Archive for the ‘ಬದುಕೇ, ಐ ಲವ್ ಯೂ!’ Category

ನಾವು ಬರೀ ನಿಂತಿದಷ್ಟೇ.

ತೆರೆಯು ಪದತಡಿಯ ಮರಳನು ಸದ್ದಿಲ್ಲದೇ ಒಯ್ಯುವಂತೆ ವರುಷವೊಂದು ಮೆಲ್ಲ ಜಾರಿ ಹೋಯಿತು; ಹೆಜ್ಜೆಯ ಗುರುತಿನ ಭಾವವನ್ನೂ ನೀಡದೇ!

*****

 

ಊರಿಗೆ ಹೊರಡುವುದೆಂದರೆ ನನ್ನನ್ನು ನಾನು ರೀಚಾರ್ಜ್ ಮಾಡಿಕೊಳ್ಳುವ ಸಂದರ್ಭ; ಕಾಯಕ ಮಾಡುವ ಊರಿನ ಅಪರಿಚಿತ ಜೀವಿಗಳಿಗೆ ಪ್ರೀತಿ ಎಲ್ಲಿಂದ ತೋರಿಸಬೇಕು? ಅದಕ್ಕೇ ಊರಿಗೆ ಹೋಗಿ ಮನದ ಜೋಳಿಗೆ ತುಂಬಾ ಪ್ರೀತಿ ತುಂಬಿಸಿಕೊಂಡು ಇಲ್ಲಿ ಬಂದು ಹಂಚುವ ಕೆಲಸ ಮಾಡಬೇಕಿದೆ ಅಂತ ಆಗಾಗ್ಗೆ ಗೆಳೆಯರ ಜತೆ ಅನ್ನುವುದಿದೆ.

ಜಗದ ಬೇರೆ ಎಡೆಯ ರೀತಿ ರಿವಾಜುಗಳೊಳಗೆ ಬಂಧಿಸಲ್ಪಟ್ಟು, ನಮ್ಮೂರಿನ ಹಬ್ಬಹರಿದಿನ, ಅದಕ್ಕೆ ಮಾಡುವ ತಯಾರಿ ಅದರುದ್ದಿಶ್ಯ ಎಲ್ಲಾ ಮರೆತು, ಯಾವಾಗಲೋ ಒಮ್ಮೆ ಊರಿಗೆ ಫೋನ್ ಮಾಡುವಾಗಲಷ್ಟೇ ನಮಗೆ ಕೋಟೇಶ್ವರ ಹಬ್ಬ, ಆನೆಗುಡ್ಡೆ ರಥದ ಸುದ್ಧಿ ಸಿಕ್ಕಿ , ಕ್ಷಣಕಾಲ ಹಿಂದಿನ ಹಬ್ಬದ ನೆನಪುಗಳ ಪಲುಕು ಮೂಡಿಮರೆಯಾಗುವುದು. ಇತ್ತ ಈ ಊರಿನ ಹಬ್ಬಗಳೂ ನಮ್ಮದಾಗದೆ ಹೋಗಿ ಕೊನೆಗೆ ಹಬ್ಬಗಳೇ ಅನುಭವಿಸದ ಬಿಕನಾಸಿ ಜೀವನವಾಗುವ ಅಪಾಯದಿಂದ ತಪ್ಪಿಸಿಕೊಳ್ಳುವುದೆಂದರೆ ಊರಿಗೆ ಹೋಗುವ ರಜೆಯ ಸಮಯವೇ. ಹೊರಡುವ ಹಿಗ್ಗು, ತಲುಪುವ ಖುಷಿ, ಹತ್ತು ಹದಿನೈದು ದಿನಗಳ ಆನಂದಗಳೇ ನಮ್ಮ ಪಾಲಿನ ಹಬ್ಬವಾಗುವ ವಿಸ್ಮಯವಿದು.

full

ಹೋಟೆಲ್ ರುಚಿಯ ಜೈಲುಗಳಿಂದ ನಾಲಿಗೆಗೆ ಕೊಂಚ ದಿನಗಳ ಮಟ್ಟಿಗೆ ಬಿಡುಗಡೆ. ಅಮ್ಮನ ಮನದ ಗೂಗಲ್ಲು ಸರ್ಚು ವಿಧವಿಧ ಪಾಕಗಳಿಗಾಗಿ ಬ್ಯುಸಿಯಾಹೋಟೆವ ಘಳಿಗೆಗಳು. ಅಣ್ಣನ ’ತಮ್ಮನ ಜತೆಗಿರುವ ಹಿಗ್ಗಿಗೆ’ ತಾರಕಕ್ಕೇರುವ ಉಕ್ಕು. ಮರವಂತೆ ಬೀಚಿನ ಮರಳುಗಳಿಗೆ ಹೊಸ ಪಾದದ ತಂಪು. ಆನೆಗುಡ್ಡೆ ಗಣೇಶನಿಗೆ ಹಳೆಯ ಹುಡುಗನ ಹೊಸ ಪ್ರಾರ್ಥನೆ ಕೇಳುವ ಸಮಯ. ಅವನ ಕಣ್ಣಲ್ಲಿ – ದೇಹದ ವಿಚಾರದಲ್ಲಿ ತನಗೇ ಕಾಂಪಿಟೀಷನ್ ನೀಡುತ್ತಿರುವ ನನ್ನ ಬಗ್ಗೆ, ಮೂಡುವ ಅಚ್ಚರಿಯನ್ನು ಕಾಣುವ ಬಯಕೆ. ಒಂದಿಷ್ಟು ಮನೆಫಂಕ್ಷನ್ನುಗಳು. ಖಾಲಿ ಆವರಣಗಳು ಕ್ಷಣಕಾಲದಲ್ಲಿ ಹಮ್ ಆಪ್ ಕೆ ಹೈ ಕೌನ್ ಸೆಟ್ಟಾಗಿ ಬಿಡುವ ಅಚ್ಚರಿ. ಅಂಗಳದ ಪಾರಿಜಾತ ಹೂಬಿಡಲು ಸೀಸನ್ನುಗಳಿವೆಯೇ ಅಂತ ಗೂಗಲ್ಲು ಹುಡುಕಲು ಬೇಸರ, ಅದನ್ನು ಕಣ್ಣಾರೆ ನೋಡಿಯೇ ಅರಿಯಬೇಕು.. ಕೊನೆಯ ಸಲವೂ ಅಂಗಳ ತುಂಬಾ ಚೆಲ್ಲಿತ್ತಲ್ಲ, ಈ ಸಲ ನೋಡಬೇಕು, ಹೂ ಬಿಟ್ಟು ಬಿಟ್ಟು ಸುಸ್ತಾಗದೇ ಕೊಂಚವೂ ಅದಕ್ಕೆ?

