Archive for the ‘ಮಾಹಿತಿ’ Category

ಇತ್ತೀಚೆಗೆ ಓದಿದ ಪುಸ್ತಕಗಳಲ್ಲಿ ನನ್ನನ್ನು ತುಂಬಾ ಬದಲಾಯಿಸಿದ ಪುಸ್ತಕದ ಕುರಿತು ಹೇಳಬೇಕನ್ನಿಸುತ್ತಿದೆ. ರುಜುತಾ ದಿವೇಕರ್ ಬರೆದಿರುವ ಡೋಂಟ್ ಲೂಸ್ ಯುವರ್ ಮೈಂಡ್, ಲೂಸ್ ಯುವರ್ ವೆಯ್ಟ್ – ಅನ್ನುವುದು ಆ ಪುಸ್ತಕದ ಹೆಸರು. ಕಮರ್ಷಿಯಲ್ ದೃಷ್ಟಿಯಿಂದ ಪುಸ್ತಕದ ಶೀರ್ಷಿಕೆ ತೂಕ ಇಳಿಸುವ ಬಗ್ಗೆ ಇದ್ದರೂ, ಪುಸ್ತಕದ ಒಳಗೆ ಆರೋಗ್ಯಕರವಾದ ಬದುಕನ್ನು ಕಟ್ಟಿಕೊಳ್ಳುವ ವಿಚಾರವನ್ನು ಬಹಳ ಸರಳವಾಗಿ, ತರ್ಕಬದ್ಧವಾಗಿ ಮಂಡಿಸುತ್ತಾರೆ ರುಜುತಾ. ಕರೀನಾ ಕಪೂರ್ ಗೆ ಡಯಟಿಷಿಯನ್ ಆಗಿ, ಆಕೆಯ ಜೀರೋ ಸೈಜ್ ಗೆ ಕಾರಣೀಭೂತರಾಗಿದ್ದುದರಿಂದ ಒಮ್ಮಿಂದೊಮ್ಮಲೆ ಪ್ರಸಿದ್ಧಿ ದೊರಕಿದರೂ, ಆಕೆಯ ಥಿಯರಿಗಳು ತುಂಬಾ ಸುಲಭ ಸಾಧ್ಯವಾದುದು. ಎಲ್ಲ ವರ್ಗದ ಜನರೂ ಆರಾಮಾಗಿ ಪಾಲಿಸಬಲ್ಲಂಥದ್ದು.

ಪುಸ್ತಕ ಓದಿ ಅಂತ ಹೇಳುತ್ತಲೇ ಆಕೆಯ ಕೆಲ ಮುಖ್ಯ ಥಿಯರಿಯನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ಇನ್ನಷ್ಟು ವಿವರಗಳಿಗೆ ಕಾಪಿ ರೈಟ್ ಸಮಸ್ಯೆಯ ಕಾರಣ ನೀವು ಪುಸ್ತಕದ ಮೊರೆ ಹೋಗಬೇಕಾಗುತ್ತದೆ.

don-t-lose-your-mind-lose-your-weight-400x400-imadaryhavfhdnfv

೧. ಬೆಳಿಗ್ಗೆ ಎದ್ದ ಹತ್ತು ಹದಿನೈದು ನಿಮಿಷದಲ್ಲಿ ಹಣ್ಣು, ಡ್ರೈ ಫ್ರೂಟ್ಸ್ ಇಂತದ್ದೇನಾದರೂ ತಿನ್ನಬೇಕು. ಎದ್ದ ಕೂಡಲೇ ಕಾಫಿ ಮತ್ತು ಟೀ ಮಾತ್ರ ಯಾವ ಕಾರಣಕ್ಕೂ ಸಲ್ಲದು. ಕಾಫಿ ಇಲ್ಲದೇ ಬಾಳಲಾಗದವರು, ಎರಡನೇ ಉಪಹಾರದ ನಂತರ ಕಾಫಿ ಸೇವಿಸಬಹುದು.
೨. ದಿನವಿಡೀ ೨ ಅಥವಾ ಮೂರು ಘಂಟೆಗೊಮ್ಮೆ ಸ್ವಲ್ಪ ಆಹಾರ ಸೇವಿಸಬೇಕು. ಅಂದರೆ ಬೆಳಿಗ್ಗೆ ಉಪಹಾರಕ್ಕೆ ಏನು ತಿನ್ನುತ್ತೀರೋ ಅದರ ಅರ್ಧದಷ್ಟನ್ನು ಎರಡು ಬಾರಿ ಎರಡು ಗಂಟೆ ಗ್ಯಾಪ್ ನಲ್ಲಿ ತಿನ್ನುವುದು. ದಿನವಿಡೀ ಕಡಿಮೆ ಆಹಾರವನ್ನು, ಸಮಯದ ಗ್ಯಾಪ್ ಇಟ್ಟು, ಹೆಚ್ಚು ಬಾರಿ ಸೇವಿಸಬೇಕು.
೩. ದಿನದಲ್ಲಿ ನೀವು ಹೆಚ್ಚು ಆಕ್ಟಿವ್ ಆಗಿರುವಂಥ ಸಮಯದಲ್ಲಿ ಹೆಚ್ಚು ತಿನ್ನುವುದು, ಕಡಿಮೆ ಆಕ್ಟಿವಿಟಿ ಇರುವಾಗ ಕಮ್ಮಿ ತಿನ್ನುವುದು.
೪. ರಾತ್ರಿ ಮಲಗುವ ಎರಡು ಅಥವಾ ಮೂರು ಗಂಟೆ ಮುಂಚಿತವಾಗಿ ರಾತ್ರಿಯೂಟವನ್ನು ಮಾಡುವುದು.

ಇಷ್ಟೇ ಸಿಂಪಲ್ ಆದ ಪಾಯಿಂಟ್ಸ್ ಗಳು ಈ ಪುಸ್ತಕದ ಜೀವಾಳ. ಇದನ್ನು ಯಾಕೆ ಮಾಡಬೇಕು, ಮಾಡುವುದರಿಂದ ಪ್ರಯೋಜನವೇನು ಎಂಬುದನ್ನು ರುಜುತಾ ವಿವರಿಸಿದ್ದಾರೆ. ಜೊತೆಗೆ ಎಂಥೆಂಥ ಆಹಾರವನ್ನು ಸೇವಿಸಬಹುದು, ಸೇವಿಸಬಾರದು ಎಂಬದರ ಬಗ್ಗೆ ಕೂಲಂಕಷ ವಿವರಣೆ ಸಿಗುತ್ತದೆ. ಆಹಾರದ ಜೊತೆಗೆ ವಾರಕ್ಕೆ ಕಡಿಮೆ ಅಂದರೆ ಮೂರು ಗಂಟೆಗಳ ಕಾಲ ವ್ಯಾಯಾಮ ಅಗತ್ಯ. ಇದಕ್ಕೆ ಮಾತ್ರ ಯಾವ ಶಾರ್ಟ್ ಕಟ್ ಇಲ್ಲ ಅಂತ ಖಡಾಖಂಡಿತವಾಗಿ ಹೇಳುವ ರುಜುತಾರ ಮತ್ತೊಂದು ಪುಸ್ತಕ ವ್ಯಾಯಾಮದ ಬಗ್ಗೆಯೇ ಇದೆ.

*****

ಮೊನ್ನೆ ಸುಚಿತ್ರಾ ಫಿಲಂ ಸೊಸೈಟಿ ಅಂಗಳದಲ್ಲಿ ಯೋಗರಾಜ್ ಭಟ್ ರ ಜೊತೆ ಸಂವಾದವಿತ್ತು. ಈ ಸಂವಾದಕ್ಕೂ ಮೊದಲು ಅವರ ಉಢಾಫೆ ಪ್ರವೃತ್ತಿಯಿಂದಾಗಿ ಅವರ ಬಗ್ಗೆಯೇ ನನ್ನೊಳಗೆ ಒಂದು ಉಢಾಫೆ ಮನೆಮಾಡಿತ್ತು. ಅವರ ಆ ಎರಡು ಗಂಟೆಯ ಸಂವಾದದ ಬಳಿಕ ಅವರ ಬಗ್ಗೆ ಇದ್ದ ಪೂರ್ವಗ್ರಹ ಹೊರಟು ಹೋಯಿತು. ಯೋಗರಾಜ್ ಭಟ್ ಯಾವುದೇ ಪ್ಲಾನ್ ಇಟ್ಟುಕೊಂಡು ಮಾತಾಡುವುದಿಲ್ಲ. ಆ ಕ್ಷಣ ಅನ್ನಿಸಿದ್ದನ್ನು, ಒಂಚೂರು ತನ್ನ ಮೇಲೆ ತಾನೇ ವ್ಯಂಗ್ಯವಿಟ್ಟುಕೊಂಡು, ತೆಳು ಹಾಸ್ಯದ ಲೇಪದ ಮೂಲಕ ನಿಶ್ಕಲ್ಮಷವಾಗಿ ಹೇಳಿಬಿಡುತ್ತಾರೆ. ಇನ್ನೊಂದು ಅರಿವಾದ ವಿಚಾರವೆಂದರೆ ಅವರ ಓದಿನ ಹರವು ವಿಸ್ತಾರವಾಗಿದೆ. ಬಹುಶಃ ಇದುವರೆಗೂ ಚಿತ್ರರಂಗದಲ್ಲಿ ಗಟ್ಟಿಯಾಗಿ ತಮ್ಮ ಛಾಪನ್ನು ಉಳಿಸಿಕೊಳ್ಳಲು ಅವರ ಸಾಹಿತ್ಯಾಭಿರುಚಿಯೇ ಕಾರಣವಿರಬೇಕು. ಚಿತ್ರಗೀತೆ ಬರೆಯುವಾಗ ಎಂಥ ಎಬುಡ ತಬುಡ ಪ್ರಯೋಗಗಳ ಮಾಡಲು, ಕಾರಣ ಕನ್ನಡ ವ್ಯಾಕರಣದ ಜ್ಞಾನ, ಬೇರೆ ಬೇರೆ ಧಾಟಿಯ ಕನ್ನಡದ ಮೇಲಿನ ಹಿಡಿತ, ಸಾಹಿತ್ಯ ಬಲ್ಲ ಆತ್ಮವಿಶ್ವಾಸವೇ ಅನ್ನುವುದು ಅರಿವಾಗ್ತದೆ.

ಅವರು ಆ ದಿನ, ಈ ಮುಖ್ಯವಾದ ವಿಚಾರಗಳ ಕುರಿತು ಮಾತಾಡಿದರು (ಅವರು ಹೇಳೋ ಶೈಲಿ ಬೇರೆ, ಅದರ ಸಾರ ಮಾತ್ರ ಇಲ್ಲಿದೆ) :-
~ ಸಿನಿಮಾ ಅಂದರೆ ನನಗೆ ಯಾವಾಗಲೂ ಎರಡು ಘಟನೆಗಳು ಕಾಡುತ್ತದೆ. ಒಮ್ಮೆ ಒಂದು ಸಾಹಿತ್ಯ ಸಭೆಯಲ್ಲಿ ಲೇಖಕರೊಬ್ಬರು ಸಾಹಿತ್ಯದ ಕುರಿತು ಭೀಷಣವಾಗಿ ಭಾಷಣ ಮಾಡುತ್ತಿದ್ದರು. ಬಹುಶಃ ಭಾಷಣದ ಓಘದಲ್ಲಿ ಮೈಮರೆತು ಸಾಹಿತ್ಯವನ್ನು ಓದಿಕೊಳ್ಳದವನು ಮನುಷ್ಯನೇ ಅಲ್ಲ ಎಂದು ಬಿಟ್ಟರು. ಅಲ್ಲಿ ಕೂತಿದ್ದ ಮುದುಕನಿಗೆ ಅದು ನೋವುಂಟು ಮಾಡಿರಬೇಕು, ಸರ…ಒಂದ್ನಿಮಿಷರೀ..ಅಂದ. ಸಭೆ ಅವರತ್ತ ತಿರುಗಿತು. ಅವರು ಎದ್ದು ನಿಂತು ಅಲ್ಲಾ.. ಈ ಸಾಹಿತ್ಯ ಪಾಹಿತ್ಯ, ಕಥೀ ಪಥೀ ಓದ್ಲಿಲ್ಲಾ ಅಂದ್ರೆ ಮನುಷ್ಯಾನೇ ಅಲ್ಲ ಅಂತೀರಲ್ರೀ.. ನಾನಾಗ್ಲೀ, ನಮ್ಮಪ್ಪನಾಗ್ಲೀ, ನಮ್ಮ ದೊಡ್ಡಪ್ಪ, ನಾವು ಏಳು ಜನ ಅಣ್ಣತಮ್ಮಂದಿರಿದೀವು.. ಯಾರೂ ಇದುವರೆಗೂ ಒಂದ್ ಪೇಜೂ ಓದಿಲ್ಲ.. ನಾವ್ ಮನುಷ್ಯರು ಹೌದೋ ಅಲ್ಲೋ..? ಅಂತ ಕೇಳಿಯೇ ಬಿಟ್ಟರು.

