Archive for the ‘ಬದುಕೇ, ಐ ಲವ್ ಯೂ!’ Category

ಪ್ರೀತಿ ಎಂದರೇನು ಅನ್ನುವುದು ತುಂಬಾ ಕ್ಲೀಷೆ ಪ್ರಶ್ನೆ.

ಹಲವಾರು ಬರಹಗಾರರು ತಮ್ಮ ತಮ್ಮ ಅನುಭವಕ್ಕನುಗುಣವಾಗಿ ಪ್ರೀತಿಯ ವ್ಯಾಖ್ಯೆಯನ್ನು ನೀಡಿದ್ದಾರೆ. ಎರಡು ಹೃದಯಗಳ ಮಿಲನ, ಎರಡು ಜೀವ ಒಂದೇ ಮನಸ್ಸು ಎಂಬುದೆಲ್ಲಾ ಪುಸ್ತಕದ ಬದನೆಕಾಯಾಯಿತು. ಸ್ಟೀಫನ್ ಕೋವೆಯಂಥ ಲೇಖಕ ಪ್ರೀತಿ ಅಂದರೆ ಕೊಡುವುದು ಅಂತ ಅಂದಿದ್ದಾನೆ. ಅವನ ಪ್ರಕಾರ ಪ್ರೀತಿ ಅನ್ನುವುದು ವರ್ಬ್. ಅಂದರೆ ಅದೊಂದು ಭಾವ ಅಲ್ಲ, ನಿರಪೇಕ್ಷೆಯಿಂದ ನೀಡುವುದು.

ತಾಯಿಯೊಬ್ಬಳು – ಪ್ರೀತಿಗೆ ಜೀವಂತ ಭಾಷ್ಯ ಬರೆಯುತ್ತಾಳೆ. ಅನ್ ಕಂಡೀಷನ್ಡ್ ಪ್ರೀತಿ ನೀಡಿ, ನಾನು ನಿನ್ನ ಪ್ರೀತಿಸುತ್ತೀನಿ ಅಂತ ಒಂದು ಮಾತೂ ಆಡದೇ ಪ್ರೀತಿಯನ್ನು ಬದುಕಿ ತೋರಿಸುತ್ತಾಳೆ. ಕೊನೆವರೆಗೂ ಕಾಳಜಿ ವಹಿಸುತ್ತಾಳೆ. ತನಗೆ ಕೂಡದ ವಯಸ್ಸಿನಲ್ಲೂ ಮಕ್ಕಳ ಕುರಿತ ಕಳಕಳಿ ಪ್ರತಿದಿನ ಇಟ್ಟುಕೊಂಡಿರುತ್ತಾಳೆ.

ಇಷ್ಟಕ್ಕೂ ನಿಜವಾಗಿ – ನಿಜವಾದ ಪ್ರೀತಿ ಅಂದರೇನು?

ನನ್ನ ಪ್ರಕಾರ – ಪ್ರೀತಿ ಅಂದರೆ ಒಂದು ಉತ್ಕಟವಾದ ಭಾವ. ಅದಕ್ಕೆ ಸಾಲಿನ, ಮಾತಿನ ಮಹಿಮೆ ಬೇಕಿಲ್ಲ. ಒಬ್ಬರನ್ನು ಪ್ರೀತಿಸುತ್ತೇನೆ ಅಂದರೆ ಅವರು ಸದಾ ಖುಷಿಯಾಗಿರಲಿ ಅಂತ ಬಯಸುತ್ತೇನೆ ಮತ್ತು ಆ ನಿಟ್ಟಿನಲ್ಲಿ ನನ್ನ ಸಾಮರ್ಥ್ಯ ಮೀರಿ ನಿಲ್ಲುತ್ತೇನೆ ಅಂತರ್ಥ. ಮತ್ತು ಅವರ ಖುಷಿಗೆ ತಾನು ಏನನ್ನಾದರೂ ಮಾಡಲು ಸಿದ್ಧ ಅನ್ನುವ ಭಾವ. ಕಷ್ಟ ಬಂದಾಗ ಹೆಗಲಾಗಿ ನಿಲ್ಲುವ ಆಶಯ. ಹಾಗಂಥ ಕಟ್ಟಿಹಾಕುವಂಥ ಬಂಧವೇನಲ್ಲ. ನೀನು ನಾನಿಲ್ಲದೆಯೂ ಖುಷಿಯಾಗಿರಬಲ್ಲೆ ಅಂತಾದರೆ- ಅದಾದರೂ ಸೈ.

ಒಟ್ಟಿನಲ್ಲಿ ನಿನ್ನ ಸಂತಸವೇ ನನ್ನ ಆಶಯ.

ನಾನು ನಿನ್ನ ಪ್ರೀತಿಸ್ತೀನಿ, ಹೇಳು ನೀ ನನಗಾಗಿ ಏನು ಮಾಡುವಿ? ನೀನೆಷ್ಟು ನನ್ನ ಪ್ರೀತಿಸ್ತೀ? ಅಂತ ಕೇಳುವುದು ಪ್ರೀತಿಯಾಗದು. ನಾನು ನಿನ್ನ ಪ್ರೀತಿಸ್ತೀನಾದ್ದರಿಂದ ನೀನೂ ನನ್ನ ಪ್ರೀತಿಸಬೇಕು ಅನ್ನುವುದು ವ್ಯವಹಾರವಾದೀತು. ಇನ್ನೊಬ್ಬ ವ್ಯಕ್ತಿಯ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರದ ಭಾವ. ಹಾಗಾಗಿ ಒಂದು ಸಂಬಂಧದಲ್ಲಿ ನೀನೆಷ್ಟು ನೀಡಿದೆ ಅನ್ನುವುದರ ಮೇಲೆ ನಿನ್ನ ಪ್ರೀತಿ ನಿರ್ಧಾರಿತವಾಗಿರಬೇಕೇ ವಿನಾ ಸಂಬಂಧದಲ್ಲಿ ನೀನೆಷ್ಟು ಪಡಕೊಂಡೆ, ಬಂದ ಲಾಭಕ್ಕನುಗುಣವಾದ ಲೆಕ್ಕ ಅಲ್ಲ ಅದು.

ಹೀಗೆ ವಾಪಸ್ಸು ಏನನ್ನೂ ಬಯಸದೇ, ನಿನ್ನ ದುಃಖದಲ್ಲಿ ಜತೆಯಾಗಿ, ನಿನ್ನ ಸುಖದಲ್ಲಿ ಹಿತವಾಗಿ ಮರೆಯಾಗಿ ಇರುವುದು ಉನ್ನತ ಪ್ರೇಮ.
ನೀನು ಖುಷಿಯಾಗಿರಬೇಕು ಅದಕ್ಕೆ ನಾನು ನಿನ್ನ ಜತೆಯಲ್ಲಿರಲೇಬೇಕು (ಒಟ್ಟಿನಲ್ಲಿ ನೀನೇ ಬೇಕು)- ಅನ್ನುವುದು ಮಧ್ಯಮ.

ಅಂದರೆ ನಿಜವಾದ ಪ್ರೀತಿಯಲ್ಲಿ ಜೆಲಸಿ ಬರಬಾರದು. ತಾನು ಪ್ರೀತಿಸುವ ವ್ಯಕ್ತಿ ಆನಂದದಿದ್ದರೆ ಸಾಕು ಅನ್ನುವಂಥ, ಬೇರೆಯವರ ಜೊತೆಯಾದರೂ- ಬೇರೆಲ್ಲೋ ದೂರದಲ್ಲಿ ಇದ್ದಾದರೂ- ಒಟ್ಟಿನಲ್ಲಿ ಸಂತಸವಾಗಿದ್ದರೆ ಸಾಕು ಅನ್ನುವಂಥ ಮನಸ್ಥಿತಿ ಇರಬೇಕು.

ಆದರೆ ಇದು ಕೇಳುವಷ್ಟು / ಹೇಳುವಷ್ಟು ಸುಲಭವಲ್ಲ.

ಅಂಥ ಪ್ರೀತಿ ನಿಮಗೂ ದೊರಕಿದೆಯಾದರೆ ನಿಮಗಿದೋ ಶುಭಾಶಯ. ಪ್ರಪಂಚದಲ್ಲಿ ಬಾಳುತ್ತಿರುವ ಕೋಟಿ ಕೋಟಿ ಮನುಷ್ಯರಲ್ಲಿ ನೀವೇ ಅದೃಷ್ಟವಂತರು.

ದೊಡ್ಡ ಚಿಕ್ಕ ಮುಳ್ಳಿನ
ಸತತ ತಿವಿತ ಬೆನ್ನಿಗೆ
ತಪ್ಪಿಸಿಕೊಳ್ಳುವ ಯತ್ನದಲ್ಲೇ
ಬದುಕಿನ ನಾಗಾಲೋಟ

ದಿನದ ಬ್ಯಾಸ್ಕೆಟ್ಟಿನಲ್ಲಿ
ತುರುಕುತ್ತಿದ್ದೇವೆ ಒತ್ತಿ ಒತ್ತಿ
ಬದುಕಿನ ಬಟ್ಟೆಯನು, ಉಸಿರೂ ಆಡಲಾಗದಷ್ಟು
ಒತ್ತರಿಸಿಕೊಂಡಿದೆ, ಇನ್ನೊಂದಿಷ್ಟು
ಜಾಗವಿದ್ದಿದ್ದರೆ ಮತ್ತಷ್ಟು ತುಂಬಿಸಬಹುದೇ
ಅನ್ನುವ ಚಿಂತೆ ಎಂದಿಗೂ

ಹಣ ಕೀರ್ತಿ ಆಯಸ್ಸು ಆರೋಗ್ಯ
ಎಲ್ಲಾ ಇದೆ, ಸಾಲು ಅಂಗಡಿಯಲ್ಲಿ
ಒಂದು ಬೇಕೆಂದರೆ ಇನ್ನೊಂದನ್ನು ಅಡವಿಡ
ಬೇಕು ಎನ್ನುವ ನಿಯಮವಿಟ್ಟ
ವ್ಯಾಪಾರಿ ತುಂಬಾ ಜಾಣ

ಈ ಜನಾಂಗಕ್ಕೆ ಸಮಯ ಕಮ್ಮಿ
ಯಾವುದು ಪಡೆಯಬೇಕು
ಯಾವುದು ಬಿಡಬೇಕು
ಎಂಬ ಅರಿವಾಗದ ಗೊಂದಲ
ದ ಲಗ್ಗೇಜು ಹೊತ್ತೇ
ಗೊತ್ತೇ ಇರದ, ಯಾರೂ ನಮಗಾಗಿ ಕಾಯುತ್ತಿರದ
ನಮಗೂ ಹೋಗಬೇಕೆನ್ನಿಸದ
ಕಡೆಗೆ ಅರ್ಜೆಂಟಿನ ಪಯಣ
ಅನುಪಯುಕ್ತ ಅಲೆದಾಟ
ಕಣ್ಪಟ್ಟಿ ಕಟ್ಟಿದ ಓಟ.

ಮೈ ಡಿಯರ್ ಕುಳ್ಳೀ,

ಮೊನ್ನೆ ನೀನು ಕೈಯಲ್ಲಿ ಒಂದಿಷ್ಟು ಡ್ರಾಯಿಂಗ್ ಹಿಡಿದು ಮೆಟ್ಟಿಲು ಇಳಿದು ಬರುತ್ತಿದ್ದಾಗ ಬೇಬಿ ಡಾಲ್ ಥರ ಕಾಣಿಸಿದೆ. ಗಾಢ ನೀಲಿ ಟಾಪ್ ಮತ್ತು ಅಚ್ಚ ಬಿಳಿ ಪ್ಯಾಂಟ್ ಕಾಂಬಿನೇಷನ್ ಜತೆಗೊಂದು ಹಳದಿ ಬಣ್ಣದ ಸ್ಲಿಮ್ ಬೆಲ್ಟ್ ಹಾಕ್ಕೊಂಡು ನೀ ಮೆಟ್ಟಿಲನ್ನು ಒಂದೊಂದೇ ಹೆಜ್ಜೆ ಇಟ್ಟು ಇಳಿಯುತ್ತಿದ್ದರೆ ನನ್ನ ಬದುಕು ಪೂರ್ತಿ ಅದನ್ನೇ ನೋಡುತ್ತಾ ಕಳೆಯಬೇಕೆಂಬ ಭಾವ. ನಿನ್ನ ಚಿಟ್ಟೆ ಕ್ಲಿಪ್ಪು ಹಾರಿ ಬಂದು ನನ್ನೆದೆಯ ಮಕರಂದವನ್ನು ಹೀರಿದಂತ ಅನುಭವ. ನೀನು ನನ್ನ ಹಾದುಹೋದಾಗ ಬರುವ ಗಾಳಿಗೆ ನನ್ನ ಮನಸ್ಸಿಗೂ ತಂಪೆರೆವ ಶಕ್ತಿ. ಆ ತಂಗಾಳಿ ಒಂದಿಷ್ಟು ಹೊತ್ತು ನನ್ನನ್ನೇ ಆವರಿಸಿಕೊಂಡಂಥ ಅನುಭೂತಿ. ನಿನ್ನ ದೇಹ ಗಂಧ ನನ್ನ ಸವರಿಹೋದಾಗೆಲ್ಲಾ ಎದೆಯೊಳಗೆ ಕಪ್ಪೆಕಲ್ಲ ತರಂಗ. ನೀನು ನಡೆದ ಹಾದಿಯಲ್ಲಿ ಸುಮ್ಮನೆ ಒಮ್ಮೆ ನಾನು ನಡೆದರೂ ಒಂದೊಳ್ಳೆ ರೋಮಾಂಚನ.

love-560783_960_720

ಮರುಳಾದೆ ದಿವ್ಯ ಸಖಿ ನಿನಗೆ.. ಪ್ರಣಾಮ..
ಅಪರೂಪ ರೂಪಸಿಯೆ ನಿನಗೆ.. ಪ್ರಣಾಮ..

