Archive for the ‘ಲವ್ ಲೆಟರ್’ Category

ಮೈ ಡಿಯರ್ ಕುಳ್ಳೀ,

ಮೊನ್ನೆ ನೀನು ಕೈಯಲ್ಲಿ ಒಂದಿಷ್ಟು ಡ್ರಾಯಿಂಗ್ ಹಿಡಿದು ಮೆಟ್ಟಿಲು ಇಳಿದು ಬರುತ್ತಿದ್ದಾಗ ಬೇಬಿ ಡಾಲ್ ಥರ ಕಾಣಿಸಿದೆ. ಗಾಢ ನೀಲಿ ಟಾಪ್ ಮತ್ತು ಅಚ್ಚ ಬಿಳಿ ಪ್ಯಾಂಟ್ ಕಾಂಬಿನೇಷನ್ ಜತೆಗೊಂದು ಹಳದಿ ಬಣ್ಣದ ಸ್ಲಿಮ್ ಬೆಲ್ಟ್ ಹಾಕ್ಕೊಂಡು ನೀ ಮೆಟ್ಟಿಲನ್ನು ಒಂದೊಂದೇ ಹೆಜ್ಜೆ ಇಟ್ಟು ಇಳಿಯುತ್ತಿದ್ದರೆ ನನ್ನ ಬದುಕು ಪೂರ್ತಿ ಅದನ್ನೇ ನೋಡುತ್ತಾ ಕಳೆಯಬೇಕೆಂಬ ಭಾವ. ನಿನ್ನ ಚಿಟ್ಟೆ ಕ್ಲಿಪ್ಪು ಹಾರಿ ಬಂದು ನನ್ನೆದೆಯ ಮಕರಂದವನ್ನು ಹೀರಿದಂತ ಅನುಭವ. ನೀನು ನನ್ನ ಹಾದುಹೋದಾಗ ಬರುವ ಗಾಳಿಗೆ ನನ್ನ ಮನಸ್ಸಿಗೂ ತಂಪೆರೆವ ಶಕ್ತಿ. ಆ ತಂಗಾಳಿ ಒಂದಿಷ್ಟು ಹೊತ್ತು ನನ್ನನ್ನೇ ಆವರಿಸಿಕೊಂಡಂಥ ಅನುಭೂತಿ. ನಿನ್ನ ದೇಹ ಗಂಧ ನನ್ನ ಸವರಿಹೋದಾಗೆಲ್ಲಾ ಎದೆಯೊಳಗೆ ಕಪ್ಪೆಕಲ್ಲ ತರಂಗ. ನೀನು ನಡೆದ ಹಾದಿಯಲ್ಲಿ ಸುಮ್ಮನೆ ಒಮ್ಮೆ ನಾನು ನಡೆದರೂ ಒಂದೊಳ್ಳೆ ರೋಮಾಂಚನ.

love-560783_960_720

ಮರುಳಾದೆ ದಿವ್ಯ ಸಖಿ ನಿನಗೆ.. ಪ್ರಣಾಮ..
ಅಪರೂಪ ರೂಪಸಿಯೆ ನಿನಗೆ.. ಪ್ರಣಾಮ..

ನಿನ್ನನ್ನು ನೋಡಿದಾಗೆಲ್ಲಾ ನಿನ್ನನ್ನು ಒಂದು ಫ್ರೇಮ್ ಆಗಿಸಿ ಮನದಲ್ಲಿ ಸದಾ ಅಚ್ಚಾಗುವಂತೆ ಜನುಮ ಪೂರ್ತಿ ನೆನಪಿನಲ್ಲಿಡಬೇಕು ಅಂತೆಲ್ಲಾ ಅನ್ನಿಸುತ್ತೆ. ಆದರೆ ಅಷ್ಟು ಡೀಟೈಲ್ ಆಗಿ ನೋಡುವುದಕ್ಕೆ, ರೆಕಾರ್ಡ್ ಮಾಡಿಕೊಳ್ಳಲು ಒಂದು ದಿನ ಪೂರ್ತಿ ಬೇಕಾಗುತ್ತದೆ. ಕಿವಿಯ ಲೋಲಾಕ್ಕು ನೋಡುವುದರೊಳಗೆ ಮೊಗಕ್ಕೆ ನೀ ಹುಟ್ಟಿದಾಗಿನಿಂದಲೂ ಅಂಟಿಕೊಂಡಿರುವ ನಸುನಗು ಮಿಸ್ಸಾಗಬಹುದು, ಅದೇ ಕ್ಷಣದಲ್ಲಿ ನಿನ್ನ ಮುಂಗುರಳ ಲಾಲಿತ್ಯದ ದಾಖಲಾತಿ ತಪ್ಪಿಹೋದೀತು. ಜೀವದಾಳಕ್ಕೇ ಗಾಳ ಹಾಕಿ ಒಲವ ಮೀನಿಗೆ ಆಸೆ ಹುಟ್ಟಿಸುವ ನಿನ್ನ ಕುಡಿನೋಟ, ಕೆನ್ನೆಯಂಚಲ್ಲಿ ಮತ್ತಷ್ಟು ಅಂದ ಹೆಚ್ಚಿಸುತ್ತಿರುವ ಮೊಡವೆ, ಕಣ್ಣ ಬಾಣ ಬಿಡಲು ಸದಾ ಸಿದ್ಧ ಅಂತನ್ನಿತ್ತಿರುವ ಹುಬ್ಬು, ಐಸ್ ಕ್ರೀಮಿನ ತುತ್ತತುದಿಯಲ್ಲಿರುವ ಚೆರ್ರಿಯಂತೆ- ಇಂಥ ಅಂದಕ್ಕೆ ನಾನೇ ಮುಖ್ಯ ಕಾರಣ ಅಂತ ಬೀಗುತಿರುವ ಬಿಂದಿ, ಎಲ್ಲವೂ ಒಂದಕ್ಕಿಂತ ಇನ್ನೊಂದು ಅಂದ. ಇದನ್ನೆಲ್ಲಾ ಒಂದೇ ಕ್ಷಣದಲ್ಲಿ ಒಂದೇ ಫ್ರೇಮಿನಲ್ಲಿ ಹೇಗೆ ಪೇರಿಸಿಡಲು ಸಾಧ್ಯ?

ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ

ಇಬ್ಬರೂ ಲಿಫ್ಟ್ ನಲ್ಲಿ ಸಿಕ್ಕಾಗಲಂತೂ ವಿಪರೀತ ಭಯ. ಎಲ್ಲಿ ನನ್ನ ಎದೆಬಡಿತ ನಿನಗೆ ಕೇಳಿಬಿಡುತ್ತದೋ ಎಂದು. ಈ ಕ್ಷಣ, ಈ ಸ್ಥಳ ಹೀಗೇ ಜನ್ಮಪೂರ್ತಿ ಇರುವಂತೆ ಯಾರಾದರೂ ಸ್ಟಾಚ್ಯೂ ಹೇಳಿಬಿಡಬಾರದಾ ಎಂಬಂಥ ಮನಸ್ಥಿತಿ. ಲಿಫ್ಟ್ ನೊಳಕ್ಕೆ ಅದೆಷ್ಟು ಜನರಿದ್ದರೂ ನಿನ್ನ ಇರುವು ನನ್ನೊಳಗೆ ಮೂಡಿಸುವ ಸಂಚಲನವನ್ನು ಅದು ಹ್ಯಾಗೆ ಪದಗಳಲ್ಲಿ ನಾ ವಿವರಿಸಲಿ? ಮೊದಲೊಮ್ಮೆ ಊಟ ಆಯ್ತಾ ಅಂತ ಕೇಳಿದ್ದರೂ ನೀನು ಉತ್ತರಿಸದೇ ಹೋಗಿದ್ದೆ. ಹಾಗಾಗಿ ಮೊದಲ ಬಾರಿಗೆ ನಿನ್ನ ಇನಿದನಿಯನ್ನು ಕೇಳಿದ್ದು ನಾ ಇದೇ ಲಿಫ್ಟ್ ನಲ್ಲವೇ? ನಿನ್ನ ಗೆಳತಿಯ ಬಳಿ ಚಪಾತಿ ತಂದಿದ್ದೀಯಾ ಅಂತೇನೋ ಕೇಳಿದ್ದ ನೆನಪು. ಕೆಲವೊಮ್ಮೆ ಅನ್ನಿಸುತ್ತದೆ, ಬಹುಷಃ ನಾನು ಹೆಚ್ಚು ನಿರೀಕ್ಷಿಸುತ್ತಿದ್ದೇನೋ ಅಂತ. ಯಾಕೆಂದರೆ ಈ ಜಗತ್ತಿನಲ್ಲಿ ಅದೆಷ್ಟು ಜನರಿದ್ದರೂ ಪ್ರತಿದಿನ ನಿನ್ನನ್ನು ನೋಡುವ, ನಿನ್ನ ನಡಿಗೆಯ ಅಂದವನ್ನು ಸವಿಯುವ ಖುಷಿ, ನಿನ್ನ ನಗುವನ್ನು ಕೇಳುವ ಸುಖ ಇದೆಲ್ಲಾ ನನಗೆ ಸಿಗುತ್ತಿರುವುದು ನನ್ನ ಅದೃಷ್ಟವೇ ಅಲ್ಲವಾ? ಇವಿಷ್ಟರಿಂದಲೇ ನನ್ನ ನೆನಪಿನ ಜೋಳಿಗೆಯನ್ನು ತುಂಬಿಸಿ ಹೊತ್ತೊಯ್ಯಲು ಸಾಲುವುದಿಲ್ಲವಾ? ಹೀಗೆಲ್ಲಾ ಅನ್ನಿಸಿ ತೃಪ್ತಿಯಾದರೂನು ಮನಸ್ಸು ತುಂಬಾ ಬಲಹೀನ. ನಿನ್ನ ಜೊತೆ ಒಮ್ಮೆಯಾದರೂ ಊಟ ಮಾಡುವ, ಒಂದೇ ಒಂದು ಸಂಜೆ ಜತೆಯಾಗಿ ಕಾಫಿ ಕುಡಿಯುವ, ಕಾಲದ ಪರಿವೇ ಇಲ್ಲದೇ ತುಂಬಾ ಮಾತಾಡುವ ಆಸೆ, ಮುದ್ದಾದ ಇಂಥ ಹಂಬಲಗಳಿಂದಲೇ ಜೀವನ ಸವೆಯುತ್ತಿದೆ. ಯಾವತ್ತೋ ಒಂದು ದಿನ ಅದು ಸಾಧ್ಯವಾಗುತ್ತದೆ ಎಂಬ ಕನಸು ಹೊತ್ತೇ ಜೀವನ ಸಾಗುತ್ತಿದೆ.

d29a4a3cfe8f43f1a21cf2ea42657e1e

ಮನಸಲಿ ಚೂರು ಜಾಗ ಬೇಕಿದೆ..
ಕೇಳಲಿ ಹೇಗೆ ತಿಳಿಯದಾಗಿದೆ..