index-yograj
ಇನ್ನೊಂದು ನಾಗತಿಹಳ್ಳಿಯವರ ಸಿನಿಮಾ ಕ್ಲಾಸ್ ನಲ್ಲಿ ನಡೆದದ್ದು -ಅದರ ಸಾರಾಂಶ ಎಂದರೆ, ಸಿನಿಮಾ ಎಂದರೇನು ಅನ್ನೊ ಪ್ರಶ್ನೆ ಬಂದಾಗ, ಭಟ್ಟರು ಹೇಳಿದ್ದು ಸಿನಿಮಾ ಅನ್ನುವುದು ಕೆಲಸವಿಲ್ಲದವರು ಮಾಡುವ ಕೆಲಸ ಅಂತ. ಕೊನೆಗೆ ಅದನ್ನು ವಿವರಿಸಲೇಬೇಕಾಗಿ ಬಂದಾಗ, “ನೀವು ಸಿನಿಮಾ ನೋಡಲು ಹೋಗಬೇಕಾಗಿ ಬಂದಾಗ, ಎಕ್ಸಾಮ್ ಇದ್ರೆ ಹೋಗಲ್ಲ, ಆಫೀಸಿನಲ್ಲಿ ಏನಾದ್ರೂ ಇಂಪಾರ್ಟೆಂಟ್ ಕೆಲ್ಸ ಇದ್ರೆ ಹೋಗಲ್ಲ, ಹತ್ತಿರದವರ್ಯಾದರೂ ತೀರ್ಕೊಂಡಿದ್ದಾಗ ಹೋಗಲ್ಲ, ಹೀಗೆ ಐದಾರು ಘಂಟೆ ಫ್ರೀ ಇದ್ದಾಗ ಮಾತ್ರ ಸಿನಿಮಾ ನೋಡೋದು ಅನ್ನೋದು ನಡೆಯುತ್ತೆ. ಹೀಗಿದ್ದಾಗ ಸಿನಿಮಾ ಅನ್ನೋದು ಕೆಲಸವಿಲ್ಲದವರು ನೋಡುವ, ಮತ್ತಷ್ಟು ಕೆಲಸ ಇಲ್ಲದವನೇ ಮಾಡೋ ಕೆಲಸ ಅನ್ನುವುದನ್ನು ಹಾಸ್ಯವಾಗಿ, ವಿಡಂಬನೆಯಿಂದ ತನ್ನನ್ನು ತಾನೇ ಗೇಲಿ ಮಾಡಿಕೋತಾ ವಿವರಿಸಿದ್ರು.
~ ಯಾವ ಯಾವ ಭಾಷೆಯಲ್ಲಿ ಸಾಹಿತ್ಯ ಸಮೃದ್ಧವಾಗಿದೆಯೋ ಅಲ್ಲಿ ಚಿತ್ರರಂಗ ತುಂಬಾ ದುರ್ಬಲವಾಗಿರುತ್ತದೆ (ಕಮರ್ಷಿಯಲ್ಲೀ). ಇದಕ್ಕೆ ಕನ್ನಡ, ಬೆಂಗಾಳೀ, ರಾಜಸ್ಥಾನೀ ಭಾಷೆಗಳು ಉದಾಹರಣೆ.
~ ಕನ್ನಡ ಚಿತ್ರಗಳನ್ನು ನೋಡುವವರು ಬಹುತೇಕ ಹದಿನಾರರಿಂದ ಇಪ್ಪತ್ತೈದು ವಯಸ್ಸಿನವರು. ಅವರು ಮೊದಲು ನೋಡಿ, ಅವರಿಗಿಷ್ಟ ಆದರೆ ಮಾತ್ರ ಅವರ ಅಪ್ಪ ಅಮ್ಮ, ಅಂಕಲ್ ಆಂಟಿ, ಅಕ್ಕ ಭಾವ ನೋಡೋಕೆ ಬರ್ತಾರೆ. ಹಾಗಾಗಿ ನನ್ನ ಸಿನಿಮಾ ಅವರನ್ನು ಓಲೈಸುವ ಹಾಗಿರುತ್ತದೆ. ಅದು ಈಗಿನ ಮಾರುಕಟ್ಟೆಯ ಅವಶ್ಯಕತೆ ಕೂಡ.
~ ಎಲ್ಲರೂ ಒಳ್ಳೆ ಸಿನಿಮಾ ಮಾಡಿ, ಒಳ್ಳೇ ಕಥೆ ಬರೀರಿ ಅಂತಾರೆ. ಮಾಡಿದರೆ ನೋಡಲ್ಲ. ಬರೆದರೆ ಓದಲ್ಲ.

~ ನಾನು ಕಥೆಯನ್ನು ಪಾತ್ರಗಳ ಮೂಲಕ ಹೇಳಲು ಬಯಸ್ತೇನೆ. ನಂಗೆ ಸಿನಿಮಾ ಮಾಡಲು ಒಂದೊಳ್ಳೆ ಪಾತ್ರ ಸಿಕ್ಕರೆ ಸಾಕು. ಇದು ತಪ್ಪು ಅಂತ ಗೊತ್ತು. ಇಲ್ಲಿ ಸಿನಿಮಾ ಮಾಡಬಯಸುವ ನಿರ್ದೇಶಕರಿಗೆ ಹೇಳೋದು ಒಳ್ಳೆ ಕಥೆ ಇಟ್ಕೊಂಡು ಸಿನಿಮಾ ಮಾಡಿ.

ಇನ್ನಷ್ಟು ಒಳ್ಳೆಯ ಸಂವಾದ ಅಲ್ಲಿ ನಡೆಯಿತು. ಮೆದುಳಿಗೆ ಒಳ್ಳೆ ಮೇವು ದೊರಕಿಂದಂತೆ ಸಂತೃಪ್ತಿಯಿಂದ ಹೊರಬಂದೆ.

ಅವಧಿ, ಓದುಗರ ಬಳಿ ಕಳೆದ ವರ್ಷ ಓದಿದ ಬೆಸ್ಟ್ ಪುಸ್ತಕಗಳ ಟಾಪ್ ಟೆನ್ ಪಟ್ಟಿ ಕೇಳ್ತಿದೆ. ಅದನ್ನು ನೋಡಿದಾಗ ನನಗೂ ಪಟ್ಟಿ ಮಾಡಬೇಕನ್ನಿಸಿತು. ಕಳೆದ ವರ್ಷ ಓದಿದ ತುಂಬಾ ಕಾಡಿದ ಪುಸ್ತಕಗಳ ಪಟ್ಟಿ ಇದು:-

೧. ಚಾರ್ಮಿನಾರ್ – ಜಯಂತ್ ಕಾಯ್ಕಿಣಿ

೨. The Professional – Subrato Bagchi

೩. ಹಲಗೆ ಬಳಪ – ಜೋಗಿ

tAzaELrA

೪. ಟೆಂಟ್ ಸಿನಿಮಾ – ಬೀಚಿ

೫. ಆಕಾಶಕ್ಕೊಂದು ಕಂದೀಲು! – ವ್ಯಾಸರಾಯ ಬಲ್ಲಾಳ

೬. ಅನುದಿನದ ಅಂತರಗಂಗೆ – ಪ್ರತಿಭಾ ನಂದಕುಮಾರ್

cDuUwUF6

೭. ಬಾಳ್ವೆಯೇ ಬೆಳಕು – ಡಾ. ಶಿವರಾಮ ಕಾರಂತ

೭. ಕಲ್ಲು ಕರಗುವ ಸಮಯ – ಪಿ.ಲಂಕೇಶ್

೮. The Winning Way – Harsha Bhogle

೯. What Young India Wants – Chethan Bhagat

ChetanBhagatWhatYoungIndiaWantsEDIT

೧೦. ಎದೆಗಾರಿಕೆ – ಅಗ್ನಿ ಶ್ರೀಧರ್

ಇತ್ತೀಚೆಗೆ ಒಂದು ಕನ್ನಡ ಸಿನೆಮಾ ಗೆ ಹೋಗಿದ್ದೆ.

ಆ ಸಿನೆಮಾ ಸ್ವಲ್ಪ ಹಳೆಯದು. ಬಿಡುಗಡೆಯಾಗಿ ಹತ್ತಿರ ಹತ್ತಿರ ೫೦ ದಿನ ಆಗಿತ್ತು. ಒಂದಿಬ್ಬರು ಸಿನೆಮಾ ಗೆಳೆಯರು ಚೆನ್ನಾಗಿದೆ ಮಾರಾಯ ಮಿಸ್ ಮಾಡ್ಬೇಡ ಅಂದಿದ್ದರಿಂದ ಟೀವಿಯಲ್ಲಿ ಜಾಹೀರಾತಿನ ಮಧ್ಯೆ ನೋಡಬೇಕಾದ ದೌರ್ಭಾಗ್ಯ ಬೇಡ ಅಂದುಕೊಂಡು ಥಿಯೇಟರ್ ಗೆ ಹೊರಟಿದ್ದೆ.

ಅವತ್ತು ಶನಿವಾರ. ದಿನದ ಕೊನೆಯ ಶೋ. ಟಿಕೆಟ್ ಸಿಗದಿದ್ದರೆ ತೊಂದರೆ ಅಂದುಕೊಳ್ಳುತ್ತಾ ಬೇಗ ಹೆಜ್ಜೆ ಹಾಕಿದ್ದೆ. ಅಲ್ಲಿ ಥಿಯೇಟರ್ ಕಾಯುತ್ತಿದ್ದ ತಾತಪ್ಪ, ಇನ್ನೂ ಶೋ ಬಿಟ್ಟಿಲ್ಲ ಕಾಯಿರಿ ಅಂದ. ಪಕ್ಕದಲ್ಲೇ ಇದ್ದ ಅಡಿಗಾಸ್ ಗೆ ಹೋಗಿ ಟೀ ಏರಿಸಿಕೊಂಡು ಬರುವ ಹೊತ್ತಿಗೆ ಶೋ ಬಿಟ್ಟಿತ್ತು. ಟಿಕೆಟ್ ಕೌಂಟರ್ ಗೆ ಹೋಗಿ ಒಂದು ಬಾಲ್ಕನಿ ಕೊಡಿ ಅಂದೆ. ಕಿಂಡಿಯ ಒಳಗಿಂದ ಎರಡು ಕಣ್ಣು ಇಣುಕಿ, ’ಸರ್, ಬಾಲ್ಕನಿಯಲ್ಲಿ ನೀವೊಬ್ಬರೇ ಕೂರಬೇಕಾದೀತು ಪರವಾಗಿಲ್ಲವಾ" ಅಂತ ಕೇಳಿದ. ಯಾಕೆ ಸರ್ ಇವತ್ತು ಶನಿವಾರ ಅಲ್ಲವ್ರಾ? ಜನ ಬರಬಹುದು ಅಂದೆ. ಅವನಿಗೆ ಅವನ ಮೇಲೆ ಬೇಜಾನ್ ಆತ್ಮವಿಶ್ವಾಸ ಇತ್ತು. ಇಲ್ಲ ಸರ್, ಜನ ಬರ್ತಾ ಇಲ್ಲ, ನೋಡೋಣ ಈಗ ಫಸ್ಟ್ ಕ್ಲಾಸ್ ಟಿಕೆಟ್ ತಗೊಳ್ಳಿ ನಂತರ ಯಾರಾದರೂ ಬಂದರೆ ಬದಲಾಯಿಸಿ ಕೊಡ್ತೇನೆ ಅಂದ.

ಒಳಗೆ ಬಿಡದ್ದರಿಂದ ಮತ್ತು ತುಂತುರು ಮಳೆ ಶುರುವಾಗಿದ್ದರಿಂದ ಬಾಗಿಲಬಳಿ ಕೂತಿದ್ದೆ. ಏಳೂವರೆಯಾದರೂ ಬೇರೆ ಯಾರೂ ಪತ್ತೆ ಇಲ್ಲ. ಚಿತ್ರ ನೋಡುವುದರ ಬಗ್ಗೆ ಎಷ್ಟು ಆಸೆ ಇಟ್ಟುಕೊಂಡಿದ್ದೆ ಛೇ ಯಾರೂ ಬರದೇ ಹೋದರೆ ಶೋ ಕ್ಯಾನ್ಸಲ್ ಮಾಡಿಸುತ್ತಾರಾ? ಆಗ ನಾನು ಯಾವ ರೀತಿ ಗಲಾಟೆ ಮಾಡಬೇಕು ಅಂತೆಲ್ಲಾ ಯೋಚಿಸುತ್ತಾ ಕೂತೆ.