ನಿನ್ನನ್ನು ನೋಡಿದಾಗೆಲ್ಲಾ ನಿನ್ನನ್ನು ಒಂದು ಫ್ರೇಮ್ ಆಗಿಸಿ ಮನದಲ್ಲಿ ಸದಾ ಅಚ್ಚಾಗುವಂತೆ ಜನುಮ ಪೂರ್ತಿ ನೆನಪಿನಲ್ಲಿಡಬೇಕು ಅಂತೆಲ್ಲಾ ಅನ್ನಿಸುತ್ತೆ. ಆದರೆ ಅಷ್ಟು ಡೀಟೈಲ್ ಆಗಿ ನೋಡುವುದಕ್ಕೆ, ರೆಕಾರ್ಡ್ ಮಾಡಿಕೊಳ್ಳಲು ಒಂದು ದಿನ ಪೂರ್ತಿ ಬೇಕಾಗುತ್ತದೆ. ಕಿವಿಯ ಲೋಲಾಕ್ಕು ನೋಡುವುದರೊಳಗೆ ಮೊಗಕ್ಕೆ ನೀ ಹುಟ್ಟಿದಾಗಿನಿಂದಲೂ ಅಂಟಿಕೊಂಡಿರುವ ನಸುನಗು ಮಿಸ್ಸಾಗಬಹುದು, ಅದೇ ಕ್ಷಣದಲ್ಲಿ ನಿನ್ನ ಮುಂಗುರಳ ಲಾಲಿತ್ಯದ ದಾಖಲಾತಿ ತಪ್ಪಿಹೋದೀತು. ಜೀವದಾಳಕ್ಕೇ ಗಾಳ ಹಾಕಿ ಒಲವ ಮೀನಿಗೆ ಆಸೆ ಹುಟ್ಟಿಸುವ ನಿನ್ನ ಕುಡಿನೋಟ, ಕೆನ್ನೆಯಂಚಲ್ಲಿ ಮತ್ತಷ್ಟು ಅಂದ ಹೆಚ್ಚಿಸುತ್ತಿರುವ ಮೊಡವೆ, ಕಣ್ಣ ಬಾಣ ಬಿಡಲು ಸದಾ ಸಿದ್ಧ ಅಂತನ್ನಿತ್ತಿರುವ ಹುಬ್ಬು, ಐಸ್ ಕ್ರೀಮಿನ ತುತ್ತತುದಿಯಲ್ಲಿರುವ ಚೆರ್ರಿಯಂತೆ- ಇಂಥ ಅಂದಕ್ಕೆ ನಾನೇ ಮುಖ್ಯ ಕಾರಣ ಅಂತ ಬೀಗುತಿರುವ ಬಿಂದಿ, ಎಲ್ಲವೂ ಒಂದಕ್ಕಿಂತ ಇನ್ನೊಂದು ಅಂದ. ಇದನ್ನೆಲ್ಲಾ ಒಂದೇ ಕ್ಷಣದಲ್ಲಿ ಒಂದೇ ಫ್ರೇಮಿನಲ್ಲಿ ಹೇಗೆ ಪೇರಿಸಿಡಲು ಸಾಧ್ಯ?

ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ

ಇಬ್ಬರೂ ಲಿಫ್ಟ್ ನಲ್ಲಿ ಸಿಕ್ಕಾಗಲಂತೂ ವಿಪರೀತ ಭಯ. ಎಲ್ಲಿ ನನ್ನ ಎದೆಬಡಿತ ನಿನಗೆ ಕೇಳಿಬಿಡುತ್ತದೋ ಎಂದು. ಈ ಕ್ಷಣ, ಈ ಸ್ಥಳ ಹೀಗೇ ಜನ್ಮಪೂರ್ತಿ ಇರುವಂತೆ ಯಾರಾದರೂ ಸ್ಟಾಚ್ಯೂ ಹೇಳಿಬಿಡಬಾರದಾ ಎಂಬಂಥ ಮನಸ್ಥಿತಿ. ಲಿಫ್ಟ್ ನೊಳಕ್ಕೆ ಅದೆಷ್ಟು ಜನರಿದ್ದರೂ ನಿನ್ನ ಇರುವು ನನ್ನೊಳಗೆ ಮೂಡಿಸುವ ಸಂಚಲನವನ್ನು ಅದು ಹ್ಯಾಗೆ ಪದಗಳಲ್ಲಿ ನಾ ವಿವರಿಸಲಿ? ಮೊದಲೊಮ್ಮೆ ಊಟ ಆಯ್ತಾ ಅಂತ ಕೇಳಿದ್ದರೂ ನೀನು ಉತ್ತರಿಸದೇ ಹೋಗಿದ್ದೆ. ಹಾಗಾಗಿ ಮೊದಲ ಬಾರಿಗೆ ನಿನ್ನ ಇನಿದನಿಯನ್ನು ಕೇಳಿದ್ದು ನಾ ಇದೇ ಲಿಫ್ಟ್ ನಲ್ಲವೇ? ನಿನ್ನ ಗೆಳತಿಯ ಬಳಿ ಚಪಾತಿ ತಂದಿದ್ದೀಯಾ ಅಂತೇನೋ ಕೇಳಿದ್ದ ನೆನಪು. ಕೆಲವೊಮ್ಮೆ ಅನ್ನಿಸುತ್ತದೆ, ಬಹುಷಃ ನಾನು ಹೆಚ್ಚು ನಿರೀಕ್ಷಿಸುತ್ತಿದ್ದೇನೋ ಅಂತ. ಯಾಕೆಂದರೆ ಈ ಜಗತ್ತಿನಲ್ಲಿ ಅದೆಷ್ಟು ಜನರಿದ್ದರೂ ಪ್ರತಿದಿನ ನಿನ್ನನ್ನು ನೋಡುವ, ನಿನ್ನ ನಡಿಗೆಯ ಅಂದವನ್ನು ಸವಿಯುವ ಖುಷಿ, ನಿನ್ನ ನಗುವನ್ನು ಕೇಳುವ ಸುಖ ಇದೆಲ್ಲಾ ನನಗೆ ಸಿಗುತ್ತಿರುವುದು ನನ್ನ ಅದೃಷ್ಟವೇ ಅಲ್ಲವಾ? ಇವಿಷ್ಟರಿಂದಲೇ ನನ್ನ ನೆನಪಿನ ಜೋಳಿಗೆಯನ್ನು ತುಂಬಿಸಿ ಹೊತ್ತೊಯ್ಯಲು ಸಾಲುವುದಿಲ್ಲವಾ? ಹೀಗೆಲ್ಲಾ ಅನ್ನಿಸಿ ತೃಪ್ತಿಯಾದರೂನು ಮನಸ್ಸು ತುಂಬಾ ಬಲಹೀನ. ನಿನ್ನ ಜೊತೆ ಒಮ್ಮೆಯಾದರೂ ಊಟ ಮಾಡುವ, ಒಂದೇ ಒಂದು ಸಂಜೆ ಜತೆಯಾಗಿ ಕಾಫಿ ಕುಡಿಯುವ, ಕಾಲದ ಪರಿವೇ ಇಲ್ಲದೇ ತುಂಬಾ ಮಾತಾಡುವ ಆಸೆ, ಮುದ್ದಾದ ಇಂಥ ಹಂಬಲಗಳಿಂದಲೇ ಜೀವನ ಸವೆಯುತ್ತಿದೆ. ಯಾವತ್ತೋ ಒಂದು ದಿನ ಅದು ಸಾಧ್ಯವಾಗುತ್ತದೆ ಎಂಬ ಕನಸು ಹೊತ್ತೇ ಜೀವನ ಸಾಗುತ್ತಿದೆ.

d29a4a3cfe8f43f1a21cf2ea42657e1e

ಮನಸಲಿ ಚೂರು ಜಾಗ ಬೇಕಿದೆ..
ಕೇಳಲಿ ಹೇಗೆ ತಿಳಿಯದಾಗಿದೆ..

ನಿಜಾ ಹೇಳಲಾ? ನಂಗೂ ನಿಂಗೂ ಮಧ್ಯೆ ಏನೋ ಲಿಂಕಿದೆ. ಹಳೇ ಜನ್ಮದ ಫ್ಲಾಷ್ ಬ್ಯಾಕಿದೆ. ಬೇಕಿದ್ದರೆ ನೋಡು, ನಿನ್ನ ಹಣೆಯ ಕುಂಕುಮವಿಡುವ ಭಾಗದ ಪಕ್ಕದಲ್ಲೂ ಮಚ್ಚೆಯಿದೆ, ಅದೇ ಸ್ಥಳದಲ್ಲಿ ನನಗೂ ಮಚ್ಚೆಯಿದೆ. ನಮ್ಮಿಬ್ಬರ ಕಣ್ಣ ನೋಟ ಒಂದಾದ ದಿನದಿಂದ ಜೀವ ಅದೇಕೋ ಚಡಪಡಿಸುತ್ತಿದೆ. ಇಲ್ಲದೇ ಹೋದರೆ, ನೀನು ಒಂದು ದಿನ ನೋಡೋಕೆ ಸಿಗಲಿಲ್ಲವೆಂದರೆ ನನ್ನ ಮನಸ್ಸೇಕೆ ವಿಲ ವಿಲ ಒದ್ದಾಡುತ್ತದೆ? ನಿನಗಿಂತ ಅದೆಷ್ಟು ಅಂದವತಿ ತರುಣಿಯನ್ನು ನೋಡಿದ್ದರೂ ನಾನು ನಿನ್ನತ್ತ ಯಾಕೆ ಆಕರ್ಷಿತನಾದೆ? ನಿನ್ನನ್ನು ಕಂಡಾಕ್ಷಣ ಮನಸ್ಸೇಕೆ ಗೊಂಬೆಯನ್ನು ಕಂಡ ಮಗುವಿನಂತೆ ಹಟ ಹಿಡಿಯಿತು? ಹರಿತ ಚೂರಿಯಂಥ ನಿನ್ನ ನೋಟ ಅದೇಕೆ ನನ್ನ ಎದೆಯಾಳ ಕಲಕಿತು. ನಿನ್ನ ನಗುವಿನ ಅಲೆ ನನ್ನೆದೆಗೆ ಬಡಿದಾಗ ಆಗುವ ಸಂತಸಕ್ಕೆ ಕಾರಣವೇನು? ನನಗೆ ನೀನು ಉತ್ತರಿಸದಾಗ ಅದೇಕೆ ನಾನು ತತ್ತರನಾಗುತ್ತೇನೆ? ಯಾವುದೋ ಜನ್ಮದ ಮೈತ್ರಿಯಿರದೇ ನೀನು ನನಗೊಂದು ಗುಂಗಿನಂತೆ ಹೇಗೆ ಕಾಡಬಲ್ಲೆ? ನಿನಗಷ್ಟೇ ಕೇಳುವಂತೆ ಒಲವ ಗೀತೆಯೊಂದ ಹಾಡಬೇಕು ಅಂತ್ಯಾಕೆ ಮನಸ್ಸು ಕುಣಿಯುತ್ತದೆ? ಭಕ್ತಿಯ ಲೆವೆಲ್ಲಿಗೆ ಪ್ರೀತಿ ಮುಟ್ಟೋಕೆ ಸಾಧ್ಯ ಅಂತ ಯಾಕೆ ಅನ್ನಿಸುತ್ತಿದೆ?

