ ಹೋಟೆಲ್ ನಲ್ಲಿ ತಿಂಡಿ ಕಾಪಿ ಮುಗಿಸಿ ಬರುವ ಹೋಟೆಲ್ ಓನರ್ ಗಳನ್ನು, ಲೋಟ ತೊಳೆಯುವ ಬದಲು ಕೆಂಗೇರಿ ಮೋರಿಯಲ್ಲಿನ ನೀರಿನಂತಾ ಕಲಗಚ್ಚನ್ನು ಬಕೆಟ್ ನಲ್ಲಿರಿಸಿ ಅದರಲ್ಲದ್ದಿ ತೊಳೆಯುವವರನ್ನು ಎಲ್ಲರನ್ನೂ ಪಟ್ಟಿಮಾಡಿ ಈ ಶಿಕ್ಷೆ ಕೊಡಬೇಕನ್ನಿಸಿತು. ಎಷ್ಟು ಅಂದುಕೊಳ್ಳುತ್ತಿದ್ದರೇನು, ಕಾಫಿ ಗ್ಲಾಸು ಜತೆ ಗಡಿಯಾರ ಮುಳ್ಳಿನ ರೇಸು.. ಗೆಲ್ಲುತ್ತಿರುವ ಲಕ್ಷಣ ಮಾತ್ರ ಗಡಿಯಾರದ್ದೇ. ಕುಡಿದಷ್ಟೂ ತಳ ಕಾಣದ ಅಕ್ಷಯ ಕಪ್ಪು.

ಕ್ಯಾಶಿಯರ್ರಿನ ಮುಖ ನೋಡಿದರೆ ನನಗೆ ಇನ್ನಿಂಗ್ಸ್ ಸೋಲಾಗುವ ಭೀತಿ. ನಮ್ಮನೆ ದನ ಕಲಗಚ್ಚು ಕುಡಿಯುವಾಗಲೂ ಮಾಡದ ಮೂತಿಯನ್ನು ನಾನು ಅನಿವಾರ್ಯವಾಗಿ ಧರಿಸಬೇಕಾಯಿತು. ದನದ ಕಷ್ಟ ನೆನಪಾಗಿ ಅದರ ಮೇಲೆ ಯದ್ವಾತದ್ವಾ ಕರುಣೆ ಉಕ್ಕಿತು.

ಗ್ಲಾಸು ಎತ್ತಲು ಸಹಾಯ ಮಾಡದ ಕೈ, ಒಳಗೆ ಸೇರಿಸಲು ಬಯಸದ ಗಂಟಲು, ತನ್ನ ಮೈ ಮೇಲೆ ಒಂದು ಕ್ಷಣವೂ ಇರಗೊಡಿಸದ ನಾಲಿಗೆ, ಕಷ್ಟಪಟ್ಟರೂ ಮೊಗದ ಪೇಚು ಅಡಗಿಸಲಾಗದ ಅಸಾಹಯಕತೆ ಇವೆಲ್ಲದರ ನಡುವೆ ನನ್ನ ಕಾಫಿ ಕುಡಿಯುವ ಪ್ರಯತ್ನಕ್ಕೆ ಕೊನೆಗೂ ಜಯ ಸಿಕ್ಕಿತು.

ಕಾಫಿ ಮುಗಿಯಿತು.

ಬಿಲ್ಲು ಎತ್ತುವಾಗ ಉಂಟಾದ ಜ್ಞಾನೋದಯ ಏನೆಂದರೆ ಈ ಕಾಪಿ ಗೆ ಐವತ್ತು ರೂಪಾಯಿ (ಇಲ್ಲಿನ ಡಾಲರನ್ನು ರೂಪಾಯಿಗೆ ಬದಲಿಸಿದಾಗ). ಐವತ್ತು ವಸೂಲಿ ಮಾಡಲೇಬೇಕು ಎಂಬ ಕಾರಣಕ್ಕಾಗೇ ಅಷ್ಟು ಕ್ವಾಂಟಿಟಿ ಕೊಡುವುದು. ಕಡಿಮೆ ಕೊಟ್ಟರೆ ಬಿಲ್ಲಿಗೆ ಪ್ರಶ್ನೆ ಬರಬಾರದಲ್ವ?

ಅಂತೂ ಬಿಲ್ಲು ಎತ್ತಿ ಕೊಟ್ಟಾಗ ನನಗೆ ಭಾರೀ ಸುಸ್ತು!

ಅದೊಂದು ದಿನ ರಂಗೀಲಾ ಮ್ಯೂಸಿಕ್ ಮಾಡಲೋಸುಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಎ. ಆರ್. ರೆಹಮಾನ್ ರ ಸ್ಟೂಡಿಯೋದಲ್ಲಿದ್ದಾರೆ. ವರ್ಮಾಗೆ ಮೊದಲಿಂದಲೂ ಒಂದು ಕುತೂಹಲ ರೆಹಮಾನ್ ಯಶಸ್ಸಿನ ಬಗ್ಗೆ. ಚಿಕ್ಕ ವಯಸ್ಸಲ್ಲೇ ಮಾಡಿದ ಬ್ರಹ್ಮಾಂಡ ಸಾಧನೆಯ ಬಗ್ಗೆ. ಒಮ್ಮೆ ಜತೆಯಲ್ಲಿದ್ದಾಗ ರೆಹಮಾನ್ ಹೇಳುತ್ತಾರೆ,

1449977847

“ಈ ಸ್ಟೂಡಿಯೋದಿಂದ ಹೊರಹೋಗುವ ಗೀತೆಯೆಲ್ಲಾ ಚೆನ್ನಾಗಿರಬೇಕೆಂದು ನಿರ್ಧರಿಸಿಬಿಟ್ಟಿದ್ದೇನೆ!”

