Archive for the ‘ಪರ್ಸನಲ್ಲು’ Category

ಇತ್ತೀಚೆಗೆ ಓದಿದ ಪುಸ್ತಕಗಳಲ್ಲಿ ನನ್ನನ್ನು ತುಂಬಾ ಬದಲಾಯಿಸಿದ ಪುಸ್ತಕದ ಕುರಿತು ಹೇಳಬೇಕನ್ನಿಸುತ್ತಿದೆ. ರುಜುತಾ ದಿವೇಕರ್ ಬರೆದಿರುವ ಡೋಂಟ್ ಲೂಸ್ ಯುವರ್ ಮೈಂಡ್, ಲೂಸ್ ಯುವರ್ ವೆಯ್ಟ್ – ಅನ್ನುವುದು ಆ ಪುಸ್ತಕದ ಹೆಸರು. ಕಮರ್ಷಿಯಲ್ ದೃಷ್ಟಿಯಿಂದ ಪುಸ್ತಕದ ಶೀರ್ಷಿಕೆ ತೂಕ ಇಳಿಸುವ ಬಗ್ಗೆ ಇದ್ದರೂ, ಪುಸ್ತಕದ ಒಳಗೆ ಆರೋಗ್ಯಕರವಾದ ಬದುಕನ್ನು ಕಟ್ಟಿಕೊಳ್ಳುವ ವಿಚಾರವನ್ನು ಬಹಳ ಸರಳವಾಗಿ, ತರ್ಕಬದ್ಧವಾಗಿ ಮಂಡಿಸುತ್ತಾರೆ ರುಜುತಾ. ಕರೀನಾ ಕಪೂರ್ ಗೆ ಡಯಟಿಷಿಯನ್ ಆಗಿ, ಆಕೆಯ ಜೀರೋ ಸೈಜ್ ಗೆ ಕಾರಣೀಭೂತರಾಗಿದ್ದುದರಿಂದ ಒಮ್ಮಿಂದೊಮ್ಮಲೆ ಪ್ರಸಿದ್ಧಿ ದೊರಕಿದರೂ, ಆಕೆಯ ಥಿಯರಿಗಳು ತುಂಬಾ ಸುಲಭ ಸಾಧ್ಯವಾದುದು. ಎಲ್ಲ ವರ್ಗದ ಜನರೂ ಆರಾಮಾಗಿ ಪಾಲಿಸಬಲ್ಲಂಥದ್ದು.

ಪುಸ್ತಕ ಓದಿ ಅಂತ ಹೇಳುತ್ತಲೇ ಆಕೆಯ ಕೆಲ ಮುಖ್ಯ ಥಿಯರಿಯನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ಇನ್ನಷ್ಟು ವಿವರಗಳಿಗೆ ಕಾಪಿ ರೈಟ್ ಸಮಸ್ಯೆಯ ಕಾರಣ ನೀವು ಪುಸ್ತಕದ ಮೊರೆ ಹೋಗಬೇಕಾಗುತ್ತದೆ.

don-t-lose-your-mind-lose-your-weight-400x400-imadaryhavfhdnfv

೧. ಬೆಳಿಗ್ಗೆ ಎದ್ದ ಹತ್ತು ಹದಿನೈದು ನಿಮಿಷದಲ್ಲಿ ಹಣ್ಣು, ಡ್ರೈ ಫ್ರೂಟ್ಸ್ ಇಂತದ್ದೇನಾದರೂ ತಿನ್ನಬೇಕು. ಎದ್ದ ಕೂಡಲೇ ಕಾಫಿ ಮತ್ತು ಟೀ ಮಾತ್ರ ಯಾವ ಕಾರಣಕ್ಕೂ ಸಲ್ಲದು. ಕಾಫಿ ಇಲ್ಲದೇ ಬಾಳಲಾಗದವರು, ಎರಡನೇ ಉಪಹಾರದ ನಂತರ ಕಾಫಿ ಸೇವಿಸಬಹುದು.
೨. ದಿನವಿಡೀ ೨ ಅಥವಾ ಮೂರು ಘಂಟೆಗೊಮ್ಮೆ ಸ್ವಲ್ಪ ಆಹಾರ ಸೇವಿಸಬೇಕು. ಅಂದರೆ ಬೆಳಿಗ್ಗೆ ಉಪಹಾರಕ್ಕೆ ಏನು ತಿನ್ನುತ್ತೀರೋ ಅದರ ಅರ್ಧದಷ್ಟನ್ನು ಎರಡು ಬಾರಿ ಎರಡು ಗಂಟೆ ಗ್ಯಾಪ್ ನಲ್ಲಿ ತಿನ್ನುವುದು. ದಿನವಿಡೀ ಕಡಿಮೆ ಆಹಾರವನ್ನು, ಸಮಯದ ಗ್ಯಾಪ್ ಇಟ್ಟು, ಹೆಚ್ಚು ಬಾರಿ ಸೇವಿಸಬೇಕು.
೩. ದಿನದಲ್ಲಿ ನೀವು ಹೆಚ್ಚು ಆಕ್ಟಿವ್ ಆಗಿರುವಂಥ ಸಮಯದಲ್ಲಿ ಹೆಚ್ಚು ತಿನ್ನುವುದು, ಕಡಿಮೆ ಆಕ್ಟಿವಿಟಿ ಇರುವಾಗ ಕಮ್ಮಿ ತಿನ್ನುವುದು.
೪. ರಾತ್ರಿ ಮಲಗುವ ಎರಡು ಅಥವಾ ಮೂರು ಗಂಟೆ ಮುಂಚಿತವಾಗಿ ರಾತ್ರಿಯೂಟವನ್ನು ಮಾಡುವುದು.

ಇಷ್ಟೇ ಸಿಂಪಲ್ ಆದ ಪಾಯಿಂಟ್ಸ್ ಗಳು ಈ ಪುಸ್ತಕದ ಜೀವಾಳ. ಇದನ್ನು ಯಾಕೆ ಮಾಡಬೇಕು, ಮಾಡುವುದರಿಂದ ಪ್ರಯೋಜನವೇನು ಎಂಬುದನ್ನು ರುಜುತಾ ವಿವರಿಸಿದ್ದಾರೆ. ಜೊತೆಗೆ ಎಂಥೆಂಥ ಆಹಾರವನ್ನು ಸೇವಿಸಬಹುದು, ಸೇವಿಸಬಾರದು ಎಂಬದರ ಬಗ್ಗೆ ಕೂಲಂಕಷ ವಿವರಣೆ ಸಿಗುತ್ತದೆ. ಆಹಾರದ ಜೊತೆಗೆ ವಾರಕ್ಕೆ ಕಡಿಮೆ ಅಂದರೆ ಮೂರು ಗಂಟೆಗಳ ಕಾಲ ವ್ಯಾಯಾಮ ಅಗತ್ಯ. ಇದಕ್ಕೆ ಮಾತ್ರ ಯಾವ ಶಾರ್ಟ್ ಕಟ್ ಇಲ್ಲ ಅಂತ ಖಡಾಖಂಡಿತವಾಗಿ ಹೇಳುವ ರುಜುತಾರ ಮತ್ತೊಂದು ಪುಸ್ತಕ ವ್ಯಾಯಾಮದ ಬಗ್ಗೆಯೇ ಇದೆ.

*****

ಮೊನ್ನೆ ಸುಚಿತ್ರಾ ಫಿಲಂ ಸೊಸೈಟಿ ಅಂಗಳದಲ್ಲಿ ಯೋಗರಾಜ್ ಭಟ್ ರ ಜೊತೆ ಸಂವಾದವಿತ್ತು. ಈ ಸಂವಾದಕ್ಕೂ ಮೊದಲು ಅವರ ಉಢಾಫೆ ಪ್ರವೃತ್ತಿಯಿಂದಾಗಿ ಅವರ ಬಗ್ಗೆಯೇ ನನ್ನೊಳಗೆ ಒಂದು ಉಢಾಫೆ ಮನೆಮಾಡಿತ್ತು. ಅವರ ಆ ಎರಡು ಗಂಟೆಯ ಸಂವಾದದ ಬಳಿಕ ಅವರ ಬಗ್ಗೆ ಇದ್ದ ಪೂರ್ವಗ್ರಹ ಹೊರಟು ಹೋಯಿತು. ಯೋಗರಾಜ್ ಭಟ್ ಯಾವುದೇ ಪ್ಲಾನ್ ಇಟ್ಟುಕೊಂಡು ಮಾತಾಡುವುದಿಲ್ಲ. ಆ ಕ್ಷಣ ಅನ್ನಿಸಿದ್ದನ್ನು, ಒಂಚೂರು ತನ್ನ ಮೇಲೆ ತಾನೇ ವ್ಯಂಗ್ಯವಿಟ್ಟುಕೊಂಡು, ತೆಳು ಹಾಸ್ಯದ ಲೇಪದ ಮೂಲಕ ನಿಶ್ಕಲ್ಮಷವಾಗಿ ಹೇಳಿಬಿಡುತ್ತಾರೆ. ಇನ್ನೊಂದು ಅರಿವಾದ ವಿಚಾರವೆಂದರೆ ಅವರ ಓದಿನ ಹರವು ವಿಸ್ತಾರವಾಗಿದೆ. ಬಹುಶಃ ಇದುವರೆಗೂ ಚಿತ್ರರಂಗದಲ್ಲಿ ಗಟ್ಟಿಯಾಗಿ ತಮ್ಮ ಛಾಪನ್ನು ಉಳಿಸಿಕೊಳ್ಳಲು ಅವರ ಸಾಹಿತ್ಯಾಭಿರುಚಿಯೇ ಕಾರಣವಿರಬೇಕು. ಚಿತ್ರಗೀತೆ ಬರೆಯುವಾಗ ಎಂಥ ಎಬುಡ ತಬುಡ ಪ್ರಯೋಗಗಳ ಮಾಡಲು, ಕಾರಣ ಕನ್ನಡ ವ್ಯಾಕರಣದ ಜ್ಞಾನ, ಬೇರೆ ಬೇರೆ ಧಾಟಿಯ ಕನ್ನಡದ ಮೇಲಿನ ಹಿಡಿತ, ಸಾಹಿತ್ಯ ಬಲ್ಲ ಆತ್ಮವಿಶ್ವಾಸವೇ ಅನ್ನುವುದು ಅರಿವಾಗ್ತದೆ.