ನಿನ್ನಲ್ಲೆ ಜೀವವನ್ನು… ಅಡವಿಟ್ಟುಬಂದೆ ನಾನು..
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು… ಹರಿಯುವ ಮುನ್ನವೇ..

summer_love_wallpaper_rjtz3

ತುಂಬಾ ದಿನದಿಂದ, ಕವಿತೆ ಪೂರ್ತಿ ಮಾಡಲು ಸಿಗದ ಕೊನೆಯ ಪದದಂತೆ ನಿನ್ನದೇ ಗುಂಗು ನನ್ನ ಜೀವನವನ್ನು ವ್ಯಾಪಿಸಿದೆ. ಪ್ರತಿ ಕ್ಷಣವೂ ಈಗ ನೀನೇನು ಮಾಡುತ್ತಿದ್ದಿರಬಹುದು ಎಂಬ ಊಹೆಯ ಸವಿಯಲ್ಲೇ ಕಳೆಯುತ್ತಿದೆ. ಮರೆಯಲು ನಾ ಮಾಡಿದ ಪ್ರಯತ್ನದಲ್ಲೆಲ್ಲಾ ನನ್ನದು ಘನಘೋರ ಸೋಲಾಗಿದೆ. ಆದರೂ ಮನಸ್ಸಿಗೆ ಒಂದು ಭರವಸೆ ಉಕ್ಕಿಸಿ ಸಮಾಧಾನ ಮಾಡುತ್ತಿರುತ್ತೇನೆ. ತಿಪಟೂರಿನ ಜಾತ್ರೆಯ ಜನಜಂಗುಳಿಯಲ್ಲಿ ನಿನಗೆ ಅರಿವಿರದಂತೆ ನಿನ್ನ ಕಿರುಬೆರಳನ್ನು ಮುಟ್ಟುತ್ತೇನೆ. ಅರಳುವ ಹೂವೊಂದನ್ನು ನೋಡಿ ಖುಷಿಪಟ್ಟ ದಿನ, ಅಲ್ಲೆಲ್ಲೊ ಮರದ ಹಿಂದೆ ನಿನಗೇ ಅರಿವಿರದಂತೆ ನಿಂತು ನಾನೂ ಆನಂದ ಪಡುತ್ತೇನೆ. ನಿನ್ನ ಪಲ್ಲುವಿನ ಎಳೆಯೊಂದನ್ನು ಕದ್ದು ನನ್ನ ಪರ್ಸಿನಲ್ಲಿ ಖಾಯಂ ಆಗಿಟ್ಟುಕೊಳ್ಳುತ್ತೇನೆ. ಯಾವಾಗಲೋ ಒಮ್ಮೆ ನೀನು ನೋಡಿ ಕುತೂಹಲದಿಂದ ಕರೆ ಮಾಡುವೆ ಎಂಬ ಭರವಸೆಯಿಂದ ನಿನ್ನ ಡೈರಿಯ ಕೊನೆಯ ಪುಟಗಳಲ್ಲಿ ನನ್ನ ನಂಬರನ್ನು ಬರೆದಿಡುತ್ತೇನೆ. ತುರುವೆಕೆರೆ ತಿರುವುಗಳಲ್ಲಿ ಕೇವಲ ನಿನಗಷ್ಟೇ ಕೇಳುವಂತೆ ನಿನ್ನ ಹೆಸರನ್ನು ಕೂಗುತ್ತೇನೆ. ಮೂಲೆ ಶಂಕರೇಶ್ವರ ದೇವಸ್ಥಾನದಲ್ಲಿ ನಿನ್ನ ಹುಟ್ಟುಹಬ್ಬದ ದಿನ ನಿನ್ನ ಹೆಸರಲ್ಲಿ ಅರ್ಚನೆ ಮಾಡಿಸುತ್ತೇನೆ. ದಾಸರಿಘಟ್ಟ ಚೌಡೇಶ್ವರಿ, ಹೊನ್ನಮ್ಮನ ಬಳಿ ನಿನಗೆ ಸದಾ ಒಳ್ಳೆಯದಾಗಲಿ, ಬದುಕು ಪೂರ್ತಿ ಖುಷಿ ಇರಲಿ ಅಂತ ಹರಕೆ ಹೊತ್ತುಕೊಳ್ಳುತ್ತೇನೆ. ಇಂಥ ಸಮಾಧಾನದಿಂದಲಷ್ಟೇ ಮನಸ್ಸು, ನೀನು ನನ್ನೆಡೆ ನಗದಿದ್ದರೂ, ನನಗೆ ಉತ್ತರಿಸದಿದ್ದರೂ, ನನ್ನನ್ನು ನೆಗ್ಲೆಕ್ಟ್ ಮಾಡಿದರೂ ಸುಮ್ಮನಿದೆ. ಇಲ್ಲದೇ ಹೋಗಿದ್ದರೆ ರಚ್ಚೆ ಹಿಡಿವ ಮನಸ್ಸೆಂಬ ಮಗುವನ್ನು ಸಂತೈಸಲು ಜಗತ್ತಿನ ಎಲ್ಲಾ ಅಮ್ಮಂದಿರ ಪ್ರೀತಿಯನ್ನು ಒಟ್ಟುಹಾಕಿ ಸಂಭಾಳಿಸಬೇಕಾದೀತು!

– ನಿನ್ನ ಚಿಟ್ಟೆ ಕ್ಲಿಪ್ಪಿನ ಫ್ಯಾನ್!

ಲೈಬ್ರೆರಿಯ ಕಪಾಟಿನಲ್ಲಿ ಜೋಡಿಸಲ್ಪಟ್ಟಿರುವ ಪುಸ್ತಕಕ್ಕೆ ತನ್ನದೇ ಅಪ್ಯಾಯವಾದ ವಲಯವೊಂದಿದೆ. ಅದು ತನ್ನದೇ ಆದ ವಿಶಿಷ್ಟ ಪ್ರಪಂಚ ಹೊಂದಿದೆ. ಯಾರಾದರೂ ಒಮ್ಮೆ ಅದರೆಡೆಗೆ ಹೋಗಿ ಇಸ್ಪೀಟೆಲೆಯೊಂದನ್ನು ಎತ್ತುವಂತೆ ಪುಸ್ತಕವೊಂದನ್ನು ತೆರೆದರೆ ಸಾಕು, ಆತನನ್ನು ತನ್ನ ಪ್ರಪಂಚಕ್ಕೆ ಕೈ ಹಿಡಿದು ಎಳೆದೊಯ್ಯುತ್ತದೆ. ಪುಸ್ತಕದ ಮುಖಪುಟದಲ್ಲಿರುವ ಹೆಸರಿನ ಜೊತೆಗೆ, ಅದರ ಅಕ್ಷರದ ವಿನ್ಯಾಸ ಕೂಡ ಆ ಪ್ರಪಂಚದ ಬಾಗಿಲಿನ ಕೀಲಿಕೈ. ಒಳಪುಟಗಳ ಕಲೆ, ಚಿತ್ರಗಳು ಆ ಪ್ರಪಂಚದ ಕಿಟಕಿಯಾದೀತು. ಮತ್ತು ಅಲ್ಲಿಂದ ಒಳಬರುವ ಬೆಳಕಲ್ಲಿ ಓದುಗನ ಪ್ರಪಂಚ ಇನ್ನಷ್ಟು ಸ್ಪಷ್ಟ, ಇಷ್ಟವಾದೀತು.

ಪುಟ ತೆರೆದಾಗ ಅಲ್ಲಿ ಅರಳುವ ಗಂಧ ಬೇರೆಲ್ಲಿಯೂ ಸಿಗದು, ಆ ಪರಿಮಳಕ್ಕಾಗಿ ನೀವು ಲೈಬ್ರೆರಿಯ ತೋಟಕ್ಕೇ ಹೋಗಬೇಕಾಗುತ್ತದೆ. ಈ ವಿಶಿಷ್ಟ ಪರಿಮಳದ ಜೊತೆಗೆ ಯಾವುದಾದರೂ ಪುಸ್ತಕ ಓದಿ ಅದರ ಭಾವಗಳನ್ನು ಮನಸ್ಸಿಗೆ ಉದ್ದೀಪ್ತಗೊಳಿಸಿದರೋ ಅದೊಂದು ಮುದ್ರೆಯಂತೆ ಮನಸ್ಸಿನಲ್ಲೇ ಉಳಿದುಬಿಡುತ್ತದೆ. ಮೆದುಳ ಪದರದೊಳಗೆ ಪರಿಮಳದ ಜೊತೆಗೆ ಓದಿದ ಭಾವವೂ ಲಾಕ್ ಆಗಿರುತ್ತದೆ. ಎಷ್ಟೋ ವರ್ಷಗಳ ನಂತರ ನೀವು ಆ ಪುಸ್ತಕ ಓದಬೇಕಿಲ್ಲ, ಸುಮ್ಮನೆ ಆ ಪರಿಮಳವನ್ನು ಮತ್ತೆ ಹಾಯ್ದರೂ ಸಾಕು, ಫಕ್ಕನೆ ಮಾಯಾದೀವಿಗೆಯಿಂದ ಹೊರಬಂದ ಜೀನಿಯಂತೆ ಯಾವತ್ತೋ ಓದಿದ ಭಾವ ಎದುರು ಬಂದು ನಿಲ್ಲುತ್ತದೆ. ಭಾವನೆಗೂ ಸುಗಂಧಕ್ಕೂ ಸಂಬಂಧವಿರುವುದು ಅರಿವಾಗುವುದು ನವಿರು ಪುಟವನ್ನು ಬೆರಳು ಪ್ರೀತಿಯಿಂದ ಸವರಿದಾಗಲೇ.

ಲೈಬ್ರೆರಿಯ ಮೌನದಲ್ಲಿ ಜ್ಞಾನದ ಅಲೆಗಳು ಓಡಾಡುತ್ತಿರುತ್ತದೆ. ಅಲ್ಲಿನ ಮೌನಕ್ಕೆ ದೇವಸ್ಥಾನದ ಭಕ್ತಿಯ ಲೇಪವಿದೆ. ಅದಕ್ಕೆ ಅದರದ್ದೇ ಆದ ಆಲಾಪವಿದೆ. ಕಿಟಕಿಯಾಚೆ ಹೆಸರಿಲ್ಲದ ಹಕ್ಕಿಯೊಂದು ಎಸೆದು ಹೋದ ಶಬ್ದಕೆ ಲೈಬ್ರೆರಿಯ ಮೌನ ವಿಚಲಿತವಾಗುವುದಿಲ್ಲ. ಒಂದು ವೇಳೆ ಈ ಲೋಕದ ಮೌನದ ಫ್ಲವರ್ ವಾಸ್ ಫಳ್ಳಂತ ಒಡೆಯುವುದು ನೋಡಲೇಬೇಕಾದರೆ ನಿರ್ವಾಹಕನನ್ನು ಗಮನಿಸಬೇಕಾಗುತ್ತದೆ. ಮೆತ್ತನೆ ಹತ್ತಿಯಂಥ ಧ್ವನಿಯಲ್ಲಿ ಮಾತಾಡಿಸಿದರೂ ಆತ ಮಾತ್ರ ತನ್ನ ಉತ್ತರವನ್ನು ಎತ್ತರದ ದನಿಯ ಗತ್ತಿನಲ್ಲೇ ನೀಡುತ್ತಾನೆ. ಸದ್ದಿಲ್ಲದ ಲೋಕದಲ್ಲಿ ಮುಳುಗಿದ ಓದುಗರು ಒಮ್ಮೆ ತಲೆಯೆತ್ತಿ ತನ್ನ ನೋಡುವರು ಅನ್ನುವ ಹೆಮ್ಮೆಯೊಂದು ಆತನ ಓರೆನೋಟದ ಎಡೆಯಲ್ಲಿರುತ್ತದೆ. ಇನ್ನು ರಸ್ತೆಯ ವಾಹನಗಳ ಹಾರ್ನಿನ ಸದ್ದು, ಕಾಲೇಜು ಯುವಕನ ಗಾಡಿಯ ಹೈ ವೀಲಿಂಗ್ ನ ಸದ್ದು, ಪಕ್ಕದಲ್ಲಿರುವ ಮೈದಾನದ ಕ್ರಿಕೆಟ್ಟಿನಲ್ಲಿ ವಿಕೆಟ್ಟು ಬಿದ್ದುದಕ್ಕೆ ಮೂಡುವ ಉದ್ಘೋಷದ ಸದ್ದುಗಳೆಲ್ಲವು ಲೈಬ್ರೆಯ ಸರಹದ್ದಿನಲ್ಲಿರುವ ಲಕ್ಷ್ಮಣ ರೇಖೆ ದಾಟಿಬಂದರೂ ಅದು ಮಹತ್ವವಿಲ್ಲದೇ ಹೋಗುವ ಮಾಯಾಲೋಕ ಇಲ್ಲಿ ಸೃಷ್ಟಿಯಾಗಿರುತ್ತದೆ. ಇನ್ನು, ಎಲ್ಲೋ ಲೇಖಕನ ಪೆನ್ ಡ್ರಾಪ್ ಸೈಲೆನ್ಸ್ ನಿಂದ ಮೂಡಿದ ಅರ್ಥದ ಸದ್ದು, ಇಲ್ಲಿನ ಪಿನ್ ಡ್ರಾಪ್ ಸಿಲೆನ್ಸಿನಲ್ಲಿ ಸ್ಪಷ್ಟವಾಗಿ ಕೇಳಬಹುದು. ಲೈಬ್ರೆರಿಯ ನಿರ್ವಾಹಕ, ಸೈಲೆನ್ಸ್ ಪ್ಲೀಸ್ ಎಂದು ಬರೆದು ಹಾಕಿದ ಬೋರ್ಡು ಗಾಳಿಗೆ ಅಲುಗಿ ಮಾಡುವ ಸದ್ದು ಸಹಿಸಿದರೂ, ಪುಟ್ಟ ಪಿಸುಗುಟ್ಟುವಿಕೆಗೆ ಭುಸುಗುಟ್ಟಬಲ್ಲ.

