Archive for the ‘ಲಹರಿ’ Category

ಇದುವರೆಗೂ ಬ್ಯಾಚುಲರ್ ಅಂತ ಹಣೆಪಟ್ಟಿ ಹಾಕ್ಕೊಂಡು ಒಬ್ಬನೇ ಆರಾಮಾಗಿದ್ದೆ. ನಾನು ಬೆಂಗಳೂರಿಗೆ ಬರುವೆ, ಇಲ್ಲೇ ಇರುವೆ ಅಂತ ಸುದ್ಧಿ ಪಕ್ಕಾ ಆದ ಕೂಡಲೇ ಅಮ್ಮ ನಾನೂ ಬೆಂಗಳೂರಿಗೆ ಬರ್ತೇನೆ, ನಿನ್ನ ಜತೆ ಇರ್ತೇನೆ ಅಂದಾಗ ಖುಷಿ ಆಯ್ತು. ಅಲ್ಲಿಗೆ ನನ್ನ ರೂಮು ಜೀವನ, ಚೆಲ್ಲಾಪಿಲ್ಲಿ ಪೇಪರುಗಳ ಫ್ಲೋರಿಂಗ್, ಅಶಿಸ್ತಿನ ಅಭ್ಯಾಸಗಳಿಗೆ ತಿಲಾಂಜಲಿ ಇಡುವ ಅನಿವಾರ್ಯತೆ ಉಂಟಾಯಿತು. ಆದರೂ ಹೊತ್ತೊತ್ತಿಗೆ ಕರೆಕ್ಟಾಗಿ ಸಿಗುವ ಭಾರೀ ಭೋಜನ, ಮನೆಗೆ ಬೇಗ ಹೋಗೋಣ ಅಂತ ಅನ್ನಿಸುವಂತೆ ಮಾಡುವ ಒಂದು ಜೀವ ನಮ್ಮನ್ನು ಕಾಯುತ್ತ ಇರುತ್ತದೆಂಬ ಭಾವನೆಗಳು ಆಸೆ ಹುಟ್ಟಿಸಿದವು. ಒಡಹುಟ್ಟಿದವರೂ ನಿಷ್ಕಲ್ಮಶ, ನಿಷ್ಕಾರಣ ಪ್ರೀತಿ ತೋರದಿರುವ ಈ ಕಾಲದಲ್ಲಿ ಅದಕ್ಕೆ ನಂಬಬೇಕಾದ್ದು ಅಮ್ಮ ಒಬ್ಬರನ್ನೇ ಅಲ್ಲವೇ? ಹಾಗಾಗಿ ರೂಮು ಹುಡುಕುವುದು ಬಿಟ್ಟು ಮನೆ ಹುಡುಕುವುದಕ್ಕೆ ಶುರು ಮಾಡಿದ್ದಾಯಿತು.

ಬೆಂಗಳೂರು ಮಧ್ಯದಲ್ಲಿರುವ ಆಸೆ, ಬೆಂಗಳೂರು ಮ್ಯಾಪಿನ ಎಲ್ಲೋ ಮೂಲೆಯಲ್ಲಿರುವ ಕೆಲಸದ ಜಾಗ, ಈ ಎರಡೂ ತುಂಬ ಮಾನಸಿಕ ಸಂಘರ್ಷ ಉಂಟುಮಾಡಿದವು. ಕೊನೆಗೂ ಎಲ್ಲಾ ಆಸೆಗಳನ್ನು ಟ್ರಾಫಿಕ್ ಎಂಬ ಭೂತ ಹೆದರಿಸಿ ’ಎಲ್ಲಿ ಕೆಲಸವೋ ಅಲ್ಲೇ ವಾಸ’ ಎಂಬ ಗಾದೆ ಹುಟ್ಟಿಸಿ ಮ್ಯಾಪಿನ ಮೂಲೆಯಲ್ಲೇ ಮನೆ ಮಾಡುವಂತೆ ಪ್ರೇರೇಪಿಸಿದವು. ಮನೆ ಆಯ್ತು, ಅಮ್ಮ ಬರುವ ಮುಂಚೆ ಎಲ್ಲಾ ತಯಾರಿರಬೇಕು ಅಂತ ಅನ್ನಿಸಿ ಮನೆಗೆ ಬೇಕಾದ ಎಲ್ಲಾ ಸಾಮಾನುಗಳೂ, ಯಂತ್ರ (ವಾಷಿಂಗ್ ಮೆಶೀನು, ಗ್ಯಾಸು ಸಿಲಿಂಡರು ಇತ್ಯಾದಿ) ತಂದಿರಿಸಿದ್ದಾಯಿತು. ಅಮ್ಮನಿಗೆ ಮುಖ್ಯವಾಗಿ ಬೇಕಾಗಿದ್ದ ಟೀವಿ ಠೀವಿಯಿಂದ ಡ್ರಾಯಿಂಗ್ ರೂಮಿನಲ್ಲಿ ಕೂತಿತು.

The Chef

ಪ್ರಾಯೋಗಿಕವಾಗಿ ನನ್ನ ಅಡುಗೆಗಳೂ ಭರದಿಂದ ಶುರುವಾದವು. ಆಡುವ ಮುಂಚೆ ಪಿಚ್ ಪರೀಕ್ಷಿಸುವ ರೀತಿಯಲ್ಲಿ ಅಡುಗೆ ಮನೆಯೂ ಸಜ್ಜುಗೊಳಿಸಿದ್ದಾಯಿತು.

ಅಮ್ಮನಿಗೆ ಒಂದು ಆರಾಮಿನ ದಿನ ಫೋನ್ ಹಚ್ಚಿ, ’ಯಾವಾಗ ಬರುವಂತಾಗುತ್ತೀಯಾ?’ ಅಂತ ಕೇಳಿದರೆ ಉತ್ತರಿಸದೇ ನಕ್ಕು ಸುಮ್ಮನಾದಳು. ಇನ್ನೂ ಸ್ವಲ್ಪ ದಿನ ಹೋಗಲಿ ಅಂತ ನಾನೂ ಮೌನವಾಗಿ ಒಬ್ಬನೇ ಅಡುಗೆ ಮಾಡಿಕೊಂಡೆ. ಬೆಳಿಗ್ಗೆ ಎದ್ದು ಕಸ ಗುಡಿಸಿದೆ, ಹಾಲು ತಂದು ಕಾಫಿ ಮಾಡಿ, ಮನೆಯಲ್ಲೇ ಫಾಸ್ಟಾಗಿ ಫಾಸ್ಟ್ ಫುಡ್ ಮಾಡಿಕೊಂಡು ಪಾತ್ರೆ ತೊಳೆದು ಓಡೋಡಿ ಕೆಲಸಕ್ಕೆ ಹಾಜರಾದೆ. ಮತ್ತೆ ಸಂಜೆ ಬಂದು ಅಡುಗೆ, ಪಾತ್ರೆ ತೊಳೆದು ಮಧ್ಯೆ ಆಗಗ್ಗೊಮ್ಮೆ ವಾಶಿಂಗ್ ಮೆಶೀನ್ ನ ಕೈಲಿ ಬಟ್ಟೆ ಒಗೆಸುವುದೂ ಮಾಡಿ ಬದುಕುತ್ತಿದ್ದೇನೆ. ದಿನಗಳು ಚೌಕದಿಂದ ಚೌಕಕ್ಕೆ ಜಿಗಿದು, ಫ್ಯಾನುಗಾಳಿಗೆ ಹಾಳೆ ಹಾರಿದಂತೆ ತಿಂಗಳುಗಳೂ ಮುಗಿದವು.

0511-1005-1216-1751_Man_Daydreaming_About_Being_a_Chef_clipart_image

ಯಾವಾಗ ಬರ್ತಿದೀಯಮ್ಮೋ ಅಂತ ಕೇಳಿದಾಗಲೆಲ್ಲ ಮುಗುಳ್ನಗುವೆ ಆಕೆಯ ಉತ್ತರ. ಯಾಕೆ ಹೀಗೆ, ಏನು ಆ ನಗುವಿನ ಮರ್ಮ ಅಂತ ಅರ್ಥವೆ ಆಗ್ತಿದ್ದಿರಲಿಲ್ಲ.

ಮೊನ್ನೆ ಗೆಳೆಯನಿಗೆ ನನ್ನ ಈ ದಿನಚರಿ ವಿವರಿಸುತ್ತಿದ್ದಾಗ ’ ಹಾಗಿದ್ರೆ ಮದುವೆಗೆ ಭರ್ಜರಿಯಾಗೆ ತಯಾರಾಗ್ತಿದೀಯಾ, ಬಿಡು!’ ಅಂತ ಛೇಡಿಸಿದ. ಯಾಕೋ ಅವ ಹಂಗಂದ ಕೂಡಲೇ ಅಮ್ಮನ ನಗು ನೆನಪಾಯ್ತು.

ಹ್ಮ್! ಅಮ್ಮಂದಿರೂ ನಮ್ಮಂಥ (ದೊಡ್ಡ)ಮಕ್ಕಳಿಗಿಂತ ಬುದ್ದಿವಂತರಾಗುತ್ತಿದ್ದಾರೆ!

ನದೀ ತಟದಲ್ಲಿ
ಕುರಿ ಹುಲ್ಲು ಮೇಯುತ್ತಿತ್ತು
ನೀ
ರಲ್ಲಿ
ಮೀನ ಮೇಷ
ಎಣಿಸುತಿತ್ತು.

******

ಗಾಳ ಹಾಕಿ
ಕಾಯುತ್ತಾ ಕುಳಿ
ತಿದ್ದೆ.
ಕೊನೆಗೂ ಒಂದು
ಮೀನಿಗೆ ಸಿಕ್ಕಿಹಾಕಿಕೊಂಡೆ.

*******

ಕಣ್ಣು ಮೀನಿದ್ದು
ಆಗಿರಬಹುದು
ಆದರೆ ಕಣ್ಣೀರು
ಮೊಸಳೆದ್ದು ಆಗಿರಬಾರ್ದು ಕಣ್ರೀ!

ನಾನು ಕನ್ನಡಿಗ ಅಂತ ಅನ್ನುವಾಗ ನನಗೆ ಚೂರೂ ಹೆಮ್ಮೆಯೇ ಆಗುತ್ತಿದ್ದಿರಲಿಲ್ಲ.