ಇನ್ನೊಬ್ಬ ಬಂದ. ನನ್ನ ಮುಖ ಅರಳಿತು. ಆತ ಟಿಕೆಟ್ ಕೊಳ್ಳದೇ ಥಿಯೇಟರ್ ಸಿಬ್ಬಂದಿ ಜತೆ ಮಾತಾಡ್ತಾ ಇದ್ದಿದ್ದರಿಂದ ಅವನೂ ಸಿಬ್ಬಂದಿವರ್ಗದವನೇ ಆಗಿದ್ದುದು ಮನವರಿಕೆಯಾಯಿತು. ಆತನೂ ನನ್ನ ಬಳಿಯೇ ಬಂದು ಕೂತ. ಸಮಯ ಆಗಲೇ ಏಳೂ ಮೂವತ್ತೈದು. ಸುಮ್ಮನೆ ಅವನನ್ನು ಕೇಳಿದೆ, ಏನ್ರೀ ಯಾರೂ ಇಲ್ಲ ಈ ಸಿನೆಮಾಕ್ಕೆ ಅಂತ. ಅದಕ್ಕವ, ನೀವೂ ಹೋಗ್ಬಿಡಿ ಸರ್, ಎದುರ್ಗಡೆ ಇರೋ ಥಿಯೇಟರ್ ನಲ್ಲಿ ಮಸ್ತ್ ಪಿಕ್ಚರ್ ಇದೆ.. ಅಂದ. ಕುತೂಹಲದಿಂದ ಯಾವುದು ಕೇಳಿದಾಗ "ತೆಲುಗು, ಗಬ್ಬರ್ ಸಿಂಗ್" ಅಂದ. ಮತ್ತೇನೂ ಮಾತಾಡದೇ ಸುಮ್ಮನಾದೆ.

ಇನ್ನು ಒಂದೆರಡು ನಿಮಿಷ ಆದ ಕೂಡಲೇ ಇನ್ನೊಬ್ಬ ವ್ಯಕ್ತಿ ಬಂದ. ಸಿನೆಮಾ ಶುರುಮಾಡಿದರು. ಇಬ್ಬರೇ ಎರಡು ಮೂಲೆಯನ್ನಲಂಕರಿಸಿ ಕೂತೆವು.

ಚಲನಚಿತ್ರ ಶುರುವಾಯಿತು.

ಮಧ್ಯೆ ಇಂಟರ್ ವಲ್ ಬಿಟ್ಟಾಗ ನನಗೆ ಬಂದಿದ್ದ ಒಂದೆರಡು ಮಿಸ್ಡ್ ಕಾಲ್ ಗಳಿಗೆ ಕಾಲ್ ಮಾಡಿ ಉತ್ತರಿಸುತ್ತಾ ನಿಂತಿದ್ದಾಗ, ನನ್ನ ಕನ್ನಡ ಸಿನೆಮಾ ಪ್ರೀತಿಗೆ ಬರೆ ನೀಡುವಂತೆ ಅಲ್ಲಿನ ವ್ಯವಸ್ಥಾಪಕ ಬಂದು, ’ಸರ್, ಫಿಲ್ಮ್ ಪೂರ್ತಿ ನೋಡ್ತೀರಾ?" ಅಂತ ಕೇಳಿದ.

******

ಇನ್ನೊಂದು ಶನಿವಾರ. ಹಿಂದಿನ ದಿನವೇ ಒಂದು ಡೈಮಂಡ್ ಸ್ಟಾರ್ ಫಿಲಂ ಬಿಡುಗಡೆ ಆಗಿತ್ತು. ನಾನಿರುವ ಸ್ಥಳದಲ್ಲಿ ಯಾವುದು ಹತ್ತಿರದ ಮಲ್ಟಿಪ್ಲೆಕ್ಸ್ ಅಂತ ಹುಡುಕಿ ಅಲ್ಲಿ ಬಿಡುಗಡೆಯಾಗಿದ್ದು ನೋಡಿ ಬಹಳ ಖುಷಿಯಾಯಿತು. ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಬಗ್ಗೆ ತಿಳಿದಿರುವವರಿಗೆ ಅನುಭವವಿರುತ್ತದೆ ಅಲ್ಲಿ ಸಾಮಾನ್ಯವಾಗಿ ಕನ್ನಡ ಸಿನೆಮಾ ಹಾಕೋಲ್ಲ, ಅದರಲ್ಲೂ ಬಿಡುಗಡೆ ಭಾಗ್ಯ ಸಿಗುವುದು ಕೆಲವೇ ಕೆಲ ಸಿನೆಮಾಗೆ ಮಾತ್ರ!

ಖುಷಿಯಿಂದ ಇಂಟರ್ನೆಟ್ ನಿಂದನೇ ಟಿಕೆಟ್ ಕಾದಿರಿಸೋಣ ಅಂತ ನೋಡಿದರೆ ಕೊನೆಯ ಸಾಲು ಹೊರತುಪಡಿಸಿ ಮಿಕ್ಕೆದ್ದೆಲ್ಲಾ ಖಾಲಿ ಇದ್ದವು. ಈ ಏರಿಯಾದ ಜನ ಜಾಸ್ತಿ ಕನ್ನಡ ಫಿಲಮ್ಸ್ ನೋಡುವುದಿಲ್ಲ, ಟಿಕೆಟ್ ಸಿಗುತ್ತದೆ, ಅಲ್ಲಿಯೇ ಹೋಗಿ ಕೊಂಡರಾಯ್ತು ಅಂತ ಹೊರಟೆ.

ಹೊರಟಾದ ನಂತರ ಒಂಥರಾ ಆಗತೊಡಗಿತು, ಒಂದು ವೇಳೆ ಟಿಕೆಟ್ ಸಿಗದೇ ಹೋದರೆ ಅಂತ. ಮೊಬೈಲಿನ ರೇಡಿಯೋ ಕೇಳುತ್ತಾ ಆ ಭಾವವನ್ನು ನೆಗ್ಲೆಕ್ಟ್ ಮಾಡಿದೆ.
ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಒಂದರ್ಧ ಘಂಟೆ ಮುಂಚಿತವಾಗಿಯೇ ತಲುಪಿದೆ.
 
ಟಿಕೆಟ್ ಕೌಂಟರ್ ನಲ್ಲಿ ಆ ಕನ್ನಡ ಸಿನೆಮಾ ದ ಹೆಸರು ಹೇಳಿದೆ. ಆತ " ಇಲ್ಲ ಸರ್, ಆ ಶೋ ಕ್ಯಾನ್ಸಲ್ ಆಗಿದೆ"

ಒಂಥರಾ ಶಾಕ್ ನಿಂದ ಆ ಸಾಲು ಸರಿಯಾಗಿ ಕೇಳಿಸಲಿಲ್ಲ. ಅದು ಆತನಿಗೆ ತಿಳಿಯಿತೆಂಬಂತೆ,

"ಹೌದು ಸರ್.. ಶೋ ಕ್ಯಾನ್ಸಲ್ ಆಗಿದೆ" ಅಂದ!

****

ಮನೆಗೆ ಬಂದು ಪೇಪರ್ ಓದುತ್ತಿದ್ದಾಗ ಎರಡು ಕನ್ನಡ ಚಿತ್ರಗಳು ಥಿಯೇಟರ್ ಸಮಸ್ಯೆಯಿಂದಾಗಿ ಜಗಳ ಆಡುತ್ತಿದ್ದ ಬಗ್ಗೆ ಪ್ರಸ್ತಾಪವಿತ್ತು.

ಬೆಂಗಳೂರಿನಲ್ಲಿ ಆಟೋದಲ್ಲಿ ತಿರುಗಲು ಶುರುಮಾಡಿದ ಮೇಲೆ ಈ ಕೆಳಗೆ ಪಟ್ಟಿಮಾಡಿರುವುದನ್ನೆಲ್ಲಾ ಪರಿಸ್ಥಿತಿ ಕಲಿಸುತ್ತದೆ.

೧. ಸ್ಟಾಂಡ್ ನಲ್ಲಿರೋ ಆಟೋಗಿಂತ ರಸ್ತೆಯಲ್ಲಿ ಖಾಲಿ ಹೋಗುತ್ತಿರುವ ಆಟೋ ದಿಂದ ಮೋಸ ಹೋಗುವ ಅಪಾಯ ಕಡಿಮೆ

೨. ಒಮ್ಮೆ ಅಡ್ರೆಸ್ ಸರಿಯಾಗಿ ಹೇಳಿದ ಮೇಲೆಯೂ ’ಎಲ್ಲಿ ಆ ಶಾಪ್ ನ ಹತ್ತಿರವಾ? ಅಂತ ಆಟೋದವ ಪ್ರಶ್ನೆ ಮಾಡುತ್ತಿದ್ದರೆ, ಜಾಸ್ತಿ ಎಷ್ಟು ಕೇಳಲಿ ಅಂತ ಅಲೋಚಿಸಲು ಆತ ಸಮಯ ತೆಗೆದುಕೊಳ್ತಾ ಇದಾನೆ ಅಂತ ಅರ್ಥ.

೩. ಯಾವಾಗಲೂ ಮೀಟರ್ ದರದ ಮೂಲಕವೇ ಮಾತಾಡಿ. ಸುಮ್ಮನೆ ಇಲ್ಲಿಗೆ ಇಂತಿಷ್ಟು ಅಂತ ನಿಜವಾಗಿಯೂ ನೀವು ವಾದ ಮಾಡೋದಿದ್ದರೆ ನಿಮಗೆ ನೀವಿರುವ ಸ್ಥಳದಿಂದ ಹೋಗಬೇಕಾದ ಸ್ಥಳಕ್ಕಿರುವ ದೂರ ಕರೆಕ್ಟಾಗಿ ತಿಳಿದಿರಬೇಕಾಗುತ್ತದೆ.

೪. ಆಟೋ ಹತ್ತಿರ ಡ್ರೈವರ್ ಗೆಳೆಯರೂ ಇದ್ದರೆ ನೀವು ಮೋಸಹೋಗಬಹುದಾದ ಪ್ರಮಾಣ ಡಬಲ್ ಆಗಿರುತ್ತದೆ.

೫. ಮೀಟರ್ ದರಕ್ಕಿಂತ ಚೂರೂ ಜಾಸ್ತಿ ನೀಡೋಲ್ಲ ಅಂತ ಅನ್ನಿ. ನಿಜ, ನಿಮಗೆ ಅರ್ಜೆಂಟಿದೆ, ನೀವು ಕೊಡಬಲ್ಲಿರಿ.. ಆದರೆ ಆ ಆಟೋದವನು ಅದನ್ನೇ ತನ್ನ ಅಡ್ವಾಂಟೇಜ್ ರೀತಿ ತೆಗೆದುಕೊಳ್ತಾನೆ. ಕೊಡಲಾಗದವರ ಹತ್ತಿರವೂ ಅದೇ ಪಾಲಸಿ ಉಪಯೋಗಿಸುತ್ತಾನೆ.

 

ಆಟೋದವರಿಂದ ಮೋಸ ಹೋಗದಂತಿರಲು ಈ ಕೆಳಗಿನ ಪಾಲಸಿಯನ್ನು ಪಾಲಿಸಿ:-

ಆಟೋದವರು ಈ ರೀತಿಯಾಗೆಲ್ಲಾ ಮಾಡಬಲ್ಲರು :- ಒಂದು ಸ್ಥಳಕ್ಕೆ ಬರುವುದನು ನಿರಾಕರಿಸುವುದು, ಮೀಟರ್ ಗಿಂತ ಜಾಸ್ತಿ ಹಣ ಕೇಳುವುದು, ಮೀಟರ್ ಹಾಳಾಗಿರುವುದು, ಹೋಗಬೇಕಾಗಿರುವ ಸ್ಥಳ ತಲುಪಿಸದಿರುವುದು, ವೇಗವಾಗಿ ಓಡಿಸುವುದು, ಆಟೋ ನಂಬರ್ ನ್ನು ಒಳಗೆ ಪ್ರಯಾಣಿಕ ಕೂತಾಗ ಕಾಣುವ ಜಾಗದಲ್ಲಿ ಹಾಕದಿರುವುದು.

ಮೊದಲೆರಡು ಅಂದರೆ ಪ್ರಯಾಣಿಕರು ಇಂಥ ಸ್ಥಳಕ್ಕೆ ಹೋಗಬೇಕಾಗಿದೆ ಅಂದಾಗ ಅಲ್ಲಿಗೆ ಬರಲ್ಲ ಎನ್ನುವುದು, ಮತ್ತು ಮೀಟರ್ ಗಿಂತ ಜಾಸ್ತಿ ಹಣ ಕೇಳುವುದು ಇವೆರಡನ್ನೂ ಕೇವಲ ಒಂದು ಎಸ್ ಎಮ್ ಎಸ್ ಮೂಲಕ ಕಂಪ್ಲೈಂಟ್ ಮಾಡಬಹುದು.

ಇಂಥ ಸ್ಥಳಕ್ಕೆ ಬರುವುದಿಲ್ಲ ಅಂದಾಗ ಕೂಡಲೇ, “Auto ref ಆಟೋನಂಬರ್ ಎಲ್ಲಿಂದಎಲ್ಲಿಗೆ ಸಮಯ” ಅನ್ನುವುದನು ಟೈಪಿಸಿ ೫೨೨೨೫ನ್ ಕ್ಕೆ ಎಸ್ ಎಂ ಎಸ್ ಕಳಿಸಿದರೆ ಸಾಕು. ಉದಾಹರಣೆಗೆ Auto ref KA02YY0123 KR Puram to Indiranagar 6PM ಅಂತ ಟೈಪಿಸಿ ೫೨೨೨೫ ಗೆ ಕಳುಹಿಸಿ.