ನಾವೂ, ನೀವೂ, ರಾಮ್ ಗೋಪಾಲ್ ವರ್ಮಾರಂಥವರೂ ಇಂಥ ಪ್ರತಿಜ್ಞೆಗಳನ್ನು ಬಹಳ ಸಲ ಸಿಗರೇಟು ಬಿಡುವ ನಿರ್ಧಾರದಂತೆ ತೆಗೆದುಕೊಳ್ಳುತ್ತಿರುತ್ತೇವೆ. ಕೇವಲ ರೆಹಮಾನ್ ರಂಥವರಿಗೇ ಆ ನಿರ್ಧಾರವನ್ನು ಉಳಿಸಿಕೊಳ್ಳುವ, ಅದನ್ನೇ ಬದುಕುವ ಹಟ ಇರುತ್ತದೆ.

ಅದಕ್ಕೇ ರೆಹಮಾನ್ ಮೊಜಾರ್ಟ್ ಆಫ್ ಮದ್ರಾಸ್ ಅನ್ನಿಸಿಕೊಳ್ಳುತ್ತಾರೆ.

*******

ಇದು ಬಹುಶಃ ಬಹಳ ಜನಕ್ಕೆ ಗೊತ್ತಿರುವಂತ ಘಟನೆ.

೨೦೦೭ ನೇ ಇಸವಿಯಲ್ಲಿ ಹೈದರಾಬಾದ್ ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯ. (ಇಂಟರ್ನೆಟ್ ನಲ್ಲಿ ಇದು ೨೦೦೪ ರ ಕೋಲ್ಕತ್ತಾ ಟೆಸ್ಟ್ ಪಂದ್ಯ ಅಂತ ಹರಿದಾಡುತ್ತಿದೆ, ಆದರದು ನಿಜ ಅಲ್ಲ.) ಆಸ್ಟ್ರೇಲಿಯಾದ ಸ್ಪಿನ್ನರ್ ಬ್ರಾಡ್ ಹಾಗ್ ಗೆ ಸಚಿನ್ ವಿಕೆಟ್ ಪಡೆದರು. ಅದರಲ್ಲೂ ಕ್ಲೀನ್ ಬೌಲ್ಡ್ ಮಾಡಿ!. ಕ್ರಿಕೆಟ್ ದೈವ ಸಚಿನ್ ವಿಕೆಟ್ ಅಂದರೆ ಸಾಮಾನ್ಯವೇ? ಪ್ರಥಮ ದರ್ಜೆ ಪಂದ್ಯಗಳಲ್ಲಿ ಸಚಿನ್ ವಿಕೆಟ್ ಪಡೆದವರ ಹೆಸರು ಭಾರತ ದ ಕ್ರಿಕೆಟ್ ಆಯ್ಕೆಮಂಡಳಿ ಸದಸ್ಯರ ಬಾಯಲ್ಲಿ ಸುದ್ಧಿಯಾಗುತ್ತದಂತೆ (ವಿನಯ್ ಕುಮಾರ್). ಸಚಿನ್ ವಿಕೆಟ್ ಪಡೆದದ್ದಕ್ಕೆ ಪಂದ್ಯ ಗೆದ್ದಷ್ಟು ಸಂಭ್ರಮಿಸಿದವರಿದ್ದಾರೆ, ಸಚಿನ್ ಗೆ ಸ್ಲೆಡ್ಜಿಂಗ್ ಮಾಡಿ ನಂತರ ತಮ್ಮ ಕ್ರಿಕೆಟ್ ಬದುಕನ್ನೇ ಮುಗಿಸಿಕೊಂಡವರಿದ್ದಾರೆ (ಲಿಸ್ಟು ಭಾರೀ ದೊಡ್ಡದಿದೆ). ಸಚಿನ್ ಕ್ಯಾಚು ಕೈಬಿಟ್ಟಿದ್ದಕ್ಕೆ ಪಂದ್ಯವೇ ಕೈಜಾರಿಹೋಯಿತು ಅಂದವರಿದ್ದಾರೆ (ವಸೀಂ ಅಕ್ರಂ).

ಈ ಪಂದ್ಯದಲ್ಲಿ ಬ್ರಾಡ್ ಹಾಗ್ ಗಂತೂ ಸ್ವರ್ಗಕ್ಕೆ ಮೂರೇ ಗೇಣು. ತನ್ನ ಬೌಲಿಂಗ್ ಸಾಮರ್ಥ್ಯಕ್ಕೆ ಅದೊಂದು ದಾಖಲೆ ಅಂತ ಅಂದುಕೊಂಡರು.

ಹಾಗೇ ಪಂದ್ಯವಾದ ಬಳಿಕ ತಾನು ಬೌಲ್ಡ್ ಮಾಡಿದ ಅದೇ ಬಾಲ್ ನ ಮೇಲೆ ಸಚಿನ್ ರ ಆಟೋಗ್ರಾಫ್ ಪಡೆದರು. ಆಟೋಗ್ರಾಫ್ ಕೊಡುವಾಗ ಸಚಿನ್ ಆತನ ಬೌಲಿಂಗ್ ಬಗ್ಗೆ ಮೆಚ್ಚುಗೆ ಮಾತಾಡಿದರಾದರೂ ಆ ಬಾಲ್ ನ ಮೇಲೆ “ಇಟ್ ವಿಲ್ ನೆವರ್ ಹ್ಯಾಪ್ಪನ್ ಅಗೈನ್” ಅಂತ ಬರೆದರು.

ನಂತರ ಬ್ರಾಡ್ ಹಾಗ್ ಭಾರತದೆದುರು ಎಷ್ಟು ಪಂದ್ಯ ಆಡಿದರೂ ಸಚಿನ್ ವಿಕೆಟ್ ಸಿಕ್ಕಿಲ್ಲ!

****

will_smith

ಹಾಲಿವುಡ್ ನ ವಿಲ್ ಸ್ಮಿತ್ ನನ್ನ ಮೆಚ್ಚುಗೆಯ ನಟ. ಆತ ಬದುಕಿದ ಬಗೆಯೂ ಒಂದು ಸಾಹಸಗಾತೆ.