ಹೌದು. ಇಸ್ಕೂಲು, ಹೈಸ್ಕೂಲು ಓದುವಾಗಲೆಲ್ಲ ’ನಾನು ಕನ್ನಡಿಗ’ ಅನ್ನುವುದರಲ್ಲಿ ಅಂತಹ ವಿಶೇಷಗಳೇನೂ ಇರಲಿಲ್ಲ. ಸುತ್ತಮುತ್ತಲೂ ಮುತ್ತಿಕೊಂಡಿದ್ದ ಗೆಳೆಯರೆಲ್ಲರೂ ಕನ್ನಡಿಗರೇ ಆಗಿದ್ದರಿಂದ ಅದೊಂದು ಸ್ಪೆಷಲ್ ಅನ್ನುವ ಭಾವ ಮೂಡುತ್ತಿರಲಿಲ್ಲ. ಕಾಲೇಜುಪರ್ವದಲ್ಲಿ ಕನ್ನಡಿಗ ಆಗಿರುವುದು ಕೊಂಚ ಸಂಕಟಗಳಿಗೆ ಸಿಕ್ಕಿಸಿತ್ತಾದರೂ ಅದಕ್ಕೆ ಕಾರಣ ’ನಾ ಕನ್ನಡದವ’ ಆಗಿರುವುದಲ್ಲ, ’ಇಂಗ್ಲೀಷ್ ಅರಿವು ಕಡಿಮೆ ಇರುವುದು’ ಎಂಬ ಜ್ಞಾನೋದಯ ಆದಮೇಲೆ ಆ ಕುರಿತು ಆಲೋಚನೆಯೂ ಬರಲಿಲ್ಲ.

ಆದರೆ ಕರುನಾಡ ಕೋಟೆ ದಾಟಿದ ಮೇಲೆ ಕನ್ನಡ ಎಂಬ ಭಾಷೆ ಎಷ್ಟು ಸಿಹಿ ಅನ್ನುವುದು ಗೋಚರವಾಗುತ್ತಿತ್ತು. ಇದೊಂಥರ ಮನೆಯಲ್ಲಿದ್ದಾಗ ಹಠ, ಗೊಂದಲ ಮಾಡುತ್ತಿದ್ದು ನಂತರ ಅಮ್ಮನ ಮಹತ್ವ ಅರಿವಾಗುವ ಹಾಸ್ಟೆಲ್ ಹುಡುಗನ ರೀತಿ. ಸಿಂಗಾಪೂರ್ ಗೆ ಬಂದ ಮೇಲೆ ನನ್ನ ಜತೆ ಕೆಲಸ ಮಾಡುವವರಿಗೆ ನನ್ನ ರಾಜ್ಯದ ಕುರಿತು, ಭಾಷೆಯ ಕುರಿತು ವಿವರಿಸುವಾಗ ಅದೆಂತದೋ ಪದಗಳಲ್ಲಿ ಸಿಲುಕದ ಸಂತಸ. ಅವರಂತೂ ಅಮೇರಿಕದ ವೈಭವವನ್ನೂ ಈ ರೀತಿಯ ವಿವರಣೆಯ ಸಹಿತ ಕೇಳಿರಲಿಕ್ಕಿಲ್ಲ, ಹಾಗೆ ಇರುತ್ತಿತ್ತು. ಇಲ್ಲಿಯ ಹೆಚ್ಚಿನವರಿಗೆ ಭಾರತೀಯರೆಂದರೆ ತಮಿಳರು ಅನ್ನುವ ಭಾವ ಇರುವುದರಿಂದ, ನನ್ನ ಭಾರತೀಯತೆ ಅರಿವಾದ ಕೂಡಲೇ, ’ತಮಿಳಾ?’ ಎನ್ನುವ ಪ್ರಶ್ನೆ ಕೇಳುತ್ತಾರೆ. “ಅಲ್ಲ, ನಾನು ಕನ್ನಡಿಗ’ ಎಂಬ ಉತ್ತರಕ್ಕೆ ಪೂರ ಹೆಮ್ಮೆಯ ಲೇಪ. ಅಲ್ಲೇ ಹುಟ್ಟಿ, ಅಲ್ಲೇ ಬೆಳೆದಿದ್ದರೂ ಯಾವಾಗಲೂ ಈ ವಾಕ್ಯ ಆಡಿದ ಉದಾಹರಣೆ ನೆನಪಿಲ್ಲ.

ಜಯಂತ್ ಕಾಯ್ಕಿಣಿ ತಮ್ಮ ಭಾಷಣದಲ್ಲಿ ಯಾವಾಗಲೂ ಹೇಳುತ್ತಿರುತ್ತಾರೆ, ” ನಾವು ಅಮೇರಿಕದಲ್ಲೋ, ಸಿಂಗಾಪುರ್ ನಲ್ಲೋ ಅಥವ ಅಸ್ಸಾಂ, ಮುಂಬೈ ನಲ್ಲಿ ಇದ್ದುಕೊಂಡು, ಒಳ್ಳೆಯ ಕೆಲಸಗಾರರಾಗಿ, ಒಳ್ಳೆಯ ಪ್ರಜೆಯಾಗಿ, ಒಳ್ಳೆಯ ತಂದೆ, ಮಗ, ಅಣ್ಣ, ತಮ್ಮ, ಗೆಳೆಯನಾಗಿ ಇರುವುದು ಕನ್ನಡತನವಾ? ಅಥವ ಬೆಂಗಳೂರಲ್ಲೆ ಇದ್ದು, ವಿಧಾನಸೌಧದ ಮುಂದೇನೆ ಮನೆಮಾಡಿ, ಕೈತುಂಬ ಉಂಗುರಗಳು, ಕೊರಳ ತುಂಬಾ ಚೈನು ಹಾಕಿಕೊಂಡು, ಸಿಕ್ಕಾಪಟ್ಟೇ ಭ್ರಷ್ಟಾಚಾರ ಮಾಡಿ, ಹೀನವಾಗಿ ಬದುಕಿ ರಾಜ್ಯೋತ್ಸವದ ದಿವಸ ಧ್ವಜ ಹಾರಿಸುವುದು ಕನ್ನಡತನವಾ? ಅಂದರೆ ಕನ್ನಡತನ ಅನ್ನುವುದು ನೀವಾಡುವ ಭಾಷೆಯ ಮೇಲೆ ಮಾತ್ರ ನಿರ್ಭರವಾಗಿಲ್ಲ. ಕನ್ನಡತನ ಅಂದರೆ ನಾವು ಬದುಕುವ ರೀತಿ. ಮಮತೆ, ಪ್ರೀತಿಯೇ ಕನ್ನಡತನ. ನಾವೆಲ್ಲಿ ಇರುತ್ತೇವೆ ಅನ್ನುವುದಲ್ಲ, ಚೆನ್ನಾಗಿ ಕೆಲಸ ಮಾಡಿ, ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯುವುದಕ್ಕಿಂತ ದೊಡ್ಡ ಕನ್ನಡತನ ಬೇರೆಯಿಲ್ಲ.”

ನನ್ನಲ್ಲೂ ಅಂಥ ಒಂದು ಕನಸು. ಉಳಿದವರು ’ರೀ ಅವ್ರು ಕನ್ನಡವರು, ಮೋಸ ಮಾಡೋಲ್ಲ” ಅಂತಲೋ ಅಥವ ಅಂಗಡಿಯಲ್ಲಿ ಪರ್ಸು ಮರೆತ ಘಳಿಗೆಯಲಿ, “ನೀವ್ ಕನ್ನಡದವ್ರಾ? ಪರ್ವಾಗಿಲ್ಲ, ನಾಳೆ ಕೊಡಿ” ಈ ರೀತಿ ಕನ್ನಡ ಒಂದು ನಂಬಿಕೆಯಾಗಿ, ಒಳ್ಳೆಯತನವಾಗಿ ಹಬ್ಬಬೇಕು. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಅನ್ನುವುದಕ್ಕಿಂತ Value ಆಗಿ ಬೆಳೆಯಬೇಕು ಎಂಬುದೊಂದು ಆಶಯ.

ಎಂದಿಗೂ ನಾನು ಅಂಥ ಕನ್ನಡಿಗನಾಗಲು ಬಯಸುತ್ತೇನೆ.

 

ಅಡಿಟಿಪ್ಪಣಿ: ಇಲ್ಲಿಯ ಹೋಟೇಲೊಂದರಲ್ಲಿ ಅಕಸ್ಮಾತ್ ಭೇಟಿಯಾದ ಬೆಳಗಾವಿಯ ಬಾಲರಾಜ್ ಮತ್ತವರ ಪುಟ್ಟಿಯ ಕನ್ನಡ ಹುಟ್ಟಿಸಿದ ರೋಮಾಂಚನದಿಂದಾಗಿ, ಮತ್ತೆ ಬರೆಯುತ್ತೇನೆ ಅಂತ ಮುಂದೂಡುತ್ತಲೇ ಬರುತ್ತಿದ್ದ ಈ ಲೇಖನ ಇವತ್ತೇ ಬರೆಯುವಂತಾಯಿತು. ಬೆಂಗಳೂರಲ್ಲೇ ಅಪರೂಪವಾಗುತ್ತಿರುವ ಕನ್ನಡವನ್ನು ಸಾವಿರಾರು ಮೈಲು ದೂರ ಅದೂ ಪುಟ್ಟ ಹುಡುಗಿಯ ಮಾತಾಗಿ ಕೇಳುವ ಅದ್ಭುತವೇ ಬೇರೆ.