ಅವರು ಆ ದಿನ, ಈ ಮುಖ್ಯವಾದ ವಿಚಾರಗಳ ಕುರಿತು ಮಾತಾಡಿದರು (ಅವರು ಹೇಳೋ ಶೈಲಿ ಬೇರೆ, ಅದರ ಸಾರ ಮಾತ್ರ ಇಲ್ಲಿದೆ) :-
~ ಸಿನಿಮಾ ಅಂದರೆ ನನಗೆ ಯಾವಾಗಲೂ ಎರಡು ಘಟನೆಗಳು ಕಾಡುತ್ತದೆ. ಒಮ್ಮೆ ಒಂದು ಸಾಹಿತ್ಯ ಸಭೆಯಲ್ಲಿ ಲೇಖಕರೊಬ್ಬರು ಸಾಹಿತ್ಯದ ಕುರಿತು ಭೀಷಣವಾಗಿ ಭಾಷಣ ಮಾಡುತ್ತಿದ್ದರು. ಬಹುಶಃ ಭಾಷಣದ ಓಘದಲ್ಲಿ ಮೈಮರೆತು ಸಾಹಿತ್ಯವನ್ನು ಓದಿಕೊಳ್ಳದವನು ಮನುಷ್ಯನೇ ಅಲ್ಲ ಎಂದು ಬಿಟ್ಟರು. ಅಲ್ಲಿ ಕೂತಿದ್ದ ಮುದುಕನಿಗೆ ಅದು ನೋವುಂಟು ಮಾಡಿರಬೇಕು, ಸರ…ಒಂದ್ನಿಮಿಷರೀ..ಅಂದ. ಸಭೆ ಅವರತ್ತ ತಿರುಗಿತು. ಅವರು ಎದ್ದು ನಿಂತು ಅಲ್ಲಾ.. ಈ ಸಾಹಿತ್ಯ ಪಾಹಿತ್ಯ, ಕಥೀ ಪಥೀ ಓದ್ಲಿಲ್ಲಾ ಅಂದ್ರೆ ಮನುಷ್ಯಾನೇ ಅಲ್ಲ ಅಂತೀರಲ್ರೀ.. ನಾನಾಗ್ಲೀ, ನಮ್ಮಪ್ಪನಾಗ್ಲೀ, ನಮ್ಮ ದೊಡ್ಡಪ್ಪ, ನಾವು ಏಳು ಜನ ಅಣ್ಣತಮ್ಮಂದಿರಿದೀವು.. ಯಾರೂ ಇದುವರೆಗೂ ಒಂದ್ ಪೇಜೂ ಓದಿಲ್ಲ.. ನಾವ್ ಮನುಷ್ಯರು ಹೌದೋ ಅಲ್ಲೋ..? ಅಂತ ಕೇಳಿಯೇ ಬಿಟ್ಟರು.

index-yograj
ಇನ್ನೊಂದು ನಾಗತಿಹಳ್ಳಿಯವರ ಸಿನಿಮಾ ಕ್ಲಾಸ್ ನಲ್ಲಿ ನಡೆದದ್ದು -ಅದರ ಸಾರಾಂಶ ಎಂದರೆ, ಸಿನಿಮಾ ಎಂದರೇನು ಅನ್ನೊ ಪ್ರಶ್ನೆ ಬಂದಾಗ, ಭಟ್ಟರು ಹೇಳಿದ್ದು ಸಿನಿಮಾ ಅನ್ನುವುದು ಕೆಲಸವಿಲ್ಲದವರು ಮಾಡುವ ಕೆಲಸ ಅಂತ. ಕೊನೆಗೆ ಅದನ್ನು ವಿವರಿಸಲೇಬೇಕಾಗಿ ಬಂದಾಗ, “ನೀವು ಸಿನಿಮಾ ನೋಡಲು ಹೋಗಬೇಕಾಗಿ ಬಂದಾಗ, ಎಕ್ಸಾಮ್ ಇದ್ರೆ ಹೋಗಲ್ಲ, ಆಫೀಸಿನಲ್ಲಿ ಏನಾದ್ರೂ ಇಂಪಾರ್ಟೆಂಟ್ ಕೆಲ್ಸ ಇದ್ರೆ ಹೋಗಲ್ಲ, ಹತ್ತಿರದವರ್ಯಾದರೂ ತೀರ್ಕೊಂಡಿದ್ದಾಗ ಹೋಗಲ್ಲ, ಹೀಗೆ ಐದಾರು ಘಂಟೆ ಫ್ರೀ ಇದ್ದಾಗ ಮಾತ್ರ ಸಿನಿಮಾ ನೋಡೋದು ಅನ್ನೋದು ನಡೆಯುತ್ತೆ. ಹೀಗಿದ್ದಾಗ ಸಿನಿಮಾ ಅನ್ನೋದು ಕೆಲಸವಿಲ್ಲದವರು ನೋಡುವ, ಮತ್ತಷ್ಟು ಕೆಲಸ ಇಲ್ಲದವನೇ ಮಾಡೋ ಕೆಲಸ ಅನ್ನುವುದನ್ನು ಹಾಸ್ಯವಾಗಿ, ವಿಡಂಬನೆಯಿಂದ ತನ್ನನ್ನು ತಾನೇ ಗೇಲಿ ಮಾಡಿಕೋತಾ ವಿವರಿಸಿದ್ರು.
~ ಯಾವ ಯಾವ ಭಾಷೆಯಲ್ಲಿ ಸಾಹಿತ್ಯ ಸಮೃದ್ಧವಾಗಿದೆಯೋ ಅಲ್ಲಿ ಚಿತ್ರರಂಗ ತುಂಬಾ ದುರ್ಬಲವಾಗಿರುತ್ತದೆ (ಕಮರ್ಷಿಯಲ್ಲೀ). ಇದಕ್ಕೆ ಕನ್ನಡ, ಬೆಂಗಾಳೀ, ರಾಜಸ್ಥಾನೀ ಭಾಷೆಗಳು ಉದಾಹರಣೆ.
~ ಕನ್ನಡ ಚಿತ್ರಗಳನ್ನು ನೋಡುವವರು ಬಹುತೇಕ ಹದಿನಾರರಿಂದ ಇಪ್ಪತ್ತೈದು ವಯಸ್ಸಿನವರು. ಅವರು ಮೊದಲು ನೋಡಿ, ಅವರಿಗಿಷ್ಟ ಆದರೆ ಮಾತ್ರ ಅವರ ಅಪ್ಪ ಅಮ್ಮ, ಅಂಕಲ್ ಆಂಟಿ, ಅಕ್ಕ ಭಾವ ನೋಡೋಕೆ ಬರ್ತಾರೆ. ಹಾಗಾಗಿ ನನ್ನ ಸಿನಿಮಾ ಅವರನ್ನು ಓಲೈಸುವ ಹಾಗಿರುತ್ತದೆ. ಅದು ಈಗಿನ ಮಾರುಕಟ್ಟೆಯ ಅವಶ್ಯಕತೆ ಕೂಡ.
~ ಎಲ್ಲರೂ ಒಳ್ಳೆ ಸಿನಿಮಾ ಮಾಡಿ, ಒಳ್ಳೇ ಕಥೆ ಬರೀರಿ ಅಂತಾರೆ. ಮಾಡಿದರೆ ನೋಡಲ್ಲ. ಬರೆದರೆ ಓದಲ್ಲ.

~ ನಾನು ಕಥೆಯನ್ನು ಪಾತ್ರಗಳ ಮೂಲಕ ಹೇಳಲು ಬಯಸ್ತೇನೆ. ನಂಗೆ ಸಿನಿಮಾ ಮಾಡಲು ಒಂದೊಳ್ಳೆ ಪಾತ್ರ ಸಿಕ್ಕರೆ ಸಾಕು. ಇದು ತಪ್ಪು ಅಂತ ಗೊತ್ತು. ಇಲ್ಲಿ ಸಿನಿಮಾ ಮಾಡಬಯಸುವ ನಿರ್ದೇಶಕರಿಗೆ ಹೇಳೋದು ಒಳ್ಳೆ ಕಥೆ ಇಟ್ಕೊಂಡು ಸಿನಿಮಾ ಮಾಡಿ.

ಇನ್ನಷ್ಟು ಒಳ್ಳೆಯ ಸಂವಾದ ಅಲ್ಲಿ ನಡೆಯಿತು. ಮೆದುಳಿಗೆ ಒಳ್ಳೆ ಮೇವು ದೊರಕಿಂದಂತೆ ಸಂತೃಪ್ತಿಯಿಂದ ಹೊರಬಂದೆ.

ನಿಮ್ಮ ಮನೆಯಲ್ಲಿ ಓದಬಲ್ಲಂಥ ಮಕ್ಕಳಿದ್ದರೆ ಅನುಪಮಾ ನಿರಂಜನ ಬರೆದ ’ದಿನಕ್ಕೊಂದು ಕಥೆಗಳು ಸೀರೀಸ್" ಓದಲು ನೀಡಿ.

ಒಟ್ಟೂ ಹನ್ನೆರಡು ಪುಸ್ತಕಗಳು. ಒಂದು ಪುಸ್ತಕ ಶುರು ಮಾಡಿದರೆ ಮಕ್ಕಳೇ ಪೀಡಿಸಿ ಕೇಳುವಂಥ ಕಥೆಗಳಿವೆ. ಮಜವಾದ ಕಥೆಗಳ ಜತೆಗೆ ನೀತಿಯುಕ್ತವಾಗಿಯೂ ಉಳ್ಳಂಥ ಪುಟ್ಟ ಪುಟ್ಟ ಕಥೆಗಳು. ಮಕ್ಕಳ ಊಹಿಸಬಲ್ಲಂಥ, ಓದಿ ಅರ್ಥಮಾಡಿಕೊಳ್ಳಬಲ್ಲಂಥ, ಗ್ರಹಿಸಿಕೊಳ್ಳುವಂಥ ಕಲೆ ವಿಪರೀತ ಅಭಿವೃದ್ಧಿಯಾಗುತ್ತದೆ. ಮಕ್ಕಳ ಮೆದುಳಿಗೆ ಕಲ್ಪನೆಯ ರೆಕ್ಕೆಗಳು ಮೂಡುವುದು ಇಂಥದ್ದನ್ನು ಓದಿಯೇ. ದೃಶ್ಯಮಾಧ್ಯಮಗಳು ಈ ರೀತಿಯ ಕಲ್ಪನೆಯ ಅಭಿವೃದ್ಧಿಗೆ ಅವಕಾಶ ನೀಡುವುದಿಲ್ಲ ಯಾಕೆಂದರೆ ಕಥೆ ನಡೆವಂಥ ಜಗತ್ತು ಕಾಣ್ತಾವೆ. ಆದರೆ ಕಥೆ ಪುಸ್ತಕ ಹಾಗಲ್ಲ, ಸಾಲುಗಳು ಆ ಕಥಾಜಗತ್ತಿಗೆ ದ್ವಾರವಿದ್ದಂತೆ, ಪದಗಳ ಮೂಲಕ ಹೆಜ್ಜೆಯಿಡುತ್ತ ಮಕ್ಕಳು ಆ ಲೋಕದೊಳಗೆ ಪ್ರವೇಶಿಸುತ್ತವೆ. ಅದೂ ಅಲ್ಲದೇ ನೀತಿ, ನಿಯತ್ತು, ಶ್ರದ್ಧಾ ಪಾಠ, ಸತ್ಯದ ಮಹಿಮೆ ಇವೆಲ್ಲವೂ ಟೀವಿ ಸೀರಿಯಲ್ಲುಗಳಲ್ಲಿ, ಹೊರಜಗತ್ತಿನಲ್ಲಿ ಸಿಗುವುದು ಕಡಿಮೆ. ನಾವು ಹೇಳಿಕೊಡುವುದು ಮಕ್ಕಳಿಗೆ ರಂಜನೀಯವೆನಿಸವು. ಕಥೆಗಳೇ  ಒಳ್ಳೇ ಟೀಚರ್ ನಂತೆ ಇಂಥ ಸಮಯದಲ್ಲಿ ಸಹಾಯ ಮಾಡುತ್ತದೆ. ಮಕ್ಕಳನ್ನು ತನ್ನ ಲೋಕದೊಳಗೇ ಸೆಳೆದು ಅವಕ್ಕೆ  ಕಾನ್ಶಿಯಸ್ ಆಗಿ ಅರಿವಾಗದಂತೆ ಪಾಠ ಹೇಳುತ್ವೆ.

ಅಕ್ಬರ್ ಬೀರ್ ಬಲ್ ಕಥೆಗಳೂ, ಈಸೋಪನ ನೀತಿಕಥೆಗಳೂ, ತೆನಾಲಿ ರಾಮನ ಕಥೆಗಳೂ ಹಾಗೆನೆ ಇದ್ದರೂ ಅವೆಲ್ಲಾ ಟೀವಿಯಲ್ಲಿ ಬರುತ್ತವಾದ್ದರಿಂದ ಕಾರ್ಟೂನ್ ನೆಟ್ ವರ್ಕ್ ನಂತಹ ಚಾನೆಲ್ ಗಳಲ್ಲಿ ಮಕ್ಕಳು ನೋಡಿಯೇ ಇರ್ತಾವೆ.