ಆತ ಯಶಸ್ಸಿನ ಬಗೆಗೆ ಮಾತೊಂದು ಹೇಳುತ್ತಾನೆ. ತುಂಬ ಸರಳವಾದ್ದು. ಯಶಸ್ಸಿಗೆ ಎರಡು ಸೂತ್ರಗಳು. ಒಂದು “ಓಡುವುದು” ಮತ್ತೊಂದು “ಓದುವುದು”!

ಇಷ್ಟೇನಾ? ಯಾವ ಆಧಾರದ ಮೇಲೆ ಹೇಗೆ ಈ ರೀತಿ ಅನ್ನುತ್ತಿದ್ದಾನೆ ಅಂದಿರಾ?

ಓಡುವುದು : ಓಡುವಾಗ ಮನಸ್ಸಿನೊಳಗಿನ ಆಲಸಿ, ಸಾಕು ನಿಲ್ಲಿಸು ಸುಸ್ತಾಗಿದ್ದೀಯಾ.. ಇವತ್ತಿಗಿಷ್ಟು ಸಾಕು ಅನ್ನುತ್ತದೆ. ಅದರ ಮಾತು ಧಿಕ್ಕರಿಸಿ ಓಡುತ್ತೇವೋ ಆಗ ಮನಸ್ಸಿನ ಮೇಲೆ ಹಿಡಿತ ದಕ್ಕುತ್ತದೆ.

ಓದುವುದು : ಜಗತ್ತಿನಲ್ಲಿ ಯಾವುದೂ ಹೊಸ ಸಮಸ್ಯೆ ಅನ್ನುವುದು ಒಂದಿಲ್ಲ. ಎಲ್ಲ ಸಮಸ್ಯೆಯೂ ಒಂದಲ್ಲ ಒಂದು ಸಮಯದಲ್ಲಿ ಒಬ್ಬರಿಗಾದರೂ ಬಂದಿದ್ದಿರುತ್ತದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಹಿಂದಿನವರು ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ. ಇಂದಿನವರೂ ಬರೆಯುತ್ತಿದ್ದಾರೆ. ಅರೆ! ಇದು ಎಂಥ ಅದೃಷ್ಟ ಅಲ್ಲವಾ? ಓದುವುದರಿಂದ ಸಮಸ್ಯೆ ಬರದ ಹಾಗೆ, ಬಂದರೆ ಎದುರಿಸುವ ಸಾಮರ್ಥ್ಯ ದೊರಕುತ್ತದೆ. ಅದಕ್ಕೆ ಓದುವುದು ಕೂಡ ಯಶಸ್ಸಿಗೆ ಒಂದು ಕಾರಣ.

ತುಂಬಾ ಸರಳವಾದ್ದೇ ಅಲ್ಲವೇ?

***

ವಿಲ್ ಸ್ಮಿತ್ ಮತ್ತೊಂದೆಡೆ ಹೀಗನ್ನುತ್ತಾರೆ.

ನನಗಿಂತ ಹೆಚ್ಚು ಬುದ್ಧಿವಂತರಿರಬಹುದು. ನನಗಿಂತ ಸಾಮರ್ಥ್ಯವಿದ್ದಿರುವವರಿರಬಹುದು. ಆದರೆ ಟ್ರೆಡ್ ಮಿಲ್ ನಲ್ಲಿ ನಡೆವ ಪಂದ್ಯವಿಟ್ಟರೆ ಕೇವಲ ಎರಡೇ ಎರಡು ಸಾಧ್ಯತೆಗಳಿರುತ್ತದೆ.
ಒಂದು : ನೀವು ಟ್ರೆಡ್ ಮಿಲ್ ನಿಂದ ಇಳಿಯಬೇಕು
ಅಥವಾ
ಎರಡು : ನಾನು ಸಾಯಬೇಕು.

ಇದು ಬಿಟ್ಟು ಬೇರೆ ಸಾಧ್ಯತೆಗಳಿಲ್ಲ!

****

ನನಗೊಬ್ಬ ಗೆಳೆಯನಿದ್ದಾನೆ. ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾನೆ.

ಬಹಳ ಪ್ಯಾಷನೇಟ್ ಆಗಿ ಕೆಲಸ ಮಾಡುವ ಆತನನ್ನು ಕಂಡು ಒಮ್ಮೆ, “ಮಾರಾಯ, ಹೀಗೆ ರಕ್ಕಸನಂತೆ ಕೆಲಸ ಎದುರುಹಾಕಿಕೊಂಡು ನಮಗೆಲ್ಲಾ ಏನೂ ಕೆಲಸ ಮಾಡದ ಪಾಪಪ್ರಜ್ಞೆ ಮೂಡಿಸುವಷ್ಟು ಕೆಲಸ ಮಾಡುತ್ತೀಯಲ್ಲ, ಹಾಗೆ ಮಾಡಲು ನಿನಗೆ ಸ್ಪೂರ್ತಿ ಏನು ಅಂತ ಕೇಳಿದ್ದಕ್ಕೆ ಆತ ಹೀಗೆ ಹೇಳಿದ.