ಮನೆಯಲ್ಲಿದ್ದಾಗ ನನ್ನ ಕೆಲಸದಲ್ಲಿನ ಕಷ್ಟಗಳ ಕುರಿತು ಸಿಕ್ಕಾಪಟ್ಟೆ ವಿವರ ನೀಡುತ್ತಿರುವಾಗ ಮೌನವಾಗಿ ಹೌದಾ ಹಾಗೆಲ್ಲಾ ಇದೆಯಾ ಎಂಬಂತೆ ಕೇಳುತ್ತಿರುತ್ತಾಳೆ ನನ್ನಮ್ಮ.

vlcsnap-502294

ಒಂದಿಷ್ಟು ದಿನಗಳ ರಜೆಯ ಮೇಲೆ ಊರಿನಲ್ಲಿ ಒಂದೆರಡು ವಾರ ಉಳಿಯಬೇಕಾಗಿ ಬಂದಾಗ ಅಮ್ಮನ ದಿನಚರಿಗೆ ಅಡ್ಡಿಯಾಗಬಾರದೆಂದು ಮನೆಯ (ರಿಮೋಟ್) ಕಂಟ್ರೋಲ್ ಅವಳ ಕೈಗೇ ನೀಡಿದ್ದೆ. ಆದ್ದರಿಂದಲೇ ನಾನು ಕನ್ನಡ ಮೆಘಾ ಧಾರಾವಾಹಿಗಳೆಂಬ ಸುಳಿಯೊಳಗೆ ಸಿಲುಕಿಕೊಳ್ಳಬೇಕಾಯಿತು. ಅರ್ಧರ್ಧ ಘಂಟೆಗೊಮ್ಮೆ ಹೊಸ ಹೊಸ ಹೆಣ್ಮಕ್ಕಳ ಹೆಸರುಗಳಿರುವ ಶೀರ್ಷಿಕೆ ಗೀತೆಗಳಿಂದ ಮನೆ ತುಂಬತೊಡಗಿತು. ಕಥೆ-ಗಿಥೆ ಬರೀತಿಯಲ್ಲೋ ನನ್ನ ಮಗಳಿಗೆ ಒಂದು ಒಳ್ಳೇ ಹೆಸರು ಸೂಚಿಸು ನೋಡಾಣ ಅಂತ ಹೆದರಿಸುವ ಗೆಳೆಯರಿಗೆ ಉತ್ತರಿಸಲು ತಲೆಕೆರೆದುಕೊಂಡಿದ್ದು ನೆನಪಾಯ್ತು. ಅಂದಿನ ಅನುಭವದ ನಂತರ ನನಗಿನ್ನು ಆ ಕೆಲಸ ಸುಲಭ.  "ರಾಧಾ", "ಸುಕನ್ಯ", "ಕಾದಂಬರಿ" ಧಾರಾವಾಹಿಗಳ ಸುರಿಮಳೆ ಶುರುವಾಯಿತು. ಧಾರಾವಾಹಿಗಳೆಂದರೆ ಬೋರೆನಿಸುವುದರಿಂದ ಒಂದು ಪುಸ್ತಕ ಹಿಡಿದೇ ಅಮ್ಮನ ಪಕ್ಕ ಕುಂತೆ. ಯಾವುದೋ ಧಾರಾವಾಹಿಯಲ್ಲಿ ಒಬ್ಬ ಇಳಿವಯಸ್ಸಿನವ ತರಕಾರಿ ತರಲು ಹೊರಟಿದ್ದ. ಮತ್ತೆ ಪುಸ್ತಕದೊಳಗೆ ಮುಳುಗಿ ಐದಾರು ಪುಟವೇ ಮಗುಚಿರಬೇಕು, ಮತ್ತೆ ತಲೆಯೆತ್ತಿ ನೋಡಿದರೆ ಅದೇ ಇಳಿವಯಸ್ಸಿನ ಪಾತ್ರಧಾರಿ ಖಾಲಿ ಬುಟ್ಟಿ ಹಿಡಿದು ಇನ್ನೂ ತರಕಾರಿ ಅಂಗಡಿಯತ್ತ ಧಾವಿಸುತ್ತಾ ಇದ್ದಾನೆ. ಅಮ್ಮ ಯಂಡಮೂರಿ ಥ್ರಿಲ್ಲರ್ ಪುಸ್ತಕ ಓದುವವರಂತೆ ಮುಖ ಮಾಡಿದ್ದರು. ’ಅಮ್ಮಾ, ಇನ್ನಾ ಅವ್ನಿಗೆ ತರ್ಕಾರಿ ಅಂಗ್ಡಿ ಸಿಕ್ಕಿಲ್ವಾ?’ ಅಂತ ಕಾಲೆಳೆದಾಗ ಅಮ್ಮ ನಾನು ತತ್ತರವಾಗುವಂಥ ವಿಷಯ ಅಂದಳು. ಆ ಕಡೆಯಿಂದ ಅವನ ಮೊದಲ ಹೆಂಡತಿ ಅದೇ ಅಂಗಡಿಗೆ ಬರ್ತಿದಾಳಂತೆ. ಅವರಿಬ್ಬರೂ ಭೇಟಿಯಾದರೆ ದೊಡ್ಡ ಜಗಳವಾಗುತ್ತದೆ ಅನ್ನುತ್ತಿದ್ದಳು. "ಸರಿ ಹೋಯ್ತು" ಅನ್ನುವ ನನ್ನ ರಿಯಾಕ್ಷನ್ನಿಗೆ ಕೊಂಚವೂ ಬೆಲೆ ಸಿಗದೇ, ಸೀರಿಯಲ್ಲಿನ ತರಕಾರಿ ಅಂಗಡಿಯಲಿ ನಡೆಯಲಿರುವ ಜಗಳದ ಸಂಗತಿಯೇ ವಿಜಯಿಯಾಯಿತು. ವಿಲನ್ ಪಾತ್ರಧಾರಿಗಳ ಮೇಲೆ ಕ್ರುದ್ಧಳಾಗಿರುತ್ತಿದ್ದಳು. ಫೇಸ್ ಬುಕ್ಕಿನಲ್ಲಿ ಗೆಳೆಯರಾಗಿರುವ ಧಾರಾವಾಹಿಯಲ್ಲಿ ನಟಿಸುವ ಕೆಲವರನ್ನು ಸೌಜನ್ಯಕ್ಕೂ ಮನೆಗೆ ಕರೆವಂತಿಲ್ಲ. ಎದುರುಸಿಕ್ಕರೆ ಅಮ್ಮ ಅವರನ್ನು ಹರಿದುಮುಕ್ಕುವ ಸಂಭವನೀಯತೆ ಇದೆ.

ಕೆಲವು ನಟರ ನಟನೆ ಪೇಲವವಾಗಿರುತ್ತಿತ್ತು. ಮುಖದಲ್ಲಿ ಯಾವ ಭಾವನೆಯೂ ಇಲ್ಲವಾದರೂ ಸಂದರ್ಭಕ್ಕೆ ಒದಗಿಸಿದ ಹಿನ್ನೆಲೆ ಸಂಗೀತದಿಂದಾಗಿಯೇ ಪಾತ್ರದ ಭಾವ ಊಹಿಸಬೇಕಿತ್ತು. ಒಂದೆರಡು ಎಪಿಸೋಡಿನ ನಂತರ ಇದು ಸೀರಿಯಲ್ಲುಗಳ ವ್ಯಾಕರಣ ಎಂದು ಅರ್ಥವಾಯಿತು. ಒಂದೇ ರಿಯಾಕ್ಷನ್ನನ್ನು ಮೂರ್ನಾಲ್ಕು ಬಾರಿ ಹೆದರಿಸುವ ಹಿನ್ನೆಲೆ ಸಂಗೀತದೊಂದಿಗೆ ನೀಡಿದರೆ ಪಾತ್ರಕ್ಕೆ ಶಾಕ್ ಆಗಿದೆ ಅಂತ ಅರ್ಥೈಸಿಕೊಳ್ಳಬೇಕು.

ದಿನಮುಳುಗುತ್ತಿದ್ದರೂ ಧಾರಾವಾಹಿಗಳು ಮುಗಿಯುತ್ತಿರಲಿಲ್ಲ. ಅಮ್ಮಾ ಕಾಫಿ ಕೊಡು ಅಂದರೆ ಈಗಷ್ಟೇ ರಾಧಾ (ಅಂದರೆ ಅಮ್ಮನ ಕೋಡ್ ನ ಪ್ರಕಾರ ಊಟದ ಸಮಯ) ಮುಗೀತಲ್ಲಾ, ಸುಕನ್ಯ (ಅಂದರೆ ಕಾಫಿ ಸಮಯ) ಮುಗಿದಾಕ್ಷಣ ಕೊಡ್ತೆ ಮಾರಾಯ" ಅನ್ನುತ್ತಿದ್ದಳು.