ಬಹುತೇಕ ಎಲ್ಲಾ ಲೈಬ್ರೆರಿಯ ಓದುಗರಲ್ಲೂ ಒಬ್ಬ ಒಂದು ಸಾಲಿನ ವಿಮರ್ಶಕ ಇದ್ದೇ ಇರುತ್ತಾನೆ. ಅವನು ಯಾವುದೋ ಗಲ್ಲಿಯ, ಯಾವುದೋ ಮನೆಯ, ಯಾವುದೋ ಕೋಣೆಯಲ್ಲಿ ಕುಳಿತೇ ಇಲ್ಲಿ ಲೈಬ್ರೆರಿಯ ಪುಸ್ತಕಗಳ ಕಪಾಟಿನ ಸಾಲುಗಳ ಮಧ್ಯೆ ಕಳೆದುಹೋದ, ಕನ್ ಫ್ಯೂಸ್ ಆದ ವ್ಯಕ್ತಿಗೆ ದಾರಿ ತೋರಬಲ್ಲ. ಇಷ್ಟಕ್ಕೂ ಅವನು ಮಾಡುವುದಿಷ್ಟೇ; ಓದಿದ ಪುಸ್ತಕಗಳಲ್ಲಿ this is a very good book ಅಂತ ಕುತ್ತಿಗೆ ಒತ್ತಿ ಬರೆಸಿರುವಂತಿರುವ ಕೈಬರಹದಲ್ಲಿ ಬರೆಯುತ್ತಾನೆ. ಹೀಗೆ ಯಾವ ಪುಸ್ತಕ ಆರಿಸಲಿ ಅಂತ ಲೈಬ್ರೆರಿಯ ಕಪಾಟಿನ ಸಾಲುಗಳ ಮಧ್ಯೆ ಕಳೆದುಹೋದ ಅಭಿಮನ್ಯುವಿಗೆ ದಾರಿ ತೋರಿಸಬಲ್ಲ.

ಇನ್ನೂ ಪುಸ್ತಕದ ಒಳದಾರಿಗಳಲ್ಲಿ ಹೋಗಿ ಇಂಥ ಒನ್ ಲೈನ್ ವಿಮರ್ಶೆಯನ್ನು ಓದುವ ವ್ಯವಧಾನವಿಲ್ಲದವರು ಮತ್ತೊಂದು ಮಾರ್ಗೋಪಾಯ ಕಂಡು ಹಿಡಿದಿದ್ದಾರೆ. ಅದು ಪುಸ್ತಕದ ಹಿಂಭಾಗದಲ್ಲಿ ಅಂಟಿಸಿರುವ ಚೀಟಿಯನ್ನು ಗಮನಿಸುವುದು. ಕೊನೆಯ ದಿನಾಂಕಗಳಿಂದಲೇ ಅರಳಿರುವ ಕೊನೆಯ ಪುಟವದು. ಒಂದು ಪುಸ್ತಕ ಊರಿನ ಒಂದು ಮೂಲೆಯ ಮನೆಯಲ್ಲಿನ ಕೋಣೆಯಿಂದ ಮುಕ್ತಿ ಪಡೆವ, ಮತ್ತೊಂದ್ಯಾವುದೋ ಕೋಣೆಯೊಳಗೆ ಹೋಗಲು ಅವಕಾಶಕ್ಕೆ ಅನುಮತಿ ಸಿಗುವ ದಿನಾಂಕಗಳವು. ಅವೇ ಪುಸ್ತಕದ ಪಾಲಿನ ಸ್ವಾತಂತ್ರ್ಯದಿನಗಳು. ಆ ಪುಟ ಪೂರ್ತಿ ದಿನಾಂಕಗಳೇ ತುಂಬಿದ್ದರೆ ಅಂಥ ಪುಸ್ತಕವನ್ನು ಹೆಚ್ಚು ಓದುಗರು ಕೊಂಡೊಯ್ದಿದ್ದಾರೆ ಹಾಗಿದ್ದಾಗ ಇದು ಬಹುಶಃ ಚೆನ್ನಾಗಿರುವ ಪುಸ್ತಕ ಅಂತಲೇ ಆತ ಭಾವಿಸುತ್ತಾನೆ. ಕೋಟ್ಯಾಧಿಪತಿಯಲ್ಲಿನ ಆಡಿಯೆನ್ಸ್ ವೋಟಿಂಗ್ ಮಾದರಿಯಲ್ಲಿ ಆ ಪುಸ್ತಕವನ್ನೇ ಆರಿಸಿ ಒಯ್ಯುತ್ತಾನೆ.ಇಂಥದ್ದೊಂದು ಉಪಾಯವನ್ನು ಕಂಡುಹಿಡಿದ ಅಂಥ ಓದುಗರನ್ನು ಲೈಬ್ರೆರಿಯೆಂಬ ಭೋಧನ ವೃಕ್ಷದ ಕೆಳಗೆ ಜ್ಞಾನೋದಯಗೊಂಡ ಬುದ್ಧರೆನ್ನಬಹುದು.

ಯಾವುದೋ ಒಂದು ಬೆಡ್ರೂಮಿನಲ್ಲಿ ಓದುತ್ತಾ ಓದುತ್ತಾ ಓದುಗ ಇನ್ನೇನು ಪುಸ್ತಕದ ಮೇಲೆಯೇ ಬಿದ್ದು ಬಿಡುತ್ತಾನೆ ಅನ್ನುವಾಗ ಪುಸ್ತಕಗಳಲ್ಲಿನ ಅಂಡರ್ ಲೈನ್ ಆಗಿರುವ ಸಾಲುಗಳು ಎಚ್ಚರಿಸುತ್ತದೆ. ಓದುತ್ತಿದ್ದೇನೆಂಬ ಭಾವದಲ್ಲಿದ್ದುಕೊಂಡು ಓದುವ ಭರದಲ್ಲಿ ಅರ್ಥದ ಹಳಿತಪ್ಪಿ ಸಾಗುವ ಓದುಗನನ್ನೂ ಇಂಥ ಅಡಿಗೆರೆಗಳು ಎಬ್ಬಿಸುತ್ತಿರುತ್ತದೆ. ಮತ್ತೆ ರಸದ ಹಳಿ ಮೇಲೆ ಯಾರದೋ ಅನುಭವವು ನಮ್ಮ ಅನುಭೂತಿಯಾಗಬಲ್ಲಂಥ ಗಮ್ಯದೆಡೆಗೆ ಸಾಗುವ ಉಮೇದು ಕೊಡುತ್ತದೆ.

ಹಾಗೇನೆ ಕೊನೆ ಪುಟದಲ್ಲಿನ ಸಸ್ಪೆನ್ಸ್ ಒಂದನ್ನು ಮೊದಲನೇ ಪುಟದಲ್ಲೇ ಬರೆವ ಚಾಳಿಗೂ ಓದುಗ ಸಿಲುಕಬೇಕಾಗುತ್ತದೆ. ಸಸ್ಪೆನ್ಸ್ ಸಿಕ್ಕಿದ ಸಿಟ್ಟಿನಲ್ಲೂ (ಏನಾದರೂ ಸಿಕ್ಕಿದರೂ ಸಿಟ್ಟಾಗುವ ಸಂಗತಿ ಬಹುಶಃ ಇದು ಒಂದರಲ್ಲೇ ಇರಬೇಕು!) ಓದುಗನಿಗೆ ಒಳಸುಳಿಯಲ್ಲಿ ಗಮ್ಯಕ್ಕಿಂತ ಗಮ್ಯದೆಡೆಗೆ ಸಾಗುವ ದಾರಿ ಕೂಡ ಮಹತ್ವದ್ದು ಎಂಬ ಪಾಠವೂ ಸಿಗುತ್ತದೆ. ಚೋಮನ ದುಡಿ, ಮಲೆಗಳಲ್ಲಿ ಮದುಮಗಳು ಪುಸ್ತಕದಲ್ಲಿ ಎಂಥ ಸಸ್ಪೆನ್ಸ್ ಇರುತ್ತದೆ, ಆದರೂ ಮತ್ತೆ ಮತ್ತೆ ಓದಿಸಿಕೊಳ್ಳಲು ಕಾರಣ ಅದು ಸೃಷ್ಟಿಸಿದ ಮಾಯಾಲೋಕ ಮತ್ತು ಅದು ವಿವರಿಸುವ ಜೀವನಕ್ರಮ, ನಿರೂಪಣೆಯ ವಿನ್ಯಾಸದಲ್ಲೇ ಇದೆ.

ಪುಸ್ತಕ ಸೃಷ್ಟಿಸಿದ ಮಾಯಾಲೋಕದೊಳಗೆ ಸಿಕ್ಕಿ ದಾರಿತಪ್ಪಿದವರ ಮತ್ತೆ ಕೆಲವುಸಲ ಓದಿನ ಹಾದಿಯಲ್ಲಿ ಸುಸ್ತಾದವರ ತಂಪಿನ ನೆಳಲಿನ ನೆನಪಿಗೆಂದೆ ಕೆಲವು ಪುಸ್ತಕಗಳಲ್ಲಿ ಕಿವಿಹಿಂಡಿದ ಪುಟಗಳಿರುತ್ತದೆ. ಆ ಪುಟಗಳು ಓದುಗರ ಪಾಲಿನ ಇಂಟರ್ ವಲ್. ಕೆಲವರು ಹತ್ತಿರದಲ್ಲಿ ಪೆನ್ಸಿಲ್ ಇಟ್ಟುಕೊಂಡಿರದ ತಮ್ಮ ತಪ್ಪಿಗೆ ಚಂದದ ಕೊಟೇಶನ್ ಇರುವ ಪುಟದದ ಕಿವಿ ಹಿಂಡಿ ಬಿಟ್ಟಿರುತ್ತಾರೆ.

ಹೊಸಾ ಲೇಖಕನೊಬ್ಬ ವಿಶಾಲ ಲೈಬ್ರೆರಿಯ ಕಪಾಟಿನ ಮಧ್ಯೆಯಲ್ಲಿ ತನ್ನ ಪುಸ್ತಕವೊಂದನ್ನು ತುಂಬು ಸಂಕೋಚದಿಂದ ಹಿಡಿದು, ಎಸ್ಸೆಲ್ಸಿ ಹುಡುಗನೊಬ್ಬ ರಿಸಲ್ಟ್ ನೋಡುವಾಗಿನಂಥಹ ಹಿಂಜರಿಕೆಯಿಂದ ಕೊನೆಭಾಗದಲ್ಲಿರುವ ಕೊನೆದಿನಾಂಕಗಳ ಪಟ್ಟಿ ಮೇಲೆ ಕಣ್ಣಾಡಿಸುವಾಗ ಆತನ ಕಣ್ಣುಗಳು ಖುಷಿಯಿಂದ ಪ್ರದೀಪ್ತವಾಗಲಿ. ಮನದ ನಾಲಿಗೆಗೆ ಓದಿನ (ಅಭಿ)ರುಚಿ ಹತ್ತಿಸಿದ ಅಡುಗೆಭಟ್ಟನ ಖುಷಿ ಅವನದಾಗಲಿ. ಸಾಲು ಕಪಾಟಿನಲ್ಲಿರುವ ಯಾವುದೇ ಲೇಖಕನ ಯಾವುದೇ ಪುಸ್ತಕಗಳಿಗೆ ಓದಿಲ್ಲದ ಗುರುತಿನಂತಹ ಧೂಳು ಅಂಟದಿರಲಿ.