“ನಮ್ಮ ಸುತ್ತಮುತ್ತ ಗಮನಿಸಿದರೆ ಏನೂ ಅರ್ಹತೆಯಿಲ್ಲದ ವ್ಯಕ್ತಿಗಳೆಲ್ಲ ಮೇಲೆ ಬರುತ್ತಿದ್ದಾರೆ. ಐಸೆ ಕೈಸೋಂಕೋ ದಿಯಾ ಹೈ ಅನ್ನುವಂತೆ ಎಂಥೆಂತವರಿಗೆಲ್ಲಾ ಸುಖಗಳು ಹುದ್ದೆಗಳು ದೊರಕಿರುತ್ತದೆ. ಅಂಥವರಿಗೇ ಎಲ್ಲಾ ಸಿಗುವಾಗ ನನಗ್ಯಾಕೆ ಸಿಗಬಾರದು ಅನ್ನುವ ಪಾಯಿಂಟೇ ನನ್ನನ್ನು ಮತ್ತಷ್ಟು ಕೆಲಸ ಮಾಡುವಂತೆ ಸೆಳೆಯುತ್ತದೆ. ಯಾಕೆಂದರೆ ಅದೃಷ್ಟ ಹೇಗೆ ಪಡೆವುದೋ ನನಗೆ ಗೊತ್ತಿಲ್ಲ, ಬುದ್ಧಿವಂತರಾಗುವುದು ಹೇಗೋ ನನಗೆ ಗೊತ್ತಿಲ್ಲ. ಆದರೆ ಕಷ್ಟ ಪಟ್ಟು ಕೆಲ್ಸ ಮಾಡುವುದೊಂದೆ ನನಗೆ ಅರಿವಿರುವುದು. ಅದೊಂದರಲ್ಲಿ ಮಾತ್ರ ನನಗಿಂತ ಬೇರೆ ಯಾರೂ ಬೆಸ್ಟ್ ಅನ್ನಿಸಿಕೊಳ್ಳಬಾರದೆಂಬುದಷ್ಟೇ ನನ್ನ ಬಯಕೆ. ಅದಲ್ಲದೇ ಈಗೀಗ ನನಗೆ ಅದರಿಂದ ಖುಷಿಯೂ ಸಿಗುತ್ತಿದೆ ಆದ್ದರಿಂದ “ನಾನು ಕಷ್ಟಪಡುತ್ತಿದ್ದೇನೆಂಬುದರ ಅರಿವಿಲ್ಲದೇನೇ” ಕೆಲಸ ಮಾಡ್ತಿದ್ದೇನೆ.”

ಯಶಸ್ಸಿನ ಕೇಲಿಕೈ ಹೇಗೆಲ್ಲಾ ಇರುತ್ತದಲ್ಲವಾ?!

*****

ಚಿತ್ರಕೃಪೆ : ಗೂಗಲ್

ನಿಗೂಢ ಊರಲ್ಲಿ ಸಿಲುಕಿ

ತನ್ನತನದ ಅಡ್ರೆಸ್ಸು ಹಿಡಿದು

ಊರೆಲ್ಲಾ ಅಂಡಲೆದ

ವಿಳಾಸವಂಚಿತ

 

 

 

 

 

 

ಎದೆಯಲ್ಲಿಂದು ಅಳಿಯದ ನೆನಪುಗಳನೇ

ಹೊತ್ತು

ತಿರುಗುವಾಗ

ಜಾತ್ರೆಯ ನಂತರದ ದಿವಸ

ಖಾಲಿ ಖಾಲಿ ತೇರು

ಊರಿನ ಹಾದಿಯೆಲ್ಲಾ

 

ಈಗ, ಈ ಕ್ಷಣ

ದಿಗ್ದಿಗಂತದಂಚಿನ

ಬೆಳ್ಳುಚುಕ್ಕಿ ಕೈಯ್ಯ

ಚಾಚಿದರೆ ಸಿಗುವಂಥದಲ್ಲ

ಹಸಿದರೂ ಚಂದಿರ

ರೊಟ್ಟಿಯಾಗುವುದಿಲ್ಲ

 

 

 

 

 

 

ತುಂಬು ಜನಸಂದಣಿಯ

ಜಾತ್ರೆಯಲ್ಲಿದ್ದರೂನು

ಆಮೆ ತನ್ನ ಕೋಶ

ದೊಳಗೇ  ಮಾಡಿಕೊಂಡಂತೆ ವಿಶ್ವ

 

ನೀ ಬಿಟ್ಟು ಹೋದ

ಜಗತ್ತಿನಲ್ಲಿ

ಅನಂತಾನಂತದಲ್ಲೆಲ್ಲೋ

ಉಡುಗಿಹೋದ ಚುಕ್ಕಿ ನಾನು..

 

ಆಗಷ್ಟೇ ಹಾವೊಂದು

ಗೂಡು ಗುಡಿಸಿ ಹೋದ

ಪಾಡಿನ,

ಕೊರಳೊಳಗೇ ಮಡಿದ

ಹಾಡಿನ

ಒಂಟಿ ಹಕ್ಕಿ ನಾನು..

untitled1

ಜಗತ್ತಿನ ಸಿಹಿವಸ್ತುವಿನ

ಸ್ಪರ್ಧೆಯಲಿ

ಜೇನು, ಸಕ್ಕರೆ , ಬೆಲ್ಲ

ಎಲ್ಲ ಸೇರಿ ಕೂಡ ಗೆಲ್ಲಲಾಗಲಿಲ್ಲ

ತಾನೇ ಗೆಲ್ಲುವುದೆಂಬ ಜಂಭ ಹೊತ್ತಿದ್ದ

ಕಬ್ಬಿನದೂ ಮುರಿಯಿತು ಕಟಿಯು

ಗೆದ್ದಿದ್ದು ನನ್ನವಳ ತುಟಿಯು!

(ಈ ಹನಿಯು ಮೊನ್ನೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದಾಗ (ಕೊನೆಯ) “ಕಾಲು”-ಭಾಗ ಕಾಣೆಯಾಗಿತ್ತು!)