Jogula

ಧಾರಾವಾಹಿಗಳೆಂಬ ಮನೆಮಹಾಭಾರತಗಳು ಮುಗಿದು ಊಟ ಮಾಡಿ ನೆಮ್ಮದಿಯಾಗಿ ಮಲಗಿಕೊಂಡು ಆಲೋಚಿಸಿದಾಗ ಅಮ್ಮ ಉಪಯೋಗಿಸುವಷ್ಟು ಮೆದುಳು ಯಾವ ವಿಜ್ಞಾನಿಯೂ ಬಳಸಲಾರ ಅನ್ನಿಸಿತು. ದಿನಕ್ಕೆ ಕಡಿಮೆ ಅಂದರೂ ಹತ್ತು ಧಾರಾವಾಹಿಗಳು, ಅಂದರೆ ಹತ್ತು ಕಥೆ, ಅದರೊಳಗೆ ಏನಿಲ್ಲವೆಂದರೂ ಎಲ್ಲಾ ಸೇರಿ ಕನಿಷ್ಟ ೫೦-೬೦ ಉಪಕಥೆಗಳು, ಇನ್ನೂರು-ಮುನ್ನೂರು ಪಾತ್ರಗಳನ್ನು ನೆನಪಿಟ್ಟುಕೊಳ್ಳಬೇಕು. ಜತೆಗೆ ಒಬ್ಬ ಪಾತ್ರಧಾರಿ ಎರಡು ಸೀರಿಯಲ್ಲಿನ ಕೆಲಸ ಮಾಡಿದರೆ ಆ ಪಾತ್ರಕ್ಕೂ ಈ ಪಾತ್ರಕ್ಕೂ ಇರುವ ವಿಭಿನ್ನತೆಯನು ಮನದ ಮೂಲೆಯಲಿ ರೆಕಾರ್ಡ್ ಮಾಡಿಕೊಂಡಿಟ್ಟಿರಬೇಕು. ಅದರಲ್ಲೂ ಮೆಘಾ ಧಾರಾವಾಹಿಗಳಲಿ ಸಂಭಾವನೆ ಕಡಿಮೆ ಆಯ್ತೆಂದೋ, ಇಲ್ಲವೇ ಸಿನೆಮಾದಲ್ಲಿ ಚಾನ್ಸ್ ಸಿಕ್ಕಿತೆಂದೋ ಪಾತ್ರಧಾರಿ ಪರಾರಿಯಾದರೆ ಆ ಪಾತ್ರದ ಜಾಗಕ್ಕೆ ಇನ್ನೊಬ್ಬರನ್ನು ತಂದು ಕೂರಿಸುವುದುಂಟು. ಕೆಲವು ಬಾರಿ ಪಾತ್ರವೊಂದು ಸತ್ತು, ಮತ್ತೆ ಯಾವಾಗಲೋ ನೂರು ಎಪಿಸೋಡು ಮುಗಿದ ಮೇಲೆ ವಾಪಸ್ಸು ಬರುವ ಸಂಭವನೀಯತೆಯೂ ಇಲ್ಲದಿಲ್ಲ. ಸಂಭಾವನೆ ಜಾಸ್ತಿ ಕೇಳಿದರೆಂದು ಮುಂದಿನ ಎಪಿಸೋಡಿನಲ್ಲಿ ಆ ಪಾತ್ರಕ್ಕೆ ಆಕ್ಸಿಡೆಂಟ್ ಮಾಡಿಸಿ ಫೋಟೋಗೆ ಮಾಲೆ ಹಾಕಿಸಿದ ಉದಾಹರಣೆಯೂ ಬಹಳಷ್ಟಿದೆ. ಅಲ್ಲದೇ ಮಧ್ಯೆ ಪವರ್ ಕಟ್ ಆದರೆ ಸೀರಿಯಲ್ಲಿನಲಿ ಕಟ್ ಆದ ಭಾಗದ ಕಥೆ ಊಹಿಸಬೇಕು (ಅಷ್ಟು ಧಾರಾವಾಹಿ ನೋಡಿ ಅನುಭವವಿರುವ ಅಮ್ಮನಿಗೆ ಇದು ಅಂಥ ಕಷ್ಟದ ವಿಚಾರವೇನಲ್ಲ)

ಅಮ್ಮನಿಗೆ ಈ ಎಲ್ಲಾ ಪಾತ್ರಧಾರಿಗಳ ಮಾತು, ಕಥೆ, ನೆನಪಿಡಲು ಆಗಬಹುದಾದ ಪರ್ಮ್ಯೂಟೇಶನ್-ಕಾಂಬಿನೇಶನ್ ಗಳನ್ನು ಊಹಿಸಿ ತಲೆಸುತ್ತಿ ಬವಳಿ ಬಂತು. ನನ್ನ ಕೆಲಸ, ಅದರ ಒತ್ತಡಗಳು ಕುಬ್ಜವಾಗಿ ಕಂಡವು.

ಈಗಲೂ ದೂರದ ಊರಿಂದ ಫೋನ್ ಮಾಡುವಾಗ ಬೇರೆ ಮಾತೆಲ್ಲಾ ಮುಗಿದ ಮೇಲೆ, ’ಸುಕನ್ಯ ಚೆನ್ನಾಗಿದ್ದಾಳಾ?’ ’ಭಾರ್ಗವಿ ಮದುವೆ ಸಸೂತ್ರವಾಗಿ ನಡೆಯಿತಾ?’ ಅಂತಲೇ ಕೇಳುತ್ತಿರುತ್ತೇನೆ! ಮತ್ತೆ ಅದಕ್ಕೆ ಉತ್ತರವು "ನೀನು ಹೇಗಿದ್ದೀ?" ಅನ್ನುವ ಪ್ರಶ್ನೆಗೆ ಬರುವ ಉತ್ತರಕ್ಕಿಂತ ಉತ್ಸಾಹಭರಿತವಾಗಿರುವುದನ್ನು ಗಮನಿಸಿದ್ದೇನೆ.

ಟ್ರೈನು ತನ್ನ ಮೊದಲ ಶಂಖ ಊದಿತು.

ಆಕೆಯಿನ್ನೂ ಕಿಟಕಿಗೆ ಅಂಟಿಕೊಂಡೇ ಇದ್ದಾಳೆ. ದೂರದೂರಿಗೆ ಹೊರಡುತಿರುವ ಮಗನಿಂದಾಗಿ ಕಳವಳ, ಬೇಸರಗೊಂಡಿರುವ ಮನದ ಭಾರವೆಲ್ಲಾ ಆ ಬೋಗಿಗೆ ಹೊರಿಸುವಂತೆ. "ಉಪ್ಪಿನಕಾಯಿ ಬಾಟಲು ಜೋಪಾನ, ಹೊಸ ಊರಿಗೆ ಹೋದಾಗ ನೀರಿನ ಬದಲಾವಣೆಯಿಂದಾಗಿ ಖಾಹಿಲೆ ಬರುತ್ತದಂತಲ್ಲಾ.. ಹಾಗೆ ಹೋದಲ್ಲೆಲ್ಲಾ ನೀರು ಕುಡಿಯಬೇಡಾ.. ಕೊಂಚ ಭಾರವೆನಿಸಿದರೂ ಅಡ್ಡಿಯಿಲ್ಲ, ಬಿಸಿನೀರಿನ ಬಾಟಲನ್ನು ಸದಾ ಇಟ್ಟುಕೊಂಡಿರು.. ಪುದೀನಾ ಚಟ್ನಿಗೆ ನೀರು ಹಾಕದೇ ಮಾಡಿದೀನಿ, ಹೆಚ್ಚು ದಿನಗಳ ಕಾಲ ಬರಬಹುದು, ಯಾವುದಕ್ಕೂ ಆದಷ್ಟೂ ಬೇಗ ಉಪಯೋಗಿಸಿ ಖಾಲಿ ಮಾಡು.." ಹೀಗೆ ಪುಂಖಾನುಪುಂಖವಾಗಿ ಆಕೆಯಿಂದ ಮಮತೆಯ ಮಾತುಗಳು ಬರುತ್ತಲೇ ಇದೆ. ಕಿಟಕಿಯ ಸರಳುಗಳಾಚೆ ಹುಡುಗ ಮೆಲ್ಲ ಮೆಲ್ಲ ನಾಚಿಕೊಳ್ಳುತ್ತಿದ್ದಾನೆ, ಇವೆಲ್ಲವೂ ತನಗೆ ತಿಳಿಯದೇ? ಅಕ್ಕ-ಪಕ್ಕದವರು ತನ್ನ ಕುರಿತು ಏನಂದುಕೊಳ್ಳಲ್ಲ ಎಂಬ ಕಳವಳ ಆತನದು. ಆದರೂ ಆ ಸೊಲ್ಲುಗಳಿಂದ ತನ್ನೊಳಗೆ ತಂಪೊಂದು ಹರಡುತಿರುವುದೂ ಸ್ಪಷ್ಟವಾಗಿಯೇ ಅರಿವಾಗುತ್ತಿದೆ ಅವನಿಗೆ. ಆಕೆ ಹಾಗೆ ಹೇಳುತ್ತಿದ್ದರೆ ಟ್ರೈನು ನಿಲ್ದಾಣದ ಎಲ್ಲ ಗಿಜಿಗಿಜಿಗಳ ಸಂತೆಯ ನಡುವೆಯೂ ಇಂಪಾದ ಹಾಡು ಕೇಳಿಸುವಂತಿದೆ.

"ಎಲ್ಲಾ ಸರಿಯಾಗಿ ಇಟ್ಟುಕೊಂಡಿದ್ದೀಯಲ್ಲವಾ?" ಅಂತ ಕೇಳುತ್ತಾಳೆ. ಅದನ್ನು ಆಕೆ ಹದಿನೈದನೇ ಬಾರಿ ಅನ್ನಿಸುತ್ತದೆ ಕೇಳುತ್ತಿರುವುದು. ಉತ್ತರಿಸದಿದ್ದರೆ ಮತ್ತೆ ತಳಮಳಗೊಂಡಾಳು ಅಂತ ಭಯವಿರುವುದರಿಂದಲೇ ಆತ ಆಕೆಯ ಎಲ್ಲಾ ಪ್ರಶ್ನೆಗಳಿಗೆ ಹೂಂ ಗುಟ್ಟುತ್ತಿದ್ದಾನೆ. "ಅಲ್ಲಿ ತಲುಪಿದ ನಂತರ ಫೋನ್ ಮಾಡು.. ಯಾಕೋ ಫೋನ್ ಬರದಿದ್ದರೆ ಒಂಥರಾ ಆಗುತ್ತದೆ" ಅನ್ನುತ್ತಾಳೆ. ಕೊನೆಯ ಸಲ ಹೊರಟು ಬಂದಿದ್ದಾಗ ಫೋನ್ ಮಾಡದಿದ್ದುದ್ದಕ್ಕೆ ಧೋ ಎಂದು ಅತ್ತಿದ್ದು ಮಗನಿಗೆ ಬೇರೆ ಯಾರಿಂದಲೋ ತಿಳಿದಿತ್ತು. ಆ ಕಣ್ಣೀರನ್ನೆಲ್ಲಾ ಈ "ಒಂಥರಾ" ಎಂಬ ಪದದಿಂದ ಮುಚ್ಚಿಹಾಕುತ್ತಿದ್ದಾಳೆ ಅನ್ನಿಸಿ ಮಗನ ಮುಖದಲ್ಲಿ ಮಂದಹಾಸ ಮೂಡಿತು.