ಒಂದು ವೇಳೆ ಜಾಸ್ತಿ ಹಣ ಕೇಳುತ್ತಾರಾದರೆ, “Auto ovr ಆಟೋನಂಬರ್ ಎಲ್ಲಿಂದಎಲ್ಲಿಗೆ ಸಮಯ” ಅಂತ ಟೈಪಿಸಿ ೫೨೨೨೫ ಗೆ ಎಸ್ ಎಮ್ ಎಸ್ ಕಳುಹಿಸಿ. ಉದಾಹರಣೆಗೆ Auto ref KA02YY0123 KR Puram to Indiranagar 6PM ಅಂತ ಟೈಪಿಸಿ ೫೨೨೨೫ ಗೆ ಎಸ್ ಎಂ ಎಸ್ ಕಳುಹಿಸಿ.

ನೆನಪಿಡಿ ನೀವು ಹೇಗೆ ಮಾಡುವುದರಿಂದ ನೀವು ಮೋಸಹೋಗುವುದಷ್ಟೇ ತಡೆಗಟ್ಟುವುದಷ್ಟೇ ಅಲ್ಲದೇ ಸ್ವಸ್ಥ ಸಮಾಜ ರೂಪುಗೊಳ್ಳುವುದಕ್ಕೆ ಸಹಾಯವೂ ಆಗುತ್ತದೆ. ಅಲ್ಲದೇ ಹೆಚ್ಚು ಲಂಚ ಕೇಳುವುದರಲ್ಲಿ ಜನಸಾಮಾನ್ಯ ಹೆಚ್ಚು ತೊಂದರೆ ಗೀಡು ಮಾಡುವುದರಲ್ಲಿ ಮೂರನೇ ಸ್ಥಾನದಲ್ಲಿರುವ ಆಟೋ ಮೋಸವನ್ನು ನಿಯಂತ್ರಣದಲ್ಲಿಡಬಲ್ಲುದು.

ನಿಮ್ಮ ಮನೆಯಲ್ಲಿ ಓದಬಲ್ಲಂಥ ಮಕ್ಕಳಿದ್ದರೆ ಅನುಪಮಾ ನಿರಂಜನ ಬರೆದ ’ದಿನಕ್ಕೊಂದು ಕಥೆಗಳು ಸೀರೀಸ್" ಓದಲು ನೀಡಿ.

ಒಟ್ಟೂ ಹನ್ನೆರಡು ಪುಸ್ತಕಗಳು. ಒಂದು ಪುಸ್ತಕ ಶುರು ಮಾಡಿದರೆ ಮಕ್ಕಳೇ ಪೀಡಿಸಿ ಕೇಳುವಂಥ ಕಥೆಗಳಿವೆ. ಮಜವಾದ ಕಥೆಗಳ ಜತೆಗೆ ನೀತಿಯುಕ್ತವಾಗಿಯೂ ಉಳ್ಳಂಥ ಪುಟ್ಟ ಪುಟ್ಟ ಕಥೆಗಳು. ಮಕ್ಕಳ ಊಹಿಸಬಲ್ಲಂಥ, ಓದಿ ಅರ್ಥಮಾಡಿಕೊಳ್ಳಬಲ್ಲಂಥ, ಗ್ರಹಿಸಿಕೊಳ್ಳುವಂಥ ಕಲೆ ವಿಪರೀತ ಅಭಿವೃದ್ಧಿಯಾಗುತ್ತದೆ. ಮಕ್ಕಳ ಮೆದುಳಿಗೆ ಕಲ್ಪನೆಯ ರೆಕ್ಕೆಗಳು ಮೂಡುವುದು ಇಂಥದ್ದನ್ನು ಓದಿಯೇ. ದೃಶ್ಯಮಾಧ್ಯಮಗಳು ಈ ರೀತಿಯ ಕಲ್ಪನೆಯ ಅಭಿವೃದ್ಧಿಗೆ ಅವಕಾಶ ನೀಡುವುದಿಲ್ಲ ಯಾಕೆಂದರೆ ಕಥೆ ನಡೆವಂಥ ಜಗತ್ತು ಕಾಣ್ತಾವೆ. ಆದರೆ ಕಥೆ ಪುಸ್ತಕ ಹಾಗಲ್ಲ, ಸಾಲುಗಳು ಆ ಕಥಾಜಗತ್ತಿಗೆ ದ್ವಾರವಿದ್ದಂತೆ, ಪದಗಳ ಮೂಲಕ ಹೆಜ್ಜೆಯಿಡುತ್ತ ಮಕ್ಕಳು ಆ ಲೋಕದೊಳಗೆ ಪ್ರವೇಶಿಸುತ್ತವೆ. ಅದೂ ಅಲ್ಲದೇ ನೀತಿ, ನಿಯತ್ತು, ಶ್ರದ್ಧಾ ಪಾಠ, ಸತ್ಯದ ಮಹಿಮೆ ಇವೆಲ್ಲವೂ ಟೀವಿ ಸೀರಿಯಲ್ಲುಗಳಲ್ಲಿ, ಹೊರಜಗತ್ತಿನಲ್ಲಿ ಸಿಗುವುದು ಕಡಿಮೆ. ನಾವು ಹೇಳಿಕೊಡುವುದು ಮಕ್ಕಳಿಗೆ ರಂಜನೀಯವೆನಿಸವು. ಕಥೆಗಳೇ  ಒಳ್ಳೇ ಟೀಚರ್ ನಂತೆ ಇಂಥ ಸಮಯದಲ್ಲಿ ಸಹಾಯ ಮಾಡುತ್ತದೆ. ಮಕ್ಕಳನ್ನು ತನ್ನ ಲೋಕದೊಳಗೇ ಸೆಳೆದು ಅವಕ್ಕೆ  ಕಾನ್ಶಿಯಸ್ ಆಗಿ ಅರಿವಾಗದಂತೆ ಪಾಠ ಹೇಳುತ್ವೆ.

ಅಕ್ಬರ್ ಬೀರ್ ಬಲ್ ಕಥೆಗಳೂ, ಈಸೋಪನ ನೀತಿಕಥೆಗಳೂ, ತೆನಾಲಿ ರಾಮನ ಕಥೆಗಳೂ ಹಾಗೆನೆ ಇದ್ದರೂ ಅವೆಲ್ಲಾ ಟೀವಿಯಲ್ಲಿ ಬರುತ್ತವಾದ್ದರಿಂದ ಕಾರ್ಟೂನ್ ನೆಟ್ ವರ್ಕ್ ನಂತಹ ಚಾನೆಲ್ ಗಳಲ್ಲಿ ಮಕ್ಕಳು ನೋಡಿಯೇ ಇರ್ತಾವೆ.

ನಿಜಕ್ಕೂ ಮಕ್ಕಳ ಭವಿಷ್ಯಕ್ಕೆ ಕಥೆ ಓದುವುದಕ್ಕೆ ಮೀಸಲಿಟ್ಟ ಸಮಯವೂ, ವಿನಿಯೋಗಿಸಿದ ಹಣವೂ ಒಳ್ಳೆಯ ಇನ್ವೆಸ್ಟ್ ಮೆಂಟ್.

ಮುಂದಿನ ತಲೆಮಾರು ಇಂಥ ಒಳ್ಳೆ ಪುಸ್ತಕ ಮಿಸ್ ಮಾಡಿಕೊಳ್ಳುತ್ತೇನೋ ಎಂಬ ಭಯಮಿಶ್ರಿತ ಕಾಳಜಿಯಿಂದ ನನ್ನ ಈ ರೆಕಮೆಂಡೇಶನ್ ಪೋಸ್ಟ್ ಮಾಡ್ತಿದ್ದೇನೆ.

 

*******

 

ನಾನು ಹಾಸ್ಟೆಲ್ ನಲ್ಲಿ ಓದುತ್ತಿದ್ದ ಸಮಯ. ಜತೆಗಾರರೆಲ್ಲರೂ ಕೋಲಾರದಿಂದ ಬಂದವರು. ತೆಲುಗು ಭಾಷೆ ಅವರಿಗೆ ಕರತಲಾಮಲಕ. ಸಿನೆಮಾ ಬಗ್ಗೆ ಮಾತಾಡುವಾಗೆಲ್ಲಾ ರಾಜೇಂದ್ರ ಪ್ರಸಾದ್, ಬ್ರಹ್ಮಾನಂದಂ ರ ಹಾಸ್ಯ ದೃಶ್ಯಗಳನ್ನು ವಿವರಿಸುತ್ತಿದ್ದರೆ ಬಿದ್ದು ಬಿದ್ದು ನಗುವಂತಾಗುತ್ತಿತ್ತು. ಅವರ ಹಾಸ್ಯ ಸಿನೆಮಾಗಳನ್ನು ನೋಡಲಿಕ್ಕಾಗಿಯೇ ನಾನು ತೆಲುಗು ಭಾಷೆ ಕಲಿತಿದ್ದಾಯಿತು. ಸ್ವಲ್ಪ ವರ್ಷಗಳ ಬಳಿಕ ವಡಿವೇಲು, ವಿವೇಕ್ ರ ಹಾಸ್ಯ ದೃಶ್ಯಗಳಿಗಾಗಿ ತಮಿಳೂ ಕಲಿತಿದ್ದಾಯಿತು. ಈಗ ಮಲೆಯಾಳಮ್ ಚಿತ್ರಗಳ ಕತೆಗಳ ಸೊಗಸನ್ನು ಕೇಳಿ ಮಲೆಯಾಳಮ್ ಕೂಡ ಕಲಿಯಬೇಕನ್ನಿಸುತ್ತಿದೆ.

ಒಂದು ವೇಳೆ ಆ ಚಿತ್ರಗಳು ಕನ್ನಡಕ್ಕೆ ಡಬ್ ಆಗಿದ್ದಿದ್ದರೆ ನಾನು ತೆಲುಗು, ತಮಿಳು ಕಲಿವ ಅಗತ್ಯತೆ ಇತ್ತಾ? ಮಲೆಯಾಳಮ್ ಕಲಿವ ಆಸೆ ಹುಟ್ಟುತ್ತಿತ್ತಾ?

ಹಾಗಂತ ನಾನು ಡಬ್ಬಿಂಗ್ ಪರವಾ? ಅಥವ ವಿರೋಧಿಯಾ? ಈಗಲೂ ಡಬ್ಬಿಂಗ್ ಬಂದರೆ ಮಲೆಯಾಳಮ್ ಕಲಿವ ಆಸೆಯನ್ನು ಕೈಬಿಡುತ್ತೇನೆ
ಮತ್ತು ಡಬ್ಬಿಂಗ್ ಬರದಿದ್ದರೆ ಮಲೆಯಾಳಮ್ ಕಲಿಯುತ್ತೇನೆ.

ಮತ್ತು ನನಗೆ ಬರುವ ಹಿಂದಿ ಭಾಷೆಯ, ತಮಿಳಿನ, ತೆಲುಗಿನ, ಇಂಗ್ಲೀಷ್ ನ ಯಾವ ಡಬ್ಬಿಂಗ್ ಆದ ಸಿನೆಮಾವನ್ನೂ ನೋಡಲಾರೆ. ಕನ್ನಡ ಮಾತಾಡುವ ಆರ್ನಾಲ್ಡ್ ಶ್ವಾಜ್ನಗರ್ ಚಿತ್ರ, ಕನ್ನಡ ಮಾತಾಡುವ ವಿಲ್ ಸ್ಮಿತ್ ಚಿತ್ರಗಳು ನನಗೆ ಅಪಹಾಸ್ಯ ಅನ್ನಿಸುತ್ತದೆ. ಹಾಗೇನೆ ಮಮ್ಮುಟ್ಟಿ, ಮೋಹನ್ ಲಾಲ್ ಮಾತಾಡುವ ಕನ್ನಡ ನನಗೆ ವಿಚಿತ್ರ ಅನ್ನಿಸದು, ಕಾರಣ ಮಲೆಯಾಳಿ ಭಾಷೆ ಬರುವುದಿಲ್ಲ. ಮಲೆಯಾಳಮ್ ನ ಸ್ಲಾಂಗ್, ಅದರ ಭಾಷೆಯ ಏರಿಳಿತದ ಪರಿಚಯವಿಲ್ಲವಾದ್ದರಿಂದ.

ನಾನು ಡಬ್ಬಿಂಗ್ ಪರವಾ ವಿರೋಧಿಯಾ? ಗೊತ್ತಿಲ್ಲ.

ಒಂದಂತೂ ನಿಜ. ನಾನು ಚಿತ್ರ ಚೆನ್ನಾಗಿದ್ದರೆ ನೋಡ್ತೇವೆ, ಇಲ್ಲಾಂದರೆ ಇಲ್ಲ. ಡಬ್ಬಿಂಗೇ ಆಗಿರಬಹುದು ಅಥವಾ ಕನ್ನಡ ಚಿತ್ರವೇ ಆಗಿರಬಹುದು- ಹೀಗೆ ಅನ್ನುವವರ ಪರ.