 

emptyness21

 

ಕಿಟಕಿಯಾಚೆ ಜೋರಾಗಿ ಗಣಪತಿ ಬಪ್ಪಾ ಮೊರ್ಯಾ ಕೇಳುತ್ತಿದೆ. ಅಸಹನೆಯಿಂದ ಕಿಟಕಿ ಮುಚ್ಚಿ ಕೂತರೆ, ಈ ಸಲ ಗೆಳೆಯರ್ಯಾರೂ ಹಬ್ಬಕ್ಕೆ ಮನೆಗೆ ಕರೆಯದೇ ಹೋದರಾ ಎಂಬ ಆಲೋಚನೆ. ಇಂಟರ್ನೆಟ್ಟು ತೆಗೆದರೆ ಸಾಕು ಹ್ಯಾಪಿ ಗಣೇಶ ಚತುರ್ಥಿಯದೇ ರಗಳೆ. ಚುರುಗುಟ್ಟುವ ಹೊಟ್ಟೆ, ಆಗಷ್ಟೇ ಖಾಲಿಯಾದ ಅಡುಗೆ ಮನೆಯ ಡಬ್ಬಿಯನ್ನು ನೆನಪಿಸುತ್ತದೆ. ದರ್ಶಿನಿಯ ಹುಡುಗರೂ ತಮ್ಮ ಗುಂಪುಗಳಲ್ಲೇ ಹಬ್ಬ ಆಚರಿಸುತ್ತಿದ್ದಾರೆ. ಪಾತ್ರೆ ತೊಳೆಯುವ ಚಿಣ್ಣ ಇವತ್ತು ಕಾಲು ತುರಿಸಿಕೊಳ್ಳುವಂತಿಲ್ಲ. ಬಚ್ಚಲು ಮನೆಯ ಚೌಕಟ್ಟಿನಿಂದ ಹೊರಗೆ ಇಣುಕುತವೆ ಇಂದವನ ಕಣ್ಣುಗಳು.

ಗೋಡೆಗೆ ನೇತು ಹಾಕಿಕೊಂಡ ಕ್ಯಾಲೆಂಡರೂ ಭಾರಿಯಾದ ಗಣಪತಿ ಪೋಟೋವನ್ನು ಹೊತ್ತಿದೆ, ಅವನ ಪಕ್ಕದ ಇಲಿ ಲಾಡನ್ನು ಮೆಲ್ಲುತ್ತಾ ಮೆಲ್ಲಗೆ ನನ್ನನ್ನು ಉರಿಸುತ್ತಿದೆ.

 

ಹರಿದಿದ್ದರಿಂದ ಸೂಟ್ ಕೇಸಿನ ಜೈಲಿನೊಳಗೆ ಸೇರಿಸಲ್ಪಟ್ಟ ದುಬಾರಿ ಪ್ಯಾಂಟು ಯಾವಾಗ ಊರಿಗೆ ಹೋಗ್ತಿಯಪ್ಪಾ? ಅಂತ ದೈನ್ಯತೆಯಿಂದ ಬೇಡಿಕೊಳ್ಳುತ್ತಿದೆ, ಅದಕ್ಕೆ ಅಮ್ಮನ ಕೈಯಿಂದಲೇ ಆಪರೇಷನ್ ಆಗಬೇಕಿದೆ. ಹಬ್ಬದ ಸಡಗರವಿಲ್ಲದ ಜೀವ ಸುಮ್ಮನೆ ಅದರ ನೆನಪನ್ನು ಮೂಲೆಗೆ ತಳ್ಳಿ ಮುಂದಿನ ಸಲ ಊರಿಗೆ ಯಾವಾಗ ಹೋಗೋಣ? ಅಂತ ಖುಷಿಯಿಂದ ಚಿಂತಿಸುತ್ತ ಎಲ್ಲ ದುಃಖವನ್ನೂ ಮೀರುವ ಪ್ರಯತ್ನ ಮಾಡುತಿದೆ.

 

ಇವೆಲ್ಲ ತಮ್ಮ ಮನೆ ಬಿಟ್ಟು ತಮ್ಮನ್ನು ಬೇರೆ ಜಾಗದಲ್ಲಿ ಅನಿವಾರ್ಯತೆಯಿಂದಲೋ ಅಥವಾ ಬೇರೆ ಬೇರೆ ಕಾರಣಗಳಿಂದಲೋ ಉಳಿಯಬೇಕಾಗಿ ಬಂದವರ ಮನದ ಒಳಸುಳಿಯ ಕತೆಗಳು. ಅಲ್ಲಿ ಭೋರೆಂದು ಅಳುವ ದುಃಖವಿರುವುದಿಲ್ಲ. ದುಃಖ ಒಳಗೆಲ್ಲೋ ಮೆಲ್ಲಗೆ ತನ್ನಷ್ಟಕ್ಕೆ ಹರಿಯುತ್ತಿರುತ್ತದೆ. ಮುಖದ ಮೇಲೆ ಅದನ್ನೆಲ್ಲಾ ತಳ್ಳಿ ಹಾಕುವುದಕ್ಕೋಸ್ಕರವೇ ತೇಪೆ ಹಚ್ಚಿದಂತಿರುವ ನಗು ಪೇಲವವಾಗಿ ಕಾಣಿಸುತ್ತಿರುತ್ತದೆ.

 

ಹಿಂದಿನ ಕಾಲದ ಕೂಡು ಕುಟುಂಬ ವ್ಯವಸ್ಥೆಯಲ್ಲಿ ಮನೆಯಿಂದ ಹೊರಹೋಗುವ ಅವಕಾಶಗಳೇ ಕಡಿಮೆ. ಇಂತಹ ನೋವು ಮದುವೆಯಾಗಿ ಹೋಗುವ ಹುಡುಗಿಗೆ ಮಾತ್ರವಿತ್ತು. ಅದನ್ನು ಪಾತ್ರೆಯನ್ನು ತೀರ್ವ ಆಕ್ರೋಶದಿಂದ ಉಜ್ಜುತ್ತಲೋ ಅಥವಾ ದುಃಖವನ್ನೆಲ್ಲಾ ಈರುಳ್ಳಿ ಕತ್ತರಿಸುವ ನೆಪದಲ್ಲೋ ಹೊರಹಾಕುತ್ತಿದ್ದಿರಬೇಕು. ಈಗಿನ ನ್ಯೂಕ್ಲಿಯರ್ ಫ್ಯಾಮಿಲಿ ಅವತಾರದಲ್ಲಿ ಹಣಕ್ಕಾಗಿ, ಒಳ್ಳೆಯ ಭವಿಷ್ಯಕ್ಕಾಗಿ ಮನೆಬಿಟ್ಟು ತಮ್ಮನ್ನು ಬೇರೆ ಕಡೆಯಲ್ಲಿ ನೆಟ್ಟು ಹೋರಾಟ ಮಾಡಲೇ ಬೇಕಾದ ಪರಿಸ್ಥಿತಿ.