ನಿಜಕ್ಕೂ ಮಕ್ಕಳ ಭವಿಷ್ಯಕ್ಕೆ ಕಥೆ ಓದುವುದಕ್ಕೆ ಮೀಸಲಿಟ್ಟ ಸಮಯವೂ, ವಿನಿಯೋಗಿಸಿದ ಹಣವೂ ಒಳ್ಳೆಯ ಇನ್ವೆಸ್ಟ್ ಮೆಂಟ್.

ಮುಂದಿನ ತಲೆಮಾರು ಇಂಥ ಒಳ್ಳೆ ಪುಸ್ತಕ ಮಿಸ್ ಮಾಡಿಕೊಳ್ಳುತ್ತೇನೋ ಎಂಬ ಭಯಮಿಶ್ರಿತ ಕಾಳಜಿಯಿಂದ ನನ್ನ ಈ ರೆಕಮೆಂಡೇಶನ್ ಪೋಸ್ಟ್ ಮಾಡ್ತಿದ್ದೇನೆ.

 

*******

 

ನಾನು ಹಾಸ್ಟೆಲ್ ನಲ್ಲಿ ಓದುತ್ತಿದ್ದ ಸಮಯ. ಜತೆಗಾರರೆಲ್ಲರೂ ಕೋಲಾರದಿಂದ ಬಂದವರು. ತೆಲುಗು ಭಾಷೆ ಅವರಿಗೆ ಕರತಲಾಮಲಕ. ಸಿನೆಮಾ ಬಗ್ಗೆ ಮಾತಾಡುವಾಗೆಲ್ಲಾ ರಾಜೇಂದ್ರ ಪ್ರಸಾದ್, ಬ್ರಹ್ಮಾನಂದಂ ರ ಹಾಸ್ಯ ದೃಶ್ಯಗಳನ್ನು ವಿವರಿಸುತ್ತಿದ್ದರೆ ಬಿದ್ದು ಬಿದ್ದು ನಗುವಂತಾಗುತ್ತಿತ್ತು. ಅವರ ಹಾಸ್ಯ ಸಿನೆಮಾಗಳನ್ನು ನೋಡಲಿಕ್ಕಾಗಿಯೇ ನಾನು ತೆಲುಗು ಭಾಷೆ ಕಲಿತಿದ್ದಾಯಿತು. ಸ್ವಲ್ಪ ವರ್ಷಗಳ ಬಳಿಕ ವಡಿವೇಲು, ವಿವೇಕ್ ರ ಹಾಸ್ಯ ದೃಶ್ಯಗಳಿಗಾಗಿ ತಮಿಳೂ ಕಲಿತಿದ್ದಾಯಿತು. ಈಗ ಮಲೆಯಾಳಮ್ ಚಿತ್ರಗಳ ಕತೆಗಳ ಸೊಗಸನ್ನು ಕೇಳಿ ಮಲೆಯಾಳಮ್ ಕೂಡ ಕಲಿಯಬೇಕನ್ನಿಸುತ್ತಿದೆ.

ಒಂದು ವೇಳೆ ಆ ಚಿತ್ರಗಳು ಕನ್ನಡಕ್ಕೆ ಡಬ್ ಆಗಿದ್ದಿದ್ದರೆ ನಾನು ತೆಲುಗು, ತಮಿಳು ಕಲಿವ ಅಗತ್ಯತೆ ಇತ್ತಾ? ಮಲೆಯಾಳಮ್ ಕಲಿವ ಆಸೆ ಹುಟ್ಟುತ್ತಿತ್ತಾ?

ಹಾಗಂತ ನಾನು ಡಬ್ಬಿಂಗ್ ಪರವಾ? ಅಥವ ವಿರೋಧಿಯಾ? ಈಗಲೂ ಡಬ್ಬಿಂಗ್ ಬಂದರೆ ಮಲೆಯಾಳಮ್ ಕಲಿವ ಆಸೆಯನ್ನು ಕೈಬಿಡುತ್ತೇನೆ
ಮತ್ತು ಡಬ್ಬಿಂಗ್ ಬರದಿದ್ದರೆ ಮಲೆಯಾಳಮ್ ಕಲಿಯುತ್ತೇನೆ.

ಮತ್ತು ನನಗೆ ಬರುವ ಹಿಂದಿ ಭಾಷೆಯ, ತಮಿಳಿನ, ತೆಲುಗಿನ, ಇಂಗ್ಲೀಷ್ ನ ಯಾವ ಡಬ್ಬಿಂಗ್ ಆದ ಸಿನೆಮಾವನ್ನೂ ನೋಡಲಾರೆ. ಕನ್ನಡ ಮಾತಾಡುವ ಆರ್ನಾಲ್ಡ್ ಶ್ವಾಜ್ನಗರ್ ಚಿತ್ರ, ಕನ್ನಡ ಮಾತಾಡುವ ವಿಲ್ ಸ್ಮಿತ್ ಚಿತ್ರಗಳು ನನಗೆ ಅಪಹಾಸ್ಯ ಅನ್ನಿಸುತ್ತದೆ. ಹಾಗೇನೆ ಮಮ್ಮುಟ್ಟಿ, ಮೋಹನ್ ಲಾಲ್ ಮಾತಾಡುವ ಕನ್ನಡ ನನಗೆ ವಿಚಿತ್ರ ಅನ್ನಿಸದು, ಕಾರಣ ಮಲೆಯಾಳಿ ಭಾಷೆ ಬರುವುದಿಲ್ಲ. ಮಲೆಯಾಳಮ್ ನ ಸ್ಲಾಂಗ್, ಅದರ ಭಾಷೆಯ ಏರಿಳಿತದ ಪರಿಚಯವಿಲ್ಲವಾದ್ದರಿಂದ.

ನಾನು ಡಬ್ಬಿಂಗ್ ಪರವಾ ವಿರೋಧಿಯಾ? ಗೊತ್ತಿಲ್ಲ.

ಒಂದಂತೂ ನಿಜ. ನಾನು ಚಿತ್ರ ಚೆನ್ನಾಗಿದ್ದರೆ ನೋಡ್ತೇವೆ, ಇಲ್ಲಾಂದರೆ ಇಲ್ಲ. ಡಬ್ಬಿಂಗೇ ಆಗಿರಬಹುದು ಅಥವಾ ಕನ್ನಡ ಚಿತ್ರವೇ ಆಗಿರಬಹುದು- ಹೀಗೆ ಅನ್ನುವವರ ಪರ.

 

****

 

ಒಬ್ಬ ಖ್ಯಾತ ಚಿತ್ರಸಾಹಿತಿ ಇದ್ದಾನೆ ಅಂದುಕೊಳ್ಳೋಣ. ಆತನ ಕೈಗೆ ಕಾಲಿಗೆ ಅಸಿಸ್ಟೆಂಟುಗಳು. ಆತ ಬರೆದರೆ ಮ್ಯೂಸಿಕ್ ಸೀಡಿ ಗೆ ಒಳ್ಳೆ ಸೇಲು. ಚಿತ್ರಕ್ಕೆ ಒಳ್ಳೆ ಜಾಹೀರಾತು. ಕೆಲವೊಮ್ಮೆ ಚಿತ್ರಕ್ಕಿಂತ ಆತನ ಗೀತೆಗಳೇ ಬಲು ಮಜ ಅನ್ನಿಸುತ್ತದೆ ಜನರಿಗೆ. ಹೀಗಿರುವಾಗ ಆತ ತನ್ನ ಸಂಭಾವನೆಯನ್ನು ಹಿಮಾಲಯದ ತುದಿಗೆ ಏರಿಸುತ್ತಾನೆ.  ನಿರ್ಮಾಪಕರೂ ತಲೆ ಕೆರೆದುಕೊಳ್ಳದೇ ಕೈಬಿಚ್ಚಿ ಲಕ್ಷವೆಂದರೂ ನೀಡುತ್ತಾರೆ ಅಂದುಕೊಳ್ಳೋಣ. ಹೀಗೇ ನಡೆಯುತ್ತಿರುತ್ತದೆ.
ಆದರೆ ಈ ಬರವಣಿಗೆ ಕೆಲವೊಮ್ಮೆ ಒಲಿಯುವುದಿಲ್ಲ, ತಲೆಯನ್ನು ಪರಾಪರಾ ಕೆರೆದುಕೊಂಡರೂ ಹೊಳೆಯುವುದಿಲ್ಲ. ಖಾಲಿ ಹಾಳೆಗಿಂತ ಒಳ್ಳೆಯ ಕವನ ಇಲ್ಲ ಅಂತ ಬರೆಯಬಹುದಾದರೂ ಅದಕ್ಕೆ ಸಂಭಾವನೆ ಸಿಗುವುದಿಲ್ಲ.

ಹೀಗಿರುವಾಗ ಆ ಗುರುವಿಗೊಬ್ಬ ಅಸಿಸ್ಟೆಂಟು. ಗುರುವುಗಿಂತ ಅದ್ಭುತವಾಗಿ ಬರೆಯಬಲ್ಲ. ಅದು ಗುರುವಿಗೂ ಗೊತ್ತು. ಆದರೆ ಆತ ಒಂದು ಹಾಡು ಬರೆದರೆ ಆತನಿಗೆ ಸಿಗುವುದು ಗರಿಷ್ಟವೆಂದರೆ ೫ ರಿಂದ ಹತ್ತು ಸಾವಿರ. ಕಾರಣ ಆತನಿನ್ನೂ ಹೊಸಬ. ಹೆಸರಿಲ್ಲ. ಹೀಗಿರುವಾಗ ಗುರುವಿಗೊಮ್ಮೆ ಐಡಿಯಾ ಹೊಳೆಯುತ್ತದೆ. ’ಶಿಷ್ಯಾ, ನೀನು ಬರಿ, ನಿರ್ಮಾಪಕರ ಬಳಿ ನಾನು ಬರೆದಿದ್ದು ಅಂತೇನೆ. ನಿರ್ಮಾಪಕ ಕೊಟ್ಟ ಲಕ್ಷವನ್ನು ನಿನಗೆ ಕೊಡ್ತೇನೆ, ಸರಿಯಾ?’ ಅಷ್ಟು ದೊಡ್ಡ ಅಮೌಂಟು ಕನಸಿನಲ್ಲೂ ಎಣಿಸಿರದ ಶಿಷ್ಯನು ಹಿಂದೆ ಮುಂದೆ ಬರೆದು ಬರೆದು ಕೊಡುತ್ತಾನೆ. ಲಕ್ಷ ಲಕ್ಷ ಎಣಿಸುತ್ತಾನೆ.

ಗುರು ಖುಷ್, ಶಿಷ್ಯ ಖುಷ್, ನಿರ್ಮಾಪಕ ಖುಷ್, ಜನರೂ ಖುಷ್!

ಸರ್ವೇ ಜನಾಃ ಸುಖಿನೋ ಭವಂತಿ!

ಇದು ಕಥೆ.

ಒಂದು ವೇಳೆ ಇದು ಯಾವ ವ್ಯಕ್ತಿ, ಘಟನೆ, ಸ್ಥಳಕ್ಕೆ ಹೋಲಿಕೆಯುಳ್ಳದ್ದಾದರೆ ಅದು ಕೇವಲ ಕಾಕತಾಳೀಯ!