 

****

 

ಒಬ್ಬ ಖ್ಯಾತ ಚಿತ್ರಸಾಹಿತಿ ಇದ್ದಾನೆ ಅಂದುಕೊಳ್ಳೋಣ. ಆತನ ಕೈಗೆ ಕಾಲಿಗೆ ಅಸಿಸ್ಟೆಂಟುಗಳು. ಆತ ಬರೆದರೆ ಮ್ಯೂಸಿಕ್ ಸೀಡಿ ಗೆ ಒಳ್ಳೆ ಸೇಲು. ಚಿತ್ರಕ್ಕೆ ಒಳ್ಳೆ ಜಾಹೀರಾತು. ಕೆಲವೊಮ್ಮೆ ಚಿತ್ರಕ್ಕಿಂತ ಆತನ ಗೀತೆಗಳೇ ಬಲು ಮಜ ಅನ್ನಿಸುತ್ತದೆ ಜನರಿಗೆ. ಹೀಗಿರುವಾಗ ಆತ ತನ್ನ ಸಂಭಾವನೆಯನ್ನು ಹಿಮಾಲಯದ ತುದಿಗೆ ಏರಿಸುತ್ತಾನೆ.  ನಿರ್ಮಾಪಕರೂ ತಲೆ ಕೆರೆದುಕೊಳ್ಳದೇ ಕೈಬಿಚ್ಚಿ ಲಕ್ಷವೆಂದರೂ ನೀಡುತ್ತಾರೆ ಅಂದುಕೊಳ್ಳೋಣ. ಹೀಗೇ ನಡೆಯುತ್ತಿರುತ್ತದೆ.
ಆದರೆ ಈ ಬರವಣಿಗೆ ಕೆಲವೊಮ್ಮೆ ಒಲಿಯುವುದಿಲ್ಲ, ತಲೆಯನ್ನು ಪರಾಪರಾ ಕೆರೆದುಕೊಂಡರೂ ಹೊಳೆಯುವುದಿಲ್ಲ. ಖಾಲಿ ಹಾಳೆಗಿಂತ ಒಳ್ಳೆಯ ಕವನ ಇಲ್ಲ ಅಂತ ಬರೆಯಬಹುದಾದರೂ ಅದಕ್ಕೆ ಸಂಭಾವನೆ ಸಿಗುವುದಿಲ್ಲ.

ಹೀಗಿರುವಾಗ ಆ ಗುರುವಿಗೊಬ್ಬ ಅಸಿಸ್ಟೆಂಟು. ಗುರುವುಗಿಂತ ಅದ್ಭುತವಾಗಿ ಬರೆಯಬಲ್ಲ. ಅದು ಗುರುವಿಗೂ ಗೊತ್ತು. ಆದರೆ ಆತ ಒಂದು ಹಾಡು ಬರೆದರೆ ಆತನಿಗೆ ಸಿಗುವುದು ಗರಿಷ್ಟವೆಂದರೆ ೫ ರಿಂದ ಹತ್ತು ಸಾವಿರ. ಕಾರಣ ಆತನಿನ್ನೂ ಹೊಸಬ. ಹೆಸರಿಲ್ಲ. ಹೀಗಿರುವಾಗ ಗುರುವಿಗೊಮ್ಮೆ ಐಡಿಯಾ ಹೊಳೆಯುತ್ತದೆ. ’ಶಿಷ್ಯಾ, ನೀನು ಬರಿ, ನಿರ್ಮಾಪಕರ ಬಳಿ ನಾನು ಬರೆದಿದ್ದು ಅಂತೇನೆ. ನಿರ್ಮಾಪಕ ಕೊಟ್ಟ ಲಕ್ಷವನ್ನು ನಿನಗೆ ಕೊಡ್ತೇನೆ, ಸರಿಯಾ?’ ಅಷ್ಟು ದೊಡ್ಡ ಅಮೌಂಟು ಕನಸಿನಲ್ಲೂ ಎಣಿಸಿರದ ಶಿಷ್ಯನು ಹಿಂದೆ ಮುಂದೆ ಬರೆದು ಬರೆದು ಕೊಡುತ್ತಾನೆ. ಲಕ್ಷ ಲಕ್ಷ ಎಣಿಸುತ್ತಾನೆ.

ಗುರು ಖುಷ್, ಶಿಷ್ಯ ಖುಷ್, ನಿರ್ಮಾಪಕ ಖುಷ್, ಜನರೂ ಖುಷ್!

ಸರ್ವೇ ಜನಾಃ ಸುಖಿನೋ ಭವಂತಿ!

ಇದು ಕಥೆ.

ಒಂದು ವೇಳೆ ಇದು ಯಾವ ವ್ಯಕ್ತಿ, ಘಟನೆ, ಸ್ಥಳಕ್ಕೆ ಹೋಲಿಕೆಯುಳ್ಳದ್ದಾದರೆ ಅದು ಕೇವಲ ಕಾಕತಾಳೀಯ!

******

 

ಕಾಲೇಜಿನ ದಿನಗಳಲ್ಲಿ ಅಮ್ಮನನ್ನು ಕರೆದು, ಬೆಂಗಳೂರು ತೋರಿಸುವ ಇರಾದೆ ತುಂಬಾ ಇರುತ್ತಿದ್ದರೂ ಆಟೋದಲ್ಲಿ ಸುತ್ತಿಸುವಷ್ಟು ಆರ್ಥಿಕ ಪರಿಸ್ಥಿತಿಯಲ್ಲಿರದೇ ಬಸ್ಸಿನಲ್ಲಿ ಕರೆದೊಯ್ಯಲು ಒಂದು ರೀತಿಯ ಭಯವಿರುತ್ತಿತ್ತು. ಭಯಕ್ಕೆ ಕಾರಣ ಬಸ್ಸಿನ ಚಾಲಕರು, ಕಂಡಕ್ಟರುಗಳು. ಬಸ್ಸಿನೊಳಗೆ ತಮ್ಮೆಲ್ಲಾ ಜೀವನದ ಜಂಜಡಗಳಿಂದಲೇ ಪ್ರೇರಿತವಾದ ವಿಚಿತ್ರ ಅಸಹನೆಯಿಂದ ಕೂರುವ, ವೇಗವಾಗಿ ಓಡಿಸಯ್ಯ ಅನ್ನುವ ಭಾವದಿಂದಲೇ ಬಸ್ಸು ಹತ್ತುವ ಪಯಣಿಗರ ಭಯವೋ, ಅಥವ ತಮ್ಮ ಸಿಂಗಲ್ ಗಳನ್ನು ಮುಗಿಸುವ ತರಾತುರಿಯೋ ಅಥವ ಅದೇನೋ ಅರ್ಥವಾಗದ ಅವಸರವೋ ಬಸ್ಸು ನಿಂತ ಕೂಡಲೇ ಇಳಿವವರನ್ನು ತಳ್ಳುವಷ್ಟು ಅರ್ಜೆಂಟು ಅವರಲ್ಲಿ ಮೂಡಿಬರುತ್ತದೆ ಅನಿಸುತ್ತದೆ.

ವಯಸ್ಸಿನ ಜತೆಗೇ ಬಂದುಬಿಡುವ ಮಂಡಿನೋವಿರುವ ಅಮ್ಮ ಅದೊಂದು ದಿನ ಬಸ್ಸಿನ ಕೊನೆಯ ಮೆಟ್ಟಿಲಿನಿಂದ ರೋಡಿಗೆ ಹೆಜ್ಜೆಯಿಡುವಷ್ಟರಲ್ಲಿ ಕಂಡಕ್ಟರನ ವಿಸಿಲ್ಲು ಕಹಳೆಯಂತೆ ಕೇಳಿಸಿ ಚಾಲಕ ಬಸ್ಸು ಹೊರಡಿಸಿಬಿಟ್ಟಿದ್ದ. ಅಮ್ಮ ಆಯತಪ್ಪಿ ಬಿದ್ದುಬಿಟ್ಟಿದ್ದಳು. ತನ್ನ ಕಣ್ಣೆದುರೇ ನಡೆದದ್ದುದರಿಂದ ಕೂಡಲೇ ಮತ್ತೆ ಬ್ರೇಕು ಹಾಕಿ ನಿಲ್ಲಿಸಿ ಅಮ್ಮನಿಗೇ "ಬೇಗ ಇಳಿಯೋಕಾಗಕಿಲ್ವ?" ಅಂತ ದಬಾಯಿಸಿದ್ದ. ಬಿದ್ದ ಅಮ್ಮನನ್ನು ಎತ್ತುವುದರಲ್ಲಿ, ಆಕೆಯ ಮುಜುಗರವನ್ನು ಸಮಾಧಾನಪಡಿಸುವಂತೆ ಏನೂ ಆಗಿಲ್ಲವೆಂಬಂತೆ ಮಾತಾಡುತ್ತ ಚಾಲಕನ ಮಾತಿಗೆ ಜಗಳವಾಡುವ ಮನಸ್ಸಿಲ್ಲದೇ ವಿಪರೀತ ಅಸಹಾಯಕತೆಯ ಮೌನ ಧರಿಸಿದ್ದೆ.

ಅವತ್ತು ಮನದ ಮುಗಿಲಿಗೆ ಒಂದು ಅಸಹನೆಯ ಮೋಡ. ಆರ್ಥಿಕ ಪರಿಸ್ಥಿತಿಯನ್ನು ಬಯ್ದುಕೊಳ್ಳಬೇಕೋ, ವ್ಯವಸ್ಥೆಯನ್ನು ಬಯ್ದುಕೊಳ್ಳಬೇಕೋ ಅಥವಾ ಹ್ಯಾಗೆ ಸುಧಾರಿಸಬೇಕು ಅನ್ನುವ, "ಆಂಗ್ರಿ ಯಂಗ್ ಮ್ಯಾನ್" ಆಗಿಬಿಡಬೇಕು, ಶಂಕರ್ ಸಿನೆಮಾಗಳ ಹೀರೋನಂತೆ ಯಾರಾದರೂ, ಕೊನೆಗೆ ನಾನಾದರೂ ಆಗಿಬಿಡಬೇಕೆಂಬ ತಳಮಳವುಳ್ಳ ವಿಚಿತ್ರ ಹುಮ್ಮಸ್ಸು.

ಕಾಲೇಜು ಮುಗಿಯಿತು, ಕೆಲಸ ಸಿಕ್ಕಿ ಜೀವನದ ಎಲ್ಲಾ ಪರ್ವಗಳು ಮೆಲ್ಲ ಮೆಲ್ಲ ಪುಟತಿರುವತೊಡಗಿದವು. ಅಮ್ಮನಿಗೆ ಬೆಂಗಳೂರು ತೋರಿಸುವುದಕ್ಕೆ ನಾನೇ ಬೆಂಗಳೂರಲ್ಲಿರದೇ ಫೋನಿನಲ್ಲೇ ಅದು ನೋಡಿದೆಯಾ ಇದು ನೋಡಿದೆಯಾ ಅನ್ನುವ ಹಾಗೆ ಬದುಕು ಮಾಡಿಸಿತು. ಬಸ್ಸಿನಲ್ಲಿ ತಿರುಗಬೇಡ ಎಲ್ಲಿಗೆ ಹೋಗುವುದಾದರೂ ಅದೆಷ್ಟೇ ದೂರವಿದ್ದರೂ ಆಟೋದಲ್ಲಿ ತಿರುಗು ಅನ್ನುವಷ್ಟು ಆರ್ಥಿಕವಾಗಿ ಸುಧಾರಿಸಿದ ಮೇಲೆ, ನಾನೇ ಸ್ವತಃ ಕರೆದೊಯ್ದು ತೋರಿಸುವಷ್ಟು ತೃಪ್ತಿಯಲ್ಲದಿದ್ದರೂ ಮೊದಲಿಗಿಂತ ಒಂದು ಮಟ್ಟದ ಮೇಲಿನ ಸಂತಸ ದೊರಕುತ್ತಿತ್ತು.