ನಿಜಾ ಹೇಳಲಾ? ನಂಗೂ ನಿಂಗೂ ಮಧ್ಯೆ ಏನೋ ಲಿಂಕಿದೆ. ಹಳೇ ಜನ್ಮದ ಫ್ಲಾಷ್ ಬ್ಯಾಕಿದೆ. ಬೇಕಿದ್ದರೆ ನೋಡು, ನಿನ್ನ ಹಣೆಯ ಕುಂಕುಮವಿಡುವ ಭಾಗದ ಪಕ್ಕದಲ್ಲೂ ಮಚ್ಚೆಯಿದೆ, ಅದೇ ಸ್ಥಳದಲ್ಲಿ ನನಗೂ ಮಚ್ಚೆಯಿದೆ. ನಮ್ಮಿಬ್ಬರ ಕಣ್ಣ ನೋಟ ಒಂದಾದ ದಿನದಿಂದ ಜೀವ ಅದೇಕೋ ಚಡಪಡಿಸುತ್ತಿದೆ. ಇಲ್ಲದೇ ಹೋದರೆ, ನೀನು ಒಂದು ದಿನ ನೋಡೋಕೆ ಸಿಗಲಿಲ್ಲವೆಂದರೆ ನನ್ನ ಮನಸ್ಸೇಕೆ ವಿಲ ವಿಲ ಒದ್ದಾಡುತ್ತದೆ? ನಿನಗಿಂತ ಅದೆಷ್ಟು ಅಂದವತಿ ತರುಣಿಯನ್ನು ನೋಡಿದ್ದರೂ ನಾನು ನಿನ್ನತ್ತ ಯಾಕೆ ಆಕರ್ಷಿತನಾದೆ? ನಿನ್ನನ್ನು ಕಂಡಾಕ್ಷಣ ಮನಸ್ಸೇಕೆ ಗೊಂಬೆಯನ್ನು ಕಂಡ ಮಗುವಿನಂತೆ ಹಟ ಹಿಡಿಯಿತು? ಹರಿತ ಚೂರಿಯಂಥ ನಿನ್ನ ನೋಟ ಅದೇಕೆ ನನ್ನ ಎದೆಯಾಳ ಕಲಕಿತು. ನಿನ್ನ ನಗುವಿನ ಅಲೆ ನನ್ನೆದೆಗೆ ಬಡಿದಾಗ ಆಗುವ ಸಂತಸಕ್ಕೆ ಕಾರಣವೇನು? ನನಗೆ ನೀನು ಉತ್ತರಿಸದಾಗ ಅದೇಕೆ ನಾನು ತತ್ತರನಾಗುತ್ತೇನೆ? ಯಾವುದೋ ಜನ್ಮದ ಮೈತ್ರಿಯಿರದೇ ನೀನು ನನಗೊಂದು ಗುಂಗಿನಂತೆ ಹೇಗೆ ಕಾಡಬಲ್ಲೆ? ನಿನಗಷ್ಟೇ ಕೇಳುವಂತೆ ಒಲವ ಗೀತೆಯೊಂದ ಹಾಡಬೇಕು ಅಂತ್ಯಾಕೆ ಮನಸ್ಸು ಕುಣಿಯುತ್ತದೆ? ಭಕ್ತಿಯ ಲೆವೆಲ್ಲಿಗೆ ಪ್ರೀತಿ ಮುಟ್ಟೋಕೆ ಸಾಧ್ಯ ಅಂತ ಯಾಕೆ ಅನ್ನಿಸುತ್ತಿದೆ?

ನಿನ್ನಲ್ಲೆ ಜೀವವನ್ನು… ಅಡವಿಟ್ಟುಬಂದೆ ನಾನು..
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು… ಹರಿಯುವ ಮುನ್ನವೇ..

summer_love_wallpaper_rjtz3

ತುಂಬಾ ದಿನದಿಂದ, ಕವಿತೆ ಪೂರ್ತಿ ಮಾಡಲು ಸಿಗದ ಕೊನೆಯ ಪದದಂತೆ ನಿನ್ನದೇ ಗುಂಗು ನನ್ನ ಜೀವನವನ್ನು ವ್ಯಾಪಿಸಿದೆ. ಪ್ರತಿ ಕ್ಷಣವೂ ಈಗ ನೀನೇನು ಮಾಡುತ್ತಿದ್ದಿರಬಹುದು ಎಂಬ ಊಹೆಯ ಸವಿಯಲ್ಲೇ ಕಳೆಯುತ್ತಿದೆ. ಮರೆಯಲು ನಾ ಮಾಡಿದ ಪ್ರಯತ್ನದಲ್ಲೆಲ್ಲಾ ನನ್ನದು ಘನಘೋರ ಸೋಲಾಗಿದೆ. ಆದರೂ ಮನಸ್ಸಿಗೆ ಒಂದು ಭರವಸೆ ಉಕ್ಕಿಸಿ ಸಮಾಧಾನ ಮಾಡುತ್ತಿರುತ್ತೇನೆ. ತಿಪಟೂರಿನ ಜಾತ್ರೆಯ ಜನಜಂಗುಳಿಯಲ್ಲಿ ನಿನಗೆ ಅರಿವಿರದಂತೆ ನಿನ್ನ ಕಿರುಬೆರಳನ್ನು ಮುಟ್ಟುತ್ತೇನೆ. ಅರಳುವ ಹೂವೊಂದನ್ನು ನೋಡಿ ಖುಷಿಪಟ್ಟ ದಿನ, ಅಲ್ಲೆಲ್ಲೊ ಮರದ ಹಿಂದೆ ನಿನಗೇ ಅರಿವಿರದಂತೆ ನಿಂತು ನಾನೂ ಆನಂದ ಪಡುತ್ತೇನೆ. ನಿನ್ನ ಪಲ್ಲುವಿನ ಎಳೆಯೊಂದನ್ನು ಕದ್ದು ನನ್ನ ಪರ್ಸಿನಲ್ಲಿ ಖಾಯಂ ಆಗಿಟ್ಟುಕೊಳ್ಳುತ್ತೇನೆ. ಯಾವಾಗಲೋ ಒಮ್ಮೆ ನೀನು ನೋಡಿ ಕುತೂಹಲದಿಂದ ಕರೆ ಮಾಡುವೆ ಎಂಬ ಭರವಸೆಯಿಂದ ನಿನ್ನ ಡೈರಿಯ ಕೊನೆಯ ಪುಟಗಳಲ್ಲಿ ನನ್ನ ನಂಬರನ್ನು ಬರೆದಿಡುತ್ತೇನೆ. ತುರುವೆಕೆರೆ ತಿರುವುಗಳಲ್ಲಿ ಕೇವಲ ನಿನಗಷ್ಟೇ ಕೇಳುವಂತೆ ನಿನ್ನ ಹೆಸರನ್ನು ಕೂಗುತ್ತೇನೆ. ಮೂಲೆ ಶಂಕರೇಶ್ವರ ದೇವಸ್ಥಾನದಲ್ಲಿ ನಿನ್ನ ಹುಟ್ಟುಹಬ್ಬದ ದಿನ ನಿನ್ನ ಹೆಸರಲ್ಲಿ ಅರ್ಚನೆ ಮಾಡಿಸುತ್ತೇನೆ. ದಾಸರಿಘಟ್ಟ ಚೌಡೇಶ್ವರಿ, ಹೊನ್ನಮ್ಮನ ಬಳಿ ನಿನಗೆ ಸದಾ ಒಳ್ಳೆಯದಾಗಲಿ, ಬದುಕು ಪೂರ್ತಿ ಖುಷಿ ಇರಲಿ ಅಂತ ಹರಕೆ ಹೊತ್ತುಕೊಳ್ಳುತ್ತೇನೆ. ಇಂಥ ಸಮಾಧಾನದಿಂದಲಷ್ಟೇ ಮನಸ್ಸು, ನೀನು ನನ್ನೆಡೆ ನಗದಿದ್ದರೂ, ನನಗೆ ಉತ್ತರಿಸದಿದ್ದರೂ, ನನ್ನನ್ನು ನೆಗ್ಲೆಕ್ಟ್ ಮಾಡಿದರೂ ಸುಮ್ಮನಿದೆ. ಇಲ್ಲದೇ ಹೋಗಿದ್ದರೆ ರಚ್ಚೆ ಹಿಡಿವ ಮನಸ್ಸೆಂಬ ಮಗುವನ್ನು ಸಂತೈಸಲು ಜಗತ್ತಿನ ಎಲ್ಲಾ ಅಮ್ಮಂದಿರ ಪ್ರೀತಿಯನ್ನು ಒಟ್ಟುಹಾಕಿ ಸಂಭಾಳಿಸಬೇಕಾದೀತು!

– ನಿನ್ನ ಚಿಟ್ಟೆ ಕ್ಲಿಪ್ಪಿನ ಫ್ಯಾನ್!

ಡಿಯರ್ ಗುಂಗರಮಳೆಯ ಗೊಂಬೆ

ಈಗಲೂ ಅನ್ಸೋದು; ನಿನ್ನನ್ನು ಸರಿಯಾಗಿ ನಾನಿನ್ನೂ ನೋಡೇ ಇಲ್ಲ. ಹೌದು; ತುಂಬಾ ಸಲ ಕದ್ದು ನೋಡೋಕೆ ಪ್ರಯತ್ನ ಪಟ್ಟಿದೀನಿ. ಆದರೆ, ಆ ಆಯಸ್ಕಾಂತ ಕಣ್ಣುಗಳ ಸೆಳೆತದಿಂದ ಹೊರಬಂದು ನಿನ್ನನ್ನು ಕಣ್ತುಂಬಾ ನೋಡಬೇಕು ಎಂಬ ಆಸೆ ಮರೀಚಿಕೆಯಾಗೇ ಉಳಿದಿದೆ. ನಿಜ್ಜಾ ಹೇಳ್ತೀನಿ; ನಿನ್ನ ಕಿವಿಯ ಲೋಲಾಕನ್ನು ಫೇಸ್ ಬುಕ್ ನ ಪ್ರೊಫೈಲ್ ಫೊಟೋದಲ್ಲಿ ನೋಡಿದ್ದೇನೆಯೇ ವಿನಾ ನಿಜವಾಗಿ ಅದರ ಅಂದವನ್ನು ಇನ್ನೂ ನಾ ಸವಿದೇ ಇಲ್ಲ! ನಿನ್ನ ಕಂಗಳಿಗೆ ಅದೆಂಥಾ ಶಕ್ತಿಯಿದೆಯೇ ಮಾರಾಯ್ತೀ. ದೇವರನ್ನೇ ನಂಬಬೇಕು ಅನ್ನುವಷ್ಟು! ನಿಂಗೇ ಗೊತ್ತಿರೋ ಹಾಗೆ ನಾನು ಅದೆಷ್ಟು ಸಲ ಆ ಸೆಳೆತವನ್ನು ಭರಿಸಲಾಗದೇ ಮುಖ ತಗ್ಗಿಸಿದ್ದಿದೆ. ಆ ಹೋರು ಬೆಳಕಿಗೆ ಕಣ್ಣೊಡ್ಡಲಾಗದೇ ಸೋತಿದ್ದೇನೆ. ನೀನು ನನ್ನತ್ತ ನೋಡಿದ ಒಂದು ಸೆಕೆಂಡನ್ನು ತುಂಬಿಕೊಳ್ಳಲು ಈ ಮನಸ್ಸಿಗೆ ಏದುಸಿರು. ಆ ಬೆಳಕು ಮೈಯೆಲ್ಲಾ ವ್ಯಾಪಿಸಿ, ಆತ್ಮ ಒಮ್ಮೆ ಕಂಪಿಸಿ, ಬೆಳಕಿನ ಸ್ನಾನವಾದಷ್ಟೇ ಮನಸ್ಸು ಶುದ್ಧ ಶುದ್ಧ!