ಗೆಳೆಯರ ಖುಷಿಗಳಿಗೆ ಕಿವಿಯಾಗದೇ, ದುಃಖಕ್ಕೆ ದನಿಯಾಗದೇ, ಹೊಸ ಸಾಹಸಗಳಿಗೆ ಪ್ರೇರಣೆ ನೀಡದೆ ಎಷ್ಟೊಂದು ದಿನಗಳೇ ಆಗಿಬಿಟ್ಟವಲ್ಲಾ! ಕುಂದಾಪುರ ಕನ್ನಡ ಆಲಿಸದ ಕಿವಿಗಳು ಎಷ್ಟೊಂದು ಸಣ್ಣಗಾಗಿಬಿಟ್ಟಿವೆ!

ಜಯಂತರು ಹೇಳುವ ’ರಜಾಕಾರು’ ನಾವಾಗದೇ, ಸಂಬಂಧಿಕರ ಮಗುವೊಂದು ’ಅರೆ..! ನಾ ಹೋದ ಸಲ ನೋಡಿದ್ದಾಗ ಇಷ್ಟು ಚಿಕ್ಕವನಿದ್ದ, ಇಲಾಸ್ತಿಕ್ ಚಡ್ಡಿ ಹಾಕ್ಕೊಂಡು ಓಡಾಡ್ತಾ ತುಂಟತನ ಮಾಡ್ತಿದ್ದ; ಹ್ಯಾಗೆ ಆಲವಾಗಿದ್ದಾನೆ, ಗುರುತೇ ಸಿಗ್ತಿಲ್ಲ!’ ಎಂದು ಮುಗ್ಧನಾಗಿ ಅಚ್ಚರಿಪಡುವಂತೆ, ನಾ ಬೆಳೆದ- ನನ್ನ ಬೆಳೆಸಿದ ಊರಿನ ಬೆಳವಣಿಗೆಯನ್ನೂ ಕಂಡು ಸಂತಸ ಪಡಬೇಕಿದೆ.

ಇದು – ಸೂಟು, ಬೂಟು, ಕಾಂಪಿಟಿಷನ್ನು, ನಂಬರ್ ವನ್ ಆಗುವ ಓಟಗಳು, ಇಂಪ್ರೆಸ್ ಮಾಡುವ ಚಟಗಳು.. ಹೀಗೆ ಕಾಣುತ್ತಾ ಕಾಣುತ್ತಾ ನಾನೇ ಬೇರೆ ಯಾರೋ ಆಗಿಬಿಡುವ ಅಪಾಯವನ್ನು ತಪ್ಪಿಸಲೋಸುಗ, ಈ ನಾನಲ್ಲವೇ ಅಲ್ಲದ ನನ್ನತನವನ್ನು ಬದಿಗಿಟ್ಟು, ಕೇವಲ ನಾನಾಗುವ (just being myself) ಸುಗ್ಗಿಯ ಸಮಯ!

**

 

(ಚಿತ್ರಕೃಪೆ : ಈ ಲಿಂಕು)

 

ಕಾಲೇಜಿನ ದಿನಗಳಲ್ಲಿ ಅಮ್ಮನನ್ನು ಕರೆದು, ಬೆಂಗಳೂರು ತೋರಿಸುವ ಇರಾದೆ ತುಂಬಾ ಇರುತ್ತಿದ್ದರೂ ಆಟೋದಲ್ಲಿ ಸುತ್ತಿಸುವಷ್ಟು ಆರ್ಥಿಕ ಪರಿಸ್ಥಿತಿಯಲ್ಲಿರದೇ ಬಸ್ಸಿನಲ್ಲಿ ಕರೆದೊಯ್ಯಲು ಒಂದು ರೀತಿಯ ಭಯವಿರುತ್ತಿತ್ತು. ಭಯಕ್ಕೆ ಕಾರಣ ಬಸ್ಸಿನ ಚಾಲಕರು, ಕಂಡಕ್ಟರುಗಳು. ಬಸ್ಸಿನೊಳಗೆ ತಮ್ಮೆಲ್ಲಾ ಜೀವನದ ಜಂಜಡಗಳಿಂದಲೇ ಪ್ರೇರಿತವಾದ ವಿಚಿತ್ರ ಅಸಹನೆಯಿಂದ ಕೂರುವ, ವೇಗವಾಗಿ ಓಡಿಸಯ್ಯ ಅನ್ನುವ ಭಾವದಿಂದಲೇ ಬಸ್ಸು ಹತ್ತುವ ಪಯಣಿಗರ ಭಯವೋ, ಅಥವ ತಮ್ಮ ಸಿಂಗಲ್ ಗಳನ್ನು ಮುಗಿಸುವ ತರಾತುರಿಯೋ ಅಥವ ಅದೇನೋ ಅರ್ಥವಾಗದ ಅವಸರವೋ ಬಸ್ಸು ನಿಂತ ಕೂಡಲೇ ಇಳಿವವರನ್ನು ತಳ್ಳುವಷ್ಟು ಅರ್ಜೆಂಟು ಅವರಲ್ಲಿ ಮೂಡಿಬರುತ್ತದೆ ಅನಿಸುತ್ತದೆ.

ವಯಸ್ಸಿನ ಜತೆಗೇ ಬಂದುಬಿಡುವ ಮಂಡಿನೋವಿರುವ ಅಮ್ಮ ಅದೊಂದು ದಿನ ಬಸ್ಸಿನ ಕೊನೆಯ ಮೆಟ್ಟಿಲಿನಿಂದ ರೋಡಿಗೆ ಹೆಜ್ಜೆಯಿಡುವಷ್ಟರಲ್ಲಿ ಕಂಡಕ್ಟರನ ವಿಸಿಲ್ಲು ಕಹಳೆಯಂತೆ ಕೇಳಿಸಿ ಚಾಲಕ ಬಸ್ಸು ಹೊರಡಿಸಿಬಿಟ್ಟಿದ್ದ. ಅಮ್ಮ ಆಯತಪ್ಪಿ ಬಿದ್ದುಬಿಟ್ಟಿದ್ದಳು. ತನ್ನ ಕಣ್ಣೆದುರೇ ನಡೆದದ್ದುದರಿಂದ ಕೂಡಲೇ ಮತ್ತೆ ಬ್ರೇಕು ಹಾಕಿ ನಿಲ್ಲಿಸಿ ಅಮ್ಮನಿಗೇ "ಬೇಗ ಇಳಿಯೋಕಾಗಕಿಲ್ವ?" ಅಂತ ದಬಾಯಿಸಿದ್ದ. ಬಿದ್ದ ಅಮ್ಮನನ್ನು ಎತ್ತುವುದರಲ್ಲಿ, ಆಕೆಯ ಮುಜುಗರವನ್ನು ಸಮಾಧಾನಪಡಿಸುವಂತೆ ಏನೂ ಆಗಿಲ್ಲವೆಂಬಂತೆ ಮಾತಾಡುತ್ತ ಚಾಲಕನ ಮಾತಿಗೆ ಜಗಳವಾಡುವ ಮನಸ್ಸಿಲ್ಲದೇ ವಿಪರೀತ ಅಸಹಾಯಕತೆಯ ಮೌನ ಧರಿಸಿದ್ದೆ.