ಇದನ್ನು ನೆನಪಿಸಿಕೊಳ್ಳುವುದಕ್ಕೆ ಕಾರಣ ಇತ್ತೀಚೆಗೆ ಸಿಂಗಾಪೂರಿನ ಬಸ್ಸಿನಲ್ಲಿ ನೋಡಿದ ಒಂದು ಘಟನೆ. ಇಲ್ಲಿ ಹಣ ನೀಡಲು ಕಾರ್ಡಿನ ವ್ಯವಸ್ಥೆ, ನಿಲ್ದಾಣಗಳಲ್ಲಿ ಮುಂದಿನ ಬಸ್ಸು ಎಷ್ಟು ಹೊತ್ತಿಗೆ ಬಸ್ ಸ್ಟಾಪ್ ತಲುಪುತ್ತೆ ಎಂದು ತೋರಿಸುವ ಬೋರ್ಡು, ಮತ್ತು ಎಲ್ಲಾ ನಿಲ್ದಾಣಗಳಲ್ಲಿ ಬರುವ ಬಸ್ಸು ಹೋಗುವ ರೂಟುಗಳ ಚಿತ್ರ ಹಾಕಿರ್ತಾರೆ ಎಂಬ ಟೆಕ್ನಿಕಲ್ ವಿಷಯಗಳಲ್ಲದೇ ಬೇರೆ ಕೆಲವು ಉತ್ತಮ ವಿಚಾರಗಳಿವೆ. ಸಚೇತನರಿಗೆ ಬಸ್ಸಿನಲ್ಲಿ ಹತ್ತಲು ಅನುಕೂಲವಾಗುವಂತೆ ವ್ಯವಸ್ಥೆಯಿದೆ. ಬಸ್ಸಿನೊಳಗೆ ಅವರಿಗೇ ಪ್ರತ್ಯೇಕವಾಗಿ ಕೈಚಾಲಿತ ವಾಹನವನ್ನು ನಿಲ್ಲಿಸಿಕೊಳ್ಳಲು ಜಾಗ ಮಾಡಿರುತ್ತಾರೆ. ಬಸ್ಸಿನ ತುಂಬೆಲ್ಲಾ ಹಿರಿಯರಿಗೆ ಸೀಟುಬಿಟ್ಟುಕೊಡುವುದು ಕಾನೂನು ಅಂತಲ್ಲದೇ, ಅದೇ ನಿಜವಾದ ನಡತೆ ಅನ್ನುವುದನು ಬಿಂಬಿಸುವ ಜಾಹೀರಾತುಗಳಿರುತ್ತದೆ. ಮತ್ತು ಬಸ್ಸು ಹತ್ತಿದ ಯಾವ ಮಗುವೂ ಅದನ್ನು ನೋಡದೇ ಇಳಿಯಲಾಗದಷ್ಟುಕಣ್ಣಿಗೆ ರಾಚುವ ಜಾಗೆಯಲ್ಲಿ ಹಾಕಿರುತ್ತಾರೆ.

singapore-bus

ಒಮ್ಮೆ ಹೀಗೆ ಆಫೀಸಿಗೆ ಬಸ್ಸಲ್ಲಿ ಹೋಗುತ್ತಾ ಇದ್ದಾಗ ಸ್ಟಾಪಿನಲ್ಲಿ ಒಬ್ಬ ವಯಸ್ಸಾದ ಮಹಿಳೆ ಹತ್ತಿದರು. ಊರುಗೋಲಿಲ್ಲದಿದ್ದರು ಹೆಜ್ಜೆ ಹೆಜ್ಜೆಯನ್ನೂ ಮೆಲ್ಲ ಇಡುವಷ್ಟು ವಯಸ್ಸು. ಆ ಸ್ಟಾಪಿನಲ್ಲಿ ಆಕೆಯನು ಬಿಟ್ಟು ಮತ್ಯಾರೂ ಹತ್ತಿರಲಿಲ್ಲ. ಆಕೆ ಮೆಲ್ಲ ಬಸ್ಸು ಹತ್ತಿದಳು. ಬಸ್ಸಿನೊಳಗಿನ ಕಂಬಗಳನು ಒಂದೊಂದಾಗಿ ಹಿಡಿಯುತ್ತಾ ಸೀಟಿನಲ್ಲಿ ಕೂರಲು ಕಡಿಮೆ ಎಂದರೂ ಎರಡರಿಂದ ಮೂರು ನಿಮಿಷವಾದರೂ ಆಗಿದ್ದಿರಬೇಕು. ಚಾಲಕ ಆಕೆ ಸೀಟಿನಲ್ಲಿ ಕೂರುವವರೆಗೂ ಬಸ್ಸನ್ನು ಕದಲಿಸಲಿಲ್ಲ. ಒಮ್ಮೆ ಆಕೆ ಕೂತು ತೃಪ್ತಿಯಿಂದ ಧನ್ಯವಾದಗಳು ಎಂಬರ್ಥದಲ್ಲಿ ನಸುನಕ್ಕ ನಂತರ ಬಸ್ಸು ಹೊರಟಿತು.

ಬಸ್ಸಿನೊಳಗೆಲ್ಲಾ ಒಂದು ಬಗೆಯ ಗೆಲುವು ಹರಡಿತ್ತು. ಹೆಮ್ಮೆಯ ಹೊಳೆ ಹರಿದಿತ್ತು. ಮತ್ತು ಅದಕ್ಕೆ ಚಾಲಕನೇ ನಾವಿಕನಾಗಿದ್ದ.

 

***

ಚಿತ್ರಕೃಪೆ: ಈ ವೆಬ್ ಸೈಟು

 ಕುಂಟುತ್ತಾ ಕುಂಟುತ್ತಾ ಸಾಗುತ್ತಿದ್ದ ಸಡಗರ ಸಡನ್ನಾಗಿ ನಿಂತಿದ್ದು ಎಲ್ಲರಿಗೂ ತಿಳಿದ ವಿಚಾರ. ಮೊದಲು ಸಡಗರ ಮುಚ್ಚಲಿದ್ದೇವೆಂದು ತಿಳಿಸಿದಾಗ ಸಂಪಾದಕರು ಏಪ್ರಿಲ್ ಫೂಲ್ ಮಾಡುತ್ತಿದ್ದಾರೇನೋ ಎಂಬ ಗುಮಾನಿ ಎಲ್ಲರಲೂ. ಪರಿಸ್ಥಿತಿಯ ಅರಿವಿದ್ದುದರಿಂದ ನಿಜ ಅನ್ನುವುದೂ ಮನ ಒಪ್ಪಲಾರದ ಸತ್ಯವಾಗಿತ್ತು. ಪತ್ರಿಕೆ ನಡೆಸಲು ಆಗುವ ಪ್ರಯಾಸಗಳಿಂದ ಹೇಗೋ ಸಾವರಿಸಿಕೊಂಡು ಮತ್ತೆ ಯಾವುದೋ ಒಂದು ದಿನ ’ ಅದು ಸುಮ್ಮನೆ ಏಪ್ರಿಲ್ ಫೂಲ್ ಮಾಡಿದ್ದು.. ಈ ಸಲದ ಪತ್ರಿಕೆ ಹೇಗೆ ಮಾಡೋಣ’ ಅನ್ನುತ್ತಾರೆಂಬ ಆಸೆಯಿತ್ತು. ಪ್ರತೀ ಸಲ ಪತ್ರಿಕೆ ಕೈಗೆ ಬಂದೊಡನೆ ಪರೀಕ್ಷೆಗಳು ನೀಡುವ ಒತ್ತಡಗಳು, ಪರ್ಸನಲ್ ಕೆಲಸಗಳು, ಪತ್ರಿಕೆಯ ಬರಹಗಳ ತಯಾರಿ ಬೇಡುವ ಬೇಜಾನ್ ಸಮಯ ಈ ಎಲ್ಲಾ ಕಷ್ಟಗಳೂ ಇಷ್ಟವಾಗಿಬಿಡುತ್ತಿದ್ದವು. ಸಡಗರ ಬಳಗದವರಿಗೆ ಹೆರಿಗೆ ನಂತರ ಮಗು ನೋಡಿದ ಅಮ್ಮನ ನಲಿವು. ಸಡಗರ ಪತ್ರಿಕೆಯ ಅಂದ, ಒಳಗಿನ ಮುದ್ದಾದ ಬರಹಗಳನ್ನು ಕಂಡು ’ಓ.. ಮನಸೇ ..’ ಪತ್ರಿಕೆ ನಿಂತಿದ್ದು ಯಾಕೇಂತ ಗೊತ್ತಾಯ್ತೀಗ ಅಂತ ಸುಮ್ಮಸುಮ್ಮನೆ ಹೆಮ್ಮೆ ಪಡುತ್ತಿದ್ದೆವು. ಆರ್ಥಿಕ ಬಲವಿದ್ದಿದ್ದಲ್ಲಿ ಅದು ಅಸಾಧ್ಯವೂ ಆಗಿರಲಿಲ್ಲ ಅನ್ನುವ ಆತ್ಮವಿಶ್ವಾಸ, ನಂಬಿಕೆ ಈಗಲೂ ಇದೆ.

 

ನಿಜವಾಗಿಯೂ ಸಡಗರದ ಬಂಡವಾಳ, ಕೆಲ ಹುಡುಗ-ಹುಡುಗಿಯರ ಒಂದಿಷ್ಟು ಕನಸುಗಳು, ಬರೆಯುವ ಉಮೇದು, ಉತ್ಸಾಹಗಳು ಮತ್ತು ಓದುಗರ ಪ್ರೋತ್ಸಾಹ,ಬೆಂಬಲಗಳಷ್ಟೇ ಆಗಿದ್ದವು. ಪ್ರೊಫೆಶನಲ್ ಪತ್ರಕರ್ತರಿಗಿರುವಷ್ಟು ಸಮಯ, ಸೌಲಭ್ಯ, ಸವಲತ್ತುಗಳಿಲ್ಲದೇ, ತಿಂಗಳಿಗೊಂದು ಇಂಟರ್ನಲ್ಸು, ಅಂತಾದ್ದು ಮೂರು ಬರುವುದರೊಳಗೆ ಸೆಮಿಸ್ಟರ್ ಪರೀಕ್ಷೆಗಳು, ಹಾರಿ ಬಂದು ಸೋರಿ ಹೋಗುವ ರಜೆಗಳು ಇವೆಲ್ಲದರ ನಡುವೆಯೂ ಸಡಗರವೆಂಬ ಕನಸು ಸಾವಿರ ತಾವರೆಯಂತೆ ಅರಳಿ ನಿಂತಿತ್ತು. ಪತ್ರಿಕೆಯನ್ನು ಎಲ್ಲಾ ಊರಿನ ಪ್ರತೀ ಸ್ಟಾಲ್ ಗಳಲ್ಲಿ ಮಾರಾಟ ಮಾಡಲು ಜನಬಲ, ಧನಬಲವಿರಲಿಲ್ಲ. ಆದರೂ ಅಂತಿಮವಾಗಿ ಪತ್ರಿಕೆಮೂಡಿ ಓದುಗನೊಬ್ಬ ಹಿಡಿದಾಗ ಅವನ ಮೊಗದಲ್ಲಿ ಅಚ್ಚರಿ ಮೂಡಿಸದೇ ಇರಲಿಲ್ಲ. ಸಿನೆಮಾ ಮಂದಿಯ ಗಾಸಿಪ್ಪುಗಳ ಹಂಗಿಲ್ಲದೇ, ಗೃಹಿಣಿಯರಿಗೆ ಕಿವಿಮಾತುಗಳು, ಗಂಡನನ್ನು ಒಲಿಸಿಕೊಳ್ಳುವ ವಿಧಾನಗಳು, ಮೇಕಪ್ ಮಾಡಿಕೊಳ್ಳುವುದು ಹೇಗೆ? ಇಂತಹ ವಿಷಯಗಳೇನೂ ಇಲ್ಲದೇ, ಯಾವುದೇ ಕ್ರೈಮ್ ಕತೆಗಳ ಫುಲ್ ಡೀಟೈಲ್ಸ್, ಡೇಂಜರಸ್ ಡೀಟೈಲ್ಸ್ ಮುಖಪುಟದಲ್ಲಿ ರಾರಾಜಿಸದೇ ಒಂದು ಸಹೃದಯ ವಿಚಾರಗಳ, ಮಾನಸಿಕ ಪ್ರಬುದ್ಧತೆಗಳುಳ್ಳ ಬರಹಗಳು, ಓದಿದ ನಂತರ ಬದುಕಿನ ಬಗ್ಗೆ, ನಮ್ಮ ಕುರಿತು ನಾವು ಚಿಂತಿಸುವಂತಹ ಲೇಖನಗಳುಳ್ಳದ್ದಾಗಿತ್ತು.