images1_thumb.jpg

ನೀ ಬಂದು.. ಬಳಿ ನೀ ಬಂದು..
ಈ ಸ್ವಪ್ನದ ಗಾಯ ನೋಡು…

ನೀನು ಎ.ಆರ್.ರೆಹಮಾನ್ ಸಂಗೀತದ ಹಾಗೆ; ಗುಟುಕು ಬಿಯರಿನ ಹಾಗೆ. ಮೊದಲಿಗೆ ಇಷ್ಟ ಅನ್ನಿಸಲ್ಲ. ಆದರೆ ಒಮ್ಮೆ ಗುಂಗು ಹತ್ತಿಬಿಟ್ಟರೆ ಮತ್ತೆ ಮತ್ತೆ ನೋಡುವ ಆಸೆ. ನೀನು ಜೀವನ ಪೂರ್ತಿ ಗುನುಗುವ ಗಾನ, ಸದಾ ಎದೆಯೊಳಗೇ ಉಳಿಯುವ ರಾಗ. ನೀನು ನನ್ನ ಹೃದಯದಲ್ಲಿರುವ ಮಚ್ಚೆ. ತಿರುಮಲೇಶರ ಅಕ್ಷಯ ಕಾವ್ಯದಂತೆ – ಯಾವ ಪುಟದಿಂದಾದರೂ ಶುರು ಮಾಡಿ- ಯಾವ ಪುಟದಲ್ಲಾದರೂ ನಿಲ್ಲಿಸಿ – ಎದೆ ತುಂಬಿಕೊಳ್ಳಬಹುದಾದಂತ ಅನನ್ಯ ಕಾವ್ಯ. ಚಂದದ ಸಾಲೊಂದನ್ನು ಬರೆಯುವಾಗ ಕಾಯ್ಕಿಣಿಯ ಭಾವವಿನ್ಯಾಸದಲ್ಲಿ ಮೂಡಿದ ಪಲುಕು. ನಿನ್ನಲ್ಲೇ ಕೆ.ಎಸ್.ನ. ಕವಿತೆಯ ಎಲ್ಲಾ ನಯ ನಾಜೂಕು ಮನೆ ಮಾಡಿದೆ. ನಿನ್ನ ಕಂಗಳು ಮಣಿಕಾಂತ್ ಪುಸ್ತಕದ ಶೀರ್ಷಿಕೆಯಂತಿರುತ್ತದೆ, ಒಮ್ಮೆ ಒಳ ಹೊಕ್ಕು ನೋಡಬೇಕೆಂಬ ಆಸೆ ಹುಟ್ಟಿಸುತ್ತದೆ. ಹೊಕ್ಕರೆ ನೆನಪುಗಳ ಜೋಳಿಗೆಯಿಂದ ಮನಸ್ಸು ಭಾರ. ನಿನ್ನ ಕೂದಲಿನ ಕಪ್ಪು ಜಲಪಾತದಲ್ಲಿ ಕುವೆಂಪು ಕವಿತೆಗಳ ಗಾಢತೆ, ನವಿರುತನ ಇದೆ. ಒಂದು ಅದ್ಭುತ ಕಥೆ ಬರೆದ ಬಳಿಕ ರವಿ ಬೆಳೆಗೆರೆ ಇಡುವ ಕೊನೆಯ ಫುಲ್ ಸ್ಟಾಪ್ ನಿನ್ನ ಬಿಂದಿ ಅನ್ನಿಸುತ್ತದೆ. ನಿನ್ನ ಕೊರಳಿನ ಪದಕ ನನ್ನ ಹೃದಯ – ಎಂಬಂಥ ಸಾಲು ಬರೆದಾಗ ಎಚ್ಚೆಸ್ವಿಯಲ್ಲಿ ಮೂಡಿದ ಭಾವನೆ ನಿನ್ನ ಕಂಗಳಲ್ಲಿ ಜಿನುಗುತ್ತಿರುತ್ತದೆ. ನಂಗನ್ಸುತ್ತೆ, ನೀನ್ಯಾರನ್ನೆಲ್ಲಾ ನೋಡಿ ನಗುತ್ತೀಯೋ ಅವರೆಲ್ಲಾ ಜೋಗಿಯಂತೆ ಇಪ್ಪತ್ತೈದು ದಿನಕ್ಕೊಂದು ಕಾದಂಬರಿ ಬರೆಯಬಲ್ಲರು. ನಿನ್ನ ಕಿರುಬೆರಳ ಕರೆಗೆ ವಿಶ್ವೇಶ್ವರ ಭಟ್ಟರ ಪುಸ್ತಕದಲ್ಲಿದ್ದಂತೆ ಪ್ರಪಂಚವನ್ನೇ ಗೆಲ್ಲಬಲ್ಲಂಥ ಹುಮ್ಮಸ್ಸನ್ನು ಕೊಡಬಲ್ಲಂಥ ಶಕ್ತಿಯಿದೆ. ಒಂದೊಳ್ಳೆ ಕಥೆ ಬರೆದ ನಂತರ ಚಿತ್ತಾಲರ ಮೈ ಮುರಿಯುವಿಕೆಯ ಸುಖ ನಿನ್ನ ಆಕಳಿಕೆಯಲ್ಲಿದೆ. ನಿನ್ನ ನಗೆಯನ್ನು ಪೋಸ್ಟ್ ಮಾರ್ಟಮ್ ಮಾಡಿ ವಿಶ್ಲೇಷಿಸಿದರೆ ಅದರಲ್ಲಿ ಪೂಚಂತೇ ಬರಹದ ಸವಿಯಿದೆ. ಗಾಳಿಯೊಡನೆ ಆಟವಾಡುವ ನಿನ್ನ ಮುಂಗುರಳಲ್ಲಿ ಬೇಂದ್ರೆ ಕವಿತೆಯ ಅರ್ಥಬದ್ಧ ಪ್ರಾಸ ಇದೆ. ನಿನ್ನ ನಡೆ ನುಡಿಯಲ್ಲಿ ಭೈರಪ್ಪನವರ ಡೀಟೈಲಿಂಗ್ ಇದೆ. ನಿನ್ನ ಮನಸ್ಸು ಮಾತ್ರ – ಅಡಿಗರ ಕವಿತೆಯಂತೆ. ತಿಳಿದುಕೊಂಡಷ್ಟು ಹೊಸ ಅರ್ಥಗಳು, ಒಳಹೊಕ್ಕಷ್ಟೂ ಮತ್ತಷ್ಟು ವಿವರಗಳು.
ಒಟ್ಟಾರೆ ಹೇಳಬೇಕೆಂದರೆ- ನೀನೊಂದು ನಡೆಯುವ ಕವಿತೆ.

images

ನೀನೆಂದರೆ ನನ್ನೊಳಗೆ… ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ… ನೀನೇ ಒಂದು ಸಂಕಲನ

ನಿಂಗೆ ಎಲ್ಲಾ ಅರ್ಥ ಆಗೋದು ಲೇಟು. ಮೆಸ್ಸೇಜಿಗೆ ಉತ್ತರ ಕೊಡುವುದೂ ಅದೆಷ್ಟು ತಡ. ತುಂಬಾ ಸಲ ನಿನ್ನ ಮೆಸ್ಸೇಜಿನ ಬಾಕ್ಸ್ ನ್ನು ತೆರೆದೇ ಇಟ್ಟು ಹಸಿದ ಮನ ವೀಣಾ ಸ್ಟೋರ್ಸ್ ಮುಂದೆ ಇಡ್ಲಿಗಾಗಿ ಕಾಯುತ್ತಿರುವಂತೆ ನಿನ್ನ ಮೆಸ್ಸೇಜಿಗಾಗಿ ಕಾಯುತ್ತಿರುತ್ತೇನೆ. ಇದೀಗ ಟಣ್ ಅನ್ನುವ ಸದ್ದಿನೊಂದಿಗೆ ನಿನ್ನ ಉತ್ತರ ಬರುತ್ತದೆ ಭರವಸೆಯ ಆಶ್ವಾಸನೆಯೊಂದಿಗೆ ಅದೆಷ್ಟು ಕ್ಷಣಗಳಿಗೆ ನಾನು ಮೋಸ ಮಾಡಿಲ್ಲ? ನನ್ನ ಕಂಗಳ ಬೇಡಿಕೆ ನಿಂಗರ್ಥ ಆಗಿದ್ದಿದ್ದರೆ ಇಷ್ಟೊತ್ತಿಗೆ ಒಂದು ಸುಂದರ ಸ್ನೇಹವೊಂದು ರೂಪುಗೊಂಡಿರುತ್ತಿತ್ತು. ನಿನ್ನ ಉತ್ತರ ಮತ್ತು ನನ್ನ ಮರು ಉತ್ತರದ ನಡುವಿನ ಸಮಯದ ಲಯವೇ ಹೇಳುತ್ತದೆ; ಬಹುಷಃ ಬೆಳಗಾಗುತ್ತಲೇ ನಾನು ಗುಡ್ ಮಾರ್ನಿಂಗ್ ಹೇಳುವುದು ನಿನ್ನ ಉತ್ತರದ ನಿರೀಕ್ಷೆಗೇ. ಪ್ರತೀ ಕ್ಷಣದ ರುಚಿ ನೋಡಿ ನಿನಗಾಗಿ ಕಾಯ್ದಿರಿಸುವ ಶಬರಿ ನಾನು, ಅಂತಲೇ ನನ್ನ ಬಗ್ಗೆ ನನಗಿರುವ ಗುಮಾನಿ. ಇಷ್ಟಕ್ಕೂ ನನಗೆ ಬೇಕಿರುವುದು ಒಂದು ಸುಂದರ ಸ್ನೇಹ. ನಿನ್ನನ್ನು ಅರಿಯುವ ಸುಖ. ಬದುಕು ಪೂರ್ತಿ ಖುಷಿಯಿಂದ ಕಳೆಯಲು- ನಿನ್ನ ಜೊತೆ ಕಳೆದ ಸಮಯಗಳ ಒಂದು ಜೋಳಿಗೆಯಷ್ಟು ನೆನಪುಗಳು. ಮತ್ತು ಕೊಂಚೇ ಕೊಂಚ ಪ್ರೀತಿ.
ಜೊತೆಗೆ ನೀನು ಸದಾ ಖುಷಿಯಾಗಿರುವುದು.
ಇಷ್ಟು ಪುಟ್ಟ ಬೇಡಿಕೆಯಿಟ್ಟುಕೊಂಡು ನಿನ್ನ ಉತ್ತರಕ್ಕಾಗಿ ಪ್ರತಿದಿನ ಕಾಯುತ್ತಿರುತ್ತೇನೆ; ಎಂದಿನಂತೆ.
ಇದೇ ನನ್ನ ನಾಳೆಗಳನ್ನು ರುಚಿಕಟ್ಟಾಗಿರಿಸುತ್ತಿದೆ. ಇದೇ ಭರವಸೆಯ ನೊಗ ಹೊತ್ತು ದಿನದ ಹೊಲವನ್ನು ಉಳುತ್ತಿರುತ್ತೇನೆ.