ಯಾಕೆಂದರೆ,

ಮುಂಬೈನ ಬಾಂದ್ರಾದಲ್ಲೋ, ಮಂಗಳೂರಿನ ಬಂದರಲ್ಲೋ, ಮನೆಮೂಲೆಯ ಟೇಬಲಿನಲ್ಲೋ ಕುಳಿತು ಬರೆವ ಲೇಖಕನ ಹೊಳಹು, ಭಾವವಿನ್ಯಾಸ, ಜೀವನದ್ರವ್ಯವೊಂದು ಇನ್ಯಾವುದೋ ಹಳ್ಳಿಯಲ್ಲಿ, ವಿಶಾಲ ಹಜಾರದಲ್ಲಿ, ಟೀವಿಯ ಸೆಳೆತವನ್ನೂ ಹತ್ತಿಕ್ಕಿ, ಪಕ್ಕಕ್ಕಿರಿಸಿ, ತನ್ನೊಳಗಿನ ಮೌನದಲ್ಲಿ ಕುಳಿತು ಓದುವ ಓದುಗನ ಮನದಲ್ಲಿ ಮೂಡಿಸುವ ಬೆಳಕಿದೆಯಲ್ಲ, ಅದು ವಿಶಿಷ್ಟ ಮತ್ತು ವಿಶೇಷವಾದ್ದು.

 

(‘ಸಖಿ’ ಪಾಕ್ಷಿಕದಲ್ಲಿ ಪ್ರಕಟವಾಗಿದೆ.)

ಮಹಾನಗರವೆಂದರೆ ಸುಮ್ಮನೆ ಅಲ್ಲ. ಬಟ್ಟೆಯನ್ನು ಶಿಲೆಗಲ್ಲಿಗೆ ಕುಟ್ಟಿ, ಬ್ರಷ್ ನಲ್ಲಿ ಉಜ್ಜಿ, ನೀರಲ್ಲಿ ಮುಳುಗಿಸಿ, ಅಡಿಮೇಲೆ ಮಾಡಿ ಸುಡುಬಿಸಿಲಿಗೆ ನೇತು ಹಾಕುತ್ತೇವಲ್ಲ, ಹಾಗೆ ನಮ್ಮೊಳಗೆ ಹೊಳಪು ತರಲು ಅದು ಮಾಡದಿರುವ ಕಸರತ್ತೇ ಇಲ್ಲ.

ಅವನೋ ಹಳ್ಳಿಯಿಂದ ಬಂದವನು. ಮಹಾನಗರದಲ್ಲಿ ಹೆಜ್ಜೆಯಿಟ್ಟ ಮೊದಲ ದಿನವೇ ಕಂಡಕ್ಟರು ಚೇಂಜ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಬೈದ. ಕಾಲೇಜ್ ಹುಡುಗಿಯೊಬ್ಬಳು ಸಿಗ್ನಲ್ ಕ್ರಾಸ್ ಮಾಡಿ ಟ್ರಾಫಿಕ್ ಪೋಲಿಸ್ ಕೈಲಿ ಸಿಕ್ಕಿ ಹಾಕಿಕೊಂಡಾಗ ಸಾರ್, ಎಕ್ಸಾಮ್ ಗೆ ಹೊರ್ಟಿದೀನಿ ಈಗ್ಲೇ ತಡಾ ಆಯ್ತು ಅಂತ ಹಸೀ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದನ್ನು ನೋಡಿದ. ರಸ್ತೆಯಲ್ಲಿ ನಡೆವ ಚಿಕ್ಕ ಪುಟ್ಟ ಆಕ್ಸಿಡೆಂಟುಗಳಲ್ಲಿ ಬಾಯ್ಮಾತು ಚೆನ್ನಾಗಿದ್ದವನದೇನೂ ತಪ್ಪಿರಲ್ಲ ಎಂಬುದನ್ನು ಅರಿತ. ಥಿಯೇಟರ್ ನಲ್ಲಿ ಟಿಕೇಟ್ ಸಿಗದೇ ಒದ್ದಾಡುತ್ತಿದ್ದ ಸಮಯದಲ್ಲಿ ಪಕ್ಕದಲ್ಲಿ ನಿಂತಿದ್ದ ಮಿನಿಸ್ಟ್ರ ಮಗನಿಗೆ ಒಂದು ಫೋನ್ ಕಾಲ್ ಮೂಲಕ ಟಿಕೇಟ್ ಹೇಗೆ ಸಿಕ್ಕಿತು ಎಂದು ಅಚ್ಚರಿ ಪಟ್ಟ. ಟ್ರಾಫಿಕ್ಕಿನಿಂದಾಗಿ ಗಂಟೆಗಟ್ಟಲೆ ಬಸ್ಸೊಳಗೇ ಇರಬೇಕಿದ್ದರೂ ಇದು ಸಾಮಾನ್ಯವೇ ಅಂತ ಸುಮ್ಮನೆ ತಾಳ್ಮೆಯಿಂದ ಕುಳಿತ ಜನರನ್ನು ಕಂಡ. ಒಂದು ಕಾಫಿಗೂ ಹನ್ನೆರಡು ರೂಪಾಯಿ ಕೊಡಬೇಕಾದ, ರೂಮು ರೆಂಟಿಗೇ ಮೂರು ಸಾವಿರ ನೀಡಬೇಕಿರುವ ಈ ಊರಿಗೆ ದೂರದ ಬೀದರಿನಿಂದ ಆರು ಸಾವಿರ ಪಗಾರದ ಸಪ್ಲಾಯರ್ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯ ಜೊತೆ ಕುಶಲೋಪರಿ ಮಾತಾಡಿದ. ನಿನ್ನೆಯಷ್ಟೇ ಪರಿಚಯವಾದ ಒಬ್ಬ ನೇರವಾಗಿ ಲಜ್ಜೆಯಿಲ್ಲದೇ ಒಂದೈದು ಸಾವ್ರ ಸಾಲ ಇದ್ರೆ ಕೊಡ್ತೀಯಾ ಗುರೂ, ನಾಳೆ ವಾಪಸ್ ಮಾಡ್ಬಿಡ್ತೀನಿ ಅಂತ ಆತ್ಮವಿಶ್ವಾಸದಿಂದ ಹೇಳುವುದನ್ನು ಸಾಲ ಕೊಡಲಾಗದ ಗಿಲ್ಟಿನಿಂದ ಕೇಳಿದ. ಇಸ್ತ್ರಿ ಅಂಗಡಿಯಲ್ಲಿ ಎಂಟು ರೂಪಾಯಿ ಬಿಲ್ಲಾದಾಗ ನೀಡಿದ ಹತ್ತು ರೂಪಾಯಿಗೆ ಎರಡು ರೂಪಾಯಿ ವಾಪಸ್ಸು ಬರುವುದೇ ಇಲ್ಲ. ಚೇಂಜಿಲ್ಲ ಎಂಬ ಎರಳ್ಡು ರೂಪಾಯಿ ಬೆಲೆಬಾಳದ ಉತ್ತರ ಸಿಗುತ್ತದೆ. ಚೀಟಿಯಲ್ಲಿ ಕಂಡೆಕ್ಟರು ಬರೆದುಕೊಡುವ ಬಾಕಿ, ತಾನು ಇಳಿವ ಸ್ಟಾಪ್ ಬಂದಾಗ ಕಂಡಕ್ಟರು ಬಸ್ಸಿನ ಮುಂತುದಿಯಲ್ಲಿರುತ್ತಾನೆ. ಆ ರಶ್ಶಿನಲ್ಲಿ ಇಂಥ ಅನೇಕ ಘಟನೆಗಳೇ ಕಂಡಕ್ಟರನ ‘ಗಳಿಕೆ’ಗಳು.

ಇಲ್ಲಿ ಮಾಡಿದ ತಪ್ಪನ್ನೂ ಆತ್ಮವಿಶ್ವಾಸದಿಂದ ಹೇಳುವುದನ್ನು, ಸುಳ್ಳನ್ನು ಸತ್ಯದ ಮೇಲೆ ಪ್ರಮಾಣ ಮಾಡಿ ಹೇಳೋದನ್ನು ಕಲೀಬೇಕು ಬಾಸೂ… ಮೊದಲೆಲ್ಲ ಸಿಗ್ನಲ್ ಎಗರಿಸಿ ಗಾಡಿ ಓಡಿಸಿದರೆ ಟ್ರಾಫಿಕ್ ಪೋಲಿಸ್ ಗಮನಿಸದೇ ಇದ್ದರೂ ತಾನೇ ಹೋಗಿ ಫೈನ್ ಕಟ್ಟಿದ್ದೆ ಅನ್ನುವುದು ಹೀರೋಯಿಸ್ಮ್ ಆಗಿತ್ತು. ಈಗ ಅದನ್ನು ದಡ್ಡತನ ಅಂತಾರೆ. ಹಾಗೆ ಮಾಡಿದವನನ್ನು ಎಲ್ಲರೂ ಅನುಕಂಪದಿಂದ ನೋಡ್ತಾರೆ. ಈಗ ಸಿಗ್ನಲ್ ಜಂಪ್ ಮಾಡಿ ಅದನ್ನ ಯಾವ ರೀತಿ ಸುಳ್ಳು ಹೇಳಿ ಫೈನ್ ನಿಂದ ಬಚಾವಾದೆ ಅಂತ ಯಾರಿಗಾದ್ರೂ ವಿವರಿಸಿ ನೋಡು. ಜಗತ್ತಿನಲಿ ನೀನೇ ದೊಡ್ಡ ಬುದ್ಧಿವಂತ ಅನ್ನೋ ಧಾಟಿಯಲಿ ನೋಡ್ತಾರೆ. ಇದು ಈಗಿನ ಬದುಕು ಬಾಸೂ.. ಬೇಗ ಅಪ್ಡೇಟ್ ಆಗಬೇಕು.. ಅಂತ ರೂಂಮೇಟ್ ಅನ್ನುವುದನ್ನು ವಿಪರೀತ ಮುಗ್ದತನದಲ್ಲಿ ಕೊನೆಯ ಸಾಲಿಗೆ ಬರುವಷ್ಟರಲ್ಲಿ ಒಂದಿಷ್ಟು ಆತಂಕವನ್ನೂ ಬೆರೆಸಿ ನೋಡುತ್ತಾನೆ.

ಅಪ್ಪಾ, ನೀ ಆರಾಮಿದ್ದಿ ಅಲ್ಲ. ಬೀಪಿ ಟ್ಯಾಬ್ಲೆಟ್ಟು ತಗೊಳ್ಳೊದನ್ನ ಮರೀಬೇಡ. ನಾ ಚೆನ್ನಾಗಿದ್ದ ಹಾಗೆ ಇದ್ದೇನೆ. ಈ ಊರಲ್ಲಿ ಯಾರೂ ನನ್ನವರು ಅನ್ನಿಸುವುದಿಲ್ಲ. ಈ ಊರ ಜನರ ಮುಂದೆ ನಾನು ಹದಿನೈದು ವರ್ಷ ಹಿಂದಿನವನಂತೆ ಅನ್ನಿಸುತ್ತಿದ್ದೇವೆ. ನನ್ನ ನಡಿಗೆ ಈ ಊರಿನ ಓಟದ ಮುಂದೆ ಏನೂ ಅಲ್ಲ ಅನಿಸ್ತಿದೆ. ಇಲ್ಲಿ ಬದುಕಲಿಕ್ಕೆ ಸುಳ್ಳು ಹೇಳೋದು ಮಾತ್ರ ಅಲ್ಲ, ಸುಳ್ಳು ಹೇಳುವವರನ್ನು ಗುರುತಿಸುವ ಕಲೇನೂ ತಿಳಿದಿರ್ಬೇಕು. ಮುಖದ ಯಾವ ನೆರಿಗೆಯಲ್ಲೂ ಗಿಲ್ಟಿನ ಲವಲೇಷವೂ ಸುಳಿಯದಂತೆ ಸುಳ್ಳು ಹೇಳೋದಕ್ಕೆ ಬರಬೇಕು.

ಬೆಳಿಗ್ಗೆ ಆಗ್ತಾ ಇದ್ದ ಹಾಗೆ ಎದುರಾಗೋ ಮಂದಿಯಲ್ಲಿ ನನ್ನ ನಾನು ರಕ್ಷಿಸಿಕೊಳ್ತಾ ಬದುಕಬೇಕು. ಒಂಚೂರು ಮೈಮರೆತರೂ ಮೋಸಹೋಗ್ತೀನಿ. ತುಂಬಾ ಕಷ್ಟವಾಗುತ್ತಿದೆ ಅಪ್ಪಾ, ನಾನು ಊರಿಗೆ ಬಂದುಬಿಡುತ್ತೇನೆ. ನೀನು ನನ್ನ ಮೇಲೆ ಜೋಡಿಸಿಟ್ಟ ಅಪಾರ ಕನಸುಗಳ ತೀರಿಸಲಾದದೇ ಹೋದುದಕ್ಕೆ ಇದೊಂದು ಸಲ ಕ್ಷಮಿಸಿಬಿಡು. ನನ್ನನ್ನೂ ನಿನ್ನ ಜೊತೆಯಲೇ ಇರಲು ಬಿಡು.