kingedwardvibyrichardpicton

ಎಲ್ಲಾ ಪ್ರಶ್ನೆಗಳನ್ನು ಕೇಳಿಯಾದವಳಂತೆ ಕೊಂಚ ಹೊತ್ತು ಮೌನವಾಗುತ್ತಾಳೆ. ಅವಳ ಮೌನ ಅಲ್ಲಿನೆಲ್ಲಾ ಸದ್ದಿನ ನಡುವೆ ಇದ್ದರೂ ಅದು ಅವನ ಕಿವಿಗಡಚಿಕ್ಕುವಂತಿದೆ. ಕ್ಷಣಗಳ ಕಾಲ ಆ ಮೌನದಿಂದ ಅವನೂ ಅಸಹನೆಗೊಳ್ಳುತ್ತಾನೆ. ಮಲಗುತ್ತಿದ್ದಾಗ ಜೋಗುಳ ಹಾಡುತ್ತಾ ಮಂದಹಾಸದಿಂದಿದ್ದ ಅಮ್ಮ, ಈಗ ಪಕ್ಕ ಮಧ್ಯೆ ನಿದ್ದೆಯಲ್ಲೆದ್ದಾಗ ಅಮ್ಮನಿಲ್ಲದಿದ್ದಾಗ ಆತಂಕಗೊಂಡ ಮಗುವಂತಾಗುತ್ತಾನೆ. ಮೌನವನ್ನು ಭೇದಿಸಲೇಬೇಕೆಂದು ಪಣತೊಟ್ಟವನಂತೆ ಪದಗಳಿಗಾಗಿ ತಡಕಾಡುತ್ತಾನೆ. "ಅಲ್ಲಿ ಸಂಬಳ ಬಂದ ಕೂಡಲೇ ಹಣ ಕಳಿಸುತ್ತೇನೆ" ಎಂಬ ವಾಕ್ಯ ಆ ಸಂದರ್ಭಕ್ಕೆ ತೀರಾ ಹೊಂದಿಕೆಯಾಗುತ್ತಿಲ್ಲ. "ಆಗಾಗ ಕಾಕ ಮನೆಗೆ ಹೋಗಿ ಬರ್ತೇನೆ" ಅನ್ನುವುದನ್ನು ಈಗಲೇ ಹೇಳಬೇಕೆಂದಿಲ್ಲ. ಕೊನೆಗೆ ಪೆದ್ದು ಪೆದ್ದಾಗಿ,"ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೋ.." ಅನ್ನುತ್ತಾನೆ. ಅವನ ದನಿಯಲ್ಲಿ ತಾನು ನೋಡಿಕೊಳ್ಳಬೇಕಾಗಿದ್ದ ಜೀವದ ಜತೆಯಿರದೇ ಹಣದ ಹಂಗಿಗೆ, ಹಿಂದೆ ಬಿದ್ದು ಬೇರೆಲ್ಲೋ ದೂರವಿರಬೇಕಾದುದರ ಬಗ್ಗೆ ಪಾಪಪ್ರಜ್ಞೆ ಇದೆ.

ಆ ವಾಕ್ಯ ಕೇಳುತ್ತಲೇ ಅಮ್ಮ ತುಂಬಾ ಮೆದುವಾಗಿ ಬಿಡುತ್ತಾಳೆ. ಅದನ್ನೇ ಕೇಳಲು ಇಡೀ ಜೀವನ ಕಾದಿದ್ದವಳಂತೆ ಅನ್ನಿಸತೊಡಗುತ್ತದೆ. ಮಗ ಒಂಚೂರು ಆ ಕಡೆ ನೋಡಿದರೂ ಸಾಕು ಆಕೆ ಆ ಪುಟ್ಟ ಕ್ಷಣವೊಂದರಲ್ಲಿ ಉಕ್ಕುತ್ತಿರುವ ಕಂಬನಿಯೊಂದನ್ನು ತನ್ನ ಸೆರಗಿನಿಂದ ಒರೆಸಿಕೊಳ್ಳಬಲ್ಲಳು. ಅವಳ "ಆಯಿತು" ಅನ್ನುವ ಪದ ಗಂಟಲು ದಾಟಿಬರಲಾರದಷ್ಟು ಗದ್ಗದಳಾಗಿದ್ದಾಳೆ. ಸುಮ್ಮನೆ ತಲೆಯಾಡಿಸುತ್ತಾಳೆ.

ಅಷ್ಟರಲ್ಲಿ ಟ್ರೈನು ಮತ್ತೊಂದು ಸಲ ಶಂಖ ಊದುತ್ತದೆ. ಮಗ ಆಗಲೇ ಯುದ್ಧಕ್ಕೆ ಹೊರಡಲು ಅಣಿಯಾಗಿದ್ದಾನೆ. ಟ್ರೈನು ಕೊಂಚ ಕೊಂಚ ವಾಗಿ ಹೊರಡಲು ಸಿದ್ಧವಾಗುವಾಗುತ್ತದೆ. ಕಿಟಕಿಯ ಸರಳುಗಳನ್ನು ಹಿಡಿದು ಮತ್ತೆ ತನ್ನ ಮಾತುಗಳನ್ನು ಶುರುಮಾಡುತ್ತಾಳೆ. ಇನ್ನು ಹೆಚ್ಚು ಸಮಯವಿಲ್ಲ. "ಮುಂದಿನ ತಿಂಗಳ ಹಬ್ಬಕ್ಕೆ ಖಂಡಿತಾ ಬಾ.. ಹಲಸು ಬೇರೆ ಸೀಸನ್ ನಲ್ಲಿ ಸಿಗೋಲ್ಲ ಮತ್ತೆ.. ಸುಮ್ಮನೆ ಕಾರಣಗಳನ್ನು ಹೇಳಬೇಡ.. ರವೆಲಾಡು ಜಾಸ್ತಿ ಕಟ್ಟಿಟ್ಟಿದೀನಿ.. ನಿನ್ನ ರೂಂಮೇಟ್ ಗಳಿಗೂ ಕೊಟ್ಟು ತಿನ್ನು.." ಹೀಗೆ ಟ್ರೈನ್ ಗಿಂತ ವೇಗವಾಗಿ ಆಕೆಯ ಮಾತು ಸಾಗುತ್ತಿದೆ. "ಆಯ್ತಮ್ಮ.. ಸರಿ.. " ಅನ್ನುತ್ತ ಆಕೆ ನಿಂತರೆ ಸಾಕು ಅನ್ನುವ ಧಾಟಿಯಲ್ಲಿ ಮಾತಾಡುತ್ತಿದ್ದಾನವನು. ಅವಳ ಏದುಸಿರು ಅವನಿಗೆ ಭಯ ಹುಟ್ಟಿಸಿದೆ. ಟ್ರೈನಿನ ವೇಗ ಆಕೆಯ ಹಣೆಯಲ್ಲಿ ಗೆರೆ ತಂದಿದೆ. ಉಸಿರಿನ ವೇಗ ಹೆಚ್ಚಾಗಿ ಮಾತು ಗಂಟಲಾಳದಲ್ಲೆಲ್ಲೋ ಕತ್ತು ಹಿಸುಕಿದಂತಾಗುತ್ತಿದೆ..

ಟ್ರೈನು ತನ್ನ ವೇಗ ಹಿಡಿದುಕೊಂಡಂತೆ ಕಿಟಕಿಯಿಂದ ಇಣುಕುತ್ತಿರುವ ಮಗನಿಗೆ ದೂರದಲ್ಲಿ ಅಮ್ಮ ಸೊಂಟ ಹಿಡಿದು ಇತ್ತ ಕಡೆಯೇ ನೋಡುತ್ತಾ ನಿಂತುಕೊಂಡಂತೆ ಕಾಣುತ್ತದೆ. ಮತ್ತೆ ಆಕೆಯ ಕಣ್ಣುಗಳಲ್ಲಿ ಇಣುಕುತ್ತಿದ್ದಂತೆ ಇವನೊಳಗೆ ಒಂದು ಮಿಸುಕಾಟ ಶುರುವಾಗಿದೆ. ಆಕೆಗೆ ಇನ್ನೂ ಏನಾದರೂ ಮುಖ್ಯವಾದ್ದು ತಿಳಿಸುವುದಿತ್ತೇ ಅನ್ನಿಸುತ್ತಿದೆ. ಆಕೆ ತನಗಾಗಿ ಯಾವುದೊ ಒಂದು ಮಾತು ಹೊತ್ತು ನಿಂತಂತೆ ಭಾಸವಾಗುತ್ತಿದೆ. ಈತ ಏನೋ ಕಳೆದುಕೊಂಡವನಂತೆ ಪದೇ ಪದೇ ಕಿಟಕಿಯಿಂದ ಇಣುಕುತ್ತಿದ್ದಾನೆ.

ತೀವ್ರ ಚಡಪಡಿಕೆ ಉಂಟಾಗುತ್ತಿದೆ. ಚೈನೆಳೆದು ಮತ್ತೆ ಹಿಂದಕ್ಕೆ ಹೋಗಿ ಆಕೆಯ ಒಂದೇ ಒಂದು ಮಾತು ಕೇಳಿಬರೋಣ ಅನ್ನಿಸುತ್ತಿದೆ. ಸುಮ್ಮನೆ ಆಕೆಯನ್ನು ಅಲ್ಲೇ ಸಿಮೆಂಟ್ ಸೀಟಿನಲ್ಲಿ ಕುಳ್ಳಿರಿಸಿ ನೇವರಿಸಬೇಕು ಅನ್ನಿಸುವ ಹಪಹಪಿ. ಮತ್ತೆ ಮತ್ತೆ ಅದೇ ದಿಕ್ಕಿನತ್ತ ನೋಡುತ್ತಿದ್ದಾನೆ. ಸೊಂಟ ಹಿಡಿದುಕೊಂಡ ಆಮ್ಮನ ಚಿತ್ರ ಟ್ರೈನು ಮೈಲು ಮೈಲು ದೂರ ಹೋಗಿದ್ದಾಗಲೂ ಕಾಣಿಸುತ್ತಿದೆ ಅವನಿಗೆ.