–  ನಿನ್ನ ಕಣ್ಣುಗಳ ಫ್ಯಾನ್

ಗೆಳತೀ,

ಹೊತ್ತಲ್ಲದ ಹೊತ್ತಲ್ಲಿ ನಿನ್ನ ನೆನಪು ತೀವ್ರವಾಗಿ ಕಾಡುತ್ತಿದೆ. ಈ ಕ್ಷಣ ಬೇವು ತಿಂದ ಮೂಕನಂಥ ಮನ. ಎದೆಯೊಳಗಿನ ನೋವೊಂದನು ಕ್ಷಣವು ಗಿಲ್ಲಿ, ಮೆಲ್ಲ ಮೆಲ್ಲ ಆ ನೋವ ನಾದ ವಿಶ್ವವ್ಯಾಪ್ತಿಯಾದಂತೆ ಅನಿರ್ವಚನೀಯ ಚಡಪಡಿಕೆ. ಮನಸ್ಸು ಸೊರಗಿ, ಸೊಲ್ಲು ಕರಗಿ ಮೌನ ಮರುಗುವ ಸಮಯ. ಯಾವನೋ ಒಬ್ಬ ಸಿಟ್ಟಿನ ಋಷಿ ಈ ರಾತ್ರಿಗೆ ಎಂದೂ ಮುಗಿಯದ ಶಾಪ ಕೊಟ್ಟಿಹನು ಎಂಬಂಥ ಭಾವ. ನೀನಿಲ್ಲವೆಂಬ ತಲ್ಲಣ, ತರಂಗವೊಂದು ನಿಶ್ಕಲ್ಮಶ ಕೆರೆಯಲಿ ಬೆಳೆದಂತೆ ನನ್ನಿಡೀ ಜೀವನವನ್ನೇ ಆವರಿಸಿದ ಹಾಗೆ. ಪುಸ್ತಕ ಮುಗಿದರೂ ಕೊನೆಯಾಗದ ವಿವರಣೆಯಿರುವಂಥ ಭಾವನೆಗಳನ್ನು ಹೇಗೆ ತಾನೆ ತಿಳಿಸಬಲ್ಲೆ?

3004663277_d87ffedbb0

ನೀ ಜತೆಯಿದ್ದಾಗ ಅದೆಷ್ಟು ಚಂದವಿತ್ತು ಸಂಜೆಗಳು. ನಾವಿಬ್ಬರೂ ಸುಮ್ಮನೆ ಇದ್ದಾಗ್ಯೂ ನೆರಳುಗಳೇ ಒಲವಿನಾಟ ಆಡುತ್ತಿದ್ದವು. ನಾವೆದ್ದು ಹೋದರೂ ಆ ಜಾಗ ಬಿಟ್ಟು ಬರಲೊಲ್ಲೆ ಎಂಬಂಥ ನೆರಳುಗಳು. ಅಷ್ಟರಲ್ಲೇ ನಮ್ಮ ಮಧ್ಯೆಯಿದ್ದ ನಿಶ್ಯಬ್ದವನ್ನು ಕದ್ದು ಕೋಗಿಲೆಯೊಂದು ಅದೆಂಥ ಅದ್ಭುತ ರಾಗ ರಚಿಸಿಬಿಟ್ಟಿತು! ಮುಗಿಲ ಬಯಲಲಿ ಚಂದಿರನಿಳಿದಂತೆ ನನ್ನೊಳಗೆ ಆತಂಕ; ನಾನಿನ್ನು ಹೊರಡುವೆ ಅಂತೀಯೇನೊ ಎಂಬ ಭಯ. ಹಾಗನ್ನುವಷ್ಟರೊಳಗಿನ ಘಳಿಗೆಗಳ ಬೊಗಸೆಯೊಳಗೆ ನನ್ನಿಡೀ ಬದುಕಿಗಾಗುವಷ್ಟು ನಿನ್ನನ್ನು ಸುರಿದುಕೊಳ್ಳಬೇಕೆಂಬಾಸೆ. ಆಗೆಲ್ಲಾ ಎದೆ ಅಕ್ಷಯಪಾತ್ರೆ. ಮೆದುಳಲಿ ಮೆಮರಿ, ಸಾವಿರದೆಂಟು ಜೀಬಿ.  ನಾನು ಫೋನ್ ಮಾಡಿದಾಗ, ಏನೋ ಒಂದೆರಡು ನಿಮಿಷ ಮಾತಾಡಿರಬೇಕು ಅಷ್ಟರಲ್ಲೇ, ’ಅಮ್ಮ ಬಂದ್ರು ಕಣೋ, ಆಮೇಲ್ ಮಾಡ್ತೀನಿ’ ಅಂತ ಇಟ್ಟುಬಿಡ್ತೀಯಲ್ಲಾ,  ಜಿಟಿಜಿಟಿ ಮಳೆಯೊಂದು ಧಿಡೀರನೆ ನಿಂತಂತೆ ಅನ್ನಿಸುತ್ತಿತ್ತು. ಆ ಇಡೀ ರಾತ್ರಿ ಮನಸ್ಸಿಗೆ ನಿನ್ನ ಮಾತುಗಳದೇ ಮೆಲುಕು. ಮುಂಜಾನೆವರೆಗೂ ಮರದಡಿಯ ಮಳೆ.

ನೀನೆಂದರೆ ನನಗೆ ಏನು ಎಂಬುದನ್ನು ಪದಗಳೊಳಗೆ ತಿಳಿಸುವುದು ಹೇಗೆ? ನಿನ್ನನ್ನು ವ್ಯಾಖ್ಯೆಗೆ ಸಿಲುಕಿಸಲಾಗದ ಕವಿಯ ಸೋಲೇ ಎಂದುಬಿಡಲಾ? ನೀನೆಂದರೆ ಕನ್ಯಾಕುಮಾರಿಯಲ್ಲಿ ಒಂದು ಬೊಗಸೆ ಸಾಗರದ ನೀರು ಹಿಡಿದು ಸೇರಿದ ಮೂರರಲ್ಲಿ ಯಾವ ಕಡಲ ನೀರು ಅಂತ ಗೊತ್ತಾಗದ ಗೊಂದಲವಾ?

ಗೆಳತೀ, ನನ್ನ ಪಾಲಿಗೆ ನೀನು ಪರಿಶುದ್ಧ ಪ್ರಣತಿ; ಘನಘೋರ ಸೋಲುಗಳ ಕತ್ತಲಲಿ ಬೆಳಕು ಕೊಡುವಂಥ ಅನುಭೂತಿ. ಬದುಕಿತ್ತ ಎಲ್ಲಾ ದುಃಖಗಳ ತುಲಾಭಾರಕ್ಕೆ ಸರಿದೂಗುವ ಸಂತಸ. ಉರಿವ ಸೂರ್ಯನೆಡೆಗೇ ಮುಖಮಾಡಿ ಮುಗ್ಧ ನಗು ಸೂಸುವ ಸೇವಂತಿ. ನಿದಿರೆಯ ಬ್ಯಾಂಕಿನ ಸ್ವಪ್ನ ತಿಜೋರಿಯ ಕೀಲಿಕೈ. ಸಾವಿನ ಹೊಸ್ತಿಲಲಿದ್ದಾಗಲೂ ತೃಪ್ತಿಕೊಡುವ ಗಂಗೆಯ ಹನಿಯ ತಂಪು.

ನೆನಪುಗಳ ತುದಿ ತುಂಬಾ ಚೂಪು ಮಾರಾಯ್ತಿ, ಅದು ನೀಡುವ ನೋವು ಶತ್ರುವಿಗೂ ಬೇಡ. ಹೇಗೂ ಚಳಿ ತನ್ನ ದಾಳಿ ಶುರುಮಾಡಿದೆ. ಕಂಬಳಿಯ ಸೈನ್ಯವೇ ಇದ್ದರೂ ಒಬ್ಬ ಉತ್ತರಾಧಿಕಾರಿಣಿಯ ಅಗತ್ಯ ತೀವ್ರವಾಗಿದೆ.

ತಂತಿ ಮೀಟಿದ ಕೂಡಲೆ ಹೊಮ್ಮುವ ರಾಗದಂತೆ, ಪತ್ರ ನಿನ್ನ ಮುಟ್ಟಿದೊಡನೆಯೇ ಬಸ್ಸನೇರುವಂತವಳಾಗು.

tumblr_lfwe28NXBp1qf30uco1_500_thumb

ಯಾಕೆಂದರೆ ಇದು ಮೆಲುಕು ಮುಗಿಯುತ್ತಿರುವ ಸಮಯ. ಬದುಕ ಮುಂದಿರುವ ಕ್ಷಣಗಳ ಬಯಲಿಗೆ ಕಾಲುದಾರಿಯೊಂದರ ಅವಶ್ಯಕತೆಯಿದೆ. ಕನಸುಗಳ ಚಿತ್ರಗಳಿಗೆ ಬಣ್ಣ ತುಂಬಬೇಕಿದೆ. ಎದೆಯೊಳಗಿನ ಜಡ್ಡುಹಿಡಿದ ತಂತುಗಳಿಗೆ ಹೊಸರಾಗವೊಂದು ನೆನಪಾಗಿದ್ದು ನಿನ್ನ ಕಿರುಬೆರಳು ಮೀಟಲಿದೆಯೆಂದೇ ಸಂತಸದಿಂದ ಕಾಯುತ್ತಿದೆ,

ಅಂದ ಹಾಗೆ ಯಾವಾಗ ಬರುತ್ತಿದ್ದೀ?

ದೇವಕೀ, ನಮಗಿದ್ದ ಕನಸು ಒಂದೇ..

ಆ ಕನಸಿನ ಹೆಸರು "ನಾವಿಬ್ಬರು!"

ಕಟ್ಟೋ ಕನಸಾಗಲಿ ಹುಟ್ಟೋ ಹಾಡಾಗಲಿ ಇಬ್ಬರೇ ಮೂಡಿಸಬೇಕು. ಬದುಕಿನ ದಾರಿ ಅದೆಷ್ಟು ದೂರವಿದ್ದರೂ ನಾವಿಬ್ಬರೇ ಕಿರುಬೆರಳ ಜೊತೆಗೂಡಿಸಿ ಸವೆಸಬೇಕು. ಅಂಗಳದಲಿ ನಿನ್ನ ಅವಿಷ್ಟೂ ಹೆಜ್ಜೆಗುರುತುಗಳಿಗೆ ನನ್ನ ಪಾದಗುರುತೇ ಸಾಥ್ ನೀಡಬೇಕು. ಒಂದಿಷ್ಟು ದುಃಖವಾಗಿ ಒಂದೆರಡು ಹನಿ ಜಾರಿದರೂ ನನ್ನ ಕಂಗಳ ಮೇಲೆ ನಿನ್ನ, ನಿನ್ನ ಕಂಗಳ ಮೇಲೆ ನನ್ನ ಬೆರಳುಗಳು ಮಾತ್ರ ಮೂಡಬೇಕು. ನಮ್ಮಿಬ್ಬರ ಕಷ್ಟಗಳಿಗೆ ನಾವಿಬ್ಬರೇ ತಾಗಿಕೊಳ್ಳಬೇಕು. ಬದುಕಿನ ಬವಣೆಗಳಿಗೆ ನಾವಿಬ್ಬರೆ ನಮ್ಮನ್ನ ಭಾಗಿಸಿಕೊಳ್ಳಬೇಕು ; ಗುಣಿಸಿಕೊಳ್ಳಬೇಕು.

ಇದಿಷ್ಟೇ ಈ ವಾಸು ದೇವರ ಮುಂದಿಟ್ಟಿದ್ದ ಬೇಡಿಕೆ!