ಅವತ್ತು ಮನದ ಮುಗಿಲಿಗೆ ಒಂದು ಅಸಹನೆಯ ಮೋಡ. ಆರ್ಥಿಕ ಪರಿಸ್ಥಿತಿಯನ್ನು ಬಯ್ದುಕೊಳ್ಳಬೇಕೋ, ವ್ಯವಸ್ಥೆಯನ್ನು ಬಯ್ದುಕೊಳ್ಳಬೇಕೋ ಅಥವಾ ಹ್ಯಾಗೆ ಸುಧಾರಿಸಬೇಕು ಅನ್ನುವ, "ಆಂಗ್ರಿ ಯಂಗ್ ಮ್ಯಾನ್" ಆಗಿಬಿಡಬೇಕು, ಶಂಕರ್ ಸಿನೆಮಾಗಳ ಹೀರೋನಂತೆ ಯಾರಾದರೂ, ಕೊನೆಗೆ ನಾನಾದರೂ ಆಗಿಬಿಡಬೇಕೆಂಬ ತಳಮಳವುಳ್ಳ ವಿಚಿತ್ರ ಹುಮ್ಮಸ್ಸು.

ಕಾಲೇಜು ಮುಗಿಯಿತು, ಕೆಲಸ ಸಿಕ್ಕಿ ಜೀವನದ ಎಲ್ಲಾ ಪರ್ವಗಳು ಮೆಲ್ಲ ಮೆಲ್ಲ ಪುಟತಿರುವತೊಡಗಿದವು. ಅಮ್ಮನಿಗೆ ಬೆಂಗಳೂರು ತೋರಿಸುವುದಕ್ಕೆ ನಾನೇ ಬೆಂಗಳೂರಲ್ಲಿರದೇ ಫೋನಿನಲ್ಲೇ ಅದು ನೋಡಿದೆಯಾ ಇದು ನೋಡಿದೆಯಾ ಅನ್ನುವ ಹಾಗೆ ಬದುಕು ಮಾಡಿಸಿತು. ಬಸ್ಸಿನಲ್ಲಿ ತಿರುಗಬೇಡ ಎಲ್ಲಿಗೆ ಹೋಗುವುದಾದರೂ ಅದೆಷ್ಟೇ ದೂರವಿದ್ದರೂ ಆಟೋದಲ್ಲಿ ತಿರುಗು ಅನ್ನುವಷ್ಟು ಆರ್ಥಿಕವಾಗಿ ಸುಧಾರಿಸಿದ ಮೇಲೆ, ನಾನೇ ಸ್ವತಃ ಕರೆದೊಯ್ದು ತೋರಿಸುವಷ್ಟು ತೃಪ್ತಿಯಲ್ಲದಿದ್ದರೂ ಮೊದಲಿಗಿಂತ ಒಂದು ಮಟ್ಟದ ಮೇಲಿನ ಸಂತಸ ದೊರಕುತ್ತಿತ್ತು.

ಇದನ್ನು ನೆನಪಿಸಿಕೊಳ್ಳುವುದಕ್ಕೆ ಕಾರಣ ಇತ್ತೀಚೆಗೆ ಸಿಂಗಾಪೂರಿನ ಬಸ್ಸಿನಲ್ಲಿ ನೋಡಿದ ಒಂದು ಘಟನೆ. ಇಲ್ಲಿ ಹಣ ನೀಡಲು ಕಾರ್ಡಿನ ವ್ಯವಸ್ಥೆ, ನಿಲ್ದಾಣಗಳಲ್ಲಿ ಮುಂದಿನ ಬಸ್ಸು ಎಷ್ಟು ಹೊತ್ತಿಗೆ ಬಸ್ ಸ್ಟಾಪ್ ತಲುಪುತ್ತೆ ಎಂದು ತೋರಿಸುವ ಬೋರ್ಡು, ಮತ್ತು ಎಲ್ಲಾ ನಿಲ್ದಾಣಗಳಲ್ಲಿ ಬರುವ ಬಸ್ಸು ಹೋಗುವ ರೂಟುಗಳ ಚಿತ್ರ ಹಾಕಿರ್ತಾರೆ ಎಂಬ ಟೆಕ್ನಿಕಲ್ ವಿಷಯಗಳಲ್ಲದೇ ಬೇರೆ ಕೆಲವು ಉತ್ತಮ ವಿಚಾರಗಳಿವೆ. ಸಚೇತನರಿಗೆ ಬಸ್ಸಿನಲ್ಲಿ ಹತ್ತಲು ಅನುಕೂಲವಾಗುವಂತೆ ವ್ಯವಸ್ಥೆಯಿದೆ. ಬಸ್ಸಿನೊಳಗೆ ಅವರಿಗೇ ಪ್ರತ್ಯೇಕವಾಗಿ ಕೈಚಾಲಿತ ವಾಹನವನ್ನು ನಿಲ್ಲಿಸಿಕೊಳ್ಳಲು ಜಾಗ ಮಾಡಿರುತ್ತಾರೆ. ಬಸ್ಸಿನ ತುಂಬೆಲ್ಲಾ ಹಿರಿಯರಿಗೆ ಸೀಟುಬಿಟ್ಟುಕೊಡುವುದು ಕಾನೂನು ಅಂತಲ್ಲದೇ, ಅದೇ ನಿಜವಾದ ನಡತೆ ಅನ್ನುವುದನು ಬಿಂಬಿಸುವ ಜಾಹೀರಾತುಗಳಿರುತ್ತದೆ. ಮತ್ತು ಬಸ್ಸು ಹತ್ತಿದ ಯಾವ ಮಗುವೂ ಅದನ್ನು ನೋಡದೇ ಇಳಿಯಲಾಗದಷ್ಟುಕಣ್ಣಿಗೆ ರಾಚುವ ಜಾಗೆಯಲ್ಲಿ ಹಾಕಿರುತ್ತಾರೆ.