ಹೀಗೆ ಬರೆದ ಪತ್ರವೊಂದನ್ನು ಅಂಚೆಪೆಟ್ಟಿಗೆ ಹಾಕಲು ಹೋದಾಗ ತಂದೆಯ ಸೋತ ಮುಖ ಎದುರಿಗೆ ಬಂದಂತಾಗಿ ಭಯದಿಂದ ಹರಿದು ಹಾಕುತ್ತಾನೆ.

ಪಾರ್ಕಿನ ಮೂಲೆಯೊಂದರಲ್ಲಿ ಕೂತು ಈ ಊರಲ್ಲಿ ಪಳಗಬೇಕೆಂದರೆ ಒಂದೋ, ಒಬ್ಬೊಬ್ಬರಿಂದಲೂ ಇಂಥ ಅನೇಕ ಕಲೆಗಳನ್ನು ಕಲಿತು ಅವರಲ್ಲೊಬ್ಬರಾಗಬೇಕು. ಇಲ್ಲವೇ, ವ್ಯವಸ್ಥೆಯನ್ನು ದೂರಿಕೊಂಡು ಮೋಸಹೋಗುತ್ತಾ ಬದುಕಬೇಕು. ಈ ಎರಡು ರಸ್ತೆ ಸೇರುವ ಕಾರ್ನರಿನಲ್ಲಿ ಅರ್ಧ ಟೀ ಕುಡಿಯುತ್ತಾ ಆಲೋಚಿಸುತ್ತಿದ್ದ ಅವನು.

ಮಹಾನಗರ, ಬಟ್ಟೆಯನ್ನು ತಿರುವಿಹಾಕಿ ಸುಡುಬಿಸಿಲಲಿ ಒಣಗಿಸಲನುವಾಯ್ತು.

ಅವಧಿ, ಓದುಗರ ಬಳಿ ಕಳೆದ ವರ್ಷ ಓದಿದ ಬೆಸ್ಟ್ ಪುಸ್ತಕಗಳ ಟಾಪ್ ಟೆನ್ ಪಟ್ಟಿ ಕೇಳ್ತಿದೆ. ಅದನ್ನು ನೋಡಿದಾಗ ನನಗೂ ಪಟ್ಟಿ ಮಾಡಬೇಕನ್ನಿಸಿತು. ಕಳೆದ ವರ್ಷ ಓದಿದ ತುಂಬಾ ಕಾಡಿದ ಪುಸ್ತಕಗಳ ಪಟ್ಟಿ ಇದು:-

೧. ಚಾರ್ಮಿನಾರ್ – ಜಯಂತ್ ಕಾಯ್ಕಿಣಿ

೨. The Professional – Subrato Bagchi

೩. ಹಲಗೆ ಬಳಪ – ಜೋಗಿ

tAzaELrA

೪. ಟೆಂಟ್ ಸಿನಿಮಾ – ಬೀಚಿ

೫. ಆಕಾಶಕ್ಕೊಂದು ಕಂದೀಲು! – ವ್ಯಾಸರಾಯ ಬಲ್ಲಾಳ

೬. ಅನುದಿನದ ಅಂತರಗಂಗೆ – ಪ್ರತಿಭಾ ನಂದಕುಮಾರ್

cDuUwUF6

೭. ಬಾಳ್ವೆಯೇ ಬೆಳಕು – ಡಾ. ಶಿವರಾಮ ಕಾರಂತ

೭. ಕಲ್ಲು ಕರಗುವ ಸಮಯ – ಪಿ.ಲಂಕೇಶ್

೮. The Winning Way – Harsha Bhogle

೯. What Young India Wants – Chethan Bhagat

ChetanBhagatWhatYoungIndiaWantsEDIT

೧೦. ಎದೆಗಾರಿಕೆ – ಅಗ್ನಿ ಶ್ರೀಧರ್

ಬೆಂಗಳೂರಿನಲ್ಲಿ ಆಟೋದಲ್ಲಿ ತಿರುಗಲು ಶುರುಮಾಡಿದ ಮೇಲೆ ಈ ಕೆಳಗೆ ಪಟ್ಟಿಮಾಡಿರುವುದನ್ನೆಲ್ಲಾ ಪರಿಸ್ಥಿತಿ ಕಲಿಸುತ್ತದೆ.

೧. ಸ್ಟಾಂಡ್ ನಲ್ಲಿರೋ ಆಟೋಗಿಂತ ರಸ್ತೆಯಲ್ಲಿ ಖಾಲಿ ಹೋಗುತ್ತಿರುವ ಆಟೋ ದಿಂದ ಮೋಸ ಹೋಗುವ ಅಪಾಯ ಕಡಿಮೆ

೨. ಒಮ್ಮೆ ಅಡ್ರೆಸ್ ಸರಿಯಾಗಿ ಹೇಳಿದ ಮೇಲೆಯೂ ’ಎಲ್ಲಿ ಆ ಶಾಪ್ ನ ಹತ್ತಿರವಾ? ಅಂತ ಆಟೋದವ ಪ್ರಶ್ನೆ ಮಾಡುತ್ತಿದ್ದರೆ, ಜಾಸ್ತಿ ಎಷ್ಟು ಕೇಳಲಿ ಅಂತ ಅಲೋಚಿಸಲು ಆತ ಸಮಯ ತೆಗೆದುಕೊಳ್ತಾ ಇದಾನೆ ಅಂತ ಅರ್ಥ.

೩. ಯಾವಾಗಲೂ ಮೀಟರ್ ದರದ ಮೂಲಕವೇ ಮಾತಾಡಿ. ಸುಮ್ಮನೆ ಇಲ್ಲಿಗೆ ಇಂತಿಷ್ಟು ಅಂತ ನಿಜವಾಗಿಯೂ ನೀವು ವಾದ ಮಾಡೋದಿದ್ದರೆ ನಿಮಗೆ ನೀವಿರುವ ಸ್ಥಳದಿಂದ ಹೋಗಬೇಕಾದ ಸ್ಥಳಕ್ಕಿರುವ ದೂರ ಕರೆಕ್ಟಾಗಿ ತಿಳಿದಿರಬೇಕಾಗುತ್ತದೆ.

೪. ಆಟೋ ಹತ್ತಿರ ಡ್ರೈವರ್ ಗೆಳೆಯರೂ ಇದ್ದರೆ ನೀವು ಮೋಸಹೋಗಬಹುದಾದ ಪ್ರಮಾಣ ಡಬಲ್ ಆಗಿರುತ್ತದೆ.

೫. ಮೀಟರ್ ದರಕ್ಕಿಂತ ಚೂರೂ ಜಾಸ್ತಿ ನೀಡೋಲ್ಲ ಅಂತ ಅನ್ನಿ. ನಿಜ, ನಿಮಗೆ ಅರ್ಜೆಂಟಿದೆ, ನೀವು ಕೊಡಬಲ್ಲಿರಿ.. ಆದರೆ ಆ ಆಟೋದವನು ಅದನ್ನೇ ತನ್ನ ಅಡ್ವಾಂಟೇಜ್ ರೀತಿ ತೆಗೆದುಕೊಳ್ತಾನೆ. ಕೊಡಲಾಗದವರ ಹತ್ತಿರವೂ ಅದೇ ಪಾಲಸಿ ಉಪಯೋಗಿಸುತ್ತಾನೆ.

 

ಆಟೋದವರಿಂದ ಮೋಸ ಹೋಗದಂತಿರಲು ಈ ಕೆಳಗಿನ ಪಾಲಸಿಯನ್ನು ಪಾಲಿಸಿ:-

ಆಟೋದವರು ಈ ರೀತಿಯಾಗೆಲ್ಲಾ ಮಾಡಬಲ್ಲರು :- ಒಂದು ಸ್ಥಳಕ್ಕೆ ಬರುವುದನು ನಿರಾಕರಿಸುವುದು, ಮೀಟರ್ ಗಿಂತ ಜಾಸ್ತಿ ಹಣ ಕೇಳುವುದು, ಮೀಟರ್ ಹಾಳಾಗಿರುವುದು, ಹೋಗಬೇಕಾಗಿರುವ ಸ್ಥಳ ತಲುಪಿಸದಿರುವುದು, ವೇಗವಾಗಿ ಓಡಿಸುವುದು, ಆಟೋ ನಂಬರ್ ನ್ನು ಒಳಗೆ ಪ್ರಯಾಣಿಕ ಕೂತಾಗ ಕಾಣುವ ಜಾಗದಲ್ಲಿ ಹಾಕದಿರುವುದು.

ಮೊದಲೆರಡು ಅಂದರೆ ಪ್ರಯಾಣಿಕರು ಇಂಥ ಸ್ಥಳಕ್ಕೆ ಹೋಗಬೇಕಾಗಿದೆ ಅಂದಾಗ ಅಲ್ಲಿಗೆ ಬರಲ್ಲ ಎನ್ನುವುದು, ಮತ್ತು ಮೀಟರ್ ಗಿಂತ ಜಾಸ್ತಿ ಹಣ ಕೇಳುವುದು ಇವೆರಡನ್ನೂ ಕೇವಲ ಒಂದು ಎಸ್ ಎಮ್ ಎಸ್ ಮೂಲಕ ಕಂಪ್ಲೈಂಟ್ ಮಾಡಬಹುದು.

ಇಂಥ ಸ್ಥಳಕ್ಕೆ ಬರುವುದಿಲ್ಲ ಅಂದಾಗ ಕೂಡಲೇ, “Auto ref ಆಟೋನಂಬರ್ ಎಲ್ಲಿಂದಎಲ್ಲಿಗೆ ಸಮಯ” ಅನ್ನುವುದನು ಟೈಪಿಸಿ ೫೨೨೨೫ನ್ ಕ್ಕೆ ಎಸ್ ಎಂ ಎಸ್ ಕಳಿಸಿದರೆ ಸಾಕು. ಉದಾಹರಣೆಗೆ Auto ref KA02YY0123 KR Puram to Indiranagar 6PM ಅಂತ ಟೈಪಿಸಿ ೫೨೨೨೫ ಗೆ ಕಳುಹಿಸಿ.

ಒಂದು ವೇಳೆ ಜಾಸ್ತಿ ಹಣ ಕೇಳುತ್ತಾರಾದರೆ, “Auto ovr ಆಟೋನಂಬರ್ ಎಲ್ಲಿಂದಎಲ್ಲಿಗೆ ಸಮಯ” ಅಂತ ಟೈಪಿಸಿ ೫೨೨೨೫ ಗೆ ಎಸ್ ಎಮ್ ಎಸ್ ಕಳುಹಿಸಿ. ಉದಾಹರಣೆಗೆ Auto ref KA02YY0123 KR Puram to Indiranagar 6PM ಅಂತ ಟೈಪಿಸಿ ೫೨೨೨೫ ಗೆ ಎಸ್ ಎಂ ಎಸ್ ಕಳುಹಿಸಿ.

ನೆನಪಿಡಿ ನೀವು ಹೇಗೆ ಮಾಡುವುದರಿಂದ ನೀವು ಮೋಸಹೋಗುವುದಷ್ಟೇ ತಡೆಗಟ್ಟುವುದಷ್ಟೇ ಅಲ್ಲದೇ ಸ್ವಸ್ಥ ಸಮಾಜ ರೂಪುಗೊಳ್ಳುವುದಕ್ಕೆ ಸಹಾಯವೂ ಆಗುತ್ತದೆ. ಅಲ್ಲದೇ ಹೆಚ್ಚು ಲಂಚ ಕೇಳುವುದರಲ್ಲಿ ಜನಸಾಮಾನ್ಯ ಹೆಚ್ಚು ತೊಂದರೆ ಗೀಡು ಮಾಡುವುದರಲ್ಲಿ ಮೂರನೇ ಸ್ಥಾನದಲ್ಲಿರುವ ಆಟೋ ಮೋಸವನ್ನು ನಿಯಂತ್ರಣದಲ್ಲಿಡಬಲ್ಲುದು.

-೧-

ಒಂದು ಬ್ಯಾಂಕಿನ ಬ್ಯೂಸಿ ದಿನ. ಜನ ಗಿಜಿಗುಟ್ಟುತ್ತಿದ್ದರು.

ಅಲ್ಲಿ ಮುಲ್ಲಾ ನಸೀರುದ್ದೀನ್ ಕೂಡ ಇದ್ದಿದ್ದರು. ಕೊಂಚ ಹೊತ್ತಿನ ಬಳಿಕ ಮುಲ್ಲಾ ಒಂದು ಅನೌನ್ಸ್ ಮೆಂಟ್ ನೀಡಿದರು.

ಇಲ್ಲಿ ಯಾರದ್ದಾದರೂ ಲಕ್ಷ ರೂಪಾಯಿಯ ಕಟ್ಟು ಬಿದ್ದು ಹೋಗಿದೆಯಾ?