Morning Mist

ದೇವರಿಗೆ ನನ್ನ ಮೇಲೆ ಕೋಪ ಬಂದಿರಬೇಕು. ನಾನು ಕಂಡ ಯಾವ ಕನಸುಗಳನ್ನು ನನ್ನ ಎದೆಯ ಮೇಲೆ ಮೂಡಲು ಬಿಡುತ್ತಿಲ್ಲ. ಕೈಯ್ಯ ಯಾವ ಗೆರೆಯೂ ಬದುಕನ್ನು ದೇವಕಿಯತ್ತ ಕರೆದೊಯ್ಯುತ್ತಿಲ್ಲ. ಹಣೆಯಬರಹದ ಒಂದು ಅಕ್ಷರವೂ ನಿನ್ನತ್ತ ವಾಲುತ್ತಿಲ್ಲ. ನಿಜವಾಗಿಯೂ ನನಗೆ ಬೇಕಿರುವ ಒಪ್ಪಿಗೆ ಖಂಡಿತಾ ಆ ದೇವರದ್ದಲ್ಲ. ನನ್ನ ದೇವಕಿಯದು. ಕೇವಲ ನಿನ್ನದು. ನಿನ್ನ ಒಂದು ಚಿಕ್ಕ ಕಣ್ಣಿನ ಇಷಾರೆ ನನ್ನ ಜೀವನಪೂರ್ತಿ ನಡೆಸಬಲ್ಲುದು, ಇಡೀ ಬಾಳನ್ನು ಹಸನಾಗಿಸಬಲ್ಲದು. ಪುಟ್ಟ ಕಿರುನಗೆ ನನ್ನ ಇಡೀ ದಿನವನ್ನು ಹೂವಿನಂತೆ ಅರಳಿಸಬಲ್ಲುದು. ಹೀಗಿರುವಾಗ ನಾನ್ಯಾಕೆ ದೇವರ ಮುಂದೆ ನನ್ನ ಜೋಳಿಗೆ ಇಟ್ಟು ಬೇಡುತ್ತಿದ್ದೇನೆ?

ದೇವಕೀ, ನನ್ನ ಇಡೀ ಬದುಕನ್ನು ಬರೀ ನಿನ್ನ ಜತೆ ಕಳೆಯಬೇಕಿದೆ. ನನ್ನ ಖುಷಿಯ ಕಣಕಣವನ್ನೂ ನಿನ್ನ ಬದುಕಿಗೆ ಸುರಿಯುವುದಿದೆ, ದುಃಖ ಮಾತ್ರ ಇರುವೆಯ ಪಾದದಷ್ಟೂ ನಿನಗೆ ಸೋಕಿಸದಂತೆ ಬಾಳಬೇಕಿದೆ. ಅದಕ್ಕಾಗಿ ನನ್ನ ಬದುಕನ್ನು ಕೇವಲ ನಿನ್ನ ಜತೆಯಷ್ಟೇ ಹಂಚಿಕೊಳ್ಳಬೇಕೆಂಬ ಹಂಬಲವಿದೆ. ದೇವರು ಒಪ್ಪದಿದ್ದರೇ ಭಾರವಾದ ಎದೆಯಿಂದ ಒಂದಿಷ್ಟು ಶಪಿಸಬೇಕಿದೆ. ಒಪ್ಪಿದರೆ ನಿನ್ನ ಜೊತೆಗೂಡಿ ಒಂದಿಷ್ಟು ಸುತ್ತುಗಳ ಸುತ್ತಬೇಕಿದೆ. ಮತ್ತಷ್ಟು ಕನಸುಗಳನ್ನು ಬಿತ್ತಬೇಕಿದೆ.

love

ಇದಕ್ಕೆ ನಿನ್ನ ಸಹಾಯ ಅಗತ್ಯ. ನಿನ್ನ ಸಾನಿಧ್ಯ ಅಮೂಲ್ಯ.

ಪ್ಲೀಸ್, ನನಗೆ ಸಹಾಯ ಮಾಡ್ತೀಯಾ ಅಲ್ವಾ?

*******

(ದೇವಕಿ ಬ್ಲಾಗಿಗಾಗಿ ಬರೆದದ್ದು, ನವಿಲ್ಗರಿ ಸೋಮುವಿನ ಸಹಾಯದೊಂದಿಗೆ)

(ಚಿತ್ರಕೃಪೆ : ಈ ಬ್ಲಾಗಿಂದ ಮತ್ತು ಇಲ್ಲಿಂದ)

ನನ್ನ ಪ್ರಪಂಚ ತುಂಬ ಚಿಕ್ಕದು.

ಇಲ್ಲಿ ದೇವಕಿ ಎಂಬ ಮೂರಕ್ಷರದ ಅಸ್ತಿತ್ವ ಬಿಟ್ಟರೆ ಬೇರೆ ಅಂಥಾ ವಿಶೇಷಗಳಿಲ್ಲ. ಅಲ್ಲಲ್ಲ, ಬೇರೆ ವಿಶೇಷಗಳೇ ಇಲ್ಲ. ಯಾರ ಕಾಲ್ ಬಂದರೂ ನಿನ್ನದಿರಬಹುದೆಂಬ ನಿರೀಕ್ಷೆಯಿಂದಲೇ ಫೋನ್ ಎತ್ತಲ್ಪಡುತ್ತದೆ. ನನ್ನೊಳಗಿನ ಸಿಕ್ತ್ ಸೆನ್ಸ್ ದಿನಾ ನೀನು ಬರಬಹುದೆಂಬ ಸೂಚನೆ ನೀಡುತ್ತಿರುತ್ತದೆ. ನನ್ನೆಡೆಗೆ ಬರುವ ಎಲ್ಲಾ ದಾರಿಯ ತಿರುವಲ್ಲಿ ಸದಾ ನಿನ್ನ ಬಿಂಬ. ದಿನವಿಡೀ ಕಾದ ಮನವು ಸಂಜೆ ನೀ ಬಾರದೇ ಇರಬಹುದಾದ ಭಯದಿಂದ ಬಂಜೆಯಾಗುತ್ತದೆ. ರಾತ್ರಿಯೆಂದರೆ ಬಾನು ಚುಕ್ಕಿ ಜೋಡಿಸುವ ಹುಡುಗಿಗೆ ಕಾದ ಅಂಗಳ. ಅಲ್ಲೂ ಕಾಯುವಿಕೆಯೇ ಕಣ್ಕುಕ್ಕುತ್ತದೆ.

 waiting
ನಿಜ, ಈ ಜಗತ್ತಿನಲ್ಲಿ ಎಲ್ಲಾ ಕಾಯುತ್ತಿದ್ದಾರೆ, ಏನೋ ಒಂದಕ್ಕೆ. ವೈಟಿಂಗ್ ಫಾರ್ ಗೋಡೋ ನಾಟಕದಲ್ಲಿ ಗೋಡೋ ಗೆ ಕಾಯ್ವಂತೆ. ಸುಖಕ್ಕೆ, ಪ್ರಮೋಶನ್ ಗೆ, ರೇಶನ್ ಗೆ, ಬೆಲೆ ಇಳಿಕೆಗೆ, ಇನ್ನೊಂದು ಇಲೆಕ್ಷನ್ ಗೆ, ಪ್ರೀತಿಗೆ, ನೋವಿನ ನಿವಾರಣೆಗೆ, ಒಳ್ಳೆಯ ಕನಸಿಗೆ, ಕನಸು ನನಸಾಗುವ ಘಳಿಗೆಗೆ, ಗೆಲುವಿಗೆ..
ಕೊನೆಗೆ ಕೆಲವರು ಸಾವಿಗೂ!

ನೀರೊಳಗೆ ಮುಳುಗಿರುವವನು ಉಸಿರು ಬಯಸುವಷ್ಟು ನಿನ್ನ ಇಷ್ಟಪಡ್ತಿದೀನಿ ಅನ್ನಿಸ್ತಿದೆ. ನಿನ್ನ ಇಷ್ಟಪಡುವುದು ನನ್ನ ಕನಸು ಅಲ್ಲ, ಬದುಕು! ಕಾಲ ನನ್ನನು ಕರೆದೊಯ್ಯುವ ಕೊನೆಘಳಿಗೆಯ ಕೊನೆಯ ತಿರುವಿನಲ್ಲೂ ನಿನ್ನ ಒಂದು ನಗುವಿಗೆ, ನಿನ್ನ ಬರುವಿಕೆಗೆ ಕಾಯ್ತೀನಿ.

ಒಂದು ಮಿಸ್ಡ್ ಕಾಲ್ ಸಾಕು. ಒಂದು ಪುಟ್ಟ ಗೆಳೆತನ ಸಾಕು. ನನ್ನೆಡೆಗಿನ ಒಂದಿಷ್ಟು ಕಾಳಜಿ, ಚೂರೇ ಚೂರು ಪ್ರೀತಿ ಸಿಕ್ಕರೂ ಸಾಕು,

ದೇವರು ನನಗಿತ್ತ ಬದುಕನ್ನು ಸಾರ್ಥಕಗೊಳಿಸಿದ್ದೇನೆಂದು ಅವನಿಗೆ ತಿಳಿಸೋಕೆ ಏನಾದರೂ ಒಂದು ಮಾಡು ಸಾಕು ದೇವಕಿ. ಮುಂದಿನ ಅದಷ್ಟೂ ಜನ್ಮಕ್ಕೆ ನಿನ್ನ ಋಣದಲ್ಲಿರ್ತೀನಿ.

ಇದೊಂದು ಸಹಾಯ ಮಾಡ್ತೀಯಾ ಅಲ್ವ?

 

*****

 

(ನನ್ನ ದೇವಕಿ ಬ್ಲಾಗಿಗಾಗಿ ಬರೆದದ್ದು. ಫೋಟೋ ಕೃಪೆ : ಇಲ್ಲಿಂದ)

man_w_bottle

 

ಪ್ರೀತಿಯ ಪಾರೂ,

ಇದು ನಿನ್ನ (ದೇವ)ದಾಸನ ಪತ್ರ. ಅದೇ ಡಿ"ವೈನ್" ಬಾರ್ ನಲ್ಲಿ ಖಾಯಂ ಆಗಿ ಪ್ರತೀ ದಿನ, ಎದೆಯೊಳಗೆ ಉರಿವ ಸಂಜೆಗಳಿಗೆ ತಂಪೆರೆವ ಪ್ರಯತ್ನದಲ್ಲಿ ಹಾಟ್ ಡ್ರಿಂಕ್ಸ್ ನ್ನು ಹೊಟ್ಟೆಗೆ ಸುರಿಯುವವ. ಸೂರ್ಯಾನೇ ಸಮುದ್ರದಾಗೆ ಮತ್ತಿನಲ್ಲಿ ಇಳಿಯುವಾಗ, ಬಾರಲ್ಲಿ ಬಾಟಲುಗಳ ಮಧ್ಯೆ ಮುಳುಗುವವ. ಬಾಟಲಿನ ಜತೆಗೆ ಉಪ್ಪಿನಕಾಯಿ ಇಡುವ ಹುಡುಗನ ಬಳಿ "ನನ್ನ ಪಾರು ನಂಗೆ ಸಿಗ್ತಾಳಲ್ವಾ?" ಅಂತ ಸುಮ್ಮಸುಮ್ಮನೆ ಕೇಳುವವ. ಅವನೋ, ಆ ಪ್ರಶ್ನೆ ಬಂದೊಡನೆ ತಾನೇ ಸಾಕ್ಷಾತ್ ಹಣೆಬರಹ ಬರೆವ ಪರಬ್ರಹ್ಮನಂತೆ "ಹೂಂ ಬಾಸು!.. ನಿಮ್ತಾವ ಬಂದೇ ಬತ್ತಾಳೆ.. ಯೋಚ್ನೆ ಮಾಡ್ಕಂಬೇಡಿ" ಅನ್ನುವನು. ನನ್ನ ಪರಿಸ್ಥಿತಿ ಕಂಡ ಬಾರು ಮ್ಯಾನೇಜರು, "ಚಿಂತಿ ಮಾಡ್ಬೇಡಿ ಸಾರೂ.. ಆಕೀನ ಮರ್ತು ಇನ್ನೊಬ್ಬಾಕೀನ ಪ್ರೀತ್ಸಿ.. ಪ್ರಪಂಚ ದೊಡ್ಡದೈತಿ.." ಅನ್ನೋನು. ಯಾಕೋ ಗೊತ್ತಿಲ್ಲ, ಅವನ ಮಾತಲ್ಲಿ ಇನ್ನೊಂದು ಸಾರಿ ಬೇರೆ ಹುಡುಗಿ ಕೈಕೊಟ್ಟರೆ ನಾನು ಈ ಬಾರ್ ಗೆ ಬದುಕಿಡೀ ಖಾಯಂ ಗಿರಾಕಿಯಾಗುವ ಆಸೆಯನ್ನು ಒಳಸುಳಿಯಲ್ಲಿರುವಂತೆಯೇ ಅನಿಸುತ್ತದೆ. ಅವನು ಕೂತಿರುವ ಭಂಗಿಯೂ ಹಾಗೇ, ಅಜೀವ ಚಂದಾದಾರರಿಗೆ ಹೊಂಚು ಹಾಕುತಿರುವ ಸಂಪಾದಕನಂತೆ. ಹಾಗೆ ನೋಡಿದರೆ ನಾನೂ ವಿರಹದ ಪತ್ರಿಕೆಗೀಗ ಲೈಫ್ ಟೈಮ್ ಚಂದಾದಾರ. ಸದಾ ನಿನ್ನ ಧ್ಯಾನದಲ್ಲಿರುವ ಸದಾಶಿವ. ದಿನವೂ ಬಾರೊಳಗಿನ ಮಬ್ಬು ಬೆಳಕಲ್ಲಿ ಸೂರ್ಯಾಸ್ತದ ಕಣ್ಣುತಪ್ಪಿಸಿ ಬಾಳುವವ. ನಾನು ಥೇಟ್ ಅದೇ ದಾಡಿ ಬಿಟ್ಟ, ಆಳಗಣ್ಣಿನ, ತಲೆಕೆಟ್ಟರೆ ಸಿಕ್ಸ್ ಪ್ಯಾಕ್ (ಸಿಗರೇಟು) ಕೈಯ್ಯಲ್ಲಿ ಹಿಡಿವ ದೇವದಾಸನು.