singapore-bus

ಒಮ್ಮೆ ಹೀಗೆ ಆಫೀಸಿಗೆ ಬಸ್ಸಲ್ಲಿ ಹೋಗುತ್ತಾ ಇದ್ದಾಗ ಸ್ಟಾಪಿನಲ್ಲಿ ಒಬ್ಬ ವಯಸ್ಸಾದ ಮಹಿಳೆ ಹತ್ತಿದರು. ಊರುಗೋಲಿಲ್ಲದಿದ್ದರು ಹೆಜ್ಜೆ ಹೆಜ್ಜೆಯನ್ನೂ ಮೆಲ್ಲ ಇಡುವಷ್ಟು ವಯಸ್ಸು. ಆ ಸ್ಟಾಪಿನಲ್ಲಿ ಆಕೆಯನು ಬಿಟ್ಟು ಮತ್ಯಾರೂ ಹತ್ತಿರಲಿಲ್ಲ. ಆಕೆ ಮೆಲ್ಲ ಬಸ್ಸು ಹತ್ತಿದಳು. ಬಸ್ಸಿನೊಳಗಿನ ಕಂಬಗಳನು ಒಂದೊಂದಾಗಿ ಹಿಡಿಯುತ್ತಾ ಸೀಟಿನಲ್ಲಿ ಕೂರಲು ಕಡಿಮೆ ಎಂದರೂ ಎರಡರಿಂದ ಮೂರು ನಿಮಿಷವಾದರೂ ಆಗಿದ್ದಿರಬೇಕು. ಚಾಲಕ ಆಕೆ ಸೀಟಿನಲ್ಲಿ ಕೂರುವವರೆಗೂ ಬಸ್ಸನ್ನು ಕದಲಿಸಲಿಲ್ಲ. ಒಮ್ಮೆ ಆಕೆ ಕೂತು ತೃಪ್ತಿಯಿಂದ ಧನ್ಯವಾದಗಳು ಎಂಬರ್ಥದಲ್ಲಿ ನಸುನಕ್ಕ ನಂತರ ಬಸ್ಸು ಹೊರಟಿತು.

ಬಸ್ಸಿನೊಳಗೆಲ್ಲಾ ಒಂದು ಬಗೆಯ ಗೆಲುವು ಹರಡಿತ್ತು. ಹೆಮ್ಮೆಯ ಹೊಳೆ ಹರಿದಿತ್ತು. ಮತ್ತು ಅದಕ್ಕೆ ಚಾಲಕನೇ ನಾವಿಕನಾಗಿದ್ದ.

 

***

ಚಿತ್ರಕೃಪೆ: ಈ ವೆಬ್ ಸೈಟು

 

ಜನಜಂಗುಳಿಯ ಚಕ್ರವ್ಯೂಹದ ಮಧ್ಯೆ

ನಿಶ್ಯಸ್ತ್ರನಾಗಿ

ಒಬ್ಬೊಬ್ಬರ ಎದೆತಟ್ಟಿ

ದಯವಿಟ್ಟು ನಿಮಗೆಲ್ಲಾ ನಾನು ಕಾಣಿಸುತ್ತಿದ್ದೀನಾ

ನಾನು ನಿಜವಾಗೂ ಇರುವುದು ಹೌದಾ

ಅಂತ ಕೇಳುವಷ್ಟು ಒಂಟಿತನ.

 

ಸುಮ್ಮನೆ ಕಟ್ಟಿಗೆಯಂತಾಗಿ

ದೇಹವನ್ನು ಒಲೆಯೊಳಗೆ ಹಾಕಿ

ಯಾರಿಗಾದರೂ ರೊಟ್ಟಿ ಸುಡಲು

ಸಹಾಯ ಮಾಡಬೇಕು ಅನ್ನಿಸುವಷ್ಟು

ಬೇಸರ.

Will_Smith_in_Seven_Pounds_Wallpaper_2_800

ಈ ಸಹಿಸದ ದುಃಖ ನೀಗಲು

ಒಂದೇ ಒಂದು ಪರಿಹಾರವಂತೆ.

 

ವರ್ಷಾನುಗಟ್ಟಲೆ ಮಾತಾಡಿಸದೇ

ಉಳಿದುಹೋದ ಗೆಳೆಯನೊಬ್ಬನನ್ನು

ಅಪರಾತ್ರಿ ಎಬ್ಬಿಸಿ

ಮಾಡದ ತಪ್ಪಿಗೆ

ಕ್ಷಮೆ ಬೇಡಬೇಕು,

 

ಇಲ್ಲವಾದರೆ

 

ದಾರಿಯಲ್ಲಿ ಸಿಕ್ಕ

ಯಾವ ಗುರುತು ಪರಿಚಯ

ಇಲ್ಲದವನ ಕಷ್ಟವನ್ನೆಲ್ಲಾ ಪರಿಹರಿಸಿ

ಅವನ ಖಾಹಿಲೆಅಮ್ಮನಿಗೆ ನನ್ನ ಕಿಡ್ನಿಯನ್ನು

ದಾನ ಮಾಡಿ

ಅಡ್ರೆಸ್ಸು ಹೆಸರು ಬಿಡಿ

ನನ್ನ ಚಹರೆಯನ್ನೂ ಅವನ ಮನಸ್ಸಿನಿಂದ ಅಳಿಸಿ

ಮನೆಗೆ ಬಂದು

ನಿರಾಳವಾಗಬೇಕು!

2334834-3-loneliness3

 

 

******

(ಟಿಪ್ಪಣಿ : ವಿಲ್ ಸ್ಮಿತ್ ರ Seven Pounds ಚಿತ್ರ ನೋಡಿಯಾದ ತುಂಬಾ ದಿನದವರೆಗೂ ಬೆಂಬೆತ್ತಿಬಂದ ಭಾವವೊಂದನ್ನು ಪದಗಳಲ್ಲಿ ಸೆರೆಹಿಡಿವ ನನ್ನ ಪುಟ್ಟ ಪ್ರಯತ್ನವಿದು. ಯಾವುದೇ Expectation ಇಲ್ಲದೇ ಸಹಾಯ ಮಾಡುವುದರಲ್ಲಿ ಸಿಗುವ ತೃಪ್ತಿಯ ಭಾವಕ್ಕೆ ಏನೋ ಬೆರಗಿದೆ. ಬಣ್ಣಿಸಲಾಗದೊಂದು ಸವಿಯಿದೆ. ಚಿತ್ರದಲ್ಲಿ ಆ ಪಾತ್ರಕ್ಕೆ ಒಂದು Motive ಇದ್ದರೂನು, ಅಂಥ ಒಂದು motive ಇಲ್ಲದೇನೇ ಇದ್ದರೇ ಕಥೆಯ ರೂಪ ಇನ್ನೊಂದೇ ಮಜಲು ಪಡೆಯುತ್ತಿತ್ತು. ಬಹುಶಃ ಬೇರೊಂದು ಸ್ಥಾಯಿಗೆ ಏರುತ್ತಿತ್ತೇನೋ ಅಂತ ಅನ್ನಿಸಿ ಹಪಹಪಿಸಿದ್ದೇನೆ. ಚಿತ್ರದ ಕುರಿತು, ಅದು ಉಂಟು ಮಾಡಿದ ತಲ್ಲಣಗಳ ಕುರಿತು ಮುಂದೆಂದಾದರೂ ಬರೆವ ಪ್ರಯತ್ನ ಮಾಡ್ತೇನೆ)