007 Horse and Train

ಅವನಿಗೆ ಗೊತ್ತಾಗಿಬಿಟ್ಟಿದೆ, ಇನ್ನು ಜೀವನದುದ್ದಕ್ಕೂ, ದಿನದಿನದ ಕನಸಲ್ಲೂ, ಅದೇ – ಆ ಚಿತ್ರದಲ್ಲಿ ಆಕೆಯ ಏನೋ ಒಂದು ವಿಷಯವನ್ನು ಹೇಳಲೇಬೇಕೆಂದು ಅಂದುಕೊಳ್ಳುತ್ತಿರುವಂಥ ಕಣ್ಣು ದಟ್ಟವಾಗಿ ಕಾಡಲಿದೆ… ಮತ್ತು ಅವಳು ಹೇಳದೇ ಉಳಿದಂತಿದ್ದ ಒಂದು ಮಾತು ಕ್ಷಣಕ್ಷಣವೂ ಅನುರಣನಗೊಳ್ಳಲಿದೆ…

ಈಗ ಆತ ಮೌನವಾಗಿ ಕಣ್ಮುಚ್ಚಿದಾನೆ, ರೈಲಿನ ಜೀಕಿನಲ್ಲಿ ಆತ ಮುಂದಿನ ಗಮ್ಯದ ಬದುಕಿನ ಮತ್ತು ಹಿಂದಿನ ರಮ್ಯ ಬದುಕಿನ ನಡುವೆ ಮನಸ್ಸಲ್ಲೇ ಉಯ್ಯಾಲೆಯಾಡುತ್ತಾ..

********

 

ಚಿತ್ರಕೃಪೆ : ಈ ವೆಬ್ ಸೈಟ್ ಮತ್ತು ಇಲ್ಲಿಂದ

 

ಹಾಂ..
ನಿನ್ನೆ ಬಂದಿದ್ದು ನಿಜಾ
ನನ್ನ ಹುಡುಕಿಕೊಂಡು
ಯಾವಾಗಲೂ ಬರುವುದಿಲ್ಲವದು

ಆ ಪರಿಮಳ
ಅದು ನೆನಪಿನಂತೆ

ವಾಸ್ತವದೊಳಗೆ ನಾವು
ಮೆಲ್ಲ ಕರಗುತ್ತಿರುವಾಗ
ಅಲಾರ್ಮು ಎಚ್ಚರಿಸುವಂತೆ
ನಮ್ಮನ್ನು ಏಳಿಸುತ್ತದೆ
ಕನಸಿನ ಹಗಲಿಗೆ
ಬದುಕಿನ ಬಗಲಿಗೆ

ಪುರ್ಸೋತು ಇದ್ದರೆ
ಹೊತ್ತು ನಮ್ಮ ಸ್ವತ್ತಾಗಿದ್ದರೆ
ಮನಸ್ಸಿದ್ದರೆ ಕೊಂಚ ಹೊತ್ತು ಅಲ್ಲೇ
ಬದುಕಬಹುದು
ಗಡಿಬಿಡಿ ಇಲ್ಲದೇ ಇದ್ದರೆ ಕ್ಷಣಗಳನು
ಗುಡುಗುಡಿಯಂತೆ ಸೇದಬಹುದು
ಇಲ್ಲಿ ಓಡಲಿಕ್ಕೆ ತುಂಬಾ ಇದ್ದರೆ ಕಷ್ಟ

ಆದರೂ ನನಗೆ ಚಕ್ರಸುಳಿಯೊಳಗೆ
ಸಿಲುಕಿದಂತೆ ಉಂಟುಮಾಡುವ
ಮಾಯದ ಗಾಯದಂತೆ
ಎದೆಯೊಳಗೇ ಉಳಿದುಹೋಗುವ
ಭಾಸ ಒಂದೇ ಪ್ರಶ್ನೆಯದ್ದು

ಹುಡುಕಿಕೊಂಡು ಬಂದಿದ್ದು
ಪರಿಮಳ ಹೊತ್ತು ತಂದ ನೆನಪಾ
ಅಥವಾ ನೆನಪು ತಂದ ಪರಿಮಳವಾ

ಮೊನ್ನೆ ಪಟ್ಟು ಹಿಡಿದು ಕೂತು

ನಿಯತ್ತಾಗಿ, ಎಡಗೈ ಎದೆ ಮೇಲೆ ಹಿಡಿದು

ನನ್ನ ಬಗ್ಗೆ

ಇನ್ನೊಬ್ಬನ ಬಗ್ಗೆ

ಇತ್ತೀಚೆಗೆ ನಾ ನೋಡಿದ ಘಟನೆ ಬಗ್ಗೆ

ಮತ್ತು ನಾ ಓದಿದ ವಿಷಯದ ಬಗ್ಗೆ

ಬರೆದೆ,

ಮತ್ತು

ಇವತ್ತು ಅದನ್ನು ಓದಿ

ನನ್ನ ನಿಲುಕಿಗೆ ಸಿಕ್ಕ ಸತ್ಯ ಪರಿಶೀಲಿಸಿದೆ.

 

ಇಡೀ ಇತಿಹಾಸದ ಮೇಲಿನ

ನಂಬಿಕೆಯೆಲ್ಲಾ

ಉಡುಗಿಹೋಯ್ತು.

 

ಹೊಸತರಲ್ಲಿ ಎಲ್ಲ ವಿಷಯದಲ್ಲಿ ಗೊಂದಲಗಳಿರ್ತವೆ. ಬಲ್ಲವರರಿಂದ ಮೊದಲೇ ಕೇಳಿಕೊಂಡು ಅದರ ಪರಿಹಾರ ಎಲ್ಲಾ ವಿಷಯಗಳಲ್ಲಿ ಸಾಧ್ಯವಿಲ್ಲ. ಉದಾಹರಣೆಗೆ ಮೊದಲ ರಾತ್ರಿ. ಗೆಳೆಯನಿಂದ ಕೆಲ ಅನುಮಾನಗಳನ್ನು ಕ್ಲಿಯರ್ ಮಾಡಿಕೊಳ್ಳಬಹುದೇ ವಿನ: ಎಲ್ಲವನ್ನೂ ಕೇಳಿದರೆ ನಗೆಪಾಟಲು. ಅವ ಹೇಳಿದ್ದಕ್ಕೂ ಮತ್ತೆ ಅಲ್ಲಿ ಒಳಗೆ ರಣರಂಗಕ್ಕೂ ಸಾಮ್ಯತೆ ಇಲ್ಲದೇ ಹೋದರೆ ಮತ್ತಷ್ಟು ಪೇಚು! ಊಹಿಸದ ಕಡೆಯಿಂದ ಅಪಾಯ (ಇಂಥ ದೊಡ್ಡ ಪದ ಬ್ಯಾಡವಿತ್ತು, ಹೆದರಬೇಡಿ) ಬರಬಹುದು. ಅದಕ್ಕೆ ಕೆಲವೊಂದು ಅನುಭವಿಸಿಯೇ ಅನುಭವ ಪಡೆದುಕೊಳ್ಳಬೇಕು.

ಇಷ್ಟಕ್ಕು ಇದೆಲ್ಲಾ ನಾ ಅಂತಿರೋದು ಮೇಲೆ ಹೇಳಿದಂಥ ಘನಗಂಭೀರ ವಿಷಯವಲ್ಲ. ಸಂದರ್ಭವೇನೆಂದರೆ ಮೊದಲ ಬಾರಿಗೆ ಹೊಸ ಊರಿನ ಹೊಸ (ನನಗೆ ಮಾತ್ರ) ಹೋಟೆಲ್ ಗೆ ಹೊಕ್ಕಿದ್ದೇನೆ. ಅಲ್ಲಿನ ಕ್ಯಾಶಿಯರ್ ಮೊಗದಲ್ಲಿ ಕೃತಕವಾಗಿ ನಗು ಬಿಂಬಿಸಿದ್ದಾನೆ. ಅದರಲ್ಲಿ ಯಾಕೋ ಹೊಸ ಮಿಕ ಬಂತು ಅನ್ನುವ ಹಿಗ್ಗೇ ಹೆಚ್ಚು ಅನ್ನಿಸುತ್ತಿದೆ. ಅವನ ಆ ಅಸ್ತ್ರಕ್ಕೆ ನಾನು ಸೌಜನ್ಯಕ್ಕಾಗಿ ನಕ್ಕು, ಮತ್ತೆ ಮುಖ ಗಂಭೀರ ಮಾಡಿಕೊಳ್ಳುತ್ತಾ ’ಹೊಸಬನಿರಬಹುದು, ಆದರೆ ನಿಮ್ಮ ಹತ್ರ ಟೋಪಿ ಹಾಕ್ಸಿಕೊಳ್ಳಲ್ಲ, ಯಾವುದಕ್ಕೂ ನೀವು ಮತ್ತಷ್ಟು ಹುಶಾರಾಗಿರಿ’ ಎಂಬ ಸಂದೇಶ ರವಾನಿಸಿದೆ. ಸಪ್ಲಾಯರ್ ನನ್ನು ಕೂಗುತ್ತಾ ತಮಿಳಿನಲ್ಲಿ "ಸರ್ ಗೆ ಏನ್ ಬೇಕು ಕೇಳು ?" ಅನ್ನುತ್ತಿದ್ದರೂ ಅದರೊಳಗೆ "ನಿನ್ನಂತವನನ್ನ ಎಷ್ಟು ನೋಡಿಲ್ಲ, ಕೂತ್ಕೋ.. ಏ ಸಪ್ಲಾಯರ್.. ಬೇಗ ಬಲೆ ಬೀಸು!" ಅನ್ನುತ್ತಿದ್ದಂತಿತ್ತು.

 

07072010891

ತಿಂಡಿ ನಂತರ ಕಾಫಿ ಕುಡಿದು ನೋಡಾಣ ಅನ್ನಿಸಿ, ಒರು ಕಾಫಿ, ಬ್ರೂ ಕಾಫಿ ಇರುಕ್ಕಾ ಅಂತ ಹರುಕ್ಕು ಮುರುಕ್ಕು ತಮಿಳಿನಲ್ಲಿ ಕೇಳಿದೆ. ಕಾಪಿಯಾ ಇರುಕ್ಕು ಇರುಕ್ಕು ಅಂತಾ ಹೋದವ ತಂದಿಟ್ಟಿದ್ದು ಒಂದು ದೊಡ್ದ ಗ್ಲಾಸಿನಲ್ಲಿ ಕಾಫಿ. ಅದೆಷ್ಟು ದೊಡ್ಡದಿತ್ತೆಂದರೆ ನೋಡಿದಾಕ್ಷಣ ನನಗೆ ಬಾಲ್ಯದಲ್ಲಿ ಕಾಫಿ ಮೇಲೆ ಉಂಟಾಗಿದ್ದ ಮೊದಲ ಪ್ರೇಮವೆಲ್ಲಾ ಒಂದೇ ಕ್ಷಣದಲ್ಲಿ ಒಂದು ವರ್ಷದ ನಂತರ ಸಂಸಾರದಲ್ಲಿ ಗಂಡ-ಹೆಂಡತಿ ನಡುವಿನ ವಿರಸದಷ್ಟು ಇಳಿದುಹೋಯಿತು. ಗೆಳೆಯರು ಬಿಯರ್ರನ್ನು ಕೂಡ ಹೀಗೆ ಕುಡಿಯುವುದನ್ನು ಕಂಡಿರದ ನನಗೆ ಇದು ಕುಡಿತಕ್ಕಿಂತ ಹೆಚ್ಚು ಭಯ ಹುಟ್ಟಿಸಿತು.