PD*27571887

ನಿನ್ನ ನೆನಪಲ್ಲಿ ಬೆಳಿಗ್ಗೆ ಮಧ್ಯಾಹ್ನಗಳು ಖಾಲಿಯಾಗುವುದು ಖರೆ, ಆದರೆ ನಿಜವಾಗಿಯಾದರೆ ಈ ಸಂಜೆಯದ್ದೇ ಕರಕರೆ. ಅದಕ್ಕೆ ವರುಷವಾಗುವ ಖಯಾಲಿ. ಅದಕ್ಕೆ ನಾನೂ-ನೀನೂ ಜತೆಯಾಗಿ ಕಳೆದ ಸಾವಿರ ಕ್ಷಣಗಳ ನೆನಪು ಅಂಟಿಕೊಂಡಿವೆ. ನಿನ್ನ ಮರೆಯಲಾರದಿರುವಾಗ ಈ ಕ್ಷಣಗಳೂ ಭಾರೀ ಭಾರ. ಕ್ಷಣಗಳನ್ನು ಕಳೆವ ಒಂದೇ ಒಂದು ದಾರಿಯೆಂದರೆ ನನ್ನ ನಾ ಕಳೆದುಕೊಳ್ಳುವುದು. ಅದಕ್ಕೆ ನನಗೆ ಸಹಾಯ ಮಾಡುವ ಸ್ನೇಹಿತರೆಂದರೆ ಇದೇ ಬಾರು, ಇದೇ ಬೀರು. ಇಡೀ ಬೆಂಗಳೂರು ಕೂಡ ಒಂದು ರೀತಿಯಲ್ಲಿ ಬಾರ್ ಅನ್ನಬಹುದು. ಇಲ್ಲಿನ ಊರುಗಳೂ ಹಾಗೇ. ಮಲ್ಲೇಶ್ವ’ರಂ’, ಶೇಷಾದ್ರಿಪು’ರಂ’. ಅಂತೆಯೇ ಇಲ್ಲೆಲ್ಲರೂ ವೇಗದ, ಹಣದ, ಪ್ರೀತಿಯ ಮತ್ತಿನಲ್ಲೇ ತೇಲುತ್ತಿರುತ್ತಾರೆ. ಇಲ್ಲಿನ ಜನರ ನಿಜವಾದ ಒಳಗನ್ನು ನೋಡಬೇಕಾದರೆ ಅವರ ನಿಜವಾದ ಊರುಗಳಿಗೇ ಹೋಗಬೇಕು. ಅಲ್ಲಿಯೇ ಅವರು ಅವರಾಗುತ್ತಾರೆ. ಇಲ್ಲೇನಿದ್ದರೂ ಓಟದ ಬದುಕು. ನಾಟಕ ಬಾಳು.

ಈಗ ನಾ ಚಂದ್ರಮುಖಿಯ ಹಿಂದೆ ಬಿದ್ದಿದೀನಿ ಅಂದುಕೊಳ್ಳಬೇಡ. ರಜನಿಕಾಂತ್ ರ ಚಂದ್ರಮುಖಿ ಸಿನೆಮಾ ಬಂದ ಮೇಲೆ ಅಂತಹ ಹೆಸರಿರುವವರೂ ಚಂದ್ರಾ ಅಂತಲೋ ಚಂದ್ರಿಕೆ ಅಂತಲೋ ತಮ್ಮ ಹೆಸರುಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಯಾವ ಚಂದ್ರಮುಖಿಯೂ ಈಗ ಸಿಕ್ತಿಲ್ಲ. ಎಲ್ಲಾ ದೇವದಾಸರಿಗೆ ಒಂದೊಂದು ಪಾರು ಸೃಷ್ಟಿ ಮಾಡಿರುತ್ತಾನಂತೆ ಆ ದೇವರು. ಈಗೀಗ ಜೈನ್ ಕಾಲೇಜಿನ ಅಕ್ಕಪಕ್ಕ ಸುಳಿಯುವಾಗೆಲ್ಲಾ ಅದೆಲ್ಲ ನಿಜ ಅನ್ನಿಸ್ತದೆ. ಅತ್ತ ಕಡೆ ಇತ್ತ ಕಡೆ ಎಲ್ಲಾ ಪಾರು ಗಳೇ. (ಸಂಜೆ ಟೈಟಾಗಿ ಹೋಗಿದ್ದಾಗ ನೋಡಿದ್ದಲ್ಲ, ಬೆಳಿಗ್ಗೆ ನಶೆಯೆಲ್ಲಾ ಇಳಿದಾಗಲೂ ಹಾಗೇನೆ!)

ಪಾರೂ, ಈ ಬೀರು ನನ್ನ ಗುರುಗಳಾದ ಮೇಲೆ ನಿನ್ನ ಮರೆಯಲು ಶುರು ಮಾಡಿದೀನಿ. ಬಾರ್ ಅಟೆಂಡರ್ ಆದ ಆ ಪರಬ್ರಹ್ಮನ ಬರಹವನ್ನು ಬದಲಾಯಿಸಿಕೊಳ್ತೀನಿ. ಮ್ಯಾನೇಜರನಿಗೆ ಮತ್ತ್ಯಾರಾದರೂ ಹೊಸ ದೇವದಾಸುಗಳು ಸಿಗಬಹುದು ; ಹಾಗೇ ನನಗೂ ನಿನ್ನ ನೆನಪಿಂದ ಪಾರಾಗಿ ಮತ್ತೊಂದು ಪಾರು ಕೂಡ!

ಕುಡಿದಾಗ ಯಾವಾಗಲಾದರೂ ಒಮ್ಮೆ, ಎದೆಯ ದಡದ ಮೇಲಿನ ನಿನ್ನ ಹೆಸರನ್ನು ಅಲೆಯೊಂದು ಅಳಿಸಿಹಾಕಬಹುದು ಎಂಬ ನಿರೀಕ್ಷೆಯಲ್ಲೇ ಇದ್ದೀನಿ.

ತುಂಬಾ ಟೈಟಾಗಿ ಬರೆದಿದೀನಿ ಅನ್ಸುತ್ತೆ. ಯಾವುದಕ್ಕೂ ನೀನು ಲೈಟಾಗಿ ಓದ್ಕೋ.

"ಐ ಮಿಸ್ ಯೂ"

"ನೀನಿಲ್ಲದೇ ಬದುಕಿರೋಕೆ ಸಾಧ್ಯ ಇಲ್ಲ"

"ನೀ ಬಳಿಯಿರದ ನಿಮಿಷಗಳೆಲ್ಲ ವರುಷಗಳು"

ಇಂಥದ್ದೆಲ್ಲಾ ಸಾಲುಗಳನ್ನು ಸುಮ್ಮನೆ ಹರವಿಕೊಂಡು ಕುಳಿತಿದ್ದೇನೆ. ನನ್ನೆದೆಯ ನೋವಿಗೆ ಅದ್ಯಾವುದೂ ಸರಿಯಾದ ಪದವೆಂದು ಅನ್ನಿಸುತ್ತಿಲ್ಲ. ಚಲನಚಿತ್ರಗಳಲ್ಲಿ ಡೈಲಾಗ್ ಆಗಿ, ಆಕೆಯನ್ನು ಸುಮ್ಮನೆ ಮೆಚ್ಚಿಸಬೇಕೆಂದು ಎಸ್ಸೆಮ್ಮೆಸ್ಸುಗಳಲ್ಲಿ ಕೇವಲ ಬೆರಳುಗಳ ಕ್ರಿಯೆಗಾಗಿಯೇ ಆ ಪದಗಳು ಬಳಸಲ್ಪಟ್ಟಿರುವಾಗ, ವಿರಹದಿಂದ ವಿಲಪಿಸುತ್ತಿರುವ, ನಿನ್ನ ಒಂದು ಭೇಟಿಗಾಗಿ ಪರಿತಪಿಸುತ್ತಿರುವ ಎದೆಯ ಭಾವಕ್ಕೆ ಅದೇ ಪದಗಳನ್ನು ಹೇಗೆ ಬಳಸಲಿ ಹೇಳು? ಯಾವುದಕ್ಕೂ ಎದೆಯ ಬೇಗೆಯನ್ನು ಶಮನ ಮಾಡಲು ತಾಕತ್ತಿಲ್ಲ.

ಇಲ್ಲಿ ಈ ದೂರದೂರಿನಲಿ ನನ್ನ ಪಾಡನ್ನು ಬೇರೆ ಹೇಗೆ ತಿಳಿಸಲಿ ನಿನಗೆ? ನಿನ್ನದೇ ಊರಲ್ಲಿದ್ದಿದ್ದರೆ ಆಕಾಶದಲಿ ಮಲ್ಲಿಗೆಯಂತರಳಿದ ನಕ್ಷತ್ರವೊಂದು ಕಣ್ಣು ಮಿಟುಕಿಸಿ ನೋಡುತಿರುವಾಗ ಅದೇ ಕ್ಷಣ ನೀನೂ ಅದೇ ನಕ್ಷತ್ರವನ್ನೇ ನೋಡುತ್ತಿದ್ದಿರಬಹುದಾ ? ನಮ್ಮಿಬ್ಬರ ವಿರಹವನ್ನು, ಪಡುತಿರುವ ಪಾಡನ್ನು ಕಂಡೇ ಅದು

16242_103511946333202_100000231907283_95006_7046974_n

 

ಪಿಳಿಪಿಳಿಸುತ್ತಿರುವುದಾ ಅಂತೆಲ್ಲಾ ಅಂದುಕೊಳ್ಳಬಹುದಿತ್ತು. 