ಚಿತ್ರಕೃಪೆ : Alonelyworld.com ಮತ್ತು ಗೂಗಲ್

ಅದೊಂದು ದಿನ ರಂಗೀಲಾ ಮ್ಯೂಸಿಕ್ ಮಾಡಲೋಸುಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಎ. ಆರ್. ರೆಹಮಾನ್ ರ ಸ್ಟೂಡಿಯೋದಲ್ಲಿದ್ದಾರೆ. ವರ್ಮಾಗೆ ಮೊದಲಿಂದಲೂ ಒಂದು ಕುತೂಹಲ ರೆಹಮಾನ್ ಯಶಸ್ಸಿನ ಬಗ್ಗೆ. ಚಿಕ್ಕ ವಯಸ್ಸಲ್ಲೇ ಮಾಡಿದ ಬ್ರಹ್ಮಾಂಡ ಸಾಧನೆಯ ಬಗ್ಗೆ. ಒಮ್ಮೆ ಜತೆಯಲ್ಲಿದ್ದಾಗ ರೆಹಮಾನ್ ಹೇಳುತ್ತಾರೆ,

1449977847

“ಈ ಸ್ಟೂಡಿಯೋದಿಂದ ಹೊರಹೋಗುವ ಗೀತೆಯೆಲ್ಲಾ ಚೆನ್ನಾಗಿರಬೇಕೆಂದು ನಿರ್ಧರಿಸಿಬಿಟ್ಟಿದ್ದೇನೆ!”

ನಾವೂ, ನೀವೂ, ರಾಮ್ ಗೋಪಾಲ್ ವರ್ಮಾರಂಥವರೂ ಇಂಥ ಪ್ರತಿಜ್ಞೆಗಳನ್ನು ಬಹಳ ಸಲ ಸಿಗರೇಟು ಬಿಡುವ ನಿರ್ಧಾರದಂತೆ ತೆಗೆದುಕೊಳ್ಳುತ್ತಿರುತ್ತೇವೆ. ಕೇವಲ ರೆಹಮಾನ್ ರಂಥವರಿಗೇ ಆ ನಿರ್ಧಾರವನ್ನು ಉಳಿಸಿಕೊಳ್ಳುವ, ಅದನ್ನೇ ಬದುಕುವ ಹಟ ಇರುತ್ತದೆ.

ಅದಕ್ಕೇ ರೆಹಮಾನ್ ಮೊಜಾರ್ಟ್ ಆಫ್ ಮದ್ರಾಸ್ ಅನ್ನಿಸಿಕೊಳ್ಳುತ್ತಾರೆ.

*******

ಇದು ಬಹುಶಃ ಬಹಳ ಜನಕ್ಕೆ ಗೊತ್ತಿರುವಂತ ಘಟನೆ.

೨೦೦೭ ನೇ ಇಸವಿಯಲ್ಲಿ ಹೈದರಾಬಾದ್ ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯ. (ಇಂಟರ್ನೆಟ್ ನಲ್ಲಿ ಇದು ೨೦೦೪ ರ ಕೋಲ್ಕತ್ತಾ ಟೆಸ್ಟ್ ಪಂದ್ಯ ಅಂತ ಹರಿದಾಡುತ್ತಿದೆ, ಆದರದು ನಿಜ ಅಲ್ಲ.) ಆಸ್ಟ್ರೇಲಿಯಾದ ಸ್ಪಿನ್ನರ್ ಬ್ರಾಡ್ ಹಾಗ್ ಗೆ ಸಚಿನ್ ವಿಕೆಟ್ ಪಡೆದರು. ಅದರಲ್ಲೂ ಕ್ಲೀನ್ ಬೌಲ್ಡ್ ಮಾಡಿ!. ಕ್ರಿಕೆಟ್ ದೈವ ಸಚಿನ್ ವಿಕೆಟ್ ಅಂದರೆ ಸಾಮಾನ್ಯವೇ? ಪ್ರಥಮ ದರ್ಜೆ ಪಂದ್ಯಗಳಲ್ಲಿ ಸಚಿನ್ ವಿಕೆಟ್ ಪಡೆದವರ ಹೆಸರು ಭಾರತ ದ ಕ್ರಿಕೆಟ್ ಆಯ್ಕೆಮಂಡಳಿ ಸದಸ್ಯರ ಬಾಯಲ್ಲಿ ಸುದ್ಧಿಯಾಗುತ್ತದಂತೆ (ವಿನಯ್ ಕುಮಾರ್). ಸಚಿನ್ ವಿಕೆಟ್ ಪಡೆದದ್ದಕ್ಕೆ ಪಂದ್ಯ ಗೆದ್ದಷ್ಟು ಸಂಭ್ರಮಿಸಿದವರಿದ್ದಾರೆ, ಸಚಿನ್ ಗೆ ಸ್ಲೆಡ್ಜಿಂಗ್ ಮಾಡಿ ನಂತರ ತಮ್ಮ ಕ್ರಿಕೆಟ್ ಬದುಕನ್ನೇ ಮುಗಿಸಿಕೊಂಡವರಿದ್ದಾರೆ (ಲಿಸ್ಟು ಭಾರೀ ದೊಡ್ಡದಿದೆ). ಸಚಿನ್ ಕ್ಯಾಚು ಕೈಬಿಟ್ಟಿದ್ದಕ್ಕೆ ಪಂದ್ಯವೇ ಕೈಜಾರಿಹೋಯಿತು ಅಂದವರಿದ್ದಾರೆ (ವಸೀಂ ಅಕ್ರಂ).

ಈ ಪಂದ್ಯದಲ್ಲಿ ಬ್ರಾಡ್ ಹಾಗ್ ಗಂತೂ ಸ್ವರ್ಗಕ್ಕೆ ಮೂರೇ ಗೇಣು. ತನ್ನ ಬೌಲಿಂಗ್ ಸಾಮರ್ಥ್ಯಕ್ಕೆ ಅದೊಂದು ದಾಖಲೆ ಅಂತ ಅಂದುಕೊಂಡರು.

ಹಾಗೇ ಪಂದ್ಯವಾದ ಬಳಿಕ ತಾನು ಬೌಲ್ಡ್ ಮಾಡಿದ ಅದೇ ಬಾಲ್ ನ ಮೇಲೆ ಸಚಿನ್ ರ ಆಟೋಗ್ರಾಫ್ ಪಡೆದರು. ಆಟೋಗ್ರಾಫ್ ಕೊಡುವಾಗ ಸಚಿನ್ ಆತನ ಬೌಲಿಂಗ್ ಬಗ್ಗೆ ಮೆಚ್ಚುಗೆ ಮಾತಾಡಿದರಾದರೂ ಆ ಬಾಲ್ ನ ಮೇಲೆ “ಇಟ್ ವಿಲ್ ನೆವರ್ ಹ್ಯಾಪ್ಪನ್ ಅಗೈನ್” ಅಂತ ಬರೆದರು.