ಎಲ್ಲರೂ ನನ್ನದು ನನ್ನದು ಅಂತ ಮುಗಿಬೀಳಲು ಅನುವಾದರು.

ಮುಲ್ಲಾ ಶಾಂತವಾಗಿ, "ಅದಕ್ಕೆ ಕಟ್ಟಿದ್ದ ರಬ್ಬರ್ ಬ್ಯಾಂಡ್ ನನಗೆ ಸಿಕ್ಕಿದೆ, ತಗೆದುಕೊಂಡುಹೋಗಬಹುದು" ಅಂದರು!

-೨-

ಒಬ್ಬ ಮನಶ್ಯಾಸ್ತ್ರಜ್ಞ ರಸ್ತೆಯಲ್ಲಿ ಹಾದುಹೋಗುತ್ತಿದ್ದಾಗ ನಾಲ್ವರು ಹುಡುಗರು ಜಗಳ ಆಡುತ್ತಿರುವುದು ಕಾಣಿಸುತ್ತದೆ. ಅದರಲ್ಲಿ ಒಬ್ಬ ಹುಡುಗನ ಕೈಯ್ಯಲ್ಲಿ ಮುದ್ದಾದ ಪುಟಾಣಿ ನಾಯಿಮರಿ ಇದೆ. ’ಯಾಕೆ ಜಗಳ ಆಡ್ತಾ ಇದೀರಿ’ ಅಂತ ಮನಶ್ಯಾಸ್ತ್ರಜ್ಞ ಕೇಳಿದ.

ಈ ನಾಯಿಮರಿ ದಾರೀಲಿ ಸಿಕ್ತು, ಯಾರ್ ತಗೊಡ್ ಹೋಗ್ಬೇಕೋ ಗೊತ್ತಾಗ್ತಿಲ್ಲ. ಎಲ್ರೂ ತಂಗೇ ಬೇಕು ಅಂತ ಹಠ ಹಿಡಿದಿದ್ದಾರೆ. ನಂಗೂನು ಬೇಕು ಅನ್ನಿಸ್ತಿದೆ ಅಂತ ಒಬ್ಬ ಹುಡುಗ ಹೇಳಿದ.

ಮತ್ತೊಬ್ಬ ’ ಅದ್ಕೇ, ನಮ್ಮಲ್ಲಿ ಯಾರ್ ದೊಡ್ಡ ಸುಳ್ಳು ಹೇಳ್ತಾರೋ ಅವ್ರಿಗೇ ಕೊಡೋದು ಅಂತ ನಿರ್ಧರಿಸಿ, ಒಬ್ಬೊಬ್ಬರಾಗಿ ಸುಳ್ಳು ಹೇಳ್ತಾ ಇದೀವಿ ಅಂದ.

ಮನಶ್ಯಾಸ್ತ್ರಜ್ಞನಿಗೆ ಬೇಸರವಾಯಿತು. ಇನ್ನೂ ಶಾಲೆಗೆ ಹೋಗುತ್ತಿರೋ ಹುಡುಗರು, ಅರಳುವ ಮೊಗ್ಗುಗಳು. ಈಗಲೇ ಸುಳ್ಳಿನತ್ತ ವ್ಯಾಮೋಹ, ಸುಳ್ಳು ಹೇಳುವ ಕಲೆ ಕರಗತವಾಗಿಬಿಟ್ಟರೆ ಮುಂದೆ ಏನೆಲ್ಲಾ ಆಗಿ ಇವರು ತಯಾರಾಗುವರೋ ಎಂಬ ಆತಂಕ ಹುಟ್ಟಿತು. ದೊಡ್ಡ ದೊಡ್ಡ ಹೆಸರಿನ ಮಾನಸಿಕ ಖಾಯಿಲೆಗಳ ಹೆಸರೆಲ್ಲಾ ಕಣ್ಮುಂದೆ ಬಂತು.

"ಸುಳ್ಳು ಹೇಳೋದು ತಪ್ಪು ಮಕ್ಕಳೇ, ನೀವೆಲ್ಲಾ ಭವಿಷ್ಯದ ಕುಡಿಗಳು. ಅಬ್ದುಲ್ ಕಲಾಂ ಆಗುವ ಕನಸು ಹುಟ್ಟಿಸಿಕೊಳ್ಳಬೇಕು, ನೋಡಿ ನನ್ನನ್ನು. ನಿಮ್ಮ ವಯಸ್ಸಿನಲ್ಲಿ ಸುಳ್ಳು ಹೇಳಿದ್ದರೆ ಈಗ ನಾನು ಈ ಊರಿನ ದೊಡ್ಡ ಮನಶ್ಯಾಸ್ತ್ರಜ್ಞ ಆಗ್ತಿದ್ದೆನಾ? ಗಾಂಧಿ ಆತ್ಮಕಥೆ ನಾನು ಓದಿದ್ದು ನಿಮ್ಮ ವಯಸ್ಸಿನಲ್ಲೇ, ಆಗಲೇ ನಾನು ಸುಳ್ಳು ಹೇಳಲ್ಲ ಅಂತ ನಿರ್ಧರಿಸಿದ್ದೆ. ಈಗ ನೀವೆಲ್ಲಾ ಈ ಸುಳ್ಳು ಹೇಳೋ ಆಟದ ಬದಲು, ಯಾರು ಬುದ್ಧಿವಂತರೋ ಅವರಿಗೆ ನಾಯಿಮರಿ ಅಂತ ನಿರ್ಧರಿಸಿ" ಅಂದ.

ಅಲ್ಲಿ ಪೂರ್ತಿ ನಿಶ್ಯಬ್ಧ ಆವರಿಸಿತು. ಮಕ್ಕಳು ಒಬ್ಬರನ್ನೊಬ್ಬರು ನೋಡಿಕೊಂಡರು.

ಒಬ್ಬ ಹುಡುಗ "ಲೋ..ಇವ್ರೇ ಹೇಳಿದ್ರಿಂದ.. ನಾಯಿಮರೀನ ಈವಯ್ಯಂಗೇ ಕೊಟ್ ಬಿಡಾಣ ಕಣ್ರೋ!’ ಅಂದ!

-೩-

ಎಂಟು ಜನ ಎಂ ಬಿ ಎ ವಿದ್ಯಾರ್ಥಿಗಳು ಮಾರನೇ ದಿನ ’ಟೀಂ ವರ್ಕ್’ ವಿಷಯದಲ್ಲಿ ಪರೀಕ್ಷೆ ಬರೆಯಬೇಕು. ಆದರೆ ಅವತ್ತು ಫ್ರೆಂಡ್ ಶಿಪ್ ಡೇ ಇದ್ದಿದ್ದರಿಂದ ಪರೀಕ್ಷೆಗೆ ತಯಾರಾಗಲು ಸಾಧ್ಯವಾಗಲಿಲ್ಲ. ಅದಕ್ಕೆ ಅವರೆಲ್ಲಾ ಸೇರಿ ಒಂದುಪಾಯ ಮಾಡಿದರು. ಮರುದಿನ ಒಟ್ಟಾಗಿ ಪ್ರೊಫೆಸರ್ ಬಳಿಗೆ ಹೋಗಿ ರಾತ್ರಿ ಪರೀಕ್ಷೆಗಾಗಿ ಬರುವಾಗ ವಾಹನದ ಟೈರ್ ಪಂಕ್ಚರ್ ಆಯ್ತು, ಸ್ಪೇರ್ ಟೈರ್ ಇಲ್ಲವಾದ್ದರಿಂದ ಬಹಳ ದೂರ ನಡೆದುಕೊಂಡು ಹೋಗಿ ಸರಿ ಮಾಡಿಸಿಕೊಂಡು ಬರಬೇಕಾಯ್ತು, ನಿದ್ದೆಯಿಲ್ಲವಾದ್ದರಿಂದ ಪರೀಕ್ಷೆ ಬರೆಯಲಾಗದು, ದಯವಿಟ್ಟು ಪರೀಕ್ಷೆಯನ್ನ ಐದು ದಿನ ನಂತರ ಇಡಬೇಕು ಅಂತ ಕೋರಿಕೆಯಿಟ್ಟರು.

ಪ್ರೊಫೆಸರ್ ಮರು ಮಾತಾಡದೇ ಒಪ್ಪಿಗೆಯಿತ್ತರು.

ಐದು ದಿನದ ನಂತರ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ತೆಗೆದುನೋಡಿದರೆ ಪ್ರಶ್ನೆಗಳು ಈ ರೀತಿಯಾಗಿವೆ:

೧. ಐದು ದಿನದ ಹಿಂದೆ ನೀವು ಹೋದ ಕಾರಿನ ಯಾವ ಚಕ್ರ ಪಂಕ್ಚರ್ ಆಯಿತು? ಮುಂದಿನದಾ? ಹಿಂದಿನದಾ? ಬಲಗಡೇದ್ದಾ? ಎಡಗಡೇದ್ದಾ? (೯೫ ಅಂಕಗಳು)
೨. ಟೀಂ ವರ್ಕ್ ಗೆ ಬೇಕಾದ ಮುಖ್ಯ ಲಕ್ಷಣಗಳೇನು? (೫ ಅಂಕಗಳು)

ಎಲ್ಲರಿಗೂ ಐದು ಅಂಕಗಳೇ ಬಂದವು. ತಮ್ಮ ತಪ್ಪು ತಿಳಿದುಕೊಂಡ ಎಲ್ಲರೂ ಸರಿಸುಮಾರು ಒಂದೇ ಉತ್ತರ ಬರೆದರು.

"..ಯಾವ ಕೆಲಸ ಮಾಡಿದರೂ, ಯಾವ ಸುಳ್ಳು ಹೇಳಿದರೂ, ಇಡೀ ಟೀಂ ಎಲ್ಲಾ ಕೂಡಿ ಚರ್ಚಿಸಿ, ಪೂರ್ತಿ ಅವಗಾಹನೆಯಿಂದ ಮಾಡಬೇಕು."

***

ಟಿಪ್ಪಣಿ: ಕೊನೆಯೆರಡು ಕಥೆ ಯಂಡಮೂರಿ ಪುಸ್ತಕದಿಂದ ಆರಿಸಿದ್ದು. ಬಹುಶಃ ಅದು ಇಂಟರ್ನೆಟ್ ಮೂಲದ್ದಿರಬಹುದು.

ಮೊಬೈಲು ಬಂದ ನಂತರ ಜನಕ್ಕೊಂದು ಹೊಸ ಐಲು. ಯಾವುದಾದರೂ ಪ್ರವಾಸಕ್ಕೆ ಹೋದಾಗ ಅಲ್ಲಿನ ಪರಿಸರ ಆಸ್ವಾದನೆಗೆ ಕೊಡುವ ಸಮಯಕ್ಕಿಂತ ಅದನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವ ಆಸೆಯೇ ಹೆಚ್ಚಾಗಿರುತ್ತದೆ.  ಓಹ್ ಅಲ್ಲಿಯಾ ಹೋಗಿದ್ದೇನೆ, ಬೇಕಿದ್ರೆ ನೋಡು ಅಂತ ಚಂದ ಸ್ಮಾರಕ ದ ಮುಂದೆ ಹಲ್ಲುಗಿಂಜುತ್ತಾ ನಿಂತ ಫೋಟೋವನ್ನು ಸಾಕ್ಷಿಯಂತೆ ತೋರಿಸುತ್ತೇವೆ. ಹೆಸರನ್ನು ಕೆತ್ತಿ ಅಲ್ಲಿನ ಪರಿಸರದ ಚೆಲುವಿಗೆ ಧಕ್ಕೆ ತರುತ್ತೇವೆ. ಬೇರಾರಿಗೋ, ಮುಂದೆಂದೋ ತೋರಿಸಿಕೊಳ್ಳುವ ತವಕದಲ್ಲಿ, ಈ ಕ್ಷಣದ ಅನುಭೂತಿಯೊಂದನ್ನು ತ್ಯಾಗ ಮಾಡುತ್ತೇವೆ. ಅನುಭೂತಿಯೊಂದು ಇಂದೂ ಇಲ್ಲದ ಅಂದೂ ಇಲ್ಲದ ಅಯೋಮಯ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತದೆ. ಯಾರೋ ಒಬ್ಬ ’ಅಲ್ಲಿ ನಿಂತಾಗ ನಿನ್ನೊಳಗೆ ಬಂದ ಅನಿಸಿಕೆಯೇನು?’ ಅಂತ ಕೇಳಿದರೆ ಮೌನವಹಿಸುತ್ತೇವೆ.. ಅಲ್ಲೊಂದು ರೀತಿ ಪರಿಮಳ ಮೈ ಜುಂ ಅನ್ನಿಸುವಂತೆ ಮಾಡಿತ್ತಲ್ಲವಾ? ಅಂತ ಕೇಳಿದರೆ ಪೆದ್ದು ಪೆದ್ದಾಗಿ ಹೌದು ಹೌದು ಅನ್ನುತ್ತೇವೆ.