ವಿಪರ್ಯಾಸ ನೋಡು; ಈಗ ನಾನಿಲ್ಲಿ ಕತ್ತಲೆಯಲಿ; ನಿನಗಲ್ಲಿ ಬೆಳಕು! ಒಂಟಿಸೂರ್ಯನೊಬ್ಬ ಹಗಲ ಕ್ಷಣಗಳನ್ನು ಹೇರಿಹೋದ ನೋವಲ್ಲಿ ಒದ್ದಾಡಿದಕ್ಕಾಗಿ ನನಗಿಲ್ಲಿ ಸಾವಿರ ಸಾವಿರ ನಕ್ಷತ್ರಗಳ ಸಮಾಧಾನ. ಕಲೆಗೊಂಡ ಮೊಗದಲ್ಲೂ ಚಂದಿರನ ಸಾಂತ್ವನ ನೀಡುವ ನಗು. ಈ ದಿವ್ಯ ಮೌನದ ರಾತ್ರಿ, ಬೆಳದಿಂಗಳು, ಚುಕ್ಕಿಗಳು ಎಲ್ಲಾ ಒಟ್ಟಾಗಿ ಒಳಹರಿವಿನಲ್ಲಿ, ದೇವಕಿ ನಿನ್ನವಳೇ ಅಂತ ನನಗೆ ಸಮಾಧಾನ ನೀಡದೇ ಹೋಗಿದ್ದರೆ ರಾತ್ರಿಗಳು ಉರುಳುವುದಾದರೂ ಹೇಗಿತ್ತು?

pic.php

ನಾನು ಉಳಿಯುವುದಾದರೂ ಹೇಗಾಗುತ್ತಿತ್ತು?!

ರಾತ್ರಿ ಮುಗಿದ ನಂತರ ಹಗಲು. ಕತ್ತಲ ನಂತರ ಬೆಳಕು. ಬಾಡಿದ ಹೂವು ಬಿದ್ದು ನೆಲ ಸೇರಿದರೂ ಮರುದಿನ ಬೆಳಿಗ್ಗೆ ಮತ್ತೊಂದು ಮೊಗ್ಗು.

ಇದು ಪ್ರಕೃತಿ ನಿಯಮ.

ನನ್ನೆಲ್ಲಾ ನೋವುಗಳು ಉತ್ತುಂಗದಲ್ಲಿರುವ ಸಮಯ ಅಂದರೆ ಇದೇನೇ. ತಾನು ಕೊಡುವ ಪರಿಣಾಮಕ್ಕಿಂತ ಭೀಕರ ಸ್ಥಿತಿಯಲ್ಲಿರುವವನನ್ನು ಸಾವು ಕೂಡ ಏನು ಮಾಡೀತು ಎಂಬಂಥ ಪರಿಸ್ಥಿತಿ. ಸುನಾಮಿಯ ನಂತರ ದಡಕ್ಕಿನ್ನು ಅಲೆಯ ಭಯವಿಲ್ಲ. ಅಪ್ಪನ ಬೆಲ್ಟಿನ ರುಚಿ ತಿಂದ ಹುಡುಗನಿಗೆ ಮೇಷ್ಟರು ಕೋಲು ಬೆತ್ತ ತೋರಿದರೆ ಹೆದರುತ್ತಾನಾ? ಅಂತೆಯೇ ಬೇರೆ ನೋವುಗಳು ಬಳಿಬರಲೂ ಕೀಳರಿಮೆ ಹೊಂದುವಷ್ಟು ಪೆಟ್ಟು ತಿಂದಿದೆ ಮನಸ್ಸು.

night-waves

ಈಗ ಅದೇ ಪ್ರಕೃತಿ ನಿಯಮದ ಪ್ರಕಾರ ನನ್ನ ಬರುವ ನಾಳೆಗಳು ಚೆನ್ನಾಗಿರುತ್ತದಾ? ಈಗಿನಂತೆ ಹಗಲುಗಳು ದಹಿಸದೇ, ಅರಳುವಂತಾಗುತ್ತದಾ? ನಾನು ಮತ್ತೆ ಕನಸು ಕಾಣುವಂತಾಗುತ್ತೇನಾ? ನನ್ನೊಳು ಜೀವನ ಎಂದಿನಂತೆ ಪ್ರವಹಿಸುತ್ತದಾ? ಅದಕ್ಕೆಲ್ಲಾ ತನಗೇನೂ ಮಾಡಲಾಗದು ; ನಿನ್ನ ಸಹಿಯಿಲ್ಲದೇ ಎಂಬಂತೆ ಮುಗುಮ್ಮಾಗಿದ್ದಾನೆ ದೇವರು. ನಿನ್ನ ಪ್ರೀತಿ, ನನ್ನ ಉಸಿರು ಎರಡೂ ಒಂದಕ್ಕೊಂದು ತಳುಕು ಹಾಕಿಕೊಂಡಿದೆ. ನಿನ್ನ ಹೂಂ ಉಹೂಂ ಗಳ ಮಧ್ಯೆಯೇ ಜೋಕಾಲಿಯಾಡುತಿದೆ ನನ್ನ ಬದುಕು. ಪ್ರೀತಿಯೆಂದರೆ ಭೀಕರ; ಪ್ರೀತಿಯೆಂದರೆ ಸುಂದರ, ಈ ಎರಡು ವ್ಯಾಖ್ಯೆಗಳಿಗೆ ನಿನ್ನುತ್ತರವೇ ರಿಸಲ್ಟು.

ಹೀಗೆ ನಿನಗೆ ಪತ್ರಗಳನ್ನೇಕೆ ಬರೆಯುತ್ತಿದ್ದೇನೆ. ತಲುಪುವ ಗುರಿಯಿಲ್ಲದ ಈ ಪತ್ರಗಳು ನನ್ನ ನೋವುಗಳನ್ನು ಇಂಗಿಸುತ್ತದಾ? ಕದವಿಕ್ಕಿಕೊಂಡಿರುವವರ ಮನೆಬಾಗಿಲು ಬಡಿದು ತನ್ನಿರವನ್ನು ತಿಳಿಸುತ್ತದಾ? ಎಂದೋ ಒಂದು ದಿನ ಇವೇ ನನ್ನ ಪ್ರೀತಿಯನ್ನು ಉಳಿಸುತ್ತದೆ ಎಂಬುದು ನನ್ನ ನಂಬಿಕೆಯಾ?

ನಿಜಕ್ಕೂ ವಿರಹದ ನೋವುಗಳನ್ನು ಬರಹಗಳು ತೊಡೆದುಹಾಕುತ್ತದಾ?

 

(ಜೋಗುಳ ಬ್ಲಾಗಿಗಾಗಿ ಬರೆದಿದ್ದು)

ಹೌದು. ಎಷ್ಟು ಕಷ್ಟವಾದರೂ ಸರಿ. ಪ್ರಯಾಸಪಟ್ಟಾದರೂ ಓಕೆ; ನಿನ್ನ ಮರೆಯಲೇಬೇಕು!

ಇನ್ನೆಷ್ಟು ದಿನ ಈ ವಿರಹದಲ್ಲೇ ಬದುಕಿದ್ದೂ ಸತ್ತಂತಿರಲು ಸಾಧ್ಯ? ಇನ್ನೆಷ್ಟು ದಿನ ಉಸಿರಾಡುವುದೇ ಭಾರ ಅನ್ನುವಂಥ ಸ್ಥಿತಿ? ಕಾಲಕ್ಕೇ ಬೊಜ್ಜು ಬಂದಂತೆ ಮೆಲ್ಲ ಮೆಲ್ಲ ಹೆಜ್ಜೆ? ಎಷ್ಟು ದಿನವೆಂದು ಆಯಸ್ಸಿಗೆ ವಿರಹದ ಲೆಕ್ಕ ಒಪ್ಪಿಸಬೇಕು? ಅದೆಷ್ಟು ಜನುಮ ಒಪ್ಪಿಗೆಯ ಮೀನಿಗಾಗಿ ಗಾಳ ಹಾಕುತ್ತ ಕುಳಿತ ಬೆಸ್ತನಾಗಲಿ? ಅದಕ್ಕಿಂತ ಒಳಗಿರುವ ನೆನಪನ್ನೆಲ್ಲಾ ಗುಡಿಸಿ ಹಾಕಿ ಎದೆಯಂಗಳದಲ್ಲಿ ಹೊಸ ರಂಗೋಲಿ ಹಾಕಿಬಿಡಬೇಕು.

ಅರಳಿ ನಿಂತ ಮಲ್ಲಿಗೆಯಲಿ ನಿನ್ನದೇ ನಗೆ..
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ..

ಪ್ರತೀ ಕ್ಷಣ ಈಗ ನೀನಲ್ಲಿ ಏನು ಮಾಡುತ್ತಿರಬಹುದು ಅಂತ ಇನ್ನು ಊಹಿಸುತ್ತಾ ಇರಲ್ಲ. ದೇವರೆದುರು ನನ್ನ ಪ್ರಾರ್ಥನೆಯ ಜೋಳಿಗೆ ಬಿಚ್ಚುವಾಗ ನಿನ್ನ ಮೇಲಿನ ಕೋರಿಕೆಗೆ ಕೊನೆಯ ಸ್ಥಾನ. ಬಟ್ಟೆ ಅಂಗಡಿಯಲ್ಲಿನ ಬೊಂಬೆಗುಡಿಸಿದ ಡ್ರೆಸ್ಸು ನಿನಗೆ ಹೇಗೆ ಕಾಣಬಹುದು ಎಂದಿನ್ನು ಕಲ್ಪಿಸಿಕೊಳ್ಳುವುದಿಲ್ಲ. ನಿನ್ನ ಹೆಸರಿಟ್ಟುಕೊಂಡ ಅಂಗಡಿಯ ಮುಂದೆ ನಿಂತು ನಿನ್ನ ನೆನೆಸಿಕೊಳ್ಳುತ್ತಾ ಇನ್ನು ಮೈಮರೆಯೋದಿಲ್ಲ. ರಸ್ತೆ ತಿರುವಿನಲ್ಲಿ ನಿನ್ನನೊಮ್ಮೆ ಭೇಟಿ ಮಾಡಿದ ನೆನಪುಗಳನ್ನಿನ್ನು ಎಂದಿಗೂ ನೇವರಿಸೋಲ್ಲ. ನಿನ್ನ ನೆನಪುಗಳನ್ನು ತೀವ್ರವಾಗಿ ತರಿಸುವ ಭಾವಗೀತೆಗಳನ್ನಿನ್ನು ಗುನುಗುನಿಸಲ್ಲ. ದಿಂಬಿಗಿನ್ನು ಬೇರೆ ನಾಮಕರಣ; ನಿನ್ನ ಹೆಸರಲ್ಲ!

 

ws_Red_Flower_1152x864

ಬೀಸಿ ಬಂದ ಗಾಳಿಯಲ್ಲಿ ನಿನ್ನ ಪರಿಮಳ..
ಮಾಮರದಲ್ಲಿ ನಿನ್ನದೇ ಗಾನಮಂಜುಳ…

ನಿನ್ನ ಕನಸುಗಳೇ ಬರುವುದಾದರೆ ನನಗಿನ್ನು ನಿದಿರೆಯೇ ಬೇಡ. ವಿರಹವನ್ನು ನೋಡಿ ನಗುವ ಚಂದಿರ ಇನ್ನು ನನ್ನ ಪಾಲಿಗಿನ್ನು ಕುರೂಪಿ. ಅವಳ ಕಣ್ಣುಗಳ ನೆನಪಿಸುವ ನಕ್ಷತ್ರಗಳನ್ನು ನೋಡುವುದು ಭಾದ್ರಪದ ಶುಕ್ಲಪಕ್ಷ ದಲ್ಲಿ ಚಂದಿರನನ್ನು ನೋಡಬಾರದೆಂಬಷ್ಟೇ ಸ್ಟ್ರಿಕ್ಟು. ಜೀವ ಹರಿದು ಹಾಕುವ ವಿರಹಕ್ಕೆ ಇನ್ನು ಅವಳ ನೆನಪುಗಳ ತೇಪೆಯಿಲ್ಲ! ಇನ್ಮೇಲೆ ನಾನು+ನೀನು= ನಾನು ಅಲ್ಲ!