emptyness1

 

ಮುಖ್ಯವಾಗಿ ಓದಲೆಂದು ಕಡಿಮೆ ವಯಸ್ಸಿನಲ್ಲಿ ಮನೆಯಿಂದ ಹೊರತಳ್ಳಲ್ಪಟ್ಟ  ಹುಡುಗರ ವ್ಯಥೆಗೆ ಭಾರ ಹೆಚ್ಚು. ಅಮ್ಮನ ಸಹಾಯ ಅಪ್ಪನ ಪ್ರೀತಿ ಮತ್ತು ಪರ್ಸಿನ ಮೇಲೆಯೇ ಅವಲಂಬಿತರಾದ ಮಕ್ಕಳು ಅವರ ಹೊರತಾದ ಪ್ರೀತಿ ಸರಕು ಕಾಣದ ಸಂತೆಯ ಪ್ರಪಂಚದಲ್ಲಿ ಒಗ್ಗಿಕೊಳ್ಳಲು ಪಡುವ ಪರಿಪಾಡು ದೇವರಿಗೇ ಪ್ರೀತಿ. ಹೃದಯವ ಗಟ್ಟಿ ಮಾಡಿಕೊಂಡಿರುವ ಮೊಬೈಲು, ಅವರ ಮನೆಯ ನೆನಪುಗಳಿಗೆ, ದುಃಖಗಳಿಗೆ ಎಂದೂ ಅಳದು.

 ಕಾಲೇಜಿನಿಂದ ಮನೆಗೆ ನಡೆದು ಬರುವಾಗ ಸಿಗುವ ಅನಾಥಾಶ್ರಮ ನೋಡಿ, ಊರು ಬಿಟ್ಟು ಬಂದ ತಾನೂ ಒಂದು ರೀತಿ ಇದೇ ಅಲ್ಲವೇ? ಅಂದುಕೊಳ್ಳುತ್ತಾ, ಹಾಸ್ಟೆಲುಗಳಿಗೆ ಟೆಂಪರರಿ ಅನಾಥರ ಆಶ್ರಮ ಅಂದ್ಯಾಕೆ ಕರೆಯಬಾರದು ಎಂದು ತನಗೆ ತಾನೇ ಜೋಕು ಮಾಡಿಕೊಳ್ಳುತ್ತದೆ ಮನಸು.

 

ನೋಡಿಕೊಳ್ಳಲು ಅಮ್ಮನಿಲ್ಲ ಪಾಪ! ಅಂದುಕೊಳ್ಳೂತ್ತ ಅವರೆಡೆಗೆ ಬರದೇ ಕರುಣೆ ತೋರುತ್ತವೆ ಖಾಯಿಲೆಗಳು. ಒಂದು ವೇಳೆ ಬಂದರೆ ಗಂಚಿ ಯಾರು ಕುಡಿಸುವವರು? ಬೈದು ಮಾತ್ರೆಯನ್ನು ಜೇನುತುಪ್ಪದಲ್ಲಿ ಕೊಡುವವರಾರು? ಇಂಜಕ್ಷನ್ನಿಗೆ ಹೆದರಿದರೆ, (ಬಲವಂತದಿಂದ) ಡಾಕ್ಟರ್ ಹತ್ತಿರ ಕರೆದೊಯ್ಯುವವರಾರು? ಎನ್ನುತ್ತಾ ಸುಮ್ಮಸುಮ್ಮನೆ ಆತಂಕಕ್ಕೊಳಗಾಗುವ ಹುಡುಗಿ ನಿಷ್ಕರುಣಿ ದಿಂಬಿಗೆ ಎಲ್ಲ ದುಃಖವನ್ನು ಕಣ್ಣೀರ ಮೂಲಕ ಹೇಳಿಕೊಳ್ತಾಳೆ.

 

ಆದರೆ ಬಹಳ ದಿನವಿರದು ಇಂಥ ತೊಳಲಾಟ. ಮನಸ್ಸು ಎಲ್ಲದಕ್ಕೂ ಅಡ್ಜಸ್ಟ್ ಆಗುತ್ತದೆ. ತನ್ನದೇ ಪ್ರೀತಿಯ ವಲಯವೊಂದು ಕಟ್ಟಿಕೊಳ್ಳುತ್ತದೆ. ಪ್ರತಿಭೆಯೊಂದರ ಮೂಲಕ ಎಲ್ಲರ ಮೆಚ್ಚುಗೆಗಳಿಸುತ್ತದೆ. ಹೇಗಾದರೂ ಕಷ್ಟಪಟ್ಟು ತನ್ನ ಬದುಕನ್ನು ಸಹನೀಯವಾಗಿಸುತ್ತವೆ.

 

ಹಾಗೆಯೇ ಈ ದೂರಗಳು ಒಂದು ನೀತಿಪಾಠವನ್ನು ಮೌನವಾಗಿ ಕಲಿಸುತ್ತದೆ. ಮನೆಯಲ್ಲಿದ್ದಾಗ ರುಚಿಯಿಲ್ಲ ಅಂತ ಎಸೆದ ತಿಂಡಿ ಹಾಸ್ಟೆಲಿನ ಅನಿವಾರ್ಯ ಆಹಾರಗಳನ್ನು ಕಷ್ಟಪಟ್ಟು ಬಾಯೊಳಗೆ ಸೇರಿಸಿಕೊಳ್ಳುವಾಗ ಅಮ್ಮ ನೆನಪಾಗ್ತಾಳೆ. ಮತ್ತೆಂದೂ ಅಮ್ಮನ ಪ್ರೀತಿಯ ತಿಂಡಿ ರುಚಿ ತಪ್ಪುವುದಿಲ್ಲ.