 

ಹೀಗೆ ಕನಸುಗಳು ಒಂದರ ಮೇಲೊಂದು ಅರಳುತ್ತಿದ್ದಾಗ ಲೋಕಕ್ಕೆ ರಿಸೆಶನ್ ರೋಗ ಬಡಿದ ಪರ್ವಕಾಲದಲ್ಲೇ ಪತ್ರಿಕೆಗೂ ಅರ್ಥಿಕ ಹಿಂಜರಿತ ಕಾಡಿತು. ಕೆಲವರು ಬೆಂಬಲಿಸಿ ಮುಂದುವರೆಯಿರಿ ಎಂದರು, ಸಹಾಯ ಮಾಡಲು ಅಣಿಯಾದರು. ಆದರೆ ಇದು ಕೆಲದಿನಗಳ ಉಸಿರಾಟವಷ್ಟೇ ಎಂಬುದು ನಿರ್ಲಕ್ಷಿಸಲಾಗದ, ಅರಗಿಸಿಕೊಳ್ಳಲೇಬೇಕಾದ ಸತ್ಯವಾಗಿತ್ತು. ಸಡಗರ ನಿಂತ ಶಾಕ್ ಗೆ ಗರಬಡಿದವರಂತಿದ್ದ ಬಳಗಕ್ಕೆ ನಿಜವಾಗಿಯೂ ಪತ್ರಿಕೆಗೆ ಮುಖ್ಯ ತಡೆಯಾಗಿದ್ದು ಆರ್ಥಿಕ ವಿಷಯವೇ; ಬೇರೇನೂ ಅಲ್ಲದಿರುವಾಗ ಬ್ಲಾಗ್ ನ ಮೂಲಕ ಯಾಕೆ ಮುಂದುವರಿಸಬಾರದು ಎಂಬ ಆಲೋಚನೆ ಮೂಡುತ್ತಿದ್ದಂತೆ ಮತ್ತೆ ಕನಸುಗಳು ಮೊಳಕೆಯೊಡೆದಿವೆ. ಸಡಗರ ಪತ್ರಿಕೆಯ ಹೆಚ್ಚಿನ ಓದುಗರು ಬ್ಲಾಗಿನ ಓದುಗರೂ ಆದುದು ನಮ್ಮ ನಿರ್ಧಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

 

 ಅರೆ! ನಿಜವಲ್ಲವೇ? ಎಲ್ಲೆಡೆ ಇಂಟರ್ನೆಟ್ಟು ಹಬ್ಬುತ್ತಿರುವ ವೇಗ ನೋಡುತ್ತಿದ್ದರೆ ಇದಕ್ಕಿಂತ ಒಳ್ಳೆಯ ಮಾಧ್ಯಮವುಂಟಾ ಕನಸುಗಳನ್ನು ಹಂಚಿಕೊಳ್ಳಲು ಅನ್ನಿಸಿದ್ದು ಸುಳ್ಳಲ್ಲ. ಮನಸ್ಸಿನ ಹಸುವಿಗೆ ಜ್ಞಾನದ ಹುಲ್ಲುಗಾವಲಿನಲ್ಲಿ ಆರ್ಥಿಕತೆಯ ಬೇಲಿಯಿಲ್ಲ! ಬ್ಲಾಗ್ ಎಂಬುದು ಜನರನ್ನು ಮುಟ್ಟುವ ಸುಲಭ ಮಾರ್ಗವಾಗುವತ್ತ ದಾಪುಗಾಲಿಡುತ್ತಿದೆ. ಇಂಟರ್ನೆಟ್ಟು ಯಾರು ಬಳಸ್ತಾರೆ? ಬ್ಲಾಗ್ ಯಾರು ಓದುತ್ತಾರೆ ಎನ್ನುವವರು ಕೇವಲ ಕನ್ನಡಭಾಷೆಯಲ್ಲಿಯೇ ಸಾವಿರಕ್ಕೂ ಮಿಗಿಲು ಬ್ಲಾಗ್ ಇರುವುದನ್ನು ನೋಡಿ ಮೂಗಿನ ಮೇಲಿಟ್ಟ ಬೆರಳು ಅಚ್ಚರಿಯಿಂದ ಕಣ್ಣಿನವರೆಗೆ ಏರಿದೆ! ಬ್ಲಾಗ್ ಎಂದರೆ ಮೂಗು ಮುರಿಯುವಂತಿದ್ದ ಪ್ರಿಂಟ್ ಮಾಧ್ಯಮಕ್ಕೂ ಇದರ ಮಹತ್ವ ಅರಿವಾಗಿದೆ. ಅದರಲ್ಲೂ ಬ್ಲಾಗ್ ಬರಹಗಳು ಮನ್ನಣೆ ಪಡೆಯುತ್ತಿದೆ. ಸಿನೆಮಾ ನಟರು ತಮ್ಮ ಮೇಲಿನ ಅಪವಾದಗಳನ್ನು, ರೂಮರ್ ಗಳಿಗೆ ಉತ್ತರವನ್ನು, ತಮ್ಮ ಭಾವನೆಗಳನ್ನು ಬ್ಲಾಗ್ ಮೂಲಕ ಹರಿಸಿ ತೀರಿಸಿಕೊಳ್ಳುತ್ತಿದ್ದಾರೆ. ಕೋಲಾರದ ಪೋಲಿಸ್ ವಿಭಾಗ ತಮ್ಮ ಕೆಲಸದ ಪಾರದರ್ಶಕತೆಯನ್ನು ಬ್ಲಾಗಿನಲ್ಲಿ ಈಗಲೂ ತೋರಿಸುತ್ತಿದ್ದಾರೆ. ಯಾವುದೇ ಪತ್ರಕರ್ತರೆನ್ನುವ ಟ್ಯಾಗ್ ಇಲ್ಲದ, ಬರಹಗಾರನೆಂಬ ಹಣೆಪಟ್ಟಿಯಿಲ್ಲದ ಸಾಮಾನ್ಯ ಜನರೂ ತಮ್ಮ ಮನದ ಭಾವನೆಗಳನ್ನು ನಿರ್ವಿಘ್ನವಾಗಿ ಬ್ಲಾಗ್ ಮೂಲಕ ತೋಡಿಕೊಳ್ಳಬಹುದಾಗಿದೆ. ಬಹುಶಃ ಮುಖ್ಯಮಂತ್ರಿಗಳು ಜನತಾದರ್ಶನವೆಂದು ತಮ್ಮ ಅಮೂಲ್ಯ ಸಮಯವನ್ನು ಕೆಲ ಜನರಿಗಷ್ಟೇ ಸೀಮಿತವಾಗಿಡುವ ಬದಲು ಬಿಡುವಾದಾಗ ಬ್ಲಾಗ್ ಮೂಲಕವೇ ಜನರ ಅಹವಾಲುಗಳನ್ನು ಸುಲಭವಾಗಿ ಪಡೆಯಬಹುದು. ಬ್ಲಾಗ್ ಪ್ರಕಾಶಿಸುತ್ತಿರುವ ಪರಿಸ್ಥಿತಿಯಲ್ಲಿ ಬರೀ ಆರ್ಥಿಕತೆಯ ಕಾರಣ ಹೇಳಿ ನಮ್ಮಯ ಸಡಗರವನ್ನು ಮುಚ್ಚುವುದು ಸರಿಯಾದುದಲ್ಲ.

 

ಓದುಗರ ಪ್ರೀತಿ, ತೊಡಗಿಸಿಕೊಳ್ಳುವಿಕೆಯನ್ನು ಇಟ್ಟುಕೊಂಡು ಪತ್ರಿಕೆಯನ್ನು ಬ್ಲಾಗಿನ ಮೂಲಕವೇ ನಡೆಸೋಣ ಎಂದು ನಿರ್ಧರಿಸಿದ್ದೇವೆ. ಇನ್ನು ಪತ್ರಿಕೆಗೆ ಯಾವ ಆರ್ಥಿಕ ಹರ್ಡಲ್ಸ್ ಅಡಚಣೆಯಾಗದು. ಸಮಯಕ್ಕೆ ಸರಿಯಾಗಿ ಪತ್ರಿಕೆ ಕೊಡಲಿಲ್ಲ ಎಂದು (ಪ್ರೀತಿಯಿಂದ) ಬೈಸಿಕೊಳ್ಳುವಂತಿಲ್ಲ. ಬರಹಗಳನ್ನು ಚಂದಗಾಣಿಸಿ ನೀಡಬೇಕೇ ವಿನಃ ಚಂದಾ ಕೇಳಬೇಕಿಲ್ಲ. ಯಾವಾಗ ಇನ್ನೊಂದು ಸಂಚಿಕೆ ಎಂದು ಕಾಯುವ ಅಗತ್ಯವಿಲ್ಲ. ಸಡಗರ ಇನ್ನು ನಿಮ್ಮ ಬೆರಳಿನ ಕ್ಲಿಕ್ಕಿನಷ್ಟು ದೂರ! ಇನ್ನು ಮತ್ತೆ ಮನದ ಗೂಡಿನಲಿ ಕಲರವ-ಸಡಗರ ಇಂಚರಿಸಲಿವೆ. ಸಡಗರ ಬಳಗದ ಮನದಾಗಸದಲ್ಲಿ ವಿಚಾರಗಳ ಮೋಡ ದಟ್ಟೈಸಿವೆ.

ಸಡಗರ ಬ್ಲಾಗ್ ಪತ್ರಿಕೆ ಮಳೆಗಾಲದ ಆರಂಭದ ದಿನದಿಂದ ಹನಿಸಲು ಶುರುವಾಗಿದೆ!

nambike
ಕೆಲಸಗಳನ್ನು ಮಾಡುತ್ತಾ ಕಂಪ್ಯೂಟರ್ ಮುಂದೆ ಧ್ಯಾನಸ್ಥರಂತೆ ಕುಳಿತುಕೊಳ್ಳುವವರು ಮಧ್ಯೆ ಮಧ್ಯೆ ಮೇನಕೆಯರನ್ನು ನೋಡುವಂತೆ ಸ್ಕ್ರೀನ್ ಸೇವರ್ ನಲ್ಲಿನ ಕತ್ರೀನಾ ಕೈಫ್ ಳನ್ನು ಕದ್ದು ನೋಡಿ ’ಮನಸ್ಸಿಗೆ ರಿಲ್ಯಾಕ್ಸ್ ಆಗಲಿಕ್ಕಾಗಿ ಅಲ್ಲವೇ ಹೀಗೆ ಮಾಡುವುದು ಪರವಾಗಿಲ್ಲ’ ಅಂದುಕೊಂಡು ಸಮಾಧಾನವಾಗುತ್ತಾರೆ.
ಅದರ ಬದಲಿಗೆ ಇದೇ ಸ್ಕ್ರೀನ್ ಸೇವರ್ ನಲ್ಲಿ ಒಳ್ಳೆಯ ಕವಿವಾಣಿ, ಡಿ.ವಿ.ಜಿ.ಯವರ ಅದ್ಭುತ ಪುಸ್ತಕವಾದ “ಮಂಕುತಿಮ್ಮನ ಕಗ್ಗ” ದ ಸಾಲುಗಳಿದ್ದರೆ ಎಷ್ಟು ಮುದವಾಗುತ್ತದೆ, ಅಲ್ಲವೆ? ಬಾಸಿನ ಘನಗಂಭೀರ ಮೈಲ್ ನೋಡಿ ತಲೆಕೆಟ್ಟರೆ ಒಂದು ಅಡಿಗರ ಸಾಲು ಸಾಕು ಮನಸ್ಸು ಮತ್ತೆ ಚಿಗುರಲು, ಚುರುಕಾಗಿ ಮತ್ತೆ ಕೆಲಸ ಮಾಡಲು ಇನ್ನಿಲ್ಲದಷ್ಟು ಉಮೇದು ಮೂಡುತ್ತದೆ.
 
ಇಂಥದ್ದೊಂದು ಒಳ್ಳೆಯ ಕಾರ್ಯವನ್ನು ಒಂದು ಗುಂಪು ಕಳೆದ ೨ ವರುಷಗಳಿಂದ ನಡೆಸಿಕೊಂಡು ಬರುತ್ತಿದೆ. ಕಳೆದ ಎಂಟು ತಿಂಗಳಿಂದ ನಾನು ಸಹಿತ ಇದರ ಲಾಭ ಪಡೆಯುತ್ತಿದ್ದೇನೆ. ಕಾವ್ಯ ಸವಿಯನ್ನು, ಮನಸ್ಸನ್ನು ಹಕ್ಕಿಯನ್ನಾಗಿ ಮಾಡುವ ಸಾಲುಗಳನ್ನು ಬೇಸರಾದಾಗೆಲ್ಲ ಸವಿಯುತ್ತ ಬಂದಿದ್ದೇನೆ. ಮಂಕುತಿಮ್ಮನ ಸಾಲುಗಳಲ್ಲದೇ, ಸರ್ವಜ್ಞವಚನಗಳು, ಗೋಪಾಲಕೃಷ್ಣ ಅಡಿಗರ ಕವಿತೆಯ ಸಾಲುಗಳು, ಮರುಳಮುನಿಯನ ಕಗ್ಗ, ರಾಜರತ್ನಂ ಗೀತೆಯ ಸಾಲುಗಳು, ಬೀchi, ಹೀಗೆ ಇನ್ನೂ ಮುಂತಾದ ಕವಿವರ್ಯರ, ವಚನಕಾರರ ಸಾಹಿತ್ಯವನ್ನು ಅದರ ಕಠಿಣ ಪದದ ಅರ್ಥದ ವಿವರದ ಜತೆ ಒಂದು ಚಂದದ ಚಿತ್ರದ ಮೂಲಕ ವಾರಕ್ಕೆ ಐದು ದಿನ ಹಂಚುತ್ತಿದ್ದಾರೆ. ಬಾಳಿಗೊಂದು ನಂಬಿಕೆ ಎಂದು ಹೆಸರಿರಿಸಿಕೊಂಡಿರುವ ಅವರು ತಮ್ಮ ಮೈಲುಗಳಲ್ಲಿ ತಮ್ಮನ್ನು ತಾವು “ಬಾಳ ಬೆಳಕಲ್ಲಿ ನಂಬಿದವರು” ಅಂತಲೇ ಕರೆದುಕೊಳ್ಳುತ್ತಾರೆ. ಅರಿವಿನ ಸಿಹಿಗಾಳಿಯನ್ನು ಮೆಲ್ಲಗೆ ಹಬ್ಬುತಿರುವ, ಸಾಹಿತ್ಯದ ಸುಧೆಯನ್ನು ಎದೆಯಿಂದೆದೆಗೆ ಹರಿಸುತಿರುವ ನಂಬಿಕೆ ಬಳಗದವರಿಗೆ ಸುಮ್ಮನೆ ಅಭಿನಂದನೆ ಎಂದರೆ  ಕಡಿಮೆ ಆದೀತು. ಸಧ್ಯಕ್ಕೆ ಬಳಗದ ಒಳಗೆ ನಾನೂ ಹೆಮ್ಮೆಯ ಸದಸ್ಯ.
 