ನಲ್ಲೇ, ನಿನ್ನ ಮರೆಯಲು ಏನೆಲ್ಲಾ ಮಾಡಿದೆ..
ಆದರೂ ಎಲ್ಲೆಲ್ಲೂ ನಿನ್ನಾ ನೆನಪೇ ಕಾಡಿದೆ!

 

*********

ಅಂತರಾತ್ಮನ ಮತ್ತು ನನ್ನ ಜಗಳ ಹೀಗೆ ಮುಗಿಯುತ್ತದೆ. ಅವಳನ್ನು ಮರೆಯಬೇಕು ಅನ್ನುವ ವಾಕ್ಯವನ್ನೇ ಅಂತರಾತ್ಮ ತಪ್ಪೆನ್ನುತ್ತದೆ. ಅವಳನ್ನು ಮರೆಯುವುದೆಂದರೆ ಅವಳೂ ನೀನೂ ಬೇರೆಯಾಗಬೇಕಲ್ಲವೇ? ಇಬ್ಬರೂ ಒಂದೇ ಆಗಿರುವಾಗ ಮರೆಯುವುದು, ತೊರೆಯುವುದು ಹೇಗೆ ಸಾಧ್ಯ ಅನ್ನುತ್ತದೆ. ಮೌನವಾಗಿ ಸೋಲೊಪ್ಪಿಕೊಳ್ಳುತ್ತೇನೆ. ಕವಿಯೊಬ್ಬನ ಭಾವಗೀತೆಯಂತಹ ಅಂತರಾತ್ಮನ ಮಾತು ವಿಜಯಿಯಾಗುತ್ತದೆ. ನನ್ನ ಮಾತುಗಳೆಲ್ಲ ತಿರುಗುಬಾಣ ಆಗುತ್ತದೆ.

"ಹೌದು. ಎಷ್ಟು ಕಷ್ಟವಾದರೂ ಸರಿ. ಪ್ರಯಾಸವಾದರೂ ಓಕೆ ; ನಿನ್ನ ಮರೆಯಲಾರೆ; ಮರೆಯಲಾಗದು !….."

 

*****

 

(ಜೋಗುಳ ಬ್ಲಾಗಿಗಾಗಿ ಬರೆದಿದ್ದು)

“ನೇವರಿಸಿ ಸಾಗಿದೆ ತಂಗಾಳಿಯೊಂದು ಸೋಕಿ

ನೆನಪಿನಲ್ಲಿ ಸುಳಿದಂತೆ ನನ್ನ ದೇವಕಿ!”

ಹೀಗೆ ಒಬ್ಬನೇ ಹಾಡಿಕೊಳ್ಳುತಿರುತ್ತಿದ್ದೆ. ನನ್ನ ಒಂಟಿತನದಲಿ ಬಹುಮುಖ್ಯ ಸಾಥಿ ನಿನ್ನ ನೆನಪುಗಳು. ಅವು ಬರೆಸಿದ ಒಂದಿಷ್ಟು ಕವಿತೆಗಳು. ಇತ್ತ ವಿರಹ ಕ್ಷಣ ಕ್ಷಣವೂ ವಿಷವುಣಿಸುತ್ತಿದ್ದರೆ ಕವಿತೆಗಳು ನನ್ನಲ್ಲಿ ಉಸಿರುಮೂಡಿಸುತ್ತಿದ್ದವು.  ಅವುಗಳಿಂದಲೇ ಕಾಲಕಳೆಯುತಿತ್ತು. ಆದ್ದರಿಂದಲೇ ಬಹುಶಃ ನಾನೂ ಉಳಿದದ್ದು.

ಒಳಗಿನ ಭಾವನೆಗಳನ್ನು ಈ ಬ್ಲಾಗಲ್ಲದೇ ನಿನಗೆ ತಿಳಿಸುವುದಾದರೂ ಹೇಗಿತ್ತು? ಎಷ್ಟೊಂದು ಭಾವಗಳು ಎದೆಯಲ್ಲಿ ಕುದಿಯುತ್ತಿದ್ದವು? ನಿನ್ನ ಒಂದು ಮುಖದರ್ಶನಕ್ಕಾಗಿ ಜನುಮವಿಡೀ ಕಾಯುವ ಶಿಕ್ಷೆ ವಿಧಿಸಿದರೂ ಪರವಾಗಿಲ್ಲ ಅನ್ನುವಷ್ಟು ಎಲ್ಲ ಕಳಕೊಂಡ ಫಕೀರನಾಗಿದ್ದೇನೆ. ಆಗಷ್ಟೇ ಖಾರ ತಿಂದವ ನೀರು ಬಯಸುವಷ್ಟು ತೀವ್ರವಾಗಿ ನಿನ್ನ ನೋಡಬೇಕು, ಒಮ್ಮೆ ನಿನ್ನ ಮಡಿಲು ಸೇರಬೇಕು, ನನ್ನೆಲ್ಲಾ ವಿರಹ, ನೋವುಗಳು ನಿನ್ನ ಮಡಿಲಿನಲ್ಲಿ ಕೊನೆಯುಸಿರೆಳೆವುದನ್ನು ಕಾಣಬೇಕು ಅನ್ನುವ ಭಾವ. ಆದರೆ ಒದ್ದಾಡುವಂತೆ ಮಾಡುವ ಈ ಸಾವಿರ ಸಾವಿರ ಮೈಲುಗಳ ದೂರ. ಶತ್ರುವಾಗಿರುವ ಏಳು ಸಾಗರಗಳು ನಮ್ಮೀರ್ವರ ನಡುಮಧ್ಯೆ.

ನಾನೀಗ ಡಾಲರುಗಳ ಊರಲ್ಲಿ ಕನಸುಗಳನ್ನು ಕಳಕೊಂಡ, ಮುಂದಿನ ಯಾವುದೋ ಅಮೃತಘಳಿಗೆಗಾಗಿ ನನ್ನ ಈಗಿನ ಕ್ಷಣಗಳನ್ನು ಒತ್ತೆಯಿಟ್ಟ, ಎಂದೋ ಒಮ್ಮೆ ದೊರಕಬಹುದಾದ, (ದೊರಕದೆಯೂ ಇರಬಹುದಾದ) ಪ್ರೀತಿಗಾಗಿ ಬದುಕಿನ ಮುಖ್ಯಭಾಗದ ಕಪ್ಪ ಒಪ್ಪಿಸಿದ ಹುಡುಗ.

ಇಲ್ಲಿನ ಚಳಿಯಲ್ಲಿ ನಿನ್ನ ನೆನಪು ಕಾಡೋದಂದರೆ ಅದನ್ನು ಬರೀ ಪದಗಳಲ್ಲಿ ವಿವರಿಸೋದು ಹ್ಯಾಗೆ ಸಾಧ್ಯ? ಅದು ಉಪಮಾನಗಳೇ ನೀಡಲಾಗದ ನೋವಿನನುಭವದ ಕಂತೆ. ಲಕ್ಷ ಲಕ್ಷ ಚುಚ್ಚುವಿಕೆಯ ನಿಶಾನಿಯಿರುವ ರಾತ್ರಿಯಾಗಸದ ಕತೆ. ಅದರ ಕೆಲಸ, ಕೇವಲ ನೀನು ನನ್ನ ಬಳಿಯಿಲ್ಲ ಎಂಬ ಸೂಜಿಯನ್ನೇ ಮತ್ತೆ ಮತ್ತೆ ನಾಟುವುದು. ನೆನಪುಗಳ ಈ ಬಗೆಯ ಕಾಡುವಿಕೆಯಿಂದ ತಪ್ಪಿಸಿಕೊಳ್ಳಬೇಕಾದರೆ ಮಾಡಬೇಕಾದ್ದೇನು? ನಾನು ಮತ್ತೆ ಸಂತಸದಲ್ಲಿರಲು, ಬದುಕಬೇಕೆಂಬ ಸ್ಪೂರ್ತಿ ಬರಲು, ಪ್ರೀತಿಯ ಮೇಲೆ ನಂಬಿಕೆ ಹುಟ್ಟಲು, ಸಧ್ಯಕ್ಕೆ ಮಾಡಿಯೇ ತೀರಬೇಕಾದ್ದು ಏನು?

ಹೀಗನ್ನಿಸಿದ್ದರಿಂದ ಡಾಲರುಗಳ ಕನಸುಗಳು ತೂಕ ಕಳಕೊಂಡಿವೆ. ಶತ್ರುವಿನಂಥ ಏಳು ಸಾಗರಗಳು ದೃಷ್ಟಿಯುದ್ಧದಲ್ಲೇ ಸೋತ ಸೈನಿಕನಂತಾಗಿವೆ. ನನಗೆ ಎಲ್ಲಕ್ಕಿಂತ ಮುಖ್ಯವಾಗಿರುವ ನಿನ್ನ ಬಿಟ್ಟು ಇದ್ಯಾಕೆ, ಇದೇನು, ಇದ್ಯಾವುದರ ಹಿಂದೆ ಬಿದ್ದಿದ್ದೇನೆ ಅನ್ನಿಸತೊಡಗಿದೆ. ನಿನ್ನ ನೋಟದ ಇಂಧನವಿಲ್ಲದೇ ಖಾಲಿಯಾದ ವಿಮಾನದಂತಾಗಿದೆ ನನ್ನೀ ಮನಸ್ಸು.

ಇಲ್ಲಿ ಸಮಯ ಕಳೆಯಲಾಗುತ್ತಿಲ್ಲ. ಬದುಕಲಾಗುತ್ತಿಲ್ಲ. ನಾನು ಕೃಶವಾಗಿಹೋಗುತ್ತಿದ್ದೇನೆ ಅನ್ನಿಸುತ್ತಿದೆ. ಒಮ್ಮೆ ನಿನ್ನ ನೋಡಬೇಕು, ಎಲ್ಲೋ ಮೂಲೆಯಲ್ಲಿ ನಿಂತು ಕದ್ದಾದರೂ ಸರಿ. ಮತ್ತೆ ಒಂಚೂರು ಬಾಳುವ ಆಸೆ ಬದುಕೀತು ಅನ್ನಿಸಿದೆ. ಅದಕ್ಕೆ ಎಲ್ಲಾ ತೊರೆದು ಬರುತ್ತಿದ್ದೇನೆ ದೇವಕಿ. ಈಗೀಗ

“ನೇವರಿಸಿ ಸಾಗಿದೆ ತಂಗಾಳಿಯೊಂದು ಸೋಕಿ

ಕಣ್ಣೆದುರೇ ಸುಳಿದಂತೆ ನನ್ನ ದೇವಕಿ..”

ಅಂತ ಹಾಡಿಕೊಳ್ಳುತ್ತಿದೆ ಮನಸ್ಸು!

–(“ನನ್ನ ದೇವಕಿ” ಬ್ಲಾಗಿಗಾಗಿ “ವಾಸು” ಆಗಿ ಬರೆದಿದ್ದು..:))