ಅತ್ತೆ ಮಾವನಿಂದ ಉಗಿಸಿಕೊಂಡು ಸೊಸೆ ಬಾಗಿಲು ಹಾಕಿಕೊಂಡು ಒಂಟಿಯಾಗಿ ರೂಮಿನಲ್ಲಿದ್ದಾಗ ಅಪ್ಪ-ಅಮ್ಮನೇ ಕಾಣಿಸುತ್ತಾರೆ. ಅವರ ಕಣ್ಣೊಳಗಿನ ಪ್ರೀತಿಯು ಈ ಹಿಂದೆಂದೂ ಕಾಣದಷ್ಟು ಇಷ್ಟವಾಗಿ ದಟ್ಟವಾಗಿ ಹೊಳೆಯುತ್ತಿರುತ್ತದೆ.

 

ಇಂತಹ ಹೋಮ್ ಸಿಕ್ ನೆಸ್ ಅಂತ ಕರೆಸಿಕೊಳ್ಳುವ ಖಾಯಿಲೆಗೆ ಮದ್ದೆಂದರೆ, ತಮ್ಮದೇ ಹೊಸ ಪ್ರಪಂಚ ಸೃಷ್ಠಿಸಿಕೊಳ್ಳುವುದು.  ಮಾನಸಿಕ ಪರಾವಲಂಬಿತನ ಹೊಡೆದೋಡಿಸಿಕೊಳ್ಳೂತ್ತಾ ನಿರ್ಣಯಗಳಿಗೆಲ್ಲ ತಮ್ಮನ್ನು ತಾವೇ ಒಡ್ಡಿಕೊಂಡು ಅದರ ಫಲಿತಾಂಶದ ಹೊಣೆಯನ್ನು ತಮ್ಮ ಹೆಗಲಿಗೇ ಹಾಕಿಕೊಳ್ಳುವುದು. ತಮ್ಮ ಪ್ರತಿಭೆ ಪ್ರಪಂಚಕ್ಕೆ ಅರಿವಾಗುತ್ತಿದ್ದಂತೆ ಮೆಚ್ಚಿಕೊಳ್ಳುವ ಜನ ಹತ್ತಿರಾಗುತ್ತಾರೆ. ಹೊಸ ಪ್ರಪಂಚದ ಗೆಳೆಯರಾಗುತ್ತಾರೆ. ಹೊಸತನ್ನು ಜೀರ್ಣಿಸಿಕೊಳ್ಳುವಂತಹ ಶಕ್ತಿ ಒಳಗಿನಿಂದಲೇ ಚಿಮ್ಮುತ್ತದೆ.

 

ಗೂಡಿನ ಹೊರಗೂ ಹಾರುವ ಹಕ್ಕಿ ಇಡಿ ವಿಶ್ವವೇ ತನ್ನ ಕಾಲ್ಗೆಳಗಿರುವುದನ್ನು ಕಂಡು ತನ್ನಷ್ಟಕ್ಕೆ ತಾನೇ ಹೆಮ್ಮೆಯಿಂದ ನಗುತ್ತದೆ!

 

(ಸುಪ್ರೀತ್ ರ “ಸಡಗರ” ಪತ್ರಿಕೆಗಾಗಿ ಬರೆದದ್ದು.)

 

ಪತ್ರಿಕೆ ಕೊಂಡಿ : http://kalaravapatrike.wordpress.com/

 

ಚಂದಾ ವಿವರಗಳು: http://kalaravapatrike.wordpress.com/about/

 

 

 

 

 

ಅಮ್ಮನಿಗೆ ಮೊಬೈಲ್ ಕಂಡರೆ ಆಗಲ್ಲ.

ಮಗನ ಜತೆ ಮಾತನಾಡಬಹುದು ಅನ್ನುವ ಒಂದು ಕಾರಣ ಇಲ್ಲದೇ ಹೋಗಿರದಿದ್ದರೆ ಅದನ್ನು ಯಾವಾಗಲೋ  ಎಸೆದಿರುತಿದ್ದಳು  ಅನ್ನಿಸುತ್ತೆ.
ಮೊಬೈಲ್ ನಲ್ಲಿ ಕರೆ ಸ್ವೀಕರಿಸುವ ಗುಂಡಿ ಬಿಟ್ಟರೆ ಬೇರೇನೂ ಒತ್ತಲು ಗೊತ್ತಿಲ್ಲ. ಅದನ್ನೂ ನಾನು ಕರೆ ಮಾಡುವೆ ಎಂಬ ಉದ್ದೇಶದಿಂದಲೇ ಕಷ್ಟಪಟ್ಟು  ಕಲಿತದ್ದು . ನನ್ನ ಬಿಟ್ಟರೆ ಬೇರೆ ಯಾರೂ ಕರೆ ಮಾಡದೇ ಹೋದರೂ ಯಾವಾಗಲೋ ಒಮ್ಮೆ ಆ ನಂಬರನ್ನು ನಾನು ಉಪಯೋಗಿಸಿದ್ದನ್ನು  ನೆನೆದು ಕೊಂಡು ನನ್ನ ಗೆಳೆಯರು ಮಾಡಿರಬಹುದು ಅಂತ ಊಹೆ ಮಾಡುತ್ತಾಳೆ. ಆ ನಂಬಿಕೆಗೆ ತುಪ್ಪ ಹುಯ್ಯುವಂತೆ ನಾನೂ ಆಗಾಗ್ಗೆ  ಬೇರೆ ದನಿಯಲ್ಲಿ ಮಾತಾಡಿ  ಕಾಡುತಿರುತ್ತೇನೆ.
ಯಾವಾಗಲೋ  ಒಮ್ಮೆ ಬೇರೆ ಯಾರಾದರೂ ಕರೆ ಮಾಡಿದಾಗ ನಾನೇ ಬೇರೆ ದನಿಯಲ್ಲಿ ಮಾತಾಡ್ತಾ ಇದ್ದೇನೆ ಅಂದುಕೊಂಡು ಅವಳ ಬಾಯಲ್ಲಿ ಹಿಗ್ಗಾ ಮುಗ್ಗಾ  ಉಗಿಸಿಕೊಳ್ಳುತ್ತಾರೆ ಅನ್ನಿಸುತಿರುತ್ತದೆ.
ಆದರೆ ಹಾಗೆಂದೂ ಆಗಿಲ್ಲ .