******

ಇದುವರೆಗೂ ಬ್ಯಾಚುಲರ್ ಅಂತ ಹಣೆಪಟ್ಟಿ ಹಾಕ್ಕೊಂಡು ಒಬ್ಬನೇ ಆರಾಮಾಗಿದ್ದೆ. ನಾನು ಬೆಂಗಳೂರಿಗೆ ಬರುವೆ, ಇಲ್ಲೇ ಇರುವೆ ಅಂತ ಸುದ್ಧಿ ಪಕ್ಕಾ ಆದ ಕೂಡಲೇ ಅಮ್ಮ ನಾನೂ ಬೆಂಗಳೂರಿಗೆ ಬರ್ತೇನೆ, ನಿನ್ನ ಜತೆ ಇರ್ತೇನೆ ಅಂದಾಗ ಖುಷಿ ಆಯ್ತು. ಅಲ್ಲಿಗೆ ನನ್ನ ರೂಮು ಜೀವನ, ಚೆಲ್ಲಾಪಿಲ್ಲಿ ಪೇಪರುಗಳ ಫ್ಲೋರಿಂಗ್, ಅಶಿಸ್ತಿನ ಅಭ್ಯಾಸಗಳಿಗೆ ತಿಲಾಂಜಲಿ ಇಡುವ ಅನಿವಾರ್ಯತೆ ಉಂಟಾಯಿತು. ಆದರೂ ಹೊತ್ತೊತ್ತಿಗೆ ಕರೆಕ್ಟಾಗಿ ಸಿಗುವ ಭಾರೀ ಭೋಜನ, ಮನೆಗೆ ಬೇಗ ಹೋಗೋಣ ಅಂತ ಅನ್ನಿಸುವಂತೆ ಮಾಡುವ ಒಂದು ಜೀವ ನಮ್ಮನ್ನು ಕಾಯುತ್ತ ಇರುತ್ತದೆಂಬ ಭಾವನೆಗಳು ಆಸೆ ಹುಟ್ಟಿಸಿದವು. ಒಡಹುಟ್ಟಿದವರೂ ನಿಷ್ಕಲ್ಮಶ, ನಿಷ್ಕಾರಣ ಪ್ರೀತಿ ತೋರದಿರುವ ಈ ಕಾಲದಲ್ಲಿ ಅದಕ್ಕೆ ನಂಬಬೇಕಾದ್ದು ಅಮ್ಮ ಒಬ್ಬರನ್ನೇ ಅಲ್ಲವೇ? ಹಾಗಾಗಿ ರೂಮು ಹುಡುಕುವುದು ಬಿಟ್ಟು ಮನೆ ಹುಡುಕುವುದಕ್ಕೆ ಶುರು ಮಾಡಿದ್ದಾಯಿತು.

ಬೆಂಗಳೂರು ಮಧ್ಯದಲ್ಲಿರುವ ಆಸೆ, ಬೆಂಗಳೂರು ಮ್ಯಾಪಿನ ಎಲ್ಲೋ ಮೂಲೆಯಲ್ಲಿರುವ ಕೆಲಸದ ಜಾಗ, ಈ ಎರಡೂ ತುಂಬ ಮಾನಸಿಕ ಸಂಘರ್ಷ ಉಂಟುಮಾಡಿದವು. ಕೊನೆಗೂ ಎಲ್ಲಾ ಆಸೆಗಳನ್ನು ಟ್ರಾಫಿಕ್ ಎಂಬ ಭೂತ ಹೆದರಿಸಿ ’ಎಲ್ಲಿ ಕೆಲಸವೋ ಅಲ್ಲೇ ವಾಸ’ ಎಂಬ ಗಾದೆ ಹುಟ್ಟಿಸಿ ಮ್ಯಾಪಿನ ಮೂಲೆಯಲ್ಲೇ ಮನೆ ಮಾಡುವಂತೆ ಪ್ರೇರೇಪಿಸಿದವು. ಮನೆ ಆಯ್ತು, ಅಮ್ಮ ಬರುವ ಮುಂಚೆ ಎಲ್ಲಾ ತಯಾರಿರಬೇಕು ಅಂತ ಅನ್ನಿಸಿ ಮನೆಗೆ ಬೇಕಾದ ಎಲ್ಲಾ ಸಾಮಾನುಗಳೂ, ಯಂತ್ರ (ವಾಷಿಂಗ್ ಮೆಶೀನು, ಗ್ಯಾಸು ಸಿಲಿಂಡರು ಇತ್ಯಾದಿ) ತಂದಿರಿಸಿದ್ದಾಯಿತು. ಅಮ್ಮನಿಗೆ ಮುಖ್ಯವಾಗಿ ಬೇಕಾಗಿದ್ದ ಟೀವಿ ಠೀವಿಯಿಂದ ಡ್ರಾಯಿಂಗ್ ರೂಮಿನಲ್ಲಿ ಕೂತಿತು.

The Chef

ಪ್ರಾಯೋಗಿಕವಾಗಿ ನನ್ನ ಅಡುಗೆಗಳೂ ಭರದಿಂದ ಶುರುವಾದವು. ಆಡುವ ಮುಂಚೆ ಪಿಚ್ ಪರೀಕ್ಷಿಸುವ ರೀತಿಯಲ್ಲಿ ಅಡುಗೆ ಮನೆಯೂ ಸಜ್ಜುಗೊಳಿಸಿದ್ದಾಯಿತು.

ಅಮ್ಮನಿಗೆ ಒಂದು ಆರಾಮಿನ ದಿನ ಫೋನ್ ಹಚ್ಚಿ, ’ಯಾವಾಗ ಬರುವಂತಾಗುತ್ತೀಯಾ?’ ಅಂತ ಕೇಳಿದರೆ ಉತ್ತರಿಸದೇ ನಕ್ಕು ಸುಮ್ಮನಾದಳು. ಇನ್ನೂ ಸ್ವಲ್ಪ ದಿನ ಹೋಗಲಿ ಅಂತ ನಾನೂ ಮೌನವಾಗಿ ಒಬ್ಬನೇ ಅಡುಗೆ ಮಾಡಿಕೊಂಡೆ. ಬೆಳಿಗ್ಗೆ ಎದ್ದು ಕಸ ಗುಡಿಸಿದೆ, ಹಾಲು ತಂದು ಕಾಫಿ ಮಾಡಿ, ಮನೆಯಲ್ಲೇ ಫಾಸ್ಟಾಗಿ ಫಾಸ್ಟ್ ಫುಡ್ ಮಾಡಿಕೊಂಡು ಪಾತ್ರೆ ತೊಳೆದು ಓಡೋಡಿ ಕೆಲಸಕ್ಕೆ ಹಾಜರಾದೆ. ಮತ್ತೆ ಸಂಜೆ ಬಂದು ಅಡುಗೆ, ಪಾತ್ರೆ ತೊಳೆದು ಮಧ್ಯೆ ಆಗಗ್ಗೊಮ್ಮೆ ವಾಶಿಂಗ್ ಮೆಶೀನ್ ನ ಕೈಲಿ ಬಟ್ಟೆ ಒಗೆಸುವುದೂ ಮಾಡಿ ಬದುಕುತ್ತಿದ್ದೇನೆ. ದಿನಗಳು ಚೌಕದಿಂದ ಚೌಕಕ್ಕೆ ಜಿಗಿದು, ಫ್ಯಾನುಗಾಳಿಗೆ ಹಾಳೆ ಹಾರಿದಂತೆ ತಿಂಗಳುಗಳೂ ಮುಗಿದವು.

0511-1005-1216-1751_Man_Daydreaming_About_Being_a_Chef_clipart_image

ಯಾವಾಗ ಬರ್ತಿದೀಯಮ್ಮೋ ಅಂತ ಕೇಳಿದಾಗಲೆಲ್ಲ ಮುಗುಳ್ನಗುವೆ ಆಕೆಯ ಉತ್ತರ. ಯಾಕೆ ಹೀಗೆ, ಏನು ಆ ನಗುವಿನ ಮರ್ಮ ಅಂತ ಅರ್ಥವೆ ಆಗ್ತಿದ್ದಿರಲಿಲ್ಲ.

ಮೊನ್ನೆ ಗೆಳೆಯನಿಗೆ ನನ್ನ ಈ ದಿನಚರಿ ವಿವರಿಸುತ್ತಿದ್ದಾಗ ’ ಹಾಗಿದ್ರೆ ಮದುವೆಗೆ ಭರ್ಜರಿಯಾಗೆ ತಯಾರಾಗ್ತಿದೀಯಾ, ಬಿಡು!’ ಅಂತ ಛೇಡಿಸಿದ. ಯಾಕೋ ಅವ ಹಂಗಂದ ಕೂಡಲೇ ಅಮ್ಮನ ನಗು ನೆನಪಾಯ್ತು.

ಹ್ಮ್! ಅಮ್ಮಂದಿರೂ ನಮ್ಮಂಥ (ದೊಡ್ಡ)ಮಕ್ಕಳಿಗಿಂತ ಬುದ್ದಿವಂತರಾಗುತ್ತಿದ್ದಾರೆ!

ನಾನು ಕನ್ನಡಿಗ ಅಂತ ಅನ್ನುವಾಗ ನನಗೆ ಚೂರೂ ಹೆಮ್ಮೆಯೇ ಆಗುತ್ತಿದ್ದಿರಲಿಲ್ಲ.

ಹೌದು. ಇಸ್ಕೂಲು, ಹೈಸ್ಕೂಲು ಓದುವಾಗಲೆಲ್ಲ ’ನಾನು ಕನ್ನಡಿಗ’ ಅನ್ನುವುದರಲ್ಲಿ ಅಂತಹ ವಿಶೇಷಗಳೇನೂ ಇರಲಿಲ್ಲ. ಸುತ್ತಮುತ್ತಲೂ ಮುತ್ತಿಕೊಂಡಿದ್ದ ಗೆಳೆಯರೆಲ್ಲರೂ ಕನ್ನಡಿಗರೇ ಆಗಿದ್ದರಿಂದ ಅದೊಂದು ಸ್ಪೆಷಲ್ ಅನ್ನುವ ಭಾವ ಮೂಡುತ್ತಿರಲಿಲ್ಲ. ಕಾಲೇಜುಪರ್ವದಲ್ಲಿ ಕನ್ನಡಿಗ ಆಗಿರುವುದು ಕೊಂಚ ಸಂಕಟಗಳಿಗೆ ಸಿಕ್ಕಿಸಿತ್ತಾದರೂ ಅದಕ್ಕೆ ಕಾರಣ ’ನಾ ಕನ್ನಡದವ’ ಆಗಿರುವುದಲ್ಲ, ’ಇಂಗ್ಲೀಷ್ ಅರಿವು ಕಡಿಮೆ ಇರುವುದು’ ಎಂಬ ಜ್ಞಾನೋದಯ ಆದಮೇಲೆ ಆ ಕುರಿತು ಆಲೋಚನೆಯೂ ಬರಲಿಲ್ಲ.

ಆದರೆ ಕರುನಾಡ ಕೋಟೆ ದಾಟಿದ ಮೇಲೆ ಕನ್ನಡ ಎಂಬ ಭಾಷೆ ಎಷ್ಟು ಸಿಹಿ ಅನ್ನುವುದು ಗೋಚರವಾಗುತ್ತಿತ್ತು. ಇದೊಂಥರ ಮನೆಯಲ್ಲಿದ್ದಾಗ ಹಠ, ಗೊಂದಲ ಮಾಡುತ್ತಿದ್ದು ನಂತರ ಅಮ್ಮನ ಮಹತ್ವ ಅರಿವಾಗುವ ಹಾಸ್ಟೆಲ್ ಹುಡುಗನ ರೀತಿ. ಸಿಂಗಾಪೂರ್ ಗೆ ಬಂದ ಮೇಲೆ ನನ್ನ ಜತೆ ಕೆಲಸ ಮಾಡುವವರಿಗೆ ನನ್ನ ರಾಜ್ಯದ ಕುರಿತು, ಭಾಷೆಯ ಕುರಿತು ವಿವರಿಸುವಾಗ ಅದೆಂತದೋ ಪದಗಳಲ್ಲಿ ಸಿಲುಕದ ಸಂತಸ. ಅವರಂತೂ ಅಮೇರಿಕದ ವೈಭವವನ್ನೂ ಈ ರೀತಿಯ ವಿವರಣೆಯ ಸಹಿತ ಕೇಳಿರಲಿಕ್ಕಿಲ್ಲ, ಹಾಗೆ ಇರುತ್ತಿತ್ತು. ಇಲ್ಲಿಯ ಹೆಚ್ಚಿನವರಿಗೆ ಭಾರತೀಯರೆಂದರೆ ತಮಿಳರು ಅನ್ನುವ ಭಾವ ಇರುವುದರಿಂದ, ನನ್ನ ಭಾರತೀಯತೆ ಅರಿವಾದ ಕೂಡಲೇ, ’ತಮಿಳಾ?’ ಎನ್ನುವ ಪ್ರಶ್ನೆ ಕೇಳುತ್ತಾರೆ. “ಅಲ್ಲ, ನಾನು ಕನ್ನಡಿಗ’ ಎಂಬ ಉತ್ತರಕ್ಕೆ ಪೂರ ಹೆಮ್ಮೆಯ ಲೇಪ. ಅಲ್ಲೇ ಹುಟ್ಟಿ, ಅಲ್ಲೇ ಬೆಳೆದಿದ್ದರೂ ಯಾವಾಗಲೂ ಈ ವಾಕ್ಯ ಆಡಿದ ಉದಾಹರಣೆ ನೆನಪಿಲ್ಲ.