ಎಷ್ಟು ಜಾಸ್ತಿ ದುಡ್ಡು ಕೊಟ್ಟರೂ ಕಾಫಿ ಲೋಟ ಸೈಜು ಕಡಿಮೆಯಾಗುತ್ತಿದೆ ಅಂತ ಪೇಚಾಡುವ ನಾಗರಿಕರನ್ನೆಲ್ಲಾ ಹತ್ತು ದಿನ ಇಂಥ ಕಾಫಿ ಕುಡಿಸಬೇಕು. ಅಲ್ಲದೇ ನನಗೆ ಹಿಂಸೆಯಿತ್ತ ಸಕಲ ವೈರಿಗಳಿಗೆ ಇಂಥ ಶಿಕ್ಷೆಯಿತ್ತರೆ ಹೇಗೆ ಅಂತಲೂ ಆಲೋಚನೆ ಉಕ್ಕಿತು. ಹೊಸ ಗರುಡಪುರಾಣ ಬರೆವ ಅವಕಾಶ ನನಗೆ ಸಿಕ್ಕರೆ ನೀರಿಗೆ ಹಾಲು ಬೆರೆಸುವ ಹಾಲು ಮಾರಾಟಗಾರರು, ಒಂದು ಕಾಫಿ ಕುಡಿಯಲು ಒಂದು ಘಂಟೆ ತೆಗೆದುಕೊಂಡು ಹೋಟೆಲ್ಲಿನ ಫ್ಯಾನಿಗಾದ ಖರ್ಚಿಗಿಂತಲೂ ಕಡಿಮೆ ಹಣ ಕೊಟ್ಟುಬರುವವರು, ತಮ್ಮ ಹೋಟೆಲ್ಲಿನಲ್ಲಿ ಕಾಫಿ ಕುಡಿಯುವವರನ್ನು ಕಂಡು ತಮ್ಮ ಮೀಸೆ ತುದಿಯಲ್ಲಿ ನಕ್ಕು , ಪಕ್ಕದ ಹೋಟೆಲ್ ನಲ್ಲಿ ತಿಂಡಿ ಕಾಪಿ ಮುಗಿಸಿ ಬರುವ ಹೋಟೆಲ್ ಓನರ್ ಗಳನ್ನು, ಲೋಟ ತೊಳೆಯುವ ಬದಲು ಕೆಂಗೇರಿ ಮೋರಿಯಲ್ಲಿನ ನೀರಿನಂತಾ ಕಲಗಚ್ಚನ್ನು ಬಕೆಟ್ ನಲ್ಲಿರಿಸಿ ಅದರಲ್ಲದ್ದಿ ತೊಳೆಯುವವರನ್ನು ಎಲ್ಲರನ್ನೂ ಪಟ್ಟಿಮಾಡಿ ಈ ಶಿಕ್ಷೆ ಕೊಡಬೇಕನ್ನಿಸಿತು. ಎಷ್ಟು ಅಂದುಕೊಳ್ಳುತ್ತಿದ್ದರೇನು, ಕಾಫಿ ಗ್ಲಾಸು ಜತೆ ಗಡಿಯಾರ ಮುಳ್ಳಿನ ರೇಸು.. ಗೆಲ್ಲುತ್ತಿರುವ ಲಕ್ಷಣ ಮಾತ್ರ ಗಡಿಯಾರದ್ದೇ. ಕುಡಿದಷ್ಟೂ ತಳ ಕಾಣದ ಅಕ್ಷಯ ಕಪ್ಪು.

ಕ್ಯಾಶಿಯರ್ರಿನ ಮುಖ ನೋಡಿದರೆ ನನಗೆ ಇನ್ನಿಂಗ್ಸ್ ಸೋಲಾಗುವ ಭೀತಿ. ನಮ್ಮನೆ ದನ ಕಲಗಚ್ಚು ಕುಡಿಯುವಾಗಲೂ ಮಾಡದ ಮೂತಿಯನ್ನು ನಾನು ಅನಿವಾರ್ಯವಾಗಿ ಧರಿಸಬೇಕಾಯಿತು. ದನದ ಕಷ್ಟ ನೆನಪಾಗಿ ಅದರ ಮೇಲೆ ಯದ್ವಾತದ್ವಾ ಕರುಣೆ ಉಕ್ಕಿತು.

ಗ್ಲಾಸು ಎತ್ತಲು ಸಹಾಯ ಮಾಡದ ಕೈ, ಒಳಗೆ ಸೇರಿಸಲು ಬಯಸದ ಗಂಟಲು, ತನ್ನ ಮೈ ಮೇಲೆ ಒಂದು ಕ್ಷಣವೂ ಇರಗೊಡಿಸದ ನಾಲಿಗೆ, ಕಷ್ಟಪಟ್ಟರೂ ಮೊಗದ ಪೇಚು ಅಡಗಿಸಲಾಗದ ಅಸಾಹಯಕತೆ ಇವೆಲ್ಲದರ ನಡುವೆ ನನ್ನ ಕಾಫಿ ಕುಡಿಯುವ ಪ್ರಯತ್ನಕ್ಕೆ ಕೊನೆಗೂ ಜಯ ಸಿಕ್ಕಿತು.

ಕಾಫಿ ಮುಗಿಯಿತು.

ಬಿಲ್ಲು ಎತ್ತುವಾಗ ಉಂಟಾದ ಜ್ಞಾನೋದಯ ಏನೆಂದರೆ ಈ ಕಾಪಿ ಗೆ ಐವತ್ತು ರೂಪಾಯಿ (ಇಲ್ಲಿನ ಡಾಲರನ್ನು ರೂಪಾಯಿಗೆ ಬದಲಿಸಿದಾಗ). ಐವತ್ತು ವಸೂಲಿ ಮಾಡಲೇಬೇಕು ಎಂಬ ಕಾರಣಕ್ಕಾಗೇ ಅಷ್ಟು ಕ್ವಾಂಟಿಟಿ ಕೊಡುವುದು. ಕಡಿಮೆ ಕೊಟ್ಟರೆ ಬಿಲ್ಲಿಗೆ ಪ್ರಶ್ನೆ ಬರಬಾರದಲ್ವ?

ಅಂತೂ ಬಿಲ್ಲು ಎತ್ತಿ ಕೊಟ್ಟಾಗ ನನಗೆ ಭಾರೀ ಸುಸ್ತು!

ಇಲ್ಲಿಂದ ಬೆಂಗಳೂರಿಗೆ ಹೊರಡುವ ಬಸ್ಸುಗಳು ಲೇಟಾಗಿ ಹೊರಡುವುದಿಲ್ಲ.