ನಂತರ ಬ್ರಾಡ್ ಹಾಗ್ ಭಾರತದೆದುರು ಎಷ್ಟು ಪಂದ್ಯ ಆಡಿದರೂ ಸಚಿನ್ ವಿಕೆಟ್ ಸಿಕ್ಕಿಲ್ಲ!

****

will_smith

ಹಾಲಿವುಡ್ ನ ವಿಲ್ ಸ್ಮಿತ್ ನನ್ನ ಮೆಚ್ಚುಗೆಯ ನಟ. ಆತ ಬದುಕಿದ ಬಗೆಯೂ ಒಂದು ಸಾಹಸಗಾತೆ.

ಆತ ಯಶಸ್ಸಿನ ಬಗೆಗೆ ಮಾತೊಂದು ಹೇಳುತ್ತಾನೆ. ತುಂಬ ಸರಳವಾದ್ದು. ಯಶಸ್ಸಿಗೆ ಎರಡು ಸೂತ್ರಗಳು. ಒಂದು “ಓಡುವುದು” ಮತ್ತೊಂದು “ಓದುವುದು”!

ಇಷ್ಟೇನಾ? ಯಾವ ಆಧಾರದ ಮೇಲೆ ಹೇಗೆ ಈ ರೀತಿ ಅನ್ನುತ್ತಿದ್ದಾನೆ ಅಂದಿರಾ?

ಓಡುವುದು : ಓಡುವಾಗ ಮನಸ್ಸಿನೊಳಗಿನ ಆಲಸಿ, ಸಾಕು ನಿಲ್ಲಿಸು ಸುಸ್ತಾಗಿದ್ದೀಯಾ.. ಇವತ್ತಿಗಿಷ್ಟು ಸಾಕು ಅನ್ನುತ್ತದೆ. ಅದರ ಮಾತು ಧಿಕ್ಕರಿಸಿ ಓಡುತ್ತೇವೋ ಆಗ ಮನಸ್ಸಿನ ಮೇಲೆ ಹಿಡಿತ ದಕ್ಕುತ್ತದೆ.

ಓದುವುದು : ಜಗತ್ತಿನಲ್ಲಿ ಯಾವುದೂ ಹೊಸ ಸಮಸ್ಯೆ ಅನ್ನುವುದು ಒಂದಿಲ್ಲ. ಎಲ್ಲ ಸಮಸ್ಯೆಯೂ ಒಂದಲ್ಲ ಒಂದು ಸಮಯದಲ್ಲಿ ಒಬ್ಬರಿಗಾದರೂ ಬಂದಿದ್ದಿರುತ್ತದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಹಿಂದಿನವರು ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ. ಇಂದಿನವರೂ ಬರೆಯುತ್ತಿದ್ದಾರೆ. ಅರೆ! ಇದು ಎಂಥ ಅದೃಷ್ಟ ಅಲ್ಲವಾ? ಓದುವುದರಿಂದ ಸಮಸ್ಯೆ ಬರದ ಹಾಗೆ, ಬಂದರೆ ಎದುರಿಸುವ ಸಾಮರ್ಥ್ಯ ದೊರಕುತ್ತದೆ. ಅದಕ್ಕೆ ಓದುವುದು ಕೂಡ ಯಶಸ್ಸಿಗೆ ಒಂದು ಕಾರಣ.

ತುಂಬಾ ಸರಳವಾದ್ದೇ ಅಲ್ಲವೇ?

***

ವಿಲ್ ಸ್ಮಿತ್ ಮತ್ತೊಂದೆಡೆ ಹೀಗನ್ನುತ್ತಾರೆ.

ನನಗಿಂತ ಹೆಚ್ಚು ಬುದ್ಧಿವಂತರಿರಬಹುದು. ನನಗಿಂತ ಸಾಮರ್ಥ್ಯವಿದ್ದಿರುವವರಿರಬಹುದು. ಆದರೆ ಟ್ರೆಡ್ ಮಿಲ್ ನಲ್ಲಿ ನಡೆವ ಪಂದ್ಯವಿಟ್ಟರೆ ಕೇವಲ ಎರಡೇ ಎರಡು ಸಾಧ್ಯತೆಗಳಿರುತ್ತದೆ.
ಒಂದು : ನೀವು ಟ್ರೆಡ್ ಮಿಲ್ ನಿಂದ ಇಳಿಯಬೇಕು
ಅಥವಾ
ಎರಡು : ನಾನು ಸಾಯಬೇಕು.

ಇದು ಬಿಟ್ಟು ಬೇರೆ ಸಾಧ್ಯತೆಗಳಿಲ್ಲ!

****

ನನಗೊಬ್ಬ ಗೆಳೆಯನಿದ್ದಾನೆ. ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾನೆ.

ಬಹಳ ಪ್ಯಾಷನೇಟ್ ಆಗಿ ಕೆಲಸ ಮಾಡುವ ಆತನನ್ನು ಕಂಡು ಒಮ್ಮೆ, “ಮಾರಾಯ, ಹೀಗೆ ರಕ್ಕಸನಂತೆ ಕೆಲಸ ಎದುರುಹಾಕಿಕೊಂಡು ನಮಗೆಲ್ಲಾ ಏನೂ ಕೆಲಸ ಮಾಡದ ಪಾಪಪ್ರಜ್ಞೆ ಮೂಡಿಸುವಷ್ಟು ಕೆಲಸ ಮಾಡುತ್ತೀಯಲ್ಲ, ಹಾಗೆ ಮಾಡಲು ನಿನಗೆ ಸ್ಪೂರ್ತಿ ಏನು ಅಂತ ಕೇಳಿದ್ದಕ್ಕೆ ಆತ ಹೀಗೆ ಹೇಳಿದ.