ಜಯಂತ್ ಕಾಯ್ಕಿಣಿ ತಮ್ಮ ಭಾಷಣದಲ್ಲಿ ಯಾವಾಗಲೂ ಹೇಳುತ್ತಿರುತ್ತಾರೆ, ” ನಾವು ಅಮೇರಿಕದಲ್ಲೋ, ಸಿಂಗಾಪುರ್ ನಲ್ಲೋ ಅಥವ ಅಸ್ಸಾಂ, ಮುಂಬೈ ನಲ್ಲಿ ಇದ್ದುಕೊಂಡು, ಒಳ್ಳೆಯ ಕೆಲಸಗಾರರಾಗಿ, ಒಳ್ಳೆಯ ಪ್ರಜೆಯಾಗಿ, ಒಳ್ಳೆಯ ತಂದೆ, ಮಗ, ಅಣ್ಣ, ತಮ್ಮ, ಗೆಳೆಯನಾಗಿ ಇರುವುದು ಕನ್ನಡತನವಾ? ಅಥವ ಬೆಂಗಳೂರಲ್ಲೆ ಇದ್ದು, ವಿಧಾನಸೌಧದ ಮುಂದೇನೆ ಮನೆಮಾಡಿ, ಕೈತುಂಬ ಉಂಗುರಗಳು, ಕೊರಳ ತುಂಬಾ ಚೈನು ಹಾಕಿಕೊಂಡು, ಸಿಕ್ಕಾಪಟ್ಟೇ ಭ್ರಷ್ಟಾಚಾರ ಮಾಡಿ, ಹೀನವಾಗಿ ಬದುಕಿ ರಾಜ್ಯೋತ್ಸವದ ದಿವಸ ಧ್ವಜ ಹಾರಿಸುವುದು ಕನ್ನಡತನವಾ? ಅಂದರೆ ಕನ್ನಡತನ ಅನ್ನುವುದು ನೀವಾಡುವ ಭಾಷೆಯ ಮೇಲೆ ಮಾತ್ರ ನಿರ್ಭರವಾಗಿಲ್ಲ. ಕನ್ನಡತನ ಅಂದರೆ ನಾವು ಬದುಕುವ ರೀತಿ. ಮಮತೆ, ಪ್ರೀತಿಯೇ ಕನ್ನಡತನ. ನಾವೆಲ್ಲಿ ಇರುತ್ತೇವೆ ಅನ್ನುವುದಲ್ಲ, ಚೆನ್ನಾಗಿ ಕೆಲಸ ಮಾಡಿ, ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯುವುದಕ್ಕಿಂತ ದೊಡ್ಡ ಕನ್ನಡತನ ಬೇರೆಯಿಲ್ಲ.”

ನನ್ನಲ್ಲೂ ಅಂಥ ಒಂದು ಕನಸು. ಉಳಿದವರು ’ರೀ ಅವ್ರು ಕನ್ನಡವರು, ಮೋಸ ಮಾಡೋಲ್ಲ” ಅಂತಲೋ ಅಥವ ಅಂಗಡಿಯಲ್ಲಿ ಪರ್ಸು ಮರೆತ ಘಳಿಗೆಯಲಿ, “ನೀವ್ ಕನ್ನಡದವ್ರಾ? ಪರ್ವಾಗಿಲ್ಲ, ನಾಳೆ ಕೊಡಿ” ಈ ರೀತಿ ಕನ್ನಡ ಒಂದು ನಂಬಿಕೆಯಾಗಿ, ಒಳ್ಳೆಯತನವಾಗಿ ಹಬ್ಬಬೇಕು. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಅನ್ನುವುದಕ್ಕಿಂತ Value ಆಗಿ ಬೆಳೆಯಬೇಕು ಎಂಬುದೊಂದು ಆಶಯ.

ಎಂದಿಗೂ ನಾನು ಅಂಥ ಕನ್ನಡಿಗನಾಗಲು ಬಯಸುತ್ತೇನೆ.

 

ಅಡಿಟಿಪ್ಪಣಿ: ಇಲ್ಲಿಯ ಹೋಟೇಲೊಂದರಲ್ಲಿ ಅಕಸ್ಮಾತ್ ಭೇಟಿಯಾದ ಬೆಳಗಾವಿಯ ಬಾಲರಾಜ್ ಮತ್ತವರ ಪುಟ್ಟಿಯ ಕನ್ನಡ ಹುಟ್ಟಿಸಿದ ರೋಮಾಂಚನದಿಂದಾಗಿ, ಮತ್ತೆ ಬರೆಯುತ್ತೇನೆ ಅಂತ ಮುಂದೂಡುತ್ತಲೇ ಬರುತ್ತಿದ್ದ ಈ ಲೇಖನ ಇವತ್ತೇ ಬರೆಯುವಂತಾಯಿತು. ಬೆಂಗಳೂರಲ್ಲೇ ಅಪರೂಪವಾಗುತ್ತಿರುವ ಕನ್ನಡವನ್ನು ಸಾವಿರಾರು ಮೈಲು ದೂರ ಅದೂ ಪುಟ್ಟ ಹುಡುಗಿಯ ಮಾತಾಗಿ ಕೇಳುವ ಅದ್ಭುತವೇ ಬೇರೆ.

ಹೊಸ ಪ್ರಾಜೆಕ್ಟ್ ಒಂದನ್ನು ನನಗೆ ಒಪ್ಪಿಸಲಾಗಿತ್ತು.

ಮೊದಲ ಮೀಟಿಂಗ್ ನಲ್ಲಿ ನಾನೂ ನನ್ನ ಬಾಸೂ ಹೋಗಿದ್ದೆವು. ಒಂದು ವಾರದ ಹಿಂದೆ ಆ ಪ್ರಾಜೆಕ್ಟಿನ ಬಗ್ಗೆ ವಿವರವಾಗಿ ತಿಳಿಸಿ ಆಗಿದ್ದರೂ ನನಗೆ ಹೊಂದಿಕೊಳ್ಳಲು ಇನ್ನಷ್ಟು ಸಮಯಾವಕಾಶ ಬೇಕಿತ್ತು. ಬಾಕಿ ವಿಷಯದಲ್ಲಿ ಕೊಂಚ ಸಾಧನೆ ಮಾಡಿದರೆ ಸಾಕು ಅದರ ಬಗ್ಗೆ ಒಂದು ಹಿಡಿತ ಸಿಗುತ್ತಿತ್ತು. ಆದರೆ ಚೈನೀಸ್ ಹೆಸರುಗಳು ಮತ್ತು ಮುಖಚಹರೆ ನೆನಪಿಟ್ಟುಕೊಳ್ಳುವುದು ಕಷ್ಟಕರ. ಅದರಲ್ಲೂ ಇಲ್ಲಿಗೆ ಬಂದ ಹೊಸತರಲ್ಲಿ.

ಮೀಟಿಂಗ್ ಮುಗಿಸಿ ವಾಪಸ್ಸು ಬರುವಾಗ ನಮ್ಮ ಬಾಸ್ ಕ್ಲೈಂಟ್ ಒಬ್ಬನ ಬಗ್ಗೆ ಕೇಳಿದಳು. ಬಾಸ್ ಮಲೇಶಿಯಾದಾಕೆ. ಆಕೆಯದ್ದು ಚೈನೀಸ್ ಮಾತೃಭಾಷೆ. ನಾನು ಆ ಕ್ಲೈಂಟ್ ಹೆಸರುಚ್ಚರಿಸುವಾಗ ತಡವರಿಸಿದೆ. ತಡವರಿಸಿದೆ ಅನ್ನುವುದಕ್ಕಿಂತಲೂ ತಡವರಿಸಿದಂತೆ ನಟಿಸಿದೆ. ಮತ್ತೆ ಆ ಹೆಚ್ಚುವರಿ ಸಮಯದಲ್ಲಿ ಮೆದುಳಿಗೆ ಎಷ್ಟು ಕೆಲಸ ಇತ್ತರೂ ಹೆಸರು ನೆನಪಾಗಲಿಲ್ಲ. ಚಿಂಗ್.. ಚಾಂಗ್.. ಯುಎನ್.. ಗೋಹ್… ಕಾಹ್.. ಲೀಯಿ, ಆಂಗ್.. ಎಲ್ಲ ಪದಗಳೂ ಮನಸ್ಸಿನಲ್ಲಿ ತಾಂಡವವಾಡಿದರೂ ಆ ವ್ಯಕ್ತಿಯ ಚಹರೆಗೆ ಹೊಂದಿಕೆಯಾಗದೆ ಸೋತವು. ನನ್ನ ಚಡಪಡಿಕೆ ಗ್ರಹಿಸಿದ ಬಾಸು, ರಂಜಿತ್, ನೀನು ನಮ್ಮ ಕಂಪೆನಿಯ ಪರವಾಗಿ ಪ್ರಾಜೆಕ್ಟ್ ನ್ನು ನೋಡಿಕೊಳ್ಳುವವ. ನಿನಗೆ ಕ್ಲೈಂಟ್ ಹೆಸರುಗಳಾದರೂ ಸರಿಯಾಗಿ ನೆನಪಿರಬೇಕು. ಇಲ್ಲವಾದರೆ ಕಷ್ಟ ಅಂದಳು.

ಬಾಸಿನ ಬಾಯಲ್ಲಿ ಕಾಮೆಂಟ್ ಕೇಳುವುದೆಂದರೆ ಅದು ಒಂದು ರೀತಿಯ ನೆಗೆಟಿವ್ ಸಂಕೇತ. ತರ್ಕಬದ್ಧವಾಗಿ ಅದಕ್ಕೆ ಉತ್ತರ ನೀಡದೇ ಹೋದರೆ ಅಥವ ನನ್ನ ಕಷ್ಟವನ್ನು ಸರಿಯಾದ ಪದಗಳಲ್ಲಿ ವಿವರಿಸದೇ ಹೋದರೆ ಕಮ್ಯೂನಿಕೇಶನ್ ಗ್ಯಾಪ್ ಉಂಟಾಗಿ ಎಡವಟ್ಟಾಗುವ ಸಂದರ್ಭವೇ ಹೆಚ್ಚು. ಸುಮ್ಮನೆ “ನನಗೆ ಹೆಸರು ನೆನಪಿಟ್ಟುಕೊಳ್ಳುವುದು ಕಷ್ಟ ಅಂತ ಹೇಳಿದರೆ ಗಿಟ್ಟುವುದಿಲ್ಲ, ಪರಿಸ್ಥಿತಿ ನೆಟ್ಟಗಾಗುವುದಿಲ್ಲ ಅನಿಸಿತು.

ಬಹಳ ಹಿಂದೆ ವಸುಧೇಂದ್ರರ ಪುಟ್ಟ ಕಥೆ “ಗೋಳ” ಅಂತ ಒಂದು ಓದಿದ್ದೆ. ಅದರ ಹೆಸರು ಗೋಳವೋ, ೩೬೦ ಡಿಗ್ರೀ ಇರಬೇಕು, ಶೀರ್ಷಿಕೆ ಸರಿಯಾಗಿ ನೆನಪಿಲ್ಲ. ಆದರೆ ಕಥೆ ಚೆನ್ನಾಗಿ ನೆನಪಿದ್ದುದರಿಂದ ಆಕೆಗೆ ಒಂದು ಬಾಣ ಬಿಟ್ಟೆ.