ಎಷ್ಟು ಸಲ ಆ ರೀತಿ ಮಾಡಿದರೂ ಮತ್ತೆ ಮತ್ತೆ ಮೋಸ ಹೋಗುತ್ತಾಳೆ. ನನಗೆ ಮೊದಲ ತೊದಲ  ಮಾತು ಕಳಿಸಿದ ಋಣ ಮರೆಯದೇ ಎಲ್ಲೂ ನೋವಾಗದಂತೆಯೇ ಮಾತಾಡುವೆ. ಕಾಮಿಡಿ ಟೈಮ್ ಗಣೇಶ್ ತರ ಬೇರೆ ದನಿಯಲ್ಲಿ ಮಾತಾಡಿದ,
ಅಂತ ಎಲ್ಲೆಡೆ ಕುಶೀಯಿಂದ ಹೇಳಿಕೊಳ್ಳಬೇಕು ಹಾಗೆ ಮಾತಾಡುತಿದ್ದೆ.

ಅಪ್ಪ ತೀರಿ ಹೋದ ಮೇಲೆ  ಮನೆಯಲ್ಲಿ ಒಬ್ಬಳೇ ಇರುತ್ತಳಲ್ಲ ಅಂತ ಬೇಸರಾಗಿ ನಾನು ಮಾಲ್ಡಿವ್ಸ್ ಗೆ ಬಂದ ಮೇಲೆ ಹೆಚ್ಚು ಕರೆ ಮಾಡುತ್ತೇನೆ. ಕೆಲಸಕ್ಕೆ ಹೋದ ಅಣ್ಣ  ಮರಳಿ ಬರುವುದು ರಾತ್ರಿಯೆ. ಅವನ ಬಳಿ ಮೈಲ್ ನಲ್ಲಿ ಮಾತಾಡಬಹುದು.ಹಾಗಾಗಿ ಅವಳು ಧಾರಾವಾಹಿಗಳಿಗೆ ಅಡ್ಡಿಯಾಗದಂತೆ ಸಮಯ ನೋಡಿ ಕರೆ ಮಾಡ್ತಾ ಇರ್ತೇನೆ.
ಒಮ್ಮೆ ಈ  ಕೀಟಲೆ  ಮನಸ್ಸಿಗೆ ಯಾಕೋ ಅಮ್ಮನ ಜನರಲ್  ನಾಲೆಜ್  ನೋಡಬೆಕನ್ನಿಸಿತು. “ಎಲ್ಲಿದ್ದಾನೆ ಈಗ ನಿಮ್ಮ ಕಿರಿಯ ಮಗ ?”ಅಂತ ಯಾರಾದರೂ ಕೇಳಿದರೆ “ಫಾರಿನಲ್ಲಿದ್ದಾನೆ ” ಅನ್ನಬಲ್ಲಳಾದರೂ ಎಲ್ಲಿ ಅಂತ ಕೇಳಿದರೆ ಎನನ್ನುವಳು ಎಂಬ ಕುತೂಹಲ ನನಗೂ ಇತ್ತು.
ಅಂದೂ ಕರೆ ಮಾಡಿ ವಿಭಿನ್ನ ದನಿಯಲ್ಲಿ ಮಾತು ಶುರು ಮಾಡಿದೆ.
“ಎಲ್ಲಿದ್ದಾನಮ್ಮ  ನಿಮ್ಮ ಕಿರೀ ಮಗ?”
“ಮ್..ಅವ ಫಾರಿನ್ನಿಗ್ ಹೋಯ್ದ..”
“ಅಯ್ಯ… ಫಾರೀನ್ ಅಂದ್ರೆ ಎಲ್ಲಿ..?”
“ಮ್..ಅದ್  ಅದ್ .. ಮೋಸ್ಕೋ ಅಂತ್ ಹೇಳಿ  ಕಾಣುತ್ತ್… ಸರೀಗೆ ಗೊತ್ತಿಲ್ಲ ಕಾಣಿ..” ಅಂತ ಕೇಳಿದೊಡನೆ ನಗು ತಡೆಯಲಾಗಲಿಲ್ಲ.
ತನ್ನ ಪ್ರೀತಿ ಮುಗ್ಧತೆಯಿಂದ , ಪ್ರೀತಿಯಿಂದ ಸದಾ ನೆನಪಾಗ್ತಾ ಇರ್ತಾಳೆ. ಮಗ ಫಾರಿನ್ನಿಗೆ ಹೋದ ಅಂತ ಒಂದು ಹೆಮ್ಮೆ,,ನನ್ನೆಡೆಗಿನ ಭರ್ಜರಿ  ಪ್ರೀತಿ ಬಿಟ್ಟರೆ ಆಕೆಯ ಮನದಲ್ಲಿ ಬೇರೇನೂ ಕಾಣಸಿಗದು.
ತನ್ನ ಹಾಸ್ಪಿಟಾಲಿಟಿಗಾಗಿ   ಜಗತ್ತಿಗೇ  ಹೆಸರುವಾಸಿಯಾದ ಮಾಲ್ಡಿವ್ಸ್ ಗೆ ಬಂದರೂ ಅಮ್ಮನ ಪ್ರೀತಿ ಸಿಗದಷ್ಟು ದೂರ ಇರುವ ನಾವು ಒಂದು ತರ ಅನಾಥರೆ ಅಲ್ಲವೇ ಎಂಬುದು ಆಗ್ಗಾಗ್ಗೆ ಚುಚ್ಚುತ್ತಾ ಇರುತ್ತದೆ…