ಊರಿನ್ನೂ ತನ್ನ ಮುಸ್ಸಂಜೆಯ ಅಲಂಕಾರದಲ್ಲೇ, ತನ್ನ ನರನಾಡಿಗಳಲಿ ಜೀವಜಾಲದ ಚಲಿಸುವಿಕೆಯ ಸಡಗರದಲ್ಲೇ ಮೈಮರೆತಿರುತ್ತದೆ.  ಎನ್. ಹೆಚ್ ೧೭ ಊರಿನ ಗಲ್ಲವನ್ನಷ್ಟೇ ಮುಟ್ಟಿ ವೈಯಾರದಿಂದ ತೆವಳಿ ಹೋಗುತ್ತದೆ. ಕೋರ್ಟ್ ರೆಸ್ಟಾರೆಂಟ್ ಬಿಡಿ, "ಪಾರಿಜಾತ" ದ ಪರಿಮಳವೂ ಎನ್ನೆಚ್ ನ ವರೆಗೆ ಬರುವ ಸಂಭವವಿಲ್ಲ. ನೆಹರೂ ಮೈದಾನದಲ್ಲಿ ಟೆಂಟ್ ಹಾಕಿದ್ದು, ಯಕ್ಷಗಾನಕ್ಕೆ ಸಿದ್ಧತೆ ನಡೆದಿದೆ. ಗ್ರೀನ್ ರೂಮಿನಲ್ಲಿ ರೆಡ್ ಕಂಗಳೊಂದಿಗೆ ಪಾತ್ರಧಾರಿಗಳು ಪಾತ್ರದ ಕನಸಿನಲ್ಲಿದ್ದಾರೆ. ದಿನವಿಡೀ, "ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ.. ನೀವೂ ಬನ್ನಿ ನಿಮ್ಮ ಮನೆಯವರನ್ನೂ ಕರೆತನ್ನಿ " ಎಂಬೆಲ್ಲಾ ಘೋಷಣೆಗಳನ್ನು ಊರಿನ ಮೂಲೆಮೂಲೆಯಲ್ಲಿ ಇಂಚಿಂಚಾಗಿ ಪಸರಿಸಿದ ಮೈಕು ಹೊತ್ತ ಆಟೋ, ಸುಸ್ತಾದಂತೆ ಅಲ್ಲೇ ಪಕ್ಕ ನಿಂತಿದೆ. ಇತ್ತ ಗಾಂಧೀಮೈದಾನದಲ್ಲಿ ಕ್ರಿಕೆಟ್ಟು ಆಟಗಳು ಮುಗಿದು, ಅಂದಿನಾಟದ ರಸವತ್ತತೆ ಮತ್ತು ಬೇರೆ ಸುದ್ಧಿಮಾತುಗಳಲ್ಲಿ ಹುಡುಗರು ಮುಳುಗಿದ್ದಾರೆ. ಆ ಗುಂಪಿನಲ್ಲೇ ಒಬ್ಬ ಹುಡುಗ, ಈಗ ಅವನ ಹುಡುಗಿ ಪೇಟೆಗೆ ಬರುವ ಹೊತ್ತಾದ್ದರಿಂದ, ’ಅಮ್ಮನ್ ಫೋನ್ ಬಂದಿತ್, ಮನಿಗ್ ಹೋಯ್ಕ್ ’ ಎಂದು ಸುಳ್ಳು ಹೇಳುತ್ತಾ ಅವರೆಲ್ಲರಿಂದ ತಪ್ಪಿಸಿಕೊಂಡು ಹೊರಟಿದ್ದಾನೆ. ಶ್ರೀದೇವಿ ಕ್ರೀಮ್ ಪಾರ್ಲರ್ ನ ಕೆಲಸದ ಹುಡುಗರು ಸಂಜೆ ಹೊತ್ತಿನ ಅವರ ಪಾಲಿನ ಪ್ರೈಮ್ ಟೈಮ್ ಗಾಗಿ ತಯಾರಾಗುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಗಿರಾಕಿಗಳು ಹೆಚ್ಚಲಿದ್ದಾರೆಂದು ಅವರಿಗೆ ಗೊತ್ತಿದೆ. ಶೆರೋನ್ ಹೋಟೆಲ್ಲಿನ ಜಗಮಗಿಸುವ ಬೆಳಕಲ್ಲಿ ಉದರದ ಕನಸುಗಳು ದುಬಾರಿ. ಶಾಸ್ತ್ರೀ ಪಾರ್ಕಿನಲ್ಲೇ ಇರುವ ವೆಂಕಟೇಶ್ವರ ಸ್ವೀಟ್ ಸ್ಟಾಲ್ ಹಾಗಲ್ಲ. ಅಲ್ಲಿ ಉದರದ ಜತೆಗೆ ಕಣ್ಣಿಗೂ ತಂಪು. ಅಲ್ಲಿ ತಿನ್ನಲು ಬಂದವರು, ಪಾನಿಪುರಿ ಸ್ವಲ್ಪ ತಡವಾಗಿ ನೀಡಿದರೂ ಏನೂ ಅನ್ನರು. ತಡವಾದಷ್ಟೂ ಬಸ್ಸಿನಿಂದಿಳಿದು ಬರುವ ಹುಡುಗಿಯರನ್ನು ತುಸು ಹೆಚ್ಚೇ ಸಮಯ ನೋಡಬಹುದು. ಕೆಲಸಕ್ಕೆಂದು ಹೋಗಿದ್ದ ಅಪ್ಪಂದಿರು, ಮನೆಗೆ ಹಣ್ಣು ತರುವುದಕ್ಕಾಗಿ ಅಂಗಡಿ ಬದಿಯಲ್ಲಿ ನಿಂತಿರುತ್ತಾರೆ. ಚಾಕಲೇಟು ಇಂದೂ ತರದೇ ಹೋದರೆ ಪುಟ್ಟ ಅತ್ತು ಊಟ ಮಾಡೋಲ್ಲವೆಂದು ಅಳಬಹುದಾದ್ದರಿಂದ ಸ್ವೀಟಂಗಡಿಯನ್ನು ಬಳಸಿಯೇ ಮನೆಗೆ ಹೋಗಬೇಕಾಗಿರುತ್ತದೆ. ಸೀರಿಯಲ್ಲುಗಳ ಮಧ್ಯೆ ಕಷ್ಟಪಟ್ಟು ಸಮಯ ಹೊಂದಿಸಿಕೊಂಡು ಅವ್ವಂದಿರು, ಆಟವಾಡಿ ಬಂದು ಮನೆತುಂಬಾ ಮಣ್ಣು ಹರಡುತಿರುವ ಮಕ್ಕಳಿಗೆ "ಕೈಕಾಲ್ ತೊಳ್ಕಂಡ್ ಬರ್ದಿದ್ರೆ ಅಪ್ಪಂಗೆ ಹೇಳ್ತೆ ಕಾಣ್" ಅಂತ ಹೆದರಿಸುತ್ತಾ, ಹಾರ್ಲಿಕ್ಸು ಕೊಡಬೇಕಿದೆ.

24416737

ಇಂಥ ಅರ್ಧಂಬರ್ಧ ಬೆಂದ ಸಂಜೆ ಹೊತ್ತಲ್ಲೇ ಬೆಂಗಳೂರು ಬಸ್ಸುಗಳು ಹೊರಡುತ್ತದೆ. ಸಮಯದ ವಿಚಾರದಲ್ಲಿ ಕಂಡಕ್ಟರನಿಗೆ ಒಂಚೂರೂ ದಯೆಯಿಲ್ಲ. ತನ್ನನ್ನು ನೋಡಲು ತಮ್ಮ ಬಂಧುಗಳೋ, ಗೆಳೆಯರೋ ಬಂದಿಲ್ಲವೆಂದು ಪಯಣಿಗ ಹೇಳಿದರೆ ಆತ ಒಂದು ನಿಮಿಷವೂ ಹೆಚ್ಚಿಗೆ ನಿಲ್ಲಿಸಲ್ಲ. ಆ ಮಟ್ಟಿಗೆ ಕಂಡಕ್ಟರು ಪೂರ್ಣ ಸ್ಥಿತಪ್ರಜ್ಞ. ಆತನ ಪಾಲಿಗೆ ಪ್ರಯಾಣಿಕಲ್ಲರೂ ಬರೀ ನಂಬರುಗಳು. ಯಾರಾದರೂ ಬರದೇ ಹೋದಲ್ಲಿ " ಸೀಟ್ ನಂಬರ್ ೧೬, ಸೀಟ್ ನಂಬರ್ ೧೬" ಅಂತ ನಂಬರುಗಳಲ್ಲಷ್ಟೇ ಕೂಗುತ್ತಾನೆ.

3190635797_38ce697ef8

ಕೊನೆಯ ಘೋಷಣೆ ಅವ ಕೂಗಿದೊಡನೆ ಅಲ್ಲಿ-ಇಲ್ಲಿ ತಮ್ಮನ್ನು ಬೀಳ್ಕೊಡಲು ಬಂದವರೊಡನೆ ಕೊನೆಕ್ಷಣಗಳ ಮಾತಾಡುತ್ತಿರುವ ಪಯಣಿಗರೆಲ್ಲರೂ ವಿದಾಯ ಹೇಳಿ ಬಸ್ಸು ಹತ್ತುವರು. ’ಅಲ್ ಹೋದ್ ಕೂಡ್ಲೆ ಫೋನ್ ಮಾಡ್’ ಎಂಬ ವಾಕ್ಯಗಳು ’ಲೆಟರ್ ಹಾಕ್’ ಎಂಬ ಮಾತನ್ನು ಕಸಿದುಕೊಂಡಿರುವುದಕ್ಕೆ ಕಂಡಕ್ಟರು ಈಗೆಲ್ಲಾ ಬೇಸರಿಸುವುದಿಲ್ಲ.  ಬಸ್ಸಿನ ಕಿಟಕಿಯೆಡೆಯಿಂದ ಬರುವ ಬೈ ಬೈ ಗಳು ತಲುಪಬೇಕಾದವರ ಎದೆ ಸೇರಿ ಮರೆಯಾಗುತ್ತದೆ. ಬಸ್ಸು ಸ್ಟಾಂಡ್ ಬಿಡುವವರೆಗೂ ಬೀಳ್ಕೊಡುವವರು ಕದಲದೇ ಇರುವುದರಿಂದ ಅಲ್ಲಿ ಹಾಗೆ ಅಸಹಾಯಕರಂತೆ ನಿಂತ ಅವರ ಚಿತ್ರ ಖಾಯಂ ಆಗಿ ಇವರ ಕಣ್ಣಲ್ಲೇ ಮುದ್ರಿತವಾಗುತ್ತದೆ. ಬಸ್ಸು ಮೆಲ್ಲಗೆ ತೆವಳುತ್ತಾ ಹೊರಡುತ್ತಿದ್ದಂತೆ ಬೀಳ್ಕೊಡಲು ಬಂದವರ ಬಿಂಬ ಪಯಣಿಗನ ಕಣ್ಣಲ್ಲಿ ಮಾಸುತ್ತಾ ಬರುತ್ತದೆ. 

 

ಇಂಥ ವಿದಾಯಗಳು ಕಹಿ ಔಷಧಿಯಂತೆ ಈಗ ವೇದನೆಯಿತ್ತರೂ ಸಂಬಂಧಗಳು ಅವುಗಳಿಂದಲೇ ಮತ್ತಷ್ಟು ಅರಳುತ್ತದೆ ಎಂಬುದು ಅವರಿಗೆ ಅರಿವಿದ್ದರೂ ’ಈ ಕ್ಷಣ’ ಮನಸ್ಸಿಗೆ ಒಪ್ಪಿಕೊಳ್ಳುವುದು ಕಷ್ಟ. ಸತ್ಯ ಅಪ್ರಿಯ. ಕ್ಷಣಗಳು ಕಷಾಯ. 

16391714 bus1

ಬಸ್ಸು ನಿಧಾನವಾಗಿ ರಸ್ತೆಯಲ್ಲಿ ಚಲಿಸುತ್ತಿದ್ದಂತೆ, ಮನದ ಫ್ರೇಮಿನಲ್ಲಿ ನೆನಪುಗಳು ಚಲಿಸುವ ರೀತಿಯಲ್ಲಿ ಕಿಟಕಿಯಲ್ಲಿ ಊರಿಗೆ ಊರೇ ಎದ್ದು ಬಿದ್ದು ಓಡುತ್ತದೆ. ಇನ್ನೂ ತಮ್ಮದಾಗಿಲ್ಲದ ಜಗವೊಂದಕ್ಕೆ ಹೊರಟಿರುವ ಜೀವಗಳಿಗೆ ಸಂತೈಸುವಂತೆ, ಅದುವರೆಗೂ ಸೆಕೆಯಿಂದ ತುಂಬಿದ್ದ ಬಸ್ಸಿನ ಒಳಗಿನಲ್ಲಿ ತಂಗಾಳಿ ಪಸರಿಸುತ್ತದೆ.

 

ಚಿತ್ರಕೃಪೆ : ಗೂಗಲ್ ನಿಂದ