ಮೇಡಮ್, ಮುಂದಿನ ವಾರ ನನ್ನ ಗೆಳೆಯ ಒಬ್ಬ ಭಾರತದಿಂದ ಬರ್ತಿದಾನೆ, ಮಹೇಂದ್ರ ನಾರಾಯಣ ಸ್ವಾಮಿ ಅಂತ ಹೆಸರು…

ಅರ್ಥವಾದಂತೆ ನನ್ನೆಡೆ ನೋಡಿ ನಕ್ಕಳು!

****

(photo krupe : illinda)

ನಾವು ಬರೀ ನಿಂತಿದಷ್ಟೇ.

ತೆರೆಯು ಪದತಡಿಯ ಮರಳನು ಸದ್ದಿಲ್ಲದೇ ಒಯ್ಯುವಂತೆ ವರುಷವೊಂದು ಮೆಲ್ಲ ಜಾರಿ ಹೋಯಿತು; ಹೆಜ್ಜೆಯ ಗುರುತಿನ ಭಾವವನ್ನೂ ನೀಡದೇ!

*****

 

ಊರಿಗೆ ಹೊರಡುವುದೆಂದರೆ ನನ್ನನ್ನು ನಾನು ರೀಚಾರ್ಜ್ ಮಾಡಿಕೊಳ್ಳುವ ಸಂದರ್ಭ; ಕಾಯಕ ಮಾಡುವ ಊರಿನ ಅಪರಿಚಿತ ಜೀವಿಗಳಿಗೆ ಪ್ರೀತಿ ಎಲ್ಲಿಂದ ತೋರಿಸಬೇಕು? ಅದಕ್ಕೇ ಊರಿಗೆ ಹೋಗಿ ಮನದ ಜೋಳಿಗೆ ತುಂಬಾ ಪ್ರೀತಿ ತುಂಬಿಸಿಕೊಂಡು ಇಲ್ಲಿ ಬಂದು ಹಂಚುವ ಕೆಲಸ ಮಾಡಬೇಕಿದೆ ಅಂತ ಆಗಾಗ್ಗೆ ಗೆಳೆಯರ ಜತೆ ಅನ್ನುವುದಿದೆ.

ಜಗದ ಬೇರೆ ಎಡೆಯ ರೀತಿ ರಿವಾಜುಗಳೊಳಗೆ ಬಂಧಿಸಲ್ಪಟ್ಟು, ನಮ್ಮೂರಿನ ಹಬ್ಬಹರಿದಿನ, ಅದಕ್ಕೆ ಮಾಡುವ ತಯಾರಿ ಅದರುದ್ದಿಶ್ಯ ಎಲ್ಲಾ ಮರೆತು, ಯಾವಾಗಲೋ ಒಮ್ಮೆ ಊರಿಗೆ ಫೋನ್ ಮಾಡುವಾಗಲಷ್ಟೇ ನಮಗೆ ಕೋಟೇಶ್ವರ ಹಬ್ಬ, ಆನೆಗುಡ್ಡೆ ರಥದ ಸುದ್ಧಿ ಸಿಕ್ಕಿ , ಕ್ಷಣಕಾಲ ಹಿಂದಿನ ಹಬ್ಬದ ನೆನಪುಗಳ ಪಲುಕು ಮೂಡಿಮರೆಯಾಗುವುದು. ಇತ್ತ ಈ ಊರಿನ ಹಬ್ಬಗಳೂ ನಮ್ಮದಾಗದೆ ಹೋಗಿ ಕೊನೆಗೆ ಹಬ್ಬಗಳೇ ಅನುಭವಿಸದ ಬಿಕನಾಸಿ ಜೀವನವಾಗುವ ಅಪಾಯದಿಂದ ತಪ್ಪಿಸಿಕೊಳ್ಳುವುದೆಂದರೆ ಊರಿಗೆ ಹೋಗುವ ರಜೆಯ ಸಮಯವೇ. ಹೊರಡುವ ಹಿಗ್ಗು, ತಲುಪುವ ಖುಷಿ, ಹತ್ತು ಹದಿನೈದು ದಿನಗಳ ಆನಂದಗಳೇ ನಮ್ಮ ಪಾಲಿನ ಹಬ್ಬವಾಗುವ ವಿಸ್ಮಯವಿದು.

full

ಹೋಟೆಲ್ ರುಚಿಯ ಜೈಲುಗಳಿಂದ ನಾಲಿಗೆಗೆ ಕೊಂಚ ದಿನಗಳ ಮಟ್ಟಿಗೆ ಬಿಡುಗಡೆ. ಅಮ್ಮನ ಮನದ ಗೂಗಲ್ಲು ಸರ್ಚು ವಿಧವಿಧ ಪಾಕಗಳಿಗಾಗಿ ಬ್ಯುಸಿಯಾಹೋಟೆವ ಘಳಿಗೆಗಳು. ಅಣ್ಣನ ’ತಮ್ಮನ ಜತೆಗಿರುವ ಹಿಗ್ಗಿಗೆ’ ತಾರಕಕ್ಕೇರುವ ಉಕ್ಕು. ಮರವಂತೆ ಬೀಚಿನ ಮರಳುಗಳಿಗೆ ಹೊಸ ಪಾದದ ತಂಪು. ಆನೆಗುಡ್ಡೆ ಗಣೇಶನಿಗೆ ಹಳೆಯ ಹುಡುಗನ ಹೊಸ ಪ್ರಾರ್ಥನೆ ಕೇಳುವ ಸಮಯ. ಅವನ ಕಣ್ಣಲ್ಲಿ – ದೇಹದ ವಿಚಾರದಲ್ಲಿ ತನಗೇ ಕಾಂಪಿಟೀಷನ್ ನೀಡುತ್ತಿರುವ ನನ್ನ ಬಗ್ಗೆ, ಮೂಡುವ ಅಚ್ಚರಿಯನ್ನು ಕಾಣುವ ಬಯಕೆ. ಒಂದಿಷ್ಟು ಮನೆಫಂಕ್ಷನ್ನುಗಳು. ಖಾಲಿ ಆವರಣಗಳು ಕ್ಷಣಕಾಲದಲ್ಲಿ ಹಮ್ ಆಪ್ ಕೆ ಹೈ ಕೌನ್ ಸೆಟ್ಟಾಗಿ ಬಿಡುವ ಅಚ್ಚರಿ. ಅಂಗಳದ ಪಾರಿಜಾತ ಹೂಬಿಡಲು ಸೀಸನ್ನುಗಳಿವೆಯೇ ಅಂತ ಗೂಗಲ್ಲು ಹುಡುಕಲು ಬೇಸರ, ಅದನ್ನು ಕಣ್ಣಾರೆ ನೋಡಿಯೇ ಅರಿಯಬೇಕು.. ಕೊನೆಯ ಸಲವೂ ಅಂಗಳ ತುಂಬಾ ಚೆಲ್ಲಿತ್ತಲ್ಲ, ಈ ಸಲ ನೋಡಬೇಕು, ಹೂ ಬಿಟ್ಟು ಬಿಟ್ಟು ಸುಸ್ತಾಗದೇ ಕೊಂಚವೂ ಅದಕ್ಕೆ?

ಗೆಳೆಯರ ಖುಷಿಗಳಿಗೆ ಕಿವಿಯಾಗದೇ, ದುಃಖಕ್ಕೆ ದನಿಯಾಗದೇ, ಹೊಸ ಸಾಹಸಗಳಿಗೆ ಪ್ರೇರಣೆ ನೀಡದೆ ಎಷ್ಟೊಂದು ದಿನಗಳೇ ಆಗಿಬಿಟ್ಟವಲ್ಲಾ! ಕುಂದಾಪುರ ಕನ್ನಡ ಆಲಿಸದ ಕಿವಿಗಳು ಎಷ್ಟೊಂದು ಸಣ್ಣಗಾಗಿಬಿಟ್ಟಿವೆ!

ಜಯಂತರು ಹೇಳುವ ’ರಜಾಕಾರು’ ನಾವಾಗದೇ, ಸಂಬಂಧಿಕರ ಮಗುವೊಂದು ’ಅರೆ..! ನಾ ಹೋದ ಸಲ ನೋಡಿದ್ದಾಗ ಇಷ್ಟು ಚಿಕ್ಕವನಿದ್ದ, ಇಲಾಸ್ತಿಕ್ ಚಡ್ಡಿ ಹಾಕ್ಕೊಂಡು ಓಡಾಡ್ತಾ ತುಂಟತನ ಮಾಡ್ತಿದ್ದ; ಹ್ಯಾಗೆ ಆಲವಾಗಿದ್ದಾನೆ, ಗುರುತೇ ಸಿಗ್ತಿಲ್ಲ!’ ಎಂದು ಮುಗ್ಧನಾಗಿ ಅಚ್ಚರಿಪಡುವಂತೆ, ನಾ ಬೆಳೆದ- ನನ್ನ ಬೆಳೆಸಿದ ಊರಿನ ಬೆಳವಣಿಗೆಯನ್ನೂ ಕಂಡು ಸಂತಸ ಪಡಬೇಕಿದೆ.

ಇದು – ಸೂಟು, ಬೂಟು, ಕಾಂಪಿಟಿಷನ್ನು, ನಂಬರ್ ವನ್ ಆಗುವ ಓಟಗಳು, ಇಂಪ್ರೆಸ್ ಮಾಡುವ ಚಟಗಳು.. ಹೀಗೆ ಕಾಣುತ್ತಾ ಕಾಣುತ್ತಾ ನಾನೇ ಬೇರೆ ಯಾರೋ ಆಗಿಬಿಡುವ ಅಪಾಯವನ್ನು ತಪ್ಪಿಸಲೋಸುಗ, ಈ ನಾನಲ್ಲವೇ ಅಲ್ಲದ ನನ್ನತನವನ್ನು ಬದಿಗಿಟ್ಟು, ಕೇವಲ ನಾನಾಗುವ (just being myself) ಸುಗ್ಗಿಯ ಸಮಯ!

**

 

(ಚಿತ್ರಕೃಪೆ : ಈ ಲಿಂಕು)

 

ಕಾಲೇಜಿನ ದಿನಗಳಲ್ಲಿ ಅಮ್ಮನನ್ನು ಕರೆದು, ಬೆಂಗಳೂರು ತೋರಿಸುವ ಇರಾದೆ ತುಂಬಾ ಇರುತ್ತಿದ್ದರೂ ಆಟೋದಲ್ಲಿ ಸುತ್ತಿಸುವಷ್ಟು ಆರ್ಥಿಕ ಪರಿಸ್ಥಿತಿಯಲ್ಲಿರದೇ ಬಸ್ಸಿನಲ್ಲಿ ಕರೆದೊಯ್ಯಲು ಒಂದು ರೀತಿಯ ಭಯವಿರುತ್ತಿತ್ತು. ಭಯಕ್ಕೆ ಕಾರಣ ಬಸ್ಸಿನ ಚಾಲಕರು, ಕಂಡಕ್ಟರುಗಳು. ಬಸ್ಸಿನೊಳಗೆ ತಮ್ಮೆಲ್ಲಾ ಜೀವನದ ಜಂಜಡಗಳಿಂದಲೇ ಪ್ರೇರಿತವಾದ ವಿಚಿತ್ರ ಅಸಹನೆಯಿಂದ ಕೂರುವ, ವೇಗವಾಗಿ ಓಡಿಸಯ್ಯ ಅನ್ನುವ ಭಾವದಿಂದಲೇ ಬಸ್ಸು ಹತ್ತುವ ಪಯಣಿಗರ ಭಯವೋ, ಅಥವ ತಮ್ಮ ಸಿಂಗಲ್ ಗಳನ್ನು ಮುಗಿಸುವ ತರಾತುರಿಯೋ ಅಥವ ಅದೇನೋ ಅರ್ಥವಾಗದ ಅವಸರವೋ ಬಸ್ಸು ನಿಂತ ಕೂಡಲೇ ಇಳಿವವರನ್ನು ತಳ್ಳುವಷ್ಟು ಅರ್ಜೆಂಟು ಅವರಲ್ಲಿ ಮೂಡಿಬರುತ್ತದೆ ಅನಿಸುತ್ತದೆ.