“ನಮ್ಮ ಸುತ್ತಮುತ್ತ ಗಮನಿಸಿದರೆ ಏನೂ ಅರ್ಹತೆಯಿಲ್ಲದ ವ್ಯಕ್ತಿಗಳೆಲ್ಲ ಮೇಲೆ ಬರುತ್ತಿದ್ದಾರೆ. ಐಸೆ ಕೈಸೋಂಕೋ ದಿಯಾ ಹೈ ಅನ್ನುವಂತೆ ಎಂಥೆಂತವರಿಗೆಲ್ಲಾ ಸುಖಗಳು ಹುದ್ದೆಗಳು ದೊರಕಿರುತ್ತದೆ. ಅಂಥವರಿಗೇ ಎಲ್ಲಾ ಸಿಗುವಾಗ ನನಗ್ಯಾಕೆ ಸಿಗಬಾರದು ಅನ್ನುವ ಪಾಯಿಂಟೇ ನನ್ನನ್ನು ಮತ್ತಷ್ಟು ಕೆಲಸ ಮಾಡುವಂತೆ ಸೆಳೆಯುತ್ತದೆ. ಯಾಕೆಂದರೆ ಅದೃಷ್ಟ ಹೇಗೆ ಪಡೆವುದೋ ನನಗೆ ಗೊತ್ತಿಲ್ಲ, ಬುದ್ಧಿವಂತರಾಗುವುದು ಹೇಗೋ ನನಗೆ ಗೊತ್ತಿಲ್ಲ. ಆದರೆ ಕಷ್ಟ ಪಟ್ಟು ಕೆಲ್ಸ ಮಾಡುವುದೊಂದೆ ನನಗೆ ಅರಿವಿರುವುದು. ಅದೊಂದರಲ್ಲಿ ಮಾತ್ರ ನನಗಿಂತ ಬೇರೆ ಯಾರೂ ಬೆಸ್ಟ್ ಅನ್ನಿಸಿಕೊಳ್ಳಬಾರದೆಂಬುದಷ್ಟೇ ನನ್ನ ಬಯಕೆ. ಅದಲ್ಲದೇ ಈಗೀಗ ನನಗೆ ಅದರಿಂದ ಖುಷಿಯೂ ಸಿಗುತ್ತಿದೆ ಆದ್ದರಿಂದ “ನಾನು ಕಷ್ಟಪಡುತ್ತಿದ್ದೇನೆಂಬುದರ ಅರಿವಿಲ್ಲದೇನೇ” ಕೆಲಸ ಮಾಡ್ತಿದ್ದೇನೆ.”

ಯಶಸ್ಸಿನ ಕೇಲಿಕೈ ಹೇಗೆಲ್ಲಾ ಇರುತ್ತದಲ್ಲವಾ?!

*****

ಚಿತ್ರಕೃಪೆ : ಗೂಗಲ್

 

ಇದುವರೆಗೂ ಸಾಧಿಸಿದ್ದನ್ನೆಲ್ಲವ ಗಂಟು ಮೂಟೆ ಕಟ್ಟಿ
ಅದನ್ನು ಜೂಜಿನಲಿ ಪಣಕ್ಕಿಟ್ಟು
ಸೋತರೂ ಮರುಮಾತಾಡದೇ
ಮತ್ತೆ ಮೊದಲಿಂದ ಬದುಕು ಶುರುಮಾಡಬಲ್ಲೆ ಅನಿಸಿದರೆ..

ಬದುಕನ್ನು ಕೊಲ್ಲುತ್ತಾ ಸಾಗುವ
ನಿರ್ದಯಿ ನಿಮಿಷಗಳಲ್ಲಿ
ಅರವತ್ತು ಸೆಕೆಂಡುಗಳ ಸಾಧನೆ ತುಂಬಬಲ್ಲೆಯಾದರೆ..

ಈ ಜಗತ್ತು ನಿನ್ನದಾಗುವುದು ಮತ್ತು
ಎಲ್ಲಕ್ಕಿಂತ ಮುಖ್ಯವಾಗಿ
ನೀನೊಬ್ಬ ಗಂಡುಗಲಿಯಾಗುವೆ!

-ರುಡ್ಯಾರ್ಡ್ ಕಿಪ್ಲಿಂಗ್.

 

(ರುಡ್ಯಾರ್ಡ್ ಕಿಪ್ಲಿಂಗ್ ರ “If”  ಕವಿತೆಯ ಸ್ಪೂರ್ತಿದಾಯಕ ಸಾಲುಗಳ ಅನುವಾದ)

ಬ್ಲಾಗುಲೋಕದ ಪ್ರೇಮಕವಿ ಅಂತಾನೇ ಹೆಸರುವಾಸಿಯಾದ ನವಿಲುಗರಿ ಸೋಮಣ್ಣ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಲವ್ ಲೆಟರ್, ಹನಿಗವಿತೆ, ಕವಿತೆ ಎಲ್ಲದರಲ್ಲೂ ಮೇಳೈಸಿ ಆದಮೇಲೆ ಈಗ ಅವರ ಹೊಸ ಸಾಹಸ ಗೀತರಚನೆ. ಅಲ್ಬಮ್ ಒಂದಕ್ಕೆ ಸೋಮಣ್ಣ ಬರೆದ ಹಾಡು, ಮಧುರ ಭಾವವನ್ನು ಬಡಿಸುತ್ತದೆ. ಪ್ರೀತಿಯ ಲೋಕವೊಂದಕ್ಕೆ ಎಳೆದೊಯ್ಯುತ್ತದೆ. ಆನೂರು ಶಿವು ಸಂಗೀತ ಮತ್ತು ಎಂ.ಡಿ. ಪಲ್ಲವಿ ಕಂಠದಲ್ಲಿ ಹಾಡು ಕೇಳಿದರೆ ಸಾಕು, ಕಳೆದುಹೋಗುವ ಗುಂಗು. ಎರಡೇ ನಿಮಿಷದಲ್ಲಿ ಕೇಳುವಾತ ಕೃಷ್ಣನಾಗುತ್ತಾನೆ. ಅವರವರ ರಾಧೆ ನೆನಪಾಗುತ್ತಾರೆ, ಮತ್ತು ಎದೆಯೊಳಗೇ ಹರಿವ, ಸುರಿವ, ಓಲಾಡುವ, ಸುಳಿಯಾಗುವ ಪ್ರೀತಿ ಜೀವ ಪಡೆದು ಚಿಮ್ಮುತ್ತದೆ.

ಹಾಗೆ ಸುಮ್ಮನೆ ಕೇಳಿ, ಮತ್ತು ಸೋಮಣ್ಣನ ಹೊಸ ಹಾದಿಗೆ ನಿಮ್ಮದೊಂದು ಒಳ್ಳೆ ಮನಸಿನ ಹಾರೈಕೆ ತಪ್ಪದೇ ಸಲ್ಲಲಿ.

ಪದ್ಯ ಕೇಳಲು ಇಲ್ಲಿ ಕ್ಲಿಕ್ಕಿಸಿ.

ಕೃಷ್ಣ ಮೆಚ್ಚಿದ ರಾಧೆ..!