ಕೆಲವೊಮ್ಮೆ ಮಾನವೀಯತೆಯನ್ನು ಪಕ್ಕಕ್ಕಿರಿಸಿ ಮೋಜು ಅನುಭವಿಸುವಂತೆಯೂ ಮಾಡುತ್ತದೆ, ಈ ಚಿತ್ರದಲ್ಲಿ ತೋರಿಸಿದಂತೆ.  ಸುಮ್ಮನೆ – ಕಡಿಮೆ ಸಮಯವಿತ್ತು, ತಪ್ಪಿಸುವುದು  ಅಸಾಧ್ಯವಿತ್ತು ಅನ್ನುವ ಕಾರಣ ಕೊಟ್ಟರೂ, ಪ್ರಯತ್ನ ಕೂಡ ಮಾಡದ ಗಿಲ್ಟ್ ಮನಸ್ಸಾಕ್ಷಿಯನ್ನು ಬರೆ ಬೀಳುವಂತೆ ಹೊಡೆಯುವುದು ಬಾಧಿಸದೇ ಇರದು.

image

ಈ ಮಾನವೀಯತೆಯ ಕುರಿತು ಹತ್ತು ವರ್ಷದ ಹಿಂದಿನ ನಮ್ಮ ವಿಚಾರಧಾಟಿ ಮತ್ತು ಈಗಿನ ವಿಚಾರಧಾಟಿಯ ವ್ಯತ್ಯಾಸವೇನು?  ಈ ಅವರೋಹಣಕ್ಕೆ ಕಾರಣಗಳಾವುವು? ಈ ಕ್ಷಣದ ಅಗತ್ಯ ಮುಖ್ಯವೋ ಅಥವ ಮುಂದೆಂದೋ ನೋಡಿಕೊಂಡು ಆಸ್ವಾದಿಸುವ ವೀಡಿಯೋ, ಫೋಟೋ ಮುಖ್ಯವೋ?

ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಇಲ್ಲಿನ ಉದ್ದೇಶವಲ್ಲ. ಇಂತಹ ಪ್ರಶ್ನೆ ಮೂಡ್ತಾವಾ ಇಲ್ವಾ ಅನ್ನೋದೇ ಮುಖ್ಯ.

ಉತ್ತರಗಳು ಪ್ರಶ್ನೆಯಲ್ಲಿಯೇ ಇದೆ, ಹುಡುಕಿಕೋ ಅನ್ನುವ ರೂಮಿಯ ಮಾತುಗಳು ನಮ್ಮ ಮಾನವೀಯತೆಯನ್ನು ಆಗಾಗ ಎಚ್ಚರಿಸುತ್ತಲೆ ಇರುತ್ತದೆ, 
ಎಚ್ಚರಿಸುತ್ತಲೇ ಇರಬೇಕು ಕೂಡ.

 

ಚಿತ್ರಕೃಪೆ : ಹರೀಶ್ ಗಂಗಭೈರಯ್ಯ.

ನಾನು ಕನ್ನಡಿಗ ಅಂತ ಅನ್ನುವಾಗ ನನಗೆ ಚೂರೂ ಹೆಮ್ಮೆಯೇ ಆಗುತ್ತಿದ್ದಿರಲಿಲ್ಲ.

ಹೌದು. ಇಸ್ಕೂಲು, ಹೈಸ್ಕೂಲು ಓದುವಾಗಲೆಲ್ಲ ’ನಾನು ಕನ್ನಡಿಗ’ ಅನ್ನುವುದರಲ್ಲಿ ಅಂತಹ ವಿಶೇಷಗಳೇನೂ ಇರಲಿಲ್ಲ. ಸುತ್ತಮುತ್ತಲೂ ಮುತ್ತಿಕೊಂಡಿದ್ದ ಗೆಳೆಯರೆಲ್ಲರೂ ಕನ್ನಡಿಗರೇ ಆಗಿದ್ದರಿಂದ ಅದೊಂದು ಸ್ಪೆಷಲ್ ಅನ್ನುವ ಭಾವ ಮೂಡುತ್ತಿರಲಿಲ್ಲ. ಕಾಲೇಜುಪರ್ವದಲ್ಲಿ ಕನ್ನಡಿಗ ಆಗಿರುವುದು ಕೊಂಚ ಸಂಕಟಗಳಿಗೆ ಸಿಕ್ಕಿಸಿತ್ತಾದರೂ ಅದಕ್ಕೆ ಕಾರಣ ’ನಾ ಕನ್ನಡದವ’ ಆಗಿರುವುದಲ್ಲ, ’ಇಂಗ್ಲೀಷ್ ಅರಿವು ಕಡಿಮೆ ಇರುವುದು’ ಎಂಬ ಜ್ಞಾನೋದಯ ಆದಮೇಲೆ ಆ ಕುರಿತು ಆಲೋಚನೆಯೂ ಬರಲಿಲ್ಲ.

ಆದರೆ ಕರುನಾಡ ಕೋಟೆ ದಾಟಿದ ಮೇಲೆ ಕನ್ನಡ ಎಂಬ ಭಾಷೆ ಎಷ್ಟು ಸಿಹಿ ಅನ್ನುವುದು ಗೋಚರವಾಗುತ್ತಿತ್ತು. ಇದೊಂಥರ ಮನೆಯಲ್ಲಿದ್ದಾಗ ಹಠ, ಗೊಂದಲ ಮಾಡುತ್ತಿದ್ದು ನಂತರ ಅಮ್ಮನ ಮಹತ್ವ ಅರಿವಾಗುವ ಹಾಸ್ಟೆಲ್ ಹುಡುಗನ ರೀತಿ. ಸಿಂಗಾಪೂರ್ ಗೆ ಬಂದ ಮೇಲೆ ನನ್ನ ಜತೆ ಕೆಲಸ ಮಾಡುವವರಿಗೆ ನನ್ನ ರಾಜ್ಯದ ಕುರಿತು, ಭಾಷೆಯ ಕುರಿತು ವಿವರಿಸುವಾಗ ಅದೆಂತದೋ ಪದಗಳಲ್ಲಿ ಸಿಲುಕದ ಸಂತಸ. ಅವರಂತೂ ಅಮೇರಿಕದ ವೈಭವವನ್ನೂ ಈ ರೀತಿಯ ವಿವರಣೆಯ ಸಹಿತ ಕೇಳಿರಲಿಕ್ಕಿಲ್ಲ, ಹಾಗೆ ಇರುತ್ತಿತ್ತು. ಇಲ್ಲಿಯ ಹೆಚ್ಚಿನವರಿಗೆ ಭಾರತೀಯರೆಂದರೆ ತಮಿಳರು ಅನ್ನುವ ಭಾವ ಇರುವುದರಿಂದ, ನನ್ನ ಭಾರತೀಯತೆ ಅರಿವಾದ ಕೂಡಲೇ, ’ತಮಿಳಾ?’ ಎನ್ನುವ ಪ್ರಶ್ನೆ ಕೇಳುತ್ತಾರೆ. “ಅಲ್ಲ, ನಾನು ಕನ್ನಡಿಗ’ ಎಂಬ ಉತ್ತರಕ್ಕೆ ಪೂರ ಹೆಮ್ಮೆಯ ಲೇಪ. ಅಲ್ಲೇ ಹುಟ್ಟಿ, ಅಲ್ಲೇ ಬೆಳೆದಿದ್ದರೂ ಯಾವಾಗಲೂ ಈ ವಾಕ್ಯ ಆಡಿದ ಉದಾಹರಣೆ ನೆನಪಿಲ್ಲ.

ಜಯಂತ್ ಕಾಯ್ಕಿಣಿ ತಮ್ಮ ಭಾಷಣದಲ್ಲಿ ಯಾವಾಗಲೂ ಹೇಳುತ್ತಿರುತ್ತಾರೆ, ” ನಾವು ಅಮೇರಿಕದಲ್ಲೋ, ಸಿಂಗಾಪುರ್ ನಲ್ಲೋ ಅಥವ ಅಸ್ಸಾಂ, ಮುಂಬೈ ನಲ್ಲಿ ಇದ್ದುಕೊಂಡು, ಒಳ್ಳೆಯ ಕೆಲಸಗಾರರಾಗಿ, ಒಳ್ಳೆಯ ಪ್ರಜೆಯಾಗಿ, ಒಳ್ಳೆಯ ತಂದೆ, ಮಗ, ಅಣ್ಣ, ತಮ್ಮ, ಗೆಳೆಯನಾಗಿ ಇರುವುದು ಕನ್ನಡತನವಾ? ಅಥವ ಬೆಂಗಳೂರಲ್ಲೆ ಇದ್ದು, ವಿಧಾನಸೌಧದ ಮುಂದೇನೆ ಮನೆಮಾಡಿ, ಕೈತುಂಬ ಉಂಗುರಗಳು, ಕೊರಳ ತುಂಬಾ ಚೈನು ಹಾಕಿಕೊಂಡು, ಸಿಕ್ಕಾಪಟ್ಟೇ ಭ್ರಷ್ಟಾಚಾರ ಮಾಡಿ, ಹೀನವಾಗಿ ಬದುಕಿ ರಾಜ್ಯೋತ್ಸವದ ದಿವಸ ಧ್ವಜ ಹಾರಿಸುವುದು ಕನ್ನಡತನವಾ? ಅಂದರೆ ಕನ್ನಡತನ ಅನ್ನುವುದು ನೀವಾಡುವ ಭಾಷೆಯ ಮೇಲೆ ಮಾತ್ರ ನಿರ್ಭರವಾಗಿಲ್ಲ. ಕನ್ನಡತನ ಅಂದರೆ ನಾವು ಬದುಕುವ ರೀತಿ. ಮಮತೆ, ಪ್ರೀತಿಯೇ ಕನ್ನಡತನ. ನಾವೆಲ್ಲಿ ಇರುತ್ತೇವೆ ಅನ್ನುವುದಲ್ಲ, ಚೆನ್ನಾಗಿ ಕೆಲಸ ಮಾಡಿ, ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯುವುದಕ್ಕಿಂತ ದೊಡ್ಡ ಕನ್ನಡತನ ಬೇರೆಯಿಲ್ಲ.”

ನನ್ನಲ್ಲೂ ಅಂಥ ಒಂದು ಕನಸು. ಉಳಿದವರು ’ರೀ ಅವ್ರು ಕನ್ನಡವರು, ಮೋಸ ಮಾಡೋಲ್ಲ” ಅಂತಲೋ ಅಥವ ಅಂಗಡಿಯಲ್ಲಿ ಪರ್ಸು ಮರೆತ ಘಳಿಗೆಯಲಿ, “ನೀವ್ ಕನ್ನಡದವ್ರಾ? ಪರ್ವಾಗಿಲ್ಲ, ನಾಳೆ ಕೊಡಿ” ಈ ರೀತಿ ಕನ್ನಡ ಒಂದು ನಂಬಿಕೆಯಾಗಿ, ಒಳ್ಳೆಯತನವಾಗಿ ಹಬ್ಬಬೇಕು. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಅನ್ನುವುದಕ್ಕಿಂತ Value ಆಗಿ ಬೆಳೆಯಬೇಕು ಎಂಬುದೊಂದು ಆಶಯ.

ಎಂದಿಗೂ ನಾನು ಅಂಥ ಕನ್ನಡಿಗನಾಗಲು ಬಯಸುತ್ತೇನೆ.

 

ಅಡಿಟಿಪ್ಪಣಿ: ಇಲ್ಲಿಯ ಹೋಟೇಲೊಂದರಲ್ಲಿ ಅಕಸ್ಮಾತ್ ಭೇಟಿಯಾದ ಬೆಳಗಾವಿಯ ಬಾಲರಾಜ್ ಮತ್ತವರ ಪುಟ್ಟಿಯ ಕನ್ನಡ ಹುಟ್ಟಿಸಿದ ರೋಮಾಂಚನದಿಂದಾಗಿ, ಮತ್ತೆ ಬರೆಯುತ್ತೇನೆ ಅಂತ ಮುಂದೂಡುತ್ತಲೇ ಬರುತ್ತಿದ್ದ ಈ ಲೇಖನ ಇವತ್ತೇ ಬರೆಯುವಂತಾಯಿತು. ಬೆಂಗಳೂರಲ್ಲೇ ಅಪರೂಪವಾಗುತ್ತಿರುವ ಕನ್ನಡವನ್ನು ಸಾವಿರಾರು ಮೈಲು ದೂರ ಅದೂ ಪುಟ್ಟ ಹುಡುಗಿಯ ಮಾತಾಗಿ ಕೇಳುವ ಅದ್ಭುತವೇ ಬೇರೆ.