ವಯಸ್ಸಿನ ಜತೆಗೇ ಬಂದುಬಿಡುವ ಮಂಡಿನೋವಿರುವ ಅಮ್ಮ ಅದೊಂದು ದಿನ ಬಸ್ಸಿನ ಕೊನೆಯ ಮೆಟ್ಟಿಲಿನಿಂದ ರೋಡಿಗೆ ಹೆಜ್ಜೆಯಿಡುವಷ್ಟರಲ್ಲಿ ಕಂಡಕ್ಟರನ ವಿಸಿಲ್ಲು ಕಹಳೆಯಂತೆ ಕೇಳಿಸಿ ಚಾಲಕ ಬಸ್ಸು ಹೊರಡಿಸಿಬಿಟ್ಟಿದ್ದ. ಅಮ್ಮ ಆಯತಪ್ಪಿ ಬಿದ್ದುಬಿಟ್ಟಿದ್ದಳು. ತನ್ನ ಕಣ್ಣೆದುರೇ ನಡೆದದ್ದುದರಿಂದ ಕೂಡಲೇ ಮತ್ತೆ ಬ್ರೇಕು ಹಾಕಿ ನಿಲ್ಲಿಸಿ ಅಮ್ಮನಿಗೇ "ಬೇಗ ಇಳಿಯೋಕಾಗಕಿಲ್ವ?" ಅಂತ ದಬಾಯಿಸಿದ್ದ. ಬಿದ್ದ ಅಮ್ಮನನ್ನು ಎತ್ತುವುದರಲ್ಲಿ, ಆಕೆಯ ಮುಜುಗರವನ್ನು ಸಮಾಧಾನಪಡಿಸುವಂತೆ ಏನೂ ಆಗಿಲ್ಲವೆಂಬಂತೆ ಮಾತಾಡುತ್ತ ಚಾಲಕನ ಮಾತಿಗೆ ಜಗಳವಾಡುವ ಮನಸ್ಸಿಲ್ಲದೇ ವಿಪರೀತ ಅಸಹಾಯಕತೆಯ ಮೌನ ಧರಿಸಿದ್ದೆ.

ಅವತ್ತು ಮನದ ಮುಗಿಲಿಗೆ ಒಂದು ಅಸಹನೆಯ ಮೋಡ. ಆರ್ಥಿಕ ಪರಿಸ್ಥಿತಿಯನ್ನು ಬಯ್ದುಕೊಳ್ಳಬೇಕೋ, ವ್ಯವಸ್ಥೆಯನ್ನು ಬಯ್ದುಕೊಳ್ಳಬೇಕೋ ಅಥವಾ ಹ್ಯಾಗೆ ಸುಧಾರಿಸಬೇಕು ಅನ್ನುವ, "ಆಂಗ್ರಿ ಯಂಗ್ ಮ್ಯಾನ್" ಆಗಿಬಿಡಬೇಕು, ಶಂಕರ್ ಸಿನೆಮಾಗಳ ಹೀರೋನಂತೆ ಯಾರಾದರೂ, ಕೊನೆಗೆ ನಾನಾದರೂ ಆಗಿಬಿಡಬೇಕೆಂಬ ತಳಮಳವುಳ್ಳ ವಿಚಿತ್ರ ಹುಮ್ಮಸ್ಸು.

ಕಾಲೇಜು ಮುಗಿಯಿತು, ಕೆಲಸ ಸಿಕ್ಕಿ ಜೀವನದ ಎಲ್ಲಾ ಪರ್ವಗಳು ಮೆಲ್ಲ ಮೆಲ್ಲ ಪುಟತಿರುವತೊಡಗಿದವು. ಅಮ್ಮನಿಗೆ ಬೆಂಗಳೂರು ತೋರಿಸುವುದಕ್ಕೆ ನಾನೇ ಬೆಂಗಳೂರಲ್ಲಿರದೇ ಫೋನಿನಲ್ಲೇ ಅದು ನೋಡಿದೆಯಾ ಇದು ನೋಡಿದೆಯಾ ಅನ್ನುವ ಹಾಗೆ ಬದುಕು ಮಾಡಿಸಿತು. ಬಸ್ಸಿನಲ್ಲಿ ತಿರುಗಬೇಡ ಎಲ್ಲಿಗೆ ಹೋಗುವುದಾದರೂ ಅದೆಷ್ಟೇ ದೂರವಿದ್ದರೂ ಆಟೋದಲ್ಲಿ ತಿರುಗು ಅನ್ನುವಷ್ಟು ಆರ್ಥಿಕವಾಗಿ ಸುಧಾರಿಸಿದ ಮೇಲೆ, ನಾನೇ ಸ್ವತಃ ಕರೆದೊಯ್ದು ತೋರಿಸುವಷ್ಟು ತೃಪ್ತಿಯಲ್ಲದಿದ್ದರೂ ಮೊದಲಿಗಿಂತ ಒಂದು ಮಟ್ಟದ ಮೇಲಿನ ಸಂತಸ ದೊರಕುತ್ತಿತ್ತು.

ಇದನ್ನು ನೆನಪಿಸಿಕೊಳ್ಳುವುದಕ್ಕೆ ಕಾರಣ ಇತ್ತೀಚೆಗೆ ಸಿಂಗಾಪೂರಿನ ಬಸ್ಸಿನಲ್ಲಿ ನೋಡಿದ ಒಂದು ಘಟನೆ. ಇಲ್ಲಿ ಹಣ ನೀಡಲು ಕಾರ್ಡಿನ ವ್ಯವಸ್ಥೆ, ನಿಲ್ದಾಣಗಳಲ್ಲಿ ಮುಂದಿನ ಬಸ್ಸು ಎಷ್ಟು ಹೊತ್ತಿಗೆ ಬಸ್ ಸ್ಟಾಪ್ ತಲುಪುತ್ತೆ ಎಂದು ತೋರಿಸುವ ಬೋರ್ಡು, ಮತ್ತು ಎಲ್ಲಾ ನಿಲ್ದಾಣಗಳಲ್ಲಿ ಬರುವ ಬಸ್ಸು ಹೋಗುವ ರೂಟುಗಳ ಚಿತ್ರ ಹಾಕಿರ್ತಾರೆ ಎಂಬ ಟೆಕ್ನಿಕಲ್ ವಿಷಯಗಳಲ್ಲದೇ ಬೇರೆ ಕೆಲವು ಉತ್ತಮ ವಿಚಾರಗಳಿವೆ. ಸಚೇತನರಿಗೆ ಬಸ್ಸಿನಲ್ಲಿ ಹತ್ತಲು ಅನುಕೂಲವಾಗುವಂತೆ ವ್ಯವಸ್ಥೆಯಿದೆ. ಬಸ್ಸಿನೊಳಗೆ ಅವರಿಗೇ ಪ್ರತ್ಯೇಕವಾಗಿ ಕೈಚಾಲಿತ ವಾಹನವನ್ನು ನಿಲ್ಲಿಸಿಕೊಳ್ಳಲು ಜಾಗ ಮಾಡಿರುತ್ತಾರೆ. ಬಸ್ಸಿನ ತುಂಬೆಲ್ಲಾ ಹಿರಿಯರಿಗೆ ಸೀಟುಬಿಟ್ಟುಕೊಡುವುದು ಕಾನೂನು ಅಂತಲ್ಲದೇ, ಅದೇ ನಿಜವಾದ ನಡತೆ ಅನ್ನುವುದನು ಬಿಂಬಿಸುವ ಜಾಹೀರಾತುಗಳಿರುತ್ತದೆ. ಮತ್ತು ಬಸ್ಸು ಹತ್ತಿದ ಯಾವ ಮಗುವೂ ಅದನ್ನು ನೋಡದೇ ಇಳಿಯಲಾಗದಷ್ಟುಕಣ್ಣಿಗೆ ರಾಚುವ ಜಾಗೆಯಲ್ಲಿ ಹಾಕಿರುತ್ತಾರೆ.

singapore-bus

ಒಮ್ಮೆ ಹೀಗೆ ಆಫೀಸಿಗೆ ಬಸ್ಸಲ್ಲಿ ಹೋಗುತ್ತಾ ಇದ್ದಾಗ ಸ್ಟಾಪಿನಲ್ಲಿ ಒಬ್ಬ ವಯಸ್ಸಾದ ಮಹಿಳೆ ಹತ್ತಿದರು. ಊರುಗೋಲಿಲ್ಲದಿದ್ದರು ಹೆಜ್ಜೆ ಹೆಜ್ಜೆಯನ್ನೂ ಮೆಲ್ಲ ಇಡುವಷ್ಟು ವಯಸ್ಸು. ಆ ಸ್ಟಾಪಿನಲ್ಲಿ ಆಕೆಯನು ಬಿಟ್ಟು ಮತ್ಯಾರೂ ಹತ್ತಿರಲಿಲ್ಲ. ಆಕೆ ಮೆಲ್ಲ ಬಸ್ಸು ಹತ್ತಿದಳು. ಬಸ್ಸಿನೊಳಗಿನ ಕಂಬಗಳನು ಒಂದೊಂದಾಗಿ ಹಿಡಿಯುತ್ತಾ ಸೀಟಿನಲ್ಲಿ ಕೂರಲು ಕಡಿಮೆ ಎಂದರೂ ಎರಡರಿಂದ ಮೂರು ನಿಮಿಷವಾದರೂ ಆಗಿದ್ದಿರಬೇಕು. ಚಾಲಕ ಆಕೆ ಸೀಟಿನಲ್ಲಿ ಕೂರುವವರೆಗೂ ಬಸ್ಸನ್ನು ಕದಲಿಸಲಿಲ್ಲ. ಒಮ್ಮೆ ಆಕೆ ಕೂತು ತೃಪ್ತಿಯಿಂದ ಧನ್ಯವಾದಗಳು ಎಂಬರ್ಥದಲ್ಲಿ ನಸುನಕ್ಕ ನಂತರ ಬಸ್ಸು ಹೊರಟಿತು.

ಬಸ್ಸಿನೊಳಗೆಲ್ಲಾ ಒಂದು ಬಗೆಯ ಗೆಲುವು ಹರಡಿತ್ತು. ಹೆಮ್ಮೆಯ ಹೊಳೆ ಹರಿದಿತ್ತು. ಮತ್ತು ಅದಕ್ಕೆ ಚಾಲಕನೇ ನಾವಿಕನಾಗಿದ್ದ.

 

***

ಚಿತ್ರಕೃಪೆ: ಈ ವೆಬ್ ಸೈಟು

ನನ್ನ ಕೆಲವು ಬರಹಗಳಿಗೆ ಕೇವಲ ನಾನು ಬರೆದಿದ್ದು ಅಂಬೋ ಕಾರಣಕ್ಕೇ ಸರಿಯಾದ ಬೆಲೆ ಸಿಗದೇ ಹೋಗುತ್ತಿದೆ ಅನ್ನಿಸಿ (“ನಾನು ನಾನಾಗದೇ” ಎಂಬ ಕವಿತೆಯೊಳಗಿನ ಥಿಯರಿ) ಬೇರೊಂದು ಬ್ಲಾಗಿನಲ್ಲಿ ಬೇರೆ ಹೆಸರಲ್ಲಿ ಬರೆಯಲು ಶುರು ಮಾಡಿದ್ದೆ. ಬೆಲೆ ಸಿಕ್ಕಿತೇ? ಗೊತ್ತಿಲ್ಲ. ಬರಹದ ಬೆಳೆ ಚೆನ್ನಾಗಿ ಬಂತೆಂಬುದು ಅಷ್ಟೇ ನಿಜ. ಅನಾಮಿಕತೆಯನ್ನು ದುರುಪಯೋಗ ಪಡಿಸಿಕೊಳ್ಳದಿರುವ ನನ್ನ ಪ್ರಯೋಗ ಅದು ಅಂದರೂ ಆದೀತು. ಇಷ್ಟಕ್ಕೂ ಈ ಪೋಸ್ಟಿನ ಬಳಿಕ ಇನ್ನು ಅದು ಅನಾಮಿಕತೆ ಆಗಲಾರದು.