ಪಲ್ಲವಿ :

ಪ್ರೀತಿಯ ತಂತಿಯ ಮೀಟಲು ಶ್ಯಾಮ
ರಾಧೆಯು ಬದುಕಿಗೆ ಸನಿಹ..||
ಇನ್ಯಾರದೋ ಮೋಹದಿ ಹೋಗಲು ದೂರ
ರಾಧೆಯ ಪುಟಪುಟ ವಿರಹ..||

ಪ್ರೀತಿಯ ಹೆಸರಿಗೆ ನಿಜಕಥೆ ಬರೆದರೆ.. (ಕೋರಸ್)
ಅದೇ ಕೃಷ್ಣ ಮೆಚ್ಚಿದ ರಾಧೆ…||

ಚರಣ ೧ :

ಬದುಕಿನ ಕಹಿಗಳ ನಾ ನೀಗಬೇಕು..
ನೀಡೊಂದು ನನಗೊಂದು ಗೂಡು ಶ್ಯಾಮ ||

ಜಾರದೇ ನೀತಿ
ಮೂಡಲಿ ಪ್ರೀತಿ
ಈ ಬದುಕೊಂದು ನಿನ್ನ ಹೆಸರ ಪ್ರೇಮ..||

ಪ್ರೀತಿಯ ಕಂಗಳ ಓದುವ ಕವಿತೆ.. (ಕೋರಸ್)
ಕವಿತೆಯೇ ಕೃಷ್ಣ ಮೆಚ್ಚಿದ ರಾಧೆ..||

ಚರಣ ೨ :

ಸಂಜೆಯ ಸೆರಗಿಗೆ ಬೇಕೊಂದು ಬೆಳಕು
ಅದರಲೇ ಹುಡುಕುವೆ ಬದುಕು

ದೊರಕದೇ ಹೋದರೆ ನಿನ್ನಾಸರೆ ನನಗೆ
ಮುಗಿಸುವೆ ಈ ಜನುಮದ ಸರಕು..||

ಪ್ರೀತಿಗೆ ಲೋಕವು ಹೇಳಿದ ಗಾದೆ.. (ಕೋರಸ್)
ಅದೇ ಕೃಷ್ಣ ಮೆಚ್ಚಿದ ರಾಧೆ..||

(ಮತ್ತೊಮ್ಮೆ ಸೂಚನೆ : ಎಂ.ಡಿ.  ಪಲ್ಲವಿ  ಕಂಠದಲಿ  ಕೇಳಲಿಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

ತುಂಬ ಸಲ ಯಾವುದೋ ಕೆಲಸ ಮಾಡಬೇಕಾಗಿ ಬಂದಾಗ “ನಮಗಾಗಲ್ಲ” ಅಂತ ಕೈ ಚೆಲ್ಲುತ್ತೇವೆ. ರಾತ್ರಿಯಿಡೀ ಕನಸನ್ನು ಸವಿಯುತ್ತಾ, ಬೆಳಗಾಗುತ್ತಲೇ ಅದನ್ನೆಲ್ಲಾ ಮರೆತು ಬದುಕಿನ ಜತೆ ರಾಜಿಮಾಡಿಕೊಳ್ಳುತ್ತೇವೆ. ಯಾರೋ ಹೊಸ ಕೆಲಸಕ್ಕೆ ಕೈ ಹಾಕಿದರೆ ನಿನಗಾಗಲ್ಲ ಅನ್ನುತ್ತೇವೆ, ಹಾಗನ್ನಲು ಧೈರ್ಯವಿಲ್ಲದಾಗ ಮನಸಲ್ಲೆ ಕರುಬುತ್ತೇವೆ.

ದೇವರು ಕೊಟ್ಟ ನೂರನ್ನು ಮೂಲೆಗೆಸೆದು ಕೊಡದ ಮೂರಿಗಾಗಿ ಹಲ್ಲುಗಿಂಜುತ್ತೇವೆ. ಅವ ಎಲ್ಲಾ ನೀಡಿದ್ದರೂ ಭಕ್ತಿಯ ಹೆಸರಲ್ಲಿ ನಮ್ಮ ಆಸೆಗಳ ಲಿಸ್ಟು  ಆತನೆದುರಿಡುತ್ತೇವೆ. ಸುಖದ ಮಜಲು ಅನುಭವಿಸುತ್ತಿದ್ದಾಗ ಅನ್ನದಿದ್ದರೂ, ದುಃಖ ಬಂದಾಗ ಅಯ್ಯೋ ಇದ್ಯಾಕಪ್ಪಾ ಬದುಕೂ.. ಅಂತ ಬೇಸರಿಸುತ್ತೇವೆ. ನಮ್ಮ ಕಷ್ಟಕಾಲದಲ್ಲಿ ನಮಗ್ಯಾರೂ ಸಹಾಯ ಮಾಡುತ್ತಿಲ್ಲವಲ್ಲ ಅಂತ ಕುಬ್ಜರಾಗುತ್ತೇವೆ.

ಒಂಚೂರು ಲಕ್ಕಿದ್ದಿದ್ರೆ ನಾನು ಏನೋ ಆಗ್ತಿದ್ದೆ ಅಂತ ಮನಸ್ಸಲ್ಲೇ ಸಮಾಧಾನ ಮಾಡಿಕೊಳ್ಳುತ್ತಿರುತ್ತೇವೆ.  ಇಪ್ಪತ್ತರ ಹೊತ್ತಿಗೆ ಮುಂದೇನೋ ಸಾಧಿಸುವೆ ಎಂದೂ ನಲ್ವತ್ತರ ಹೊತ್ತಿಗೆ ಅಯ್ಯೋ ಏನೂ ಸಾಧಿಸಲೇ ಇಲ್ವಲ್ಲಾ ಅಂತ ನಮ್ಮನಮ್ಮೊಳಗೇ ಕೆಲಸಮಯವಾದರೂ ಅಂದುಕೊಳ್ಳುತ್ತಿರುತ್ತೇವೆ.
ಇದೆಲ್ಲದಕ್ಕೂ (ಐಸ್ ಕ್ರೀಮ್ ನ) ಮೇಲೆ ಚೆರ್ರಿ ಇಟ್ಟಂತೆ (ಕಳಶವಿಟ್ಟಂತೆ ಎಂಬುದರ ಅಧುನಿಕ ರೂಪಾಂತರ;-)) ಇವಿಷ್ಟನ್ನೂ ಓದಿ “ಓಹ್.. ಇದೆಲ್ಲಾ ನನಗಲ್ಲ, ನಾನು ಹಿಂಗಿಲ್ಲ” ಅಂತ ಮನಸಾಕ್ಷಿ ಕಣ್ಣಿಗೆ ಮಣ್ಣೆರೆಚುತ್ತೇವೆ!

ಈ ಲೇಖನದ ಜತೆಗೆ ಒಂದು ವೀಡಿಯೋ ಲಗತ್ತಿಸಿದ್ದೇನೆ. ನೋಡಿ, ಬಹುಶಃ ನಾನು ಮತ್ತೇನೂ ಬರೆಯಬೇಕಂತಿಲ್ಲ.

(ಈ ವೀಡಿಯೋ ತನ್ನ ಬ್ಲಾಗಲ್ಲಿ ಹಾಕಿಕೊಂಡು ನನ್ನ ಗಮನಕ್ಕೆ ಬರಲು ನೆರವಾದ “ಮಾಯೇಶ್” ಗೆ ನನ್ನ ಥ್ಯಾಂಕ್ಸ್!)