ಆರ್ಕುಟ್ ನಲ್ಲಿ ನಂಬಿಕೆ ಬಳಗದವರು ಬರೆದುಕೊಂಡಿದ್ದು ಹೀಗೆ:
 
>>ಚಹಾ ಸಮಯದ ನಮ್ಮ ನಮ್ಮ ನಡುವಿನ ಮಾತಿನ ಮಧ್ಯೆ ಮೊಡಿದ ಕನಸು ” ಬಾಳಿಗೊಂದು ನಂಬಿಕೆ ” ಯ ರೂಪದಲ್ಲಿ ದಿನವು ನಿಮ್ಮ ಮುಂದೆ ಮೊಡಿಬರುವಂತಾಗುವಲ್ಲಿ ನಮಗೆ ನಮ್ಮ ಮೇಲಿದ್ದ ನಂಬಿಕೆಗಿಂತ ಹೆಚ್ಚಾಗಿ ನಮ್ಮ ಸಾಹಿತ್ಯದಲ್ಲಿರುವ ಮೌಲ್ಯಗಳ ಮೇಲಿರುವ ನಂಬಿಕೆಯೇ ಕಾರಣ. ದಿನವೂ ಮಿಂಚೋಲೆಯ ಮೊಲಕ ಮಿಂಚಿ ಹೋಗುವ ” ಬಾಳಿಗೊಂದು ನಂಬಿಕೆ ” ಮನದಲ್ಲೇನಾದರು ಪ್ರಶ್ನೆಗಳನ್ನೋ,ವಿಚಾರಗಳನ್ನೋ,ಕೂತುಹಲವನ್ನೋ ಸೃಷ್ಟಿಸಿದ್ದರೇ….ಅವೆಲ್ಲದರ ಕುರಿತು ಮುಕ್ತ ಚರ್ಚೆಗೆ ವೇದಿಕೆಯಾಗಲಿ ಆರ್ಕುಟ್ ನ ಈ ವೇದಿಕೆ ಎಂಬುದೆ ನಮ್ಮ ಆಶಯ.

ನಮ್ಮ ಕುತೂಹಲಗಳನ್ನು ತಣಿಸುವದಷ್ಟಕ್ಕೆ ಸೀಮಿತವಾಗದೆ ಈ ವೇದಿಕೆ ವಿಚಾರ ಮಂಥನಕ್ಕೆ ಎಡೆಮಾಡಿಕೊಟ್ಟದ್ದಾದಲ್ಲಿ ಅದಕ್ಕಿಂತ ಹೆಮ್ಮೆಯ ವಿಚಾರ ಬೇರೊಂದಿಲ್ಲ ನಮಗೆ. ಅವರವರ ನಂಬಿಕೆ ಅವರವರದಾದರೂ ಯಾರಿಗೂ ನೋವುಂಟು ಮಾಡದಂತೆ ಚರ್ಚಿಸುವುದರಲ್ಲಿ ತಪ್ಪೇನು ? ದಾಸರೇ ಹೇಳಿಲ್ಲವಾ..ನಂಬಿ ಕೆಟ್ಟವರಿಲ್ಲವೆಂದು , ಬನ್ನಿ “ಬಾಳ ನಂಬಿಕೆ” ಯನ್ನು ಉಳಿಸಿಕೊಳ್ಳೋಣ,ಬೆಳಸಿಕೊಳ್ಳೋಣ.<<

ನಂಬಿಕೆಬಳಗ ಇ-ಮೈಲ್ ವಿಳಾಸ : nambike@gmail.com

coffee_club-011
ಚರ್ಚೆಗಳೆಂದರೆ ಚರ್ಚೆಗಳವು.
 
ಒಂದು ಕಡೆ ಹೇಮಾಳ “ಪವರ್ರು” ಮತ್ತೊಂದು ಕಡೆ ಸುಪ್ರೀತನ “ಖದರ್ರು” ಮಧ್ಯೆ ಮಧ್ಯೆ ಇಣುಕಿ ಕೆಣಕಿ ಹೋಗುವ ಮತ್ತಷ್ಟು ಗೆಳೆಯರು. ಎಲ್ಲರೂ ಮನಸಾರೆ ವಾದ ಮಾಡುವವರೇ.. ಆ ವಾದಗಳಲ್ಲಿ ಹದವಾದ ಕಾಲೆಳೆತ, ಮಿಳಿತವಾದ ಹಾಸ್ಯ, ಅಲ್ಲಲ್ಲಿ ತುಣುಕುಗಳ ರೂಪದಲ್ಲಿ ಗಾಂಭೀರ್ಯತೆ, ಒಂದಿಷ್ಟು ಚಂದದ ರೂಪಕಗಳು, ಜತೆಗೆ ಹೋಲ್ ಸೇಲ್ ತುಂಟತನ ತುಂಬಿ ತುಳುಕುತ್ತಿತ್ತು.  
ಆದರೆ ಅದೇನಾಯ್ತೋ.. ಕಾರಣ ಹೇಳದೇ ಕೈ ಕೊಡುವ ಹುಡುಗಿಯಂತೆ ಸುಪ್ರೀತ್ ಓರ್ಕುಟ್ ಬಿಟ್ಟುಹೋದ. ನಮ್ಮ ವಾದಗಳೆಲ್ಲ ಸ್ತಬ್ಧವಾಯಿತು. ಚರ್ಚೆಗಳೆಲ್ಲ ಸ್ಥಗಿತವಾದವು. ಅಲ್ಲಿ ಬೇರೆಯವರು ಚರ್ಚೆ ಮುಂದುವರಿಸಿದರೂ ನಮ್ಮ ಮನಸ್ಸು ಮಾತ್ರ ಒಂದಷ್ಟು ದಿನ ಮೌನನಮನ ಸಲ್ಲಿಸಿತ್ತು.
 
ಅದರೆ ಮನಸ್ಸು ಸುಮ್ಮನೆ ಕೂರಬೇಕಲ್ಲ?
 
ಈಗ ಸುಪ್ರೀತ್ ಜ್ಞಾನೋದಯವಾಗಿ ಹಳೆಹುಡುಗನ ಬಳಿ ಬಂದ ಹುಡುಗಿಯಂತೆ ಮತ್ತೆ ತಯಾರಾಗಿದ್ದಾರೆ.ನಮಗೆಲ್ಲಾ ಮೆದುಳಿನ ರಿಫ್ರೆಶ್ ಬಟನ್ ಅದುಮಿ ಅಂದಿದ್ದಾರೆ. ಈಗ ಮೊದಲ ಬಾರಿ ರೆಕ್ಕೆ ಬಿಚ್ಚಿ ಆಗಸಕ್ಕೆ ಹಾರುವ ಹಕ್ಕಿ ಮನಸ್ಸು ನಮ್ಮದು, ಹೊಸತನ್ನೇನೋ ಮಾಡುವ ತವಕ, ಸೃಜನಶೀಲತೆಯ ಕಟ್ಟೆಯೊಡೆಯುವ ಕಾತರ.
 
ಏಕತಾನತೆಯಿಂದ ಬೇಸತ್ತ ಮನಗಳಿಗೆ ಬೆಚ್ಚಗೆ ಹಬೆಯಾಡುವ ಕಾಫಿ ಕುಡಿಸುವ ಅಭಿಲಾಷೆ.
 
ಅದಕ್ಕೇ ಅಂತಲೇ ಹೊಸದೊಂದು ಬ್ಲಾಗು ಕಣ್ತೆರೆದಿದೆ. “ಕಾಫಿಕ್ಲಬ್” ಎಂಬ ನಾಮಕರಣ ನಿಮಗೆಲ್ಲಾ ತಿಳಿಸದೇ ಮಾಡಿಯಾಗಿದೆ.
ನೀವು ಸುಮ್ಮನೆ ಕಾಫಿ ಕಪ್ಪು ಹಿಡಿದು(ಹಿಡಿಯದಿದ್ದರೂ ಓಕೆ!)  ಓದಿದರೆ ಸಾಕು, ಒಳ್ಳೆ ಡಿಕಾಕ್ಷನ್ನಿನ ಕಾಫಿ ಕುಡಿದ ಮುದ ನಿಮ್ಮದು.
 
ಖಂಡಿತಾ ಆಗಾಗ್ಗೆ ಬಂದು ಹೋಗ್ತೀರಲ್ಲಾ?!
 
ಇಲ್ಲಿದೆ ಕೊಂಡಿ  http://kafiklab.blogspot.com/

ದೋಷ ರಾಕ್ಷಸ !

Posted: ಅಕ್ಟೋಬರ್ 14, 2008 in ಮಾಹಿತಿ

ಪುಸ್ತಕ ಮುದ್ರಣದಲ್ಲಿ ದೋಷ ರಾಕ್ಷಸನ ಹಾವಳಿ ಮಾಮೂಲು.

ಕಣ್ತಪ್ಪಿನಿಂದಲೂ, ಆಲಸ್ಯತನಗಳಿಂದಲೂ, ಅಜ್ಞಾನದಿಂದಲೂ ತಪ್ಪು ಸಂಭವಿಸುತ್ತಲೇ ಇರುತ್ತದೆ. ಸ್ವಲ್ಪ ದಿನಗಳ ಹಿಂದೆ ನನ್ನ ಬ್ಲಾಗಿನ ಟ್ಯಾಗ್ ಲೈನಿನಲ್ಲೂ ಆಗಿತ್ತು. ಅದು ಹಿರಿಯ ಲೇಖಕರೊಬ್ಬರು ತಿದ್ದಿ ಹೇಳಿದ್ದರಿಂದ ಸರಿಹೋಯಿತು. ಆ ದೋಷ ಕಣ್ತಪ್ಪಿನಿಂದಾದದ್ದು. “ಕಣ್ ಪಿಜಿನ್ ಆಂಡ್ ಯೆ” (ತುಳುವಿನಲ್ಲಿ ಕಣ್ಣಿಗೆ ಇರುವೆ ಬಂತೆಂಬ ಅರ್ಥ) ಅಂತ  confusion ಪದದ ಬದಲಾಗಿ ತಮಾಷೆಗೆ ಬಳಸುತ್ತಿರುತ್ತೇವೆ.

ಹಾಗೆಯೇ ಲೇಖನವೊಂದರಲ್ಲೂ ಚಿಕ್ಕ ತಪ್ಪಾಗಿ ಓದುಗರಲ್ಲಿ ಗೊಂದಲವುಂಟಾಗಿದ್ದು ಎಂದಿಗೂ ನೆನಪಿನಿಂದ ಅಳಿಸಿಹೋಗುವುದಿಲ್ಲ. ಒಮ್ಮೆ ಆ ತರಹದ ಅನುಭವವಾದರೆ ಮುಂದೆ ಬಹಳ ಎಚ್ಚರಿಕೆ ಇರುತ್ತದೆ. ಆದರೆ ಬ್ಲಾಗಿನಲ್ಲಿ ಸರಿಪಡಿಸಿಕೊಳ್ಳಬಹುದು. ಕೂಡಲೇ ಕ್ಷಮೆ ಕೇಳಿ ತಪ್ಪಿಸಿಕೊಳ್ಳಬಹುದು. ಪುಸ್ತಕ ಹಾಗಲ್ಲ. ಒಮ್ಮೆ ಮುದ್ರಣವಾಗಿಬಿಟ್ಟರೆ ಮುಗಿಯಿತು. ಓದುಗರ ಕ್ಷಮೆ ಸಿಗುವುದು ಮುಂದಿನ ಆವೃತ್ತಿಯಲ್ಲಿ ಕ್ಷಮೆ ಕೇಳಿದಾಗಲೇ!

ಆದರೂ ಲಕ್ಷಾಂತರ ಜನ ಪುಸ್ತಕ ಓದುವಾಗ, ಮುಖಪುಟದಲ್ಲೇ ಅದೂ ಪುಸ್ತಕದ ಹೆಡ್ಡಿಂಗ್ ನಲ್ಲೇ ತಪ್ಪಾದರೆ ?

ಲಗತ್ತಿಸಿರುವ ಫೋಟೋ ಗಮನಿಸಿ. ಬೇರೆಲ್ಲಾ ವಿವರ ಅನಗತ್ಯ ಅನಿಸುತ್ತದೆ.

 

( ಮೊದಲ ಬಾರಿಗೆ ಎಲ್ಲೂ ಕದಿಯದೇ ನನ್ನದೇ ಮೊಬೈಲ್ ನಿಂದ ತೆಗೆದ ಫೋಟೋ ಬಳಸಿದ್ದು !)