ನೀಲಿಹೂವಿನ ಜತೆಜತೆಗೆ ಆ ಬ್ಲಾಗಿನಲ್ಲೂ ಬರೆಯತೊಡಗಿದ್ದೆ. ಇತ್ತೀಚೆಗೆ ನನ್ನ ಜೀಮೈಲ್ ಅಕೌಂಟ್ ಹ್ಯಾಕ್ ಆಗಿದ್ದರ ಪರಿಣಾಮ ಅಲ್ಲೇನೂ ಬರೆಯಲಾಗುತ್ತಿಲ್ಲ. ಒಂದೆರಡು ಬುದ್ಧಿವಂತ ಓದುಗರು ಆಗಲೇ ನನ್ನ ಬರವಣಿಗೆ ಶೈಲಿ ಗುರುತಿಸಿ “ನಾನು ನಾನಲ್ಲ” ಅಂತ ಎಷ್ಟಂದರೂ “ಸ್ವಾಮಿ ನಮ್ಗೆ ಗೊತ್ತಾಯ್ತದೆ; ನಮ್ ಕಿವೀ ಮ್ಯಾಗೆ ಹೂವಿಕ್ಬೇಡಿ” ಅನ್ನುವಷ್ಟು ಆತ್ಮವಿಶ್ವಾಸ ಹೊಂದಿದ್ದರು.

ಅಲ್ಲದೇ ಒಂದಿಬ್ಬರು ಗೆಳೆಯರ ಪ್ರೀತಿಗೆ ಬಗ್ಗಿ ಅದು ನಾನೇ ಅಂತ ಒಪ್ಪಿಕೊಂಡೂ ಬಿಟ್ಟಿದ್ದೆ.

ನೀವೂ ಬುದ್ಧಿವಂತರು. ಅಲ್ಲದೇ ಎಲ್ಲಾ ಬ್ಲಾಗುಗಳನ್ನು ಸ್ಕ್ಯಾನ್ ಮಾಡಿರುತ್ತೀರಿ. ಕನ್ನಡದ ಹಸಿವಿನಿಂದ ಬ್ಲಾಗುಲೋಕದ ತುಂಬ ಓಡಾ(ದಾ)ಡಿದ್ದೀರಿ. ಈಗ ನಿಮಗೊಂದು ಕ್ವಿಜ್.

ನನ್ನ ಆ ಬ್ಲಾಗು ಯಾವುದು?

ಸುಳಿವು ಕೇಳಬೇಡಿ. ನಾನು ಇನ್ನೊಂದು ಬ್ಲಾಗು ಬರೆಯುತ್ತಿದ್ದೆ ಎಂಬುದೇ ದೊಡ್ದ ಸುಳಿವು ಎಂಬುದು ನನ್ನ ಅಭಿಮತ.

ಹಾಗೇನೇ ಕಾಫಿಕ್ಲಬ್ಬು, ಸಡಗರ ಈ ಬ್ಲಾಗುಗಳಲ್ಲಿ ನನ್ನ ಪಾಲುದಾರಿಕೆ ಮಾತ್ರ. ನೀವು ಕಂಡುಹಿಡಿಯಬೇಕಾದ ಬ್ಲಾಗು ಸಂಪೂರ್ಣ ನನ್ನದು. ಮತ್ತು ಈ ಕ್ವಿಜ್ ಈ ಹಿಂದೆ ನನ್ನ ಜತೆ ಆ ಬ್ಲಾಗ್ ಬಗ್ಗೆ ಚರ್ಚೆ ಮಾಡಿದವರು ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮ ಮತ್ತು ಅವರು ಬೇರೆಯವರಿಗೆ ತಿಳಿಸದಿರಿ ಅನ್ನುವ ನಮ್ರ ಕೋರಿಕೆ.

ಕೊನೆಯ ತಾರೀಕು : ಮುಂದಿನ ಭಾನುವಾರದ ದಿನದ ಕೊನೆವರೆಗೆ.

ಮಂಗಳೂರು ವಿಮಾನ ದುರಂತ ನಡೆದ ಎರಡು ದಿನದ ಹಿಂದೆಯಷ್ಟೇ ಅಲ್ಲೇ ನಾನೂ ಇಳಿದಿದ್ದೆ ಅಂತ ಊಹಿಸಿದರೆನೇ ಭಯವಾಗುತ್ತದೆ.

ಅಂದು ಇಳಿದಿದ್ದಾಗ ಅಂಥ ಭಯವಿರಲಿಲ್ಲ. ಮೋಡಗಳ ರಾಶಿಯ ಮಧ್ಯೆ ವಿಮಾನ ಅಲುಗಾಡಿದಾಗ, ಲ್ಯಾಂಡಿಂಗ್ ಹೊತ್ತಿನಲ್ಲಿ ವಿಮಾನದ ಚಕ್ರ ಭೂಸ್ಪರ್ಶವಾದಾಗ ಆಗುವ ಜರ್ಕ್ ಗೆ, ಅದೇನೋ ಆದವರಂತೆ ಗಗನಸಖಿಗಳು ಆಚೆ ಈಚೆ ಜೋರಾಗಿ ಓಡಾಡುವಾಗ, ಏರೋಸೋಲ್ ನ್ನು ವಿಮಾನದೊಳಗೆ ಸಿಂಪಡಿಸುವಾಗೆಲ್ಲಾ ನದಿಗಿಳಿದಾಗ ದೋಣಿಯ ಅಂಬಿಗನ ಮೇಲಿನ ನಂಬುಗೆಯಂತೆ ಸಲಿಲವಾಗಿತ್ತು ಮನಸು. ಏನೇ ಆದರೂ ಎಲ್ಲ ಸರಿಮಾಡುವರು, ಅನುಭವವುಳ್ಳವರು ಅನ್ನುವ ನಂಬಿಗೆ.

ಇನ್ನು ಹಾಗಿಲ್ಲ. ವಿಮಾನದುರಂತದ ಪರಿಣಾಮವನ್ನು ಕಣ್ಣಿಗೆ ಕಟ್ಟಿದ ಹಾಗೆ ತೋರಿಸಿದ ಮಾಧ್ಯಮಗಳ ಕೃಪೆಯಿಂದ ವಿಮಾನ ಕೊಂಚ ಅಲುಗಿದರೂ ಎದೆಯೊಳಗೊಂದು ಪುಕುಪುಕು ಹೆದರಿಕೆ ಜನ್ಮತಾಳುತ್ತದೆ. ಕಿಟಕಿಯಾಚೆಗೇ ಕೀಲುಹಾಕಿದಂತೆ ಕಣ್ಣು ಅಪಾಯವೊಂದಕ್ಕೆ, ವಿಮಾನ ಸೀಳಿದರೆ ಹಾರಲು ತಯಾರಾಗುವಂತೆ ಬೆಲ್ಟಿನಲ್ಲೆ ಕೈಯಿರುತ್ತದೆ. ಸುಖಾಸುಮ್ಮನೆ ಅಪಾಯದ ಹೆದರಿಕೆಯೊಂದು ನಮ್ಮ ಜತೆಯೇ ಟಿಕೆಟ್ಟಿಲ್ಲದೇ ಪಯಣ ಮಾಡುತ್ತಿರುತ್ತದೆ.

ಆದರೆ ಎಂಥ ಭಯವಿದ್ದರೂ ಎಂಥ ದುರಂತವಾದರೂ ಬದುಕು ನಿಲ್ಲುವುದಿಲ್ಲ. ಮೊನ್ನೆ ಯಾರೋ ಒಬ್ಬ ಭಯದಂಟುರೋಗ ಹರಡುವವರು ಕೇಳಿದ್ದರು. "ಅಲ್ಲಾ ಕಣ್ರೀ, ಅದ್ಯಾವ ಗ್ಯಾರೆಂಟಿ ಮೇಲೆ ವಿಮಾನ ಪ್ರಯಾಣ ಮಾಡ್ತೀರ್ರಿ?" ಅವರು ಹಿಂದಿನ ದಿನವಷ್ಟೇ ಯಾವುದೋ ಚಾನೆಲ್ ಒಂದರಲ್ಲಿ ತೋರಿಸಿದ ಎಲ್ಲಾ ವಿಮಾನ ಅಪಘಾತದ ಚಿತ್ರಣವೊಂದರ ಪ್ರೋಗ್ರಾಮ್ ನ್ನು ನೋಡಿದ್ದರಂತೆ. ಅವರೊಳಗೆ ಮೂಡಿದ್ದ ಭಯವನ್ನು ನನ್ನವರೆಗೂ ಹರಡಲು ಮಾತಿಗಾರಂಭಿಸಿದ್ದರು.

ನಾವಿಬ್ಬರೂ ಕೂತಿದ್ದ ಬಸ್ಸು ಆಗಷ್ಟೇ ಅಪಾಯಕಾರಿಯಾದ ಓವರ್ ಟೇಕ್ ನ್ನು ಯಶಸ್ವಿಯಾಗಿ ಮುಗಿಸಿ ಬಸ್ಸೊಳಗಿದ್ದವರ ನಿಟ್ಟುಸಿರು ಇನ್ನೂ ಮುಗಿದಿರಲಿಲ್ಲ. " ಸರ್, ನೀವು ಈ ಬಸ್ಸಿನಲ್ಲಿ ಕೂತು ಧೈರ್ಯವಾಗಿ ಇದರ ಕುರಿತು ಹೇಗೆ ಮಾತಾಡ್ತಿದ್ದೀರೋ ಅದೇ ಗ್ಯಾರೆಂಟಿ ಮೇಲೆ" ಅಂದೆ. ಸಾವು ಬದುಕಿನ ಗ್ಯಾರೆಂಟಿಗಳ ಕುರಿತೇ ಇದ್ದ ಯಕ್ಷ ಪ್ರಶ್ನೆಯೊಂದು ನೆನಪಾಯ್ತು.

ಇಷ್ಟಕ್ಕೂ ಸ್ವಲ್ಪ ದಿನದ ಹಿಂದೆ ಲಿಬಿಯಾದಲ್ಲೊಂದು ಭೀಕರ ವಿಮಾನ ದುರಂತ ಆಗಿತ್ತು. ಆಗ ಅನ್ನಿಸದಿದ್ದ ಅಪಾಯ ಈಗೇಕೆ ಅನ್ನುವ ಪ್ರಶ್ನೆಯೊಂದು ಈಗ ಮನದಲ್ಲಿ ಮನೆ ಮಾಡಿದೆ.

ಅದೇನೆ ಇರಲಿ, ಮನಸ್ಸಿನ ಭಯವನ್ನೆಲ್ಲಾ ನಂಬಿಕೆಗಳು ಹೊಡೆದುಹಾಕಲಿ. "ಮತ್ತೆ ಬನ್ನಿ" ಅನ್ನುವ ಫಲಕ ನಮಗೆ ಖುಷಿ ನೀಡಲಿ.  ಜಗದ ಎಲ್ಲರ ಪಯಣಗಳು ಸುಖಕರವಾಗಿರಲಿ.

ಮೇ ಮೂವತ್ತಕ್ಕೆ ಕುಂದಾಪುರದಿಂದ ಹೊರಟ ನನ್ನ ಸಿಂಗಪೂರ್ ಪಯಣವೂ ಸೇರಿ.